ತುಳುನಾಡಿನ ಕರಾವಳಿ ಮುಗೇಯಬೋವಿ ಸಮುದಾಯದವರ ಏಳು-ನಾಲ್ಕು ಹನ್ನೊಂದು ದೈವಸ್ಥಾನಗಳಲ್ಲಿ ಪ್ರಸಿದ್ಧವಾದ ಕಾಸರಗೋಡು ಜಿಲ್ಲೆಯ ಆದೂರು ಗ್ರಾಮದ ಶ್ರೀ ಭಗವತೀ ದೈವಸ್ಥಾನದಲ್ಲಿ ಸುಮಾರು 351 ವರ್ಷಗಳ ಬಳಿಕ, 2025 ಜನವರಿ 19ರಿಂದ 24ವರೆಗೆ ಕ್ಷೇತ್ರ ತಂತ್ರಿವರ್ಯರಾದ ಕುಂಟಾರು ಬ್ರಹ್ಮಶ್ರೀ ವಾಸುದೇವ ತಂತ್ರಿಯವರ ಮಾರ್ಗದರ್ಶನದಲ್ಲಿ, ವಿವಿಧ ಆಚಾರನುಷ್ಠಾನ ವಿಧಿಪೂರ್ವಕ ಹಾಗೂ ವಿವಿಧ ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮಹಾಕಳಿಯಾಟ (ಪೆರುಂಕಳಿಯಾಟ) ಮಹೋತ್ಸವವು ವಿಜೃಂಭಣೆಯಿಂದ ನಡೆಯಲಿದೆ.
ನೂರಾರು ವರ್ಷಗಳ ಹಿಂದೆ, ಬಲ್ಲಾಳ ರಾಜವಂಶಸ್ಥರ ಕಾಲದಲ್ಲಿ ಈ ದೈವಸ್ಥಾನವು ನಿರ್ಮಾಣಗೊಂಡಿತೆಂದು ಪ್ರತೀತಿ. ಆದೂರು ಮುಗೇಯಬೋವಿ ದೈವಸ್ಥಾನವು ಇತರ ದೈವಸ್ಥಾನಗಳಿಗಿಂತ ವ್ಯತ್ಯಸ್ತವಾಗಿ ಚೈತನ್ಯಪೂರ್ಣವಾದ ನೆಲ-ಜಲ ಕಂಡುಕೊಳ್ಳುತ್ತಾ ಪೂಜ್ಯ ಮೂವರು ದೇವಿಯರು ಒಂದೇ ಪೀಠದಲ್ಲಿ ಕುಳಿತಿರುವ ಅಪೂರ್ವ ಸಾನ್ನಿಧ್ಯವೂ ಇದಾಗಿದೆ. ಈ ಪ್ರದೇಶದ ಗ್ರಾಮ ದೇವಸ್ಥಾನವಾದ ಮಲ್ಲಾವರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದೊಂದಿಗೆ ಶ್ರೀ ಭಗವತೀ ದೈವಸ್ಥಾನವು ಅವಿನಾಭಾವ ಸಂಬಂಧವನ್ನು ಹೊಂದಿದೆ. ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆನ್ನೇಯದಲ್ಲಿ ಹರಿಯುವ ತೊರೆಯ ದಡದಲ್ಲಿ ಪೂಜ್ಯದೇವಿಯರ ಶಕ್ತಿ ಚೈತನ್ಯವು ತುಂಬಿ ತುಳುಕಿ ಮೆರೆಯುತ್ತಾ, ನಂಬಿ ಬರುವ ಭಕ್ತರನ್ನು ಸದಾ ಪೊರೆಯುವ ಆಶಾಚೈತನ್ಯವಾಗಿರುತ್ತದೆ.
ಅಡೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಕುಂಟಾರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ ಮತ್ತು ಮಲ್ಲಾವರ ಶ್ರೀ ಪಂಚಲಿಂಗೇಶ್ವರ ದೇವರ ಸಾನಿಧ್ಯಗಳೊಂದಿಗೆ ಬೆಸೆದುಕೊಂಡು, ಅತೇ ಚಾರಿತ್ರಿಕ ಮಹತ್ವವಿರುವ ಶ್ರೀ ಭಗವತೀ ದೈವಸ್ಥಾನವು ಉತ್ತರ ಮಲಬಾರಿನ ಭಗವತೀ ಸಾನಿಧ್ಯಗಳಲ್ಲಿಯೇ ಪ್ರತ್ಯೇಕತೆಯನ್ನು ಹೊಂದಿರುವ ಅಪೂರ್ವ ಕ್ಷೇತ್ರವಾಗಿದೆ. ಮಹಾಕಳಿಯಾಟ ಮಹೋತ್ಸವದ ದಿನಗಳಲ್ಲಿ ಪ್ರಧಾನ ಭಗವತಿಯರಾದ ಪುನ್ನಕ್ಕಾಲ್ ಭಗವತಿ, ಉಚೂಳಿ ಕಡವತ್ ಭಗವತಿ, ಆಯಿಟ್ಟಿ ಭಗವತಿ ಮೊದಲಾದ ದೈವಗಳೊಂದಿಗೆ ಶ್ರೀ ವೈರಾಪುರತ್ ವಡಕ್ಕಾನ್‌ಕೋಡಿ( ಬೀರನ್ ದೈವ), ಎಲ್ಲಾಪುರತ್ತೆ ಅಸುರಾಳನ್ ಹಾಗೂ ಉಪದೇವತೆಗಳಾದ ಕಲ್ಲಂಕರ ಚಾಮುಂಡಿ, ಮೇಚ್ಚೇರಿ ಚಾಮುಂಡಿ, ಮಲಾಂಕರ ಚಾಮುಂಡಿ, ಅಣ್ಣಪ್ಪ ಪಂಜುರ್ಲಿ, ಕುಂಟಾರು ಚಾಮುಂಡಿ, ವಿಷ್ಣುಮೂರ್ತಿ, ಪಡೈಧೂಮಾವತಿ, ಪನ್ನಿಕುಳತ್ತ ಚಾಮುಂಡಿ, ಕೊರತ್ತಿಯಮ್ಮ, ತೂವಕ್ಕಾಳಿ, ತೂವಕ್ಕಾರನ್, ಕಲ್ಲುರ್ಟಿ-ಕಲ್ಕುಡ, ಗುಳಿಗೆ ಮೊದಲಾದ ಒಂದುಕುಂದು ನಲ್ವತ್ತು ದೈವಗಳು, (ಪೂಜ್ಯ ನಾಗಾರಾಧನೆಯೊಂದಿಗೆ) ಕ್ಷೇತ್ರಾಂಗಣದಲ್ಲಿ ನರ್ತಿಸಿ, ಭಕ್ತರನ್ನು ಹರಸಲಿದ್ದಾರೆ.
ವೈವಿಧ್ಯ ಆಚಾರಗಳು, ವಿಭಿನ್ನ ಅನುಷ್ಠಾನಗಳೊಂದಿಗೆ, ಭಯ ಭಕ್ತಿಯೂ ಪರಸ್ಪರ ಸ್ನೇಹವೂ, ವಿಶ್ವಾಸವೂ ಸಮ್ಮಿಳಿತವಾದ ಈ ಮಹಾಕಳಿಯಾಟ ಮಹೋತ್ಸವವು ಪ್ರತಿಯೊಬ್ಬ ಆಸ್ತಿಕರ ಮನಸ್ಸಿನಲ್ಲಿಯೂ ಅಚ್ಚಳಿಯದೆ ಚಿರಸ್ಥಾಯಿಯಾಗಲಿದೆ.
ಮಹೋತ್ಸವದ ಅಂಗವಾಗಿ ಮಹಾಕಳಿಯಾಟದ ಡಂಗುರ ಸಾರುವ ಮೆರವಣಿಗೆಯು ಮಲ್ಲಾವರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಹಾಗೂ ಕುಂಟಾರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನಗಳಿಗೆ ಘೋಷಯಾತ್ರೆಯ ವಿಜೃಂಭಣೆಯ ಮೂಲಕ ಸಾಗಲಿದೆ. ಉತ್ಸವದ ಅಂಗವಾಗಿ ಆಚಾರ್ಯ ಸಂಗಮ, ಚಿತ್ರಕಲಾ ಕಮ್ಮಟ, ಸಾಂಸ್ಕೃತಿಕ ಸಂಗಮ, ಮಹಿಳಾ ಸಂಗಮ, ಸರ್ವಧರ್ಮ ಸಮ್ಮೇಳನ, ಗ್ರಾಮೋತ್ಸವ ಮೊದಲಾದ ವೈವಿಧ್ಯಮಯವಾದ ಕಲಾ-ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಸಲಾಗುವುದು. ಆದೂರು ಏಟ್ನಾಡು ಗುತ್ತಿನ ಮನೆಯಿಂದ ಧ್ವಜಸ್ತಂಭದ ಮರ (ಕೊಡಿಮರ) ಮೆರವಣಿಗೆ, ಸಿರಿಮುಡಿ ಮರ ಕಡಿಯುವುದು ಮೊದಲಾದ ಕಾರ್ಯಕ್ರಮಗಳನ್ನು ಧಾರ್ಮಿಕ ವಿಧಿವಿಧಾನಗಳೊಂದಿಗೆ ಪೂರೈಸಿ, ಅದ್ದೂರಿಯ ಶೋಭಾಯಾತ್ರೆ ಸಹಿತ ದೈವಸ್ಥಾನಕ್ಕೆ ಮರಳಿ ಬರಲಾಗುವುದು.
2025 ಜನವರಿ 19 ರವಿವಾರದಂದು ಬ್ರಾಹ್ಮ ಮುಹೂರ್ತದಲ್ಲಿ, ಆದೂರು ಮಲ್ಲಾವರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಿಂದ ವಿಧಿವಿಧಾನಗಳೊಂದಿಗೆ ದೀಪವನ್ನು ಪ್ರಜ್ವಲಿಸಿ, ಶ್ರೀಭಗವತೀ ದೈವಸ್ಥಾನಕ್ಕೆ ಚಿತ್ತೈಸಿ, ನಂತರ ಧ್ವಜಾರೋಹಣದೊಂದಿಗೆ ಮಹಾಕಳಿಯಾಟ ಮಹೋತ್ಸವ ಪ್ರಾರಂಭಗೊಳ್ಳಲಿದೆ. ಅದೇ ದಿನ ಕಾನಕ್ಕೋಡು ದೊಡ್ಡಮನೆ ತರವಾಡಿನಿಂದ ವಿಜೃಂಭಣೆಯ ಹಸಿರುವಾಣಿ ಹೊರೆಕಾಣಿಕೆಯ ಮೆರವಣಿಗೆಯೂ ಆಗಮಿಸಲಿದೆ. 2025 ಜನವರಿ 19 ರವಿವಾರದಿಂದ 24 ಶುಕ್ರವಾರದ ತನಕ ಆರು ದಿವಸಗಳ ವರೆಗೆ ವಿವಿಧ ದೈವ ಕೋಲೋತ್ಸವಗಳೊಂದಿಗೆ ಮಹಾಕಳಿಯಾಟ ಮಹೋತ್ಸವ ಕಾರ್ಯಕ್ರಮಗಳು ಅತೀ ವಿಜೃಂಭಣೆಯಿಂದ ಜರಗಲಿರುವುದು.
ಈ ಮಹಾಕಳಿಯಾಟದ ಪರಿಪೂರ್ಣ ಯಶಸ್ಸಿಗಾಗಿ ಕಳೆದ 2017 ಸೆಪ್ಟೆಂಬರ್ 10ರಂದು ಕಳಿಯಾಟ ನಿರ್ವಾಹಕ ಸಮಿತಿ, ವಿವಿಧ ಪ್ರಾದೇಶಿಕ ಸಮಿತಿ ಮತ್ತು ಮಾತೃ ಸಮಿತಿ ಒಳಗೊಂಡ ವಿಶಾಲವಾದ ಮಹೋತ್ಸವ ಸಮಿತಿಯನ್ನು ರಚಿಸಿ, ಸಮಗ್ರ ಕಾರ್ಯ ಚಟುವಟಿಕೆ ನಿರಂತರವಾಗಿದೆ.
ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೆ ಸುಮಾರು ಮೂರು ಕೋಟಿ ರೂಪಾಯಿಗೂ ಅಧಿಕ ವೆಚ್ಚವನ್ನು ಅಂದಾಜು ಮಾಡಲಾಗಿದೆ. ಈ ಮಹಾಪುಣ್ಯ ಕಾರ್ಯಕ್ರಮದಲ್ಲಿ, ಮುಗೇಯಬೋವಿ ಸಮುದಾಯದ ಹನ್ನೊಂದು ದೈವಸ್ಥಾನಗಳ ಪೂಜ್ಯ ಸ್ಥಾನಿಕರು, ಸದಸ್ಯರು, ಶ್ರೀ ಕ್ಷೇತ್ರದ ತಂತ್ರಿವರ್ಯರು, ಮಲ್ಲಾವರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರು, ಆನುವಂಶಿಕ ಮೊಕೇಸರರು, ಮಲ್ಲಾವರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸೇವಾ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಇತರ ಸಮುದಾಯ ಕ್ಷೇತ್ರಗಳ ಆಚಾರಕರ್ಮಿಗಳು-ಸ್ಥಾನಿಕರು, ಭಕ್ತರು, ಕೋಲಧಾರಿಗಳು, ಮುಸ್ಲಿಂ-ಕ್ರಿಶ್ಚಿಯನ್ ಆರಾಧನಾಲಯಗಳ ಪ್ರಮುಖರು ಕೂಡಾ ಭಾಗವಹಿಸಲಿದ್ದಾರೆ.
ಜಾತಿ-ಮತ ಚಿಂತನೆಗೆ ಅತೀತವಾಗಿ, ಈ ಮಹಾಕಳಿಯಾಟ ಮಹೋತ್ಸವವನ್ನು ಈ ನಾಡಿನ ಮಹತ್‌ಸಂಭ್ರಮದ ಉತ್ಸವವಾಗಿ ಮಾರ್ಪಡಿಸಿ, ಪೂಜ್ಯಶ್ರೀ ಭಗವತಿ ಅಮ್ಮ ಮತ್ತು ಪರಿವಾರ ದೈವಂಗಳ ಅನುಗ್ರಹವನ್ನು ಪಡೆಯುವುದಕ್ಕಾಗಿ, ಸರ್ವರೂ ಸ್ವತಃ ಉಪಸ್ಥಿತರಿದ್ದು ತನು-ಮನ-ಧನ-ಧಾನ್ಯಗಳೊಂದಿಗೆ ಸಹಕರಿಸಿ, ಆರು ದಿವಸಗಳ ಈ ಮಹಾಪುಣ್ಯಕಾರ್ಯಗಳನ್ನು ಯಶಸ್ವಿಗೊಳಿಸಬೇಕೆಂದು ಪೂಜನೀಯ ಸ್ಥಾನಿಕರು ಮತ್ತು ಶ್ರೀ ಮಹಾಕಳಿಯಾಟ ಮಹೋತ್ಸವ ಸಮಿತಿ ಭಕ್ತಿಪೂರ್ವಕವಾಗಿ ವಿಜ್ಞಾಪಿಸಿಕೊಂಡಿದೆ.
ಹೆಚ್ಚಿನ ಮಾಹಿತಿಗಾಗಿ: ಶ್ರೀ ಹರಿಶ್ಚಂದ್ರ ಆರ್. ‘ಸುತಿರಾಂ’ ಬೇರಿಕೆ, ಪ್ರಧಾನ ಕಾರ್ಯದರ್ಶಿಗಳು, ಮೊ: 9449521400 ಸಂಪರ್ಕಿಸಬಹುದಾಗಿದೆ.