ಪುದಿಯೊಕ್ಕಡ ಎಂ. ಮಧುಕುಮಾರ್, ಸಹಕಾರಿಗಳು: ಮೂರ್ನಾಡು – Murnadu
ಮೂರ್ನಾಡು ಸಮೀಪದ ಕಿಗ್ಗಾಲು ಗ್ರಾಮದವರಾದ ಕೊಡಗಿನ ಹಿರಿಯ ಸಹಕಾರಿಗಳಾಗಿದ್ದ ದಿವಂಗತ ಕೆ.ಸಿ.ರಾಮಮೂರ್ತಿ ಅವರ ಸಲಹೆ ಮೇರೆಗೆ ಮಧುಕುಮಾರ್ ಅವರು ಸಹಕಾರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದಾರೆ.
2001ರಲ್ಲಿ ಕಿಗ್ಗಾಲು ಸಹಕಾರ ದವಸ ಭಂಡಾರದ ಕಾರ್ಯದರ್ಶಿಯಾಗಿ ಸಹಕಾರ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡ ಮಧುಕುಮಾರ್ ಅವರು 2008ರಲ್ಲಿ ಮೂರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸಿ ನಿರ್ದೇಶಕರಾಗಿ ಆಯ್ಕೆಯಾದರು. ಅಲ್ಲಿಂದ 2013ರ ಚುನಾವಣೆಯಲ್ಲಿ ಸ್ಪರ್ಧಿಸಿ ಮರಳಿ ಆಯ್ಕೆಗೊಂಡು ನಿರ್ದೇಶಕರಾದರು. 2018 ರ ಚುನಾವಣೆಯಲ್ಲಿ ಮತ್ತೋಮ್ಮೆ ಸ್ಪರ್ಧಿಸಿ ಆಯ್ಕೆಗೊಂಡು ಇದೀಗ ಪ್ರಸ್ತುತ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
1998ರಲ್ಲಿ ಮೂರ್ನಾಡು ಫ್ಯಾಕ್ಸ್‌ನ ಸದಸ್ಯತ್ವ ಪಡೆದ ಪುದಿಯೊಕ್ಕಡ ಎಂ. ಮಧುಕುಮಾರ್ ಅವರು ಕಳೆದ 23 ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಮೂರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2019-20 ರಲ್ಲಿ 16.11 ಲಕ್ಷ ಲಾಭದಲ್ಲಿದ್ದೂ, ಸದಸ್ಯರು ಸಂಘದಿಂದ ಪಡೆದ ಸಾಲವನ್ನು ಸಕಾಲದಲ್ಲಿ ಮರು ಪಾವತಿ ಮಾಡಿರುವುದು ಮುಖ್ಯ ಕಾರಣ ಎಂದ ಮಧುಕುಮಾರ್, ಸಂಘದ ವತಿಯಿಂದ ನೀಡಲ್ಪಡುವ ಗೊಬ್ಬರ ಸಾಲ, ವಾಹನ ಸಾಲ, ಕೃಷಿ ಸಾಲ, ಆಭರಣ ಸಾಲ ಹಾಗೂ ಜಾಮೀನು ಸಾಲಗಳಿಂದ ಸಂಘ ಲಾಭಗಳಿಸಿದೆ ಎಂದರು. ಹಾಗೆಯೇ ಗೊಬ್ಬರ ಮಾರಾಟದಿಂದಲೂ ಸಂಘವು ಲಾಭಗಳಿಸಿದೆ ಎಂದು ತಿಳಿಸಿದರು.
ಸಂಘದ ವತಿಯಿಂದ ನೀಡಲ್ಪಡುತ್ತಿರುವ ಜಮೀನು ಸಾಲ ನನ್ನ ಅಧ್ಯಕ್ಷ ಅವಧಿಯಲ್ಲಿ ಪ್ರಾರಂಭವಾಗಿದ್ದು ಎಂದ ಮಧುಕುಮಾರ್, ಜಾಗದ ಆಧಾರ ರಹಿತರಿಗೂ ಕೆಲವೊಂದು ದಾಖಲೆಗಳ ಆಧಾರದ ಮೇಲೆ ಸಾಲ ನೀಡಲಾಗುತ್ತಿದೆ ಎಂದು ತಿಳಿಸಿದರು.
ಮೂರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಆಡಳಿತ ಕಚೇರಿ ಕಟ್ಟಡ ನಿರ್ಮಾಣ ನಮ್ಮ ಮುಂದಿರುವ ಕ್ರಿಯಾಯೋಜನೆಗಳು ಎಂದ ಮಧುಕುಮಾರ್, ಉತ್ತಮ ಆಡಳಿತ ನಿರ್ವಹಣೆಗಾಗಿ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನಿಂದ ದ್ವಿತೀಯ ಬಹುಮಾನವನ್ನು ಪಡೆದುಕೊಂಡಿದೆ ಎಂದು ತಿಳಿಸಿದರು.
ಮೂರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಲಾಭವನ್ನು ಹೊಂದಿ ಪ್ರಗತಿಯತ್ತ ಸಾಗಲು ಸಂಘದ ಆಡಳಿತ ಮಂಡಳಿ, ಸದಸ್ಯರು, ಸಿಬ್ಬಂದಿ ವರ್ಗದವರು ಹಾಗೂ ಗ್ರಾಹಕರ ಸಹಕಾರ ಉತ್ತಮವಾಗಿದೆ ಎಂದ ಮಧುಕುಮಾರ್, ಸಂಘದ ಸದಸ್ಯರುಗಳಿಗೆ ಹೊಸ ರೀತಿಯ ಸಾಲ ನೀಡುವಲ್ಲಿ ಪ್ರಯತ್ನ ಸಾಗುತ್ತಿದೆ ಎಂದರು. ಅದೇ ರೀತಿ ಐದು ವರ್ಷ ಒಳಗಿನ ಹಳೆಯ ವಾಹನಗಳಿಗೆ ಸಾಲ ನೀಡುವಲ್ಲಿ ಕೂಡ ಪ್ರಯತ್ನ ಸಾಗಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಸಹಕಾರ ಕ್ಷೇತ್ರದಲ್ಲಿ ಸರ್ಕಾರದ ಹಸ್ತಕ್ಷೇಪ ಇರಬಾರದು ಎಂದು ಅಭಿಪ್ರಾಯಪಟ್ಟ ಪುದಿಯೊಕ್ಕಡ ಎಂ. ಮಧುಕುಮಾರ್ ಆಡಳಿತ ಮಂಡಳಿಗೆ ಪೂರ್ಣ ಅಧಿಕಾರ ನೀಡಿದಲ್ಲಿ ಸಹಕಾರ ಕ್ಷೇತ್ರ ಇನ್ನಷ್ಷು ಅಭಿವೃದ್ಧಿ ಕಾಣುತ್ತದೆ ಎಂದರು. ಹಾಗೆಯೇ ಆಡಳಿತ ಮಂಡಳಿಯ ಪಾರದರ್ಶಕ ಆಡಳಿತ ನಿಸ್ವಾರ್ಥ ಸೇವೆಯಿಂದ ಸಹಕಾರ ಕ್ಷೇತ್ರವು ಪ್ರಗತಿಯನ್ನು ಕಾಣಲು ಸಾಧ್ಯ ಎಂದು ಈ ಸಂದರ್ಭದಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಯುವಶಕ್ತಿಯು ಸಹಕಾರಿ ಕ್ಷೇತ್ರದಲ್ಲಿ ಹೆಚ್ಚು ಹೆಚ್ಚು ಪಾಲ್ಗೊಳ್ಳುವಂತಾಗಬೇಕು ಎಂದ ಮಧುಕುಮಾರ್, ಸೇವಾಮನೋಭಾವದಿಂದ ಸ್ವಾರ್ಥರಹಿತರಾಗಿ ಸಹಕಾರ ಕ್ಷೇತ್ರದಲ್ಲಿ ಯವಶಕ್ತಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಸಹಕಾರಿ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುತ್ತಿರುವ ಯುವಶಕ್ತಿಗೆ ತಮ್ಮ ಸಂದೇಶವನ್ನು ತಿಳಿಸಿದರು.
ರಾಜಕೀಯ ಕ್ಷೇತ್ರದಲ್ಲೂ ತಮ್ಮನ್ನು ತೊಡಗಿಸಿಕೊಂಡಿರುವ ಮಧುಕುಮಾರ್ ಅವರು ಭಾರತೀಯ ಜನತಾ ಪಾರ್ಟಿಯ ಮಡಿಕೇರಿ ತಾಲೂಕು ಸಮಿತಿ ಸದಸ್ಯರಾಗಿದ್ದಾರೆ. ಮೂರ್ನಾಡು ಹೋಬಳಿ ಘಟಕದ ಸದಸ್ಯರಾಗಿದ್ದು, ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿದ್ದರೆ.
ಸಾಮಾಜಿಕ ಕ್ಷೇತ್ರದಲ್ಲಿ ಕಿಗ್ಗಾಲು ಚಾಮುಂಡೇಶ್ವರಿ ಮತ್ತು ಈಶ್ವರ ದೇವಾಲಯದ ಅಭಿವೃದ್ಧಿ ಸಮಿತಿಯ ಸಕ್ರಿಯ ಕಾರ್ಯಕರ್ತರಾಗಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಮೂರ್ನಾಡು ವಿದ್ಯಾಸಂಸ್ಥೆಯ ಸದಸ್ಯರಾಗಿದ್ದಾರೆ.
ಮೂಲತಃ ಕೃಷಿಕರಾಗಿರುವ ಪುದಿಯೊಕ್ಕಡ ಎಂ. ಮಧು ಕುಮಾರ್ ಅವರು ದಿವಂಗತ ಪುದಿಯೊಕ್ಕಡ ಮಾಚಯ್ಯ ಮತ್ತು 83 ವರ್ಷ ಪ್ರಾಯದ ಮಾತೃಶ್ರೀ ಅವರಾದ ಶ್ರೀಮತಿ ಕಾಮವ್ವ ದಂಪತಿಯ ಪುತ್ರರಾಗಿದ್ದಾರೆ. ತಾಯಿ ಕಾಮವ್ವ, ಪತ್ನಿ ಕಾವೇರಮ್ಮ, ಮಗಳು ಭೂಮಿಕಾ ಮುತ್ತಮ್ಮ ಹಾಗೂ ಡೆಸಿಕಾ ನೀಲಮ್ಮ, ಮಗ ಅಭೀಶ್ ಉತ್ತಪ್ಪ ಕುಟುಂಬದೊಂದಿಗೆ ಮೂರ್ನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿಗ್ಗಾಲು ಗ್ರಾಮದಲ್ಲಿ ನಲೆಸಿದ್ದಾರೆ. ಇವರ ಸಹಕಾರ, ಸಾಮಾಜಿಕ ಹಾಗೂ ರಾಜಕೀಯ ಸೇವೆಯು ಹೀಗೆ ನಿರಂತರವಾಗಿ ಮುಂದುವರೆಯಲಿ ಎಂದು “ಸರ್ಚ್ ಕೂರ್ಗ್ ಮೀಡಿಯಾ” ಹಾರೈಸುತ್ತದೆ.
ಸಂದರ್ಶನ ದಿನಾಂಕ: 18-03-2021
Search Coorg Media
Coorg’s Largest Online Media Network