ಅಬ್ದುಲ್ ಸಲಾಂ (ಸಲೀಂ), ಉಪಾಧ್ಯಕ್ಷರು: ಗ್ರಾಮ ಪಂಚಾಯಿತಿ ಹರದೂರು
ಹರದೂರು ಗ್ರಾಮ ಪಂಚಾಯಿತಿಯು ಕರ್ನಾಟಕ ರಾಜ್ಯದ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನಲ್ಲಿದೆ. ಈ ಪಂಚಾಯಿತಿಯು ಜಿಲ್ಲಾ ಕೇಂದ್ರ ಸ್ಥಾನದಿಂದ 20 ಕಿ.ಮೀ. ದೂರದಲ್ಲಿದ್ದು, ತಾಲ್ಲೂಕು ಕೇಂದ್ರ ಸ್ಥಾನದಿಂದ 24 ಕಿ.ಮೀ.ದೂರದಲ್ಲಿದೆ.
ಹರದೂರು ಗ್ರಾಮ ಪಂಚಾಯಿತಿಯು 2 ಕಂದಾಯ ಗ್ರಾಮಗಳನ್ನು ಹೊಂದಿದ್ದು, 2 ಉಪ ಗ್ರಾಮಗಳನ್ನು ಹೊಂದಿದೆ. ಕಂದಾಯ ಗ್ರಾಮಗಳು 1) ಗರಗಂದೂರು 2) ಅಂಜನಗೇರಿ ಬೆಟ್ಟಗೇರಿ. ಉಪಗ್ರಾಮಗಳು 1) ಗರಗಂದೂರು ಬಿ 2)ಹರದೂರು. ಹರದೂರು ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 11 ಮಂದಿ ಚುನಾಯಿತ ಸದಸ್ಯರ ಆಡಳಿತ ಮಂಡಳಿಯನ್ನು ಹೊಂದಿದೆ. ಪಂಚಾಯಿತಿಯ ಪೂರ್ವಕ್ಕೆ ಐಗೂರು, ಪಶ್ಚಿಮಕ್ಕೆ ಸುಂಟಿಕೊಪ್ಪ, ಉತ್ತರಕ್ಕೆ ಮಾದಾಪುರ, ದಕ್ಷಿಣಕ್ಕೆ ನಾಕೂರು-ಶಿರಂಗಾಲ ಗ್ರಾಮ ಹರದೂರು ಗ್ರಾಮ ವ್ಯಾಪ್ತಿಯನ್ನು ಹೊಂದಿದೆ.
ಹರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೆಳೆಯುವ ಮುಖ್ಯ ಬೆಳೆಗಳು ಕಾಫಿ, ಏಲಕ್ಕಿ ,ಕಾಳುಮೆಣಸು, ಶುಂಠಿ ಹಾಗೂ ಭತ್ತ. ಹರದೂರು ಗ್ರಾಮ ವ್ಯಾಪ್ತಿಯಲ್ಲಿ ಕಾಫಿತೋಟ, ಭತ್ತದ ಗದ್ದೆ, ಹಾರಂಗಿ ಜಲಾಶಯದ ಹಿನ್ನೀರು ಹಾಗೂ ಅರಣ್ಯದಿಂದ ಕೂಡಿದೆ. ಇಲ್ಲಿ ಜನರು ಹೆಚ್ಚಾಗಿ ಕೂಲಿ ಕಾರ್ಮಿಕರಾಗಿದ್ದಾರೆ. ಇಲ್ಲಿ ಹೆಚ್ಚಿನ ಭಾಗ ನೀರಿನ ಸೌಲಭ್ಯ, ವಿದ್ಯುತ್ ಸೌಲಭ್ಯ, ರಸ್ತೆ ಸಂಪರ್ಕವನ್ನು ಹೊಂದಿದೆ. ಹರದೂರು ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಅಬ್ದುಲ್ ಸಲಾಂ (ಸಲೀಂ) ಅವರನ್ನು “ಸರ್ಚ್ ಕೂರ್ಗ್ ಮೀಡಿಯಾ” ದ “ನಮ್ಮ ಕೊಡಗು-ನಮ್ಮಗ್ರಾಮ” ಅಭಿಯಾನದಡಿಯಲ್ಲಿ ಸಂದರ್ಶಿಸಿ ಮಾಹಿತಿಯನ್ನು ಪಡೆಯಲಾಯಿತು.
“ಸರ್ಚ್ ಕೂರ್ಗ್ ಮೀಡಿಯಾ” ದೊಂದಿಗೆ ಮಾತನಾಡಿದ ಅಬ್ದುಲ್ ಸಲಾಂ (ಸಲೀಂ)ರವರು “ನಾನು ಶೋಷಿತ ವರ್ಗಗಳ ಅಭಿವೃದ್ಧಿಗಾಗಿ ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಲು ಮೂಲ ಪ್ರೇರಣೆಯಾಗಿದೆ. 2020ರ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗರಗಂದೂರು ಬಿ.ವಾರ್ಡ್ ನಿಂದ ಸ್ಪರ್ಧಿಸಿ ಆಯ್ಕೆಗೊಂಡು ಹರದೂರು ಗ್ರಾಮ ಪಂಚಾಯಿತಿ ಸದಸ್ಯನಾಗಿ ಮೊದಲ ಅವಧಿಯಲ್ಲಿ ಸೇವೆ ಸಲ್ಲಿಸಿದ್ದೆ. ನಂತರ ಎರಡನೇಯ ಅವಧಿಗೆ ಉಪಾಧ್ಯಕ್ಷನಾಗಿ ಆಯ್ಕೆಗೊಂಡು ಪ್ರಸ್ತುತ ಸೇವೆ ಸಲ್ಲಿಸುತ್ತಿದ್ದೇನೆ.
ಜನಪ್ರತಿನಿಧಿಯಾಗಿ ಆಯ್ಕೆಯಾದ ನಂತರ ನಾನು ದುರ್ಬಲ ವರ್ಗದವರಿಗೆ, ಬಡವರಿಗೆ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪಿಂಚಣಿ, ಆಶ್ರಯ ಮನೆ, ಕುಡಿಯುವ ನೀರು, ವೈಯಕ್ತಿಕ ಸೌಲಭ್ಯಗಳು ಉದ್ಯೋಗ ಖಾತ್ರಿ ಯೋಜನೆಯಡಿ ಪೌಷ್ಟಿಕ ತೋಟ, ಕೊಟ್ಟಿಗೆ ,ಇಂಗು ಗುಂಡಿ, ಅಡಿಕೆ ಬೆಳೆಗೆ, ತೊಟ್ಟಿಲು ಗುಂಡಿ, ಕಂದಾಯ ಇಲಾಖೆಯಿಂದ 94 ಸಿ ಹಕ್ಕು ಪತ್ರ ಮುಂತಾದ ಹಲವಾರು ಸೌಲಭ್ಯಗಳನ್ನು ಗ್ರಾಮಸ್ಥರಿಗೆ ದೊರಕಿಸಿಕೊಡುವಲ್ಲಿ ಶ್ರಮ ವಹಿಸಿದ್ದೇನೆ.
ಗರಗಂದೂರು ಬಿ.ವಾರ್ಡ್ನ ಹೊಸತೋಟದಲ್ಲಿ ಒಂದು ಸುಸಜ್ಜಿತವಾದ ಕ್ರೀಡಾಂಗಣ ನಿರ್ಮಿಸುವಲ್ಲಿ ಹೆಜ್ಜೆಯಿಟ್ಟಿದ್ದೇನೆ. ಆ ನಿಟ್ಟಿನಲ್ಲಿ ಇಲಾಖಾ ಮಟ್ಟದಲ್ಲಿ ಅನುದಾನ ಪಡೆಯುವಲ್ಲಿ ಶಕ್ತಿ ಮೀರಿ ಶ್ರಮಿಸುತ್ತಿದ್ದೇನೆ. ಹಾಗೆ ಈ ಭಾಗದಲ್ಲಿ ಒಂದು ಸಮುದಾಯ ಆರೋಗ್ಯ ಕೇಂದ್ರವನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದೇನೆ.
ಇಲ್ಲಿಯವರಗೆ ಹರದೂರು ಗ್ರಾಮ ಪಂಚಾಯಿತಿಯ ಸದಸ್ಯನಾಗಿ, ಪ್ರಸ್ತುತ ಉಪಾಧ್ಯಕ್ಷನಾಗಿ ಹರದೂರು ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮವಹಿಸಿ ಸೇವೆ ಸಲ್ಲಿಸುತ್ತಿದ್ದೇನೆ. ಹಾಗೆ ಮುಂಬರುವ ತಾಲ್ಲೂಕು ಪಂಚಾಯಿತಿ ಇಲ್ಲಾಂದರೆ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಮಾದಾಪುರ ಕ್ಷೇತ್ರದಿಂದ ಸ್ಪರ್ಧಿಸುವ ನಿಟ್ಟಿನಲ್ಲಿ ಪೂರ್ವ ತಯಾರಿ ಮಾಡುತ್ತಿದ್ದೇನೆ. ಇದಕ್ಕೆ ಈ ಕ್ಷೇತ್ರದ ಗ್ರಾಮಸ್ಥರ ಸಹಕಾರ ತುಂಬಾ ಅನುಕೂಲಕರವಾಗಿ ದೊರಕುತ್ತಿದೆ. ಅದಕ್ಕಾಗಿ ನಾನು ಅವರಿಗೆ ಅಭಾರಿಯಾಗಿದ್ದೇನೆ ಎಂದು ಈ ಸಂದರ್ಭದಲ್ಲಿ ತಿಳಿಸುತ್ತಿದ್ದೇನೆ.”
ಅಬ್ದುಲ್ ಸಲಾಂ (ಸಲೀಂ) ರವರು ರಾಜಕೀಯ ಕ್ಷೇತ್ರದಲ್ಲಿ ಹರದೂರು ವಲಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಹಕಾರ ಕ್ಷೇತ್ರದಲ್ಲಿ ಐಗೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರಾಗಿದ್ದಾರೆ. ಧಾರ್ಮಿಕ ಕ್ಷೇತ್ರದಲ್ಲಿ ಜಾಮಿಯಾ ಮಸೀದಿ ಜಮಾಅತ್ ಸಮಿತಿಯ ಇದರ ಪ್ರಧಾನ ಕಾರ್ಯದರ್ಶಿಯಾಗಿ 2 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದಾರೆ. ಹಿದಾಯತುಲ್ ಇಸ್ಲಾಂ ಮದರಸ ಹೊಸತೋಟ 1ರಿಂದ 10ನೇ ತರಗತಿಯವರಗೆ ಧಾರ್ಮಿಕ ಶಿಕ್ಷಣವನ್ನು ಪಡೆದಿದ್ದಾರೆ. ಶೈಕ್ಷಣಿಕ ಕ್ಷೇತ್ರದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸತೋಟ ಇದರ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸತೋಟ 1ರಿಂದ 5ನೇ ತರಗತಿಯವರಗೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಜೂರು 6ರಿಂದ 7ನೇಯ ತರಗತಿಯವರಗೆ, ಸರ್ಕಾರಿ ಪದವಿ ಪೂರ್ವ ಕಾಲೇಜು ಐಗೂರು 8ರಿಂದ ಪಿಯುಸಿವರಗೆ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕುಶಾಲನಗರ. ಇಲ್ಲಿ ಬಿ.ಬಿ.ಎಂ. ವ್ಯಾಸಾಂಗ ಮಾಡಿ ಪದವಿಯನ್ನು ಪಡೆದಿದ್ದಾರೆ.
ಅಬ್ದುಲ್ ಸಲಾಂ (ಸಲೀಂ)ಅವರ ಕುಟುಂಬ ಪರಿಚಯ:
ತಂದೆ: ಸೈದು ಹಾಜಿ. ತಾಯಿ: ನಬೀಸ. ಪತ್ನಿ: ತಾಜುನ್ನೀಸಾ. ಮಗ: ಮಹಮ್ಮದ್. ಮಗಳು: ಫಾತಿಮಾ ಝಹ್ರ. ಮೂಲತಃ ಕೃಷಿಕರಾದ ಬಿ.ಬಿ.ಎಂ. ಪದವೀಧರರಾಗಿರುವ ಅಬ್ದುಲ್ ಸಲಾಂ (ಸಲೀಂ) ರವರು ಪ್ರಸ್ತುತ ಹರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಗರಗಂದೂರು ಬಿ.ವಾರ್ಡ್ನ ಹೊಸತೋಟದಲ್ಲಿ, ಕುಟುಂಬ ಸಮೇತ ನೆಲೆಸಿದ್ದಾರೆ. ಇವರ ರಾಜಕೀಯ, ಸಹಕಾರ, ಸಾಮಾಜಿಕ ಹಾಗೂ ಧಾರ್ಮಿಕ, ಶೈಕ್ಷಣಿಕ ಸೇವೆಯು ಹೀಗೆ ನಿರಂತರವಾಗಿ ಮುಂದುವರೆಯಲಿ ಎಂದು “ಸರ್ಚ್ ಕೂರ್ಗ್ ಮೀಡಿಯಾ” ವು ಹಾರೈಸುತ್ತದೆ.
ಸಂದರ್ಶನ ದಿನಾಂಕ: 27-08-2024