ಮಡಿಕೇರಿ ದಸರಾ ದಶಮಂಟಪ ಸಮಿತಿ 2018
ಪ್ರಾಸ್ತವಿಕ
ವಿಶ್ವ ವಿಖ್ಯಾತ ಮೈಸೂರು ದಸರಾ ನಾಡಹಬ್ಬದ ನಂತರ ಐತಿಹಾಸಿಕ ಮಡಿಕೇರಿ ದಸರಾ ನಾಡಹಬ್ಬವು ತನ್ನದೇ ಆದ ಮಹತ್ವವನ್ನು ಪಡೆದಿದೆ. ಮಡಿಕೇರಿ ದಸರಾ ವರ್ಷದಿಂದ ವರ್ಷಕ್ಕೆ ತನ್ನ ಆಕರ್ಷಣೆಯನ್ನು ವೃದ್ಧಿಸಿಕೊಂಡೇ ಬರುತ್ತಿದೆ. ಮಡಿಕೇರಿ ದಸರಾ ನಾಡಹಬ್ಬವನ್ನು ಕೊಡಗು ಜಿಲ್ಲೆಯಿಂದಲು, ಇತರ ಜಿಲ್ಲೆಗಳಿಂದಲೂ ಇತರ ರಾಜ್ಯಗಳಿಂದ ಮಾತ್ರವಲ್ಲದೆ, ದೇಶ ವಿದೇಶಗಳಿಂದ ಲಕ್ಷಾಂತರ ಜನರು ವೀಕ್ಷಿಸಲು ಬರುತ್ತಿದ್ದಾರೆ. ಮಹಾಲಯ ಅಮವಾಸೆಯ ಮಾರನೆಯ ದಿನದಿಂದ ನಗರದ ನಾಲ್ಕು ಶಕ್ತಿ ದೇವತೆಗಳ ಕರಗವನ್ನು ಸಿಂಗರಿಸಿ ಮೆರವಣಿಗೆಯ ಮೂಲಕ ಐತಿಹಾಸಿಕ ಮಡಿಕೇರಿ ದಸರಾ ಹಬ್ಬಕ್ಕೆ ಚಾಲನೆ ದೊರೆಯಲ್ಪಡುತ್ತದೆ. ಒಂಬತ್ತು ದಿನಗಳ ನವರಾತ್ರಿ ಉತ್ಸವದೊಂದಿಗೆ ಹತ್ತನೇ ದಿನದ ವಿಜಯದಶಮಿಯಂದು ನಗರದ ದಶದೇಗುಲಗಳ ದಶಮಂಟಪಗಳೊಂದಿಗೆ, ನಾಲ್ಕು ಶಕ್ತಿ ದೇವತೆಗಳ ಕರಗಗಳ ಶೋಭಾಯಾತ್ರೆಯು ನಡೆಯಲ್ಪಡುತ್ತದೆ. ವಿಜಯದಶಮಿಯಂದು ರಾತ್ರಿ 10ಗಂಟೆಗೆ ಪ್ರಾರಂಭವಾಗುವ ಶೋಭಾಯಾತ್ರೆಯು ಮಾರನೆಯ ದಿನ ಸಂಜೆಯ ವರೆಗೂ ನಡೆಯುತ್ತದೆ. ಈ ಶೋಭಾಯಾತ್ರೆಯು ಮೈಸೂರು ದಸರೆಯ ಶೋಭಾಯಾತ್ರೆಗಿಂತಲೂ ಭಿನ್ನವಾಗಿರುತ್ತದೆ. ಇದೇ ಮಡಿಕೇರಿ ದಸರಾ ಮಹೋತ್ಸವದ ವಿಶಿಷ್ಟ. ಮಡಿಕೇರಿ ದಸರಾ ನಾಡಹಬ್ಬದ ಬಗ್ಗೆ ವಿವರಗಳನ್ನು ನಿಮಗೆ ತಿಳಿಸುವ ಜೊತೆಯಲ್ಲೆ ಮಡಿಕೇರಿ ದಸರಾ ಪ್ರಾರಂಭವಾದ ಇತಿಹಾಸದ ಬಗ್ಗೆ ಹೇಳಬೇಕಾಗಿದೆ. ಇಲ್ಲಿಯವರೆಗೆ ಮಡಿಕೇರಿ ದಸರಾ ನಾಡಹಬ್ಬ ಪ್ರಾರಂಭವಾದ ಬಗ್ಗೆ ನಿಖರವಾದ ಮಾಹಿತಿ ಲಭ್ಯವಾಗಿಲ್ಲ, ಆದರೆ ಇದರ ಬಗ್ಗೆ ಒಂದು ಅಧ್ಯಯನ ನಡೆಸಿದಾಗ ಕೆಲವು ಮಹತ್ತರವಾದ ಅಂಶಗಳು ಮಡಿಕೇರಿ ದಸರಾ ಪ್ರಾರಂಭದ ಬಗ್ಗೆ ಇತಿಹಾಸದ ಪುಟಗಳಿಂದ ದೊರೆಯುತ್ತದೆ. ಈ ಕುರಿತು ಮಡಿಕೇರಿ ದಸರಾ ಪ್ರಾರಂಭವಾದ ಹಿನ್ನಲೆ, ಇತಿಹಾಸದ ಬಗ್ಗೆ, ಶಕ್ತಿ ದೇವತೆಗಳ ಕರಗಗಳ ಇತಿಹಾಸ, ದಶದೇಗುಲಗಳ, ದಶಮಂಟಪಗಳ ಬಗ್ಗೆ ವಿವರಗಳನ್ನು ಇಲ್ಲಿ ನಾವು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ.
ತಾ||10-10-2018ರಂದು ಸಂಜೆ 4 ಗಂಟೆಗೆ ಇತಿಹಾಸ ಪ್ರಸಿದ್ದ ಮಡಿಕೇರಿಯ ಗದ್ದುಗೆ ಬಳಿಯಿರುವ ಪಂಪಿನ ಕೆರೆಯ ಬಳಿ ನಗರದ ನಾಲ್ಕು ಶಕ್ತಿದೇವತೆಗಳ ಕರಗ ಗಳನ್ನು ಸಿಂಗರಿಸಿ ಮಡಿಕೇರಿ ನಗರದ ಮುಖ್ಯ ಬೀದಿಗಳಲ್ಲಿ ಸಂಚರಿಸುವ ಮೂಲಕ ಐತಿಹಾಸಿಕ ಮಡಿಕೇರಿ ದಸರಾ ನಾಡಹಬ್ಬಕ್ಕೆ ಚಾಲನೆ ದೊರೆಯಲದೆ.
ಅಲ್ಲಿಂದ 9 ದಿನಗಳ ನವರಾತ್ರಿ ಉತ್ಸವದೊಂದಿಗೆ, ತಾ|| 18-10-2018ರ ಆಯುಧಪೂಜಾ ಮಹೋತ್ಸವ ಹಾಗೂ ತಾ||19-10-2018ರ ರಾತ್ರಿ 10 ಗಂಟೆಯಿಂದ ನಾಲ್ಕು ಶಕ್ತಿದೇವತೆಗಳ ಕರಗ ಗಳೊಂದಿಗೆ ದಶದೇಗುಲಗಳ ದಶಮಂಟಪಗಳ ಭವ್ಯ ಶೋಭಾಯಾತ್ರೆಯು ಮಡಿಕೇರಿ ನಗರದಲ್ಲಿ ವಿಜೃಂಭಣೆಯಿಂದ ನಡೆಯಲಿದೆ. ತಾ||. 20-10-2018 ರಂದು ಬನ್ನಿ ಮಂಟಪದಲ್ಲಿ ಬನ್ನಿ ಕಡೆಯುವ ಮೂಲಕ ಐತಿಹಾಸಿಕ ಮಡಿಕೇರಿ ದಸರಾ ನಾಡ ಹಬ್ಬಕ್ಕೆ ತೆರೆ ಬೀಳಲಿದೆ.
ನಾಡಿನ ಜನತೆಗೆ ನವರಾತ್ರಿ ಹಾಗೂ ದಸರಾ ಹಬ್ಬದ ಶುಭಾಶಯಗಳು
Loading…