ಮೊಳ್ಳೇರ ಎಂ.ಪಿ. ರತ್ನ ಪೂಣಚ್ಚ, ಸಹಕಾರಿಗಳು: ಹೊಸೂರು(ಅಮ್ಮತ್ತಿ) Hosur(Ammathi)
ರತ್ನ ಪೂಣಚ್ಚನವರ ತಂದೆ ಎಂ.ಕೆ. ಪೂವಯ್ಯನವರು ಪಾಲಿಬೆಟ್ಟ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ ಸಹಕಾರ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದರು. ತಂದೆಯವರ ಸಹಕಾರ ಕ್ಷೇತ್ರದ ಕಾರ್ಯಗಳನ್ನು ನೋಡುತ್ತಾ ಪ್ರೇರಣೆಗೊಂಡು ಸಾರ್ವಜನಿಕ ಸೇವೆ ಮಾಡುವ ನಿಟ್ಟಿನಲ್ಲಿ ಸಹಕಾರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿರುವುದಾಗಿ ಮೊಳ್ಳೇರ ಎಂ.ಪಿ. ರತ್ನ ಪೂಣಚ್ಚ ತಿಳಿಸಿದರು.
2004ರಲ್ಲಿ ಮೊದಲ ಬಾರಿಗೆ ಅಮ್ಮತ್ತಿ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತ(A.P.C.M.S.) ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಗೊಂಡು ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. 2010ರಲ್ಲಿ ಎರಡನೆ ಬಾರಿಗೆ ಆಯ್ಕೆಗೊಂಡು ನಿರ್ದೇಶಕರಾಗಿ ಕಾರ್ಯನಿರ್ವಹಣೆ. 2015ರಲ್ಲಿ ಆಯ್ಕೆಗೊಂಡು ಉಪಾಧ್ಯಕ್ಷರಾಗಿ ಕಾರ್ಯನಿರ್ವಹಣೆ. ತದ ನಂತರ 2020ರ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಗೊಂಡು ಪ್ರಸ್ತುತ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಾಗೆ 2015-20ರ ಸಾಲಿನಲ್ಲಿ ವಿರಾಜಪೇಟೆ ಜೇನು ಮತ್ತು ಮೇಣ ಸಹಕಾರ ಸಂಘ ನಿಯಮಿತ ಇದರ ನಿರ್ದೇಶಕರಾಗಿ, 2020 ರಿಂದ ಪ್ರಸ್ತುತ ಎರಡನೇ ಅವಧಿಗೆ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸರಿ ಸುಮಾರು 39 ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಅಮ್ಮತ್ತಿ ಎ.ಪಿ.ಸಿ.ಎಂ.ಎಸ್. ಲಾಭದಲ್ಲಿ ನಡೆಯುತ್ತಿದೆ ಎಂದ ರತ್ನ ಪೂಣಚ್ಚನವರು, ಗೊಬ್ಬರ ಮಾರಾಟ, ಕೃಷಿ ಪರಿಕರಗಳ ಮಾರಾಟ, ಅಕ್ಕಿಗಿರಣಿ, ವಾಣಿಜ್ಯ ಮಳಿಗೆಗಳ ಬಾಡಿಗೆ ರೂಪದ ಆದಾಯ, ಕಾಫಿ, ಕಾಳುಮೆಣಸು, ಭತ್ತ ದಾಸ್ತಾನು ಈಡಿನ ಸಾಲ, ರಿಲಯನ್ಸ್ ಮೊಬೈಲ್ ಟವರ್‌ಗೆ ಸಂಘದ ಜಾಗದ ಬಾಡಿಗೆ ರೂಪದ ಆದಾಯ, ಕಾಫಿ ಕಣ ಬಾಡಿಗೆ, ಪೆಪ್ಪರ್ ಡಿʼಕಾರ್ನರ್ ಯಂತ್ರದ ಬಾಡಿಗೆ ಹಾಗೂ ಸಂಘದ ಮೂರು ಎಕರೆ ಕಾಫಿ ತೋಟ ಅದರಲ್ಲಿ ಅಂತರ ಬೆಳೆಯಾಗಿ ಅಡಿಕೆ, ಕರಿಮೆಣಸು ಇದರಿಂದ ದೊರಕುವ ಆದಾಯ. ಸಂಘದ ವತಿಯಿಂದ ನಡೆಸಲ್ಪಡುತ್ತಿರುವ ನ್ಯಾಯಬೆಲೆ ಅಂಗಡಿಗಳು ಮುಂತಾದ ಮೂಲಗಳಿಂದ ಅಮ್ಮತ್ತಿ ಎ.ಪಿ.ಸಿ.ಎಂ.ಎಸ್ ಗೆ ಲಾಭ ಬರುತ್ತಿದೆ ಎಂದು ಅಧ್ಯಕ್ಷರಾದ ರತ್ನ ಪೂಣಚ್ಚ ತಿಳಿಸಿದರು.
ಮೊಳ್ಳೇರ ಎಂ.ಪಿ. ರತ್ನ ಪೂಣಚ್ಚನವರು ತಮ್ಮ ಅಧಿಕಾರವಧಿಯಲ್ಲಿ ಅಮ್ಮತ್ತಿ ಎ.ಪಿ.ಸಿ.ಎಂ.ಎಸ್ ನಲ್ಲಿ ಕಾಫಿ ಹಲ್ಲಿಂಗ್ ಯಂತ್ರವನ್ನು ಅಳವಡಿಸುವಲ್ಲಿ ಹಾಗೂ ಮೆಣಸು ಮತ್ತು ಭತ್ತ ದಾಸ್ತಾನು ಮಾಡಲು ಎರಡು ಗೋದಾಮುಗಳನ್ನು ನಿರ್ಮಾಣ ಮಾಡುವಲ್ಲೂ ಶ್ರಮವಹಿಸಿದ್ದಾರೆ. ಅಂದಾಜು 2ಕೋಟಿ ವೆಚ್ಚದಲ್ಲಿ ಅಮ್ಮತ್ತಿ ಎ.ಪಿ.ಸಿ.ಎಂ.ಎಸ್ ನ ನೂತನ ಆಡಳಿತ ಕಚೇರಿ, ಸಭಾಂಗಣ, ಸಮುದಾಯ ಭವನ ಹಾಗೂ ಗೋದಾಮುಗಳ ನಿರ್ಮಾಣಕ್ಕೆ ನೀಲನಕ್ಷೆ ತಯಾರಾಗಿದ್ದು, ಇದನ್ನು ಅತಿ ಶೀಘ್ರದಲ್ಲಿ ಕಾರ್ಯರೂಪಕ್ಕೆ ತರಲಾಗುವುದು ಎಂದು ರತ್ನ ಪೂಣಚ್ಚ ಈ ಸಂದರ್ಭದಲ್ಲಿ ತಿಳಿಸಿದರು.
ಅಮ್ಮತ್ತಿ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತ (ಎ.ಪಿ.ಸಿ.ಎಂ.ಎಸ್) ಲಾಭವನ್ನು ಹೊಂದಿ ಪ್ರಗತಿಯತ್ತ ಸಾಗಲು ಸಂಘದ ಆಡಳಿತ ಮಂಡಳಿ, ಸದಸ್ಯರು, ಸಿಬ್ಬಂದಿಗಳು ಹಾಗೂ ಗ್ರಾಹಕರ ಸಹಕಾರ ಅತ್ಯುತ್ತಮವಾಗಿ ದೊರಕುತಿದೆ ಎಂದು ಈ ಸಂದರ್ಭದಲ್ಲಿ ಮೊಳ್ಳೇರ ಎಂ.ಪಿ. ರತ್ನ ಪೂಣಚ್ಚನವರು, ತಿಳಿಸಿದರು.
ಸಹಕಾರ ಕ್ಷೇತ್ರಕ್ಕೆ ತನ್ನದೆ ಆದ ಇತಿಹಾಸವಿದ್ದು, ಪಾರದಶರ್ಕ ಆಡಳಿತ, ಸೇವಾ ಮನೋಭಾವನೆಯಿಂದ ಕೂಡಿದ ಸಹಕಾರಿಗಳು ಇದ್ದರೆ ಸಹಕಾರ ಕ್ಷೇತ್ರ ಇನ್ನಷ್ಟು ಅಭಿವೃದ್ಧಿ ಹೊಂದುತ್ತದೆ ಎಂದ ರತ್ನ ಪೂಣಚ್ಚನವರು, ಸರ್ಕಾರದ ಹಸ್ತಕ್ಷೇಪ ಸಹಕಾರ ಸಂಘಗಳಲ್ಲಿ ಇರಬಾರದು ಹಾಗೆ ಸಹಕಾರ ಕ್ಷೇತ್ರವು ಸಹಕಾರ ಕ್ಷೇತ್ರವಾಗಿಯೇ ಉಳಿಯಬೇಕು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.
ಸಹಕಾರಿ ಕ್ಷೇತ್ರಕ್ಕೆ ಹೆಚ್ಚು ಹೆಚ್ಚು ಯುವಶಕ್ತಿಯು ಪಾಲ್ಗೊಂಡು ಸೇವಾ ಮನೋಭಾವದಿಂದ ಸ್ವಾರ್ಥರಹಿತವಾಗಿ ಆತ್ಮತೃಪ್ತಿಯಿಂದ ಸೇವೆ ಸಲ್ಲಿಸಬೇಕು ಹಾಗೂ ಹಿರಿಯ ಸಹಕಾರಿಗಳಿಂದ ಸಲಹೆ ಸೂಚನೆಗಳನ್ನು ಪಡೆದು ಸಹಕಾರ ಕ್ಷೇತ್ರದ ಪ್ರಗತಿಗೆ ತಮ್ಮನ್ನು ತೊಡಿಗಿಸಿಕೊಳ್ಳಬೇಕು ಎಂದು ಸಹಕಾರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುತ್ತಿರುವ ಭಾವಿ ಯುವಶಕ್ತಿಗೆ ರತ್ನ ಪೂಣಚ್ಚನವರು ತಮ್ಮ ಸಂದೇಶವನ್ನು ಈ ಸಂದರ್ಭದಲ್ಲಿ ನೀಡಿದರು.
ರಾಜಕೀಯ ಕ್ಷೇತ್ರದಲ್ಲಿ ವಿರಾಜಪೇಟೆ ತಾಲೂಕಿನ ಬಿ.ಜೆ.ಪಿ. ಕೃಷಿ ಮೋರ್ಚಾ ಸದಸ್ಯರಾಗಿ ಹಾಗೂ ಬಿ.ಜೆ.ಪಿ.ಯ ಸಕ್ರಿಯ ಕಾರ್ಯಕರ್ತರಾಗಿದ್ದಾರೆ. ಸಾಮಾಜಿಕ ಕ್ಷೇತ್ರದಲ್ಲಿ ಅಮ್ಮತಿ ಸ್ಪೋರ್ಟ್ಸ್ ಕ್ಲಬ್‌ನಲ್ಲಿ 10 ವರ್ಷ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಹೊಸೂರು ಬೆಟ್ಟಗೇರಿಯ ಶ್ರೀ ಮಹದೇಶ್ವರ ದೇವಾಲಯ ಇದರ ಆಡಳಿತ ಮಂಡಳಿ ನಿರ್ದೇಶಕರಾಗಿ ಪ್ರಸ್ತುತ ಸೇವೆ ಸಲ್ಲಿಸುತ್ತಿದ್ದಾರೆ. ಶೈಕ್ಷಣಿಕ ಕ್ಷೇತ್ರದಲ್ಲಿ ಅಮ್ಮತಿ ಫ್ರೌಢಶಾಲೆಯ ಆಡಳಿತ ಮಂಡಳಿ ಸದಸ್ಯರಾಗಿದ್ರಾರೆ.
ರತ್ನ ಪೂಣಚ್ಚನವರು, ತಂದೆ ಎಂ.ಕೆ. ಪೂವಯ್ಯ ಹಾಗೂ ತಾಯಿ ಎಂ.ಪಿ. ದೇಚಮ್ಮ ದಂಪತಿಗಳ ಪುತ್ರರಾಗಿದ್ದಾರೆ. ಪತ್ನಿ ಪ್ರೀತ್‌ಪೂಣಚ್ಚ ಗೃಹಿಣಿಯಾಗಿದ್ದಾರೆ. ಮಗ ತ್ರೀಶೂಲ್ ಪೂವಯ್ಯ ಬಿ.ಕಾಂ. ಪಧವಿದರರಾಗಿದ್ದಾರೆ.
ಮೂಲತಃ ಕೃಷಿಕರು ಹಾಗೂ ಉದ್ಯಮಿಯಾಗಿರುವ 57 ವರ್ಷ ಪ್ರಾಯದ ಮೊಳ್ಳೇರ ಎಂ.ಪಿ. ರತ್ನ ಪೂಣಚ್ಚನವರು, ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಟ್ಟಗೇರಿ ಗ್ರಾಮದಲ್ಲಿ ನೆಲೆಸಿದ್ದಾರೆ. ಇವರ ಸಹಕಾರ, ಸಾಮಾಜಿಕ ಹಾಗೂ ರಾಜಕೀಯ ಸೇವೆಯು ಹೀಗೆ ನಿರಂತರವಾಗಿ ಮುಂದುವರೆಯಲಿ ಎಂದು “ಸರ್ಚ್ ಕೂರ್ಗ್ ಮೀಡಿಯಾ” ವು ಹಾರೈಸುತ್ತದೆ.
ಸಂದರ್ಶನ ದಿನಾಂಕ: 10-12-2021
Search Coorg Media
Coorg’s Largest Online Media Network