• Search Coorg Media

‘ಜಗವೆಲ್ಲ ಮಲಗಿರಲು ಅವನೊಬ್ಬ ಎದ್ದ’: ಬುದ್ಧ ಪೂರ್ಣಿಮೆಯ ವಿಶೇಷ ಲೇಖನ

‘ಜಗವೆಲ್ಲ ಮಲಗಿರಲು ಅವನೊಬ್ಬ ಎದ್ದ’:

ಬುದ್ಧ ಪೂರ್ಣಿಮೆಯ ವಿಶೇಷ ಲೇಖನ

ಬುದ್ಧ ಪೂರ್ಣಿಮೆಯನ್ನು ಕೇವಲ ಬೌದ್ಧರಷ್ಟೆ ಅಲ್ಲದೆ, ದೇಶಾದ್ಯಂತ ಇರುವ ಎಲ್ಲಾ ಸಮುದಾಯದ ಜನರು ಸಂಭ್ರಮದಂದ ಆಚರಿಸುವಂತ ಹಬ್ಬ. ಬುದ್ಧನಿಗೆ ಸಂಬಂಧಿಸಿದ ಮೂರು ಮಹತ್ವಪೂರ್ಣ ತಿಥಿಗಳು ಏಕಕಾಲಕ್ಕೆ ಬರುವುದು ಸಹ ಬುದ್ಧ ಪೂರ್ಣಿಮೆಯ ವಿಶೇಷವಾಗಿದೆ. ಭಗವಾನ್ ಬುದ್ಧನ ಜನ್ಮ, ಜ್ಞಾನ ಪ್ರಾಪ್ತಿ ಮತ್ತು ಮಹಾಪರಿನಿರ್ವಾಣಗಳು ಒಂದೇ ದಿನ ಬರುತ್ತವೆ. ಅಂದರೆ, ಇವೆಲ್ಲವೂ ವೈಶಾಖ ಪೂರ್ಣಿಮಾ ದಿನವೇ ಆಗಿದ್ದವು. ಕ್ರಿ.ಪೂ.563ರ ವೈಶಾಖ ಮಾಸದ ಹುಣ್ಣಿಮೆಯದಿನ ಬುದ್ಧನ ಜನನವಾಗಿತ್ತು.

ಶುದ್ಧೋಧನ ಮತ್ತು ಮಾಯಾದೇವಿಯರ ಪುತ್ರನಾಗಿ ಹುಟ್ಟಿದ ರಾಜಕುಮಾರನೇ ಸಿದ್ದಾರ್ಥ. 16ನೇ ವಯಸ್ಸಿನಲ್ಲೇ ಯಶೋಧರೆ ಎಂಬ ಕನ್ಯೆಯೊಂದಿಗೆ ವಿವಾಹವಾಗಿ, ತಮಗೆ ಹುಟ್ಟಿದ ಮುದ್ದಿನ ಮಗನಿಗೆ ರಾಹುಲ ಎಂದು ಹೆಸರನಿಟ್ಟು ರಾಜ್ಯ, ಸಂಪತ್ತು, ಅಧಿಕಾರ, ಪತ್ನಿ, ಮಗು ಎನ್ನುತ್ತ ನೆಮ್ಮದಿಯಿಂದ ಕಾಲಕಳೆಯುತ್ತಿದ್ದ. ಒಮ್ಮೆ ನಗರ ಸಂಚಾರ ಮಾಡುತ್ತಿದ್ದ ರಾಜ ಸಿದ್ಧಾರ್ಥನಿಗೆ ಶವ, ರೋಗಿ ಮತ್ತು ವೃದ್ಧನನ್ನು ಕಂಡು, ಬದುಕಿನಲ್ಲಿ ಕಾಯಿಲೆ, ವೃದ್ಧಾಪ್ಯ, ಸಾವು ಎಲ್ಲರಿಗೂ ಅನಿವಾರ್ಯವೇ ಎಂಬ ಪ್ರಶ್ನೆ ಹುಟ್ಟುತ್ತದೆ.

ಬುದ್ಧಿಗೆ ಇರುವ ಇನ್ನೊಂದು ಹೆಸರು ‘ಬುದ್ಧ’. ಧರ್ಮದ ಹೆಸರಿನಲ್ಲಿ ಅವೈಜ್ಞಾನಿಕವಾದುದನ್ನು, ಅತಾರ್ಕಿಕವಾದುದನ್ನು ಆತ ಏನನ್ನೂ ಹೇಳಲಿಲ್ಲ. ಅತಿಮಾನುಷವಾದವನ್ನು ಮುಂದಿಡಲಿಲ್ಲ. ‘ಬುದ್ಧ ಪೂರ್ಣಿಮಾ’ ಎಂದೂ ಕರೆಯಲ್ಪಡುವ ‘ಬುದ್ಧ ಜಯಂತಿ’ ಭಗವಾನ್ ಬುದ್ಧನ ಹುಟ್ಟುಹಬ್ಬವನ್ನು ಆಚರಿಸುತ್ತದೆ. ಇದು ಅವನ ಜ್ಞಾನೋದಯ ಮತ್ತು ಮರಣದ ಸ್ಮರಣೆಯನ್ನು ಕೂಡಾ ನೆನಪಿಸುತ್ತದೆ. ಇದು ಅತ್ಯಂತ ಪವಿತ್ರ ಬೌದ್ಧ ಉತ್ಸವ.

ಬುದ್ಧ ತನ್ನನ್ನು ಪ್ರವಾದಿಯೋ ದೇವರ ಪ್ರತಿನಿಧಿಯೋ ಎಂದು ಬಿಂಬಿಸಿಕೊಳ್ಳಲಿಲ್ಲ. ತನ್ನದು ದೈವವಾಣಿಯೆಂದೋ ನನ್ನ ಮಾತೇ ಕೊನೆಯ ಮಾತು, ನನ್ನ ತರುವಾಯ ಮತ್ತೊಬ್ಬ ಬುದ್ಧನಿಲ್ಲ ಎಂದು ಹೇಳಲಿಲ್ಲ. ತನ್ನ ವಿಚಾರಗಳನ್ನು ಚರ್ಚೆಗೆ ಮುಕ್ತವಾಗಿ ತೆರೆದಿಟ್ಟ. ಉರಿಯುತ್ತಿರುವ ದೀಪವೊಂದು ಸಾವಿರ ದೀಪಗಳನ್ನು ಬೆಳಗಿಸಿ, ಪ್ರಕಾಶ ಹೆಚ್ಚಿಸುವ ಸಾಮರ್ಥ್ಯ ಹೊಂದಿರುತ್ತದೆ. ಅದೇ ರೀತಿ ಖುಷಿಯನ್ನು ಸಹ ಹಂಚುವುದರಿಂದ ಅದು ಹೆಚ್ಚಾಗುತ್ತಾ ಹೋಗುತ್ತದೆ ಎಂದು ಬುದ್ಧ ಹೇಳುತ್ತಾನೆ.

ಸತ್ಯ, ಅಹಿಂಹೆ, ಸುಳ್ಳು ಹೇಳದಿರುವುದು, ಕಳ್ಳತನಮಾಡಬಾರದು ಆತನ ಮಹತ್ವದ ಉಪದೇಶ. ಸಕಲ ಪ್ರಾಣಿಗಳಲ್ಲಿ ದಯೆಯಿರಲಿ, ಪ್ರಾಣಿಹಿಂಸೆ ಮಾಡಬೇಡಿ, ಆಸೆಯೇ ದುಃಖಕ್ಕೆ ಕಾರಣ, ಹಿಂಸೆ ದ್ವೇಷವೇ ದುಃಖದ ಮೂಲ, ಎಲ್ಲರನ್ನೂ ಪ್ರೀತಿಸಿ, ಎಂದು ಸಾರುತ್ತಾ ಬೌದ್ಧ ಧರ್ಮವನ್ನು ಪ್ರಸಾರ ಮಾಡುತ್ತಾ ಪ್ರಪಂಚದ ಉದ್ದಗಲಕ್ಕೂ ಸಂಚರಿಸಿ 80 ವರ್ಷಗಳಷ್ಟು ದೀರ್ಘ ಕಾಲ ಎಲ್ಲೆಡೆಯೂ ಧರ್ಮಪ್ರಚಾರಮಾಡಿದ ಮಹಾಪುರುಷ ” ಗೌತಮ ಬುದ್ಧ “.

ಎಲ್ಲ ಮತಗಳು ಈ ಲೋಕವನ್ನು ‘ಆಗಿರುವ ವಸ್ತು’ ಪ್ರಪಂಚವೆಂದು ಹೇಳಿದರೆ ಬೌದ್ಧಧರ್ಮ ಮಾತ್ರ ಲೋಕವನ್ನು ‘ಆಗುತ್ತಲೇ ಇರುವ’ ನಿರಂತರ ಪ್ರವಾಹವೆಂದು ವಿವರಿಸುತ್ತದೆ. ಬುದ್ಧ ಪ್ರವಾದಿ ಅಲ್ಲ. ಆತ ಮಹಾತ್ಮ. ಆತ ಹೇಳಿದ್ದು ಧರ್ಮವೇ ವಿನಾ ಮತಧರ್ಮ ಅಲ್ಲ. ಆತನದು ಆಗಿರುವ ಮತವಲ್ಲ, ಪ್ರತಿದಿನವೂ ಆಗುತ್ತಲೇ ಇರುವ– ಕಾಲದಿಂದ ಕಾಲಕ್ಕೆ ತನ್ನನ್ನು ಪುನರ್ ಕಟ್ಟಿಕೊಳ್ಳುತ್ತಿರುವ ಧರ್ಮ.

ಬುದ್ಧನ ಅನುಸಾರ, ಕೆಟ್ಟದ್ದನ್ನು ಕೆಟ್ಟದ್ದರಿಂದಲೇ ಅಂತ್ಯ ಮಾಡಲು ಸಾಧ್ಯವಿಲ್ಲ. ಹೀಗಾಗಿ ಕೆಟ್ಟದ್ದನ್ನು ಸಹ ಪ್ರೀತಿಯಿಂದಲೇ ಅಂತ್ಯಗೊಳಿಸುವುದು ಉತ್ತಮ. ಪ್ರೀತಿ-ವಿಶ್ವಾಸ ಮಾತ್ರ ಕೆಟ್ಟದ್ದಕ್ಕೆ ಇತಿಶ್ರೀ ಹಾಡಲು ಸಾಧ್ಯ. ಸಿದ್ಧಾರ್ಥನ ಮನಸ್ಸು ಬುದ್ಧನಾಗುವುದಕ್ಕೆ ಹಾತೊರೆಯುತ್ತಿದ್ದ ದಿನ ಬಂದಾಗ ಆತನ ವಯಸ್ಸು 26. ಆ ವಯಸ್ಸಿನಲ್ಲೇ ಮನೆ-ಮಠ, ಹೆಂಡತಿ-ಮಗುವನ್ನು ತೊರೆದ ಸಿದ್ಧಾರ್ಥ ಗಯಾಗೆ ತೆರಳಿ, ಅರಳಿ ಮರದಕೆಳಗೆ ಕುಳಿತು ಧ್ಯಾನಾಸಕ್ತನಾದ. ಅನವರತ ಬಿಡದೇ 47 ದಿವಸಗಳ ಕಠಿಣ ತಪಸ್ಸುಮಾಡಿದಾಗ ಇದೇ ವೈಶಾಖ ಶುದ್ಧ ಹುಣ್ಣಿಮೆಯಂದು ಸಿದ್ಧಾರ್ಥನಿಗೆ ಜ್ಞಾನೋದಯವಾಯಿತು. ಅಂದಿನಿಂದ ಸಿದ್ಧಾರ್ಥ ಬುದ್ಧನಾದ.

ಈ ಲೋಕದಲ್ಲಿ ಯಾವುದೂ ಸ್ವತಂತ್ರ ವಸ್ತುಗಳಲ್ಲ. ಎಲ್ಲವೂ ಸಹ ಬದಲಾಗುತ್ತಿರುವ ಸಂಯೋಜನೆಗಳು ಎಂದು ಹೇಳಿದ. ಬುದ್ಧ ‘ಕಾರ್ಯಕಾರಣ’ ಸಂಬಂಧದ ಜಗತ್ತಿನ ಘಟನೆಗಳನ್ನು ವಿವರಿಸುತ್ತಾನೆ. ಆದ್ದರಿಂದ ‘ಬುದ್ಧ ಧರ್ಮ’ ಎಂಬುದು ವಿಜ್ಞಾನಕ್ಕೆ ಸಮಾನಾಂತರವಾಗಿಯೇ ಬೆಳೆಯುತ್ತದೆ. ಅದು ‘ಮತಧರ್ಮ’ಗಳಂತೆ ವಿಜ್ಞಾನಕ್ಕೆ ವಿರೋಧಿಯಲ್ಲ.
ಹಲವು ವರ್ಷಗಳ ಧ್ಯಾನ, ತಪಸ್ಸು, ಅನುಭವ, ಅಧ್ಯಯನಗಳ ಮೂಲಕ ನಿಜವಾದ ಮಾನವ ಧರ್ಮದ ಆಶಯಗಳನ್ನು ಬುದ್ಧ ಜಗತ್ತಿಗೆ ತಿಳಿಸಿದ್ದಾನೆ. ವಾರಾಣಾಸಿಯ ಜಿಂಕೆಗಳ ವನದಲ್ಲಿ ಮೊದಲ ಬಾರಿಗೆ ಧಾರ್ಮಿಕ, ಅಧ್ಯಾತ್ಮ ಉಪನ್ಯಾಸಗಳನ್ನು ನೀಡುವ ಮೂಲಕ ಬೌದ್ಧ ಧರ್ಮದ ಆಶಯಗಳನ್ನು ಬಿತ್ತಿದ್ದ ಬುದ್ಧ, ಮನುಕುಲ ಅನುಭವಿಸುತ್ತಿರುವ ಕಷ್ಟಗಳಿಗೆ ಸ್ಪಂದಿಸುವುದೇ ಧರ್ಮದ ನಿಜವಾದ ಅರ್ಥ ಎನ್ನುತ್ತಾನೆ. ನಮ್ಮದು ಆ ಧರ್ಮ, ಈ ಧರ್ಮವೆಂದು ನಿರಂತರ ಕಚ್ಚಾಡುತ್ತೇವೆ. ಪ್ರತಿಯೊಬ್ಬರೂ ತಮ್ಮ ಧರ್ಮವೇ ಶ್ರೇಷ್ಠ ಎಂದು ಅನಗತ್ಯ ಚರ್ಚೆಯಲ್ಲಿ ತೊಡಗುತ್ತಾರೆ. ಆದರೆ ನಿಜ ವಾದ ಧರ್ಮವು ಒಬ್ಬರ ಕಷ್ಟಗಳಿಗೆ ಇನ್ನೊಬ್ಬರು ಸ್ಪಂದಿಸುವುದೇ ಆಗಿರುತ್ತದೆ ಎನ್ನುತ್ತಾನೆ ಬುದ್ಧ.

ಸಂದೇಹ ಅಥವಾ ಸಂಶಯ ಎನ್ನುವುದೊಂದು ಭೀಕರ ಖಾಯಿಲೆ ಎಂದು ಬುದ್ಧ ಹೇಳುತ್ತಾನೆ. ಒಬ್ಬ ವ್ಯಕ್ತಿಯ ಮನದಲ್ಲಿ ಸಂದೇಹ ಅಥವಾ ಸಂಶಯ ಎನ್ನುವುದು ಮನೆ ಮಾಡಿದರೆ, ಆತ ಅನನ್ಯ ಸಂಬಂಧಗಳನ್ನು ಶಂಕಿಸಲು ಶುರು ಮಾಡುತ್ತಾನೆ. ಇದರಿಂದ ಎಲ್ಲ ಮಧುರ ಬಂಧಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಆದಷ್ಟು, ಇಂಥ ಖಾಯಿಲೆಯಿಂದ ದೂರವಿರುವ ಮನಸ್ಥಿತಿಯನ್ನು ಬೆಳಸಿಕೊಳ್ಳಬೇಕು ಎಂದು ಬುದ್ಧ ಹೇಳುತ್ತಾನೆ.

ಪ್ರಾರ್ಥನೆಗೆ ಪರ್ಯಾಯವಾಗಿ ಆತ ಹೇಳುವ ‘ಧ್ಯಾನ ಮಾರ್ಗ’ ವಿಶಿಷ್ಟವಾದುದು. ಅದು ಮಾತಿನ ಲೋಕವಲ್ಲ, ಮೌನದ ಜಗತ್ತು. ಅದು ಪ್ರದರ್ಶನವಲ್ಲ, ಒಳಲೋಕದ ವಿಹಾರ. ಅಂತರಂಗದ ಪುಸ್ತಕ ತೆರೆಯದೇ, ಯಾವ ಪುಸ್ತಕ ಓದಿಯೂ ಏನೂ ಪ್ರಯೋಜನವಾಗದು ಎನ್ನುತ್ತಾನೆ ಬುದ್ಧ. ‘ಕೆಲವು ವ್ಯಕ್ತಿಗಳು ಮಾತ್ರ ಈ ಜಗತ್ತಿನಲ್ಲಿ ‘ಒಳನೋಟ’ವನ್ನು ಕಾಣಬಲ್ಲರು. ಉಳಿದಂತೆ ಎಲ್ಲರೂ ಕುರುಡರು’ ಎನ್ನುತ್ತಾನೆ.

ಮನುಷ್ಯ ಭೂತಕಾಲದ ಯೋಜನೆಯಲ್ಲಿಯೇ ಮುಳಗಬಾರದು ಎಂದು ಬುದ್ಧ ತನ್ನ ಉಪದೇಶದಲ್ಲಿ ತಿಳಿಸಿದ್ದಾನೆ. ಅವರ ಪ್ರಕಾರ, ಭವಿಷ್ಯದ ಕನಸನ್ನು ಈಡೇರಿಸಿಕೊಳ್ಳಲು ವರ್ತಮಾನದ ಕಡೆ ಗಮನ ನೀಡಿ ಎನ್ನುವುದಾಗಿತ್ತು. ಭೂತಕಾಲ ಹಾಗೂ ಭವಿಷ್ಯದ ಸ್ಥಿತಿಗತಿಗಳನ್ನು ಅರಿವಿನಲ್ಲಿಟ್ಟುಕೊಂಡು ವರ್ತಮಾನದ ಹಾದಿಯಲ್ಲಿ ನಡೆಯಬೇಕು. ಇದರಿಂದ ಮನುಷ್ಯನಿಗೆ ಸುಖ, ಸಂತೋಷದ ಮಾರ್ಗ ಲಭ್ಯವಾಗುತ್ತದೆ ಎನ್ನುವುದು ಉಪದೇಶದ ಅರ್ಥವಾಗಿತ್ತು.

ಜಗತ್ತಿನ ಮುಂದೆ ಭಾರತೀಯ ದರ್ಶನಗಳ ಅಂತಃಸತ್ವವನ್ನು ಸಮರ್ಥವಾಗಿ ಮಂಡಿಸಿದ ಸ್ವಾಮಿ ವಿವೇಕಾನಂದರು ಬೋಧಿವೃಕ್ಷದ ಅಡಿ ಕುಳಿತು ಧ್ಯಾನಾಸಕ್ತರಾಗಿ ಸಂಭ್ರಮಿಸುತ್ತಾರೆ. ‘ಬುದ್ಧ ವೇದಕ್ಕಾಗಲಿ, ಜಾತಿಗಾಗಲಿ, ಪುರೋಹಿತರಿಗಾಗಲಿ, ಆಚಾರಕ್ಕಾಗಲಿ ಜಗ್ಗಲಿಲ್ಲ. ಸತ್ಯಾನ್ವೇಷಣೆಯಲ್ಲಿ ಇಂತಹ ದಿಟ್ಟತನ ಮತ್ತು ಸರ್ವಜನರ ಮೇಲೆ ಪ್ರೀತಿಯುಳ್ಳ ಇನ್ನೊಬ್ಬ ವ್ಯಕ್ತಿಯನ್ನು ನಾನು ಪ್ರಪಂಚದಲ್ಲಿ ಮತ್ತೆಂದೂ ಕಂಡಿಲ್ಲ’ ಎಂದು ಸ್ವಾಮಿ ವಿವೇಕಾನಂದ ಹೇಳುತ್ತಾರೆ.

ಬೌದ್ಧ ಧರ್ಮ ಹಾಗೂ ಬುದ್ಧನ ಉಪದೇಶ ಏನಿರಬಹುದು ಎಂಬ ಉತ್ತರವನ್ನು ಹುಡುಕುತ್ತಾ ಹೊರಟರೇ, ತಿಳಿಯುವುದನೇಂದರೆ ಬುದ್ಧನ ಬಾಳೇ(ಜೀವನ) ಆತನ ಬೋಧನೆಯಾಗಿತ್ತು. ಎಂದಿಗೂ ಕೂಡ ತನ್ನ ಆದರ್ಶ, ಆಶಯಗಳನ್ನು ಧಿಕ್ಕರಿಸಿದವನಲ್ಲ. ಎಂತ ಸಾವಿನ ದವಡೆಯಲ್ಲೂ ಸಿಲುಕಿಕೊಂಡರೂ ತಾನೂ ನಂಬಿದ ಸತ್ಯಗಳನ್ನು ಬಿಟ್ಟವನಲ್ಲ. ಬುದ್ಧ ಜೀವನದುದ್ದಕ್ಕೂ ನೊಂದವರ ಬಾಳಿಗೆ ಬೆಳಕಾದವನೂ. ಸಮಾಜದಲ್ಲಿ ತುಡಿತಕ್ಕೊಳಗಾದವರ ಕಣ್ಣೀರ ಒರೆಸಿದನು. ದ್ವೇಷ, ಅಸೂಯೆಗಳನ್ನು ನಿರ್ನಾಮ ಮಾಡಿ ಸಮಾಜದಲ್ಲಿ ಪ್ರೀತಿಯ ಚಿಲುಮೆಯನ್ನು ಉಕ್ಕಿಸಿದನು. ಹುಟ್ಟು ಮತ್ತು ಸಾವು ಈ ಎರಡು ಬಂಧನಗಳಲ್ಲಿ ನಾವು ಗಳಿಸಬೇಕಾದದ್ದು ಅಪ್ರತಿಮವಾದದ್ದು ಪ್ರೀತಿಯೊಂದೇ ಎಂದು ಜಗತ್ತಿಗೆ ಸಾರಿದನು.

ಸರ್ವರಿಗೂ ಬುದ್ಧ ಪೂರ್ಣಿಮೆಯ ಶುಭಾಶಯಗಳು

ಲೇಖಕರು: ✍. ಅರುಣ್ ಕೂರ್ಗ್

ಸಂಭ್ರಮ ಸಡಗರದ ಕೊಡಗಿನ “ಹುತ್ತರಿ”

ಸಂಭ್ರಮ ಸಡಗರದ ಕೊಡಗಿನ “ಹುತ್ತರಿ”

ಹುತ್ತರಿ ಹಬ್ಬವು ಕೊಡಗಿನ ಕೃಷಿ ಕುಟುಂಬಗಳಿಗೆ ಸಂಭ್ರಮವನ್ನು, ಸಂತಸವನ್ನು ನೀಡುವ ಹಬ್ಬವಾಗಿದೆ. ಕೊಡಗಿನಲ್ಲಿ ನೆಲೆಸಿರುವ ವಿವಿಧ ಸಮುದಾಯಗಳು ಪ್ರಕೃತಿಯೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿವೆ. ಕೃಷಿಯನ್ನೇ ಪ್ರಧಾನವಾಗಿರಿಸಿಕೊಂಡಿರುವ ಕುಟುಂಬಗಳು ಹುತ್ತರಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾ ಬಂದಿವೆ.
                                   ಪ್ರತೀ ವರ್ಷದ ನವೆಂಬರ್ ಅಥವಾ ಡಿಸೆಂಬರ್ ತಿಂಗಳ ರೋಹಿಣಿ ನಕ್ಷತ್ರದಲ್ಲಿ ವೃಶ್ಚಿಕ ಮಾಸದ 11ನೇ ದಿನ ಹುಣ್ಣಿಮೆಯ ರಾತ್ರಿಯಂದು ಕೊಡಗಿನಲ್ಲಿ ಹುತ್ತರಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬವನ್ನು “ಸುಗ್ಗಿ ಹಬ್ಬ” ಎಂದು ಇತರೆಡೆ ಆಚರಿಸಿದರೆ, ಕೊಡಗಿನಲ್ಲಿ ‘ಹುತ್ತರಿ ಹಬ್ಬ’ ಎಂದು ಆಚರಿಸುತ್ತಾರೆ. ಹುತ್ತರಿ ಎಂದರೆ ಪುದಿಯ(ಹೊಸ), ಅರಿ(ಅಕ್ಕಿ), ಪುತ್ತರಿ(ಹೊಸ ಅಕ್ಕಿ), ಹೊಸ ಭತ್ತದ ಬೆಳೆಯನ್ನು ನೀಡಿದ ಭೂಮಿ ತಾಯಿಗೆ ಹಾಗೂ ಧಾನ್ಯಲಕ್ಷ್ಮೀಗೆ ಭಕ್ತಿ ಭಾವದಿಂದ ಕೃತಜ್ಞತೆಯನ್ನು ಸಲ್ಲಿಸುವ ಹಬ್ಬವೇ ಹುತ್ತರಿ ಹಬ್ಬ. ರಾತ್ರಿ ಕುಟುಂಬದ ಮುಖ್ಯಸ್ಥ ಕದಿರು ಕೊಯ್ದು ಪೊಲಿ.. ಪೊಲಿ.. ದೇವಾ ಎನ್ನುತ್ತಾ ಕೊಂಡೊಯ್ಯುವ ಮೂಲಕ ಧಾನ್ಯ ಲಕ್ಷ್ಮಿಯನ್ನು ಮನೆಗೆ ತುಂಬಿಸಿಕೊಳ್ಳುವುದರೊಂದಿಗೆ ಸದಾ ಕಾಲ ಮನೆಯಲ್ಲಿ ಧವಸ ಧಾನ್ಯ ತುಂಬಿರುವಂತೆ ತಾಯಿ ಕಾವೇರಮ್ಮ ಹಾಗೂ ಪಾಡಿ ಇಗ್ಗುತ್ತಪ್ಪನಲ್ಲಿ ಪ್ರಾರ್ಥಿಸಿಕೊಳ್ಳಲಾಗುತ್ತದೆ.

ಹುತ್ತರಿ ಹಬ್ಬದ ಆಚರಣಾ ರೀತಿ–ರಿವಾಜುಗಳು:
ಹುತ್ತರಿ ಹಬ್ಬದ ದಿನ ಐನ್ ಮನೆಯ ನೆಲ್ಲಕ್ಕಿ ನಡುಬಾಡೆಯಲ್ಲಿರುವ ‘ತೂಕ್ಬೊಳಕ್’ (ತೂಗುವ ದೀಪ) ಕೆಳಗೆ ಹೊಸ ಚಾಪೆ ಹಾಸಿ ಹುತ್ತರಿ ಕುಕ್ಕೆಯಲ್ಲಿ ಮಾವಿನ ಎಲೆ, ಅರಳಿ ಎಲೆ, ಕುಂಬಳಿ ಎಲೆ, ಕಾಡುಗೇರು ಎಲೆ, ಹಲಸಿನ ಎಲೆ ಈ ಐದು ಎಲೆಗಳನ್ನು ಹಾಗೂ ಅಚ್ಚನಾರನ್ನು ಇರಿಸಿರುತ್ತಾರೆ. ಈ ಐದು ಎಲೆಗಳನ್ನು ಒಂದರ ಮೇಲೆ ಒಂದು ಇಟ್ಟು ನಾರಿನಿಂದ ಕಟ್ಟಲಾಗಿರುತ್ತದೆ. ಇದನ್ನು ‘ನೆರೆಕಟ್ಟುವುದು’ ಎನ್ನುತ್ತಾರೆ. ಹೊಸ ಕುಕ್ಕೆಯಲ್ಲಿ ಭತ್ತ ತುಂಬಿ ಅದರ ಮೇಲೆ ಅರ್ಧ ಸೇರು ಅಕ್ಕಿಯನ್ನು ಸೇರಿಸಿ ತುಂಬುತ್ತಾರೆ. ಹುತ್ತರಿ ಕುಡಿಕೆಯಲ್ಲಿ ತಂಬಿಟ್ಟು ಹಾಕಿ ಅದರ ಜೊತೆ ಹಾಲು, ತುಪ್ಪ, ಜೇನು, ಎಳ್ಳು, ಶುಂಠಿ, ತೆಂಗಿನಕಾಯಿ, ಹಾಗಲಕಾಯಿ, ಮುಳ್ಳು ಇಡುತ್ತಾರೆ. ಜೊತೆಗೆ ಕುಡುಗೋಲು ‘ತಳಿಯಕ್ಕಿ ಬೊಳ್ಚ’ ಮೂರು ವೀಳ್ಯದೆಲೆ ಮೂರು ಅಡಿಕೆಯನ್ನು ಇಡಲಾಗುತ್ತದೆ. ಆ ಎಲ್ಲಾ ವಸ್ತುಗಳನ್ನು ತೂಕ್ ಬೊಳಕ್ನ ಕೆಳಗಡೆ ದೇವರ ಮುಂದೆ ಇಟ್ಟಿರುತ್ತಾರೆ. ಅದರ ಮುಂದೆ ರಂಗೋಲಿಯನ್ನು ಹಾಕಿರುತ್ತಾರೆ. ನಂತರ ಬೇಯಿಸಿದ ಹುತ್ತರಿ ಗೆಣಸನ್ನು ಜೇನುತುಪ್ಪ, ಬೆಲ್ಲ ಹಾಗೂ ತುಪ್ಪದೊಂದಿಗೆ ಫಲಾಹಾರ ಸೇವಿಸಿ ಕದಿರು (“ಕದಿರು” ಎಂದರೆ ಭತ್ತದ ಕಟ್ಟು) ತೆಗೆಯಲು ಗದ್ದೆಗೆ ಹೋಗುತ್ತಾರೆ. ಮೊದಲೇ ಸಿದ್ಧಪಡಿಸಿದ “ಕುತ್ತಿ”ಯನ್ನು ಕುಟುಂಬದ ಹಿರಿಯರು ತಲೆ ಮೇಲೆ ಹೊತ್ತಿರುತ್ತಾರೆ ಮತ್ತು ಮನೆಯ ಹಿರಿಯ ವ್ಯಕ್ತಿ ಕದಿರು ತೆಗೆಯುವ ಕುಡುಗೋಲನ್ನು ಕದಿರು ತೆಗೆಯುವ ವ್ಯಕ್ತಿಯ ಕೈಗೆ ನೀಡುತ್ತಾರೆ. ನಂತರ ಮನೆಯ ಹಿರಿಯರು, ಹೆಂಗಸರು, ಗಂಡಸರು ಮತ್ತು ಮಕ್ಕಳು ಎಲ್ಲರೂ ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟು ದುಡಿ ಬಾರಿಸುತ್ತಾ, ಹಾಡುತ್ತಾ ಗದ್ದೆಗೆ ತೆರಳುತ್ತಾರೆ. ಕದಿರು ತೆಗೆಯುವ ಗದ್ದೆಯನ್ನು ಮೊದಲೇ ಸಿಂಗರಿಸಿರುತ್ತಾರೆ. ಅಲ್ಲಿ ತಲುಪಿದ ನಂತರ ಹಾಲು, ಜೇನು ಮೊದಲಾದವುಗಳನ್ನು ಕದಿರಿನ ಬುಡಕ್ಕೆ ಸುರಿಯುತ್ತಾರೆ. ಐದು ಎಲೆಗಳ ಕಟ್ಟನ್ನು ಕದಿರಿನ ಬುಡಕ್ಕೆ ಕಟ್ಟುತ್ತಾರೆ. ನಂತರ ಸಾಂಪ್ರದಾಯಿಕವಾಗಿ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸುತ್ತಾರೆ. ದೇವರನ್ನು ಪ್ರಾರ್ಥಿಸಿ ಬೆಸ ಸಂಖ್ಯೆಯಲ್ಲಿ ಕದಿರನ್ನು ಕುಯ್ದು ಕುಕ್ಕೆಯಲ್ಲಿ ಇಡಲಾಗುತ್ತದೆ. ಕದಿರನ ಒಂದೊಂದು ಕಟ್ಟನ್ನು ಆಲುಮರದ ಎಲೆಯಿಂದ ಸುತ್ತಿ ಕದಿರನ್ನು ಕಟ್ಟಿ ಕುಕ್ಕೆಯಲ್ಲಿಡುತ್ತಾರೆ. ಈ ಸಮಯದಲ್ಲಿ ಪಟಾಕಿಯನ್ನು ಸಿಡಿಸಿ ಪೊಲಿ ಪೊಲಿ ದೈವ ಎಂದು ಎಲ್ಲರೂ ಕೂಗುತ್ತಾರೆ. ನಂತರ ಕುಕ್ಕೆಯನ್ನು ತಲೆ ಮೇಲೆ ಹೊತ್ತು ಪೊಲಿ ಪೊಲಿ ದೈವ ಎಂದು ಕೂಗುತ್ತಾ ಮನೆಗೆ ಬರುತ್ತಾರೆ. ಮನೆಗೆ ಬಂದ ನಂತರ ಕದಿರು ಕುಯ್ದವನ ಕಾಲು ತೊಳೆದು ಹಾಲು ನೀಡಿ, ಧಾನ್ಯಲಕ್ಷ್ಮೀಯನ್ನು ಮನೆ ತುಂಬಿಸಿಕೊಳ್ಳುತ್ತಾರೆ, ಬರುವಾಗ ಕೈಮಡಕ್ಕೆ ಕಟ್ಟುತ್ತಾ ಬರುತ್ತಾರೆ. ನೆಲ್ಲಕ್ಕಿ ನಡುಬಾಡೆಗೆ ಬಂದು ಚಾಪೆ ಮೇಲೆ ಇಟ್ಟು ಮನೆಯ ಎಲ್ಲಾ ಬಾಗಿಲು ಮುಖ್ಯ ವಸ್ತುಗಳಿಗೆ ಇದನ್ನು ಕಟ್ಟುತ್ತಾರೆ. ನಂತರ ಹೊಸ ಅಕ್ಕಿ ಪಾಯಸ ಮಾಡಿ ಮನೆಯ ಸದಸ್ಯರೆಲ್ಲ ಊಟ ಮಾಡುತ್ತಾರೆ. ಮರುದಿನ ಊರಿನ ನಾಡ್ಮಂದ್ (ಮೈದಾನ) ನಲ್ಲಿ ಊರಿನವರೆಲ್ಲಾ ಸೇರಿ ಸಾಂಪ್ರದಾಯಿಕ ಕೋಲಾಟ, ‘ಪರೆಯಕಳಿ’ಗಳನ್ನು ಆಡಿ ಸಂಭ್ರಮಿಸುತ್ತಾರೆ.

ಕೊಡಗಿನಲ್ಲಿ ಹುತ್ತರಿ ಹಬ್ಬದ ಆಚರಣೆಯ ಇತಿಹಾಸ-ಹಿನ್ನಲೆ:
ಕೊಡಗಿನಲ್ಲಿ ಪ್ರಮುಖವಾಗಿ ಆರಾಧನೆಗೆ ಒಳಪಡುತ್ತಿರುವ “ಇಗ್ಗುತಪ್ಪ, ಪಾಲುರಪ್ಪ, ಬೇಂದ್ರುಕೋಲಪ್ಪ, ಪೆಮ್ಮಯ್ಯ, ಕಾಂಚರಾಟಪ್ಪ, ತಿರಚಂಬರಪ್ಪ” ಈ ಸಹೋದರರ ಕೊನೆಯ ತಂಗಿ “ಪನ್ನಂಗಾಲ ತಮ್ಮೆ” ಇವರು ಕೇರಳದಿಂದ ಬಂದು ಕೊಡಗಿನಲ್ಲಿ ಪೂಜಿಸಲ್ಪಡುತ್ತಿರುವವರು. ಇವರಲ್ಲಿ ಇಗ್ಗುತಪ್ಪ, ಪಾಲೂರಪ್ಪ, ತಿರುನೆಲ್ಲಿ ಪೆಮ್ಮಯ್ಯ ಇವರು ಕೇರಳದಿಂದ ಕೊಡಗಿಗೆ ಬಂದು ತಾವು ಬಿಟ್ಟ ಬಾಣ ಎಲ್ಲಿ ಹೋಗಿ ನಾಟುತ್ತದೆಯೋ, ಅಲ್ಲಿ ಹೋಗಿ ನೆಲೆ ನಿಲ್ಲೋಣಾ ಎಂದು ನಿಶ್ಚಯಿಸಿ, ಅದರಂತೆ ಇಗ್ಗುತಪ್ಪ್ಪ ಕೊಡಗಿನಲ್ಲಿ ನೆಲೆಸಿ ಕೊಡಗಿನವರ ಆರಾಧ್ಯ ದೈವವಾಗಿ ಪೂಜಿಸಲ್ಪಡುತ್ತಿದ್ದಾರೆ. ಒಮ್ಮೆ ಇಗ್ಗುತಪ್ಪನು ಕೊಡಗಿನಲ್ಲಿ ಸುಗ್ಗಿಯ ಸಂಭ್ರಮವನ್ನು ಆಚರಿಸಲು ಯಾವುದೇ ಆಚರಣೆಗಳು ಇಲ್ಲದಿದ್ದಾಗ ಕೇರಳದಲ್ಲಿ ನೆಲೆಸಿರುವ ತನ್ನ ಸಹೋದರನಾದ ಬೇಂದ್ರುಕೋಲಪ್ಪನ ಬಳಿ ತೆರಳಿ ಕೇರಳದಲ್ಲಿ ಸುಗ್ಗಿಯನ್ನು ಆಚರಿಸಲು ಓಣಂ ಇರುವಂತೆ ಕೊಡಗಿನಲ್ಲೂ ಸುಗ್ಗಿ ಆಚರಣೆಗೆ ಒಂದು ಮುಹೂರ್ತ ವಿಧಿ ವಿಧಾನಗಳು ಆಗಬೇಕೆಂದು ಕೇಳಿಕೊಂಡಾಗ ಬೇಂದ್ರುಕೋಲಪ್ಪನು “ಓಣತಮ್ಮೆ” ಎಂಬ ಓಣಂ ಹಬ್ಬದ ದೇವತೆಯನ್ನು ಕರೆದು ಪ್ರತೀ ವರ್ಷ ಕೇರಳದಲ್ಲಿ ಓಣಂ ಹಬ್ಬವನ್ನು ಆಚರಿಸಿದ ತೊಂಬತ್ತು ದಿನಗಳ ನಂತರದ ಮೊದಲ ರೋಹಿಣಿ ನಕ್ಷತ್ರದ ಹುಣ್ಣಿಮೆಯಂದು ಸುಗ್ಗಿ ಹಬ್ಬವನ್ನು ನಿಶ್ಚಯಿಸುತ್ತಾನೆ. ಅದರಂತೆ ಅದಕ್ಕೆ ಬೇಕಾದ ಸಾಮಾನುಗಳನ್ನು ತೆಗೆದುಕೊಂಡು ಹೋಗಿ ಕೊಡಗಿನ ಪಾಡಿ ಇಗ್ಗುತಪ್ಪನ ಸನ್ನಿಧಾನಕ್ಕೆ ತೆರಳಿ ಎಲ್ಲರಿಗೂ ವಿಷಯ ತಿಳಿಸಿ ಬಾ ಎಂದು ಕಳುಹಿಸುತ್ತಾನೆ. ಅಂತೆಯೇ ಒಬ್ಬ ಮಹಿಳೆಯ ರೂಪದಲ್ಲಿ ಬಂದ ‘ಓಣತಮ್ಮೆ’ ಇಗ್ಗುತಪ್ಪನ ಸನ್ನಿಧಿಗೆ ಬಂದು ಅಲ್ಲಿನ ಮುಖ್ಯಸ್ಥರಿಗೂ, ಕಣಿಯರಿಗೂ ಈ ವಿಷಯ ತಿಳಿಸುತ್ತಾಳೆ. ಅದರ ಪ್ರಕಾರ ಕೊಡಗಿನಲ್ಲಿ ಇಗ್ಗುತಪ್ಪನಿಂದಲೇ ಈ ಹಬ್ಬ ಪ್ರಾರಂಭವಾಯಿತೆಂದು ಎಲ್ಲರೂ ನಂಬುತ್ತಾರೆ.

. ಅರುಣ್ ಕೂರ್ಗ್

ಪೂರ್ಣತೆಯೇ ಗುರು: ಗುರುಪೂರ್ಣಿಮೆ ನಿಮಿತ್ತ ವಿಶೇಷ ಲೇಖನ

ಪೂರ್ಣತೆಯೇ ಗುರು:
ಗುರುಪೂರ್ಣಿಮೆ ನಿಮಿತ್ತ ವಿಶೇಷ ಲೇಖನ

ನಮ್ಮ ಪರಂಪರೆಯಲ್ಲಿ ಗುರುವಿಗೆ ಭಗವಂತನ ಸ್ಥಾನವನ್ನು ನೀಡಿದ್ದೇವೆ. ಮನುಷ್ಯನ ಬದುಕನ್ನು ಅಜ್ಞಾನದಿಂದ ಜ್ಞಾನದೆಡೆಗೆ, ಕತ್ತಲಿನಿಂದ ಬೆಳಕಿನೆಡೆಗೆ, ಪಶುತ್ವದಿಂದ ದೈವತ್ವದೆಡೆಗೆ ನಡೆಸುವವನೆ ಗುರು. ಯೋಗ್ಯ ಗುರು ಮತ್ತು ಸ್ಪಷ್ಟ ಗುರಿಯುಳ್ಳ ವ್ಯಕ್ತಿ ನಿಸ್ಸಂದೇಹವಾಗಿ ಪರಿಪೂರ್ಣತೆಯೆಡೆಗೆ ಸಾಗಬಲ್ಲ. ಹೀಗೆ ಸಕಲ ಅನುಯಾಯಿಗಳನ್ನು ಮುನ್ನಡೆಸುತ್ತಿದ್ದ ಆದರ್ಶ ಗುರುಪರಂಪರೆಯೇ ನಮ್ಮಲ್ಲಿದೆ.

ಪ್ರತಿವರ್ಷ ಗುರುಪೂರ್ಣಿಮೆ ಅಥವಾ ವ್ಯಾಸಪೂರ್ಣಿಮೆ ಬರುವುದು ಆಷಾಢ ಮಾಸದ ಶುಕ್ಲ ಪಕ್ಷದ ಹುಣ್ಣಿಮೆ ದಿನ. ಆ ದಿನ ವೇದವ್ಯಾಸರು ಅವತರಿಸಿದ ದಿನ ಎಂದು ಪ್ರತೀತಿ. ವೇದವು ಮೊದಲು ಒಂದೇ ಆಗಿತ್ತು. ಅದನ್ನು 4 ಭಾಗಗಳಾಗಿ ವಿಂಗಡಿಸಿದವರು ವೇದವ್ಯಾಸರು. ವ್ಯಾಸ ಎಂದರೆ ವಿಂಗಡಿಸುವ ಎಂಬ ಅರ್ಥವಿದೆ. ವೇದವನ್ನು ವಿಂಗಡಿಸಿದ್ದರಿಂದ ವೇದವ್ಯಾಸರಾದರು. ಸಾಮಾನ್ಯವಾಗಿ ಜುಲೈ ತಿಂಗಳಿನಲ್ಲಿ ಬರುವ ಆಷಾಢ ಮಾಸದ ಪೂರ್ಣಿಮೆಯ ದಿನವನ್ನು ಗುರು ಪೂರ್ಣಿಮಾ ಅಥವಾ ವ್ಯಾಸ ಪೂರ್ಣಿಮಾ ಎಂದು ಆಚರಿಸಲಾಗುತ್ತಿದೆ. ಇದೇ ಮಂಗಳವಾರ ಜುಲೈ16, 2019ರಂದು ಗುರು ಪೂರ್ಣಿಮಾ ದಿವಸವಾಗಿದೆ.

ಯಾವುದೇ ವಿದ್ಯೆಯನ್ನು ಕಲಿಯಬೇಕಾದರೆ ಗುರುವಿನ ಪಾತ್ರ ಹಿರಿದು. “ಗು” ಎಂದರೆ ಅಜ್ಷಾನ “ರು” ಎಂದರೆ ಹೋಗಲಾಡಿಸುವವನು. ಯಾರು ನಮ್ಮ ಅಜ್ಞಾನವನ್ನು ಹೋಗಲಾಡಿಸುವರೋ ಅವರೇ ನಮ್ಮ ಗುರು. ಮಂತ್ರ, ಪೂಜೆ, ದೇವರ ವಿಷಯವಾಗಿ ತಿಳಿಸುವವರು ಶಿಕ್ಷಾಗುರುವಾದರೆ, ಪರಮಾತ್ಮನ ಸಾಕ್ಷಾತ್ಕಾರ ಮಾಡಿಸುವವರು ಆಧ್ಯಾತ್ಮಿಕಗುರುಗಳು. ‘ಗುರುಪೂರ್ಣಿಮೆ’ ಯಂದು ಗುರುಗಳಿಗೆಲ್ಲರಿಗೂ ಗೌರವಿಸಿ ನಮಸ್ಕರಿಸುವ ಸಂಪ್ರದಾಯವಿದೆ. ಎಲ್ಲಾ ಕಾರ್ಯಗಳಿಗೆ ಮೊದಲು ಗುರುಪೂಜೆ ಮಾಡಿಯೇ ತೀರಬೇಕು. ವೇದ ಮಂತ್ರಗಳನ್ನು ಹೇಳುವಾಗ ಮೊದಲು ಶ್ರೀ ಗುರುಭ್ಯೋನಮಃ ಹರಿಃ ಓಂ ಎಂದು ಹೇಳಿಯೇ ಪ್ರಾರಂಭಿಸಬೇಕು.

ಈ ಗುರು ಪೂರ್ಣಿಮಾ ದಿವಸದಂದು ಚಾತುರ್ಮಾಸ್ಯ ವ್ರತವನ್ನು ಮಹಾಗುರು ವ್ಯಾಸರ ಪೂಜೆಯಿಂದ ಪ್ರಾರಂಭಿಸುತ್ತಾರೆ. ನಾಲ್ಕು ತಿಂಗಳು ನಡೆದು ಕಾರ್ತಿಕ ಪೂರ್ಣಿಮೆಯಂದು ವ್ರತ ಮುಕ್ತಾಯವಾಗುತ್ತದೆ. ಈ ಚಾತುರ್ಮಾಸ್ಯ ವ್ರತವನ್ನು ಶ್ರದ್ಧಾ ಭಕ್ತಿಗಳಿಂದ ಆಚರಿಸುವವರಿಗೆ ಸಮೃದ್ಧ ಆಹಾರ, ಸೌಂದರ್ಯ, ಸದ್ಬುದ್ಧಿ, ಸತ್‌ಸಂತಾನ ದೊರೆಯುವುದೆಂಬ ನಂಬಿಕೆಯಿದೆ. ಈ ದಿವಸವೇ ವೇದವ್ಯಾಸರು ಬ್ರಹ್ಮ ಸೂತ್ರ ಬರೆಯಲು ಪ್ರಾರಂಭಿಸಿದ್ದು, ಏಕಲವ್ಯನು ಗುರು ದ್ರೋಣಾಚಾರ್ಯರಿಗೆ ಗುರು ಕಾಣಿಕೆಯಾಗಿ ತನ್ನ ಬಲಗೈ ಹೆಬ್ಬೆರಳನ್ನು ಕತ್ತರಿಸಿಕೊಟ್ಟಿದ್ದು ಗುರು ಪೂರ್ಣಿಮಾ ದಿವಸ.

ಎಲ್ಲಿಯವರೆಗೆ ಕರ್ಮ ಬಂಧನದಿಂದ ಮುಕ್ತಿ ಇಲ್ಲವೋ ಅಲ್ಲಿಯ ವರೆಗೆ ಈ ಬ್ರಹ್ಮನೊಡನೆ ಒಂದಾಗಲು ಸಾಧ್ಯವಿಲ್ಲ. ಇದನ್ನು ಸದ್ಗುರು ಜ್ಞಾನವೆಂಬ ಕತ್ತರಿಯಿಂದ ತೆಗೆದು ಹಾಕಲು ಸಾಧ್ಯ. ಜ್ಞಾನವನ್ನು ಕೊಡುವವನೇ ಗುರು. ಜ್ಞಾನ ಎಂದರೆ ನಮ್ಮ ಬುದ್ಧಿ. ಮತ್ತೆ ಕೆಲವರು ಕೆಲವು ಶಾಸ್ತ್ರಗಳಲ್ಲಿರುವ ಶಬ್ದವನ್ನು ಜ್ಞಾನ ಎನ್ನುವರು. ಇವುಗಳೆಲ್ಲಾ ನಮ್ಮ ಪಂಚೇಂದ್ರಿಯಗಳ ಮೂಲಕ ಪ್ರಾಪ್ತವಾಗುವ ಜ್ಞಾನ. ಗುರು ಎಂದರೆ ಅಖಂಡ ಜ್ಞಾನ ಜ್ಯೋತಿ ಜಡತ್ವಕ್ಕೆ ಸ್ಪೂರ್ತಿ ತುಂಬಿ ಶಿಷ್ಯ ಚಿತ್ತಾಪಹಾರನಾಗಿ ತಾನು ಬೆಳಗಿ ತನ್ನಂತೆ ಇತರರನ್ನು ಬೆಳಗಿಸುವವನೇ ನಿಜವಾದ ಗುರು. ಗುರು ದೊರಕದಿದ್ದರೂ ಗುರುವಿನ ಮೂರ್ತಿಯನ್ನಿಟ್ಟು ಪೂಜಿಸಿ ಅವನಿಂದ ವಿದ್ಯೆ ಪಡೆದ ಏಕಲವ್ಯ ಬಾಲಕ ಆದರ್ಶ ಶಿಷ್ಯ ಗುರ್ವಾಜ್ಞೆಯನ್ನು ನಿಷ್ಠೆಯಿಂದ ಪಾಲಿಸಿ ಗುರೂಪದೇಶ ಪಡೆದ ಶ್ರೇಷ್ಠ ಶಿಷ್ಯ ದಾನಶೂರ ಕರ್ಣ. ನಮ್ಮ ದೇಶದ ಪ್ರಥಮ ಉಪರಾಷ್ಟ್ತ್ರಪತಿ ಡಾ.ಎಸ್. ರಾಧಾಕೃಷ್ಣರು ಗುರುವಿಗಾಗಿ ತನ್ನ ಜನ್ಮದಿನವನ್ನೇ ಸಾರಿದರು. ಇವರ ಶಿಷ್ಯರು ಇವರನ್ನು ರೇಲ್ವೆ ಸ್ಟೇಷನ್‌ಗೆ ಚಕ್ಕಡಿಯಲ್ಲಿ ಕುಳ್ಳಿರಿಸಿಕೊಂಡು ತಾವೇ ಹೆಗಲು ಹಚ್ಚಿ ಎಳೆದುಕೊಂಡು ಹೋದರು. ಇದು ಶಿಷ್ಯರು ಗುರುವಿಗೆ ತೋರಿದ ಗುರುಭಕ್ತಿ.

ಒಂದು ಸುವ್ಯವಸ್ಥಿತ, ವೈಭವಶಾಲಿ ಸಮಾಜ ನಿರ್ಮಾಣಗೊಳ್ಳುವುದು ಆ ಸಮಾಜದಲ್ಲಿನ ಪ್ರತಿಯೊಬ್ಬ ವ್ಯಕ್ತಿಯ ಚಿಂತನೆಯಿಂದ ಮತ್ತು ಆ ಚಿಂತನೆಗಳಿಗನುಗುಣವಾದ ಆತನ ಜೀವನ ಪದ್ಧತಿಯಿಂದ. ಹೀಗೆ ಸುಸಂಪನ್ನ ರಾಷ್ಟ್ರದ ನಿರ್ಮಿತಿಗಾಗಿ ಪರಂಪರಾಗತ ಮೌಲ್ಯಗಳ ಅರಿವುಳ್ಳ ಪ್ರತಿವ್ಯಕ್ತಿಯ ಕೊಡುಗೆಯೂ ಮಹತ್ವ ಪೂರ್ಣ. ಆದರೆ ಮನುಷ್ಯನು ಯಾವಾಗಲೂ ಭಿನ್ನ ಭಿನ್ನ ಪರಿಸ್ಥಿತಿಗಳಿಂದ ಸುತ್ತುವರಿಯಲಪಟ್ಟಿರುತ್ತಾನೆ. ಸುಖ-ದುಖಃಗಳ ಅನೇಕ ಪ್ರಸಂಗಗಳನ್ನು ಆತ ಎದುರಿಸಬೇಕಾಗುತ್ತಿರುತ್ತದೆ. ಇಂತಹ ವಿಷಮ ಸಂಧರ್ಭಗಳಲ್ಲಿ ಧೀರತೆಯಿಂದ ಅಪಾಯಗಳನ್ನು ನಿವಾರಿಸಿಕೊಳ್ಳುತ್ತಾ ತನ್ನ ಜೀವನವನ್ನು ಉನ್ನತ ಉದ್ದೇಶಗಳಿಗಾಗಿಯೇ ಮೀಸಲಿಸಿರಿಕೊಳ್ಳುವ ಯೋಗ್ಯತೆ ಆತನಲ್ಲಿರುವುದಿಲ್ಲ. ತನ್ನಲ್ಲಿಯೇ ಅಂತಹ ಯೋಗ್ಯತೆ ಇದೆಯೆಂದು ಯಾವನು ಭಾವಿಸುತ್ತಾನೋ ಆತನ ಅಧಃಪತನ ನಿಶ್ಚಿತವೆಂದು ತಿಳಿಯಬಹುದು. ಪ್ರತಿ ವ್ಯಕ್ತಿಯ, ತನ್ಮೂಲಕ ಇಡೀ ಸಮಾಜದ ಪತನವನ್ನು ತಡೆದು ಪರಿಪೂರ್ಣ ವಿಕಾಸದೆಡೆಗೆ ಸಾಗಲು ಬೇಕಾದ ಬಲವಾದ ಶ್ರದ್ಧಾ ಕೇಂದ್ರವೇ ’ಗುರು’.

“ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ:” “ಗುರು ಸಾಕ್ಷಾತ್ ಪರ ಬ್ರಹ್ಮ ತಸ್ಮೈ ಶ್ರೀ ಗುರವೇ ನಮ:” ಎಂದು ಗುರುವಿನೆಡೆಗೆ ನಮ್ಮ ಪೂರ್ವಿಕರು ತಮ್ಮ ಭಕ್ತಿಯನ್ನು ಮೆರೆದಿದ್ದಾರೆ. ಇದೊಂದು ಗುರು-ಶಿಷ್ಯರ ಪರಂಪರೆಯನ್ನು ಭಧ್ರಪಡಿಸಿ ಜಗತ್ತಿಗೆ ಸಾರುವ ಹಬ್ಬವೆಂತಲೂ ಹೇಳಬಹುದು. “ನಚೋರ ಹಾರ್ಯಂ ನಚರಾಜ ಹಾರ್ಯಂ. ನಭಾತ್ರಬಾಜ್ಯಂ ನಚ ಭಾರಕಾರಿ. ವ್ಯಯೇಕ್ರತೆ ವರ್ದತಿ ಏವ ನಿತ್ಯಂ. ವಿದ್ಯಾಧನಂ ಸರ್ವ ಧನಃ ಪ್ರಧಾನಂ.” ಅಂದರೆ ವಿದ್ಯೆಯನ್ನು ಯಾವ ಕಳ್ಳಕಾಕರಿಂದಲೂ ಮೋಸಮಾಡಿ ಕದ್ದೊಯ್ಯಲು ಸಾಧ್ಯವಿಲ್ಲ , ಯಾವ ರಾಜನೂ ಕೂಡ ತನ್ನ ಸಾಮರ್ಥ್ಯ ಮತ್ತು ಧರ್ಪದಿಂದ ವಶಪಡಿಸಿಕೊಳ್ಳಲು ಸಾಧ್ಯವಿಲ್ಲ. ಹೊತ್ತು ತಿರುಗಾಡಲು ಇದು ಭಾರವೂ ಅಲ್ಲ. ಹೇಗೆ ಖರ್ಚು ಮಾಡುತ್ತೇವೋ ಹಾಗೆ ವರ್ಧಿಸುವಂತಹ, ಎಲ್ಲ ಸಂಪತ್ತಿಗಿಂತಲೂ ಶ್ರೇಷ್ಟವಾದುದು ಎಂದರ್ಥ. ಇಂತಹ ಅತ್ಯಮೂಲ್ಯ ಸಂಪತ್ತನ್ನು ಧಾರೆ ಎರೆದ ಗುರುವೃಂದಕ್ಕೆ ಕೋಟಿ ನಮನಗಳನ್ನು ಸಲ್ಲಿಸುವ.

✍. ವಿವೇಕ್‌ ನರೇನ್

ಅಮ್ಮ ನೀನು ನಮಗಾಗಿ; ಸಾವಿರ ವರುಷ ಸುಖವಾಗಿ

ಅಮ್ಮ ನೀನು ನಮಗಾಗಿ; ಸಾವಿರ ವರುಷ ಸುಖವಾಗಿ

ನವೆಂಬರ್ 14 ಮಕ್ಕಳ ದಿನಾಚರಣೆ, ಜನವರಿ 1 ಗಣರಾಜ್ಯೋತ್ಸವ. ಹೀಗೆ ಒಂದೊಂದಕ್ಕೂ ದಿನಾಚರಣೆಯನ್ನು ಮಾಡುತ್ತೇವೆ. ಮಾರ್ಚ್ 8ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಅಲ್ಲಲ್ಲಿ ಮಹಿಳಾ ಸಂಘ, ಸಮಾಜ ಅಂತ ಆಚರಿಸುತ್ತಾರೆ. ಹಾಗೆ ಮೇ ತಿಂಗಳ ಎರಡನೆಯ ರವಿವಾರವನ್ನು ಅಮ್ಮಂದಿರ ದಿನವನ್ನಾಗಿ ಆಚರಿಸುತ್ತೇವೆ. ಆದರೆ ಇಲ್ಲಿ ಎಷ್ಟು ಜನ ಮಕ್ಕಳು ತಮ್ಮ ತಾಯಿಯಂದಿರ ದಿನ ಆಚರಿಸುತ್ತಾರೆಂದು ತಿಳಿಯದು. ಯಾಕೆಂದರೆ ಈಗಿನ ಹೆಚ್ಚು ಜನರಿಗೆ ತಾಯಿಯಂದಿಯರಿಗೂ ಒಂದು ದಿನ ಇದೆ ಎಂಬುದು ಗೊತ್ತಿರಲಿಕ್ಕಿಲ್ಲ. ಇದ್ದರೂ ಏಕೆ ಆ ಒಂದು ದಿನ ಮಾತ್ರ! ವರ್ಷದ ಎಲ್ಲಾ ದಿನವನ್ನು ಅವರಿಗಾಗಿ ಮೀಸಲಿಡಲಾಗುವುದಿಲ್ಲವೇ? ಎಂದು ನಮ್ಮ ಒಳ ಮನಸ್ಸು ಕೇಳುತ್ತಿರಬಹುದು.

ಜೀವನೋಪಾಯಕ್ಕಾಗಿ ಗಂಡ-ಹೆಂಡತಿ ಇಬ್ಬರೂ ದುಡಿಯಬೇಕಾದ ಇಂದಿನ ಪರಿಸ್ಥಿತಿಯಲ್ಲಿ, ತಮ್ಮ ತಂದೆ-ತಾಯಿಯನ್ನು ನೋಡಿಕೊಳ್ಳುವುದಿರಲಿ, ಸ್ವಂತ ಮಕ್ಕಳನ್ನು ಸರಿಯಾದ ರೀತಿಯಲ್ಲಿ ತಿದ್ದಿ, ತೀಡಿ ಅವರ ಇಷ್ಟ-ಕಷ್ಟಗಳನ್ನು ನೆರವೇರಿಸಲು ಸಾಧ್ಯವಿಲ್ಲ ಎಂದು ಕೊರಗುವ ಈ ಕಾಲದಲ್ಲಿ, ವಯಸ್ಸಾದ ತಂದೆ-ತಾಯಿಗೋಸ್ಕರ ಒಂದು ದಿನವನ್ನು ಮೀಸಲಿಡುವುದು ಸಾಧ್ಯವೇ ಇಲ್ಲದಂತಾಗಿದೆ ಬಹುಪಾಲು ಜನರಿಗೆ. ತಮ್ಮ ಮಕ್ಕಳಿಗಾಗಿ ಇಡೀ ಜೀವನದ ಯೌವನವನ್ನೂ, ನಡುವಯಸ್ಸಿನಲ್ಲಿ ಮೊಮ್ಮಕ್ಕಳನ್ನೂ, ತೀರಾ ವಯಸ್ಸಾದ ಸಮಯದಲ್ಲಿ ಮರಿ ಮೊಮ್ಮಕ್ಕಳನ್ನೂ ಸಾಕುತ್ತಾ, ಮುಂದಿನ ತಲೆಮಾರಿಗಾಗಿ ತನ್ನೆಲ್ಲಾ ಜೀವನವನ್ನು ಧಾರೆ ಎರೆಯುವ ತಾಯಿಗಾಗಿ ವರ್ಷದ ಒಂದು ದಿನವನ್ನು ಮೀಸಲಿಟ್ಟು ಅವರನ್ನು ಪ್ರೀತಿಯಿಂದ ಆಧರಿಸಿ, ಗೌರವಿಸಿ, ಅವರಿಗಿಷ್ಟವಾದ ತಿಂಡಿಗಳನ್ನು, ಮಾಡಿ ಕೊಡಲು ವರ್ಷದ ಒಂದು ದಿನವಿರಲಿ, ಕೇವಲ ಒಂದು ಗಂಟೆ ಸಾಕಾಗಬಹುದು ನಮಗೆ.

ನಾವು ನಮ್ಮ ತಂದೆ-ತಾಯಿಗೆ 7ಜನ ಮಕ್ಕಳು. ತೀರಾ ಬಡತನದಲ್ಲಿಯೂ ನಮ್ಮನ್ನು ಸಾಕಿ, ಸಲಹಿ, ಓದಿಸಿ ಮದುವೆ ಮಾಡಿಸಿ ಎಲ್ಲರೂ ಅವರವರ ಪಾಡಿಗೆ ತುಂಬು ಸಂಸಾರಸ್ಥರಾಗಿ ಚೆನ್ನಾಗಿಯೆ ಬದುಕುತ್ತಿದ್ದಾರೆ. ತಂದೆ 16 ವರ್ಷದ ಹಿಂದೆಯೆ ತೀರಿಕೊಂಡಿರುವುದರಿಂದ ನಮ್ಮೊಂದಿಗೆ ಇರುವ ತಾಯಿಗೋಸ್ಕರ ಒಂದು ದಿನವನ್ನು ಆಚರಿಸಲು ತೀರ್ಮಾನಿಸಿದೆವು. ಆದರೆ ಅಮ್ಮನ ಹುಟ್ಟಿದ ದಿನವಾಗಲಿ, ವರ್ಷವಾಗಲಿ ನಮಗೆ ಸರಿಯಾಗಿ ತಿಳಿದಿಲ್ಲ. 75 ವರ್ಷವಿರಬಹುದೆಂದು ಅಂದಾಜಿಸಿ ನಾವೆಲ್ಲಾ ಸೇರಿಕೊಂಡು ಅಮ್ಮನ 75ನೇ ಹುಟ್ಟುಹಬ್ಬವನ್ನು ಆಚರಿಸಲು ನಿರ್ಧರಿಸಿದ್ದೇವು. ಅವರಿಗೆ ಒಂದಿನಿತೂ ಸಂಶಯ ಬಾರದ ಹಾಗೆ ಎಲ್ಲರೂ ಅಮ್ಮನ ಮನೆಯಲ್ಲಿ ಸೇರಿ ಅವರಿಗೆ ಅಚ್ಚರಿ ಮೂಡಿಸಿದೆವು. ನಾವೆಲ್ಲಾ ಪೂರ್ವ ನಿರ್ಧಾರದಂತೆ ಒಬ್ಬರು ಕೇಕ್ ತಂದರೆ, ಒಬ್ಬರು ಶಾಲು, ಮತ್ತಿಬ್ಬರು ಸ್ಯಾರಿ, ಅದೇ ರೀತಿ ಇತ್ತೀಚೆಗೆ ಕೆಲಸಕ್ಕೆ ಸೇರಿಕೊಂಡ ಮೊಮ್ಮಗನನ್ನೂ ಒಳಗೊಂಡಂತೆ ಉಳಿದವರು ಚಿನ್ನದ ಒಡವೆಗಳನ್ನು ತಂದು ಅವರವರಿಗೆ ಸಾಧ್ಯವಾದಂತೆ ಉಡುಗೋರೆಯನ್ನು ನೀಡಿ ಗೌರವದಿಂದ ಅಮ್ಮನಿಗೆ ಅಭಿನಂದನೆ ಸಲ್ಲಿಸಿದರು.

ನಮ್ಮ ಈ ಕಾರ್ಯಕ್ರಮಕ್ಕೆ ನಮ್ಮದೇ ಆದ ಶೈಲಿಯಲ್ಲಿ “ಮಾತೃವಂದನಾ” ಎಂದು ಹೆಸರಿಟ್ಟು ಆಚರಿಸಿದ್ದೇವು. ಮೊದಲಿಗೆ ಅಮ್ಮನನ್ನು ಒಂದೆಡೆ ಕೂರಿಸಿ ಒಬ್ಬೊಬ್ಬರಾದಿಯಾಗಿ ಅವರ ಪಾದ ತೊಳೆದು ಅರಸಿನ, ಕುಂಕುಮ ಹಚ್ಚಿ, ಹೂವಿಟ್ಟು ಕಾಲಿಗೆ ನಮಸ್ಕಾರ ಮಾಡಿದಾಗ, ಅಮ್ಮ-ಅಪ್ಪನ ಸಂಗಡ ನಾವು ಕಳೆದ ನಮ್ಮ ಬಾಲ್ಯದ ನೆನಪುಗಳು ಮರುಕಳಿಸಿ ನಮ್ಮೆಲ್ಲರ ಕಣ್ಣಾಲಿಗಳು ಒದ್ದೆಯಾದವು. ಇಂತಹ ಸಡಗರ ಸಂಭ್ರಮ ನಮಗೆ ಎಂದೂ ದೊರೆತಿರಲಿಲ್ಲ. ಜೀವನವಿಡಿ ಮಕ್ಕಳಿಗಾಗಿ ತಮ್ಮ ಬದುಕನ್ನೇ ಮುಡುಪಾಗಿಡುವ ಎಲ್ಲಾ ತಂದೆ-ತಾಯಿಯರನ್ನೂ ಈಗಿನ ಒತ್ತಡದ “ಬ್ಯುಸಿಲೈಫ್”!ನಲ್ಲಿ ಮಕ್ಕಳು ವರ್ಷಕ್ಕೆ ಒಂದು ಗಂಟೆಯಾದರೂ, ಮೀಸಲಿಟ್ಟು ಅವರಿಗೆ ಸಂತೋಷವನ್ನು ನೀಡಿದರೆ ಅವರಿಗಾಗುವ ಸಂತೋಷಕ್ಕೆ ಕಾಲ ಮಿತಿಗಳೆ ಇರುವುದಿಲ್ಲ.

ನಮ್ಮ ತಂದೆ-ತಾಯಿಯಂದಿರು ಅವರ ತಂದೆ-ತಾಯಿಯರನ್ನು ಅವರ ಕೊನೆಯ ಕಾಲದವರೆಗೂ ಆರೈಕೆ ಮಾಡಿ ನೋಡಿಕೊಳ್ಳುತ್ತಿದ್ದದು, ನಮಗೆ ಆದರ್ಶ ಪ್ರಾಯವಾಯಿತು. ಈ ಬಾರಿ ನಾವು ಹಮ್ಮಿಕೊಂಡ ಕಾರ್ಯಕ್ರಮವನ್ನು ನಮ್ಮ ಕರ್ತವ್ಯವೆಂದು ತಿಳಿದು ಮುಂದಿನ ವರ್ಷವೂ ಇದೇ ರೀತಿಯ ಕಾರ್ಯಕ್ರಮವನ್ನು ಮಾಡುವುದಾಗಿ ತೀರ್ಮಾನಿಸಿದೆವು. ಎಲ್ಲಾ ಮಕ್ಕಳು, ಅಳಿಯಂದಿರು, ಸೊಸೆಯಂದಿರು ಮೊಮ್ಮಕ್ಕಳಾದಿಯಾಗಿ ಕುಟುಂಬದ ಎಲ್ಲರೂ ಹಬ್ಬದ ಅಡುಗೆ ಮಾಡಿ ಊಟಮಾಡಿ ಸಂತೋಷಪಟ್ಟೆವು. ಇಂತಹ ದಿನಗಳನ್ನು ಎಲ್ಲಾ ಮಕ್ಕಳು ಮಾಡುವಂತಿದ್ದರೆ ತಂದೆ ತಾಯಿಯರು ತಮ್ಮ ಮಕ್ಕಳನ್ನು ಬೆಳೆಸಿದ್ದಕ್ಕೆ ಸಾರ್ಥಕರಾದಂತೆ.

✍. ಕಾನತ್ತಿಲ್ ರಾಣಿ ಅರುಣ್

ಎಲ್ಲಿರುವನು ಆ ನಿನ್ನ ಹರಿ? ನರಸಿಂಹ ಜಯಂತಿ ವಿಶೇಷ ಲೇಖನ:

ಎಲ್ಲಿರುವನು ಆ ನಿನ್ನ ಹರಿ? ನರಸಿಂಹ ಜಯಂತಿ ವಿಶೇಷ ಲೇಖನ:

|| ಉಗ್ರಂ ವೀರಂ ಮಹಾ ವಿಷ್ಣುಂ ಜ್ವಲಂತಂ ಸರ್ವತೋಮುಖಂ ನರಸಿಂಹಂ ಭೀಷಣಂ ಭದ್ರಂ ಮೃತ್ಯು ಮೃತ್ಯುಂ ನಮಾಮ್ಯಹಂ ||

ವೈಶಾಖ ಮಾಸದಲ್ಲಿ ಅಕ್ಷಯತೃತೀಯ ನಂತರ ಬರುವ ಒಂದು ಪ್ರಮುಖ ಪರ್ವ ನರಸಿಂಹ ಜಯಂತಿ. ಪುರಾಣ ಪ್ರಸಿದ್ಧವಾದ ದಶಾವತಾರಗಳಲ್ಲಿ ಶ್ರೀ ನರಸಿಂಹ ಅವತಾರವು ನಾಲ್ಕನೆಯದು. ವೈಶಾಖ ಶುದ್ಧ ಚತುರ್ದಶಿಯಂದು ಸಮಸ್ತ ದೇವತೆಗಳ ಕೋರಿಕೆಯಂತೆ ದುಷ್ಟ ಹಿರಣ್ಯಕಶಿಪುವಿನ ಸಂಹರಿಸಲು ಸರ್ವೋತ್ತಮನಾದ ಶ್ರೀಮಹಾವಿಷ್ಣುವು ತಾಳಿದ ಅವತಾರವಿದು.

ಯಾವುದೇ ಮಾನವ ಜೀವಿ, ದೇವತೆ ಅಥವಾ ಪ್ರಾಣಿಗಳಿಂದ ತನಗೆ ಸಾವು ಬರಬಾರದೆಂದು ಹಿರಣ್ಯಕಶಿಪು ಬ್ರಹ್ಮನಿಂದ ವಿಶೇಷ ವರವನ್ನು ಪಡೆದುಕೊಂಡಿದ್ದ. ಅಲ್ಲದೆ ಯಾವುದೇ ಅಸ್ತ್ರಗಳಿಂದ ತನ್ನನ್ನು ಕೊಲ್ಲಬಾರದು, ಹಗಲು ಅಥವಾ ರಾತ್ರಿಯಲ್ಲಿ ತನಗೆ ಸಾವುಂಟಾಗಬಾರದು ಎಂದೂ ಅವನು ವರವನ್ನು ಪಡೆದಿದ್ದ. ಆದುದರಿಂದ ಭಗವಂತನು ಅರ್ಧ ಸಿಂಹ ಮತ್ತು ಅರ್ಧ ಮಾನವ ರೂಪದಲ್ಲಿ ಆವಿರ್ಭವಿಸಿ ತನ್ನ ಉಗುರುಗಳಿಂದ ಮುಸ್ಸಂಜೆ ಹೊತ್ತಿನಲ್ಲಿ ಹಿರಣ್ಯಕಶಿಪುವನ್ನು ಸಂಹರಿಸಿದ.
ಭೂಪಾಲಕನಾದ ಶ್ರೀವಿಷ್ಣು ತನ್ನ ಮಡದಿ ಶ್ರೀಲಕ್ಷ್ಮೀಯೊಂದಿಗೆ ಏಕಾಂತದಲ್ಲಿ ಇರುತ್ತಾನೆ. ಇದೇ ಸಂದರ್ಭ ಋಷಿಗಳ ಆಗಮನವಾಗುತ್ತದೆ. ಆಗ ದ್ವಾರಪಾಲಕರಾದ ಜಯ-ವಿಜಯರು ವೈಕುಂಠ ಪ್ರವೇಶಿಸಲು ಋಷಿಗಳನ್ನು ತಡೆಯುತ್ತಾರೆ. ಪರಿ ಪರಿಯಾಗಿ ಹೇಳಿ ಅವರಿಗೆ ವೈಕುಂಠ ಪತಿ ಶ್ರೀ ವಿಷ್ಣುವಿನ ದರ್ಶನ ಮಾಡದಂತೆ ತಡೆಯುತ್ತಾರೆ. ಇದರಿಂದ ಕುಪಿತಗೊಂಡ ಋಷಿಗಳು ಭೂಲೋಕದಲ್ಲಿ ಜನಿಸುವಂತೆ ಜಯ-ವಿಜಯರಿಗೆ ಶಾಪ ನೀಡುತ್ತಾರೆ. ಇದೇ ಸಂದರ್ಭ ಋಪಿಗಳು ತಮಗೆ ನೀಡಿದ ಶಾಪದ ಬಗ್ಗೆ ದ್ವಾರಪಾಲಕರಾದ ಜಯ-ವಿಜಯರು ವಿಷ್ಣುವಿಗೆ ತಿಳಿಸುತ್ತಾರೆ. ಶಾಪ ವಿಮೋಚನೆಗೆ ಬೇಡಿದಾಗ ವಿಷ್ಣುವು ನೀವು ನನ್ನ ಸ್ನೇಹಿತರಾಗಿ ಬಂದು ಏಳು ಜನ್ಮವನ್ನು ಪಡೆದು ಶಾಪ ವಿಮೋಚನೆ ಮಾಡುತ್ತಿರೋ ಅಥವಾ ಮೂರು ಜನ್ಮಗಳಲ್ಲಿ ತನ್ನ ಶತ್ರುಗಳಾಗಿ ಬಂದು ಶಾಪ ವಿಮೋಚನೆ ಮಾಡಿಕೋಳ್ಳುತ್ತೀರೋ? ಎಂದು ಕೇಳಿದಾಗ ಅವರು ನಾವು ನಿನ್ನ ಶತ್ರುಗಳಾಗಿ ಬಂದು ಶಾಪ ವಿಮೋಚನೆ ಮಾಡಿಕೊಳ್ಳುತ್ತೇವೆ ಎಂದರು. ಅದರ ಫಲವೇ ಹಿರಣ್ಯಾಕ್ಷ ಮತ್ತು ಹಿರಣ್ಯ ಕಶಿಪುವಿನ ಜನನ.

ಹಿರಣ್ಯಕಶಿಪು ಸಾಮಾನ್ಯ ವ್ಯಕ್ತಿಯಲ್ಲ ; ವೈಕುಂಠವಾಸಿಯೇ ಆಗಿದ್ದು ಶಾಪಗ್ರಸ್ತನಾಗಿ ಭೂಮಿಯಲ್ಲಿ ಹುಟ್ಟಿ ಕಠಿಣ ತಪಸ್ಸಿನಿಂದ ಬ್ರಹ್ಮನಿಂದ ವರಪಡೆದು, ಮೂರು ಲೋಕಗಳನ್ನು ಗೆದ್ದ ಜಗತ್‌ವಿಜೇತ. ಜನರು ಹೇಳುವ ದೇವರು ಎಂಬುದು ಇರುವದಾದರೇ ಅದು ನಾನೇ ಅಲ್ಲದೆ ಬೇರೆ ಯಾರು ಇಲ್ಲ ಎಂಬ ದುರಾಗ್ರಹಿ ಇಂಥಹವನಿಗೆ ಮಗ ಭಕ್ತಪ್ರಹ್ಲಾದ ಮಾತಿನಲ್ಲಿ ನಂಬಿಕೆ ಬರಲಿಲ್ಲ ಹಿರಣ್ಯಕಶಿಪುವಿಗೆ ಬೇಕು ಪ್ರತ್ಯಕ್ಷ ಪ್ರತೀತಿ. ನಿನ್ನ ವಿಷ್ಣುವು ಎಲ್ಲಾ ಕಡೆ ಇರುವುದಾದರೇ ಈ ಕಂಭದಲ್ಲಿದ್ದಾನೋ? ಆಗ ನಿರ್ಭಯನಾದ ಶ್ರದ್ಧಾವಂತನಾದ ಪ್ರಹ್ಲಾದನು ಕೊಟ್ಟ ಉತ್ತರವೂ ಅಷ್ಟೇ ಸ್ಪಷ್ಟ ಹಾಗೂ ನಿಸ್ಸಂದಿಗ್ದವಾಗಿತ್ತು. ಎಲ್ಲೆಲ್ಲೂ ಇರುವವನು ಈ ಕಂಭದಲ್ಲಿ ಮಾತ್ರ ಏಕಿಲ್ಲ ಕಂಭದಲ್ಲಿ ಇಲ್ಲ ಎಂದರೆ ಭಗವಂತನ ಸರ್ವವ್ಯಾಪಕತ್ವಕ್ಕೆ ಅಡ್ಡಿ ಬರುವುದಿಲ್ಲವೇ? ಕಂಭದಲ್ಲೂ ಬಿಂಬದಲ್ಲೂ ಎಲ್ಲೆಡೆಯೂ ಇದ್ದಾನೆ ಎಂದಾಗ ಹಿರಣ್ಯ ಕಶಿಪು ಕಂಭವನ್ನು ಝಾಡಿಸಿದಾಗ ಆ ಜಡ ಕಂಭದಲ್ಲಿ ಚಿನ್ಮಯನಾದ ನರಸಿಂಹ ರೂಪದಿಂದ ಭಗವಂತನು ಪ್ರಕಟಗೊಂಡು ದೈತ್ಯ ಹಿರಣ್ಯಕಶಿಪುವನ್ನು ಸಂಹಾರಗೈಯುತ್ತಾನೆ.

ಈ ರೀತಿ ಇಡೀ ವಿಶ್ವವು ಹಿರಣ್ಯಕಷಪುವಿನ ದುರಾಡಳಿತದಿಂದ ಮುಕ್ತವಾಯಿತು. ಅಲೌಕಿಕ ಆನಂದದಿಂದ ಎಲ್ಲರೂ ಹರ್ಷಚಿತ್ತರಾದರು. ನಂತರ ದೇವತೆಗಳಿಲ್ಲ ಶ್ರೀ ಬ್ರಹ್ಮನ ನೇತೃತ್ವದಲ್ಲಿ ಶ್ರೀ ವಿಷ್ಣುವಿನ ಬಳಿಗೆ ಬಂದರು. ಅವರಲ್ಲಿ ಪಿತಾ, ಸಿದ್ದಾ, ವಿದ್ಯಾಧಾರ, ನಾಗಾ, ಮನು, ಪ್ರಜಾಪತಿ, ಗಂಧರ್ವ, ಯಕ್ಷ, ಕಿಂಪುರುಷ ಹಾಗೂ ಮಾನವ ರೂಪದ ಇತರರು ಇದ್ದರು. ಶ್ರೀ ನರಸಿಂಹನ ಸಮೀಪ ನಿಂತು ಪ್ರಾರ್ಥನೆ ಸಲ್ಲಿಸಿದರು. ಸಿಂಹಾಸನದ ಮೇಲೆ ಕುಳಿತ ನರಸಿಂಹನ ಆಧ್ಯಾತ್ಮಿಕ ತೇಜಸ್ಸು ಅದ್ಭುತವಾಗಿತ್ತು.
ಮುಗ್ಧ ಬಾಲಕನ ಪರಮ ಭಕ್ತಿಗೆ ಮೆಚ್ಚಿ ಕಂಬದಿಂದ ಉದಿಸಿ, ದುಷ್ಟ ಸಂಹಾರ ಮಾಡಿದ ನರಸಿಂಹನ ಜಯಂತಿ ಇಂದು. ಇವತ್ತು ನಮ್ಮ ಜಗತ್ತಿನಲ್ಲಿ ಧರ್ಮವನ್ನೊಡೆದು ಅಧರ್ಮದ ಮಾರ್ಗದಲ್ಲೇ ಸಾಗುವವರ ಸಂಹಾರಕ್ಕೂ ಅವನ ನಾಮದ ನೆನಕೆ ಬೇಕಾಗಿದೆ.

ಕೆಲವು ಮನೆಗಳಲ್ಲಿ ಲಕ್ಷ್ಮಿ ನರಸಿಂಹ ಸ್ವಾಮಿ ವ್ರತ ಮಾಡುತ್ತಾರೆ. ಒಂದು ಮಂಟಪ ನಿರ್ಮಿಸಿ, ಮಧ್ಯದಲ್ಲಿ ಗೋಧಿಯನ್ನು ಹರಡಿ, ಕಲಶ ಸ್ಥಾಪಿಸಿ, ನರಸಿಂಹ ದೇವರ, ಪ್ರತಿಮೆ ಇಟ್ಟು ಕ್ರಮವಾಗಿ ಪೂಜೆ ಮಾಡಿ ವ್ರತ ಆಚರಿಸುತ್ತಾರೆ. ನೈವೇದ್ಯಕ್ಕೆ ಸಾಮಾನ್ಯವಾಗಿ ಕೋಸಂಬರಿ ಪಾನಕ ಮಾಡುತ್ತಾರೆ. ವೈಷ್ಣವರು ಪುಳಿಯೋಗರೆ, ಮೊಸರನ್ನ ಮಾಡುತ್ತಾರೆ. ಶ್ರೀ ನರಸಿಂಹ ಪೂಜೆಯಿಂದ ನಾನಾ ಪುಣ್ಯಗಳಿಗೆ ಪಾತ್ರರಗುತ್ತೀವಿ ಎಂಬ ನಂಬಿಕೆ ಇದೆ.

ನಾವು ಸೂಕ್ಷ್ಮವಾಗಿ ನಮ್ಮ ಬದುಕನ್ನು ಅಧ್ಯಯಿಸಿಕೊಂಡು ಮಗುವಿನ ನಿರ್ಮಲ ಮನಸ್ಸಿನಿಂದ ಎಲ್ಲವೂ ನಿನ್ನದೇ, ನನ್ನದೇನಿದೆ ಎಂಬಂತಹ ಪ್ರೀತಿಯಾದ ಭಕ್ತಿಯನ್ನು ಅಳವಡಿಸಿಕೊಳ್ಳತೊಡಗಿದಾಗ ನಮ್ಮ ಮಾನವತನ ಮತ್ತು ಸಿಂಹತನದ ಅಗಾಧ ಶಕ್ತಿ ರಾಜ ಗಾಂಭೀರ್ಯಗಳು ನಮ್ಮ ಬಲವಾಗಿ, ಅದೇ ದೈವಶಕ್ತಿಯಾಗಿ ರೂಪುಗೊಂಡು ನಮ್ಮಲ್ಲಿರುವ ಎಲ್ಲ ರಾಕ್ಷಸಪ್ರವೃತ್ತಿಗಳೂ ಅಸುನೀಗುತ್ತವೆ. ಹೀಗಾಗಿ ಪ್ರಹ್ಲಾದನ ಮುಗ್ಧ ಪ್ರೀತಿ, ನರಸಿಂಹ ಎಂಬ ದಿವ್ಯತೆ ಮತ್ತು ಹಿರಣ್ಯಾಕ್ಷ – ಹಿರಣ್ಯಕಶಿಪುಗಳೆಂಬ ಅವಗುಣಗಳ ನಾಶದ ಕತೆಯನ್ನು ನಮ್ಮ ಕತೆಯನ್ನಾಗಿಯೇ ಕಂಡುಕೊಂಡು ನಮ್ಮ ಬದುಕನ್ನು ಉತ್ತಮತೆಯ ಕಡೆಗೆ ನಡೆಸಿಕೊಳ್ಳುವ ಸಾಧ್ಯತೆ ಇದೆ.

ನರಸಿಂಹ ಸ್ವಾಮಿಯ ಪೂಜೆಯಿಂದ – ಸರ್ವರೋಗದಿಂದ ವಿಮುಕ್ತಿ, ಸಾಲಭಾದೆ ನಿವಾರಣೆ, ಸುಖ ಸಂಪತ್ತು ಸಂತಸ ಲಭ್ಯ, ದುಷ್ಟಶಕಕ್ತಿಗಳಿಂದ ಭಯ ನಿವಾರಣೆ ದೊರಕುವುದರಲ್ಲಿ ಸಂಶಯವೇಯಿಲ್ಲವೆಂದು ತಿಳಿಸುತ್ತದೆ ಪುರಾಣ ಪುಣ್ಯಕತೆಗಳು. ನರಸಿಂಹ ಜಯಂತಿ ಪ್ರಯುಕ್ತ ನರಸಿಂಹನ ಅನುಗ್ರಹ ನಿಮದಾಗಲಿ.

ಸರ್ವರಿಗೂ ನರಸಿಂಹ ಜಯಂತಿ ಶುಭಾಶಯಗಳು

|| ನಾರಸಿಂಹೋ ಮಹಾಸಿಂಹೋ ದಿವ್ಯಸಿಂಹೋ ಮಹಾಬಲಃ ಉಗ್ರಸಿಂಹೋ ಮಹಾದೇವಸ್ತಂಭೋಶ್ಚೋಗ್ರಲೋಚನಃ ರೌದ್ರಸರ್ವಾದ್ಭುತಃ ಶ್ರೀ ಮನ್ಸೋಗಾನಂದ ಸ್ತ್ರೀ ವಿಕ್ರಮಃ ಹರಿಃ ಕೋಲಾಹಲಶ್ಚಕ್ರೀ ವಿಜಯೋ ಜಯವರ್ಧನಃ…..ನಮೋನಾರಸಿಂಹಂ ||

✍. ಕಾನತ್ತಿಲ್ ರಾಣಿ ಅರುಣ್

“ವಿಷು” ಎಂಬ ಪ್ರಕೃತಿ ಮಾತೆಯ ಪೂಜಿಸುವ ಹಬ್ಬ

“ವಿಷು” ಎಂಬ ಪ್ರಕೃತಿ ಮಾತೆಯ ಪೂಜಿಸುವ ಹಬ್ಬ

ಸೌರಮಾನ ಯುಗಾದಿ’ ಎಂದೇ ಜನಪ್ರಿಯವಾಗಿರುವ ‘ವಿಷು’ ಹೊಸ ವರ್ಷಕ್ಕೆ ನವ ಚೈತನ್ಯವನ್ನು ತುಂಬುವ, ಹೊಸ ಸಂವತ್ಸರವನ್ನು ಸ್ವಾಗತಿಸುವ ಹಬ್ಬ. ತುಳುವರಿಗೆ ಇದು ‘ಬಿಸು ಪರ್ಬ’ ವಾದರೆ, , ಕೇರಳೀಯರಿಗೆ ‘ವಿಷು’, ತಮಿಳುನಾಡಿನಲ್ಲಿ ‘ಪುತ್ತಾಂಡ್’, ಪಂಜಾಬಿಗಳಿಗೆ ‘ಬೈಸಾಕಿ’, ಅಸ್ಸಾಂನಲ್ಲಿ ಇದು ‘ಬಿಹು’ ಉತ್ತರಾಖಂಡ, ಹರಿಯಾಣ ರಾಜ್ಯಗಳ ಜನರಿಗೂ ಇದು ಇದೇ ಹೊಸ ವರ್ಷ ಆಗಮನದ ದಿನ.

ವಿಷು ಪ್ರಕೃತಿ ಮಾತೆಯ ಪೂಜೆ ಮಾಡುವ ಹಬ್ಬ. ನಾಡಿನ ಜನರು ಸುಖ ಸಂತೋಷ ನೆಮ್ಮದಿಯಿಂದ ಬಾಳಬೇಕಾದರೆ ಪ್ರಕೃತಿ ಮಾತೆ ಸಂತುಷ್ಟಳಾಗಿರಬೇಕು. ಅದಕ್ಕೆ ಈ ವಿಷು ಹಬ್ಬದ ಆಚರಣೆ. ವಿಷು ಕೇರಳ ಮತ್ತು ತುಳುನಾಡು ಪ್ರದೇಶದಲ್ಲಿ, ಸಾಮಾನ್ಯವಾಗಿ ಎಪ್ರಿಲ್ ಎರಡನೇ ವಾರದಲ್ಲಿ ಹೊಸವರ್ಷವಾಗಿ ಆಚರಿಸಲಾಗುತ್ತದೆ. ವಿಷುವನ್ನು ವೈಭವ ಮತ್ತು ಉತ್ಸಾಹದಿಂದ ಕೇರಳದ ಎಲ್ಲ ಭಾಗಗಳಲ್ಲಿ ಆಚರಿಸಲಾಗುತ್ತದೆ.

ಚಂದ್ರನ ಚಲನೆಯನ್ನು ಆಧರಿಸಿ ಚಾಂದ್ರಮಾನ ಯುಗಾದಿ ಆಚರಿಸುವಂತೆ ಸೂರ್ಯನ ಚಲನೆಯನ್ನು ಆಧರಿಸಿ ಸೌರಮಾನ ಯುಗಾದಿಯನ್ನು ಆಚರಿಸುತ್ತಾರೆ. ಇದುವೇ ಬಿಸು. ತುಳು ಸಂಸ್ಕೃತಿ ಪ್ರಕಾರ ಈ ಆಚರಣೆಯೊಂದಿಗೆ ವರ್ಷದ ಆರಂಭ. ಈ ದಿನ ಹೊಸ ವರ್ಷಾಚರಣೆಯ ಸಂಭ್ರಮ. ತುಳುನಾಡಿನಲ್ಲಿ ‘ಬಿಸು’ ವಾಗಿಯೂ ಕೇರಳದಲ್ಲಿ ‘ವಿಷು’ವಾಗಿಯೂ ಅಚರಿಸಲ್ಪಡುವ ವಿಷು ಹಬ್ಬವೂ ಸುಗ್ಗಿಯನ್ನು ಸಂಕೇತಿಸುತ್ತದೆ. ಈ ಹಬ್ಬವನ್ನು ದೇಶದ ಇತರೆಡೆಗಳಲ್ಲೂ ಬೇರೆ ಬೇರೆ ರೀತಿಯಲ್ಲಿ ಆಚರಿಸುತ್ತಾರೆ. ಅಸ್ಸಾಂನಲ್ಲಿ ‘ಬಿಶು’ ಎಂಬುದಾಗಿ ಇದನ್ನು ಸಂಭ್ರಮಿಸಿದರೆ ಪಂಜಾಬ್ ನಲ್ಲಿ ‘ಬೈಸಾಕಿ’ ಮತ್ತು ತಮಿಳುನಾಡಿನಲ್ಲಿ ‘ಪುತ್ತಾಂಡ್’ ಎಂದಾಗಿ ಸುಗ್ಗಿಯ ಸಂಭ್ರಮವನ್ನು ಕೊಂಡಾಡುತ್ತಾರೆ. ಗ್ರೆಗೋರಿಯನ್ ಕ್ಯಾಲೆಂಡರ್ ನಲ್ಲಿ ಎಪ್ರಿಲ್ ತಿಂಗಳ ಎರಡನೇ ವಾರ ಅಂದರೆ ಎಪ್ರಿಲ್ ೧೪ರಂದು ಬಿಸುವನ್ನು ಆಚರಿಸುತ್ತಾರೆ. ಇದೊಂದು ಕೃಷಿಗೆ, ಕೃಷಿಕರಿಗೆ ಸಂಬಂಧಿಸಿದ ಹಬ್ಬ. ವಿಷು ಹೊಸ ಸಂವತ್ಸರವನ್ನು ಬರಮಾಡಿಕೊಳ್ಳುವ ಉತ್ಸವ.

ವಿಷು ಕಣಿ ಹಾಗೂ ಕೊನ್ನೆ ಹೂವು:
ಮಲೆಯಾಳಿಗಳು ವಿಷು ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಣೆ ಮಾಡುತ್ತಿದ್ದು ಅವರಲ್ಲಿ ಕೊನ್ನೆ ಹೂವಿಗೆ ಪ್ರಧಾನ ಆದ್ಯತೆ. ಈ ಸಂವತ್ಸರದಲ್ಲಿ ಕೊನ್ನೆ ಹೂ ಎಲ್ಲೆಡೆಗಳಲ್ಲಿ ಮರ ತುಂಬಾ ಪಸರಿಸಿಕೊಂಡು ಜನರನ್ನು ಆಕರ್ಷಿಸುತ್ತದೆ. ಹಳದಿ ಬಣ್ಣದಲ್ಲಿರುವ ಈ ಹೂವನ್ನು ಕಣಿಯಲ್ಲಿರಿಸಿ ಪೂಜಿಸಲಾಗುತ್ತದೆ. ಕೊನ್ನೆ ಹೂ ಇಲ್ಲದ ವಿಷುಕಣಿ ನಿಜವಾದ ಕಣಿಯೇ ಅಲ್ಲ ಎಂಬ ಮಾತು ಮಲೆಯಾಳಿಗರಲ್ಲಿದೆ. ಬೇರೆ ಯಾವುದೇ ದಿನಗಳಲ್ಲಿ ಕೊನ್ನೆ ಹೂವನ್ನು ದೇವರಿಗೆ ಅರ್ಪಿಸದೇ ಇರುವುದೂ ವಿಶೇಷ.
ವಿಷು ಆಚರಣೆಯಲ್ಲಿ ಈ ವಿಷು ಕಣಿಗೆ ಪ್ರಧಾನ ಪಾತ್ರ. ನಾಡಿನ ಪ್ರತಿ ಮನೆಯಲ್ಲಿಯೂ ವಿಷು ಕಣಿಯನ್ನು ಹಬ್ಬದ ಹಿಂದಿನ ರಾತ್ರಿ ಇರಿಸಲಾಗುತ್ತದೆ. ಕಣಿಯಲ್ಲಿ ತಮ್ಮ ಮನೆ ತೋಟದಲ್ಲಿ ಬೆಳೆದ ಫಲವನ್ನು ಅದರಲ್ಲಿ ಸಮರ್ಪಿಸಲಾಗುತ್ತದೆ. ಅಕ್ಕಿ, ತೆಂಗಿನಕಾಯಿ, ತರಕಾರಿ, ಹಣ್ಣು ಹಂಪಲು, ಚಿನ್ನದ ಆಭರಣ ಸೇರಿದಂತೆ ನಮ್ಮಲ್ಲಿ ಲಭ್ಯವಿರುವ ಎಲ್ಲಾ ವಸ್ತುಗಳನ್ನು ಕಣಿಯಲ್ಲಿಟ್ಟು ಪೂಜಿಸುವುದು ಸಂಪ್ರದಾಯ. ಹಿಂದಿನ ರಾತ್ರಿ ಇಟ್ಟ ಕಣಿಯ ದರ್ಶನವನ್ನು ಮರು ದಿನ ಎದ್ದೊಡನೆ ಕಣಿಯಲ್ಲಿರಿಸಿದ ಕನ್ನಡಿಯಲ್ಲಿ ಮುಖ ನೋಡಿ, ಕುಂಕುಮವನ್ನು ಲೇಪಿಸಿ, ಗುರು ಹಿರಿಯರ ಆಶೀರ್ವಾದವನ್ನು ಪಡೆಯುವುದು ಹಿಂದಿನಿಂದಲೂ ನಡೆಸಿಕೊಂಡು ಬಂದ ಕ್ರಮ. ಕುಟುಂಬದ ಸದಸ್ಯರೊಂದಿಗೆ ಸಾಮರಸ್ಯ ಅಂತೆಯೇ ಹಿರಿಯರು ಮತ್ತು ಕಿರಿಯರ ನಡುವಿನ ಬಾಂಧವ್ಯವನ್ನು ತಿಳಿಸುತ್ತದೆ. ಹಿರಿಯರ ಆಶೀರ್ವಾದವನ್ನು ಕಿರಿಯರು ಈ ಸಂದರ್ಭದಲ್ಲಿ ಪಡೆದುಕೊಳ್ಳುತ್ತಾರೆ. ಮನೆಯ ಹಿರಿಯರು ಕಿರಿಯರೆಲ್ಲರಿಗೂ ಹಣವನ್ನು ನೀಡಿ ಹಬ್ಬದಂದು ಅವರು ಖುಷಿಪಡಿಸುತ್ತಾರೆ. ವರ್ಷ ಪೂರ್ತಿ ಇದು ಸೌಭಾಗ್ಯವನ್ನು ನೀಡುತ್ತದೆ ಎಂಬುದು ಪ್ರತೀತಿ.

ಪ್ರತಿ ದೇವಾಲಯಗಳಲ್ಲೂ ವಿಷು ಕಣಿಯನ್ನಿಟ್ಟು ಸಮೀಪದ ದೇವಸ್ಥಾನಕ್ಕೆ ಹೋಗಿ ಭಕ್ತಾದಿಗಳು ಕಣಿ ದರ್ಶನ ಮಾಡಿ ಬರುತ್ತಾರೆ. ಹೀಗೆ ಪ್ರಕೃತಿ ಮಾತೆಯ ಒಡಲಲ್ಲಿ ಬೆಳೆದ ಫಸಲುಗಳನ್ನು ಪೂಜಿಸಿ ದೇವರಲ್ಲಿ ಸುಖ ಸಮೃದ್ಧಿ ಹಾಗೂ ಶಾಂತಿಯುತ ಜೀವನಕ್ಕಾಗಿ ಬೇಡುವುದು ವಿಷು ಕಣಿಯ ವಿಶೇಷ.

ಬಿಸು ಹಬ್ಬ ಪ್ರಕೃತಿ ಆರಾಧನೆಯ ಒಂದು ವಿಧಾನವಾಗಿದೆ. ಹೊಸ ವರ್ಷದ ಉನ್ನತಿಯ ಪ್ರಥಮ ಹೆಜ್ಜೆ. ಸುಗ್ಗಿಯ ಸಂಭ್ರಮವು ಜನರಲ್ಲಿ ಸಂತೋಷ, ರೈತರಿಗೆ ತೃಪ್ತಿಯನ್ನು ಇದು ನೀಡುತ್ತದೆ. ತುಳುವರು ಭತ್ತದ ಬೆಳೆಯನ್ನು ಒಂದು ಆರಾಧನಾ ಭಾವದಿಂದ ಕಾಣತ್ತಾರೆ. ವಾಸ್ತವವಾಗಿ ಈ ಆಚರಣೆಯಲ್ಲಿ ಭೂಮಿ ಮತ್ತು ಹೆಣ್ಣನ್ನು ಏಕಮಾತ್ರವಾಗಿ ಕಂಡಿದ್ದಾರೆ. ಎನ್ನುವುದು ಕಂಡು ಬರುತ್ತದೆ. ವಿಷು-ಕಣಿಯ ದಿನ ಏನು ಮಾಡುತ್ತೇವೋ ಅದು ವರ್ಷವಿಡೀ ಮುಂದುವರಿಯುತ್ತದೆ ಎಂಬ ಕಾರಣಕ್ಕೆ, ಹೊಸವರ್ಷದ ಮೊದಲ ದಿನ ನಗು ನಗುತ್ತಿರಬೇಕು, ಜಗಳಾಡಬಾರದು, ಅಳಬಾರದು ಎಂದು ಹಿಂದಿನಿಂದಲೂ ನಡೆದೂ ಬಂದ ಪ್ರತೀತಿ.

ಯುಗಾದಿಯಲ್ಲಿ ಬೇವು ಬೆಲ್ಲ ತಿಂದು, ಜೀವನದಲ್ಲಿ ನೋವು ನಲಿವುಗಳನ್ನು ಸಮನಾಗಿ ಸ್ವೀಕರಿಸುವ ದೃಢ ಮನಸ್ಸಿನೊಂದಿಗೆ ಹೊಸ ಯುಗಕ್ಕೆ ಸ್ವಾಗತ. ಆದರೆ ‘ವಿಷು’ ಹಬ್ಬ ಇದಕ್ಕಿಂತ ಭಿನ್ನ. ಇದು ಪ್ರಕೃತಿಯ ಪೂಜೆಗೆ ಮೀಸಲು. ಭೂ ತಾಯಿಯ ಒಡಲಲ್ಲಿ ಬೆಳೆದ ಫಸಲುಗಳನ್ನು ಪೂಜಿಸುವ ಮೂಲಕ ಹೊಸ ವರ್ಷದಲ್ಲಿ ಸಂಪದ್ಭರಿತ ಕೃಷಿ, ಸುಖ ಜೀವನ ಸಮೃದ್ಧಿಗಾಗಿ ದೇವರಲ್ಲಿ ಪ್ರಾರ್ಥಿಸುವುದು ಈ ದಿನದ ವಿಶೇಷ. ಹಾಗಾಗಿ ವಿಷು ಹಬ್ಬವನ್ನಾಚರಿಸುವ ಎಲ್ಲರ ಜೀವನದಲ್ಲಿ ಸುಖ ಶಾಂತಿ ಸಮೃದ್ಧಿ ಉಂಟಾಗಲಿ ಎಂದು ಹಾರೈಸೋಣ.

✍. ಕಾನತ್ತಿಲ್ ರಾಣಿ ಅರುಣ್

ಬದುಕೊಂದು ಯುದ್ಧಭೂಮಿಯಾಗಿದೆ. ಧೈರ್ಯವಾಗಿ ಹೋರಾಡಿ; ಐದು ಸಾವಿರ ವರುಷಗಳ ಹಿಂದೆ ಶ್ರೀ ಕೃಷ್ಣ ಜಗತ್ತಿಗೆ ನೀಡಿದ ಸಂದೇಶ

ಬದುಕೊಂದು ಯುದ್ಧಭೂಮಿಯಾಗಿದೆ. ಧೈರ್ಯವಾಗಿ ಹೋರಾಡಿ;
ಐದು ಸಾವಿರ ವರುಷಗಳ ಹಿಂದೆ ಶ್ರೀ ಕೃಷ್ಣ ಜಗತ್ತಿಗೆ ನೀಡಿದ ಸಂದೇಶ

2019 ಡಿಸೆಂಬರ್‌ 8 ಶ್ರೀ ‌ಕೃಷ್ಣನಿಂದ ಭಗವದ್ಗೀತೆ ಬೋಧಿಸಲ್ಪಟ್ಟ ದಿನ. ನಮ್ಮಲ್ಲೊಂದು ಅಭಿಪ್ರಾಯವಿದೆ. ಭಗವದ್ಗೀತೆ, ರಾಮಾಯಣ, ಮಹಾಭಾರತ, ಭಾಗವತ, ಉಪನಿಷತ್ತು ಇವೆಲ್ಲ ಪ್ರಾಯವಾದವರಿಗೆ. ಅಜ್ಜಂದಿರಿಗೆ. ಕೈಲಾಗದೆ ಕೂತವರಿಗೆ. ಊರುಗೋಲಿಲ್ಲದೆ ನಡೆದಾಡಲು ಆಗದ ಸ್ಥಿತಿಗೆ ತಲುಪಿದ ಮೇಲೆ ಇವೆಲ್ಲ ವೇದಾಂತಗಳು. ಅಲ್ಲಿಯವರೆಗೆ ನಮಗೆ ಧರ್ಮಗ್ರಂಥಗಳು ಬೇಕಾಗಿಲ್ಲ, ಅಂತ. ಭಗವದ್ಗೀತೆ ಅಧ್ಯಯನದಿಂದ ಜೀವನದಲ್ಲಿ ನೆಮ್ಮದಿ ಹಾಗೂ ಶಾಂತಿ ಲಭಿಸುತ್ತದೆ. ಜತೆಗೆ ಉತ್ತಮ ಜೀವನ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ.
ಮಾನವಕೋಟಿಯ ಮೇಲೆ ಕರುಣೆಯಿಂದ ಶ್ರೀಕೃಷ್ಣ ಪರಮಾತ್ಮನು ಮಾನವ ಬದುಕಿಗೆ ಅವಶ್ಯಕವೆನಿಸುವ ತತ್ವವನ್ನು ಸಾಮಾನ್ಯನೂ ತಿಳಿದುಕೊಳ್ಳಬಲ್ಲಂಥ ತಿಳಿಯಾದ ಭಾಷೆಯಲ್ಲಿ ಭಗವದ್ಗೀತೆಯ ರೂಪದಲ್ಲಿ ಅಮೃತಧಾರೆಯಾಗಿ ಸುರಿಸಿರುವನು. ಇದು ಎಲ್ಲ ಉಪನಿಷತ್ತುಗಳ ಸಾರ. ಮನುಷ್ಯನ ಜೀವನದಲ್ಲಿ ಸುಖದುಃಖಗಳ ಏರಿಳಿತ ನಿರಂತರವಾಗಿರುತ್ತದೆ. ಮನುಷ್ಯ ಸುಖ ಬಂದಾಗ ಹಿಗ್ಗುತ್ತಾನೆ, ದುಃಖ ಬಂದಾಗ ಕುಗ್ಗುತ್ತಾನೆ. ಎರಡನ್ನೂ ಸಮಚಿತ್ತದಿಂದ ಸ್ವೀಕರಿಸುವುದು ಎಲ್ಲರಿಗೂ ಸಾಧ್ಯವಿಲ್ಲ. ಆದರೆ ಈ ಸಮಚಿತ್ತ ಪ್ರತಿಯೊಬ್ಬನಿಗೂ ಅತ್ಯಗತ್ಯ. ಈ ಕೌಶಲವನ್ನು ಕಲಿಸುವುದು ಭಗವದ್ಗೀತೆ. ಪ್ರಪಂಚದ ಮೊಟ್ಟ ಮೊದಲ ಮನಃಶಾಸ್ತ್ರ ಗ್ರಂಥ ಭಗವದ್ಗೀತೆಯಾಗಿದ್ದು, ಯಾವುದೇ ಜಾತಿ ಧರ್ಮದ ಹಂಗಿಲ್ಲದೆ ಎಲ್ಲಾ ವರ್ಗದ ಜನರೂ ಇದನ್ನು ಅಧ್ಯಯನ ಮಾಡಿ ಜೀವನವನ್ನು ಸಾರ್ಥಕ ಗೊಳಿಸಿಕೊಳ್ಳಬಹುದಾಗಿದೆ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.
ಭಗವದ್ಗೀತೆಯು ನಮಗೆ ಉತ್ತಮ ಸಂದೇಶಗಳನ್ನು ನೀಡಿದೆ. ಬೆಂಕಿಪೊಟ್ಟಣದ ಪ್ರತಿ ಕಡ್ಡಿಗಳು ಜ್ಯೋತಿಯನ್ನು ಹೇಗೆ ಬೆಳಗಿಸುತ್ತವೆಯೋ ಹಾಗೇ ಭಗವದ್ಗೀತೆಯ ಪ್ರತಿ ಶ್ಲೋಕಗಳು ಜೀವನಕ್ಕೆ ಉತ್ಸಾಹ ನೀಡುತ್ತವೆ. ಹದಿನೆಂಟು ಪರ್ವಗಳ ಮಹಾಭಾರತದ ಸಾರವಾಗಿ ಭಗವದ್ಗೀತೆಯಲ್ಲಿ ಹದಿನೆಂಟು ಅಧ್ಯಾಯಗಳಿದ್ದು, ಶ್ರೀ ಕೃಷ್ಣನ ಗೀತೋಪದೇಶ ಮಾನವನ ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಕೈಗನ್ನಡಿಯಾಗಿದೆ. ಒಂದು ಜಾತಿ ಅಥವಾ ಮತಕ್ಕೆ ಮಾತ್ರ ಸೀಮಿತವಾಗದೆ ಇಡೀ ಮಾನವ ಜನಾಂಗಕ್ಕೇ ಇದು ದಾರಿದೀಪವಾಗಿದೆ. ಅದ್ಭುತ ಶಕ್ತಿಯುಳ್ಳ ಪ್ರತಿ ಶ್ಲೋಕವೂ ಜೀವನದ ಹಲವು ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ದಿವ್ಯ ಪ್ರಭೆಯಾಗಿದೆ. ಸತ್ಯದ ಪೂರ್ಣದೃಷ್ಟಿ ಇಲ್ಲಿದೆ. ಭಗವದ್ಗೀತೆಯ ತತ್ವ ಜಿಜ್ಞಾಸೆ ಆಗಸದಷ್ಟು ವಿಶಾಲ, ಕಡಲಿನಷ್ಟು ಆಳ. ತನ್ನೆಡೆಗೆ ಬಂದ ಯಾರನ್ನೂ ಗೀತೆ ನಿರಾಸೆಯಿಂದ ಹಿಂದಕ್ಕೆ ಕಳಿಸುವುದಿಲ್ಲ, ಅವರವರ ಯೋಗ್ಯತೆಗೆ ತಕ್ಕಂತೆ ಮಾರ್ಗದರ್ಶನವನ್ನು ನೀಡುತ್ತದೆ.
ಕೃಷ್ಣ ಹೇಳುತ್ತಾನೆ: “ಸೋಲೋ ಗೆಲುವೋ ಏನೋ ಒಂದು; ಆದರೆ ಕೆಲಸದಲ್ಲಿ ಆಸಕ್ತಿ ಕಳೆದುಕೊಳ್ಳದಿದ್ದರೆ ಸಾಕು!” ಈ ಅದ್ಭುತ ಸಂದೇಶವನ್ನು ಹೇಳುವ ಭಗವದ್ಗೀತೆಯನ್ನು ಯೌವನದಲ್ಲಿ ಓದದೆ ಮತ್ಯಾವಾಗ, ಕೈಗೆ ಊರುಗೋಲು ಬಂದಮೇಲೆ ಓದಬೇಕೇ ಎಂಬುದು ನಿಮ್ಮಲ್ಲಿ ನನ್ನ ಪ್ರಶ್ನೆ? ಭಗವದ್ಗೀತೆ ಕೇವಲ ಒಂದು ಧಾರ್ಮಿಕ ಗ್ರಂಥವಲ್ಲ. ಅದೊಂದು ಬೆಸ್ಟ್‌ ಪರ್ಸನಾಲಿಟಿ ಡೆವಲಪ್‌ಮೆಂಟ ಹಾಗೂ ಮೋಟಿವೆಷನಲ್ ಬುಕ್ ಕೂಡ ಆಗಿದೆ. ಅದರಲ್ಲಿ ನಮ್ಮೆಲ್ಲ ಸಮಸ್ಯೆಗಳಿಗೆ ಪರಿಹಾರಗಳಿವೆ. ನಮ್ಮೆಲ್ಲ ಪ್ರಶ್ನೆಗಳಿಗೆ ಉತ್ತರಗಳಿವೆ. ನೀವು ತಪ್ಪದೆ ಒಂದ್ಸಾರಿ ಭಗವದ್ಗೀತೆಯನ್ನು ಓದಿ. ಖಂಡಿತ ನಿಮ್ಮ ಲೈಫ್‌ ಸಕ್ಸೆಸ್‌ ಫುಲ್ಲಾಗುತ್ತದೆ. ಭಗವದ್ಗೀತೆಯಿಂದ ಹೆಕ್ಕಿ ತೆಗೆದ ಕೆಲವು ವಿಷಯಗಳು ಇಂತಿವೆ ;
“ನಮ್ಮ ಮನಸ್ಸು ನಮ್ಮ ಅಸಲಿ ಮಿತ್ರ ಹಾಗೂ ಅಸಲಿ ಶತ್ರುವಾಗಿದೆ. ನಮ್ಮ ಮನಸ್ಸು ನಮ್ಮ ನಿಯಂತ್ರಣದಲ್ಲಿದ್ದರೆ ಅದಕ್ಕಿಂತ ಒಳ್ಳೇ ಮಿತ್ರ ಬೇರ್ಯಾರಿಲ್ಲ. ಅದೇ ಮನಸ್ಸು ನಮ್ಮ ನಿಯಂತ್ರಣ ತಪ್ಪಿ ಹೋದರೆ ಅದಕ್ಕಿಂತ ಕೆಟ್ಟ ಶತ್ರು ಬೇರೆಯಾರಿಲ್ಲ. ನಾವು ನಮ್ಮ ಮನಸ್ಸನ್ನು ಗೆದ್ದರೆ ಎಲ್ಲವನ್ನೂ ಗೆದ್ದಂತೆ.”
“ಇಲ್ಲಿ ತನಕ ಆಗಿದ್ದೆಲ್ಲವು ಒಳ್ಳೆಯದೇ, ಸದ್ಯಕ್ಕೆ ಆಗುತ್ತಿರುವುದೆಲ್ಲವು ಒಳ್ಳೆಯದೇ, ಮುಂದೆ ಆಗುವುದೆಲ್ಲವು ಒಳ್ಳೆಯದೇ. ಆದಕಾರಣ ಯಾವುದಕ್ಕೂ ಜಾಸ್ತಿ ಚಿಂತಿಸದಿರಿ, ಜಾಸ್ತಿ ಕೊರಗದಿರಿ. ನಿಮ್ಮ ಕೆಲಸಗಳನ್ನು ನೀವು ಸರಿಯಾಗಿ ಮಾಡಿ ಎಲ್ಲವೂ ಒಳ್ಳೆಯದೇ ಆಗುತ್ತದೆ.”
“ಎಲ್ಲದಕ್ಕೂ ಅನುಮಾನಪಡುವವರು ಎಂದಿಗೂ ಖುಷಿಯಾಗಿರಲಾರರು. ಸಂಶಯಾಸ್ಪದವಾದ ಮನಸ್ಸು ಎಂದಿಗೂ ಯಾವುದರ ಮೇಲೆಯೂ ವಿಶ್ವಾಸ ಮಾಡಲಾಗದು. ಸಂಶಯಾಸ್ಪದವಾದ ಮನಸ್ಸು ಎಂದಿಗೂ ನಿಮ್ಮನ್ನು ನಿಮ್ಮ ಗುರಿ ತಲುಪಿಸಲ್ಲ. ಆದ್ದರಿಂದ ಸಂಶಯದಿಂದ ಹೊರಬನ್ನಿ. ಕೆಟ್ಟ ಆಲೋಚನೆಗಳಿಂದ ಹೊರ ಬನ್ನಿ. ಉಚ್ಛ ಯೋಚನೆಗಳನ್ನು ಮಾಡಿ. ಉಚ್ಛ ಕೆಲಸಗಳನ್ನು ಮಾಡಿ.”
“ನಿಮ್ಮ ಕರ್ತವ್ಯದಿಂದ ದೂರ ಓಡಬೇಡಿ. ಅದರ ಪರಿಣಾಮ ಒಳ್ಳೆಯದಾಗಿರದಿದ್ದರೂ ಸಹ ಅದನ್ನು ಪೂರ್ಣಗೊಳಿಸಿ. ನಿಮ್ಮ ಕರ್ತವ್ಯವನ್ನು ನೀವು ಪ್ರಾಮಾಣಿಕವಾಗಿ ಮಾಡಿ. ಫಲಿತಾಂಶವನ್ನು ಭಗವಂತನಿಗೆ ಬಿಟ್ಟು ಬಿಡಿ. ಕೇವಲ ಕರ್ಮ ನಿಮ್ಮ ಕೈಯಲ್ಲಿದೆ, ಫಲ ನಿಮ್ಮ ಕೈಯಲಿಲ್ಲ.”
“ದೇವರನ್ನು ಸೇರಲು ಹಲವಾರು ದಾರಿಗಳಿವೆ. ನೀವು ನಿಮಗೆ ಸರಿಯೆನಿಸಿದ ದಾರಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಕರ್ಮಯೋಗ, ಜ್ಞಾನಯೋಗ, ರಾಜಯೋಗ, ಭಕ್ತಿಯೋಗಗಳೆಲ್ಲವು ನಿಶ್ಚಿತವಾಗಿ ದೈವವನ್ನು ಸೇರುತ್ತವೆ. ನಿಮಗೆ ಸೂಕ್ತವಾದ ದಾರಿಯನ್ನು ನೀವು ಆಯ್ಕೆ ಮಾಡಿಕೊಳ್ಳಿ.”
“ಬದುಕೊಂದು ಯುದ್ಧಭೂಮಿಯಾಗಿದೆ. ಧೈರ್ಯವಾಗಿ ಹೋರಾಡಿ. ಕಾಲ ಕೆಳಗಿನ ನೆಲ ಕುಸಿದು ಬಿದ್ದರೂ ಯಾರಿಂದಲೂ ಏನನ್ನೂ ಬಯಸದೆ, ಯಾರಿಗೂ ಹೆದರದೇ ಮುನ್ನುಗ್ಗಿ.”
ಭಗವದ್ಗೀತೆಯ ಸಂದೇಶದಂತೆ ನಡೆದುಕೊಳ್ಳುವುದೇ ನಿಜವಾದ ಧರ್ಮಪಾಲನೆ. ಭಗವದ್ಗೀತೆ ಕಾದಂಬರಿ ಪುಸ್ತಕವಲ್ಲ, ಅದೊಂದು ಜೀವನ ಪದ್ಧತಿ ಸಾರುವ ಪವಿತ್ರ ಗ್ರಂಥ. ದೇಶ, ಕಾಲ, ಜಾತಿ, ಮತ, ಪಂಥಗಳನ್ನೂ ಮೀರಿದ ಸರ್ವಧರ್ಮ ಸಮನ್ವಯದ ಮತ್ತು ಸರ್ವಮಾನ್ಯವಾದ ನಿಘಂಟೂ ಭಗವದ್ಗೀತೆ. ಗೀತೆಯ ಸಾರವನ್ನು ಅರಿತು ನಮ್ಮಲ್ಲಿನ ಅಜ್ಞಾನದ ಕೊಳೆಯನ್ನು ತೊಳೆದು ಭಗವಂತನ ಶುದ್ಧಿಯನ್ನು ಜೀವನದಲ್ಲಿ ಅಳವಡಿಸಿದಲ್ಲಿ ಗೊಂದಲ, ಸಂದಿಗ್ಧತೆ, ಜಿಗುಪ್ಸೆಗಳು ದೂರವಾಗಬಲ್ಲುದು. ಮಾನಸಿಕ ಸಿದ್ಧತೆಯೊಂದಿಗೆ ಜೀವನದ ಗುರಿ ಹಾಗೂ ಅರ್ಥವನ್ನು ತಿಳಿದಾಗ ಜೀವನ ಪರಿಪೂರ್ಣ ಹಾಗೂ ಸಾರ್ಥಕವಾಗುವುದು.

✍. ಕಾನತ್ತಿಲ್ ರಾಣಿ ಅರುಣ್

ಶಿವನು ಸತ್ಯವನ್ನರಿತ ದಿನ ಶಿವರಾತ್ರಿ! ಶಿವರಾತ್ರಿ ಪ್ರಯುಕ್ತ ವಿಶೇಷ ಲೇಖನ

“ಶಿವನು ಸತ್ಯವನ್ನರಿತ ದಿನ ಶಿವರಾತ್ರಿ”

ಶಿವರಾತ್ರಿ ಪ್ರಯುಕ್ತ ವಿಶೇಷ ಲೇಖನ

ಶಿವರಾತ್ರಿಯನ್ನು ಮಾಘ ಮಾಸದ ಬಹುಳ ಚತುರ್ದಶಿಯಂದು ಆಚರಿಸುತ್ತಾರೆ. ಶಿವರಾತ್ರಿ ಹಬ್ಬವೆಂದರೆ ಹಿಂದೂಗಳಿಗೆ ವಿಶೇಷವಾದ ಹಬ್ಬವೆಂದೆ ಹೇಳಬೇಕು. ಈ ದಿನದಂದೆ ಶಿವನು ಪಾರ್ವತಿಯನ್ನು ಮದುವೆಯಾಗಿದ್ದು ಎಂದೂ, ಭಕ್ತರ ಇಷ್ಟಾರ್ಥಗಳನ್ನು ಪೂರೈಸಲು ಶಿವನು ಭೂಮಿಗಿಳಿದು ಬರುತ್ತಾನೆ ಎಂಬುದಾಗಿಯೂ, ಶಿವನು ಲಿಂಗಧಾರಣೆ ಮಾಡಿದ ದಿನವೆಂದೂ, ಶಿವ ತಾಂಡವ ನೃತ್ಯ ಮಾಡಿದ ದಿನವೆಂದೂ, ಭಗೀರತನು ಶಿವನನ್ನು ಮೆಚ್ಚಿಸಿ ಗಂಗೆಯನ್ನು ಶಿವನ ಜಟೆಯಿಂದ ಭೂಮಿಗಿಳಿಸಿ ತನ್ನ ಮುತಾತಂದಿರಿಗೆ ಸ್ವರ್ಗವನ್ನು ಕಲ್ಪಿಸಿದ ದಿನವೆಂದೂ, ಸಮುದ್ರ ಮಥಂನದ ಸಮಯದಲ್ಲಿ ದೇವತೆಗಳು ಮತ್ತು ರಾಕ್ಷಸರು ಹಾಲಾಹಲ ಎಂಬ ವಿಷ ಉತ್ಪತಿಯಾದಾಗ ಶಿವನು ಆ ವಿಷವನ್ನು ಕುಡಿಯಲು ಪಾರ್ವತಿ ಶಿವನ ಗಂಟಲನ್ನು ಹಿಡಿದುಕೊಂಡು ರಾತ್ರಿಯಿಡೀ ಕಳೆದುದರ ಸಂಕೇತವೆಂದೂ, ಹೀಗೆ ಅನೇಕ ಉಪ ಕಥೆಗಳು ಶಿವರಾತ್ರಿ ದಿನದ ವಿಶೇಷವಾಗಿದೆ.
ಚಳಿಗಾಲವು ಕಳೆದು ಸುಡು ಬೇಸಿಗೆ ಪ್ರಾರಂಭವಾಗುವ ಸಮಯ (ಫೆಬ್ರವರಿ-ಮಾರ್ಚ್) ತಿಂಗಳಲ್ಲಿ ಬರುವ ಹಬ್ಬವೆ ಶಿವರಾತ್ರಿ. ಶಿವ ಎಂದರೆ ಶುಭಕರ ಅಥವಾ ಮಂಗಳಕರ ಎಂದಾದರೆ, ರಾತ್ರಿ ಎಂಬುದು ಹಗಲಿಗೆ ವಿರುದ್ಧವಾದ ಇರುಳು ಎಂದರ್ಥ. ಆದ್ದರಿಂದ ಶಿವರಾತ್ರಿ ಎಂಬುದು ಮಂಗಳಕರವಾದ ರಾತ್ರಿಯೆಂದೂ ಹೇಳುತ್ತಾರೆ. ಶಿವನು ನಿದ್ರೆ ಮಾಡುವ ರಾತ್ರಿಯೆಂದೂ ಹೇಳುವವರಿದ್ದಾರೆ. ಇದರಲ್ಲಿ ಬ್ರಹ್ಮ ಮತ್ತು ವಿಷ್ಣು ಇಬ್ಬರು ತಾನು ಮೇಲು ಎಂದು ವಾದ ಮಾಡುತ್ತಾರೆಂದೂ, ಅದನ್ನು ಪರಿಹರಿಸಲು ಇಬ್ಬರು ಶಿವನ ಬಳಿ ಬಂದು ನಮ್ಮಿಬ್ಬರಲ್ಲಿ ಯಾರು ಶ್ರೇಷ್ಟರು ಎಂದು ಕೇಳಲು ಶಿವನು ಇವರ ಅಹಂಕಾರವನ್ನು ಮುರಿಯಲು ನನ್ನ ಮೊದಲು ಮತ್ತು ಕೊನೆಯನ್ನು ಹುಡುಕಿಕೊಂಡು ಬನ್ನಿ ಎಂದು ಕಳುಹಿಸಿದ. ಆಗ ಬ್ರಹ್ಮನು ಲಿಂಗದ ಆಳವನ್ನು ಹುಡುಕಲು ವಿಫಲನಾಗಿ ಕೇದಗಿ ಹೂವಿನ ಸಹಾಯ ಪಡೆದು ನಾನು ಶಿವನ ಲಿಂಗದ ಆಳವನ್ನು ಕಂಡಿರುವುದಾಗಿ ಸುಳ್ಳು ಹೇಳಿ ಕೊನೆಗೆ ಸಿಕ್ಕಿಬಿದ್ದ. ಹಾಗಾಗಿ ಶಿವನು ಬ್ರಹ್ಮನ ಪೂಜೆ ಮಾಡುವವರಿಗೆ ಅಕಾಲಿಕ ಮರಣ ಉಂಟಾಗುವುದೆಂದೂ, ಕೇದಗಿ ಹೂವನ್ನು ಯಾರೂ ಪೂಜೆಗೆ ಬಳಸ ಬಾರದೆಂದೂ ಶಾಪ ನೀಡಿದುದಾಗಿಯೂ ಒಂದು ಕಥೆಯಿದೆ.
ಶಿವರಾತ್ರಿಯು ಶಿವನಿಗೆ ಪ್ರಿಯವಾದ ದಿನವಾಗಿದ್ದು, ಅಂದು “ಯಾರು ಸರಳ, ನಿಷ್ಕಲ್ಮಷ ಮನಸ್ಸಿನಿಂದ ನನ್ನನ್ನು ಪೂಜಿಸುತ್ತಾರೋ ಅವರಿಗೆ ನಾನು ಅವರ ಇಷ್ಟಾರ್ಥಗಳನ್ನು ಪೂರೈಸುವುದಾಗಿ” ಶಿವನು ಪಾರ್ವತಿಗೆ ಹೇಳುವುದಾಗಿ ಶಿವ ಪುರಾಣದಲ್ಲಿ ತಿಳಿಸಲಾಗಿದೆ. ಶಿವರಾತ್ರಿಯಂದು ಉಪವಾಸ, ವ್ರತ, ಪೂಜೆ, ಧ್ಯಾನಾದಿಗಳಿಂದ ಶಿವನನ್ನು ಪೂಜಿಸುವುದರಿಂದ ಮನುಷ್ಯ ಜೀವನದಲ್ಲಿ ಮಾಡಿದ ಪಾಪಗಳೆಲ್ಲವೂ ಪರಿಹಾರವಾಗಿ ಮೋಕ್ಷ ಪ್ರಾಪ್ತವಾಗುತ್ತದೆಂದು ಹಿಂದುಗಳ ನಂಬಿಕೆಯಾಗಿದೆ. ಒಂದೆಡೆ ವಿವಾಹವಾಗದ ಹೆಣ್ಣುಮಕ್ಕಳು ಶಿವರಾತ್ರಿಯಂದು ಜಾಗರಣೆ, ಪೂಜೆಯನ್ನು ಮಾಡುವುದರಿಂದ ಶಿವನಂತಹ ಪತಿ ದೊರೆಯುವುದೆಂದೂ, ವಿವಾಹವಾದ ಪತ್ನಿಯರು ಪೂಜಿಸುವುದರಿಂದ ತನ್ನ ಪತಿಗೆ ಅಷ್ಟಐಶ್ವರ್ಯಗಳು ಲಭಿಸುವುದೆಂದೂ ನಂಬುತ್ತಾರೆ.

ಶಿವರಾತ್ರಿಯ ಬಗ್ಗೆಗಿನ ಒಂದು ರೋಚಕ ಕಥೆ:

‘ಶಿವನು ಸ್ವಯಂಭೂ’ ಏಕೆಂದರೆ ಅವನ ಸೃಷ್ಠಿಗೆ ನಿರ್ಧಿಷ್ಟವಾದ ಕ್ಷಣವಾಗಲಿ, ನಿರ್ಧಿಷ್ಟವಾದ ಮೂಲವಾಗಲಿ ಇಲ್ಲ. ಅವನು ತಾನಾಗೀಯೇ ಇದ್ದಾನೆ. ಶಿವ ಅನ್ನುವ ಪದದ ಅರ್ಥ ಏನೂ ಅಲ್ಲದೂ ಅಂತ. ಎನೂ ಅಲ್ಲದೂ ಒಂದು ನಿಗದಿತ ಸಮಯದಲ್ಲಾಗಲ್ಲಿ ಯಾವದರ ಮೂಲಕದಲ್ಲೂ ಸಂಭವಿಸಲ್ಲ ಅದು ಇದೆ ಅಷ್ಟೇ ಹಾಗಾಗಿ ಶಿವ ಇದ್ದ.
ಸೃಷ್ಠಿಕರ್ತ ಬ್ರಹ್ಮ ಸೃಷ್ಠಿಸಲು ಆರಂಭಿಸಿದ. ವಿವಧ ನಕ್ಷತ್ರ ಪುಂಜಗಳು, ಗ್ರಹಗಳು, ಜೀವಜಾತಿಗಳು, ಮನುಷ್ಯರು ಎಲ್ಲವೂ ಅವನಿಂದ ಹೊರಬಂತು. ಆಗ ನಿಶ್ಚಲವಾಗಿದ್ದ ಶಿವನು ತನ್ನ ಕಣ್ಣನ್ನು ತೆರದು ಸೃಷ್ಠಿಯನ್ನು ಗಮನಿಸಲು ಪ್ರಾರಂಭಿಸಿದ. ಅವನು ಸೃಷ್ಠಿಯನ್ನು ಅವಲೋಕಿಸುತ್ತಿದ್ದಂತೆ. ಆನ ಇಲ್ಲಾ ರೀತಿಯ ಕಷ್ಟ-ಕಾರ್ಪಣ್ಯ, ನೋವು ದುಃಖ ಸಂಕಟಗಳನ್ನು ಅನುಭವಿಸುತ್ತಿರುವುದು ನೋಡಿದ. ಅಲ್ಲೊಮ್ಮೆ ಇಲ್ಲೊಮ್ಮೆ ಸ್ವಲ್ಪ ಸುಖ ಸಂತೋಷ ಇತ್ತು ಅಷ್ಟೇ. ಶಿವ ಇದನ್ನು ನೋಡಿದಾಗ ಅವನಿಗೆ ಸೃಷ್ಠಿ ಇಷ್ಟವಾಗಲಿಲ್ಲ. ಅವನೂ ಸುತ್ತಲೂ ನೋಡಿದಾಗ ಬ್ರಹ್ಮ ತನ್ನ ಸೃಷ್ಠಿಯ ಬಗ್ಗೆ ಬಹಳ ಹೆಮ್ಮೆಪಡುತ್ತಿರುವುದು ಕಾಣಿಸುತ್ತದೆ.
ಬೃಹ್ಮನು ತನ್ನ ಸೃಷ್ಠಿಯನ್ನು ತುಂಬ ಗರ್ವ ಮತ್ತು ಆನಂದದಿಂದ ನೋಡುತ್ತಿದ್ದ. ತನ್ನ ಸೃಷ್ಠಿಯನ್ನು ನೋಡಲು ಬ್ರಹ್ಮ ಎರಡು ಕಣ್ಣು ಸಾಲದು ಎಂದು ಅನ್ನಿಸಿ ಇನ್ನೋಂದು ತಲೆಯನ್ನು ಹುಟ್ಟಿಸಿದ. ಹಾಗೇ ಸುತ್ತಲೂ ನೋಡಲು ನಾಲ್ಕು ಬದಿಯಲ್ಲಿ ನಾಲ್ಕು ತಲೆಗಳನ್ನು ಹುಟ್ಟಿಸಿಕೊಂಡ. ಬ್ರಹ್ಮನಿಗೆ ಅದೂ ಸಾಲದೆಂಬಂತೆ ಐದನೆ ತಲೆಯನ್ನು ಹುಟ್ಟಿಸಿದ. ಈ ಐದನೆ ತಲೆ ಏನನ್ನೂ ನೋಡಬೇಕುಂತ ಅಲ್ಲ. ತನ್ನ ಗರ್ವಕ್ಕಾಗಿ ಸುಮ್ಮನೆ ಹುಟ್ಟಿಸಿದ. ಬ್ರಹ್ಮ ಇಂತಹ ದರಿದ್ರವಾದ ಸೃಷ್ಠಿಯನ್ನು ನೋಡಿ ಹಿಗ್ಗುತ್ತಿರುವುದನ್ನು ಕಂಡ ಶಿವನಿಗೆ ಕೋಪ ಬಂತು. ಅವನು ಬ್ರಹ್ಮನ ಮೇಲೆ ದಾಳಿ ಮಾಡಿ ಅವನ ಐದನೆ ತಲೆಯನ್ನು ಕಿತ್ತು ಹಾಕಿದ.
ಬ್ರಹ್ಮನಿಗೆ ಈಗಿರುವುದು ನಾಲ್ಕೆ ತಲೆಗಳು. ಬ್ರಹ್ಮ ನೋವಿನಿಂದ ಚೀರಿ “ಹೀಗೆ ಹ್ಯಾಕೆ ಮಾಡುತ್ತಿದ್ದಿಯಾ ಅಂತ ಕೇಳಿದ” ಅದಕ್ಕೆ ಶಿವ “ನಿನ್ನ ಸೃಷ್ಠಿ ಬಗ್ಗೆ ನಿನಗೆ ನಾಚಿಕೆಯಾಗಲ್ಲವಾ… ಎಲ್ಲರೂ ದುಃಖ ಪಡುತ್ತಿದ್ದಾರೆ. ಜನ ಎಲ್ಲಾ ತರಹದ ನೋವು ನರಳಾಟ ಮತ್ತು ಸಂಕಟವನ್ನು ಅನುಭವಿಸುತ್ತಿದ್ದಾರೆ” ಅಂದ.
ಬ್ರಹ್ಮ ಹೇಳಿದ: ನಾನು ನೋವನ್ನು ಸೃಷ್ಠಿಸಲಿಲ್ಲ, ನಲಿವನ್ನು ಸೃಷ್ಠಿಸಲಿಲ್ಲ. ನಾನು ಸೃಷ್ಠಿಸಿದ್ದಿನಿ ಅಷ್ಟೇ. ಜನ ಹೇಗೆ ಜೀವಿಸುತ್ತಾರೆ ಎಂಬುದು ಅವರಿಗೆ ಬಿಟ್ಟಿದ್ದು. ಅದಿರುವುದು ಅವರ ಮನಸ್ಸಿನಲ್ಲಿ.
ಶಿವ ಅಂದ: ಮನಸ್ಸನ್ನು ಸೃಷ್ಠಿಸಿದ್ದು ಯಾರು? ಅದೂ ನಿನ್ನದೆ ಸೃಷ್ಠಿ.
ಬ್ರಹ್ಮ ಅಂದ: ಮನಸ್ಸಿಗೆ ತನ್ನದೆ ಆದ ಗುಣ ಲಕ್ಷಣಗಳಿಲ್ಲ ಅದು ಇದೆ ಅಷ್ಟೆ. ಜನ ಅದರಿಂದ ಸಂತೋಷವನ್ನು ಮಾಡ್ಕೋಬಹುದು ಅಥವಾ ದುಃಖವನ್ನು ಮಾಡ್ಕೋಬಹುದು ಅಥವಾ ಪರಮಾನಂದವನ್ನು ಮಾಡ್ಕೋಬಹುದು. ಅದು ಅವರಿಗೆ ಬಿಟ್ಟಿದ್ದು.
ಇದನ್ನು ಕೇಳಿ ಶಿವನು ಕೂತು ಸೃಷ್ಠಿಯನ್ನು ಗಹನವಾಗಿ ಅವಲೋಕಿಸಿದ. ಎಲ್ಲಾ ಜೀವಿಗಳನ್ನು ಗಮನಿಸಿದ. ಆ ಮೇಲೆ ಅವನಿಗೆ ತನ್ನದೆ ಮನಸ್ಸನ್ನು ತಿಲ್ಕೋಬೇಕಿತ್ತು. ಹಾಗಾಗಿ ಕಣ್ಣು ಮುಚ್ಚಿ ಕೂತು ತನ್ನದೇ ಸ್ವರೂಪವನ್ನ ತನ್ನ ಮನಸ್ಸಿನ ಸ್ವರೂಪವನ್ನ ನೋಡ ತೊಡಗಿದ. ಅವನಿಗೆ ಮನವರಿಕೆಯಾಯಿತು. ವಾಸ್ತವತೆಯಲ್ಲಿ ಸೃಷ್ಠಿಗೆ ಗುಣ ಲಕ್ಷಣವಿಲ್ಲ. ಪ್ರತಿಯೊಬ್ಬರು ತಮಗೆ ಬೇಕುವುದನ್ನ ಸೃಜಿಸಬಹುದು. ಮನಸ್ಸಿಗೂ ಲಕ್ಷಣ ರಹಿತವಾದದ್ದು ಎಂದು ಅವನಿಗೆ ಮನವರಿಕೆಯಾದಗ ಈ ಸಾಕ್ಷಾತ್ಕಾರ ನಿಚ್ಚಲವಾದಗ ಅವನು ಭಾವೋತ್ಕರ್ಷನಾದ. ಎಷ್ಟು ಆನಂದ ಪರವಸನಾದ ಅಂದರೆ ಎದ್ದು ನಿಂತು ಕುಣಿಯೋಕೆ ಆರಂಭಿಸಿದ. ಹುಚ್ಚೆದ್ದು ಕುಣಿದ. ಅವನು ಸಂಪೂರ್ಣವಾಗಿ ತೊಡಗಿಕೊಂಡು ತೀವ್ರವಾಗಿ ಕುಣಿಯುತ್ತಿರಬೇಕಾದರೆ ಅವನ ದೇಹದ ಪ್ರತಿಯೊಂದು ಕೇಶವು ತನ್ನಲ್ಲೆ ಒಂದು ನೃತ್ಯವಾಗಿದ್ದಾಗ ಇದ್ದಕ್ಕಿದ್ದಂತೆ ಈ ನೃತ್ಯದ ಅಗತ್ಯವು ಇಲ್ಲ ಅನ್ನೋದು ಮನದಟ್ಟಾಯಿತು. ನೃತ್ಯದ ಪರಾಕಷ್ಠತೆಯಲ್ಲಿ ನಿಶ್ಚಲತೆ ಇದೆ. ಅನ್ನೋದನ್ನ ಗಮನಿಸಿದ. ಹಾಗಾಗಿ ಅವನು ತಪಸ್ವಿಯ ತರಹ ಅಚಲವಾಗಿ ಸಂಪೂರ್ಣ ಸ್ಥಬ್ದನಾಗಿ ಕೂತ. ಆ ನಿಶ್ಚಲತೆ ಮಹಾ ಶಿರಾತ್ರಿಯ ಈ ರಾತ್ರಿಯಂದು ಸಂಭವಿಸಿತು ಎಂದು ಹೇಳುತ್ತಾರೆ.
ಆಡಂಬರ ಪ್ರಿಯನಲ್ಲದ, ಮೈತುಂಬಾ ವಿಭೂತಿಯನ್ನು ಬಳಿದು, ಹುಲಿಚರ್ಮವನ್ನು ಸುತ್ತಿಕೊಂಡು, ಹಾವನ್ನು ಕೊರಳಿಗೆ ತಾಕಿಕೊಂಡು, ಸದಾ ಕಾಲವು ಧ್ಯಾನದಲ್ಲಿಯೇ ಕುಳಿತಿರುವ ಶಿವನನ್ನು ಕೇವಲ ಪಂಚಾಕ್ಷರಿ ಮಂತ್ರವಾದ ‘ಓಂ ನಮಃ ಶಿವಾಯ’ದಿಂದಲೂ ಒಲಿಸಿಕೊಳ್ಳಬಹುದೆಂದು ಋಷಿಮುನಿಗಳು ಹೇಳುತ್ತಾರೆ. ಭಕ್ತ ಮಾರ್ಕಾಂಡೆಯ, ಭಕ್ತ ಕುಂಬಾರ, ಬೇಡರ ಕಣ್ಣಪ್ಪ, ಭಕ್ತ ಸಿರಿಯಾಳ ಮುಂತಾದ ಭಕ್ತರು ಶಿವವನ್ನು ಒಲಿಸಿಕೊಂಡು ಅಮರರಾಗಿದ್ದಾರೆ. ಆದ್ದರಿಂದ ಶಿವರಾತ್ರಿಯಂದು ನಾವೂ ಶಿವನನ್ನು ಒಲಿಸಿಕೊಳ್ಳುವ ಪ್ರಯತ್ನ ಮಾಡೋಣ. ಸರ್ವರಿಗೂ ಶಿವರಾತ್ರಿ ಹಬ್ಬದ ಶುಭಾಶಯಗಳನ್ನು ಕೋರುತ್ತಾ, ಆದಿಯೋಗಿ ಶಿವನು ಸರ್ವರಿಗೂ ಸನ್ಮಂಗಳವನ್ನುಂಟು ಮಾಡಲಿ ಎಂದು ಆಶಿಸುತ್ತೇನೆ. ‘ಓಂ ನಮಃ ಶಿವಾಯ’

. ಕಾನತ್ತಿಲ್ ರಾಣಿ ಅರುಣ್

ಸೂರ್ಯನ ಜನ್ಮದಿನ “ರಥಸಪ್ತಮಿ”

ಸೂರ್ಯನ ಜನ್ಮದಿನ “ರಥಸಪ್ತಮಿ”

ಸೂರ್ಯನಿಲ್ಲದೆ ನಮ್ಮ ಬದುಕಿಲ್ಲ. ಸೃಷ್ಟಿಯಲ್ಲಿರುವ ಎಲ್ಲ ಜೀವಿಗಳ ಅಳಿವು–ಉಳಿವು ಸೂರ್ಯನನ್ನೇ ಆಶ್ರಯಿಸಿದೆ ಎಂದರೆ ಅದೇನೂ ತಪ್ಪಾಗದು. ಹೀಗಾಗಿ ಅವನು ನಮ್ಮ ಪಾಲಿಗೆ ದೇವರೇ ಆಗಿದ್ದಾನೆ. ಇದು ಭೌತಿಕ ಸೂರ್ಯನ ವಿಷಯವಾಯಿತು. ಸೂರ್ಯಾರಾಧನೆಗೆ ಇನ್ನೊಂದು ಆಯಾಮವೂ ಉಂಟು. ಜಗತ್ತಿನ ಮುಂದುವರಿಕೆಗೆ ಚಾಲಕನಾದ ಶ್ರೀ ಸೂರ್ಯ ಭಗವಾನನು ಸಿಂಹ ರಾಶಿಯಿಂದ ಮಕರ ರಾಶಿಗೆ ತನ್ನ ರಥವನ್ನೇರಿ ಹೋಗುತ್ತಾನೆ. ಅಂದರೆ ಇಂದಿಗೆ ಚಳಿಗಾಲವು ಮುಗಿದು ಬೇಸಿಗೆಯ ಕಾಲವು ಪ್ರಾರಂಭವಾಗುವುದು. ಸೂರ್ಯನು ತನ್ನ ಏಳು ಕುದುರೆಗಳ ರಥವನ್ನೇರುವನು. ಅವನ ರಥದ ಸಾರಥಿ ಅರುಣ.
ಒಂದೊಂದು ಹಬ್ಬಕ್ಕೂ ಒಂದೊಂದು ಮಹತ್ವ. ಅಂತೆಯೇ ರಥಸಪ್ತಮಿಗೂ ಒಂದು ವಿಶೇಷ ಮಹಿಮೆ ಇದೆ. ‘ರಥಸಪ್ತಮಿ’ ಎಂದರೆ ಸೂರ್ಯ ದೇವನು ಚಾಂದ್ರಮಾನ ಸಂವತ್ಸರದ ಹನ್ನೊಂದನೇ ಮಾಸದ ಅಂದರೆ ಮಾಘ ಶುಕ್ಲ ಪಕ್ಷದ ಸಪ್ತಮಿ ತಿಥಿ ದಿವಸ ಸಪ್ತಾಶ್ವಗಳಿಂದ ಕೂಡಿದ ರಥವನ್ನೇರುವ ದಿವಸ. ಅಂದಿನಿಂದ ಅಶ್ವಾರೂಢನಾಗಿ ಪ್ರಖರವಾಗಲು ಆರಂಭಿಸುವ ದಿನ. ಇದಕ್ಕೆ ‘ಮಾಘ ಸಪ್ತಮಿ’ ಎಂತಲೂ ಕರೆಯುತ್ತಾರೆ. ಮಕರ ರಾಶಿ ಪ್ರವೇಶಿಸಿದ ಸೂರ್ಯನು, ಅಂದು ಸಪ್ತಾಶ್ವರಥಾರೋಹಣ ಮಾಡಿದ ಸಂಕೇತವಾಗಿ ‘ರಥಸಪ್ತಮಿ ವ್ರತಾಚರಣೆ’ ಸಂಪ್ರದಾಯ ಬೆಳೆದು ಬಂದಿದೆ. ಅಂದಿನಿಂದ ಸೂರ್ಯನ ಪ್ರಖರವಾದ ಕಿರಣಗಳು ಇಡೀ ಜಗತ್ತಿನಲ್ಲಿ ಪಸರಿಸಲು ಆರಂಭಿಸುತ್ತವೆ.
ಸೂರ್ಯನ ಆರಾಧನೆಗೆ ಸಪ್ತಮಿ ತಿಥಿ ಮತ್ತು ಆದಿತ್ಯವಾರ ಶ್ರೇಷ್ಠ. ‘ಸಪ್ತ ಜನ್ಮನಿ ಕೃತೇ ಪಾಪಂ ಮುಕ್ತಿರ್ಭವತಿ ತತ್‌ ಕ್ಷಣಾತ್‌’ ಎಂಬಂತೆ ಗಂಗಾನದಿಯಲ್ಲಿ ಸ್ನಾನ ಮಾಡಿ ಶುದ್ಧವಾದಂತೆ ಸಪ್ತಮಿ ತಿಥಿಯಂದು ಸೂರ್ಯನನ್ನು ಪೂಜಿಸಿದರೆ ಏಳು ಜನ್ಮದಲ್ಲಿ ಮಾಡಿದ ಪಾಪಗಳು ಕ್ಷಯವಾಗಿ ಆಯುಷ್ಯ, ಆರೋಗ್ಯ, ಸಂಪತ್ತು ಲಭಿಸುತ್ತದೆ ಎಂದು ಪೌರಾಣಿಕದ ಒಂದು ಕಥೆ ತಿಳಿಸುತ್ತದೆ. ಸೂರ್ಯನ ರಥಕ್ಕೆ ಏಳು ಕುದುರೆಗಳು. ಅವುಗಳ ಹೆಸರುಗಳು ಗಾಯತ್ರಿ, ಬೃಹತೀ, ಉಷ್ಣಿಕ್, ಜಗತೀ, ತ್ರಿಷ್ಟುಪ್, ಅನುಷ್ಟುಪ್ ಮತ್ತು ಪಂಕ್ತಿ.
ಮಾಘಮಾಸ ಶುಕ್ಲ ಪಕ್ಷದ ಸಪ್ತಮಿ ತಿಥಿಯಂದು ಸೂರ್ಯನ ಜನ್ಮದಿನ ಅಲ್ಲದೆ ಸಪ್ತಮಿ ತಿಥಿಯ ಅದಿದೇವತೆಯು ಸೂರ್ಯನೇ ಆಗಿರುವುದರಿಂದ ಇದೇ 2020ರ ಫೆಬ್ರವರಿ 1ರ ಶನಿವಾರದಂದು ಸೂರ್ಯ ಆರಾಧನೆಯ ರಥ ಸಪ್ತಮಿ ದಿನವೆಂದು ಆಚರಿಸಲಾಗುತ್ತದೆ. ಸೂರ್ಯನ ಪೂಜೆಯೇ ಈ ದಿವಸದ ಮುಖ್ಯ ಆಚರಣೆ ಈ ದಿನದಲ್ಲಿ ನಡೆಯುವ ಕೆಲಸ ಕಾರ್ಯಗಳು, ಕೋರಿಕೆಗಳು ಫಲಪ್ರದವಾಗಿರುತ್ತವೆ.
ಭಾರತೀಯ ಸಂಸ್ಕೃತಿಯ ಪರಂಪರೆಯಲ್ಲಿ ಸರ್ವ ದೇವ-ದೇವತೆಯರಿಗೂ ಸಮಾನ ಪೂಜೆ ಪುನಸ್ಕಾರ ಮತ್ತು ಒಬ್ಬೊಬ್ಬ ದೇವರಿಗೆ ಒಂದೊಂದು ಮಹತ್ವವಿದೆ. ನಮ್ಮ ನಿತ್ಯ ಜೀವನದಲ್ಲಿ ಸಹ ಒಂದೊಂದು ಕಾರ್ಯಕ್ಕೆ ಒಬ್ಬ ಮುಖ್ಯಸ್ಥನಿರುವಂತೆ ದೇವತೆಗಳಲ್ಲಿ ಸಹ ಮುಖ್ಯಸ್ಥರಿದ್ದಾರೆ. ಉದಾಹರಣೆಗೆ: ವಿಘ್ನ ನಿವಾರಣೆಗೆ ಗಣೇಶ, ವಿದ್ಯಾರ್ಜನೆಗೆ ಸರಸ್ವತಿ, ಲಕ್ಷ್ಮೀ ಪ್ರಾಪ್ತಿಗಾಗಿ (ಧನ ಸಂಪಾದನೆಗೆ) ಮಹಾಲಕ್ಷ್ಮೀ, ಮಳೆ ಪಡೆಯಲು ವರುಣ ದೇವ ಇತ್ಯಾದಿ. ಅದರಂತೆ ‘ಆರೋಗ್ಯ ಭಾಗ್ಯ’ಕ್ಕಾಗಿ ಮುಖ್ಯ ದೇವರೆಂದರೆ ಸೂರ್ಯ ಹಾಗಾಗಿ ಸೂರ್ಯನ ಜನ್ಮದಿನವನಾಗಿ “ರಥಸಪ್ತಮಿ” ಆಚರಣೆ.
ಸೂರ್ಯ ಆರೋಗ್ಯಕಾರಕ ಮತ್ತು ಜ್ಞಾನಕಾರಕ. ಹೀಗಾಗಿ ನಮ್ಮ ಆರೋಗ್ಯವೂ ಬುದ್ಧಿಯೂ ಜೀವನಕ್ಕೆ ಪೋಷಕವಾಗಲು ಸೂರ್ಯನ ಆರಾಧನೆ ಸಹಕಾರಿ ಎನ್ನುವುದು ನಮ್ಮ ಪರಂಪರೆಯಲ್ಲಿರುವ ನಂಬಿಕೆ. ನಮ್ಮ ದೇಹ–ಮನಸ್ಸುಗಳ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಲು ಸಾಧನೆ ಬೇಕು ಎನ್ನುವುದನ್ನು ರಥಸಪ್ತಮಿಯ ಆಚರಣೆ ಎತ್ತಿತೋರಿಸುತ್ತದೆ.
ಪ್ರಕೃತಿಯು ಕಾಲಕಾಲಕ್ಕೆ ತನ್ನನ್ನು ಪರಿವರ್ತಿಸಿಕೊಳ್ಳುತ್ತದೆ. ಅದಕ್ಕೆ ಅನುಗುಣವಾಗಿ ಭಾರತೀಯರು ಕಾಲವನ್ನು ಲೆಕ್ಕಾಚಾರವಾಗಿ ಪರಿಗಣಿಸಿದ್ದಾರೆ. ಗಿಡಮರಗಳು ಹಳೆಯ ಎಲೆಗಳನ್ನು ಕೊಡವಿ, ಹೊಸ ಚಿಗುರನ್ನು ಗರಿಗೆದರಿಸಿಕೊಂಡು ಹಚ್ಚಹಸಿರಿನಿಂದ ನಳನಳಿಸುತ್ತದೆ. ಇದನ್ನು ಕಂಡ ಭಾರತೀಯರು ಈ ಎರಡು ತಿಂಗಳಿನ ಕಾಲದ ಅವಧಿಯನ್ನು ಗುರುತಿಸಿ ವಸಂತ ಋುತು ಎಂಬುದಾಗಿ ಕರೆದರು. ಮತ್ತು ಈ ಋುತುವಿನ ಆರಂಭ ಕಾಲವನ್ನು ಯುಗಾದಿ ಎಂದು ಕರೆಯಲಾಯಿತು. ಯಾವಾಗ ಮರಗಿಡಗಳು ತನ್ನಲ್ಲಿರುವ ಹಳತನ್ನು ಕಳಚಿಕೊಳ್ಳಲು ಆರಂಭ ಮಾಡುವುದೋ ಆ ಕಾಲವನ್ನು ಶಿಶಿರ ಎಂಬುದಾಗಿ ಗುರುತಿಸಲಾಯಿತು. ನಿಸರ್ಗ ನಿಯಮವನ್ನು ಅನುಸರಿಸಿ ಕಾಲದಲ್ಲಿ ಪರಿವರ್ತನೆ ಉಂಟಾಗುವುದು. ಒಂದು ಘಟ್ಟದಿಂದ ಇನ್ನೊಂದು ಘಟ್ಟಕ್ಕೆ ಉಂಟಾಗುವ ಸಂಧಿಕಾಲವನ್ನು ‘ಪರ್ವ’ ಎಂದು ಕರೆದರು. ಒಂದು ವರ್ಷ, ಹನ್ನೆರಡು ತಿಂಗಳು, ಎರಡು ಅಯನಗಳು, ಪಕ್ಷಗಳು, ತಿಥಿ, ವಾರ, ನಕ್ಷತ್ರ, ಯೋಗ, ಕರಣ ಇತ್ಯಾದಿಗಳು ಕಾಲವನ್ನು ಅಳೆಯಲು ಮಾನವಾಗಿವೆ. ಇವೆಲ್ಲವೂ ಪ್ರಕೃತಿಯಲ್ಲಿ ಉಂಟಾಗುವ ಪರಿವರ್ತನೆಯನ್ನು ಅವಲಂಬಿಸಿಯೇ ಬಂದದ್ದು.
ದ್ವಾಪರ ಯುಗದಲ್ಲಿ ಶ್ರೀ ಕೃಷ್ಣನು ಧರ್ಮರಾಜನಿಗೆ ರಥಸಪ್ತಮಿ ಬಗ್ಗೆ ಹೇಳಿದ ಕಥೆಯಿದೆ. ಯಶೋವರ್ಮನೆಂಬ ರಾಜನಿಗೆ ಹುಟ್ಟಿದ ಮಗನಿಗೆ ಹುಟ್ಟಿನಿಂದಲೇ ರೋಗಿಷ್ಠನಾಗಿದ್ದ. ಈ ಬಗ್ಗೆ ಜ್ಯೋತಿಷಿಗಳಿಂದ ಮಾಹಿತಿ ಪಡೆದು ಸಂಚಿತ ಕರ್ಮದಿಂದ ಬಂದಿರುವ ಕಾಯಿಲೆಗೆ ರಥಸಪ್ತಮಿ ವ್ರತ ಚರಿಸಲು ಹೇಳಿದ್ದರು. ಅದರಂತೆ ಅಂದು ಸೂರ್ಯಾರಾಧನೆ ಮಾಡಲಾಗಿ ರಾಜ ಪುತ್ರನು ಆರೋಗ್ಯವಂತನೂ, ಪ್ರಭಾವಶಾಲಿಯೂ ಆದನು. ಅಲ್ಲದೆ ಪಾಂಡವರು ವನವಾಸದ ಅವಧಿಯಲ್ಲಿ ಶ್ರೀಕೃಷ್ಣನ ಆದೇಶದಂತೆ ಸೂರ್ಯಾರಾಧನೆ ಮಾಡಿ ಆತನಿಂದ ಅಕ್ಷಯ ಪಾತ್ರೆ ಪಡೆದಿದ್ದರು.
ಭೌಗೋಳಿಕವಾಗಿಯೂ ಸುಮಾರು 15 ದಿವಸಗಳ ಹಿಂದೆಯೇ ಸೂರ್ಯನು ಮಕರ ರಾಶಿಗೆ ಪ್ರವೇಶಿಸುವುದರಿಂದ ‘ಮಕರ ಸಂಕ್ರಮಣ’ವೆಂದು ಕರೆದು, ಎಳ್ಳು-ಬೆಲ್ಲದೊಂದಿಗೆ ಹಬ್ಬ ಆಚರಿಸುತ್ತೇವೆ. ಅಂದರೆ, ಸೂರ್ಯನು ದಕ್ಷಿಣ ಧ್ರುವದ ಪ್ರವಾಸ ಮುಗಿಸಿ ಉತ್ತರ ಧ್ರುವದ ಕಡೆಗೆ ಕೆಳಗಿನಿಂದ ಮೇಲೇರುತ್ತಾನೆ. ಆದ್ದರಿಂದ ಬಿಸಿಲಿನ ಪ್ರಖರತೆ ಸಹ ಕ್ರಮೇಣ ವೃದ್ಧಿಸಿ, ಉತ್ತರಾಯಣ ಆರಂಭದ ಮುನ್ಸೂಚನೆ ಕೊಡುತ್ತಾನೆ. ‘ಸೂರ್ಯ ಪ್ರತ್ಯಕ್ಷ ದೇವತಾ’ ನಮ್ಮ ಕಣ್ಣಿಗೆ ಕಾಣಿಸುವ ದೇವರೆಂದರೆ ಸೂರ್ಯ ಚಂದ್ರರಿಬ್ಬರೇ. ಪ್ರತ್ಯಕ್ಷ ಕಾಣುವ ದೇವರನ್ನು ಪೂಜಿಸಬೇಕು. ಸೂರ್ಯೋಪಾಸನೆಯಿಂದಲೇ ಶ್ರೀ ಯೋಗೀಶ್ವರ ಯಾಜ್ಞವಲ್ಕ್ಯ ಮಹರ್ಷಿಗಳು ಶುಕ್ಲ ಯಜುರ್ವೇದವನ್ನು ಸಂಪಾದಿಸಿದರು. ನಿತ್ಯ ಸೂರ್ಯೋಪಾಸನೆ, ಸೂರ್ಯ ನಮಸ್ಕಾರದೊಂದಿಗೆ ಸೂರ್ಯನ ದ್ವಾದಶ ನಾಮಸ್ಮರಣ ಮಾಡಿದರೆ ಸರ್ವರೋಗ ಪರಿಹಾರವಾಗುವುವು.
ಇಡಿಯ ಸೃಷ್ಟಿಯೇ ಪರಮಾತ್ಮನ ಅಧೀನ. ಈ ಪರಮಾತ್ಮನು ಪರಂಜ್ಯೋತಿಯೂ ಹೌದು. ಅವನ ಪ್ರತೀಕವೇ ಸೂರ್ಯ. ಹೀಗಾಗಿ ಭಗವಂತನ ಆರಾಧನೆಯಲ್ಲಿ ನಮ್ಮ ಋಷಿಗಳು ಸೂರ್ಯೋಪಾಸನೆಗೆ ತುಂಬ ಮಹತ್ವವನ್ನು ಕೊಟ್ಟರು ಎನಿಸುತ್ತದೆ. ಸೂರ್ಯನಾರಾಯಣ – ಎಂದೇ ಅವನನ್ನು ಪೂಜಿಸಲಾಗುತ್ತದೆ.
ರಥ ಸಪ್ತಮಿ ದಿವಸ ರೋಗ ನಿವಾರಣೆಯನ್ನು, ದೇಹದಾರ್ಡ್ಯ ಹಾಗೂ ಆರೋಗ್ಯವನ್ನು ಬಯಸುವವರು ಸೂರ್ಯನ ಆರಾಧನೆ ಮಾಡಬೇಕೆಂಬ ನಿಯಮವಿದೆ. ರೋಗಾಣುಗಳನ್ನು ನಾಶ ಪಡಿಸುವ ಶಕ್ತಿ ಸೂರ್ಯನ ಕಿರಣಗಳಲ್ಲಿವೆ. ಬೆಳಗಿನ ಹಾಗೂ ಸಂಜೆಯ ಸೂರ್ಯ ಕಿರಣಗಳಿಂದ ಆರೋಗ್ಯ ವರ್ಧನೆಯಾಗುತ್ತದೆ. ರೋಗದಿಂದ ನರಳುವವರು ಈ ದಿವಸ ಸೂರ್ಯಾರಾಧನೆಯನ್ನು ಮಾಡಿದರೆ ಬೇಗ ಗುಣಹೊಂದುತ್ತಾರೆ. ಸೂರ್ಯ ನಮ್ಮ ಕಣ್ಣಿಗೆ ಕಾಣುವ ಪ್ರತ್ಯಕ್ಷ ದೇವರು. ಸೂರ್ಯದೇವನನ್ನು ಆರಾಧಿಸುವ ಪ್ರಮುಖ ಪರ್ವ ದಿನವೇ ರಥಸಪ್ತಮಿ.

ಬದುಕಿನ ಬದಲಾವಣೆಯ ಪರ್ವಕಾಲ “ಸಂಕ್ರಾಂತಿ” – ಸೂರ್ಯನು ಮಕರ ರಾಶಿಗೆ ಪ್ರವೇಶವಾಗುವ ದಿನವೇ “ಮಕರ ಸಂಕ್ರಾಂತಿ”

ಬದುಕಿನ ಬದಲಾವಣೆಯ ಪರ್ವಕಾಲ “ಸಂಕ್ರಾಂತಿ”

ಸೂರ್ಯನು ಮಕರ ರಾಶಿಗೆ ಪ್ರವೇಶವಾಗುವ ದಿನವೇ “ಮಕರ ಸಂಕ್ರಾಂತಿ”

ಸನಾತನ ಹಿಂದೂ ಧರ್ಮದ ಬುನಾದಿಯಾಗಿರುವ ವೇದಗಳ ಅಂಗಗಳೆಂದೇ ಪ್ರಸಿದ್ಧವಾಗಿರುವ ಆರು ವೇದಾಂಗಗಳಲ್ಲಿ ಒಂದಾದ ಜ್ಯೋತಿಷವನ್ನು ವೇದಗಳ ಕಣ್ಣೆಂದು ಗುರುತಿಸುತ್ತಾರೆ. ವೇದಗಳ ಕಾಲದಿಂದಲೂ ಶುಭಕಾರ್ಯಗಳಿಗೆ ಮುಹೂರ್ತಾದಿ ಕಾಲವನ್ನು ನಿರ್ಣಯಿಸಿ, ಗ್ರಹಗಳ ಸ್ಥಿತಿ-ಗತಿ, ರಾಶಿ-ನಕ್ಷತ್ರ, ಗ್ರಹಣ, ಅಸ್ತೋದಯಗಳನ್ನು ನಿರ್ಣಯಿಸಿ, ಶುಭಾಶುಭ ಫಲಗಳನ್ನು ತೋರುತ್ತಾ, ಹಬ್ಬ-ಹರಿದಿನಗಳನ್ನು ಋತುಗಳಿಗನುಸಾರವಾಗಿ ಲೆಕ್ಕಾಚಾರ ಹಾಕಿ ಗುರುತಿಸುತ್ತಿದ್ದ ಶಾಸ್ತ್ರವೇ ಜ್ಯೋತಿಷ್ಯ. ಈ ಶಾಸ್ತ್ರದಂತೆ, ಸೂರ್ಯನು ನಿರಯಣ ಮಕರರಾಶಿಯನ್ನು ಪ್ರವೇಶಿಸಿದಾಗ, “ಮಕರ ಸಂಕ್ರಾಂತಿ”ಯಾಗುತ್ತದೆ. ಈ ಕಾಲವು ಪ್ರತಿವರ್ಷ ಗ್ರೆಗೋರಿಯನ್ ಪಂಚಾಂಗದ ಜನವರಿ ೧೪ರ ಸರಿಸುಮಾರಿಗೆ ಆಗುತ್ತದೆ.
ನಿರಯಣ ಮಕರರಾಶಿ ಎಂದರೆ…. ಡಿಸೆಂಬರ್ 21 ರಂದು ಸೂರ್ಯನು ಭಾರತೀಯ ಕಾಲಮಾನ ಸಂಜೆ 4 ಗಂಟೆ 42 ನಿಮಿಷಕ್ಕೆ ಸರಿಯಾಗಿ ಪರಮಾವಧಿ ದಕ್ಷಿಣದಲ್ಲಿರುವ ಆಯನ ಸಂಕ್ರಮಣ ಬಿಂದು (2700 ರೇಖಾಂಶ) ತಲುಪಿ, ಉತ್ತರ ದಿಕ್ಕಿಗೆ ತನ್ನ ಪಥವನ್ನು ಬದಲಾಯಿಸುತ್ತಾನೆ. ಉತ್ತರ ಧ್ರುವದಲ್ಲಿ ಕ್ರಮೇಣ ಹಗಲು ಪ್ರಮಾಣ ಹೆಚ್ಚಾಗುತ್ತಾ ಹೋಗುತ್ತದೆ. ರಾತ್ರಿ ಪ್ರಮಾಣ ಕಡಿಮೆಯಾಗುತ್ತಾ ಹೋಗುತ್ತದೆ. (ಚಳಿಗಾಲ ಪ್ರಾರಂಭ) ನಿರಯಣ ಪದ್ಧತಿಯಂತೆ ಸೂರ್ಯನು ಜನವರಿ 14 ರಂದು 2700 ರೇಖಾಂಶ ತಲುಪಿ, ಮಕರರಾಶಿ ಪ್ರವೇಶಿಸುತ್ತಾನೆ. ಆ ದಿವಸ ಮಕರ ಸಂಕ್ರಾಂತಿಯಾಗಿದ್ದು, ಉತ್ತರಾಯಣ ಪುಣ್ಯ ಕಾಲವಾಗಿರುತ್ತದೆ. ಚಳಿಗಾಲದ ಸಮಯದಲ್ಲಿ ಸುಗ್ಗಿ ಸಂಭ್ರಮವನ್ನು ಆಚರಿಸಲು ಈ ಹಬ್ಬ ಆಚರಿಸಲಾಗುತ್ತದೆ. ‘ಅಯನ’ದ ಆರಂಭವನ್ನು ಸೂಚಿಸುವುದಕ್ಕೆ ಹಿಂದು ಧರ್ಮದಲ್ಲಿ ಸಂಕ್ರಾಂತಿಯನ್ನು ಬಿಟ್ಟರೆ ಬೇರೆ ಹಬ್ಬವಿಲ್ಲ. ಉತ್ತರಾಯಣ ಆರಂಭವನ್ನು ಸಂಕ್ರಾಂತಿ ಸೂಚಿಸುತ್ತದೆ.

ಮಕರ ಸಂಕ್ರಾಂತಿಯು ಪ್ರಧಾನವಾಗಿ ಸೂರ್ಯನು ತನ್ನ ಪಥವನ್ನು ಬದಲಾಯಿಸುವುದನ್ನು ಸೂಚಿಸುವುದು ಮಾತ್ರವಲ್ಲದೆ ಉತ್ತರಾಯಣ ಪುಣ್ಯ ಕಾಲದ ಆರಂಭವೂ ಇದಾಗಿದೆ. ಮಕರ ಸಂಕ್ರಾಂತಿ ಅಥವಾ ಸಂಕ್ರಮಣದ ಅರ್ಥವು ಮಕರ ರಾಶಿಯನ್ನು ಹಾದು ಹೋಗುವುದು ಅಥವಾ ಮಕರ ರಾಶಿಗೆ ಬದಲಾಗುವುದು ಎಂಬುದಾಗಿದೆ. ಈ ಆಚರಣೆಯು ಸೂರ್ಯದೇವನ ಸಂಚಾರವನ್ನು ಗಣನೆಗೆ ತೆಗೆದುಕೊಂಡು ಆಚರಿಸಲಾಗುತ್ತಿದ್ದು, ಸೂರ್ಯದೇವನು ತನ್ನ ಏಳು ಕುದುರೆಗಳಿಂದ ಎಳೆಯಲ್ಪಡುವ ಭವ್ಯ ರಥದಲ್ಲಿ ಮಕರ ರಾಶಿಗೆ ಪ್ರವೇಶಿಸುತ್ತಾನೆ ಎಂದು ಪುರಾತನ ಕಾಲದಿಂದಲೇ ಭಾರತೀಯರಲ್ಲಿ ನೆಲೆವೂರಿರುವ ವಿಶ್ವಾಸವಾಗಿದ್ದು, ಪ್ರಸ್ತುತ ರಥದ ಏಳು ಕುದುರೆಗಳು ಕಾಮನ ಬಿಲ್ಲಿನ ಏಳು ಬಣ್ಣಗಳನ್ನು ಪ್ರತಿನಿಧಿಸುತ್ತದೆ.
ಸಂಕ್ರಾಂತಿ ಹಬ್ಬವನ್ನು ಮೂರು ದಿನದ ಹಬ್ಬವಾಗಿ ಆಚರಿಸುತ್ತಾರೆ. ಮೊದಲ ದಿನ ಭೋಗಿ ಹಬ್ಬ ಎಂದೂ ಕರೆಯುತ್ತಾರೆ. ಮನೆಯನ್ನೆಲ್ಲ ಶುದ್ಧಗೊಳಿಸಿ, ಬೀದಿ ಬಾಗಿಲಲ್ಲಿ ಗೋಮಯದಿಂದ ಸಾರಿಸಿ, ಬಣ್ಣಬಣ್ಣದ ರಂಗೋಲಿಯನ್ನು ಬಿಡಿಸುತ್ತಾರೆ. ದೇವತಾ ಪೂಜೆಯನ್ನು ವಿಶೇಷವಾಗಿ ಆಚರಿಸಿ ಪ್ರಸಾದ ಸ್ವೀಕರಿಸುತ್ತಾರೆ. ದೇವರಿಗೆ ಹೆಸರುಬೇಳೆಯಿಂದ ನೈವೇದ್ಯಮಾಡಿ ಸ್ವೀಕರಿಸುವ ಭೋಜ್ಯ ಪದಾರ್ಥವನ್ನು ‘ಹುಗ್ಗಿ’ ಎಂದೂ ಕರೆಯುತ್ತಾರೆ. ಹಿಂದಿನ ತಿಂಗಳಾದ ಧನುರ್ಮಾಸದಲ್ಲಿ ಪ್ರತಿದಿನವೂ ದೇವರಿಗೆ ಅರ್ಪಿಸಲ್ಪಡುವ ಭೋಜ್ಯಾದ್ರವ್ಯಕ್ಕೆ ಈ ದಿವಸ ಮಂಗಳಾರಂಭ ಸಮರ್ಪಣೆ ನಡೆಯುತ್ತದೆ.
ಸಂಕ್ರಾಂತಿ, ಹಳ್ಳಿ ಜನರಿಗೆ ಸಂಭ್ರಮಿಸುವ ದಿನ. ಹೆಂಗಳೆಯರು ಆ ದಿನದಂದು ಶೃಂಗಾರಗೊಂಡು ಎಳ್ಳು – ಬೆಲ್ಲವನ್ನು ಹಂಚುತ್ತಾರೆ. ಸೂರ್ಯ ಹುಟ್ಟುವ ಮುನ್ನವೇ ಮನೆಯನ್ನು “ನವ ವಧು” ವಿನಂತೆ ಶೃಂಗಾರ ಮಾಡುತ್ತಾರೆ. ಮನೆಯ ಮುಂದೆ ರಂಗೋಲಿ ಹಾಕುವ ಮೂಲಕ ನೋಡುಗರ ಕಣ್ಣಿಗೆ ಚಿತ್ರಲೋಕವನ್ನೇ ಕಟ್ಟಿ ಕೊಡುತ್ತಾರೆ.

ರೈತರು ತಮ್ಮ ಹೊಸ ಬೆಳೆಯಾದ ಭತ್ತ, ಕಬ್ಬು, ಎಳ್ಳು ಇತ್ಯಾದಿಗಳನ್ನು ಹೊಲಗಳಿಂದ ಮನೆಗೆ ತಂದು ಅವುಗಳನ್ನು ದಾನ ಮಾಡಿದ ನಂತರ ಸೇವಿಸುವ ಪದ್ಧತಿಯು ಪುರಾತನ ಕಾಲದಿಂದಲೇ ನಡೆದುಕೊಂಡು ಬಂದಿದೆ. ಕರ್ನಾಟಕದಲ್ಲಿ ಸಂಕ್ರಾಂತಿಗೆ ಸಂಬಂಧಪಟ್ಟ ಆಚರಣೆಗಳಲ್ಲಿ ಮುಖ್ಯವಾಗಿ ಕಂಡುಬರುವುದು “ಎಳ್ಳು”. ಮನೆಯಲ್ಲಿ ಎಳ್ಳನ್ನು ತಯಾರಿಸಿ ಸುತ್ತಲಿನ ಮನೆಗಳಿಗೆ “ಎಳ್ಳು ಬೀರುವುದು” ಮತ್ತು ಸ್ನೇಹಿತರು-ಸಂಬಂಧಿಕರೊಂದಿಗೆ ಶುಭಾಶಯಗಳನ್ನು ಹಂಚಿಕೊಳ್ಳುವುದು ಸಾಮಾನ್ಯವಾಗಿ ಕಂಡುಬರುವ ಸಂಕ್ರಾಂತಿಯ ಸಂಪ್ರದಾಯಗಳು. ಎಳ್ಳಿನ ಜೊತೆಗೆ ಸಕ್ಕರೆ ಅಚ್ಚುಗಳು, ಹಣ್ಣು, ಮತ್ತು ಕಬ್ಬಿನ ತುಂಡುಗಳನ್ನು ಸಹ ಬೀರುವುದುಂಟು. ಸಣ್ಣ ಸಣ್ಣ ಚೂರುಗಳಾಗಿ ಕತ್ತರಿಸಿದ ಬೆಲ್ಲ, ಒಣ ಕೊಬ್ಬರಿ, ಹುರಿಗಡಲೆ, ಸಿಪ್ಪೆ ತೆಗೆದ ಕಡಲೇಕಾಯಿ ಬೀಜ ಹಾಗೂ ಹುರಿದ ಬಿಳಿ ಎಳ್ಳನ್ನು ಸೇರಿಸಿ “ಎಳ್ಳು” ತಯಾರಿಸಲಾಗುತ್ತದೆ.
ಸಂಕ್ರಾಂತಿಯಲ್ಲಿ ಮತ್ತೊಂದು ವಿಶೇಷವೆಂದರೆ ಗೋವುಗಳನ್ನು ಪೂಜಿಸುವುದು. ಇದನ್ನು ಹೆಚ್ಚಾಗಿ ಸಂಕ್ರಾಂತಿಯ ಮಾರನೆಯದಿನ ಆಚರಿಸುತ್ತಾರೆ. ದನಕರುಗಳಿಗೆ ಸ್ನಾನಮಾಡಿಸಿ ಅವುಗಳ ಕೊಂಬುಗಳಿಗೆ ಬಣ್ಣಹಚ್ಚಿ ಅವುಗಳನ್ನು ಸಿಂಗರಿಸಿ, ಅವುಗಳಿಗೆ ಪ್ರಿಯವೂ, ಹಿತಕರವೂ ಆದ ಹುಲ್ಲುಕಡ್ಡಿ, ಧಾನ್ಯ, ಕಾಯಿ, ಬೆಲ್ಲಗಳನ್ನು ಅವುಗಳಿಗೆ ತಿನ್ನಿಸುತ್ತಾರೆ. ಪೀಡಾ ಪರಿಹಾರಾರ್ಥವಾಗಿ ಹಾಗು ಅವುಗಳಿಗೆ ಯಾವುದೇ ರೀತಿಯ ರೋಗಭಾದೆಗಳು ಬರದಿರಲೆಂದು ಅವುಗಳನ್ನು ಉರಿಯುತ್ತಿರುವ ಬೆಂಕಿಯನ್ನು ದಾಟಿಹೋಗುವಂತೆ ಮಾಡುತ್ತಾರೆ. ಇದಕ್ಕೆ ‘ಕಿಚ್ಚು ಹಾಯಿಸುವುದು’ ಎಂದೂ ಕರೆಯುತ್ತಾರೆ.

ಮಕರ ಸಂಕ್ರಾಂತಿ ಆಚರಣೆಗೆ ರಾಜ್ಯ, ಮತ, ಜಾತಿಯ ಭೇದವಿಲ್ಲ. ಭಾರತದಲ್ಲಿ ಕರ್ನಾಟಕ, ಆಂಧ್ರ ಪ್ರದೇಶ, ಕೇರಳ, ತಮಿಳುನಾಡು, ಅಸ್ಸಾಂ, ಬಿಹಾರ್, ಗುಜರಾತ್, ಮಹಾರಾಷ್ಟ್ರ, ಓರಿಸ್ಸಾ, ಪಂಜಾಬ್, ರಾಜಸ್ತಾನ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಸೇರಿಂದಂತೆ ಹಲವು ರಾಜ್ಯಗಳಲ್ಲಿ ಸಂಕ್ರಾಂತಿ ಆಚರಣೆಗೊಳಪಡುತ್ತದೆ. ಆದರೆ ಆಯಾ ರಾಜ್ಯದಲ್ಲಿ ಬೇರೆ ಬೇರೆ ಹೆಸರುಗಳಿಂದ ಈ ಹಬ್ಬ ಕರೆಯಲ್ಪಡುತ್ತದೆ.
ದೈನಂದಿನ ಸಮಾಜಿಕ ಧಾರ್ಮಿಕ ಜೀವನದಲ್ಲಿ ಹಾಸುಹೊಕ್ಕಾಗಿ ಸೇರಿಕೊಂಡಿರುವಂತಹದ್ದೆ “ಹಬ್ಬಗಳು”. ಇಡೀ ಮನುಷ್ಯ ಸಮೂಹಕ್ಕೆ ಸಂತೋಷ, ಸಡಗರ ಸಹಜ ಪ್ರೀತಿಯ ವಿಷಯವಾಗಿರುವುದೇ ಹಬ್ಬಗಳು. ಇಂದಿನ ಆಧುನಿಕ ಒತ್ತಡಯುಕ್ತ ಜೀವನದಲ್ಲಿ ತೊಡಗಿದ್ದಾಗಲೂ, ಹಬ್ಬಹರಿದಿನಗಳ ಬಗೆಗಿನ ಆಸಕ್ತಿಯು ಕಳೆದುಕೊಂಡಿಲ್ಲದ್ದನ್ನು ಕಾಣಬಹುದು. ಹಬ್ಬವೆಂಬುದು ಕೆಲವೇ ಧರ್ಮ ಸಂಪ್ರದಾಯಕ್ಕೆ ಸೀಮಿತವಾದುದಲ್ಲ. ಎಲ್ಲಾ ಧರ್ಮಗಳಲ್ಲೂ ಅವರ ಆಚರಣೆಗೆ ತಕ್ಕಂತೆ ಹಬ್ಬಗಳಿರುವುದನ್ನು ಗಮನಿಸಬಹುದು.
ಜಾತ್ಯಾತೀತ ರಾಷ್ಟ್ರವಾದ ನಮ್ಮ ಭಾರತದಲ್ಲಂತು ಜಗತ್ತಿನಲ್ಲಿ ಎಲ್ಲಿಯೂ ಇಲ್ಲದ ವೈವಿದ್ಯಮಯವಾದ ಹಬ್ಬಹರಿದಿನಗಳನ್ನು ಕಾಣಬಹುದು. ಕೆಲವು ಹಬ್ಬಹರಿದಿನಗಳಂತು ವಿವಿಧ ರಾಜ್ಯಗಳಲ್ಲಿ ವಿವಿಧ ಹೆಸರು, ರೀತಿ ನೀತಿಯಿಂದ ಆಚರಿಸುತ್ತಿರುವುದನ್ನು ಕಾಣಬಹುದು. ಹಬ್ಬ ಒಂದೇ ಆದರೂ ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಹೆಸರಿನಿಂದ ಆಚರಿಸುವಂತಹ ಬಹಳಷ್ಟು ಹಬ್ಬಗಳಿದ್ದು “ಸಂಕ್ರಾಂತಿ” ಹಬ್ಬವು ಆ ರೀತಿ ಆಚರಣೆಗೆ ಒಳಪಡುವ ಹಬ್ಬಗಳಲ್ಲಿ ಒಂದು. ಜಾಗತೀಕರಣವು ಇಡೀ ಜಗತ್ತನ್ನೇ ಬದಲಾಯಿಸಬಹುದು. ಆದರೆ ಹಿಂದೂ ಸಂಸ್ಕ್ರತಿಯ ಮಡಿಲಲ್ಲಿ-ಹುಟ್ಟಿ ಬೆಳೆದ ಆಚರಣೆಗಳನ್ನು ಬದಲಾಯಿಸುವ ಶಕ್ತಿ ಅದಕ್ಕಿಲ್ಲ. “ಸಂಕ್ರಾಂತಿ”ಯೂ ಸರ್ವರಲ್ಲೂ ಹೊಸ ಬದಲಾವಣೆ ತರಲಿ ಎಂಬುದೆ ನಮ್ಮ ಆಶಯ.

✍. ಕಾನತ್ತಿಲ್ ರಾಣಿ ಅರುಣ್