ತೋಟಗಾರಿಕೆ ಕೃಷಿ ಪರಿಚಯ
ತೋಟಗಾರಿಕೆ ಕೃಷಿಯ ಒಂದು ಅಂಗವಾಗಿದ್ದು ಹಣ್ಣು, ತರಕಾರಿ, ಅಣಬೆ ಹೂ, ಮರ, ಪೊದರು, ಹುಲ್ಲುಹಾಸು, ಔಷಧಿ ಸಸ್ಯ ಮುಂತಾದವುಗಳನ್ನು ಒಳಗೊಂಡಿದೆ. ಇದಲ್ಲದೆ ಭೂ ದೃಶ್ಯ, ಉದ್ಯಾನ ವಿನ್ಯಾಸ ಮತ್ತು ನಿರ್ಮಾಣ, ನಿರ್ವಹಣೆ ಸಹ ಸೇರ್ಪಟ್ಟಿದೆ. ಹಾರ್ಟಿಕಲ್ಚರ್ ಪದ ಲ್ಯಾಟಿನ್ ‘ಹಾರ್ಟಸ್’ ಮತ್ತು ‘ಕಲ್ಬರ’ ಎಂಬ ಶಬ್ಧಗಳಿಂದ ಕೂಡಿದೆ. ಹಾರ್ಟಸ್ ಎಂದರೆ ಉದ್ಯಾನ ಅಥವಾ ತೋಟ ಮತ್ತು ಕಲ್ಬರ ಎಂದರೆ ಕೃಷಿ. ಇತ್ತೀಚಿನ ದಿನಗಳಲ್ಲಿ ತೋಟಗಾರಿಕೆ ಬರೀ ಹಣ್ಣಿನ ತೋಟ ಮತ್ತು ಉದ್ಯಾನಕ್ಕೆ ಸೀಮಿತವಾಗಿರದೆ ಅನೇಕ ಆಯಾಮಗಳನ್ನು ಒಳಗೊಂಡಿದೆ. ತೋಟಗಾರಿಕೆಯನ್ನು 4 ವಿಭಾಗಗಳಾಗಿ ವಿಂಗಡಿಸಬಹುದು. ಹಣ್ಣಿನ ಬೇಸಾಯ, ತರಕಾರಿ ಬೇಸಾಯ, ಹೂವಿನ ಬೇಸಾಯ ಹಾಗು ಉದ್ಯಾನವನ ಮತ್ತು ಕೊಯ್ಲಿನ ನಂತರ ನಿರ್ವಹಣೆ ಹಾಗು ಹಣ್ಣು ತರಕಾರಿ ಸಂಸ್ಕರಣೆ.
ಹಣ್ಣಿನ ಬೇಸಾಯ:
ಹಣ್ಣಿನ ಬೇಸಾಯವು ಹಣ್ಣಿನ ಅಭಿವೃದ್ಧಿ, ಬೇಸಾಯ, ಬೆಳವಣಿಗೆಯ ಅದ್ಯಯನಕ್ಕೆ ಹೆಚ್ಚಿನ ಗಮನ ಕೊಡುತ್ತದೆ. ಹಣ್ಣಿನ ಮರಗಳ ಸುಧಾರಣೆಯ ಮುಖ್ಯ ಗುರಿ ಎಂದರೆ ಹಣ್ಣಿನ ಗುಣಮಟ್ಟವನ್ನು ಹೆಚ್ಚಿಸುವುದು, ಉತ್ಪಾದನೆಯ ಅವಧಿಯನ್ನು ನಿಯಂತ್ರಿಸುವುದು ಮತ್ತು ಉತ್ಪಾದನೆಯ ಖರ್ಚನ್ನು ಕಡಿಮೆ ಮಾಡುವುದು.
ತರಕಾರಿ ಬೇಸಾಯ:
ಇದು ತರಕಾರಿಗಳ ಉತ್ಪಾದನೆ, ಸಂಗ್ರಹಣೆ, ಸಂಸ್ಕರಣೆ, ಮತ್ತು ಮಾರಾಟವನ್ನು ಒಳಗೊಂಡಿದೆ. ಇದರಲ್ಲಿ ಬೆಳೆಗಳ ಸ್ಥಾಪನೆ, ವಿವಿಧ ತಳಿಗಳ ಆಯ್ಕೆ, ಸಸಿ ಮಡಿಗಳ ತಯಾರಿ, ಬೀಜದಿಂದ ಸಸಿ ಉತ್ಪಾದನೆ ಮತ್ತು ಗಿಡಗಳ ನಾಟಿ ಸಹ ಸೇರ್ಪಡೆಗೊಂಡಿದೆ.
ಹೂವಿನ ಬೇಸಾಯ ಮತ್ತು ಉದ್ಯಾನ ನಿರ್ಮಾಣ:
ಇದು ತೋಟಗಾರಿಕೆಯ ಒಂದು ಭಾಗವಾಗಿದ್ದು ಉದ್ಯಾನವನಕ್ಕೆ ಬೇಕಾದ ಹೂವು ಮತ್ತು ಅಲಂಕಾರಿಕ ಗಿಡಗಳನ್ನು ಬೆಳೆಸುವುದಾಗಿದೆ. ಹೂವಿನ ಬೇಸಾಯವು ಪಾತಿಯಲ್ಲಿ ನೆಡುವ ಗಿಡಗಳು, ಹೂವಿನ ಗಿಡಗಳು, ಅಲಂಕಾರಿಕ ಎಲೆಯ ಸಸ್ಯಗಳು, ಹಸಿರು ಸಸ್ಯಗಳು ಮತ್ತು ಕೊಯ್ಲು ಮಾಡಿದ ಹೂಗಳನ್ನು ಒಳಗೊಂಡಿದೆ.
ಕೊಯ್ಲಿನ ನಂತರದ ತಂತ್ರಜಾÐನವು ತೋಟಗಾರಿಕ ಬೆಳೆಯ ಗುಣಮಟ್ಟ ಕಾಪಾಡುವುದು ಮತ್ತು ಹಾಳಾಗುವುದನ್ನು ತಡೆಗಟ್ಟುವುದನ್ನು ಒಳಗೊಂಡಿದೆ.
ಅತ್ಯಂತ ದೀರ್ಘ ಇತಿಹಾಸವಿರುವ ತೋಟಗಾರಿಕೆ ಸಾವಿರಾರು ವರ್ಷಗಳ ಹಿಂದೆಯೇ ಬಳಕೆಯಲ್ಲಿತ್ತು. ಮಾನವ ಬೇಟೆಗಾರನಾಗಿ ಅಡ್ಡಾಡುವ ಕಾಲದಿಂದ ಒಂದೆಡೆ ನೆಲೆ ನಿಲ್ಲಲು ಪರಿವರ್ತಿತನಾದ ಕಾಲದಲ್ಲಿ ತೋಟಗಾರಿಕೆ ಹುಟ್ಟಿಕೊಂಡಿತು. ಜೀವನ ನಿರ್ವಹಣೆಗಾಗಿ ವಿವಿಧ ಬೆಳೆಗಳನ್ನು ಸಣ್ಣ ಪ್ರಮಾಣದಲ್ಲಿ ತಮ್ಮ ವಾಸಸ್ಥಾನದ ಸುತ್ತಲೂ ಅಥವಾ ನಿರ್ಧಿಷ್ಟ ಜಾಗದಲ್ಲಿ ಬೆಳೆಯಲು ಪ್ರಾರಂಭಿಸಿದರು.
ತೋಟಗಾರಿಕೆಯ ಪ್ರಾಮುಖ್ಯತೆ:
ತೋಟಗಾರಿಕೆ ಕೃಷಿಯ ಒಂದು ದೊಡ್ಡ ಕ್ಷೇತ್ರವಾಗಿದೆ. ಕೃಷಿ ವಾರ್ಷಿಕ ಉತ್ಪನ್ನದಲ್ಲಿ ತೋಟಗಾರಿಕೆಯ ಕೊಡುಗೆ 1970-71ರಲ್ಲಿ ಶೇಕಡ 15.3ರಷ್ಟಿತ್ತು. ಅದು 2001-02 ರಲ್ಲಿ ಶೇಕಡ 29.5ಕ್ಕೆ ಏರಿತು. ಕಳೆದ ಹಲವು ದಶಕಗಳಿಂದ ತೋಟಗಾರಿಕೆ ಬೆಳೆಯುವ ಪ್ರದೇಶ ವಿಸ್ತಾರಗೊಂಡಿದೆ. 1950-51 ರಲ್ಲಿ 0.76 ಮಿಲಿಯ ಹೆಕ್ಟೇರು ಪ್ರದೇಶದಲ್ಲಿದ್ದ ತೋಟಗಾರಿಕ ಬೆಳೆ 2007-08ರಲ್ಲಿ 20.08 ಮಿಲಿಯ ಹೆಕ್ಟೇರ್ ಪ್ರದೇಶಕ್ಕೆ ವಿಸ್ತಾರಗೊಂಡಿತು. 1991-92ರಲ್ಲಿ 96 ಮಿಲಿಯ ಟನ್ನುಗಳಿದ್ದ ತೋಟಗಾರಿಕ ಉತ್ಪಾದನೆ 2007-08 ರಲ್ಲಿ 207 ಮಿಲಿಯ ಟನ್ನುಗಳಿಗೆ ಏರಿತು. ವಿವಿಧ ಬೆಳೆಗಳ ಉತ್ಪಾದನೆಯಲ್ಲಿ ಹಣ್ಣಿನ ಬೆಳೆಯ ಕೊಡುಗೆ ಶೇಕಡ 31 ಆಗಿದ್ದರೆ ತರಕಾರಿ ಬೆಳೆಗಳ ಕೊಡುಗೆ ಶೇಕಡ 61. ವಾಣಿಜ್ಯ ಬೆಳೆಗಳ ಕೊಡುಗೆ ಶೇಕಡ 6, ಉಳಿದವು ಹೂವು, ಸಂಬಾರ ಮತ್ತು ಔಷಧೀಯ ಸಸ್ಯಗಳಿಂದಾಗಿದೆ. ಇತರ ಬೆಳೆಗಳಿಗಿಂತ ತೋಟಗಾರಿಕ ಬೆಳೆಗಳ ಬೆಳೆಯುವ ಪ್ರದೇಶ ಮತ್ತು ಎಕರೆವಾರು ಉತ್ಪಾದನೆ ಅತೀ ಹೆಚ್ಚಿದೆ. ಕೃಷಿ ಬೆಳೆಗಳಿಗೆ ಹೋಲಿಸಿದರೆ ತೋಟಗಾರಿಕ ಬೆಳೆಯಿಂದ ದೊರಕುವ ಉತ್ಪಾದನೆ ಮತ್ತು ಆದಾಯ ಹೆಚ್ಚು. ತೋಟಗಾರಿಕೆ ಉದ್ಯೋಗವನ್ನು ಒದಗಿಸುತ್ತದೆ ಮತ್ತು ಪಾಳು ಭೂಮಿಯಲ್ಲಿ ಸಹ ತೋಟಗಾರಿಕೆಯನ್ನು ಕೈಗೊಳ್ಳಬಹುದು. ಹಣ್ಣಿನ ಸಂಸ್ಕರಣೆ, ಎಣ್ಣೆ, ಮುಂತಾದ ಕೈಗಾರಿಕೋದ್ಯಮಗಳಿಗೆ ಮೂಲವಸ್ತುವನ್ನು ಸರಬರಾಜು ಮಾಡುತ್ತದೆ ಹಾಗು ಜನರಿಗೆ ಉದ್ಯೋಗ ಅವಕಾಶವನ್ನು ಹೆಚ್ಚಿಸುತ್ತದೆ. ಹಣ್ಣು ಮತ್ತು ತರಕಾರಿಗಳು ಮಾನವನಿಗೆ ವಿಟಮಿನ್ ಮತ್ತು ಖನಿಜಾಂಶವನ್ನು ಒದಗಿಸುತ್ತದೆ. ಪೌಷ್ಠಿಕಾಂಶದ ಕೊರತೆಯಿಂದ ಉಂಟಾಗುವ ರೋಗವನ್ನು ನಿಯಂತ್ರಿಸುತ್ತದೆ.
ಕಳೆದ 3 ಪಂಚವಾರ್ಷಿಕ ಯೋಜನೆಗಳಲ್ಲಿ ತೋಟಗಾರಿಕೆಗೆ ನೀಡಿದ ಪ್ರಾಮುಖ್ಯತೆಯಿಂದ 1990 ರಿಂದ ಈಚೆಗೆ ತೋಟಗಾರಿಕ ಬೇಸಾಯ ವೇಗದಿಂದ ಬೆಳೆಯಿತು. ತೋಟಗಾರಿಕೆಯ ಮಹತ್ವ ನಿರಂತರವಾಗಿ ಹೆಚ್ಚಾಗುತ್ತಿದೆ. ರೈತರು, ಉದ್ಯಮಿಗಳು ಹಣ್ಣು, ತರಕಾರಿ, ಹೂ ಬೆಳೆಯಲು ಮತ್ತು ಕೊಯ್ಲಿನ ನಂತರದ ನಿರ್ವಹಣೆಯತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಮಾನವ ಸಂಪನ್ಮೂಲ ಮತ್ತು ಇತರ ಅಗತ್ಯಗಳನ್ನು ಪೂರೈಸಲು ಹಲವಾರು ವಿಶ್ವವಿದ್ಯಾಲಯಗಳು ವಿವಿಧ ರೀತಿಯ ಪಠ್ಯ ಕ್ರಮವನ್ನು ಆಧರಿಸಿ ಸ್ನಾತಕೋತ್ತರ ಪಿ.ಹೆಚ್.ಡಿ ಭೋಧನೆಯನ್ನು ಆರಂಭಿಸಿವೆ. ಭಾರತೀಯ ಕೃಷಿ ಸಂಶೋಧನಾ ಮಂಡಳಿ ವಿವಿಧ ತೋಟಗಾರಿಕ ಬೆಳೆಗಳ ಅಧ್ಯಯನಕ್ಕಾಗಿ ಹೊಸ ಸಂಸ್ಥೆಗಳು ಮತ್ತು ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಿದೆ.