“ಅಂಥೋರಿಯಂ ಒಂದು ಒಳ್ಳೆಯ ಆದಾಯದ ಮೂಲವಾಗಿದ್ದು, ಕಾಫೀ ಹಾಗೂ ಕರಿಮೆಣಸಿಗೆ ಹೋಲಿಸಿದರೆ, ಕಡಿಮೆ ಸ್ಥಳದಲ್ಲಿ ಹಾಗೂ ಕಡಿಮೆ ಅವಧಿಯಲ್ಲಿ ಹೆಚ್ಚು ಆದಾಯ ಪಡೆಯಬಹುದಾದ ಕೃಷಿಯಾಗಿದೆ”
ನಮಸ್ತೆ ಅಚ್ಚಯ್ಯ ಅವರೇ, ಕಾಫಿಯಲ್ಲಿ ನಿಮ್ಮ ಕುಟುಂಬದ ಇತಿಹಾಸದ ಬಗ್ಗೆ ನಮಗೆ ತಿಳಿಸಿ ಮತ್ತು ಕಾಫಿ ಕೃಷಿಯಲ್ಲಿ ನಿಮ್ಮ ವೃತ್ತಿಯನ್ನು ಮೀಸಲಿಡಬೇಕೆಂದು ನೀವು ಯಾವಾಗ ನಿರ್ಧರಿಸಿದ್ದೀರಿ?
ನಮ್ಮದು ಒಂದು ಕೃಷಿ ಕುಟುಂಬವಾಗಿದ್ದು. ನನ್ನ ಅಜ್ಜ ಕುಪ್ಪಂಡ ಅಚ್ಚಯ್ಯ ಹಾಗೂ ನನ್ನ ತಂದೆಯವರಾದ ಕುಪ್ಪಂಡ ಚಿನ್ನಪ್ಪ ತಮ್ಮ ಜೀವನವನ್ನು ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು. ಇವರನ್ನು ನೋಡಿ ಬೆಳೆದ ನಾನು ಕೂಡ ಕೃಷಿಯಲ್ಲಿ ಆಸಕ್ತನಾದೆ. ಆದರಿಂದ ನಾನು ನನ್ನ ಪ್ರಾರಂಭಿಕ ವಿದ್ಯಾಭ್ಯಾಸದ ನಂತರ ಪದವಿ ವ್ಯಾಸಂಗಕ್ಕಾಗಿ ಬೆಂಗಳೂರಿನ ಹೆಬ್ಬಾಳದ ಕೃಷಿ ವಿಶ್ವವಿದ್ಯಾನಿಲಯದಲ್ಲಿ ಬಿಎಸ್ಸಿ ಅಗ್ರಿಕಲ್ಚರ್ ಪದವಿಯನ್ನು ಪಡೆದು ನಂತರ. ಉನ್ನತ ವಿದ್ಯಾಭ್ಯಾಸಕ್ಕಾಗಿ ಆಸ್ಟ್ರೇಲಿಯಾದ ಮೆಲ್ಬೋರ್ನ್ ನಲ್ಲಿರುವ ಮೊನಾಶ್ ಯುನಿವರ್ಸಿಟಿ(Monash University Melbourne)ಯಲ್ಲಿ ಮಾಸ್ಟರ್ ಇನ್ ಅಗ್ರಿ ಬಿಜಿನೆಸ್ ಕಲಿತೆ. ಅದೇ ಸಂದರ್ಭದಲ್ಲಿ ನಾನು ಪಾರ್ಟ್ ಟೈಮ್ ಆಗಿ ಕೃಷಿಗೆ ಸಂಬಂಧಿಸಿದ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಹೊರದೇಶದಲ್ಲಿ ಬೇರೆ ಯಾವುದೋ ಖಾಸಗಿ ಸಂಸ್ಥೆಗೆ ಕೆಲಸ ಮಾಡುವ ಬದಲು ಸ್ವಂತವಾದ ಹುಟ್ಟೂರಿನಲ್ಲಿ ಕುಟುಂಬದೊಂದಿಗೆ ಕೃಷಿಯಲ್ಲಿ ತೊಡಗಿ ಸ್ವಂತಿಕೆಯಿಂದ ಬದುಕಬೇಕೆಂಬ ಹಂಬಲವಿತ್ತು. ಆದ್ದರಿಂದ ನಾನು 2001 ರಲ್ಲಿ ನನ್ನ ಹುಟ್ಟೂರಿಗೆ ಮರಳಿದೆ. ಅಲ್ಲಿ ನನ್ನ ತಂದೆಯವರೊಂದಿಗೆ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಕೃಷಿಯನ್ನು ಕಲಿಯಲು ಪ್ರಾರಂಭಿಸಿದೆ. ಆದರೆ ನಾನು ಕಲಿತ ತಿಯರೀ ಆಧಾರಿತ ವಿದ್ಯಾಭ್ಯಾಸದ ಕೃಷಿಗೂ ನನ್ನ ತಂದೆಯವರು ಮಾಡುತ್ತಿದ್ದ ಪ್ರಾಕ್ಟಿಕಲ್ ಕೃಷಿಗೂ ಎಷ್ಟು ವ್ಯತ್ಯಾಸವಿದೆ ಎಂದು ತಿಳಿದೆ. ನಾನು ಕಲಿತ ತಿಯರೀ ಗಿಂತ ನನ್ನ ತಂದೆ ಚಿನ್ನಪ್ಪನವರಿಂದ ಕಲಿತ ಪ್ರಾಕ್ಟಿಕಲ್ ಜ್ಞಾನ ಹೆಚ್ಚಿದೆ. ಪ್ರಸ್ತುತ ಕಳೆದ 23 ವರ್ಷಗಳಿಂದ ನಾನು ನನ್ನ ಜೀವನವನ್ನು ಸಂಪೂರ್ಣವಾಗಿ ಕಾಫಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದೇನೆ.
ನೀವು ಕಾಫಿ ಕೃಷಿಯೊಂದಿಗಿನ ಆದಾಯದಲ್ಲಿ ಅನುಸರಿಸಿದ ನೂತನ ವಿಧಾನಗಳು ಯಾವುವು?
ನಾನು ಕಾಫಿ ಕೃಷಿ ಕ್ಷೇತ್ರದಲ್ಲಿ ಬರುವ ಸಂದರ್ಭದಲ್ಲಿ ನಮ್ಮ ಎಸ್ಟೇಟ್ ನನ್ನ ಅಜ್ಜನವರ ಹಾಗೂ ತಂದೆಯವರ ಶ್ರಮದಿಂದ ಒಂದು ಸುಸಜ್ಜಿತ ಕಾಫಿ ಎಸ್ಟೇಟ್ ಆಗಿತ್ತು. ಆದರೆ ಆದಾಯ ಮಟ್ಟ ಕಡಿಮೆ ಇತ್ತು. ಕಾಫಿ ಬೆಲೆ ಸರಿ ಸುಮಾರರು ಒಂದು ಚೀಲಕ್ಕೆ 475 ರಿಂದ 600 ರುಪಾಯಿಗಳಸ್ಟಿತ್ತು. ಅಲ್ಲದೆ ಕಾಫಿ ಕೃಷಿಯಲ್ಲಿನ ಆದಾಯ ವರ್ಷದಲ್ಲಿ ಒಮ್ಮೆ ಮಾತ್ರ ಬರುವುದು ಹಾಗೂ ಉಳಿದ ತಿಂಗಳುಗಳು ಕಾಫಿ ಕೃಷಿಕರಿಗೆ ಯಾವುದೇ ಆದಾಯ ಬರುವುದಿಲ್ಲ. ಇದನ್ನು ಗಮನಿಸಿ ಕಾಫಿ ಕೃಷಿಯೊಂದಿಗೆ ಕಾಳುಮೆಣಸು, ಅಡಿಕೆ, ಅಂಥೋರಿಯಂ, ಲಿಚ್ಚಿ ಮುಂತಾದ ಹೂ, ಹಣ್ಣುಗಳ ಕೃಷಿಯನ್ನು ಪ್ರಾರಂಭ ಮಾಡಿ, ವರ್ಷದ ಎಲ್ಲಾ ತಿಂಗಳುಗಳಲ್ಲಿ ಕೃಷಿಯಿಂದ ಆದಾಯವನ್ನು ತರುವಲ್ಲಿ ಪ್ರಯತ್ನ ಪಡುತ್ತಿದ್ದೇವೆ.
ಅಂಥೋರಿಯಂ: ಪಾಲಿಬೆಟ್ಟದಲ್ಲಿ ಅಂಥೋರಿಯಂ 2 ಏಕರೆಯಷ್ಟು ಹಾಗೂ ಬಿಟ್ಟಂಗಾಲದಲ್ಲಿ ಲಿಚ್ಚಿ, ಅಡಿಕೆ ತೋಟವಿದೆ. ಅಂಥೋರಿಯಂಗೆ ತುಂಬಾ ಬೇಡಿಕೆಯುದ್ದು, ಮದುವೆ ಮುಂತಾದ ಸಮಾರಂಭಗಳಿಗೆ ತುಂಬಾ ಉಪಯೋಗವಾಗುತ್ತದೆ, ಮೊದಲು ಮುಂಬೈಗೆ ರಫ್ತು ಮಾಡಲಾಗುತ್ತಿತ್ತು. ಈಗ ಬೆಂಗಳೂರಿನ ವರೆಗೆ ತಲುಪಿಸಲಾಗುತ್ತಿದೆ. ಅಂಥೋರಿಯಂ ಒಂದು ಒಳ್ಳೆಯ ಆದಾಯದ ಮೂಲವಾಗಿದ್ದು, ಕಾಫೀ ಹಾಗೂ ಕರಿಮೆಣಸಿಗೆ ಹೋಲಿಸಿದರೆ, ಕಡಿಮೆ ಸ್ಥಳದಲ್ಲಿ ಹಾಗೂ ಕಡಿಮೆ ಅವಧಿಯಲ್ಲಿ ಹೆಚ್ಚು ಆದಾಯ ಪಡೆಯಬಹುದಾದ ಕೃಷಿಯಾಗಿದೆ. ಅಂಥೋರಿಯಂನ್ನು ವಾರದಲ್ಲಿ ಒಮ್ಮೆ ಹೂ ಬರುವಂತಹ ಗಿಡಗಳು ಹಾಗೂ ತಿಂಗಳಿಗೆ ಒಮ್ಮೆ ಹೂ ಬಿಡುವಂತಹ ತಳಿಗಳಿವೆ. ಇದರಿಂದ ವಾರದಲ್ಲಿ ಅಥವಾ ತಿಂಗಳಿಗೆ ಆದಾಯವನ್ನು ಪಡೆಯಲು ಸಹಕಾರಿಯಾಗಿದೆ. ಆದರೆ ಕಾಫೀ ಅಥವಾ ಕರಿಮೆಣಸಿನ ಆದಾಯ ವರ್ಷಕ್ಕೆ ಒಂದು ಬಾರಿ ಮಾತ್ರ ದೊರಕುವುದು, ಜೊತೆಗೆ ಫಸಲು ಹೆಚ್ಚು ಬರುವುದೇ, ಕಮ್ಮಿ ಬರುವುದೇ ಎನ್ನುವುದನ್ನು ತಿಳಿಯಲು ಸುಮಾರು ಒಂದು ವರ್ಷಗಳ ಕಾಲ ಕಾಯಬೇಕಾದ ಪರಿಸ್ಥತಿಯಿದೆ. ಅದಲ್ಲದೆ ಅದನ್ನು ಮಾರುವ ಸಂದರ್ಭದಲ್ಲಿ ಎಷ್ಟು ಲಾಭ ಬರುತ್ತದೆ ಎಂದು ಮೊದಲೇ ಅಂದಾಜಿಸಲು ಕೂಡಾ ಸಾಧ್ಯವಾಗುವುದಿಲ್ಲ. ಆದರೆ ನಾವು ಹಾಕುವ ಬಂಡವಾಳವನ್ನು (Investment) ಕಡಿಮೆ ಮಾಡಲು ಸಾಧ್ಯವಿಲ್ಲ.
ಲಿಚ್ಚಿ ಹಣ್ಣು: ಹಣ್ಣಿನ ಕೃಷಿಗೆ ಸಂಬಂಧಪಟ್ಟಂತೆ ಹೇಳಾಬೇಕಾದರೆ, ನಮ್ಮ ತೋಟದಲ್ಲಿ ಲಿಚ್ಚಿ ಹಣ್ಣಿನ ಕೃಷಿಗೆ ಹೆಚ್ಚಿನ ಗಮನವನ್ನು ನೀಡುತ್ತಿದ್ದೇನೆ. ಆದರೆ ಇಲ್ಲಿನ ಸವಾಲೆಂದರೆ ಅದು ಲಿಚ್ಚಿ ಹಣ್ಣನ್ನು ರಕ್ಷಣೆಮಾಡುವುದು. ಲಿಚ್ಚಿ ಹಣ್ಣು ಬೆಳೆಯುವ ಸಂದರ್ಭದಲ್ಲಿ ಅದನ್ನು ತಿನ್ನಲು ಪಕ್ಷಿಗಳು, ಬಾವಲಿಗಳು, ಇಲಿ, ಹಾಗೂ ಕೋತಿಗಳು ಬರುತ್ತಿದೆ. ಇವುಗಳಿಂದ ಲಿಚ್ಚಿಯನ್ನು ಕಾಪಾಡುವುದು ತುಂಬಾ ಸಾಹಸದ ವಿಷಯವಾಗಿದೆ. ಆದರಿಂದ ಅದರ ರಕ್ಷಣೆಗೆ ಬಲೆ, ಚೀಲಗಳನ್ನು ಬಳಸಬೇಕು. ಆದರೆ ಲಿಚ್ಚಿನ ಹಣ್ಣಿಗೆ ಹೆಚ್ಚಿನ ಬೇಡಿಕೆಯಿದ್ದು ತುಂಬಾ ಆದಾಯ ಬರುವುದು. ಆದರಿಂದ ಮುಂದಿನ ದಿನಗಳಲ್ಲಿ ಲಿಚ್ಚಿ ಹಣ್ಣಿನ ತೋಟವನ್ನು ಹೆಚ್ಚಿಸಲು ಯೋಜನೆಯನ್ನು ರೂಪಿಸಲಾಗಿದೆ.
ಜೇನು ಸಾಕಾಣಿಕೆ: ಸಣ್ಣ ಮಟ್ಟದಲ್ಲಿ ಜೇನು ಸಾಕಾಣಿಕೆ ಮಾಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಹೆಚ್ಚಾಗಿ ಮಾಡುವ ಯೋಜನೆಯಿದೆ.
ಬಿದಿರು ಕೃಷಿ: ಅಲ್ಲದೆ ಬಿದಿರು ಕೃಷಿ ಮಾಡುತ್ತಿದ್ದೇವೆ. ಏಕೆಂದರೆ ನಮ್ಮ ತೋಟದಲ್ಲಿ ಕೆಲವು ಭಾಗ ಕಲ್ಲಿನ ಪ್ರದೇಶವಿದೆ. ಆ ಜಾಗದಲ್ಲಿ ಬೇರೆ ಯಾವುದೇ ಬೆಳೆಯನ್ನು ಬೆಳೆಸಲು ಸಾಧ್ಯವಿಲ್ಲ. ಆ ಕಾರಣ ಅಲ್ಲಿ ಬಿದಿರನ್ನು ಬೆಳೆಸುತ್ತಿದ್ದು, ಅದನ್ನು ಪೇಪರ್, ಅಗರಬತ್ತಿ, ಮುಂತಾದವುಗಳನ್ನು ತಯಾರಿಸಲು ಬೇಡಿಕೆಯಿರುವ ಕಾರಣ ಬಿದಿರು ಕೃಷಿ ಮುಂದಿನ ದಿನಗಳಲ್ಲಿ ನಮ್ಮ ಆರ್ಥಿಕ ಸ್ಥತಿ ಉತ್ತಮಗೊಳ್ಳಲು ಸಹಕಾರಿಯಾಗಬಹುದು ಎಂಬ ಭರವಸೆಯಿದೆ.
ನಮ್ಮ ತೋಟವು ಕಾಫಿ ಕೃಷಿಯನ್ನು ಮಾಡುವ ಮೊದಲು ನಮ್ಮ ತೋಟದಲ್ಲಿ ಪೂರ್ತಿಯಾಗಿ ಕೊಡಗಿನ ಕಿತ್ತಳೆ (Coorg orange, also called Coorg mandarin) ಬೆಳೆಸಲಾಗುತ್ತಿತ್ತು. ನಂತರ ಕಾಫಿ ಬಳಿಕ ಕರಿಮೆಣಸು ಬೆಳೆಸಲಾಯಿತು. ಈ ರೀತಿ ನಾವು ಮಾಡುವ ಕೃಷಿಯಲ್ಲಿ ಕೂಡಾ ಬದಲಾವಣೆ ಆಗುತ್ತಾ ಬಂದಿದೆ. ಅಲ್ಲದೆ ಅದು ಅನಿವಾರ್ಯವೂ ಆಗುತ್ತಿದೆ. ಕಾರಣ ಕರಿಮೆಣಸಿನ ಆದಾಯ ಮೊದಲಿನಷ್ಟು ದೊರಕುತ್ತಿಲ್ಲ. ಒಂದು ಕರಿಮೆಣಸಿನ ಗಿಡ ತನ್ನ 25 ವರ್ಷದ ನಂತರ ಫಸಲನ್ನು ಕೊಡಲು ಕಡಿಮೆ ಮಾಡಲು ಪ್ರಾರಂಭಿಸುತ್ತದೆ. ಮೊದಲು ಕರಿಮೆಣಸು ಹೆಚ್ಚು ಫಸಲು ಬರುತ್ತಿದ್ದ ಸಂದರ್ಭ ಅದರ ಬೆಲೆ 60 ರುಪಾಯಿಗಳಿತ್ತು. ಆದರೆ ಈಗ ಬೆಲೆ 600 ರೂಪಾಯಿಗಳ ಆಸು ಪಾಸಿನಲ್ಲಿದೆ ಆದರೆ ಫಸಲು ಕಡಿಮೆ ಆಗಿದೆ.
ಭತ್ತದ ಕೃಷಿ ಸದ್ಯದ ಮಟ್ಟಿಗೆ ನಷ್ಟದಲ್ಲಿದೆ. ನಾನು ಯಂತ್ರೋಪಕರಣಗಳನ್ನು ಬಳಸಿ ಭತ್ತದ ಬೇಸಾಯವನ್ನು ಮಾಡಲು ಪ್ರಯೋಗವನ್ನು ಮಾಡಿದೆ, ಆದರೆ ಅದು ನನಗೆ ನಷ್ಟವಾಗಿ ಪರಿಣಮಿಸಿದೆ. ಅಲ್ಲದೆ ಕಾರ್ಮಿಕರ ಕೊರತೆಯೂ ಇದೆ.
ನಿಮ್ಮ ತೋಟದಲ್ಲಿ ಪ್ರಸ್ತುತ ನೀವು ಎಷ್ಟು ಕಾಫಿ ಗಿಡಗಳನ್ನು ಹೊಂದಿದ್ದೀರಿ? ಮತ್ತು ನೀವು ಯಾವ ರೀತಿಯ ತಳಿಗಳನ್ನು ಬೆಳೆಸುತ್ತಿದ್ದಾರಾ?
ನಮ್ಮ ತೋಟದಲ್ಲಿ ರೋಬೋಸ್ಟಾ ಕಾಫಿ ಗಿಡ 75 %ರಷ್ಟು ಹಾಗೂ 15% ಅರೇಬಿಕಾ ಕಾಫಿ ಗಿಡಗಳಿವೆ. ರೋಬೋಸ್ಟಾ ಕಾಫಿ ಗಿಡದ ಬೀಜಕ್ಕೆ ಇಂದಿನ ದಿನಮಾನಗಳಲ್ಲಿ ಹೆಚ್ಚಿನ ಬೆಲೆ ದೊರೆಯುತ್ತಿದೆ. ಒಂದು ಕಾಫಿ ಗಿಡ ಒಳ್ಳೆಯ ಫಸಲನ್ನು ಕೊಡಲು ಸುಮಾರು 15 ವರ್ಷಗಳ ಕಾಲ ಸಮಯಾವಕಾಶ ತೆಗೆದುಕೊಳ್ಳುತ್ತದೆ ಎಂಬುವುದು ನಮ್ಮ ಅನುಭವಾವಾಗಿದೆ. ಅಲ್ಲದೆ ಮೊದಲ 7 ವರ್ಷಗಳ ಕಾಲ ಕಾಫಿ ಗಿಡದ ನಿರ್ವಹಣೆಗೆ ಹೆಚ್ಚಿನ ಗಮನ ಕೊಡಬೇಕು. ಜೊತೆಗೆ 15 ವರ್ಷಗಳ ಮೊದಲ ಫಸಲುಗಳು ಕನಿಷ್ಠ ಫಸಲನ್ನು ಕೊಡುತ್ತದೆ.
ಒಂದು ಏಕರೆಗೆ 9/9 ಅಥವಾ 10/10 ಅಡಿ ಅಂತರದಲ್ಲಿ ಸರಿ ಸುಮಾರು 500 ಕಾಫಿ ಗಿಡಗಳನ್ನು ನಾಟಿ ಮಾಡಬಹುದಾಗಿದೆ. ನಂತರ ಕಾಫಿ ಗಿಡಕ್ಕೆ ಸುಮಾರು 70 ವರ್ಷಗಳಾದಾಗ ಅದರ ಫಸಲು ಕಡಿಮೆ ಆಗುತ್ತದೆ. ಆ ಸಂದರ್ಭ ಒಬ್ಬ ಕಾಫಿ ಕೃಷಿಕನಿಗೆ ತುಂಬಾ ಗೊಂದಲ ಬರುವ ಸಮಯ, ಯಾಕೆಂದರೆ ಆ ವಯಸ್ಸಾದ ಗಿಡವನ್ನು ತೆಗೆದು ಹೊಸ ಗಿಡವನ್ನು ನೆಡಬೇಕು. ಅದಕ್ಕೆ ಇರುವ ಮೊದಲ ಮಾರ್ಗವೇನೆಂದರೆ ವಯಸ್ಸಾದ ಎಲ್ಲಾ ಗಿಡಗಳನ್ನು ಒಮ್ಮೆಲೆ ತೆಗೆದು ಹೊಸ ಗಿಡವನ್ನು ನೆಡುವುದು. ಆಗ ಒಳ್ಳೆಯ ಕಾಫಿ ಫಸಲು ಪಡೆಯಲು ಸುಮಾರು 15 ವರ್ಷಗಳ ಕಾಲ ಕಾಯಬೇಕು. ಇದರಿಂದ ಕಾಫಿ ಫಸಲು ಕಡಿಮೆಯಾಗಿ ಆದಾಯವು ಕಡಿಮೆ ಯಾಗುವುದು. ಎರಡನೇಯ ಮಾರ್ಗವೆಂದರೆ ಒಂದೊಂದಾಗೆ ವರ್ಷಕ್ಕೆ ಕೆಲವು ವಯಸ್ಸಾದ ಕಾಫಿ ಗಿಡಗಳನ್ನು ತೆಗೆದು ಮರು ನಾಟಿ ಮಾಡುವುದು ಇದರಿಂದಲೂ ಕಾಫಿ ಫಸಲು ಹಾಗೂ ಆದಾಯದಲ್ಲಿ ವ್ಯತ್ಯಾಸವಾಗುತ್ತದೆ.
ಅಲ್ಲದೆ ಇದೀಗ ರೋಬೋಸ್ಟಾ ಗಿಡಗಳಿಗೆ ಕಟ್ಟಿ ಹುಳದ ಆಕ್ರಮಣ ವಾಗುತ್ತಿದ್ದು. ಅದನ್ನು ತಡೆಗಟ್ಟಲು ಸೂಕ್ತವಾದ ಪರಿಹಾರದ ಕ್ರಮವಿಲ್ಲದೆ ಕಷ್ಟವಾಗುತ್ತಿದೆ. ಜೊತೆಗೆ ಭಾರತದಲ್ಲಿ ವಿಶೇಷವಾಗಿ ಕೊಡಗಿನಲ್ಲಿ ಕಾಫೀ ಕೃಷಿಯನ್ನು ನೈಸರ್ಗಿಕವಾಗಿ ಪರ್ಯಾವರಣ ಸ್ನೇಹಿಯಾಗಿ ಮಾಡುವುದರಿಂದ ವನ್ಯಪ್ರಾಣಿ ಆಕ್ರಮವನ್ನೂ ಸಹ ಎದುರಿಸಬೇಕಾಗಿದೆ. ಅದರಲ್ಲಿ ಕೋತಿ, ಕಬ್ಬೆಕ್ಕು, ಆನೆಗಳು ಕಾಫಿಯನ್ನು ತಿಂದು ಉಳಿದ ಕಾಫಿಯನ್ನು ನಾವು ಕೊಯ್ಲು ಮಾಡುವ ಪರಿಸ್ಥಿತಿ ಇದೆ.
ಆದರೆ ವಿಶ್ವದ ಉಳಿದ ಪ್ರದೇಶಗಳಲ್ಲಿ ಕಾಫಿ ಕೃಷಿಯನ್ನು ಮರಗಳಿಲ್ಲಿದೆ ಬಯಲು ಪ್ರದೇಶದಲ್ಲಿ ಮಾಡುತ್ತಾರೆ. ಉದಾಹರಣೆಗೆ ಬ್ರೆಝಿಲ್ ನಲ್ಲಿ ಮರಗಳು, ಕಾಡು ಇರುವುದಿಲ್ಲ. ಆದರಿಂದ ವನ್ಯಪ್ರಾಣಿಗಳು, ಪಕ್ಷಿಗಳಿಗೆ ಬದುಕುವ ವಾತಾವರಣವಿಲ್ಲದೆ. ಡೆಡ್ ಲ್ಯಾಂಡ್ ರೀತಿ ಪೂರ್ಣ ನಿಶಬ್ಧವಾಗಿರುತ್ತದೆ. ಆದರೆ ನಮ್ಮ ಭಾರತದಲ್ಲಿ ಹಾಗೆ ಇಲ್ಲ. ಪಕ್ಷಿಗಳು, ಕೀಟಗಳು, ಪ್ರಾಣಿಗಳ ಶಬ್ದವೂ ಹಗಲೂ ರಾತ್ರಿ ಯಾವಾಗಲೂ ಕೇಳುತ್ತಿರುತ್ತದೆ.
ಕಾಫಿ ತೋಟದಲ್ಲಿ ನಿಮ್ಮ ದಿನಚರಿ ತಿಳಿಸುವಿರಾ?
ಬೆಳಿಗೆ 7.15ಕ್ಕೆ ಎಲ್ಲಾ ಕಾರ್ಮಿಕರಿಗೆ ಕಪಾತ್, ಸ್ಪ್ರೇ ಮುಂತಾದಂತಹ ಕಾಫಿತೊಟಗಳಲ್ಲಿನ ಅಗತ್ಯ ಕೆಲಸಗಳನ್ನು ಹಂಚಲಾಗುವುದು. ಬೆಳ್ಳಿಗೆ 9.30 ರಿಂದ 9.45 ರ ವರೆಗೆ ಟೀ ಬ್ರೇಕ್, ಮಧ್ಯಾಹ್ನ 12 ಗಂಟೆಯಿಂದ 12.45 ರವರಗೆ ಊಟದ ಸಮಯ. ನಂತರ ಒಂದು ಗಂಟೆ ವಿಶ್ರಾಂತಿ ಸಮಯ. ಸಂಜೆ 4 ಗಂಟೆಗೆ ಕೆಲಸದ ಮುಕ್ತಾಯ ಸಮಯವಾಗಿರುತ್ತದೆ. ಒಟ್ಟು 8 ಗಂಟೆಗಳ ಕೆಲಸ. 15 ನಿಮಿಷ ಟೀ ಬ್ರೇಕ್ 45 ನಿಮಿಷ ಊಟಕ್ಕೆ, 1ಗಂಟೆ ವಿಶ್ರಾಂತಿ ಪ್ರತೀ ಭಾನುವಾರ ವಾರದ ರಜೆಯಾಗಿರುತ್ತದೆ. ನಿಜವಾಗಲೂ ಕಾಫೀ ಕೃಷಿ ಬಿಡುವಿಲ್ಲದ ಕೃಷಿಯಾಗಿದೆ. ಬೆಳ್ಳಿಗೆ 7.30 ಗೆ ತೋಟದ ಒಳಗೆ ಹೋದರೆ ಸಂಜೆ 4.00 ರ ವರೆಗೂ ಅಲ್ಲಿಯೇ ದುಡಿಯಬೇಕು. ಅಲ್ಲದೆ ತೋಟದ ಕಾರ್ಮಿಕರೊಂದಿಗೆ ನಾವು ಅವರನ್ನು ಗಮನಿಸುತ್ತಾ, ಮಾರ್ಗದರ್ಶನ ನೀಡುತ್ತಾ ಜೊತೆಗಿರಬೇಕು. ಕೆಲವೊಮ್ಮೆ ದಿನವಿಡೀ ಅವರನ್ನು ಗಮನಿಸುತ್ತಾ ಇರುವಾಗ ಅವರಿಗೂ ಒತ್ತಡ ಆಗದ ರೀತಿ ನಾನು ದೂರದಿಂದ ತೋಟವನ್ನು ಸುತ್ತಿ ನೋಡಿ ಬರುತ್ತೇನೆ.
ನೀವು ನಿಮ್ಮ ಕಾಫಿಯನ್ನು ನಿಮ್ಮದೇ ಆದ ರೀತಿಯಲ್ಲಿ ಸಂಸ್ಕರಿಸುತ್ತಿದ್ದಿರಾ?
ಕಾಫಿ ಚೆರಿಯನ್ನು ಪಲ್ಪಿಂಗ್ ಮಾಡುತ್ತೇವೆ. ಪಲ್ಪಿಂಗ್ ಗೆ ಬಳಸುವ ನೀರಿನ್ನು ಮರುಬಳಕೆ ಮಾಡುವ ವಿಧಾನವನ್ನು ಅನುಸರಿಸುತ್ತಿದ್ದೇವೆ.
ಕಾಫಿ ಕೃಷಿಯಲ್ಲಿ ಯಾಂತ್ರಿಕರಣ ಅಳವಡಿಕೆ ಕುರಿತು ನಿಮ್ಮ ಅನಿಸಿಕೆ ತಿಳಿಸಿ?
ಕಾಫಿ ಕೃಷಿಗೆ ಹೆಚ್ಚು ಆಧುನಿಕ ತಂತ್ರಜ್ಞಾನದ ಯಂತ್ರೋಪಕರಣಗಳನ್ನು ತಯಾರಿಸಬೇಕಾಗಿದೆ. ಅದರ ಬಗ್ಗೆ ಹೆಚ್ಚಿನ ಅನ್ವೇಷಣೆಗಳು ನಡೆಯಬೇಕಾಗಿದೆ. ಪ್ರಮುಖವಾಗಿ ಕಾಫಿ ಬೀಜವನ್ನು ಕೀಳಲು ಹೊರದೇಶದಲ್ಲಿ ಯಂತ್ರಗಳನ್ನು ಬಳಸುತ್ತಾರೆ. ಆದರೆ ಕೊಡಗಿನಂತಹ ಬೆಟ್ಟಗುಡ್ಡಗಳ ನಡುವೆ ಕೆಲಸಮಾಡುವಂತರ ಯಂತ್ರೋಪಕರಣಗಳನ್ನು ಕಂಡುಹಿಡಿಯಬೇಕಾಗಿದೆ. ಅದರ ಅನಿವಾರ್ಯತೆಯೂ ಹೆಚ್ಚಿದೆ.
ಕಾಫಿ ಕೃಷಿಯಲ್ಲಿ ರಸಗೊಬ್ಬರಗಳನ್ನು ಬಳಸುವ ಬಗ್ಗೆ ನಿಮ್ಮ ಅಭಿಪ್ರಾಯಗಳು?
ಉಳಿದ ಕೃಷಿಗಳಾದ ಹಣ್ಣು, ಹೂ, ತರಕಾರಿಗಳಿಗೆ ಬಳಸುವ ರಾಸಾಯನಿಕ ಗೊಬ್ಬರದ ಪ್ರಮಾಣವನ್ನು ನೋಡಿದಾಗ. ಸಾಮಾನ್ಯವಾಗಿ ಕಾಫಿ ಹಾಗೂ ಕರಿಮೆಣಸು ಕೃಷಿಯಲ್ಲಿ ರಾಸಾಯನಿಕ ಗೊಬ್ಬರವನ್ನು ಅತೀ ಕಡಿಮೆ ಪ್ರಮಾಣದಲ್ಲಿ ಬಳಸಲಾಗುತ್ತದೆ.
ನೀವು ಬೆಳೆದಂತಹ ಕಾಫಿಯನ್ನು ಯಾವ ರೀತಿ ಮಾರಾಟ ಮಾಡುತ್ತಿದ್ದೀರಿ?
ನೇರವಾಗಿ ಕಾಫಿ ಕ್ಯೂರಿಂಗ್ ವರ್ಕ್ಸ್‌ಗೆ ಮಾರಾಟ ಮಾಡುತ್ತೇವೆ. Coorg Biota ದಂತಹ FPO((Farmers Producer Organisation) ಮೂಲಕ ಮಾರ್ಕೆಂಟಿಂಗ್ ಮಾಡಿದರೆ ತುಂಬಾ ಉತ್ತಮವಾಗಿದೆ. ಇದರಿಂದ ಕೃಷಿಕರಿಗೆ ಒತ್ತಡ ಕಡಿಮೆಯಾಗಿ ತೊಂದರೆಗಳು ಕಡಿಮೆ ಆಗುತ್ತದೆ. ಇದರಿಂದ FPO ಗಳಿಗೆ ಹೆಚ್ಚಿನ ಕೃಷಿಕರು ಸೇರುವುದು ಒಳ್ಳೆಯದು ಎಂಬುವುದು ನನ್ನ ಅನಿಸಿಕೆಯಾಗಿದೆ.
ಯಾವ ಯಾವ ರುಚಿಯ ಕಾಫಿ ಇದೆ ಎಂಬುವುದು ಬೆಳೆಗಾರರಿಗೆ ತಿಳಿದಿರುವುದು ಅವಶ್ಯಕವೇ?
ನಮ್ಮ ಕಾಫಿ ಕೃಷಿಕರಿಗೆ ತಾವು ಬೆಳೆಯುವ ಕಾಫೀಯ ಗುಣಮಟ್ಟ, ಅದರ ಟೇಸ್ಟ್ ಇದರ ಬಗ್ಗೆ ಯಾವುದೇ ಗಮನವಸಹಿಸುತ್ತಿಲ್ಲ, ನಾವು ನಮ್ಮ ಕಾಫಿಯನ್ನು ಪ್ರತೀ ವರ್ಷ ಪ್ರಯೋಗಲಯಗಳಲ್ಲಿ ಪರೀಕ್ಷೆಮಾಡಿ ಅದರ ರಿಪೋರ್ಟ್ ಅನ್ನು ಪಡೆದಾಗ, ನಮ್ಮ ಕಾಫೀಯ ಗುಣಮಟ್ಟ, ಅದರ ಟೇಸ್ಟ್ ಬಗ್ಗೆ ತಿಳಿದು ಅದನ್ನು ಹೆಚ್ಚಿಸಲು ಪ್ರಯತ್ನಪಡಬಹುದು. ಅಲ್ಲದೆ ಇದರಿಂದ ನಮ್ಮ ತೋಟದ ಕಾಫಿಗೆ ಉತ್ತಮ ಬೇಡಿಕೆ ದೊರಕುತ್ತದೆ.
ಭಾರತದ ಹೆಚ್ಚು ಜನ ಬಳಸುವ ಕಾಫಿ ಪುಡಿ ಚಿಕೋರಿಯನ್ನು ಬೆರೆಸುವುದರಿಂದ ಕಾಫಿಯ ನಿಜವಾದ ರುಚಿಯನ್ನು ಜನರಿಗೆ ತಿಳಿದಿಲ್ಲ. ಅವರು ಚಿಕೋರಿ ಮಿಶ್ರಿತವಾದ ಕಾಫಿಯನ್ನೇ ಇಷ್ಟಪಡುತ್ತಾರೆ. ಅದರಿಂದ ಜನರನ್ನು ಬದಲಾಯಿಸಲು ಕಷ್ಟ. ಮೆಲ್ಲಗೆ ಜನರಿಗೆ ನಿಜವಾದ ಪೂರ್ಣ ಕಾಫಿ ರುಚಿಯನ್ನು ತಿಳಿಸ ಬೇಕು. ಅದು ಆರೋಗ್ಯಕ್ಕೂ ಒಳ್ಳೇಯದು. ಅದಕ್ಕೆ ನೆಸ್ಟ್ಲೇ ಕಂಪನಿಯವರು ಜಪಾನಿನಲ್ಲಿ ಒಂದು ಪ್ರಯೋಗವನ್ನು ಮಾಡಿದರು. ಅವರು ತಮ್ಮ ಮಕ್ಕಳು ಬೆಳೆದ ಮೇಲೆ ಅವರಿಗೆ ಕಾಫೀ ಕುಡಿಯಲು ಆಸಕ್ತಿ ಹೊಂದಲು ಮಕ್ಕಳು ಸಣ್ಣ ವಯಸ್ಸಿರುವಾಗ ಅವರಿಗೆ ಕಾಫಿಯಿಂದ ತಯಾರಿಸಿದ ಚಾಕಲೇಟನ್ನು ನೀಡಿ ಅಭ್ಯಾಸ ಮಾಡಿಸಿದರು. ನಂತರ ಮಕ್ಕಳು ಬೆಳೆದ ಮೇಲೆ ಕಾಫಿಯನ್ನು ಕುಡಿಯಲು ಇಷ್ಟಪಡತೊಡಗಿದರು.
ಕಾಫಿಯಿಂದ ಇತರೆ ಉತ್ಪನಗಳನ್ನು ಮಾಡುವಲ್ಲಿ ನಿಮ್ಮ ಅಭಿಪ್ರಾಯ?
ಕಾಫಿ ಬೈ ಪ್ರೋಡಕ್ಟ್ಸ್ ಅನ್ನು ಹೆಚ್ಚು ಅನ್ವೇಷನೆ ಮಾಡಬೇಕು. ಪ್ರಸ್ತುತ ಫೇಸ್ ಕ್ರೀಂ, Cosmetics ಮುಂತಾದವುಗಳನ್ನು ಉತ್ಪಾದನೆ ಮಾಡುತ್ತಿದ್ದಾರೆ. ಅದೇ ರೀತಿ ಇನ್ನೂ ಹೆಚ್ಚಿನ ಪದಾರ್ಥಗಳನ್ನು ತಯಾರಿಸಬೇಕು. ಕಾಫಿ ರೋಸ್ಟ್ ಮಾಡಿದ ನಂತರ ವೇಸ್ಟ್‌ನಲ್ಲಿ ಕಾಫಿ ಕಪ್ ಗಳನ್ನು ತಯಾರಿಸುವುದು. ಅಣಬೆ ಬೇಸಾಯಕ್ಕೆ ಕಾಫಿ ಪಲ್ಪ್ ವೇಸ್ಟ್ ಅನ್ನು ಬಳಸುತ್ತಾರೆ. ಕಾಫಿ ಎಸ್ಟೇಟ್‌ನ್ನು ಕಾರ್ಬ್‌ನ್ ಫ್ರೀ ಮಾಡಬೇಕೆಂದು ನನ್ನ ಬಯಕೆಯಾಗಿದೆ. ಕಾರ್ಬ್‌ನ್ ಫೂಟ್ ಪ್ರೀಂಟ್ ಇಲ್ಲದ ರೀತಿ ಮಾಡಬೇಕು. ಕಾಫಿ ಯಲ್ಲಿ ಯಾವುದೇ ಒಂದು ಭಾಗವೂ ಕೂಡ ಉಪಯೋಗಕ್ಕೆ ಬರುವ ರೀತಿ ಇರಬೇಕು ಎಂಬುವುದು ನನ್ನ ಅನಿಸಿಕೆಯಾಗಿದೆ.
ಕಾಫಿ ಕೃಷಿ ಲಾಭದಾಯಕವೋ ಅಥವಾ ನಷ್ಟವೋ ವಿವರಿಸಿ?
ಲಾಭ ಪರವಾಗಿಲ್ಲ. ನಷ್ಟವಿಲ್ಲ. 20 ವರ್ಷದಿಂದ ನೋಡಿದರೆ ಈ ವರ್ಷ ಕಾಫಿಗೆ ಸ್ವಲ್ಪ ಬೆಲೆ ಹೆಚ್ಚಿದೆ.
ಕಾಫಿ ಕೃಷಿಗೆ ಸರಕಾರದಿಂದ ನೀವು ಏನನ್ನು ಅಪೇಕ್ಷಿಸುತ್ತಿರಿ?
ಸರ್ಕಾರಿದಿಂದ ಬೇಡಿಕೆಯೆಂದರೆ ಕಾಫಿ ಕೃಷಿಗೆ ಸಂಬಂಧಿಸಿದ ಪ್ರಯೋಗಗಳು, ಅನ್ವೇಷಣೆಗಳನ್ನು ಮಾಡಿಸಲು ಪ್ರೋತ್ಸಾಹ ನೀಡಬೇಕು. ಹೊಸ ರೀತಿಯ ತಂತ್ರಜ್ಞಾನಗಳು ಕೃಷಿ ಕ್ಷೇತ್ರದಲ್ಲಿ ಬರಲು ಹೆಜ್ಜೆ ಇಡಬೇಕಾಗಿದೆ. ಕಾಫಿ ಕೃಷಿಯನ್ನು ಒಂದು ಉದ್ಯಮವಾಗಿ ಕೊಂಡೊಯ್ಯಲು ಸರಕಾರ ಮನ್ನಣೆ ನೀಡಬೇಕು. ಈ ಕ್ಷೇತ್ರವನ್ನು ನಂಬಿ ಸಾವಿರಾರು ಜನರು ಬದುಕನ್ನು ನಡೆಸುತ್ತಿದ್ದಾರೆ. Dignity of Labor: ಎಲ್ಲಾ ರೀತಿಯ ಉದ್ಯೋಗಗಳನ್ನು ಸಮಾನವಾಗಿ ಗೌರವಿಸಬೇಕು ಮತ್ತು ಯಾವುದೇ ಕೆಲಸವನ್ನು ಇನ್ನೊಂದಕ್ಕಿಂತ ಶ್ರೇಷ್ಠವೆಂದು ಪರಿಗಣಿಸಬಾರದು ಎಂಬ ಕಲ್ಪನೆಯು ಕಾರ್ಮಿಕರ ಘನತೆಯಾಗಿದೆ. ಎಲ್ಲಾ ಕೆಲಸಗಳು, ದೈಹಿಕ ಅಥವಾ ಭೌದ್ಧಿಕವಾಗಿದ್ದರೂ, ಸಮಾನ ಘನತೆ ಮತ್ತು ಗೌರವಕ್ಕೆ ಅರ್ಹವಾಗಿದೆ ಎಂಬುದು ತಾತ್ವಿಕ ನಂಬಿಕೆಯಾಗಿದೆ. ಪ್ರಾಮಾಣಿಕತೆ ಮತ್ತು ಪ್ರಾಮಾಣಿಕತೆಯಿಂದ ಮಾಡುವ ಕೆಲಸಗಳನ್ನು ಮೆಚ್ಚಬೇಕು. ಕೃಷಿ ಕಾರ್ಮಿಕರಿಗೂ Dignity of Labor ದೊರಕಬೇಕು. ಕೃಷಿ ಕೆಲಸ ಮಾಡುವುದು ಅವಮಾನವೆಂದು ತಿಳಿಯಬಾರದು. ಕೃಷಿ ಕಾರ್ಮಿಕರಿಗೂ ಪ್ರಾಮುಖ್ಯತೆಯನ್ನು ನೀಡುವಲ್ಲಿ ಸರಕಾರ ಹೆಜ್ಜೆ ಇಡಬೇಕಾಗಿದೆ.
ಕಾಫಿ ತೋಟಗಳಿಗೆ ಹಿಂಡು ಹಿಂಡಾಗಿ ನುಗ್ಗುವ ಆನೆಗಳು ಶ್ರಮವಹಿಸಿ ಬೆಳೆದ ಬೆಳೆಗಳನ್ನು ತಿಂದು, ತುಳಿದು ಹಾಳು ಮಾಡಿ ಮರಳುತ್ತವೆ. ತೋಟದಲ್ಲಿ ಕೆಲಸ ಮಾಡುವವರ ಮೇಲೆ, ರಸ್ತೆಯಲ್ಲಿ ಓಡಾಡುವವರ ಮೇಲೆ ಆಗಾಗ ದಾಳಿ, ಮಾನವ ಜೀವ ಹಾನಿಯೂ ನಡೆಯುತ್ತಿರುತ್ತದೆ. ನಿರಂತರವಾಗಿ ಬೆಳೆಗಳ ಮೇಲೆ ಹಾನಿಮಾಡುತ್ತಿರುವ ಆನೆಗಳಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ನಿತ್ಯ ಆನೆ ಓಡಿಸುವುದೇ ಕಾಯಕವಾಗಿದೆ. ಕೊಡಗಿನಲ್ಲಿ ಕಾಡಾನೆಗಳ ಹಿಂಡಿನ ಹಾವಳಿ ಹೆಚ್ಚಾಗಿದೆ. ಈ ಬಗ್ಗೆ ಸರ್ಕಾರ ಗಮನಹರಿಸಬೇಕಾಗಿದೆ. ಆನೆಗಳ ಹಾವಳಿ ನಿಯಂತ್ರಣಕ್ಕೆ ಅಗತ್ಯ ಕ್ರಮಕೈಗೊಳ್ಳಬೇಕಾಗಿದೆ.
ಕಾಫಿ ಕೃಷಿ ಹಾಗೂ ಇನ್ನಿತರೆ ವಿಷಯಗಳ ಬಗ್ಗೆ ಹೆಚ್ಚಿನದನ್ನು ಹೇಳ ಬಯಸುವಿರಾ?
ಕಾಫಿ ಕೃಷಿಕರು ಮಾಡುವ ಒಂದು ಅಜಾಗೂರೂಕತೆ ಏನೆಂದರೆ ಅದು, ವರ್ಷದ ಪ್ರಾರಂಭದಿಂದ ಹಿಡಿದು ತೋಟವನ್ನು ನಿರ್ವಾಹಣೆ ಮಾಡುವುದರಲ್ಲಿ, ಕಾಫಿ ಗಿಡಗಳನ್ನು ಆರೈಕೆ ಮಾಡುವುದರಲ್ಲಿ ತೋರುವ ಆಸಕ್ತಿ ಅದನ್ನು ಮಾರಾಟ ಮಾಡಲು, ವ್ಯಾಪಾರ ಮಾಡಲು ತೋರುವುದಿಲ್ಲ. ಕಾಫಿ ಬೇಳೆಯನ್ನು ಒಂದು ಬ್ರಾಂಡ್ ರೀತಿಯಲ್ಲಿ ಮಾರಾಟ ಮಾಡಲು ಪ್ರಯತ್ನಿಸಬೇಕು.
ಕೊಡಗಿನ ಪ್ರಕೃತಿ ಸೌಂದರ್ಯವನ್ನು ಉಳಿಯಲು ಕಾಫಿ ಕೃಷಿ ಕೂಡಾ ಒಂದು ಮುಖ್ಯವಾದ ಕಾರಣವಾಗಿದೆ. ಆದರಿಂದ ಕಾಫಿ ಕೃಷಿಯನ್ನು ಉಳಿಕೊಂಡರೆ ಅದು ಕೊಡಗಿನ ಪರಿಸರವನ್ನು ಉಳಿಸಿಕೊಂಡಂತೆ. ಕಾಡಿನಲ್ಲಿ ನೈಸರ್ಗಿಕವಾಗಿ ಬೆಳೆಯುವ ಮರಗಳನ್ನು ನಾವು ಕಾಫಿ ತೋಟಗಳಲ್ಲಿ ಹೆಚ್ಚುಹೆಚ್ಚು ಬೆಳೆಸಬೇಕು. ಸಿಲ್ವರ್ ಮರಗಳನ್ನು ಬೆಳೆಸುವುದನ್ನು ಕಡಿಮೆ ಮಾಡಬೇಕು. ಸಿಲ್ವರ್ ಮರದಿಂದ ಪರಿಸರಕ್ಕೆ ಹಾನಿಯಾಗುತ್ತಿದೆ.
ಇಂದು ಸಾಂಪ್ರದಾಯಿಕ ಶಕ್ತಿ ಸಂಪನ್ಮೂಲಗಳು ಬಹಳಷ್ಟು ಬರಿದಾಗಿದ್ದು, ಅವುಗಳ ಉತ್ಪಾದನೆ ಮತ್ತು ಬಳಕೆಯು ಬಹಳಷ್ಟು ಪರಿಸರ ಮಾಲಿನ್ಯವನ್ನು ಉಂಟು ಮಾಡಿದೆ. ಮುಂದಿನ ಜಗತ್ತು ಪರಿಸರ ಮಾಲಿನ್ಯದಿಂದ ಮುಕ್ತವಾಗಬೇಕಾದಲ್ಲಿ ಮಾಲಿನ್ಯವನ್ನು ಉಂಟು ಮಾಡದ, ಪುನರ್ ಉತ್ಪಾದಿಸಬಹುದಾದ ಅಸಂಪ್ರದಾಯಿಕ ಶಕ್ತಿ ಸಂಪನ್ಮೂಲಗಳಾದ ಜೈವಿಕ ಅನಿಲ(Bio-gas), ಪವನ ಶಕ್ತಿ(Wind Energy), ಸೌರಶಕ್ತಿ ಅಥವಾ ಸೌರವಿದ್ಯುತ್(Solar Power) ಮುಂತಾದ ಶಕ್ತಿ ಸಂಪನ್ಮೂಲಗಳ ಬಳಕೆಯು ಸಾಮಾಜಿಕ ಮತ್ತು ಆರ್ಥಿಕ ಪ್ರಗತಿ ಹಾಗೂ ಪರಿಸರ ಮತ್ತು ಆರ್ಥಿಕ ಸ್ಥಿರತೆ ಗುರಿಯನ್ನು ಅಂದರೆ ಸುಸ್ಥಿರ ಪರಿಸರವನ್ನು ಸಾಧಿಸುವ ಸಾಧನವಾಗಬೇಕು. ಈ ಕಾರಣಕ್ಕಾಗಿ ಪರಿಸರ ಸ್ನೇಹಿ ಅಸಂಪ್ರದಾಯಿಕ ಶಕ್ತಿ ಸಂಪನ್ಮೂಲಗಳನ್ನು ಬಳಕೆ ಮಾಡುವುದು ಅತ್ಯವಶ್ಯಕವಾಗಿದೆ.
ನಾನು ಕೃಷಿ ಆಧಾರಿತ ವಿಧ್ಯಾಭ್ಯಾಸವನ್ನು ಪಡೆದೆ, ಆಗ ನನ್ನ ಜೊತೆ ಓದಿದವರಲ್ಲಿ ಸುಮಾರು 100 ರಲ್ಲಿ 3 ರಿಂದ 5 ಜನರೂ ಮಾತ್ರ ಕೃಷಿ ಜೀವನವನ್ನು ನಡೆಸುತ್ತಿದ್ದಾರೆ. ಉಳಿದವರು ಕೃಷಿಗೆ ಸಂಬಂಧವಿಲ್ಲದ ಬೇರೆ ಬ್ಯಾಂಕಿಂಗ್, ಐಟಿ ಮುಂತಾದ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಕೃಷಿಯನ್ನು ಅವಲಂಭಿಸಿ ಬದುಕು ಸಾಗಿಸುವವರ ಸಂಖ್ಯೆ ಮುಂದಿನ ದಿನಗಳಲ್ಲಿ ಹೆಚ್ಚಾಗ ಬೇಕಾಗಿರುವುದು ಸುಸೀರ ಪರಿಸರ ಸಮತೋಲನಕ್ಕೆ ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಇಂದಿನ ಪೀಳಿಗೆ ಚಿಂತಿಸುವುದು ಒಳಿತು.
ನಿಮ್ಮ ಕುಟುಂಬದ ಪರಿಚಯವನ್ನು ತಿಳಿಸುವಿರಾ?
ತಂದೆ: ಕುಪ್ಪಂಡ ಚಿನ್ನಪ್ಪ ಕಾಫಿ ಬೆಳೆಗಾರರಾಗಿದ್ದಾರೆ. ತಾಯಿ: ರೋಶಿ. ಪತ್ನಿ: ನಿಶಾ. ಪುತ್ರಿ: ಮಾಯಾ ಹಾಗೂ ಪುತ್ರ: ಅರ್ಜುನ್ , ವ್ಯಾಸಂಗ ನಿರತರಾಗಿದ್ದಾರೆ.
ಆಸಕ್ತ ಕೃಷಿಕರು ನಿಮ್ಮ ಕೃಷಿಯ ಬಗ್ಗೆ ತಿಳಿಯಲು ಹೇಗೆ ಸಂಪರ್ಕಿಸಬಹುದು?
ನಮ್ಮ ಕಾಫಿ ತೋಟದ ಹೆಸರು: ಟ್ಯಾಂಕ್ ಸೈಡ್ ಎಸ್ಟೇಟ್, ಪಾಲಿಬೆಟ್ಟ ಹತ್ತಿರವಿರುವ ಚೆನ್ನಯ್ಯನಕೋಟೆ ಎಂಬ ಗ್ರಾಮದಲ್ಲಿದೆ.
ನಮ್ಮ ಸಂಪರ್ಕ ಸಂಖ್ಯೆ: +91 9448142103