ಮಡಿಕೇರಿ ಮಾ.28 : ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ಬೆಳ್ಳಿ ಮಹೋತ್ಸವದ ‘ಮುದ್ದಂಡ ಕಪ್ ಹಾಕಿ ಉತ್ಸವ-2025’ಕ್ಕೆ ಶುಕ್ರವಾರ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ವಿದ್ಯುಕ್ತ ಚಾಲನೆ ದೊರಕಿತು.
ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು, ವಿರಾಜಪೇಟೆ ಕ್ಷೇತ್ರದ ಶಾಸಕ ಅಜ್ಜಿಕುಟ್ಟೀರ ಎಸ್.ಪೊನ್ನಣ್ಣ ಹಾಗೂ ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಬೋಪಣ್ಣ ಅವರು ‘ಬೆಳ್ಳಿಯ ಸ್ಟಿಕ್’ನಿಂದ ‘ಬೆಳ್ಳಿಯ ಚೆಂಡು’ ತಳ್ಳುವ ಮೂಲಕ ತಿಂಗಳ ಕಾಲ ದಾಖಲೆಯ 396 ತಂಡಗಳ ನಡುವೆ ನಡೆಯುವ ಹಾಕಿ ಉತ್ಸವವನ್ನು ಉದ್ಘಾಟಿಸಿದರು.
ಕೊಡವ ಸಂಸ್ಕೃತಿ ಸಂರಕ್ಷಣೆಯ ‘ಹೆಜ್ಜೆ’: ಕೊಡವ ಕುಟಂಬಗಳ ಅತ್ಯಂತ ವಿಶಿಷ್ಟವಾದ ‘ಐನ್ ಮನೆ’ ವಿನ್ಯಾಸದ ಅತ್ಯಾಕರ್ಷಕ ವೇದಿಕೆಯಲ್ಲಿ ಜ್ಯೋತಿಯನ್ನು ಬೆಳಗುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಿದ ಶಾಸಕ ಎ.ಎಸ್.ಪೊನ್ನಣ್ಣ ಅವರು, ಕೊಡವ ಹಾಕಿ ಅಕಾಡೆಮಿ ಸ್ಥಾಪನೆಗೆ ಕಾರಣರಾದ ಪಾಂಡಂಡ ಕುಟ್ಟಪ್ಪ ಅವರು 1997 ರಲ್ಲಿ ಆರಂಭಿಸಿದ ‘ಕೊಡವ ಕೌಟುಂಬಿಕ ಹಾಕಿ ನಮ್ಮೆ’ ಇದೀಗ 25 ವಸಂತಗಳನ್ನು ಪೂರೈಸಿದೆ. ಈ ಹಾಕಿ ಉತ್ಸವ ಕೇವಲ ಕ್ರೀಡೆಗೆ ಮಾತ್ರ ಸೀಮಿತವಾದುದಲ್ಲ. ಇಷ್ಟು ವರ್ಷಗಳ ಕಾಲ ನಿರಂತರವಾಗಿ ನಡೆಯುತ್ತಿರುವ ಹಾಕಿ ನಮ್ಮೆ ಕೊಡವ ವಿಶಿಷ್ಟ ಸಂಸ್ಕೃತಿ, ಆಚಾರ ವಿಚಾರಗಳ ಸಂರಕ್ಷಣೆಗಾಗಿ ಇಡುತ್ತಿರುವ ಹೆಜ್ಜೆಗಳೇ ಆಗಿದೆ ಎಂದರು.
ಕೊಡವ ಹಾಕಿ ನಮ್ಮೆ ಎನ್ನುವುದು ಕೊಡವರ ವಿಶಿಷ್ಟ ಸಂಸ್ಕೃತಿ ಪರಂಪರೆಗಳನ್ನು ವಿಶ್ವಕ್ಕೆ ಪರಿಚಯಿಸುವ ಪ್ರಯತ್ನವೇ ಆಗಿದೆ. ದಾಖಲೆಯ ಕೊಡವ ಕುಟುಂಬಗಳು ಪಾಲ್ಗೊಂಡಿರುವ ಉತ್ಸವದ ಆಯೋಜನೆಗೆ ಕಳೆದ ಎರಡು ಸಾಲಿನಿಂದ ರಾಜ್ಯ ಸರ್ಕಾರ ತಲಾ 1 ಕೋಟಿ ಅನುದಾನ ನೀಡಿದ್ದು, ಈ ಬಾರಿಯೂ ಅನುದಾನಕ್ಕೆ ಮುಖ್ಯ ಮಂತ್ರಿಗಳಿಗೆ ಮನವಿ ನೀಡಲಾಗಿದೆ. ನೆರವು ಖಂಡಿತ ದೊರಕಲಿದೆಯೆಂದು ಸ್ಪಷ್ಟಪಡಿಸಿದರು.
‘ಮುದ್ದಂಡ ಹಾಕಿ ನಮ್ಮೆ’ ಸ್ಮರಣ ಸಂಚಿಕೆ: ಕೊಡವ ಹಾಕಿ ಉತ್ಸವಕ್ಕೆ ಸಂಬಂಧಿಸಿದ ‘ಮುದ್ದಂಡ ಹಾಕಿ ನಮ್ಮೆ’ ಸ್ಮರಣ ಸಂಚಿಕೆ ಹಾಗೂ ಬಿದ್ದಂಡ ನಾಣಯ್ಯ ರಚಿತ ಕೊಡವ ಹಾಕಿ ಹಾಡನ್ನು ಇದೇ ಸಂದರ್ಭ ಅತಿಥಿ ಗಣ್ಯರು ಅನಾವರಣಗೊಳಿಸಿದರು.
ಮೈಸೂರು ಕೊಡಗು ಕ್ಷೇತ್ರದ ಸಂಸದ ಯದುವೀರ್ ಒಡೆಯರ್ ಮಾತನಾಡಿ, ನಿರಂತರವಾಗಿ ಇಂತಹ ಬೃಹತ್ ಪಂದ್ಯಾವಳಿ ಆಯೋಜನೆ ಸುಲಭ ಸಾಧ್ಯವಲ್ಲ. ಹಾಕಿ ಉತ್ಸವದ ಜನಕ ಪಾಂಡಂಡ ಕುಟ್ಟಪ್ಪ ಅವರ ಚಿಂತನೆಗಳಂತೆ ಮುಂದೆಯೂ ಹಾಕಿ ಉತ್ಸವ ಮತ್ತಷ್ಟು ದೊಡ್ಡ ಮಟ್ಟದಲ್ಲಿ ನಡೆಯುವಂತಾಗಲೆಂದು ಹಾರೈಸಿದರು.
ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಮಾತನಾಡಿ, ಕ್ರೀಡೆಯಲ್ಲಿ ಸೋಲು ಗೆಲುವಿಗಿಂತ ಭಾಗವಹಿಸುವುದು ಮುಖ್ಯ. ಕ್ರೀಡಾ ಚಟುವಟಿಕೆಯ ಮೂಲಕ ಎಲ್ಲರನ್ನೂ ಸೌಹಾರ್ದಯುತವಾಗಿ ಬೆಸೆಯಲು ಸಾಧ್ಯ. ಮುದ್ದಂಡ ಹಾಕಿ ಉತ್ಸವ ದಾಖಲೆಯ ಪುಟಗಳನ್ನು ಸೇರಲೆಂದು ಹಾರೈಸಿದರು.
ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಮಾತನಾಡಿ, ಕೊಡವ ಆಚಾರ ವಿಚಾರ ಸಂಸ್ಕೃತಿಯ ಸಂರಕ್ಷಣೆ ಮತ್ತು ಕೊಡವ ಸಮುದಾಯಗಳ ಒಗ್ಗಟ್ಟಿಗೆ ಹಾಕಿ ಉತ್ಸವ ಸಹಕಾರಿಯಾಗಿದೆಯೆಂದು ನುಡಿದರು.
ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ, ಪಂದ್ಯಾವಳಿಗೆ ಶುಭ ಕೋರಿದರು. ಇಡೀ ವಿಶ್ವದಲ್ಲಿ ಕುಟುಂಬ ಕ್ರೀಡೆ ನಡೆಯುತ್ತಿರುವುದು ಕೊಡಗಿನಲ್ಲಿ ಮಾತ್ರ. ಅಲ್ಲದೇ ಕ್ರೀಡಾಕೂಟದ ಜೊತೆಗೆ ಕೊಡವ ಆಚಾರ, ವಿಚಾರ, ಸಂಸ್ಕೃತಿಯ ಬಗ್ಗೆ ಯುವ ಪೀಳಿಗೆಗೆ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಎಂದರು.
ಕ್ರೀಡಾ ಜ್ಯೋತಿ ಬೆಳಗಿದ ಒಲಂಪಿಯನ್ : ಮುದ್ದಂಡ ಕಪ್ ಹಾಕಿ ಉತ್ಸವದ ಹಿನ್ನೆಲೆ, ಇಲ್ಲಿಯವರೆಗೆ ಹಾಕಿ ಉತ್ಸವ ಆಯೋಜಿಸಿದ ಕುಟುಂಬಗಳ ಐನ್ ಮನೆಗಳಿಗೆ ತೆರಳಿದ ‘ಜ್ಯೋತಿ’ಯನ್ನು ಶುಕ್ರವಾರ ಮೈದಾನಕ್ಕೆ ತರಲಾಯಿತು. ಜ್ಯೋತಿಯನ್ನು ಸ್ವೀಕರಿಸಿದ ಅರ್ಜುನ ಮತ್ತು ಏಕಲವ್ಯ ಪ್ರಶಸ್ತಿ ಪುರಸ್ಕೃತ, ಮಾಜಿ ಒಲಂಪಿಯನ್ ಡಾ.ಅಂಜಪರವಂಡ ಸುಬ್ಬಯ್ಯ ‘ಕೀಡಾ ಜ್ಯೋತಿಯನ್ನು’ ಬೆಳಗಿದರು. ಕ್ರೀಡಾಂಗಣದಲ್ಲಿ ಮ್ಯಾರಥನ್ ಓಟದ ಸಂದರ್ಭ ಕಂಬೆಯಂಡ ದಿವ್ಯ ಓಡಿ ಗಮನ ಸೆಳೆದರು.
ಆಯೋಜಕ ಕುಟುಂಬಗಳಿಗೆ ‘ಬಾಳೆ ಬೇಂಗ್‌ವೊ’ ಗೌರವ: 1997ರ ಪಾಂಡಂಡ ಕುಟುಂಬಸ್ಥರಿAದ ಆರಂಭಗೊಂಡ ಕೊಡವ ಹಾಕಿ ಉತ್ಸವವನ್ನು ಕಳೆೆದ ಇಪ್ಪತ್ತನಾಲ್ಕು ವರ್ಷಗಳ ಕಾಲ ಆಯೋಜಿಸಿದ 24 ಕೊಡವ ಕುಟುಂಬಗಳಿಗೆ, ಸಾಂಪ್ರದಾಯಿಕವಾದ ‘ಬಾಳೆ ಬೇಂಗ್‌ವೊ’ (ಬಾಳೆ ಕಡಿಯುವ) ಅವಕಾಶವನ್ನು ನೀಡುವ ಮೂಲಕ ಗೌರವಿಸಲಾಯಿತು. ಪ್ರತಿ ಕುಟುಂಬದ ಪ್ರತಿನಿಧಿ ಬಾಳೆ ಕಡಿಯುವುದಕ್ಕೂ ಮುನ್ನ ನಭಕ್ಕೆ ಗುಂಡು ಹಾರಿಸುತ್ತಿದ್ದುದು ವಿಶೇಷ. ಆರಂಭದಲ್ಲಿ ಕೊಡವ ಹಾಕಿ ಅಕಾಡೆಮಿಗೂ ಬಾಳೆ ಬೇಂಗ್‌ವೊ ಗೌರವ ನೀಡಲಾಯಿತು.
ಧ್ವಜಾರೋಹಣ: ಹಾಕಿ ಉತ್ಸವದ ಆರಂಭಕ್ಕೂ ಮುನ್ನ ಕೊಡವ ಹಾಕಿ ಅಕಾಡೆಮಿ ಧ್ವಜವನ್ನು ಅಕಾಡೆಮಿ ಅಧ್ಯಕ್ಷರಾದ ಪಾಂಡಂಡ ಬೋಪಣ್ಣ, ಮುದ್ದಂಡ ಕಪ್ ಹಾಕಿ ಉತ್ಸವದ ಧ್ವಜವನನ್ನು ಮುದ್ದಂಡ ಕುಟುಂಬದ ಪಟ್ಟೆದಾರರಾದ ಡಾಲಿ ದೇವಯ್ಯ ಆರೋಹಿಸಿದರು.
ಸ್ಮರಣಿಕೆ ಸಲ್ಲಿಕೆ: ಕಾರ್ಯಕ್ರಮದಲ್ಲಿ ಈ ಹಿಂದೆ ಹಾಕಿ ಉತ್ಸವ ನಡೆಸಿದ ಅಪ್ಪಚೆಟ್ಟೋಳಂಡ ಕುಟುಂಬದ ಸದಸ್ಯರಿಗೆ ಮುದ್ದಂಡ ಹಾಕಿ ಕುಟುಂಬದ ಪ್ರಮುಖರು ಸ್ಮರಣಿಕೆ ನೀಡುವ ಮೂಲಕ ಗೌರವಿಸಿದರು.
128 ಕಿ.ಮೀ ಮೆರಥಾನ್: ಕ್ರೀಡಾಜ್ಯೋತಿ ಜಿಲ್ಲೆಯಲ್ಲಿ ಈತನಕ ಹಾಕಿ ಉತ್ಸವ ಆಯೋಜಿಸಿದ ಒಟ್ಟು 24 ಕುಟುಂಬಗಳ ಐನ್‌ಮನೆಗಳಿಗೆ ಒಟ್ಟು 260 ಕಿ.ಮೀ ಸಾಗಿದೆ. ಇದರಲ್ಲಿ 128 ಕಿ.ಮೀ ಮೆರಥಾನ್ ಓಟದ ಮೂಲಕ ಕೊಂಡೊಯ್ಯಲಾಗಿದೆ. ಮೆರಥಾನ್ ಓಟದಲ್ಲಿ ಅಂತರಾಷ್ಟ್ರೀಯ ಮೆರಥಾನ್‌ಗಳಾದ ಪುಲಿಯಂಡ ಗೌತಮ್, ಮುರುವಂಡ ಸ್ಫೂರ್ತಿ ಸೀತಮ್ಮ, ಕೂತಿರ ಬಿದ್ದಪ್ಪ, ಪಾಂಡಂಡ ವಚನ್ ನಾಣಯ್ಯ, ನೆಲ್ಲಪಟ್ಟಿರ ಶ್ರೇಯಸ್, ಅಯ್ಯಕುಟ್ಟಿರ ಡಾನಿಶ್ 128 ಕಿ.ಮೀ ಓಡಿದ್ದು, ಕಾರ್ಯಕ್ರಮದಲ್ಲಿ ಇವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಮಾಜಿ ವಿಧಾನ ಸಭಾಧ್ಯಕ್ಷರಾದ ಕೆ.ಜಿ.ಬೋಪಯ್ಯ, ಎಂಎಲ್‌ಸಿ ವೀಣಾ ಅಚ್ಚಯ್ಯ, ಕೊಡಗು ವಿಶ್ವ ವಿದ್ಯಾನಿಲಯದ ಉಪ ಕುಲಪತಿ ಪ್ರೊ. ಸಂಗಪ್ಪ ಆಲೂರ, ರಿಜಿಸ್ಟçರ್ ಕೆ.ಸುರೇಶ್, ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವಂಡ ಪಿ.ಮುತ್ತಪ್ಪ, ಪದ್ಮಶ್ರೀ ರಾಣಿ ಮಾಚಯ್ಯ, ಫೀ.ಮಾ.ಕೆ.ಎಂ.ಕಾರ್ಯಪ್ಪ ಕಾಲೇಜು ಪ್ರಾಂಶುಪಾಲರಾದ ಮೇಜರ್ ಡಾ. ರಾಘವ, ಮುದ್ದಂಡ ಹಾಕಿ ಉತ್ಸವ ಸಮಿತಿ ಅಧ್ಯಕ್ಷ ಮುದ್ದಂಡ ರಶಿನ್ ಸುಬ್ಬಯ್ಯ ಮೊದಲಾದವರಿದ್ದರು.
ಮಿನ್ನಂಡ ಚಿನ್ನಮ್ಮ ಪ್ರಾರ್ಥಿಸಿ, ಮುದ್ದಂಡ ಕಪ್ ಹಾಕಿ ಉತ್ಸವ ಸಮಿತಿಯ ಗೌರವಾಧ್ಯಕ್ಷ ಮುದ್ದಂಡ ಬಿ. ದೇವಯ್ಯ ಸ್ವಾಗತಿಸಿದರು. ಚೋಕಿರ ಅನಿತ ದೇವಯ್ಯ ಮಾದೇಟಿರ ಬೆಳ್ಯಪ್ಪ ನಿರೂಪಿಸಿದರು.
ಕ್ರೀಡಾಜ್ಯೋತಿ ಜಾಥ
ಬೆಳ್ಳಿ ಹಬ್ಬದ ಮುದ್ದಂಡ ಕಪ್ ಹಾಕಿ ಉತ್ಸವದ ಸಲುವಾಗಿ, ಹಾಕಿ ಉತ್ಸವ ಆರಂಭಗೊಂಡ ಕರಡ ಗ್ರಾಮದಿಂದ ಪ್ರಾರಂಭವಾದ ‘ಕ್ರೀಡಾ ಜ್ಯೋತಿ’ ಜಾಥ ಇಂದು ಬೆಳಗ್ಗೆ ನಗರದ ಜನರಲ್ ಕೆ.ಎಸ್. ತಿಮ್ಮಯ್ಯ ವೃತ್ತಕ್ಕೆ ಆಗಮಿಸಿ, ಅದನ್ನು ಮೆರವಣಿಗೆಯ ಮೂಲಕ ಫೀ.ಮಾ. ಕಾರ್ಯಪ್ಪ ಮೈದಾನಕ್ಕೆ ತರಲಾಯಿತು.
ಮುದ್ದಂಡ ಕಪ್ ಹಾಕಿ ಉತ್ಸವ ಸಮಿತಿ ಅಧ್ಯಕ್ಷ ಮುದ್ದಂಡ ರಶಿನ್ ಸುಬ್ಬಯ್ಯ, ಗೌರವಾಧ್ಯಕ್ಷ ಮುದ್ದಂಡ ಬಿ.ದೇವಯ್ಯ, ಮುದ್ದಂಡ ಡೀನ್ ಬೋಪಣ್ಣ, ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಬೋಪಣ್ಣ, ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವಂಡ ಪಿ.ಮುತ್ತಪ್ಪ ಸೇರಿದಂತೆ ಹಲ ಗಣ್ಯರು, ಸಾಂಪ್ರದಾಯಿಕ ಉಡುಪು ತೊಟ್ಟ ಕೊಡವ ಸಮುದಾಯ ಬಾಂಧವರು ಸಾಂಪ್ರದಾಯಿಕ ದುಡಿ ಕೊಟ್ಟ್ ಪಾಟ್, ಚೆಂಡೆ ವಾದ್ಯಗಳೊಂದಿಗೆ ‘ಕ್ರೀಡಾ ಜ್ಯೋತಿ’ಯ ಸಂಭ್ರಮದ ಮೆರವಣಿಗೆ ನಡೆಸಿದರು.
ವೀರ ಸೇನಾನಿಗಳಿಗೆ ಗೌರವಾರ್ಪಣೆ: ಕ್ರೀಡಾ ಜ್ಯೋತಿಯ ಮೆರವಣಿಗೆ ಸಂದರ್ಭ ಜನರಲ್ ಕೆ.ಎಸ್. ತಿಮ್ಮಯ್ಯ ಪ್ರತಿಮೆ, ಮೇಜರ್ ಮಂಗೇರಿರ ಮುತ್ತಣ್ಣ, ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರ ಪ್ರತಿಮೆಗೆ ಹಾರಾರ್ಪಣೆ ಮಾಡಿ ಗೌರವವನ್ನು ಸಲ್ಲಿಸಲಾಯಿತು.