ಸುಮಾರು 190 ವರ್ಷಗಳಿಗೂ ಹಿಂದಿನ ಮಾತು, ಕೊಡಗಿನಲ್ಲಿ ಭೀಕರ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಂಡಿದ್ದವು. ಚಿಕಿತ್ಸೆಗಳು ಫಲಕಾರಿಯಾಗದೆ, ಜಿಲ್ಲೆಯ ಜನತೆ ವಿಚಲಿತರಾಗಿದ್ದರು. ಈ ಸಂದರ್ಭ ಧಾರ್ಮಿಕ ಮುಖಂಡರೆಲ್ಲರೂ ಒಂದೆಡೆ ಸೇರಿ ಒಂದು ನಿರ್ಧಾರವನ್ನು ಕೈಗೊಂಡರು. ರಾಜರ ಕಾಲದ 4 ಶಕ್ತಿ ದೇವತೆಗಳನ್ನು ಪಟ್ಟಣಕ್ಕೆ ಕರೆತಂದು ನಗರಾದ್ಯಂತ ಪ್ರದಕ್ಷಿಣೆ ಮಾಡಿಸುವುದು ಅವರ ನಿರ್ಧಾರವಾಗಿತ್ತು. ಪುರಾಣಗಳ ಪ್ರಕಾರ ದುಷ್ಟ ಸಂಹಾರಕ್ಕೆ ಸಿದ್ದಳಾದ ಪಾರ್ವತಿ ದೇವಿಯು ನವರಾತ್ರಿಯ ಮೊದಲ ದಿನ ದೇವಾನುದೇವತೆಗಳ ಅಣ್ಣನೆನಿಸಿಕೊಂಡಿರುವ “ಶ್ರೀಮಹಾವಿಷ್ಣು” ವಿನ ಬಳಿಗೆ ಹೋಗಿ ಆತನಿಂದ ಶಂಖ, ಚಕ್ರ, ಗಧೆ ಮುಂತಾದ ಶಸ್ತ್ರಸ್ತ್ರಾಗಳನ್ನು ಪಡೆದುಕೊಳ್ಳುತ್ತಾಳೆ. ಈ ಹಿನ್ನಲೆಯಲ್ಲಿ ನವರಾತ್ರಿಯ ಮೊದಲದಿನ ಪಾರ್ವತಿಯ ಅಂಶವೆನಿಸಿಕೊಂಡಿರುವ ಶ್ರೀ ಚೌಟಿಮಾರಿಯಮ್ಮ, ಶ್ರೀ ಕಂಚಿಕಾಮಾಕ್ಷಿಯಮ್ಮ, ಶ್ರೀ ದಂಡಿನ ಮಾರಿಯಮ್ಮ, ಮತ್ತು ಶ್ರೀ ಕೋಟೆಮಾರಿಯಮ್ಮ ದೇವತೆಗಳು ಕರಗಕಟ್ಟಿದ ನಂತರ ಮಹಾವಿಷ್ಣುವಿನ ಸ್ಥಾನವಾದ ಪೇಟೆ ಶ್ರೀ ರಾಮ ಮಂದಿರಕ್ಕೆ ಆಗಮಿಸುವ ಮತ್ತು ನಂತರ ನವದಿನ ನಗರಪ್ರದಕ್ಷಿಣೆ ಮಾಡುವ ಸಂಪ್ರದಾಯ ಆರಂಭವಾಯಿತು. ಹತ್ತನೇಯ ದಿನ (ವಿಜಯದಶಮಿ)ದಂದು ಪೇಟೆ ಶ್ರೀ ರಾಮಮಂದಿರದಿಂದ ಸಂಜೆ 7 ಗಂಟೆಗೆ ಕಳಸ ಹೊತ್ತ ಪಲ್ಲಕಿಯು ಮೆರವಣಿಗೆ ಹೊರಟು ಮಂಗಳವಾಧ್ಯದೊಂದಿಗೆ ಮೊದಲು ಶ್ರೀ ಚೌಟಿಮಾರಿಯಮ್ಮನ ಕರಗ, ನಂತರ ಶ್ರೀ ಕಂಚಿಕಾಮಾಕ್ಷಿ ದೇಗುಲಕ್ಕೆ ತೆರಳಿ ಕರಗ ಪೂಜೆಯನ್ನು ಸ್ವೀಕರಿಸಿ ಶ್ರೀ ದಂಡಿನಮಾರಿಯಮ್ಮನ ದೇಗುಲದೆಡೆಗೆ ಸಾಗುತ್ತದೆ. ಅಲ್ಲ್ಲಿಗೆ ಅದಾಗಲೇ ಶ್ರೀ ಕೋಟೆಮಾರಿಯಮ್ಮ ದೇವಿಯ ಕರಗವು ಬಂದಿರುತ್ತವೆ, ಅಲ್ಲಿ ಪೂಜೆಯನ್ನು ಸ್ವೀಕರಿಸಿ 4 ಶಕ್ತಿ ದೇವತೆಯರ ಕರಗಗಳ ಮೆರವಣಿಗೆ ಮುಂದುವರಿಯುತ್ತದೆ. ಮಡಿಕೇರಿಯ ರಾಜರಸ್ತೆ ಎನಿಸಿದ ಮಹದೇವಪೇಟೆಯ ಮೂಲಕ ಸಾಗುವ ಮೆರವಣಿಗೆ ಗದ್ದುಗೆ ಸಮೀಪದಲ್ಲಿರುವ ಬನ್ನಿಮಂಟಪದಲ್ಲಿ ಬನ್ನಿ ಕಡಿಯುವ ಮೂಲಕ `ವಿಜಯದಶಮಿ’ ಉತ್ಸವಕ್ಕೆ ಮಂಗಳ ಹಾಡಲಾಗುತಿತ್ತು. ಇವಿಷ್ಟು ಕಾರ್ಯಕ್ರಮಗಳು ಮಧ್ಯರಾತ್ರಿ 12 ಗಂಟೆಯ ಒಳಗೆ ನಡೆಯುತ್ತಿತು. ಪ್ರಪ್ರಥಮವಾಗಿ ನಡೆದ ದಸರಾ ಉತ್ಸವದ ಪುಣ್ಯದ ಫಲವೆಂಬಂತೆ ಸಾಂಕ್ರಾಮಿಕ ರೋಗ ಇನ್ನಿಲ್ಲದಂತೆ ಮಾಯವಾಯಿತು. ಇದರಿಂದ ಸಂತುಷ್ಟರಾದ ಕೊಡಗಿನ ಜನತೆ ದಸರಾ ಉತ್ಸವವನ್ನು ಸರ್ವಧರ್ಮಗಳ ಸಾಮರಸ್ಯದ ಸಂಕೇತವೆನ್ನುವಂತೆ ಕ್ರಮಬದ್ಧವಾಗಿ ಪ್ರತೀ ವರ್ಷ ಆಚರಿಸಿಕೊಂಡು ಬರುವ ನಿರ್ಧಾರವನ್ನು ಕೈಗೊಂಡಿತು.
ನಗರದ 4 ಶಕ್ತಿ ದೇವತೆಗಳ ಕುರಿತು ಇತಿಹಾಸದ ಪುಟಗಳಲ್ಲಿ ಉಲ್ಲೇಖವಿದೆ. ಆದರೂ ಸ್ಪಷ್ಟ ಮಾಹಿತಿ ಲಭ್ಯವಿಲ್ಲ, ಲಭ್ಯಮಾಹಿತಿ ಪ್ರಕಾರ ಕೊಡಗನ್ನು ಆಳುತ್ತಿದ್ದಂತಹ ರಾಜ ಮನೆತನದವರು ತಮ್ಮ ಆಡಳಿತ ಸುಸೂತ್ರವಾಗಿ ನಡೆಸಲು ತಮಿಳುನಾಡಿನಿಂದ ಶಕ್ತಿ ದೇವತೆಗಳನ್ನು ಕರೆತಂದು ನಗರದಲ್ಲಿ ಪ್ರತಿಷ್ಠಾಪಿಸಿದರು, ಮಾತ್ರವಲ್ಲದೆ ಈ ದೇವರ ಪೂಜಾ ಕಾರ್ಯ ನೆರವೇರಿಸಲು ಗೌಳಿ(ಯಾದವ ಜನಾಂಗ) ಜನಾಂಗದ ಪೂಜಾರಿ ಕುಟುಂಬದವರಿಗೆ ಅವಕಾಶ ನೀಡಿದರು. ಅದು ಇಂದಿಗೂ ವಂಶಪಾರಂಪರ್ಯವಾಗಿ ಮುಂದುವರಿಯುತ್ತಿದೆ. ಪಾರ್ವತಿ ದೇವಿಯ ಅಂಶವೆನ್ನಲಾಗುವ 4 ಶಕ್ತಿ ದೇವತೆಗಳ ಹಿರಿಯಕ್ಕ ನಗರದ ಮತ್ತು ಪ್ರಜೆಗಳ ರಕ್ಷಣೆ ಮಾಡುವ ಕುಂದುರು ಮೊಟ್ಟೆ ಶ್ರೀ ಚೌಟಿಮಾರಿಯಮ್ಮ, ಇನ್ನೊಂದು ಸಹೋದರಿಯಾದ ದಂಡಿನ ಮಾರಿಯಮ್ಮ ಸೈನಿಕರ ರಕ್ಷಣೆ, ಶಸ್ತ್ರಾಸ್ತ್ರ ರಕ್ಷಣೆ ಮತ್ತು ಜಯ, ಕೋಟೆಯ ರಕ್ಷಣೆಗೆಂದು ಕೋಟೆಮಾರಿಯಮ್ಮ ದೇವಿಯು, ಹಾಗೂ ಐಶ್ವರ್ಯ ಮತ್ತು ಆರೋಗ್ಯವನ್ನು ನೀಡಲು ಕಂಚಿಕಾಮಾಕ್ಷಿ ದೇವಿಯನ್ನು ಪ್ರತಿಷ್ಠಾಪಿಸಲಾಯಿತು. ಮಹಾಲಯ ಅಮಾವಾಸ್ಯೆ ಮರುದಿನ ಸಾಂಪ್ರದಾಯಿಕ ಕರಗ ಪೂಜೆಯೊಂದಿಗೆ ಮಡಿಕೇರಿ ದಸರಾಕ್ಕೆ ವಿದ್ಯುಕ್ತ ಚಾಲನೆ ದೊರೆಯುತ್ತದೆ. ಅಂದು ನಾಲ್ಕು ಕರಗಗಳು ಪೇಟೆ ಶ್ರೀರಾಮಮಂದಿರಕ್ಕೆ ಬಂದು ಪೂಜೆ ಸಲ್ಲಿಸುತ್ತದೆ. ಕರಗ ದೇವತೆಗಳು ನವರಾತ್ರಿ ಸಂದರ್ಭ 5 ದಿನಗಳ ಕಾಲ ನಗರ ಸಂಚಾರ ಮಾಡುತ್ತವೆ. ಕೊನೆಗೆ ವಿಜಯ ದಶಮಿಯಂದು ದಶಮಂಟಪಗಳ ಜೊತೆಗೂಡಿ ಬನ್ನಿಮಂಟಪಕ್ಕೆ ತೆರಳಿ ಬನ್ನಿ ಕಡಿಯುವ ಮೂಲಕ ದಸರಾ ಉತ್ಸವಕ್ಕೆ ಮಂಗಳ ಹಾಡಲಾಗುವುದು. ಕರಗವನ್ನು ಸಿಂಗರಿಸುವ ಬಗ್ಗೆ:- ಒಂದು ತಾಮ್ರದ ಬಿಂದಿಗೆಯಲ್ಲಿ ಮೊದಲು ಮರಳನ್ನು ತುಂಬಿಸಲಾಗುತ್ತದೆ. ಮಾತ್ರವಲ್ಲದೆ ದೇವಿಗೆ ಅಗತ್ಯವಾದ ಕಪ್ಪು ಬಳೆ, ಕರಿಮಣಿ, ಅರಿಶಿಣ-ಕುಂಕುಮ, ಎಲೆ ಅಡಿಕೆ, ಕಾಡೋಲೆ ಮತ್ತು ಒಂದು ಕಾಲು ರುಪಾಯಿ ಕಾಣಿಕೆ ಸಹ ಇರುತ್ತದೆ. ಅದರ ಮೇಲೆ ತೆಂಗಿನಕಾಯಿ, ವೀಳ್ಯದೆಲೆ, ಮಾವಿನ ಎಲೆಗಳಿಂದ ಕೂಡಿದ ಕಳಶ, ಮೇಲ್ಭಾಗದಲ್ಲಿ ದೇವಿಯರ ಮುಖವಾಡ ಪ್ರಭಾವಳಿ ಇದ್ದರೆ, ತುದಿಯಲ್ಲಿ ಪುಟ್ಟ ಬೆಳ್ಳಿ ಕೊಡೆ ಇರುತ್ತದೆ. ಕರಗವನ್ನು ಮಲ್ಲಿಗೆ, ಸೇವಂತಿಗೆ, ಕನಕಾಂಬರ ಮತ್ತು ಗುಲಾಬಿ ಹೂವುಗಳಿಂದ ಅಲಂಕರಿಸಲಾಗುತ್ತದೆ. ಕರಗ ಹೊರುವವರ ಕೈಯಲ್ಲಿ ಬೆತ್ತ ಮತ್ತು ಕಠಾರಿ ಇರುತ್ತದೆ. ಬೆತ್ತದಲ್ಲಿ ವಿಶಿಷ್ಟ ಶಕ್ತಿಯಿದ್ದು ಇದರ ಸ್ಪರ್ಶದಿಂದ ಸಂಕಷ್ಟಗಳು ನಿವಾರಣೆಯಾಗುತ್ತದೆÀ ಎಂಬ ನಂಬಿಕೆಯಿದೆ. ಶ್ರೀ ಕಂಚಿಕಾಮಾಕ್ಷಿ ದೇವಾಲಯದಲ್ಲಿ ಅಪರೂಪದ ಶಕ್ತಿ ಕರಗವಿದೆ. ಈ ಕರಗವು 11 ತಾಮ್ರದ ಬಿಂದಿಗೆಗಳಿಂದ ಕೂಡಿರುತ್ತದೆ. ದೇವಾಲಯದಲ್ಲಿ ಕೆಲ ವರ್ಷಗಳ ಹಿಂದೆ ವಿಶೇಷ ಕರಗೋತ್ಸವದ ಸಂದರ್ಭದಲ್ಲಿ ಈ ಶಕ್ತಿ ಕರಗವನ್ನು ಹೊರುತ್ತಿದ್ದರು. ಈಗ ಈ ಶಕ್ತಿ ಕರಗವನ್ನು ಇತ್ತೀಚಿಗಿನ ಪೀಳಿಗೆಯವರಿಗೆ ಹೊರಲು ಅಸಾಧ್ಯವಾದರಿಂದ ಈ ತಾಮ್ರದ ಶಕ್ತಿ ಕರಗವು ದೇವಾಲಯದಲ್ಲಿದೆ.