ಬೆಂಗಳೂರು: ಕರ್ನಾಟಕ ಪ್ರವಾಸೋದ್ಯಮ ನೀತಿ 2024-29ಗೆ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಕಾನೂನು ಸಚಿವ ಹೆಚ್ಕೆ ಪಾಟೀಲ್ ತಿಳಿಸಿದ್ದಾರೆ. ಸಚಿವ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರವಾಸೋದ್ಯಮ ಕ್ಷೇತ್ರದಲ್ಲಿ 1,500 ಕೋಟಿ ರೂಪಾಯಿಗಳ ಹೂಡಿಕೆ ಆಕರ್ಷಿಸಲು ಸರ್ಕಾರ ಉದ್ದೇಶಿಸಿದೆ. ಕರ್ನಾಟಕವು ವರ್ಷಕ್ಕೆ 20 ಲಕ್ಷ ವಿದೇಶಿ ಪ್ರವಾಸಿಗರನ್ನು ಸೆಳೆಯಲು ಉದ್ದೇಶಿಸಿದೆ. ಆ ಮೂಲಕ ಹೆಚ್ಚು ವಿದೇಶಿ ಪ್ರವಾಸಿಗರು ಭೇಟಿ ನೀಡುವ ಐದು ರಾಜ್ಯಗಳಲ್ಲಿ ಒಂದಾಗಿ ಗುರುತಿಸಿಕೊಳ್ಳಲು ಮುಂದಾಗಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕ ಪ್ರವಾಸೋದ್ಯಮದ ಹೊಸ ನೀತಿಯು ಪ್ರವಾಸೋದ್ಯಮ ಕ್ಷೇತ್ರವನ್ನು ಅತ್ಯಂತ ಆದ್ಯತೆಯ ಉತ್ಸಾಹದಾಯಕ ಮತ್ತು ಪುಷ್ಟಿಕರಿಸಿದ ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ. ಸಮಾಜದ ಎಲ್ಲಾ ಸ್ಥರಗಳ ಬಡ, ಮಧ್ಯಮ ವರ್ಗದ ಮತ್ತು ಮೇಲ್ಮಧ್ಯಮ ವರ್ಗದ ಹಾಗೂ ಗಣ್ಯ ವರ್ಗದ ಪ್ರವಾಸಿ ಅವಶ್ಯಕತೆಗಳನ್ನು ಗಮನದಲ್ಲಿರಿಸಿಕೊಂಡು ಹೊಸ ನೀತಿಯನ್ನು ರಚಿಸಲಾಗಿದೆ.
ಶಾಲಾ-ಬಾಲಕರ ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸ, ಕೃಷಿ ಪ್ರವಾಸ, ಆರೋಗ್ಯ ಕ್ಷೇತ್ರದ ಹೊಸ ಅನುಭವಗಳ Wellness ಪ್ರವಾಸೋದ್ಯಮ, ಆಧ್ಯಾತ್ಮಿಕ, ಯಾತ್ರಾತೀರ್ಥಗಳ ಪ್ರವಾಸ, ಪಾರಂಪರಿಕ ತಾಣಗಳ ಭೇಟಿ ಅಧ್ಯಯನ ಪ್ರವಾಸ, ಸಾಹಸ ಪ್ರವಾಸೋದ್ಯಮದ ಜೊತೆಗೆ ವಿರಾಮ, ವಿನೋದ, ಜ್ಞಾನಾರ್ಜನೆ, ಮನ:ಶಾಂತಿ, ವಿಶ್ರಾಂತಿ ಮುಂತಾದವುಗಳಿಗಾಗಿ ಸಮಗ್ರವಾದ ನೀತಿಯೊಂದನ್ನು ರೂಪಿಸಲಾಗಿದೆ.
•ಈ ನೀತಿಯು ಕರ್ನಾಟಕದಲ್ಲಿ ಸುಸ್ಥಿರ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾದ ವಾತಾವರಣ ನಿರ್ಮಿಸುತ್ತಿದೆ.
•ಉತ್ತಮ ಗುಣಮಟ್ಟದ ಪ್ರವಾಸಿ ಸೌಕರ್ಯಗಳನ್ನು ಕಲ್ಪಿಸಲು ಕ್ರಮವಹಿಸುತ್ತದೆ. ಆಕರ್ಷಣಿಯ ಮತ್ತು ವಿಹಾರದಾಯಕ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ. •ಪ್ರವಾಸೋದ್ಯಮ ವಲಯದಲ್ಲಿ ಸಾರ್ವಜನಿಕ ಖಾಸಗಿ ಭಾಗವಹಿಸುವಿಕೆಯನ್ನು ಉತ್ತೇಜಿಸಲಾಗುವುದು. ಅದಕ್ಕಾಗಿ ಕರ್ನಾಟಕವನ್ನು ಆದ್ಯತೆಯ ತಾಣವನ್ನಾಗಿ ಪರಿವರ್ತಿಸಲು ಹೂಡಿಕೆ ಸ್ನೇಹಿ ನೀತಿಗಳೊಂದಿಗೆ ಅನುಕೂಲಕರ ವಾಣಿಜ್ಯ ವಾತಾವರಣವನ್ನು ಉತ್ತೇಜಿಸಲಾಗುವುದು.
•ಮೂಲಸೌಕರ್ಯ ಅಭಿವೃದ್ಧಿಗೆ ಉತ್ತೇಜನ ನೀಡಲಾಗುವುದು.
•9 ಪ್ರಮುಖ ಕೇಂದ್ರೀಕೃತ ಕ್ಷೇತ್ರಗಳನ್ನು ಗುರುತಿಸಿದೆ.
•ಪ್ರವಾಸೋದ್ಯಮ ಅನುಭವಗಳ ಅಭಿವೃದ್ಧಿಗಾಗಿ 25 ವಿಷಯಾಧಾರಿತ ಕ್ಷೇತ್ರಗಳನ್ನು ಅರ್ಹ ಪ್ರವಾಸೋದ್ಯಮ ಯೋಜನೆಯಡಿ 44 ವಿವಿಧ ರೀತಿಯ ಪ್ರವಾಸೋದ್ಯಮ ಯೋಜನೆಗಳನ್ನು ಗುರುತಿಸಲಾಗಿದೆ.
•ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ.
•30000 ಜನರಿಗೆ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಉದ್ಯೋಗಾವಕಾಶ ಒದಗಿಸಲಾಗುವುದು.
• ರೂ.1500 ಕೋಟಿ ಹೂಡಿಕೆ ಯೋಜಿಸಿದೆ.
• ಆತೀಥೆಯ ಉದ್ಯಮ ಉತ್ತೇಜನಕ್ಕೆ ಶೇ.5 ರಷ್ಟು ಬಂಡವಾಳ ಹೂಡಿಕೆಗೆ ಸಹಾಯಧನವನ್ನು ಹೆಚ್ಚುವರಿಯಾಗಿ ಒದಗಿಸಲಾಗುವುದು.
• 09 ಪ್ರೋತ್ಸಾಹಕಗಳನ್ನು ಎರಡು ರೀತಿಯ ಸಹಾಯಧನಗಳನ್ನು, 07 ರೀತಿಯ ರಿಯಾಯಿತಿಗಳನ್ನು ಪ್ರಕಟಿಸಲಾಗಿದೆ.
ಹೊಸ ನೀತಿಯು
• ಕರ್ನಾಟಕದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೂಡಿಕೆಗಳನ್ನು ಆಕರ್ಷಿಸಲು, ವಿದೇಶಿ ವಿನಿಮಯ ಗಳಿಕೆಯನ್ನು ಹೆಚ್ಚಿಸಲು, ಉದ್ಯೋಗವನ್ನು ಸೃಷ್ಟಿಸಲು, ಕರ್ನಾಟಕದ ಜನರಿಗೆ ಸಾಮಾಜಿಕ-ಆರ್ಥಿಕ ಉನ್ನತಿಯನ್ನು ಸುಗಮಗೊಳಿಸಲು ಮತ್ತು ರಾಜ್ಯದ ಜಿ.ಎಸ್.ಡಿ.ಪಿ ಗೆ ಪ್ರವಾಸೋದ್ಯಮ ಕ್ಷೇತ್ರದ ಕೊಡುಗೆಯನ್ನು ಹೆಚ್ಚಿಸಲು ಮೂಲಭೂತ ಬಲವಾದ ಅಡಿಪಾಯವನ್ನು ಒದಗಿಸುತ್ತದೆ.
ಹೊಸ ಪ್ರವಾಸೋದ್ಯಮ ನೀತಿಯಲ್ಲಿ ಸಾಧಿಸಲು ನಿಗಧಿಪಡಿಸಿರುವ ಗುರಿಗಳು:
1. ದೇಶಿಯ ಪ್ರವಾಸಿಗರ ಭೇಟಿಯಲ್ಲಿ ದೇಶದಲ್ಲಿಯೇ ಪ್ರಥಮ 3 ರಾಜ್ಯಗಳಲ್ಲಿ ಒಂದಾಗುವುದು (48 ಕೋಟಿ).
2. ವಿದೇಶಿ ಪ್ರವಾಸಿಗರ ಭೇಟಿಯಲ್ಲಿ ದೇಶದಲ್ಲಿಯೇ ಪ್ರಥಮ 5 ರಾಜ್ಯಗಳಲ್ಲಿ ಒಂದಾಗುವುದು (20 ಲಕ್ಷ).
3. ಕನಿಷ್ಟ 47000 ಜನರಿಗೆ ನೇರ ಉದ್ಯೋಗವನ್ನು ಸೃಜಿಸುವುದು.
4. ಒಂದು ಲಕ್ಷ ಜನರಿಗೆ ಪರೋಕ್ಷ ಮತ್ತು ಪ್ರೇರಿತ ಉದ್ಯೋಗವನ್ನು ಸೃಷ್ಟಿಸುವುದು. 5. ರೂ.7,800/- ಕೋಟಿ ಹೂಡಿಕೆಯನ್ನು ಆಕರ್ಷಿಸುವುದು.
6. ರಾಜ್ಯಾದ್ಯಂತ ಇಲಾಖೆಯ ಮಾಲೀಕತ್ವದಲ್ಲಿರುವ 680 ಎಕರೆ ಭೂಮಿಯನ್ನು ಪ್ರವಾಸೋದ್ಯಮ ಯೋಜನೆಗಳಿಗಾಗಿ Monetize ಮಾಡುವುದು.
7. ಒಂದು ಜಿಲ್ಲೆ ಒಂದು ತಾಣ ಯೋಜನೆಯಡಿ ಪ್ರತಿ ಜಿಲ್ಲೆಗೆ ಒಂದರಂತೆ ಕನಿಷ್ಟ 30 ಪ್ರಮುಖ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸುವುದು.
8. ಕರ್ನಾಟಕವನ್ನು ಕನಿಷ್ಠ 50 ಅಂತಾರಾಷ್ಟ್ರೀಯ ಪ್ರವಾಸಿ ಮೇಳಗಳಲ್ಲಿ ಪ್ರಚಾರಪಡಿಸುವುದು.
ಹೊಸ ಪ್ರವಾಸೋದ್ಯಮ ನೀತಿಯಲ್ಲಿ ಗುರುತಿಸಿದ ವಿಷಯಾಧಾರಿತ ಕ್ಷೇತ್ರಗಳು:
1. ಸಾಹಸ ಪ್ರವಾಸೋದ್ಯಮ
2. ಕೃಷಿ ಪ್ರವಾಸೋದ್ಯಮ
3. ಕಾರವಾನ್ ಪ್ರವಾಸೋದ್ಯಮ
4. ಕರಾವಳಿ ಪವಾಸೋದ್ಯಮ ಮತ್ತು ಬೀಚ್ ಪ್ರವಾಸೋದ್ಯಮ
5. ಪಾಕಪದ್ಧತಿ(Cuisine) ಪ್ರವಾಸೋದ್ಯಮ
6. ಸಾಂಸ್ಕೃತಿಕ ಪ್ರವಾಸೋದ್ಯಮ
7. ಪಾರಂಪರಿಕ ಪ್ರವಾಸೋದ್ಯಮ
8. ಪರಿಸರ ಪ್ರವಾಸೋದ್ಯಮ (ಪಕೃತಿ ಪ್ರವಾಸೋದ್ಯಮ ಮತ್ತು ವನ್ಯಜೀವಿ ಪ್ರವಾಸೋದ್ಯಮ ಸೇರಿದಂತೆ)
9. ಶೈಕ್ಷಣಿಕ ಪ್ರವಾಸೋದ್ಯಮ
10. ಚಲನಚಿತ್ರ ಪ್ರವಾಸೋದ್ಯಮ
11. ಗಾಲ್ಫ್ ಪ್ರವಾಸೋದ್ಯಮ
12. ಒಳನಾಡಿನ ಜಲ ಪ್ರವಾಸೋದ್ಯಮ
13. ಸಾಹಿತ್ಯ ಪ್ರವಾಸೋದ್ಯಮ
14. ಕಡಲ (Maritime) ಪ್ರವಾಸೋದ್ಯಮ
15. ವೈದ್ಯಕೀಯ ಪ್ರವಾಸೋದ್ಯಮ
16. MICE ಪ್ರವಾಸೋದ್ಯಮ ಮತ್ತು ವ್ಯಾಪಾರ ಪ್ರವಾಸೋದ್ಯಮ
17. ಗಣಿಗಾರಿಕೆ ಪ್ರವಾಸೋದ್ಯಮ
18. ಗ್ರಾಮೀಣ ಪ್ರವಾಸೋದ್ಯಮ
19. ಆಧ್ಯಾತ್ಮಿಕ ಪ್ರವಾಸೋದ್ಯಮ (ಧಾರ್ಮಿಕ ಪ್ರವಾಸೋದ್ಯಮ ಮತ್ತು ಆಧ್ಯಾತ್ಮಿಕ ದೃಶ್ಯವೀಕ್ಷಣೆಯು ಸೇರಿದಂತೆ)
20. ಕ್ರೀಡಾ ಪ್ರವಾಸೋದ್ಯಮ
21. ಬುಡಕಟ್ಟು ಪ್ರವಾಸೋದ್ಯಮ
22. ವಿವಾಹ (Wedding) ಪ್ರವಾಸೋದ್ಯಮ
23. ವಾರಾಂತ್ಯದ ಪ್ರವಾಸೋದ್ಯಮ
24. ಸ್ವಾಸ್ಥ್ಯ ಪ್ರವಾಸೋದ್ಯಮ
25. ಇತರೆ NICHE ಪ್ರವಾಸೋದ್ಯಮ ಥೀಮ್‌ಗಳು
ಹೊಸ ಪ್ರವಾಸೋದ್ಯಮ ನೀತಿಯಲ್ಲಿ ಗುರುತಿಸಲಾಗಿರುವ 44 ಅರ್ಹ ಪ್ರವಾಸೋದ್ಯಮ ಯೋಜನೆಗಳು:
1) ಸಾಹಸ ಪ್ರವಾಸೋದ್ಯಮ ಯೋಜನೆ
2) ಕೃಷಿ ಪ್ರವಾಸೋದ್ಯಮ ಯೋಜನೆ
3) ಅಪಾರ್ಟ್ ಮೆಂಟ್ ಹೋಟೆಲ್ / ಸೇವಾ ಅಪಾರ್ಟ್‌ಮೆಂಟ್
4) ಅಕ್ಟೇರಿಯಂ/ಓಷನೇರಿಯಂ
5) ಬೀಚ್ ಶ್ಯಾಕ್‌ಗಳು
6) ಬೆಡ್ ಮತ್ತು ಉಪಹಾರ
7) ಅಮ್ಯೂಸ್‌ಮೆಂಟ್ ಪಾರ್ಕ್
8) ಕಾರವಾನ್ ಪಾರ್ಕ್
9) ಕಾರವಾನ್ ಪ್ರವಾಸೋದ್ಯಮ ಯೋಜನೆ
10) ಸಮಾವೇಶ ಕೇಂದ್ರ
11) ಕ್ರೂಸ್ ಪ್ರವಾಸೋದ್ಯಮ ಯೋಜನೆ
12) ಸಾಂಸ್ಕೃತಿಕ ಕೇಂದ್ರ
13) ಸಾಂಸ್ಕೃತಿಕ ಗ್ರಾಮ / ಪ್ರವಾಸಿ ಗ್ರಾಮ
14) ಪರಿಸರ ಪ್ರವಾಸೋದ್ಯಮ ಯೋಜನೆ
15) ಫಾರಂ ಸ್ಟೇ
16) ಚಲನಚಿತ್ರ ನಗರ
17) ಗಾಲ್ಫ್ ಕೋರ್ಸ್
18) ಅತಿಥಿಗೃಹ
19) ಪಾರಂಪರಿಕ ಹೋಟೆಲ್
20) ಪಾರಂಪರಿಕ ಪ್ರವಾಸೋದ್ಯಮ ಯೋಜನೆ
21) ಪಾರಂಪರಿಕ ನಡಿಗೆ / Guided Tour
22) ಹೋಂ ಸ್ಟೇ
23) ಹೋಟೆಲ್ ಬಜೆಟ್
24) ಹೋಟೆಲ್-ಪ್ರೀಮಿಯಂ
25) ಹೌಸ್ ಬೋಟ್
26) MICE ಕೇಂದ್ರಗಳು
27) ವಸ್ತು ಸಂಗ್ರಹಾಲಯಗಳು ಮತ್ತು ಗ್ಯಾಲರಿಗಳು
28) ಪ್ರವಾಸಿ ಸ್ನೇಹಿ ಸಂಕೀರ್ಣ (ಪ್ರವಾಸಿ ಸೌಲಭ್ಯ ಕೇಂದ್ರ)
29) ರೋಪ್-ವೇ
30) ಧ್ವನಿ ಮತ್ತು ಬೆಳಕಿನ ಪ್ರದರ್ಶನ
31) ಟೆಂಟೆಡ್ ಸೌಲಭ್ಯಗಳು
32) ಥೀಮ್ ಪಾರ್ಕ್
33) ಟೈಮ್ ಶೇರ್ ರೆಸಾರ್ಟ್
34) ಪ್ರವಾಸಿ ಮಾರ್ಗದರ್ಶಿ
35) ಪ್ರವಾಸೋದ್ಯಮ ಮತ್ತು ಆತಿಥ್ಯ ತರಬೇತಿ ಸಂಸ್ಥೆ
36) ಪ್ರವಾಸೋದ್ಯಮ ಸ್ಮಾರ್ಟ್ ಅಪ್
37) ಪ್ರವಾಸ ಆಯೋಜಕರು
38) ಪ್ರವಾಸಿ ಸಾರಿಗೆ ಆಯೋಜಕರು
39) ಪ್ರವಾಸಿ ವ್ಯಾಖ್ಯಾನ ಕೇಂದ್ರ
40) ಟ್ರಾವೆಲ್ ಏಜೆಂಟ್
41) ಯಾತ್ರಿನಿವಾಸ
42) ಕ್ಷೇಮ ಕೇಂದ್ರ
43) ರಸ್ತೆ ಬದಿ ಸೌಕರ್ಯಗಳು
44) ಯುವ ಪ್ರವಾಸೋದ್ಯಮ ಕ್ಲಬ್
ಹೊಸ ಪ್ರವಾಸೋದ್ಯಮ ನೀತಿಯ ಧೈಯೋದ್ದೇಶಗಳ ಪ್ರಮುಖ ಅಂಶಗಳು:
1. ಕರ್ನಾಟಕ ಜನತೆಗೆ ಕರ್ನಾಟಕ ಪ್ರವಾಸೋದ್ಯಮವನ್ನು ಹೆಮ್ಮೆಯ ಮೂಲವನ್ನಾಗಿಸಲು ವೈವಿಧ್ಯಮಯವಾದ ಶ್ರೇಷ್ಠ ಗುಣಮಟ್ಟದ ಪ್ರವಾಸೋದ್ಯಮ ಉತ್ಪನ್ನಗಳು ಮತ್ತು ಸೇವೆಗಳ ಮೂಲಕ ವಿಶ್ವದರ್ಜೆಯ ಅನುಭವಗಳನ್ನು ಒದಗಿಸಿ ಜಾಗತಿಕ ಮತ್ತು ಭಾರತೀಯ ನಕಾಶೆಯಲ್ಲಿ ಕರ್ನಾಟಕವನ್ನು ಆಕರ್ಷಣೀಯ ಪ್ರವಾಸಿ ತಾಣವನ್ನಾಗಿ ಉತ್ತೇಜಿಸುವುದು.
2. ಸಾಮಾಜಿಕ ಸಮಾನತೆಯನ್ನು ಉತ್ತೇಜಿಸುವ ಮೂಲಕ ಮಹಿಳೆಯರು ಮತ್ತು ಯುವಕರನ್ನು ಅಧಿಕಾರಯುಕ್ತಗೊಳಿಸುವ ಮತ್ತು ಗ್ರಾಮೀಣ ಅಭಿವೃದ್ಧಿ ಮತ್ತು ಉದ್ಯಮಶೀಲತೆಯನ್ನು ಪ್ರೋತ್ಸಾಹಹಿಸುವ ತನ್ಮೂಲಕ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯ ಸೇರ್ಪಡೆ ಕಾರ್ಯಕ್ರಮ ಮಹತ್ವದ ವಾಹಕವನ್ನಾಗಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲಾಗುವುದು.
3. ದೃಢವಾದ ಮತ್ತು ಶ್ರೇಷ್ಠ ಗುಣಮಟ್ಟದ ಪ್ರವಾಸೋದ್ಯಮ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಮತ್ತು ಸೇವಾ ಗುಣಮಟ್ಟವನ್ನು ಉನ್ನತಿಕರಿಸುವ ಮೂಲಕ ಎಲ್ಲಾ ಪ್ರವಾಸಿಗರಿಗೂ ಪ್ರವಾಸಿ ತಾಣಗಳ ಭೆಟ್ಟಿಯನ್ನು ಸ್ಮರಣೀಯ ತೃಪ್ತಿದಾಯಕ ಮತ್ತು ಸುರಕ್ಷಿತವೆಂದು ಸುನಿಶ್ಚಿತಗೊಳಿಸಲು ಪ್ರವಾಸಿ ಕೇಂದ್ರಿತ ಪರಿಸರವನ್ನು ನಿರ್ಮಿಸಲಾಗುವುದು.
4. ಪ್ರವಾಸೋದ್ಯಮ ಚಟುವಟಿಕೆಗಳಿಂದ ಜನಸಾಮಾನ್ಯರು ಮತ್ತು ಸ್ಥಳೀಯ ಸಮುದಾಯಗಳಿಗೆ ಪ್ರತಿಫಲ ದೊರೆಯುವುದನ್ನು ಸುನಿಶ್ಚಿತಗೊಳಿಸಲು ಎಲ್ಲರಿಗೂ ಪ್ರವಾಸೋದ್ಯಮ ನಿಲುಕುವಂತೆ ಸಾಮರ್ಥ್ಯ ಸೃಷ್ಟಿಸುವ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗವುದು.
5. ಪ್ರವಾಸೋದ್ಯಮವನ್ನು ಜ್ಞಾನಾರ್ಜನೆಯ ಸಾಧನವಾಗಿ ಕೋಮುಸೌಹಾರ್ದ, ಶಾಂತಿ ಮತ್ತು ಜ್ಞಾನವಿಕಾಸದ ಸಾಧನವಾಗಿ ಪ್ರವಾಸೋದ್ಯಮದ ಸಾಮರ್ಥ್ಯವನ್ನು ಅರ್ಥೈಸಲಾಗುವುದು.
6. ಯುನೆಸ್ಕೋ ಮಾನ್ಯತೆ ಪಡೆದ ವಿಶ್ವ ಪಾರಂಪರಿಕ ತಾಣಗಳು ಸೇರಿದಂತೆ ಪಾರಂಪರಿಕ ಆಸ್ತಿಗಳ ಮಾನ್ಯತೆ, ಸಂರಕ್ಷಣೆ, ದತ್ತುಪಡೆಯುವಿಕೆಯನ್ನು ಮುನ್ನಡೆಸುವ ಮೂಲಕ ಈ ಪಾರಂಪರಿಕ ತಾಣಗಳ ಮೌಲ್ಯವೃದ್ಧಿಯನ್ನು ನೈಜ ಅರ್ಥದಲ್ಲಿ ಕೈಗೊಳ್ಳಲಾಗುವುದು.
7. ಜವಾಬ್ದಾರಿಯುತ ಪ್ರವಾಸೋದ್ಯಮದ ಮೂಲಕ ಆಧ್ಯಾತ್ಮಿಕ ಯಾತ್ರಾ ತಾಣಗಳ ಪ್ರವಾಸೋದ್ಯಮ ಉತ್ತೇಜಿಸಿ ಧಾರ್ಮಿಕ ವಿವಿಧತೆಯನ್ನು ಮತ್ತು ಶ್ರದ್ಧಾ ಕೇಂದ್ರಗಳ ಜ್ಞಾನೋದಯ, ಅಂತರಾಳದ ಶಾಂತಿ ಮತ್ತು ಕೋಮು ಸೌಹಾರ್ಧವನ್ನು ಪ್ರಮುಖವಾಗಿ ಪರಿಗಣಿಸಿ ಕರ್ನಾಟಕ ಸಿರಿವಂತ- ಆಧ್ಯಾತ್ಮಿಕ ಪರಂಪರೆಯನ್ನು ಮುನ್ನೆಲೆಗೆ ತರಲಾಗುವುದು.