ಕೊಡಗಿನ ಕಿತ್ತಳೆ Coorg's orange

Reading Time: 14 minutes

ಕೊಡಗಿನ ಕಿತ್ತಳೆ

ಕಿತ್ತಳೆ ವಿಶ್ವದಲ್ಲೇ ಅತೀ ಜನಪ್ರಿಯವಾದ ಹಣ್ಣು. ಮೂಸಂಬಿ, ಮ್ಯಾಂಡರಿನ್, ಚಕ್ಕೋತ, ಗ್ರೇಪ್ ಫ್ರೂಟ್, ನಿಂಬೆ ಮುಂತಾದವು ಕಿತ್ತಳೆ ಜಾತಿಗೆ ಸೇರಿದ ಇತರ ಹಣ್ಣುಗಳು. ಭಾರತದಲ್ಲಿ ಬೆಳೆಯುವ ಕಿತ್ತಳೆಗಳಲ್ಲಿ ಮೂರು ವಿಧಗಳಿವೆ. ನಾಗಪುರ ಕಿತ್ತಳೆ, ಕೊಡಗಿನ ಕಿತ್ತಳೆ, ಮತ್ತು ಖಾಸಿ ಕಿತ್ತಳೆ.
ದಕ್ಷಿಣ ಭಾರತದಲ್ಲಿ ಕೊಡಗಿನ ಕಿತ್ತಳೆಯನ್ನು ಹಲವಾರು ವರ್ಷಗಳಿಂದ ಬೆಳೆಯಲ್ಪಡುತ್ತಿದ್ದು, ನಿಧಾನವಾಗಿ ಕಾಫಿ ತೋಟಗಳಲ್ಲಿ ಮುಖ್ಯ ಬೆಳೆಯಾಗಿ ನೆಲೆಯೂರಿತು. ತನ್ನ ಪ್ರಾಮುಖ್ಯತೆ ಮತ್ತು ಅನುಪಮ ಗುಣಗಳಿಂದಾಗಿ ಕೊಡಗಿನ ಕಿತ್ತಳೆಗೆ 2005-06ರಲ್ಲಿ ಭೌಗೋಳಿಕ ಸೂಚಕ ಸ್ಥಾನಮಾನ ದೊರಕಿದೆ.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಪ್ರದೇಶ ಮತ್ತು ಸ್ಥಾನಮಾನ
ಕೊಡಗಿನ ಕಿತ್ತಳೆಯನ್ನು ಕರ್ನಾಟಕ, ತಮಿಳುನಾಡು ಮತ್ತು ಕೇರಳದ ಕೆಲವು ಭಾಗಗಳಲ್ಲಿ ಬೆಳೆಯುತ್ತಾರೆ. ಕರ್ನಾಟಕದ ಕೊಡಗು, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಲ್ಲಿ ಕಿತ್ತಳೆಯನ್ನು ಕಾಫಿಯೊಡನೆ ಅಂತರ ಬೆಳೆಯಾಗಿ ಬೆಳೆಯುಲಾಗುತ್ತದೆ. ಕರ್ನಾಟಕದಲ್ಲಿ 1775 ಹೆಕ್ಟೇರು ಪ್ರದೇಶದಲ್ಲಿ ಕೊಡಗಿನ ಕಿತ್ತಳೆ ಬೆಳೆಯಲ್ಪಟ್ಟು 35313 ಟನ್ ಮತ್ತು 2008-09 ರಲ್ಲಿ ಕೊಡಗಿನ 943 ಹೆಕ್ಟೇರು ಪ್ರದೇಶದಿಂದ 23575 ಟನ್ ಇಳುವರಿ ದೊರೆಕಿದೆ.

ವಾಯುಗುಣ ಮತ್ತು ಮಣ್ಣಿನ ಅವಶ್ಯಕತೆ
ಸಮುದ್ರ ಮಟ್ಟದಿಂದ 1700 ಮೀಟರ್ ಎತ್ತರದವರೆಗಿನ ಗುಡ್ಡ ಪ್ರದೇಶದಲ್ಲಿ ಕೊಡಗಿನ ಕಿತ್ತಳೆಯನ್ನು ಬೆಳೆಯುತ್ತಾರೆ. ಈ ಪ್ರದೇಶದಲ್ಲಿ ವಾರ್ಷಿಕ ಮಳೆಯ ಪ್ರಮಾಣ 1000 ದಿಂದ 2500 ಮಿ. ಮೀ ಮತ್ತು ಉಷ್ಣತೆ 100 ಸೆ. ನಿಂದ 300 ಸೆ. ನವರೆಗೆ ಇರುತ್ತದೆ. ನೀರು ಬಸಿದು ಹೋಗುವ, ಗಾಳಿಯಾಡುವ ಮತ್ತು ತಾಯಿ ಬೇರಿಗೆ ಅಪೇಕ್ಷಣೀಯ ಆಳದವರೆಗೆ ಹೋಗಲು ಅನುವು ಮಾಡಿಕೊಡುವ ಯಾವುದೇ ಮಣ್ಣು ಬೆಳೆಗೆ ಸೂಕ್ತವಾಗಿದೆ. ಮಣ್ಣು ಸ್ವಲ್ಪ ಪ್ರಮಾಣದಲ್ಲಿ ಆಮ್ಲೀಯವಾಗಿದ್ದು, ರಸಸಾರ 5.5 ರಿಂದ 7.5 ರವರೆಗೆ ಇದ್ದರೆ ಗಿಡಗಳು ಉತ್ತಮವಾಗಿ ಬೆಳೆಯುತ್ತದೆ.

ತಳಿಗಳು
ಶತಮಾನಕ್ಕಿಂತ ಹೆಚ್ಚಿನ ಕಾಲದಿಂದ ಕೊಡಗಿನ ವಿಶಿಷ್ಟ ಕೃಷಿ ವಾಯುಗುಣ ಪರಿಸ್ಥಿತಿಯಲ್ಲಿ ಕಿತ್ತಳೆಯನ್ನು ಬೆಳೆಯುಲಾಗುತ್ತಿದೆ. ಸಸ್ಯಾಭಿವೃದ್ಧಿಯನ್ನು ಬೀಜಗಳ ಮೂಲಕ ಮಾಡಲಾಗುತ್ತಿತ್ತು. ಆದ್ದರಿಂದ ರೈತರ ತೋಟದಲ್ಲಿ ಬೆಳೆದ ಮರದ ಗಾತ್ರ ಮತ್ತು ಹಣ್ಣಿನ ಗುಣಗಳಲ್ಲಿ ವೈವಿಧ್ಯತೆ ಕಂಡುಬಂದಿದೆ. ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕ ಪ್ರಾಯೋಗಿಕಾ ಕೇಂದ್ರವು ರೈತರ ತೋಟದಲ್ಲಿ ಭರವಸೆ ಹೊಂದಿದ ಕಿತ್ತಳೆ ಗಿಡಗಳನ್ನು ಗುರುತಿಸಿದೆ. ಈ ಗಿಡಗಳು ಇಳುವರಿ ಮತ್ತು ಗುಣಮಟ್ಟದಲ್ಲಿ ಉತ್ಕøಷ್ಟವಾಗಿದೆ.

ಸಸ್ಯಾಭಿವೃದ್ಧಿ
ಸಾಂಪ್ರದಾಯಕವಾಗಿ ಕೊಡಗಿನ ಕಿತ್ತಳೆಯನ್ನು ಬೀಜಗಳ ಮೂಲಕ ಸಸ್ಯಾಭಿವೃದ್ಧಿ ಮಾಡಲಾಗುತ್ತದೆ. ಇಂತಹ ಗಿಡಗಳಿಗೆ ಹೆಚ್ಚು ರೋಗ ಬಾಧೆ ಇರುವುದರಿಂದ ಬೀಜದ ಮೂಲಕ ಸಸ್ಯಾಭಿವೃದ್ಧಿಗೆ ಶಿಫಾರಸ್ಸು ಮಾಡಲಾಗುವುದಿಲ್ಲ. ಕಸಿ ಕಟ್ಟಿದ ಗಿಡಗಳನ್ನು ನಾಟಿ ಮಾಡಲು ಶಿಫಾರಸ್ಸು ಮಾಡಲಾಗುತ್ತದೆ. ರಂಗಪುರ್ ಲಿಂಬೆ, ಕ್ಲಿಯೋಪಾತ್ರ ಕಿತ್ತಳೆ ಮತ್ತು ಸಿಟ್ರೆಂಜ್ ಮುಂತಾದವು ಕಿತ್ತಳೆಗೆ ಸೂಕ್ತವಾದ ಬೇರುಗಿಡಗಳು. ಸಾಮಾನ್ಯವಾಗಿ ರಂಗಪುರ್ ನಿಂಬೆಯನ್ನು ಬೇರು ಗಿಡವಾಗಿ ಉಪಯೋಗಿಸುತ್ತಾರೆ. ‘ಖಿ’ ಕಸಿ ವಿಧಾನಕ್ಕಿಂತ ತೇಪೆ ಕಸಿ ಉತ್ತಮವೆಂದು ಕಂಡು ಬಂದಿದೆ. ತೆರೆದ ಪರಿಸರದಲ್ಲಿ ಸಸ್ಯಾಭಿವೃದ್ಧಿ ಮಾಡಿದರೆ ಗಿಡಗಳಿಗೆ ಟ್ರೆಸ್ಟೀಜ ಮತ್ತು ಗ್ರೀನಿಂಗ್ ರೋಗ ಬಾಧಿಸುವ ಅವಕಾಶ ಹೆಚ್ಚಿರುತ್ತದೆ. ಆದುದರಿಂದ ಸಸಿಗಳನ್ನು ಹಸಿರು ಮನೆಗಳಲ್ಲಿ ಬೆಳೆಯಲಾಗುತ್ತದೆ. ಕಸಿರೆಂಬೆಯಿಂದ ಸಹ ರೋಗ ಹರಡುವ ಸಾಧ್ಯತೆ ಇರುವುದರಿಂದ ರೋಗರಹಿತ ಉತ್ಕøಷ್ಟ ಗುಣ ಹೊಂದಿದ ತಾಯಿ ಗಿಡದಿಂದ ಪಡೆದ ಕಸಿ ಕೊಂಬೆಯನ್ನು ಉಪಯೋಗಿಸಬೇಕು. ತಾಯಿಗಿಡಗಳನ್ನು ಸಹ ಕೀಟ ನಿರ್ಬಂಧಿತ ಹಸಿರು ಮನೆಗಳಲ್ಲಿ ಬೆಳೆಯಬೇಕು. ಒಟ್ಲು ಪಾತಿ, ಪ್ರಾಥಮಿಕ ನರ್ಸರಿ, ಎರಡನೆ ಹಂತದ ನರ್ಸರಿ, ಕಸಿಕಟ್ಟುವುದನ್ನು ಕೀಟರಹಿತ ವಾತಾವರಣದಲ್ಲಿ ಕೈಗೊಳ್ಳಬೇಕು.

ಜಮೀನು ತಯಾರಿ, ಗಿಡಗಳ ಅಂತರ ಮತ್ತು ಗಿಡನೆಡುವುದು
ಕೊಡಗಿನ ಕಿತ್ತಳೆಯನ್ನು ಕಾಫಿ ಮತ್ತು ಕಾಳುಮೆಣಸಿನೊಂದಿಗೆ ಬಹು ಪ್ರಕಾರದ ಬೇಸಾಯ ಕ್ರಮ ಅನುಸರಿಸಿ ನಾಟಿ ಮಾಡಲಾಗುವುದು. ಕಾಫಿಯೊಂದಿಗೆ ಅಂತರ ಬೆಳೆಯಾಗಿ ನೆಟ್ಟಾಗ, ಕಾಫಿಯನ್ನು 2.5 ಮೀ. x 2.5 ಮೀ ಮತ್ತು ಕಿತ್ತಳೆಯನ್ನು 6 ಮೀ. x 6 ಮೀ. ಅಂತರವಿಟ್ಟು ನೆಡಬೇಕು. ಮುಂಗಾರು (ಮೇ-ಜುಲೈ) ಅಥವಾ ಹಿಂಗಾರಿನಲ್ಲಿ (ಸೆಪ್ಟೆಂಬರ್-ಅಕ್ಟೋಬರಿನಲ್ಲಿ) ಗಿಡಗಳನ್ನು ನೆಡುತ್ತಾರೆ. ಗಿಡ ನೆಡುವ 2-4 ವಾರಗಳಿಗಿಂತ ಮೊದಲೇ 1 x 1 x 1 ಮೀ. ಅಳತೆಯ ಗುಂಡಿಗಳನ್ನು ತೆಗೆಯಬೇಕು. ಗುಂಡಿಗಳನ್ನು ಚೆನ್ನಾಗಿ ಕೊಳೆತ ಕೊಟ್ಟಿಗೆ ಗೊಬ್ಬರ ಮತ್ತು ಮೇಲ್ಮಣ್ಣನ್ನು 1 : 1 ಪ್ರಮಾಣದಲ್ಲಿ ಮಿಶ್ರಣ ಮಾಡಿ ಮುಚ್ಚಬೇಕು. ಹೆಪ್ಪುಗಳನ್ನು ಒಡೆಯದೆ ಗಿಡ ನೆಟ್ಟು ನೀರು ಕೊಡಬೇಕು.

ಸಾವಯವ ಮತ್ತು ರಸಗೊಬ್ಬರಗಳು
ಬೆಳವಣಿಗೆ ಮತ್ತು ಇಳುವರಿಗಾಗಿ ಗಿಡಗಳಿಗೆ ಸಮತೋಲನ ಪೋಷಕಾಂಶಗಳ ಅಗತ್ಯವಿದೆ. ಒಂದು ವರ್ಷದ ಗಿಡಕ್ಕೆ 5 ಕೆ.ಜಿ. ಕೊಟ್ಟಿಗೆ ಗೊಬ್ಬರ, 75 ಗ್ರಾಂ ಸಾರಜನಕ, 25 ಗ್ರಾಂ ರಂಜಕ, 50 ಗ್ರಾಂ ಪೊಟಾಷ್ ಕೊಡಬೆಕು. ಈ ಪ್ರಮಾಣವನ್ನು ಪ್ರತೀ ವರ್ಷ ಹೆಚ್ಚಿಸುತ್ತಾ ಹೋಗಬೇಕು. ಏಳು ವರ್ಷ ಮತ್ತು ಅದಕ್ಕಿಂತ ಹೆಚ್ಚು ವಯಸ್ಸಿನ ಗಿಡಗಳಿಗೆ 25 ಕೆ.ಜಿ. ಕೊಟ್ಟಿಗೆ ಗೊಬ್ಬರ, 600 ಗ್ರಾಂ ಸಾರಜನಕ, 200 ಗ್ರಾಂ ರಂಜಕ, ಮತ್ತು 400 ಗ್ರಾಂ ಪೊಟಾಷ್‍ನ ಅಗತ್ಯವಿದೆ. ಈ ಗೊಬ್ಬರಗಳನ್ನು ವಿಂಗಡಿಸಿ ವರ್ಷದಲ್ಲಿ ಎರಡು ಬಾರಿ ಮುಂಗಾರು ಮತ್ತು ಹಿಂಗಾರಿನಲ್ಲಿ ಕೊಡಬೇಕು. ಎನ್.ಪಿ.ಕೆ. ಮತ್ತು ಲಘು ಪೋಷಕಾಂಶಗಳನ್ನು ಎಲೆಗಳಿಗೆ ಸಿಂಪಡಿಸುವುದರಿಂದ ಬೆಳೆ ಮತ್ತು ಇಳುವರಿ ಹೆಚ್ಚಿಸುವಲ್ಲಿ ಸಹಾಯವಾಗುತ್ತದೆ. ಕೊಡಗಿನಲ್ಲಿ ಜಿಂಕ್ ಮತ್ತು ಮೆಗ್ನೇಸಿಯಂ ಲಘು ಪೋಷಕಾಂಶದ ಕೊರತೆ ಹೆಚ್ಚಾಗಿದೆ. ಜಿಂಕ್ ಕೊರತೆ ನೀಗಲು 3-4 ವರ್ಷಕ್ಕೊಮ್ಮೆ ಮಣ್ಣಿಗೆ 500 ಗ್ರಾಂ ನಿಂದ 1 ಕೆ.ಜಿ. ಯವರೆಗೆ ಜಿಂಕ್ ಸಲ್ಫೇಟ್, 200 ಗ್ರಾಂ ಕ್ಯಾಲ್ಸಿಯಂ ಕ್ಲೋರೈಡನ್ನು ಹಾಕಬೇಕು ಮತ್ತು ಇದರೊಂದಿಗೆ ಶೇಕಡ 0.3ರ ಜಿಂಕ್ ಸಲ್ಫೇಟನ್ನು ಎಲೆಗಳಿಗೆ ಸಿಂಪಡಿಸಬೇಕು. ಮೆಗ್ನೀಸಿಯಂ ಕೊರತೆ ನೀಗಲು ಮಣ್ಣಿಗೆ 500 ಗ್ರಾಂ-1ಕೆ.ಜಿ ಡೋಲಮೈಟ್ ಅಥವಾ 250 ಗ್ರಾಂ ಮೆಗ್ನೇಸಿಯಂ ಸಲ್ಫೇಟನ್ನು ಮಣ್ಣಿಗೆ ಹಾಕಬೇಕು. ನಂತರ ಶೇಕಡ 0.5ರ ಮೆಗ್ನೀಸಿಯಂ ಸಲ್ಫೇಟನ್ನು ಎಲೆಗಳಿಗೆ ಎರಡು ಬಾರಿ ಸಿಂಪಡಿಸಬೇಕು.

ನೀರಾವರಿ
ಮಾರ್ಚ್-ಎಪ್ರಿಲ್‍ನಲ್ಲಿ ಹನಿ ನೀರಾವರಿ ಅಥವಾ ತುಂತುರು ನೀರಾವರಿಯ ಮೂಲಕ ಮಣ್ಣಿನ ಮೇಲ್ಭಾಗಕ್ಕೆ ನೀರೊದಗಿಸಬೇಕು. ತದನಂತರ ಮಣ್ಣಿನ ತೆವಾಂಶ ಕಾಪಾಡಲು ನೀರೊದಗಿಸುವುದನ್ನು ಮುಂದುವರಿಸಬೇಕು. ಬೇಸಿಗೆಯಲ್ಲಿ ಒಣ ಎಲೆಗಳಿಂದ ಗಿಡದ ಬುಡಕ್ಕೆ ಮುಚ್ಚಳಿಕೆ ಹಾಕುವುದರಿಂದ ಮಣ್ಣು ತೇವಾಂಶವನ್ನು ಹಿಡಿದಿಟ್ಟುಕೊಳ್ಳುತ್ತದೆ. ಮಳೆಗಾಲದಲ್ಲಿ ಬಸಿಕಾಲುವೆಗಳನ್ನು ಕೊಡುವುದರಿಂದ ಮಣ್ಣಿನಿಂದ ಉದ್ಭವವಾಗುವ ರೋಗಗಳನ್ನು ತಡೆಗಟ್ಟಬಹುದು.

ಅಂತರ ಬೆಳೆ ಮತ್ತು ಕಳೆನಿರ್ವಹಣೆ
ಕೊಡಗಿನಲ್ಲಿ ಕಿತ್ತಳೆಯನ್ನು ಕಾಫಿ ಮತ್ತು ಕಾಳುಮೇಣಸಿನೊಡನೆ ಅಂತರ ಬೆಳೆಯಾಗಿ ಬೆಳೆಯಲಾಗುತ್ತದೆ. ಅನುಕೂಲಕರ ಬೆಳವಣಿಗೆಗಾಗಿ ಕಿತ್ತಳೆ, ಕಾಫಿ ಮತ್ತು ಕಾಳುಮೆಣಸಿನ ನೆರಳನ್ನು ನಿಯಂತ್ರಿಸಬೇಕು. ಶುದ್ಧ ಕಿತ್ತಳೆ ತೋಟದಲ್ಲಿ ಗಿಡಗಳು ಫಸಲಿಗೆ ಬರುವ ಮುನ್ನ ಪಪಾಯ ಮತ್ತು ಅನನಾಸನ್ನು ಅಂತರ ಬೆಳೆಯಾಗಿ ಬೆಳೆಯುವುದರಿಂದ ಹೆಚ್ಚಿನ ಆದಾಯ ದೊರೆಯುತ್ತದೆ. ಕೊಡಗಿನಲ್ಲಿ ಮಳೆಯ ಪ್ರಮಾಣ ಜಾಸ್ತಿ ಇರುವುದರಿಂದ ಕಳೆಯು ಹುಲುಸಾಗಿ ಬೆಳೆಯುತ್ತದೆ. ಆದ್ದರಿಂದ ಕಳೆನಿಯಂತ್ರಣಕ್ಕೆ ಹೆಚ್ಚು ಗಮನ ಹರಿಸಬೇಕು. ಸಮಗ್ರ ಕಳೆ ಹತೋಟಿ ಕ್ರಮಗಳಾದ ಉಳುಮೆ ಮತ್ತು ಕಳೆನಾಶಕವಾದ ಗ್ಲೈಫೊಸೇಟ್ (1.0 ಕೆ.ಜಿ/ಹೆಕ್ಟೇರು) ಮತ್ತು ಕೈಯಿಂದ ಕಳೆಕೀಳುವುದರಿಂದ 90 ದಿನಗಳವರೆಗೆ ಕಳೆಯನ್ನು ಹತೋಟಿಯಲ್ಲಿಡಬಹುದು.

ಕಿತ್ತಳೆ ಪುನಶ್ಚೇತನ
ಸಮರ್ಥ ಪೋಷಕಾಂಶಗಳ ಬಳಕೆ ಮತ್ತು ಕೀಟ ಹಾಗು ರೋಗ ನಿರ್ವಹಣೆಯತ್ತ ಗಮನ ಹರಿಸುವುದು ಕಿತ್ತಳೆ ಪುನಶ್ಚೇತನದ ಪ್ರಮುಖ ಅಂಶವಾಗಿದೆ. ಹಳೆಯ ಮತ್ತು ರೋಗ ಪೀಡಿತ ಮರಗಳ ಒಣಗಿದ ಹಾಗು ರೋಗಲಕ್ಷಣ ಹೊಂದಿದ ಕೊಂಬೆಗಳನ್ನು ತೆಗೆದು, ಕತ್ತರಿಸಿದ ಜಾಗಕ್ಕೆ ಶೇಕಡ 10ರ ಬೋರ್ಡೋ ಪೇಸ್ಟನ್ನು ಹಚ್ಚಬೇಕು. ಇದರಿಂದ ಹೊಸ ಚಿಗುರುಗಳು ಹುಲುಸಾಗಿ ಬೆಳೆಯುತ್ತದೆ. 25 ಕೆ.ಜಿ. ಕೊಟ್ಟಿಗೆ ಗೊಬ್ಬರ, 5 ಕೆ.ಜಿ ಬೇವಿನ ಹಿಂಡಿ, 150 ಗ್ರಾಂ ಟ್ರೈಕೋಡರ್ಮ ಹಾರ್ಜಿಯಾನಂ, 400 ಗ್ರಾಂ ಸಾರಜನಕ, 125 ಗ್ರಾಂ ರಂಜಕ, 275 ಗ್ರಾಂ ಪೊಟಾಷ್‍ನ್ನು ವಿಂಗಡಿಸಿ ವರ್ಷದಲ್ಲಿ ಎರಡು ಬಾರಿ (ಮುಂಗಾರು ಮತ್ತು ಹಿಂಗಾರು) ಮಣ್ಣಿಗೆ ಹಾಕಬೇಕು. ನೀರಿನಲ್ಲಿ ಕರಗುವ ಗೊಬ್ಬರದ ಮೂಲಕ 200 ಗ್ರಾಂ ಸಾರಜನಕ, 75 ಗ್ರಾಂ ರಂಜಕ, 125 ಗ್ರಾಂ ಪೊಟಾಷ್, ಜಿಂಕ್ (0.2%), ಮೆಗ್ನೇಸಿಯಂ ಸಲ್ಪೇಟ್ (0.5%), ಕ್ಯಾಲ್ಸಿಯಂ ಕ್ಲೋರೈಡ್/ಕ್ಯಾಲ್ಸಿಯಂ ನೈಟ್ರೇಟ್ (0.5%) ಪ್ರತಿ ತಿಂಗಳು ಗಿಡಗಳಿಗೆ ಸಿಂಪಡಿಸಬೇಕು. ಕೊಳೆರೋಗ, ಪೌಡರಿ ಮಿಲ್ ಡ್ಯೂ ಮತ್ತು ಸಮಗ್ರ ಕೀಟ ಹತೋಟಿ ಕ್ರಮಗಳಿಂದ ಕಿತ್ತಳೆ ರೋಗ ವಾಹಕ ಕೀಟಗಳನ್ನು ನಿಯಂತ್ರಿಸಬೇಕು. ಇದರಿಂದ ಮರಗಳು ಹುಲುಸಾಗಿ ಬೆಳೆದು ಇಳುವರಿಯಲ್ಲಿ ಸುಧಾರಣೆ ಕಂಡು ಬಂದಿದೆ.

ರೋಗ ಮತ್ತು ಕೀಟಗಳು
ರೋಗಗಳು
ಕಾಂಡ ಕೊಳೆರೋಗ, ಗಮ್ಮೋಸಿಸ್, ಬೇರುಕೊಳೆರೋಗ, ಪೌಡರಿ ಮಿಲ್ ಡ್ಯೂ, ಟ್ವಿಗ್ ಬ್ಲೈಟ್, ಕಜ್ಜಿ, ಎಲೆ ಮತ್ತು ಕಾಯಿ ಉದುರುವುದು, ಟ್ರೆಸ್ಟೀಜಾ, ನಂಜುರೋಗ, ಗ್ರೀನಿಂಗ್ ಬ್ಯಾಕ್ಟೀರಿಂiÀi ರೋಗ ಮುಂತಾದವು ಕಿತ್ತಳೆಯನ್ನು ಬಾಧಿಸುವ ಪ್ರಮುಖ ರೋಗಗಳು.

ಕಾಂಡ ಕೊಳೆ ರೋಗ, ಗಮ್ಮೋಸಿಸ್ ಮತ್ತು ಬೇರು ಕೊಳೆರೋಗ
ಸಸಿ ಮಡಿಗಳಲ್ಲಿ ಚಿಕ್ಕ ಸಸಿಗಳಿಗೆ ಕೊಳೆ ರೋಗವು ಕಾಣಿಸಿಕೊಂಡು ಕಾಂಡ ಕೊಳೆಯುತ್ತದೆ. ಎಳೆಯ ಮರಗಳಲ್ಲಿ ಕಾಂಡಕೊಳೆ ರೋಗದಿಂದ ಗಮ್ಮೋಸಿಸ್ ಮತ್ತು ಬೆಳೆದ ಮರಗಳಲ್ಲಿ ತೊಗಟೆ ಗಮ್ಮೋಸಿಸ್ ಉಂಟಾಗಬಹುದು ಮತ್ತು ರೋಮ ಬೇರುಗಳು ಕೊಳೆತು ಹೋಗಬಹುದು. ಇದಕ್ಕಾಗಿ ರೋಗ ನಿರೋಧಕ ಬೇರು ಗಿಡಗಳನ್ನು ಬಳಸಬೇಕು. ಬೇರುಗಿಡಗಳಿಗೆ ನೆಲದಿಂದ 9” ಕ್ಕಿಂತ ಹೆಚ್ಚಿನ ಎತ್ತರದಲ್ಲಿ ಕಸಿಕಟ್ಟಬೇಕು. ಗಿಡದ ಬುಡದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. 5 ಕೆ.ಜಿ. ಬೇವಿನ ಹಿಂಡಿಯೊಂದಿಗೆ 50 ಗ್ರಾಂ ಟ್ರೈಕೋಡರ್ಮವನ್ನು ಗಿಡಗಳಿಗೆ ಹಾಕಬೇಕು. 10% ಬೋರ್ಡೋ ಪೇಸ್ಟನ್ನು ಕಾಂಡಗಳಿಗೆ ಹಚ್ಚಬೇಕು. ಇವೆಲ್ಲ ರೋಗ ಪ್ರತಿ ಬಂಧಕ ಕ್ರಮಗಳಾಗಿವೆ. ಶೇಕಡ 1ರ ಬೋರ್ಡೋ ದ್ರಾವಣ ಅಥವಾ ಶೇಕಡ 0.2% ರ ಫೋಲ್ಟಾಫ್ ದ್ರಾವಣವನ್ನು ಗಿಡದ ಬುಡದ ಮಣ್ಣಿಗೆ ಸುರಿಯುವುದರಿಂದ ರೋಗದ ತೀವ್ರತೆಯನ್ನು ಕಡಿಮೆ ಮಾಡಬಹುದು. ರೋಗದ ತೀವ್ರತೆ ಜಾಸ್ತಿ ಇದ್ದರೆ ಮೆಟಲಾಕ್ಷಿಲ್+ಮ್ಯಾಂಕೋಜೆಬ್ (0.25%) ಸಿಂಪಡಣೆ ಮತ್ತು ಗಿಡದ ಬುಡದ ಮಣ್ಣಿಗೆ ಹಾಕಬೇಕು. ಶೇಕಡ 0.3ರ ಫೊಸೆಟಿಲ್-ಎ1 ರ ಬಳಕೆ ಉಪಯೋಗಕರ ಎಂದು ತಿಳಿದು ಬಂದಿದೆ.

ಪೌಡರಿ ಮಿಲ್ ಡ್ಯೂ
ಹುಡಿಯಂತ ವಸ್ತು ಎಳೆಯ ಕೊಂಬೆಯ ಮೇಲೆಲ್ಲಾ ಕಾಣಿಸಿಕೊಳ್ಳುತ್ತದೆ. ನೀರಿನಲ್ಲಿ ಕರಗುವ ಗಂಧಕ (2 ಗ್ರಾಂ/ಲೀ) ಅಥವಾ ಬಲೇಟಾನ್ (1 ಗ್ರಾಂ/ಲೀ) ಅಥವಾ ಕೆರಾಥೇನ್ (1 ಮಿಲಿ/ಲೀ) ಎಲೆಗೆ ಸಿಂಪಡಿಸಬೇಕು.

ನಂಜುರೋಗ ಮತ್ತು ನಂಜುರೋಗದಂತೆ ಕಾಣಿಸುವ ರೋಗಗಳು
ಗ್ರೀನಿಂಗ್
ರೋಗ ಪೀಡಿತ ಎಲೆಯ ರೇಖೆಗಳು ಬಣ್ಣ ಕಳೆದುಕೊಳ್ಳುತ್ತವೆ. ಎಲೆಗಳ ಮೇಲೆ ಚುಕ್ಕೆಗಳ ವಿನ್ಯಾಸ ಗೋಚರಿಸಿಕೊಂಡು ಹೊಳಪನ್ನು ಕಳೆದುಕೊಳ್ಳುತ್ತದೆ ಮತ್ತು ತಳಭಾಗಕ್ಕೆ ಮಡಚಿಕೊಳ್ಳುತ್ತದೆ. ಎಲೆಯ ಮೇಲೆ ಹಸಿರು ಕಲೆಗಳು ಹಳದಿ ಹಿನ್ನೆಲೆಯಲ್ಲಿ ಕಂಡುಬರುತ್ತದೆ. ಸಿಲ್ಲಾ ಕೀಟ ಈ ರೋಗವನ್ನು ಹರಡುತ್ತದೆ. ಯಾವುದೇ ರಾಸಾಯನಿಕಗಳಿಂದ ರೋಗ ನಿಯಂತ್ರಣ ಸಾಧ್ಯವಾಗಿಲ್ಲ. ರೋಗ ಪೀಡಿತ ಗಿಡಗಳನ್ನು ಸಂಪೂರ್ಣವಾಗಿ ತೆಗೆದು ಹಾಕಬೇಕು ಮತ್ತು ಕೀಟಗಳಿಗೆ ಬದಲಿ ಆಶ್ರಯ ಒದಗಿಸುವ ಕರಿಬೇವು ಗಿಡವನ್ನು ಬೆಳಸಬೇಕು. ರೋಗರಹಿತ ಕಿತ್ತಳೆ ಗಿಡದ ಬಳಕೆ ಮತ್ತು ಸಿಲ್ಲಾ ಕೀಟದ ನಿರ್ವಹಣೆಯಿಂದ ರೋಗದ ತೀವ್ರತೆ ಕಡಿಮೆಯಾಗುವುದು.

ಟ್ರೆಸ್ಟೀಜ
ಕಿತ್ತಳೆ ಹೇನುಗಳಿಂದ ಟ್ರೆಸ್ಟೀಜ ರೋಗ ಹರಡುತ್ತದೆ. ಕೊಡಗಿನ ಕಿತ್ತಳೆ ಗಿಡಗಳಿಗೆ ಟ್ರೆಸ್ಟೀಜ ರೋಗ ನಿರೋಧಕ ಶಕ್ತಿ ಇದೆ ಮತ್ತು ಗಿಡದಲ್ಲಿ ರೋಗದ ಯಾವುದೇ ಲಕ್ಷಣ ಗೋಚರಿಸುವುದಿಲ್ಲ. ಆದರೆ ತೀಕ್ಷ್ಣ ವಿಷವುಳ್ಳ ವೈರಾಣುಗಳಿಂದ ಕಾಂಡದಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ. ಗ್ರೀನಿಂಗ್ ಮತ್ತು ಟ್ರೆಸ್ಟೀಜ ರೋಗದ ಸಂಯೋಗದಿಂದ ಗಿಡಗಳು ಬೇಗನೆ ಕುಗ್ಗುತ್ತವೆ. ಯಾವುದೇ ರಾಸಾಯನಿಕಗಳಿಂದ ರೋಗ ನಿಯಂತ್ರಿಸಲು ಸಾಧ್ಯವಿಲ್ಲ್ಲ. ರೋಗ ಪೀಡಿತ ಗಿಡದ ನಿರ್ಮೂಲನೆ, ರೋಗ ನಿರೋಧಕ ಬೇರು ಗಿಡಗಳಿಗೆ ಕಸಿ ಕಟ್ಟಿದ ರೋಗ ರಹಿತ ಕಿತ್ತಳೆ ಗಿಡಗಳ ಬಳಕೆ ಮತ್ತು ಸಮಗ್ರ ಕೀಟ ಹತೋಟಿ ಕ್ರಮದಿಂದ ರೋಗವನ್ನು ನಿಯಂತ್ರಣದಲ್ಲಿಡಬಹುದು.

ಕೀಟಗಳು
ಎಲೆಸುರಂಗ ಹುಳ, ಕಿತ್ತಳೆ ಹೇನು, ಕಾಂಡ ಕೊರಕ, ಸಿಲ್ಲಾ ಮತ್ತು ಹಣ್ಣಿನ ನೊಣ ಇವು ಕೊಡಗಿನ ಕಿತ್ತಳೆಗೆ ಹಾನಿಮಾಡುವ ಪ್ರಮುಖ ಕೀಟಗಳು. ಇತರ ಕೀಟಗಳೆಂದರೆ ಕಿತ್ತಳೆ ಚಿಟ್ಟೆ ಮತ್ತು ಕೊಂಬೆ ಕೊರಕ. ಸಿಲ್ಲಾ ಮತ್ತು ಕಿತ್ತಳೆ ಹೇನು ಕ್ರಮವಾಗಿ ಗ್ರೀನಿಂಗ್ ಮತ್ತು ಟ್ರೆಸ್ಟೀಜ ರೋಗವನ್ನು ಹರಡುತ್ತವೆ.

ಎಲೆಸುರಂಗ ಹುಳ
ಹೊಸ ಎಲೆಗಳನ್ನು ಬಾಧಿಸುತ್ತದೆ. ಎಲೆಯಲ್ಲಿ ಸುರಂಗ ಕೊರೆದು ಹಸಿರು ಭಾಗವನ್ನು ತಿನ್ನುತ್ತದೆ. ಹೊಸ ಎಲೆ ಮೂಡುವ ಸಮಯದಲ್ಲಿ ಅಜಾಡಿರಾಕ್ಟಿನ್ (5 ಮಿಲಿ/ಲೀ) ಸಿಂಪಡಣೆ ನಂತರ ಬಿ.ಟಿ (1 ಮಿಲಿ/ಲೀ) ಸಿಂಪಡಿಸುವುದರಿಂದ ಹಾನಿ ಕಡಿಮೆಯಾಗುತ್ತದೆ. ಕೀಟದ ತೀವ್ರತೆ ಜಾಸ್ತಿ ಇದ್ದರೆ ಇಂಡೋಕ್ಷಾಕಾರ್ಬ್ (0.5 ಮಿಲಿ/ಲೀ) ಅಥವಾ ಡೈಮಿಥೊಯೇಟ್ (2 ಮಿಲಿ/ಲೀ) ಸಿಂಪಡಿಸಬೇಕಾಗುತ್ತದೆ.

ಸಿಲ್ಲಾ
ಸಿಲ್ಲಾ ಗ್ರೀನಿಂಗ್ ರೋಗ ವಾಹಕವಾಗಿದೆ. ಪ್ರೌಢ ಕೀಟ ಮತ್ತು ನಿಂಪ್ ಎಳೆಯ ಕೊಂಬೆಗಳಿಂದ ರಸಹೀರಿ ಕಿತ್ತಳೆ ಗ್ರೀನಿಂಗ್ ರೋಗದ ಬ್ಯಾಕ್ಟೀರಿಯಾವನ್ನು (ಸಿ.ಜಿ.ಬಿ.) ಗಿಡದಲ್ಲಿ ಹರಡುತ್ತದೆ. ಬೇವಿನ ಸೋಪು (10 ಗ್ರಾಂ/ಲೀ) ಸಿಂಪಡಣೆಯ ನಂತರ ಇಮಿಡಾಕ್ಲೋಪ್ರಿಡ್ (0.4 ಮಿಲಿ/ಲೀ) ಅಥವಾ ಡೈಮೀಥೋಟ್ (2 ಮಿಲಿ/ಲೀ) ಅಥವಾ ಥೈಯೋಮೆಥೊಕ್ಷಾಮ್ (0.25 ಗ್ರಾಂ/ಲೀ) ಅಥವಾ ಎಸಿಫೇಟ್ (0.75 ಗ್ರಾಂ/ಲೀ) ಅಥವಾ ಹೊಂಗೆಣ್ಣೆ (2 ಮಿಲಿ/ಲೀ) ಸಿಂಪಡಣೆಯಿಂದ ಕೀಟವನ್ನು ಹತೋಟಿಯಲ್ಲಿಡಬಹುದು.

ಕಿತ್ತಳೆ ಹೇನು
ಪ್ರೌಢ ಕೀಟ ಮತ್ತು ನಿಂಪ್ ಎಳೆಯ ಕೊಂಬೆಗಳಿಂದ ರಸ ಹೀರಿ ಟ್ರೆಸ್ಟೀಜ ರೋಗವನ್ನು ಹರಡುತ್ತದೆ. ಸಿಲ್ಲಾ ಹತೋಟಿಗೆ ಬಳಸಿದ ಕೀಟನಾಶಕಗಳ ಪ್ರಯೋಗದಿಂದ ಕೀಟವನ್ನು ನಿಯಂತ್ರಿಸಬಹುದು.

ಕಾಂಡ ಮತ್ತು ಕೊಂಬೆಕೊರಕ ಕೀಟ
ಕಾಂಡ ಕೊರಕ ಕಾಂಡಕ್ಕೆ ಹಾನಿ ಮಾಡಿದರೆ, ಕೊಂಬೆ ಕೊರಕದಿಂದ ಕೊಂಬೆಗೆ ಹಾನಿಯಾಗುತ್ತದೆ. ಬಾಧಿತ ಕೊಂಬೆಯನ್ನು ಕತ್ತರಿಸಿ ತೆಗೆದು ನಾಶಪಡಿಸಿದ ನಂತರ ಪ್ರೊಫೆನೋಫಾಸ್ (1.8 ಮಿಲಿ/ಲೀ) ಸಿಂಪಡಿಸಬೇಕು ಅಥವಾ ಎಳೆಯ ಕೊಂಬೆಗಳ ಬೆಳವಣಿಗೆ ಕಂಡುಬಂದಾಗ ಪ್ರತೀ ಗಿಡಕ್ಕೆ 30-35 ಗ್ರಾಂ ಕಾರ್ಬೋಫ್ಯುರಾನ್ ಹಾಕಬೇಕು. ಸಮಪ್ರಮಾಣ ಮಿಶ್ರಣದ ಪೆಟ್ರೋಲ್ ಮತ್ತು ಡೈಕ್ಲೋರೋವಾಸ್ ದ್ರಾವಣವನ್ನು ಕೀಟ ಕೊರೆದ ರಂಧ್ರದಲ್ಲಿ ಸುರಿದು ದ್ವಾರವನ್ನು ಬೇವಿನೆಣ್ಣೆ ಅಥವಾ ಕಾಪರ್ ಆಕ್ಸಿಕ್ಲೋರೈಡ್ ಪೇಸ್ಟಿನಿಂದ ಮುಚ್ಚಬೇಕು.

ಹಣ್ಣಿನ ನೊಣ
ಹಣ್ಣಿನಲ್ಲಿ ರಂಧ್ರಮಾಡಿ ಸಿಪ್ಪೆಯ ಒಳಗಡೆ ಮೊಟ್ಟೆಗಳನ್ನು ಇಡುತ್ತದೆ. ಮೊಟ್ಟೆಯಿಂದ ಹೊರಬಂದ ಲಾರ್ವವು ಹಣ್ಣಿನ ತಿರುಳನ್ನು ತಿನ್ನುತ್ತದೆ. ಎರಡನೆ ಹಂತದಲ್ಲಿ ಶಿಲೀಂದ್ರ ಮತ್ತು ಬ್ಯಾಕ್ಟೀರಿಯದ ಬಾಧೆಯಿಂದ ಹಣ್ಣು ಕೊಳೆತು ಕೆಳಗೆ ಬೀಳುತ್ತದೆ. 10 ಕೆ.ಜಿ ಬೆಲ್ಲ ಅಥವಾ ಸಕ್ಕರೆ+ಮೆಲಥಿಯಾನ್ (1 ಮಿಲಿ/ಲೀ) ಕೀಟಾಕರ್ಷಕ ಸಿಂಪಡಣೆಯಿಂದಲೂ ಕೀಟಗಳನ್ನು ಹತೋಟಿಯಲ್ಲಿಡಬಹುದು. ಲಿಂಗಾರ್ಷಕ ಬಲೆಯಿಂದ (9-10/ಎಕರೆ) ಸಹ ಉಪಯೋಗವಾಗಿದೆ.

ಮೆದು ಹುರುಪೆ ಕೀಟ ಮತ್ತು ನುಸಿ
ಮೆದು ಹುರುಪೆ ಕೀಟ ಮತ್ತು ಕೆಂಪು ಜೇಡ ನುಸಿ ಒಮ್ಮೊಮ್ಮೆ ಹೆಚ್ಚು ಹಾನಿ ಮಾಡುತ್ತದೆ. ಇಮಿಡಾಕ್ಲೋಫ್ರಿಡ್ (0.4 ಮಿಲಿ/ಲೀ) ಅಥವಾ ಫಿಪ್ರೊನಿಲ್ (1 ಮಿಲಿ/ಲೀ) ಸಿಂಪಡಣೆ ಮೆದು ಹುರುಪೆ ಕೀಟದ ಹಾನಿಯನ್ನು ಕಡಿಮೆ ಮಾಡುತ್ತದೆ. ಕೆಲ್ತೇನು (3 ಮಿಲಿ/ಲೀ) ಅಥವಾ ಡೈಮಿಥೊಯೇಟ್ ಅಥವಾ ನೀರಿನಲ್ಲಿ ಕರಗುವ ಗಂಧಕ (2 ಗ್ರಾಂ/ಲೀ) ಸಿಂಪಡಣೆ ಕೆಂಪು ಜೇಡ ನುಸಿಯ ಉಪಟಳವನ್ನು ಕಡಿಮೆ ಮಾಡುತ್ತದೆ.

ಕೊಯ್ಲು ಮತ್ತು ಇಳವರಿ
ಕೊಡಗಿನಲ್ಲಿ ಮುಖ್ಯ ಬೆಳೆಯ ಫಸಲನ್ನು ಡಿಸೆಂಬರ್-ಎಪ್ರಿಲ್ ತಿಂಗಳಿನಲ್ಲಿ ಕೊಯ್ಲು ಮಾಡಲಾಗುತ್ತದೆ. ಸಣ್ಣ ಪ್ರಮಾಣದ ಇಳುವರಿ ಮಳೆಗಾಲದ ಜುಲೈ-ಸೆಪ್ಟೆಂಬರ್ ಮಾಸದಲ್ಲಿ ದೊರೆಯುತ್ತದೆ. ಮಿಡಿಕಚ್ಚಿದ 36-38 ವಾರದಲ್ಲಿ ಹಣ್ಣು ಕೊಯ್ಲಿಗೆ ಬರುತ್ತದೆ. ಹಣ್ಣುಗಳನ್ನು ಕೈಯಿಂದ ಕೊಯ್ಲು ಮಾಡಿ ಬುಟ್ಟಿಗಳಲ್ಲಿ ತುಂಬಿ ಹುಲ್ಲು ಹಾಸಿನ ಮೇಲೆ ತೋಟದ ನೆರಳಿನಲ್ಲಿ ಸಂಗ್ರಹಿಸಲಾಗುತ್ತದೆ. ಉತ್ತಮ ನಿರ್ವಹಣೆಯ ತೋಟದ 10 ವರ್ಷ ವಯಸ್ಸಿನ ಮರದಿಂದ ವರ್ಷಕ್ಕೆ 800-1000 ಹಣ್ಣುಗಳನ್ನು ನಿರೀಕ್ಷಿಸಬಹುದು. ಕೋಣೆಯ ತಾಪಮಾನದಲ್ಲಿ ಕಿತ್ತಳೆ ಹಣ್ಣುಗಳನ್ನು 1-2 ವಾರ ಕೆಡದಂತೆ ಇಡಬಹುದು. ಹೆಚ್ಚಾಗಿ ತಾಜಾ ಹಣ್ಣನ್ನು ಉಪಯೋಗಿಸುತ್ತಾರೆ. ಡಬ್ಬಿಯಲ್ಲಿ ಶೇಖರಿಸಿಡಲು, ಜ್ಯೂಸ್, ಜಾಮ್, ಸ್ಕ್ವಾಷ್, ಮಾರ್ಮಲೇಡ್ ತಯಾರಿಕೆಯಲ್ಲಿ ಬಳಸುತ್ತಾರೆ. ಸಿಪ್ಪೆಯಿಂದ ಎಣ್ಣೆ ಮತ್ತು ಪೆಕ್ಟಿನ್ ದೊರಕುತ್ತದೆ.

About ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.
0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments