ಅನುದಾನಗಳನ್ನು ಅಭಿವೃದ್ಧಿಗೆ ಸದುಪಯೋಗಪಡಿಸಿದ ಆತ್ಮತೃಪ್ತಿ ನನ್ನಲ್ಲಿ ಇದೆ; ಚೆಕ್ಕೇರ ಸೂರ್ಯ ಅಯ್ಯಪ್ಪ

Reading Time: 12 minutes

ಚೆಕ್ಕೇರ ಸೂರ್ಯ ಅಯ್ಯಪ್ಪ, ಉಪಾಧ್ಯಕ್ಷರು: ಗ್ರಾಮ ಪಂಚಾಯಿತಿ ನಿಟ್ಟೂರು(Gram Panchayat: Nittur)

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ವ್ಯಾಪ್ತಿಗೆ ಒಳಪಡುವ ನಿಟ್ಟೂರು ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಚೆಕ್ಕೇರ ಸೂರ್ಯ ಅಯ್ಯಪ್ಪ ಅವರನ್ನು “ಸರ್ಚ್‌ ಕೂರ್ಗ್‌ ಮೀಡಿಯಾ” ದ “ನಮ್ಮ ಕೊಡಗು-ನಮ್ಮಗ್ರಾಮ” ಅಭಿಯಾನದಡಿಯಲ್ಲಿ ಸಂದರ್ಶಿಸಿ ಮಾಹಿತಿಯನ್ನು ಪಡೆಯಲಾಯಿತು.

“ಸರ್ಚ್‌ ಕೂರ್ಗ್‌ ಮೀಡಿಯಾ” ದೊಂದಿಗೆ ಮಾತನಾಡಿದ ಚೆಕ್ಕೇರ ಸೂರ್ಯ ಅಯ್ಯಪ್ಪರವರು “1962ರಲ್ಲಿ ಗ್ರಾಮ ಪಂಚಾಯಿತಿ ಎಂಬ ಸ್ಥಳೀಯ ಸಂಸ್ಥೆಗಳ ಆಡಳಿತ ಪ್ರಾರಂಭವಾದ ವರ್ಷಗಳಲ್ಲಿ ನಮ್ಮ ನಿಟ್ಟೂರಿನ ಗ್ರಾಮದಲ್ಲಿ ನಡೆಯುತ್ತಿದ್ದ ಎಲ್ಲಾ ಚುನಾವಣೆಗಳಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರೇ ಆಯ್ಕೆಯಾಗುತ್ತಿದ್ದರು.‌ ಅಲ್ಲದೆ ತದನಂತರ ಬಂದ ಮಂಡಲ ಪಂಚಾಯಿತಿ ಚುನಾವಣೆಗಳಲ್ಲೂ ಕಾಂಗ್ರೆಸ್‌ನದ್ದೆ ಮೇಲುಗೈ ನಡೆಯುತ್ತಿತ್ತು. ಆ ಕಾರಣದಿಂದ ನಿಟ್ಟೂರು ಗ್ರಾ.ಪಂ ವ್ಯಾಪ್ತಿಯು ಕಾಂಗೆಸ್ಸ್‌ ನ ಭಧ್ರಕೋಟೆಯಾಗಿ ಪರಿಣಮಿಸಿತು. 1993 ರಲ್ಲಿ ಮಂಡಲ ಪಂಚಾಯಿತಿ ಬದಲಾವಣೆಗೊಂಡು ಸಮಗ್ರ ಪಂಚಾಯತಿ ರಾಜ್ ಕಾಯಿದೆಯು ಮೇ 10, 1993 ರಿಂದ ಜಾರಿಗೆ ಬಂದಿತು. 73 ನೇ ಸಂವಿಧಾನ ತಿದ್ದುಪಡಿಯಾದ ಕೆಲವು ದಿನಗಳಲ್ಲಿಯೇ ರಾಜ್ಯವು ಒಂದು ಕರ್ನಾಟಕ ಪಂಚಾಯತ್ ರಾಜ್ ಕಾಯಿದೆ 1993 ನ್ನು ಅಳವಡಿಸಿಕೊಂಡಿತು. ಅಲ್ಲಿಂದ ಗ್ರಾಮ ಪಂಚಾಯತಿ ವ್ಯವಸ್ಥೆಯು ಪ್ರಾರಂಭವಾದಾಗ ನನ್ನ ಮಾತೆಯವರಾದ ಚೆಕ್ಕೇರ ದೇವಮ್ಮನವರು ನಿಟ್ಟೂರು ಮಲ್ಲೂರು ವಾರ್ಡ್‌ನಲ್ಲಿ ಭಾರತೀಯ ಜನತಾ ಪಕ್ಷ ಬೆಂಬಲಿತ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ, ಹೆಚ್ಚು ಮತಗಳ ಅಂತರದಿಂದ ಗೆದ್ದುದಲ್ಲದೇ ನಿಟ್ಟೂರು ಗ್ರಾಮ ಪಂಚಾಯಿತಿಯ 9 ಸದಸ್ಯರಲ್ಲಿ 7 ಸದಸ್ಯರು ಭಾರತೀಯ ಜನತಾ ಪಕ್ಷ ಬೆಂಬಲಿತ ಸದಸ್ಯರಾಗಿ ಆಯ್ಕೆಗೊಂಡಿದ್ದರು. ಹಾಗಾಗಿ ಕಾಂಗ್ರೆಸ್ಸ್‌ ಭದ್ರಕೋಟೆಯನ್ನು ಹೊಡೆದು ಮೊದಲ ಬಾರಿಗೆ ನಿಟ್ಟೂರು ಗ್ರಾಮ ಪಂಚಾಯತಿಯಲ್ಲಿ ಭಾರತೀಯ ಜನತಾ ಪಕ್ಷ ಬೆಂಬಲಿತ ಆಡಳಿತ ಪ್ರಾರಂಭವಾಯಿತು. ನಮ್ಮ ತಾಯಿಯವರು ಸುಮಾರು 6 ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ಧಾರೆ. ಅಲ್ಲದೇ ನಿಟ್ಟೂರು ಪಂಚಾಯಿತಿಯಲ್ಲಿ ಅತೀ ಹೆಚ್ಚು ಅವಧಿಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಗೌರವ ಅವರಿಗೆ ದೊರೆತಿದೆ .

ನಂತರದ ಅವಧಿಯಲ್ಲಿ ನಮ್ಮ ವಾರ್ಡ್‌ನಲ್ಲಿ ಮೀಸಲಾತಿ ಬದಲಾವಣೆ ಆದ ಕಾರಣ ನನ್ನ ಮಾತೆಯವರಿಗೆ ಚುನಾವಣೆಯಲ್ಲಿ ಸ್ಪರ್ದಿಸಲು ಸಾಧ್ಯವಾಗಲಿಲ್ಲ. 2013ರ ಚುನಾವಣೆಗೆ ವಾರ್ಡ್‌ಗೆ ಪುನ: ಮೀಸಲಾತಿ ದೊರೆತಾಗ ನನ್ನ ಮಾತೆಯವರು ಅವರ ಆಡಳಿತ ಅವಧಿಯಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿದ ಗ್ರಾಮಸ್ಥರು ನನ್ನನ್ನು ಚುನಾವಣೆಯಲ್ಲಿ ಸ್ಪರ್ದಿಸಲು ಪ್ರೇರೇಪಿಸಿದರು, ಅಲ್ಲದೆ ನನ್ನ ರಾಜಕೀಯ ಗುರುಗಳಾದ ಚಿಮ್ಮಣ್ಣಮಾಡ ಕೃಷ್ಣ ಗಣಪತಿ ಅವರ ಮಾರ್ಗರ್ಶನದಲ್ಲಿ ಹಾಗೂ ಗ್ರಾಮಸ್ಥರ ಒತ್ತಾಸೆಯ ಮೇರೆಗೆ ಚುನಾವಣೆಯಲ್ಲಿ ಸ್ಪರ್ದಿಸಿ 480 ಮತಗಳಲ್ಲಿ 410 ರಷ್ಟು ಅತ್ಯಧಿಕ ಮತಗಳನ್ನು ನೀಡಿ ಗೆಲ್ಲಿಸಿದರು.

ಗ್ರಾಮ ಪಂಚಾಯಿತಿ ಸದಸ್ಯನಾಗಿ ಆಯ್ಕೆಯಾದ ಮೊದಲ ಅವಧಿಯಲ್ಲೇ ನನ್ನನ್ನು ಗ್ರಾ.ಪಂ, ಅಧ್ಯಕ್ಷನಾಗಿ ಆಯ್ಕೆ ಮಾಡಿದರು. ನಾನು ಅಧ್ಯಕ್ಷನಾಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭ ನನ್ನ ಸದಸ್ಯ ಮಿತ್ರನಾದ ಶರೀನ್‌ ಮುತ್ತಣ್ಣ ನನಗೆ ತುಂಬಾ ಸಹಕಾರಿಯಾಗಿದ್ದು, ಅವರ ಮಿತ್ರತ್ವಕ್ಕೆ ಚಿರರುಣಿಯಾಗಿ ನನ್ನ ಅಧ್ಯಕ್ಷ ಸ್ಥಾನದ 2.5 ವರ್ಷಗಳ ಅವಧಿಯ ನಂತರ ನಾನು ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿ ಅಧ್ಯಕ್ಷ ಸ್ಥಾನವನ್ನು ಶರೀನ್‌ ಮುತ್ತಣ್ಣನಿಗೆ ಹಸ್ತಾಂತರಿಸಿದೆ. ಬಳಿಕ 2ನೇ ಬಾರಿಗೂ ಕೂಡ ಗ್ರಾಮಸ್ಥರ ಸಹಕಾರದಿಂದ ಚುನಾವಣೆಯಲಿ ಸ್ಪರ್ಧಿಸಿ ಗೆದ್ದು ಸದಸ್ಯನಾಗಿ ಆಯ್ಕೆಗೊಂಡು ಪಂಚಾಯಿತಿಯ ಉಪಾಧ್ಯಕ್ಷನಾಗಿ ಪ್ರಸ್ತುತ ಸೇವೆ ಸಲ್ಲಿಸುತ್ತಿದ್ದೇನೆ.

ನನ್ನ ಆಧಿಕಾರ ಅವಧಿಯಲ್ಲಿ ಅಂದಿನ ಶಾಸಕರಾದ ಶ್ರೀ ಕೆ.ಜಿ . ಬೋಪಯ್ಯ ಅವರ ಸಹಕಾರ ಹೆಚ್ಚಿದ್ದು, ಅವರು ನಮ್ಮ ಪಂಚಾಯಿತಿಗೆ ಸುಮಾರು 15 ಕೋಟಿ ರೂಪಾಯಿಗಳಷ್ಟು ಅನುದಾನವನ್ನು ಬಿಡುಗಡೆ ಮಾಡಿದರು. ಆದರಿಂದ ಪಂಚಾಯಿತಿಯ ಅಭಿವೃದ್ಧಿಗೆ ಪೂರಕವಾಯಿತು. ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರ ಕೇಂದ್ರ ಸರ್ಕಾರದ ಯೋಜನೆಯಾದ ಜಲ ಜೀವನ್‌ ಮಿಷನ್‌ ನ ಅಡಿಯಲ್ಲಿ ಕಟ್ಟಗೇರಿ ಗ್ರಾಮದಲ್ಲಿ 30 ಲಕ್ಷ ವೆಚ್ಚದ ಕಾಮಗಾರಿ, ನಿಟ್ಟೂರು ಕಾರ್ಮಾಡು ಗ್ರಾಮಕ್ಕೆ ಅಂದಾಜು 50 ಲಕ್ಷ ಅನುದಾನದಲ್ಲಿ ಕಾರ್ಮಾಡು 130 ಮನೆಗಳಿಗೆ ಕುಡಿಯುವ ನೀರಿನ ಸರಬರಾಜು ಕಾಮಗಾರಿ ಪ್ರಗತಿಯಲ್ಲಿದೆ.

ಕುಂಬಾರ ಕಟ್ಟೆ ಎಸ್.ಟಿ. ಕಾಲೋನಿಗೆ 12 ಮನೆಗಳನ್ನು ನಿರ್ಮಿಸಿ ಕೊಡಲಾಗಿದ್ದು 3 ಮನೆಗಳ ನಿರ್ಮಾಣ ಪ್ರಗತಿಯಲ್ಲಿದೆ. ಪಾಲದಳ ಎಸ್.ಟಿ. ಕಾಲೋನಿಯಲ್ಲಿ 22 ಕುಟುಂಬಗಳಿದ್ದು 22 ಕುಟುಂಬಗಳಿಗೂ ಮನೆಯನ್ನು ನಿರ್ಮಿಸಿ ಕೊಡಲಾಗಿದೆ. ನಿಟ್ಟೂರು ಜಾಗಲೆಯಿಂದ ತಟ್ಟಕೆರೆ ಹೋಗಲು ರಸ್ತೆಯ ಸಮಸ್ಯೆ ಇದ್ದು ಸುಮಾರು 60 ವರ್ಷಗಳಿಂದ ಗ್ರಾಮಸ್ತರು ಕಷ್ಟವನ್ನು ಅನುಭವಿಸುತ್ತಿದ್ದರು, ಆ ರಸ್ತೆ ಖಾಸಗಿ ಜಾಗದಲ್ಲಿದ್ದು, ಮಣ್ಣಿನ ರಸ್ತೆಯಾಗಿತ್ತು, ಅಲ್ಲದೆ ಮಳೆಗಾಲದ ಸಂದರ್ಭದಲ್ಲಿ ನೀರು ನಿಂತು ದೊಡ್ಡ ದೊಡ್ಡ ಗುಂಡಿಗಳಾಗಿ ಜನರಿಗೆ ಸಂಚರಿಸಲು ಅನಾನುಕೂಲವಾಗಿತ್ತು. ಈ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಮಾಡುವ ನಿಟ್ಟಿನಲ್ಲಿ ಮಾಜಿ ಶಾಸಕರಾದ ಶ್ರೀ ಕೆ.ಜಿ . ಬೋಪಯ್ಯ ಅವರ ಸಹಕಾರದಿಂದ ಕಾವೇರಿ ನೀರಾವರಿ ನಿಗಮದಿಂದ 1 ಕೋಟಿ ಅನುದಾನವನ್ನು ಪಡೆದು ಕಾಂಕ್ರೆಟ್‌ ರಸ್ತೆಯನ್ನು ನಿರ್ಮಾಣ ಮಾಡಲಾಗಿದೆ. ಕಾರ್ಮಾಡಿನಿಂದ ಬೆಂಡೆಗುಡ್ಡೆ ವರೆಗೆ ಸುಮಾರು 60 ಲಕ್ಷ ವೆಚ್ಚದ ಕಾಂಕ್ರೆಟ್‌ ರಸ್ತೆ ನಿರ್ಮಿಸಲಾಗಿದೆ. ಮಲ್ಲೂರು ಸಮೀಪದಿಂದ ಪಾಲದಳ ಕಾಲೋನಿಯವರೆಗೆ ಅಂದಾಜು 50 ಲಕ್ಷ ವೆಚ್ಚದ ಕಾಂಕ್ರೆಟ್‌ ರಸ್ತೆ ನಿರ್ಮಿಸಲಾಗಿದೆ.

ನಮ್ಮ ಗ್ರಾಮಕ್ಕೆ ಸಂಪರ್ಕವಿರುವ ಪ್ರಮುಖ ರಸ್ತೆಗಳು ಮಳೆಗಾಲದಲ್ಲಿ ಸಂಪೂರ್ಣ ನೀರಿನಿಂದ ಜಲಾವೃತಗೊಂಡು ನಮ್ಮ ಗ್ರಾಮ ದ್ವೀಪದಂತೆ ಆಗುತ್ತಿತ್ತು. ಆದರಿಂದ ಗ್ರಾಮಸ್ಥರಿಗೆ ತುರ್ತು ಪರಿಸ್ಥತಿಗಳಲ್ಲಿ ಪ್ರಯಾಣಿಸಲು ಸಾಧ್ಯವಾಗದೆ, ಹಲವಾರು ಸಾವು ನೋವುಗಳು ಸಂಭವಿಸಿತ್ತು. ಇದರ ಪರಿಹಾರಕ್ಕಾಗಿ ದಶಕಗಳಿಂದ ಬೇಡಿಕೆ ಇದ್ದೂ, ಹಲವಾರು ಮುಖಂಡರು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ನಾನು ಪಂಚಾಯಿತಿಯ ಸದಸ್ಯನಾದ ಮೇಲೆ ಈ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಒದಗಿಸಲು ಪಣತೊಟ್ಟು. ಮಾನ್ಯ ಮಾಜಿ ಶಾಸಕರಾದ ಕೆ.ಜಿ. ಬೋಪಯ್ಯ ಅವರನ್ನು ವಿಧಾನ ಸೌಧದ ಒಳಗೂ – ಹೊರಗೂ ಶಾಸಕರಿಗೆ ಮನವಿ ಮಾಡಿ ಕೊರೋನ ಕಾಲದಲ್ಲಿ ಕರ್ನಾಟಕ ರಾಜ್ಯದಲ್ಲಿ ಒಟ್ಟು 270 ಸೇತುವೆಗಳ ನಿರ್ಮಾಣದ ಬೇಡಿಕೆಯಿದ್ದರೂ, ನಮ್ಮ ಕೊಡಗು ಜಿಲ್ಲೆಯ ನಿಟ್ಟೂರಿನ ಮುಲ್ಲೂರು ಗ್ರಾಮಕ್ಕೆ ಸೇತುವೆಯನ್ನು ನಿರ್ಮಾಣ ಮಾಡಲು ಅನುಮತಿಯನ್ನು ಮಾಜಿ ಶಾಸಕರಾದ ಕೆ.ಜಿ. ಬೋಪಯ್ಯನವರು ಕೊಡಿಸಿ, ಕೆ.ಆರ್‌.ಡಿ.ಸಿ ಇಲಾಖೆಯ ಮೂಲಕ ಅನುದಾನವನ್ನು ಒದಗಿಸಿಕೊಟ್ಟಿದ್ದಾರೆ. ಶಾಸಕರ ಈ ಕಾರ್ಯ ತುಂಬಾ ಶ್ಲಾಘನೀಯವಾಗಿದ್ದು, ಗ್ರಾಮದ ಜನರ ಪರವಾಗಿ ನಾನು ಕೆ.ಜಿ. ಬೋಪಯ್ಯನವರಿಗೆ ಈ ಸಂದರ್ಭದಲ್ಲಿ ಧನ್ಯವಾದವನ್ನು ಅರ್ಪಿಸುತ್ತಿದ್ದೇನೆ.

ಸುಮಾರು 30 ಲಕ್ಷ ವೆಚ್ಚದಲ್ಲಿ ಪಾಲುದಳ ಕಟ್ಟೆಯಿಂದ ಲಕ್ಷ್ಮಣ ತೀರ್ಥ ನಡಿಯವರೆಗೆ ತೋಡಿನ ಹೂಳೆತ್ತಿ 2 ಬದಿ ಕಿರು ಸೇತುವೆಯನ್ನು ನಿರ್ಮಾಣ ಮಾಡಲಾಗಿದೆ. ಮತ್ತು 2 ರಿಂದ 3 ಕಿರು ಸೇತುವೆಗಳನ್ನು ನಿರ್ಮಿಸಲಾಗಿದೆ.

ನಿಟ್ಟೂರು ಗ್ರಾಮ ವ್ಯಾಪ್ತಿಯಲ್ಲಿ ಸುಮಾರು 10 ವರ್ಷಗಳ ಹಿಂದೆ ಕೇವಲ ಬೆರಳಣಿಕೆಯಷ್ಟು ಮಾತ್ರ ಬೀದಿ ದೀಪಗಳಿದ್ದು, ನಮ್ಮ ಅವಧಿಯಲ್ಲಿ 360 ಬೀದಿ ದೀಪಗಳನ್ನು ಅಳವಡಿಸಲಾಗಿದ್ದು, ಅದರಲ್ಲಿ 50-60 ಸೋಲಾರ್‌ ಬೀದಿ ದೀಪಗಳಿವೆ. ಹಾಗೂ ಗ್ರಾಮದ ಪ್ರಮುಖ ಮಾರ್ಗಗಳಲ್ಲಿ ಬೀದಿ ದೀಪಗಳನ್ನು ಅಳವಡಿಸಲಾಗಿದೆ.

ನಮ್ಮ ಗ್ರಾಮದ ವ್ಯಾಪ್ತಿಯಲ್ಲಿ ವನ್ಯಪ್ರಾಣಿ ಉಪಟಳ ಹೆಚ್ಚಾಗಿದ್ದು ಇದರ ಪರಿಹಾರಕ್ಕಾಗಿ ಸ್ವತಃ ನಾನೇ ಜವಾಬ್ದಾರಿಯನ್ನು ತೆಗೆದುಕೊಂಡು ಹಿಂದಿನ ರಾಜ್ಯ ಸರ್ಕಾರ ಹಾಗೂ ಶಾಸಕರು, ಮಂತ್ರಿಗಳೊಂದಿಗೆ ಚರ್ಚಿಸಿ, ಸಮಸ್ಯೆಯ ಬಗ್ಗೆ ಒತ್ತಡವನ್ನು ಹೇರಿ ಲಕ್ಷ್ಮಣ ತೀರ್ಥ ನದಿಯಿಂದ ಅರಣ್ಯದ ವರೆಗೆ ಸುಮಾರು 5 ಕಿ.ಮೀ. ದೂರದಷ್ಟು ಸೋಲಾರ್‌ ಬೇಲಿಯನ್ನು ಅಳವಡಿಸಲಾಗಿದ್ದು, ಇದರಿಂದ 50%ದಷ್ಟು ಕಾಡಾನೆ ದಾಳಿಯನ್ನು ನಿಯಂತ್ರಿಸಲು ಸಾಧ್ಯವಾಗಿದೆ.

ನನ್ನ 32 ವರ್ಷದ ರಾಜಕೀಯ ಜೀವನದಲ್ಲಿ ಆಗಿನ ಶಾಸಕರಾದ ಹೆಚ್.ಪಿ. ಬಸವರಾಜು ನಂತರ ಕೆ.ಜಿ. ಬೋಪಯ್ಯರವರೆಗೆ ಎಲ್ಲರೂ ನನ್ನ ಬೇಡಿಕೆಗೆ ನನ್ನ ಮಾತಿಗೆ ಬಹಳ ಸ್ಪಂದನೆಯನ್ನು ಕೊಟ್ಟು ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನವನ್ನು ದೊರಕಿಸಿ ಕೊಟ್ಟಿದ್ದಾರೆ.

ನಾನು ಚುನಾವಣೆಯಲ್ಲಿ ಮತಯಾಚನೆಗೆ ಹೋಗುವ ಸಂದರ್ಭದಲ್ಲಿ ನಾನು ಗ್ರಾಮಸ್ಥರಲ್ಲಿ ಕೇಳಿಕೊಳ್ಳುವುದೇನೆಂದರೆ ಗ್ರಾಮದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತನಾಡಲು ನನ್ನನು ಯಾವಗ ಬೇಕಾದರು ಎಷ್ಟೊತ್ತಾದರೂ ಸಂಪರ್ಕಿಸಬಹುದು. ಆದರೆ ಸ್ವಾರ್ಥ ಕೆಲಸಗಳಿಗೆ ಕೊಲೆ, ಸುಲಿಗೆ, ಕಳ್ಳತನ ನಡೆಸಿ ಸಹಾಯ ಕೇಳಲು ದಯವಿಟ್ಟು ಬರಬೇಡಿ ಎನ್ನುವ ಮನವಿ ಮಾಡುತ್ತೇನೆ. ಯಾವುದೇ ಒಳ್ಳೆಯ ಕಾರ್ಯಗಳಿಗೆ ನಾನು ಶತಸಿದ್ದನಿದ್ದೇನೆ. ಹಾಗೆ ಗ್ರಾಮಸ್ಥರ ಯಾವುದೇ ಸಮಸ್ಯೆ ಕಷ್ಟಗಳಿಗೆ ಅತೀ ಶೀಘ್ರವಾಗಿ ಸ್ಪಂದಿಸುವ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ಧೇನೆ.

ಸಾರ್ವಜನಿಕ ವಲಯದಲ್ಲಿ ಜನಸೇವೆ ಮಾಡುವ ಒಂದು ಪಣತೊಟ್ಟಿದ್ದೇನೆ. ಯಾವುದೇ ಒಂದು ಸಾರ್ವಜನಿಕ ಮೂಲದ ಹಣವನ್ನು ಸ್ವಂತ ಕಾರ್ಯಕ್ಕೆ ಬಳಸಬಾರದೆಂದು. ನಾನು ಅಧ್ಯಕ್ಷನಾಗಿದ್ದಾಗ ಪಂಚಾಯಿತಿಯ ಸದಸ್ಯರು, ಸಿಬ್ಬಂದಿಗಳನ್ನು ಒಟ್ಟಾಗಿ ಸೇರಿಸಿ ಯಾರೂ ಸಹ ಕಾಯಾ, ವಾಚಾ, ಮನಸ್ಸಿನಿಂದ ಹಣದ ವ್ಯಾಮೋಹವಿಲ್ಲದೆ ಪಂಚಾಯಿತಿಯ ಅಭಿವೃದ್ದಿಗೆ ದುಡಿಯಬೇಕು ಎಂದು ಪಟತೊಟ್ಟೇವು. ಇಲ್ಲಿಯವರೆಗೆ ಗ್ರಾಮಸ್ಥರಲ್ಲಿ ಯಾರೂ ಕೂಡ ನಮ್ಮನ್ನು ಗುರುತಿಸಿ ಇವರು ಸ್ವಂತಕ್ಕಾಗಿ ಗ್ರಾಮದ ಹಣವನ್ನು ಉಪಾಯೋಗಿಸಿದ್ದಾರೆ ಯೆಂದು ಹೇಳಿಲ್ಲ.

ಅಲ್ಲದೆ ಕೆಲವು ತುರ್ತು ಸಂದರ್ಭಗಳಲ್ಲಿ ಸರ್ಕಾರದಿಂದ ಅನುದಾನ ಬರುಲು ವಿಳಂಬವಾದಾಗ ಸ್ವತ: ಸದಸ್ಯರುಗಳೇ ತಮ್ಮ ಸ್ವಂತ ಹಣವನ್ನು ಉಪಯೋಗಿಸಿ ಜನಸೇವೆಯನ್ನು ಮಾಡಿದ ಹಲವು ಉದಾಹರಣೆಗಳಿದೆ. ನಮ್ಮ ಕೆಲಸವನ್ನು ನೋಡಿ ಗ್ರಾಮಸ್ಥರ ವಲಯದಲ್ಲಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಆದರೂ ಕೂಡಾ ನಮ್ಮ ಈ ಶ್ರಮವನ್ನು ನೋಡಿ ಅಸೂಯೆಯಿಂದ ಕೆಲವು ವಿರೋಧಿಗಳು ಗ್ರಾಮದ ಮದುವೆ ಇನ್ನಿತರ ಸಮಾರಂಭಗಳಲ್ಲಿ ಸುಳ್ಳು ಆರೋಪಗಳನ್ನು ಹೇಳಿರುವುದು ತಿಳಿದು ನನ್ನ ಮನಸ್ಸಿಗೆ ತುಂಬಾ ಬೇಸರವಾಗಿದೆ.

ಪಂಚಾಯಿತಿಯ ಅಭಿವೃದ್ಧಿಗೆ ಸರ್ಕಾರದ ನಾನಾ ಇಲಾಖೆಗಳಿಂದ ಬರುವ ಎಲ್ಲಾ ರೀತಿಯ ಯೋಜನೆಗಳನ್ನು ಕಂಡು, ಅಧ್ಯಯನ ನಡೆಸಿ ಅದು ಜಿಲ್ಲಾ ಮಟ್ಟದಲ್ಲಿ ಅಥವಾ ರಾಜ್ಯ ಸರ್ಕಾರದ ಇಲಾಖೆಗಳಲ್ಲಿ ಮಾತನಾಡಿಸಿ ಅನುದಾನವನ್ನು ತರುವಲ್ಲಿ ಸಫಲನಾಗಿದ್ದೇನೆ. ಯಾವುದೇ ಜಾತಿ, ಭೇದದ ತಾರತಮ್ಯವಿಲ್ಲದೆ ಎಲ್ಲರಿಗೂ ಸಮಾನವಾಗಿ ಸಿಗುವ ಸೌಲಭ್ಯಗಳನ್ನು ಒದಗಿಸಿದ್ದೇನೆ. ಅಲ್ಲದೆ ಸಿಕ್ಕ ಅನುದಾನಗಳನ್ನು ಅಭಿವೃದ್ಧಿಗೆ ಬಳಸಿ ಸದುಪಯೋಗಪಡಿಸಿದ ಆತ್ಮತೃಪ್ತಿ ನನ್ನಲ್ಲಿ ಇದೆ.

ಪಂಚಾಯಿತಿಯ ಸದಸ್ಯರು ಆಗಲಿ ಸಿಬ್ಬಂದಿ ವರ್ಗ, ಗ್ರಾಮಸ್ಥರಾಗಲಿ, ಹಿರಿಯರಾಗಲಿ ಎಲ್ಲರ ಸಹಕಾರ ಮೆಚ್ಚುಗೆ ದೊರೆತಿದೆ. ಮುಂದಿನ ದಿನಗಳಲ್ಲಿ ಯುವ ನಾಯಕರನ್ನು ನನಗಿಂತ ಮೀರಿ ಕೆಲಸವನ್ನು ಮಾಡಿಸುವಂತೆ ಜನಸೇವೆಗೆ ತೊಡಗಿಸಲು ಹೆಚ್ಚು ಹೆಚ್ಚು ಯುವಕರನ್ನು ಗುರುತಿಸಿ ತಯಾರಿಸುವ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದೇನೆ. ಎಲ್ಲಾ ಪಕ್ಷದ ನಾಯಕರೂ, ಸಂಘ – ಸಂಸ್ಥೆಯವರೂ NGO ಗಳೊಂದಿಗೂ ಒಳ್ಳೆಯ ಒಡನಾಟವಿದೆ. ಇನ್ನೂ ನನ್ನ ಅಧಿಕಾರ ಅವಧಿ ಮುಗಿಯುವ ಮುನ್ನ ಹೆಚ್ಚು ಗ್ರಾಮದ ಅಭಿವೃಧ್ಧಿ ಮಾಡಲು ಶ್ರಮಿಸುತ್ತೇನೆ ಹಾಗೂ ಮುಂದಿನ ದಿನಗಳಲ್ಲಿ ನೂತನ ಶಾಸಕರ ಬಳಿ ಮನವಿ ಮಾಡಿ ಅನುದಾನವನ್ನು ತರಿಸುವ ಪ್ರಯತ್ನ ಮಾಡುತ್ತೇನೆ ಅಲ್ಲದೆ ಶಾಸಕರೂ ಕೂಡಾ ಸಹಕರಿಸುವ ನಂಬಿಕೆ ಇದೆ. ತುರ್ತಾಗಿ ಮಾಡಿ ಕೊಡಲು ಸಾಧ್ಯವಿಲ್ಲದಿದ್ದರೂ ಅವರು ಸ್ಪಂದಿಸುತ್ತಾರೆ ಎಂಬ ಆಶಾಭಾವನೆ ಇದೆ.

ರಾಜಕೀಯ ಕ್ಷೇತ್ರದಲ್ಲಿ ನಾನು ಭಾರತೀಯ ಜನತಾ ಪಕ್ಷದ ನಿಷ್ಠಾವಂತ ಪ್ರಾಮಾಣಿಕ ಸಕ್ರಿಯ ಕಾರ್ಯಕರ್ತನಾಗಿ ದುಡಿಯುತ್ತಿದ್ದೇನೆ. ಪಕ್ಷದಲ್ಲಿ ನನಗೆ ಒದಗಿದ ಜವಾಬ್ದಾರಿಗಳನ್ನು ಕಿರಿಯರಿಗೆ ಬಿಟ್ಟು ಕೊಟ್ಟಿದ್ದೇನೆ. ನನ್ನ ಅಭಿವೃದ್ಧಿ ಕಾರ್ಯವನ್ನು ಮನಗಂಡ ನನ್ನ ನಾಯಕರು ಹಾಗೂ ಮಾಜಿ ಸಂಸದರಾದ ಪ್ರತಾಪ ಸಿಂಹರವರು ನನ್ನನ್ನು ಸರ್ಕಾರದಿಂದ ಕೇಂದ್ರ ಸರ್ಕಾರದ ದಿಶಾ ಸಮಿತಿಗೆ ಸದಸ್ಯರಾಗಿ ನಾಮನಿರ್ದೇಶಿಸಿದರು. ಅಲ್ಲಿ ಕೂಡಾ ನಾನು ಸುಮ್ಮನೆ ಕುಳಿತಿಲ್ಲ. ಪ್ರಗತಿ ಪರಿಶೀಲನ ಸಭೆಯಲ್ಲಿ ಜಿಲ್ಲಾಧಿಕಾರಿ, ಶಾಸಕರ ಸಮ್ಮುಖದಲ್ಲೇ ವಿವಿಧ ಇಲಾಕೆಯ ಅಧಿಕಾರಿಗನ್ನು ಅಭಿವೃದ್ದಿ ಕಾರ್ಯದ ಬಗ್ಗೆ ತರಾಟೆಗೆ ತೆಗೆದು, ಪ್ರಶ್ನೆಗಳನ್ನು ಎತ್ತಿ, ಅದು ಅನುಷ್ಠಾನವಾಗಲೂ ಶತಾಯಗತಾಯ ಪ್ರಯತ್ನ ಮಾಡಿದ್ಧೇನೆ. “ವೈಲ್ಡ್‌ಲೈಫ್‌ ಫಸ್ಟ್‌” ಸಂಸ್ಥೆಯಲ್ಲಿ ಚಿನ್ನಪ್ಪ ಅವರೊಂದಿಗೆ ಕೆಲಸ ಮಾಡಿದ ಅನುಭವವಿದೆ. ಸಹಕಾರ ಕ್ಷೇತ್ರದಲ್ಲಿ ಬಾಳೆಲೆ ಎ.ಪಿ.ಸಿ.ಎಂ.ಎಸ್‌ ನಲ್ಲಿ 3 ವರ್ಷಗಳ ಕಾಲ ನಿರ್ದೇಶಕನಾಗಿ ಸೇವೆ ಸಲ್ಲಿಸಿದ್ದೇನೆ.

ಚೆಕ್ಕೇರ ಸೂರ್ಯ ಅಯ್ಯಪ್ಪನವರ ಕುಟುಂಬ ಪರಿಚಯ:

ಮೂಲತಃ ಕೃಷಿಕರಾಗಿರುವ ಚೆಕ್ಕೇರ ಸೂರ್ಯ ಅಯ್ಯಪ್ಪನವರ ತಂದೆ: ದಿ. ಚೆಕ್ಕೇರ ಮುತ್ತಣ್ಣ. ತಾಯಿ: ಚೆಕ್ಕೇರ ದೇವಮ್ಮ. ಪತ್ನಿ: ಕವಿತಾ ಗೃಹಿಣಿಯಾಗಿದ್ದಾರೆ. ಹಿರಿಯ ಮಗ: ನಿಹಾಲ್‌ ನಾಣಯ್ಯ, ಬೆಂಗಳೂರಿನ MNC ನಲ್ಲಿ ಉದ್ಯೋಗಿದ್ದಾರೆ. ಕಿರಿಯ ಮಗ: ಬಿಶಾಲ್‌ ಬೋಪಣ್ಣ ಜರ್ಮನಿಯಲ್ಲಿ ಉನ್ನತ ವಿದ್ಯಾಭ್ಯಾಸ ನಿತರರಾಗಿದ್ದಾರೆ.

ಚೆಕ್ಕೇರ ಸೂರ್ಯ ಅಯ್ಯಪ್ಪನವರು ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಮಲ್ಲೂರು ಗ್ರಾಮದ ಸುಂದರ ಲೀಲ ʼಎʼ ಎಸ್ಟೇಟ್‌ನಲ್ಲಿ ಕುಟುಂಬ ಸಮೇತ ನೆಲೆಸಿದ್ದಾರೆ. ಇವರ ರಾಜಕೀಯ, ಸಹಕಾರ, ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಸೇವೆಯು ಹೀಗೆ ನಿರಂತರವಾಗಿ ಮುಂದುವರೆಯಲಿ ಎಂದು “ಸರ್ಚ್‌ ಕೂರ್ಗ್ ಮೀಡಿಯಾ” ವು ಹಾರೈಸುತ್ತದೆ.

ಸಂದರ್ಶನ ದಿನಾಂಕ: 10-07-2024

About ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.
5 1 vote
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments