ಸಸ್ಯಾಭಿವೃದ್ಧಿ Horticulture in Coorg ತೋಟಗಾರಿಕೆ ಕೃಷಿ

Reading Time: 20 minutes

ಸಸ್ಯಾಭಿವೃದ್ಧಿ

ಸಸ್ಯಕ್ಷೇತ್ರ ಗಿಡಗಳ ಅಭಿವೃದ್ಧಿ ಮತ್ತು ನಿರ್ವಹಣೆಗಾಗಿ ಇರುವ ಒಂದು ಸ್ಥಳ. ಹೆಚ್ಚಿನ ತೋಟಗಾರಿಕೆ ಬೆಳೆಗಳ ಸಸಿಗಳನ್ನು ಸಸ್ಯಾಗಾರದಲ್ಲಿ ಅಭಿವೃದ್ಧಿ ಪಡಿಸಿ ಜಮೀನಿನಲ್ಲಿ ನೆಡಲಾಗುತ್ತದೆ ಸಸ್ಯಕ್ಷೇತ್ರದಲ್ಲಿ ಬೀಜದ ಮೊಳಕೆ ಜಾಸ್ತಿ ಇರುತ್ತದೆ ಹಾಗು ಎಳೆ ಸಸಿಗಳು ಬೇಗನೆ ಸ್ಥಿರಗೊಳ್ಳುತ್ತವೆ. ಸಮಯ, ಸ್ಥಳ ಮತ್ತು ಕಾರ್ಮಿಕರ ಉಳಿತಾಯವಾಗುತ್ತದೆ ಮತ್ತು ಸಸಿಗಳ ನಿರ್ವಹಣೆ ಅತೀ ಸುಲಭ. ಸಸ್ಯಾಗಾರ ಸ್ಥಾಪಿಸಲು ಸಸ್ಯಾಭಿವೃದ್ಧಿ ವಿಧಾನ, ಸಂಪನ್ಮೂಲಗಳಾದ ಸ್ಥಳ, ತಾಯಿಗಿಡ, ಸಸ್ಯಾಭಿವೃದ್ದಿಯ ಕಟ್ಟಡಗಳು, ಬೆಳೆಯುವ ಮಾಧ್ಯಮ, ತೊಟ್ಟಿಗಳಿಗೆ ಬೇಕಾದ ಮಿಶ್ರಣ, ಸಸ್ಯಾಭಿವೃದ್ದಿ ಸಲಕರಣೆಗಳ ಜಾÐನ ಅಗತ್ಯವಾಗಿರಬೇಕು.
ತಾಯಿ ಗಿಡದಿಂದ ಅಥವಾ ಕೋಶದಿಂದ ಒಂದು ನಿಗದಿತ ಸಮಯದಲ್ಲಿ ಸಸಿಗಳನ್ನು ಉತ್ಪಾದನೆ ಮಾಡುವ ವಿಧಾನವನ್ನು ಸಸ್ಯಾಭಿವೃದ್ದಿ ಎಂದು ಕರೆಯುತ್ತಾರೆ. ತಾಯಿ ಗಿಡದಲ್ಲಿರುವ ಉತ್ತಮ ಗುಣಗಳನ್ನು ಹೊಂದಿದ ಸಂತತಿಯನ್ನು ಪಡೆಯುವುದೇ ಸಸ್ಯಾಭಿವೃದ್ಧಿಯ ಮೂಲ ಉದ್ಧೇಶ ಸಸ್ಯಾಭಿವೃದ್ಧಿಯು ತಳಿ, ಪ್ರಾಕಾರ, ವಿಧಾನ, ವಾಯುಗುಣ ಮತ್ತು ಬೆಳೆಯುವ ಗುಣಗಳನ್ನು ಅವಲಂಬಿಸಿದೆ. ಸಾಧಾರಣವಾಗಿ ಲಿಂಗೀಯ ಮತ್ತು ನಿರ್ಲೀಂಗೀಯ ಮತ್ತು ಸಾಂಪ್ರದಾಯಕ ವಿಧಾನಗಳ ಮೂಲಕ ಸಸ್ಯಾಭಿವೃದ್ಧಿ ಮಾಡುತ್ತಾರೆ ಇತ್ತೀಚೆಗೆ ಆಧುನಿಕ ತಂತ್ರಜ್ಞಾನ ಬಳಸಿ ಅಧಿಕ ಸಂಖೈಯಲ್ಲಿ ಸಸ್ಯಗಳನ್ನು ಉತ್ಪಾದಿಸುವುದು ಸಾಧ್ಯವಾಗಿದೆ.
ಬೀಜದಿಂದ ಸಸ್ಯಾಭಿವೃದ್ಧಿ : ಬೀಜ ಬಿತ್ತಿ ಸಸಿಗಳನ್ನು ಉತ್ಪಾದಿಸಲಾಗುತ್ತದೆ. ಹೊಸತಳಿಗಳ ಉತ್ಪಾದನೆ ಬೀಜದ ಮೂಲಕವೇ ಆಗುತ್ತದೆ. ಪಪಾಯದಂತ ಕೆಲವು ಹಣ್ಣಿನ ಬೆಳೆಗಳಲ್ಲಿ ಇದು ಜನಪ್ರಿಯ ವಿಧಾನವಾಗಿದೆ. ಬೀಜದಿಂದ ಬೆಳೆಸಿದ ಗಿಡಗಳಿಗೆ ಸಧೃಡ ಬೇರುಗಳಿರುತ್ತವೆ. ನಂಜುರೋಗವು ಬೀಜದ ಮುಖಾಂತರ ಹರಡುವುದಿಲ್ಲವಾದ್ದರಿಂದ ಬೀಜದಿಂದ ಉತ್ಪತ್ತಿಯಾದ ಗಿಡ ನಂಜುರೋಗ ಮುಕ್ತವಾಗಿದೆ. ಫಲಬಿಡಲು ನಿರ್ಲೀಂಗೀಯವಾಗಿ ಅಭಿವೃದ್ಧಿ ಪಡಿಸಿದ ಗಿಡಗಳಿಗಿಂತ ಹೆಚ್ಚು ಸಮಯ ತಗಲುತ್ತದೆ ಮತ್ತು ತಾಯಿಗಿಡದಲ್ಲಿರುವ ಎಲ್ಲಾ ಗುಣಗಳನ್ನು ಹೊಂದಿರುವುದಿಲ.್ಲ ಹೆಚ್ಚಾಗಿ ಬೀಜವನ್ನು ಬೇರುಗಿಡ ಬೆಳೆಸಲು ಉಪಯೋಗಿಸುತ್ತಾರೆ. ಕೆಲವು ಬೀಜಗಳಲ್ಲಿ ದಪ್ಪವಾದ ಹೊರಪೊರೆ ಹೊಂದಿ ಸುಪ್ತಾವಸ್ಥೆಯಲ್ಲಿರುತ್ತದೆ. ಬೆಳೆದಿರದ ಭ್ರೂಣ, ಬೆಳವಣಿಗೆಗೆ ಪೂರಕವಾದ ಧಾತು, ಬೆಳವಣಿಗೆ ಕುಂಠಿತಗೊಳಿಸುವ ಧಾತುಗಳಿಂದ ಬೀಜಗಳು ಸರಿಯಾಗಿ ಮೊಳಕೆಯೊಡೆಯುದಿಲ್ಲ. ಗಾಯಗೊಳಿಸುವುದು, ಪದರ ಪದರವಾಗಿ ಅಣಿಗೊಳಿಸುವುದು ಮತ್ತು ರಾಸಾಯನಿಕದ ಉಪಚಾರದಿಂದ ಬೀಜಗಳು ಸುಪ್ರಾವಸ್ಥೆಯಿಂದ ಹೊರಬಂದು ಮೊಳಕೆಯ ಪ್ರಮಾಣ ಹೆಚ್ಚುತ್ತದೆ. ಕಡಿಮೆ ತಾಪಮಾನದ ತೇವಾಂಶವಿರುವ ಮರಳಿನಲ್ಲಿ ಬೀಜಗಳನ್ನು ಪದರ ಪದರವಾಗಿ ಅಣಿಗೊಳಿಸುವುದನ್ನು ಸ್ಟ್ರಾಟಿಫಿಕೇಷನ್ ಎಂದು ಕರೆಯುತ್ತಾರೆ. ಗಾಯಗೊಳಿಸುವುದರಿಂದ ಬೀಜದ ಪೊರೆಯನ್ನು ಯಾಂತ್ರಿಕವಾಗಿ ಸಡಿಲಗೊಳಿಸಬಹುದು ಅಥವಾ ಪ್ರಬಲ ಆಮ್ಲದ ಉಪಚಾರದಿಂದ ನೀರು ಹಾಗು ಅನಿಲಗಳು ಒಳಸೇರುವಂತೆ ಮಾಡಬಹುದು. ಜಿಬರ್ಲಿಕ್ ಆಮ್ಲ, ಥೈಯೋಯೂರಿಯ ಅಥವಾ ಪೊಟಾಷಿಯಂ ನೈಟ್ರೇಟ್ ರಾಸಾಯನಿಕಗಳು ಸಹ ಬೀಜದ ಮೊಳಕೆಯ ಪ್ರಮಾಣವನ್ನು ಹೆಚ್ಚುಮಾಡುತ್ತದೆ. ಮೊಳಕೆಯನ್ನು ಕುಂಠಿತಗೊಳಿಸುವ ಧಾತುಗಳಿದ್ದರೆ ಬೀಜವನ್ನು ನೀರಿನಲ್ಲಿ ನೆನಸಬೇಕು. ಬೀಜದಿಂದ ಗೋಚರಿಸಿದ ಸಸಿಯನ್ನು ಮೊಳಕೆಯೊಡೆಯುವುದು ಎಂದು ಕರೆಯುತ್ತಾರೆ. ಮೊಳಕೆಯೊಡೆಯಲು ಬೀಜ ಸಕ್ರೀಯವಾಗಿರಬೇಕು ಮತ್ತು ಅನುಕೂಲ ವಾತಾವರಣ ಇರಬೇಕು.
ನಿರ್ಲಿಂಗೀಯ ಸಸ್ಯಾಭಿವೃದ್ದಿ
ಬೀಜದಿಂದ ಹೊರತು ಪಡಿಸಿ, ಸಸ್ಯದ ಇತರ ಭಾಗಗಳಿಂದ ಸಸಿಗಳನ್ನು ಉತ್ಪಾದಿಸುವುದನ್ನು ನಿರ್ಲಿಂಗೀಯ ವಿಧಾನವೆಂದು ಕರೆಯುತ್ತಾರೆ. ಬೆಳವಣಿಗೆ, ಇಳುವರಿ, ಗುಣಮಟ್ಟದಲ್ಲಿ ಇವು ತಾಯಿಗಿಡಗಳಂತಿರುತ್ತವೆ. ಬೀಜರಹಿತ ಹಣ್ಣಿನ ಗಿಡಗಳಲ್ಲಿ ಈ ವಿಧಾನ ಅವಶ್ಯವಾಗಿದೆ. ಆದರೆ ಈ ಗಿಡಗಳು ಹುಲುಸಾಗಿ ಬೆಳೆಯುದಿಲ್ಲ ಮತ್ತು ಬಾಳಿಕೆಯ ಅವಧಿ ಕಡಿಮೆಯಿರುತ್ತದೆ.
ನಿರ್ಲಿಂಗೀಯ ಸಸ್ಯಾಭಿವೃದ್ದಿಯ ವಿಧಾನಗಳು
ಕಡ್ಡಿಗಳು, ಲೇಯರಿಂಗ್, ಕಸಿ ಮತ್ತು ಗ್ರಾಫ್ಟಿಂಗ್ ಮುಂತಾದ ಅನೇಕ ವಿಧಾನಗಳನ್ನು ಒಳಗೊಂಡಿದ್ದು, ಅನೇಕ ಹಣ್ಣಿನ ಸಸಿಗಳನ್ನು ವಾಣಿಜ್ಯವಾಗಿ ಉತ್ಪಾದಿಸಲು ಬಳಸುತ್ತಾರೆ.
ಕಡ್ಡಿಗಳಿಂದ (ಕಟ್ಟಿಂಗ್ಸ್)
ಕೆಲವು ಕಣ್ಣುಗಳಿರುವ ಕಡ್ಡಿಯನ್ನು ತಾಯಿಗಿಡದಿಂದ ಬೇರ್ಪಡಿಸಿ ಅನುಕೂಲಕರ ಪರಿಸ್ಥಿತಿಯಲ್ಲಿ ತಾಯಿ ಗಿಡದ ಎಲ್ಲಾ ಗುಣಗಳನ್ನು ಹೊಂದಿರುವ ಸಸಿಯನ್ನು ಉತ್ಪಾದಿಸಬಹುದು. ಬೇಗನೆ ಮತ್ತು ಸುಲಭವಾಗಿ ಬೇರು ಬಿಡುವ ಹಣ್ಣಿನ ಗಿಡಗಳಲ್ಲಿ ಈ ವಿಧಾನ ಬಳಸುತ್ತಾರೆ. ಇದು ಸಸಿಗಳನ್ನು ಬೇಗನೆ ಪಡೆಯಬಹುದಾದ ಅಗ್ಗದ ವಿಧಾನ. ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸಿನ ಗಟ್ಟಿಯಾದ ಕೊಂಬೆಗಳನ್ನು ಸಸ್ಯಾಭಿವೃದ್ಧಿಗೆ ಬಳಸಬೇಕು. ಎಲೆ ಉದುರುವ ಗಿಡಗಳಾದ ದ್ರಾಕ್ಷಿ, ದಾಳಿಂಬೆ, ಫಲ್ಸಾ ಮುಂತಾದವುಗಳಿಂದ ಗಿಡ ಸವರಿದ ನಂತರ ಕಡ್ಡಿ ಸಂಗ್ರಹಿಸಬೇಕು. ಸದಾ ಹಸಿರಿನ ಸಸಿಗಳ ಕಡ್ಡಿಗಳನ್ನು ವಸಂತ ಋತುವಿನಲ್ಲಿ (ಫೆಬ್ರವರಿ-ಮಾರ್ಚ್) ಅಥವಾ ಮಳೆಗಾಲದಲ್ಲಿ (ಆಗಸ್ಟ್-ಸೆಪ್ಟೆಂಬರ್) ನೆಡಬೇಕು. ಸಾಧಾರಣವಾಗಿ 3-5 ಕಣ್ಣುಗಳಿರುವ 15-20 ಸೆ.ಮೀ ಉದ್ದದ ಕಡ್ಡಿಗಳನ್ನು ಸಸ್ಯಾಭಿವೃದ್ಧಿಗೆ ಉಪಯೋಗಿಸುತ್ತಾರೆ.
ಲೇಯರಿಂಗ್
ಮರದಲ್ಲಿರುವಾಗಲೇ ಕೊಂಬೆಗಳಿಗೆ ಬೇರು ಬರಿಸುವುದನ್ನು ಲೇಯರಿಂಗ್ ವಿಧಾನವೆಂದು ಕರೆಯುತ್ತಾರೆ. ಕಡ್ಡಿಗಳಲ್ಲಿ ಸುಲಭವಾಗಿ ಬೇರು ಕೊಡದ ಹಣ್ಣಿನ ಬೆಳೆಯ ಸಸ್ಯಗಳನ್ನು ಈ ರೀತಿ ಅಭಿವೃದ್ಧಿ ಪಡಿಸಲಾಗುತ್ತದೆ. ಸಾಧಾರಣವಾಗಿ ಬಳಕೆಯಲ್ಲಿರುವ ಕ್ರಮಗಳೆಂದರೆ ಮರದಲ್ಲಿ, ಭೂಮಿಯಲ್ಲಿ ಮತ್ತು ಮಣ್ಣಿನ ಗುಪ್ಪೆಯ ಸಹಾಯದಿಂದ ಬೇರು ಬರಿಸುವುದು.
1 ಏರ್ ಲೇಯರಿಂಗ್: ಕೊಂಬೆಗಳು ಮರದಲ್ಲಿರುವಾಗಲೇ ಬೇರು ಮೂಡುವಂತೆ ಮಾಡಲಾಗುತ್ತದೆ. ಒಂದು ವರ್ಷದ ಆರೋಗ್ಯದಿಂದ ಕೂಡಿದ ನೇರವಾಗಿರುವ ಕೊಂಬೆಯನ್ನು ಆರಿಸಿ ಕಣ್ಣಿನ ಕೆಳಭಾಗದಲ್ಲಿ 2.5 ಸೆ.ಮೀ ಸುತ್ತಳತೆಯ ಸಿಪ್ಪೆಯನ್ನು ತೆಗೆಯಬೇಕು. ಈ ಭಾಗದಲ್ಲಿ ತೇವಾಂಶವಿರುವ ಪಾಚಿಯನ್ನು ಸುತ್ತಲೂ ಸೇರಿಸಿ ಪ್ಲಾಸ್ಟಿಕ್ ಪಟ್ಟಿಯಿಂದ ಕಟ್ಟಬೇಕು. ಪಾಚಿ ಹಗುರವಾಗಿದ್ದು ಹೆಚ್ಚು ನೀರು ಹಿಡಿದುಡುವ ಗುಣವಿದೆ. ಪಾಚಿ ಸಿಗದಿದ್ದರೆ ಹೆಚ್ಚು ಸಮಯದವರೆಗೆ ನೀರು ಹಿಡಿದಿಡುವ ಯಾವುದೇ ವಸ್ತುವನ್ನು ಈ ಉದ್ಧೇಶಕ್ಕೆ ಬಳಸಬಹುದು. ಪ್ಲಾಸ್ಟಿಕ್ ಪಟ್ಟಿ ತೇವಾಂಶ ಹೊರ ಹೋಗುವುದನ್ನು ತಡೆಯುವುದರಿಂದ ಆಗಾಗ ನೀರು ಹಾಕುವ ಅವಶ್ಯವಿರುವುದಿಲ್ಲ. ಇದರಿಂದ ಕೆಲಸದ ಉಳಿತಾಯವಾಗುತ್ತದೆ. ಫೆಬ್ರವರಿ-ಮಾರ್ಚ್ ಮತ್ತು ಜುಲೈ-ಆಗಸ್ಟ್ ತಿಂಗಳು ಸೀಬೆ, ಲಿಚ್ಚಿ, ಸಪೋಟ, ಲಕೋಟ ಗಿಡಗಳಿಗೆ ಲೇಯರಿಂಗ್ ಮಾಡಲು ಸೂಕ್ತ ಸಮಯ. ಸ್ವಲ್ಪ ದಿನಗಳ ನಂತರ ಪ್ಲಾಸ್ಟಿಕ್ ಪಟ್ಟಿಯ ಒಳಗಿನಿಂದ ಬೇರು ಬಿಟ್ಟಿರುವುದು ಗೋಚರಿಸುತ್ತದೆ. ಬೇರು ಬಂದ ಕೊಂಬೆಯನ್ನು ತಾಯಿಗಿಡದಿಂದ ಬೇರ್ಪಡಿಸುವ 15 ದಿವಸದ ಮೊದಲೆ ಕೊಂಬೆಯ ಅರ್ಧ ಭಾಗಕ್ಕೆ ಕಚ್ಚು ಕೊಟ್ಟಿರಬೇಕು. ತಾಯಿ ಗಿಡದಿಂದ ಬೇರ್ಪಡಿಸಿದ ಕೊಂಬೆಯನ್ನು ನರ್ಸರಿ ತೊಟ್ಟೆಗಳಲ್ಲಿ ಬೆಳೆಸಿದ ನಂತರ ಜಮೀನಿನಲ್ಲಿ ನಾಟಿಮಾಡಬೇಕು.
2 ಗ್ರೌಂಡ್ ಲೇಯರಿಂಗ್: ಭೂಮಿಗೆ ಸಮೀಪದಲ್ಲಿರುವ ಕೊಂಬೆಯನ್ನು ಆಯ್ಕೆಮಾಡಿ 2.5 ಸೆ.ಮೀ ಸುತ್ತಳತೆಯ ಸಿಪ್ಪೆಯನ್ನು ಕಣ್ಣಿನ ಕೆಳಭಾಗದಲ್ಲಿ ತೆಗೆಯಬೇಕು. ಕೊಂಬೆಯನ್ನು ಬಗ್ಗಿಸಿ ಸಿಪ್ಪೆ ತೆಗೆದ ಭಾಗವನ್ನು ನೆಲದ ಮಣ್ಣಿನೊಳಗೆ ಮುಚ್ಚಬೇಕು. ನಿರಂತರವಾಗಿ ನೀರು ಹಾಯಿಸಿ ಮಣ್ಣು ತೇವವಿರುವಂತೆ ನೋಡಿಕೊಳ್ಳಬೇಕು. ಸ್ವಲ್ಪ ಸಮಯದ ನಂತರ ಕೊಂಬೆಯಲ್ಲಿ ಬೇರುಗಳು ಗೋಚರಿಸುತ್ತವೆ. ಈ ಕೊಂಬೆಯನ್ನು ಬೇರು ಸಮೇತ ಬೇರ್ಪಡಿಸಿ ನರ್ಸರಿ ತೊಟ್ಟೆಗಳಲ್ಲಿ ಸ್ವಲ್ಪ ಸಮಯದವರೆಗೆ ಪೋಷಿಸಿದ ನಂತರ ಜಮೀನಿನಲ್ಲಿ ನೆಡಬೇಕು. ನಿಂಬೆ ಜಾತಿಯ ಸಸಿಗಳನ್ನು ಈ ರೀತಿ ಸಸ್ಯಾಭಿವೃದ್ದಿ ಮಾಡಲಾಗುವುದು.
3 ಮೌಂಡ್ ಲೇಯರಿಂಗ್: ಫೆಬ್ರವರಿ ಅಥವಾ ಜುಲೈ ತಿಂಗಳಿನಲ್ಲಿ ತಾಯಿ ಗಿಡವನ್ನು ಮಣ್ಣಿನ ಮೇಲ್ಭಾಗದಿಂದ ಕತ್ತರಿಸಿ ತೆಗೆದು ತೇವಾಂಶವಿರುವ ಮಣ್ಣಿನಿಂದ ಮುಚ್ಚಬೇಕು. ಹೊಸ ಚಿಗುರುಗಳು ಎಪ್ರಿಲ್ ಅಥವಾ ಸೆಪ್ಟೆಂಬರ್ ತಿಂಗಳಿನಲ್ಲಿ ಮೂಡಿಬರುತ್ತವೆ. ಈ ಕೊಂಬೆಗಳ 2.5 ಸೆ.ಮೀ ಸುತ್ತಳತೆಯ ಸಿಪ್ಪೆಯನ್ನು ನೆಲಮಟ್ಟದಲ್ಲಿ ಬಿಡಿಸಿ ತೇವಾಂಶವರುವ ಮಣ್ಣಿನಿಂದ ಮುಚ್ಚಬೇಕು. ಎಪ್ರಿಲ್ ತಿಂಗಳಿನಲ್ಲಿ ಲೇಯರಿಂಗ್ ಮಾಡಿದ ಕೊಂಬೆಯು ಮಳೆಗಾಲದಲ್ಲಿ ಮತ್ತು ಆಗಸ್ಟ್‍ನಲ್ಲಿ ಲೇಯರಿಂಗ್ ಆದ ಕೊಂಬೆಯನ್ನು ವಸಂತಕಾಲದಲ್ಲಿ ತಾಯಿಗಿಡದಿಂದ ಬೇರ್ಪಡಿಸಬಹುದು. ಸೀಬೆ ಮತ್ತು ಸೇಬುವಿನ ಬೇರು ಗಿಡ ತಯಾರಿಸಲು ಈ ವಿಧಾನ ಬಳಸುತ್ತಾರೆ.
ಕಸಿವಿಧಾನ
ಸಸ್ಯಾಭಿವೃದ್ಧಿಗೆ ಗಿಡದ ಒಂದು ಕಣ್ಣು ಸಾಕಾಗುತ್ತದೆ. ಇದು ಸುಲಭ ಮತ್ತು ತ್ವರಿತಗತಿಯ ವಿಧಾನ. ಸಿಪ್ಪೆಯು ಕೊಂಬೆಯಿಂದ ಸುಲಭವಾಗಿ ಬೇರ್ಪಟ್ಟಾಗ ಕಸಿ ಕಟ್ಟಲು ಅನುಕೂಲಕರ ಸಮಯವೆಂದು ತಿಳಿಯಬೇಕು. ಈ ಸಮಯದಲ್ಲಿ ಗಿಡದ ಕೇಂಬಿಯಂ ತುಂಬಾ ಚಟುವಟಿಕೆಯಿಂದಿದ್ದು ಕಸಿ ಸೇರಿಕೊಳ್ಳಲು ಅನುಕೂಲವಾಗುವುದು. ವಸಂತಕಾಲ ಮತ್ತು ಮಳೆಗಾಲ ಕಸಿಕಟ್ಟಲು ಸೂಕ್ತಸಮಯ. ಕಸಿಯಲ್ಲಿ ‘ಟಿ’ ಕಸಿ, ತೇಪೆಕಸಿ, ಅಂಚುಕಸಿ, ಮುಂತಾದ ವಿಧಾನಗಳಿವೆ.
‘ಟಿ’ ಕಸಿ: ಶೀಲ್ಡು ಕಸಿಯೆಂದು ಸಹ ಕರೆಯುತ್ತಾರೆ. ಬೇರುಗಿಡದ 15-20 ಸೆ.ಮೀ ಎತ್ತರದಲ್ಲಿ, ಗಿಡದ ಸುತ್ತಲಿನ 1/3 ಭಾಗದಷ್ಟು ಅಳತೆಯಲ್ಲಿ ಸಿಪ್ಪೆಯನ್ನು ಕೆಳಭಾಗಕ್ಕೆ ಉದ್ದನೆ ಕತ್ತರಿಸಲಾಗುತ್ತದೆ. ನಂತರ ಈ ಭಾಗದಿಂದ 2-3 ಸೆ.ಮೀ ಅಳತೆಯಲ್ಲಿ ಅಡ್ಡನೆ ಕತ್ತರಿಸಿ ಸಿಪ್ಪೆಯನ್ನು ಸಡಿಲಗೊಳಿಸಬೇಕು. ಕಸಿಕೊಂಬೆಯಲ್ಲಿರುವ ಕಣ್ಣಿನ ಮೇಲೆ ಮತ್ತು ಕೆಳಗೆ 1.25 ಸೆ.ಮೀ ಅಡ್ಡ ಕತ್ತರಿಸಿದ ನಂತರ ಕಣ್ಣಿನ ಇಬ್ಬದಿಯಲ್ಲಿ 2.5 ಸೆ.ಮೀ ಉದ್ದಕ್ಕೆ ಕತ್ತರಿಸಿ ಕಣ್ಣನ್ನು ಸಿಪ್ಪೆ ಸಮೇತ ಮೇಲೆತ್ತಿ ತೆಗೆದು ಈಗಾಗಲೆ ಸಡಿಲಗೊಳಿಸಿದ ಬೇರುಗಿಡದ ಸಿಪ್ಪೆಯೊಳಗೆ ತೂರಿಸಬೇಕು. ಈ ರೀತಿ ಸಿಪ್ಪೆಯನ್ನು ಒಳಗಡೆ ಬಂಧಿಸಿದಾಗ ಕಣ್ಣು ಹೊರಗಡೆ ಕಾಣಬೇಕು. ಪ್ಲಾಸ್ಟಿಕ್ ಪಟ್ಟಿಯಿಂದ ಕಸಿ ಜಾಗವನ್ನು ಗಟ್ಟಿಯಾಗಿ ಬಂಧಿಸಬೇಕು. ವಸಂತಕಾಲ (ಮಾರ್ಚ್-ಎಪ್ರಿಲ್) ಮತ್ತು ಮಳೆಗಾಲದಲ್ಲಿ (ಜುಲೈ-ಸೆಪ್ಟೆಂಬರ್) ಹಣ್ಣಿನ ಗಿಡಗಳಲ್ಲಿ ಈ ವಿಧಾನವನ್ನು ಅನುಸರಿಸಲಾಗುವುದು.
ಸಿಪ್ಪೆ ಕಸಿ: 1.0-1.5 ಸೆ.ಮೀ ಅಗಲದ ಮತ್ತು 2.5 ಸೆ.ಮೀ ಉದ್ದದ ಸಿಪ್ಪೆಯನ್ನು ಅಥವಾ ತೊಗಟೆಯಿಂದ ಕೂಡಿದ ಸಿಪ್ಪೆಯನ್ನು ಬೇರು ಗಿಡದಿಂದ ತೆಗೆಯಲಾಗುವುದು. ಕಸಿ ಕೊಂಬೆಯಿಂದ ಇದೇ ಅಳತೆಯ ಕಣ್ಣು ಹೊಂದಿದ ಸಿಪ್ಪೆಯನ್ನು ಹಾನಿ ಮಾಡದೆ ತೆಗೆದು ಬೇರುಗಿಡದಲ್ಲಿ ಸೇರಿಸಿ ಪ್ಲಾಸ್ಟಿಕ್ ಪಟ್ಟಿಯಿಂದ ಬಂಧಿಸಬೇಕು.
ಅಂಚು ಕಸಿ: ಬೇರು ಗಿಡ ಮತ್ತು ತಾಯಿಗಿಡ ಸುಪ್ತಾವಸ್ಥೆಯಲ್ಲಿರುವಾಗ ಈ ವಿಧಾನವನ್ನು ಅನುಸರಿಸಲಾಗುವುದು. ಬೇರು ಗಿಡದಲ್ಲಿ 2.5 ಸೆ.ಮೀ ಅಳತೆಯಲ್ಲಿ ಓರೆಯಾಗಿ ಕತ್ತರಿಸಿ ಕೆಳಭಾಗಕ್ಕೆ 3 ಸೆ.ಮೀ ಉದ್ದಕ್ಕ್ಲೆ ಕತ್ತರಿಸಬೇಕು. ಇದರಿಂದ ಬೇರುಗಿಡದ ಒಂದು ಭಾಗವನ್ನು ತೊಗಟೆ ಸಹಿತ ಬೇರ್ಪಡಿಸಿ ತೆಗೆಯಬಹುದು. ಕಸಿ ಕೊಂಬೆಯನ್ನು ಇದೆ ಅಳತೆಯಲ್ಲಿ ಕಣ್ಣು ಸಮೇತ ಬೇರು ಗಿಡಕ್ಕೆ ಹೊಂದಾಣಿಕೆಯಾಗುವಂತೆ ಕತ್ತರಿಸಿ ಬೇರು ಗಿಡ ಕತ್ತರಿಸಿದ ಭಾಗಕ್ಕೆ ಸೇರಿಸಬೇಕು. ಬೇರು ಗಿಡ ಮತ್ತು ಕಸಿ ಕೊಂಬೆಯ ಕ್ಯಾಂಬಿಯಂ ಪದರವು ಒಂದು ಬದಿಯಲ್ಲಾದರೂ ಒಂದಕ್ಕೊಂದು ಸೇರಿರಬೆಕು. ಕಸಿ ಮಾಡಿದ ನಂತರ ಪ್ಲಾಸ್ಟಿಕ್ ಪಟ್ಟಿಯಿಂದ ಬಂಧಿಸಿ ಕಸಿ ಭಾಗವು ಒಣಗದಂತೆ ನೋಡಿಕೊಳ್ಳಬೆಕು.
ಗ್ರಾಪ್ಟಿಂಗ್
ನಿರ್ಲಿಂಗ ರೀತಿಯ ಸಸ್ಯಾಭಿವೃದ್ಧಿ ವಿಧಾನ. ಒಂದೇ ಜಾತಿಯ ಬೇರೆ ಬೇರೆ ಸಸ್ಯದ ಎರಡು ಭಾಗಗಳನ್ನು ಸೇರಿಸಿ ಒಂದು ಗಿಡವಾಗಿ ಬೆಳೆಯುವಂತೆ ಮಾಡಲಾಗುತ್ತದೆ. ತಾಯಿಗಿಡದಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ಕಣ್ಣುಗಳು ಇರುವುದು ಅವಶ್ಯ. ಗ್ರಾಫ್ಟಿಂಗ್‍ನಲ್ಲಿ ಟಂಗ್ ಗ್ರಾಫ್ಟಿಂಗ್, ಸೈಡ್ ಗ್ರಾಫ್ಟಿಂಗ್, ಎಪ್ರೋಚ್ ಗ್ರಾಫ್ಟಿಂಗ್ ಮತ್ತು ವೆನಿಯರ್ ಗ್ರಾಫ್ಟಿಂಗ್ ಮುಂತಾದ ಹಲವು ವಿಧಾನಗಳಿವೆ.
1 ಟಂಗ್ ಗ್ರಾಫ್ಟಿಂಗ್: ಬೇರು ಗಿಡ ಮತ್ತು ತಾಯಿಗಿಡದ ಕೊಂಬೆಯ ಗಾತ್ರ ಒಂದೇ ಅಳತೆಯಲ್ಲಿರಬೇಕು. ಬೇರುಗಿಡದ ಕಾಂಡದಲ್ಲಿ 4-5 ಸೆ.ಮೀ. ಅಳತೆಯಲ್ಲಿ ಓರೆಯಾಗಿ ಕತ್ತರಿಸಿದ ನಂತರ ಕೆಳಭಾಗಕ್ಕೆ 1 ಸೆ.ಮೀ. ಉದ್ದ ಕತ್ತರಿಸಬೇಕು. ಈ ಭಾಗಕ್ಕೆ 2-3 ಕಣ್ಣುಗಳಿರವ ತಾಯಿಗಿಡದ ಕೊಂಬೆಯನ್ನು ಇದೇ ಅಳತೆಗೆ ಕತ್ತರಿಸಿ ಸೇರಿಸಬೇಕು. ಎರಡು ಗಿಡಗಳ ಕೇಂಬಿಯಂ ಪದರುಗಳು ಒಂದನ್ನೊಂದು ತಾಗುವಂತೆ ಇಟ್ಟು ಪಾಲಿಥಿನ್ ಪಟ್ಟಿಯಿಂದ ಗಟ್ಟಿಯಾಗಿ ಬಂಧಿಸಬೇಕು.
2 ಕ್ಲೆಪ್ಟ್ ಗ್ರಾಫ್ಟಿಂಗ್: ವೆಡ್ಜ್ ಗ್ರಾಫ್ಟಿಂಗ್ (ಬೆಣೆಗೂಟ ಗ್ರಾಫ್ಟಿಂಗ್) ಎಂದು ಕರೆಯುತ್ತಾರೆ. ನರ್ಸರಿಯಲ್ಲಿರುವ ಬೇರು ಗಿಡವು ತಾಯಿಗಿಡ ಕೊಂಬೆಗಿಂತ ದಪ್ಪನಾಗಿದ್ದರೆ ಯಶಸ್ವಿಯಾಗಿ ಈ ವಿಧಾನವನ್ನು ಉಪಯೋಗಿಸಬಹುದು. 8 ಸೆ.ಮೀ ದಪ್ಪದವರೆಗಿನ ಕೊಂಬೆಯನ್ನು ಸಹ ಗ್ರಾಫ್ಟಿಂಗ್‍ಗೆ ಬಳಸಬಹುದು. ಬೇರುಗಿಡದ ಮೇಲ್ಭಾಗವನ್ನು ಕತ್ತರಿಸಬೇಕು ನಂತರ ಮಧ್ಯಭಾಗದಿಂದ 4 ಸೆ.ಮೀ. ಉದ್ದಕ್ಕೆ ಸೀಳಬೇಕು. 3-4 ಕಣ್ಣುಗಳಿರುವ ತಾಯಿಗಿಡ ಕೊಂಬೆಯ ಕೆಳಭಾಗದಲ್ಲಿ ಬೆಣೆಗೂಟದಂತೆ ಕತ್ತರಿಸಿ ಬೇರು ಗಿಡದ ಸೀಳಿನೊಳಗೆ ಸೇರಿಸಬೇಕು. ಗ್ರಾಫ್ಟಿಂಗ್ ಕೊಂಬೆಯ ಒಂದು ಕಣ್ಣು ಬೇರುಗಿಡದಲ್ಲಿರುವಂತೆ ನೋಡಿಕೊಳ್ಳಬೇಕು. ಎರಡರ ಕ್ಯಾಂಬಿಯಂ ಪದರಗಳು ಸೇರಿದಾಗ ಗ್ರಾಫ್ಟಿಂಗ್ ಬೇಗನೆ ಯಶಸ್ವಿಯಾಗುತ್ತದೆ.
3 ಎಪ್ರೋಚ್ ಗ್ರಾಫ್ಟಿಂಗ್: ಬೇರು ಗಿಡವನ್ನು ತಾಯಿಗಿಡದ ಹತ್ತಿರ ತೆಗೆದುಕೊಂಡು ಹೋಗಿ ಗ್ರಾಫ್ಟಿಂಗ್ ಮಾಡಲಾಗುತ್ತದೆ. ಪರ್ಯಾಯವಾಗಿ ತಾಯಿಗಿಡ ಕಡಿಮೆ ಎತ್ತರವಾಗಿ ಬೆಳೆಯುವಂತೆ ಮಾಡಿ ಅದರ ಕೆಳಗಡೆ ಬೇರು ಗಿಡದ ಬೀಜ ಬಿತ್ತನೆ ಮಾಡಲಾಗುತ್ತದೆ. ಎಪ್ರೋಚ್ ಗ್ರಾಫ್ಟಿಂಗ್ ಮಾಡಲು ಜುಲೈ ಕಡೆ ವಾರ ಅಥವಾ ಆಗಸ್ಟ್ ಮೊದಲವಾರ ಸೂಕ್ತ ಸಮಯವಾಗಿದೆ. ಬೇರು ಕೊಂಬೆ ಮತ್ತು ಕಸಿಕೊಂಬೆ ಒಂದೇ ಸುತ್ತಳತೆಯದ್ದಾಗಿರಬೇಕು. ಇವುಗಳ ಕೊಂಬೆಗಳಿಂದ 4 ಸೆ.ಮೀ ಉದ್ದದ ಸಿಪ್ಪೆಯನ್ನು ತೊಗಟೆಯೊಂದಿಗೆ ಕತ್ತರಿಸಿ ತೆಗೆಯಬೇಕು. ಕ್ಯಾಂಬಿಯಂ ಪದರಗಳು ಒಂದನ್ನೊಂದು ಹೊಂದುವಂತೆ ಸೇರಿಸಿ ಪ್ಲಾಸ್ಟಿಕ್ ಪಟ್ಟಿ ಅಥವಾ ಇನ್ನಿತರ ಯಾವುದೇ ವಸ್ತುವಿನಿಂದ ಗಟ್ಟಿಯಾಗಿ ಕಟ್ಟಬೇಕು. ಬೇರುಗಿಡ ಮತ್ತು ತಾಯಿ ಗಿಡಕ್ಕೆ ನೀರು ಹಾಕುತ್ತಿರಬೇಕು. ಎರಡೂ ಬದಿಗಳು ಸಂಯೋಗ ಹೊಂದಲು 2-3 ತಿಂಗಳು ಬೇಕಾಗುತ್ತದೆ. ಗ್ರಾಫ್ಟಿಂಗ್‍ನ ಕೆಳಭಾಗದಲ್ಲಿ ತಾಯಿಗಿಡದ ಕೊಂಬೆಯ ಅರ್ಧ ಆಳಕ್ಕೆ ಕಚ್ಚು ಕೊಡಬೇಕು. ಕಸಿ ಕೊಂಬೆ ಒಣಗದಿದ್ದರೆ ಗ್ರಾಫ್ಟಿಂಗ್ ಯಶಸ್ವಿಯಾಗಿದೆ ಎಂದು ತಿಳಿಯಬೇಕು. ನಂತರ ಕಸಿಕೊಂಬೆಯನ್ನು ತಾಯಿ ಗಿಡದಿಂದ ಬೇರ್ಪಡಿಸಬೇಕು. ಇನಾರ್ಚಿಂಗ್ ಎಂದು ಸಹ ಕರೆಯಲ್ಪಡುವ ಈ ವಿಧಾನವನ್ನು ಮಾವಿನ ಗಿಡಗಳ ಸಸ್ಯಾಭಿವೃದ್ಧಿಗೆ ಬಳಸುತ್ತಾರೆ.
4 ಸೈಡ್ ಗ್ರಾಫ್ಟಿಂಗ್: ಬೇರು ಗಿಡವನ್ನು ನೆಲದಿಂದ ಸುಮಾರು 30 ಸೆ.ಮೀ. ಎತ್ತರದಲ್ಲಿ 4ಸೆ.ಮೀx 1.25 ಸೆ.ಮೀ ಅಳತೆಯಲ್ಲಿ ಸೀಳಬೇಕು. ಕಸಿ ಕೊಂಬೆಯನ್ನು ಇದೇ ಅಳತೆಯಲ್ಲಿ ಹೊಂದಾಣಿಕೆಯಾಗುವಂತೆ ಕತ್ತರಿಸಬೇಕು. ಇದಕ್ಕಿಂತ ಹಲವು ಸಮಯದ ಮೊದಲೇ ದುಂಡಾದ ಕಣ್ಣುಗಳಿರುವ ತಾಯಿಗಿಡದ ಆಯ್ದ ಕೊಂಬೆಯ ಎಲ್ಲಾ ಎಲೆಗಳನ್ನು ತೊಟ್ಟು ಬಿಟ್ಟು ತೆಗೆದು ಹಾಕಬೇಕು. 7-10 ದಿನಗಳಲ್ಲಿ ತೊಟ್ಟು ಬಿದ್ದು ಹೋಗಿ ತುದಿಯ ಮೊಗ್ಗು ದಪ್ಪವಾಗುತ್ತದೆ. ಈ ಸಮಯದಲ್ಲಿ ಕಸಿ ಕೊಂಬೆಯನ್ನು ಬೇರ್ಪಡಿಸಿ ಬೇರುಗಿಡದಲ್ಲಿ ಬಿಡಿಸಿದ ಸೀಳಿನೊಳಗೆ ಸೇರಿಸಿ ಎರಡರ ಕ್ಯಾಂಬಿಯ ಪದರಗಳು ಒಂದನ್ನೊಂದು ಮುಟ್ಟಿರುವಂತೆ ನೋಡಿಕೊಳ್ಳಬೇಕು. ಕಸಿಜಾಗವನ್ನು ಪ್ಲಾಸ್ಟಿಕ್ ಪಟ್ಟಿಯಿಂದ ಬಂಧಿಸಬೇಕು. ಕಸಿಕೊಂಬೆಯಲ್ಲಿ ಚಿಗುರು ಮತ್ತು ಎಲೆಗಳು ಮೂಡಿದಾಗ ಕಸಿಕಟ್ಟಿದ ಜಾಗದ ಮೇಲ್ಭಾಗದಿಂದ ಬೇರು ಗಿಡವನ್ನು ಕತ್ತರಿಸಿ ತೆಗೆಯಬೇಕು. ಮಾರ್ಚು-ಎಫ್ರಿಲ್‍ನಲ್ಲಿ ಗ್ರಾಫ್ಟಿಂಗ್ ಹೆಚ್ಚು ಯಶಸ್ವಿಯಾದರೆ ಮೇ-ಅಕ್ಟೋಬರಿನಲ್ಲಿ ಯಶಸ್ಸಿನ ಪ್ರಮಾಣ ಕಡಿಮೆ ಇರುತ್ತದೆ.
5 ವೆನೀರು ಗ್ರಾಫ್ಟಿಂಗ್: ನೆಲದಿಂದ 15-20 ಸೆ.ಮೀ ಎತ್ತರದಲ್ಲಿ ಬೇರುಗಿಡವನ್ನು 4 ಸೆ.ಮೀ ಅಳತೆಯಲ್ಲಿ ಕೆಳಭಾಗಕ್ಕೆ ಕತ್ತರಿಸಬೇಕು. ಕೆಳಭಾಗದಲ್ಲಿ ಇನ್ನೊಮ್ಮೆ ಅಡ್ಡ ಕತ್ತರಿಸಿ ಸಿಪ್ಪೆಯೊಡನೆ ತೊಗಟೆಯನ್ನು ತೆಗೆಯಬೇಕು. ಕಸಿಯ ಕೊಂಬೆಯನ್ನು ಇದೇ ರೀತಿ ತಯಾರು ಮಾಡಬೇಕು. ಎರಡು ಭಾಗದ ಕ್ಯಾಂಬಿಯಂ ಪದರಗಳು ಒಂದಕ್ಕೊಂದು ಹೊಂದಾಣಿಕೆಯಾಗುವಂತೆ ಸೇರಿಸಿ ಪ್ಲಾಸ್ಟಿಕ್ ಪಟ್ಟಿಯಿಂದ ಗಟ್ಟಿಯಾಗಿ ಬಂಧಿಸಬೆಕು. ಯಶಸ್ವಿ ಸಂಯೋಗದ ನಂತರ ಬೇರು ಗಿಡವನ್ನು ಗ್ರಾಫ್ಟಿಂಗ್ ಸ್ಥಳದ ಮೇಲ್ಭಾಗದಲ್ಲಿ ಕತ್ತರಿಸಿ ತೆಗೆಯಬೇಕು.
ವಿಶೇಷ ಅಂಗಗಳ ಮುಖಾಂತರ ಸಸ್ಯಾಭಿವೃದ್ದಿ
1 ರನ್ನರ್‍ಗಳು: ಗಿಡದ ಮೇಲಿನ ಎಲೆಯ ಬುಡದಿಂದ ಬೆಳೆಯುವ ವಿಶಿಷ್ಟ ಕೊಂಬೆಗಳನ್ನು ರನ್ನರ್‍ಗಳೆಂದು ಕರೆಯುತ್ತಾರೆ. ಇದು ನೆಲದ ಮೇಲೆ ಸಮಾನವಾಗಿ ಹರಡಿ ಅದರ ಗಂಟುಗಳಿಂದ ಗಿಡಗಳು ಬೆಳೆಯುತ್ತದೆ. ಅಧಿಕ ಉಷ್ಣಾಂಶ ಮತ್ತು ಬೆಳಕಿರುವ ದಿನಗಳು ರನ್ನರ್ ಉತ್ಪತ್ತಿಯಾಗಲು ಅನುಕೂಲಕರ. ಎಳೆ ಸಸಿಗಳನ್ನು ಬೇರಿನೊಂದಿಗೆ ಬೇರ್ಪಡಿಸಿ ಹೊಸ ಸಸಿಗಳನ್ನು ಪಡೆಯಬಹುದು. ಉದಾ:-ಸ್ಟ್ರಾಬರಿ.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

2 ಕಂದುಗಳು: ಮಣ್ಣಿನ ಒಳಗಿರುವ ಕಾಂಡ ಅಥವಾ ಹಳೆಯ ಕಾಂಡಗಳಿಂದ ಉತ್ಪತ್ತಿಯಾಗುವ ಸಸಿಗಳನ್ನು ಕಂದುಗಳೆಂದು ಕರೆಯುತ್ತಾರೆ. ಈ ಹೊಸ ಚಿಗುರನ್ನು ತಾಯಿ ಗಿಡದಿಂದ ಬೇರ್ಪಡಿಸಿ ನೆಟ್ಟಾಗ ಕವಲು ಬೇರುಗಳು ಬೆಳೆಯುತ್ತವೆ. ಕಂದುಗಳು ಬೆಳೆಯುವ ಸಾಮಥ್ರ್ಯ ಗಿಡದಿಂದ ಗಿಡಕ್ಕೆ, ತಳಿಗಳಿಂದ ತಳಿಗಳಿಗೆ ಬೇರೆ ಬೇರೆಯಾಗಿದೆ ಮತ್ತು ವಾಯುಗುಣದ ಮೇಲೆ ನಿರ್ಧರಿತವಾಗಿದೆ. ಹಣ್ಣಿನ ಬೆಳೆಗಳಾದ ಬಾಳೆ ಮತ್ತು ಮರಸೇಬಿನಲ್ಲಿ ಸಾಧಾರಣವಾಗಿ ಕಂದುಗಳು ಹುಟ್ಟಿಕೊಳ್ಳುತ್ತವೆ. ಬಾಳೆಯನ್ನು ಸಾಮಾನ್ಯವಾಗಿ ಕಂದುಗಳ ಮೂಲಕ ಸಸ್ಯಾಭಿವೃದ್ಧಿ ಮಾಡಲಾಗುತ್ತದೆ.

3 ಬೇರ್ಪಡಿಸುವಿಕೆ: ಗೆಡ್ಡೆಯಂತಹ ಬೆಳೆಗಳಾದ ಬೆಳ್ಳುಳ್ಳಿ ಮತ್ತು ಸುವರ್ಣಗೆಡ್ಡೆಯಲ್ಲಿ, ಗೆಡ್ಡೆಗಳನ್ನು ಒಡೆದು ಎಸಳುಗಳಿಂದ ಸಸ್ಯಾಭಿವೃದ್ಧಿ ಮಾಡಲಾಗುತ್ತದೆ.

4 ವಿಂಗಡಿಸುವುದರಿಂದ: ಗೆಡ್ಡೆಯ ಬೆಳೆಗಳಾದ ಅರಸಿನ ಶುಂಠಿಯ ಗೆಡ್ಡೆಗಳನ್ನು ವಿಂಗಡಿಸಿ ಸಸ್ಯಾಭಿವೃದ್ದಿ ಮಾಡಲಾಗುವುದು.

5 ಆಫ್‍ಶೂಟ್ಸ್: ಮೂಲಗಿಡದ ಬದಿಯಲ್ಲಿ ಮೊಳೆಯುವ ಗಿಡಗಳನ್ನು ಸಸ್ಯಾಭಿವೃದ್ಧಿಗೆ ಬಳಸುತ್ತಾರೆ. ಉದಾ:-ಅನಾನಸು ಮತ್ತು ಖರ್ಜೂರ.

6 ಗೆಡ್ಡೆಗಳು: ಆಲುಗೆಡ್ಡೆಯನ್ನು ಗೆಡ್ಡೆಗಳ ಮುಖಾಂತರ ಸಸ್ಯಾಭಿವೃದ್ದಿ ಮಾಡಲಾಗುವುದು.

ಅಂಗಾಂಶ ಕಸಿ
ರೂಢಿಯಲ್ಲಿರುವ ಲಿಂಗೀಯ ಮತ್ತು ನಿರ್ಲಿಂಗೀಯ ಸಸ್ಯೋತ್ಪಾದನೆಯಲ್ಲದೆ ತಂತ್ರಜ್ಞಾನ ಬಳಸಿ ಸಸ್ಯಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಅಂಗಾಂಶ ಕಸಿಯಲ್ಲಿ ಮೂಲಗುಣ ಹೊಂದಿದ ಅಧಿಕ ಸಸಿಗಳನ್ನು ತ್ವರಿತವಾಗಿ ಉತ್ಪಾದಿಸಬಹುದು. ರೂಢಿಯಲ್ಲಿರುವ ಕೊಂಬೆ ಅಥವಾ ಕಣ್ಣುಗಳಿಗೆ ಹೋಲಿಸಿದರೆ ಇಲ್ಲಿ ಅತೀ ಚಿಕ್ಕ ಕೋಶವನ್ನು ಸಸ್ಯೋತ್ಪಾದನೆಗೆ ಬಳಸಲಾಗುತ್ತದೆ. ಅನೇಕ ಹಣ್ಣಿನ ಬೆಳೆಗಳಿಗೆ ಅಂಗಾಶ ಕಸಿ ತಂತ್ರಜ್ಞಾನವನ್ನು ನಿರ್ಧಿಷ್ಟಗೊಳಿಸಲಾಗಿದೆ. ಈ ವಿಧಾನದ ಅನುಕೂಲ ಎಂದರೆ ವರ್ಷ ಪೂರ್ತಿ ಸಸ್ಯಾಭಿವೃದ್ಧಿಯಲ್ಲಿ ತೊಡಗಬಹುದು ಮತ್ತು ಸಣ್ಣ ಪ್ರಮಾಣದ ಸ್ಥಳ ಸಾಕು ಹಾಗು ಕೋಶಗಳಿಂದ ನಂಜುರೋಗ ರಹಿತ ಗಿಡಗಳನ್ನು ಉತ್ಪಾದಿಸಬಹುದು.

ಗಿಡಗಳ ಮೂಲ
ನರ್ಸರಿ ಮಾಡುವವರಲ್ಲಿ ಉತ್ತಮ ಗುಣಮಟ್ಟದ ತಾಯಿ ಗಿಡಗಳ ಸಂಗ್ರಹವಿರಬೇಕು, ಇಲ್ಲವೆ ತೋಟಗಳಿಂದ ಉತ್ತಮ ಗುಣದ ಮರಗಳನ್ನು ಆಯ್ಕೆ ಮಾಡಬೇಕು. ಹೆಚ್ಚು ಫಲ ನೀಡುವ ಈ ತಾಯಿಗಿಡಗಳು ವಾಣಿಜ್ಯವಾಗಿ ಬಳಸುವಂತಿರಬೇಕು ಮತ್ತು ರೋಗ ಹಾಗು ಕೀಟಗಳಿಂದ ಮುಕ್ತವಾಗಿರಬೇಕು.

ಕಸಿ ಕೊಂಬೆಗಳ ಸಂಗ್ರಹ ಮತ್ತು ಶೇಖರಣೆ
ಒಂದು ಋತು ಹಳೆಯ ಕೊಂಬೆಗಳನ್ನು ಸಾಧಾರಣವಾಗಿ ಸಸ್ಯಾಭಿವೃದ್ಧಿಗೆ ಬಳಸಲಾಗುತ್ತದೆ. ಹರಿತವಾದ ಚಾಕು ಅಥವಾ ಸಿಕೇಚರ್‍ನಿಂದ ಕೊಂಬೆ ಕತ್ತರಿಸಿ ತೆಗೆದೊಡನೆ ತೇವಾಂಶ ಇರುವ ಪ್ಲಾಸ್ಟಿಕ್ ಚೀಲಗಳಲ್ಲಿರಬೇಕು. ಸಸ್ಯಾಭಿವೃದ್ಧಿಗೆ ಉಪಯೋಗಿಸುವ ಸಲಕರಣೆಗಳನ್ನು ಆಗಾಗ ಶುದ್ಧೀಕರಿಸಿ ಬಳಸಬೇಕು.

ಬೇರುಗಿಡಗಳು
ಮಣ್ಣಿನಿಂದ ಉತ್ಪತ್ತಿಯಾಗುವ ರೋಗಗಳಿಗೆ ಹಾಗು ಇತರ ಕೀಟಗಳಿಗೆ ನಿರೋಧಕ ಶಕ್ತಿ ಪ್ರದರ್ಶಿಸುವ ಮತ್ತು ವಿವಿಧ ರೀತಿಯ ಮಣ್ಣಿಗೆ ಹೊಂದಿಕೊಂಡು ಹುಲುಸಾಗಿ ಬೆಳೆಯುವ ಗುಣ ಹೊಂದಿದ ಬೇರು ಗಿಡಗಳನ್ನು ಆಯ್ಕೆಮಾಡಬೇಕು. ಸಸ್ಯಾಭಿವೃದ್ಧಿ ಮತ್ತು ಕಸಿ ಸುಲಭವಾಗಿ ಮಾಡುವಂತಿರಬೇಕು.

ನರ್ಸರಿ ರಚನೆಗಳು
ವಿವಿಧ ರೀತಿಯ ಕಟ್ಟಡ, ರಚನೆಗಳನ್ನು ಸಸಿಗಳ ಅಭಿವೃದ್ದಿ, ನಿರ್ವಹಣೆ ಮತ್ತು ಬೆಳವಣಿಗೆಗೆ ಬಳಸಲಾಗುತ್ತದೆ ಹಸಿರುಮನೆ, ಬೆಚ್ಚನೆ ಪಾತಿ, ಶೀತಲ ಮನೆ, ನೆಟ್‍ಮನೆಗಳು, ಪ್ಲಾಸ್ಟಿಕ್ ಸುರಂಗಗಳು ಪ್ರಮುಖವಾದವು.

ಹಸಿರುಮನೆ
ಪಾರದರ್ಶಕ ಕಟ್ಟಡದ ಅರೆ ನಿರ್ಬಂಧಿತ ವಾತಾವರಣದಲ್ಲಿ ಗಿಡಗಳನ್ನು ಬೆಳೆಯಲಾಗುತ್ತದೆ. ಹಸಿರು ಮನೆ ನಿರ್ಮಿಸಲು ಸ್ಥಳ, ನಮೂನೆ, ರಚನೆಯಲ್ಲಿ ಬಳಸುವ ವಸ್ತುಗಳು ಆಯಾ ಪ್ರದೇಶದ ವಾಯುಗುಣವನ್ನವಲಂಬಿಸಿದೆ. ಚೆನ್ನಾಗಿ ನೀರು ಬಸಿದು ಹೋಗುವ, ಹೆದ್ದಾರಿ ಸಮೀಪದ, ವಿದ್ಯುತ್ ಮತ್ತು ನೀರಿನ ಸೌಕರ್ಯವಿರುವ ಸ್ಥಳವನ್ನೇ ಆರಿಸಬೇಕು. ಹಸಿರು ಮನೆಗಳನ್ನು ಮ್ಯಾಕ್ಷಿವೆಂಟ್, ಸಾ ಟೂಥ್ ವೆಂಟಿಲೇಷನ್, ಗಟ್ಟಾರು ವೆಂಟಿಲೇಷನ್, ಕೇಬ್ರಿಯೋ ವೆಂಟಿಲೇಷನ್ ಎಂದು ಗಾತ್ರದ ಆಧಾರದಲ್ಲಿ ವಿಂಗಡಿಸಲಾಗಿದೆ. ಮರ, ಬಿದಿರು, ಕಬ್ಬಿಣದ ಕೊಳವೆಯನ್ನು ಬಳಸಿ ಕಟ್ಟಡ ನಿರ್ಮಿಸಲಾಗುತ್ತದೆ. ಮೇಲ್ಚಾವಣಿಗೆ ಗಾಜು, ಪ್ಲಾಸ್ಟಿಕ್, ಎಫ್.ಆರ್.ಸಿ, ಪಾಲಿಕಾರ್ಬೊನೇಟ್ ಮತ್ತು ಎಕ್ರೆಲಿಕ್ ಹಾಳೆಗಳನ್ನು ಬಳಸಲಾಗುವುದು. ಇವುಗಳ ಬೆಲೆ ಮತ್ತು ಬೆಳಕನ್ನು ಒಳಬಿಡುವ ಪ್ರಮಾಣ ಬೇರೆ ಬೇರೆಯಾಗಿದೆ.

ಬೆಚ್ಚನೆ ಪಾತಿಗಳು: ಇಲ್ಲಿ ಪಾತಿ ಅಥವಾ ಟ್ರೇಗಳನ್ನು ಬಿಸಿಯಾಗಿಸುವ ವ್ಯವಸ್ಥೆಯಿದೆ. ಬೇರಿನ ಭಾಗದಲ್ಲಿ ಉಷ್ಣತೆ ಹೆಚ್ಚಿಸುವುದರಿಂದ ಬೇರಿನ ಅಭಿವೃದ್ಧಿ ಮತ್ತು ಬೆಳವಣಿಗೆ ಉತ್ತಮವಾಗಿರುತ್ತದೆ.

ಶೀತಲ ಪಾತಿಗಳು: ಬೆಚ್ಚನೆಯ ಪಾತಿಗಳಂತಿರುವ ರಚನೆಗಳು ತಂಪಾಗಿಡುವ ವ್ಯವಸ್ಥೆ ಹೊಂದಿರುತ್ತವೆ.
ಸುರಂಗಗಳು: ಪಿ ವಿ ಸಿ ಅಥವಾ ಕಬ್ಬಿಣದ ಕೊಳವೆ ಬಗ್ಗಿಸಿ, ಮೇಲ್ಛಾವಣಿಗೆ ಪ್ಲಾಸ್ಟಿಕ್ ಹಾಳೆ ಹಾಸಿ ಸುರಂಗದಂತ ರಚನೆಯನ್ನು ಮಾಡಲಾಗುತ್ತದೆ.

ನೆರಳಿನ ಮನೆ: ಹಸಿರು ಮನೆಯಂತಿದ್ದು ಬೇಸಿಗೆಯ ಉಷ್ಣತೆ ಮತ್ತು ಸೂರ್ಯನ ಪ್ರಖರತೆಯನ್ನು ತಡೆಯಲು ಅಪಾರದರ್ಶಕ ವಸ್ತುವನ್ನು ಬಳಸಲಾಗುತ್ತದೆ.

ಬೆಳೆಯುವ ಮಾಧ್ಯಮ
ಸಾಮಾನ್ಯವಾಗಿ ಚೆನ್ನಾಗಿ ಕೊಳೆತ ಕೊಟ್ಟಿಗೆ ಗೊಬ್ಬರ, ಮಣ್ಣು ಮತ್ತು ಮರಳನ್ನು ನರ್ಸರಿಯಲ್ಲಿ ಸಸ್ಯಾಭಿವೃದ್ಧಿಗೆ ಮಾಧ್ಯಮವಾಗಿ ಬಳಸುತ್ತಾರೆ. ಚೇರಿ, ಎರೆಗೊಬ್ಬರ, ಪ್ರಮೆಸ್ ಮೊದಲಾದವುಗಳು ಸಹ ಬಳಕೆಯಲ್ಲಿವೆ. ಸುಲಭ ಮತ್ತು ಅಗ್ಗವಾಗಿ ದೊರೆಯುವ ಮಾಧ್ಯಮ ಸಮಾನ ಕಣ ಹೊಂದಿದ್ದು ಚೆನ್ನಾಗಿ ಗಾಳಿಯಾಡುವಂತಿರಬೇಕು. ರೋಗ, ಕೀಟಗಳಿಂದ ಮುಕ್ತವಾಗಿದ್ದು, ಕಮ್ಮಿ ಲವಣಾಂಶ ಹೊಂದಿರಬೇಕು. ಬಿಸಿ ಮಾಡುವುದರಿಂದ ಕಳೆಬೀಜ ಮತ್ತು ಹಾನಿಕಾರಕ ಸೂಕ್ಷ್ಮಾಣು ಜೀವಿಗಳನ್ನು ನಾಶಪಡಿಸುವ ಕ್ರಮ ಉತ್ತಮವಾದರೂ ಅಗಾಧ ಪ್ರಮಾಣದಲ್ಲಿ ಸಂಸ್ಕರಿಸುವುದು ಸಾಧ್ಯವಿಲ್ಲ. ಫಾರ್ಮಲ್ಡಿಹೈಡ್, ಕ್ಲೋರೋಫ್ರಿನ್, ಮುಂತಾದ ರಾಸಾಯನಿಕಗಳನ್ನು ಸಹ ಉಪಯೋಗಿಸಬಹುದು. ಆದರೆ ಸೂರ್ಯನ ಕಿರಣದಲ್ಲಿ ಮಣ್ಣಿನ ಮಿಶ್ರಣವನ್ನು ಸಂಸ್ಕರಿಸುವುದು ಅಗ್ಗದ ಮತ್ತು ಪರಿಣಾಮಕಾರಿ ಕ್ರಮ.

ಸಸ್ಯಾಭಿವೃದ್ಧಿಯ ಸಾಧನಗಳು
ಅನೇಕ ವಿಧದ ಸಾಧನಗಳಾದ ಮಣ್ಣಿನ ಕುಂಡಗಳು, ಪ್ಲಾಸ್ಟಿಕ್ ತೊಟ್ಟೆಗಳು, ಫೈಬರ್ ಕುಂಡಗಳು, ಪ್ಲಾಸ್ಟಿಕ್ ಮತ್ತು ಮರದ ಟ್ರೇಗಳು ಮುಂತಾದವುಗಳನ್ನು ನರ್ಸರಿಯಲ್ಲಿ ಸಸ್ಯಾಭಿವೃದ್ಧಿಗೆ ಬಳಸಲಾಗುವುದು.

ತೊಟ್ಟೆಗಳಿಗೆ ತುಂಬುವ ಮಿಶ್ರಣ
ಬೇರೆ ಬೇರೆ ಜಾತಿಯ ಗಿಡಗಳಿಗೆ ಬೇರೆ ಬೇರೆ ಪ್ರಮಾಣದ ಮಿಶ್ರಣಗಳು ಬೇಕಾಗುತ್ತದೆ. ಜೇಡಿ ಮಣ್ಣಿಗೆ ಹೆಚ್ಚಿನ ಕೊಟ್ಟಿಗೆ ಗೊಬ್ಬರ ಮತ್ತು ಮರಳನ್ನು ಸೇರಿಸಬೇಕು. ಮರಳು ಮಣ್ಣಿಗೆ ಕೊಟ್ಟಿಗೆ ಗೊಬ್ಬರವನ್ನು ಮಾತ್ರ ಸೇರಿಸಬೇಕು. ಜೇಡಿಮಣ್ಣಿಗೆ 2:1:2 ಮತ್ತು ಗೋಡು ಮಣ್ಣಿಗೆ 1:1:1ರ ಪ್ರಮಾಣದಲ್ಲಿ ಮರಳು, ಮಣ್ಣು ಮತ್ತು ಗೊಬ್ಬರವನ್ನು ಮಿಶ್ರಣ ಮಾಡಲಾಗುವುದು.

ಸಸ್ಯಾಭಿವೃದ್ದಿ ಸಲಕರಣೆಗಳು
ಗುದ್ದಲಿ, ಕಳೆಗುದ್ದಲಿ, ಕಸಿ ಮತ್ತು ಗ್ರಾಫ್ಟಿಂಗ್ ಚಾಕು, ಸವರು ಕತ್ತಿ, ಜಾಲರಿ, ಜರಿಕ್ಯಾನು, ನೀರಿನ ಕೊಳವೆ ಮುಂತಾದವು ನರ್ಸರಿಗೆ ಬೇಕಾದ ಪ್ರಮುಖ ಸಲಕರಣೆಗಳು. ಕಾರ್ಯ ಕ್ಷಮತೆ ಹೆಚ್ಚಿಸಲು ಜರಡಿಯಂತ್ರ, ತೊಟ್ಟೆ ತುಂಬುವ ಯಂತ್ರವನ್ನು ಬಳಸಬಹುದು.

ನರ್ಸರಿ ನಿರ್ವಹಣೆ
ನೀರಿನ ನಿರ್ವಹಣೆ
ನೀರು ನರ್ಸರಿಗೆ ಅತೀ ಅಗತ್ಯವಾಗಿದೆ. ನೀರಿನ ಗುಣ ಮತ್ತು ಪ್ರಮಾಣ ಸಸಿಗಳ ಬೆಳವಣಿಗೆ ಮತ್ತು ಬದುಕುಳಿಯುವುದರ ಮೇಲೆ ಪರಿಣಾಮ ಬೀರುತ್ತದೆ. ತುಂತುರು ಮತ್ತು ಹನಿ ನೀರಾವರಿಯಿಂದ ನೀರನ್ನು ಸಮರ್ಥವಾಗಿ ಬಳಸಬಹುದು. ನೀರಿನಲ್ಲಿ ಹೆಚ್ಚು ಲವಣಾಂಶವಿದ್ದರೆ ಬೆಳವಣಿಗೆ ಕುಂಠಿತವಾಗುತ್ತದೆ ಮತ್ತು ಅಂಥ ನೀರನ್ನು ಶುದ್ಧೀಕರಿಸಬೇಕು. ಲವಣಾಂಶ ಕಮ್ಮಿ ಇರುವ ಮಳೆ ನೀರು ನರ್ಸರಿ ಗಿಡಗಳಿಗೆ ಸೂಕ್ತವಾಗಿದೆ.

ಕಳೆನಿರ್ವಹಣೆ
ನರ್ಸರಿಯಲ್ಲಿ ಚಿಕ್ಕಗಿಡಗಳನ್ನು ಯಾವಾಗಲೂ ಕಳೆ ಮುಕ್ತವಾಗಿಡಬೇಕು. ಮಣ್ಣಿನ ಮಿಶ್ರಣವನ್ನು ಸೂಕ್ತ ವಿಧಾನದ ಮೂಲಕ ಸಂಸ್ಕರಿಸಿ ಕಳೆ ಬೀಜಗಳನ್ನು ನಾಶಪಡಿಸಬೇಕು. ಗಿಡಗಳಿಗೆ ಮುಚ್ಚಳಿಕೆ ಹೊದಿಸುವುದರಿಂದ ಕಳೆಯ ಪ್ರಮಾಣ ಕಡಿಮೆಯಾಗುವುದು. ಮಳೆಗಾಲಕ್ಕಿಂತ ಮೊದಲು ನರ್ಸರಿಯ ಖಾಲಿ ಸ್ಥಳದಲ್ಲಿ ವಿಶಾಲ ಪರಿಣಾಮ ಬೀರುವ ಗ್ಲೈಫೊಸೆಟ್‍ನಂತ ಕಳೆನಾಶಕಗಳನ್ನು ಬಳಸಿ ಕಳೆ ನಿಯಂತ್ರಿಸಬೇಕು.

ರೋಗ ಮತ್ತು ಕೀಟ ನಿರ್ವಹಣೆ
ನರ್ಸರಿಯಲ್ಲಿ ಕೀಟ ಹಾಗು ರೋಗ ನಿರ್ವಹಣೆಗಾಗಿ ಸುರಕ್ಷಿತ ಕೀಟನಾಶಕ ಅಥವಾ ಸಾವಯವ ಕೀಟನಾಶಕ ಮತ್ತು ಶಿಲೀಂದ್ರನಾಶಕಗಳನ್ನು ಬಳಸಬೇಕು.

ಪ್ಯಾಕಿಂಗ್, ದೃಢೀಕರಣ ಮತ್ತು ಮಾರಾಟ
ಸಾಮಾನ್ಯವಾಗಿ ಸಗಟು ವ್ಯಾಪಾರದ ಮೂಲಕ ನರ್ಸರಿಯಿಂದ ಗಿಡಗಳನ್ನು ಮಾರಾಟ ಮಾಡಲಾಗುತ್ತದೆ. ಸಗಟು ವ್ಯಾಪಾರಿಗಳು ಅದನ್ನು ನರ್ಸರಿಗಳಿಗೆ, ಉದ್ಯಾನವನಕ್ಕೆ ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಾರೆ. ಸಸಿಗಳನ್ನು ಬಿದಿರಿನ ಬುಟ್ಟಿಗಳಲ್ಲಿ ಅಥವಾ ರಟ್ಟಿನ ಬುಟ್ಟಿಗಳಲ್ಲಿಟ್ಟು ಮಿನಿ ಟ್ರಕ್, ಟ್ರಕ್‍ಗಳ ಮೂಲಕ ಸಾಗಿಸಲಾಗತ್ತದೆ.

About ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.
0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments