ಅಮ್ಮತ್ತಿರ ವಿ. ರಾಜೇಶ್, ಅಧ್ಯಕ್ಷರು: ಗ್ರಾಮ ಪಂಚಾಯಿತಿ ಬಿರುನಾಣಿ(Gram Panchayat: Birunani)
ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ವ್ಯಾಪ್ತಿಗೆ ಒಳಪಡುವ ಬಿರುನಾಣಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಅಮ್ಮತ್ತಿರ ವಿ.ರಾಜೇಶ್ ಅವರನ್ನು “ಸರ್ಚ್ ಕೂರ್ಗ್ ಮೀಡಿಯಾ” ದ “ನಮ್ಮ ಕೊಡಗು-ನಮ್ಮಗ್ರಾಮ” ಅಭಿಯಾನದಡಿಯಲ್ಲಿ ಸಂದರ್ಶಿಸಿ ಮಾಹಿತಿಯನ್ನು ಪಡೆಯಲಾಯಿತು.
“ಸರ್ಚ್ ಕೂರ್ಗ್ ಮೀಡಿಯಾ” ದೊಂದಿಗೆ ಮಾತನಾಡಿದ ಅಮ್ಮತ್ತಿರ ವಿ.ರಾಜೇಶ್ ರವರು “ನನ್ನ 18 ವಯಸ್ಸಿನ ನಂತರ ನಾನು ಪೂರ್ಣವಾಗಿ ಸಾಮಾಜಿಕ ಕ್ಷೇತ್ರ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯವಾಗಿ ಭಾಗವಹಿಸತೊಡಗಿದೆ. ಆ ಸಂದರ್ಭ ನಮ್ಮ ಗ್ರಾಮದ ಹಿರಿಯರ ಒಡನಾಟದಿಂದ ಮೊದಲು ಶ್ರೀ ಮೃತ್ಯುಂಜಯ ದೇವಾಲಯದ ಆಡಳಿತ ಮಂಡಳಿಯಲ್ಲಿ 3 ವರ್ಷದ ಅವಧಿಗೆ ನಿರ್ದೇಶಕನಾಗಿ ಸೇವೆ ಸಲ್ಲಿಸಿದ್ದೇನೆ. ನಂತರ 5 ವರ್ಷಗಳ ಕಾಲ ಗೌರವ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದೆ. ಅದೇ ಸಂದರ್ಭದಲ್ಲಿ ನನ್ನ ತಂದೆಯವರಾದ ನಿವೃತ ಸೈನಿಕರಾದ ಎ.ಜೆ. ವಾಸುರವರು ನಮ್ಮ ಗ್ರಾಮದ ಸುದ್ದಿ ಪತ್ರಿಕಾ ವಿತರಕರಾಗಿದ್ದು, ಅವರ ನಿಧನದ ನಂತರ ನಾನು ಆ ಕಾರ್ಯವನ್ನು ಮುಂದುವರೆಸಿದೆ. ನಾನು ರಾಜಕೀಯದಲ್ಲಿ ಬಿ.ಜೆ.ಪಿ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ. ನಂತರ 2020 ರ ಅವಧಿಯ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ ಮುಖಂಡರು ಹಾಗೂ ಹಿರಿಯರ ಒತ್ತಾಸೆಯ ಮೇರೆಗೆ ಬಾಡಗರಕೇರಿ ಗ್ರಾಮದಿಂದ ಸ್ಪರ್ಧಿಸಿ ಗೆಲುವು ಸಾಧಿಸಿ, ಪಂಚಾಯಿತಿಯ ಮೊದಲ ಅವಧಿಗೆ ಉಪಾಧ್ಯಕ್ಷರಾಗಿ ನಂತರ ಎರಡನೇ ಅವಧಿಗೆ ಅಧ್ಯಕ್ಷನಾಗಿ ಆಯ್ಕೆಯಾಗಿ ಸೇವೆ ಸಲ್ಲಿಸುತ್ತಿದ್ದೇನೆ.
ನಮ್ಮ ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೇಸಿಗೆಯ ಸಮಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ನಮ್ಮ ಪಂಚಾಯಿತಿಗೆ ಆದಾಯದ ಮೂಲ ಕಡಿಮೆ ಇದ್ದು, ತೆರಿಗೆ ಹಾಗೂ ಆಧಾಯ ಕಡಿಮೆ ಇದೆ. ಗ್ರಾಮದ ಮನೆ, ನೀರಿನ ತೆರಿಗೆ ಮಾತ್ರ ಆದಾಯದ ಮೂಲವಾಗಿದೆ. ಜಲ ಜೀವನ್ ಮಿಷನ್ ನ ಅನುಷ್ಠಾನ ಮಾಡಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಅನುದಾನ ಕೂಡ ಕಡಿಮೆ ಇದೆ. ಅದಕ್ಕಾಗಿ ಪಂಚಾಯಿತಿ ವತಿಯಿಂದ ತೆರೆದ ಬಾವಿಗಳ ನಿರ್ಮಾಣ ಮಾಡಿ ಕೊಡಲಾಗುತ್ತಿದ್ದು, ಸರಾಸರಿ 4 ಮನೆಗಳಿಗೆ ಸೇರಿ ಒಂದು ತೆರೆದ ಬಾವಿಯನ್ನು ಮಾಡಲಾಗುತ್ತಿದೆ.
ಜೂನ್, ಜುಲೈ ತಿಂಗಳಿನಲ್ಲಿ ಅತಿಯಾದ ಮಳೆಯ ಕಾರಣ ವಿದ್ಯುತ್ ಸಮಸ್ಯೆ ಹೆಚ್ಚಿದು, ಅಲ್ಲಲ್ಲಿ ಮರಗಳು ಮುರಿದು ಕರೆಂಟ್ ಕಂಬಗಳು ಹಾನಿಗೊಳಗಾಗುತ್ತದೆ. ಬೇಕಾದಷ್ಟು ಲೈನ್‌ಮ್ಯಾನ್‌ಗಳು ಲಭ್ಯವಿಲ್ಲವಾದರಿಂದ ದುರಸ್ಥಿ ಮಾಡಲು ಹೆಚ್ಚು ಸಮಯ ಬೇಕಾಗುತ್ತದೆ.
ಪಂಚಾಯಿತಿ ವ್ಯಾಪ್ತಿಯಲ್ಲಿ ಮನೆಗಳ ಅಂತರ ಹೆಚ್ಚಿದ್ದು , ರಸ್ತೆ ನಿರ್ಮಾಣಕ್ಕೆ ಹೆಚ್ಚು ಅನುದಾನದ ಅವಶ್ಯಕತೆ ಇದೆ. ಅಲ್ಲದೆ ಮಳೆಯಿಂದ ರಸ್ತೆ ದುರಸ್ತಿ ಹೆಚ್ಚಾಗುವುದು. ರಸ್ತೆ ನಿರ್ಮಾಣದಲ್ಲಿ ಇನ್ನೂ 50% ರಿಂದ 60% ಕೆಲಸ ಬಾಕಿಇದೆ. ಚರಂಡಿ ವ್ಯವಸ್ಥೆಯು ಆಗಿದೆ. ಕಸವಿಲೇವಾರಿಗೆ ಕಾರ್ಮಿಕರ ಕೊರತೆ ಇದೆ. ಇದಕ್ಕಾಗಿ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಳಿ ಮನವಿ ಮಾಡಲಾಗಿದೆ. ಅಲ್ಲದೆ ಕಸವಿಲೇವಾರಿ ಘಟಕಕ್ಕೆ ಜಾಗವನ್ನು ಗುರುತಿಸಲಾಗಿದ್ದು, ಕಾಮಗಾರಿ ಪ್ರಾರಂಭಿಸಲು ಹೆಜ್ಜೆಯಿಡಲಾಗಿದೆ. ಸ್ವಚ್ಚ ಭಾರತ್ ಅಭಿಯಾನದಡಿಯಲ್ಲಿ ಮನೆ ಮನೆಗಳಿಗೆ ಶೌಚಾಲಯಗಳ ನಿರ್ಮಾಣ ಕಾರ್ಯ ಶೇಕಡ 100% ರಷ್ಟು ಆಗಿದೆ.
ಬಿರುನಾಣಿ ಪಂಚಾಯಿತಿಗೆ ಅನುದಾನ ಹೆಚ್ಚಿಗೆ ಸಿಕ್ಕಿದಲ್ಲಿ ಪಂಚಾಯಿತಿಯನ್ನು ಮೇಲ್ದರ್ಜೆಗೇರಿಸಲು ಶ್ರಮಿಸುತ್ತೇನೆ. ಹೆಚ್ಚಿನ ಅನುದಾನ ನಿರೀಕ್ಷೇಯಲ್ಲಿ ಪ್ರಯತ್ನ ಸಾಗುತ್ತಿದೆ. ಪಂಚಾಯಿತಿ ಅಭಿವೃದ್ಧಿ ದೃಷ್ಠಿಯಿಂದ ಕ್ರಿಯಾ ಯೋಜನೆಗಳನ್ನು ರೂಪಿಸಲಾಗಿದೆ. ಕೋವಿಡ್ ಸಮಯದಲ್ಲಿ ಮೊದಲು ಕೊಡಗಿನಲ್ಲಿ ಬಿರುನಾಣಿ ಪಂಚಾಯಿತಿ ಕೋವಿಡ್ ಮುಕ್ತ ಗ್ರಾಮವಾಗಿದೆ. ಇದಕ್ಕಾಗಿ ತುಂಬಾ ಶ್ರಮಿಸಲಾಗಿದೆ.
ನಮ್ಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳನ್ನು ಮೇಲ್ದರ್ಜೆಗೇರಿಸಲು ಪ್ರತೀ ಶಾಲೆಯ ಮಕ್ಕಳಿಗೆ ವಾರಕ್ಕೆ ಒಂದು ದಿನ ಖಾಸಗಿ ಶಾಲೆಗಳಲ್ಲಿನ ವಿದ್ಯಾರ್ಥಿಗಳು ಬಳಸುವ ರೀತಿಯ ಟ್ಯ್ರಾಕ್ ಶರ್ಟ್ ಹಾಗೂ ಪ್ಯಾಂಟನ್ನು ನೀಡಲಾಗಿದೆ. ಇದೊಂದು ಹೊಸ ಪ್ರಯತ್ನವಾಗಿದೆ.
ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಬಾಡಗರಕೇರಿಯ ಮೃತ್ಯುಂಜಯ ದೇಗುಲ ಹಲವು ವೈಶಿಷ್ಟ್ಯಗಳಿಂದ ಕೂಡಿದೆ. ಕಾಫಿ, ಟೀ ಎಸ್ಟೇಟ್ ನಡುವಿರುವ ದೇಗುಲ ಅತಿ ವಿರಳವಾದ ದೇಗುಲವೆಂದರೂ ಅತಿಶಯೋಕ್ತಿಯಲ್ಲ. ಸುಮಾರು ಒಂದು ಸಾವಿರ ವರ್ಷ ಇತಿಹಾಸವನ್ನು ಹೊಂದಿರುವ ಈ ದೇಗುಲಕ್ಕೆ ಭೇಟಿ ನೀಡುವುದೇ ಒಂದು ರೋಚಕ ಅನುಭವವಾಗಿದೆ. ಪ್ರಕೃತಿ ಪರಿಸರದಲ್ಲಿರುವ ದೇಗುಲ ವಾಣಿಜ್ಯ ಚಟುವಟಿಕೆಗಳಿಂದ ಹೊರತಾಗಿದೆ. ದೈವಾನುಭೂತಿ ಹೊಂದಲು ಉತ್ತಮ ತಾಣ ಎನ್ನಬಹುದು. ಈ ಆಲಯದಲ್ಲಿ ಕಳೆದ 500 ವರ್ಷಗಳಿಂದ ನಿರಂತರವಾಗಿ ಪ್ರತಿನಿತ್ಯ ಮೃತ್ಯುಂಜಯ ಹೋಮ ನಡೆಯುತ್ತಿದೆ. ಈ ದೇವಾಲಯದ ಅಭಿವೃದ್ಧಿಗೂ ನಾವುಗಳು ಶ್ರಮಿಸುತ್ತಿದ್ದೇವೆ.
ಪಂಚಾಯಿತಿಯ ಹೊಸ ಕಟ್ಟಡ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಶೀಘ್ರದಲ್ಲೇ ಉದ್ಘಾಟನೆ ಮಾಡಲು ಪ್ರಯತ್ನ ಸಾಗುತ್ತಿದೆ. ಒಟ್ಟಿನಲ್ಲಿ ನಮ್ಮ ಗ್ರಾಮದ ಸರ್ವಾಂಗಿಣ ಅಭಿವೃದ್ದಿಯತ್ತ ನನ್ನ ಪ್ರಯತ್ನ ಸಾಗಿದೆ. ನನ್ನ ಈ ಎಲ್ಲಾ ಕಾರ್ಯಗಳಿಗೆ ಉಪಾಧ್ಯಕ್ಷರು, ಸದಸ್ಯರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಸಿಬ್ಬಂದಿಗಳು ಹಾಗೂ ಗ್ರಾಮಸ್ಥರ ಸಹಕಾರವು ಉತ್ತಮವಾಗಿ ದೊರಕುತ್ತಿದೆ”
ಮೂಲತಃ ಕೃಷಿಕರಾಗಿರುವ ಅಮ್ಮತ್ತಿರ ವಿ.ರಾಜೇಶ್ ರವರು ರಾಜಕೀಯ ಕ್ಷೇತ್ರದಲ್ಲಿ ಬಿ.ಜೆ.ಪಿ ಸಕ್ರಿಯ ಕಾರ್ಯಕರ್ತರಾಗಿದ್ದಾರೆ. ಇವರ ತಂದೆ: ದಿವಂಗತ ನಿವೃತ್ತ ಸೈನಿಕರಾಗಿದ್ದ ಎ.ಜೆ. ವಾಸು. ತಾಯಿ: ಸರಸ್ವತಿ
ಪತ್ನಿ: ಎ.ಆರ್.ರಂಜಿತ, ಗೋಣಿಕೊಪ್ಪ ಕಾಲ್ಸ್ ವಿದ್ಯಾಸಂಸ್ಥೆಯಲ್ಲಿ ಹಿಂದಿ ಉಪನ್ಯಾಸಕಿಯಾಗಿದ್ದಾರೆ. ಪುತ್ರಿ: ಎ.ಆರ್.ರಕ್ಷಿತಾ, ಮೈಸೂರಿನಲ್ಲಿ ಉದ್ಯೋಗಿಯಾಗಿದ್ದಾರೆ. ಪುತ್ರ: ಎ.ಆರ್.ರೋಹನ್ ವ್ಯಾಸಂಗ ನಿರತರಾಗಿದ್ದಾರೆ.
45 ವರ್ಷ ಪ್ರಾಯದ ಅಮ್ಮತ್ತಿರ ವಿ.ರಾಜೇಶ್ ರವರು ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಬಾಡಗರಕೇರಿ ಗ್ರಾಮದಲ್ಲಿ ಕುಟುಂಬ ಸಮೇತ ನೆಲೆಸಿದ್ದಾರೆ. ಇವರ ರಾಜಕೀಯ, ಸಹಕಾರ, ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಸೇವೆಯು ಹೀಗೆ ನಿರಂತರವಾಗಿ ಮುಂದುವರೆಯಲಿ ಎಂದು “ಸರ್ಚ್ ಕೂರ್ಗ್ ಮೀಡಿಯಾ” ವು ಹಾರೈಸುತ್ತದೆ.
ಸಂದರ್ಶನ ದಿನಾಂಕ: 07-03-2024