ಹೆಚ್.ಎನ್. ಪಳನಿ ಸ್ವಾಮಿ, ಉಪಾಧ್ಯಕ್ಷರು: ಗ್ರಾಮ ಪಂಚಾಯಿತಿ ಸಿದ್ದಾಪುರ (Gram Panchayat: Siddapura)
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ವ್ಯಾಪ್ತಿಗೆ ಒಳಪಡುವ ಸಿದ್ದಾಪುರ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಹೆಚ್.ಎನ್. ಪಳನಿಸ್ವಾಮಿ ಅವರನ್ನು “ಸರ್ಚ್ ಕೂರ್ಗ್ ಮೀಡಿಯಾ” ದ “ನಮ್ಮ ಕೊಡಗು-ನಮ್ಮಗ್ರಾಮ” ಅಭಿಯಾನದಡಿಯಲ್ಲಿ ಸಂದರ್ಶಿಸಿ ಮಾಹಿತಿಯನ್ನು ಪಡೆಯಲಾಯಿತು.
“ಸರ್ಚ್ ಕೂರ್ಗ್ ಮೀಡಿಯಾ” ದೊಂದಿಗೆ ಮಾತನಾಡಿದ ಹೆಚ್.ಎನ್. ಪಳನಿಸ್ವಾಮಿರವರು “ನಾನು ಮೊದಲು ವೃತ್ತಿಯಲ್ಲಿ ಟ್ಯಾಕ್ಷಿ ವಾಹನ ಚಾಲಕನಾಗಿ ಕೆಲಸ ಮಾಡುತ್ತಿದ್ದೆ. ಹಾಗೆ ಸ್ವಂತ 2 ವಾಹನಗಳ ಮಾಲೀಕನೂ ಆಗಿದ್ದೆ. ಆ ಸಂದರ್ಭ ನಮ್ಮ ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯ ವಾಹನ ಚಾಲಕರರನ್ನು ಓಳಗೊಂಡ ವಾಹನ ಚಾಲಕರ ಮಜ್ದೂರ್ ಸಂಘದ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದೆ. ಅಲ್ಲದೆ ಸಂಘದ ಸ್ಥಾಪಕಾಧ್ಯಕ್ಷನಾಗಿ, ನಂತರ 4 ವರ್ಷಗಳ ಕಾಲ ಅಧ್ಯಕ್ಷನಾಗಿ ಜವಾಬ್ದಾರಿಯನ್ನು ನಿರ್ವಹಿಸಿದೆ. ಅದೇ ಸಂದರ್ಭದಲ್ಲಿ ಕೊಡಗು ಜಿಲ್ಲಾ ಮಜ್ದೂರ್ ಸಂಘದ ಸದಸ್ಯನಾಗಿ ಕೂಡ ಕಾರ್ಯನಿರ್ವಹಿಸಿದೆ. ನಂತರದ ವರ್ಷಗಳಲ್ಲಿ ಸಿದ್ದಾಪುರ ಪೌರ ಕಾರ್ಮಿಕರ ಸಂಘದ ಅಧ್ಯಕ್ಷನಾದೆ.
ಹೀಗೆ ಮೊದಲಿನಿಂದಲೂ ನನಗೆ ಸಾಮಾಜಿಕ ಕೆಲಸಗಳಲ್ಲಿ ಆಸಕ್ತಿಯಿದ್ದು, ಇನ್ನಷ್ಟು ಹೆಚ್ಚು ಸಮಯ ಕೊಟ್ಟು ಸಾಮಾಜಿಕ ಕೆಲಸವನ್ನು ಮಾಡಬೇಕೆಂದು ರಾಜಕೀಯ ಕ್ಷೇತ್ರವನ್ನು ಪ್ರವೇಶ ಮಾಡಿದೆ. ಹಾಗಾಗಿ 2005 ರ ಗ್ರಾ.ಪಂ ಚುನಾವಣೆಯಲ್ಲಿ ಬಿ.ಜೆ.ಪಿ ಪಕ್ಷದ ಬೆಂಬಲಿತ ಅಭ್ಯರ್ಥಿಯಾಗಿ ಸ್ವರ್ಧಿಸಿ ಸೋಲನ್ನು ಅನುಭವಿಸಿದೆ. ನಂತರ 2015 ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿ 2ನೇ ಬಾರಿಗೂ ಸೋಲನ್ನು ಅನುಭವಿಸದೆ, ಆದರೂ ನಾನು ನನ್ನ ರಾಜಕೀಯ ಜೀವನವನ್ನು ಮುಂದುವರೆಸಿ ಜನರ ಬೆಂಬಲವನ್ನು ಪಡೆಯುವಲ್ಲಿ ಯಶಸ್ವಿಯಾಗಿ 2020 ರ ಗ್ರಾ.ಪಂ. ಚುನಾವಣೆಯಲ್ಲಿ ಸಿದ್ದಾಪುರ ಒಂದನೇ ವಾರ್ಡ್‌ನಿಂದ ಸ್ಪರ್ಧಿಸಿ ಗೆಲುವನ್ನು ಪಡೆದು ಗ್ರಾ.ಪಂ. ಸದಸ್ಯನಾಗಿ ಆಯ್ಕೆಯಾದೆ. ನಂತರ ಪಂಚಾಯಿತಿಯ ಆಡಳಿತದ 2ನೇ ಅವಧಿಗೆ ಉಪಾಧ್ಯಕ್ಷನಾಗಿ ಆಯ್ಕೆಗೊಂಡು ಪ್ರಸ್ತುತ ಸೇವೆ ಸಲ್ಲಿಸುತ್ತಿದ್ದೇನೆ.
ನಾನು ಕಳೆದ 16 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ ರಾಜಕೀಯ ಜೀವನವನ್ನು ನಡೆಸಿಕೊಂಡು ಬರುತ್ತಿದ್ದೇನೆ. 2016 ರಲ್ಲಿ ವಲಯ ಕಾಂಗ್ರೆಸ್‌ನ ಎಸ್.ಸಿ. ಘಟಕದ ಅಧ್ಯಕ್ಷನಾಗಿ 8 ವರ್ಷಗಳ ಕಾಲ ಕಾರ್ಯನಿರ್ವಹಿಸಿದೆ. ಪ್ರಸ್ತುತ ಕಾಂಗ್ರೆಸ್ ಜಿಲ್ಲಾ ಎಸ್.ಸಿ. ಘಟಕದ ಸಹ ಕಾರ್ಯದರ್ಶಿಯಾಗಿ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದೇನೆ.
ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 15 ನೇ ಹಣಕಾಸಿನ ಯೋಜನೆಯ ಅನುದಾನದಲ್ಲಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿ, ಚರಂಡಿ, ತಡೆಗೋಡೆ ಕಾಮಗಾರಿ ಮಾಡಲಾಗಿದೆ. ಮತ್ತು ಬಾಕಿ ಉಳಿದ ಕಾಮಗಾರಿಗಳು ಪ್ರಗತಿಯಲ್ಲಿದೆ. ಜಲ ಜೀವನ್ ಮಿಷನ್ ನಲ್ಲಿ ಸಿದ್ದಾಪುರ ಒಂದನೇ ವಾರ್ಡ್‌ನಲ್ಲಿ ಕುಡಿಯುವ ನೀರಿನ ಟ್ಯಾಂಕ್ ನ್ನು ನಿರ್ಮಿಸಲಾಗಿದೆ. ಅದು ಶೀಘ್ರದಲ್ಲೇ ಕಾರ್ಯಾರಂಭಗೊಳ್ಳಲಿದೆ.
ಅಮೃತ ಸರೋವರ ಯೋಜನೆ ಅಡಿಯಲ್ಲಿ ಅಯ್ಯಪ್ಪ ಕೆರೆಯನ್ನು ಅಭಿವೃದ್ಧಿ ಪಡಿಸಲಾಗುತ್ತಿದ್ದು. ಧ್ವಜಸ್ತಂಭ ನಿರ್ಮಾಣ ಮಾಡಲಾಗಿದ್ದು ಕಳೆದ ವರ್ಷ ಸ್ವಾತಂತ್ರ್ಯ ದಿನಾಚರಣೆಗೆ ರಾಷ್ಟ್ರ ಧ್ವಜವನ್ನು ಹಾರಿಸಲಾಯಿತು. ಈ ವರ್ಷವೂ ಕೂಡಾ ಸ್ವಾತಂತ್ರ್ಯ ದಿನದಂದು ರಾಷ್ಟ್ರಧ್ವಜವನನು ಹಾರಿಸಲು ಯೋಜನೆ ಮಾಡಲಾಗಿದೆ. ಅಲ್ಲದೆ ಕೆರೆಯ ಸುತ್ತ ಮುತ್ತ ಔಷದಿ ಗಿಡಗಳನ್ನು ನೆಡಲಾಗಿದ್ದು ಮುಂದಿನ ದಿನಗಳಲ್ಲಿ ಉದ್ಯಾನವನ ಹಾಗೂ ಇನ್ನೂ ಹೆಚ್ಚಿನ ಅಭಿವೃದ್ಧಿಯನ್ನು ಮಾಡಲಾಗುವುದು.
ಸ್ವಚ್ಛಭಾರತ್ ಯೋಜನೆಯಡಿಯಲ್ಲಿ ಮನೆಮನೆಗೆ ಶೌಚಾಲಯ ನಿರ್ಮಾಣ ಮಾಡಲಾಗಿದ್ದು. ಇನ್ನು ಹೊಸ ಮನೆಗಳಿಗೆ ಶೌಚಾಲಗಳ ಅವಶ್ಯಕತೆಯಿದ್ದು, ಮುಂದಿನ ಹಂತದಲ್ಲಿ ಅನುದಾನವನ್ನು ಪಡೆಯಲು ಪ್ರಯತ್ನ ಪಡಲಾಗುತ್ತಿದೆ.
ಸಿದ್ದಾಪುರ ಗ್ರಾ.ಪಂ ವ್ಯಾಪ್ತಿಯಲ್ಲಿ ಕಸವಿಲೇವಾರಿ ಘಟಕಕ್ಕೆ ಕಳೆದ 40 ವರ್ಷಗಳಿಂದ ಬೇಡಿಕೆಯಿದ್ದು ಹೋರಾಟ ನಡೆಯುತ್ತಲೇ ಬರುತಿದೆ. ಇಲ್ಲಿಯವರೆಗೆ ಯಾವುದೇ ಜನಪ್ರತಿನಿದಿಗಳು, ಶಾಸಕರು ಗಂಭೀರವಾಗಿ ಈ ಸಮಸ್ಯೆಯನ್ನು ಪರಿಗಣಿಸಲಿಲ್ಲ. ಇದೀಗ ನೂತನ ಶಾಸಕರಾದ ಪೊನ್ನಣ್ಣನವರು ಕುದ್ದಾಗಿ ಬಂದು ಪರಿಶೀಲನೆ ನಡೆಸಿ ನೂತನ ಕಸವಿಲೇವಾರಿ ಘಟಕ ನಿರ್ಮಾಣಕ್ಕೆ ಭರವಸೆ ನೀಡಿದ್ದಾರೆ. ಕಸ ವಿಲೇವಾರಿ ಘಟಕಕ್ಕೆ ಸ್ಥಳೀಯರು ಜಾಗವನ್ನು ಉದಾರವಾಗಿ ನೀಡಲು ಮಾತುಕತೆ ಮಾಡಲಾಗುತ್ತಿದ್ದು, ಶಾಸಕರು ಹೆಚ್ಚು ಮುತುವರ್ಜಿಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಇದರಿಂದ 40 ವರ್ಷಗಳ ಕನಸು ನನಸಾಗಲಿದೆ. ಟಾಟಾ ಕಾಫೀ ಕಂಪನಿಯಿಂದ ಕಸದ ಬೇಲಿಂಗ್ ಮಿಷನ್ ನ್ನು ಉದಾರವಾಗಿ ಪಂಚಾಯಿತಿಗೆ ನೀಡಿದ್ದಾರೆ.
ಸಿದ್ದಾಪುರ ಗ್ರಾ.ಪಂ ವ್ಯಾಪ್ತಿಯಲ್ಲಿ ಸಣ್ಣ ಪುಟ್ಟ ವಿದ್ಯುತ್ ಸಮಸ್ಯೆ ಇದೆ. ಬೀದಿ ದೀಪಗಳನ್ನು ಅಳವಡಿಸಲಾಗುತ್ತಿದ್ದು, ಸೋಲಾರ್ ದೀಪಗಳನ್ನು ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ. ಅಲ್ಲದೆ ವಿದ್ಯುತ್ ಉಳಿತಾಯಕ್ಕಾಗಿ ಏಲ್.ಇ.ಡಿ ವಿದ್ಯುತ್ ದೀಪಗಳನ್ನೂ ಕೂಡಾ ಅಳವಡಿಸಲಾಗುತ್ತಿದೆ.
ಒಪ್ಪಿಕೊಂಡಂತಹ ಕಾಮಗಾರಿಗಳನ್ನು ಪೂರ್ಣಗೊಳಿಸಿ, ಮಾದರಿ ಗ್ರಾಮ ಪಂಚಾಯಿತಿಯನ್ನಾಗಿ ಮಾಡಲು ಶ್ರಮಿಸುತ್ತಿದ್ದೇನೆ. ಇನ್ನು ಹೆಚ್ಚಿನ ಅಭಿವೃದ್ದಿಗೆ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಪೊನ್ನಣ್ಣನವರ ಬಳಿ ಬೇಡಿಕೆ ಇಟ್ಟಿದ್ದೇವೆ. ಸಿದ್ದಾಪುರ ಪಟ್ಟಣದ ಈಗೀನ ಸಂತೆ ಮಳಿಗೆ ಹಾಗೂ ಮಾರುಕಟ್ಟೆ 50 ವರ್ಷ ಹಳೆಯದಾಗಿದ್ದು, ಶಿಥಿಲಾವಸ್ಥೆಯಲ್ಲಿದೆ. ಮಾನ್ಯ ಶಾಸಕರು ಭೇಟಿ ನೀಡಿ ಹೊಸ ಸುಸಜ್ಜಿತವಾದ ಮಾರುಕಟ್ಟೆ ನಿರ್ಮಾಣಕ್ಕೆ ಭರವಸೆಯನ್ನು ನೀಡಿದ್ದಾರೆ. ಅದರೊಂದಿಗೆ ಸಿದ್ದಾಪುರ ಪಟ್ಟಣವು ಸುತ್ತಲಿನ ಇತರ ಪ್ರಮುಖ ಸ್ಥಳಗಳಾದ ಹಾಸನ, ಸಕಲೇಶಪುರ, ಮೈಸೂರು, ಕುಟ್ಟ, ಮುಂತಾದ ಸ್ಥಳಗಳಿಗೆ ಜಂಕ್ಷನ್ ಆಗಿದ್ದು, ಆದರಿಂದ ಪ್ರಯಾಣಿಕರಿಗೆ ಅನುಕೂಲವಾಗಲು ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣಕ್ಕೂ ಕೂಡಾ ಮನವಿಯನ್ನು ಮಾಡಲಾಗಿದೆ. ನಮ್ಮ ಪಂಚಾಯಿತಿಯಲ್ಲಿ ಸುಮಾರು 12,000 ದಷ್ಟು ಜನಸಂಖ್ಯೆಯಿದ್ದು ಹೆಚ್ಚಿನವರು ತೋಟದ ಕಾರ್ಮಿಕರಾಗಿದ್ದು, ಸದಾ ಚಟುವಟಿಕೆಯಿಂದ ಕೂಡಿದ ಪಟ್ಟಣವಾಗಿದೆ.
ಸಿದ್ದಾಪುರ ಗ್ರಾ.ಪಂ ವ್ಯಾಪ್ತಿಯಲ್ಲಿ ವನ್ಯಪ್ರಾಣಿ ಉಪಟಳವಿದ್ದು, ಕಾಡಾನೆಗಳ ಓಡಾಟ ಹೆಚ್ಚಿದೆ, ಇದರ ಪರಿಹಾರಕ್ಕಾಗಿ ಅರಣ್ಯ ಇಲಾಖೆಯ ಸಹಕಾರವಿದ್ದು. ಕಾಡಾನೆ ದಾಳಿಯ ಶಾಶ್ವತ ಪರಿಹಾರಕ್ಕೆ ಶಾಸಕರ ಬಳಿ ಮನವಿ ಮಾಡಲಾಗಿದೆ.
ನಮ್ಮ ಸಿದ್ದಾಪುರ ಪಂಚಾಯಿತಿಯ ವ್ಯಾಪ್ತಿಯ ಗುಹ್ಯ, ಕರಡಿಗೋಡು, ಗೂಡುಗದ್ದೆ ಪ್ರದೇಶವು ಕಾವೇರಿ ನದಿ ದಡದಲ್ಲಿದ್ದು ಪ್ರವಾಹ ಪೀಡಿತ ಪ್ರದೇಶಗಳಾಗಿದೆ. ಇದರ ಶಾಶ್ವತ ಪರಿಹಾರಕ್ಕಾಗಿ ಮಾನ್ಯ ಶಾಸಕರು ಹಾಗೂ ಉಸ್ತುವಾರಿ ಸಚಿವರು ಭೇಟಿ ನೀಡಿ ಪಂಚಾಯಿತಿ ವ್ಯಾಪ್ತಿಯಲ್ಲಿ 10 ಏಕರೆ ಜಾಗವನ್ನು ಗುರುತಿಸಿ ಹೊಸ ಮನೆಗಳನ್ನು ನಿರ್ಮಾಣ ಮಾಡಿ ಕೊಡಲಾಗುವುದೆಂದು ತಿಳಿಸಿದ್ದಾರೆ.
ಜನರ ಬೇಡಿಕೆಗಳಿಗೆ ಸ್ಪಂದಿಸಿ ಕೆಲಸ ಮಾಡುತ್ತಿದ್ದೇನೆ. ಒಟ್ಟಿನಲ್ಲಿ ನಮ್ಮ ಗ್ರಾಮದ ಸರ್ವಾಂಗಿಣ ಅಭಿವೃದ್ದಿಯತ್ತ ನನ್ನ ಪ್ರಯತ್ನ ಸಾಗಿದೆ. ನನ್ನ ಈ ಎಲ್ಲಾ ಕಾರ್ಯಗಳಿಗೆ ಅಧ್ಯಕ್ಷರು, ಸದಸ್ಯರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಸಿಬ್ಬಂದಿಗಳು ಹಾಗೂ ಗ್ರಾಮಸ್ಥರ ಸಹಕಾರವು ಉತ್ತಮವಾಗಿ ದೊರಕುತ್ತಿದೆ. ನಮ್ಮ ಗ್ರಾಮದ ಪಂಚಾಯಿತಿ ಸದಸ್ಯರು, ಗ್ರಾಮಸ್ಥರು ಎಲ್ಲಾರು ಒಟ್ಟಾಗಿ ಒಂದು ಗೂಡಿ ಸಿದಾಪುರವನ್ನು ಮಾದರಿ ಗ್ರಾಮವನ್ನಾಗಿಸಲು ಶ್ರಮಿಸುವ ಎಂದು ಈ ಸಂದರ್ಭದಲ್ಲಿ ಮನವಿ ಮಾಡುತ್ತೇನೆ.
ಯುವಕರು ಹೆಚ್ಚಾಗಿ ರಾಜಕೀಯದಲ್ಲಿ ಪ್ರವೇಶ ಮಾಡಬೇಕು, ಯುವ ಶಕ್ತಿಯು ಸ್ಥಳೀಯ ಆಡಳಿತದಲ್ಲಿ ಭಾಗಿಯಾಗಿ ರಾಷ್ಟ್ರದ ಅಭಿವೃದ್ದಿಗೆ ತಮ್ಮನ್ನು ತೊಡಗಿಸಿಕೊಳ್ಳಬೆಕೆಂದು ಈ ಮೂಲಕ ಕೇಳಿಕೊಳ್ಳುತ್ತೇನೆ”
ಮೂಲತಃ ಕೂಲಿ ಕಾರ್ಮಿಕರಾಗಿದ್ದ ಹೆಚ್.ಎನ್. ಪಳನಿ ಸ್ವಾಮಿಯವರು, ಧಾರ್ಮಿಕ ಕ್ಷೇತ್ರದಲ್ಲಿ ಸಿದ್ದಾಪುರದ ಶ್ರೀ ಸಿದ್ದಿವಿನಾಯಕ ಮಿತ್ರ ಮಂಡಳಿ 3 ವರ್ಷಗಳ ಕಾಲ ಅಧ್ಯಕ್ಷನಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನಂತರ ಕಳೆದ 14 ವರ್ಷಗಳಿಂದ ಗೌರವ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಾಗೆ ವಿವಿಧ ಧಾರ್ಮಿಕ ಕಾರ್ಯಗಳಲ್ಲಿ ಸಕ್ರೀಯರಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ವ್ಯಾಪಾರ ಉದ್ಯಮದಲ್ಲಿ ಟಾಟಾ ಕಾಫಿ ಸಂಸ್ಥೆಯ ಕಾಫೀ ವ್ಯಾಪಾರವನ್ನು ಮಾಡುತ್ತಿದ್ದಾರೆ.
ಹೆಚ್.ಎನ್. ಪಳನಿ ಸ್ವಾಮಿಯವರ ಕುಟುಂಬ ಪರಿಚಯ:
ಹೆಚ್.ಎನ್. ಪಳನಿ ಸ್ವಾಮಿಯವರ ತಂದೆ. ದಿವಂಗತ. ವಿ. ನಂಜುಂಡ. ತಾಯಿ: ರಾಜಮ್ಮ. ಪತ್ನಿ: ಕೋಕಿಲ, ಗೃಹಿಣಿಯಾಗಿದ್ದಾರೆ. ಹಿರಿಯ ಪುತ್ರಿ: ಗಾನಾ ಶ್ರೀ, ಎಂ.ಕಾಂ.ಪದವೀಧರರಾಗಿದ್ದು, ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ದ್ವಿತೀಯ ಪುತ್ರಿ: ಭವನ ಶ್ರೀ, ಪದವೀಧರರಾಗಿದ್ದಾರೆ. ಕಿರಿಯ ಪುತ್ರಿ ಮೇಘ ಶ್ರೀ, ವ್ಯಾಸಂಗ ನಿರತರಾಗಿದ್ದಾರೆ.
ಹೆಚ್.ಎನ್. ಪಳನಿ ಸ್ವಾಮಿಯವರು ಪ್ರಸ್ತುತ ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಸಿದ್ದಾಪುರ ಒಂದನೇ ವಾರ್ಡ್‌ನಲ್ಲಿ ಕುಟುಂಬ ಸಮೇತ ನೆಲೆಸಿದ್ದಾರೆ. ಇವರ ರಾಜಕೀಯ, ಸಹಕಾರ, ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಸೇವೆಯು ಹೀಗೆ ನಿರಂತರವಾಗಿ ಮುಂದುವರೆಯಲಿ ಎಂದು “ಸರ್ಚ್ ಕೂರ್ಗ್ ಮೀಡಿಯಾ” ವು ಹಾರೈಸುತ್ತದೆ.
ಸಂದರ್ಶನ ದಿನಾಂಕ: 04-08-2024