ಎನ್.ಸಿ ಅನಂತ್ ಊರುಬೈಲು, ಸಹಕಾರಿಗಳು: ಸಂಪಾಜೆ. Sampaje

Reading Time: 8 minutes

ಎನ್.ಸಿ ಅನಂತ್ ಊರುಬೈಲು, ಸಹಕಾರಿಗಳು: ಸಂಪಾಜೆ. Sampaje

ಎನ್.ಸಿ ಅನಂತ್ ಊರುಬೈಲು, ಸಹಕಾರಿಗಳು: ಸಂಪಾಜೆ. Sampaje
ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಮಡಿಕೇರಿ-ಬಂಟ್ವಾಳ ರಾಷ್ಟ್ರೀಯ ಹೆದ್ದಾರಿಯಲ್ಲಿನ ಮಡಿಕೇರಿಯಿಂದ ಸರಿ ಸುಮಾರು 28 ಕೀ. ಮೀ. ಅಂತರದಲ್ಲಿ ಸಿಗುವ ಸಂಪಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎನ್.ಸಿ ಅನಂತ್ ಊರುಬೈಲುರವರು ಪ್ರಸ್ತುತ ಕಾರ್ಯ ನಿರ್ವಹಿಸುತ್ತಿದ್ದಾರೆ.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಎನ್.ಸಿ ಅನಂತ್ ಊರುಬೈಲುರವರು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಸಹಕಾರಿ ಕಲ್ಪನೆ ಮೂಡಿದಾಗ ಸ್ವಯಂ ಇಚ್ಛೆಯಿಂದ ಸಾಮಾಜಿಕ ಸೇವೆಯನ್ನು ಮಾಡುವ ಅಭಿಲಾಷೆಯಿಂದೊಡಗೂಡಿ ಸಹಕಾರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು. ಅಭದ್ರತೆಯಿಂದ ಕೂಡಿದ ಜನಸಾಮಾನ್ಯರ ಬದುಕಿನಲ್ಲಿ ಆಶಾಕಿರಣ ಮೂಡಿಸುವ ನಿಟ್ಟಿನಲ್ಲಿ ಹಾಗೂ ಅವರಿಗೆ ಜೀವನ ಸಾಗಿಸಲು ಇರುವಂತಹ ಸೌಲಭ್ಯಗಳನ್ನು ಒದಗಿಸಲು  ಸಹಕಾರ ಉತ್ತಮವಾದ ಕ್ಷೇತ್ರ ಎಂಬುವುದು ಅನಂತ್‌ ರವರು ಕಂಡುಕೊಂಡ ಮಾರ್ಗ.

2005ರಲ್ಲಿ ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಭವಗೊಂಡ ಅನಂತ್‌ರವರು, ಮಗದೊಮ್ಮೆ 2010ರಲ್ಲಿ ನಡೆದ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಭವಗೊಂಡರು. ತದ ನಂತರ 2015ರಲ್ಲಿ ನಡೆದ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಗೊಂಡು ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಾರೆ. 2019ರಲ್ಲಿ ಅಂದಿನ ಆಧ್ಯಕ್ಷರಾಗಿದ್ದ ಬಾಲಚಂದ್ರ ಕಳಗಿಯವರ ಅಕಾಲಿಕ ಮರಣಾನಂತರ  ಆಡಳಿತ ಮಂಡಳಿಯ ಸರ್ವಾನುಮತದಿಂದ ಆಯ್ಕೆಯೊಂದಿಗೆ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಾರೆ. 2020ರ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಗೊಂಡು ಇದೀಗ ಪ್ರಸ್ತುತ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 1993ರಲ್ಲಿ ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯತ್ವವನ್ನು ಪಡೆದು ಸಹಕಾರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ಎನ್.ಸಿ ಅನಂತ್‌ರವರು ಸರಿ ಸುಮಾರು 28 ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 

2019-20ರಲ್ಲಿ 16,02,399/- ಲಕ್ಷ ಲಾಭವನ್ನು  ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಪಡೆದಿದೆ ಎಂದ ಎನ್.ಸಿ ಅನಂತ್‌ರವರು, ಸದಸ್ಯರಿಗೆ ಶೇಕಡ 6.5% ರಷ್ಟು ಡಿವಿಡೆಂಡ್‌ ನಿಡಲಾಗಿತ್ತು ಎಂದರು. ಸಂಘವು ಲಾಭವನ್ನು ಹೊಂದಲು ಸಂಘದ ಸದಸ್ಯರು ಪಡೆದ ಸಾಲಗಳ ಸಕಾಲ ಮರುಪಾವತಿ ಪ್ರಮುಖ ಕಾರಣ ಎಂದ ಅನಂತ್‌ರವರು, ಗೊಬ್ಬರ ಮಾರಾಟ, ಕೃಷಿ ಪರಿಕರಗಳ ಮಾರಾಟ, ರಬ್ಬರ್‌ ಹಾಗೂ ಅಡಿಕೆ ಖರೀದಿ, ಕೀಟನಾಶಕಗಳ ಮಾರಾಟ, ಸಿಮೆಂಟ್‌ ಮಾರಾಟ, ಹಾರ್ಡ್‌ವೇರ್‌ ಮಳಿಗೆಯ ವ್ಯಾವಾರ ವಹಿವಾಟು, ವಾಣಿಜ್ಯ ಮಳಿಗೆಗಳು ಹಾಗೂ ಸಭಾಂಗಣದ ಬಾಡಿಗೆ ರೂಪದ ಆದಾಯ, ಜಾಮೀನು ಸಾಲ, ಆಭರಣ ಸಾಲ, ವಾಹನ ಸಾಲ, ಕೃಷಿ ಯಂತ್ರೋಪಕರಣ ಸಾಲ, ಮಧ್ಯಮಾವಧಿ ಹಾಗೂ ಧೀರ್ಘಾವಧಿ ಸಾಲಗಳು, ಸ್ವಸಹಾಯ ಸಂಘಗಳ ಸಾಲ, ಕೆ.ಸಿ.ಸಿ. ಸಾಲ, ಕೃಷಿ ಅಭ್ಯುದಯ ಸಾಲ, ಮನೆನಿರ್ಮಾಣ ಸಾಲ, ಪಿಗ್ಮಿಸಾಲ, ಗೃಹ ಬಳಕೆ ವಸ್ತುಗಳ ಖರೀದಿಗೆ ಬಳಕೆ ಸಾಲ ಹಾಗೂ ಇನ್ನಿತರ ಹಲವು ಬಗೆಯ ಸಾಲಗಳನ್ನು ನೀಡುತ್ತಿರುವುದರಿಂದ ಸಂಘವು ಲಾಭವನ್ನು ಪಡೆದು ಪ್ರಗತಿಯತ್ತ ಸಾಗುತ್ತಿದೆ ಎಂದರು.

ಎನ್.ಸಿ ಅನಂತ್‌ರವರು ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ತಮ್ಮ ಅಧಿಕಾರವಧಿಯಲ್ಲಿ 60ಲಕ್ಷ ವೆಚ್ಚದಲ್ಲಿ ಸುಸಜ್ಜಿತವಾದ ಗೋದಾಮು ಒಂದನ್ನು ಚೆಂಬು ಶಾಖೆಯಲ್ಲಿ ನಿರ್ಮಿಸುವಲ್ಲಿ ಶ್ರಮ ವಹಿಸಿದ್ದಾರೆ. ಹಾಗೆ 40ಲಕ್ಷ ವೆಚ್ಚದಲ್ಲಿ ಬಾಲಚಂದ್ರ ಕಳಗಿ ವೇದಿಕೆ ಎಂದು ನಾಮಕರಣ ಮಾಡಿ ಸಂಘದ ಮುಖ್ಯ ಕಛೇರಿಯ ಮೇಲ್ಭಾಗದಲ್ಲಿ ಸಂಭಾಗಣವನ್ನು ನವೀಕರಣಗೊಳಿಸಿದ್ದಾರೆ. ಸಂಘದ ಮುಖ್ಯ ಕಛೇರಿಯ ನವೀಕರಣದೊಂದಿಗೆ  ಸಂಘದ ವಹಿವಾಟನ್ನು ಸಂಪೂರ್ಣ ಗಣಕೀಕರಣಗೊಳಿಸಿ ಡಿಜಿಟಲೈಶೇಷನ್‌ ಮಾಡಲಾಗಿದ್ದು, ಬಯೋ ಮೆಟ್ರಿಕ್‌ ಹಾಜರಾತಿ, ಮೈಕ್ರೋ ಎಟಿಎಂ ವ್ಯವಸ್ಥೆ, RTGS ಹಾಗೂ NEFT ವ್ಯವಸ್ಥೆಯಿದ್ದು, ಹಣಕಾಸು ಪಾವತಿಯನ್ನು ಸಂಪೂರ್ಣವಾಗಿ ಆನ್‌ಲೈನ್‌ ಮಾಡುವಲ್ಲಿ ಶ್ರಮವಹಿಸಿದ್ದಾರೆ. ಸ್ವದೇಶಿ ಕಲ್ಪನೆಯ ಮೋದಿಕೇರ್‌ ಸೆಂಟರ್‌ನ್ನು ಪ್ರಾರಂಭಿಸಿದ್ದಾರೆ. ಸಂಘದ ಸದಸ್ಯರನ್ನು ಒಳಗೊಂಡು ಸಂಘದ ಕಾರ್ಯ ವ್ಯಾಪ್ತಿಯ ಗ್ರಾಮಗಳ ಸರ್ವರಿಗೂ ಆಯುಷ್ಮಾನ್‌ ಭಾರತ್‌ ಕಾರ್ಡ್‌ನ್ನು ಒದಗಿಸಿಕೊಟ್ಟಿರುವುದು ಇವರ ಹೆಗ್ಗಳಿಕೆಯಾಗಿದೆ.

ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ 2018ರಲ್ಲಿ ಹಾಗೂ 2019ರಲ್ಲಿ ಕೊಡಗಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಸಂತ್ರಸ್ತರಾದವರಿಗೆ ಸಹಾಯಧನ ನೀಡಲಾಗಿತ್ತು ಹಾಗೆ ಕೋವಿಡ್-19ರ ಸಂದರ್ಭದಲ್ಲಿ ಅಗತ್ಯವಿರುವವರಿಗೆ ಆಹಾರ‌ ಕಿಟ್ ವಿತರಣೆಯನ್ನು ಮಾಡಲಾಗಿದ್ದು, ಊರಿಗೆ ಪೂರ್ಣವಾಗಿ ಸ್ಯಾನಿಟೈಸರ್ ಸಿಂಪಡಣೆ ಮಾಡಲಾಗಿತ್ತು ಎಂದ ಎನ್.ಸಿ ಅನಂತ್‌ರವರು ಕೊವೀಡ್‌ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ಮಾಡಲಾಗಿತ್ತು ಎಂದರು. ಲಾಕ್‌ಡೌನ್‌ ಸಂದರ್ಭದಲ್ಲಿ ಸಂಘದ ಸದಸ್ಯರಿಗೆ ತಲಾ 25ಸಾವಿರದಂತೆ 6ತಿಂಗಳ ಅವಧಿಯವರಗೆ ಬಡ್ಡಿ ರಹಿತ ಸಾಲವನ್ನು ನೀಡಲಾಗಿದ್ದು, ಇದರ ಸದುಪಯೋಗವನ್ನು ಸಂಘದ ಸದಸ್ಯರು ಪಡೆದುಕೊಂಡರು ಎಂದು ಈ ಸಂದರ್ಭದಲ್ಲಿ ತಿಳಿಸಿದರು.

ವಿಶೇಷವಾಗಿ ಕೊಡಗು ಡಿಸಿಸಿ ಬ್ಯಾಂಕಿನ ಶಾಖೆಯೊಂದು ಸಂಪಾಜೆ ವಲಯದಲ್ಲಿ ಪ್ರಾರಂಭಿಸಲು ಅಗತ್ಯ ನೆರವು ನೀಡಲಾಗುತ್ತಿದ್ದು, ಈ ವರ್ಷದ ಅಂತ್ಯದೊಳಗೆ ಕಾರ್ಯಾಚರಿಸುತ್ತದೆ ಎಂದ ಎನ್.ಸಿ ಅನಂತ್‌ರವರು, ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಣ್ಣು ಪರೀಕ್ಷಾ ಕೇಂದ್ರವನ್ನು ಪ್ರಾರಂಭಿಸಿ ಅದಕ್ಕೆ ಪೂರಕವಾದ ರಸ ಗೊಬ್ಬರ ಪೂರೈಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದರು. ಅಂದಾಜು 30ಲಕ್ಷ ವೆಚ್ಚದಲ್ಲಿ ಸುಸಜ್ಜಿತವಾದ ಗೋದಾಮು ನಿರ್ಮಿಸುವ ನಿಟ್ಟಿನಲ್ಲಿನ ಕಾರ್ಯವು ಪ್ರಗತಿಯಲ್ಲಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.

ಗ್ರಾಮೀಣ ಭಾರತ ಕಲ್ಪನೆಯಡಿಯಲ್ಲಿ ಸಂಘದ ಮಹಿಳಾ ಸದಸ್ಯರಿಗೆ ಮೊಟ್ಟೆ ಕೋಳಿ ಸಾಕಾಣಿಕ ಘಟಕ ಪ್ರಾರಂಭಿಸಲು ಆರ್ಥಿಕ ನೆರವು ನೀಡುವಲ್ಲಿ ಸಂಘವು ಹೆಜ್ಜೆಯಿಟ್ಟಿದ್ದು, ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಒತ್ತು ನೀಡಲಾಗುತ್ತಿದೆ ಎಂದ ಎಂ.ಸಿ. ಅನಂತ್‌ರವರು, ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಲಾಭವನ್ನು ಹೊಂದಿ ಪ್ರಗತಿಯತ್ತ ಸಾಗಲು ಆಡಳಿತ ಮಂಡಳಿ, ಸದಸ್ಯರು, ಸಿಬ್ಬಂದಿಗಳು ಹಾಗೂ ಗ್ರಾಹಕರ ಸಹಕಾರ ಅತ್ಯುತ್ತಮವಾಗಿ ದೊರಕುತಿದೆ ಎಂದು ಈ ಸಂದರ್ಭದಲ್ಲಿ ಎನ್.ಸಿ ಅನಂತ್‌ರವರು  ತಿಳಿಸಿದರು.

ಸಹಕಾರ ಕ್ಷೇತ್ರಕ್ಕೆ ತನ್ನದೆ ಆದ ಇತಿಹಾಸವಿದ್ದು, ಪಾರದಶರ್ಕ ಆಡಳಿತ, ಸೇವಾ ಮನೋಭಾವನೆಯಿಂದ ಕೂಡಿದ ಸಹಕಾರಿಗಳು ಇದ್ದರೆ ಸಹಕಾರ ಕ್ಷೇತ್ರ ಇನ್ನಷ್ಟು ಅಭಿವೃದ್ಧಿ ಹೊಂದುತ್ತದೆ ಎಂದ ಎನ್.ಸಿ ಅನಂತ್‌ರವರು, ಸರ್ಕಾರದ ಹಸ್ತಕ್ಷೇಪ ಸಹಕಾರ ಸಂಘಗಳಲ್ಲಿ ಇರಬಾರದು ಹಾಗೆ ಸಹಕಾರ ಕ್ಷೇತ್ರವು ಸಹಕಾರ ಕ್ಷೇತ್ರವಾಗಿಯೇ ಉಳಿಯಬೇಕು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.  

ಸಹಕಾರಿ ಕ್ಷೇತ್ರಕ್ಕೆ ಹೆಚ್ಚು ಹೆಚ್ಚು ಯುವಶಕ್ತಿಯು ಪಾಲ್ಗೊಂಡು ಸೇವಾ ಮನೋಭಾವದಿಂದ ಸ್ವಾರ್ಥರಹಿತವಾಗಿ ಆತ್ಮತೃಪ್ತಿಯಿಂದ ಸೇವೆ ಸಲ್ಲಿಸಬೇಕು ಹಾಗೂ ಹಿರಿಯ ಸಹಕಾರಿಗಳಿಂದ ಸಲಹೆ ಸೂಚನೆಗಳನ್ನು ಪಡೆದು ಸಹಕಾರ ಕ್ಷೇತ್ರದ ಪ್ರಗತಿಗೆ ತಮ್ಮನ್ನು ತೊಡಿಗಿಸಿಕೊಳ್ಳಬೇಕು ಎಂದು ಸಹಕಾರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುತ್ತಿರುವ  ಭಾವಿ ಯುವಶಕ್ತಿಗೆ ಎನ್.ಸಿ ಅನಂತ್‌ರವರು, ತಮ್ಮ ಸಂದೇಶವನ್ನು ಈ ಸಂದರ್ಭದಲ್ಲಿ ನೀಡಿದರು.

ಸಹಕಾರ ಕ್ಷೇತ್ರದ ಇನ್ನೋಂದು ಮಜಲಾದ ಮಡಿಕೇರಿ ಎ.ಪಿ.ಎಂ.ಸಿ. ಯ ಉಪಾಧ್ಯಕ್ಷರಾಗಿ ಹಾಗೂ ಹಾಲಿ ಸದಸ್ಯರಾಗಿರುವ ಅನಂತ್‌ರವರು, ಮಡಿಕೇರಿ ತಾಲ್ಲೂಕು ಬಿ.ಜೆ.ಪಿ. ರೈತ ಮೋರ್ಚಾದ ಪ್ರಧಾನಾ ಕಾರ್ಯದರ್ಶಿಗಳಾಗಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಾಗೇ ಚೆಂಬು ಗ್ರಾಮ ಪಂಚಾಯಿತಿಯ ಸದಸ್ಯರಾಗಿ ಕಳೆದ ಐದು ವರ್ಷಗಲ ಕಾಲ ಸೇವೆ ಸಲ್ಲಿಸಿದ್ದಾರೆ. ಬಿ.ಜೆ.ಪಿ. ಸಕ್ರೀಯ ಕಾರ್ಯಕರ್ತರಾಗಿ ರಾಜಕೀಯ ಕ್ಷೇತ್ರದಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ.

ಸಾಮಾಜಿಕ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಎನ್.ಸಿ ಅನಂತ್‌ರವರು ಸಂಪಾಜೆ ಹೋಬಳಿಯ ರಬ್ಬರ್‌ ಉತ್ಪಾದಕರ ಸಂಘದ ನಿರ್ದೇಶಕರಾಗಿ ಹಾಗೂ ಶ್ರೀ ಭಗವಾನ್ ಸಂಘ ಊರುಬೈಲು ಇದರ ಸ್ಥಾಪಕ ಅಧ್ಯಕ್ಷರು ಹಾಗೆ ಪ್ರಸ್ತುತ ಗೌರವಾಧ್ಯಕ್ಷರಾಗಿ ಸೇವೆ. ಕನ್ನಡ ಸಾಹಿತ್ಯ ಪರಿಷತ್‌ನ ಸಂಪಾಜೆ ಹೋಬಳಿಯ ಅಧ್ಯಕ್ಷರಾಗಿ ಸಲ್ಲಿಸುತ್ತಿದ್ದಾರೆ. ಸಂಪಾಜೆ ಗ್ರಾಮದ ಅರೆಕಲ್ಲು ಅಯ್ಯಪ್ಪ ದೇವಾಲಯದ ಜಿರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷರಾಗಿ ಸೇವೆ. ಮದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಚಾಮುಂಡೇಶ್ವರಿ ದೇವಾಲಯದ ಬ್ರಹ್ಮಕಳಸ ಪ್ರತಿಷ್ಠಾಪನೆಯ ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಾ ಧಾರ್ಮಿಕ ಕ್ಷೇತ್ರದಲ್ಲೂ ಸಕ್ರೀಯರಾಗಿದ್ದಾರೆ. ಸಂಪಾಜೆ ಎಜುಕೇಷನ್‌ ಸೊಸೈಟಿಯ ಆಡಳಿತ ಮಂಡಳಿಯ ನಿರ್ದೆಶಕರಾಗಿ ಪ್ರಸ್ತುತ ಸೇವೆ ಸಲ್ಲಿಸುತ್ತಾ ಶೈಕ್ಷಣಿಕ ಕ್ಷೇತ್ರದಲ್ಲೂ ತಮ್ಮ ಛಾಪನ್ನು ಮೂಡಿಸಿದ್ದಾರೆ.

ಮೂಲತಃ ಕೃಷಿಕರಾಗಿರುವ ಹಾಗೂ ವಕೀಲರಾಗಿರುವ ಎನ್.ಸಿ ಅನಂತ್‌ರವರು ಶಿಕ್ಷಕರಾಗಿದ್ದ ದಿವಂಗತ ಎನ್.ಬಿ.ಚಿನ್ನಪ್ಪ ಹಾಗೂ ಪದ್ಮಾವತಿ ದಂಪತಿಯ ಮಗನಾಗಿದ್ದಾರೆ. ಪತ್ನಿ ಬೀನಾ ಗೃಹಿಣಿಯಾಗಿದ್ದಾರೆ. ಹಿರಿಮಗಳು ಅನನ್ಯ ಅನಂತ್ ಪದವಿ ವ್ಯಾಸಂಗ ನಿರತರಾಗಿದ್ದಾರೆ.‌ ಕಿರಿಮಗಳು ಆಸ್ತಾ ಅನಂತ್‌ ಪಿ.ಯು.ಸಿ. ವ್ಯಾಸಂಗ ನಿರತರಾಗಿದ್ದಾರೆ.. ಎನ್.ಸಿ ಅನಂತ್‌ ಊರುಬೈಲುರವರು ಪ್ರಸ್ತುತ ಕುಟುಂಬ ಸಮೇತ ಚೆಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಊರುಬೈಲು ಚೆಂಬು ಗ್ರಾಮದಲ್ಲಿ ನೆಲೆಸಿದ್ದಾರೆ. ಇವರ ಸಹಕಾರ, ಸಾಮಾಜಿಕ ಹಾಗೂ ರಾಜಕೀಯ ಸೇವೆಯು ಹೀಗೆ ನಿರಂತರವಾಗಿ ಮುಂದುವರೆಯಲಿ ಎಂದು “ಸರ್ಚ್‌ ಕೂರ್ಗ್ ಮೀಡಿಯಾ” ವು  ಹಾರೈಸುತ್ತದೆ.


ಸಂದರ್ಶನ ದಿನಾಂಕ: 06-09-2021


Search Coorg Media

Coorg’s Largest Online Media Network 

About ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.

Comments are closed.