ಕುಂಬಳ ಜಾತಿಯ ತರಕಾರಿಗಳು
ಕುಂಬಳ ಜಾತಿಗೆ ಸೇರಿದ ತರಕಾರಿಗಳಾದ ಸೌತೆ, ಕುಂಬಳ, ಹೀರೆ, ಹಾಗಲ, ಸೋರೆ, ಕಲ್ಲಂಗಡಿ, ಕರಬೂಜ, ಘರ್ಕಿನ್, ಸಮ್ಮರ್ ಸ್ಕ್ವಾಸ್‍ಗಳನ್ನು ತಾಜಾ, ಸಾಂಬಾರ್ ಹಾಗೂ ಪಲ್ಯವಾಗಿ ಜನರು ದಿನನಿತ್ಯ ಉಪಯೋಗಿಸುತ್ತಾರೆ. ಈ ತರಕಾರಿಗಳಲ್ಲಿ ಹೆಚ್ಚಾಗಿ ಅನ್ನಾಂಗ ಎ, ಸಿ ಮತ್ತು ಖನಿಜಾಂಶಗಳಾದ ಕಬ್ಬಿಣ, ರಂಜಕ, ಪೊಟ್ಯಾಷ್, ಕ್ಯಾಲ್ಸಿಯಂ ವಿಫುಲವಾಗಿದೆ.
ಮಣ್ಣು: ನೀರು ಬಸಿದು ಹೋಗುವ 6-7 ರಸ ಸಾರವಿರುವ ಮರಳು ಮಿಶ್ರಿತ ಗೋಡು ಮಣ್ಣು ಬಹಳ ಸೂಕ್ತ.
ಹವಾಗುಣ: ಮುಖ್ಯವಾಗಿ ಉಷ್ಣವಲಯ ಬೆಳೆಯಾಗಿದ್ದು, ಬೇಸಿಗೆಯಲ್ಲಿ ಗುಣಮಟ್ಟದ ಅಧಿಕ ಇಳುವರಿ ಸಿಗುತ್ತದೆ. ಜನವರಿಯಿಂದ ಮೇ ಅಂತ್ಯದವರೆಗೆ ಕೊಡಗಿನಲ್ಲಿ ಈ ತರಕಾರಿಗಳನ್ನು ಉತ್ತಮವಾಗಿ ಬೆಳೆಯುತ್ತಾರೆ.
ತಳಿಗಳು
ಬೆಳೆ ತಳಿ ಬಿತ್ತನೆ ಸಮಯ ಇಳುವರಿ(ಟನ್/ಹೆ)
ಸೌತೆ ಜಪಾನೀಸ್ ಲಾಂಗ್, ಮುಳ್ಳು ಸೌತೆ, ಸಾಂಬಾರ್ ಸೌತೆ ಜನವರಿ-ಫೆಬ್ರವರಿ 15-20
ಕರಬೂಜ ಅರ್ಕಾ ರಾಜಹಂಶ, ಅರ್ಕಾ ಜೀತೆ, ಹರಮಧು ಜನವರಿ-ಫೆಬ್ರವರಿ 15-20
ಕಲ್ಲಂಗಡಿ ಶುಗರ್ ಬೇಬಿ, ಅರ್ಕಾ ಕಿರಣ್, ಖಾಸಗಿ ಅಕ್ಟೋ-ನವೆಂಬರ್ 35-50
ಘರ್ಕಿನ್ ಖಾಸಗಿ ತಳಿಗಳು ಜನವರಿ-ಫೆಬ್ರವರಿ 10-12
ಕುಂಬಳ ಅರ್ಕಾ ಸೂರ್ಯಮುಖಿ, ಅರ್ಕಾ ಚಂದನ್ ಜನವರಿ-ಫೆಬ್ರವರಿ 30-35
ಬೂದು ಕುಂಬಳ ಜಿ.ಕೆ.ವಿ.ಕೆ-1, ಕೋ-1, ಖಾಸಗಿ ಅಕ್ಟೋ-ನವೆಂಬರ್ 25-30
ಸೋರೆ ಅರ್ಕಾ ಬಹಾರ್, ಖಾಸಗಿ ಅಕ್ಟೋ-ನವೆಂಬರ್ 20-25
ಹಾಗಲ ಅರ್ಕಾ ಹರಿತ್, ಖಾಸಗಿ ಅಕ್ಟೋ-ನವೆಂಬರ್ 7.5-10
ಹೀರೆ ಅರ್ಕಾ ಸುಮಿತ್, ಅರ್ಕಾ ಸುಜಾತ್, ಖಾಸಗಿ ಅಕ್ಟೋ-ನವೆಂಬರ್ 7.5-10
ಬೇಸಾಯ ಕ್ರಮ: ಭೂಮಿಯನ್ನು 2-3 ಬಾರಿ ಉಳುಮೆ ಮಾಡಿ, ಕುಂಟೆ ಹೊಡೆದು ಚೆನ್ನಾಗಿ ಹದ ಮಾಡಬೇಕು. ಶಿಫಾರಸ್ಸು ಮಾಡಿದ ಪೂರ್ಣ ಪ್ರಮಾಣದ ಕೊಟ್ಟಿಗೆ ಗೊಬ್ಬರ (25 ಟನ್/ಹೆ), ರಂಜಕ (50 ಕೆ.ಜಿ/ಹೆ), ಪೊಟ್ಯಾಷ್ (50 ಕೆ.ಜಿ/ಹೆ) ಹಾಗು ಅರ್ಧ ಪ್ರಮಾಣದ ಸಾರಜನಕವನ್ನು (50 ಕೆ.ಜಿ/ಹೆ) ಮಣ್ಣಿನಲ್ಲಿ ಸೇರಿಸಿ 3’ ಅಂತರದಲ್ಲಿ ಗುಣಿಗಳನ್ನು ಮಾಡಿ ಸಾಲಿನಿಂದ ಸಾಲಿಗೆ 2’ ಅಂತರವಿಟ್ಟು 2-3 ಬೀಜಗಳನ್ನು ಪ್ರತೀ ಗುಣಿಗೆ ಬಿತ್ತನೆ ಮಾಡಿ ನೀರು ಹಾಯಿಸಬೇಕು. 10-12 ದಿನದಲ್ಲಿ ಪ್ರತೀ ಗುಣಿಯಲ್ಲಿ ಮೊಳಕೆಯೊಡೆದ 1-2 ಸಸಿಗಳನ್ನು ಉಳಿಸಿಕೊಂಡು ಆರೈಕೆ ಮಾಡಬೇಕು. ಕಳೆ ತೆಗೆದ ನಂತರ ಉಳಿದ ಅರ್ಧ ಭಾಗದ ಸಾರಜನಕವನ್ನು (50 ಕೆ.ಜಿ/ಹೆ) 2 ಹಂತಗಳಲ್ಲಿ ಕೊಟ್ಟು ಮಣ್ಣು ಸೇರಿಸಬೇಕು.
ಬಳ್ಳಿಗಳಿಗೆ ಆಸರೆ ಕೊಡುವುದು: ಬಳ್ಳಿಗಳು ನೆಲದ ಮೇಲೆ (ಕುಂಬಳ, ಬೂದು ಕುಂಬಳ, ಸೋರೆ) ಹಾಗೂ ಹಬ್ಬಲು (ಹೀರೆ, ಹಾಗಲ, ಸೌತೆ) ಸಹಾಯವಾಗುವಂತೆ ಸ್ಥಳೀಯ ವಸ್ಸುಗಳಿಂದ ಆಸರೆ ಒದಗಿಸಬೇಕು ಅಥವಾ ಜಿ.ಐ. ತಂತಿಯಿಂದ ಚಪ್ಪರ ನಿರ್ಮಿಸಿ ಸೆಣಬಿನ ದಾರದಿಂದ ಎತ್ತಿ ಕಟ್ಟ ಬೇಕು. ಇದರಿಂದ ಅಂತರ ಬೇಸಾಯ ಮತ್ತು ಕೊಯ್ಲು ಮಾಡಲು ಸುಲಭವಾಗುತ್ತದೆ.
ಸಸ್ಯ ಸಂರಕ್ಷಣೆ
ಕೀಟ: ಕೆಂಪು ಕುಂಬಳ ದುಂಬಿ, ಎಲೆ ಕತ್ತರಿಸುವ ಹುಳು, ಹಣ್ಣ ನೊಣ, ಎಲೆ ಸುರಂಗ ಕೀಟ.
ರೋಗ: ಸೊರಗು ರೋಗ, ಚಿಬ್ಬು ರೋಗ, ಬೂದಿ ರೋಗ, ತಂತು ರೋಗ.
ಸಮಗ್ರ ಹತೋಟಿ ಕ್ರಮ: ಬಿತ್ತನೆ ಬೀಜಗಳನ್ನು ಶೇ. 1ರ ಕಾರ್ಬೆಂಡೆಜಿಂ ದ್ರಾವಣದಲ್ಲಿ 15 ನಿಮಿಷಗಳವರೆಗೆ ನೆನೆಸಿ ಬಿತ್ತನೆ ಮಾಡಬೇಕು. ಹಣ್ಣು ನೊಣದ ನಿಯಂತ್ರಣಕ್ಕಾಗಿ ಎಕರೆಗೆ 10 ರಂತೆ ಲಿಂಗಾಕರ್ಷಕ ಬಲೆಗಳನ್ನು ಕಟ್ಟಬೇಕು. ಎಲೆ ಸುರಂಗ ಕೀಟದ ನಿಯಂತ್ರಣಕ್ಕಾಗಿ ಬೀಜ ಮೊಳಕೆಯೊಡೆದ 10 ಮತ್ತು 25 ದಿನಗಳ ನಂತರ ಶೇ. 0.5 ರ ಬೇವಿನ ಎಣ್ಣೆಯನ್ನು ಸಿಂಪಡಿಸ ಬೇಕು. 2 ಗ್ರಾಂ. ಕಾರ್ಬಂಡೆಜಿಂ ಪ್ರತೀ ಲೀಟರ್ ನೀರಿನಲ್ಲಿ ಕರಗಿಸಿ ಸಿಂಪಡಣೆ ಮಾಡುವುದರಿಂದ ಬೂದಿ ರೋಗವನ್ನು ನಿಯಂತ್ರಿಸಬಹುದು. ಸುಳಿ ನಂಜು ರೋಗದ ಗಿಡಗಳನ್ನು ಸುಟ್ಟು ನಾಶಪಡಿಸಬೇಕು. ಗಿಡದ ಬುಡಕ್ಕೆ 250 ಗ್ರಾಂ. ಬೇವಿನ ಹಿಂಡಿ ಅಥವಾ 5-10 ಗ್ರಾಂ. ಕಾರ್ಬೋಫ್ಯುರಾನ್/ಫೊರೇಟ್ ಹರಳುಗಳನ್ನು ಗಿಡಗಳ ಸುತ್ತಾ ಉದುರಿಸುವುದರಿಂದ ತಂತು ಹುಳುವನ್ನು ಹತೋಟಿಯಲ್ಲಿಡಬಹುದು. ಸೊರಗು ರೋಗ ಪೀಡಿತ ಗಿಡಗಳನ್ನು ನಾಶಪಡಿಸಿ ಉಳಿದ ಗಿಡಗಳಿಗೆ ಶೇ. 1 ರ ಮ್ಯಾಂಕೊಜೆಬ್ ದ್ರಾವಣದಿಂದ ಉಪಚರಿಸಬೇಕು. ಚಿಬ್ಬು ರೋಗಕ್ಕೆ 2 ಗ್ರಾಂ. ಮೆಟಲಾಕ್ಷಿಲ್ + ಮ್ಯಾಂಕೊಜೆಬ್ 2 ಗ್ರಾಂ/ಲೀ. ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.