ನರ್ಸರಿ ತಂತ್ರಜ್ಞಾನ
ತೋಟಗಾರಿಕ ಬೆಳೆ ಅದರಲ್ಲೂ ಹಣ್ಣಿನ ಬೆಳೆ ಮತ್ತು ಅಲಂಕಾರಿಕ ಗಿಡಗಳಿಗೆ ದೇಶದ ಹಳ್ಳಿ ಮತ್ತು ಪಟ್ಟಣದಿಂದ ಬೇಡಿಕೆ ಹೆಚ್ಚಾಗುತ್ತಿದೆ. ಗುಣಮಟ್ಟದ ಗಿಡಗಳಿಗೆ ಬೇಡಿಕೆ ಹೆಚ್ಚಿದ್ದರಿಂದ ನರ್ಸರಿ ಗಿಡಗಳ ವ್ಯಾಪಾರದಲ್ಲಿ ಗಣನೀಯ ಬೆಳವಣಿಗೆಯಾಗಿದೆ. ನರ್ಸರಿ ಉತ್ಪಾದನೆಯ ಬೇಡಿಕೆಯು ತೋಟ, ಉದ್ಯಾನವನ ಅಥವಾ ಹೂ ತೋಟಗಳಿಗೆ ಸೀಮಿತವಾಗಿಲ್ಲ. ಈಗ ಬಹು ಮಹಡಿ ಕಟ್ಟಡ, ಕಚೇರಿ, ಉದ್ಯಮ, ವಾಣಿಜ್ಯ ಕಚೇರಿ, ಆಸ್ಪತ್ರೆ, ಹೊಟೇಲು, ನಗರ ರಸ್ತೆ ಬದಿ, ಮೇಲ್ಚಾವಣಿಗಳ ಅಲಂಕಾರಕ್ಕಾಗಿ ಸಸ್ಯಗಳ ಪ್ರವೇಶವಾಗಿದೆ. ಹಬ್ಬ ಹರಿದಿನಗಳಲ್ಲಿ ಇವುಗಳ ಬೇಡಿಕೆ ಹೆಚ್ಚುತ್ತದೆ. ಆದ್ದರಿಂದ ನರ್ಸರಿ ವ್ಯವಹಾರ ಹೆಚ್ಚಾಗಿ ನಗರ ಮತ್ತು ಪಟ್ಟಣದ ಆಸುಪಾಸಿನಲ್ಲಿ ಕೇಂದ್ರೀಕೃತವಾಗಿದೆ.
ನರ್ಸರಿಯಲ್ಲಿ ಸಸ್ಯಾಭಿವೃದ್ಧಿಗೆ ಸಾಕಷ್ಟು ಸಮಯ ಬೇಕಾಗುತ್ತದೆ. ತಾಯಿ ಗಿಡವನ್ನು ನಿರ್ಲಿಂಗ ಸಸ್ಯಾಭಿವೃದ್ಧಿ ಮತ್ತು ಬೀಜೋತ್ಪಾದನೆಗಾಗಿ ಬಳಸುತ್ತಾರೆ. ವಾರ್ಷಿಕ ಹೂ ಗಿಡಗಳನ್ನು ಬೀಜದಿಂದ ಉತ್ಪಾದಿಸಲಾಗುತ್ತದೆ. ಕೃಷಿ ವಾಯುಗುಣ, ಮಣ್ಣಿನ ವಿಧ , ಮಣ್ಣಿನ ರಸಸಾರ, ಸ್ಥಳ, ನೆಲೆ, ನೀರಿನ ವ್ಯವಸ್ಥೆ, ಬೇಡಿಕೆ, ನಿಪುಣ ಕೆಲಸಗಾರ ದೊರೆಯುವಿಕೆ ಮುಂತಾದವುಗಳ ಮೇಲೆ ನರ್ಸರಿ ಸ್ಥಾಪನೆ ಅವಲಂಬಿತವಾಗಿದೆ.
1.1 ಜಮೀನು
ನರ್ಸರಿ ಜಮೀನು ಅಭಿವೃದ್ಧಿಪಡಿಸುವುದು ಬಹುಮುಖ್ಯ. ಸಾಮಾನ್ಯವಾಗಿ ನರ್ಸರಿಯನ್ನು 4 ಭಾಗಗಳಾಗಿ ವಿಂಗಡಿಸಬಹುದು.
• ತಾಯಿಗಿಡಕ್ಕೆ ಬೇಕಾದ ಸ್ಥಳ.
• ಬೀಜೋತ್ಪಾದನೆಗಾಗಿ.
• ಹೂಗಿಡಗಳ ಉತ್ಪಾದನೆಗಾಗಿ.
• ಲಿಂಗೀಯ ಮತ್ತು ನಿರ್ಲಿಂಗೀಯವಾಗಿ ಉತ್ಪಾದಿಸಿದ ಸಸಿಗಳನ್ನು ಶೇಖರಿಸುವ ಸ್ಥಳ.
ಅಡ್ಡ ಮತ್ತು ಉದ್ದ ಉಳುಮೆಯಿಂದ ನರ್ಸರಿ ಜಮೀನನ್ನು ಸಮತಟ್ಟಾಗಿಸಬೇಕು.
1.1 ಜಮೀನು ಆಯ್ಕೆ: ಗಿಡ ಮಾರಾಟಗೊಳ್ಳುವ ಕೇಂದ್ರಗಳ ಸಮೀಪ ನರ್ಸರಿ ಸ್ಥಾಪಿಸಬೇಕು ಮತ್ತು ಸಾಗಾಣಿಕೆಯಲ್ಲಿ ಸಸಿಗಳಿಗೆ ಹಾನಿಯಾಗಬಾರದು. ಕಚ್ಛಾವಸ್ತುಗಳನ್ನು ಸಾಗಾಟ ಮಾಡಲು ಉತ್ತಮ ರಸ್ತೆಯ ಅನುಕೂಲತೆ ಇರಬೇಕು. ನರ್ಸರಿಯಲ್ಲಿ ನೀರಿನ ಮೂಲದ ಸೌಕರ್ಯವಿರಬೇಕು ಹಾಗು ಅಗತ್ಯ ಬಿದ್ದರೆ ನೀಲಗಿರಿ, ನೆಲ್ಲಿ, ಮಾವು ಮುಂತಾದ ಗಾಳಿ ತಡೆ ಮರಗಳನ್ನು ನೆರಳು ಮತ್ತು ರಕ್ಷಣೆಗಾಗಿ ಬೆಳೆಸಬೇಕು.
1.2 ಉತ್ಪಾದನಾ ಆಯ್ಕೆ: ಉತ್ಪಾದನಾ ಆಯ್ಕೆ ಮಾರುಕಟ್ಟೆ ಬೇಡಿಕೆ ಮೇಲೆ ಅವಲಂಬಿತವಾಗಿದೆ. ಮಾರುಕಟ್ಟೆ ವಿಸ್ತಾರ ಹೆಚ್ಚಿಸಲು ಕ್ಷೇತ್ರದಲ್ಲಿ ನಡೆಸಿದ ಅಧ್ಯಯನ ಸಹಾಯವಾಗುತ್ತದೆ. ಹಣ್ಣು ಹೂ, ಬಲ್ಬ್, ಗೆಡ್ಡೆ ಮುಂತಾದ ಗಿಡಗಳನ್ನು ಸಹ ನರ್ಸರಿಯಲ್ಲಿ ಬೆಳೆಸಬಹುದು.
1.3 ಸಸ್ಯಾಭಿವೃದ್ಧಿಯ ವಿಧಾನಗಳು : ಸಸಿಗಳನ್ನು ಬೀಜದ ಮುಖಾಂತರ ಅಥವಾ ನಿರ್ಲಿಂಗೀಯವಾಗಿ ಅಭಿವೃದ್ಧಿಪಡಿಸಲಾಗುತ್ತದೆ. ಕೆಲವು ವಿಧಾನಗಳನ್ನು ಈ ಕೆಳಗೆ ವಿವರಿಸಲಾಗಿದೆ.
1. ಬೀಜಗಳ ಮುಖಾಂತರ: ಬೀಜಗಳ ಮುಖಾಂತರ ಸಸ್ಯಾಭಿವೃದ್ಧಿ ಮಾಡುವುದು ಸಾಂಪ್ರಾದಾಯಕ ವಿಧಾನವಾಗಿದೆ. ಹೆಚ್ಚಿನ ವಾರ್ಷಿಕ ಧಾನ್ಯಗಳು, ಬೇಳೆಕಾಳು, ಕಾಡಿನ ಗಿಡಗಳನ್ನು ಬೀಜದ ಮೂಲಕ ಸಸ್ಯಾಭಿವೃದ್ಧಿ ಮಾಡಲಾಗುತ್ತದೆ. ಅನುಕೂಲಕರ ವಾತಾವರಣದಲ್ಲಿ ಬಿತ್ತನೆ ಮಾಡಿದರೂ ಮೊಳಕೆಯ ಪ್ರಮಾಣ ಶೇಕಡ 100ರಷ್ಟು ಇರುವುದಿಲ್ಲ. ಬೀಜದ ವಯಸ್ಸು, ಪ್ರಬುದ್ಧತೆ, ಸಾಮಥ್ರ್ಯ, ನೀರು, ಆಮ್ಲಜನಕದ ಪೂರೈಕೆ ಮತ್ತು ಉಷ್ಣಾಂಶ ಮುಂತಾದ ಅಂಶಗಳು ಬೀಜ ಮೊಳಕೆಯೊಡೆಯುವುದನ್ನುವುದನ್ನು ನಿರ್ಧರಿಸುತ್ತವೆ. ಸುಪ್ತಾವಸ್ಥೆ ಮತ್ತು ದಪ್ಪ ಸಿಪ್ಪೆಯ ಬೀಜವಾಗಿದ್ದರೆ ಬೀಜಗಳು ಬೇಗನೆ ಮೊಳಕೆಯೊಡೆಯಲಾರವು.
2. ನಿರ್ಲಿಂಗೀಯ ವಿಧಾನ: ಕಡ್ಡಿ, ಲೇಯರಿಂಗ್, ಬೇರ್ಪಡಿಸುವುದು, ಕಸಿ ಮತ್ತು ಗ್ರಾಪ್ಟಿಂಗ್ ವಿಧಾನಗಳ ಮೂಲಕ ಸಸ್ಯಗಳನ್ನು ನಿರ್ಲಿಂಗೀಯವಾಗಿ ಅಭಿವೃದ್ಧಿ ಪಡಿಸಬಹುದು. ವಿವಿಧ ಸಸ್ಯಗಳ ಭಾಗಗಳಾದ ಕೊಂಬೆ, ಬೇರು, ಎಲೆ, ಮಾರ್ಪಾಡು ಹೊಂದಿದ ಗೆಡ್ಡೆ, ಬೇರು ಕಾಂಡ, ರನ್ನರು ಮತ್ತು ಬಲ್ಬ್‍ಗಳನ್ನು ಸಸ್ಯಾಭಿವೃದ್ಧಿಗೆ ಬಳಸುತ್ತಾರೆ. ಇದು ಸುಲಭ, ಅಗ್ಗ ಮತ್ತು ಅನುಕೂಲಕರ ವಿಧಾನವಾಗಿದೆ. ತಾಯಿ ಗಿಡದಲ್ಲಿರುವಾಗಲೆ ಕೊಂಬೆಗಳಿಗೆ ಬೇರು ಬರಿಸಿ ನಂತರ ಬೇರ್ಪಡಿಸುವುದನ್ನು ಲೇಯರಿಂಗ್ ವಿಧಾನವೆಂದು ಕರೆಯುತ್ತಾರೆ. ಕೆಲವು ಸಸ್ಯಗಳಿಗೆ ನೆಲದಲ್ಲಿ ಅನೆಕ ಕಾಂಡಗಳಿದ್ದು, ಬೇರುಗಳನ್ನು ಹೊಂದಿರುತ್ತದೆ. ಇಂತಹ ಕಾಂಡಗಳನ್ನು ಬೇರಿನೊಂದಿಗೆ ಬೇರ್ಪಡಿಸಿ ಹೊಸ ಸಸಿಗಳಾಗಿ ಬೆಳೆಸಬಹುದು. ಇನ್ನು ಕೆಲವು ಗಿಡದ ಭಾಗಗಳು ಪಕ್ವವಾದಾಗ ಬೇರು ಇದ್ದು ಅಥವಾ ಇಲ್ಲದೆ ತಾಯಿ ಗಿಡದಿಂದ ಬೇರೆಯಾಗುತ್ತವೆ. ಇಂತಹ ಭಾಗಗಳನ್ನು ಹೊಸ ಗಿಡಗಳಾಗಿ ಅಭಿವೃದ್ಧಿಪಡಿಸುತ್ತಾರೆ. ಕಂದು, ಬೇರುಕಾಂಡ, ಗೆಡ್ಡೆ. ರನ್ನರು, ಬಲ್ಬ್‍ಗಳನ್ನು ಸಸ್ಯಾಭಿವೃದ್ಧಿಯಲ್ಲಿ ಉಪಯೋಗಿಸುತ್ತಾರೆ. ತೋಟಗಾರಿಕೆ ಬೆಳೆಗಳಲ್ಲಿ ಗ್ರಾಫ್ಟಿಂಗ್ ವಿಧಾನ ಹೆಚ್ಚು ರೂಢಿಯಲ್ಲಿದೆ. ಇನಾರ್ಚಿಂಗ್, ಸೈಡ್ ಗ್ರಾಫ್ಟಿಂಗ್, ಸ್ಯಾಡಲ್ ಗ್ರಾಫ್ಟಿಂಗ್, ಪ್ಲ್ಯಾಟ್ ಗ್ರಾಫ್ಟಿಂಗ್, ಕ್ಲೆಫ್ಟ್ ಗ್ರಾಫ್ಟಿಂಗ್ ಹೀಗೆ ಹಲವಾರು ಗ್ರಾಫ್ಟಿಂಗ್ ವಿಧಾನಗಳಿವೆ. ಹಣ್ಣಿನ ಮತ್ತು ಹೂವಿನ ಬೆಳೆಗಳಲ್ಲಿ ಕಸಿ ವಿಧಾನ ಜನಪ್ರಿಯವಾಗಿದೆ. ಕಸಿ ವಿಧಾನದಲ್ಲಿ ಅನೇಕ ವಿಧಾನಗಳಿದ್ದರೂ ‘ಖಿ’ ಅಥವಾ ಶೀಲ್ಡು ಕಸಿ ಹೆಚ್ಚಾಗಿ ಬಳಕೆಯಲ್ಲಿವೆ. ಅಂಗಾಂಶ ಕೃಷಿ ಇನ್ನೊಂದು ಸಸ್ಯಾಭಿವೃದ್ಧಿ ವಿಧಾನ. ಅತ್ಯಂತ ವೇಗದ ಸಸ್ಯಾಭಿವೃದ್ಧಿ ವಿಧಾನವಾದರೂ ಕೌಶಲ್ಯದ ಅಗತ್ಯವಿದೆ.
1.4 ತಾಯಿ ಗಿಡ ಕ್ಷೇತ್ರದ ಸ್ಥಾಪನೆ: ತಾಯಿ ಗಿಡದ ಕೇತ್ರ ನರ್ಸರಿಯ ಅತ್ಯಂತ ಮುಖ್ಯ ಭಾಗವಾಗಿದೆ. ಈ ಗಿಡಗಳನ್ನು ನೆಡುವ ಮೊದಲ ತಳಿ ಮತ್ತು ಗುಣಮಟ್ಟದ ಕಡೆಗೆ ಹಚ್ಚಿನ ಗಮನಹರಿಸಬೇಕು.
ಕಟ್ಟಡ: ನರ್ಸರಿಯಲ್ಲಿ ಕೆಲಸ ಮಾಡಲು ಮತ್ತು ಸಸಿ ಉತ್ಪಾದಿಸಲು ಅನೇಕ ರಚನೆ ಅಥವಾ ಕಟ್ಟಡಗಳ ಅವಶ್ಯಕತೆಯಿದೆ.
1. ಕೆಲಸದ ಚಪ್ಪರ: ನರ್ಸರಿಯಲ್ಲಿ ಕೆಲಸ ಮಾಡುವಾಗ ಮಳೆ ಮತ್ತು ಬಿಸಿಲಿನಿಂದ ರಕ್ಷಣೆ ಪಡೆಯಲು ಚಪ್ಪರದ ಅವಶ್ಯಕತೆಯಿದೆ. ಇದು ತಾತ್ಕಾಲಿಕ ಅಥವಾ ಶಾಶ್ವತವಾಗಿ ಇರುವಂತದ್ದು ಆಗಿರಬಹುದು. ಶಾಶ್ವತ ಕಟ್ಟಡ ಹೆಚ್ಚು ವೆಚ್ಚದಾಯಕ. ಸ್ಥಳೀಯವಾಗಿ ದೊರೆಯುವ ಮರ, ಬಿದಿರು, ಮತ್ತು ಹುಲ್ಲನ್ನು ಬಳಸಿ ಚಪ್ಪರ ನಿರ್ಮಿಸುವುದು ಅಗ್ಗವಾಗಿದೆ.
2. ಹಸಿರು ಮನೆ: ಇದು ನರ್ಸರಿಯ ಒಂದು ಪ್ರಮುಖ ಅಂಗ. ಗಾತ್ರ ಆಕಾರ, ಕಟ್ಟಡಕ್ಕೆ ಬಳಸಿದ ವಸ್ತುಗಳನ್ನು ಆಧರಿಸಿ ಅನೇಕ ವಿಧದ ಹಸಿರು ಮನೆಗಳಿವೆ. ಅತೀ ಅಗ್ಗದ ಹಸಿರು ಮನೆಗಳನ್ನು ಸ್ಥಳೀಯವಾಗಿ ದೊರೆಯುವ ಬಿದಿರು, ಹಲಗೆ ಮತ್ತು ಪ್ಲಾಸ್ಟಿಕ್ ಹಾಳೆ ಬಳಸಿ ನಿರ್ಮಿಸಬಹುದು.
3. ನೆಟ್ ಹೌಸ್: ಇದು ಸಹ ನರ್ಸರಿಗೆ ಅಗತ್ಯವಾದ ರಚನೆಯಾಗಿದೆ. ಎಳೆ ಮತ್ತು ನೆರಳನ್ನು ಬಯಸುವ ಸಸಿಗಳನ್ನು ಅಭಿವೃದ್ಧಿ ಪಡಿಸಲು ಬಳಸುವ ರಚನೆ.
4. ಭಂಡಾರ ಮತ್ತು ಕಚೇರಿ: ವಸ್ತುಗಳನ್ನಿಟ್ಟು ಕೊಳ್ಳಲು ಮತ್ತು ಕಚೇರಿ ಕೆಲಸ ನಿರ್ವಹಿಸಲು ಸ್ಥಳೀಯವಾಗಿ ದೊರೆಯುವ ವಸ್ತುಗಳಿಂದ ನಿರ್ಮಿಸಿದ ರಚನೆಯಾಗಿದೆ.
5. ಬೇಲಿ: ನರ್ಸರಿ ಸಸಿಗಳ ರಕ್ಷಣೆಗಾಗಿ ಬೇಲಿ ಗಿಡದಿಂದ ಅಥವಾ ಮುಳ್ಳು ತಂತಿಯಿಂದ ನಿರ್ಮಿಸಿದ ಬೇಲಿಯ ಅವಶ್ಯಕತೆಯಿದೆ.
6. ನೀರಿನ ಮೂಲ: ಯಾವಾಗಲೂ ದೊರೆಯುವ ನೀರಿನ ಮೂಲವಿರಬೇಕು. ಇದು ಬಾವಿ, ಕೊಳವೆ ಬಾವಿ ಅಥವಾ ಕೆರೆಯೂ ಆಗಿರಬಹುದು.
2. ನಿರ್ವಹಣೆ
2.1 ಬೀಜ ಮತ್ತು ಸಸಿಗಳ ಪಾತಿ : ಹೂ ಗಿಡಗಳನ್ನು ಉತ್ಪಾದಿಸಲು ಶಾಶ್ವತ ಅಥವಾ ತಾತ್ಕಾಲಿಕ ಪಾತಿಗಳ ಅವಶ್ಯಕತೆ ಇದೆ. ನೆಲಮಟ್ಟದಿಂದ 0.5 ರಿಂದ 0.75 ಮೀ. ಎತ್ತರ ಮತ್ತು 0.75 ಮೀ. ನಿಂದ 1 ಮೀಟರ್ ಅಗಲವಾಗಿ ನಿರ್ಮಿಸಬೇಕು. ಉದ್ದ ಅನುಕೂಲಕ್ಕೆ ತಕ್ಕಂತಿರುತ್ತದೆ. ಸಸಿಗಳನ್ನು ಸಂಗ್ರಹಿಸಿಡಲು ಮತ್ತು ಮಾರಾಟ ಮಾಡಲು ಸಸಿ ಪಾತಿಗಳ ಅವಶ್ಯಕತೆ ಇದೆ.
2.2 ತಾಯಿಗಿಡಗಳ ಸಂಗ್ರಹ ಮತ್ತು ಸ್ಥಾಪನೆ : ನರ್ಸರಿಯಲ್ಲಿ ತಾಯಿಗಿಡಗಳ ಸ್ಥಾಪನೆ ಬಹಳ ಪ್ರಮುಖವಾಗಿದೆ. ತಾಯಿ ಗಿಡದಲ್ಲಿ ತಳಿಯ ಶುದ್ಧತೆಯಿರಬೇಕು ಮತ್ತು ಗುಣಮಟ್ಟದ್ದಾಗಿರಬೇಕು. ಅತೀ ಉತ್ತಮ ಗಿಡಗಳ ಸಂಗ್ರಹಣೆ ಒಂದು ನಿರಂತರ ಕೆಲಸ. ತಾಯಿಗಿಡಗಳನ್ನು ಉತ್ತಮ ಪೋಷಣೆಯಿಂದ ಹುಲುಸಾಗಿ ಬೆಳೆಸುವುದರಿಂದ, ಹೆಚ್ಚಿನ ಸಸ್ಯಗಳನ್ನು ನರ್ಸರಿಯಲ್ಲಿ ಉತ್ಪಾದಿಸಬಹುದು.
2.3 ಒಣಗಿದ ಶುದ್ಧೀಕರಿಸಿದ ಮಣ್ಣು ಮತ್ತು ಕಾಂಪೋಷ್ಟು ಗೊಬ್ಬರದ ಸಂಗ್ರಹ : ಮಳೆಗಾಲ ಮತ್ತು ಚಳಿಗಾಲದಲ್ಲಿ ಸಸಿಗಳನ್ನು ಉತ್ಪಾದಿಸಲು ಮಣ್ಣು ಮತ್ತು ಗೊಬ್ಬರವನ್ನು ಬೇಸಿಗೆಯಲ್ಲಿ ಸಂಗ್ರಹಿಸಲಾಗುವುದು. ಮಳೆಗಾಲದಲ್ಲಿ ಒಣಗಿದ ಮಣ್ಣು ಮತ್ತು ಗೊಬ್ಬರ ದೊರೆಯಲಾರದು.
2.4 ಹೂ ಬೀಜಗಳ ಉತ್ಪಾದನೆ : ಹೂಗಳ ಬೀಜ ಉತ್ಪಾದಿಸುವುದು ಅತ್ಯಂತ ನಿಪುಣತೆಯ ಕೆಲಸ. ಬೀಜೋತ್ಪಾದನೆಯಲ್ಲಿ ಹೆಚ್ಚಿನ ಎಚ್ಚರಿಕೆ ಅಗತ್ಯ. ಬೀಜದ ಮೊಳಕೆಯ ಪ್ರಮಾಣ, ಬೆಳವಣಿಗೆಯ ಗತಿಯನ್ನು ಪರೀಕ್ಷಿಸಬೇಕು.
2.5 ಉತ್ಪಾದಿಸಿದ ಸಸಿಗಳ ಸಂಗ್ರಹ : ಉತ್ಪಾದಿಸಿದ ಸಸಿಗಳನ್ನು ಬೆಳವಣಿಗೆ ಮತ್ತು ಗಟ್ಟಿಯಾಗಿಸಲು ನರ್ಸರಿ ಪಾತಿಗಳಲ್ಲಿ ನೆಡಲಾಗುತ್ತದೆ. ಈ ಪಾತಿಗಳಿಗೆ ಸ್ವಲ್ಪ ನೆರಳಿನ ವ್ಯವಸ್ಥೆ ಇರುತ್ತದೆ.
2.6 ಗೊಬ್ಬರ : ಗೊಬ್ಬರವನ್ನು ಎಚ್ಚರಿಕೆಯಿಂದ ಉಪಯೋಗಿಸಬೇಕು. ಹುಲುಸಾಗಿ ಬೆಳೆದ ಗಿಡಗಳು ಖರೀದಿದಾರರನ್ನು ಆಕರ್ಷಿಸುತ್ತದೆ. ಹೆಚ್ಚು ಗೊಬ್ಬರ ಬಳಸಿದರೆ ಸಂಗ್ರಹಣೆಯಲ್ಲಿ ತೊಡಕಾಗುತ್ತದೆ.
2.7 ನೀರಾವರಿ : ನೀರನ್ನು ಗಿಡದ ಅಗತ್ಯತೆಗೆ ತಕ್ಕಂತೆ ಒದಗಿಸಬೇಕು. ನರ್ಸರಿಗೆ ತನ್ನದೇ ಆದ ನೀರಿನ ಮೂಲವಿರಬೇಕು.
2.8 ಬಸಿಕಾಲುವೆ : ಗಿಡದ ಬೆಳವಣಿಗೆಗಾಗಿ ಬಸಿಕಾಲುವೆಗಳನ್ನು ಪಾತಿಗಳ ಮಧ್ಯೆ ಮತ್ತು ನರ್ಸರಿಯ ಸುತ್ತಲೂ ನಿರ್ಮಿಸಬೇಕು. ನರ್ಸರಿ ಪಾತಿಯನ್ನು ಸ್ವಲ್ಪ ಇಳಿಜಾರಾಗಿ ನಿರ್ಮಿಸಬೇಕು. ಕುಂಡ, ಪಾತಿ ಮತ್ತು ಅದರ ಸುತ್ತಲೂ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು.
2.9 ಸಸ್ಯ ಸಂರಕ್ಷಣೆ : ರೋಗ ಮತ್ತು ಕೀಟಬಾಧೆಗೆ ಸದಾ ವೀಕ್ಷಣೆ ಅಗತ್ಯ. ತಾಯಿ ಗಿಡಕ್ಕೆ ರೋಗದ ಬಾಧೆಯಿದ್ದರೆ ಅದರಿಂದ ಉತ್ಪಾದಿಸಿದ ಗಿಡಗಳಲ್ಲಿ ರೋಗ ಕಾಣಿಸಿಕೊಳ್ಳುತ್ತದೆ. ರೋಗ ಮತ್ತು ಕೀಟಬಾಧೆ ಕಂಡುಬಂದೊಡನೆ ಸಸ್ಯಸಂರಕ್ಷಣಾ ಕ್ರಮವನ್ನು ಕೈಗೊಳ್ಳಬೇಕು.
2.10 ಕೊಯ್ಲು : ಬೀಜ ಮತ್ತು ಬಲ್ಬ್‍ಗಳನ್ನು ಸರಿಯಾದ ಹಂತದಲ್ಲಿ ಕೊಯ್ಲು ಮಾಡಬೇಕು. ಪಕ್ವವಾದ ಬೀಜಗಳು ಮಾತ್ರ ಕೊಯ್ಲು ಮಾಡಲು ಅರ್ಹವಾಗಿರುತ್ತದೆ. ಹಗುರ ಬೀಜಗಳ ಹಣ್ಣುಗಳನ್ನು ಬೆಳೆಯುವ ಮೊದಲು ಮಸ್ಲಿನ್ ಬಟ್ಟೆಯಿಂದ ಮುಚ್ಚಿಡಬೇಕು (ಕ್ಯಾಲುಂಡುಲಾ, ಬಾಲ್ಸಮ್). ಇವು ಮುಟ್ಟಿದಾಗ ಅಥವಾ ಗಾಳಿಯಿಂದ ಸಿಡಿಯುತ್ತವೆ. ಈ ರೀತಿಯಲ್ಲಿ ಬೀಜ ಹಾಳಾಗುವುದನ್ನು ತಡೆಯಬೇಕು. ಗೆಡ್ಡೆ ಮತ್ತು ಬಲ್ಬ್‍ಗಳನ್ನು ಅದರ ಎಲೆ ಹಳದಿಯಾದಾಗ ಅಥವಾ ಒಣಗಿದಾಗ ಭೂಮಿಯಿಂದ ಹಾನಿಯಾಗದಂತೆ ಅಗೆದು ತೆಗೆದು ಸಂಗ್ರಹಿಸಬೇಕು. ಪೊದರು ಮತ್ತು ಮರಗಳ ಸಸಿಗಳ ಎಲೆಗಳನ್ನು ಸ್ವಲ್ಪ ದಿನ ಮೊದಲೆ ಕತ್ತರಿಸಿದ ನಂತರ ಮಣ್ಣಿನಿಂದ ಮೇಲೆ ತಗೆಂiÀiಲಾಗುವುದು. ಇದಕ್ಕಾಗಿ ರಾಸಾಯನಿಕ ಬಳಕೆ, ನೀರು ಹಾಕದಿರುವುದು ಅಥವಾ ಕೈಯಿಂದ ಎಲೆ ಕೀಳುವುದು ಮುಂತಾದ ವಿಧಾನಗಳನ್ನು ಅನುಸರಿಸಬಹುದು. ದೂರದ ಊರಿಗೆ ಕಳುಹಿಸುವ ಗಿಡಗಳ ಬೇರುಗಳನ್ನು ಮಣ್ಣಿನ ಮುದ್ದೆಯಲ್ಲಿ ಕಟ್ಟಿ ಸಾಗಿಸಲಾಗುವುದು.
2.11 ಪ್ಯಾಕಿಂಗ್ ಮತ್ತು ನಿರ್ವಹಣೆ : ಬೀಜಗಳನ್ನು ಶುದ್ಧಮಾಡಿ ಗಾಜಿನ ಕುಪ್ಪಿಯಲ್ಲಿ ಶೇಖರಿಸಲಾಗುವುದು. ಶೇಖರಿಸುವ ಮೊದಲು ಬೀಜಗಳನ್ನು ನೆರಳಿನಲ್ಲಿ 2-3 ದಿನ ಒಣಗಿಸಿ ಮತ್ತು ಕೆಲವು ದಿನ ಬಿಸಿಲಿನಲ್ಲಿ ಒಣಗಿಸಬೇಕು. ಹೊಟ್ಟಿರುವ ಬೀಜವನ್ನು ಹೊಟ್ಟು ಬಿಡಿಸಿ ಶೇಖರಿಸಲಾಗುವುದು. ಪ್ಯಾಕ್ ಮಾಡುವಾಗ ಸಸಿಗಳನ್ನು ಹೆಚ್ಚು ಒತ್ತೊತ್ತಾಗಿ ಅಥವಾ ಸಡಿಲವಾಗಿ ತುಂಬಿಸಬಾರದು. ಗಿಡಗಳ ಸಂದುಗಳಿಗೆ ಹುಲ್ಲು, ಒಣಹುಲ್ಲು ಇನ್ನಿತರ ವಸ್ತುಗಳನ್ನಿಟ್ಟು ಗಟ್ಟಿ ಮಾಡಬೇಕು. ದೂರದ ಊರಿಗೆ ಸಾಗಿಸುವಾಗ ತೇವಾಂಶ ಇರುವ ಮಣ್ಣಿನ ಮುದ್ದೆಯನ್ನು ಪಾಚಿಯಲ್ಲಿ ಸುತ್ತಬೇಕು. ಉತ್ತಮ ಬೇರಿನ ವ್ಯವಸ್ಥೆ ಹೊಂದಿರುವ ಸಸಿಗಳನ್ನು ಆರಿಸಿ ದೂರದ ಊರಿಗೆ ಸಾಗಾಟ ಮಾಡಬೇಕು. ಗೆಡ್ಡೆ, ಬಲ್ಬ್ ಮತ್ತು ಬೇರುಕಾಂಡಗಳು ನಿರ್ವಹಣೆಯ ಒತ್ತಡವನ್ನು ಸಹಿಸಿಕೊಳ್ಳಬಲ್ಲವು. ತೇವಾಂಶ ಹಾಳಾಗದೆ ಇರಲು ಪಾಚಿಯಲ್ಲಿ ಸುತ್ತಿ, ಪ್ಲಾಸ್ಟಿಕ್ ಚೀಲದಲ್ಲಿರಿಸಿ, ಕಾರ್ಡ್‍ಬೋರ್ಡ್ ಪೆಟ್ಟಿಗೆಯಲ್ಲಿಟ್ಟು ಸಾಗಿಸಲಾಗುತ್ತದೆ.
2.12 ಸಂಗ್ರಹಣೆ: ಬೀಜಗಳನ್ನು ಬೆಚ್ಚನೆಯ ಸ್ಥಳ ಅಥವಾ ಡೆಸಿಕೇಟರುಗಳಲ್ಲಿ ಶೇಖರಿಸಿಡಲಾಗುತ್ತದೆ. ಸಸಿಗಳನ್ನು ನೆರಳಿನಲ್ಲಿಡಬೇಕು. ಬಲ್ಬ್, ಗೆಡ್ಡೆಗಳನ್ನು ಒಣ ಮರಳಿನಲ್ಲಿ ಒಂದೇ ಪದರದಲ್ಲಿ ಅಥವಾ ಮರದ ಹಲಗೆಯ ಮೇಲೆ ಅಥವಾ ಕಪಾಟುಗಳಲ್ಲಿ ಶೇಖರಿಸಿಡಬೇಕು. ಕೋಣೆಯಲ್ಲಿ ಗಾಳಿಯಾಡುವಂತಿರಬೇಕು ಮತ್ತು ಉಷ್ಣಾಂಶ ಹಾಗು ಆದ್ರ್ರತೆ ಕಮ್ಮಿ ಇರಬೇಕು. ಶೇಖರಣೆಯ ಮೊದಲು ಶಿಲೀಂದ್ರನಾಶಕ ಮತ್ತು ಕೀಟನಾಶಕಗಳಿಂದ ಸಂಸ್ಕರಿಬೇಕು.
2.13 ಮಾರಾಟ : ನರ್ಸರಿಯಲ್ಲಿ ಸಸಿಗಳ ಮಾರಾಟ ಅಂತಿಮ ಮತ್ತು ಪ್ರಮುಖ ಘಟ್ಟವಾಗಿದೆ. ಆದ್ದರಿಂದ ಗುಣಮಟ್ಟದ ಹುಲುಸಾಗಿ ಬೆಳೆದ ಗಿಡಗಳನ್ನು ಬೆಳೆದರೆ ಖರೀದಿದಾರರನ್ನು ಆಕರ್ಷಿಸುತ್ತವೆ. ಸಸಿಗಳು ರೋಗ ಹಾಗು ಕೀಟಬಾಧೆಯಿಂದ ಮುಕ್ತವಾಗಿರಬೇಕು. ಮತ್ತು ವೇಗವಾಗಿ ಬೆಳೆಯುವಂತ ಸಸಿಗಳಾಗಿರಬೇಕು.
2.14 ರಫ್ತು : ನರ್ಸರಿ ಉತ್ಪಾದನೆಗಳನ್ನು ರಫ್ತು ಮಾಡುವ ಅವಕಾಶ ಹೇರಳವಾಗಿದೆ. ಬೀಜ, ಗೆಡ್ಡೆ, ಗುಪ್ತಕಾಂಡ, ಪಾಪಸುಕಳ್ಳಿ, ಹೂಗಿಡಗಳು, ಅಲಂಕಾರಿಕ ಎಲೆಯ ಗಿಡಗಳು, ಬೇರುರಹಿತ ಕಡ್ಡಿಗಳು ಮತ್ತು ಕತ್ತರಿಸಿದ ಹೂಗಳನ್ನು ಆಸ್ಟ್ರೇಲಿಯಾ, ನೆದರ್‍ಲ್ಯಾಂಡ್, ಅರಬ್‍ರಾಷ್ಟ್ರ, ಜಪಾನು, ಇಂಗ್ಲೆಂಡ್, ಸಿಂಗಾಪುರ, ಜರ್ಮನಿ, ನ್ಯೂಜಿಲ್ಯಾಂಡ್ ಮುಂತಾದ ರಾಷ್ಟ್ರಗಳಿಗೆ ಭಾರತದಿಂದ ರಫ್ತು ಮಾಡಲಾಗುತ್ತದೆ.
3.0 ಜಮೀನು ಹಂಚಿಕೆ : ಅರ್ಧ ಎಕರೆ ನರ್ಸರಿ ಪ್ರದೇಶದಲ್ಲಿ ವಿವಿಧ ಉದ್ಧೇಶಗಳಿಗಾಗಿ ನಿಗದಿಪಡಿಸಿದ ಸ್ಥಳಗಳ ಪಟ್ಟಿ ಈ ಕೆಳಕಂಡಂತಿವೆ.