ಕರಮಂಜಿ
ಕರೊಂಡ ಅಥವಾ ಕರಮಂಜಿ (Carissa congesta Wight. Family: Apocynaceae) 3-5 ಮೀ. ಎತ್ತರ ಬೆಳೆಯುವ ಮುಳ್ಳಿನಿಂದ ಆವೃತವಾದ ಒಂದು ಪೊದರಿನ ಗಿಡ. ಇದರ ಮೂಲಸ್ಥಾನ ಭಾರತ. ದೇಶದ ಪಶ್ಚಿಮಘಟ್ಟದ ಕಾಡುಗಳಲ್ಲಿ, ಮಹಾರಾಷ್ಟ್ರದ ಕೊಂಕಣ ಪ್ರದೇಶ, ಗುಜರಾತ್, ರಾಜಸ್ಥಾನ ಮತ್ತು ಮಯನ್ಮಾರ್, ಶ್ರೀಲಂಕಾ, ಥ್ಯೆಲೇಂಡ್ ಮುಂತಾದ ದೇಶಗಳಲ್ಲಿ ಕಂಡುಬರುತ್ತದೆ. ಗಿಡದಲ್ಲಿ ಚೂಪಾದ ಯಥೇಚ್ಛ ಮುಳ್ಳುಗಳಿರುವುದರಿಂದ ಹೊಲಗದ್ದೆ, ತೋಟಗಳಲ್ಲಿ ಜಾನುವಾರುಗಳಿಂದ ರಕ್ಷಣೆ ಪಡೆಯಲು ಬೇಲಿಯಾಗಿ ಬೆಳೆಸುತ್ತಾರೆ. ಕೆಲವೊಂದು ಪ್ರದೇಶದಲ್ಲಿ ವಾಣಿಜ್ಯ ಬೆಳೆಯಾಗಿ ಬೆಳೆಯುವುದುಂಟು. ಗುಜರಾತ್, ಮಹಾರಾಷ್ಟ್ರ ರಾಜಸ್ಥಾನದ ಬುಡಕಟ್ಟು ಜನರ ಆರ್ಥಿಕ-ಸಾಮಾಜಿಕ ಜೀವನದಲ್ಲಿ ಕರೊಂಡ ಪ್ರಮುಖ ಸ್ಥಾನವನ್ನು ಪಡೆದಿದೆ.
ಕರಮಂಜಿ ಸಾಧಾರಣದಿಂದ ದೊಡ್ಡದಾದ ಪೊದರಿನ ಗಿಡವಾಗಿದ್ದು 3-5 ಮೀ. ಎತ್ತರ ಬೆಳೆಯುತ್ತದೆ. ಕಾಂಡದಲ್ಲಿ ಬಿಳಿಯಾದ ಜಿಗುಟು ದ್ರವ ಯಥೇಚ್ಛವಾಗಿದ್ದು ಕೊಂಬೆಗಳಲ್ಲಿ ಚೂಪಾದ ಮುಳ್ಳುಗಳಿರುತ್ತದೆ. ಜನವರಿ-ಫೆಬ್ರವರಿ ತಿಂಗಳಿನಲ್ಲಿ 3-5 ಸೆ.ಮೀ ವಿಸ್ತಾರವುಳ್ಳ ಬಿಳಿಯ ಹೂಗಳನ್ನು ಬಿಟ್ಟು, ಹಣ್ಣುಗಳು ಮೇ-ಜೂನ್ ತಿಂಗಳಿನಲ್ಲಿ ಕೊಯ್ಲಿಗೆ ಬರುತ್ತವೆ. ಹಣ್ಣು ದ್ರಾಕ್ಷಿಯಂತಿದ್ದು ಗೊಂಚಲಿನಲ್ಲಿ ಅಂಡಾಕಾರದ ಅಥವಾ ಗೋಳಾಕಾರದ 3-7 ಹಣ್ಣುಗಳಿರುತ್ತದೆ. ಹಣ್ಣು ಮಾಗಿದಾಗ ಗುಲಾಬಿ ಅಥವಾ ಕಡು ನೇರಳೆ ಬಣ್ಣ ಹೊಂದಿದ್ದು ಒಳಗೆ ಕೆಂಪು ರಸ ಮತ್ತು ಬೀಜಗಳನ್ನು ಒಳಗೊಂಡಿರುತ್ತದೆ. ಹಣ್ಣನ್ನು ಕೊಯ್ದಾಗ ತೊಟ್ಟಿನಿಂದ ಬಿಳಿಯ ಅಂಟು ದ್ರವ ಹೊರಸೂಸುತ್ತದೆ.
ಸಸ್ಯಾಭಿವೃದ್ಧಿ
ಸಾಧಾರಣವಾಗಿ ಬೀಜದಿಂದ ಸಸಿಗಳನ್ನು ಬೆಳಸಲಾಗುತ್ತದೆ. ಹಣ್ಣಿನಿಂದ ಬೀಜ ಬೇರ್ಪಡಿಸಿದ ಒಡನೆ ಬಿತ್ತನೆ ಮಾಡುವುದು ಒಳ್ಳೆಯದು. ಕೇಂದ್ರೀಯ ತೋಟಗಾರಿಕೆ ಪ್ರಾಯೋಗಿಕಾ ಕೇಂದ್ರ, ಚೆಟ್ಟಳ್ಳಿಯಲ್ಲಿ ಗೂಟಿ ವಿಧಾನದ ಸಸ್ಯಾಭಿವೃದ್ಧಿ ಉತ್ತಮ ಪಲಿತಾಂಶ ನೀಡಿದೆ.
ತಳಿಗಳು
ಕರಮಂಜಿಯಲ್ಲಿ ಕೇಳಿಪಟ್ಟ ತಳಿಯ ಸೃಷ್ಟಿಯಾಗಿಲ್ಲವಾದರೂ ಬೆಳೆಯುವ ಪ್ರದೇಶ, ಹಣ್ಣಿನ ಗುಣಮಟ್ಟ ಆಧರಿಸಿ ಕೆಲವೊಂದು ತಳಿಗಳನ್ನು ಬೆಳೆಯಲು ಆಯ್ಕೆಮಾಡಲಾಗಿದೆ. ಅವುಗಳಲ್ಲಿ ಪ್ರಮುಖವಾದವು ಪಿಕೆ-3, ಪಿಕೆ-4, ಪಂತ್ ಮನೋಹರ್ ಮುಂತಾದವು. ಕೇಂದ್ರೀಯ ತೋಟಗಾರಿಕ ಪಾಯೋಗಿಕಾ ಕೇಂದ್ರ, ಚೆಟ್ಟಳ್ಳಿಯಲ್ಲಿ ವಿವಿಧ ಪ್ರದೇಶಗಳಿಂದ ಸಂಗ್ರಹಿಸಲಾದ ಕೊಂಕಣ್ ಬೋಲ್ಡ್, ವೆಂಗುರ್ಲಾ, ಕೊಟ್ಟಾಯಾಂ, ಹೊಸೂರ್ ಮತ್ತು ಸ್ಥಳೀಯ ಸಂಗ್ರಹಣೆ ಸೇರಿ 5 ತಳಿಗಳಿವೆ. ಇದರಲ್ಲಿ ಉತ್ತಮ ಗುಣಮಟ್ಟದ ಅಂದರೆ ಕಡಿಮೆ ಮುಳ್ಳುಗಳುಳ್ಳ, ಆಕರ್ಶಕ ಬಣ್ಣವುಳ್ಳ, ದೊಡ್ಡದಾದ, ಉತ್ತಮ ರುಚಿಯುಳ್ಳ, ಕಡಿಮೆ ಬೀಜ ಹೊಂದಿದ ತಳಿಗಳನ್ನು ಆಯ್ಕೆ ಮಾಡಲು ಸಂಶೋಧನೆ ಕೈಗೊಳ್ಳಲಾಗಿದೆ. ಕೊಂಕಣ್ ಬೋಲ್ಡ್ ಮತ್ತು ವೆಂಗುರ್ಲಾ ಈಗಾಗಲೆ ಭರವಸೆಯನ್ನು ಮೂಡಿಸಿದ ತಳಿಗಳಾಗಿದ್ದು ಇನ್ನಷ್ಡು ಸಂಶೋಧನೆಯಾಗಬೇಕಿದೆ.
ಉಪಯೋಗಗಳು
• ಚಿಕ್ಕ ಮಿಡಿಗಳನ್ನು ಉಪ್ಪಿನ ಕಾಯಿ ತಯಾರಿಕೆಯಲ್ಲಿ ಮತ್ತು ತರಕಾರಿಯಾಗಿ ಉಪಯೋಗಿಸುತ್ತಾರೆ.
• ಮಾಗಿದ ಹಣ್ಣುಗಳನ್ನು ಜ್ಯಾಮ್, ಜೆಲ್ಲಿ ಮತ್ತು ಜ್ಯೂಸ್ ತಯಾರಿಕೆಯಲ್ಲಿ ಬಳಸುತ್ತಾರೆ.
• ಹಣ್ಣಿನಲ್ಲಿ ವಿಟಮಿನ್ ಸಿ ಮತ್ತು ಕಬ್ಬಿಣದ ಅಂಶ ಜಾಸ್ತಿ ಇರುವುದರಿಂದ ಸ್ಕರ್ವಿ ಮತ್ತು ರಕ್ತ ಹೀನತೆ ರೋಗ ನಿವಾರಕವಾಗಿ ಉಪಯೋಗಿಸುತ್ತಾರೆ.
• ಮುಳ್ಳಿನ ಗಿಡವಾದ್ದರಿಂದ ಜಾನುವಾರುಗಳು ನುಸುಳದಂತೆ ತೋಟಗಳಲ್ಲಿ ಬೇಲಿಯಂತೆ ಬೆಳಸುತ್ತಾರೆ.
• ಬೇರು ಮತ್ತು ಎಲೆಯಿಂದ ಜಜ್ಜಿ ತೆಗೆದ ರಸವನ್ನು ಜ್ವರ, ಅತಿಸಾರ, ಹೊಟ್ಟೆ ನೋವು, ಹೊಟ್ಟೆಯಲ್ಲಿರುವ ಜಂತು ಹುಳಗಳ ನಿವಾರಕವಾಗಿಯೂ ಮತ್ತು ಗಿಡಗಳಿಗೆ ತಗಲುವ ಕೀಟಬಾಧೆ ತಡೆಯಲು ಉಪಯೋಗಿಸುತ್ತಾರೆ.