ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮ ಹಾಗೂ ಯೋಜನೆಗಳ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ಕಾರ್ಯಾಗಾರ

Reading Time: 5 minutes

ಮಡಿಕೇರಿ ಜ.16: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೂಲಕ 48 ಕ್ಕೂ ಹೆಚ್ಚು ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳು ನಡೆಯುತ್ತಿದ್ದು, ಇವುಗಳ ಬಗ್ಗೆ ಪ್ರತಿಯೊಬ್ಬರಲ್ಲಿಯೂ ಸಹ ಜಾಗೃತಿ ಅಗತ್ಯ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ಅವರು ತಿಳಿಸಿದ್ದಾರೆ.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/Ln5WiyAJxApLbTxD0ttgcU ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನಗರದ ಡಿಎಚ್‍ಒ ಅವರ ಕಚೇರಿ ಸಭಾಂಗಣದಲ್ಲಿ ಗುರುವಾರ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮ ಹಾಗೂ ಯೋಜನೆಗಳ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ಏರ್ಪಡಿಸಲಾಗಿದ್ದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ವಿವಿಧ ಕಾರ್ಯಕ್ರಮಗಳನ್ನು ಸಾರ್ವಜನಿಕರಿಗೆ ಪರಿಣಾಮಕಾರಿಯಾಗಿ ತಲುಪಿಸಲು ಪ್ರಯತ್ನಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರು ಹೇಳಿದರು.

‘ಜಿಲ್ಲೆಯಲ್ಲಿ ಜನವರಿಯಿಂದ ನವೆಂಬರ್ ಅಂತ್ಯದವರೆಗೆ ನಾಯಿ ಕಡಿತ 4015 ಪ್ರಕರಣಗಳು, ಹಾವು ಕಡಿತ 307 ಪ್ರಕರಣಗಳು, ಭೇದಿ 2292 ಪ್ರಕರಣಗಳು, ಟೈಪಾಯಿಡ್ 846 ಪ್ರಕರಗಣಗಳು, ಡೆಂಗ್ಯೂ 274 ಪ್ರಕರಣಗಳು, ಕಾಲರಾ 3 ಪ್ರಕರಣ, ಮಲೇರಿಯಾ 3, ಇಲಿಜ್ವರ 13 ಪ್ರಕರಣಗಳು ವರದಿಯಾಗಿದ್ದು, ಯಾವುದೇ ರೀತಿಯ ಸಾವು ಸಂಭವಿಸಿಲ್ಲ ಎಂದು ತಿಳಿಸಿದರು.’

ಜಿಲ್ಲೆಯಲ್ಲಿ ನವೆಂಬರ್ ಅಂತ್ಯದ ವರೆಗೆ ತಾಯಿ ಮರಣ ಸಂಭವಿಸಿಲ್ಲ. ಆದರೆ ಡಿಸೆಂಬರ್ ತಿಂಗಳಲ್ಲಿ ಒಬ್ಬ ತಾಯಿ ಮರಣ ಹೊಂದಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಶಾಲಾ-ಕಾಲೇಜು ವ್ಯಾಪ್ತಿಯಲ್ಲಿ ತಂಬಾಕು ಮುಕ್ತಗೊಳಿಸುವಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲಾಗುತ್ತಿದೆ. ಏಪ್ರಿಲ್‍ನಿಂದ ನವೆಂಬರ್ ವರೆಗೆ 53 ಶಾಲೆಗಳಲ್ಲಿ, 30 ಕಾಲೇಜುಗಳಲ್ಲಿ ತಂಬಾಕು ಸಂಬಂಧ ಜಾಗೃತಿ ಮೂಡಿಸಲಾಗಿದೆ ಎಂದರು.

‘ಕೋವಿಡ್ ಸಂದರ್ಭ ಹಾಗೂ ಇತರೆ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಸಂಬಂಧಿಸಿದಂತೆ ಹೆಚ್ಚಿನ ಅರಿವು ಮೂಡಿಸುವಲ್ಲಿ ಮಾಧ್ಯಮಗಳ ಪಾತ್ರ ಅತೀ ಮುಖ್ಯವಾಗಿದೆ. ಆ ನಿಟ್ಟಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜೊತೆ ಕೈಜೋಡಿಸಿ ಹೆಚ್ಚಿನ ಅರಿವು ಮೂಡಿಸುವಲ್ಲಿ ಸಹಕರಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ಸರ್ಕಾರದ ಆಶಯದಂತೆ ‘ಎಲ್ಲೆಡೆ ಆರೋಗ್ಯ, ಎಲ್ಲರಿಗೂ ಆರೋಗ್ಯ’ ಎಂಬಂತೆ, ಆರೋಗ್ಯ ಸೇವೆ ಕಲ್ಪಿಸುವಲ್ಲಿ ಶ್ರಮಿಸಲಾಗುತ್ತಿದೆ ಎಂದು ಡಾ.ಸತೀಶ್ ಕುಮಾರ್ ಅವರು ನುಡಿದರು.’

ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಆನಂದ್ ಅವರು ಮಾತನಾಡಿ ಕುಟುಂಬ ಯೋಜನೆ ಕಾಪಾಡುವ ನಿಟ್ಟಿನಲ್ಲಿ ಸಂತಾನ ಹರಣ ಶಸ್ತ್ರಚಿಕಿತ್ಸೆಯನ್ನು ಏರ್ಪಡಿಸಲಾಗುತ್ತಿದೆ. ಆ ನಿಟ್ಟಿನಲ್ಲಿ ಪುರುಷರ ಸಹಭಾಗಿತ್ವ ಅತ್ಯಗತ್ಯ ಎಂದರು.

ಪ್ರಸಕ್ತ ವರ್ಷದಲ್ಲಿ 18 ಗುರಿಯಲ್ಲಿ 10 ಮಂದಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ಪುರುಷರಿಗೆ 1100 ರೂ. ಪ್ರೋತ್ಸಾಹ ಧನ ನೀಡಲಾಗುತ್ತದೆ ಎಂದರು.

ಪ್ರಸವ ಪೂರ್ವ ಲಿಂಗಪತ್ತೆ ಕಾರ್ಯವು ಕಾನೂನು ಬಾಹಿರವಾಗಿದ್ದು, ಸ್ಕ್ಯಾನಿಂಗ್ ಸೆಂಟರ್‍ಗಳು ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳಬೇಕು. ನೋಂದಣಿ ಮಾಡಿಸಿಕೊಳ್ಳದಿದ್ದಲ್ಲಿ ಕಠಿಣ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮೂರು ತಿಂಗಳಿಗೊಮ್ಮೆ ಸ್ಕ್ಯಾನಿಂಗ್ ಸೆಂಟರ್‍ಗಳಿಗೆ ದಿಢೀರ್ ಭೇಟಿ ನೀಡಿ ಮಾಹಿತಿ ಪಡೆಯಲಾಗುತ್ತಿದೆ. ಒಂದು ಪ್ರಕರಣ ನ್ಯಾಯಾಲಯ ಹಂತದಲ್ಲಿದೆ ಎಂದು ಡಾ.ಆನಂದ್ ಅವರು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಖಾಸಗಿ ಆರೋಗ್ಯ ಸಂಸ್ಥೆಗಳು 200 ಕ್ಕೂ ಹೆಚ್ಚು ನೋಂದಣಿಯಾಗಿವೆ. ನೋಂದಣಿಯಾಗದಿದ್ದಲ್ಲಿ ಹತ್ತಿರದವರು ಮಾಹಿತಿ ನೀಡುವಂತಾಗಬೇಕು ಎಂದು ಕೋರಿದರು.

ಶ್ರವಣದೋಷ ನಿವಾರಣಾ ಕಾರ್ಯಕ್ರಮದಲ್ಲಿ ಶ್ರವಣ ಉಪಕರಣ ನೀಡಲಾಗುತ್ತದೆ. ಕ್ಷಯರೋಗ ನಿಯಂತ್ರಣಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಹೆಚ್ಚಿನ ಜಾಗೃತಿ ಮೂಡಿಸಲಾಗುತ್ತಿದೆ. ಉಚಿತ ಔಷಧಿ ನೀಡಲಾಗುತ್ತದೆ ಎಂದರು.

ಎಚ್‍ಐವಿ ಬಗ್ಗೆ ಆಪ್ತ ಸಮಾಲೋಚನೆ ಮೂಲಕ ಹೆಚ್ಚಿನ ಜಾಗೃತಿ ಮೂಡಿಸಲಾಗುತ್ತಿದೆ. ಜಿಲ್ಲೆಯಲ್ಲಿ 11 ಐಸಿಟಿಸಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ ಎಂದರು.

ಜಿಲ್ಲಾ ಆರ್‍ಸಿಎಚ್ ಅಧಿಕಾರಿ ಡಾ.ಮಧುಸೂದನ ಅವರು ಮಾತನಾಡಿ ಜನನಿ ಸುರಕ್ಷಾ ಯೋಜನೆ, ಜನನಿ ಶಿಶು ಸುರಕ್ಷಾ ಕಾರ್ಯಕ್ರಮ, ಅಪೌಷ್ಟಿಕ ಮಕ್ಕಳ ಪಾಲನಾ ಕೇಂದ್ರ, ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಯೋಜನೆ, ನ್ಯೂಮೋನೀಯಾ ತಡೆಗಟ್ಟುವಿಕೆ, ಸಾಮಾಜಿಕ ಜಾಗೃತಿ ಮೂಡಿಸುವುದು, ಶುಚಿ ಕಾರ್ಯಕ್ರಮ, ವೈಪ್ಸ್, ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ, ರಾಷ್ಟ್ರೀಯ ಕಿಶೋರಿ ಸ್ವಾಸ್ಥ್ಯ ಕಾರ್ಯಕ್ರಮ(ಸ್ನೇಹ ಕ್ಲಿನಿಕ್), ರಾಷ್ಟ್ರೀಯ ಅತಿಸಾರ ಭೇದಿ ನಿಯಂತ್ರಣ, ರಾಷ್ಟ್ರೀಯ ಜಂತುಹುಳು ನಿವಾರಣೆ ಹೀಗೆ ಹಲವು ಕಾರ್ಯಕ್ರಮಗಳು ಇವೆ ಎಂದರು.

ಜಿಲ್ಲಾ ಸರ್ವೇಕ್ಷಣಾ ಘಟಕದ ಅಧಿಕಾರಿ ಡಾ.ಶ್ರೀನಿವಾಸ್ ಅವರು ಮಾತನಾಡಿ ಎನ್‍ಪಿಎನ್‍ಸಿಡಿ, ಸಮಗ್ರ ರೋಗಗಳ ಕಣ್ಗಾವಲು ಯೋಜನೆ, ರಾಷ್ಟ್ರೀಯ ಕೀಟ ಜನ್ಯ ರೋಗಗಳ ನಿಯಂತ್ರಣ, ರಾಷ್ಟ್ರೀಯ ಅಯೋಡಿನ್ ಕೊರತೆ ರೋಗಗಳ ನಿಯಂತ್ರಣ, ರೇಬಿಸ್ ನಿಯಂತ್ರಣ, ಹವಾಮಾನ ಬದಲಾವಣೆ ಮತ್ತು ಮಾನವ ಆರೋಗ್ಯ ರಾಷ್ಟ್ರೀಯ ಕಾರ್ಯಕ್ರಮ, ಆರೋಗ್ಯ ಮತ್ತು ಕ್ಷೇಮ ಕೇಂದ್ರ, ಎನ್‍ಪಿಎನ್‍ಸಿಡಿ ಕಾರ್ಯಕ್ರಮ, ಎನ್‍ಪಿಪಿಸಿ ಕಾರ್ಯಕ್ರಮ, ಎನ್‍ಪಿಎಚ್‍ಸಿಇ ಕಾರ್ಯಕ್ರಮ, ರಾಷ್ಟ್ರೀಯ ತಂಬಾಕು ನಿಯಂತ್ರಣ ಹೀಗೆ ವಿವಿಧ ಕಾರ್ಯಕ್ರಮ ಬಗ್ಗೆ ಮಾಹಿತಿ ನೀಡಿದರು.

ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ ಅವರು ಕಾರ್ಯಕ್ರಮದ ಉದ್ದೇಶ ಕುರಿತು ಮಾಹಿತಿ ನೀಡಿದರು. ದೇವರಾಜು, ಮಾಹಿತಿ ಶಿಕ್ಷಣ ವಿಭಾಗದ ಪಾಲಾಕ್ಷ, ಮಂಜುಳ, ಜ್ಯೋತಿ, ಸುನಿತಾ ಇತರರು ಇದ್ದರು.

ಹಂಚಿಕೊಳ್ಳಿ
0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments
error: Content is protected !!
0
Would love your thoughts, please comment.x
()
x