ಹೆಚ್. ಎ. ಹಂಸ (ಹರಿಶ್ವಂದ್ರ), ಅಧ್ಯಕ್ಷರು: ಗ್ರಾಮ ಪಂಚಾಯಿತಿ ಹೊದ್ದೂರು
ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ವ್ಯಾಪ್ತಿಗೆ ಒಳಪಡುವ ಹೊದ್ದೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಹೆಚ್.ಎ. ಹಂಸ(ಹರಿಶ್ಚಂದ್ರ) ಅವರನ್ನು “ಸರ್ಚ್ ಕೂರ್ಗ್ ಮೀಡಿಯಾ” ದ “ನಮ್ಮ ಕೊಡಗು-ನಮ್ಮಗ್ರಾಮ” ಅಭಿಯಾನದಡಿಯಲ್ಲಿ ಸಂದರ್ಶಿಸಿ ಮಾಹಿತಿಯನ್ನು ಪಡೆಯಲಾಯಿತು.
“ಸರ್ಚ್ ಕೂರ್ಗ್ ಮೀಡಿಯಾ” ದೊಂದಿಗೆ ಮಾತನಾಡಿದ ಹೆಚ್.ಎ. ಹಂಸ(ಹರಿಶ್ಚಂದ್ರ) “ನನ್ನ ಬಾಲ್ಯದಲ್ಲಿ 9-10 ನೇ ತರಗತಿಯಲ್ಲಿ ವಿದ್ಯಾಭ್ಯಾಸ ನಡೆಸುವಾಗಲೇ ನನಗೆ ರಾಜಕೀಯದ ಬಗ್ಗೆ ಆಸಕ್ತಿ ಪ್ರಾರಂಭವಾಯಿತು. ರಾಜಕೀಯ ಸುದ್ದಿಗಳನ್ನು ಓದಿ, ವಿಮರ್ಶೆ ಮಾಡವುದು, ಜೊತೆಗೆ ಸಾಮಾಜಿಕ ಕೆಲಸಗಳಲ್ಲಿ ಪಾಲ್ಗೊಳ್ಳುವುದು, ಜನಸಾಮಾನ್ಯರೊಂದಿಗೆ ಒಡನಾಟ, ಕ್ರೀಡೆಯಲ್ಲೂ ಸಕ್ರಿಯವಾಗಿ ಪಾಲ್ಗೊಂಡಿದ್ದೆ, ಅಂದು ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲೂ ಭಾಗವಹಿಸಿದ್ದೆ. ಅಲ್ಲದೆ ಮುಖ್ಯವಾಗಿ ನನ್ನ ತಂದೆಯವರಾದ ದಿವಂಗತ ಹರಿಶ್ಷಂದ್ರ ಆಲಿ ಅವರು ಕಮ್ಯುನಿಷ್ಟ್ ಪಕ್ಷದ ಜಿಲ್ಲಾ ಮಟ್ಟದಲ್ಲಿ ಕಾರ್ಯಕರ್ತರಾಗಿದ್ದು, ಅವರ ರಾಜಕೀಯ ಒಡನಾಟ ನೋಡಿ ನಾನು ರಾಜಕೀಯ ಪ್ರವೇಶ ಮಾಡಿದೆ. ಇದರೊಂದಿಗೆ ನಮ್ಮ ಗ್ರಾಮದ ಜನರ ಒತ್ತಾಸೆಯ ಕಾರಣದಿಂದ ಕಳೆದ 26 ವರ್ಷಗಳಿಂದ ಗ್ರಾ.ಪಂ. ಸದಸ್ಯನಾಗಿ ಆಯ್ಕೆಯಾಗುತ್ತಾ ಬಂದಿದ್ದೇನೆ.
ಈ ಬಾರೀ 5 ನೇ ಅವಧಿಗೆ ಗ್ರಾ.ಪಂ. ಚುನಾವಣೆಯಲ್ಲಿ 3 ವಾರ್ಡ್‌ನಲ್ಲಿ ಸ್ವರ್ದಿಸಿ 2 ವಾರ್ಡ್ ನಲ್ಲೂ ಗೆಲುವು ಸಾಧಿಸಿದೆ, ನಂತರ ಗ್ರಾಮಸ್ಥರೊಂದಿಗೆ ಚರ್ಚಿಸಿ ಒಂದು ವಾರ್ಡ್‌ನ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಈ ಮೊದಲು 2010-11 ರಲ್ಲಿ ಗ್ರಾ.ಪಂ. ಉಪಾಧ್ಯಕ್ಷನಾಗಿ, ನಂತರ 2012 ರಿಂದ 2018ರ ವರೆಗೆ ಪಂಚಾಯಿತಿಯ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದೇನೆ.
ನಮ್ಮ ಗ್ರಾಮದಲ್ಲಿ ಕಾಲೋನಿಗಳೇ ಹೆಚ್ಚಾಗಿದ್ದು, ಸುಮಾರು 10 ಕಾಲೋನಿಗಳಿದ್ದು, ಪಂಚಾಯಿತಿಗೆ ಆದಾಯ ಮೂಲ ಕಡಿಮೆ ಇದೆ. ನಮ್ಮ ಅವಧಿಯಲ್ಲಿ ಎಲ್ಲಾ ಇಲಾಖೆಗಳ ಅನುದಾನದಿಂದ ಪಂಚಾಯಿತಿಗೆ ನೂತನ ಸುಸಜ್ಜಿತವಾದ ಅತ್ಯಾಧುನಿಕ ಆಡಳಿತ ಕಚೇರಿ ಹಾಗು ಸಭಾಂಗಣವನ್ನು ನಿರ್ಮಿಸಲಾಗಿದೆ. ಜೊತೆಗೆ ಕೊಡಗು ಜಿಲ್ಲೆಯ ಮೊದಲ ಡಿಜಿಟಲ್ ಗ್ರಂಥಾಲಯ ನಿರ್ಮಿಸಿದ ಹೆಗ್ಗಳಿಕೆ ನಮ್ಮ ಹೊದ್ದೂರು ಗ್ರಾಮ ಪಂಚಾಯಿತಿಗೆ ಇದೆ.
ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಮನೆಗಳಿಗೆ ವಿದ್ಯುಚ್ಚಕ್ತಿ ವ್ಯವಸ್ಥೆ ಆಗಿದೆ. ಉಳಿದ ವಿದ್ಯುತ್ ಸಮಸ್ಯೆಗಳನ್ನು ಸರಿಪಡಿಸಲು ಸೆಸ್ಕ್ ನ ಇಂಜಿನಿಯರ್‌ಗಳನ್ನು ಕರೆದು ಪಂಚಾಯಿತಿಯಲಿ ಸಭೆ ನಡೆಸಲಾಗಿದೆ. ಮಳೆಗಾಲದ ಸಂದರ್ಭದಲ್ಲಿ ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಸುಮಾರ 250 ಕ್ಕೂ ಹೆಚ್ಚು ಮನೆಗಳು ಪ್ರವಾಹಕ್ಕೆ ಒಳಗಾಗುತ್ತದೆ. ಆ ಸಂದರ್ಭ ಪ್ರವಾಹ ಪೀಡಿತ ಮನೆಗಳಿಗೆ ಆಹಾರ ಕಿಟ್‌ಗಳನ್ನು ನೀಡುವುದು ಅಲ್ಲದೆ ಕೋರೋನ ಸಂದರ್ಭದಲ್ಲಿ ಪಂಚಾಯಿತಿಯ ಎಲ್ಲಾ ಸದಸ್ಯರು ಸೇರಿ ಪಂಚಾಯಿತಿಯ ಟಾಸ್ಕ್‌ಫೋರ್ಸ್ ಸಮಿತಿಯಿಂದ ಮಾಡಿದ ಸೇವಾ ಕಾರ್ಯವನ್ನು ರಾಜ್ಯಮಟ್ಟದಲ್ಲಿ ಗುರುತಿಸಲ್ಪಟ್ಟಿದ್ದೆ.
ಜಲ ಜೀವನ್ ಮಿಷನ್‌ನ ಯೋಜನೆಯ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಅಮೃತ ಸರೋವರ ಯೋಜನೆಯಡಿಯಲ್ಲಿ ಪಾಲೇಮಾಡುವಿನಲ್ಲಿ ಒಂದು ಕೆರೆಯನ್ನು ಅಭಿವೃದ್ಧಿ ಪಡಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಈ ಕಾಮಗಾರಿಯು ಪೂರ್ಣಗೊಳ್ಳಲಿದೆ. ಸ್ವಚ್ಚಭಾರತ್ ಯೋಜನೆಯಡಿಯಲ್ಲಿ ಪಂಚಾಯಿತಿಯ ಎಲ್ಲಾ ಗ್ರಾಮಗಳ ಮನೆ ಮನೆಗಳಿಗೆ ಶೌಚಾಲಯ ವ್ಯವಸ್ಥೆಯನ್ನು ಮಾಡಿ ಕೊಡಲಾಗಿದೆ.
ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ 3 ಕಂದಾಯ ಗ್ರಾಮಗಳಾದ ಹೊದ್ದೂರು, ಕುಂಬಳದಾಳು, ಹೊದವಾಡಗಳಿದ್ದು 15 ಸದಸ್ಯರಿದ್ದಾರೆ. ಅಲ್ಲದೆ ಪಂಚಾಯಿತಿ ಪಂಚಾಯಿತಿ ವಿಸ್ತೀರ್ಣ ಹೆಚಾಗಿದ್ದು12,000 ಜನಸಂಖ್ಯೆ ಹಾಗೂ 6,000 ಮತದಾರರಿದ್ದಾರೆ. ನಮ್ಮ ಪಂಚಾಯಿತಿಯಲಿ ಇನ್ನೂ ಸುಮಾರು 75% ಅಭಿವೃದ್ಧಿ ಕಾರ್ಯ ಬಾಕಿ ಇದೆ. ಇದಕ್ಕೇ ಮೂಲ ಕಾರಣ ಆದಾಯದ ಕೊರೆತೆ ಹಾಗೂ ಸರ್ಕಾರದಿಂದ ದೊರೆಯುವ ಅನುದಾನದ ಕೊರತೆ. ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಹದೆಗೆಟ್ಟ ರಸ್ತೆಗಳ ಅಭಿವೃದ್ದಿಗೆ ನೂತನ ಶಾಸಕರಾದ ಮಂತರ್ ಗೌಡ ಅವರ ಬಳಿ ಮನವಿ ಸಲ್ಲಿಸಲಾಗಿದೆ ಅಲ್ಲದೆ ಶಾಸಕರು 2 ಬಾರಿ ಪಂಚಾಯಿತಿ ಸಭೆಯಲ್ಲಿ ಪಾಲ್ಗೊಂಡು ಬರವಸೆಯನ್ನು ನೀಡಿದ್ದಾರೆ.
ಆಶ್ರಯ ಮನೆಗಳ ನಿರ್ಮಾಣಕ್ಕೆ ಸರ್ಕಾರದಿಂದ 1.7 ಲಕ್ಷ ಮತ್ತು 1.9 ಲಕ್ಷ ರೂ ಗಳ ಅನುದಾನ ಇದೆ. ಆದರೆ ಕೊಡಗಿನ ವಾತಾವರಣಕ್ಕೆ ಹೊಂದಿಕೊಂಡ ಮನೆಗಳ ನಿರ್ಮಾಣಕ್ಕೆ ಈ ಅನುದಾನ ಸಾಲುವುದಿಲ್ಲ, ಅಲ್ಲದೆ ಇಲ್ಲಿನ ಮರಳು ಹಾಗೂ ಇನ್ನುಳಿದ ಸಾಮಾಗ್ರಿಗಳ ವೆಚ್ಷ ಹಾಗೂ ಗುಡ್ಡಗಾಡು ಪ್ರದೇಶವಾಗಿದ್ದರಿಂದ ಅವುಗಳ ಸಾಗಾಣಿಕೆಯ ವೆಚ್ಚವು ಹೆಚ್ಚಿದೆ. ಆದರಿಂದ ಒಂದು ಮನೆಯ ನಿರ್ಮಾಣಕ್ಕೆ ಕನಿಷ್ಠ ಅಂದರೆ ಅಂದಾಜು 5 ಲಕ್ಷ ದಷ್ಟು ವೆಚ್ಚ ತಗುಲಲಿದೆ.
ಹೊದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 2 ಹಿರಿಯ ಪ್ರಾಥಮಿಕ ಶಾಲೆಗಳು, 5 ಪ್ರಾಥಮಿಕ ಶಾಲೆಗಳು, 12 ಅಂಗನವಾಡಿಗಳು ಹಾಗೂ ಆರೋಗ್ಯ ಕೇಂದ್ರವು ಇದೆ.
ಕೋವಿಡ್ ಸಂದರ್ಭದಲ್ಲಿ ನಮ್ಮ 15 ಸದಸ್ಯರು ರೋಗದ ಬಗ್ಗೆ ಯಾವುದೇ ಭಯಪಡದೇ ಬದಿಗಿಟ್ಟು ಕೋವಿಡ್‌ನಿಂದ ಭಾಧಿತರಾದ ಮನೆಗಳಿಗೆ ಬೇಕಾಗುವ ಅಗತ್ಯತೆಗಳನ್ನು ಪೂರೈಸಲು ತಮ್ಮ ಸ್ವಂತ ಖರ್ಚಿನಿಂದ ರಾತ್ರಿ ಹಗಲು ಶ್ರಮಿಸಿದ್ದಾರೆ. ಅಲ್ಲದೆ ನಮ್ಮ ಪಂಚಾಯಿತಿ ಸದಸ್ಯರೆಲ್ಲರೂ ಪಂಚಾಯಿತಿಯ ಅಭಿವೃದ್ಧಿಯ ದೃಷ್ಟಿಯಿಂದ ತಮ್ಮ ತಮ್ಮ ರಾಜಕೀಯ ಬದಿಗಿಟ್ಟು ಒಟ್ಟಾಗಿ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದೇವೆ.
ನನಗೆ ಈಗಿರುವ ಮುಂದಿನ ಅವಧಿಯಲ್ಲಿ ಕಾಲೋನಿಗಳ ಅಭಿವೃದ್ಧಿಯನ್ನು ಪೂರ್ಣಗೊಳಿಸಲು ಶ್ರಮವಹಿಸುವೆ. ಗುಡ್ಡಗಾಡಿನ ಪ್ರದೇಶವಾಗಿದ್ದು, ರಸ್ತೆ ಕಾಮಗಾರಿಗಳು ಪೂರ್ಣಗೊಳಿಸಲು ಶ್ರಮಿಸುವೆ. ಅಲ್ಲದೆ ನಿವೇಶನ ರಹಿತರಿಗೆ ಸ್ವಂತ ಮನೆ ನಿರ್ಮಿಸಲು 5 ಏಕರೆ ಜಾಗವನ್ನು ಗುರುತಿಸಲಾಗಿದ್ದು, ಒಟ್ಟು 70 ಕುಟುಂಬಗಳಿಗೆ ಮನೆ ನಿರ್ಮಾಣದ ಗುರಿಯನ್ನು ನಿಶ್ಷಯಿಸಲಾಗಿದೆ”
ಹೆಚ್.ಎ. ಹಂಸ(ಹರಿಶ್ಚಂದ್ರ) ರವರು ರಾಜಕೀಯ ಕ್ಷೇತ್ರದಲ್ಲಿ ಸುಮಾರು 30 ವರ್ಷಗಳಿಂದ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರಾಗಿ ಸಕ್ರಿಯರಾಗಿ ಡುಡಿಯುತ್ತಿದ್ದಾರೆ. ಪ್ರಸ್ತುತ ಮಡಿಕೇರಿ ಬ್ಲಾಕ್ ಕಾಂಗ್ರೇಸ್‌ನ ಅಧ್ಯಕ್ಷರಾಗಿ ಈ ಮೊದಲು ಜಿಲ್ಲಾ ಕಾಂಗ್ರೇಸ್ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.
ಸಾಮಾಜಿಕ ಕ್ಷೇತ್ರದಲ್ಲಿ ಕೊಟ್ಟಮುಡಿ ಝೀನತ್ ಕ್ಲಬ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಕೊಡವ ಮುಸ್ಲಿಂ ಅಸೋಸಿಯೇಶನ್ ನ ಜಿಲ್ಲಾ ಖಜಾಂಚಿಯಾಗಿ ಪ್ರಸ್ತುತ ಸೇವೆ ಸಲ್ಲಿಸುತ್ತಿದ್ದಾರೆ. ಧಾರ್ಮಿಕ ಕ್ಷೇತ್ರದಲ್ಲಿ ಕೊಟ್ಟಮುಡಿ ಮಸೀದಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಇವರು ಪ್ರಸ್ತುತ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶೈಕ್ಷಣಿಕ ಕ್ಷೇತ್ರದಲ್ಲಿ ಮರ್ಕಝ್ ಶಿಕ್ಷಣ ಸಂಸ್ಥೆಯ ನಿರ್ದೆಶಕರಾಗಿದ್ದಾರೆ. ಹಾಗೆ ಹೊದವಾಡ ಶಾಲೆಯ ಅಭಿವೃದ್ದಿ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಹೆಚ್. ಎ. ಹಂಸ (ಹರಿಶ್ವಂದ್ರ) ರವರ ಕುಟುಂಬ ಪರಿಚಯ:
ಮೂಲತ: ಕೃಷಿಕರು ಹಾಗೂ ಉದ್ಯಮಿಯಾಗಿರುವ ಹೆಚ್.ಎ. ಹಂಸ(ಹರಿಶ್ಚಂದ್ರ) ರವರ ತಂದೆ: ಹರಿಶ್ಷಂದ್ರ ಎಂ ಆಲಿ. ತಾಯಿ: ಮರಿಯಮ್ಮ. ಪತ್ನಿ: ಶಾಹಿರಾ ಗೃಹಿಣಿಯಾಗಿದ್ದಾರೆ. ಹಿರಿಯ ಮಗ: ಬಾಷಿದ್ ಹಾಲಿ, ವಿದೇಶದಲ್ಲಿ ಉದ್ಯೋಗಿಯಾಗಿದ್ದಾರೆ. ಮಗಳು: ಶಮಾ ಮರಿಯಮ್ ಹಾಗೂ ಕಿರಿಯ ಮಗ: ಮಹಮದ್ ನವೀದ್ ವ್ಯಾಸಂಗ ನಿರತರಾಗಿದ್ದಾರೆ.
ಹೆಚ್.ಎ. ಹಂಸ(ಹರಿಶ್ಚಂದ್ರ) ರವರು ಪ್ರಸ್ತುತ ಹೊದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಹೊದವಾಡ ಗ್ರಾಮದ ಕೊಟ್ಟಮುಡಿಯಲ್ಲಿ ಕುಟುಂಬ ಸಮೇತ ನೆಲೆಸಿದ್ದಾರೆ. ಇವರ ರಾಜಕೀಯ, ಸಹಕಾರ, ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಸೇವೆಯು ಹೀಗೆ ನಿರಂತರವಾಗಿ ಮುಂದುವರೆಯಲಿ ಎಂದು “ಸರ್ಚ್ ಕೂರ್ಗ್ ಮೀಡಿಯಾ” ವು ಹಾರೈಸುತ್ತದೆ.
ಸಂದರ್ಶನ ದಿನಾಂಕ: 04-10-2024