ಪುತ್ತರಿ ಸಿರಿ ಸಮೃದ್ಧಿ

Reading Time: 13 minutes

ಪುತ್ತರಿ ಸಿರಿ ಸಮೃದ್ಧಿ

ಪುತ್ತರಿ ಸಿರಿ ಸಮೃದ್ಧಿಕೊಡಗಿನಲ್ಲಿ ಪುತ್ತರಿ ಹಬ್ಬದ ಆಚರಣೆಗೆ ಸಂಬಂಧಿಸಿದಂತೆ ಈಗಾಗಲೇ ಕೊಡಗಿನ ಮಳೆ ದೇವ ಎಂದೇ ಕರೆಯುವ ಕಕ್ಕಬೆಯ ಪಾಡಿ ಶ್ರೀ ಇಗ್ಗುತಪ್ಪ ಸನ್ನಿಧಿಯಲ್ಲಿ ಅಮ್ಮಂಗೇರಿಯ ಜ್ಯೋತಿಷ್ಯರು ದೇವತಕ್ಕರು, ನಾಡಿನ 13 ತಕ್ಕ ಮುಖ್ಯಸ್ಥರು, ಭಕ್ತ ಜನಸಂಘದ ಪದಾಧಿಕಾರಿಗಳು, ಸೇರಿ, ಪುತ್ತರಿ ಮುಹೂರ್ತವನ್ನು ನಿಶ್ಚಯಿಸುತ್ತಾರೆ.

ಜ್ಯೋತಿಷ್ಯರು, ದೇವತಕ್ಕರು, ನಾಡ ಮುಖ್ಯಸ್ಥರು ಸೇರಿ ಸಮಯ ನಿಗದಿಪಡಿಸಿದ್ದು, ಅದರಂತೆ ಶ್ರೀ ಪಾಡಿ ಇಗ್ಗುತ್ತಪ್ಪ ಸನ್ನಿಧಾನದಲ್ಲಿ ನವೆಂಬರ್  20ರಂದು ಸಂಜೆ 07:35 ಗಂಟೆಗೆ ನೆರೆಕಟ್ಟಿ, ಸಂಜೆ 8:35  ಗಂಟೆಗೆ ಕದಿರು ತೆಗೆದು, ಸಂಜೆ 9.35  ಗಂಟೆಗೆ ಪ್ರಸಾದ ವಿತರಣೆ ಆಗಲಿದೆ. ಈ ಬಾರಿ ರೋಹಿಣಿ ನಕ್ಷತ್ರ, ಮಿಥುನ ಲಗ್ನದಲ್ಲಿ ಹುತ್ತರಿ ಹಬ್ಬ ಆಚರಣೆ ನಡೆಯುತ್ತಿದೆ. ಅದರಂತೆ ಪುತ್ತರಿ ಹಬ್ಬದ ಆಚರಣೆಗೆ ಕೊಡಗಿನ ಜನತೆ ಮುಂದಾಗಿದ್ದಾರೆ.

ಸರ್ವರಿಗೂ ಪುತ್ತರಿ ಹಬ್ಬದ ಶುಭಾಶಯಗಳನ್ನು ಕೋರುತ್ತಾ, ಬತ್ತಿದ ಬದುಕಿಗೆ ಭತ್ತದ ಕದಿರು ಸಮೃದ್ದಿ-ನೆಮ್ಮದ್ದಿಯನ್ನು ನೀಡಲಿ ಎಂಬುದೇ ನಮ್ಮ ಹಾರೈಕೆ.

ಸರ್ಚ್‌ ಕೂರ್ಗ್‌ ಮೀಡಿಯಾ ಬಳಗ.

ಪುತ್ತರಿ ಹಬ್ಬವು ಕೊಡಗಿನ ಕೃಷಿ ಕುಟುಂಬಗಳಿಗೆ ಸಂಭ್ರಮವನ್ನು, ಸಂತಸವನ್ನು ನೀಡುವ ಹಬ್ಬವಾಗಿದೆ. ಕೊಡಗಿನಲ್ಲಿ ನೆಲೆಸಿರುವ ವಿವಿಧ ಸಮುದಾಯಗಳು ಪ್ರಕೃತಿಯೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿವೆ. ಕೃಷಿಯನ್ನೇ ಪ್ರಧಾನವಾಗಿರಿಸಿಕೊಂಡಿರುವ ಕುಟುಂಬಗಳು ಪುತ್ತರಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾ ಬಂದಿವೆ. 

ಪ್ರತೀ ವರ್ಷದ ನವೆಂಬರ್ ಅಥವಾ ಡಿಸೆಂಬರ್ ತಿಂಗಳ ರೋಹಿಣಿ ನಕ್ಷತ್ರದಲ್ಲಿ ವೃಶ್ಚಿಕ ಮಾಸದ 11ನೇ ದಿನ ಹುಣ್ಣಿಮೆಯ ರಾತ್ರಿಯಂದು ಕೊಡಗಿನಲ್ಲಿ ಪುತ್ತರಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬವನ್ನು “ಸುಗ್ಗಿ ಹಬ್ಬ” ಎಂದು ಇತರೆಡೆ ಆಚರಿಸಿದರೆ, ಕೊಡಗಿನಲ್ಲಿ ‘ಪುತ್ತರಿ ಹಬ್ಬ’ ಎಂದು ಆಚರಿಸುತ್ತಾರೆ. ಪುತ್ತರಿ ಎಂದರೆ ಪುದಿಯ(ಹೊಸ), ಅರಿ(ಅಕ್ಕಿ), ಪುತ್ತರಿ(ಹೊಸ ಅಕ್ಕಿ), ಹೊಸ ಭತ್ತದ ಬೆಳೆಯನ್ನು ನೀಡಿದ ಭೂಮಿ ತಾಯಿಗೆ ಹಾಗೂ ಧಾನ್ಯಲಕ್ಷ್ಮೀಗೆ ಭಕ್ತಿ ಭಾವದಿಂದ ಕೃತಜ್ಞತೆಯನ್ನು ಸಲ್ಲಿಸುವ ಹಬ್ಬವೇ ಪುತ್ತರಿ ಹಬ್ಬ. ರಾತ್ರಿ ಕುಟುಂಬದ ಮುಖ್ಯಸ್ಥ ಕದಿರು ಕೊಯ್ದು ಪೊಲಿ.. ಪೊಲಿ.. ದೇವಾ ಎನ್ನುತ್ತಾ ಕೊಂಡೊಯ್ಯುವ ಮೂಲಕ ಧಾನ್ಯ ಲಕ್ಷ್ಮಿಯನ್ನು ಮನೆಗೆ ತುಂಬಿಸಿಕೊಳ್ಳುವುದರೊಂದಿಗೆ ಸದಾ ಕಾಲ ಮನೆಯಲ್ಲಿ ಧವಸ ಧಾನ್ಯ ತುಂಬಿರುವಂತೆ ತಾಯಿ ಕಾವೇರಮ್ಮ ಹಾಗೂ ಪಾಡಿ ಇಗ್ಗುತ್ತಪ್ಪನಲ್ಲಿ ಪ್ರಾರ್ಥಿಸಿಕೊಳ್ಳಲಾಗುತ್ತದೆ.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಹುತ್ತರಿ ಹಬ್ಬದ ಆಚರಣಾ ರೀತಿ–ರಿವಾಜುಗಳು: 

ಪುತ್ತರಿ ಹಬ್ಬದ ದಿನ ಐನ್ ಮನೆಯ ನೆಲ್ಲಕ್ಕಿ ನಡುಬಾಡೆಯಲ್ಲಿರುವ ‘ತೂಕ್ಬೊಳಕ್’ (ತೂಗುವ ದೀಪ) ಕೆಳಗೆ ಹೊಸ ಚಾಪೆ ಹಾಸಿ ಪುತ್ತರಿ ಕುಕ್ಕೆಯಲ್ಲಿ ಮಾವಿನ ಎಲೆ, ಅರಳಿ ಎಲೆ, ಕುಂಬಳಿ ಎಲೆ, ಕಾಡುಗೇರು ಎಲೆ, ಹಲಸಿನ ಎಲೆ ಈ ಐದು ಎಲೆಗಳನ್ನು ಹಾಗೂ ಅಚ್ಚನಾರನ್ನು ಇರಿಸಿರುತ್ತಾರೆ. ಈ ಐದು ಎಲೆಗಳನ್ನು ಒಂದರ ಮೇಲೆ ಒಂದು ಇಟ್ಟು ನಾರಿನಿಂದ ಕಟ್ಟಲಾಗಿರುತ್ತದೆ. ಇದನ್ನು ‘ನೆರೆಕಟ್ಟುವುದು’ ಎನ್ನುತ್ತಾರೆ. ಹೊಸ ಕುಕ್ಕೆಯಲ್ಲಿ ಭತ್ತ ತುಂಬಿ ಅದರ ಮೇಲೆ ಅರ್ಧ ಸೇರು ಅಕ್ಕಿಯನ್ನು ಸೇರಿಸಿ ತುಂಬುತ್ತಾರೆ. ಪುತ್ತರಿ ಕುಡಿಕೆಯಲ್ಲಿ ತಂಬಿಟ್ಟು ಹಾಕಿ ಅದರ ಜೊತೆ ಹಾಲು, ತುಪ್ಪ, ಜೇನು, ಎಳ್ಳು, ಶುಂಠಿ, ತೆಂಗಿನಕಾಯಿ, ಹಾಗಲಕಾಯಿ, ಮುಳ್ಳು ಇಡುತ್ತಾರೆ. ಜೊತೆಗೆ ಕುಡುಗೋಲು ‘ತಳಿಯಕ್ಕಿ ಬೊಳ್ಚ’ ಮೂರು ವೀಳ್ಯದೆಲೆ ಮೂರು ಅಡಿಕೆಯನ್ನು ಇಡಲಾಗುತ್ತದೆ. ಆ ಎಲ್ಲಾ ವಸ್ತುಗಳನ್ನು ತೂಕ್ ಬೊಳಕ್‌ನ್ನು ಕೆಳಗಡೆ ದೇವರ ಮುಂದೆ ಇಟ್ಟಿರುತ್ತಾರೆ. ಅದರ ಮುಂದೆ ರಂಗೋಲಿಯನ್ನು ಹಾಕಿರುತ್ತಾರೆ. ನಂತರ ಬೇಯಿಸಿದ ಪುತ್ತರಿ ಗೆಣಸನ್ನು ಜೇನುತುಪ್ಪ, ಬೆಲ್ಲ ಹಾಗೂ ತುಪ್ಪದೊಂದಿಗೆ ಫಲಾಹಾರ ಸೇವಿಸಿ ಕದಿರು (“ಕದಿರು” ಎಂದರೆ ಭತ್ತದ ಕಟ್ಟು) ತೆಗೆಯಲು ಗದ್ದೆಗೆ ಹೋಗುತ್ತಾರೆ. ಮೊದಲೇ ಸಿದ್ಧಪಡಿಸಿದ “ಕುತ್ತಿ”ಯನ್ನು ಕುಟುಂಬದ ಹಿರಿಯರು ತಲೆ ಮೇಲೆ ಹೊತ್ತಿರುತ್ತಾರೆ ಮತ್ತು ಮನೆಯ ಹಿರಿಯ ವ್ಯಕ್ತಿ ಕದಿರು ತೆಗೆಯುವ ಕುಡುಗೋಲನ್ನು ಕದಿರು ತೆಗೆಯುವ ವ್ಯಕ್ತಿಯ ಕೈಗೆ ನೀಡುತ್ತಾರೆ. ನಂತರ ಮನೆಯ ಹಿರಿಯರು, ಹೆಂಗಸರು, ಗಂಡಸರು ಮತ್ತು ಮಕ್ಕಳು ಎಲ್ಲರೂ ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟು ದುಡಿ ಬಾರಿಸುತ್ತಾ, ಹಾಡುತ್ತಾ ಗದ್ದೆಗೆ ತೆರಳುತ್ತಾರೆ. ಕದಿರು ತೆಗೆಯುವ ಗದ್ದೆಯನ್ನು ಮೊದಲೇ ಸಿಂಗರಿಸಿರುತ್ತಾರೆ. ಅಲ್ಲಿ ತಲುಪಿದ ನಂತರ ಹಾಲು, ಜೇನು ಮೊದಲಾದವುಗಳನ್ನು ಕದಿರಿನ ಬುಡಕ್ಕೆ ಸುರಿಯುತ್ತಾರೆ. ಐದು ಎಲೆಗಳ ಕಟ್ಟನ್ನು ಕದಿರಿನ ಬುಡಕ್ಕೆ ಕಟ್ಟುತ್ತಾರೆ. ನಂತರ ಸಾಂಪ್ರದಾಯಿಕವಾಗಿ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸುತ್ತಾರೆ. ದೇವರನ್ನು ಪ್ರಾರ್ಥಿಸಿ ಬೆಸ ಸಂಖ್ಯೆಯಲ್ಲಿ ಕದಿರನ್ನು ಕುಯ್ದು ಕುಕ್ಕೆಯಲ್ಲಿ ಇಡಲಾಗುತ್ತದೆ. ಕದಿರನ ಒಂದೊಂದು ಕಟ್ಟನ್ನು ಆಲುಮರದ ಎಲೆಯಿಂದ ಸುತ್ತಿ ಕದಿರನ್ನು ಕಟ್ಟಿ ಕುಕ್ಕೆಯಲ್ಲಿಡುತ್ತಾರೆ. ಈ ಸಮಯದಲ್ಲಿ ಪಟಾಕಿಯನ್ನು ಸಿಡಿಸಿ ಪೊಲಿ…. ಪೊಲಿ…. ದೈವ ಎಂದು ಎಲ್ಲರೂ ಕೂಗುತ್ತಾರೆ. ನಂತರ ಕುಕ್ಕೆಯನ್ನು ತಲೆ ಮೇಲೆ ಹೊತ್ತು ಪೊಲಿ…. ಪೊಲಿ…. ದೈವ ಎಂದು ಕೂಗುತ್ತಾ ಮನೆಗೆ ಬರುತ್ತಾರೆ. ಮನೆಗೆ ಬಂದ ನಂತರ ಕದಿರು ಕುಯ್ದವರ ಕಾಲು ತೊಳೆದು ಹಾಲು ನೀಡಿ, ಧಾನ್ಯಲಕ್ಷ್ಮೀಯನ್ನು ಮನೆ ತುಂಬಿಸಿಕೊಳ್ಳುತ್ತಾರೆ, ಬರುವಾಗ ಕೈಮಡಕ್ಕೆ ಕಟ್ಟುತ್ತಾ ಬರುತ್ತಾರೆ. ನೆಲ್ಲಕ್ಕಿ ನಡುಬಾಡೆಗೆ ಬಂದು ಚಾಪೆ ಮೇಲೆ ಇಟ್ಟು ಮನೆಯ ಎಲ್ಲಾ ಬಾಗಿಲು, ಮುಖ್ಯ ವಸ್ತುಗಳಿಗೆ, ಕೊಟ್ಟಿಗೆಗೆ, ದೇವರ ಕೋಣೆಗೆ ಕದಿರನ್ನು ಕಟ್ಟುತ್ತಾರೆ. ನಂತರ ಅದನ್ನು ಕುಟುಂಬದ ಪ್ರತಿಯೊಬ್ಬ ಸದಸ್ಯರು ತೆಗೆದುಕೊಳ್ಳುತ್ತಾರೆ. ಇದು ಮುಖ್ಯವಾಗಿ ಪ್ರಕೃತಿ ಪೂಜೆಯ ಸಂಕೇತ. ನಂತರ ಹೊಸ ಅಕ್ಕಿ ಪಾಯಸ ಮಾಡಿ ಮನೆಯ ಸದಸ್ಯರೆಲ್ಲ ಊಟ ಮಾಡುತ್ತಾರೆ. ಮರುದಿನ ಊರಿನ ನಾಡ್ಮಂದ್ (ಮೈದಾನ) ನಲ್ಲಿ ಊರಿನವರೆಲ್ಲಾ ಸೇರಿ ಸಾಂಪ್ರದಾಯಿಕ ಕೋಲಾಟ, ‘ಪರೆಯಕಳಿ’ಗಳನ್ನು ಆಡಿ ಸಂಭ್ರಮಿಸುತ್ತಾರೆ.

ಪುತ್ತರಿ ಹಬ್ಬದಲ್ಲಿ ವಿಶೇಷ ತಿನಿಸುಗಳು: ಕೊಡಗಿನ ಹಬ್ಬಗಳಲ್ಲಿ ಜಾನಪದ ಮತ್ತು ಸಾಂಪ್ರದಾಯಿಕ ತಿಂಡಿಗಳನ್ನು ಮಾಡುವುದು ವಿಶೇಷ. ಪುತ್ತರಿ ಹಬ್ಬದಲ್ಲಿ ವಿಶೇಷ ತಿನಿಸುಗಳಾದ ವಿಶೇಷವಾಗಿ ಹೊಸ ಅಕ್ಕಿ ಪಾಯಸ, ತಂಬಿಟ್ಟು (ತಂಬಿಟ್ಟನ್ನು ಹುರಿದ ಅಕ್ಕಿಯನ್ನು ಹುಡಿಮಾಡಿ ಬಾಳೆ, ಎಳ್ಳು, ತುಪ್ಪ, ತೆಂಗಿನಕಾಯಿ ಹಾಕಿ ಮಾಡಿರುತ್ತಾರೆ) ಬೆರಂಬಿಟ್ಟು, ಅಡಿಕೆ ಹಿಟ್ಟು,ಪುತ್ತರಿ ಕಳಂಜ, ಕಜ್ಜಾಯ, ವಿವಿಧ ಬಗೆಯ ತರಕಾರಿ ಸಾರು, ಪಲ್ಯಗಳು, ಅನ್ನ, ರೊಟ್ಟಿ, ಹುತ್ತರಿ ಗೆಣಸನ್ನು ಈ ಸಂದರ್ಭದಲ್ಲಿ ಭೂಮಿಯಿಂದ ತೆಗೆದು ಬೇಯಿಸಿ ಜೇನುತುಪ್ಪ, ಹಸುವಿನ ತುಪ್ಪ ಹಾಗೂ ಬೆಲ್ಲದ ಪಾಕದೊಂದಿಗೆ ಸೇವಿಸುವುದು. ಹೀಗೆ ವಿವಿಧ ತಿಂಡಿ ತಿನಿಸುಗಳಿರುತ್ತದೆ.

ಪುತ್ತರಿ ಮಂದ್: ಪುತ್ತರಿ ಹಬ್ಬವು ಹತ್ತಿರ ಬರುತ್ತಿದ್ದಂತೆ ನಾಲ್ಕು ದಿವಸ ಮೊದಲು ಪ್ರತಿ ಊರಿನಲ್ಲಿ ‘ಮಂದ್‌’ಗೆ ಸೇರುವುದು ವಾಡಿಕೆ. ‘ಮಂದ್‌’ ಎಂದರೆ ಊರಿನ ನಾಗರಿಕರೆಲ್ಲ ಸೇರಿ ಸಾಂಪ್ರದಾಯಿಕ ಕೋಲಾಟ ನಡೆಸುವ ಸ್ಥಳ. ಹಾಗೆಯೇ ಪುತ್ತರಿ ಕಳೆದು ಎರಡು ದಿವಸ ಊರು ‘ಮಂದ್‌’ನಲ್ಲಿ ಕೋಲಾಟ ನಡೆಸಿ ಮೂರನೇ ದಿನ ‘ನಾಡ್‌ ಮಂದ್‌’ಗೆ ಕೋಲಾಟಕ್ಕೆ ತೆರಳಿ ಎರಡು ದಿನದ ಕೋಲಾಟದ ಬಳಿಕ ಹಬ್ಬಕ್ಕೆ ತೆರೆ ಎಳೆಯಲಾಗುತ್ತದೆ.

ಪುತ್ತರಿ ಕೋಲಾಟ: ”ರಾಜ್ಯದ ವಿವಿಧೆಡೆ ಸುಗ್ಗಿ ಆಚರಿಸುವಂತೆ ಕೊಡಗಿನಲ್ಲಿ ಧಾನ್ಯಲಕ್ಷ್ಮಿಯನ್ನು ಮನೆಗೆ ತರುವ ಹಬ್ಬವಾಗಿ ಪುತ್ತರಿಯನ್ನು ಆಚರಿಸಲಾಗುತ್ತದೆ. ಪುತ್ತರಿ ಆಚರಣೆ ನಂತರದಲ್ಲಿಊರಿನ ಹಲವು ಕಡೆ ಮರುದಿನ ಕೋಲಾಟ್‌, ಉಮ್ಮತ್ತಾಟ್‌ ಸೇರಿದಂತೆ ಇತರ ಸಾಂಪ್ರದಾಯಿಕ ನೃತ್ಯದ ಮೂಲಕ ನಮ್ಮ ಪರಂಪರೆಯನ್ನು ನೆನಪಿಸಿಕೊಳ್ಳಲಾಗುತ್ತದೆ,’

ಪುತ್ತರಿ ಹಬ್ಬದ ಮಾರನೆಯ ದಿನ ಪುತ್ತರಿ ಹಾಡನ್ನು ಮನೆಮನೆಗಳಲ್ಲಿ ಹಾಡುವ ಪದ್ಧತಿಯೂ ಇದೆ. ಅಲ್ಲದೆ, ನಾಡ್‌ಮಂದ್‌ನಲ್ಲಿ (ಊರಿನ ದೊಡ್ಡ ಮೈದಾನದಲ್ಲಿ) ಊರಿನವರೆಲ್ಲಾ ಸೇರಿ ಪುತ್ತರಿ ಕೋಲಾಟ ನಡೆಸುತ್ತಾರೆ. 

ಕೊಡಗಿನ ಪುತ್ತರಿ ಹಬ್ಬ ಒಂದು ರೀತಿಯಲ್ಲಿ ಜಾನಪದ ಕಲೆಗಳ ಕಣಜ. ಈ ಹಬ್ಬಕ್ಕೆ ಒಂದು ವಾರ ಮೊದಲು ಜನ ಸೇರಿ ಕೋಲಾಟ, ನೃತ್ಯ ತರಬೇತಿ ಆರಂಭಿಸುತ್ತಾರೆ. ಇದನ್ನು ಈಡ್ ಎಂದು ಕರೆಯುತ್ತಾರೆ. ಇದರಲ್ಲಿ ಪ್ರತಿ ಮನೆಯ ಒಬ್ಬನಾದರೂ ಭಾಗವಹಿಸಬೇಕು. ಹುತ್ತರಿ ಹಬ್ಬದ ನಂತರ ಪ್ರತಿ ಮನೆಯಲ್ಲಿ ಕೋಲಾಟ ನಡೆಯುತ್ತದೆ. ಒಂದೇ ಊರಿನವರು ಸೇರಿ ಆಡುವ ಕೋಲಾಟಕ್ಕೆ ಊರ್ ಮಂದ್ ಕೋಲ್ ಎಂದು ಕರೆಯುತ್ತಾರೆ. ಹಲವು ಊರು ಸೇರಿ ನಡೆಸುವ ಕೋಲಾಟಕ್ಕೆ ನಾಡ್ ಮಂದ್ ಕೋಲ್ ಎನ್ನುತ್ತಾರೆ. ಹಲವು ನಾಡು ಸೇರಿ ಮಾಡುವ ಕೋಲಾಟಕ್ಕೆ ದೇಶ ಮಂದ್ ಕೋಲ್ ಎನ್ನುತ್ತಾರೆ. ಈ ಕೋಲಾಟದಲ್ಲಿ 32 ವಿಧ. ಆ ಸಮಯದಲ್ಲಿ ಪ್ರತಿಯೊಬ್ಬರೂ ಸಾಂಪ್ರದಾಯಿಕ ಉಡುಪು ಧರಿಸುತ್ತಾರೆ. ಕೋಲಾಟದ ನಂತರ ಆ ಕೋಲನ್ನು ಭಕ್ತಿ ಭಾವದಿಂದ ಮನೆಯಲ್ಲಿ ಕಾಯ್ದಿರಿಸುತ್ತಾರೆ.

ಪುತ್ತರಿ ಅರಮನೆ ಕೋಲು: ಹೆಬ್ಬೆಟ್ಟಗೇರಿ ಗ್ರಾಮದ ಪಾಂಡಿರ ಕುಟುಂಬಸ್ಥರು ಕೊಡಗು ರಾಜರ ಆಳ್ವಿಕೆಯ ಕಾಲದಲ್ಲಿ ಪುತ್ತರಿ ಕೋಲಾಟವನ್ನು ಅಂದಿನ ಅರಮನೆಯಾಗಿದ್ದ ಕೋಟೆ ಆವರಣದಲ್ಲಿ ನಡೆಸುತ್ತಿದ್ದರು. ಗದ್ದೆಯಲ್ಲಿ ಬೆಳೆದು ನಿಂತ ಭತ್ತದ ಪೈರನ್ನು ಧಾನ್ಯಲಕ್ಷಿತ್ರ್ಮಯಾಗಿ ಮನೆಗೆ ಬರಮಾಡಿಕೊಳ್ಳುವ ಹಬ್ಬದ ವೇಳೆ ಅರಮನೆಯಲ್ಲಿ ಸಂಭ್ರಮವನ್ನು ಆಚರಿಸುವ ಸಂದರ್ಭ ಪುತ್ತರಿ ಅರಮನೆ ಕೋಲು ಅತ್ಯಂತ ಮಹತ್ವ ಪಡೆದಿತ್ತು. ಹೆಬ್ಬೆಟ್ಟಗೇರಿ ಗ್ರಾಮದ ಪಾಂಡಿರ ಕುಟುಂಬಸ್ಥರು ರಾಜರ ಕಾಲದಿಂದ ಕೋಟೆ ಆವರಣದಲ್ಲಿ ಕೋಲಾಟ ಸೇರಿದಂತೆ ಇತರೆ ಸಾಂಪ್ರದಾಯಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದರು. ಆದರೆ ಕೊಡಗಿಗೆ ಬ್ರಿಟಿಷರ ಆಗಮನದ ನಂತರ ಸಾಂಪ್ರದಾಯಿಕ ಕಾರ್ಯಕ್ರಮಗಳನ್ನು ನಿಲ್ಲಿಸಲಾಯಿತು. ಇದರಿಂದ ಆವರಣದಲ್ಲಿ ನಡೆಸಿಕೊಂಡು ಬರುತ್ತಿದ್ದ ಪುತ್ತರಿ ಅರಮನೆ ಕೋಲು ಆಚರಣೆ ಸ್ಥಗಿತಗೊಂಡಿತ್ತು. ನಂತರ ಕೆಲ ಸಮಯ ಗದ್ದಿಗೆಯಲ್ಲಿ ಕೋಲಾಟ ನಡೆಸಲಾಯಿತು. ಕಳೆದ ಕೆಲವು ವರ್ಷಗಳಿಂದ ಪಾಂಡಿರ ಕುಟುಂಬಸ್ಥರು ಮತ್ತೆ ಪುತ್ತರಿ ಅರಮನೆ ಕೋಲನ್ನು ಪುತ್ತರಿ ಕೋಲಾಟ ಎಂದು ಓಂಕಾರೇಶ್ವರ ದೇವಾಲಯದ ಸಹಕಾರದೊಂದಿಗೆ ಕೋಟೆ ಆವರಣದಲ್ಲಿ ಆಚರಿಸುತ್ತಿದ್ದಾರೆ.

ಊರೋರ್ಮೆ:  ಹಬ್ಬದ ಕಡೆಯ ದಿನವಾಗಿ “ಊರೋರ್ಮೆ” ನಡೆಯುತ್ತದೆ. ಊರವರೆಲ್ಲಾ ಗ್ರಾಮದ ಅಂಬಲ(ಮೈದಾನ)ದಲ್ಲಿ ನೆರೆಯುತ್ತಾರೆ. ವಿವಿಧ ತಿಂಡಿ ತಿನಿಸು, ಅನ್ನ, ರೊಟ್ಟಿ ಹೀಗೆ ವಿವಿಧ ಪದಾರ್ಥಗಳನ್ನು ಮನೆಯಿಂದ ತಂದು ಅಲ್ಲಿ ಸೇವಿಸುತ್ತಾರೆ. ಅಲ್ಲಿಗೆ ಪುತ್ತರಿ ಹಬ್ಬದ ಸಂಭ್ರಮ ಮುಗಿಯುತ್ತದೆ.

ಕೊಡಗಿನ ಪುತ್ತರಿ ಹಬ್ಬದ ವಿಶೇಷತೆಯೇ ಧಾನ್ಯ ಲಕ್ಷ್ಮಿ ಆಗಿದೆ. ಇದರ ಅರ್ಥ ಭತ್ತವನ್ನು ಮನೆಗೆ ತುಂಬಿಸಿಕೊಳ್ಳುವುದಾಗಿದೆ. ಈ ಮೊದಲು ಕೊಡಗು ಈಗಿನಂತೆ ಇರಲಿಲ್ಲ, ಬದಲಾಗಿ ಅಲ್ಲಿ ಭತ್ತವೇ ಪ್ರಧಾನ ಕೃಷಿಯಾಗಿತ್ತು. ಕೊಡಗಿನಲ್ಲಿ ನೀರಾವರಿ ಪ್ರದೇಶ ಹೆಚ್ಚಾಗಿದ್ದು, ಬಯಲುಗಳೆಲ್ಲ ಭತ್ತದ ಗದ್ದೆಗಳಾಗಿದ್ದವು. ಆದ್ದರಿಂದ ಭತ್ತವನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿತ್ತು. ಹೀಗಾಗಿ ಭತ್ತವನ್ನು ಮನೆಗೆ ತುಂಬಿಸಿಕೊಳ್ಳುವ ಸುಗ್ಗಿ ಹಬ್ಬವಾಗಿ ಪುತ್ತರಿ ಬಿಂಬಿತವಾಗುತ್ತಿತ್ತು. ಪುತ್ತರಿ ಹಬ್ಬ ಕಳೆಯುತ್ತಿದ್ದಂತೆಯೇ ಭತ್ತದ ಕುಯ್ಲು ಕೆಲಸ ಆರಂಭವಾದರೆ ಅದು ಮುಗಿಯುವ ವೇಳೆಗೆ ಜನವರಿ ಕಳೆದು ಹೋಗುತ್ತಿತ್ತು.

ಈ ಸುಗ್ಗಿಹಬ್ಬದಲ್ಲಿ ಕೊಡಗಿನ ತುಂಬ ಸಂಸ್ಕೃತಿಯ ಕಲಿಕೆ ಮತ್ತು ಪ್ರದರ್ಶನದಲ್ಲಿ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಪಾಲ್ಗೊಳ್ಳುತ್ತಾರೆ. ಈ ಹಬ್ಬವು ಧಾರ್ವಿುಕ ದೃಷ್ಟಿಕೋನಕ್ಕಿಂತ ಹೆಚ್ಚಾಗಿ ಪ್ರಕೃತಿ ಮಾತೆಯ ಸಂಕೇತದ ಹಬ್ಬವಾಗಿದೆ. 

ಕೊಡಗಿನ ಪ್ರಮುಖ ಹಬ್ಬವಾದ ಪುತ್ತರಿಗೆ ಕೊಡಗಿನವರು ಜಿಲ್ಲೆಯ ಹೊರಗೆ ತಾವು ಎಲ್ಲಿಯೇ ಇರಲಿ ಸಾಮಾನ್ಯವಾಗಿ ಬಂದೇ ಬರುತ್ತಾರೆ. ಹಬ್ಬದ ದಿನದಂದು ಕುಟುಂಬದವರೊಡನೆ ಕಲೆತು ಸಂಭ್ರಮಿಸುತ್ತಾರೆ. ಕೊಡಗಿನಲ್ಲಿ ಮಾತ್ರವೇ ಕಾಣಬಹುದಾದ ಪುತ್ತರಿ ಹಬ್ಬವು ಇಲ್ಲಿನ ಸಂಪ್ರದಾಯ, ಕೃಷಿ ಮೇಲಿನ ಭಕ್ತಿಯ ಪ್ರತಿರೂಪವಾಗಿದೆಯಲ್ಲದೆ, ಹಿಗ್ಗಿನ ಸುಗ್ಗಿಯ ಹಬ್ಬವಾಗಿಯೂ ಗಮನ ಸೆಳೆಯುತ್ತಿದೆ. ಪುತ್ತರಿ ಎಂದರೆ ಕೊಡಗಿನ ಸುಗ್ಗಿಯ ಹಬ್ಬ ಎಂದೇ ಪ್ರಖ್ಯಾತಿಯನ್ನು ಪಡೆದಿದೆ.

About ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.
3 1 vote
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments