ಯಶಾಂತ್ ಕುಮಾರ್ ಡಿ.ಕೆ, ಅಧ್ಯಕ್ಷರು: ಗ್ರಾ.ಪಂ. ಹಾನಗಲ್ಲು
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ವ್ಯಾಪ್ತಿಗೆ ಒಳಪಡುವ ಹಾನಗಲ್ಲು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಯಶಾಂತ್ ಕುಮಾರ್ ಡಿ.ಕೆ. ಅವರನ್ನು “ಸರ್ಚ್ ಕೂರ್ಗ್ ಮೀಡಿಯಾ” ದ “ನಮ್ಮ ಕೊಡಗು-ನಮ್ಮಗ್ರಾಮ” ಅಭಿಯಾನದಡಿಯಲ್ಲಿ ಸಂದರ್ಶಿಸಿ ಮಾಹಿತಿಯನ್ನು ಪಡೆಯಲಾಯಿತು.
“ಸರ್ಚ್ ಕೂರ್ಗ್ ಮೀಡಿಯಾ” ದೊಂದಿಗೆ ಮಾತನಾಡಿದ ಯಶಾಂತ್ ಕುಮಾರ್ ಡಿ.ಕೆ. ರವರು “ನಾನು ವಿದೇಶದಲ್ಲಿ ಇಂಜಿನಿಯರ್ ಉದ್ಯೋಗಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭ ನನ್ನ ತಂದೆಯವರು 2009ರಲ್ಲಿ ತೀರಿಕೊಂಡರು. ನಂತರ ನಾನು 2013ರಲ್ಲಿ ಸ್ವದೇಶಕ್ಕೆ ಮರಳಿ ಬಂದು ಕೃಷಿ ಹಾಗೂ ಸಾಮಾಜಿಕ ಕಾರ್ಯದಲ್ಲಿ ನನ್ನನ್ನು ತೊಡಗಿಸಿಕೊಂಡೆ. ಆ ಸಂದರ್ಭ ನನ್ನ ಸಮಾಜಮುಖಿ ಕಾರ್ಯವನ್ನು ಅರಿತ ಸ್ನೇಹಿತರು, ಹಿತೈಷಿಗಳು ಹಾಗೂ ಗ್ರಾಮಸ್ಥರ ಒತ್ತಾಸೆಯ ಮೇರೆಗೆ 2015 ರಲ್ಲಿ ಹಾನಗಲ್ಲು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಹಾನಗಲ್ಲು-ಶೆಟ್ಟಳ್ಳಿ ವಾರ್ಡ್‌ನಿಂದ ಸ್ಫರ್ಧಿಸಿ ಆಯ್ಕೆಗೊಂಡು ಸದಸ್ಯನಾಗಿ 2020ರವರಗೆ ಸೇವೆ ಸಲ್ಲಿಸಿದ್ದೆ. ನಂತರ 2020ರ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಆಯ್ಕೆಗೊಂಡು ಮೊದಲ ಅವಧಿಗೆ ಸದಸ್ಯನಾಗಿ ಎರಡನೇಯ ಅವಧಿಗೆ ಅಧ್ಯಕ್ಷನಾಗಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿದ್ದೇನೆ. ನನ್ನ ತಂದೆಯವರಾದ ದಿವಂಗತ ಕುಟ್ಟಪ್ಪನವರು ರಾಜಕೀಯ ಧುರೀಣರಾಗಿ ಹಾಗೂ ಸಹಕಾರ ಕ್ಷೇತ್ರದಲ್ಲಿ ಚೌಡ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅವರ ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರದ ಸೇವೆಯು ನನ್ನನ್ನು ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆಯಾಗಿದೆ.
ನಮ್ಮ ಗ್ರಾಮದಲ್ಲಿ ಸುಗಮವಾದ ಗ್ರಾಮೀಣ ರಸ್ತೆಗಳ ವ್ಯಸ್ಥೆಯ ಸಮಸ್ಯೆಯಿದ್ದು, ಅದನ್ನು ಪಂಚಾಯಿತಿಗೆ ಬಂದಂತಹ ಅನುದಾನಗಳಿಂದ ಬಹುಪಾಲು ರಸ್ತೆಗಳ ಕಾಮಗಾರಿಯನ್ನು ನಿರ್ವಹಿಸಲಾಗಿದೆ. ಇನ್ನೂ ಸೂಕ್ತವಾದ ಅನುದಾನ ಲಭ್ಯವಾದಲ್ಲಿ ಮುಂದಿನ ರಸ್ತೆ ಅಭಿವೃದ್ಧಿಯ ಕಾಮಗಾರಿಗಳನ್ನು ನಿರ್ವಹಿಸಲು ಪ್ರಯತ್ನ ಪಡುತ್ತಿದ್ದೇವೆ.
ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಗ್ರಂಥಾಲಯವನ್ನು ಡಿಜಿಟಲ್ ಗ್ರಂಥಾಲಯವಾಗಿ ಮಾರ್ಪಾಡಿಸಲಾಗಿದೆ. ಸಂಜೀವಿನಿ ಒಕ್ಕೂಟಕ್ಕೆ ಕಟ್ಟಡವೊಂದನ್ನು ನಿರ್ಮಿಸಲಾಗಿದೆ. ಈ ಕಟ್ಟಡ ನಿರ್ಮಾಣಕ್ಕೆ ಜಿಲ್ಲಾ ಪಂಚಾಯಿತಿ ವತಿಯಿಂದ 5ಲಕ್ಷ ಅನುದಾನ ಲಭ್ಯವಾಗಿದ್ದು, ಉದ್ಯೋಗ ಖಾತ್ರಿ ಅಡಿಯಲ್ಲಿ ಇನ್ನುಳಿದ 12 ಲಕ್ಷವನ್ನು ಪಂಚಾಯಿತಿಯಿಂದ ಸರಿ ದೂಗಿಸಿ ಸರಿ ಸುಮಾರು 17 ಲಕ್ಷ ವೆಚ್ಚದಲ್ಲಿ ಸಂಜೀವಿನಿ ಶೆಡ್ ಪೂರ್ಣಗೊಂಡು ಉದ್ಘಾಟನೆಗೆ ಸಜ್ಜಾಗಿದ್ದೆ.
ಜಲಜೀವನ್ ಮಿಷನ್ ಅಡಿಯಲ್ಲಿ ಹಾನಗಲ್ಲು-ಶೆಟ್ಟಳ್ಳಿ ವಾರ್ಡ್‌ನಲ್ಲಿ ಶೇಕಡ 100%ರಷ್ಟು ಕುಡಿಯುವ ನೀರಿನ ವ್ಯವಸ್ಥೆ ಪೂರ್ಣಗೊಂಡಿದೆ. ಉಳಿದ ಕಲ್ಕಂದೂರು, ಯಡೂರು ವ್ಯಾಪ್ತಿಯಲ್ಲಿ ಶೇಕಡ 90% ರಷ್ಟು ಆಗಿದ್ದು, ಕೆಲವೊಂದು ನ್ಯೂನತೆಗಳಿದ್ದು ಅದನ್ನು ಸರಿಪಡಿಸಿ ಶೀಘ್ರದಲ್ಲೇ ಇನ್ನುಳಿದ ಕಾಮಗಾರಿಗಳನ್ನು ನಿರ್ವಹಿಸಿ ಪೂರ್ಣಗೊಳಿಸಲಾಗುವುದು.
ಅಮೃತ ಸರೋವರ ಯೋಜನೆಯಡಿಯಲ್ಲಿ ಹಾನಗಲ್ ಕೆರೆ ಹೂಳೆತ್ತುವ ಕಾರ್ಯ ಮಗಿದ್ದು, ಇನ್ನು ಕೆರೆಯ ಸುತ್ತಾ ಬೇಲಿ ಮತ್ತು ವಿಹಾರಕ್ಕೆಂದು ಬರುವ ನಾಗರಿಕರಿಗೆ ಕುಳಿತು ಕೊಳ್ಳಲು ಬೆಂಚ್‌ಗಳನ್ನು ಅಳವಡಿಸುವ ಕಾರ್ಯವು ಪ್ರಗತಿಯಲ್ಲಿದ್ದೆ. ಹಾಗೆ ಕಲ್ಕಂದೂರು ಹಾಗೂ ಯಡೂರಿನಲ್ಲಿ ತಲಾ ಒಂದೊಂದು ಕೆರೆಗಳ ಹೂಳೆತ್ತುವ ಕಾರ್ಯ ಮುಗಿದ್ದು, ಅದನ್ನು ಕೂಡ ಅಭಿವೃದ್ದಿಗೊಳಿಸುವ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿದ್ದೇವೆ.
ಬೀದಿ ದೀಪಗಳ ವ್ಯವಸ್ಥೆಗೆ ವಿದ್ಯುತ್ ಕಂಬಗಳಿಗೆ 3 ಫೇಸ್ ಲೈನ್‌ಗಳನ್ನು ಅಳವಡಿಸುವ ಕಾರ್ಯ ಹಾನಗಲ್ಲು-ಶೆಟ್ಟಳ್ಳಿ ವ್ಯಾಪ್ತಿಯಲ್ಲಿ ಪೂರ್ಣಗೊಂಡಿದ್ದು, ಉಳಿದ ಭಾಗಗಳಲ್ಲಿ ಕಾರ್ಯವು ಪ್ರಗತಿಯಲ್ಲಿದೆ. ಈ ಎಲ್ಲಾ ಕಾರ್ಯಗಳಿಗೆ 15ನೇ ಹಣಕಾಸು ಯೋಜನೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗಿದೆ.
ಸ್ವಚ್ಚ ಭಾರತ್ ಮಿಷನ್ ಯೋಜನೆಯಡಿಯಲ್ಲಿ ಮನೆ ಮನೆಗಳಿಗೆ ಶೌಚಾಲಯ ನಿರ್ಮಾಣ ಕಾರ್ಯವು ಶೇಕಡ 100%ರಷ್ಟು ಪೂರ್ಣಗೊಂಡಿದ್ದೆ. ಮಳೆಗಾಲ ಪೂರ್ವ ಗ್ರಾಮದಲ್ಲಿರುವ ಚರಂಡಿಗಳನ್ನು ಸ್ವಚ್ಚಗೊಳಿಸುವ ಕಾರ್ಯವು ಆಗಿದೆ. ಕಸ ವಿಲೇವಾರಿಗೆ ಪಂಚಾಯಿತಿ ವ್ಯಾಪ್ತಿಯಲ್ಲಿ ಅರ್ಧ ಏಕರೆ ಜಾಗವಿದ್ದು, ಅಲ್ಲಿ 10ಲಕ್ಷ ವೆಚ್ಚದಲ್ಲಿ ಕಸ ವಿಲೇವಾರಿ ಘಟಕ ಕಾರ್ಯನಿರ್ವಹಿಸುತ್ತಿದ್ದೆ.
ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು ನಾಲ್ಕು ಕಾರ್ಮಿಕರ ಕಾಲೋನಿಗಳಿದ್ದು, ಅಲ್ಲಿ ತಲಾ 50 ರಿಂದ 60 ಕುಟುಂಬಗಳ ಮನೆಗಳಿವೆ. ಅಲ್ಲಿ ಕುಡಿಯುವ ನೀರು, ವಿದ್ಯುತ್, ಬೀದಿ ದೀಪ ವ್ಯವಸ್ಥೆ, ರಸ್ತೆ ಮುಂತಾದ ಮೂಲಭೂತ ಸೌಕರ್ಯಗಳನ್ನು ಬಹುಪಾಲು ಮಾಡಲಾಗಿದ್ದೆ.
ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಜಲಾನಯನ ಅಭಿವೃದ್ದಿ ಘಟಕ 2.0 ಯಡಿಯಲ್ಲಿ ನಮ್ಮ ಪಂಚಾಯಿತಿಯ ಮೂರು ಗ್ರಾಮಗಳಾದ ಹಾನಗಲ್ಲು, ಹಾನಗಲ್ಲು-ಶೆಟ್ಟಳ್ಳಿ ಹಾಗೂ ಯಡೂರು ಆಯ್ಕೆಗೊಂಡಿದ್ದೆ. ಇದರಲ್ಲಿ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಮೀನುಗಾರಿಕಾ ಇಲಾಖೆ, ಪಶು ಸಂಗೋಪನ ಇಲಾಖೆ ಹಾಗೂ ಅರಣ್ಯ ಇಲಾಖೆ ಗಳಿಂದ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೃಷಿಕರು ಹಾಗೂ ಕೃಷಿಯೇತರಿಗಾಗಿ ಹಲವಾರು ಯೋಜನೆಗಳನ್ನು ಐದು ವರ್ಷಗಳಿಗೆ ರೂಪಿಸಲಾಗಿದೆ. ಈ ಯೋಜನೆಯಡಿಲ್ಲಿ ಕೃಷಿಕರು ಹಾಗೂ ಕೃಷಿಯೇತರಿಗೆ ಗಿಡಗಳು, ಕರಿಮೆಣಸು ಬಳ್ಳಿಗಳು, ಅಲ್ಯೂಮಿನಿಯಂ ಹಾಗೂ ಫೈಬರ್ ಏಣಿಗಳು, ಮೀನುಮರಿಗಳು ಹಾಗೂ ಮೀನಿನ ಆಹಾರಗಳು, ಕೋಳಿಮರಿಗಳು, ಹಂದಿ ಮರಿಗಳು ಇತ್ಯಾದಿಗಳನ್ನು ವಿತರಿಸಲಾಗಿದೆ. ಇದರೊಂದಿಗೆ ಕೆರೆ ನಿರ್ಮಿಸಲು ಈ ಯೋಜನೆ ಮುಖಾಂತರ ಅನುಕೂಲ ಕಲ್ಲಿಸಲಾಗಿದೆ. ಈ ಯೋಜನೆಯ ಅನುಷ್ಠಾನವು ನಮ್ಮ ಪಂಚಾಯಿತಿಯ ಈ ಮೂರು ಗ್ರಾಮಗಳಲ್ಲಿ ಯಶಸ್ವಿಯಾಗಿ ಮೂರು ವರ್ಷಗಳನ್ನು ಪೂರೈಸಿದ್ದು, ಇನ್ನುಳಿದ ಎರಡು ವರ್ಷಗಳ ಕಾಲಕ್ಕೆ ಮುಂದುವರೆಸಲಾಗಿದೆ. ಈ ಯೋಜನೆಯಲ್ಲಿ ನದಿ ನೀರು ಸಂರಕ್ಷಣೆಯು ಒಳಗೊಂಡಿದೆ.
ನಮ್ಮ ಗ್ರಾಮ ಪಂಚಾತಿಯಲ್ಲಿ ಆಡಳಿತ ವ್ಯವಸ್ಥೆಯು ಡಿಜಿಟಲಿಕರಣ ರೂಪದಲ್ಲಿ ನಡೆಯಿತ್ತಿದ್ದು, ಕಂದಾಯ ಪಾವತಿಗೆ ಆನ್‌ಲೈನ್ ವ್ಯವಸ್ಥೆಯನ್ನು ಅಳವಡಿಸುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಸಾಗಿದೆ. ಮುಂದಿನ ದಿನಗಳಲ್ಲಿ ಹಾನಗಲ್ಲು ಗ್ರಾಮ ಪಂಚಾಯಿತಿಯನ್ನು ಸಂಪೂರ್ಣ ಡಿಜಿಟಲ್ ಗ್ರಾಮ ಪಂಚಾಯಿತಿಯಾಗಿ ಮಾರ್ಪಾಡಿಸುವ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿದ್ದೇವೆ.
ಒಟ್ಟಿನಲ್ಲಿ ನಮ್ಮ ಗ್ರಾಮದ ಸರ್ವಾಂಗಿಣ ಅಭಿವೃದ್ದಿಯತ್ತ ನನ್ನ ಪ್ರಯತ್ನ ಸಾಗಿದೆ. ನನ್ನ ಈ ಎಲ್ಲಾ ಕಾರ್ಯಗಳಿಗೆ ಉಪಾಧ್ಯಕ್ಷರು, ಸದಸ್ಯರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಸಿಬ್ಬಂದಿಗಳು ಹಾಗೂ ಗ್ರಾಮಸ್ಥರ ಸಹಕಾರವು ಉತ್ತಮವಾಗಿ ದೊರಕುತ್ತಿದೆ”
ಮೂಲತಃ ಕೃಷಿಕರಾಗಿರುವ ಯಶಾಂತ್ ಕುಮಾರ್ ಡಿ.ಕೆ. ರವರು ರಾಜಕೀಯ ಕ್ಷೇತ್ರದಲ್ಲಿ ಭಾರತೀಯ ಜನತಾ ಪಾರ್ಟಿಯ ಸಕ್ರೀಯ ಕಾರ್ಯಕರ್ತರಾಗಿದ್ದಾರೆ. ಧಾರ್ಮಿಕ ಕ್ಷೇತ್ರದಲ್ಲಿ ಹಾನಗಲ್ಲು-ಶೆಟ್ಟಳ್ಳಿ ಸಬ್ಬಮ್ಮ ತಾಯಿ ದೇವಿ ದೇವಾಲಯದ ಸಮಿತಿ ಸದಸ್ಯರಾಗಿದ್ದಾರೆ. ಸಹಕಾರ ಕ್ಷೇತ್ರದಲ್ಲಿ ಚೌಡ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರಾಗಿದ್ದಾರೆ. ಹಾಗೆ ಸೋಮವಾರಪೇಟೆ ಪಿ.ಎಲ್.ಡಿ. ಬ್ಯಾಂಕಿನ ಸದಸ್ಯರಾಗಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿ ಹಾಕಿ ಆಟಗಾರಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಯಶಾಂತ್ ಕುಮಾರ್ ಡಿ.ಕೆ. ರವರ ಕುಟುಂಬ ಪರಿಚಯ:
ಯಶಾಂತ್ ಕುಮಾರ್ ಡಿ.ಕೆ. ರವರ ತಂದೆ: ದಿವಂಗತ ಕುಟ್ಟಪ್ಪ. ತಾಯಿ: ಬೇಬಿ. ಪತ್ನಿ: ಭವ್ಯ ಸಾಮಾಜಿಕ ಕಾರ್ಯಕರ್ತರಾಗಿದ್ದಾರೆ. ಮಗಳು: ಶಿವಾತ್ಮಿಕ ಹಾಗೂ ಮಗ ಪೂರವ್ ವ್ಯಾಸಂಗ ನಿರತರಾಗಿದ್ದಾರೆ.
ಯಶಾಂತ್ ಕುಮಾರ್ ಡಿ.ಕೆ. ರವರು ಪ್ರಸ್ತುತ ಹಾನಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಹಾನಗಲ್ಲು-ಶೆಟ್ಟಳ್ಳಿ ಗ್ರಾಮದಲ್ಲಿ ಕುಟುಂಬ ಸಮೇತ ನೆಲೆಸಿದ್ದಾರೆ. ಇವರ ರಾಜಕೀಯ, ಸಹಕಾರ, ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಸೇವೆಯು ಹೀಗೆ ನಿರಂತರವಾಗಿ ಮುಂದುವರೆಯಲಿ ಎಂದು “ಸರ್ಚ್ ಕೂರ್ಗ್ ಮೀಡಿಯಾ” ವು ಹಾರೈಸುತ್ತದೆ.
ಸಂದರ್ಶನ ದಿನಾಂಕ: 27-06-2024