ಬರಿದಾಗುತ್ತಿರುವ ಅನ್ನದ ಬಟ್ಟಲು………ಕೊಡಗಿಗೆ ಭತ್ತದ ಕೃಷಿಯ ಅನಿವಾರ್ಯತೆ

Reading Time: 8 minutes

  ಬರಿದಾಗುತ್ತಿರುವ ಅನ್ನದ ಬಟ್ಟಲು……… 

                           ಕೊಡಗಿಗೆ ಭತ್ತದ ಕೃಷಿಯ ಅನಿವಾರ್ಯತೆ

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

✍️….ಡಾ.ವೀರೇಂದ್ರ ಕುಮಾರ್ ಕೆ.ವಿ. 

ಐ.ಸಿ.ಎ.ಅರ್ – ಕೊಡಗು ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪಲು, ಕೊಡಗು ಜಿಲ್ಲೆ

ಭತ್ತವು ಕೊಡಗು ಜಿಲ್ಲೆಯ ಬಹು ಮುಖ್ಯ ಬೆಳೆ ಮತ್ತು ಅನ್ನವು ಇಲ್ಲಿನ ಜನರ ಬಹುಮುಖ್ಯ ಆಹಾರವಾಗಿದೆ. ಅಧಿಕ ಮಳೆ ಬೀಳುವ ಈ ಪ್ರದೇಶದಲ್ಲಿ ಭತ್ತದ ಬೆಳೆಯನ್ನು ಪರಂಪರಗತವಾಗಿ ಸಾಂಪ್ರದಾಯಿಕವಾಗಿ ಮಡಿಕೇರಿ, ವಿರಾಜಪೇಟೆ ಮತ್ತು ಸೋಮವಾರಪೇಟೆ ತಾಲ್ಲೂಕುಗಳಲ್ಲಿ ಹೆಚ್ಚು ಪ್ರದೇಶದಲ್ಲಿ ಬೆಳೆಸಿಕೊಂಡು ಬರಲಾಗುತ್ತಿತ್ತು. ದಶಕಗಳ ಹಿಂದೆ ಅನ್ನದ ಬಟ್ಟಲು ಎಂದು ಕರೆಯುತ್ತಿದ್ದ ಜಿಲ್ಲೆಯು ದಿನ ಕಳೆದಂತೆ ಹಲಾವರು ಕಾರಣಗಳಿಂದ ಭತ್ತದ ಬೆಳೆಯು ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಂಡು ಭತ್ತ ಬೆಳೆಯುವ ಪ್ರದೇಶವು ಗಣನೀಯವಾಗಿ ಕ್ಷೀಣಿಸುತ್ತಿದೆ. ಕೊಡಗಿನಲ್ಲಿ ಹುತ್ತರಿ ಹಬ್ಬವನ್ನು ಆಚರಿಸಲು ಬೇಕಾಗಿರುವ ಕದರನ್ನು ಸಹ ಭತ್ತವನ್ನು ಬೆಳೆದಿರುವ ಬೇರೆ ರೈತರಿಂದ ತಂದು ಆಚರಿಸುವ ಪರಿಸ್ಥಿತಿ ಇಂದಿನ ದಿನದಲ್ಲಿ ನಾವು ಸಹಜವಾಗಿ ಕಾಣಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ರೈತರು ವಾಣಿಜ್ಯ ಬೆಳೆಗಳನ್ನು ಹೆಚ್ಚಾಗಿ ಬೆಳೆಯಲು ಆಸಕ್ತಿ ಹೊಂದುತ್ತಿದ್ದು ಭತ್ತವನ್ನು ಬೆಳೆಯುವ ಪ್ರದೇಶವು ಕಡಿಮೆಯಾಗುತ್ತಿದ್ದು, ಇಳುವರಿಯಲ್ಲಿ ಕೂಡ ಇಳಿಮುಖವಾಗಿರುವುದು ಕಂಡು ಬಂದಿದೆ.

ಈ ರೀತಿಯಲ್ಲಿ ಪ್ರಮುಖ ಆಹಾರ ಬೆಳೆಯ ಕೃಷಿಯು ಕ್ಷೀಣಿಸುತ್ತಿದ್ದರೂ ಸಹ ಆಹಾರ ಸುರಕ್ಷತೆಯು ನಿರ್ವಿಘ್ನವಾಗಿ ಮುಂದುವರೆದರೆ ದೀರ್ಘಕಾಲದಲ್ಲಿ ಕೃಷಿ ವ್ಯವಸ್ಥೆಯ ಮೇಲೆ ಆಗಬಹುದಾದ ದುಷ್ಪರಿಣಾಮಗಳ ಬಗ್ಗೆ ಚಿಂತನೆ ನಡೆಸುವುದು ಸೂಕ್ತ. ತೀವ್ರವಾದ ಕೂಲಿ ಹಾಳುಗಳ ಸಮಸ್ಯೆ, ಉತ್ತಮವಾದ ಬೆಲೆ ಸಿಗದಿರುವುದು, ವಾತಾವರಣದ ವೈಪರೀತ್ಯ ಮತ್ತು ಕಡಿಮೆ ಪರಿಶ್ರಮದಿಂದ ಬೇರೆ ಬೆಳೆಗಳಲ್ಲಿ ಹೆಚ್ಚಿನ ಇಳುವರಿ, ಆದಾಯ ಮತ್ತು ಉತ್ತಮ ಮಾರುಕಟ್ಟೆ ವ್ಯವಸ್ಥೆ ಇರಿವುದರಿಂದ ಇಂದು ನಾವು ಭತ್ತವನ್ನು ಬೆಳೆಯಲು ಆಸಕ್ತಿಯನ್ನು ತೋರುತ್ತಿಲ್ಲ. ಇಂದು ಭತ್ತ ಬೆಳೆಯುವ ಗದ್ದೆಗಳನ್ನು ಸೈಟುಗಳಾಗಿ ಪರಿವರ್ತನೆ ಮಾಡಿ ಅದರಿಂದ ಬಂದ ಹಣದಿಂದ ಬೇರೆ ಬೇರೆ ವ್ಯಾಪಾರಗಳಲ್ಲಿ ತೋಡಗಿಸಿಕೊಳ್ಳುವುದರಿಂದ ಸ್ಥಳೀಯ ಭತ್ತದ ಉತ್ಪಾದನೆಗೆ ಉತ್ತೇಜನ ದೊರೆಯದೇ, ಬೆಳೆಯ ಪ್ರದೇಶವು ಕುಂಠಿತಗೊಳ್ಳುವುದರಿಂದ ಕೃಷಿಯಿಂದ ಪ್ರಭಾವಿತವಾಗಿರುವ ಇತರೆ ಅನೇಕ ಕ್ಷೇತ್ರಗಳಲ್ಲಿ ಅಸಮತೋಲನವಾಗುತ್ತೀರುವುದು ಸಹಜವಾಗಿದೆ.

ನೆಲ-ಜಲ ಸಂಬಂಧಗಳ ಮೇಲೆ ಆಗುವ ಪರಿಣಾಮಗಳು : ಭತ್ತದ ಬೆಳೆಯ ಪ್ರದೇಶವು ಹೇರಳವಾಗಿ ಇದ್ದಾಗ, ಕೇವಲ ನಾಲ್ಕು ತಿಂಗಳುಗಳಲ್ಲಿ ನಾಲ್ಕು ಸಾವಿರ ಮಿ.ಮೀ ನಂತೆ ಹಾಗೂ ಕೆಲವು ಬಾರಿ ಒಂದು ವಾರದಲ್ಲಿಯೇ ಅಧಿಕ ಮಳೆ ಬಿದ್ದಾಗ, ಬಿದ್ದ ನೀರಿನ ಹೆಚ್ಚಿನ ಭಾಗವು ಲಕ್ಷಾಂತರ ಎಕರೆ ಗದ್ದೆಗಳಲ್ಲಿ ಸಂಗ್ರಹಗೊಂಡು, ಅಲ್ಲಿ ಕೆಲಕಾಲ ನಿಂತು, ನಿಧಾನವಾಗಿ ಬಸಿಯ ರೂಪದಲ್ಲಿ ತೋಡುಗಳ ಮೂಲಕ ಮಳೆಗಾಲ ಮುಗಿದ ಮೂರು ನಾಲ್ಕು ತಿಂಗಳುಗಳ ಕಾಲ, ಅಂದರೆ ಮಾರ್ಚ್-ಏಪ್ರಿಲ್ ವರೆಗೂ ಹರಿದು ಕೆಳಗಿನ ಪ್ರದೇಶದಲ್ಲಿನ ಕೃಷಿಗೂ, ಅಂತರ್ಜಲ ವೃದ್ಧಿಗೂ ಸಹಕಾರಿಯಾಗುತ್ತದೆ. ಗದ್ದೆಗಳಲ್ಲಿ ನಿಂತ ನೀರು, ಮಳೆಯ ಹನಿಗಳು ನೆಲಕ್ಕೆ ಬೀಳುವ ರಭಸವನ್ನು ತಡೆದುಕೊಂಡು ಮಣ್ಣಿಗೆ ಹಾನಿಯಾಗದಂತೆ, ಮಣ್ಣು ಕೊಚ್ಚದಂತೆ ಅಥವಾ ಬಿರುಸಾಗದಂತೆ ತಡೆಯುತ್ತದೆ.

ಭತ್ತದ ಬೆಳೆಯುವ ಪ್ರದೇಶ ಕಡಿಮೆಯಾಗಿ ಅದರ ಸ್ಥಾನದಲ್ಲಿ ತೋಟಗಾರಿಕೆ ಬೆಳೆಗಳು ಬಂದಾಗ, ಬಿದ್ದ ಮಳೆಯ ನೀರನ್ನು ಎಲ್ಲಿಯೂ ನಿಲ್ಲಲು ಅವಕಾಶ ನೀಡದೇ, ಬಸಿಗಾಲುವೆಗಳ ಮೂಲಕ ಹೊರತೆಗೆದು ನೇರವಾಗಿ ಹರಿದ ಎಲ್ಲಾ ನೀರೂ ಸಹ ಒಮ್ಮೆಲೇ ಕೆಳಗಿನ ಪ್ರದೇಶಗಳಲ್ಲಿ ಸಂಗ್ರಹಗೊಂಡು ಜಲೈ-ಆಗಸ್ಟ್ ತಿಂಗಳುಗಳಲ್ಲಿ ತೀವ್ರವಾದ ನೆರೆಯ ತೊಂದರೆಯುಂಟಾಗುತ್ತದೆ. ಭತ್ತದ ಬೆಳೆಯ ಪ್ರದೇಶÀವನ್ನು ಉಳಿಸಿಕೊಳ್ಳುವುದರಿಂದ ಮಳೆ ನೀರಿನ ಸದ್ಬಳಕೆಯಾಗಿ, ಮಳೆಗಾಲದಲ್ಲಿ ನೆರೆಯ ಹಾವಳಿಯನ್ನು ಕಡಿಮೆ ಮಾಡಬಹುದಲ್ಲದೇ, ಬೇಸಿಗೆಯಲ್ಲಿ ತೊರೆ, ತೋಡುಗಳಲ್ಲಿ ನೀರಿನ ಲಭ್ಯತೆಯು ಹೆಚ್ಚು ಕಾಲ ಇರುವಂತೆ ಮಾಡಬಹುದು, ಇದಲ್ಲದೇ ಅಂತರ್ಜಲ ವೃದ್ಧಿಗೂ ಸಹಾಯವಾಗುತ್ತದೆ.

ಉಪ ಉತ್ಪನ್ನಗಳಿಂದಾಗುವ ಲಾಭಗಳು: ಭತ್ತದ ಬೆಳೆಯಿಂದ ಕೇವಲ ಆಹಾರ ಸುರಕ್ಷತೆ ದೊರೆಯುವುದೊಂದೇ ಅಲ್ಲದೇ, ಜೊತೆಯಲ್ಲಿ ದೊರೆಯುವ ಅನೇಕ ಉಪ ಉತ್ಪನ್ನಗಳಿಂದಲೂ ಕೃಷಿಕರು ಲಾಭ ಪಡೆಯಬಹುದುದಾಗಿದೆ. ಭತ್ತದ ಹುಲ್ಲ್ಲಿಗೆ ವಿಪರೀತ ಬೇಡಿಕೆಯಿದ್ದು, ಜಾನುವಾರುಗಳಿಗೆ ಮೇವಾಗಿ ಮತ್ತು ಪ್ಯಾಕಿಂಗ್ ವಸ್ತುವಾಗಿ ಹೆಚ್ಚಾಗಿ ಬಳಸಲಾಗುತ್ತಿದೆ. ಪ್ರಸ್ತುತ ಹುಲ್ಲಿಗೆ ಇರುವ ಬೇಡಿಕೆಯನ್ನು ಬೇರೆ ಪ್ರದೇಶÀಗಳಿಂದ ಅಧಿಕ ಹಣಕ್ಕೆ ತಂದು ಪೂರೈಸಲಾಗುತ್ತಿದೆ. ಇಂದಿನ ಬೆಲೆಗಳಲ್ಲಿ ಪ್ರತಿ ಎಕರೆಯಲ್ಲಿ ದೊರೆಯುವ ಹುಲ್ಲಿನಿಂದ ಸುಮಾರು ಎರಡರಿಂದ ಎರಡುವರೆ ಸಾವಿರ ರೂ ಆದಾಯ ಪಡೆಯಬಹುದು ಅಥವಾ ತಮ್ಮ ಜಾನುವಾರುಗಳಿಗೆ ಉತ್ತಮ ಗುಣಮಟ್ಟದ ರಾಸಾಯನಿಕ ರಹಿತ ಹುಲ್ಲನ್ನು ಸಹ ನೀಡಬಹುದಾಗಿದೆ.

ಸಾಮಾಜಿಕ ಲಾಭಗಳು: ಭತ್ತದ ಕೃಷಿಯು ಹೇರಳವಾಗಿ ಇದ್ದರೆ ಅದಕ್ಕೆ ಬೇಕಾಗುವ ಬೀಜ, ಗೊಬ್ಬರ, ರಾಸಾಯನಿಕಗಳು, ಕೃಷಿಯಂತ್ರಗಳು, ಉಪಕರಣಗಳು ಮೊದಲಾದವುಗಳನ್ನು ಪೂರೈಕೆ ಮಾಡುವ ಸಾಮಾಗ್ರಿಗಳ ಸರಬರಾಜುದಾರರಿಗೆ ಒಂದು ಉತ್ತಮ ಜೀವನ ಮಾರ್ಗವಾಗುತ್ತದೆ. ಹೆಚ್ಚು ಕಾರ್ಮಿಕರ ಅವಶ್ಯಕತೆ ಇದ್ದು ಸಾಮಾನ್ಯವಾಗಿ ಯಾವಾಗಲೂ ಕಾರ್ಮಿಕರ ಕೊರತೆಯೇ ಮುಖ್ಯವಾಗಿ ಕಾಣುತ್ತದೆಯಾದರೂ, ಭತ್ತದ ಕೃಷಿಯನ್ನು ಅವಲಂಬಿಸಿರುವ ಕೃಷಿಕಾರ್ಮಿಕರ ಒಂದು ವರ್ಗವೇ ಇದೆಯೆನ್ನುವುದನ್ನು ಮರೆಯಬಾರದು.ಜೊತೆಯಲ್ಲಿ ಇತ್ತೀಚೆಗೆ ಕೃಷಿ ರಂಗದಲ್ಲಿ ಆಗಿರುವ ಆವಿಷ್ಕಾರಗಳಿಂದ, ಅನೇಕ ಹೊಸ ಯಂತ್ರಗಳು ಬಳಕೆಯಲ್ಲಿ ಬಂದಿದ್ದು, ಅವುಗಳ ಬಳಕೆಗೆ, ನುರಿತ ಕೌಶಲ್ಯವುಳ್ಳ ಯುವ ಕಾರ್ಮಿಕರು ಅಥವಾ ಸೇವೆಯನ್ನು ನೀಡುವಂತಹವರು ಬೇಕಾಗಿರುವುದನ್ನು ಮನಗಾಣಬೇಕು.

ಕೃಷಿಯಾಧಾರಿತ ಆಹಾರ ಸುರಕ್ಷತೆಯೇ ಉತ್ತಮ: ಆಹಾರದ ವಿಷಯದಲ್ಲಿ ಸ್ಥಳೀಯ ಉತ್ಪಾದನೆಯ ಸುರಕ್ಷತೆಯಿರುವುದೇ ಉತ್ತಮ. ಇತರೆ ಪ್ರದೇಶÀಗಳಲ್ಲಿನ ವ್ಯವಸ್ಥೆಯ ಮೇಲೆ ಅವಲಂಬಿಸಿರುವುದು ಯಾವಾಗಲೂ ಅಪಾಯಕರ. ಅದೇ ರೀತಿ ಇತರೆ ಪ್ರದೇಶಗಳಿಗೆ ಆಹಾರ ಸಂಗ್ರಹಣೆ ದಾಸ್ತಾನು ಮತ್ತು ಸಾಗಾಣಿಕಾ ವ್ಯವಸ್ಥೆಗಳ ಮೇಲೂ ಇಂತಹ ಸೂಕ್ಷ್ಮ ವಿಷಯಗಳಲ್ಲಿ ಅವಲಂಬನೆ ಸಲ್ಲದು.

ಭತ್ತದ ಕೃಷಿ ಅನಿವಾರ್ಯವಷ್ಟೇ ಅಲ್ಲ ಲಾಬಧಾಯಕವೂ ಸಹ:  ಅಧಿಕ ಇಳುವರಿ ಪಡೆಯಲು ಸಹಕಾರಿಯಾಗಿರುವ ವಾತಾವರಣ ಮತ್ತು ಮಣ್ಣುಗಳನೊಳಗೊಂಡ ಕೃಷಿ ಸನ್ನಿವೇಶವನ್ನು ಹೊಂದಿರುವ ಈ ಪ್ರದೇಶದಲ್ಲಿ ಸಾಂಪ್ರದಾಯಿಕ ಹಾಗೂ ಆಧುನಿಕ ಕೃಷಿ ಪದ್ಧತಿಗಳೆರಡರಲ್ಲಿಯೂ ಪರಿಣಿತಿ ಹೊಂದಿರುವ ಮಾನವ ಸಂಪನ್ಮೂಲವು ಲಭ್ಯವಿದೆ. ಎಕರೆಗೆ ಇಪ್ಪತೈದು ಕ್ವಿಂಟಾಲ್ ಇಳುವರಿ ನೀಡುವ ಅನೇಕ ತಳಿಗಳು ಮತ್ತು ಅವುಗಳಿಗೆ ಸೂಕ್ತ ಉತ್ಪಾದನಾ ತಂತ್ರಜ್ಞಾನವೂ ಸಹ ಲಭ್ಯವಿದೆ. ಜಿಲ್ಲೆಯಾದ್ಯಂತಹ ಹೇರಳವಾಗಿ ಲಭ್ಯವಿರುವ ಹಸಿರೆಲೆ ಗೊಬ್ಬರವನ್ನು ಬಳಸಿಕೊಂಡು, ಮಣ್ಣು ಪರೀಕ್ಷೆ ಆಧಾರದ ಮೇಲೆ ರಸಗೊಬ್ಬರಗಳನ್ನು ಕೊಟ್ಟು, ಯಂತ್ರೋಪಕರಣಗಳನ್ನು ಬಳಸಿಕೊಂಡು ಭತ್ತದ ಕೃಷಿಯನ್ನು  ಮಾಡಿದರೆ ಹೆಚ್ಚಿನ ಇಳುವರಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಜಿಲ್ಲೆಯಲ್ಲಿರುವ ಕೃಷಿ ವಿಜ್ಞಾನ ಕೇಂದ್ರ ಮತ್ತು ವಿವಿಧ ಸಂಶೋಧನ ಕೇಂದ್ರಗಳು ಭತ್ತದ ಲಾಭದಾಯಕ ಕೃಷಿ ಪದ್ಧತಿಗಳನ್ನೂ ಕೃಷಿಕರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿವೆ.

ಇಂತಹ ಸಂದರ್ಭದಲ್ಲಿ ಕೃಷಿಕರು ಧೃತಿಗೆಡದೇ, ಭತ್ತದ ಕೃಷಿಯನ್ನು ವಾಣಿಜ್ಯ ದೃಷ್ಠಿಯಿಂದ ನೊಡದೆ ತಮ್ಮಲ್ಲಿರುವ ಭತ್ತ ಬೆಳೆಯುವ ಪ್ರದೇಶದಲ್ಲಿ ತಮ್ಮ ಮನೆಯ ಆಹಾರ ಸುಭದ್ರತೆಗಾದರು ಭತ್ತವನ್ನು ಬೆಳೆಸಿಕೊಂಡು, ಸೂಕ್ಷ್ಮ ಪರಿಸರವಾದ ಕೊಡಗಿನ ಪ್ರಾಕೃತಿಕ ಹಾಗೂ ಸಾಮಾಜಿಕ ಆರ್ಥಿಕ ಸಮತೋಲನವನ್ನು ಕಾಪಾಡಿಕೊಂಡು ಹೋಗಬೇಕೆಂದು ಕೃಷಿಕರಲ್ಲಿ ಕಳಕಳಿಯಿಂದ ಕೇಳಿಕೊಳ್ಳುತ್ತೇವೆೆ.

✍️….ಡಾ.ವೀರೇಂದ್ರ ಕುಮಾರ್ ಕೆ.ವಿ. 

ಐ.ಸಿ.ಎ.ಅರ್ – ಕೊಡಗು ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪಲು, ಕೊಡಗು ಜಿಲ್ಲೆ

About ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.
0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments