ಎಸ್.ಬಿ. ಭರತ್ ಕುಮಾರ್(ಶುಂಠಿ ಭರತ್)ರವರು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಗೌಡಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದಾರೆ.
ಜನಸೇವೆ ಹಾಗೂ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸೇವೆ ಸಲ್ಲಿಸುವ ದೃಷ್ಠಿಕೋನದಿಂದ ಸಹಕಾರ ಕ್ಷೇತ್ರಕ್ಕೆ ಧುಮುಕಿದ ಎಸ್.ಬಿ. ಭರತ್ ಕುಮಾರ್ರವರು, 1994 ರಲ್ಲಿ ಗೌಡಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಗೊಂಡು ಮೊದಲ ಬಾರಿಗೆ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. ಅಲ್ಲಿಂದ ಮುಂದಿನ ಅವಧಿಯಲ್ಲಿ ಸಂಘದ ಚುನಾವಣೆಯಲ್ಲಿ ಸತತವಾಗಿ ಸ್ಪರ್ಧಿಸಿ ಆಯ್ಕೆಗೊಂಡು ಪ್ರಸ್ತುತ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರನ್ನು”ಸರ್ಚ್ ಕೂರ್ಗ್ ಮೀಡಿಯಾ”ವು ಪ್ರಸ್ತುತ ಪಡಿಸಿರುವ “ಕೊಡಗು ಸಹಕಾರ” ಎಂಬ ಕೊಡಗಿನ ಸಹಕಾರ ಚಳುವಳಿಯ ಡಿಜಿಟಲ್ ದಾಖಲೆಗೆ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಎಸ್.ಬಿ. ಭರತ್ ಕುಮಾರ್ರವರು, “ನಾನು ಸಹಕಾರ ಕ್ಷೇತ್ರಕ್ಕೆ ಪಾದರ್ಪಣೆ ಮಾಡಲು ತಮ್ಮ ತಂದೆ ಯವರಾದ ದಿವಂಗತ ಎಸ್.ಎಂ. ಬೆಳ್ಳಿಯಪ್ಪನವರು ಹಿಂದೆ ಗೌಡಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ1966 ರಿಂದ 1976 ರವರೆಗೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು, ಅವರ ಮಾಡುತ್ತಿದ್ದ ಸಮಾಜ ಸೇವೆಯನ್ನು ಮನಗಂಡ ನಾನು ಅವರ ಕೆಲಸ ಕಾರ್ಯಗಳಿಂದ ಸ್ಪೂರ್ತಿಗೊಂಡು 1980ರಲ್ಲಿ ಸಹಕಾರ ಸಂಘದ ಸದಸ್ಯತ್ವವನ್ನು ಪಡೆಯುವ ಮೂಲಕ ನಾನು ಸಹಕಾರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದೆ. ಆಗ ನನಗೆ 23ನೇ ವಯಸ್ಸು. 1994 ರಲ್ಲಿ ಸಂಘದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಗೊಂಡು ಪ್ರಥಮ ಬಾರಿಗೆ ನಿರ್ದೇಶಕನಾದೆ. ಅಲ್ಲಿಂದ 1999ರಿಂದ 2020ರವರಗೆ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದೆ. 2025 ರಿಂದ ಪ್ರಸ್ತುತ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನಲ್ಲಿ 5ವರ್ಷಗಳ ಕಾಲ ಉಪಾಧ್ಯಕ್ಷನಾಗಿ, 5 ವರ್ಷಗಳ ಕಾಲ ನಿರ್ದೆಶಕನಾಗಿ ಕಾರ್ಯನಿರ್ವಹಿಸಿದ್ದೇನೆ. ಸೋಮವಾರಪೇಟೆ ತಾಲ್ಲೂಕು ಸಹಕಾರ ಯೂನಿಯನ್‌ನಲ್ಲಿ ಕಳೆದ 10 ವರ್ಷಗಳಿಂದ ನಿರ್ದೇಶಕನಾಗಿ ಕಾರ್ಯನಿರ್ವಹಿಸುತಿದ್ದೇನೆ. ಸರಿಸುಮಾರು 45 ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ನನ್ನನು ನಾನು ತೊಡಗಿಸಿಕೊಂಡಿದ್ದೇನೆ.
ನನ್ನ ಅಧಿಕಾರವಧಿಯಲ್ಲಿ ಗೌಡಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಂಡು ಕೃಷಿಕರಿಗೆ ಅಲ್ಪಾವಧಿ ಸಾಲಗಳಾದ ಆಭರಣ ಸಾಲ, ಪಿಗ್ಮಿ ಆಧಾರಿತ ಸಾಲ, ವ್ಯಾಪಾರ ಅಭಿವೃದ್ಧಿ ಸಾಲ, ಗೊಬ್ಬರ ಸಾಲ ಮುಂತಾದವುಗಳಿಗೆ ಆದ್ಯತೆಯನ್ನು ನೀಡಿದೆ. 2004 ಬರಗಾಲ ಬಂದಾಗ ಕಾಫಿಗೆ ಬೆಲೆ ಕಡಿಮೆ ಇದ್ದಂತ ಸಂದರ್ಭ ವೈದ್ಯನಾಥ ಸಮಿತಿಯ ಶಿಫಾರಸ್ಸಿನನ್ವಯ ಸರ್ಕಾರದಿಂದ ಒಂದು ಕಾಲು ಕೋಟಿ ಅನುದಾನವನ್ನು ತಂದ ಕಾರಣ ಸಂಘದ ಬಲ ವರ್ಧನೆಗೆ ಕಾರಣವಾಯಿತು. ಈ ಅವಧಿಯಲ್ಲಿ ನಮ್ಮ ಸಂಘಕ್ಕೆ ಎಫ್.ಡಿ. ಉತ್ತಮವಾಗಿ ಹರಿದು ಬಂತು. ಪ್ರಸ್ತುತ ಸಂಘವು 50 ಕೋಟಿ ಸಾಲ ವಹಿವಾಟನ್ನು ಮಾಡುತ್ತಿದೆ. ಇಂದು 235 ಕೋಟಿ ವಹಿವಾಟು ನಡೆಯುತ್ತಿದೆ. ದೊಡ್ಡಮಳ್ತೆ ಗ್ರಾಮದಲ್ಲಿ ಸಂಘದ ಒಂದು ಶಾಖೆಯು ಕಾರ್ಯನಿರ್ವಹಿಸುತ್ತಿದೆ.
ನನ್ನ ಅಧಿಕಾರ ಅವಧಿಯಲ್ಲಿ ಸಂಘದ ಆಡಳಿತ ಕಛೇರಿಯ ಹಳೆ ಕಟ್ಟಡದ ಪುನರ್ ನವೀಕರಣ ಮಾಡಿಸಿದೆ. ಹಾಗೆ ಸಂಘವು ಮೂರು ಎಕರೆ ಕಾಫಿ ತೋಟವನ್ನು ಹೊಂದಿದ್ದು, ಗೋದಾಮಿನ ನವೀಕರಣ ಹೊಸ ಕಟ್ಟಡದ ಕಾಮಗಾರಿಯು ಪೂರ್ಣಗೊಳಿಸಲಾಗಿದೆ. ಶೇಕಡ.10.5% ಬಡ್ಡಿ ದರದಿಂದ ಇಳಿಕೆ ಮಾಡಿ ಶೇಕಡ.8.5% ಮತ್ತು ಶೇಕಡ.9.5% ರ ರೀತಿಯಲ್ಲಿ ಸಾಲಗಳನ್ನು ನೀಡುತ್ತಿದ್ದೇವೆ. ಸಾಮಾನ್ಯ ಸಾಲಗಳನ್ನು 5ಲಕ್ಷದಿಂದ 10 ಲಕ್ಷಕ್ಕೆ ಏರಿಸುವ ಬಗ್ಗೆ ಕ್ರೀಯಾ ಯೋಜನೆ ಮಾಡಲಾಗುತ್ತಿದೆ. ಸ್ವಸಹಾಯ ಸಂಘಗಳಿಗೆ ಶೇಕಡ.12% ರಿಂದ ಶೇಕಡ.10.5% ಬಡ್ಡಿದರದಲ್ಲಿ ಸಾಲಗಳನ್ನುನೀಡುವ ಬಗ್ಗೆ ಹಾಗೂ ಸ್ತ್ರೀ ಶಕ್ತಿ ಸಂಘಗಳಿಗೆ ಹೊಸ ಸಾಲ ನೀಡುವ ಕಾರ್ಯಕ್ರಮ ಪ್ರಗತಿಯಲ್ಲಿದೆ. ಮರಣ ನಿಧಿ 10 ಸಾವಿರದಿಂದ 25,000 ಹಾಗೂ 50,000 ಕ್ಕೆ ಏರಿಸಲಾಗಿದೆ. ಗೌಡಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಈ ಭಾಗದಲ್ಲಿ ಪೆಟ್ರೋಲ್ ಬಂಕ್ ಅನ್ನು ಪ್ರಾರಂಭ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ.
ಒಟ್ಟಿನಲ್ಲಿ ಗೌಡಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಲಾಭದಲ್ಲಿ ಮುಂದುವರಿಯುತ್ತಿದ್ದು ಪ್ರಗತಿಯಲ್ಲಿದೆ. ಹಾಗಾಗಿ ಸಂಘದ ಸದಸ್ಯರಿಗೆ ಶೇಕಡ. 25%ರಷ್ಟು ಡಿವಿಡೆಂಡ್‌ನ್ನು ನೀಡಲಾಗುತ್ತಿದೆ. ಸಂಘವು ಲಾಭವನ್ನು ಹೊಂದಿ ಪ್ರಗತಿಯತ್ತ ಸಾಗಲು ಸಂಘದ ಆಡಳಿತ ಮಂಡಳಿಯ ಉಪಾಧ್ಯಕ್ಷರು, ನಿರ್ದೇಶಕರುಗಳು, ಸದಸ್ಯರುಗಳು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಸಿಬ್ಬಂದಿಗಳು ಹಾಗೂ ಗ್ರಾಹಕರ ಸಹಕಾರ ಅತ್ಯುತ್ತಮವಾಗಿ ದೊರಕುತಿದೆ ಎಂದು ಈ ಸಂದರ್ಭದಲ್ಲಿ ತಿಳಿಸಲು ಹರ್ಷ ವ್ಯಕ್ತಪಡಿಸುತ್ತಿದ್ದೇನೆ.
ಸಹಕಾರ ಸಂಘಗಳಲ್ಲಿ ವ್ಯವಹಾರವು ಆನ್‌ಲೈನ್ ಮುಖಾಂತರ ಡಿಜಿಟಲ್ ರೂಪದಲ್ಲಿ ನಡೆದಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬಹುದು. ಸಹಕಾರ ಕ್ಷೇತ್ರದ ಆಡಳಿತ ಮಂಡಳಿಯಲ್ಲಿ ತೊಡಗಿಸಿಕೊಳ್ಳುವವರು ಸಹಕಾರ ಕ್ಷೇತ್ರದ ಬಗ್ಗೆ ಅರಿವನ್ನು ಮೂಡಿಸಿಕೊಳ್ಳಬೇಕು. ಸಹಕಾರ ಕ್ಷೇತ್ರಕ್ಕೆ ತನ್ನದೆ ಆದ ಇತಿಹಾಸವಿದ್ದು, ಪಾರದಶರ್ಕ ಆಡಳಿತ, ಸೇವಾ ಮನೋಭಾವನೆಯಿಂದ ಕೂಡಿದ ಸಹಕಾರಿಗಳು ಇದ್ದರೆ ಸಹಕಾರ ಕ್ಷೇತ್ರ ಇನ್ನಷ್ಟು ಅಭಿವೃದ್ಧಿ ಹೊಂದುತ್ತದೆ. ಸರ್ಕಾರದ ಹಸ್ತಕ್ಷೇಪ ಸಹಕಾರ ಸಂಘಗಳಲ್ಲಿ ಇರಬಾರದು ಹಾಗೆ ಸಹಕಾರ ಕ್ಷೇತ್ರವು ಸಹಕಾರ ಕ್ಷೇತ್ರವಾಗಿಯೇ ಉಳಿಯಬೇಕು ಎಂಬುವುದು ನನ್ನ ಅಭಿಪ್ರಾಯವಾಗಿದೆ.
ಯಾವುದೇ ಒಂದು ವೃತ್ತಿಯಾಗಲಿ ಅಥವಾ ಕ್ಷೇತ್ರವಾಗಲಿ ಅಲ್ಲಿ ಹಳೇ ಬೇರು ಹೊಸ ಚಿಗುರು ಎಂಬ ವ್ಯವಸ್ಥೆ ಬೇಕೇ ಬೇಕು, ಹಿರಿಯರು ಹಾಗು ಯುವಶಕ್ತಿ ಜೊತೆಗೂಡಿ ಮುಂದುವರೆಯಬೇಕು. ಸಹಕಾರ ಕ್ಷೇತ್ರದಲ್ಲಿ ಯುವಶಕ್ತಿಯಿಂದ ಹೊಸ ಹೊಸ ಸೃಜನಶೀಲ ಚಿಂತನೆಗಳು ಮಾರ್ಗಗಳನ್ನು ಪರೀಕ್ಷಿಸಲು ಹಾಗೂ ಅದನ್ನು ಪ್ರಯೋಗಿಕವಾಗಿ ಜಾರಿಗೆ ತರಲು ಸಾಧ್ಯವಿದೆ, ಆದರಿಂದ ಯುವಶಕ್ತಿಯು ಹೆಚ್ಚಿನ ಸಂಖ್ಯೆಯಲ್ಲಿ ಸಹಕಾರ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕಾಗಿದೆ ಎಂದು ಈ ಸಂದರ್ಭದಲ್ಲಿ ಹೇಳ ಬಯಸುತ್ತಿದ್ದೇನೆ”
ಎಸ್.ಬಿ.ಭರತ್ ಕುಮಾರ್ರವರು, ರಾಜಕೀಯ ಕ್ಷೇತ್ರದಲ್ಲಿ ಸೋಮವಾರಪೇಟೆ ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾದಲ್ಲಿ ಸತತವಾಗಿ 20 ವರ್ಷಗಳ ಕಾ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಹಾಗೆ ತಾಲ್ಲೂಕು ಬಿ.ಜೆ.ಪಿ. ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಪ್ರಸ್ತುತ ಬಿ.ಜೆ.ಪಿ.ಯ ಸಕ್ರೀಯ ಕಾರ್ಯಕರ್ತರಾಗಿದ್ದಾರೆ. ಸಾಮಾಜಿಕ ಕ್ಷೇತ್ರದಲ್ಲಿ ಸೋಮವಾರಪೇಟೆ ತಾಲ್ಲೂಕು ಒಕ್ಕಲಿಗರ ಸಂಘದ ನಿರ್ದೇಶಕರಾಗಿ ಪ್ರಸ್ತುತ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಧಾರ್ಮಿಕ ಕ್ಷೇತ್ರದಲ್ಲಿ ಗೌಡಳ್ಳಿ ವಿದ್ಯಾ ಗಣಪತಿ ದೇವಾಲಯದ ಸ್ಥಾಪಕ ಅಧ್ಯಕ್ಷರಾಗಿದ್ದಾರೆ. ಶೈಕ್ಷಣಿಕ ಕ್ಷೇತ್ರದಲ್ಲಿ ಗೌಡಳ್ಳಿ ಮಲೆಮಲ್ಲೇಶ್ವರ ಪ್ರಾಥಮಿಕ ಹಾಗೂ ಫ್ರೌಡ ಶಾಲೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಎಸ್.ಬಿ. ಭರತ್ ಕುಮಾರ್ರವರ ತಂದೆ ದಿವಂಗತ ಎಸ್.ಎಂ. ಬೆಳ್ಳಿಯಪ್ಪ(ಹಿರಿಯ ಸಹಕಾರಿಗಳು). ತಾಯಿ ದಿವಂಗತ ಗೌರಮ್ಮ. ಪತ್ನಿ ಹಂಸ ಗೃಹಿಣಿಯಾಗಿದ್ದಾರೆ. ಹಿರಿಯ ಮಗ ಶ್ರೀ ರಾಮ್ ಇಂಜಿನಿಯರಿಂಗ್ ಪಧವೀದರರಾಗಿದ್ದಾರೆ. ಕಿರಿಯ ಮಗ ಇಂಜಿನಿಯರಿಂಗ್ ಪಧವೀದರರಾಗಿ ಆಸ್ಟ್ರೇಲೀಯಾ ದೇಶದ ಮೆಲ್ಬೋರ್ನ್‌ನಲ್ಲಿ ಉನ್ನತ್ತ ವ್ಯಾಸಾಂಗ ನಿರತರಾಗಿದ್ದಾರೆ. ಜಯಂತ್ ಕುಮಾರ್ ಮತ್ತು ಗುರುಪ್ರಸಾದ್ ಇಬ್ಬರು ಸಹೋದರರು ಹಾಗೂ ನಾಲ್ಕು ಜನ ಸಹೋದರಿಯರು.
ಮೂಲತಃ ಕೃಷಿಕರಾಗಿರುವ ಎಸ್. ಬಿ.ಭರತ್ ಕುಮಾರ್(ಶುಂಠಿ ಭರತ್)ರವರು, ಪ್ರಸ್ತುತ ಕುಟುಂಬ ಸಮೇತ ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಶುಂಠಿ ಗ್ರಾಮದಲ್ಲಿ ನೆಲೆಸಿದ್ದಾರೆ. ಗೌಡಳ್ಳಿಯಲ್ಲಿ ಶಾಲಾಭಿವೃದ್ಧಿ, ರಸ್ತೆಗಳ ಅಭಿವೃದ್ಧಿ, ಹತ್ತು ಹಲವು ಗ್ರಾಮಾಭಿವೃದ್ಧಿಗಳನ್ನು ಕೈಗೊಂಡು ಗೌಡಳ್ಳಿಯ ಅಭಿವೃದ್ಧಿಯ ಹರಿಕಾರರಾಗಿ ಜನಮಾನಸದಲ್ಲಿ ಜನಾನುರಾಗಿಯಾಗಿದ್ದಾರೆ. ಇವರ ಸಹಕಾರ, ರಾಜಕೀಯ, ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಸೇವೆಯು ಹೀಗೆ ನಿರಂತರವಾಗಿ ಮುಂದುವರೆಯಲಿ ಎಂದು “ಸರ್ಚ್ ಕೂರ್ಗ್ ಮೀಡಿಯಾ” ವು ಹಾರೈಸುತ್ತದೆ.
ಸಂದರ್ಶನ ದಿನಾಂಕ: 20-01-2025