ಅಸ್ಸಾಂನ ಮಾಜಿ ಮುಖ್ಯ ಮಂತ್ರಿ ಮಗ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್
ಅಕ್ಟೋಬರ್ ೩ ರಂದು ರಂಜನ್ ಗೊಗೊಯ್ ಅವರು ಸುಪ್ರೀಂ ಕೋರ್ಟ್ ನ ೪೬ ನೇ ಮುಖ್ಯ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಅವರು ಮುಂದಿನ ವರ್ಷ ನವಂಬರ್ ವರೆಗೆ ಈ ಹುದ್ದೆಯಲ್ಲಿರಲಿದ್ದಾರೆ.ಅಸ್ಸಾಂನ ಮೂಲೆಯಿಂದ ಬಂದ ರಂಜನ್ ಗೊಗೊಯ್ ಅವರು ದೇಶದ ನ್ಯಾಯಾಂಗ ವ್ಯವಸ್ಥೆಯ ಅತ್ಯುನ್ನತ ಹುದ್ದೆಗೇರಿದ್ದಾರೆ
ರಾಜಕಾರಣಿ ಕುಟುಂಬದಿಂದ ಬಂದಿದ್ದರೂ ಸಹಿತ ನ್ಯಾಯಾಂಗ ಕಡೆ ಅವರು ಸಾಗಿದ ಹಾದಿ ಬಹಳ ಕುತೂಹಲಕಾರಿಯಾದದ್ದು.
ದೀಪಕ್ ಮಿಶ್ರಾ ಅವರ ನಿವೃತ್ತಿಯಿಂದ ತೆರವಾಗಿದ್ದ ಮುಖ್ಯ ನ್ಯಾಯಾಧೀಶ ಸ್ಥಾನಕ್ಕೆ ರಂಜನ್ ಗೊಗೊಯ್ ಅವರು ನೇಮಕ ಗೊಂಡಿದ್ದಾರೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಗೊಗೊಯ್ ಅವರಿಗೆ ಪ್ರಮಾಣ ವಚನ ಭೋಧಿಸಿದರು.
ಮಾಜಿ ಮುಖ್ಯ ಮಂತ್ರಿಯ ಮಗ
ರಂಜನ್ ಅವರು ನವಂಬರ್ ೧೮, ೧೯೫೪ ರಲ್ಲಿ ಅಸ್ಸಾಂ ದಿಬ್ರುಗರ್ ನಲ್ಲಿ ಜನಿಸಿದರು.ಅವರ ತಂದೆ ಅಸ್ಸಾಂನ ಮಾಜಿ ಮುಖ್ಯ ಮಂತ್ರಿ ಕೇಶವ್ ಗೊಗೊಯ್.
ರಾಜಕಾರಣಿ ಕುಟುಂಬದಲ್ಲಿ ಹುಟ್ಟಿದ್ದರೂ ಸಹ ರಾಜಕಾರಣದಿಂದ ರಂಜನ್ ಅವರು ಸದಾ ದೂರವೇ ಉಳಿದರು. ಅವರಿಗೆ ಸಂವಿಧಾನ ಪ್ರಿಯವಾಗಿತ್ತು .
ಪ್ರಾಥಮಿಕ,ಪ್ರೌಢ ಶಿಕ್ಷಣ
ರಂಜನ್ ಗೊಗೊಯ್ ಅವರು ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ದಿಬ್ರುಗರ್ ನಲ್ಲಯೇ ಪೂರೈಸಿದರು.ಆ ನಂತರ ಕಾಲೇಜು ಶಿಕ್ಷಣಕ್ಕಾಗಿ ಗುವಾಹಟಿಗೆ ಬಂದರು.ಉನ್ನತ ಶಿಕ್ಷಣವನ್ನು ದೆಹಲಿಯಲ್ಲಿ ಪೂರೈಸಿದರು. ಇತಿಹಾಸದಲ್ಲಿ ಹಾನರ್ ಮಾಡಿದ್ದ ಅವರು ಕಾನೂನು ಓದಿದ್ದು ದೆಲ್ಲಿ ವಿವಿಯಲ್ಲಿ.
೧೯೭೮ ರಲ್ಲಿ ವಕೀಲಿ ವೃತ್ತಿ ಆರಂಭ
ಗೊಗೊಯ್ ಅವರು ೧೯೭೮ ರಲ್ಲಿ ಗುವಾಹಟಿ ಯಲ್ಲಿ ಬಾರ್ ಕೌನ್ಸಿಲ್ ಸೇರಿಕೊಂಡರು. ಅಲ್ಲಿ ಅವರು ಸೀನಿಯರ್ ಆಗಿದ್ದು ಜೆ.ಪಿ ಭಟ್ಟಾಚಾರ್ಯ , ೨ ಕ್ಕೂ ಹೆಚ್ಚು ವರ್ಷ ಗುವಾಹಟಿ ಹೈಕೋರ್ಟ್ ವಕೀಲಿ ವೃತ್ತಿ ಮಾಡಿದ್ದಾರೆ.
ಗುವಾಹಟಿ ಹೈಕೋರ್ಟ್ ಜಡ್ಜ್ ಆಗಿ ಸೇವೆ
೨೦೧೧ ರಲ್ಲಿ ಗೊಗೊಯ್ ಅವರಯ ಗುವಾಹಟಿಯ ಹೈಕೋರ್ಟ್ ಜಡ್ಜ್ ಆಗಿ ನೇಮಕಗೊಂಡರು. ಸತತ ಒಂಬತ್ತು ವರ್ಷ ಗಳ ಕಾಲ ಗುವಾಹಟಿ ಹೈಕೋರ್ಟ್ ಗೆ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದಾರೆ.
ಆ ನಂತರ ೨೦೧೦ ರಲ್ಲಿ ಅವರು ಪಂಜಾಬ್, ಹರ್ಯಾಣ ಹೈಕೋರ್ಟ್ ಗೆ ವರ್ಗಾವಣೆಯಾದರು.
೨೦೧೨ಕ್ಕೆ ಸುಪ್ರೀಂ ನ್ಯಾಯಾಧೀಶರಾಗಿ ನೇಮಕ
ಏಪ್ರಿಲ್ ೨೩, ೨೦೧೨ ಕ್ಕೆ ರಂಜನ್ ಅವರು ಸುಪ್ರೀಂ ಕೋರ್ಟ್ ನ ನ್ಯಾಯಾಧೀಶರಾಗಿ ಇದ್ದಾರೆ. ಸತತ ಆರು ವರ್ಷ ಸುಪ್ರೀಂ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ ಬಳಿಕ ಈಗ ಅವರು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಾಗಿದ್ದಾರೆ.
ಈಶಾನ್ಯ ಭಾರತದ ಮೊದಲಿಗ
ಈಶಾನ್ಯ ಭಾರತದಿಂದ ಈ ಹುದ್ದೆಗೆ ಏರುತ್ತಿರುವ ಮೊದಲ ವ್ಯಕ್ತಿ ಎಂಬ ಹಿರಿಮೆ ಅವರದ್ದಾಗಲಿದೆ. ರಂಜನ್ ಅವರು ದಿಬ್ರೂಗಡದಿಂದ ನ್ಯಾಯಾಂಗದ ತುತ್ತತುದಿಯ ಹುದ್ದೆಗೆ ಏರುವವರೆಗೆ ಕ್ರಮಿಸಿದ ಹಾದಿ ಸುದೀರ್ಘವಾದದ್ದು.
ಬಂಡಾಯ ಗಾರ
ಮುಖ್ಯ ನ್ಯಾಯಮೂರ್ತಿಯ ವಿರುದ್ಧ ಬಂಡಾಯ ಸಾರಿದ್ದ ಸುಪ್ರೀಂ ಕೋರ್ಟ್‌ನ ನಾಲ್ವರು ಹಿರಿಯ ನ್ಯಾಯಮೂರ್ತಿಗಳಲ್ಲಿ ಗೊಗೊಯ್ ಅವರೂ ಇದ್ದರು. ಸುಪ್ರೀಂ ಕೋರ್ಟ್ ಇತಿಹಾಸದಲ್ಲಿಯೇ ಹಾಲಿ ನ್ಯಾಯಮೂರ್ತಿಗಳು ಮೊದಲ ಬಾರಿಗೆ ಮಾಧ್ಯಮಗೋಷ್ಠಿ ನಡೆಸಿ ಅಚ್ಚರಿ ಮೂಡಿಸಿದ್ದರು. ಸುಪ್ರೀಂ ಕೋರ್ಟ್‌ನ ಕಾರ್ಯವೈಖರಿಯ ಬಗ್ಗೆ ದೇಶದಾದ್ಯಂತ ಭಾರಿ ಚರ್ಚೆಗೆ ಈ ಮಾಧ್ಯಮಗೋಷ್ಠಿ ಕಾರಣವಾಗಿತ್ತು.
‘ಪಕ್ಷಪಾತವಿಲ್ಲದ ನ್ಯಾಯಮೂರ್ತಿಗಳು ಮತ್ತು ಸದಾ ಸದ್ದು ಮಾಡುವ ಪತ್ರಕರ್ತರು ಪ್ರಜಾಪ್ರಭುತ್ವದ ಮೊದಲ ಹಂತದ ರಕ್ಷಕರು’ ಎಂದು ಹೇಳುವ ಮೂಲಕ ಅವರು ಮತ್ತೊಮ್ಮೆ ಗಮನ ಸೆಳೆದಿದ್ದರು.
ತೀರ್ಪುಗಳು
ಅಸ್ಸಾಂನ ರಾಷ್ಟ್ರೀಯ ಪೌರ ನೋಂದಣಿ (ಎನ್‌ಆರ್‌ಸಿ), ಸಂಸದರು ಮತ್ತು ಶಾಸಕರ ವಿರುದ್ಧದ ಪ್ರಕರಣಗಳ ವಿಚಾರಣೆಗೆ ಪ್ರತ್ಯೇಕ ನ್ಯಾಯಾಲಯ ಸ್ಥಾಪನೆ, ರಾಜೀವ್ ಗಾಂಧಿ ಹಂತಕರ ಶಿಕ್ಷೆ ಇಳಿಕೆ, ಲೋಕಪಾಲ ನೇಮಕದಂತಹ ಮಹತ್ವದ ವಿಚಾರಗಳಲ್ಲಿ ಅವರು ತೀರ್ಪು ನೀಡಿದ್ದಾರೆ.
ಶಿಸ್ತಿನ ಸಿಪಾಯಿ
ಗೊಗೊಯ್ ಅವರನ್ನು ಶಿಸ್ತಿನ ಸಿಪಾಯಿ ಎಂದು ಸಹೋದ್ಯೋಗಿಗಳು ಮತ್ತು ಸುಪ್ರೀಂ ಕೋರ್ಟ್‌ನ ವಕೀಲರು ಬಣ್ಣಿಸುತ್ತಾರೆ. ನಿಷ್ಪಕ್ಷಪಾತಿ, ನ್ಯಾಯನಿಷ್ಠುರ ಮತ್ತು ನೇರ ಮಾತಿನ ಸಭ್ಯ ವ್ಯಕ್ತಿ ಎಂದೂ ಅವರು ಹೇಳುತ್ತಾರೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಬೇಕಾಬಿಟ್ಟಿಯಾಗಿ ಸಲ್ಲಿಸುವುದನ್ನು ಕಂಡರೆ ಗೊಗೊಯ್ ಅವರಿಗೆ ಭಾರಿ ಸಿಡುಕು. ಸಿಸೇರಿಯನ್ ಹೆರಿಗೆ ಮಾಡಿಸುವುದಕ್ಕೆ ಮಾರ್ಗದರ್ಶಿಸೂತ್ರ ರೂಪಿಸಬೇಕು ಎಂದು ಕೋರಿ ಇತ್ತೀಚೆಗೆ ಪಿಐಎಲ್ ಸಲ್ಲಿಸಿದ್ದವರಿಗೆ ಗೊಗೊಯ್ ನೇತೃತ್ವದ ಪೀಠವು ₹25 ಸಾವಿರ ದಂಡ ವಿಧಿಸಿತ್ತು. ಜಾಗೃತಿ ಆಯುಕ್ತರಾಗಿ ಶರದ್ ಕುಮಾರ್ ನೇಮಕ ಪ್ರಶ್ನಿಸಿದ್ದ ಪಿಐಎಲ್ ಸೇರಿ ಎರಡು ಪಿಐಎಲ್‌ಗಳನ್ನು ಈ ವಾರದಲ್ಲೇ ಅವರ ಪೀಠವು ವಜಾ ಮಾಡಿತ್ತು. ‘ನ್ಯಾಯಾಲಯಕ್ಕೆ ಬರಲು ಸಾಧ್ಯವಿಲ್ಲದವರ ಅನುಕೂಲಕ್ಕಾಗಿ ಪಿಐಎಲ್ ಬಳಕೆಯಾಗಬೇಕು. ಪ್ರತಿ ವಿಚಾರದಲ್ಲಿಯೂ ಪಿಐಎಲ್ ಸಲ್ಲಿಕೆ ಒಂದು ಚಟವಾಗಬಾರದು’ ಎಂದು ಅವರು ಹೇಳಿದ್ದರು.
ಮುಂದಿನ ಸವಾಲುಗಳು
ನೇರ ಪ್ರಸಾರವಾಗುವ ಸುಪ್ರೀಂ ಕೋರ್ಟ್ ಕಲಾಪವನ್ನು ನಡೆಸುವ ಮೊದಲ ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯ್ ಅಗಲಿದ್ದಾರೆ. ಕಲಾಪದಲ್ಲಿ ಶಿಸ್ತು ಕಾಪಾಡಿಕೊಳ್ಳುವುದು ಅವರ ಮುಂದಿರುವ ಮೊದಲ ಆದ್ಯತೆ. ಜೊತೆಗೆ ಅಯೋಧ್ಯೆ ಪ್ರಕರಣ, ಜಮ್ಮು ಕಾಶ್ಮೀರದ ಸೆಕ್ಷನ್ ೩೫A ಪ್ರಕರಣಗಳನ್ನು ಇನ್ನು ಮುಂದೆ ಗೊಗೊಯ್ ಅವರು ಮುಂದುವರೆಸಬೇಕಾಗುತ್ತದೆ.
ಇದರ ಜೊತೆಗೆ ಅಸ್ಸಾಂನ ಎನ್.ಸಿ.ಆರ್ ಪ್ರಕರಣ ಕಲಾಪ ಸಹ ಗೊಗೊಯ್ ಅವರು ನಡೆಸಬೇಕಿದೆ.