25ನೇ ಕೊಡವ ಕೌಟುಂಬಿಕ ಹಾಕಿ ಉತ್ಸವದ ವೆಬ್‌ಸೈಟ್ ಲೋಕಾರ್ಪಣೆ
ಕೊಡವ ಸಂಸ್ಕೃತಿಯ ಪ್ರತಿಬಿಂಬವಾಗಿರುವ ಕೊಡವ ಕೌಟುಂಬಿಕ ಹಾಕಿ ಉತ್ಸವವು ಈ ಬಾರಿ ಮುದ್ದಂಡ ಕುಟುಂಬದ ನೇತೃತ್ವದಲ್ಲಿ ಮತ್ತೊಂದು ಹೆಜ್ಜೆ ಇಟ್ಟಿದೆ. 25ನೇ ಆವೃತ್ತಿಯ ಈ ಉತ್ಸವಕ್ಕೆ ಮೀಸಲಾದ ವೆಬ್‌ಸೈಟ್ ಅನ್ನು ಇತ್ತೀಚೆಗೆ ಉದ್ಘಾಟಿಸಲಾಯಿತು.
ಮಡಿಕೇರಿಯ ಹೊರವಲಯದ ಖಾಸಗಿ ರೆಸಾರ್ಟ್‌ನಲ್ಲಿ ನಡೆದ ಈ ಸಮಾರಂಭದಲ್ಲಿ, ಗಣ್ಯರು ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ, 2025ನೇ ಮುದ್ದಂಡ ಕ್ರಿಕೆಟ್ ಪಂದ್ಯಾವಳಿಯ ವೆಬ್‌ಸೈಟ್ ಅನ್ನು ಲೋಕಾರ್ಪಣೆ ಮಾಡಲಾಯಿತು. ಈ ವೆಬ್‌ಸೈಟ್‌ನಲ್ಲಿ ಉತ್ಸವಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಲಭ್ಯವಾಗುವಂತೆ ಮಾಡಲಾಗಿದೆ.
ಹಾಕಿ ಉತ್ಸವದ ಗೌರವ ಅಧ್ಯಕ್ಷರಾದ ಎಂಬಿ ದೇವಯ್ಯ ಮಾತನಾಡುತ್ತಾ, ಮುದ್ದಂಡ ಕುಟುಂಬದ ಹಿರಿಯರು ಹಾಕಿ ಅಕಾಡೆಮಿಯ ಸಹಕಾರದೊಂದಿಗೆ ಈ ಬಾರಿಯ ಉತ್ಸವವನ್ನು ಯಶಸ್ವಿಯಾಗಿ ನಡೆಸಲು ನಿರ್ಧರಿಸಿದ್ದಾರೆ ಎಂದು ಹೇಳಿದರು. ಈಗಾಗಲೇ ಸಮಿತಿ ರಚನೆ ಮಾಡಿದ್ದು, ಕೆಲಸಗಳು ಆರಂಭವಾಗಿವೆ. ಎಲ್ಲರೂ ಸಹಕಾರ ನೀಡುವಂತೆ ಮನವಿ ಮಾಡಿದರು.
ಕೊಡಗು ಹಾಕಿ ಅಕಾಡೆಮಿಯ ಅಧ್ಯಕ್ಷ ಪಾಂಡಂಡ ಬೋಪಣ್ಣ ಮಾತನಾಡುತ್ತಾ, ಕಳೆದ ಬಾರಿ ಕುಂಡ್ಯೋಳಂಡ ತಂಡವು 360 ತಂಡಗಳನ್ನು ಆಡಿಸುವ ಮೂಲಕ ಗಿನ್ನಿಸ್ ದಾಖಲೆ ಮಾಡಿದ್ದನ್ನು ಸ್ಮರಿಸಿದರು. ಮುದ್ದಂಡ ದೊಡ್ಡ ಕುಟುಂಬವಾಗಿದ್ದು, ಇನ್ನೂ ಚೆನ್ನಾಗಿ ಆಯೋಜನೆ ಮಾಡಲಿದ್ದಾರೆ ಎಂದು ಹೇಳಿದರು.
ಶಕ್ತಿ ದಿನಪತ್ರಿಕೆಯ ಪ್ರಧಾನ ಸಂಪಾದಕ ಜಿ.ರಾಜೇಂದ್ರ ಮಾತನಾಡುತ್ತಾ, 25ನೇ ವರ್ಷದ ಉತ್ಸವ ಯಶಸ್ವಿಯಾಗುವ ಭರವಸೆ ಇದೆ ಎಂದು ಹೇಳಿದರು. ವಿಶ್ವವ್ಯಾಪಿ ಪ್ರಸಿದ್ಧಿ ಪಡೆದಿರುವ ಗಿನ್ನಿಸ್ ದಾಖಲೆ ನಿರ್ಮಿಸಿದ್ದರೂ ಅಂತರಾಷ್ಟ್ರೀಯ ಹಾಕಿ ತಂಡದಲ್ಲಿ ಕೊಡಗಿನ ಆಟಗಾರರಿಗೆ ಅವಕಾಶ ಸಿಗದೇ ಇರುವುದು ಬೇಸರ ತರಿಸಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್.ಸವಿತಾ ರೈ, ಮುದ್ದಂಡ ಸ್ಪೋಟ್ರ್ಸ್ ಎಂಡ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮುದ್ದಂಡ ರಶಿತ್ ಸುಬ್ಬಯ್ಯ, ಕುಟುಂಬದ ಪಟ್ಟೆದಾರ ಡಾಲಿ ತಿಮ್ಮಯ್ಯ, ಡೀನ್ ಬೋಪಣ್ಣ, ಉಪಾಧ್ಯಕ್ಷ ಅಶೋಕ್, ಕೊಡಗು ಪ್ರೆಸ್‍ಕ್ಲಬ್ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮುಂತಾದ ಗಣ್ಯರು ಉಪಸ್ಥಿತರಿದ್ದರು.