• Search Coorg Media

“ಲಾಕ್‌ಡೌನ್‌ ಡೈರಿ” ಮತ್ತು ಲಾಕ್‌ಔಟಾದ ಪ್ರಶ್ನೆಗಳು…!?

“ಲಾಕ್‌ಡೌನ್‌ ಡೈರಿ” ಮತ್ತು ಲಾಕ್‌ಔಟಾದ ಪ್ರಶ್ನೆಗಳು…!?

ಹೇಗಾಯಿತು ಏನಾಯಿತು ಯಾರಿಂದ ಆಯಿತು, ಇತ್ಯಾದಿ ಇತ್ಯಾದಿ ಪ್ರಶ್ನೆಗಳು ಅಪ್ರಸ್ತುತ ಮತ್ತು ಭವಿಷ್ಯದಲ್ಲಿ, ಭೂತಕಾಲದ ನಡೆಗಳು ಇಂದಿನ ವರ್ತಮಾನಕ್ಕೆ ಮಾರ್ಗದರ್ಶನವಾಗಬಲ್ಲದು ಎಂಬುದಂತೂ ಸತ್ಯ.

ಬಹುಶಃ ಡಾರ್ವಿನ್‌ ವಾದವೇ ಇರಬೇಕು, ಪ್ರಕೃತಿ ತನ್ನ ಸಮತೋಲನವನ್ನು ಕಾಪಾಡಿಕೊಳ್ಳಲು ಅದು ಕೂಡ ಕ್ರಿಯಾತ್ಮಕವಾಗಿ ತನ್ನದೇ ಆದ ಮಾರ್ಗಗಳನ್ನು ಕಂಡುಕೊಳ್ಳುತ್ತದೆ ಎನ್ನುವುದು. ಈ ಒಂದು ವಾದ ವಿಶೇಷವಾಗಿ ಆಕಾಲದಲ್ಲಿ ಜನಸಂಖ್ಯೆ ನಿಯಂತ್ರಣದ ಬಗ್ಗೆ ಹೇಳಿದ ಮಾತು ಯಾ ವಾದವಿರಬೇಕು.

ಒಂದು ಕಾಲದಲ್ಲಿ ಭಾರತ ಕೂಡ ಸಿಡುಬು, ಪ್ಲೇಗ್‌ನಂತಹ ರೋಗಗಳನ್ನು ಅನುಭವಿಸಿ ಕೂಡ ಮುನ್ನಡೆದು ಬಂದಿರುವುದು ವಾಸ್ತವ.

ಇದೀಗ, ಪ್ರಪಂಚ “ಕೊರೋನ” ಎಂಬ ಶತ್ರುವನ್ನು ನಾಶಪಡಿಸಲು ಹರಸಾಹಸ ಪಡುತ್ತಿದೆ.

ಆಯಾಯ ದೇಶ ಪ್ರಾಂತ್ಯಗಳಲ್ಲಿ ಅಲ್ಲಲ್ಲಿಯ ನಾಯಕರುಗಳು ಪರಿಣಿತರೊಂದಿಗೆ ಚರ್ಚಿಸಿ, ಹರಸಾಹಸ ಪಡುತ್ತಿದ್ದಾರೆ.

ಈ ಸಂದರ್ಭದಲ್ಲಿ ಕೊಡಗಿನ ಶಕ್ತಿ” ದಿನಪತ್ರಿಕೆಯಲ್ಲಿ “ಕೊರೋನ” ಸಾಗುತ್ತಿದ್ದ ದಾರಿಯ ಹತ್ತು ಹಲವಾರು ವಿಚಾರಗಳು ಮತ್ತದರ ಒಳನೋಟಗಳನ್ನು ಅಕ್ಷರಗಳಲ್ಲಿ ಹಂಚಿಕೊಳ್ಳುತ್ತಿದ್ದರು.

ಆ ಧೀರ್ಘ ಅಕ್ಷರ ಪಯಣದ ದಾಖಲಾ ಸಾಹಿತ್ಯ, ಇದೀಗ “ಲಾಕ್‌ಡೌನ್‌ ಡೈರಿ” ತಲೆಬರಹದ ಪುಸ್ತಕವಾಗಿ ಲೋಕಾರ್ಪಣೆಗೊಂಡಿದೆ.

ಅತ್ಯಂತ ಅಲ್ಪಾವಧಿಯಲ್ಲಿ ಪ್ರಕಟಗೊಂಡ ಪುಸ್ತಕದಲ್ಲಿ, ವರ್ತಮಾನ, ಭೂತಕಾಲದ ನೆನಪುಗಳನ್ನು ಕೂಡ ಮಿಳಿತಗೊಳಿಸಿಕೊಂಡಿದೆ ಎಂಬುದು ದಾಖಲಾ ಸಾಹಿತ್ಯದ ಶಕ್ತಿ ಕೂಡ.

ಭೂತಕಾಲವನ್ನು ಅವಲೋಕಿಸಿಕೊಳ್ಳದಿದ್ದ ಕಾರಣಕ್ಕಾಗಿ, ಚೀನಾ ದೇಶ ಪ್ರಪಂಚವನ್ನೇ ಸಂಕಷ್ಟಕ್ಕೆ ಸಿಲುಕಿಸಿರುವುದು ವರ್ತಮಾನದ ದುರಂತ ಎಂಬುದನ್ನು ಲೇಖಕ, ಲಾಕ್‌ಡೌನ್‌ ಡೈರಿಯಲ್ಲಿ ದಾಖಲಿಸಿದ್ದಾರೆ.

ಪರೋಕ್ಷವಾಗಿ ಚೀನಾದ ಗತಕಾಲದ ದಡ್ಡತನವನ್ನು ತೋರು ಬೆರಳಿನಿಂದ ಗುರುತಿಸಿದ್ದಾರೆ. ಭವಿಷ್ಯಕ್ಕೂ ಎಚ್ಚರಿಕೆ ನೀಡಿದ್ದಾರೆ ಎಂಬುದು ಅವರ “ಡೈರಿ”ಯ ಅಕ್ಷರಗಳು ಮಾರ್ಮಿಕವಾಗಿ ಹೇಳಿದೆ ಮತ್ತು ಬರಹ “ಬದ್ಧತೆಗೆ” ಕೂಡ ಸಾಕ್ಷಿಯಾಗಿದೆ.

ಡೈರಿಯ ಮೊದಲ ಬರಹ, “ಕಣ್ಣಿನ ವೈದ್ಯನ ಎಚ್ಚರಿಕೆಗೆ ಕಣ್ತೆರೆದಿದ್ದರೆ ಹೀಗಾಗುತ್ತಿರಲಿಲ್ಲ”ವನ್ನು ಓದಿದೊಡನೆ ಪ್ರಸ್ತಕ ಪರಿಸ್ಥಿತಿಯಲ್ಲಿ ಪ್ರಪಂಚದ ದೊಡ್ಡಣ್ಣನಾಗಲು ಹೊರಟಿರುವ, ಭಾರತದ ನಿದ್ದೆಗೆಡಿಸಲು ಪ್ರಯತ್ನಿಸುತ್ತಿರುವ ʼಚೀನಾʼ ವಿರುದ್ಧ ಅದೆಂತ ಕಠೋರವಾಗಿ ಪ್ರತಿಕ್ರಿಯಿಸುತ್ತೀರೋ ನಿಮಗೆ ಬಿಟ್ಟದ್ದು.

“ಹಲೋ ಫ್ರೆಂಡ್ಸ್‌…
ನನ್ನಲ್ಲಿರುವ ರೋಗಿಯೋರ್ವನಲ್ಲಿ
ವಿಚಿತ್ರ ಸೋಂಕು ಕಾಣಿಸಿಕೊಂಡಿದೆ…
ಸಾರ್ಸ್‌ ರೋಗ ಬಂದಿತ್ತಲ್ಲಾ
ಅದೇ ರೀತಿಯ ವೈರಸ್ ಎಂಬ ಸಂಶಯವಾಗುತ್ತಿದೆ.
ಎಲ್ಲರೂ ಎಚ್ಚರವಹಿಸಿಕೊಳ್ಳಿ…”

ಹೀಗೊಂದು ಸಂದೇಶವನ್ನು 2019ರ ಡಿಸೆಂಬರ್‌ ಎರಡನೇ ವಾರದಲ್ಲಿ ಚೀನಾದಲ್ಲಿನ ವೈದ್ಯರ ವಾಟ್ಸಾಪ್‌ ಗ್ರೂಪ್‌ನಲ್ಲಿ ಡಾ|| ಲಿ ವೆನ್‌ ಲಿಯಾಂಗ್‌ ಎಚ್ಚರಿಕೆ ಸಂದೇಶವನ್ನು ಪ್ರಕಟಿಸುತ್ತಾರೆ.

ಗತಕಾಲವನ್ನು ನೆನಪಿಸಿಕೊಳ್ಳದ ಚೀನಾ ಅಥವಾ ಪ್ರಪಂಚವೇ ಸಂಶಯಪಡುತ್ತಿರುವಂತೆ ಉದ್ದೇಶಪೂರ್ವಕವಾಗಿ ತನ್ನಲ್ಲಿಯೇ ಸೃಷ್ಠಿಸಿಕೊಂಡು, ತನ್ನ ಒಂದಷ್ಟು ಪ್ರಜೆಗಳನ್ನು ಬಲಿಕೊಟ್ಟು, ಪ್ರಪಂಚಕ್ಕೂ ಹಬ್ಬಿಸಿ, ಇದೀಗ ತಾನು ಭದ್ರತೆಯತ್ತ ಸಾಗಿ ಮತ್ತೆ ಪ್ರಪಂಚಕ್ಕೆ ನಿಮಗೇನು ಬೇಕು ಎಂಬುದಾಗಿ ಕೇಳುವ ಮಟ್ಟಕ್ಕೆ ತಲುಪಿರುವುದನ್ನು ಬರಹ ಚಿಂತನೆಗೆ ಹಚ್ಚುವಂತಿದೆ.

ಈ ಒಂದು ಪ್ರಶ್ನೆ ಹುಟ್ಟುವುದಕ್ಕೆ ಕಾರಣವೂ ಇದೆ. ವಿಜ್ಞಾನಿ ಗೆಲಿಲಿಯೋ, ಭೂಮಿ ದುಂಡಗೆ ಇದೆ ಎಂದು ವಾದಿಸಿದಾಗ, ಆತನ ಜನರು ಭೂಮಿ ಚಪ್ಪಟೆ ಎಂದು ಪೂರ್ವಾಗ್ರಹ ಪೀಡಿತ ತನದಿಂದ ಆತನನ್ನು ಕೊಂದು, ಚಪ್ಪಟೆ ಶವಪೆಟ್ಟಿಗೆಯೊಳಗಿರಿಸಿ, ಅವರ ಚಪ್ಪಟೆ ಭೂಮಿಯೊಳಗೆ ಮಣ್ಣಾಗಿಸಿದರೂ, ಗೆಲಿಲಿಯೋ ಮಾತ್ರ ಜೀವಂತವಾಗಿದ್ದಾನೆ ಎನ್ನುವುದನ್ನು ತಿಳಿಸುವ ಒಳನೋಟಗಳು ಡೈರಿಯಲ್ಲಿದೆ.

ಡಾ|| ವೆನ್‌ ಲಿಯಾಂಗ್‌ ತನ್ನ ಸಂಶಯವನ್ನು ವ್ಯಕ್ತಪಡಿಸುತ್ತಿದ್ದಂತೆ ಬಹು ಬುದ್ಧಿವಂತ ʼಚೀನಾʼ ಆತನನ್ನು ಕರೆಸಿ ಮಾತುಕತೆ ನಡೆಸುವ ಬದಲು, ಆತನ ಮನೆ ಬಾಗಿಲು ತಟ್ಟಲು ಕಳುಹಿಸಿದ್ದು ಪೊಲೀಸರನ್ನ.

“ಏಯ್‌ ವೆನ್‌ ಲಿಯಾಂಗ್‌,
ಸುಖಾಸುಮ್ಮನೆ ಹೊಸ ವೈರಸ್‌ ಇದೆ ಎಂದು ವದಂತಿ ಹಬ್ಬಿಸುತ್ತಿದ್ದೀಯಾ?
ಚೀನಾ ಸರಕಾರ ನಿನ್ನ ಸುಳ್ಳುಗಳ ಬಗ್ಗೆ ಕ್ರಮ ತೆಗೆದುಕೊಳ್ಳುತ್ತಿದೆ.”

ನಮ್ಮ ಆಡು ಭಾಷೆಯಲ್ಲಿ ಹೇಳುವುದಾದರೆ…

“ಏಯ್‌ ಲಿಯಾಂಗ್‌, ಮುಚ್ಚಿಕೊಂಡು ಕೂತರೆ ಸರಿ,
ಇಲ್ಲ ನಿನ್ನ ಜೈಲಿನಲ್ಲಿ ಕೊಳೆಯುವ ಹಾಗೆ ಮಾಡುತ್ತೇವೆ.
ಬಾ ಇಲ್ಲಿ ಮುಚ್ಚಳಿಕೆಗೆ ಸಹಿ ಹಾಕು
ಮತ್ತೆ ಬಾಲ ಬಿಚ್ಚಿದರೆ ನೀನು ಹುಟ್ಟಿಲ್ಲ ಎಂದು ತಿಳಿದುಕೋ”

ಎಂದು ಬೆದರಿಸಿ ಲಿಯಾಂಗನ ಬಾಯಿಗೆ ಬೀಗ ಹಾಕಿಡುತ್ತದೆ ಚೀನ.

ಪ್ರಪಂಚಕ್ಕೆ ಒಳಿತು ಮಾಡಲು ಹಾತೊರೆದಿದ್ದ ಡಾ|| ವೆನ್‌ ಲಿಯಾಂಗ್‌ ಕೆಲವೇ ಕೆಲವು ದಿನಗಳಲ್ಲಿ ಕೊರೋನಾದ ಕೈಸೆರೆಯಾಗಿ ತನ್ನ ಕೊನೇ ಉಸಿರನ್ನು ಕೊರೋನಾಗೆ ಒಪ್ಪಿಸಿದ ದುರಂತ ಕಥೆಯನ್ನು ಅನಿಲ್‌ ಮನಮುಟ್ಟುವಂತೆ ಅವರದೇ ಶೈಲಿಯಲ್ಲಿ ಓದುಗನಿಗೆ ವಿಚಾರ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಒಟ್ಟು, 196 ಪುಟಗಳ ಮನಕಲುಕುವ ಮಾತುಗಳ ಡೈರಿಯಲ್ಲಿ “ಮಾನವ ಸೇವೆಯಲ್ಲಿ ಮಾಧವನನ್ನು ಕಂಡ ರಾಮಕೃಷ್ಣ ಶಾರದಾಶ್ರಮ”, “ಅಲ್ಲಿದೆ ನಮ್ಮನೆ…ಆಶ್ರಯ ಕೊಟ್ಟಿತು ನಿಮ್ಮ ಮನೆ”, “ಕೊರೋನಾ ಕಂಡು ಸಣ್ಣಪುಟ್ಟ ಕಾಯಿಲೆಗಳೆಲ್ಲಾ ಕಾಣದಂತೆ ಓಡಿಹೋದವೇ?”, ಪ್ರವಾಸೋದ್ಯಮದ ವಿವಿಧ ಮಜಲುಗಳು ಹೋಟೆಲ್‌, ಹೋಂ ಸ್ಟೇ ಇತ್ಯಾದಿಗಳ ಚಿತ್ರಣ, ಕೊಡಗಿನ ಖಾಸಗಿ ಬಸ್ಸುಗಳು ಮತ್ತು ಅವುಗಳು ಜನರ ನಾಡಿಗಳಲ್ಲಿ ಬೆಸೆದು ಹೋಗಿದ್ದ ಗತಕಾಲದ ನೆನಪುಗಳು ಮತ್ತು ಇಂದಿನ ಚಿತ್ರಣ, ಆಟೋ ಚಾಲಕರು, ಅರ್ಚಕರು, ವಿಶೇಷವಾಗಿ ದೇಶ ಕಟ್ಟುವ ಕಾರ್ಮಿಕರ ಬಗೆಗಿನ ಚಿತ್ರಣಗಳ ತೆರೆದ ಪುಸ್ತಕ “ಲಾಕ್‌ಡೌನ್‌ ಡೈರಿ”.

ಕನಸು ಕಟ್ಟಿಕೊಂಡು ವಿವಿಧ ಬೆಳೆಗಳನ್ನು ಬೆಳೆದ ರೈತನ ಅತಂತ್ರ ಸ್ಥಿತಿಗಳು ಸೇರಿದಂತೆ, ಕೊರೋನ ಅನುಭವಿಸಿದ, ಅನುಭವಿಸುತ್ತಿರುವ ಎಲ್ಲಾ ಮಗ್ಗಲುಗಳನ್ನು “ಡೈರಿ” ಮಡಿಲಲ್ಲಿ ತುಂಬಿಕೊಂಡಿದೆ.

ಅನಿಲ್‌ ಬರೆದಿರುವ ೩೦ ಲೇಖನಗಳೊಂದಿಗೆ ಇತರೆ ೧೮ ಬರಹಗಾರರ, ಚಿಂತಕರ ಅಕ್ಷರಗಳೂ ಡೈರಿಯಲ್ಲಿ ದಾಖಲಾಗಿದೆ.

ಗೆಲಿಲಿಯೋವನ್ನು ನೆನಪಿಸಿಕೊಳ್ಳುವ ಡಾ|| ವೆನ್‌ ಪಿಯಾಂಗ್‌ ದುರಂತ ಕಥೆಯೊಂದಿಗೆ ಪ್ರಾರಂಭವಾಗುವ ಡೈರಿಯ ಪುಟಗಳು, ದೇಶ ನೆನಪಿಸಿಕೊಳ್ಳುವ ಶ್ರಮಿಕರಿಗೆ

“ನೀವು ನಮ್ಮ ಮನೆಯನ್ನು ಕಟ್ಟಿದಿರಿ,
ರಸ್ತೆ-ಸೇತುವೆ ನಿರ್ಮಿಸಿದಿರಿ,
ಮರಗಳನ್ನು ಏರಿದಿರಿ…ಮಣ್ಣು ಹೊತ್ತಿರಿ…ಬಾವಿ ತೋಡಿದಿರಿ,
ಆದರೆ ನೀವು ನಿಮ್ಮೂರಿಗೆ ಹೊರಟು ನಿಂತಾಗ…
ನಾವೆಲ್ಲಾ ನಮ್ಮ ಜೀವ ರಕ್ಷಣೆಗೆ
ಮೆನೆಯೊಳಗೇ ಕುಳಿತುಬಿಟ್ಟಿದ್ದೆವು.
ನಮ್ಮ ಮನೆಯ ಮಂದಿಯ ಸಾಂಗತ್ಯದಲ್ಲಿ
ಮೈ ಮರೆತಿದ್ದ ನಾವೆಲ್ಲಾ
ನಮಗಾಗಿ, ನಮ್ಮೂರಿಗೆ ವರ್ಷಾನುಗಟ್ಟಲೆ ದುಡಿದ
ಶ್ರಮ ಜೀವಿಗಳಾದ ನಿಮ್ಮನ್ನು ಯೋಚಿಸಲೇ ಇಲ್ಲ…
ಕ್ಷಮಿಸಿಬಿಡಿ ನಮ್ಮನ್ನು…
ಮರೆಯದೇ ಬನ್ನಿ ನಮ್ಮೂರಿಗೆ. ನಮಗಾಗಿ…!

ಎಂಬುದನ್ನು ದೇಶಕಟ್ಟುವ ಶ್ರಮಿಕರಿಗೆ ಅನಿಲ್‌ ಅಕ್ಷರಗಳು ಕಂಬನಿ ಸುರಿಸುವುದರೊಂದಿಗೆ ಡೈರಿಯ ಕೊನೆಯ ಪುಟ ಓದುಗರ ಕಣ್ಣಂಚಿನಲ್ಲಿ ಹನಿಯೊಂದು ಜಾರುವಂತೆ ಮಾಡಿ, ಪ್ರಶ್ನೆಗಳನ್ನು, ಆತ್ಮಾವಲೋಕನವನ್ನು, ಚಿಂತನೆಗಳನ್ನು ಹುಟ್ಟಿಸಿ, ನಿಮಗಳನ್ನು ಗಂಟೆಗಟ್ಟಲೆ ಮೌನಿಯಾಗಿಸುತ್ತಾನೆ, ಅಕ್ಷರ ಮಾಂತ್ರಿಕ ಅನಿಲ್.‌

ಬಹುಶಃ ಆಂತರ್ಯದಲ್ಲಿ ಅನುಭವಿಸಿ, ಅಭಿವ್ಯಕ್ತಗೊಳಿಸಿಕೊಳ್ಳಲಾರದ ಮಾತುಗಳನ್ನು ಮನದ ಮಾತುಗಳಿಗೆ ಪ್ರಶ್ನಿಸಲು ಬಿಟ್ಟಿದ್ದಾನೆ ಎಂದನಿಸುತ್ತೆ ಎಂದರೆ ಅತಿಶಯೋಕ್ತಿಯೇನಲ್ಲ.

ಕೊರೋನ ಕಂಪನ ಅನುಭವವಾಗುತ್ತಿದ್ದಂತೆ ನಮ್ಮ ಉಕ್ಕಿನ ಹಕ್ಕಿಗಳಲ್ಲಿ ವಿದೇಶ ಕಟ್ಟಲು ಹೋದವರನ್ನು ಅವರವರ ಗೂಡಿಗೆ ಕರೆತಂದು ಸರಿಯಾದ ಬಂದೋಬಸ್ತ್‌ ಮಾಡದೆ ದಿಡ್ಡಿ ಬಾಗಿಲನ್ನು ಹಾಕಿದ್ದು…

ಗಂಟೆ, ಜಾಗಟೆ, ದೀಪ ಆರಿಸಿ, ಕ್ಯಾಂಡಲ್‌ ಬೆಳಗಿಸಿ, ಕೊರೋನಾಕ್ಕೆ ಚೂ…ಚೂ…ಕರೋನ ಅಂದದ್ದು…

ಮಧ್ಯಪ್ರದೇಶ, ಗುಜರಾತ್‌, ಗೋವಾಗಳಲ್ಲಿ ನಡೆದ ಕುದುರೆ ವ್ಯಾಪಾರ, ಸಿಖ್ಖರ ಧರ್ಮ ಸಭೆ, ಅಯೋಧ್ಯೆ ರಾಮಮಂದಿರ ಕಟ್ಟುವ ಮಾತುಕತೆಗಳು, ಇವೆಲ್ಲ ಪ್ರಶ್ನೆಗಳು ಏಳುತ್ತಿದ್ದಂತೆ, ತಬ್ಲಿಘಿಗಳ ಹೆಸರಿನಲ್ಲಿ ನಡೆದ ಕರಡಿ ಕುಣಿತ ಅವೆಲ್ಲವನ್ನೂ ನೇಪಥ್ಯಕ್ಕೆ ಸರಿಸಿದ್ದು…

ನಮ್ಮ ದೇಶ ಕಟ್ಟುವ ಯೋಗಿಗಳು, ತಾವೇ ಕಟ್ಟಿದ ರಸ್ತೆಯಲ್ಲಿ ಬಾಣಂತಿಯರು, ಹಸುಗೂಸುಗಳಿಂದ ಹಿಡಿದು ಹಿರಿಯ ಜೀವಗಳನ್ನು ಹಸಿವನ್ನು ಧಿಕ್ಕರಿಸಿ ಮರಳಿ ಮನೆಗೆ ಹೊರಟಾಗ ಮಸಣ ಸೇರಿದವರು…
ಹೀಗೆ, ಹತ್ತು ಹಲವಾರು ಪ್ರಶ್ನೆಗಳ ಹುತ್ತವನ್ನು ಮೌನದಲ್ಲೇ ಕಟ್ಟಿಕೊಳ್ಳುವಂತೆ ಲಾಕ್‌ಡೌನ್‌ ಡೈರಿ ಮಾಂತ್ರಿಕ ಮಾಡಿಬಿಡುತ್ತಾನೆ.

ಪತ್ರಿಕೆಯಲ್ಲಿ ಪ್ರಕಟವಾದ ಬರಹಗಳನ್ನು ಬಿಡಿ ಬಿಡಿಯಾಗಿ ಬಹಳಷ್ಟು ಜನ ಓದಿದ್ದರೂ, ನಂತರದಲ್ಲಿ ಪರಿಷ್ಕೃತಗೊಂಡು ಮತ್ತಷ್ಟು ಲೇಖಕರ ಅಭಿಪ್ರಾಯಗಳನ್ನು ಮುದ್ರಣಾಲಯದಿಂದ ಹೊತ್ತು ತಂದಿರುವ ಡೈರಿಯನ್ನು ಓದಿಯೇ ಅನುಭವಿಸಬೇಕು.

ಪುಸ್ತಕಕ್ಕಾಗಿ:
anilmadikeri@gmail.com
ಕರೆ : 9844060174

ಲೇಖಕರು: ✍. ಅಲ್ಲಾರಂಡ ವಿಠಲ್ ನಂಜಪ್ಪ

ತಾಳ್ಮೆ ಇಲ್ಲದ ನಿರ್ದೇಶಕನ ಅಸಂಗತ (ಅಭ್ಸರ್ಡ್)‌ ಸಿನೆಮಾ ಮಕ್ಕಡ ಮನಸ್ಸ್‌

ತಾಳ್ಮೆ ಇಲ್ಲದ ನಿರ್ದೇಶಕನ ಅಸಂಗತ (ಅಭ್ಸರ್ಡ್)‌ ಸಿನೆಮಾ

ಮಕ್ಕಡ ಮನಸ್ಸ್‌

ಕೊಡವ ಭಾಷಾ ಸಿನೇಮಾಗಳು ಇತ್ತೀಚೆಗೆ ಹೊಸ ಹೊಸ ಪ್ರಯೋಗದೊಂದಿಗೆ ತೆರೆಕಾಣುತ್ತಿದೆ. ಅದರಲ್ಲಿ “ಭಾವ ಬಟ್ಟೆಲ್‌” ಸಿನೆಮಾ ಪ್ರಯೋಗಕ್ಕೆ ಒಗ್ಗಿಕೊಂಡ ಮೊದಲ ಸಿನೆಮಾವಾದರೆ. ಆನಂತರದ್ದು ಶ್ರೀ ಸೋಲೋಮನ್‌ ನಿರ್ದೇಶನದ “ಮಕ್ಕಡ ಮನಸ್ಸ್‌”‌ ಎರಡು ಗಂಟೆಯ ಅವದಿಯಲ್ಲಿ ನಾಲ್ಕು ಹಾಡುಗಳಿರುವ ಸಿನೆಮಾದಲ್ಲಿ “ಹಾರೋ ಹಕ್ಕಿ ಆಗೋಣ ಬಾ” ಕನ್ನಡ ಹಾಡು ಕೇಳಲು ಇಂಪಾಗಿದೆಯಲ್ಲದೆ ಇಡೀ ಹಾಡಿನ ದೃಶ್ಯ ನೋಡುಗರನ್ನು ಹಿಡಿದಿಟ್ಟುಕೊಳ್ಳುತ್ತದೆ. ಅಂತಹ ಶಕ್ತಿ ಅ ಹಾಡಿಗೆ ಇದೆ.

ಇದೇ 03-02-2020 ರಂದು ಪೊನ್ನಂಪೇಟೆ ಕೊಡವ ಸಮಾಜದ ಕಟ್ಟಡದಲ್ಲಿ ವ್ಯವಸ್ಥಿತವಾಗಿ ಥಿಯೇಟರೀಸಿಕೊಂಡು ಪ್ರದರ್ಶನ ಕಾಣುತ್ತಿದೆ. ಥಿಯೇಟರ್ ಅಭಾವವಿರುವ ಈ ಕಾಲಗಟ್ಟದಲ್ಲಿ ಶ್ರಮಪಟ್ಟು ಮಾಡಿದ ಸಿನಿಮಾವನ್ನು ಜನರ ಬಳಿ ಕೊಂಡೂಯ್ದು ಥಿಯೇಟರ್‌ ಅನುಭವನ್ನೇ ಕೊಡಗಿಗೆ ಮೊದಲು ಪರಿಚಯಿಸಿದ್ದು “ತಳ್‌ಂಗ್ ನೀರ್”‌ ಕೊಡವ ಸಿನೆಮಾ ತಂಡ. ಈ ಸಂಚಾರಿ ಥಿಯೇಟರ್‌ನ ಉಸ್ತುವಾರಿ ಸುಲಭವೇನಲ್ಲ ಅದನ್ನ ಅನುಭವವಿಸಿದವರಿಗೇ ಗೊತ್ತು ಅದರ ಪಾಡು.

ಹಾಗೆಯೇ “ತಳ್‌ಂಗ್ ನೀರ್‌” ಮತ್ತೊಂದು ಸಂಸ್ಕೃತಿಯನ್ನು ಕೊಡಗಿಗೆ ಪರಿಚಯಿಕೊಟ್ಟು ಹೋಗಿ ತಾನು ಮಾತ್ರ ಇಲ್ಲಿನ ಸಿನಿಮಾಭಿಮಾನಿಗಳ ಮನಸ್ಸಲ್ಲಿ ಉಳಿದು ಕೊಂಡಿದೆ.

ಪ್ರತೀ ಪ್ರದರ್ಶನದ ಕೊನೆಯಲ್ಲಿ ಪ್ರೇಕ್ಷಕರೊಂದಿಗೆ ಸಂವಾದ ಕಾರ್ಯಕ್ರಮ ನಡೆಸಿಕೊಟ್ಟದ್ದು, ಇದೀಗ ತೆರೆಕಾಣುತ್ತಿರುವ ನೂತನ ಸಿನೆಮಾಗಳು ಸಂವಾದ ಸಂಸ್ಕೃತಿಯನ್ನು ಮುಂದುವರೆಸಿಕೊಂಡು ಬಂದಿವೆ.

ಕ್ರಿ.ಶ. 1830-32 ರಲ್ಲಿ ಕೊಡಗಿಗೆ ಕ್ರೈಸ್ತ ವಿದ್ಯಾಸಂಸ್ಥೆಗಳು ಅಕ್ಷರ ಕಲಿಸಲು ಮುಂದಾದವು. ಅದಕ್ಕಿಂತ ಮೊದಲು “ಕೈ ಮಠ” ಎಂಬ ಅಕ್ಷರ ದಾಸೋಹ ಚಾವಡಿಗಳು ಅಲ್ಲೊಂದು ಇಲ್ಲೊಂದು ನಡಿಯುತ್ತಿತ್ತು. ನಮ್ಮ ಹೆಮ್ಮೆಯ ಶ್ರೀ ಅಪ್ಪನೆರವಂಡ ಹರದಾಸ ಅಪ್ಪಚ್ಚ ಕವಿ ಕೂಡ “ಕೈ ಮಠ” ದಲ್ಲಿ ಅಕ್ಷರ ತಿದ್ದಿದ್ದಾರೆ.

ಆ ಸಂದರ್ಭದಲ್ಲಿ ಅಕ್ಷರ ಹಸಿವಿರುವ ಕೆಲವರು ಉಚಿತ ವಿದ್ಯಾಭ್ಯಾಸಕ್ಕಾಗಿ ಕೊರಳಿಗೆ ಶಿಲುಭೆ ಏರಿಸಿಕೊಂಡು ಅಕ್ಷರ ಕಲಿತು ಅಕ್ಷರದಿಂದ ಅನ್ನ ಸಂಪಾದಿಸಿಕೊಳ್ಲಲು ಆರಂಭಿಸಿದ ನಂತರ ಶಿಲುಭೆಯನ್ನ ಕಳಚಿಟ್ಟ ಘಟನೆ ಕೊಡಗಿನ ಚರಿತ್ರೆಯಲ್ಲಿ ನಡೆದುಹೊದದ್ದನ್ನು ಕೆಲ ಹಿರಿಯರು ಈ ಸ್ವಾರಸ್ಯಕರ ಘಟನೆಯನ್ನು ಅಲ್ಲಿ ಇಲ್ಲಿ ಹೇಳಿ ಉಳಿಸಿ ಹೋಗಿದ್ದಾರೆ.

ಕೊಡವ ಬಾಷಾ ಸಿನಿಮಾ ಎಂದಾಗಲೆ ಜನಮನದ ಮನಸ್ಸಲ್ಲಿ ಪ್ರತಿಫಲಿಸುವುದು ಕೊಡವ ನೇಟಿವಿಟಿ ಬಗ್ಗೆ “ಮಕ್ಕಡ ಮನಸ್ಸ್‌” ಸಿನಿಮಾ ಮಾತ್ರ ಹೇಳ ಹೊರಟಿರುವುದು ಒಂದು ಉತ್ತಮ ಸಂದೇಶವನ್ನು.

ಬಡತನದಲ್ಲಿ ಅಕ್ಷರ ಕಲಿಯುವ ಹಿಂದಿನ ಕಷ್ಟಗಳು, ಅಪ್ಪ ಅಮ್ಮನ ಕಷ್ಟಗಳನ್ನು ಮಕ್ಕಳ ಕಣ್ಣಿಗೆ ಸಿನಿಮಾ ಕಟ್ಟಿಕೊಡುತ್ತದೆ. ಹಾಗೆಯೇ ಸ್ನೇಹಿತರ ಸಂಬಂಧ, ಶಿಕ್ಷಕರು ಮಕ್ಕಳ ಮನಸ್ಸುಗಳನ್ನು ಅರಿತುಕೊಳ್ಳುವುದರ ಬಗ್ಗೆ ಕೂಡ ಒಳ್ಳೆಯ ಸಂದೇಶವನ್ನು ನೀಡಿದೆ.

ದೇವಯ್ಯ ಪಾತ್ರದಲ್ಲಿ ಸಿನಿಮಾದ ಹೀರೊವಾಗಿ ಉತ್ತಮ ಅಭಿನಯ ನೀಡುತ್ತಾ ಪಾತ್ರ ಮಲೆಯಾಳಮಯವಾಗಿರುವುದು ಈ ಕೊಡವ ಸಿನೆಮಾದ ದುರಂತ.

ಚಾಚರಣಿಯಂಡ ಅಪ್ಪಣ್ಣ, ಕೋಟ್ಟ್‌ಕತ್ತಿರ ಪ್ರಕಾಶ್‌, ವಾಂಚಿರ ಜಯ, ವಾಂಚಿರ ನಾಣಯ್ಯ ಮುಂತಾದವರು ಮಕ್ಕಡ ಮನಸ್ಸ್ ‌ ಸಿನೆಮಾ ಕೊಡವ ಸಿನೆಮಾ ಎಂಬುದಕ್ಕೆ ಸಾಕ್ಷಿಗಳಾಗಿದ್ದಾರೆ.

ಸಂದರ್ಭವಲ್ಲದ ಸಂದರ್ಭದಲ್ಲಿ ಕೊಡವ ಜನಪದ ಸೊಗಡನ್ನು ಅನುಉದ್ದೇಶ ಪೂರ್ವಕವಾಗಿ ತೋರಿಸುತ್ತಾ ಕೊಡವ ಸಿನಿಮಾ ಎಂದು ಒತ್ತಾಯ ಪೂರ್ವಕವಾಗಿ ನಿರ್ದೇಶಕರು ಪ್ರತಿಪಾದನೆ ಮಾಡಲು ಹೊರಟಂತಿದೆ.

ಸರಕಾರಿ ಮಾದರಿ ಶಾಲೆಗಳನ್ನು ಮತ್ತು ಕ್ರೈಸ್ತ ಶಿಕ್ಷಣ ಕೇಂದ್ರಗಳನ್ನು ಸಮೀಕರಿಸುವಲ್ಲಿ ನಿರ್ದೇಶಕರು ತುಂಬಾ ಶ್ರಮವಹಿಸಿದ್ದಾರೆ ಎಂದರೆ ಎಳ್ಳಷ್ಟು ತಪ್ಪಾಗಲಿಕ್ಕಿಲ್ಲ.

ಇಡೀ ಸಿನಿಮಾದ ಉದ್ದಕ್ಕೂ ಮಕ್ಕಳ ಮನಸ್ಸನ್ನು ಹೇಳುವ ಪ್ರಯತ್ನದೊಂದಿಗೆ ಇದು ಕೊಡವ ಸಿನಿಮಾ, ಇದೂ ಕೊಡವ ಸಿನಿಮಾ ಎಂದು ಒತ್ತಾಯ ಪೂರ್ವಕವಾಗಿ ಹೇಳ ಹೊರಟಿರುವುದು ಎಲ್ಲಾ ಪ್ರಬುದ್ದ ಸಿನಿವೀಕ್ಷರು ಗಮನಿಸಿಕೊಂಡಿದ್ದಾರೆ.

ಸರಕಾರಿ ಶಾಲೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಬಹುತೇಕರು ಶ್ರಮ ಪಡುತ್ತಿರುವ ಸಂದರ್ಭದಲ್ಲಿ. ಕ್ರೈಸ್ತ ಮಿಷನರಿಯೊಂದಿಗೆ ಸರಕಾರಿ ಶಾಲೆಗಳನ್ನು ಸಮೀಕರಿಸಿರುವುದು ಯಾವ ಪುರುಷಾರ್ಥಕ್ಕೋ ಅರ್ಥವಾಗುವುದಿಲ್ಲ.

ಜತೆ ಜತೆಯಲ್ಲಿ ಹಳ್ಳಿಗಾಡಿನ ಮಕ್ಕಳು ಶಾಲೆಗೆ ಹೋಗುವ ಕಷ್ಟಗಳನ್ನೂ ಹೇಳುವ ಪ್ರಯತ್ನ ಮಾಡುತ್ತಾ ಕನ್ನಡಕ್ಕೆ ಪ್ರಾಮುಖ್ಯತೆ ಕೊಡಬೇಕೆಂದೂ ಕ್ಷೀಣವಾಗಿ ಹೇಳುತ್ತಾರೆ.

ದೇವಯ್ಯ ಕುಟುಂಬದಲ್ಲಿ ಗಂಡು ಮಗುವನ್ನು ಕ್ರೈಸ್ತ ವಿದ್ಯಾ ಸಂಸ್ಥೆಗೆ ಸೇರಿಸಿ ಹೆಣ್ಣು ಮಗುವನ್ನು ಸರಕಾರಿ ಶಾಲೆಗೆ ಕಳುಹಿಸಿರುವುದು ಗಂಡು-ಹೆಣ್ಣಿನ ಬಗ್ಗೆ ಇರುವ ಅಸಮಾನತೆಯನ್ನೂ ಸೂಕ್ಷ್ಮವಾಗಿ ದಾಖಲೀಕರಿಸಿದ್ದಾರೆ ಎಂದು ಅನಿಸುತ್ತದೆ.

ಹೆಮ್ಮೆಯ ಕ್ರೀಡಾ ಪಟುಗಳಾದ ಅರ್ಜುನ್‌ ದೇವಯ್ಯ ಮತ್ತು ಅಶ್ವಿನಿ ನಾಚಪ್ಪರಿಂದ ಸ್ಪೂರ್ತಿಪಡೆದ ಚಿತ್ರವೆಂಬುದನ್ನು ಒತ್ತಿಹೇಳಲು ಕ್ರೈಸ್ತ ಶಾಲೆಯಲ್ಲಿ ಸ್ಪರ್ಧೆಯ ಕೊನೆಯ ಕ್ಷಣದಲ್ಲಿ ಅವಕಾಶವಂಚಿತವಾಗುವ ವಿದ್ಯಾರ್ಥಿ ಮತ್ತು ಸಿನೇಮಾದಲ್ಲಿ ರೇಸಿನಲ್ಲಿ ಮರಣದಂಡನೆಗೆ ಒಳಗಾದ ಕುದುರೆಯೊಂದು ಪ್ರವೇಶಿಸಿ ವಿದ್ಯಾರ್ಥಿಗಳಿಗೆ ಸ್ಪೂರ್ತಿ ಕೊಡುವಲ್ಲಿ ನಿಜಕ್ಕೂ ಮೋಸಮಾಡಿಲ್ಲ.

ಕುಡುಕ ತಂದೆಯಂದಿರಿಂದ ಮಕ್ಕಳ ಮನಸ್ಸು ಹೇಗೆ ಕೆಡುತ್ತದೆ ಎಂಬುದನ್ನು ಹೇಳುತಾ ತಂದೆಯರು ಮೈಪರಚಿಕೊಳ್ಳುವಂತೆ ಮಾಡಿ ಸರಿ ದಾರಿಗೆ ತರುವ ಪ್ರಯತ್ನವನ್ನೂ ಮಾಡಿದ್ದಾರೆ.

ಸರಕಾರಿ ಶಾಲೆಗಳಲ್ಲಿ ಅಡ್ಡಾಡಿದ ನಿರ್ದೇಶಕರ ಕ್ಯಾಮರಾ ಕ್ರೈಸ್ತ ಶಾಲಾ ಸಂಸ್ಥೆಯಲ್ಲಿ ಡ್ರೋನ್‌ ಕ್ಯಾಮಾರದೊಂದಿಗೆ ವೈಭವೀಕರಿಸಿ ಚಿತ್ರಿಸಿ ಸರಕಾರಿ ಶಾಲೆಗಳನ್ನು ಅಲ್ಲಿಯ ಶಿಕ್ಷಕರನ್ನು ಮೂಲೆ ಗುಂಪಾಗಿಸುವ ಪ್ರಯತ್ನ “ಮಕ್ಕಡ ಮನಸ್ಸ್‌” ಕೊಡವ ಸಿನಿಮಾದಲ್ಲಿದೆ.

ಅನವಶ್ಯಕವಾಗಿ ಎರಡು ಗಂಟೆ ಎಳೆದಿರುವ ಸಿನೆಮಾವು ಮುಗ್ದ ಮನಸ್ಸಿನ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರುಗಳಿಗೆ ಒಳ್ಳೆಯ ಸಂದೇಶವನ್ನು ನೀಡಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ಸಿನೆಮಾವಾಗಿ ಒಳ್ಳೆಯ ಸಂದೇಶ ಹೊತ್ತಿರುವ ಅತ್ಯುತ್ತಮ ಆರ್ಟ್‌ ಮೂವಿಯಾಗಬಲ್ಲ ಎಲ್ಲಾ ಲಕ್ಷಣಗಳಿರುವ “ಮಕ್ಕಡ ಮನಸ್ಸ್”‌, ಕೊಡವ ಸಿನೆಮಾ ಎಂದು ಬಿಂಬಿಸುವ ಓತ-ಪ್ರೇತ ತನದಲ್ಲಿ ಇದು ಸಿನೆಮಾವೊ? ಕೊಡವ ಸಿನೆಮಾವೋ? ಎಂಬ ಪ್ರಶ್ನೆಯಾಗೇ ಉಳಿದು ಕೊಳ್ಳುತ್ತದೆ.

ಲೇಖಕರು: ✍. ಅಲ್ಲಾರಂಡ ವಿಠಲ್ ನಂಜಪ್ಪ

ಕತ್ತಲೆಕಾಡಿನ ಲೇಖನಿಯಲ್ಲಿ; ಮಹಾಮಳೆಗೆ ಕೊಡಗು ನಲುಗಿದ ಕಥೆ “ಪ್ರಕೃತಿ ಮುನಿದ ಹಾದಿಯಲ್ಲಿ”

ಕತ್ತಲೆಕಾಡಿನ ಲೇಖನಿಯಲ್ಲಿ; ಮಹಾಮಳೆಗೆ ಕೊಡಗು ನಲುಗಿದ ಕಥೆ
“ಪ್ರಕೃತಿ ಮುನಿದ ಹಾದಿಯಲ್ಲಿ”

ಕಿಶೋರ್ ರೈ ಕತ್ತಲೆಕಾಡು ಇವರು “ಕತ್ತಲೆಕಾಡು” ಎಂದು ಜನಮಾನಸದಲ್ಲಿ ಪ್ರಚಲಿತದಲ್ಲಿದ್ದಾರೆ. ಇವರ ಅನುಭವದ ಅಕ್ಷರಗಳ ಗೊಂಚಲು ಕೊಡಗು ಮಳೆಗೆ ತತ್ತರಿಸಿ, ಜಲಸ್ಫೋಟಗೊಂಡು ಜನಜೀವನವು ಅಸ್ತವ್ಯಸ್ತವಾದ ಸಂದರ್ಭದ ವರದಿಕಾರಿಕೆಯ ಜತೆಜತೆಯಲ್ಲಿ ಆ ಕರಾಳತೆಯನ್ನು ಕಣ್ಣಮುಂದೆ ಕಟ್ಟಿಕೊಡುವ ಪ್ರಯತ್ನ ಅವರ ಲೇಖನಿಯಿಂದ ಮೂಡಿಬಂದ “ಪ್ರಕೃತಿ ಮುನಿದ ಹಾದಿಯಲ್ಲಿ” ಎಂಬ ಪುಸ್ತಕ.
ವರದಿಗಾರ ಲೇಖಕನ ಬರಹಗಳು “ಅಳುವ ಕಡಲಿನಲ್ಲಿ ತೇಲಿ ಬರುತಲಿವೆ ನಗೆಯ ಹಾಯಿ ದೋಣಿ” ಎಂಬಂತೆ ಗಂಭೀರ ಪರಿಸ್ಥಿತಿಯ ವಾತಾವರಣವನ್ನು ಕಟ್ಟಿಕೊಡುವ ನಡುವೆ ಕಚಗುಳಿ ಇಡಿಸಿಕೊಂಡು ಓದಿಸಿಬಿಡುವ ಶಕ್ತಿ ತುಂಬಿಕೊಂಡ, ನೆನಪಿನ ಬುತ್ತಿಯನ್ನು ಬಿಚ್ಚಿಕೊಡುತ್ತಾ ತನಗರಿವಿಲ್ಲದೇ ಬರಹ ಸಾಗಿರುವುದು ವಿಶೇಷ.

  ಮತ್ತಷ್ಟು ಅನುಭವಿಸಿದ ಅಗರಗಳು 2018ರ ಮಳೆಗಾಲದ ಕರಾಳತೆಯನ್ನು ಸಾಧ್ಯವಾದಷ್ಟರ ಮಟ್ಟಿಗೆ ಎಲ್ಲಿಯೂ ಉತ್ಪ್ರೇಕ್ಷೆಗೆ ಅವಕಾಶ ಕೊಡದೆ ಪ್ರಾಮಾಣಿಕವಾಗಿ ಮನ ಕರಗುವಂತೆ ಅನುಭವಿಸಿದ ನೈಜಘಟನೆಯನ್ನು ಬಿಡಿಸಿ ಹೇಳಿಕೊಡುವ ಪ್ರಯತ್ನ ಮಾಡಿದ್ದಾರೆ. ಇವರ ಈ ಪುಸ್ತಕ ಕೊಡಗಿನ ಆ ದಿನಗಳ ಕರಾಳತೆಯನ್ನು ದಾಖಲೆಯಾಗಿ ಉಳಿಸಿಕೊಳ್ಳಲು ಶ್ರಮಿಸಿದೆ.
ಅಕ್ಷರಶಃ ಕೊಡಗಿನ ಪತ್ರಕರ್ತರು ಆ ದಿನಗಳಲ್ಲಿ ತಾವುಗಳು ತಿರುಗಿ ಮನೆ ತಲುಪುವ ನಿರೀಕ್ಷೆಗೆ ಎಳ್ಳುನೀರು ಬಿಟ್ಟು ಕ್ಷೇತ್ರಕ್ಕೆ ದುಮುಕ್ಕಿದ್ದರು. ಅಲ್ಲದೇ ಕಾಟಾಚಾರದ ವರದಿ ಮಾಡದೆ ಆಪತ್ತಿನಲ್ಲಿ ಇರುವವರಿಗೆ ಸಾಧ್ಯವಾದ ನೆರವು ನೀಡುತ್ತಾ ವರದಿಗಳೊಂದಿಗೆ ಮಾನವೀಯತೆಯನ್ನು ಮೆರೆದದ್ದನ್ನು ಕಿಶೋರ್‍ರವರ ಬರಹ ಸಾಕ್ಷೀಕರಿಸಿದೆ.
ಹುಡುಗುತನ ತುಂಟಾಟ ಭಂಡ ಧೈರ್ಯಗಳೇ ಇವರುಗಳನ್ನು ಪ್ರಾಣದ ಹಂಗು ತೊರೆದು ಇತರರನ್ನು ರಕ್ಷಿಸುವ ಸಾಹಸ ಪ್ರವೃತ್ತಿಗೆ ಇಳಿಸಿಬಿಟ್ಟದ್ದನ್ನು ಇವರ ಅನುಭವದ ಅಕ್ಷರಗಳು ತಿಳಿಸಿಕೊಡುತ್ತದೆ.
ಅದೊಂದು ದಿನ ಕರೆ ಬಂದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಮನೆ ಬಿಟ್ಟ ಕಿಶೋರ್ ಹಸಿವು ತಾಳಲಾರದೆ ಅದ್ಯಾವುದೋ ಕ್ಯಾಂಟಿನಿನಲ್ಲಿ ಕೊಡಗಿನ ಮಳೆಯ ವಾತಾವರಣದ ನ್ಯಾಚುರಲ್ ಪ್ರಿಡ್ಜ್‍ನಲ್ಲಿ ಈತನಿಗಾಗಿ 2-3 ದಿನಗಳಿಂದ ಕಾದು ಕುಳಿತಿದ್ದ ಒಂದು ಬನ್ ಮತ್ತು ಟೀಯನ್ನು 80 ರೂಪಾಯಿ ಪಾವತಿಸಿ ಹೊಟ್ಟೆ ತುಂಬಿಸಿಕೊಂಡ ಘಟನೆ ದುಃಖದಲ್ಲೂ ಒಂದು ಮುಗುಳುನಗೆ ತರಿಸಿಬಿಡುತ್ತದೆ.

1. ಸ್ವಾತಂತ್ರ್ಯ ಸಂಭ್ರಮ ಕಸಿದುಕೊಂಡ ಮಳೆರಾಯ
2. ಜಲಾವೃತವಾದ ಕುಶಾಲನಗರ
3. ಬೋಟ್‍ನಲ್ಲೇ ರಾಷ್ಟ್ರ ಧ್ವಜಾರೋಹಣ
4. ಮಕ್ಕಂದೂರಿಗೆ ಪ್ರಯಣ
5. ಜನರ ಆತಂಕ ಮತ್ತು ನಮ್ಮ ತವಕ
6. ಹೆಮ್ಮೆತ್ತಾಳುವಿನಲ್ಲಿ ನಮ್ಮ ತಳಮಳ
7. ಪ್ರಪಾತದ ಹಾದಿಯಲ್ಲಿ ಗುರಿಯತ್ತ ಹೆಜ್ಜೆ
8. ಪ್ರಪಾತದ ಹಾದಿಯಲ್ಲಿ ನಾವು
9. ಹೆಲಿಕಾಪ್ಟರ್ ಬರುತ್ತದೆ ಅಂತ ಜನ ಕಾಯ್ತಾ ಇದ್ರು
10. ಹಳೆ ಬನ್ನ್ ಮತ್ತು ಚಾ
11. ಮಳೆ ಜೋರು ದಾರಿತೋರುವವರಾರು
12. ಅಂತೂ ಕೆಳಗೆ ತಲುಪಿದೆವು
13. ತಮ್ಮವರಿಗಾಗಿ ಕಣ್ಣೀರಿಡುತ್ತಿದ್ದ ನಾಲ್ವರು
14. ಅಗ್ನಿಶಾಮಕದವರ ಮನವೊಲಿಕೆ
15. ಬೇಡಾ ಅಂದ್ರೂ ಕೈ ಮುಗಿದು ಕೆಳಗಿಳಿದೆವು
16. ಅಂತೂ ಚಂದೂಗೋಪಾಲ್ ಮನೆ ತಲುಪಿದೆವು
17. ನಮ್ಮನ್ನು ನಡುಗಿಸಿದ ಗುಡುಗುಡು ಶಬ್ದ
18. ಹೆಲಿಕಾಪ್ಟರ್ ಇಳಿಯಲಿಲ್ಲ
19. ಕಿಶೋರ್ ರೈ ಮಿಸ್ಸಾಗಿದ್ದಾರಂತೆ
20. ನಾವು ದುಡುಕಿದ್ದರೆ
21. ಹೆಬ್ಬೆಟ್ಟಗೇರಿಯಲ್ಲಿ ಕಂಡ ಭಯಾನಕ ಚಿತ್ರಣ
22. ಚಿರನಿದ್ರೆಗೆ ಜಾರಿದ ಮಗು
23. ಸಾವಿನ ಸನಿಹ ನಿಂತು ವೀಡಿಯೋ ಮಾಡಿದ ಭೂಪ
24. ಇಬ್ಬರ ಶವ ಪತ್ತೆ
25. ಕೊಡಗಿಗೆ ಹೀಗಾಗಬಾರದಿತ್ತು
26. ಶವವಾಗಿಯೂ ಸಿಗದ ಮಂಜುಳಾ
27. ದಿಕ್ಕಾರ ಕೂಗಿದರೂ ಸಹಿಸಿಕೊಂಡೆವು
28. ನಾವು ಮಾಡಿದೆಲ್ಲಾ ಸರಿಯಿತ್ತಾ!? ಹೀಗೆ

 ಈತ ಹೋಗಿದ್ದ ಆ ಗ್ರಾಮದಲ್ಲಿ ಬೇರೆಯೇ ದಿನವಾಗಿದ್ದರೆ ಕರೆದು ನಾಟಿಕೋಳಿ ಸಾರು, ಅನ್ನ ಬೇಯಿಸಿ ಆ ಜನಗಳು ಕೊಡುವ ಸ್ವಭಾವದ ಅತಿಥಿಪ್ರಿಯರು. ಅಂತಹ ಊರಿನಲ್ಲಿ 80 ರೂಪಾಯಿಗೆ ಹಳಸಿದ ಬನ್ನು, ಟೀ…!?
ಕಿಶೋರ್ ದಾಖಲಿಸಿದ ಅಕ್ಷರಗಳಲ್ಲಿ ಆಗಸ್ಟ್ 15ರ ಪಾವಿತ್ರತೆ, ಆ ದಿನದ ವಿಜೃಂಭಣೆಯ ಮಹತ್ವವನ್ನು ಕುಶಾಲನಗರ ಪಟ್ಟಣದಲ್ಲಿ ಹೆಚ್ಚಿದ ನದಿ ಹರಿವಿನ ನಡುವೆ ದೋಣಿಯೊಂದರಲ್ಲಿ ಕೊಡಗಿನ ಉಸ್ತುವಾರಿ ಸಚಿವರಿಂದ ಧ್ವಜಾರೋಹಣ ಮಾಡಿಸಿ ಮೆರೆದ ರಾಜ್ಯ ವಿಪತ್ತು ನಿರ್ವಹಣಾ ತಂಡದ ಬದ್ದತೆಯನ್ನು ಪ್ರದರ್ಶಿಸುತ್ತದೆ.
ಇದರ ನಡುವೆ ಪ್ರಚಾರಕ್ಕಾಗಿ ಹಪಹಪಿಸುವ ಸ್ವಾರ್ಥಿ ಮುಖಗಳ ದರ್ಶನವನ್ನು ಮಾಡಿಸುತ್ತಾರೆ. ಜವಾಬ್ದಾರಿಯುತ ಸ್ಥಾನದಲ್ಲಿದ್ದ ಮತ್ತು ಸಾಮಾಜಿಕ ಕೈಂಕರ್ಯದಲ್ಲಿ ಹತ್ತು ಹಲವರ ಮುಖವಾಡಗಳನ್ನು ತಮ್ಮದೇ ಶೈಲಿಯಲ್ಲಿ ಬೆತ್ತಲಾಗಿಸುವ ಪ್ರಯತ್ನವನ್ನು ಕೂಡ ತಮ್ಮ ಇತಿ ಮಿತಿಯೊಳಗೆ ಮಾಡಿದ್ದಾರೆ.
ಇವೆಲ್ಲಕ್ಕೂ ಮಿಗಿಲಾಗಿ ಅಪಾಯದ ಅತಿ ಸಮೀಪದಲ್ಲಿ ಇರುವಾಗಲೂ ಕೂಡ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಇವರುಗಳು ಇರುವ ಸ್ಥಳ ಮತ್ತು ಅಲ್ಲಿಯ ವಾಸ್ತವಾಂಶಗಳನ್ನು ತಿಳಿಸಿಕೊಡುವುದಲ್ಲದೇ, ಅಲ್ಲಿಯ ಸಂದರ್ಭಕ್ಕೆ ಬೇಕಾದ ನೆರವನ್ನು ಒದಗಿಸಿಕೊಡಲು ಕೂಡ ಇವರುಗಳು ಪ್ರಯತ್ನಿಸಿರುವುದು ಶ್ಲಾಘನೀಯವಾಗಿದೆ.

 ಕಿಶೋರ್ ದಾಖಲಿಸಿದ್ದರಲ್ಲಿ ಅಂದಿನ ಜಿಲ್ಲಾಧಿಕಾರಿಯಾಗಿದ್ದ ಶ್ರೀವಿದ್ಯಾ ಅವರು ತಮ್ಮ ಮೂರು ವರ್ಷದ ಮಗನನ್ನು ಬೆಳಗ್ಗೆ ಮತ್ತು ಸಂಜೆ ಆತನೊಂದಿಗೆ ಆಟವಾಡಲೂ, ಆತನನ್ನು ಮುದ್ದುಗೈಯಲೂ ಆಗದೇ ಕೊಡಗಿನ ಜನರ ನೋವಿಗೆ ಹಗಲಿರುಳು ಶ್ರಮಿಸಿದ್ದನ್ನು ತಮ್ಮ ಬರಹದಲ್ಲಿ ದಾಖಲಿಸಿ ಅವರಿಗೆ ಪ್ರಾಮಾಣಿಕ ಕೃತಜ್ಞತೆಯನ್ನು ಕೂಡ ಕೊಡಗು ಜನರ ಪರವಾಗಿ ಸಲ್ಲಿಸಿದ್ದಾರೆ.
ನಿಸ್ವಾರ್ಥವಾಗಿ ಬಡವ ಬಲ್ಲಿದ ಜಾತಿ ಧರ್ಮಗಳ ತಾರತಮ್ಯ ಮಾಡದೇ ಸಂಕಷ್ಟದಲ್ಲಿದ್ದವರಿಗೆ ನೆರವು ನೀಡುತ್ತಿದ್ದ ಇವರಿಗೆ ಅಜ್ಞಾನಿಗಳ ದಿಗ್ ದರ್ಶನವು ಕೂಡ ಆಗಿರುವುದನ್ನು ಮೌನದಿಂದಲೇ ಸಹಿಸಿಕೊಂಡದ್ದು ಪರಿಸ್ಥಿತಿ ಇವರಿಗೆ ಕಲಿಸಿಕೊಟ್ಟ ತಾಳ್ಮೆಯ ಪಾಠವೆಂದೇ ಹೇಳಬೇಕಾಗುತ್ತದೆ.
ಇವೆಲ್ಲ್ಲದರ ನಡುವೆ ಮನ ಕಲುಕುವ ಮತ್ತಷ್ಟು ವಿಚಾರಗಳನ್ನು ಒಳಗೊಂಡ ಲೇಖನಗಳೊಂದಿಗೆ ತಮಗಳ ಪ್ರಜ್ಞಾಸಾಕ್ಷಿಯೆಂಬಂತೆ “ನಾವು ಮಾಡಿದೆಲ್ಲಾ ಸರಿಯಿತ್ತಾ…!? ಎಂಬ ಆತ್ಮ ವಿಮರ್ಶಾಬರಹ-ಯಾ-ತನ್ನೊಳಗೊಂದು ಪ್ರಶ್ನೆಯನ್ನು ಹುಟ್ಟಿಸಿಕೊಂಡು ಆ ಕರಾಳ ದಿನಗಳ ನೋವು ನಲಿವನ್ನು ತೆರೆದಿಡುವ ಪುಸ್ತಕವಾಗಿ ಬೆಳಕು ಕಂಡ “ಮಹಾಮಳೆಗೆ ಕೊಡಗು ನಲುಗಿದ ಕಥೆ” ಯನ್ನು ನಾವು ನೀವು ಕೇವಲ ಓದುವುದಲ್ಲದೇ ‘ನಲುಗಿದ ಕಥೆಯ ಮುಂದಿನ ಪ್ರಯಾಣಕ್ಕೆ ಜತೆಗೂಡಿ ಹೋಗೋಣ. ಈ ಸಾಹಸಿಗರಿಗೆ ಮೌನದ ಮಾತಲ್ಲಿ ಹರಸಿಕೊಳ್ಳುತ್ತಾ ನಾವು ಮೌನದಲ್ಲಾದರೂ ಭಾಗಿಯಾಗೋಣ.

ಕೊನೆಯ ಮಾತು: ಶ್ರೀಮತಿ ಡಾ|| ನಯನಾ ಕಾಶ್ಯಪ್‍ರ ಮುನ್ನುಡಿಯಲ್ಲಿ “ಉತ್ಪಾತ”, “ಸಂಕಥಿಸುವ” ಮುಂತಾದ ಶಬ್ದಗಳು ಹೊತ್ತಿಗೆಗೆ ಶ್ರೀಮಂತಿಕೆಯನ್ನು ತಂದು ಕೊಟ್ಟಿದೆ.

ಪುಸ್ತಕಕ್ಕಾಗಿ ಸಂಪರ್ಕಿಸಿ: ಕಿಶೋರ್ ರೈ ಕತ್ತಲೆಕಾಡು – 7204520272

About Author

Allaranda Vittal Nanjappa

Follow On

ಹುಳಿಯಾರರ “ತಯಾರಿ”ಯಲ್ಲೊಂದು ದಿನ

ಹುಳಿಯಾರರ "ತಯಾರಿ"ಯಲ್ಲೊಂದು ದಿನ

ಹುಳಿಯಾರ್!… ನಟರಾಜ್ ಹುಳಿಯಾರ್ ಪ್ರಸಿದ್ಧ ಅಂಕಣಕಾರ. ಯಾವುದೋ ವಿಚಾರಗಳ ಬಗ್ಗೆ ಮಾಡಿಟ್ಟುಕೊಳ್ಳುವ ಟಿಪ್ಪಣಿಗಳೇ ಅವರ ಬರಹ ಶಕ್ತಿಯ ಒಳಗುಟ್ಟು ಹೌದು. ಅವರ ಅಂಕಣಗಳು ಹಾಗೂ ಕೆಲವು ಪುಸ್ತಕಗಳನ್ನು ಓದಿದಾಗ ಈತ ಬ್ರಹ್ಮಾಂಡದ ಎಲ್ಲಾ ಪುಸ್ತಕಗಳನ್ನು ತಿರುವಿ ಹಾಕಿರಬಹುದೆಂದೇ ಭಾವಿಸುತ್ತಿದ್ದೆ. ಅವರ ಕಡಲೆಗನ್ನಡವನ್ನೇ ಅಗಿದು-ಜಗಿದು ಓದುವ ಸಾಲುಗಳಲ್ಲಿ ಕಬ್ಬಿಣ ಕನ್ನಡವೂ ಸೇರಿಕೊಂಡಿದ್ದಾಗ ಆ ಪುಸ್ತಕವನ್ನೇ ಬದಿಗೆ ಸರಿಸಿ ಮತ್ತಿನ್ಯಾವತ್ತೂ ಆ ಪುಸ್ತಕವನ್ನು ಸವರಿ ಪ್ರೀತಿಯಿಂದ ಅಪ್ಪಿಕೊಂಡದ್ದೂ ಉಂಟು.

         ಇದರ ನಡುವೆ 2018ರ ಕೈಲ್‍ಪೋಳ್ದನ್ನು (ಕೊಡಗಿನ ಕೃಷಿ ಹಬ್ಬ) ಶಾಸ್ತ್ರ ಮಾಡಿದ್ದ ಕೆಲವು ದಿನ ಕಳೆದು 16.09.2018ರಂದು ಸೆಲ್ ಫೋನಿಗೊಂದು ಅನಾಮಧೇಯ ನಂಬರಿಂದ “ಇಂದಿನ ಪ್ರಜಾವಾಣಿಯಲ್ಲಿ ಹುಳಿಯಾರರ ಕಥೆಯೊಂದು ಬಂದಿದೆ ಓದಿಬಿಡಿ” ಎಂದು ಬಂದಿತ್ತು. ಆ ದಿನ ಭಾನುವಾರ ಪ್ರಕಾಶ್ ರೈಯವರ ಕಾಲಂ ಕೂಡ ಇರುತ್ತೆ. ಈ ಕಥೆಯನ್ನಾಗಲೀ ಆ ದಿನದ ಪತ್ರಿಕೆಯನ್ನಾಗಲಿ ಮಿಸ್ಸ್ ಮಾಡಿಕೊಳ್ಳುವ ಅವಕಾಶ ಇರಲೇ ಇಲ್ಲ.

‘ತಯಾರಿ’ ಕಥೆಯ ಕಥಾನಾಯಕ ಒಬ್ಬ ವಿಜ್ಞಾನಿ. ಕೇವಲ ವಿಜ್ಞಾನಿಯಲ್ಲ. ಪ್ರಸಿದ್ಧಿಯ ಶಿಖರದತ್ತ ದಾಪುಗಾಲು ಹಾಕುತ್ತಿರುವವನು. ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನ ಸಂಶೋಧನೆಗಳಿಂದ ಹೆಸರು ಮಾಡಿದ ವಿಜ್ಞಾನಿ. ಆತನಿಗೊಂದು ದಿನ ಅನಾಮಧೇಯ ಕರೆಯೊಂದು ಬರುತ್ತದೆ. “ಸರ್, ಈ ನಂಬರ್‍ಗೆ ತಿರುಗಿ ಫೋನ್ ಮಾಡಬೇಡಿ. ನಾನೇ ನಿಮ್ಮನ್ನ ಭೇಟಿ ಮಾಡಿ ಹೆಚ್ಚಿನ ಮಾಹಿತಿ ನೀಡುತ್ತೇನೆ. ಸದ್ಯದಲ್ಲಿ ನೀವು ಅಪಾಯದಲ್ಲಿದ್ದೀರಿ ಎಚ್ಚರವಾಗಿರಿ”

           ವಿಜ್ಞಾನಿ ಬಹಳಷ್ಟು ತಲೆಕೆಡಿಸಿಕೊಳ್ಳುತ್ತಾನೆ. ಫೋನ್ ಮಾಡಿದ್ದು ಯಾರು? ಆತ ನನಗೆ ನಾಳೆ ಮಾಹಿತಿ ಒದಗಿಸಬಹುದಾ? ನನ್ನ ಕೊಲೆಗೆ ಯಾರು ಸಂಚು ನಡೆಸುತ್ತಿರಬಹುದು. ನನ್ನ ಅಭಿವೃದ್ಧಿ ಸಹಿಸದವರಾ? ಅಥವಾ ನಾನು ಮಾಡುತ್ತಿರುವ ಸಂಶೋಧನೆಯ ಮಾಹಿತಿಗಾಗಿ ನನ್ನನ್ನು ಅಪಹರಿಸಿಬಿಡುತ್ತಾರಾ? ಹಾಗಾದರೆ ಯಾವ ದೇಶದವರು? ಉಗ್ರಗಾಮಿಗಳಾ? ಹೀಗೆ ಒಂದರ ಹಿಂದೊಂದು ಪ್ರಶ್ನೆಗಳು ವಿಜ್ಞಾನಿಯನ್ನು ಕಾಡಲು ತೊಡಗುತ್ತದೆ.

             ಅತಿಯಾಗುವಷ್ಟು ಯೋಚನೆ ಮಾಡಿ ಮಾಡಿ ಒಂದೋ ನಾನು ಅಪಹರಣವಾಗುತ್ತೀನಿ ಅಥವಾ ಕೊಲೆಯಾಗುತ್ತೀನಿ ಎಂಬ ತೀರ್ಮಾನಕ್ಕೆ ಬರುತ್ತಾನೆ. ಹಾಗಾಗಿ ತನ್ನ ಅಂತಿಮ ಕ್ಷಣವನ್ನು ಕಣ್ಣಲ್ಲೆಲ್ಲಾ ತುಂಬಿಕೊಂಡು ನರಳುತ್ತಾನೆ. ಆ ವಿಜ್ಞಾನಿ ಬ್ರಹ್ಮಚಾರಿ ಬೇರೆ!.

ಸರಿ ಯಾವುದಕ್ಕೂ ಒಂದು ವಿಲ್ (ಉಯಿಲು) ಬರೆದಿಡುವುದು ಒಳ್ಳೆಯದು ಎಂಬ ಯೋಚನೆ ಬಂದು ಅದ್ಯಾವುದೋ ಅನಾಥಾಶ್ರಮ ಹಾಗೂ ತನ್ನೆರಡು ನಂಬಿಕಸ್ಥ ಸೇವಕರಿಗೆ ಒಂದಷ್ಟು ತನ್ನ ಸಂಪತ್ತನ್ನು ಹಂಚಿ ಬಿಡಲು ಯೋಚಿಸಿ….. ಬಿಳಿ ಹಾಳೆ ಹಾಗೂ ಪೆನ್ನ್ ತೆಗೆದುಕೊಂಡು ರೀಡಿಂಗ್ ರೂಮ್‍ನ ಟೇಬಲ್‍ನಲ್ಲಿ ಕೂತು ಮತ್ತಷ್ಟು ಮತ್ತಷ್ಟು ಪ್ರಶ್ನೆಗಳು ಬಿಳಿಹಾಳೆಯ ಮುಂದೆ ಹಾದುಹೋಗುತ್ತಲೇ ಇತ್ತು. ಕೊನೆಯದಾಗಿ ನಿಧಾನಕ್ಕೆ ಲೇಖನಿಯನ್ನು ತೆಗೆದುಕೊಂಡು ಒಂದು ಪಿಸ್ತೂಲಿಗೆ ಅರ್ಜಿ ಹಾಕುತ್ತಾನೆ. ಹುಳಿಯಾರರ ‘ತಯಾರಿ’ ಕಥೆ ಇಲ್ಲಿಗೆ ಮುಗಿಯುತ್ತದೆ. ನಂತರ ಪ್ರಾರಂಭವಾಗುವುದೇ ನನ್ನಂಥ ಓದುಗನ ಗೋಳು.

                         ಓದುಗರಲ್ಲಿ ಹಲವಾರು ತರಹದ ಓದುಗರು ಇರುತ್ತಾರೆ. ಶಾಲಾ ಕಾಲೇಜು ದಿನಗಳಿಂದ ಹಿಡಿದು ಉದ್ಯೋಗ ಹಿಡಿದು/ರೈತಾಪಿ ಮಾಡಿಕೊಂಡು ಇತರೆ, ಇತರೆ ಓದುಗರು. ಪ್ರತಿಯೊಬ್ಬರು ಒಂದಲ್ಲ ಒಂದು ಬಾರಿ ಅದ್ಯಾವುದೋ ಕಾರಣಕ್ಕೆ ತಾವುಗಳು ನಡೆಸಿಕೊಂಡ ತಯಾರಿಯ ಪ್ಲಾಶ್ ಬ್ಯಾಕ್‍ಗೆ ಹೋಗಿ ಬಿಡುತ್ತಾರೆ. ಸಣ್ಣ ತರಗತಿಯಲ್ಲಿ ಯಾರದೋ ಪೆನ್ಸಿಲ್ ಕದ್ದ ದಿನವೇ ಟೀಚರ್ ಕರಿತಾರೆ ಬಾ ಎಂದ ಕ್ಷಣ. ಕಾಲೇಜಿನಲ್ಲಿ ಪ್ರೇಮಪತ್ರವನ್ನು ಹುಡುಗಿಯ ಕೈ ತಲುಪಿಸಿದಂದೇ ಪ್ರಿನ್ಸಿಪಾಲ್ ಚೇಂಬರ್‍ಗೆ ಆಹ್ವಾನ ಬಂದಾಗ? ಕಛೇರಿಯ ಕೆಲಸದೊತ್ತಡದಲ್ಲಿ ಯಾರೊಂದಿಗೋ ರೇಗಿ ರಂಪ ರಗಳೆ ಮಾಡಿದಂದೇ ಮ್ಯಾನೇಜರ್ ಬರಹೇಳಿದ್ದಾರೆ ಎಂದು ಪ್ಯೂವನ್ ಹೇಳಿಹೋದಾಗ? ಹೆಂಡತಿಗೆ ಒಲ್ಲದ ಕೆಲಸವನ್ನು ರಾಜಗಾಂಭೀರ್ಯದಲ್ಲಿ ಮಾಡಿ ಮನೆಗೆ ಬಂದ ದಿನವೇ ಮನೆಯಾಕೆ, ಮಾತಾಡಿಸಬೇಡಿ ಎಲ್ಲಾ ಗೊತ್ತಾಯಿತು. ಬೆಳಿಗ್ಗೆ ಎಲ್ಲರಿಗೂ ಬರಲು ಹೇಳ್ತಿನಿ. ನಾನೀ ಮನೆಯಲ್ಲಿ ಇರೊಲ್ಲ ಎಂಬ ಬಾಂಬ್ ಸಿಡಿಸಿದಾಗ… ಹೀಗೆ ಹೀಗೆ ಹುಳಿಯಾರರ ‘ತಯಾರಿ’ ಯೊಳಗಡೆ ಕಥೆ ಓದಿ ಮುಗಿಸಿದ ಕ್ಷಣದಲ್ಲಿ ‘ಭಾವನಾ’ ಲೋಕಕ್ಕೆ ಒಬ್ಬೊಬ್ಬರು ಒಂದೊಂದು ತರಹದಲ್ಲಿ ಹೋಗಿಬಿಡುತ್ತಾರೆ.

                       ನಾನು ಹೆಚ್ಚು ಸದ್ದುಗದ್ದಲವಿಲ್ಲದ ಬಾರೊಂದರಲ್ಲಿ ಕೂತು ಭಾನುವಾರದ ವಿಶೇಷಗಳ ಬಗ್ಗೆ ಕಣ್ಣಾಡಿಸಿ ಪ್ರಕಾಶ್ ರೈಯ ಅಂಕಣವನ್ನು ಓದಿ ‘ತಯಾರಿ’ಯನ್ನು ಮುಗಿಸಿದಾಗ ನನ್ನದೂ ಒಂದು ಲಾರ್ಜ್ ಮುಗಿದಿತ್ತು. ‘ತಯಾರಿ’ಯಿಂದಾಗಿ ಗತಕಾಲಕ್ಕೆ ಹೊರಟು ನಿಂತಿದ್ದ ನಾನು ಮತ್ತೊಂದು ಲಾರ್ಜ್ ರಿಪೀಟ್ ಅಂದೆ. ಕೆಲವರುಷಗಳ ಹಿಂದೆ ಕೊಡಗಿನಲ್ಲಿ ಪ್ರಗತಿಪರ ಚಿಂತಕರ ವೇದಿಕೆಯನ್ನು ಕಟ್ಟಿ ವೇದಿಕೆ ಮುಖಾಂತರ ಕೆಲವು ಪ್ರಬಲರ ವಿರುದ್ಧ ಕೋಮುವಾದಿಗಳ ವಿರುದ್ದ ಧ್ವನಿ ಎತ್ತಿದ್ದೆ. ಆ ಸಂದರ್ಭದಲ್ಲಿ ಅನುಭವಸ್ಥ ಹಿರಿಯ ಹೋರಾಟಗಾರರೊಬ್ಬರು “ನೋಡು ಇನ್ನು ಮುಂದೆ ರಾತ್ರಿ ಓಡಾಟಗಳನ್ನು ನಿಲ್ಲಿಸು. ರಾತ್ರಿಯ ಮದುವೆಗಳು ಗುಂಡುಪಾರ್ಟಿ ಇತ್ಯಾದಿಗಳನ್ನೆಲ್ಲಾ ನಿಲ್ಲಿಸಿಬಿಡು. ಶತ್ರುಗಳು ಮುಖಾಮುಖಿ ಆಗದೇನೆ ಅವರ ಕೆಲಸ ಮಾಡುವ ಬುದ್ದಿವಂತರು ಎಚ್ಚರ” ಎಂದು ನನಗೆ ಎಚ್ಚರಿಕೆ ಕೊಡುತ್ತಾರೆ.

ಹುಳಿಯಾರರ ವಿಜ್ಞಾನಿಯಂತೆ ನಾನು ಏನೇನೋ ತಯಾರಿ ಮಾಡಿಕೊಂಡು ಆಡಿಸುವವರ ಚೇಲಗಳ ಕೈಗೆ ಸಿಕ್ಕುಬಿದ್ದು ಸ್ಟೇಷನ್ ಕೋಟ್ ಅಲೆದಾಡಿದ್ದೆ. ಪಾಕಡ ಶತ್ರುಗಳಂತೂ ಕೊನೆಗೂ ರಾಜಿಗೆ ಬಂದು ನಿಂತು ಸಮಸ್ಯೆ ಬಗೆಹರಿಸಿಕೊಂಡು ಬಿಟ್ಟಿದ್ದರು.

 

                ಮೇಲಿನ ನೆನಪುಗಳು ಜಾರಿಕೊಳ್ಳುತ್ತಿದ್ದಂತೆ ದಿ.ಮಾಜಿ ಪ್ರಧಾನಿ ಇಂದಿರಾಗಾಂಧಿ ನೆನಪಾದರು. ಅಂಗರಕ್ಷಕರಿಂದಲೇ ಅಂತ್ಯಗೊಳಿಸಿಕೊಂಡ ಹಿಂದಿನ ತಯಾರಿಯ ಕಲ್ಪನಾಲೋಕಕ್ಕೆ ಹೋಗುತ್ತಲೆ… ರಾಜೀವ್ ಗಾಂಧಿ ನಂತರದ ಪ್ರಧಾನಿಯಾದಾಗ ಅವರ ರಕ್ಷಣೆಗೆ ಎಂತಹ ತಯಾರಿ ನಡೆಸಿದ್ದರಬಹುದು. ಹಾಗಾಗಿಯೂ ಮಾನವ ಬಾಂಬ್‍ನಿಂದ ಅಂತ್ಯ ಕಂಡ ಕ್ಷಣಕ್ಕೆ ತಯಾರಿ ಎಷ್ಟು ಮಾಡಿದರೂ ಮುಗಿಯದು ಛೇ? ಎಂದು ಎರಡನೇ ಲಾರ್ಜ್ ಅರ್ಧ ಮುಗಿಸಿ ತಲೆಕೊಡವಿಕೊಂಡೆ. ಈ ಬಾವಾಲೋಕಕ್ಕೆ ಮುಳುಗುವಾಗಲೇ ‘ತಯಾರಿ’ಯಾಗಿ ಮೊಬೈಲ್ ಸ್ವಿಚ್ ಆಫ್ ಮಾಡಿ ನೆಮ್ಮದಿಯಲ್ಲಿದ್ದೆ.

ಇದೀಗ ನಮ್ಮ ಪ್ರಧಾನಿ ನರೇಂದ್ರ ಮೋದಿಯವರ ಹತ್ಯೆಗೆ ಸಂಚು ರೂಪಿಸಿದ್ದಾರೆ. ಶಂಕಿತ ಕೆಲವರನ್ನು ಬಂಧಿಸಿದ್ದಾರೆ. ಅವರುಗಳು ಮೋದಿಯನ್ನು ರಾಜೀವ್ ಗಾಂಧಿ ಹತ್ಯೆ ಶೈಲಿಯಲ್ಲಿ ಸಂಚು ರೂಪಿಸಿದ್ದರು ಎಂಬುದಾಗಿ ಪತ್ರಿಕೆಯೊಂದರಲ್ಲಿ ಓದಿದ್ದು, ಆ ಕ್ಷಣದಲ್ಲಿ ಮನಸ್ಸಿಗೆ ಬಂದು ಹೋಯಿತು. ಯಾಂತ್ರಿಕವಾಗಿ ಗ್ಲಾಸ್‍ಗೆ ಕೈ ಹಾಕಿ ಬಾಯಿ ಹತ್ತಿರ ತಂದಿಟ್ಟಾಗಲೇ ಅರಿವಾದದ್ದು ಎರಡನೇ ಲಾರ್ಜ್ ಖಾಲಿಯಾಗಿದ್ದು, ಮತ್ತೊಮ್ಮೆ ರಿಪೀಟ್ ಅಂದೆ. ಖಾಲಿ ಕೈಗೊಂದು ಸಿಗರೇಟ್ ಅಂಟಿಸಿ ಉಂಗುರದಂತೆ ಹೊಗೆಬಿಡುತ್ತಿದ್ದಾಗ ಗಾಂಧಿಯ ನೆನಪು ಗಾಂಧಿಯ ಅಂತ್ಯ ಕಾಣಿಸಲು ಆ ದಿನಗಳ ತಯಾರಿ ಹೇಗಿದ್ದಿರಬಹುದು……. ಎಂದು ಚಿಂತಿಸುತ್ತಿರುವಾಗಲೇ “ಸರ್ ಲಾರ್ಜ್” ಅಂದ ಬಾರ್‍ಮೆನ್. ಸೀಪ್ ಮಾಡುತ್ತಾ ತಲೆಕೊಡವಿಕೊಂಡು ಮತ್ತೊಂದು ದೀರ್ಘ ದಂ ಎಳೆದು ಸುರುಳೀ ಹೊಗೆ ಬಿಡುತ್ತಾ ಕಂಡೆ ಅಚ್ಚೆ ದಿನ್ ಕನಸ್ಸು…….

                           ಬಲಿಷ್ಟ ರಾಷ್ಟ್ರ ನಮ್ಮದು. ಪ್ರಧಾನಿಯಾಗಿ ಪ್ರಪಂಚವೆಲ್ಲಾ ಸುತ್ತಿದ್ದಾರೆ. ಅತ್ಯಾಧುನಿಕ ರಕ್ಷಣಾ ವ್ಯವಸ್ಥೆ ಅವರೊಂದಿಗಿದೆ. ಹಾಗಿದ್ದೂ ಅವರ ‘ತಯಾರಿ’ಗಳು ದಿನದಿಂದ ದಿನಕ್ಕೆ ಬದಲಾಗುತ್ತಲೇ ಇರುತ್ತದೆ. ಯಾವುದೇ ಕಾರಣಕ್ಕೂ ಇಂದಿರಾಗಾಂಧಿ ರಾಜೀವ್ ಗಾಂಧಿಯಂತಹ ಹತ್ಯೆ ಈ ದೇಶದಲ್ಲಿ ಇನ್ನೆಂದೂ ನಡೆಯದಿರಲಿ. ದೇಶದ ಸಾರಥಿಯ ರಕ್ಷಣೆಗೆ ಪ್ರತಿನಿತ್ಯ ‘ತಯಾರಿ’ ನಡೆಯಲಿ ಅವರುಗಳ ಹತ್ಯೆ ಕನಸು ಹೊತ್ತವರು ‘ತಯಾರಿ’ ನಡೆಸುತ್ತಲೇ ಮಣ್ಣಾಗಲಿ. ದೇಶದ ಪ್ರೀತಿಯ ನೇತಾರನನ್ನೇ ಉಳಿಸಿಕೊಳ್ಳಲಾಗದ ನಮ್ಮ ವ್ಯವಸ್ಥೆ ದೇಶವನ್ನು ಹೇಗೆ ರಕ್ಷಿಸಿಕೊಳ್ಳಬಲ್ಲದು… ಹೀಗೇ ಮೂರನೇ ಲಾರ್ಜ್‍ನಲ್ಲಿ ದೇಶದ ‘ತಯಾರಿ’ಗಳ ಬಗ್ಗೆ ತಲೆಸಿಡಿದು ಹೋಗುವಷ್ಟು ಪ್ರಶ್ನೆಗಳು.

                               ನಟರಾಜ್ ಹುಳಿಯಾರರಿಗೂ ಅವರ ‘ತಯಾರಿ’ಗೂ ಶಾಪ ಹಾಕುತ್ತಲೇ ಇದಿಷ್ಟು ಹೊತ್ತು ಸ್ವಿಚ್ ಆಫ್ ಮಾಡಿ ಕೂತಿದ್ದ ನಾನು ಮನೆ ತಲುಪಿ ಅಲ್ಲಿ ಬರುವ ಬಿರುಸು ಬಾಣಗಳನ್ನು ತಪ್ಪಿಸಿಕೊಳ್ಳುವ ‘ತಯಾರಿ’ ನಡೆಸಿ ಕೊನೆಗೊಂದು ತೀರ್ಮಾನ ಮಾಡಿ ಮೂರನೇ ಲಾರ್ಜ್‍ನ ಕೊನೆ ಸಿಪ್ ಮುಗಿಸಿ ಮೊಬೈಲ್ ಸ್ವಿಚ್ ಅನ್ ಮಾಡಿ ಮನೆಗೆ ಹೊರಟೆ.

ದಾರಿಯಲ್ಲಿ ಮತ್ತೆ ಕಾಡಿದ್ದು ‘ತಯಾರಿ’ಯ ವಿಜ್ಞಾನಿ ವಿಲ್ ಬರೆಯಲು ಹೊರಟವ, ಪಿಸ್ತೂಲ್‍ಗೆ ಅರ್ಜಿ ಬರೆದದ್ದು.

ಕೊಡಗು ಕ್ರೀಡಾ ಕಲಿಗಳ ಆವೃತ್ತಿಗಳಿಗೆ ಮುನ್ನುಡಿ ಬರೆದ “ಕೊಡವ ಕ್ರೀಡಾಕಲಿಗಳು”

ಕೊಡಗು ಕ್ರೀಡಾ ಕಲಿಗಳ ಆವೃತ್ತಿಗಳಿಗೆ ಮುನ್ನುಡಿ ಬರೆದ “ಕೊಡವ ಕ್ರೀಡಾಕಲಿಗಳು”

ಕೊಡಗಿನ ಜನಪದ ಗೀತೆಗಳ ಜತೆಯಲ್ಲೇ ಸೂರ್ಯ ಚಂದ್ರರಿರುವವರೆಗೂ ತಳುಕು ಹಾಕಿಕೊಳ್ಳುವ ಹೆಸರು ನಡೇರಿಯಂಡ ಚಿಣ್ಣಪ್ಪ. ದಿ. ಚಿಣ್ಣಪ್ಪನವರು 1924 ಇಸವಿಯಲ್ಲಿ ಕೊಡಗಿನ ಜನಪದ ಗೀತೆಗಳಿಗೆ ಅಕ್ಷರ ರೂಪ ನೀಡಿ “ಪಟ್ಟೋಳೆ ಪಳಮೆ” ಹೆಸರಲ್ಲಿ ಕೃತಿಯನ್ನು ಲೋಕಾರ್ಪಣೆ ಮಾಡಿದ್ದರು. ಮತ್ತದು ದಕ್ಷಿಣ ಭಾರತದಲ್ಲೇ ಪ್ರಪ್ರಥಮವಾಗಿ ಸ್ವಇಚ್ಛೆಯಿಂದ ಸಂಗ್ರಹಿತ ಜನಪದ ಗೀತಾಪುಸ್ತಕ ಎಂಬ ದಾಖಲೆ ಚಿಣ್ಣಪ್ಪನವರ ಹೆಸರಲ್ಲೇ ಇಂದಿಗೂ ಇದೆ. (ದಕ್ಷಿಣ ಭಾರತದ ಪ್ರಪ್ರಥಮ ಜನಪದ ಗ್ರಂಥ)

ಇಂದಿನ ಆಗುಹೋಗುಗಳ ದಾಖಲೆಗಳು ಭವಿಷ್ಯದಲ್ಲಿ ಬಗೆದು ತೆಗೆದು ಚರಿತ್ರೆಗೊಂದು ಚೌಕಟ್ಟನ್ನು ನಿರ್ಮಿಸುತ್ತಾ ಹೋಗುತ್ತದೆ. ಇಂದಿನ ಕಾಲಘಟ್ಟದ ಇತಿಮಿತಿಗಳಲ್ಲಿ ನಡೆದ ಘಟನೆಗಳು ಭವಿಷ್ಯತ್ತಿನ ಚರಿತ್ರಾಕಾರದ ಪುಟಗಳಲ್ಲಿ ರೋಚವೆನಿಸಿಕೊಂಡೂ ಮೂಡಿಬರಬಹುದು.

1924 ರಲ್ಲಿ ಪ್ರಕಟಗೊಂಡ “ಪಟ್ಟೋಳೆ ಪಳಮೆ” ನಂತರದಲ್ಲಿ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗಿಯಾದವರೆಲ್ಲರ ಅದರಲ್ಲೂ ಕೊಡಗಿನ ಹೆಣ್ಣುಮಕ್ಕಳ ಬಗ್ಗೆ ಅವರುಗಳ ಕಿರುಪರಿಚಯದ ಸಂಗ್ರಹ ಲೇಖನ ಗ್ರಂಥ ಒಂದರ ಕೊರತೆ ಇಂದಿಗೂ ನಮ್ಮನ್ನು ಕಾಡುತ್ತಿದೆ.

ಕೊಡಗಿನ ಗಾಂಧೀ ಎಂದೇ ಪ್ರಖ್ಯಾತಿ ಹೊಂದಿದ ದಿ. ಪಂದ್ಯಂಡ ಬೆಳ್ಯಪ್ಪ ಮತ್ತು ಶ್ರೀಮತಿ ಸೀತಾ ಬೆಳ್ಯಪ್ಪ ಇವರುಗಳ ಬಗ್ಗೆ ಪತ್ರಿಕೆಗಳಲ್ಲಿ ಬರೆದ ಸಂದರ್ಭೋಚಿತ ಲೇಖನದ ಪ್ರಭಾವಿಕೆಗೊಳಗಾಗಿ ಸದರಿ ಸ್ವಾತಂತ್ರ್ಯ ಹೋರಾಟಗಾರ ದಂಪತಿಗಳ ಬಗ್ಗೆ ಅಧ್ಯಯನ ಗ್ರಂಥ ಒಂದು ಹೊರ ಬಂದಿತ್ತು. ಹಾಗೆಯೇ ಕೊಡಗಿನ ಸ್ವಾತಂತ್ರ್ಯ ಹೋರಾಟಗಾರ ಪುರುಷರ ಬೆರಳೆಣಿಕೆ ಕಿರುಪುಸ್ತಕ ಮತ್ತು ಲೇಖನಗಳು ಕೊಡಗು ಸಾಹಿತ್ಯ ಲೋಕದಲ್ಲಿ ಮಿಂಚು ಹರಿಸಿದೆ.

ಕೇವಲ ಮೂರು ದಶಕಗಳಿಂದೀಚೆ ಕರ್ನಾಟಕ ಸರಕಾರ ಕೊಡಗಿನ ಸಾಧಕರ ಬಗ್ಗೆ ಅದರದ್ದೇ ಆದ ರೀತಿಯ ಮೌಲ್ಯಮಾಪನ ಮಾಡಿಕೊಂಡು ಜನಪದ, ಕ್ರೀಡೆ, ಸಾಮಾಜಿಕ ಹಾಗೂ ಕೆಲವೇ ಕೆಲವು ಇನ್ನಿತರ ಕ್ಷೇತ್ರಗಳಲ್ಲಿ ದುಡಿದವರ ಬಗ್ಗೆ ಸಾಕ್ಷ್ಯಚಿತ್ರ ನಿರ್ಮಾಣವನ್ನು ಮಾಡಿಕೊಂಡು ಬಂದಿದೆಯಾದರೂ ಅದರದ್ದೇ ಆದ ಇತಿಮಿತಿಯೊಳಗೆ ಪೂರ್ಣ ಚಿತ್ರಣ ಅಲಭ್ಯ ಎಂಬುದಂತೂ ನಿಜ.

ಕೊಡಗಿನಲ್ಲಿ ಭಾಷಾ ಅಕಾಡೆಮಿಗಳು ಸ್ಥಾಪನೆಗೊಂಡ ನಂತರವೂ ದಾಖಲ ಸಾಹಿತ್ಯದೆಡೆಗೆ ಅವುಗಳು ಅಂತಹ ಗಂಭೀರ ಚಿಂತನೆ ನಡೆಸಿದ ಉದಾಹರಣೆಗಳೂ ಉಲ್ಕಾಪಾತಗಳಿದ್ದಂತೆ. ಇತ್ತೀಚೆಗೆ “ಕೊಡವ ಮಕ್ಕಡ ಕೂಟ” ತನ್ನ ಇತಿಮಿತಿಯೊಳಗೆ ದಾಖಲಾ ಸಾಹಿತ್ಯವನ್ನು ಪ್ರಕಟಿಸುವ ಮೂಲಕ ಘೋರಿಯಲ್ಲಿ ಅಡಗಿ ಹೋಗಿದ್ದ ಸಾಧಕರನ್ನು ಬೆಳಕಿನಲ್ಲಿ ಇಡುವ ಪ್ರಯತ್ನ ಮಾಡುತ್ತಿದೆ.

ಕೊಡಗಿನ ಸಾಹಿತಿಗಳ ಬಗ್ಗೆ ‘ಕೈ ಪಿಡಿ’ಯನ್ನು ಕನ್ನಡ ಬಳಗ ಸಂಘಟನೆ ದಶಕಗಳ ಹಿಂದೊಮ್ಮೆ ಪ್ರಕಟಿಸಿದ ನೆನಪು. ಇದೀಗ ಜನಪದ ಪರಿಷತ್ ‘ಜನಪದರ’ ವಿಸ್ತ್ರತ ದಾಖಲಾ ಸಾಹಿತ್ಯವನ್ನು ಹೊರತರುವ ಪ್ರಯತ್ನದಲ್ಲಿದೆ. ಹಾಗೆಯೇ ‘ಚಕೋರ’ ನಾಮಾಂಕಿತ ಸಾಹಿತಿಗಳ ಬಳಗ ಕೊಡಗಿನ ಲೇಖಕರ ಸಾಹಿತಿಗಳ ಮಾಹಿತಿಗಳ ಕಿರುಪರಿಚಯವನ್ನು ಪ್ರಕಟಿಸುವ ಹಂತದಲ್ಲಿದೆ. ಹೀಗೇ ಈ ಎಲ್ಲಾ ಹಿನ್ನಲೆಯ ಅವಶ್ಯಕತೆಗಳ ಇರುವಿಕೆಯಲ್ಲಿ ಕ್ರೀಡಾಪಟುಗಳ ನಾಡಾದ ಕೊಡಗಿನ ಅಂಗಳದಲ್ಲಿ ಮಿಂಚಿ ನಾಡಿಗೂ ದೇಶಕ್ಕೂ ಕೀರ್ತಿ ತಂದವರ ನೆನಪಿನ ಹೊತ್ತಿಗೆಯೊಂದರ ಅವಶ್ಯಕತೆ ಇತ್ತು.

ವಿಘ್ನೇಶ್ ಎಂ ಭೂತನಕಾಡು ಇವರಿಂದ ಸಂಗ್ರಹಿತಗೊಂಡ ಪ್ರಾಯೋಗಿಕ ಕ್ರೀಡಾಕಲಿಗಳ ಗೊಂಚಲು “ಕೊಡವ ಕ್ರೀಡಾಕಲಿಗಳು” ಪುಸ್ತಕವನ್ನು ಕೊಡವ ಮಕ್ಕಡ ಕೂಟ ಪ್ರಕಟಿಸಿ ಕೊಡಗಿನ ಕ್ರೀಡಾಕಲಿಗಳ ದಾಖಲಾ ಸಾಹಿತ್ಯಕ್ಕೆ ಅಡಿಪಾಯ ಹಾಕಿಕೊಟ್ಟಿದೆ. 160 ಪುಟಗಳ ಮಾಹಿತಿ ಸಾಹಿತ್ಯದಲ್ಲಿ ವರದಿಗಳಾಧಾರಿತ ಕ್ರೀಡಾಕಲಿಗಳ ಸಾಧನೆಗಳ ಮಾಹಿತಿ ಲಭ್ಯವಿದೆ. ಹಾಕಿ, ಕ್ರಿಕೆಟ್, ರಗ್ಬಿ, ಥ್ರೋಬಾಲ್, ದೇಹದಾಢ್ಯ, ಮೋಟಾರ್ ರೇಸಿಂಗ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಸಾಧನೆ ಮಾಡಿದ 62-65 ಸಾಧಕರ ಸಾಧನೆಯ ಕಿರು ಪರಿಚಯ “ಕೊಡವ ಕ್ರೀಡಾ ಕಲಿಗಳು” ಪುಸ್ತಕದ ಹಾಳೆಗಳನ್ನು ಮಗಚುತ್ತಿದ್ದಂತೆ ಸಾಧಕರ ಆ ದಿನಗಳ ಸಮಕಾಲೀನರಂತೂ ತಮ್ಮದೇ ಗುಂಗಿನಲ್ಲಿ ತೇಲುವುದಂತೂ ಸತ್ಯ.

ವಿಘ್ನೇಶ್ ಎಂ ಭೂತನಕಾಡು

ಈ ಒಂದು ಪವಾಡ ಸೃಷ್ಟಿ ಸಾಧ್ಯ ಮಾಡಿದ್ದು ತಮಿಳು ಮಾತ್ರ ಭಾಷಿಕ ದಂಪತಿಗಳಾದ ಶ್ರೀ ಮಹೇಶ್ ಶ್ರೀಮತಿ ಮಲ್ಲರ್ ದಂಪತಿಗಳ ಪುತ್ರ ವಿಘ್ನೇಶ್ ಭೂತನಕಾಡು. ಕೇವಲ ದಶಕಗಳ ಹಿಂದೆ ಮಡಿಕೇರಿ ಎಫ್‍ಎಂಕೆಎಂಸಿ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿದ್ಯಾಭ್ಯಾಸ ಮುಗಿಸಿ ರಿಯಲ್ ಪತ್ರಿಕೋದ್ಯಮಕ್ಕೆ ಕಾಲಿಟ್ಟ ದಿನಗಳಿಂದ ಪತ್ರಕೋದ್ಯಮದಲ್ಲೇ ಏನಾದರೊಂದು ಸಾಧಿಸಲೇ ಬೇಕೆಂದು ಸಂಕಲ್ಪ ಮಾಡಿಕೊಂಡಿದ್ದ.

ಸುದ್ದಿ ಛಾಯಾಗ್ರಾಹಕನಾಗಿ ಅನುಭವದ ಬತ್ತಳಿಕೆಗಳನ್ನು ತುಂಬಿಸಿಕೊಂಡ ಫಲಿತಾಂಶವಾಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ನಡೆಸುವ ಪೈಪೋಟಿಯಲ್ಲಿ ಅತ್ಯುತ್ತಮ ಸುದ್ದಿಚಿತ್ರ ಪ್ರಶಸ್ತಿ ಸೇರಿದಂತೆ ಕೆಲವು ಪ್ರಶಸ್ತಿಗಳ ಒಡೆಯನಾಗಿದ್ದಾನೆ.

ಪತ್ರಿಕೋದ್ಯಮ ಪದವಿಯನ್ನು ಹೆಗಲಿಗೇರಿಸಿಕೊಂಡು ಹೊರಬಿದ್ದ ಈತ ಕೆಲವಾರು ಪತ್ರಿಕೆಗಳಲ್ಲಿ ಅನುಭವದ ಬುತ್ತಿಗಳನ್ನು ಕಟ್ಟಿಕೊಳ್ಳುತ್ತಾ ಇದೀಗ ಕಳೆದ ಮೂರು ವರುಷಗಳಿಂದ ಕನ್ನಡಪ್ರಭ ಪತ್ರಿಕೆಯಲ್ಲಿ ಸ್ಥಿರವಾದಂತೆ ಕಂಡುಬರುತ್ತಿದ್ದಾನೆ. ಈ ಪಯಣದಲ್ಲಿ ಅಚನಕ್ಕಾಗಿ ಅವಕಾಶ ಲಭಿಸಿದ್ದ ಕ್ರೀಡಾವರದಿಯ ಜವಾಬ್ದಾರಿ. ಕ್ರೀಡೋತ್ಸವ ಸಂದರ್ಭಗಳನ್ನೆಲ್ಲಾ ದೈನಂದಿನ ಹಬ್ಬದ ದಿನಗಳನ್ನಾಗಿ ಪರಿವರ್ತಿಸಿಕೊಳ್ಳತೊಡಗಿದ. ಹಾಗಾಗಿ ಇದೀಗ ಈತನ ಬಳಿ ಕೊಡಗಿನ ನೂರಕ್ಕೂ ಹೆಚ್ಚು ಕ್ರೀಡಾಕಲಿಗಳ ಕಿರುಮಾಹಿತಿಗಳ ಸಂಗ್ರಹವಿದೆ.

ಈತನ ಕ್ರೀಡಾವರದಿಗಳ ಸಂಗ್ರಹಿಕೆಯನ್ನು ಗಮನಿಸಿದ “ಕೊಡವ ಮಕ್ಕಡ ಕೂಟ”ದ ಅಧ್ಯಕ್ಷ
ಶ್ರೀ ಬೊಳ್ಳಾಜಿರ ಅಯ್ಯಪ್ಪ ‘ಕೊಡವ ಕ್ರೀಡಾಕಲಿಗಳ’ ಮಾಹಿತಿ ಕೊಡು ಎಂಬುದಾಗಿ ಬೇತಾಳನಂತೆ ಭೂತನಕಾಡುವಿನ ಬೆನ್ನುಬಿದ್ದ ಪರಿಣಾಮವೇ “ಕೊಡವ ಕ್ರೀಡಾಕಲಿಗಳು”, ಕೊಡವ ಕ್ರೀಡಾಕಲಿಗಳ ಕಿರುಪರಿಚಯದ ಹೊತ್ತಿಗೆ. ಕೊಡವರು ಮಾತ್ರವಲ್ಲದೇ ಎಲ್ಲಾ ಕ್ರೀಡಾಸ್ತರು ಪುಸ್ತಕದ ಹುಡುಕುವಿಕೆಯಲ್ಲಿ ತೊಡಗಿದ್ದಾರೆ. ಇದರ ಯಶಸ್ಸು ಕೂಟದ ಅಯ್ಯಪ್ಪ ಹಾಗೂ ಸಂಗ್ರಹಗಾರ ಭೂತನಕಾಡುವಿಗೆ ಸಲ್ಲಲೇಬೇಕಾಗುತ್ತದೆ.

ಕ್ರೀಡಾಲೋಕದ ನಕ್ಷತ್ರಗಳ ಮತ್ತಷ್ಟು ವಿವರಗಳ ದಾಖಲಕೃತಿಗೆ ಇದು ಮುನ್ನಡಿ ಬರೆದಿದೆ. ಸಮಯದ ಅವಕಾಶ, ಆರ್ಥಿಕ ಸ್ಥಿತಿಗತಿಗಳಿಗೆ ಹೊಂದಿಕೊಂಡು ಶಕ್ತಿಮೀರಿ ಬೆಳಕು ಕಂಡ ಈ ಕ್ರೀಡಾಕೃತಿಯನ್ನು ಇನ್ನೂ ಉನ್ನತೀಕರಿಸುವ ಜವಾಬ್ದಾರಿ ಕ್ರೀಡಾಪ್ರಾಧಿಕಾರ, ಭಾಷಾ ಅಕಾಡೆಮಿಗಳಂತವರು ಹೊತ್ತುಕೊಂಡರೆ ಅಯ್ಯಪ್ಪ ಹಾಗೂ ವಿಘ್ನೇಶ್ ಶ್ರಮ ಸಾರ್ಥಕವಾದಂತೆ.

About Author

Allaranda Vittal Nanjappa

Follow On