ಕಂಜಿತಂಡ ಕೆ.ಮಂದಣ್ಣ, ಸಹಕಾರಿಗಳು: ಬಿಟ್ಟಂಗಾಲ. Bittangala
ಕಂಜಿತಂಡ ಕೆ. ಮಂದಣ್ಣರವರು ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೊಡಗು ಜೇನು ಮತ್ತು ಮೇಣ ಉತ್ಪಾದಕರ ಸಹಕಾರ ಮಾರಾಟ ಸಂಘದ ಅಧ್ಯಕ್ಷರಾಗಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದಾರೆ.
ಜನಸೇವೆ ಹಾಗೂ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸೇವೆ ಸಲ್ಲಿಸುವ ದೃಷ್ಠಿಕೋನದಿಂದ ಸಹಕಾರ ಕ್ಷೇತ್ರಕ್ಕೆ ಧುಮುಕಿದ ಕಂಜಿತಂಡ ಕೆ. ಮಂದಣ್ಣರವರು, 1985 ರಲ್ಲಿ 302ನೇ ಪೊದಕೇರಿ ಧವಸ ಭಂಡಾರಕ್ಕೆ ಮೊದಲ ಬಾರಿಗೆ ನಿರ್ದೇಶಕರಾಗಿ ಆಯ್ಕೆಗೊಂಡು ಕಾರ್ಯನಿರ್ವಹಿಸಿದ್ದರು. ಅಲ್ಲಿಂದ ಮುಂದಿನ ಮೂರು ಅವಧಿಯಲ್ಲಿ ಸತತವಾಗಿ ಆಯ್ಕೆಗೊಂಡು 2022ರಿಂದ ಪ್ರಸ್ತುತ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಾಗೆ ರುದ್ರುಗುಪ್ಪೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 2005ರಿಂದ 2010ರವರಗೆ ನಿರ್ದೆಶಕರಾಗಿ 2015ರಿಂದ 2018ರವರಗೆ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. 2017ರಲ್ಲಿ ಕೊಡಗು ಸಹಕಾರ ಯೂನಿಯನ್‌ನ ನಿರ್ದೇಶಕರಾಗಿ, ಕೊಡಗು ಸಹಕಾರ ಮಾರಾಟ ಮಹಾ ಮಂಡಲ(ಫೆಡರೇಶನ್) ಇದರ ನಿರ್ದೇಶಕರಾಗಿ 2018-2023 ಹಾಗೂ 2023ರಿಂದ ಪ್ರಸ್ತುತ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೊಡಗು ಜೇನು ಮತ್ತು ಮೇಣ ಉತ್ಪಾದಕರ ಸಹಕಾರ ಮಾರಾಟ ಸಂಘದಲ್ಲಿ 1995-2000 ಸಾಲಿನಲ್ಲಿ ನಿರ್ದೇಶಕರಾಗಿ, 2000-2005ರ ಸಾಲಿನಲ್ಲಿ ಉಪಾಧ್ಯಕ್ಷರಾಗಿ, 2005-2010ರವರಗೆ ಅಧ್ಯಕ್ಷರಾಗಿ, 2010-2015ರವರಗೆ ನಿರ್ದೇಶಕರಾಗಿ, 2020 ರಿಂದ 2025 ಸಾಲಿನಲ್ಲಿ ಪ್ರಸ್ತುತ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸರಿ ಸುಮಾರು 40 ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಇವರನ್ನು”ಸರ್ಚ್ ಕೂರ್ಗ್ ಮೀಡಿಯಾ”ವು ಪ್ರಸ್ತುತ ಪಡಿಸಿರುವ “ಕೊಡಗು ಸಹಕಾರ” ಎಂಬ ಕೊಡಗಿನ ಸಹಕಾರ ಚಳುವಳಿಯ ಡಿಜಿಟಲ್ ದಾಖಲೆಗೆ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಕಂಜಿತಂಡ ಕೆ. ಮಂದಣ್ಣರವರು “ಕೊಡಗು ಜೇನು ಮತ್ತು ಮೇಣ ಉತ್ಪಾದಕರ ಸಹಕಾರ ಸಂಘ 2023 -20225ನೇ ಸಾಲಿನಲ್ಲಿ 50,000 ಕೆ.ಜಿ. ಜೇನನ್ನು ಸಂಘದ ಸದಸ್ಯ ಕೃಷಿಕರಿಂದ ಸಂಗ್ರಹಿಸಿ ಸಂಸ್ಕರಣೆ ಮಾಡಿ ಶುದ್ಧವಾದ ಗುಣಮಟ್ಟದ ಜೇನನ್ನು ಮಾರಾಟ ಮಾಡಲಾಗಿದ್ದು, ಇದರಲ್ಲಿ ಸರಿ ಸುಮಾರು 11 ಲಕ್ಷದ 15 ಸಾವಿರ ರೂಪಾಯಿಗಳಷ್ಟು ನಿವ್ವಳ ಲಾಭವನ್ನು ಗಳಿಸಿದ್ದೇವೆ.
ಕೊಡಗು ಜೇನು ಮತ್ತು ಮೇಣ ಉತ್ಪಾದಕರ ಸಹಕಾರ ಸಂಘವು 1936ನೇ ಡಿಸಂಬರ್‌ನಲ್ಲಿ ಶಾಂಭವಾನಂದಾಜಿಯರಿಂದ ಏಷ್ಯಾ ಖಂಡದಲ್ಲಿ ಅದರಲ್ಲೂ ಭಾರತದಲ್ಲಿ ಪ್ರಥಮವಾಗಿ ಸ್ಥಾಪನೆಗೊಂಡ ಸಂಘವಾಗಿದೆ. ಅಂದು 53 ಸದಸ್ಯರಿಂದ ಆರಂಭಗೊಂಡ ಸಂಘ ಇಂದು 2146 ಜನ ಸದಸ್ಯರನ್ನು ಹೊಂದಿದ್ದು, ಆ ಮೂಲಕ ಪಾಲು ಬಂಡವಾಳ ರೂ. 17.26 ಲಕ್ಷ ರೂ.ಗಳಾಗಿದೆ.
ಸಂಘ ಜೇನು ಕೃಷಿಗೆ ಅದ್ಯತೆ ನೀಡಿ, ಆರ್ಥಿಕವಾಗಿ ಅನುಕೂಲವಿರುವ ಕೃಷಿಕರಿಗೆ ತೇಗದ ಮರದ ಹಾಗೂ ಆರ್ಥಿಕವಾಗಿ ಹಿಂದುಳಿದ ಕೃಷಿಕರಿಗೆ ಕಾಡು ಮರಗಳಿಂದ ಮಾಡಿದ ಜೇನು ಪೆಟ್ಟಿಗೆಗಳನ್ನು ರಿಯಾಯಿತಿ ದರದಲ್ಲಿ ನಿರಂತರವಾಗಿ ವಿತರಿಸುವುದಲ್ಲದೇ, ಅವರು ಉತ್ಪಾದಿಸಿದ ಜೇನನ್ನು ಉತ್ತಮ ಬೆಲೆಗೆ ಖರೀದಿಸಲಾಗುತ್ತಿದೆ.
ಸರಕಾರದ ಆಧುನಿಕ ಮಾನದಂಡಗಳಲ್ಲಿ ಗುಣಮಟ್ಟದ ಜೇನನ್ನು ಪೂರೈಸಲು, ಸಂಘವು ಹೊಸದಾದ 500 ಕೆ.ಜಿ. ಸಾಮಾರ್ಥ್ಯದ ಆಧುನಿಕ ಜೇನು ಸಂಸ್ಕರಣಾ ಘಟಕವನ್ನು ಹೊಂದಿದ್ದು, ಮೇಣದ ಹಾಳೆ ಉತ್ಪಾದನಾ ಘಟಕವನ್ನು ಕೂಡ ಹೊಂದಿದೆ. ಪರಿಶುದ್ದವಾದ ಗುಣಮಟ್ಟದ ಜೇನು ಮತ್ತು ಮೇಣವನ್ನು ಗ್ರಾಹಕರಿಗೆ ಒದಗಿಸಲಾಗುತ್ತಿದೆ.
ಮಾರುಕಟ್ಟೆ ವೃದ್ಧಿಸಲು ಆಧುನಿಕ ರೀತಿಯ ಜೇನು ಪ್ಯಾಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ. ಗುಣಮಟ್ಟವನ್ನು ಕಾಯಿದ್ದಿರಿಸಲು ಗಾಜಿನ ಬಾಟಲಿನಲ್ಲಿ ಜೇನು ಪ್ಯಾಕಿಂಗ್ ಮಾಡಲಾಗುತ್ತಿದ್ದು, ಪ್ಲಾಸ್ಟಿಕ್ ಬಾಟಲಿಯನ್ನು ಬಳಸಲಾಗುತ್ತಿಲ್ಲ.
ಜೇನು ಸಾಕಾಣೆಗೆ ಬೇಕಾದಂತಹ ಅವಶ್ಯಕತೆಯಿರುವ ಜೇನು ಮೇಣದ ಹಾಳೆ ಮತ್ತು ಎಲ್ಲಾ ರೀತಿಯ ಪರಿಕರಗಳು 600 ಕ್ಕೂ ಮೇಲ್ಪಟ್ಟ ಕುಡಿಗಳನ್ನು ವಿತರಿಸಲಾಗಿದೆ. ಅದರೊಂದಿಗೆ ಉಚಿತ ತರಬೇತಿ ಮತ್ತು ಮಾಹಿತಿಯನ್ನು ನೀಡಲಾಗಿದೆ. ನಮ್ಮ ಸಂಘವು ಕರ್ನಾಟಕ ಸರಕಾರ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯಿಂದ ಮಾನ್ಯತೆಯನ್ನು ಪಡೆದಿರುತ್ತದೆ.
ವಿರಾಜಪೇಟೆ ಪಟ್ಟಣ ಹಾಗೂ ಗೋಣಿಕೊಪ್ಪಲಿನಲ್ಲಿ ತನ್ನದೆ ಶಾಖೆ ಮೂಲಕ ಮಾರಾಟ ಮಾಡಲಾಗುತ್ತಿದೆ. ಅಲ್ಲದೆ ಹೊರ ರಾಜ್ಯಗಳಿಗೂ ಇಲ್ಲಿಯ ಜೇನನ್ನು ಮಾರಾಟ ಮಾಡುವ ಮೂಲಕ ದೇಶಾದ್ಯಂತ ಬೇಡಿಕೆಯನುಸಾರ ಜೇನು ಕಳಿಸುತ್ತಿರುವ ಹೆಗ್ಗಳಿಕೆ ನಮ್ಮ ಸಂಘದ್ದಾಗಿದೆ. ಅಲ್ಲದೆ ವಿರಾಜಪೇಟೆ ಮಲಬಾರು ರಸ್ತೆಯಲ್ಲಿ ತನ್ನದೆ ಅದ ಜೇನು ಪೆಟ್ಟಿಗೆ ತಯಾರಿಕಾ ಘಟಕವನ್ನು ಸಂಘ ಹೊಂದಿದ್ದು, ತೇಗದ ಮರಗಳ ಜೇನು ಪೆಟ್ಟಿಗೆ ತಯಾರಿಕೆ ಮಾಡಿ ಮಾರಾಟ ಮಾಡಲಾಗುತ್ತಿದೆ. ಸಂಘಕ್ಕೆ ಗ್ರಾಮಾಂತರ ಪ್ರದೇಶವಾದ ಬಿರುನಾಣಿ, ಸಣ್ಣಪುಲಿಕೋಟು, ಭಾಗಮಂಡಲದಲ್ಲಿ ಜೇನು ಖರೀದಿ ಕೇಂದ್ರಗಳಿದ್ದು, ಅಲ್ಲಿ ಜೇನು ಕೃಷಿಗೆ ಬೇಕಾದ ಮೇಣದ ಹಾಳೆ, ರಾಣಿ ಗೇಟು, ಜೇನು ಪೆಟ್ಟಿಗೆಗಳನ್ನು ಮಾರಾಟ ಮಾಡಲಾಗುತ್ತಿದೆ.
ಸಂಘವು ಈ ವರಗೆ 0.39 ಸೆಂಟ್ ವಿಸ್ತೀರ್ಣದಲ್ಲಿ ಮುಖ್ಯ ಕಛೇರಿ ಮತ್ತು ಗೋದಾಮು ವಸತಿ ಗೃಹ, 0.11 ಸೆಂಟ್ ವಿಸ್ತೀರ್ಣದಲ್ಲಿ ನಗರ ಶಾಖೆ ಕಟ್ಟಡ ಮತ್ತು ನೀವೇಶನ,1 ಏಕ್ರೆ ವಿಸ್ತೀರ್ಣದಲ್ಲಿ ಮರಘಟಕ ಕಟ್ಟಡ ಮತ್ತು ನಿವೇಶನ, ಸೆಂಟ್ ವಿಸ್ತೀರ್ಣದಲ್ಲಿ 0.3 ½ ಸೆಂಟ್ ವಿಸ್ತೀರ್ಣದಲ್ಲಿ ಬಿರುನಾಣಿ ಕಟ್ಟಡ ಮತ್ತು ನೀವೇಶನ, 0.25 ಸೆಂಟ್ ವಿಸ್ತೀರ್ಣದಲ್ಲಿ ಸಣ್ಣಪುಲಿಕೋಟು ಕಟ್ಟಡ ಮತ್ತು ನಿವೇಶನ, 0.83 ಸೆಂಟ್ ವಿಸ್ತೀರ್ಣದಲ್ಲಿ ಭಾಗಮಂಡಲ ನಿವೇಶನ, ಹಾಗೂ ವಿರಾಜಪೇಟೆಯ ಮಲಬಾರ್ ರಸ್ತೆಯಲ್ಲಿ ವಾಣಿಜ್ಯ ಕಟ್ಟಡ ಮತ್ತು ನಿವೇಶನವನ್ನು ಹೊಂದಿದೆ.
ಕೊಡಗಿನಲ್ಲಿ ಎರಡು ಜೇನು ಸಹಕಾರ ಸಂಘಗಳಿದ್ದು, ಭಾಗಮಂಡಲದಲ್ಲಿ ಕೇಂದ್ರ ಕಚೇರಿ ಹೊಂದಿರುವ ಕೊಡಗು ಪ್ರಗತಿಪರ ಜೇನು ಕೃಷಿಕರ ಸಹಕಾರ ಸಂಘ ಹಾಗೂ ವಿರಾಜಪೇಟೆಯಲ್ಲಿ ಕೇಂದ್ರ ಕಚೇರಿ ಹೊಂದಿರುವ ನಮ್ಮ ಕೊಡಗು ಜೇನು ಮತ್ತು ಮೇಣ ಉತ್ಪಾದಕರ ಸಹಕಾರ ಮಾರಾಟ ಸಂಘ ಕೂರ್ಗ್ ಹನಿ ಬ್ರಾೃಂಡ್‌ನಲ್ಲಿ ಜೇನು ಮಾರಾಟ ಮಾಡಲಾಗುತ್ತಿದೆ. ನಮ್ಮ ಸಂಘವು ಕಾವೇರಿ ನದಿಯ ದಕ್ಷಿಣ ಭಾಗಕ್ಕೆ ಸೀಮಿತವಾಗಿ ಕಾರ್ಯನಿರ್ವಹಿಸುತ್ತಿದೆ.
ಜೇನು ಉತ್ಪಾದನೆಯಲ್ಲಿ ಹಾಗೂ ಮಾರಾಟದಲ್ಲಿ ಪೈಪೋಟಿ ಇರುವುದರಿಂದ ಸಂಘದ ಹಿತ ದೃಷ್ಠಿಯನ್ನು ಮನಗಂಡು ಸಂಘದಿಂದ ಬ್ಯಾಂಕಿಂಗ್ ವ್ಯವಸ್ಥೆಯನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿದ್ದೇವೆ. ಸಾರ್ವಜನಿಕರಿಂದ ಠೇವಣಿಗಳನ್ನು ಸಂಗ್ರಹಿಸಿ ಸದಸ್ಯರು, ರೈತರು ಹಾಗೂ ಗ್ರಾಹಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆಭರಣಸಾಲ, ಜಾಮೀನು ಸಾಲ ಹಾಗೂ ಇನ್ನಿತ್ತರೆ ಸಾಲಗಳನ್ನು ನೀಡುವ ಬಗ್ಗೆ ಕ್ರೀಯಾ ಯೋಜನೆಯನ್ನು ತಯಾರಿಸಲಾಗಿದೆ.
ಕೊಡಗು ಜೇನು ಮತ್ತು ಮೇಣ ಉತ್ಪಾದಕರ ಸಹಕಾರ ಮಾರಾಟ ಸಂಘದಿಂದ ಕೊಡಗಿನಲ್ಲಿ “ಹನಿ ಪಾರ್ಕ್” ಒಂದನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಪ್ರಯತ್ನವೊಂದು ಸಾಗಿದ್ದು, ಅದಕ್ಕೆ ಬೇಕಾದ ಸೂಕ್ತವಾದ ಜಾಗದ ಹುಡುಕಾಟದಲ್ಲಿದ್ದೇವೆ.
ಒಟ್ಟಿನಲ್ಲಿ ಕೊಡಗು ಜೇನು ಮತ್ತು ಮೇಣ ಉತ್ಪಾದಕರ ಸಹಕಾರ ಮಾರಾಟ ಸಂಘವು ಲಾಭದಲ್ಲಿ ಮುಂದುವರಿಯುತ್ತಿದ್ದು ಪ್ರಗತಿಯಲ್ಲಿದೆ. ಹಾಗಾಗಿ ಸಂಘದ ಸದಸ್ಯರಿಗೆ ಶೇಕಡ. 10%ರಷ್ಟು ಡಿವಿಡೆಂಡ್‌ನ್ನು ನೀಡಲಾಗುತ್ತಿದೆ. ಸಂಘವು ಲಾಭವನ್ನು ಹೊಂದಿ ಪ್ರಗತಿಯತ್ತ ಸಾಗಲು ಸಂಘದ ಆಡಳಿತ ಮಂಡಳಿಯ ಉಪಾಧ್ಯಕ್ಷರು, ನಿರ್ದೇಶಕರುಗಳು, ಸದಸ್ಯರುಗಳು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಸಿಬ್ಬಂದಿಗಳು ಹಾಗೂ ಗ್ರಾಹಕರ ಸಹಕಾರ ಅತ್ಯುತ್ತಮವಾಗಿ ದೊರಕುತಿದೆ ಎಂದು ಈ ಸಂದರ್ಭದಲ್ಲಿ ತಿಳಿಸಲು ಹರ್ಷ ವ್ಯಕ್ತಪಡಿಸುತ್ತಿದ್ದೇನೆ.
ಸಹಕಾರ ಕ್ಷೇತ್ರಕ್ಕೆ ತನ್ನದೆ ಆದ ಇತಿಹಾಸವಿದ್ದು, ಪಾರದಶರ್ಕ ಆಡಳಿತ, ಸೇವಾ ಮನೋಭಾವನೆಯಿಂದ ಕೂಡಿದ ಸಹಕಾರಿಗಳು ಇದ್ದರೆ ಸಹಕಾರ ಕ್ಷೇತ್ರ ಇನ್ನಷ್ಟು ಅಭಿವೃದ್ಧಿ ಹೊಂದುತ್ತದೆ. ಸರ್ಕಾರದ ಹಸ್ತಕ್ಷೇಪ ಸಹಕಾರ ಸಂಘಗಳಲ್ಲಿ ಇರಬಾರದು ಹಾಗೆ ಸಹಕಾರ ಕ್ಷೇತ್ರವು ಸಹಕಾರ ಕ್ಷೇತ್ರವಾಗಿಯೇ ಉಳಿಯಬೇಕು ಎಂಬುವುದು ನನ್ನ ಅಭಿಪ್ರಾಯವಾಗಿದೆ.
ಸಹಕಾರಿ ಕ್ಷೇತ್ರಕ್ಕೆ ಹೆಚ್ಚು ಹೆಚ್ಚು ಯುವಶಕ್ತಿಯು ಪಾಲ್ಗೊಂಡು ಸೇವಾ ಮನೋಭಾವದಿಂದ ಸ್ವಾರ್ಥರಹಿತವಾಗಿ ಆತ್ಮತೃಪ್ತಿಯಿಂದ ಸೇವೆ ಸಲ್ಲಿಸಬೇಕು ಹಾಗೂ ಹಿರಿಯ ಸಹಕಾರಿಗಳಿಂದ ಸಲಹೆ ಸೂಚನೆಗಳನ್ನು ಪಡೆದು ಸಹಕಾರ ಕ್ಷೇತ್ರದ ಪ್ರಗತಿಗೆ ತಮ್ಮನ್ನು ತೊಡಿಗಿಸಿಕೊಳ್ಳಬೇಕು ಎಂಬುವುದು ಸಹಕಾರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುತ್ತಿರುವ ಭಾವಿ ಯುವಶಕ್ತಿಗೆ ನನ್ನ ಸಂದೇಶವಾಗಿದೆ”
ಕಂಜಿತಂಡ ಕೆ. ಮಂದಣ್ಣರವರು, ರಾಜಕೀಯ ಕ್ಷೇತ್ರದಲ್ಲಿ 2000ನೇ ಇಸವಿಯಲ್ಲಿ ಬಿಟ್ಟಂಗಾಲ ಬಿ.ಜೆ.ಪಿ. ಸ್ಥಾನೀಯ ಸಮಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. 2011ರಿಂದ15ರವರಗೆ ವಿರಾಜಪೇಟೆ ತಾಲ್ಲೂಕು ಬಿ.ಜೆ.ಪಿ. ಕೃಷಿ ಮೋರ್ಚಾ ಅಧ್ಯಕ್ಷರಾಗಿ, 2015ರಿಂದ20ರವರಗೆ ತಾಲ್ಲೂಕು ಬಿ.ಜೆ.ಪಿ. ನಾಗರಿಕ ಪ್ರಕೋಷ್ಠದ ಸಂಚಾಲಕರಾಗಿ ಕಾರ್ಯನಿರ್ವಹಿಸಿದ್ದಾರೆ.
ಸಾಮಾಜಿಕ ಕ್ಷೇತ್ರದಲ್ಲಿ 1994ರಲ್ಲಿ ವಿ.ಬಾಡಗ ಪೊದಕೇರಿ ಕೆ.ಎಂ.ಸಿ. ಕ್ಲಬ್‌ನ ಸ್ಥಾಪಕ ಅಧ್ಯಕ್ಷರಾಗಿ 10 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. 2005ರಿಂದ 2015ರವರಗೆ ಬಿಟ್ಟಂಗಾಲ ಕೊಡವ ಫ್ಯಾಮಿಲಿ ಕ್ಲಬ್‌ನ ಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಧಾರ್ಮಿಕ ಕ್ಷೇತ್ರದಲ್ಲಿ 2004ರಿಂದ ವಿ. ಬಾಡಗ ಭದ್ರಕಾಳಿ ದೇವಾಲಯದ ಅಭಿವೃದ್ಧಿ ಕೆಲಸದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. 2013 ರಿಂದ ರುದ್ದುಗುಪ್ಪೆ ಶ್ರೀ ಜೋಡು ಭಗವತಿ ದೇವಾಲಯದ ಪುನರ್ನಿರ್ಮಾಣ ಸಮಿತಿಯ ಕಾರ್ಯಾಧ್ಯಕ್ಷರಾಗಿ ಸೇವೆ. ಹಾಗೆ ವಿ. ಬಾಡಗ ಮಹಾದೇವರ ದೇವಾಲಯದ ಆಡಳಿತ ಮಂಡಳಿ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶೈಕ್ಷಣಿಕ ಕ್ಷೇತ್ರದಲ್ಲಿ 1984ರಲ್ಲಿ ಕುಟ್ಟಂದಿಯ ಕೆ.ಬಿ. ಫ್ರೌಡಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಸ್ಥಾಪಕ ಅಧ್ಯಕ್ಷರಾಗಿ ಸೇವೆ. 1996 ರಲ್ಲಿ ಕೆ.ಬಿ. ಫ್ರೌಡಶಾಲೆಯ ಆಡಳಿತ ಮಂಡಳಿಯ ಖಜಾಂಚಿಯಾಗಿ, 2001ರಿಂದ ಕೆ.ಬಿ. ಫ್ರೌಡಶಾಲೆಯ ಕ್ರೀಡಾ ಸಮಿತಿಯ ಅಧ್ಯಕ್ಷರಾಗಿ ಇಂದಿನವರೆಗೂ ಸೇವೆ ಸಲ್ಲಿಸುತ್ತಿದ್ದಾರೆ. 2017ರಿಂದ ಕೆ.ಬಿ. ಫ್ರೌಡಶಾಲೆಯ ಖಜಾಂಚಿಯಾಗಿ, 2022ರಿಂದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಾ, 2024ರಲ್ಲಿ ಶಾಲೆಯ ವಜ್ರ ಮಹೋತ್ಸವವನ್ನು ಯಶಸ್ವಿಯಾಗಿ ಆಚರಿಸುವಲ್ಲಿ ತಮ್ಮ ಪಾತ್ರವನ್ನು ನಿರ್ವಹಿಸಿದ್ದಾರೆ.
ಕ್ರೀಡಾ ಕ್ಷೇತ್ರದಲ್ಲಿ ವಿಶ್ವವಿದ್ಯಾಲಯ ಮಟ್ಟದ ಅಥ್ಲೇಟಿಕ್ ಕ್ರೀಡಾಪಟುವಾಗಿದ್ದ ಇವರು ಉತ್ತಮ ಶಟಲ್ ಬ್ಯಾಡ್‌ಮಿಂಟನ್ ಕ್ರೀಡಾಳುವಾಗಿದ್ದಾರೆ. ಗ್ರಾಮ ಮಟ್ಟದ ಯುವಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬಿಟ್ಟಂಗಾಲದಲ್ಲಿ ಬ್ಯಾಡ್‌ಮಿಂಟನ್ ಒಳಾಂಗಣ ಕ್ರೀಡಾಂಗಣವನ್ನು ನಿರ್ಮಿಸಿ ಸಾರ್ವಜನಿಕ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಕಂಜಿತಂಡ ಕೆ.ಮಂದಣ್ಣರವರ ತಂದೆ ದಿವಂಗತ ಕಂಜಿತಂಡ ಕಾರ್ಯಪ್ಪನವರು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ತಾಯಿ ದಿವಂಗತ ಪೂವಮ್ಮ. ಪತ್ನಿ ಭಾಗ್ಯ ಮಂದಣ್ಣನವರು ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಿರಿಯ ಮಗಳು ಹರ್ಷಿತ ಮಂದಣ್ಣ ವಿವಾಹಿತರಾಗಿ ಕುಟುಂಬ ಸಮೇತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಕಿರಿಯ ಮಗಳು ಶೋಭಿತ್ ಮಂದಣ್ಣ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾರೆ.
ಮೂಲತಃ ಕೃಷಿಕರಾಗಿರುವ ಕಂಜಿತಂಡ ಕೆ. ಮಂದಣ್ಣರವರು, ಪ್ರಸ್ತುತ ಕುಟುಂಬ ಸಮೇತ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಬಿಟ್ಟಗಾಲ ಗ್ರಾಮದಲ್ಲಿ ನೆಲೆಸಿದ್ದಾರೆ. ಇವರ ಸಹಕಾರ, ರಾಜಕೀಯ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಹಾಗೂ ಕ್ರೀಡಾ ಸೇವೆಯು ಹೀಗೆ ನಿರಂತರವಾಗಿ ಮುಂದುವರೆಯಲಿ ಎಂದು “ಸರ್ಚ್ ಕೂರ್ಗ್ ಮೀಡಿಯಾ” ವು ಹಾರೈಸುತ್ತದೆ.
ಸಂದರ್ಶನ ದಿನಾಂಕ: 12-02-2025