ಅಚ್ಚಪಂಡ ಎಂ. ಬೋಪಣ್ಣ(ದಿನೇಶ್), ಅಧ್ಯಕ್ಷರು: ಗ್ರಾಮ ಪಂಚಾಯಿತಿ ಬೇಟೋಳಿ(Grama Panchayat: Betoli)
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ವ್ಯಾಪ್ತಿಗೆ ಒಳಪಡುವ ಬೇಟೋಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಅಚ್ಚಪಂಡ ಎಂ. ಬೋಪಣ್ಣ(ದಿನೇಶ್) ಅವರನ್ನು “ಸರ್ಚ್ ಕೂರ್ಗ್ ಮೀಡಿಯಾ” ದ “ನಮ್ಮಕೊಡಗು-ನಮ್ಮಗ್ರಾಮ” ಅಭಿಯಾನದಡಿಯಲ್ಲಿ ಸಂದರ್ಶಿಸಿ ಮಾಹಿತಿಯನ್ನು ಪಡೆಯಲಾಯಿತು.
“ಸರ್ಚ್ ಕೂರ್ಗ್ ಮೀಡಿಯಾ” ದೊಂದಿಗೆ ಮಾತನಾಡಿದ ಅಚ್ಚಪಂಡ ಎಂ. ಬೋಪಣ್ಣ(ದಿನೇಶ್) ರವರು “ನಾನು ರಾಜಕೀಯ ಜೀವನಕ್ಕೆ ಪ್ರವೇಶಿಸಲು ಕಾರಣವೇನೆಂದರೆ ನನ್ನ ತಂದೆಯವರಾದ ದಿವಂಗತ ಅಚ್ಚಪಂಡ ಎ.ಮೊಣ್ಣಪ್ಪನವರು ಭಾರತೀಯ ಸೇನೆಯಲ್ಲಿ ಸೈನಿಕರಾಗಿದ್ದು, ನಿವೃತ್ತವಾದ ನಂತರ ರಾಜಕೀಯ ಮತ್ತು ಸಾಮಾಜಿಕ ಸೇವೆಯಲ್ಲಿ ನಿರತರಾಗಿ ಬೇಟೋಳಿ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿಯೂ, ಬೇಟೋಳಿ ಗ್ರಾಮ ಪಂಚಾಯಿತಿಯ ಸದಸ್ಯರಾಗಿಯೂ ಕರ್ತವ್ಯ ನಿರ್ವಹಿಸಿತ್ತಿದ್ದರು.
ನಾನು ವಿದ್ಯಾಭ್ಯಾಸದ ನಂತರ ಯು.ಬಿ. ಕಂಪನಿಯ ಕೊಡಗು ಜಿಲ್ಲಾ ಉಸ್ತುವಾರಿಯಾಗಿ ನನ್ನ ವೃತ್ತಿಜೀವನವನ್ನು ನಡೆಸುತ್ತಿದೆ. ಆ ಸಂದರ್ಭ ನನ್ನ ತಂದೆಯವರ ಅಕಾಲಿಕ ಮರಣವಾಯಿತು. ನನ್ನ ತಂದೆಯವರ ಸಾಮಾಜಿಕ ಹಾಗೂ ರಾಜಕೀಯ ಸೇವೆಯನ್ನು ಗುರುತಿಸಿದ ಪಕ್ಷದ ಹಿರಿಯರು ಹಾಗೂ ಗ್ರಾಮಸ್ಥರ ಒತ್ತಾಸೆಯ ಮೇರೆಗೆ ನನ್ನ ತಂದೆಯವರು ಸದಸ್ಯರಾಗಿದ್ದ ಬೇಟೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ನಿರ್ಮಲಗಿರಿ ಗ್ರಾಮದ 2013ರ ಉಪಚುನಾವಣೆಯಲ್ಲಿ ಸ್ಫರ್ಧಿಸಿ ಆಯ್ಕೆಗೊಂಡು ಮೂರು ತಿಂಗಳುಗಳ ಕಾಲ ಸದಸ್ಯನಾಗಿ ಕಾರ್ಯನಿರ್ವಹಿಸಿದೆ. ನಂತರ 2ನೇ ಬಾರಿಗೆ 2015ರ ಗ್ರಾ.ಪಂ. ಚುನಾವಣೆಯಲ್ಲಿ ಹೆಗ್ಗಳ-ಬೂದಿಮಾಳ ಗ್ರಾಮದಿಂದ ಸ್ಪರ್ದಿಸಿ ಗೆಲುವನ್ನು ಸಾಧಿಸಿ ಸದಸ್ಯನಾಗಿ ಆಯ್ಕೆಯಾದೆ. ತದ ನಂತರ 2020ರಲ್ಲಿ 3ನೇ ಬಾರಿಗೆ ಗ್ರಾ.ಪಂ. ಚುನಾವಣೆಯಲ್ಲಿ ನಿರ್ಮಲಗಿರಿ ಗ್ರಾಮದಿಂದ ಸ್ಪರ್ದಿಸಿ ಸದಸ್ಯನಾಗಿ ಆಯ್ಕೆಯಾಗಿ, ಪಂಚಾಯಿತಿ ಆಡಳಿತದ 2ನೇ ಅವಧಿಗೆ ಅಧ್ಯಕ್ಷನಾಗಿ ಪ್ರಸ್ತುತ ಕಾರ್ಯನಿಒರ್ವಹಿಸುತ್ತಿದ್ದೇನೆ.
ನಮ್ಮ ಬೇಟೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಂಕ್ರಿಟ್ ರಸ್ತೆ, ಒಳಚರಂಡಿ, ತಡೆಗೋಡೆಯನ್ನು ಎನ್.ಆರ್.ಈ.ಜಿ. ಅನುದಾನದಲ್ಲಿ ಹಾಗೂ 15ನೇ ಹಣಕಾಸಿನ ಯೋಜನೆಯ ಅನುದಾನದಲ್ಲಿ ಸಾಕಷ್ಟು ಕಾಮಗಾರಿಗಳನ್ನು ಕೈಗೆತ್ತಿಕೊಂಡು ಅದು ಪ್ರಗತಿಯಲ್ಲಿದೆ. ಗ್ರಾಮೀಣ ರಸ್ತೆಗಳ ಕಾಮಗಾರಿ ಪ್ರಗತಿಯಲ್ಲಿದ್ದು ಸುಮಾರು 90 ಪ್ರತಿಶತ ರಸ್ತೆಗಳು ಪೂರ್ಣವಾಗಿ ಸುಸಜ್ಜಿತವಾಗಿದೆ .
ಗ್ರಾ.ಪಂ. ವ್ಯಾಪ್ತಿಯಲ್ಲಿ ಸುಮಾರು 400 ಬೀದಿ ದೀಪಗಳನ್ನು ಅಳವಡಿಸಲಾಗಿದ್ದು, ವಿಕಲಚೇತನರಿಗೆ 5 ಪ್ರತಿಶತ ಮೀಸಲಾತಿ ನೀಡಲಾಗಿದೆ. ಜಲ್ ಜೀವನ್ ಮಿಷನ್ ಅಡಿಯಲ್ಲಿ ಗ್ರಾಮದ 2 ಕೆರೆಗಳನ್ನು ಅಭಿವೃದ್ಧಿ ಪಡಿಸಲಾಗಿದ್ದು, ಅದರಲ್ಲಿ ಒಂದು ಹೆಗ್ಗಳದ ಈಶ್ವರ ದೇವಾಲಯದ ಕೆರೆ (90*90 ಅಡಿ) ಎರಡನೇಯದು ಹೆಗ್ಗಳ ಭಗವತಿ ದೆರೆ (100*100 ಅಡಿ) ಕೆರೆಯ ದಡದಲ್ಲಿ ಧ್ವಜಸ್ತಂಭ, ಔಷದಿ ಸಸ್ಯಗಳು, ಉದ್ಯಾನವನವನ್ನು ಹಾಗೂ ಕೆರೆಯ ಸುತ್ತಲೂ ಫೆನ್ಸಿಂಗ್ ಮಾಡಲಾಗಿದೆ. ಕುಡಿಯುವ ನೀರಿನ ಟ್ಯಾಂಕ್‌ನ ಕಾಮಗಾರಿಯು ಹೆಗ್ಗಳ ಬೂದಿಮಾಳ ಗ್ರಾಮದಲ್ಲಿ ಶೇಕಡ 90% ಆಗಿದೆ. ನಿರ್ಮಲಗಿರಿ ಹಾಗೂ ರಾಮನಗರ ಶಾಲೆ ಬಳಿಯ ಕುಡಿಯುವ ನೀರಿನ ಟ್ಯಾಂಕ್‌ನ ಕಾಮಗಾರಿ ಪ್ರಗತಿಯಲ್ಲಿದೆ.
ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೂರು ಗಿರಿಜನ ಹಾಡಿಗಳಿದ್ದು, ಹಾಡಿಗಳ ಮೂಲಭೂತ ಸೌಕರ್ಯಗಳಾದ ವಿದ್ಯುತ್, ರಸ್ತೆ, ಬೀದಿ ದೀಪ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯಿದ್ದು, ಇನ್ನುಳಿದ ಕಾಮಗಾರಿಗಳು ಪ್ರಗತಿಯಲ್ಲಿದ್ದೆ.
ಸ್ವಚ್ಚಭಾರತ್ ಯೋಜನೆಯಲ್ಲಿ ಶೇಕಡ 100% ರಷ್ಟು ಶೌಚಾಲಯಗಳು ಪೂರ್ಣಗೊಂಡಿದೆ. ಕಸ ವಿಲೇವಾರಿಗೆ ಒಂದು ವಾಹನ ವ್ಯವಸ್ಥೆಯಿದ್ದು, ಅದರಲ್ಲಿ ಹಸಿಕಸ ಹಾಗೂ ಒಣಕಸವನ್ನು ಭೇರ್ಪಡಿಸಿ ಶೇಖರಿಸಲಾಗುತ್ತದೆ. ಹೊಸ ಕಸವಿಲೇವಾರಿ ಘಟಕಕ್ಕೆ ನಿರ್ಮಲಗಿರಿಯಲ್ಲಿ ಜಾಗ ಗುರುತಿಸಲಾಗಿದ್ದು ಕ್ರಿಯಾಯೋಜನೆಯನ್ನು ಮಾಡಲಾಗಿದೆ.
ನಮ್ಮ ಬೇಟೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಲ್ಲಾ ಗ್ರಾಮಸ್ಥರಿಗೂ ಪಡಿತರ ಚೀಟಿ, ಎಲ್ಲಾ ಫಲಾನುಭವಿಗಳಿಗೆ ವಿವಿಧ ರೀತಿಯ ಪಿಂಚಣಿ ಯೋಜನೆಗಳನ್ನು ಮಾಡಿ ಕೊಡಲಾಗಿದೆ. ಹಾಗೂ ಗ್ರಾಮಸ್ಥರ ಎಲ್ಲಾ ರೀತಿಯ ಕುಂದು-ಕೊರತೆಗಳಿಗೆ ಸಕಾಲದಲ್ಲಿ ಸ್ಪಂದಿಸುತ್ತಿದ್ದೇನೆ. ಹಾಗೂ ಅವರ ಸೇವೆಗೆ ಸದಾ ಸಿದ್ದವಾಗಿದ್ದೇನೆ.
ನಮ್ಮ ಬೇಟೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವನ್ಯಪ್ರಾಣಿ ಹಾವಳಿ ಹೆಚ್ಚಿದ್ದು, ಕಾಡಾನೆ ಹಾಗೂ ಕಾಡು ಹಂದಿ ದಾಳಿ ನಡೆಯುತ್ತಿದ್ದು, ಅರಣ್ಯ ಇಲಾಖೆಯಿಂದ ಉತ್ತಮವಾದ ಸ್ಪಂದನೆ ದೊರೆಯುತ್ತಿದೆ. ಹಾಗೂ ವನ್ಯಪ್ರಾಣಿ ದಾಳಿಯನ್ನು ತಡೆಯಲು ಬಹುಮಟ್ಟಿಗೆ ಶ್ರಮಿಸಲಾಗುತ್ತಿದೆ.
ಹೆಗ್ಗಳ ರಾಮನಗರದ ಪ್ರೌಢ ಶಾಲೆಯಲ್ಲಿ ಶೇಕಡ 100% ಫಲಿತಾಂಶ ದೊರೆಯುತ್ತಿದ್ದು, ನಮ್ಮ ಗ್ರಾಮಕ್ಕೆ ಹೆಮ್ಮೆಯ ವಿಷಯವಾಗಿದೆ. ಫ್ರೌಡಶಾಲೆಯ ಎಲ್ಲಾ ಅಧ್ಯಾಪಕ ವೃಂದದವರಿಗೂ ಭೋದಕೇತರ ಸಿಬ್ಬಂದಿಗಳಿಗೂ ಬೇಟೋಳಿ ಪಂಚಾಯಿತಿಯ ಪರವಾಗಿ ನಾನು ಈ ಮೂಲಕ ಅಭಿನಂದನೆಯನ್ನು ತಿಳಿಸುತ್ತಿದ್ದೇನೆ. ಪಂಚಾಯಿತಿ ವ್ಯಾಪ್ತಿಯಲ್ಲಿ 5 ಅಂಗನವಾಡಿ ಕೇಂದ್ರಗಳು ಕಾರ್ಯಾಚರಿಸುತ್ತಿದ್ದೆ.
ನಮ್ಮ ಗ್ರಾ.ಪಂ. ವ್ಯಾಪ್ತಿಯು ಮಾಕುಟ್ಟ ಸೇತುವೆಯವರೆಗೆ ಇದ್ದು, ಪಂಚಾಯಿತಿಯ ಕೇಂದ್ರ ಭಾಗದಿಂದ ಬಹಳ ದೂರವಾಗಿದೆ. ಇದು ಕೇರಳ ಹಾಗೂ ಕರ್ನಾಟಕ ರಾಜ್ಯದ ಗಡಿಭಾಗವಾಗಿದೆ. ಮಳೆಗಾಲದ ಸಂದರ್ಭದಲ್ಲಿ ಪ್ರವಾಸ ಹೋಗಲು ಕಷ್ಟವಾದರೂ ಸಹ ನಮ್ಮ ಸದಸ್ಯರು, ಸಿಬ್ಬಂದಿಗಳು ತೆರಳಿ ಅಲ್ಲಿನ ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲಿಸುತ್ತಿದ್ದೇವೆ.
ಈ ಮೊದಲು ಬೇಟೋಳಿ ಹಾಗೂ ಆರ್ಜಿ ಗ್ರಾಮ ಪಂಚಾಯಿತಿಗಳ ಪಂಚಾಯಿತಿ ಆಡಳಿತ ಕಛೇರಿ ಒಂದೇ ಕಟ್ಟಡದಲ್ಲಿದ್ದು ನಂತರ ಆ ಕಟ್ಟಡವನ್ನು ಪೂರ್ಣವಾಗಿ ಆರ್ಜಿ ಗ್ರಾಮ ಪಂಚಾಯಿತಿಗೆ ನೀಡಿ, ನಾವು ಖಾಸಗಿ ಕಟ್ಟಡದಲ್ಲಿ ಬಾಡಿಗೆಯಲ್ಲಿ ಬೇಟೋಳಿ ಗ್ರಾಮ ಪಂಚಾಯಿತಿ ಕಛೇರಿಯನ್ನು ತೆರೆಯಲಾಯಿತು. ಈ ಸಂದರ್ಭ ಪಟ್ಟಡ ಗಂಗೇ ಮಹೇಶ್ ರವರು 5 ಸೆಂಟ್ ಜಾಗವನ್ನು ಬೇಟೋಳಿ ಗ್ರಾಮ ಪಂಚಾಯಿತಿಗೆ ಉದಾರವಾಗಿ ನೀಡಿದರು. ಇದೀಗ ಆ ಸ್ಥಳದಲ್ಲಿ ಸುಸಜ್ಜಿತ ಆಡಳಿತ ಕಛೇರಿ ನಿರ್ಮಾಣವಾಗಿದ್ದು, ಪಟ್ಟಡ ಗಂಗೇ ಮಹೇಶ್ ರವರಿಗೆ ಈ ಮೂಲಕ ಬೇಟೋಳಿ ಗ್ರಾಮಸ್ಥರ ಪರವಾಗಿ ಧನ್ಯವಾದಗಳನ್ನು ತಿಳಿಸುತ್ತಿದ್ದೇನೆ.
ನಮ್ಮ ಪಂಚಾಯಿತಿಯ ಅಭಿವೃದ್ಧಿಗೆ ಮಾಜಿ ಶಾಸಕರಾದ ಕೆ.ಜಿ. ಬೋಪಯ್ಯ ನವರ ಸಹಕಾರ ಶ್ಲಾಘನೀಯವಾಗಿದೆ, ಅವರು ಹೆಚ್ಚಿನ ಆಸಕ್ತಿಯಿಂದ ಕೆಲಸ ನಿರ್ವಹಿಸಿದ್ದಾರೆ, ಅವರಿಗೆ ಈ ಮೂಲಕ ಗ್ರಾಮಸ್ಥರ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ. ಹಾಗೆ ನನ್ನ ಸಹೋದರರಾದ ಅಚ್ಚಪಂಡ ಮಹೇಶ್ ಹಾಗೂ ಅಚ್ಚಪಂಡ ಹರೀಶ್ ರವರು ನನ್ನ ಈ ಎಲ್ಲಾ ಕಾರ್ಯಕ್ಕೆ ಸಹಕಾರವನ್ನು ನೀಡುತ್ತಿದ್ದಾರೆ.
ಬೇಟೋಳಿ ಗ್ರಾ.ಪಂ.ಯ ಸರ್ವಾಂಗೀಣ ಅಭಿವೃದ್ಧಿಗೆ ಶೇಕಡ 100% ಕೆಲಸ ಕಾರ್ಯ ಮಾಡುತ್ತಿದ್ದೇನೆ. ಏನೇ ತೊಂದರೆಗಳಿದ್ದರೂ ಗ್ರಾಮದ ಎಲ್ಲರಿಗೂ ಮೂಲಭೂತ ಸೌಕರ್ಯಗಳನ್ನು ನೀಡಿ ಗ್ರಾಮದ ಯಾರೊಬ್ಬರೂ ಕೂಡಾ ಈ ಸೌಲಭ್ಯಗಳಿಂದ ವಂಚಿತರಾಗಬಾರದೆಂದು ನನ್ನ ಕನಸಾಗಿದೆ. ಒಟ್ಟಿನಲ್ಲಿ ನಮ್ಮ ಗ್ರಾಮದ ಸರ್ವಾಂಗಿಣ ಅಭಿವೃದ್ದಿಯತ್ತ ನನ್ನ ಪ್ರಯತ್ನ ಸಾಗಿದೆ. ನನ್ನ ಈ ಎಲ್ಲಾ ಕಾರ್ಯಗಳಿಗೆ ಉಪಾಧ್ಯಕ್ಷರು, ಸದಸ್ಯರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಸಿಬ್ಬಂದಿಗಳು ಹಾಗೂ ಗ್ರಾಮಸ್ಥರ ಸಹಕಾರವು ಉತ್ತಮವಾಗಿ ದೊರಕುತ್ತಿದೆ”
ಅಚ್ಚಪಂಡ ಎಂ. ಬೋಪಣ್ಣ(ದಿನೇಶ್) ರವರು ರಾಜಕೀಯ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದ 172ನೆಯ ನಿರ್ಮಲಗಿರಿ ಗ್ರಾಮದ ಬೂತ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಾ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದಾರೆ. ಸಹಕಾರ ಕ್ಷೇತ್ರದಲ್ಲಿ ಬೇಟೋಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 2ನೇ ಬಾರಿಗೆ ಚುನಾವಣೆಯಲ್ಲಿ ಸ್ಪರ್ದಿಸಿ ಆಯ್ಕೆಗೊಂಡು ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಧಾರ್ಮಿಕ ಕ್ಷೇತ್ರದಲ್ಲಿ ಹೆಗ್ಗಳ ಭಗವತಿ ದೇವಾಲಯ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಅಚ್ಚಪಂಡ ಎಂ. ಬೋಪಣ್ಣ(ದಿನೇಶ್) ರವರ ಕುಟುಂಬ ಪರಿಚಯ:
ಅಚ್ಚಪಂಡ ಎಂ. ಬೋಪಣ್ಣ(ದಿನೇಶ್) ರವರ ತಂದೆ: ದಿ. ಅಚ್ಚಪಂಡ ಎ. ಮೊಣ್ಣಪ್ಪ. ತಾಯಿ: ಅಚ್ಚಪಂಡ ಎಂ. ಸೀತವ್ವ (ತಾಮನೆ ಚೋಯಮಾಡಂಡ). ಪತ್ನಿ: ಗೌತಮೀ ಬೋಪಣ್ಣ (ಗೃಹಿಣಿ) ತಾಮನೆ ಕಾಳೀಮಾಡ. ಮಗಳು: ಕ್ಷಮಾ ತಂಗಮ್ಮ. ಮಗ: ಶಶಾಂಕ್ ಮೊಣಪ್ಪ ವ್ಯಾಸಂಗ ನಿರತರಾಗಿದ್ದಾರೆ.
ಹಿರಿಯ ಸಹೋದರ ಅಚ್ಚಪಂಡ ಮಹೇಶ್ ಗಣಪತಿ, ಗೋಣಿಕೊಪ್ಪ ಆರ್.ಎಂ.ಸಿ ಯ ಮಾಜಿ ಅಧ್ಯಕ್ಷರು, ಮಾಜಿ ಕೊಡಗು ಜಿಲ್ಲಾ ಪಂಚಾಯತ್ ಸದಸ್ಯರು ಹಾಗೂ ಭಾರತೀಯ ಜನತಾ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇನೋರ್ವ ಸಹೋದರ ಅಚ್ಚಪಂಡ ಹರೀಶ್, ಕೃಷಿಕರು ಹಾಗೂ ಗುತ್ತಿಗೆದಾರರಾಗಿದ್ದು, ಭಾರತೀಯ ಜನತಾ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಹೋದರಿ ಕಳ್ಳಂಗಡ ಆರ್ ವಸಂತಿ (ಜಮುನಾ), ಶ್ರೀಮಂಗಲ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಅಚ್ಚಪಂಡ ಎಂ. ಬೋಪಣ್ಣ(ದಿನೇಶ್) ರವರು ಪ್ರಸ್ತುತ ಬೇಟೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಹೆಗ್ಗಳ ಗ್ರಾಮದಲ್ಲಿ ಕುಟುಂಬ ಸಮೇತ ನೆಲೆಸಿದ್ದಾರೆ. ಇವರ ರಾಜಕೀಯ, ಸಹಕಾರ, ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಸೇವೆಯು ಹೀಗೆ ನಿರಂತರವಾಗಿ ಮುಂದುವರೆಯಲಿ ಎಂದು “ಸರ್ಚ್ ಕೂರ್ಗ್ ಮೀಡಿಯಾ” ವು ಹಾರೈಸುತ್ತದೆ.
ಸಂದರ್ಶನ ದಿನಾಂಕ: 01-08-2024