ಹಣ್ಣು ತೋಟದ ಸ್ಥಾಪನೆ
ಪ್ರಾರಂಭ ಹಂತದಲ್ಲಿ ಗಿಡಗಳನ್ನು ನೆಲೆಗೊಳಿಸಿದ ಆಧಾರದ ಮೇಲೆ ಹಣ್ಣಿನ ತೋಟದ ಯಶಸ್ಸು ಅವಲಂಬಿತವಾಗಿದೆ. ಚೆನ್ನಾಗಿ ಸ್ಥಾಪಿತಗೊಂಡ ತೋಟಗಳಲ್ಲಿ ಬೆಳವಣಿಗೆ ಮತ್ತು ಕ್ಷಮತೆಯ ತೊಂದರೆಗಳು ಕಡಿಮೆ ಇರುತ್ತವೆ. ಉತ್ತಮ ನಿರ್ವಹಣೆಯಿಂದ ತೋಟ ಅಪಾಯಕ್ಕೆ ಗುರಿಯಾಗುವುದನ್ನು ತಡೆಗಟ್ಟಬಹುದು.
ಜಮೀನು ಆಯ್ಕೆ ಮತ್ತು ತಯಾರಿ
ಹಿಂದಿನ ಚರಿತ್ರೆಯ ಆಧಾರದ ಮೇಲೆ ಜಮೀನನ್ನು ಆಯ್ಕೆ ಮಾಡಬೇಕು. ಪ್ರವಾಹ, ಆಲಿಕಲ್ಲು, ಭೂಕುಸಿತದಂತ ಯಾವುದೇ ಸಮಸ್ಯೆಗಳಿಗೆ ತುತ್ತಾಗಿದ್ದಿರಬಾರದು. ಮತ್ತು ಯಾವುದೇ ಅಡೆತಡೆಯಿಲ್ಲದೆ ಜಮೀನು ಪ್ರವೇಶಿಸುವಂತಿರಬೇಕು. ಆಳದ ಉಳುಮೆಯ ಮೂಲಕ ಬಹುವಾರ್ಷಿಕ ಕಳೆ, ಕಳೆಯ ಬೇರು ತೆಗೆದು ಮಣ್ಣಿನ ಹೆಂಟೆಗಳನ್ನು ಪುಡಿ ಮಾಡಬೇಕು. ಕಾಡು ಬೆಳೆದಿದ್ದರೆ ಅವನ್ನೆಲ್ಲಾ ಕಡಿದು ತಗೆದು ಉಳುಮೆ ಮಾಡಬೇಕು. ಜಮೀನು ಇಳಿಜಾರಾಗಿದ್ದರೆ ಉಳುಮೆ ಮಾಡಬಾರದು. ಅಲ್ಲಿ ತಡೆ ಬದುಗಳನ್ನು ನಿರ್ಮಿಸಬೇಕು. ಜಮೀನು ಹದಗೊಳಿಸಿ ಸಮತಟ್ಟಾಗಿಸಿದ ನಂತರ ಒಂದು ದಿಕ್ಕಿಗೆ ಸ್ವಲ್ಪವೇ ಇಳಿಜಾರು ಬರುವಂತೆ ನೋಡಿಕೊಳ್ಳಬೇಕು. ಇದರಿಂದ ನೀರಾವರಿಗೆ ಅನುಕೂಲ ಮತ್ತು ಮಳೆಗಾದಲ್ಲಿ ಹೆಚ್ಚಿನ ನೀರು ಬಸಿದು ಹೋಗುತ್ತದೆ. ಒಣ ಹವಾಮಾನದಲ್ಲಿ ಮತ್ತು ಹಿಂದಿನ ಬೇಸಾಯದಿಂದ ನೆಲಗಟ್ಟಿಯಾಗಿದ್ದಲ್ಲಿ ಆಳದ ಉಳುಮೆಯಿಂದ ಗಿಡಗಳು ಸಮಾನವಾಗಿ ಬೆಳೆಯುತ್ತವೆ. ಹೆಚ್ಚಿನ ಬೆಳೆಗಳು ಸಮರ್ಥವಾಗಿ ಬೆಳವಣಿಗೆ ಮತ್ತು ಅಭಿವೃದ್ಧಿ ಹೊಂದಲು ಮಣ್ಣಿನ ರಸಸಾರ ತಟಸ್ಥವಾಗಿರಬೇಕು. ರಸಸಾರ ಕಡಿಮೆ ಇದ್ದರೆ ಜಮೀನಿನಲ್ಲಿ ಸುಣ್ಣವನ್ನು ಹರಡಬೇಕು. ಮೆಗ್ನೇಷಿಂ ಕೊರತೆಯಿದ್ದರೆ ಡೋಲಾಮೈಟ್ ಉಪಯೋಗಿಸಬೇಕು ಮತ್ತು ಕ್ಷಾರಯುಕ್ತ ಮಣ್ಣಿಗೆ ಜಿಪ್ಸಂ ಬಳಸಬೇಕು.
ವಿನ್ಯಾಸ
ಸರಿಯಾದ ವಿನ್ಯಾಸ ಹಣ್ಣಿನ ತೋಟಕ್ಕೆ ಅವಶ್ಯ. ವಿನ್ಯಾಸ ಮತ್ತು ಸಸಿಗಳ ಅಂತರ ಬೆಳೆಯ ಅವಶ್ಯಕತೆಗೆ ಅನುಗುಣವಾಗಿ ನಿರ್ಧರಿಸಬೇಕು. ಸಮತಟ್ಟಿನ ಜಮೀನಿನಲ್ಲಿ ವಿನ್ಯಾಸ ಸುಲಭ. ಮೊದಲು ರಸ್ತೆ ಅಥವಾ ಬೇಲಿಗೆ ಹೊಂದಿಕೊಂಡು ನೆಟ್ಟನೆಯ ಆಧಾರ ರೇಖೆಯನ್ನೆಳೆಯಬೇಕು. ಆಧಾರ ರೇಖೆಗೆ ಅನುಗುಣವಾಗಿ ಸಮಕೋನದಲ್ಲಿ 2-3 ಗಡಿಗಳನ್ನು ಜಮೀನಿನ 2 ಬದಿಗಳಲ್ಲಿ ಗುರುತಿಸಬೇಕು. ಜಮೀನನ್ನು ಆಯಾತಾಕಾರ ಅಥವಾ ಚೌಕಾಕಾರವಾಗಿ ವಿಂಗಡಿಸಿ ಗಿಡಗಳನ್ನು ಸಮಾನ ಅಂತರದಲ್ಲಿ ನಾಟಿ ಮಾಡಬಹುದು. ಇಳಿಜಾರಿನಲ್ಲಿ ವಿನ್ಯಾಸಕ್ಕೆ ಮೋಜಿಣಿದಾರನ ಉಪಕರಣದ ಅವಶ್ಯಕತೆ ಇದೆ. ಪ್ರಥಮ ಸಾಲು ಜಮೀನಿನ ಮೇಲ್ಮಟ್ಟದಲ್ಲಿ ಸಮಾನಾಂತರವಾಗಿರುತ್ತದೆ. ಆಳವಾದ ಇಳಿಜಾರಿನ ಉದ್ದಕ್ಕೂ ಗಿಡಕ್ಕೆ ಕೊಡಬೇಕಾದ ಅಂತರವನ್ನು ಗುರುತಿಸ ಬೇಕು. ಇದಕ್ಕೆ ಸಮಾನವಾಗಿ ಎರಡನೇ ಸಾಲನ್ನು ಗುರುತಿಸಬೇಕು. ಹಾಗೆಯೇ ಮುಂದಿನ ಎಲ್ಲಾ ಸಾಲುಗಳನ್ನು ಗುರುತಿಸುತ್ತಾ ಹೋಗಬೇಕು. ಕಡಿಮೆ ಇಳಿಜಾರಿಗೆ ಹೋದಂತೆ ಸಾಲಿನ ಅಂತರ ಜಾಸ್ತಿಯಾಗುತ್ತಾ ಹೋಗುತ್ತದೆ. ಎರಡು ಸಾಲುಗಳಷ್ಟು ಅಂತರ ಬಂದಾಗ ಬದುಗಳನ್ನು ನಿರ್ಮಿಸಬೇಕು.
ಸಾಮಾನ್ಯವಾಗಿ ಆಯತಾಕಾರ, ಚೌಕಾಕಾರ, ಪಂಚಾಕಾರ ಮತ್ತು ಷಟ್ಭುಜಾಕ್ರಾತಯ ವಿನ್ಯಾಸ ಪ್ರಚಲಿತದಲ್ಲಿದೆ. ಹೆಚ್ಚಿನ ಗಿಡಗಳ ಸಾಂದ್ರತೆಗಾಗಿ ಏಕಸಾಲಿನ ವ್ಯವಸ್ಥೆ ಅಥವಾ ಎರಡು ಸಾಲಿನ ವ್ಯವಸ್ಥೆಯ (ಆಯಾತಾಕಾರ) ವಿನ್ಯಾಸವನ್ನು ಆಳವಡಿಸಬೇಕು.
1. ಚೌಕಾಕಾರದ ವಿನ್ಯಾಸ
ಜಮೀನನ್ನು ಚೌಕಾಕಾರವಾಗಿ ವಿಂಗಡಿಸಿ, ಪ್ರತಿಚೌಕದ 4 ಮೂಲೆಯ ನೇರವಾದ ಸಾಲುಗಳಲ್ಲಿ ಸಮಕೋನದಲ್ಲಿ ನಾಟಿ ಮಾಡಲಾಗುವುದು. ಸುಲಭದ ವಿನ್ಯಾಸವಾಗಿದ್ದು ಬೇಸಾಯ ಕ್ರಮವನ್ನು 2 ದಿಕ್ಕಿನಿಂದ ಕೈಗೊಳ್ಳಬಹುದು.
2. ಆಯತಾಕಾರದ ವಿನ್ಯಾಸ
ನೇರ ಸಾಲುಗಳಲ್ಲಿ ಗಿಡಗಳನ್ನು ನಾಟಿ ಮಾಡಲಾಗುವುದು. ಒಂದು ಸಾಲಿಗೆ ಇನ್ನೊಂದು ಸಾಲು ಸಮಕೋನದಲ್ಲಿರುತ್ತದೆ. ಗಿಡದ ಸಾಲುಗಳ ನಡುವಿನ ಅಂತರ ಚೌಕಾಕಾರದಲ್ಲಿರುವ ಗಿಡದ ಸಾಲಿನ ಅಂತರಕ್ಕಿಂತ ಕಡಿಮೆ ಇರುತ್ತದೆ. ವಿನ್ಯಾಸ ಮತ್ತು ಬೇಸಾಯ ಕ್ರಮವೂ ಸುಲಭ.
3. ಪಂಚಾಕೃತಿಯ ವಿನ್ಯಾಸ
ಚೌಕಾಕಾರ ಅಥವಾ ಆಯಾತಾಕಾರದಲ್ಲಿರುವಂತೆ ಗಿಡ ನೆಟ್ಟ ನಂತರ ಆ ವಿನ್ಯಾಸದ 4 ಗಿಡಗಳ ಮಧ್ಯೆ ಇನ್ನೊಂದು ಗಿಡ ನೆಡಲಾಗುವುದು. ಈ ಗಿಡವನ್ನು ಫಿಲ್ಲರು ಗಿಡವಾಗಿ ಉಪಯೋಗಿಸಲಾಗುವುದು. ಇದನ್ನು ಸ್ವಲ್ಪ ಸಮಯದವರೆಗೆ ಅಥವಾ ಮುಖ್ಯ ಗಿಡಗಳು ಸಮೃದ್ಧಿಯಾಗಿ ಬೆಳೆಯುವವರೆಗೆ ಉಳಿಸಿಕೊಳ್ಳಲಾಗುವುದು. ಪರ್ಯಾಯವಾಗಿ ಈ ಸ್ಥಳವನ್ನು ಕಡಿಮೆ ಎತ್ತರದ ಬಹುವಾರ್ಷಿಕ ಬೆಳೆಯನ್ನು ಬೆಳೆಯಲು ಉಪಯೋಗಿಸಬಹುದು. ಮುಖ್ಯ ಬೆಳೆ ವಿಸ್ತಾರವಾಗಿ ಬೆಳೆದ ನಂತರ ಮಧ್ಯದ ಗಿಡವನ್ನು ಕತ್ತರಿಸಲಾಗುವುದು, ಇಲ್ಲವೆ ಸಂಪೂರ್ಣವಾಗಿ ತೆಗೆದು ಹಾಕಲಾಗುವುದು. ಈ ವಿನ್ಯಾಸದಲ್ಲಿ ಗಿಡಗಳ ಸಂಖ್ಯೆ ಚೌಕಾಕಾರ ಅಥವಾ ಆಯಾತಾಕಾರದ ವಿನ್ಯಾದಲ್ಲಿರುವದಕ್ಕಿಂತ ಹೆಚ್ಚಿರುತ್ತದೆ.
3) ಷಟ್ಭುಜಾಕೃತಿ ವಿನ್ಯಾಸ
ಈ ವಿಧಾನದಲ್ಲಿ ಸರದಿಯಲ್ಲಿ ಬರುವ ಸಾಲುಗಳ ಗಿಡಗಳನ್ನು ಸಮಭುಜ ತ್ರಿಕೋನಾಕೃತಿಯಲ್ಲಿ ನೆಡಲಾಗುವುದು. ಸಾಲುಗಳ ಅಂತರ (3/2) 2*ಚಿ ಗೆ ಸಮನಾಗಿರುತ್ತದೆ. ಇಲ್ಲಿ ‘ಚಿ’ ಕೋನದ ಒಂದು ಬದಿಯ ಉದ್ದ ಗಿಡದಿಂದ ಗಿಡಕ್ಕೆ ಇರುವ ಅಂತರ ಒಂದೆಯಾದರೂ, ಸಾಲಿನಿಂದ ಸಾಲಿಗೆ ಇರುವ ಅಂತರ ಗಿಡಗಳ ಮಧ್ಯೆ ಇರುವ ಅಂತರಕ್ಕಿಂತ ಕಡಿಮೆ. ಜಮೀನಿನ ಒಳಗೆ ಚೌಕಾಕಾರದ ವಿನ್ಯಾಸಕ್ಕಿಂತ ಹೆಚ್ಚಾಗಿರುತ್ತದೆ. ಫಲವತ್ತಾದ, ಜಮೀನು ಹೆಚ್ಚು ಬೆಲೆಯುಳ್ಳ ಸಂದರ್ಭದಲ್ಲಿ ಈ ವಿನ್ಯಾಸದಿಂದ ಪ್ರಯೋಜನವಾಗುತ್ತದೆ.
5) ತ್ರಿಕೋನಾಕೃತಿಯ ವಿನ್ಯಾಸ
ಸರದಿಯಲ್ಲಿ ಬರುವ ಸಾಲುಗಳಲ್ಲಿ ನೆಡುವ ಗಿಡಗಳ ಅಂತರ ಇತರ ಸಾಲುಗಳಲ್ಲಿರುವುದಕ್ಕೆ ಅರ್ಧ ಅಂತರದಲ್ಲಿ ನೆಡಲ್ಪಡುತ್ತದೆ. ಸಾಲಿನ ಅಂತರ ಸಮವಾಗಿರುತ್ತದೆ. ಅಥವಾ ಹೆಚ್ಚಿರುತ್ತದೆ. ಆದ್ದರಿಂದ ಐಸೊಸೆಲಿಸ್ ತ್ರಿಕೋನ ಸರಣಿಯುಂಟಾಗುತ್ತದೆ. ಷಟ್ಭುಜಾಕೃತಿಯ ವಿನ್ಯಾಸಕ್ಕಿಂತ ಸುಲಭವಾಗಿ ರಚಿಸಬಹುದು. ಆದರೆ ಆಯತ ಮತ್ತು ಚೌಕಾಕಾದಲ್ಲಿರುವುದಕ್ಕಿಂತ 9% ಕಡಿಮೆ ಗಿಡಗಳು ಅಡಕವಾಗಿರುತ್ತದೆ.
6) ಕಂಟೋರ್ ವಿನ್ಯಾಸ
ಗುಡ್ಡ ಪ್ರದೇಶದಲ್ಲಿ ಅಥವಾ ಹೆಚ್ಚು ಇಳಿಜಾರಿರುವ ಪ್ರದೇಶದಲ್ಲಿ ಈ ವಿಧಾನ ಬಳಕೆಯಲ್ಲಿದೆ. ಇಳಿಜಾರನ್ನು ಅನುಸರಿಸಿ ಮಾಳಿಗೆ ನಿರ್ಮಿಸಲಾಗುವುದು. ಅತೀ ಇಳಿಜಾರಿನ ಪಾಳು ಜಮೀನಿನ ಸೂಕ್ತ ಬಳಕೆಯಾಗುವುದು. ಮಳೆಯ ನೀರು ಇಳಿಜಾರಿನ ಕಡೆ ಹರಿಯದಂತೆ ತಡೆದು ಗಿಡಗಳ ಸಾಲಿನಲ್ಲಿ ಹರಿಯುವಂತೆ ಮಾಡಬೇಕು. ಮಾಳಿಗೆಯ ಕೆಳಭಾಗದಲ್ಲಿ ಎತ್ತರದ ಬದುಗಳನ್ನು ನಿರ್ಮಿಸಿ ಹಾಯಿಸಿದ ನೀರು ಕೆಳ ಹರಿಯದಂತೆ ತಡೆಯಬೇಕು.
ಇತ್ತೀಚೆಗೆ ಹೆಚ್ಚು ಸಾಂದ್ರತೆಯಲ್ಲಿ ಹಣ್ಣಿನ ಗಿಡಗಳನ್ನು ಬೇಲಿಯಂತೆ ಒಂದು ಅಥವಾ ಎರಡು ಸಾಲಿನಲ್ಲಿ ನೆಡವುದು ಹೆಚ್ಚು ಜನಪ್ರಿಯವಾಗುತ್ತಿದೆ. ಸಾಲಿನಲ್ಲಿರುವ ಗಿಡಗಳ ಅಂತರ ಎರಡು ಸಾಲಿನ ಮಧ್ಯೆ ಇರುವ ಅಂತರಕ್ಕಿಂತ ಅರ್ಧ ಅಥವಾ ಮೂರನೆ ಒಂದು ಭಾಗದಷ್ಟಿರುತ್ತದೆ. ಉಷ್ಣವಲಯದಲ್ಲಿ ಈ ವಿಧಾನ ಇನ್ನೂ ಪ್ರಯೋಗ ಹಂತದಲ್ಲಿದೆ. ಇಳುವರಿ ಮತ್ತು ಬಾಳಿಕೆಯ ಬಗ್ಗೆ ಇನ್ನೂ ಫಲಿತಾಂಶಗಳು ಬರಬೇಕಿದೆ. ಪ್ರಾಥಮಿಕ ಹಂತದಲ್ಲಿ ಉತ್ತಮ ಇಳುವರಿಯಿಂದ ಆಶಾದಾಯಕ ಆದಾಯ ದೊರೆತಿದೆ.
ಜಮೀನು ತಯಾರಿ
ಜಮೀನು ಹದಗೊಳಿಸಿ ವಿನ್ಯಾಸ ಪೂರ್ಣಗೊಳಿಸಿದ ನಂತರ, ಗಿಡಗಳನ್ನು ನೆಡಲು ಗುಂಡಿ ತೋಡಬೇಕಾಗುತ್ತದೆ. ಗುಂಡಿಯನ್ನು ನಾಟಿಗಿಂತ 1 ಅಥವಾ 2 ತಿಂಗಳ ಮೊದಲೇ ತೆಗೆಯಬೇಕು. ಗಿಡಗಳ ಸ್ಥಾಪನೆ ಮತ್ತು ಬೆಳೆಯಲು ಉತ್ತಮ ವಾತಾವರಣ ಕಲ್ಪಿಸುವ ಉದ್ಧೇಶದಿಂದ ಗುಂಡಿ ತೆಗೆದು ಮುಚ್ಚಲಾಗುವುದು. ಬೇಸಿಗೆಯಲ್ಲಿ ಗುಂಡಿ ತೆಗೆದು ಬಿಸಿಲಿಗೆ ತೆರೆದಿಡಬೇಕು. ಮಣ್ಣು ಸರಿಯಾಗಿ ನೆಲೆಗೊಳ್ಳಲು ಮಳೆಗಾಲಕ್ಕಿಂತ ಮೊದಲೆ ಮುಚ್ಚಬೇಕು. ಸಾಧಾರಣವಾಗಿ ಹೆಚ್ಚಿನ ಹಣ್ಣಿನ ಬೆಳೆಗಳಿಗೆ 1x1x1 ಮೀ. ಗಾತ್ರದ ಗುಂಡಿಗಳು ಸಾಕು. ಆಳದ ಫಲವತ್ತತೆಯ ಮಣ್ಣಿಗೆ 2x2x2 ಮಿ. ಗಾತ್ರದ ಗುಂಡಿ ಬೇಕಾಗುತ್ತದೆ. ಇಳಿಜಾರಿನ ಪ್ರದೇಶದಲ್ಲಿ ಬದುವಿನ ಉದ್ದಕ್ಕೂ 1 x 1 x 1 ಮೀ ಗುಂಡಿ ಅವಶ್ಯ. ಮಧ್ಯದಲ್ಲಿ ಗಿಡ ಬರುವಂತೆ ಗುಂಡಿ ತೆಗೆಯಬೇಕು. ಗುಂಡಿ ತೆಗೆಯುವಾಗ ಮೇಲ್ಮಣ್ಣನ್ನು ಒಂದು ಬದಿ, ಇತರ ಮಣ್ಣನ್ನು ಇನ್ನೊಂದು ಬದಿಗೆ ಹಾಕಬೇಕು. ಕಲ್ಲು ಮಣ್ಣನ್ನು ಒಂದು ಬದಿ ಇಟ್ಟು ಉತ್ತಮ ಮೇಲ್ಮಣ್ಣನ್ನು ತುಂಬಬೇಕು. ಸಾಮಾನ್ಯವಾಗಿ ಕಾರ್ಮಿಕರಿಂದ ಗುಂಡಿ ತೆಗೆಯಲ್ಪಡುತ್ತದೆಯಾದರೂ ಗುಂಡಿ ತೆಗೆಯುವ ಯಂತ್ರ ಅಥವಾ ಜೆ. ಸಿ.ಬಿ ಯಂತ್ರವನ್ನು ಬಳಸಬಹುದು.
ಗುಂಡಿ ಮುಚ್ಚುವುದು
ಗುಂಡಿಯಲ್ಲಿರುವ ಮಣ್ಣಿನ ಪೋಷಕಾಂಶಗಳ ಮೇಲೆ ಪ್ರಾರಂಭ ಹಂತದ ಗಿಡಗಳ ಬೆಳವಣಿಗೆ ನಿರ್ಧರಿತವಾಗಿದೆ. ಆದ್ದರಿಂದ ಕೊಟ್ಟಿಗೆ ಗೊಬ್ಬರ, ಬೇವಿನ ಹಿಂಡಿ, ಎರೆಗೊಬ್ಬರ, ಟ್ರೈಕೋಡರ್ಮ ಮತ್ತು ಸಾವಯವ ಗೊಬ್ಬರಗಳಿಂದ ತುಂಬಬೇಕು. ಗೊಬ್ಬರದ ಮಿಶ್ರಣವನ್ನು ತುಂಬುವ ಮೊದಲು ಗುಂಡಿಯನ್ನು ಮೇಲ್ಮಣ್ಣಿನಿಂದ ತುಂಬಿರಬೇಕು. ಕಲ್ಲು ಮಣ್ಣಿನ ಸ್ಥಳದಲ್ಲಿ ಹೆಚ್ಚಿನ ಕೊಟ್ಟಿಗೆ ಗೊಬ್ಬರ, ಬೇವಿನ ಹಿಂಡಿ ಅಥವಾ ಮೂಳೆ ಗೊಬ್ಬರವನ್ನು ಬಳಸಬೇಕು.
ಗಿಡಗಳ ಅಂತರ
ಜಮೀನನ್ನು ಸಮರ್ಥ ಮತ್ತು ಲಾಭದಾಯಕವಾಗಿ ಬಳಸಲು ಅನುಕೂಲಕರ ಅಂತರದಲ್ಲಿ ಗಿಡಗಳನ್ನು ನೆಡಬೇಕು. ಗಿಡಗಳಿಗೆ ಬೆಳಕು, ನೀರು ಮತ್ತು ಪೋಷಕಾಂಶಗಳು ಸಮೃದ್ಧವಾಗಿ ದೊರಕುವಂತೆ ಮಾಡಿ ಕಡಿಮೆ ಪ್ರದೇಶದಲ್ಲಿ ಹೆಚ್ಚು ಆದಾಯ ಪಡೆಯುವಂತಿರಬೇಕು. ಮಣ್ಣಿನ ಫಲವತ್ತತೆ, ತಳಿಯ ಬೆಳವಣಿಗೆ, ಬೆಳವಣಿಗೆಯ ಗತಿ ಮತ್ತು ತೋಟದ ಉದ್ಧೇಶವನ್ನು ಅನುಸರಿಸಿ ಗಿಡಗಳಿಗೆ ಕೊಡಬೇಕಾದ ಅಂತರವನ್ನು ನಿರ್ಧರಿಸಲಾಗುತ್ತದೆ. ಕಡಿಮೆ ಗುಣಮಟ್ಟದ ಮಣ್ಣಿನಲ್ಲಿ ಗಿಡಗಳ ಬೆಳವಣಿಗೆ ನಿಧಾನವಾಗಿರುವುದರಿಂದ ಕಡಿಮೆ ಅಂತರವಿಡಬೇಕು. ಫಲವತ್ತತೆ ಜಾಸ್ತಿ ಇರುವಲ್ಲಿ ಗಿಡಗಳು ಹುಲುಸಾಗಿ ಬೆಳೆಯುವುದರಿಂದ ಜಾಸ್ತಿ ಅಂತರ ಇಡಬೇಕು.
ಗಿಡ ನೆಡುವುದು
ಯಾವುದೇ ಸನ್ನಿವೇಶದಲ್ಲೂ ಗಿಡದ ಕಾಂಡ ಹಿಡಿದು ಸಾಗಾಟ ಮಾಡಬಾರದು. ಮೊದಲೇ ಗುರುತಿಸಿದ ಗುಂಡಿಯ ಮಧ್ಯದಲ್ಲಿ ಗಿಡದ ಮಣ್ಣಿನ ಮುದ್ದೆ ಸರಾಗವಾಗಿ ಕುಳಿತುಕೊಳ್ಳುವಂತೆ ಮಾಡಬೇಕು. ಪ್ಲಾಸ್ಟಿಕ್ ತೊಟ್ಟೆಯನ್ನು ಬಿಚ್ಚುವ ಮೊದಲು ಚೆನ್ನಾಗಿ ನೀರು ಹಾಕಿರಬೇಕು. ತಳಭಾಗದಲ್ಲಿ ಮತ್ತು ಬದಿಯಲ್ಲಿ ಪ್ಲಾಸ್ಟಿಕ್ ತೊಟ್ಟೆಯನ್ನು ಕೊಯ್ದು ತೆಗೆದುಹಾಕಬೇಕು. ಗಿಡವನ್ನು ಗುಂಡಿಯಲ್ಲಿ ಇಟ್ಟ ನಂತರ ಮಣ್ಣು ಹಾಕಿ ಮೆದುವಾಗಿ ಒತ್ತಬೇಕು. ಇದರಿಂದ ಗಿಡ ಮಣ್ಣಿನಲ್ಲಿ ಗಟ್ಟಿಯಾಗಿ ಕುಳಿತುಕೊಳ್ಳುತ್ತದೆ.
ಗಿಡ ನೆಡುವಾಗ ಮಣ್ಣಿನ ಮುದ್ದೆ ಒಡೆದು ಹೋಗದಂತೆ ಎಚ್ಚರವಹಿಸಬೇಕು. ಗಿಡದ ಸುತ್ತಲೂ ನೀರು ನಿಲ್ಲಲು ವ್ಯವಸ್ಥೆ ಮಾಡಬೇಕು. ಪ್ರಥಮ ತಿಂಗಳಿನಲ್ಲಿ ಗಿಡದ ನೀರಿನ ಅವಶ್ಯಕತೆ ವಾಯುಗುಣವನ್ನು ಅವಲಂಬಿಸಿದೆ. ಗಿಡ ಹೆಚ್ಚು ಆಳದಲ್ಲಿ ಅಥವಾ ಮೇಲ್ಭಾಗದಲ್ಲಿ ಬೇರು ಕಾಣುವಂತೆ ನೆಡಬಾರದು. ಕೋಲಿನ ಆಧಾರದಿಂದ ನೇರವಾಗಿ ಬೆಳೆಯುವಂತೆ ಮಾಡಬೇಕು.
ನೀರಾವರಿ, ಬಸಿಕಾಲುವೆ ಮತ್ತು ಮುಚ್ಚಳಿಕೆ
ನೆಲೆಗೊಳ್ಳುವವರೆಗೆ ಗಿಡಗಳಿಗೆ ಸಾಕಷ್ಟು ತೇವಾಂಶ ಒದಗಿಸಬೇಕು. ಸಾಮಾನ್ಯವಾಗಿ ಕಾಲುವೆ, ಹನಿ ಮತ್ತು ತುಂತುರು ನೀರಾವರಿ ವಿಧಾನವನ್ನು ನೀರು ಹಾಯಿಸಲು ಬಳಸುತ್ತಾರೆ. ಮುಚ್ಚಳಿಕೆಯಿಂದ ಗಿಡದ ಬುಡದ ತಾಪಮಾನ ಕಡಿಮೆಯಾಗುತ್ತದೆ. ಅಲ್ಲದೆ ಕಳೆ ಪ್ರಮಾಣ, ಮಣ್ಣು ಒಣಗುವುದು ಮತ್ತು ಮಣ್ಣಿನ ಸವಕಳಿಯನ್ನು ತಡೆಯುತ್ತದೆ. ಸುಲಭವಾಗಿ ದೊರೆಯುವ ಒಣ ಎಲೆ, ಹುಲ್ಲನ್ನು ಮುಚ್ಚಳಿಕೆಯಾಗಿ ಬಳಸಬಹುದು. ಬಿಸಿಲಿನಿಂದ ಪಾರಾಗಲು ಗಿಡಗಳಿಗೆ ನೆರಳು ಒದಗಿಸಬೇಕು. ಅತೀ ಹೆಚ್ಚು ನೀರು ಗಿಡಕ್ಕೆ ಹಾನಿಕಾರಕ. ಆದ್ದರಿಂದ ಹೆಚ್ಚಿನ ನೀರು ಬೇರು ವಲಯದದಿಂದ ಹರಿದು ಹೋಗಲು ಬಸಿಕಾಲುವೆ ಒದಗಿಸಬೇಕು.
ಬೇಲಿ
ಜನರಿಂದ ಅತಿಕ್ರಮಣ, ಕಳುವು ಮತ್ತು ಪ್ರಾಣಿಗಳ ಉಪಟಳ ಹೊಸ ತೋಟದಲ್ಲಿ ಸಾಮಾನ್ಯ. ಮುಳ್ಳು ತಂತಿಯೊಂದಿಗೆ ಬೇಲಿ ಗಿಡಗಳನ್ನು ನೆಡುವುದರಿಂದ ಇವುಗಳಿಂದ ಪಾರಾಗಬಹುದು. ಮುಳ್ಳು ತಂತಿಯ ವೆಚ್ಚದಾಯಕ. ಬೇಲಿಗಿಡಗಳನ್ನು ನೆಡುವುದು ಅಗ್ಗವಾದರೂ, ನಿರ್ವಹಣೆ ಸುಲಭವಲ್ಲ. ಕರಮಂಜಿ, ದುರಾಂತ, ಸುಬಾಬುಲ್, ಕಾಡು ಜಾಲಿಗಳನ್ನು ಬೇಲಿಗಿಡಗಳಾಗಿ ಬೆಳೆಸಬಹುದು.
ಗಾಳಿ ತಡೆ
ಜೋರಾಗಿ ಬೀಸುವ ಗಾಳಿಯಿಂದ ರಕ್ಷಣೆ ಪಡೆಯಲು ಬೇಲಿಯ ಅಂಚಿಗೆ ಎತ್ತರವಾಗಿ ಬೆಳೆಯುವ ಮರಗಳನ್ನು ನೆಡಲಾಗುವುದು. ಗಾಳಿ ತಡೆ ಮರಗಳಿಗೆ ಅಗಲ ಎಲೆಗಳಿದ್ದು ಎತ್ತರವಾಗಿ ಬೆಳೆಯುತ್ತದೆ. ಇವು ಗಾಳಿಯ ವೇಗವನ್ನು ತಡೆಯುತ್ತದೆ. ಅಲ್ಲದೆ ಹೆಚ್ಚು ಉಷ್ಣತೆಯಿಂದ ಕಾಯಿ ಉದುರುವುದನ್ನು ತಪ್ಪಿಸುತ್ತದೆ. ಬೇರು ಮಾವಿನ ಗಿಡ, ನೇರಳೆ, ಮಲ್ಬರಿ, ಮೊರಿಂಗ, ಹಲಸು, ಕಮರಾಕ್ಷಿ, ತೇಗ, ಸಿಲ್ವರ್ ಮುಂತಾದ ಮರಗಳನ್ನು ಗಾಳಿ ತಡೆಯಾಗಿ ಹೆಚ್ಚು ಒತ್ತೊತ್ತಾಗಿ ಬೆಳೆಯುತ್ತಾರೆ. ಎತ್ತರವಾಗಿ ಬೆಳೆಯುವ ಶಿಷಂ ಮತ್ತು ನೇರಳೆ ಮರವನ್ನು 6 ಮೀ ಅಂತರದಲ್ಲಿ ನೆಟ್ಟರೆ, ಮಲ್ಬರಿ ಮತ್ತು ಕಮರಾಕ್ಷಿಯಂತ ಕಡಿಮೆ ಎತ್ತರದ ಮರಗಳನ್ನು 7 ಮೀ ಅಂತರದಲ್ಲಿ ನೆಡಲಾಗುತ್ತದೆ. ಗಾಳಿ ತಡೆ ಗಿಡಗಳು ತೋಟದಿಂದ ಪೋಷಕಾಂಶ ಹೀರುವುದರಿಂದ 1 ಮೀಟರ್ ಆಳದ ಚರಂಡಿಯನ್ನು ಬೆಳೆ ಮತ್ತು ಗಾಳಿ ತಡೆ ಗಿಡದ ಮಧ್ಯೆ ಉದ್ದಕ್ಕೆ ತೋಡಲಾಗುವುದು.
ಮರು ನಾಟಿ
ಉತ್ತಮ ನಿರ್ವಹಣೆಯ ಹೊರತಾಗಿ ಕೆಲವು ಸಸಿಗಳು ನಾಟಿ ಮಾಡಿದ ಪ್ರಾಥಮಿಕ ಹಂತದಲ್ಲಿ ನಶಿಸಿ ಹೋಗುತ್ತದೆ. ಉತ್ತಮ ನಿರ್ವಹಣೆಯಿದ್ದರೆ ಶೇಕಡ 10 ರಷ್ಟು ಗಿಡಗಳು ಸಾಯಲಾರವು. ನೀರು ಅಥವಾ ಕಳೆ ನಿರ್ವಹಣೆ ಇಲ್ಲದೆ ಇರುವುದು ಗಿಡ ಸಾಯಲು ಮುಖ್ಯ ಕಾರಣ. ಈ ಸ್ಥಳವನ್ನು ಅದೇ ಜಾತಿಯ ಸಸ್ಯಗಳಿಂದ ನೆಡಬೇಕು. ಮರು ನಾಟಿ ಚಳಿಗಾಲ ಮತ್ತು ಬೇಸಿಗೆ ಹೊರತುಪಡಿಸಿ ಇತರ ಸಮಯದಲ್ಲಿ ಕೈಗೊಳ್ಳಬಹುದು. ನೀರಾವರಿ ಮತ್ತು ಮುಚ್ಚಳಿಕೆ ಕೊಡಲು ಹೆಚ್ಚಿನ ಗಮನ ಹರಿಸಬೇಕು.
ಗುಂಡಿ ತೋಡುವುದು ಮತ್ತು ಗಿಡ ನೆಡುವುದು
ಒಂದು ತೋಟದಲ್ಲಿ ನೆಟ್ಟ ಗಿಡಗಳ ಉಳಿವು ಮತ್ತು ಅವುಗಳ ಬೆಳವಣಿಗೆ ಹಾಗೂ ಇಳುವರಿ ನಾವು ಅಪೇಕ್ಷಿಸಿದ ಮಟ್ಟದಲ್ಲಿರಬೇಕಾದರೆ ಸರಿಯಾದ ರೀತಿಯಲ್ಲಿ ಸಸಿಗಳನ್ನು ನೆಡುವುದು ಅತೀ ಅವಶ್ಯ. ಸಸಿಗಳನ್ನು ಕ್ರಮಬದ್ಧವಾಗಿ ನೆಟ್ಟು ಜತನದಿಂದ ಕಾಪಾಡಬೇಕು.
ಸಸಿಗಳನ್ನು ನೆಡುವ ಮೊದಲು ಪೂರ್ವತಯಾರಿ ಮುಖ್ಯವಾದುದು. ಜಮೀನನ್ನು ಚೆನ್ನಾಗಿ ಉಳುಮೆ ಮಾಡಿ ಕಳೆಮುಕ್ತವಾಗಿರಿಸಬೇಕು. ಹದಿನೈದು ದಿವಸಗಳಿಗಿಂತ ಮೊದಲೆ ಅಗತ್ಯ ಅಳತೆಯ ಗುಂಡಿಗಳನ್ನು ತೋಡಬೇಕು. ಸಸ್ಯಾಗಾರದಲ್ಲಿ ಸಸಿಗಳು ತಯಾರಿರಬೇಕು ಅಥವಾ ಇತರ ಸಸ್ಯಾಗಾರಗಳಿಂದ ಅಗತ್ಯ ಸಸಿಗಳನ್ನು ತಂದಿಟ್ಟುಕೊಳ್ಳಬೇಕು. ಗಿಡಗಳಿಗೆ ಅಗತ್ಯವಿರುವ ಸಾವಯವ ಮತ್ತು ರಾಸಾಯನಿಕ ಗೊಬ್ಬರಗಳ ದಾಸ್ತಾನು ಮಾಡಬೇಕು. ಗಿಡ ನೆಡಲು ಅಗತ್ಯವಾದ ಸಲಕರಣೆಗಳನ್ನು ಸಹ ಜೋಡಿಸಿಟ್ಟುಕೊಳ್ಳಬೇಕು.
ಸಸಿ ನೆಡುವ ಸಮಯ
ಸಸಿಗಳನ್ನು ಮುಂಗಾರು ಅಥವಾ ಹಿಂಗಾರಿನಲ್ಲಿ ನೆಡುವುದು ಉತ್ತಮ. ತೊಟ್ಟೆ ಗಿಡಗಳನ್ನು ಇತರೆ ಸಮಯದಲ್ಲಿ ನೆಡಬಹುದಾದರೂ ನೀರಿನ ವ್ಯವಸ್ಥೆ ಹೊಂದಿರಬೇಕು. ಧಾರಾಕಾರ ಮಳೆಯ ಸಮಯದಲ್ಲಿ ಸಸಿಗಳನ್ನು ನೆಡಬಾರದು. ಎರಡು ವರ್ಷದ ಸಸಿಗಳನ್ನು ಮುಂಗಾರಿನಲ್ಲಿ ನೆಡುವುದು ಸೂಕ್ತವಾದರೆ ಒಂದು ವರ್ಷದ ಸಸಿಗಳನ್ನು ಹಿಂಗಾರಿನಲ್ಲಿ ನೆಡಬೇಕು. ಮಳೆಯ ಕೊರತೆ ಕಂಡು ಬಂದರೆ ಗಿಡಗಳಿಗೆ ನೀರುಣಿಸಬೇಕಾಗುತ್ತದೆ. ಬೇಸಿಗೆಯಲ್ಲಿ ಮರದ ಸೊಪ್ಪಿನ ಅಥವಾ ತೆಂಗಿನ ಗರಿಗಳಿಂದ ತಯಾರಿಸಲ್ಪಟ್ಟ ತಟ್ಟಿಯಿಂದ ಗಿಡಗಳಿಗೆ ನೆರಳನ್ನು ಒದಗಿಸಬೇಕು.
ಗುಂಡಿ ತೆಗೆಯುವುದು
ತಳಿಗಳ ಅಗತ್ಯತಗೆ ತಕ್ಕಂತೆ ಚೌಕಾಕಾರದ ಗುಂಡಿಗಳನ್ನು ತೆಗೆಯಬೇಕು. ಗುಂಡಿಯು ಯಾವಾಗಲೂ ಸಸಿಯು ಹೊಂದಿರುವ ಬೇರಿಗಿಂತ ಒಂದು ಅಡಿ ಅಗಲ ಮತ್ತು ಆಳವಾಗಿರಬೇಕು. ಗುಂಡಿಯ ತಳಭಾಗದ ಮಧ್ಯದಲ್ಲಿ ಮೇಲ್ಭಾಗಕ್ಕೆ ಉಬ್ಬಿರಬೇಕು. ಇದರಿಂದ ಗಿಡಕ್ಕೆ ಸುರಿದ ಹೆಚ್ಚಿನ ನೀರು ಗುಂಡಿಯ ಬದಿಗೆ ಹರಿದು ಹೋಗುತ್ತದೆ. ಗುಂಡಿ ತೆಗೆದನಂತರ ಗುಂಡಿಯಲ್ಲಿ ನೀರು ತುಂಬಬೇಕು. 6-7 ಗಂಟೆಯಲ್ಲಿ ಗುಂಡಿಯಲ್ಲಿನ ನೀರು ಇಂಗದೆ ಹೋದರೆ ನೀರು ನಿಲ್ಲದಂತೆ ಬಸಿಕಾಲುವೆ ವ್ಯವಸ್ಥೆ ಮಾಡಬೇಕು. ಸಾವಯವ ಗೊಬ್ಬರ, ದಪ್ಪ ಮರಳು ಮತ್ತು ಮೇಲ್ಪದರ ಮಣ್ಣನ್ನು ಸಮ ಪ್ರಮಾಣದಲ್ಲಿ ಮಿಶ್ರಣ ಮಾಡಿ ಗುಂಡಿಯನ್ನು ತುಂಬಬೇಕು. ಸಸಿಗಳನ್ನು ಯಾವಾಗಲೂ ಗುಂಡಿಯ ಮಧ್ಯಭಾಗದಲ್ಲಿ ನೆಡಬೇಕು, ಹೆಚ್ಚು ಆಳವಾಗಿಯೂ ಅಥವಾ ಮೆಲ್ಮಟ್ಟದಲ್ಲಿ ನೆಡಬಾರದು. ಕಸಿಗಂಟು ನೆಲಮಟ್ಟದಿಂದ 6”ಗಿಂತ ಹೆಚ್ಚು ಎತ್ತರದಲ್ಲಿರುವಂತೆ ನೋಡಿಕೊಳ್ಳಬೇಕು. ನೆಟ್ಟನಂತರ ಗಿಡಗಳಿಗೆ ಚೆನ್ನಾಗಿ ನೀರುಣಿಸಬೇಕು. ಇದರಿಂದ ಬೇರಿನ ಸುತ್ತಲು ಸೇರಿಕೊಂಡಿರುವ ಗಾಳಿಯನ್ನು ಹೊರಹಾಕಬಹುದು.
ಆಧಾರ
ನೆಟ್ಟನಂತರ ಗಿಡಗಳಿಗೆ ಮರದ ಅಥವಾ ಬಿದಿರಿನ ಕೋಲುಗಳಿಂದ ಆಧಾರವನ್ನು ನೀಡಿ ಸೆಣಬಿನ ದಾರದಿಂದ ಬಂಧಿಸಬೇಕು. ಇದರಿಂದ ಗಾಳಿಗೆ ಗಿಡಗಳು ಅಲುಗಾಡಿ ಮಣ್ಣಿನಿಂದ ಬೇರು ಸಡಿಲವಾಗುವುದನ್ನು ತಪ್ಪಿಸಬಹುದು. ಗಿಡವು ಜಮೀನಿನಲ್ಲಿ ಸ್ಥಿರಗೊಳ್ಳುವವರೆಗೆ ಆಧಾರವನ್ನು ಕೊಡಬೇಕಾಗುತ್ತದೆ.
ನೀರಾವರಿ
ಬೇಸಿಗೆಯಲ್ಲಿ ಗಿಡದ ಸುತ್ತಲೂ ವರ್ತುಲಾಕಾರವಾಗಿ ಗುಳಿಮಾಡಿ ನೀರುಣಿಸಬೇಕು. ಗಿಡಗಳಿಗೆ ವರ್ಷವಿಡೀ ಒಂದೇ ಪ್ರಮಾಣದ ನೀರಿನ ಅವಶ್ಯಕತೆಯಿರುವುದಿಲ್ಲ. ಹೊಸದಾಗಿ ನೆಟ್ಟಗಿಡಗಳಿಗೆ ವಾರಕೊಮ್ಮೆ ಚೆನ್ನಾಗಿ ನೀರೊದಗಿಸಬೇಕು. ಮಳೆಗಾಲದಲ್ಲಿ ಗಿಡದ ಸುತ್ತಲು ನೀರು ನಿಲ್ಲದಂತೆ ಎಚ್ಚರವಹಿಸಬೇಕು. ಮರಳು ಮಿಶ್ರಿತ ಮಣ್ಣಿನ ನೀರಿನ ಅವಶ್ಯಕತೆ ಇತರ ರೀತಿಯ ಮಣ್ಣಿಗಿಂತ ಜಾಸ್ತಿಯಿರುತ್ತದೆ.
ಪೋಷಕಾಂಶಗಳು
ಸಸಿ ನಾಟಿ ಮಾಡುವ ಸಮಯದಲ್ಲಿ 250-300 ಗ್ರಾಂ. ಸೂಪರ್ ಫಾಸ್ಫೇಟನ್ನು ಗುಂಡಿಯಲ್ಲಿ ಹಾಕುವುದರಿಂದ ಗಿಡಗಳಿಂದ ಹೊಸಬೇರಿನ ಬೆಳವಣಿಗೆಯನ್ನು ಪ್ರಚೋದಿಸಬಹುದು. ತದನಂತರ ವಯಸ್ಸಿಗನುಗುಣವಾಗಿ ಶಿಫಾರಿತ ಪ್ರಧಾನ ಪೋಷಕಾಂಶ ಮತ್ತು ಲಘು ಪೋಷಕಾಂಶಗಳನ್ನು ನಿಗದಿತ ಪ್ರಮಾಣದಲ್ಲಿ ಮತ್ತು ನಿಗದಿತ ಸಮಯದಲ್ಲಿ ಸಸಿಗಳಿಗೆ ಒದಗಿಸಬೇಕಾಗುತ್ತದೆ.