ಹಣ್ಣಿನ ತೋಟ ನಿರ್ವಹಣೆ Horticulture in Coorg Fruit Garden Management

Reading Time: 7 minutes

ಹಣ್ಣಿನ ತೋಟ ನಿರ್ವಹಣೆ

ಹಣ್ಣಿನ ತೋಟದ ಕೃಷಿ ಎಂದರೆ ಅತ್ಯಂತ ಎಚ್ಚರಿಕೆಯಿಂದ ಮಣ್ಣಿನ ಆರೋಗ್ಯ ಕಾಪಾಡಿ, ಅತೀ ಕಡಿಮೆ ಖರ್ಚಿನಲ್ಲಿ ಗಿಡಗಳ ಅಗತ್ಯತೆಯನ್ನು ಪೂರ್ಯೆಸುವುದು ಎಂದರ್ಥ. ಮಣ್ಣನ್ನು ಸುಸ್ಥಿತಿಯಲ್ಲಿ ಇಟ್ಟು ಅದರಲ್ಲಿರುವ ತೇವಾಂಶ ಮತ್ತು ಪೋಷಕಾಂಶಗಳನ್ನು ಹಾಳು ಮಾಡದಂತೆ ಕಾರ್ಯನಿರ್ವಹಿಸಬೇಕು. ಉತ್ತಮ ತೋಟನಿರ್ವಹಣೆ ಈ ಕೆಳಗಿನ ಕ್ರಮಗಳನ್ನೊಳಗೊಂಡಿದೆ.
1. ಕಳೆ ನಿರ್ವಹಣೆ ಮತ್ತು ಮಣ್ಣಿನ ತೇವಾಂಶ ಹಾಗು ಪೋಷಕಂಶ ಉಳಿಸಿಕೊಳ್ಳುವುದು.
2. ಮಣ್ಣಿನ ಸವಕಳಿಯನ್ನು ತಡೆಯುವುದು.
3. ಕಡಿಮೆ ಖರ್ಚಿನ ಬೇಸಾಯ.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಮಣ್ಣಿನ ನಿರ್ವಹಣೆಯ ವಿವಿಧ ಕ್ರಮಗಳು
1. ಶುದ್ಧ ಕೃಷಿ: ಹೆಚ್ಚಾಗಿ ಭಾರತದಲ್ಲಿ ಕಂಡುಬರುತ್ತದೆ. ಗಿಡಗಳ ಸಾಲುಗಳಲ್ಲಿ ಇರುವ ಖಾಲಿ ಸ್ಥಳದಲ್ಲಿ ಕಳೆ ವಿಫುಲವಾಗಿ ಬೆಳೆಯುತ್ತದೆ. ಇವು ಮಣ್ಣಿನಲ್ಲಿರುವ ನೀರು ಮತ್ತು ಪೋಷಕಾಂಶಗಳನ್ನು ಯಥೇಚ್ಛವಾಗಿ ಬಳಸುವುದರಿಂದ ಗಿಡಗಳ ಬೆಳವಣಿಗೆ ಕುಂಠಿತವಾಗುತ್ತದೆ. ಕಳೆಯನ್ನು ವ್ಯವಸ್ಥಿತ ಮತ್ತು ನಿರಂತರ ಉಳುಮೆಯಿಂದ ನಿಯಂತ್ರಿಸಲಾಗುತ್ತದೆ. ಶುದ್ಧಕೃಷಿ ಹಲವಾರು ನ್ಯೂನತೆಗಳನ್ನು ಒಳಗೊಂಡಿದೆ.
• ಮಣ್ಣಿನಲ್ಲಿ ಕೊಳೆತ ಸೇಂದ್ರೀಯ ವಸ್ತುಗಳು ನಾಶವಾಗುತ್ತದೆ.
• ಮಣ್ಣಿನಲ್ಲಿ ಗಾಳಿಸೇರಿ ಅದರಲ್ಲಿರುವ ಸಾರಜನಕದ ಅಂಶ ಬರಿದಾಗುತ್ತದೆ.
• ಮಣ್ಣಿನ ಸವಕಳಿ ಜಾಸ್ತಿಯಾಗುತ್ತದೆ.
ಆಳ ಮತ್ತು ನಿರಂತರ ಉಳುಮೆ ಕೈಗೊಳ್ಳದಿರುವುದು ಮತ್ತು ಮಣ್ಣಿನ ತೇವಾಂಶ ಹೆಚ್ಚಿರುವಾಗ ಉಳುಮೆ ಮಾಡದಿರುವುದರಿಂದ ಈ ಮೇಲಿನ ನ್ಯೂನತೆಗಳನ್ನು ಸ್ವಲ್ಪಮಟ್ಟಿಗೆ ನಿವಾರಿಸಬಹುದು.
2. ಶುದ್ಧಕೃಷಿಯಲ್ಲಿ ಗೊಬ್ಬರದ ಗಿಡಗಳನ್ನು ಬೆಳೆಸುವುದು: ಮುಂಗಾರಿನಲ್ಲಿ ಉಳುಮೆ ಮಾಡಿ ಸೆಣಬು, ದ್ಯೆಂಚ, ಹುಚ್ಚೆಳ್ಳು ಮುಂತಾದ ಗೊಬ್ಬರದ ಗಿಡಗಳನ್ನು ಬಿತ್ತಲಾಗುತ್ತದೆ. ಇದರಿಂದ ಮಣ್ಣಿನ ಸವಕಳಿಯನ್ನು ತಡೆಯಬಹುದು ಮತ್ತು ಫಲವತ್ತತೆಯನ್ನು ಹೆಚ್ಚಿಸಬಹುದಲ್ಲದೆ ಕಳೆಯ ಬೆಳವಣಿಗೆಯನ್ನು ಸಹ ನಿಯಂತ್ರಿಸಬಹುದು. ಹಿಂಗಾರಿನಲ್ಲಿ ಉಳುಮೆ ಮಾಡಿ ಈ ಗಿಡಗಳನ್ನು ಮಣ್ಣಿಗೆ ಸೇರಿಸಲಾಗುತ್ತದೆ. ಹಣ್ಣಿನ ತೋಟಗಳಲ್ಲಿ ಗೊಬ್ಬರದ ಗಿಡಗಳನ್ನು ಬೆಳೆಸುವುದು ಸಾಮಾನ್ಯವಾಗಿ ರೂಢಿಯಲ್ಲಿದೆ. ರಬ್ಬರ್ ತೋಟಗಳಲ್ಲಿ ಸಾರಜನಕವನ್ನು ಸಂಗ್ರಹಿಸುವ ದ್ವಿದಳ ಸಸ್ಯಗಳನ್ನು ಬೆಳೆಯುತ್ತಾರೆ. ಇವು ಬೇಸಿಗೆಯಲ್ಲಿ ಒಣಗಿ ಮಳೆ ಬಂದಾಗ ಚಿಗುರೊಡೆಯುತ್ತವೆ.
3. ಗಿಡಗಳ ಸುತ್ತಲು ಹೊದಿಕೆ ನೀಡುವುದು: ಮಣ್ಣಿನ ರಕ್ಷಣೆಗಾಗಿ ವಿಶ್ವದಾದ್ಯಂತ ಅನುಸರಿಸಲಾಗುವ ಒಂದು ಅತ್ಯುತ್ತಮ ಕ್ರಮ. ಗಿಡದ ಸುತ್ತಲೂ ಒಣಗಿದ ಎಲೆ, ಒಣ ಹುಲ್ಲು, ಮರದ ಹುಡಿ ಮತ್ತು ಗಿಡದ ನಡುವಿನ ಸಾಲುಗಳಲ್ಲಿ ಪ್ಲಾಸ್ಟಿಕ್ ಹಾಳೆ ಹೊದಿಸುವುದರಿಂದ ಸಾಕಷ್ಟು ಪ್ರಮಾಣದಲ್ಲಿ ಕಳೆಯನ್ನು ನಿಯಂತ್ರಿಸಬಹುದು ಮತ್ತು ತೇವಾಂಶವನ್ನು ಕಾಪಾಡಬಹುದು. ಇದರಿಂದ ದೊರಕುವ ಇತರ ಅನುಕೂಲಗಳೆಂದರೆ-
• ಹಗಲಿನಲ್ಲಿ ಮಣ್ಣನ್ನು ತಂಪಾಗಿಯೂ, ರಾತ್ರಿ ವೇಳೆಯಲ್ಲಿ ಬೆಚ್ಚನೆಯಾಗಿಯೂ ಇಡುತ್ತದೆ.
• ಮಣ್ಣು ಕೊಚ್ಚಿಹೋಗುವುದನ್ನು ತಡೆಯುತ್ತದೆ.
• ಮಣ್ಣಿನಲ್ಲಿ ಸೇಂದ್ರೀಯ ವಸ್ತು ಹೆಚ್ಚಾಗುತ್ತದೆ.
• ಮಣ್ಣಿನ ಸವಕಳಿಯನ್ನು ತಡೆಯುತ್ತದೆ.
• ನೀರುಣಿಸುವಿಕೆಯ ಅವಧಿಯನ್ನು ಕಡಿಮೆ ಮಾಡುತ್ತದೆ.

ಹೊದಿಕೆಯಿಂದಾಗುವ ಅನಾನುಕೂಲಗಳು
• ಒಣ ಎಲೆಗಳಿಂದ ಬೆಂಕಿ ಅಪಘಾತವಾಗುವ ಸಂಭವ ಇದೆ.
• ದಪ್ಪ ಹೊದಿಕೆ ನೀಡುವುದರಿಂದ ಇಲಿಗಳಿಗೆ ಮತ್ತು ಗೆದ್ದಲು ಹುಳುಗಳಿಗೆ ಆಶ್ರಯತಾಣವಾಗುವ ಸಾಧ್ಯತೆಯಿದೆ. ಆದ್ದರಿಂದ ಕಾಂಡ ಮತ್ತು ಬೇರುಗಳಿಗೆ ಹೊದಿಕೆಯನ್ನು ಕಾಂಡದಿಂದ ಸ್ವಲ್ಪ ಅಂತರದಲ್ಲಿ ತೆಳುವಾಗಿ ಹರಡಬೇಕು.

4. ಅಂತರ ಬೆಳೆ: ತೋಟದಲ್ಲಿ ನೆಟ್ಟ ಬಹುವಾರ್ಷಿಕ ಗಿಡಗಳ ನಡುವಿನ ಸಾಲುಗಳಲ್ಲಿ ಸಾಕಷ್ಟು ಸ್ಥಳ ಖಾಲಿಯಿರತ್ತದೆ. ಈ ಸ್ಥಳದಲ್ಲಿ ಹಲವು ವಿಧದ ಕಡಿಮೆ ಅವಧಿಯ ವಾಣಿಜ್ಯ ಬೆಳೆಗಳನ್ನು ಬೆಳೆಯುವುದರಿಂದ ಸಾಕಷ್ಟು ವರಮಾನ ಸಿಗುತ್ತದೆ. ಅಲ್ಲದೆ ಕಳೆಯ ನಿಯಂತ್ರಣವೂ ಸಾಧ್ಯವಾಗುತ್ತದೆ. ಅಂತರ ಬೆಳೆಯನ್ನು ಬೆಳೆಯುವಾಗ ಈ ಕೆಳಗಿನ ಅಂಶಗಳನ್ನು ಗಮನದಲ್ಲಿಡಬೇಕು-
• ಅಂತರ ಬೆಳೆಯನ್ನು ಮುಖ್ಯ ಬೆಳೆಯ ಬೇರುಗಳು ಹರಡಿರುವಲ್ಲಿ ನೆಡಬಾರದು.
• ಬೆಳೆಯುವ ಅಂತರ ಬೆಳೆ ಮಣ್ಣಿನ ಫಲವತ್ತತೆಯನ್ನು ಕಾಪಾಡಬೇಕು ಅಥವಾ ಮಣ್ಣಿನ ಫಲವತ್ತತೆ ಹೆಚ್ಚಿಸಬೇಕು.
• ಅಂತರ ಬೆಳೆಯ ನೀರಿನ ಅವಶ್ಯಕತೆ ಮುಖ್ಯ ಬೆಳೆಗೆ ತೊಂದರೆಯಾಗದಂತಿರಬೇಕು.
ತರಕಾರಿ ಬೆಳೆಗಳು, ಅರಸಿನ, ಶುಂಠಿ, ಮರಗೆಣಸು, ಸಿಹಿಗೆಣಸು ಮುಂತಾದವನ್ನು ಅಂತರಬೆಳೆಯಾಗಿಯೂ, ಪಪ್ಪಾಯ, ಬಾಳೆಯನ್ನು ‘ಫಿಲ್ಲರ್’ ಬೆಳೆಯಾಗಿಯೂ ಬೆಳೆಯಬಹುದು.

ಮಿಶ್ರ ಬೆಳೆ: ಮುಖ್ಯ ಬೆಳೆಯೊಡನೆ ಇತರ ಬಹು ವಾರ್ಷಿಕ ಬೆಳೆಯನ್ನು ಬೆಳೆಯುವುದು ಇದರ ವಿಶೇಷ. ಮಿಶ್ರ ಬೆಳೆ ಫಲೋತ್ಪಾದಕಾರಿ ಮತ್ತು ಅದರಿಂದ ದೊರೆಯುವ ವರಮಾನ ಉತ್ತಮವಾಗಿರಬೇಕು. ಕಿತ್ತಳೆಯೊಡನೆ ಕಾಫಿ ಮತ್ತು ಕಾಳು ಮೆಣಸನ್ನು ಮಿಶ್ರಬೆಳೆಯಾಗಿ ಬೆಳೆಯುವುದು ಲಾಭದಾಯಕವೆಂದು ಸಂಶೋಧನೆಯಿಂದ ತಿಳಿದು ಬಂದಿದೆ. ತೆಂಗು ಮತ್ತು ಅಡಿಕೆ ತೋಟಗಳ ಮಧ್ಯೆ ಕೊಕೊ, ಕಾಳುಮೆಣಸು, ಪಟ್ಟೆ, ಲವಂಗ, ಜಾಯ್‍ಕಾಯಿ ಬೆಳೆಯುವುದು ಸಹ ಲಾಭದಾಯಕವೆಂದು ಕಂಡುಬಂದಿದೆ.

ಪೋಷಕಾಂಶಗಳ ನಿರ್ವಹಣೆ: ಪ್ರಥಮ ಮೂರು ವರ್ಷಗಳಲ್ಲಿ ಪೋಷಕಾಂಶಗಳನ್ನು ಗಿಡದ ಬೆಳವಣಿಗೆಗೆ ಬಳಸಲಾಗುತ್ತದೆ. ಗಿಡದಲ್ಲಿ ಮೊದಲ ಎಲೆ ಕಂಡನಂತರವೇ ಪೋಷಕಾಂಶ ನೀಡಬೇಕು. ಶಿಫಾರಸ್ಸು ಮಾಡಿದ ಮತ್ತು ನಿಗದಿ ಪಡಿಸಿದಷ್ಟೆ ಪೋಷಕಾಂಶಗಳನ್ನು ಗಿಡಗಳಿಗೆ ಒದಗಿಸಬೇಕು ಮತ್ತು ಕಾಂಡದಿಂದ 20 ಸೆಮೀ ಅಂತರದಲ್ಲಿ ಪಟ್ಟಿಯಂತೆ ಹರಡಬೇಕು. ಸಾವಯವ ಯಾ ರಸಾಯನಿಕ ಗೊಬ್ಬರ ಅಗತ್ಯಕ್ಕಿಂತ ಹಚ್ಚು ಬಳಸಿದರೆ ಗಿಡಗಳಿಗೆ ಹಾನಿಕಾರಕ.

ನೀರುಣಿಸುವಿಕೆ: ಗಿಡ ನೆಟ್ಟ ಪ್ರಾರಂಭಿಕ ವರ್ಷಗಳಲ್ಲಿ ನೀರುಣಿಸುವುದರಿಂದ ಗಿಡಗಳು ಬೇಗನೆ ನೆಲೆಯೂರುತ್ತವೆ. ನೀರಿನ ಅವಶ್ಯಕತೆ ಮರದ ಗಾತ್ರ, ಮಣ್ಣಿನಗುಣ, ವಾತಾವರಣ ಮತ್ತು ಋತುಮಾನವನ್ನು ಅವಲಂಬಿಸಿದೆ. ಬೇಸಿಗೆಯಲ್ಲಿ ನೀರಿನ ಅವಶ್ಯಕತೆ ಚಳಿಗಾಲಕ್ಕಿಂತ ಜಾಸ್ತಿಯಿರತ್ತದೆ. ಎಲೆ ಅಥವಾ ಹುಲ್ಲಿನ ಹೊದಿಕೆ ನೀಡುವುದರಿಂದ ನೀರಿನ ಅವಶ್ಯಕತೆಯನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡಬಹುದು.

ಗಿಡ ಸವರುವಿಕೆ: ಚಿಕ್ಕ ಗಿಡ ಸವರುವಿಕೆಯಿಂದ ಗಿಡ ಗಟ್ಟಿಮುಟ್ಟಾಗಿಯೂ, ಉತ್ತಮ ಆಕಾರ ಹೊಂದಿ, ಬೀಸುವ ಗಾಳಿಯಿಂದ ಉಂಟಾಗುವ ಹಾನಿ ಕಡಿಮೆಯಾಗುತ್ತದೆ ಮತ್ತು ಫಲ ಬಿಡುವ ಕ್ಷೇತ್ರ ಜಾಸ್ತಿಯಾಗುತ್ತದೆ. ಒಣಗಿದ, ದುರ್ಬಲ ಮತ್ತು ವಕ್ರ ಕೊಂಬೆಗಳನ್ನು ಕತ್ತರಿಸಿ ತೆಗೆಯಬೇಕು. ಚಿಕ್ಕ ಗಿಡ ಸವರುವಿಕೆಯನ್ನು ಗಿಡ ನೆಟ್ಟ ಒಂದು ವರ್ಷದ ನಂತರ ಕೈಗೊಳ್ಳಬೇಕು.

ಕೀಟ ಹಾಗು ರೋಗ ನಿರ್ವಹಣೆ: ನಾನಾ ರೀತಿಯ ಕೀಟಗಳು ಮತ್ತು ರೋಗಗಳು ವಿವಿಧ ಹಂತದಲ್ಲಿ ಗಿಡಗಳನ್ನು ಬಾಧಿಸುತ್ತವೆ. ಇವು ಗಿಡಗಳಿಗೆ ಹಾನಿಕಾರಕ. ಹೂ ಬಿಡುವ ಪ್ರಮಾಣ ಕಡಿಮೆಯಾಗಿ ಇಳುವರಿ ಕಡಮೆಯಾಗುತ್ತದೆ. ಶಿಫಾರಸ್ಸು ಮಾಡಿದ ಕೀಟ ನಾಶಕಗಳನ್ನು ಮತ್ತು ಶಿಲೀಂದ್ರ ನಾಶಕಗಳನ್ನು ಬಳಸಿ ಇವುಗಳನ್ನು ನಿಯಂತ್ರಿಸಬೇಕು. ಕೆಲವೊಂದು ಕೀಟಗಳು ಹಾನಿಕಾರಕ ರೋಗ ವಾಹಕಗಳಾಗಿವೆ.

ಕಳೆ ನಿರ್ವಹಣೆ: ನೀರು, ಪೋಷಕಾಂಶ ಮತ್ತು ಸೂರ್ಯರಶ್ಮಿಗಾಗಿ ಕಳೆಗಳು ಗಿಡಗಳೊಂದಿಗೆ ಪೈಪೋಟಿ ನಡೆಸುತ್ತವೆ ಅಲ್ಲದೆ ಇವು ಅನೇಕ ಕೀಟಗಳಿಗೆ ಆಶ್ರಯತಾಣವಾಗಿವೆ. ಗಿಡದ ಸಾಲಿನ ನಡುವೆ ಗೊಬ್ಬರದ ಗಿಡಗಳನ್ನು ಬೆಳೆಸುವುದು, ಪ್ಲಾಸ್ಟಿಕ್ ಹೊದಿಕೆ ಬಳಸುವುದು, ಮಿಶ್ರ ಬೆಳೆಯ ಮುಖಾಂತರ ಕಳೆಯನ್ನು ಕಡಿಮೆ ಮಾಡಬಹುದು. ಗಿಡದ ಬುಡದ ಕಳೆಯನ್ನು ಎಲೆ ಯಾ ಹುಲ್ಲಿನ ಹೊದಿಕೆಯಿಂದ, ಕತ್ತರಿಸುವುದರಿಂದ, ಹೆರತೆ ಮತ್ತು ಎಚ್ಚರಿಕೆಯಿಂದ ಕಳೆನಾಶಕ ಬಳಸುವುದರ ಮುಖಾಂತರ ನಿಯಂತ್ರಿಸಬಹುದು.

About ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.
0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments