ಭಾರತದ 2ನೇ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮ ದಿನ ಅಕ್ಟೋಬರ್ ೨
“ಜೈ ಜವಾನ್ ಜೈ ಕಿಸಾನ್ “ಘೋಷಣೆಯ ಒಡೆಯ
ಅವರು ಸ್ವತಂತ್ರ ಭಾರತದ 2ನೇ ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರೂ ಶತ್ರುಗಳಿಗೆ ಸವಾಲು ಹಾಕಿ, ಪಾಕ್ ವಿರುದ್ಧ ಹೋರಾಡಿ ದೇಶಕ್ಕೆ ಮತ್ತೊಮ್ಮೆ ಸ್ವಾತಂತ್ರ್ಯ ತಂದುಕೊಟ್ಟರು.
ದೇಶ ಸಂದಿಗ್ಧ ಪರಿಸ್ಥಿತಿ ಎದುರಿಸುತ್ತಿದ್ದರೂ ದೇಶದ ಸ್ವಾಭಿಮಾನವನ್ನು ಮೆರೆಸಿದರು. ಭಾರತವನ್ನು ಸ್ವಾಭಿಮಾನಿ ದೇಶವನ್ನಾಗಿ ಮಾಡುವಲ್ಲಿ ಶ್ರಮಿಸಿದ ಲಾಲ್ ಬಹದ್ದೂರ್ ಶಾಸ್ತ್ರಿ ಅವರನ್ನು ನೆನೆದಾಗ ಅವರೆಂದಿಗೂ ನಮಗೆ 2ನೇ ಯ ಪ್ರಧಾನಿಯಾಗಿದ್ದರೆಂಬ ಭಾವನೆಯೇ ಮೂಡುವುದಿಲ್ಲ.
ದೇಶ ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ಒಬ್ಬ ಮಾದರಿ ಪ್ರಧಾನಮಂತ್ರಿಯಾಗಿ ಕಾರ್ಯನಿರ್ವಹಿಸಿದ ಶಾಸ್ತ್ರಿ ಅವರು ದೇಶದ ಪ್ರತಿಯೊಬ್ಬ ದೇಶಾಭಿಮಾನಿಗಳಿಗೆ ದೇಶದ ಮೊದಲ ಜವಾಬ್ದಾರಿಯುತ ಪ್ರಧಾನಮಂತ್ರಿಯಾಗಿಯೇ ಕಾಣುತ್ತಾರೆ. ಅವರ ಹೃದಯದಲ್ಲಿ ಮೇರು ವ್ಯಕ್ತಿತ್ವದ ಸ್ಥಾನದಲ್ಲಿ ವಿಜೃಂಭಿಸುತ್ತಾರೆ.
ಲಾಲ್ ಬಹದ್ದೂರ್ ಶಾಸ್ತ್ರಿ, ಉತ್ತರ ಪ್ರದೇಶದ ಬನಾರಸ್‍ನಿಂದ 11 ಕಿ.ಮೀ. ದೂರದಲ್ಲಿರುವ ಮೊಗಲ್ ಸರಾಯಿ ಎಂಬ ಹಳ್ಳಿಯ ಶ್ರೀವಾಸ್ತವ ಕಾಯಸ್ಥ ಎಂಬ ಕುಟುಂಬದಲ್ಲಿ 1904ನೇ ಅಕ್ಟೋಬರ್ 2ರಂದು ಜನಿಸಿದರು. ಶಾಸ್ತ್ರಿಯವರ ತಂದೆ ಶಾರದಾ ಪ್ರಸಾದ್ ಶಾಲೆಯ ಅಧ್ಯಾಪಕರಾಗಿದ್ದರು. ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡ ಶಾಸ್ತ್ರಿಯವರಿಗೆ ತಾಯಿಯಿಂದ ರಾಮಾಯಣ ಮಹಾಕಾವ್ಯಗಳ ಬಗೆಗಿನ ಶಿಕ್ಷಣ ಧಾರಾಳವಾಗಿ ಲಭಿಸಿತ್ತು.
ತಮ್ಮ ತಾಯಿಯ ಜೊತೆ ತಾಯಿಯ ಅಣ್ಣನ ಮನೆಯಲ್ಲಿ ಬೆಳೆದ ಲಾಲ್ ಬಹದ್ದೂರ್ ಅವರಿಗೆ ಶಾಸ್ತ್ರಿ ಎಂಬುದು ಹುಟ್ಟಿನಿಂದ ಬಂದ ಹೆಸರಲ್ಲ. ಕಾಶಿ ವಿಶ್ವವಿದ್ಯಾನಿಲಯದಲ್ಲಿ “ಶಾಸ್ತ್ರಿ” ಎಂಬ ಪಂಡಿತ ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ ಇವರಿಗೆ ಶಾಸ್ತ್ರಿ ಎಂಬ ಹೆಸರು ನೀಡಲಾಯಿತು.
ಲಾಲ್ ಬಹದ್ದೂರರು ವಿದ್ಯಾರ್ಥಿಯಾಗಿದ್ದ ಸಂದರ್ಭವದು, ಜಾತ್ರೆ ನೋಡಲು ಪಕ್ಕದೂರಿಗೆ ಗೆಳೆಯರೊಂದಿಗೆ ಹೋದರು. ನಡುವೆ ಕಾಲುವೆ ದಾಟಬೇಕಾಗಿತ್ತಾದ್ದರಿಂದ ತಮ್ಮ ಬಳಿಯಿದ್ದ ಒಂದು ಕಾಸನ್ನು ಕೊಟ್ಟು ದೋಣಿಯ ಮೂಲಕ ಗೆಳೆಯರೊಂದಿಗೆ ಪ್ರಯಾಣ ಬೆಳೆಸಿದರು. ಆದರೆ ವಾಪಸಾಗಬೇಕಾದರೆ ಜಾತ್ರೆಯಲ್ಲಿ ಏನನ್ನು ಖರೀದಿಸದೇ ಇದ್ದರೂ ಜೇಬಲ್ಲಿ ಕಾಸಿರಲಿಲ್ಲ. ಸ್ನೇಹಿತರು ವಾಪಸ್ ಹೋಗುವುದಕ್ಕೆ ಕರೆದರೂ ಜಾತ್ರೆ ಇನ್ನೂ ನೋಡುವದಿದೆ ಎಂದು ಸುಳ್ಳು ಹೇಳಿದ ಲಾಲ್ ಬಹದ್ದೂರರು ಸಂಜೆಯಾದ ನಂತರ ಕಾಲುವೆ ಈಜಿ ದಡ ಸೇರಿದರು.
ಕಾಲುವೆ ದಾಟಲು ಸ್ನೇಹಿತರ ಬಳಿ ದುಡ್ಡು ಕೇಳಿದರೆ ಕೊಡುತ್ತಿದ್ದರು.ಆದರೆ ಹಾಗೆ ಮಾಡಲಿಲ್ಲ. ಇದರಿಂದ ಶಾಸ್ತ್ರಿ ಅವರು ಜನ್ಮತಃ ಸ್ವಾಭಿಮಾನಿಗಳೆಂಬುದು ತಿಳಿಯುತ್ತದೆ. ಶಾಸ್ತ್ರಿ ಅವರಿಗೆ ಬಾಲ್ಯದಿಂದಲೇ ಇದ್ದ ಸ್ವಾಭಿಮಾನದ ರಕ್ಷಣೆ, ಅವರಲ್ಲಿದ್ದ ಧೈರ್ಯ-ಸ್ಥೈರ್ಯದ್ ಗುಣ ಮುಂದೊಮ್ಮೆ ಭಾರತದ ಪ್ರಧಾನಿಯಾಗಿ ದೇಶದ ಸ್ವಾಭಿಮಾನವನ್ನು ರಕ್ಷಣೆ ಮಾಡುವುದಕ್ಕೆ ಸಾರ್ಥಕವಾಯಿತು!. ಸಂಕಷ್ಟದ ಸ್ಥಿತಿಯಲ್ಲಿ ಕಾಲುವೆ ಈಜಿ ಪಾರಾಗಿದ್ದ ಧೈರ್ಯವಂತ, ಮುಂದೊಮ್ಮೆ ಶತೃಗಳ ಕೈಗೆ ಸಿಲುಕಿ ಮುಳುಗಬೇಕಿದ್ದ ಮಾತೃಭೂಮಿಯನ್ನೂ ಪಾರುಮಾಡಿದರು!
ಸ್ವಾತಂತ್ರ್ಯ ಬಂದ 10 ವರ್ಷ ಕ್ಕೂ ಹೆಚ್ಚು ನೆಹರೂ ಆಳ್ವಿಕೆ ನಡೆಸಿದರು, ಚೀನಾ ವಿರುದ್ಧ ರಣ ಹೇಡಿಯಾದರು. ಆದರೆ ಶಾಸ್ತ್ರಿ ಅವರು ಒಂದು ಅವಧಿಯನ್ನೂ ಪೂರೈಸದೇ ಇದ್ದರೂ ದೇಶದ ಮಾನ ಉಳಿಸುವಂತಹ ನಿರ್ಧಾರಗಳನ್ನು ಕೈಗೊಂಡರು. ಅವರು ಪ್ರಧಾನಿಯಾದ ಸಂದರ್ಭದಲ್ಲಿ ದೇಶದಲ್ಲಿ ಬರಗಾಲ ಬಂದೊದಗಿತು. ಇದರೊಂದಿಗೆ ಸ್ವಾತಂತ್ರ ಗಳಿಸಿದ ನಂತರ ಪಾಕಿಸ್ತಾನಕ್ಕೂ ಕಾಶ್ಮೀರದ ’ಬರ’ ಕಾಡತೊಡಗಿತ್ತು. ಭಾರತದ ಮೇಲೆ ಬಹಿರಂಗವಾಗಿಯೇ ಸಮರ ಸಾರಿದ ಪಾಕಿಸ್ತಾನ ಗಡಿಭಾಗದಲ್ಲಿ ದಾಳಿ ನಡೆಸಿದ್ದರ ಪರಿಣಾಮ ಸೆ.1965 ರಲ್ಲಿ ಭಾರತ-ಪಾಕ್ ನಡುವೆ ಸಮರ ಆರಂಭವಾಯಿತು. ಕೊನೆಗೆ ಶತೃಗಳನ್ನೂ ಹಿಮ್ಮೆಟ್ಟಿಸಿದರು.
ಇದೇ ವೇಳೆ ಚೀನಾ ಗಡಿ ಪ್ರದೇಶದಲ್ಲಿ ಭಾರತ ಸೇನಾ ನೆಲೆಯನ್ನು ಸ್ಥಾಪಿಸಿದೆ ಎಂದು ಚೀನಾ ಕೂಡ ಭಾರತದ ಮೇಲೆ ಆಕ್ರಮ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾಗಲೂ ಚೀನಾ ಆರೋಪವನ್ನು ತಳ್ಳಿ ಹಾಕಿ ಅಗತ್ಯಬಿದ್ದರೆ ನಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡಲು ಸಿದ್ಧ ಎಂದು ಎಚ್ಚರಿಸಿದ್ದರು.
ತಾಷ್ಕೆಂಟ್ ನಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ
ಭಾರತದ ಗಡಿಯಲ್ಲಿ ಭಾರತೀಯ ಸೇನಾ ನೆಲೆಯನ್ನು ಸ್ಥಾಪಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಚೀನಾ, ಅಂದೇ ಭಾರತದ ಭೂಭಾಗವನ್ನು ಅತಿಕ್ರಮಣ ಮಾಡುವ ಉದ್ದೇಶಹೊಂದಿತ್ತೆಂದು ತೋರುತ್ತದೆ. ಆದರೆ ಅಂದು ಚೀನಾಗೆ ತಕ್ಕ ಉತ್ತರ ನೀಡದೇ ಇದ್ದಿದ್ದರೆ, ಇಂದಿಗೆ ಭಾರತದ ಗಡಿ ಭಾಗದ ಅದೆಷ್ಟು ಭೂಮಿ ಚೀನಾ ಭೂಪಟದಲ್ಲಿರಬೇಕಿತ್ತೋ? ಹಾಗೆಯೇ ಅಂದು ಪಾಕಿಸ್ತಾನದ ವಿರುದ್ಧ ನಡೆದಿದ್ದ ಯುದ್ಧದ ನಂತರ ಮಾತನಾಡಿದ್ದ ಶಾಸ್ತ್ರಿ ಅವರು ಭಾರತ ಎಂದಿಗೂ ಶಾಂತಿಯನ್ನೇ ಪ್ರತಿಪಾದಿಸುತ್ತದೆ ಎಂದು ಹೇಳಿದ್ದರು. ಆದರೆ ಕಾರ್ಯವೈಖರಿಯಲ್ಲಿ ಮಾತ್ರ ಭಾರತವನ್ನು ಮುಟ್ಟಿದರೆ ತಟ್ಟದೇ ಬಿಡುವುದಿಲ್ಲ ಎಂಬ ಸಂದೇಶವನ್ನು ವಿರೋಧಿಗಳಿಗೆ ಮುಟ್ಟಿಸಿ ಶಾಂತಿ ಸೌಹಾರ್ದತೆ ಬಗ್ಗೆ ಬಗ್ಗೆ ಪ್ರಸ್ತಾಪಿಸಿದ್ದರು. ಈ ಮೂಲಕ ಭಾರತದ ಶಾಂತಿ ಪ್ರತಿಪಾದನೆಗೂ ಒಂದು ಅರ್ಥ ನೀಡಿದ್ದರು.