ಪಾಡಿ ಶ್ರೀ ಈಶ್ವರ ಇಗ್ಗುತ್ತಪ್ಪ ದೇವಾಲಯದಲ್ಲಿ ಈಶ್ವರ ದೇವರು ಉದ್ಭವ ಲಿಂಗದ ರೂಪದಲ್ಲಿದ್ದು, ಪುರಾತನ ಕಾಲದಿಂದ ಪೂಜಿಸಲ್ಪಡುತ್ತಿದೆ. ನಂತರ ಶ್ರೀ ಸುಬ್ರಮಣ್ಯ ದೇವರ ಅವತಾರವಾದ ಇಗ್ಗುತಪ್ಪ ದೇವರು ಕೇರಳದಿಂದ ಬಂದು ಇಲ್ಲಿ ನೆಲೆ ನಿಂತರು. “ಇಗ್ಗು” ಎಂದರೆ ಕೊಡವ ಭಾಷೆಯಲ್ಲಿ ಆಹಾರ, “ತಪ್ಪ” ಎಂದರೆ ಕೊಡುವುದು. ಹೀಗಾಗಿ ಆಹಾರ ಕೊಡುವ ದೇವರಾಗಿ ಇಗ್ಗುತಪ್ಪ ದೇವರು ಇಲ್ಲಿ ನೆಲೆಸಿದ್ದಾರೆ.
ಅಂದಾಜು ಸರಿ ಸುಮಾರು1300 ವರ್ಷಗಳ ಹಿಂದೆ 6 ಜನ ಅಣ್ಣ-ತಮ್ಮಂದಿರು ಹಾಗೂ ಒಬ್ಬಳು ತಂಗಿ ಒಟ್ಟು 7 ಜನ ದೇವರುಗಳು ಕೇರಳದ ಸಮುದ್ರ ತೀರದಲ್ಲಿ ಶಂಖದಿಂದ ಹುಟ್ಟಿದರೆಂಬುದು ಪ್ರತೀತಿ.ಅವರುಗಳೆಂದರೆ 1. ಕಾಂಞರತಪ್ಪ, 2. ತಿರುಚೆಂಬರಪ್ಪ 3. ಬೇಂದ್ರುಕೋಲಪ್ಪ 4. ಇಗ್ಗುತಪ್ಪ 5. ಪಾಲೂರಪ್ಪ 6. ತಿರುನೆಲ್ಲಿ ಪೆಮ್ಮಯ್ಯ 7. ಪನ್ನಂಗಾಲತಮ್ಮೆ. ಇವರಲ್ಲಿ 3 ಅಣ್ಣಂದಿರು ಕೇರಳ ರಾಜ್ಯದಲ್ಲಿ ನೆಲೆನಿಂತರು. ಉಳಿದ 4 ದೇವರುಗಳು ಕೊಡಗಿನಲ್ಲಿ ನೆಲೆಸಿದ್ದಾರೆ.
ಅಂದು ಕೇರಳದಿಂದ 4 ದೇವತೆಗಳು ಕೊಡಗಿಗೆ ಬಂದಾಗ ಇಲ್ಲಿನ ಪರದಂಡ ಕುಟುಂಬದ ಮನೆಯ ಬಳಿ ವಿಶ್ರಾಂತಿ ಪಡೆಯುತ್ತಾರೆ. ಅಲ್ಲಿಂದ ಆಹಾರಕ್ಕಾಗಿ ಪರದಂಡ ಕುಟುಂಬದ ಮನೆಯ ಹಸುವಿನಿಂದ ಹಾಲನ್ನು ಕರೆದು. ಅನ್ನವನ್ನು ಮಾಡಲು ಅಕ್ಕಿಯನ್ನು ಕೂಡಾ ಕೇಳಿಕೊಳ್ಳುತ್ತಾರೆ. ಹಾಗೆ ವಾಪಾಸ್ಸು ಹೋಗುವಾಗ, ಅಡಿಗೆ ಮಾಡಲು ಬೇಕಾದ ಬೆಂಕಿ ಹಾಗೂ ಉಪ್ಪನ್ನು ಮರೆತು ಬಿಡುತ್ತಾರೆ. ನಂತರ ಅಡಿಗೆ ಮಾಡಲು ಬೆಂಕಿ ಹಾಗೂ ಉಪ್ಪು ಇಲ್ಲದ ಕಾರಣ ಪನ್ನಂಗಾಲತಮ್ಮೆ ಅವರ ಅಣ್ಣಂದಿರ ಬಳಿ ನಾನು ಬೆಂಕಿ ಇಲ್ಲದೆ ಅನ್ನವನ್ನು ಮಾಡುತ್ತೇನೆ, ಹಾಗೇ ನೀವು ಕೂಡಾ ಉಪ್ಪು ಇಲ್ಲದ ಅನ್ನವನ್ನು ತಿನ್ನುವಿರಾ ಎಂದು ಕೇಳಿಕೊಳ್ಳುತ್ತಾರೆ. ಇದನ್ನು ಅಣ್ಣಂದಿರು ಒಪ್ಪಿಕೊಳ್ಳುತ್ತಾರೆ.
ಅದೇ ಹೊತ್ತಿಗೆ ಅನ್ನವನ್ನು ಬಡಿಸಲು ಬಾಳೆ ಎಲೆಯನ್ನು ತರಲು ಇಗ್ಗುತಪ್ಪ ದೇವರು ಪರಂದಂಡ ಮನೆಯ ಬಳಿ ತೆರಳುತ್ತಾರೆ. ಅಲ್ಲಿ ಮನೆಯಲ್ಲಿ ಕುಟುಂಬದವರು ಯಾರು ಇರಲಿಲ್ಲ, ಅದರಿಂದ ಯಾರನ್ನು ಕೇಳದೆ ಬಾಳೆ ಎಲೆಯನ್ನು ಕುಯ್ಯತ್ತಾರೆ. ಇದನ್ನು ನೋಡಿದ ಒಬ್ಬ ಅಜ್ಜಿ ಇಗ್ಗುತಪ್ಪ ದೇವರಿಗೆ ಬೈಯ್ಯುತ್ತಾರೆ. ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ಬಾಳೆ ಎಲೆಯನ್ನು ಯಾಕೆ ತೆಗೆಯುತ್ತೀರಾ ಎಂದು. ಇದರಿಂದ ಸಿಟ್ಟಾದ ಇಗ್ಗುತ್ತಪ್ಪ ದೇವರು, ಇನ್ನು ಮುಂದೆ ಈ ಸ್ಥಳದಲ್ಲಿ ಬಾಳೆಮರ ಬೆಳೆಯುವುದಿಲ್ಲ ಎಂದು ಶಾಪವನ್ನು ಹಾಕುತ್ತಾರೆ. ಇದರಿಂದ ಭಯಗೊಂಡ ಅಜ್ಜಿ ಯಜಮಾನನ ಬಳಿ ತಿಳಿಸುತ್ತಾರೆ. ಯಜಮಾನನಿಗೆ ಬಾಳೆ ಎಲೆಯನ್ನು ತೆಗೆಯಲು ಬಂದವರು ದೇವರ ಅವತಾರವೆಂದು ತಿಳಿದಿದ್ದರಿಂದ ಇಗ್ಗುತಪ್ಪ ದೇವರ ಬಳಿ ಬಂದು ಕ್ಷಮೆಯನ್ನು ಕೋರಿ ಪ್ರಾಯಶ್ಚಿತ ಕೇಳುತ್ತಾರೆ. ಅದಕ್ಕೆ ಒಪ್ಪಿದ ಇಗ್ಗುತಪ್ಪ ದೇವರು ಕ್ಷಮೆಯನ್ನು ನೀಡುತ್ತಾರೆ. ಅಲ್ಲದೆ ಇನ್ನು ಮುಂದೆ ನಾನು ಇಲ್ಲಿಯೇ ನೆಲೆ ನಿಲ್ಲುವುದರಿಂದ ಪ್ರಾಯಶ್ಚಿತಕ್ಕಾಗಿ ನಿಮ್ಮ ಕುಟುಂಬ ಇನ್ನು ಮುಂದೆ ನನ್ನ ತಕ್ಕರಾಗಿರಬೇಕು. ಹಾಗೂ ವರ್ಷದ ಎಲ್ಲಾ ಹಬ್ಬಗಳಿಗೂ ನಿಮ್ಮ ಕುಟುಂಬದಿಂದ ಎತ್ತುಪೋರಾಟ ಹಾಗೂ ಪ್ರತೀ ನೈವೇದ್ಯಕ್ಕೆ ಸಣ್ಣ ಅನ್ನ ನೀಡಬೇಕೆಂದು ಹೇಳಿದರು. ಅಂದಿನಿಂದ ಪರದಂಡ ಕುಟುಂಬದವರು ಇಗ್ಗುತಪ್ಪ ದೇವರ ತಕ್ಕರಾಗಿದ್ದಾರೆ.
ಅಷ್ಟೋತ್ತಿಗೆ ತಂಗಿಯಾದ ಪನ್ನಂಗಾಲತಮ್ಮೆ ಅನ್ನವನ್ನು ಮಾಡಲು ಅಕ್ಕಿಯನ್ನು ಹಾಲಿನೊಂದಿಗೆ ಬೆರೆಸಿ ಬಿದಿರಿನ ಕೊಟ್ಟೆಯಲ್ಲಿ ಹಾಕಿ ಅಂಬಲ ಹೊಳೆಯ ದಡದಲ್ಲಿರುವ ಬಿಸಿ ಮರಳಿನ ಅಡಿಯಲ್ಲಿ ಹೂಳುತ್ತಾರೆ. ಅದು ಮರಳಿನ ಬಿಸಿಗೆ ಕುದ್ದು ಅನ್ನವಾಗುತ್ತದೆ. ತಯಾರಾದ ಅನ್ನವನ್ನು ಪನ್ನಂಗಾಲತಮ್ಮೆ ಅಣ್ಣಂದಿರಿಗೆ ಇಗ್ಗುತಪ್ಪ ತಂದ ಬಾಳೆ ಎಲೆಯಲ್ಲಿ ಬಡಿಸುತ್ತಾರೆ. ಉಪ್ಪಿಲ್ಲದ ಊಟವನ್ನು ತಿಂದ ಅಣ್ಣಂದಿರಿಗೆ ರುಚಿ ಇಲ್ಲದ ಕಾರಣ ಅನ್ನವನ್ನು ತಿನ್ನದೆ ಮೇಲಕ್ಕೆ ಎಸೆಯುತ್ತಾರೆ. ಇದರಿಂದ ಸಿಟ್ಟಾದ ತಂಗಿ ಪನ್ನಂಗಾಲತಮ್ಮೆ 3 ಜನ ಅಣ್ಣಂದಿರಿಗೂ ಸಟ್ಟಗದಿಂದ ಹೊಡೆಯುತ್ತಾರೆ.
ಇದಕ್ಕೆ ಪ್ರತಿಯಾಗಿ ತಂಗಿಯನ್ನು ಹೇಗಾದರೂ ಮಾಡಿ ಸೋಲಿಸಬೇಕೆಂದು ಅಣ್ಣಂದಿರು ಪಣತೊಡುತ್ತಾರೆ. ಅದರ ಯೋಜನೆಯ ಪ್ರಕಾರ ಅಣ್ಣಂದಿರು ಅಡಿಕೆ ಮತ್ತು ವಿಲ್ಯದೆಲೆಯನ್ನು ತಿನ್ನಲು ಪ್ರಾರಂಭಿಸುತ್ತಾರೆ. ತಿನ್ನುವ ಸಂದರ್ಭದಲ್ಲಿ ಯಾರ ಬಾಯಿ ಕೆಂಪಾಗಿದೆ ಎಂದು ನೋಡಲು ಅದನ್ನು ಕೈಗೆ ಉಗಿದು ನೋಡಿ, ಉಗುಳಿದ ಎಂಜಲನ್ನು ಎತ್ತಿ ತಲೆಯ ಮೇಲಿನಿಂದ ಹಿಂದಕ್ಕೆ ಎಸೆಯುತ್ತಾರೆ. ಇದನ್ನು ಸರಿಯಾಗಿ ಗಮನಿಸದ ತಂಗಿ ಉಗುಳಿದ ಎಂಜಲನ್ನು ವಾಪಾಸ್ಸು ತನ್ನ ಬಾಯಿಗೆ ಹಾಕುತ್ತಾರೆ. ಅಗ ಅಣ್ಣಂದಿರು ನೀನು ಉಗುಳಿದ ಎಂಜಲನ್ನು ಪುನ: ತಿಂದದ್ದು ದೇವರ ಕುಲಕ್ಕೆ ಇದು ಒಳ್ಳೆಯದಲ್ಲ ಎಂದು ಹೇಳಿ ಕುಲ ಬದಲು ಮಾಡುತ್ತಾರೆ. ಹಾಗೇ ಅಣ್ಣಂದಿರಿಂದ ಬೇರ್ಪಟ್ಟ ತಂಗಿ ಪನ್ನಂಗಾಲತಮ್ಮೆ ಎಂಬಲ್ಲಿ ನೆಲೆ ನಿಲ್ಲುತ್ತಾರೆ. ಅಲ್ಲಿಂದ ಹೊರಟ ಉಳಿದ 3 ಜನ ಅಣ್ಣಂದಿರು ಮುಂದೆ ಹೋಗಿ ಇಗ್ಗುತಪ್ಪ ದೇವರು ತಾವು ಮೊದಲೇ ಬಾಣ ಹೊಡೆದು ಬಾಣ ಬಿದ್ದ ಸ್ಥಳವಾದ ಅಮ್ಮಂಗೇರಿಯಲ್ಲಿ (ಈಗಿನ ದೇವಾಲಯ ಇರುವ ಸ್ಥಳ) ದಲ್ಲಿ ನೆಲೆಸುತ್ತಾರೆ. ಹಾಗೂ ಪಾಲೂರಿನಲ್ಲಿ ಪಾಲೂರಪ್ಪ ಹಾಗೂ ತಿರುನೆಲ್ಲಿಯಲ್ಲಿ ಪೆಮ್ಮಯ್ಯ ನೆಲೆ ನಿಲ್ಲುತ್ತಾರೆ. ಹೀಗೆ ದೇವರ ಅವತಾರದಲ್ಲಿ ಜನಿಸಿ ಬಂದ ಸಹೋದರ ಸಹೋದರಿಯರು ತಮ್ಮ ತಮ್ಮ ಸ್ಥಾನದಲ್ಲಿ ಲೋಕ ಕಲ್ಯಾಣಕ್ಕಾಗಿ ನೆಲೆ ನಿಲ್ಲುತ್ತಾರೆ.
ಇಗ್ಗುತಪ್ಪ ದೇವರು ಹಾಗೂ ಪುತ್ತರಿ ಹಬ್ಬ:
ಇಗ್ಗುತಪ್ಪ ದೇವರಿಗೆ ಪುತ್ತರಿ ಹಬ್ಬವನ್ನು ಪ್ರಾರಂಭಿಸಿದ ಪ್ರತೀತಿ ಇದೆ. ಈ ಹಿಂದೆ ಕೊಡಗಿನ ಜನರು ತಾವು ಬೆಳೆಸಿದಂತಹ ಬೆಳೆಗೆ ಯಾವುದೇ ಸುಗ್ಗಿಯನ್ನು ಆಚರಣೆ ಮಾಡದಂತಹ ಸಮಯದಲ್ಲಿ ಶ್ರೀ ಇಗ್ಗುತ್ತಪ್ಪ ದೇವರು ಕೇರಳದ ‘ಓಣತಮ್ಮೆ’ ಎಂಬ ಓಣಂ ಹಬ್ಬದ ದೇವತೆಯನ್ನು ಕರೆದು ದೇವತೆಯ ಕೈಯಿಂದ ಒಂದು ಚೆಂಬೆನೆ ಓಲೆಯನ್ನೊಳಗೊಂಡ ಗಂಟನ್ನು ತರುತ್ತಾರೆ. ಆ ಓಲೆಯಲ್ಲಿ “ಓಣಂ” ಹಬ್ಬ ಆದ 90 ದಿನಗಳ ನಂತರ ಪುತ್ತರಿ ಹಬ್ಬವನ್ನು ಮಾಡಬೇಕು, ಕೃತಿಕಾ ನಕ್ಷತ್ರದಲ್ಲಿ ಹಬ್ಬ ಆಗಬೇಕು. ರೋಹಿಣೀ ನಕ್ಷತ್ರದಲ್ಲಿ ಕದಿರು ತೆಗೆದರೆ ಶುಭವಾಗುವುದು ಎಂದು ಬರೆದಿರುತ್ತಾರೆ. ಆ ದಿನ ಹುಣ್ಣಿಮೆಯ ಒಂದು ದಿನ ಹಿಂದೆ ಅಥವಾ ಮುಂದೆ ಇರಬಹುದು. ಹಾಗೆ ಪುತ್ತರಿ ಹಬ್ಬವು ಈ ದೇವಾಲಯಕ್ಕೆ ಪ್ರಮುಖವಾದ ಹಾಗೂ ದೊಡ್ಡದಾದ ಹಬ್ಬವಾಗಿದೆ. ಹಬ್ಬದ ದಿನಾಂಕವನ್ನು 15 ದಿನಗಳ ಮುಂಚೆ ನಿಗಡಿ ಮಾಡುತ್ತಾರೆ.
ಮಾಹಿತಿ: ಪರದಂಡ ಪ್ರಿನ್ಸ್ ತಮ್ಮಪ್ಪ(ದೇವ ತಕ್ಕರು), ನಾಲಡಿ.
ಓಂ ಶ್ರೀ ಈಶ್ವರ ಇಗ್ಗುತ್ತಪ್ಪ ದೇವಾಲಯದಲ್ಲಿನ ಸೇವೆಗಳ ವಿವರ ಹಾಗೂ ಸೇವಾ ದರ
- ದೀಪಧಾರಣೆ – Deeparadhane – 300/-
- ಸತ್ಯನಾರಾಯಣ ಪೂಜೆ – Sathyanarayana Pooja – 200/-
- ಮಹಾ ಪೂಜೆ – Maha Pooja – 100/-
- ಅಲಕಾಂಕಾರ ಪೂಜೆ – Alankara Pooja – 100/-
- ಶಾಂತಿ ಪೂಜೆ – Shanthi Pooja – 75/-
- ಅಪ್ಪಕಜ್ಜಾಯ/ಪಂಚಕಜ್ಜಾಯ – Appakajjaya / Panchakajjaya – 50/-
- ನವಗ್ರಹ ಜಪ – Navagraha japas – 50/-
- ಅಭಿಶೇಕಗಳು – Abhishekas – 50/-
- ಗಣಪತಿ ಪೂಜೆ – Ganapathi Pooja – 50/-
- ಮಂಗಳಾರತಿ – Mangalarathi – 20/-
- ನಾಮಕರಣ ಸಮಾರಂಭ – Naming Ceremony – 500/-
ಪಾಡಿ ಶ್ರೀ ಇಗ್ಗುತಪ್ಪ ದೇವಸ್ಥಾನ
ದೇವಾಲಯದಲ್ಲಿ ಜರುಗುವ ವಿಶೇಷ ಸೇವೆಗಳು (ಉತ್ಸವಗಳು)
* ಕುಂಭ ಮಾಸ ಕಲಾಡ್ಡ ಹಬ್ಬ (ಮಾರ್ಚ್).
** ಭೈನಾಡ ಭೂತದ ಕೋಲ (ಏಪ್ರಿಲ್)
* ಸಿಂಹ ಮಾಸ ಆರಾಧನೆ (ಆಗಸ್ಟ್)
* ಪರದಂಡ ಆರಾಧನೆ (ಅಕ್ಟೋಬರ್)
* ಪುತ್ತರಿ ಕಲಾಡ್ಡ ಹಬ್ಬ (ಡಿಸೆಂಬರ್)
* ಷಷ್ಠಿ ಹಬ್ಬ (ಡಿಸೆಂಬರ್)
* ಹೊಸ ಅಕ್ಕಿ ನೈವೇದ್ಯ (ಜನವರಿ)
* ಭಕ್ತ ಜನ ಸಂಘದ ವಾರ್ಷಿಕೋತ್ಸವ (ಮೇ)
ಪಾಡಿ ಶ್ರೀ ಇಗ್ಗುತ್ತಪ್ಪ ಭಕ್ತಜನ ಸಂಘ
ಕುಂಜಿಲ-ಕಕ್ಕಬ್ಬೆ,
ಮಡಿಕೇರಿ – ಕೊಡಗು
ಆಡಳಿತ ಮಂಡಳಿ ಸದಸ್ಯರು (2024 ರಿಂದ 2029 ರವರೆಗೆ)
ಅಧ್ಯಕ್ಷರು: ಶ್ರೀ ಪರದಂಡ ಸುಬ್ರಮಣಿ ಕಾವೇರಪ್ಪ
ಉಪಾಧ್ಯಕ್ಷರು: ಶ್ರೀ ಕಲ್ಯಾಟಂಡ, ಟಿ. ಅಪ್ಪಣ್ಣ
ಕಾರ್ಯದರ್ಶಿ: ಶ್ರೀಮತಿ ಬಟ್ಟೀರ, ಜೋಂದಮ್ಮ ಮೇದಪ್ಪ
ಖಜಾಂಚಿ: ಶ್ರೀ ಅಂಜಪರವಂಡ .ಎ. ಕುಶಾಲಪ್ಪ
ನಿರ್ದೇಶಕರುಗಳು:
ಶ್ರೀ ಪರದಂಡ.ಕೆ. ಸದಾ ನಾಣಯ್ಯ
ಶ್ರೀ ಅನ್ನಡಿಯಂಡ. ಪಿ. ದಿಲೀಪ್
ಶ್ರೀ ಅಲ್ಲಾರಂಡ, ಯಸ್. ಅಯ್ಯಪ್ಪ (ಸನ್ನು)
ಶ್ರೀ ಕುಲ್ಲೇಟಿರ, ಅರುಣ್ ಬೇಬ
ಶ್ರೀ ಕುಟ್ಟಂಜೆಕ್ಟರ, ಎನ್. ಬೋಪಣ್ಣ
ಶ್ರೀ ಕಾಂಡಂಡ, ಯಂ, ಪೂವಯ್ಯ
ಶ್ರೀ ಕಲಿಯಂಡ, ಯಸ್. ಗಣೇಶ್
ಶ್ರೀ ಕೇಲೇಟರ. ಎ. ರಂಜನ್
ಶ್ರೀ ಅಪ್ಪಾರಂಡ. ಪಿ. ಮಂದಣ್ಣ
ಅರ್ಚಕರು: ಶ್ರೀ ಕುಶಭಟ್
ಪಾರು ಪತ್ಯೆಗಾರರು: ಶ್ರೀ ಪರದಂಡ. ಪ್ರಿನ್ಸ್ ತಮ್ಮಪ್ಪ
ಕಾರ್ಯನಿರ್ವಾಹಕರು: ಶ್ರೀ ಕಂಬೆಯಂಡ, ಯಂ, ಬೊಳ್ಳಪ್ಪ
ಸಿಬ್ಬಂದಿ: ಶ್ರೀ ಕಂಬೆಯಂಡ. ಯಂ. ಗಣೇಶ್
ಶ್ರೀ ಇಗ್ಗುತಪ್ಪ ಭಕ್ತ ಜನ ಸಂಘದ ಹಿನ್ನಲೆ ಹಾಗೂ ಬೆಳೆದು ಬಂದ ಹಾದಿ
“ಶ್ರೀ ಇಗ್ಗುತಪ್ಪ ಭಕ್ತ ಜನ ಸಂಘವು 1918ರಲ್ಲಿ ದಿವಂಗತ ಮೇರಿಯಂಡ ಗಣಪತಿಯವರ ಸ್ಥಾಪಕ ಅಧ್ಯಕ್ಷತೆಯಲ್ಲಿ ಪ್ರಾರಂಭಗೊಂಡಿತ್ತು. ಶ್ರೀ ಇಗ್ಗುತ್ತಪ್ಪ ದೇವರ ಭಕ್ತಾಧಿಗಳಿಂದ ಭಕ್ತರಿಗೋಸ್ಕರವಾಗಿ ಈ ಸಂಘವನ್ನು ಸ್ಥಾಪಿಸಲಾಯಿತು. ಹಾಗೆ ದೇವಾಲಯದ ಸಮಗ್ರ ಅಭಿವೃದ್ಧಿ ಹಾಗೂ ವ್ಯವಸ್ಥಾಪನ ದೃಷ್ಠಿಯಿಂದ ಕಾರ್ಯ ನಿರ್ವಹಿಸುತ್ತಿದೆ. ಭಕ್ತರು ಹಾಗೂ ದೇವಾಲಯದ ಅಭಿವೃದ್ಧಿಯ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಇಗ್ಗುತಪ್ಪ ಭಕ್ತ ಜನ ಸಂಘದಲ್ಲಿ ಪ್ರಸ್ತುತ 10, 000/- ಕ್ಕೂ ಮಿಗಿಲಾಗಿ ಜಗತ್ತಿನಾಧ್ಯಾಂತ ಸದಸ್ಯರಿದ್ದಾರೆ. ಯಾವುದೇ ಜಾತಿ ಮತ ಭೇದವಿಲ್ಲದೆ ಎಲ್ಲ ಜನಾಂಗದವರಿಗೆ ತಲಾ 100/- ರೂಪಾಯಿಯ ಸದಸ್ಯತ್ವ ಶುಲ್ಕವನ್ನು ಪಾವತಿ ಮಾಡಿ ಈ ಭಕ್ತ ಜನ ಸಂಘದಲ್ಲಿ ಸದಸ್ಯತ್ವವನ್ನು ಪಡೆಯಬಹುದಾಗಿದೆ.
ಪಾಡಿ ಶ್ರೀ ಇಗ್ಗುತಪ್ಪ ಭಕ್ತ ಜನ ಸಂಘ ಆರಂಭಗೊಂಡು 100 ವರ್ಷ ತುಂಬಿದ ನೆನಪಿಗಾಗಿ ದಾನಿಗಳ ಸಹಕಾರದಿಂದ ವಿವಿಧ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಸಂಘದಿಂದ ₹ 38 ಲಕ್ಷ ವೆಚ್ಚದಲ್ಲಿ ಭೋಜನಗೃಹವನ್ನು ನಿರ್ಮಿಸಲಾಗಿದೆ. ಶತಮಾನದ ನೆನಪಿಗಾಗಿ ಭೋಜನಗೃಹ, ಸಂಘದ ಕಚೇರಿ, ಸಮಿತಿ ಕಚೇರಿ ಹಾಗೂ ಕೈ ತೊಳೆಯುವ ಹಜಾರದ ನಿರ್ಮಾಣ ಮಾಡಲಾಗಿದೆ. ಹೆಸರು ಹೇಳಲಿಚ್ಚಿಸದ ಭಕ್ತರ ನೇರವಿನಿಂದ ಸರಿ ಸುಮಾರು 2 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಅಡುಗೆ ಮನೆ ಉಗ್ರಾಣವನ್ನು ಕೂಡ ನಿರ್ಮಿಸಲಾಗಿದೆ. ಮುಕ್ತ ಟೆಂಡರ್‌ಗಳನ್ನು ಕರೆದು ಪಾರದರ್ಶಕವಾಗಿ ಗುಣಮಟ್ಟದ ಕಾಮಗಾರಿಗಳನ್ನು ಶ್ರೀ ಇಗ್ಗುತಪ್ಪ ಭಕ್ತ ಜನ ಸಂಘ ನಿರ್ವಹಿಸಿ ದೇವಾಲಯದ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಹಾಗೆ ದೇವಾಲಯದ ಸಂಪೂರ್ಣ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದೆ.
ಶ್ರೀ ಇಗ್ಗುತಪ್ಪ ದೇವಾಲಯದಲ್ಲಿ ತುಲಾಭಾರ ಸೇವೆ ವಿಶಿಷ್ಟವಾದದ್ದು. ಶ್ರೀ ಇಗ್ಗುತಪ್ಪ ಭಕ್ತ ಜನ ಸಂಘದಿಂದ ಯಾವುದೇ ಜಾತಿ ಮತ ಭೇದವಿಲ್ಲದೆ ಎಲ್ಲ ಜನಾಂಗದವರಿಗೆ ತುಲಾಭಾರ ಸೇವೆ ನಡೆಸಲು ಅವಕಾಶ ಕಲ್ಪಿಸಲಾಗಿದೆ. ತುಲಾಭಾರ ಸೇವೆ ಮಾಡಿಸಿಕೊಳ್ಳುವ ಭಕ್ತರಿಗೆ ವಿಶೇಷವಾದ ಪವಳ ಮಾಲೆ(ಹವಳ ಮಾಲೆ)ಯನ್ನು ಧರಿಸಲು ನೀಡಲಾಗುತ್ತದೆ. ಹಾಗೆ ಆ ಪವಳ ಮಾಲೆಯನ್ನು ದೇವಾಲಯದ ಅರ್ಚಕರು ಸಹ ಧರಿಸುವ ಮೂಲಕ ಸಾಮರಸ್ಯವನ್ನು ಮೂಡಿಸಲಾಗಿದೆ. ನಂತರ ಉತ್ಸವ ಮೂರ್ತಿಯ ಬಿಂಬಕ್ಕೆ ಈ ಪವಳ ಮಾಲೆಯನ್ನು ತೊಡಿಸಲಾಗುತ್ತದೆ. ಪ್ರಾಚಿನ ಕಾಲದ ದೇವರ ಚಿನ್ನಾಭರಣಗಳಿಂದ ಮಾಡಲ್ಪಟ್ಟ ಈ ಪವಳ ಮಾಲೆಯು ಸರಿ ಸುಮಾರು 290ಗ್ರಾಂ. ತೂಕವನ್ನು ಹೊಂದಿದೆ. ಕೊಡಗಿನ ಯಾವುದೇ ದೇವಾಲಯದ ಉತ್ಸವದಲ್ಲಿ ಜೋಡಿ ಎತ್ತು ಪೋರಾಟವಿಲ್ಲ ಆದರೆ ಇಗ್ಗುತಪ್ಪ ದೇವಾಲಯದ ಉತ್ಸವದಲ್ಲಿ ಮಾತ್ರ ಜೋಡಿ ಎತ್ತು ಪೋರಾಟ ನಡೆಯುವುದು ವಿಶೇಷವಾಗಿದೆ. ಶ್ರೀ ಇಗ್ಗುತಪ್ಪ ದೇವಾಲಯದಲ್ಲಿ ಮದುವೆ ಅಥವಾ ಅರತಕ್ಷತೆ ಕಾರ್ಯವನ್ನು ಮಾಡುವುದು ತಲೆತಲಾಂತರಗಳಿಂದ ನಿಷಿಧವಾಗಿದೆ.
ಭಕ್ತರ ಹಣದಲ್ಲಿ ಭಕ್ತ ಜನ ಸಂಘವು ದೇವಾಲಯದ ಅಭಿವೃದ್ಧಿ ಕಾರ್ಯ ಮಾಡುತ್ತಲಿದ್ದು, ದೇವಾಲಯದ ಅಭಿವೃದ್ಧಿ ಮುಖ್ಯವಾಗಿದೆ. ಎಲ್ಲರೂ ಭಕ್ತ ಜನ ಸಂಘಕ್ಕೆ ಸಹಕಾರ ನೀಡುತ್ತಾ ಬರುತ್ತಿದ್ದಾರೆ. ಅದರಲ್ಲಿ ಹೆಸರನ್ನು ಹೇಳಲಿಚ್ಚಿಸಿದ ಅಸಂಖ್ಯಾತ ಭಕ್ತರು ದೇವಾಲಯದ ಅಭಿವೃದ್ಧಿಗೆ ಕೈಜೋಡಿಸುತ್ತಾ ಬರುತ್ತಿದ್ದಾರೆ. ಈವರಗೆ ಸರಿ ಸುಮಾರು 8 ಕೋಟಿಗಳಷ್ಟು ಕಾಮಗಾರಿಗಳನ್ನು ನಿರ್ವಹಿಸಲಾಗಿದೆ. ದೇವಾಲಯದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ದೇವರ ಅಭಿಷೇಕಕ್ಕಾಗಿ ದಾನಿಗಳ ನೆರವಿನಿಂದ ಎರಡು ಬೆಳ್ಳಿಯ ಬಿಂದಿಗೆಗಳನ್ನು ತಯಾರಿಸಿದ್ದು ದೇವಾಲಯಕ್ಕೆ ಅರ್ಪಿಸಲಾಗಿದೆ. ಪಾಡಿ ಶ್ರೀ ಇಗ್ಗುತಪ್ಪ ದೇವಾಲಯದ ಅಭಿವೃದ್ಧಿಗೆ ಕೊಡಗಿನ ಹಾಗೂ ಜಗತ್ತಿನಾಧ್ಯಾಂತವಿರುವ ಭಕ್ತ ಜನರು ಮಮತೆ ಮತ್ತು ಭಕ್ತಿಯಿಂದ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಮುಜರಾಯಿ ಇಲಾಖೆ ದೇವಾಲಯದ ವ್ಯವಸ್ಥಾಪನೆಗೆ ಇದ್ದರೂ ಕೂಡ ಇಲ್ಲಿಯವರಗೆ ಎಲ್ಲಾ ಜಿಲ್ಲಾಧಿಕಾರಿಗಳ ಸಮಕ್ಷಮದಲ್ಲಿ ಶ್ರೀ ಇಗ್ಗುತಪ್ಪ ಭಕ್ತ ಜನ ಸಂಘವು ದೇವಾಲಯದ ವ್ಯವಸ್ಥಾಪನಾ ಹಾಗೂ ಅಭಿವೃದ್ಧಿಯನ್ನು ಪಾರದರ್ಶಕವಾಗಿ ಮಾಡುತ್ತಾ ಬರುತ್ತಿದೆ.
2019-20ನೇ ಸಾಲಿನ ಸಂಸತ್ ಸದಸ್ಯರಾದ ಶ್ರೀ ಕುಪೇಂದ್ರ ರೆಡ್ಡಿಯವರ ಸಂಸತ್ ಸದಸ್ಯರ ಸ್ಥಳೀಯ ಪ್ರದೇಶಾಭೀವೃದ್ಧಿ ಕಾರ್ಯಕ್ರಮಗಳಡಿಯಲ್ಲಿ ಕೇಂದ್ರ ಸರಕಾರದದಿಂದ ಬಿಡುಗಡೆಯಾದ ಅನುದಾನದಿಂದ ದೇವಾಲಯದ ಆವರಣದಲ್ಲಿ 20 ಲಕ್ಷ ವೆಚ್ಚದಲ್ಲಿ ಸಮುದಾಯ ಭವನ ಹಾಗೂ ಶೌಚಾಲಯ ನಿರ್ಮಾಣ ಕಾಮಗಾರಿಯನ್ನು ನಿರ್ವಹಿಸಲಾಗಿದೆ. ಸರಕಾರದಿಂದ ದೇವಾಲಯಕ್ಕೆ ಇಲ್ಲಿಯವರಗೆ ಗಣನೀಯಾವಾಗಿ ಕನಿಷ್ಠ ಮಟ್ಟದಲ್ಲಿ ಅನುಧಾನ ದೊರಕಿರುವುದು ಬೇಸರದ ಸಂಗತಿಯಾಗಿದೆ. ಶೇಕಡ 90% ರಷ್ಟು ಪಾಲು ಭಕ್ತರು ನೀಡಿದ ತನು-ಮನ-ಧನಗಳಿಂದ ಶ್ರೀ ಇಗ್ಗುತಪ್ಪ ಭಕ್ತ ಜನ ಸಂಘವು ಅಭಿವೃದ್ಧಿಯನ್ನು ಮಾಡುತ್ತಾ ಬಂದಿದೆ. ದೇವಾಲಯದ ಅಭಿವೃದ್ಧಿಗೆ ಶ್ರಮಿಸುವ ಯುವಜನರು ಮುಂದಕ್ಕೆ ಬರಬೇಕಾಗಿದೆ. ಸ್ವಜನ ಪಕ್ಷಪಾತ, ಸ್ವಹಿತಾಸಕ್ತಿ ಬದಿಗೊತ್ತಿ ದೇವಾಲಯದ ಅಭಿವೃದ್ಧಿಗೆ ಶ್ರಮಿಸುವ ಆಡಳಿತ ಮಂಡಳಿ ಎಂದೆಂದೂ ಇರಬೇಕಾಗಿದೆ.”
ಮಾಹಿತಿ: ಪರದಂಡ ಸುಬ್ರಮಣಿ ಕಾವೇರಿಯಪ್ಪ, ಅಧ್ಯಕ್ಷರು: ಕಕ್ಕಬ್ಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದ ಭಕ್ತ ಜನ ಸಂಘ.
ॐ
ಪಾಡಿ ಶ್ರೀ ಇಗ್ಗುತಪ್ಪ ದೇವರ ತಕ್ಕರು
1) ಪರದಂಡ ಕುಟುಂಬಸ್ಥರು (ದೇವ ತಕ್ಕರು)
2) ನಂಬಡಮಂಡ ಕುಟುಂಬಸ್ಥರು
3) ಮೇಚಂಡ ಕುಟುಂಬಸ್ಥರು
4) ಕಲ್ಯಾಟಂಡ ಕುಟುಂಬಸ್ಥರು
5) ಕಲಿಯಂಡ ಕುಟುಂಬಸ್ಥರು
6) ಮೇರಿಯಂಡ ಕುಟುಂಬಸ್ಥರು
7) ಮಾರ್ಚಂಡ ಕುಟುಂಬಸ್ಥರು
8) ಕೇಟೋಳಿರ ಕುಟುಂಬಸ್ಥರು
9) ಕಾಂಡಂಡ ಕುಂಟುಂಬಸ್ಥರು
10) ಕುಂಡೋಳಂಡ ಕುಟುಂಬಸ್ಥರು
11) ಕುಲ್ಲೇಟೀರ ಕುಟುಂಬಸ್ಥರು
12) ಕೇಲೇಟಿರ ಕುಟುಂಬಸ್ಥರು
13) ಕುಟ್ಟಂಜಟ್ಟೀರ ಕುಟುಂಬಸ್ಥರು
ಪಾಡಿ ಶ್ರೀ ಇಗ್ಗುತ್ತಪ್ಪ ಕ್ಷೇತ್ರದಲ್ಲಿ ಭಕ್ತಾದಿಗಳು ಪಾಲಿಸಬೇಕಾದ ಕಟ್ಟು ಕಟ್ಟಳೆಗಳು
1. ದೇವಾಲಯಕ್ಕೆ ಮನೆಯಿಂದ ಬರುವಾಗ ಸ್ನಾನ ಮಾಡಿ ಶುಭ್ರ ಉಡುಪು ಧರಿಸಿ ಸಸ್ಯಹಾರ ಸೇವಿಸಿ ಶುದ್ಧ ಮುದ್ರಿಕೆಯಿಂದ ದಮಡಿವಂತರಾಗಿ ಬರಬೇಕು.
2. ಭಕ್ತಾದಿಗಳು ಅವರವರ ಸಾಂಪ್ರದಾಯಿಕ ಉಡುಪಿನಲ್ಲಿ ಬರತಕ್ಕದ್ದು, ಶ್ರದ್ಧಾ ಭಕ್ತಿಯಿಂದ ದೇವಸ್ಥಾನ ಎಂಬ ಮನಸ್ಸಿನಿಂದ ಗೌರವದಿಂದ ನಡೆದುಕೊಳ್ಳಬೇಕು.
3. ಅಶೌಚ ಇರುವ ಮನೆತನದವರು(ಜನನ,ಮರಣ ಸಂಬಂಧ ಸೂತಕ) ದೇವಾಲಯಕ್ಕೆ ಬರಬಾರದು. ಜನನವಾದ ಮನೆತನದಲ್ಲಿ 12 ದಿವಸ, ಮರಣವಾದ ಮನೆತನದಲ್ಲಿ 11 ದಿವಸ ಸೂತಕವಿರುವುದರಿಂದ, ಸೂತಕ ಮುಗಿದ ನಂತರ ಬರುವುದು.
4. ಮುಟ್ಟಾದ ಸ್ತ್ರೀಯರು ಬರುವಂತಿಲ್ಲ. ಗರ್ಭಿಣಿ ಸ್ತ್ರೀಯರು 4 ತಿಂಗಳವರೆಗೆ ದೇವಸ್ಥಾನಕ್ಕೆ ಬರಬಹುದು. ತದನಂತರ 7 ತಿಂಗಳವರೆಗೆ ದೇವಸ್ಥಾನದ ಅಂಗಳಕ್ಕೆ ಇಳಿಯದೇ ಪತ್ತೆಪರೆಯಲ್ಲಿ ನಿಂತು ದೇವರ ದರ್ಶನ ಪಡೆಯಬಹುದು.
5. ದೇವಾಲಯದ ಮಹಾದ್ವಾರದ ಹೊರಭಾಗದಲ್ಲಿ ಪಾದರಕ್ಷೆಗಳನ್ನು ಕಳಚಿ ಆಶ್ವತಕಟ್ಟೆಯ ಎದುರಿನಲ್ಲಿರುವ ಕೊಳದಲ್ಲಿ ಕೈ ಕಾಲು ಮುಖ ತೊಳೆದು ಅಶ್ವತ ವೃಕ್ಷಕ್ಕೆ ಪ್ರದಕ್ಷಿಣೆ ಬಂದು ನಮಸ್ಕರಿಸಿ ಮುಂದುವರಿಯತಕ್ಕದ್ದು.
6. ದೇವಾಲಯದ ಹೊರಾಂಗಣಕ್ಕೆ ಪ್ರವೇಶಿಸಿದ ನಂತರ ಎಡಕ್ಕೆ ತಿರುಗಿ ಶಾಸ್ತಾವು ಕಟ್ಟೆಯ ಪ್ರದಕ್ಷಿಣೆ ಬಂದು ಸನ್ನಿಧಿಗೆ ನಮಸ್ಕರಿಸಿ ಮುಂದೆ ಸಾಗಿ ವಾಯುವ್ಯ ದಿಕ್ಕಿನಲ್ಲಿ ನಿಂತು ಆದಿ ಸ್ಥಾನ ಮಲಕ್ಕೆ ನಮಸ್ಕರಿಸಿ ಮುಂದೆ ಬಂದು ಈಶಾನ್ಯ ದಿಕ್ಕಿನಲ್ಲಿರುವ ಕ್ಷೇತ್ರಪ್ಪನ ಸನ್ನಿಧಿಗೆ ನಮಸ್ಕರಿಸಿ ಮುಂದಿನ ಮಂಟಪದಲ್ಲಿ ನಮಸ್ಕರಿಸಿ, ಬಲ ಭಾಗಕ್ಕೆ ಬಂದು ನಡೆಯ ಬದಿಯಲ್ಲಿ ನಿಂತು ದೇವರ ದರ್ಶನ ಪಡೆದು ಪ್ರಾರ್ಥಿಸಿ ಎಡ ಭಾಗದಲ್ಲಿರುವ ನೈವೇದ್ಯ ಭಸ್ಮ ಹಣೆಗೆ ಇಟ್ಟು ದೇವರಿಗೆ ಹುಂಡಿಯಲ್ಲಿ ಕಾಣಿಕೆ ಇಟ್ಟು ಬರುವುದು.
7. ದೇವರಿಗೆ ಅರ್ಪಿಸಬೇಕಾದ ಸೇವೆಗಳ ಪಟ್ಟಿಯನ್ನು ವೀಕ್ಷಿಸಿ ತಮಗೆ ಇಷ್ಟವಾದ ಸೇವೆಗೆ ಕಚೇರಿಯಲ್ಲಿ ಮೊಬಲಗನ್ನು ಪಾವತಿಸಿ ರಸೀತಿ ಪಡೆದು ಅರ್ಚಕರಿಗೆ ನೀಡಿ ಸೇವಾದಿಗಳನ್ನು ಮಾಡತಕ್ಕದ್ದು.
8. ಭಕ್ತರು ವಿಶೇಷವಾಗಿ ಪ್ರಾರ್ಥನಾ ಸೇವೆಯನ್ನು ಸಲ್ಲಿಸಬೇಕಾದಾಗ ದೇವತಕ್ಕರಾದ ಪರದಂಡ ಹಿರಿಯರಲ್ಲಿ ಅಥವಾ ಮನೆತನಕ್ಕೆ ಸೇರಿದ ಪಾರುಪತ್ತೆಗಾರರಲ್ಲಿ ಹೇಳಿಕೊಂಡಲ್ಲಿ, ತೀರ್ಥ ಪ್ರಸಾದ ವಿತರಣೆಯ ಮೊದಲು ದೇವರ ಸನ್ನಿಧಿಯಲ್ಲಿ ಪ್ರಾರ್ಥಿಸಲಾಗುವುದು.
9. ವಿಶೇಷತೆ ಇಲ್ಲದಿದ್ದರೆ ಭಕ್ತರು ಸನ್ನಿಧಿಯಲ್ಲಿ ತಮ್ಮ ಮನದಲ್ಲಿ ಬೇಡಿಕೆಯನ್ನು ಹೇಳಿಕೊಂಡು ಭಕ್ತಿಭಾವದಿಂದ ಪ್ರಾರ್ಥಿಸಲಾಗುವುದು.
10. ಮಗುವಿಗೆ ನಾಮಕರಣ ಮಾಡುವವರು ಮಗುವಿಗೆ 60 ದಿವಸವಾದ ನಂತರವೇ ದೇವರಲ್ಲಿ ನಾಮಕರಣ ಮಾಡತಕ್ಕದ್ದು.
11. ದೇವಸ್ಥಾನ ಅಭಿವೃದ್ಧಿಗೆ ಧನ ಸಹಾಯ ಮಾಡುವವರು ಭಕ್ತ ಜನ ಸಂಘದ ಕಚೇರಿಯಲ್ಲಿ ಮೊಬಲಗು ಪಾವತಿಸಿ ರಸೀತಿ ಪಡೆಯತಕ್ಕದ್ದು
ಮಾನವನ ವಿದ್ಯೆ ಐಶ್ವರ್ಯ, ಅಧಿಕಾರ, ಅಂತಸ್ತು ಎಲ್ಲವೂ ಸರ್ವ ಶಕ್ತನೂ ಸರ್ವ ಲೋಕದ ಒಡೆಯನೂ ಸರ್ವಜ್ಞನೂ ಆದ ಭಗವಂತನ ಕೃಪೆಯಿಂದ ಲಭಿಸುವುದು ಎಂಬ ಭಾವನೆ ಭಕ್ತರಲ್ಲಿ ಇರಬೇಕು. ಅದರಂತೆ ದೇವಸ್ಥಾನದಲ್ಲಿ ತನ್ನ ಸಾಮಾಜಿಕ ಸ್ಥಾನ ಮಾನಗಳ ಕುರಿತು ಸದಭಿಮಾನ, ದೇವರಲ್ಲಿ ಭಕ್ತಿ ಭಾವನೆ ಇರಬೇಕು. ದುರಭಿಮಾನ, ಇತರರ ಮುಂದೆ ತನ್ನ ಅಧಿಕಾರ ಅಂತಸ್ತುಗಳ ಪ್ರದರ್ಶನ ಇವುಗಳು ಎಲ್ಲೂ ಕೂಡ ಇರಬಾರದು.
ಈ ಪವಿತ್ರ ಕ್ಷೇತ್ರವನ್ನು ರಕ್ಷಿಸಿ ಪೋಷಿಸುವುದು ನಮ್ಮೆಲ್ಲರ ಕರ್ತವ್ಯ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಪಾಡಿ ಶ್ರೀ ಇಗ್ಗುತ್ತಪ್ಪ ಭಕ್ತ ಜನಸಂಘ, ತಕ್ಕ ಮುಖ್ಯಸ್ಥರು, ಕುಂಜಿಲ, ಕಕ್ಕಬೆ.
ಮನವಿ
- ಇದು ಪವಿತ್ರ ದೇವಸ್ಥಾನ…..ಪ್ರವಾಸಿ ತಾಣವಲ್ಲ…… This is a Sacred Temple Not a Tourist Spot
- ಮೊಬೈಲ್ ಬಳಸುವುದನ್ನು ಮತ್ತು ಪೋಟೋ ತೆಗೆಯುವುದನ್ನು ನಿಷೇದಿಸಲಾಗಿದೆ. Use of Mobile Phones and Photography are Prohibited
- ಶಾಂತತೆಯನ್ನು ಕಾಪಾಡಿ Maintain Silence
- ಶುಚಿತ್ವವನ್ನು ಕಾಪಾಡಿ Keep Temple Premises Clean
- ಪೂಜೆಗಿಂತ ಮೊದಲು ಸೇವಾ ರಶೀದಿಯನ್ನು ಪಡೆದುಕೊಳ್ಳಿ. Obtain Seva Tickets Before Pooja
- ಹೊರಗಿನಿಂದ ತಂದ ತಿಂಡಿ ತಿನಿಸುಗಳನ್ನು ದೇವಸ್ಥಾನದ ಒಳಗೆ ತಿನ್ನಬಾರದು. Outside Food & snacks are not Allowed inside The Temple Premises
- ಹರಕೆ ಕಾಣಿಕೆಗಳನ್ನು ಹುಂಡಿಯಲ್ಲೇ ಹಾಕತಕ್ಕದ್ದು. Put Your Offerings in The Temple Hundi Only
- ಸಾಂಪ್ರದಾಯಿಕ ಉಡುಪಿನಲ್ಲಿ ಬರಬೇಕು, ತುಂಡುಡುಗೆ ನಿಷೇಧಿಸಿದೆ. Please Follow Traditional dress code, Indecent dress are not allowed
- ದೇವಸ್ಥಾನಕ್ಕೆ ಹರಕೆ ಕಾಣಿಕೆಗಳನ್ನು ಅರ್ಪಿಸುವವರು ಪಾರುಪತ್ಯಗಾರರಿಂದ ರಶೀದಿಯನ್ನು ಪಡೆದುಕೊಳ್ಳತಕ್ಕದ್ದು. Those Who want to Give Offerings must take Proper Receipts From the Counter
- ದೇವಸ್ಥಾನದ ಅಭಿವೃದ್ಧಿಗೆ ಧನಸಹಾಯ ಮಾಡುವವರು ಭಕ್ತಜನ ಸಂಘದ ಕಛೇರಿಯಲ್ಲಿ ರಶೀದಿಯನ್ನು ಪಡೆದುಕೊಳ್ಳತಕ್ಕದ್ದು. Those Who want to donate for the Progress of the temple must take receipt from Bhaktha jana sangha Office
- ಭಕ್ತಾಧಿಗಳು ದರ್ಶನಕ್ಕಾಗಿ ಸಾಲಿನಲ್ಲಿ ಬರಬೇಕು. Devotees are Requested to Come In Queue for Darshan
- ಪೂಜೆ ಮತ್ತು ಸೇವಾ ರಶೀದಿಗಳು ಅರ್ಚಕರಲ್ಲಿ ದೊರೆಯುವುದಿಲ್ಲ. Pooja & Seva Receipts are Not Available with The Archaks
- ಅನ್ಯ ವಿಚಾರಗಳನ್ನು ಮಾತನಾಡಬೇಡಿ. Avoid Chatting in the Temple
- ದೇವಸ್ಥಾನದ ಆವರಣದೊಳಗೆ ಪ್ಲಾಸ್ಟಿಕ್ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಿದೆ. Using Plastic in The Temple Premises is Strictly Prohibitedದೇವಸ್ಥಾ
- ನದ ಆವರಣದೊಳಗೆ ಉಗುಳಬಾರದು. Spitting Inside The Temple Premises is Strictly Prohibited
ಮನವಿ: ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಪಾಡಿ ಶ್ರೀ ಇಗ್ಗುತ್ತಪ್ಪ ಭಕ್ತ ಜನಸಂಘ, ತಕ್ಕ ಮುಖ್ಯಸ್ಥರು.
ಓಂ ಶ್ರೀ ಈಶ್ವರ ಇಗ್ಗುತ್ತಪ್ಪ ಸ್ವಾಮಿಯೇ ನಮಃ
ಭಕ್ತಾಧಿಗಳ ಗಮನಕ್ಕೆ
1. ‘ತುಲಾಭಾರ ಸೇವೆ’ ಹರಕೆ ತೀರಿಸಲು ಬರುವ ಭಕ್ತಾಧಿಗಳು ತಮ್ಮ ಸೇವೆಗೆ ನಿಗಧಿಯಾದ ಒಂದು ದಿನ ಮುಂಚಿತವಾಗಿ ತಮ್ಮ ತೂಕದ ಅಕ್ಕಿಯನ್ನು (ತುಲಾಭಾರ ಸೇವಾಪಟ್ಟಿಯಲ್ಲಿರುವಂತೆ ಇವರ ಸಾಮಗ್ರಿಗಳೊಂದಿಗೆ) ದೇವಸ್ಥಾನದ ವಾಯುವ ಭಾಗದ ದ್ವಾರದ ಬಳಿ ತಂದು ದೇವಸ್ಥಾನದಲ್ಲಿ ಇರಿಸಬೇಕು.
2. ವಾಹನದಿಂದ ಇಳಿಸಿ ದೇವಸ್ಥಾನದ ಒಳಗೆ ತರಲು ಕೈಗಾಡಿ (Trolly) ಗಳ ವ್ಯವಸ್ಥೆ ಇದೆ. ಈ ಕಾರ್ಯಕ್ಕೆ ಸಹಾಯಕರು ಬೇಕಾದಲ್ಲಿ ಪಾರುಪತ್ಯೆಗಾರರನ್ನು ಸಂಪರ್ಕಿಸಬಹುದು.
3. ಭಕ್ತಾಧಿಗಳು ತುಲಾಭಾರ ಸೇವೆಗೈದು ಇಟ್ಟಂತಹ ಅಕ್ಕಿಯಲ್ಲಿ ಪುನಃ ಇನ್ನೊಬ್ಬರ ತುಲಾಭಾರ ತೂಗುವಂತಿಲ್ಲ ಇದು ದೇವಸ್ಥಾನದ ಸಂಪ್ರದಾಯಕ್ಕೆ ವಿರುದ್ಧ ಹಾಗೂ ಪೂಜಾಫಲ ಸಂಪೂರ್ಣ ಲಭ್ಯವಾಗುವುದಿಲ್ಲ ಎಂಬುದು ಪದ್ಧತಿ.
4. ತುಲಾಭಾದ ಮಾಗುವ ದಿನ ಭಕ್ತಾಧಿಗಳು ಶುಭ್ರ ಶ್ವೇತ ವಸ್ತ್ರ ಧರಿಸತಕ್ಕದ್ದು ಹಾಗೂ ಕನಿಷ್ಠ ಪಕ್ಷ 7 ದಿವಸಗಳಿಂದ ಸಸ್ಯಹಾರಿಗಳಾಗಿರಬೇಕು.
5. ತುಲಾಭಾರದ ಸಮಯದಲ್ಲಿ ಹೆಂಗಸರು ತಲೆಕೂದಲನ್ನು ಒಪ್ಪ ಓರಣದಿಂದ ಕಟ್ಟರ ತಕ್ಕದ್ದು.
6. ಸೂತಕ ಪೊಲೆಂದಲೆ ಇರುವ ಕುಟುಂಬದ ಸದಸ್ಯರು ತುಲಾಭಾರ ತೂಗುವಂತಿಲ್ಲ.
7. ಯಾವುದೇ ಜಾತಿ ಮತ ಭೇಧವಿಲ್ಲದೆ ಮೇಲೆ ತಿಳಿಸಿದ ನಿಭಂಧನೆಗಳಿಗೆ ಅನುಗುಣವಾಗಿ ಭಕ್ತಾಧಿಗಳು ಬಂದು ತುಲಾಭಾರ ಸೇವೆಗೈದು ದೇವರ ಕೃಪಾಶೀರ್ವಾದ ಹೊಂದಲು ಕೋರಲಾಗಿದೆ.
8. ತುಲಾಭಾರ ಸೇವೆಗೈಯ್ಯುವ ಸಂಧರ್ಭ ಭಕ್ತಾಧಿಗಳು ಮೊಬೈಲ್ ಬಳಸುವಂತಿಲ್ಲ, ವೀಡಿಯೋಗ್ರಾಫಿ ಮಾಡುವಂತಿಲ್ಲ. ವಿಶೇಷ ಸಂಧರ್ಭಗಳಲ್ಲಿ ದೇವಸ್ಥಾನದ ಪಾರುಪತ್ಯೆಗಾರರ ಅನುಮತಿ ಪಡೆಯತಕ್ಕದು.
9. ದೇವಸ್ಥಾನದ ಆಡಳಿತ ಮಂಡಳಿಯ ಅಥವಾ ಪಾರುಪತ್ಯಗಾರದ ಅನುಮತಿಯಿಲ್ಲದೆ ದೇವರ “ನಡೆ” ಯಲ್ಲಿ (ನಮಸ್ಥಾದ ಮಂಟಪದಲ್ಲಿ) ಹಾಡು, ನೃತ್ಯ, ಸಿನಿಮಾ ಶೂಟಿಂಗ್ ನಡೆಸುವಂತಿಲ್ಲ.
10. ದೇವಸ್ಥಾನದ ದೇವನಡೆಯಲ್ಲಿ ದೇವತಕರು ನಿತ್ಯ ಪೂಜೆಯ ನಂತರ ದಿನಂಪ್ರತಿ ಭಕ್ತಾಧಿಗಳ ಆಶೋತ್ತರ ಕಷ್ಟ ಕಾರ್ಪಣ್ಯಗಳ ಬಗ್ಗೆ ಭಕ್ತರ ಮನವಿಯಂತೆ ಪ್ರಾರ್ಥಿಸುವರು ಈ ಸಮಯದಲ್ಲಿ ನಿಶ್ಚಬ್ರತೆ ಕಾಪಾಡಿ ಮೊಬೈಲ್ ರಿಂಗಣವಾಗದಂತೆ ನೋಡಿಕೊಳ್ಳುವುದು.
11. “ವಸ್ತ್ರ ಸಂಹಿತೆ”ಯ ನಿಯಮವನ್ನು ಐಡ್ಡಾಯವಾಗಿ ಪಾಲಿಸುವುದು.
12. “ತುಲಾಭಾರ ಸೇವೆ” ಮಾಡಿಸುವ ಭಕ್ತಾಧಿಗಳು 15 ದಿವಸ ಮುಂಚಿತವಾಗಿ ಕಛೇರಿಯಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳತಕ್ಕದು.
13. ಮಲಾಭಾರ ಸೇವೆಯ ನೋಂದಾವಣಾ ವಿಷಯದಲ್ಲಿ ಪಾರುಪತ್ಯೆಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ.
14. ನಗ ನಾಡ್ಯ / ಆಭರಣ ರೂಪದಲ್ಲಿ ಹರಕೆ ಒಪ್ಪಿಸುವ ಭಕ್ತರು ಸದರಿ ಹರಕೆ ಕಾಣಿಕೆಯನ್ನು ದೇವನಡೆಯಲ್ಲಿ ದೇವತಕ್ಕರ ಸಮ್ಮುಖದಲ್ಲಿ ಪ್ರಾರ್ಥನೆ ಮಾಡಿಸಿ ಒಪ್ಪಿಸಿದ ನಂತರ ಸದರಿ ಭಕ್ತರೇ ಭಕ್ತಜನ ಸಂಘದ ಕಛೇರಿ ಅಥವಾ ವ್ಯವಸ್ಥಾಪನಾ ಸಮಿತಿ ಕಛೇರಿಯಲ್ಲಿ ಒಪ್ಪಿಸಿ ರವೀನಿ ಪಡೆಯತಕ್ಕದ್ದು.
ಪಾಡಿ ಶ್ರೀ ಇಗ್ಗುತ್ತಪ್ಪ ಭಕ್ತಜನ ಸಂಘ ಹಾಗೂ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ
ಅಧ್ಯಕ್ಷರು: 9008496136
ಪಾರು ಪತ್ಯಗಾರರು: 9611112162