• Search Coorg Media

ನಾನೊಬ್ಬ ಅಪರಿಚಿತನಿಗಾಗಿ ನನ್ನ ಪ್ರಾಣವನ್ನು ಅರ್ಪಿಸಿದ್ದೇನೆ. ಆ ಅಪರಿಚಿತ ಬೇರಾರೂ ಅಲ್ಲ, ನೀನೇ!

“ನಾನೊಬ್ಬ ಅಪರಿಚಿತನಿಗಾಗಿ ನನ್ನ ಪ್ರಾಣವನ್ನು ಅರ್ಪಿಸಿದ್ದೇನೆ. ಆ ಅಪರಿಚಿತ ಬೇರಾರೂ ಅಲ್ಲ, ನೀನೇ!”

{ಜುಲೈ 26, 21ನೇ ವರ್ಷದ ಕಾರ್ಗಿಲ್ ವಿಜಯ ದಿವಸ ವಿಶೇಷ ಲೇಖನ}

ಕಾರ್ಗಿಲ್‌ ವಿಜಯೋತ್ಸವಕ್ಕೆ 21 ವರ್ಷಗಳು. ಕಾರ್ಗಿಲ್ ಯುದ್ಧ 1999ರ ಮೇನಲ್ಲಿ ಆರಂಭವಾಗಿ ಎರಡು ತಿಂಗಳ ಕಾಲ ನಡೆಯಿತು. ಲೇಹ್‌ ಹೆದ್ದಾರಿವರೆಗೆ ಆಕ್ರಮಿಸಿಕೊಂಡಿದ್ದ ಪಾಕ್ ಸೇನೆಯನ್ನು ಹಿಮ್ಮೆಟ್ಟಿಸುವಲ್ಲಿ ಭಾರತೀಯ ಸೇನೆ ಯಶಸ್ವಿಯಾಯಿತು. ಈ ಹೋರಾಟವು ಪಾಕಿಸ್ತಾನದ ವಿರುದ್ಧ ನಾಲ್ಕನೇ ನೇರ, ಸಶಸ್ತ್ರ ಸಂಘರ್ಷವಾಗಿತ್ತು. ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್‌ನೊಳಗೆ ನುಸುಳಿದವರು ನಮ್ಮ ಸೈನಿಕರಲ್ಲ ಎನ್ನುತ್ತಲೇ ಇದ್ದ ಪಾಕಿಸ್ತಾನವು, ಸದ್ದಿಲ್ಲದೆ ಭಾರತದ ಗಡಿಯೊಳಕ್ಕೆ ಉಗ್ರಗಾಮಿಗಳ ಸೋಗಿನಲ್ಲಿ ಒಳಗೆ ನುಗ್ಗಿತ್ತು. ಸೇನೆಯ ಅಧಿಕಾರಿಗಳು ಸೇರಿದಂತೆ 527 ಮಂದಿ ಭಾರತೀಯ ಯೋಧರು ಹುತಾತ್ಮರಾದರು. ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ ನೀಡಿದ ಭಾರತೀಯ ಸೇನೆ ಜುಲೈ 26ರಂದು ’ಆಪರೇಷನ್‌ ವಿಜಯ್‌’ ಯಶಸ್ವಿ ಎಂದು ಘೋಷಿಸಿತು. ಅಂದಿನಿಂದ “ಕಾರ್ಗಿಲ್‌ ವಿಜಯೋತ್ಸವ” ದಿನ ಆಚರಿಸಲಾಗುತ್ತಿದೆ.

ಇಪ್ಪತ್ತು ವರ್ಷಗಳ ಹಿಂದೆ, ಭಯೋತ್ಪಾದಕರ ನೆರವು ಪಡೆದು ಭಾರತವನ್ನೇ ಕಬಳಿಸಲು ಹೊರಟಿದ್ದ ಪಾಕಿಸ್ತಾನದ ಸಂಚನ್ನು ಪುಡಿಗಟ್ಟಿದ ನಮ್ಮ ಭಾರತದ ಹೆಮ್ಮೆಯ ವೀರಪುತ್ರರು, ತ್ಯಾಗ ಬಲಿದಾನ ಮಾಡಿ, ವೀರಾವೇಶದಿಂದ ಹೋರಾಡಿ, ನಮ್ಮನ್ನೆಲ್ಲ ರಕ್ಷಿಸಿದ್ದಾರೆ. ಅಂಥ ವೀರ ಯೋಧರಿಗೆ ನಮನ ಸಲ್ಲಿಸಲು ಪ್ರತಿ ವರ್ಷ ಜುಲೈ 26ನ್ನು ಕಾರ್ಗಿಲ್‌ ದಿವಸವನ್ನಾಗಿ ಆಚರಿಸಲಾಗುತ್ತದೆ. ಕಾರ್ಗಿಲ್‌ ವಿಜಯ ದಿವಸದ ದಿನ ಪ್ರತಿಯೊಬ್ಬ ಭಾರತೀಯರು ಸೇನಾ ಪಡೆಯ ಧೈರ್ಯ ಮತ್ತು ಸಾಹಸಗಳನ್ನು ಸ್ಮರಿಸುತ್ತಾರೆ. ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ನಮ್ಮ ನಮನಗಳು ಮತ್ತು ಅವರ ಕುಟುಂಬದವರಿಗೆ ಋಣ ನಮ್ಮೆಲ್ಲರ ಮೇಲಿದೆ. ಕಾರ್ಗಿಲ್ ಯುದ್ಧದಲ್ಲಿ ವೀರಾವೇಶದಿಂದ ಹೋರಾಡಿದ ಮತ್ತು ಭಾರತೀಯರ ರಕ್ಷಣೆಗೆ ಕಟಿಬದ್ಧರಾದ ನಮ್ಮ ಸೈನಿಕರು ನಮ್ಮ ದೇಶದ ಹೆಮ್ಮೆ.

“ನಾನೊಬ್ಬ ಅಪರಿಚಿತನಿಗಾಗಿ ನನ್ನ ಪ್ರಾಣವನ್ನು ಅರ್ಪಿಸಿದ್ದೇನೆ. ಆ ಅಪರಿಚಿತ ಬೇರಾರೂ ಅಲ್ಲ, ನೀನೇ!” ಕಾರ್ಗಿಲ್ ಯುದ್ಧದಲ್ಲಿ ಮಡಿದ ಯೋಧನೊಬ್ಬನ ಸಮಾಧಿಯ ಮೇಲೆ ಬರೆದಿದ್ದ ಸಾಲುಗಳಿವು! ಕಾರ್ಗಿಲ್ ವಿಜಯ ದಿವಸ ಎಂಬುದು ಭಾರತೀಯ ಸೇನಾ ಇತಿಹಾಸದ ಪರ್ವಕಾಲ. ನಮಗಾಗಿ, ನಮ್ಮ ಪರಿಚಯವೇ ಇಲ್ಲದ ವ್ಯಕ್ತಿಯೊಬ್ಬ ರಾತ್ರಿ-ಹಗಲೆನ್ನದೆ ಶತ್ರು ರಾಷ್ಟ್ರದ ವೈರಿಗಳೊಂದಿಗೆ ಸೆಣೆಸಾಡುತ್ತಾನೆ, ಮಳೆ-ಚಳಿ ಎನ್ನದೆ ಗಡಿ ಕಾಯುತ್ತಾನೆ, ಹೊಟ್ಟೆಗೆ ಸರಿಯಾಗಿ ಆಹಾರವೇ ಸಿಕ್ಕದಿದ್ದರೂ ದೇಶಕ್ಕಾಗಿ ಹಪಹಪಿಸುತ್ತಾನೆ! ಕೊನೆಗೊಂದು ದಿನ ಮಡಿಯುತ್ತಾನೆ! ಎಂಥ ವಿಚಿತ್ರ? ಇಂಥವರ ಋಣ ತೀರಿಸುವುದಕ್ಕೆ ಯಾರಿಂದ ಸಾಧ್ಯ? ಎಂಥ ಸಂಕಷ್ಟದ ಪರಿಸ್ಥಿತಿಯಲ್ಲೂ ಯುದ್ಧ ಗೆದ್ದ ನಮ್ಮವರ ಶೌರ್ಯಕ್ಕೆ ಒಂದು ಸಲಾಂ

ಕಾರ್ಗಿಲ್‌ ಯುದ್ಧದ ಬಗ್ಗೆ ಒಂದಿಷ್ಟು ಮಾಹಿತಿ:
1999 – ಮೇ 3: ಕಾರ್ಗಿಲ್‌ನೊಳಗೆ ಪಾಕಿಸ್ತಾನ ಸೇನೆ ನುಗ್ಗಿದ್ದನ್ನು ಪತ್ತೆ ಹಚ್ಚಿದ ಕುರಿಗಾಹಿಗಳು
ಮೇ 5: ಭಾರತೀಯ ಸೇನೆ ರವಾನೆ- ಭಾರತದ ಐವರು ಯೋಧರನ್ನು ಸೆರೆ ಹಿಡಿದ ಪಾಕ್‌ ಚಿತ್ರಹಿಂಸೆ ನೀಡಿ ಕೊಂದು ಹಾಕಿತು.
ಮೇ 9: ಪಾಕಿಸ್ತಾನದಿಂದ ಶೆಲ್‌ ದಾಳಿ, ಕಾರ್ಗಿಲ್‌ನಲ್ಲಿದ್ದ ಸೇನಾ ಶಸ್ತ್ರಾಗಾರಕ್ಕೆ ಹಾನಿ
ಮೇ10: ಡ್ರಾಸ್‌, ಕಾಕ್ಸಾರ್‌ ಮತ್ತು ಮುಷ್ಕೊಹ್‌ನಲ್ಲಿ ಪಾಕಿಗಳು ಒಳನುಗ್ಗಿದ್ದನ್ನು ಮೊದಲಿಗೆ ಪತ್ತೆ ಹಚ್ಚಲಾಯಿತು.
ಮೇ 26: ಒಳನುಗ್ಗಿದವರ ಮೇಲೆ ವಾಯುಪಡೆಯಿಂದ ದಾಳಿ ಆರಂಭ
ಮೇ 27: ಮಿಗ್‌ 21 ಮತ್ತು ಮಿಗ್‌ 27 ಯುದ್ಧ ವಿಮಾನಗಳನ್ನು ಕಳೆದುಕೊಂಡ ಭಾರತೀಯ ಸೇನೆ
ಮೇ 28: ಐಎಎಫ್‌ ಎಂಐ-17 ಲಘುಯುದ್ಧ ವಿಮಾನ ಹೊಡೆದುರುಳಿಸಿದ ಪಾಕಿಸ್ತಾನ ಸೇನೆ, ನಾಲ್ವರು ಸಿಬ್ಬಂದಿ ಸಾವು
ಜೂನ್‌ 1:ರಾಷ್ಟ್ರೀಯ ಹೆದ್ದಾರಿ ಎನ್‌ಎಚ್‌1ಎ ಮೇಲೆ ಬಾಂಬ್‌ ದಾಳಿ ನಡೆಸಿದ ಪಾಕಿಸ್ತಾನ
ಜೂನ್‌ 5: ಸೆರೆಯಾದ ಮೂವರು ಪಾಕ್‌ ಯೋಧರಿಂದ ಮಾಹಿತಿ ಪಡೆದು, ವರದಿ ಬಿಡುಗಡೆ ಮಾಡಿದ ಭಾರತ.
ಜೂನ್‌6: ಕಾರ್ಗಿಲ್‌ನಲ್ಲಿ ಬೃಹತ್‌ ಮಟ್ಟದಲ್ಲಿ ದಾಳಿ ಆರಂಭಿಸಿದ ಭಾರತೀಯ ಸೇನೆ
ಜೂನ್‌ 9: ಬಟಾಲಿಕ್‌ ಸೆಕ್ಟರ್‌ನ ಎರಡು ಪ್ರಮುಖ ಸ್ಥಳಗಳನ್ನು ಮರುವಶಪಡಿಸಿಕೊಂಡ ಭಾರತ
ಜೂನ್‌ 11: ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್‌ ಪರ್ವೇಜ್‌ ಮುಷರಫ್‌ ಮತ್ತು ಲೆಫ್ಟಿನೆಂಇಟ್‌ ಜನರಲ್‌ ಆಜಿಜ್‌ ಖಾನ್‌ ನಡುವಿನ ಸಂದೇಶವಾಹಕ ಸಂಭಾಷಣೆಯನ್ನು ಬಿಡುಗಡೆ ಮಾಡಿ, ಇದರಲ್ಲಿ ಪಾಕಿಸ್ತಾನ ಸೇನೆಯ ಕೈವಾಡ ಇರುವುದನ್ನು ಹೊರ ಜಗತ್ತಿಗೆ ತೋರಿಸಿಕೊಟ್ಟ ಭಾರತ
ಜೂನ್‌ 13: ಡ್ರಾಸ್‌ನಲ್ಲಿನ ಟೊಲೊಂಲಿಂಗ್‌ನ ಮೇಲೆ ನಿಯಂತ್ರಣ ಸಾಧಿಸಿದ ಭಾರತೀಯ ಸೇನೆ
ಜೂನ್‌ 15: ಪಾಕ್‌ನ ಅಂದಿನ ಪ್ರಧಾನಿ ಷರೀಫ್‌ಗೆ ದೂರವಾಣಿ ಕರೆ ಮಾಡಿದ ಅಮೆರಿಕದ ಅಧ್ಯಕ್ಷ ಬಿಲ್‌ ಕ್ಲಿಂಟನ್‌, ಕಾರ್ಗಿಲ್‌ನಿಂದ ಸೇನೆಯನ್ನು ವಾಪಸ್‌ ಕರೆಯಿಸುವಂತೆ ಸೂಚಿಸಿದರು.
ಜೂನ್‌ 29: ಟೈಗರ್‌ಹಿಲ್‌ ಹತ್ತಿರದ ಪ್ರಮುಖ ಪೋಸ್ಟ್‌ಗಳಾದ ಪಾಯಿಂಟ್‌ 5060 ಮತ್ತು ಪಾಯಿಂಟ್‌ 5100ಗಳನ್ನು ವಾಪಸ್‌ ಪಡೆದ ಸೇನೆ
ಜುಲೈ 2: ಕಾರ್ಗಿಲ್‌ನಲ್ಲಿ ಮೂರು ದಿಕ್ಕುಗಳಿಂದ ನಿರ್ಣಾಯಕ ದಾಳಿ ಆರಂಭಿಸಿದ ಭಾರತ
ಜುಲೈ 4: ಹನ್ನೊಂದು ಗಂಟೆಗಳ ಘನಘೋರ ಕಾಳಗದ ಬಳಿಕ ಟೈಗರ್‌ ಹಿಲ್‌ ವಾಪಸ್‌ ಪಡೆದ ಭಾರತೀಯ ಸೇನೆ
ಜುಲೈ 5: ಡ್ರಾಸ್‌ ಮೇಲೆ ಸಂಪೂರ್ಣ ನಿಯಂತ್ರಣ. ಕ್ಲಿಂಟನ್‌ ಜತೆಗಿನ ಭೇಟಿ ಬಳಿಕ ಕಾರ್ಗಿಲ್‌ನಿಂದ ಸೇನೆಯನ್ನು ವಾಪಸ್‌ ಕರೆಯಿಸಿಕೊಳ್ಳುವುದಾಗಿ ಷರೀಫ್‌ ಅವರಿಂದ ಘೋಷಣೆ
ಜುಲೈ 7: ಬಟಾಲಿಕ್‌ನಲ್ಲಿ ಜುಬಾರ್‌ ಹೈಟ್ಸ್‌ ಅನ್ನು ವಾಪಸ್‌ ಪಡೆದ ಭಾರತ
ಜುಲೈ 11: ಬಟಾಲಿಕ್‌ನಿಂದ ಹೊರ ಬರಲು ಆರಂಭಿಸಿದ ಪಾಕಿಸ್ತಾನದ ಸೇನೆ
ಜುಲೈ 14: ಆಪರೇಷನ್‌ ವಿಜಯ್‌ ಯಶಸ್ವಿಯಾಯಿತು ಎಂದು ಘೋಷಿಸಿದ ಅಂದಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ. ಪಾಕಿಸ್ತಾನ ಜತೆಗಿನ ಮಾತುಕತೆಗೆ ಷರತ್ತು ವಿಧಿಸಿದ ಭಾರತ.
ಜುಲೈ 26: ಅಧಿಕೃತವಾಗಿ ಕಾರ್ಗಿಲ್‌ ಸಂಘರ್ಷ ಮುಕ್ತಾಯಿತು. ಪಾಕಿಸ್ತಾನ ದಾಳಿಕೊರರಿಂದ ಸಂಪೂರ್ಣವಾಗಿ ಕಾರ್ಗಿಲ್‌ ಮುಕ್ತಾಯವಾಯಿತು.

✍. ವಿವೇಕ್‌ ನರೇನ್

ಕೊರೊನಾ ಹೊಡೆತದಿಂದ ಸಂಕಷ್ಟಕ್ಕೆ ಸಿಲುಕಿದ ಕೊಡಗಿನ ಆರ್ಥಿಕ ಪರಿಸ್ಥಿತಿ: ಪರ್ಯಾಯ ಕ್ರಮಗಳತ್ತ ಹರಿಯಬೇಕಿದೆ ಚಿಂತನೆ….

ಕೊರೊನಾ ಹೊಡೆತದಿಂದ ಸಂಕಷ್ಟಕ್ಕೆ ಸಿಲುಕಿದ ಕೊಡಗಿನ ಆರ್ಥಿಕ ಪರಿಸ್ಥಿತಿ:
ಪರ್ಯಾಯ ಕ್ರಮಗಳತ್ತ ಹರಿಯಬೇಕಿದೆ ಚಿಂತನೆ….

ಸತತ ಎರಡು ವರ್ಷಗಳಿಂದ ಮಹಾಮಳೆಗೆ ಸಿಲುಕಿ ಪ್ರಾಕೃತಿಕ ವಿಕೋಪದಿಂದ ಕಂಗೆಟ್ಟಿದ್ದ ಕೊಡಗು ಜಿಲ್ಲೆಯ ಆರ್ಥಿಕತೆ ಈ ವರ್ಷದ ಆರಂಭದಲ್ಲಿ ಒಂದಷ್ಟು ಚೇತರಿಕೆ ಕಾಣುತ್ತಿರುವಂತೆಯೇ ಕೊರೊನಾದಿಂದಾಗಿ ತಲೆದೋರಿರುವ ಆರ್ಥಿಕ ಸಂಕಷ್ಟ ಮತ್ತೊಮ್ಮೆ ಜಿಲ್ಲೆಯ ವ್ಯಾಪಾರೋದ್ಯಮಿಗಳನ್ನು ಭಾರೀ ನಷ್ಟದತ್ತ ತಳ್ಳಿದೆ.

ಕೊಡಗಿನ ಆರ್ಥಿಕತೆಯ ಪ್ರಮುಖ ಜೀವನಾಡಿಯಾದ ಪ್ರವಾಸೋದ್ಯಮ ಈಗ ಸಂಕಷ್ಟದಲ್ಲಿದೆ. ಎರಡು ವರ್ಷಗಳ ಸತತ ಪ್ರಾಕೃತಿಕ ವಿಕೋಪದಿಂದ ಕಂಗೆಟ್ಟಿದ್ದ ಉದ್ಯಮವನ್ನು ಕೊರೊನಾ ಸೋಂಕು ಮತ್ತಷ್ಟು ಪಾತಾಳಕ್ಕೆ ತಳ್ಳಿದೆ. ಕಾಫಿ, ಕಾಳುಮೆಣಸು, ಭತ್ತ ಕೃಷಿ, ತೋಟಗಾರಿಕೆ ಬೆಳೆಗಳು ಜಿಲ್ಲೆಯ ಜೀವಾಳವಾದರೆ, ಪ್ರವಾಸೋದ್ಯಮ ಆರ್ಥಿಕತೆಯ ಊರು ಗೋಲಿನಂತಿತ್ತು. ಪ್ರಾಕೃತಿಕ ವಿಕೋಪದಿಂದ ಈ 3 ಕ್ಷೇತ್ರಗಳ ಮೇಲೆ ಭಾರಿ ಹೊಡೆತ ಬಿದ್ದಿದ್ದು, ಇಂದಿಗೂ ಸಂಪೂರ್ಣ ಚೇತರಿಸಿಕೊಂಡಿಲ್ಲ.

ಪ್ರಸಕ್ತ ಸನ್ನಿವೇಶದಲ್ಲಿ ಉದ್ಯಮವನ್ನು ನಡೆಸುವುದೇ ಕಷ್ಟವಾಗುತ್ತಿದೆ ಎನ್ನುವ ಮಾತುಗಳು ಉದ್ಯಮಿಗಳಿಂದ ಕೇಳಿ ಬರುತ್ತಿದೆ. ನೌಕರರಿಗೆ ಸಂಬಳ ಕೊಡುವುದು ಸೇರಿದಂತೆ ನಿರ್ವಹಣೆಗೆ ದೊಡ್ಡ ಮೊತ್ತದ ಖರ್ಚು ಬರುತ್ತಿದ್ದು, ಅದನ್ನು ಭರಿಸುವುದು ಹೇಗೆ ಎನ್ನುವ ಚಿಂತೆ ಇವರನ್ನು ಕಾಡುತ್ತಿದೆ. ಬಹುತೇಕರು ಉದ್ಯಮದ ಬೆಳವಣಿಗೆಗೆ ಸಾಲ ಮಾಡಿಕೊಂಡಿದ್ದು, ಇದರ ಮರುಪಾವತಿಯ ಬಗ್ಗೆಯೂ ತಲೆಕೆಡಿಸಿಕೊಂಡಿದ್ದಾರೆ. ಕೊರೊನಾ ಸೋಂಕಿಗೆ ಶಾಶ್ವತ ಪರಿಹಾರ ಸಿಗುವ ತನಕವೂ ಇದೇ ಪರಿಸ್ಥಿತಿ ಮುಂದುವರಿಯುವ ಆತಂಕ ಇರುವುದರಿಂದ ತಮ್ಮ ಕ್ಷೇತ್ರವನ್ನು ಬದಲಿಸುವ ಬಗ್ಗೆಯೂ ಕೆಲವರು ಚಿಂತನೆ ನಡೆಸಿದ್ದಾರೆ.

ಈ ವರ್ಷದ ಪ್ರಾರಂಭದ ಎರಡು ತಿಂಗಳಿನಲ್ಲಿ ಜಿಲ್ಲೆಯ ಆರ್ಥಿಕತೆ ಚೇತರಿಕೆಯ ಕಡೆ ಮುಖ ಮಾಡಿತ್ತು. ಕೊಡಗು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಒಂದಿಷ್ಟು ಚೇತರಿಕೆ ಕಾಣುವುದರೊಂದಿಗೆ ವ್ಯಾಪಾರೋದ್ಯಮಿಗಳ ಮುಖದಲ್ಲಿ ಮಂದಹಾಸ ಮೂಡುತ್ತಿದ್ದು, ಆದರೀಗ ಕೊರೊನಾ ಎಂಬ ಮಾರಣಾಂತಿಕ ಸೋಂಕು ಕೊಡಗಿನಲ್ಲಿ ವ್ಯಾಪಿಸುತ್ತಿರುವ ಭೀತಿ ಎಲ್ಲೆಲ್ಲೂ ಕಂಡು ಬಂದಿರುವ ಹಿನ್ನಲೆಯಲ್ಲಿ ಮತ್ತೊಮ್ಮೆ ಕೊಡಗಿನ ಸಾಮಾನ್ಯ ಜನಜೀವನವೂ ಸ್ಥಬ್ಧವಾಗಿದ್ದು, ಜಿಲ್ಲೆಯ ಪ್ರಮುಖ ನಗರಗಳಲ್ಲಿ ವ್ಯಾಪಾರೋದ್ಯಮ ಕುಸಿತ ಕಂಡಿದ್ದು, ಜನಸಂಚಾರ ವಿರಳವಾಗಿದೆ.

ಪ್ರವಾಸೋದ್ಯಮದಿಂದ ಕೇವಲ ಹೋಂ ಸ್ಟೇ, ಹೊಟೇಲ್ ಮತ್ತು ರೆಸಾರ್ಟ್‍ಗಳು ಅಷ್ಟೇ ಅಲ್ಲ ಸ್ಪೈಸಸ್ ಅಂಗಡಿಗಳು, ಕೊಡಗಿನ ವೈನ್ ಎಲ್ಲವೂ ದೊಡ್ಡ ಪ್ರಮಾಣದಲ್ಲಿ ವ್ಯಾಪಾರ ವಹಿವಾಟು ನಡೆಯುತ್ತಿದ್ದವು. ಆದರೆ ಪ್ರವಾಸಿಗರಿಲ್ಲದೇ ಇರುವುದರಿಂದ ಇದೀಗ ಈ ಸ್ಪೈಸಸ್ ಅಂಗಡಿಗಳು ಗ್ರಾಹಕರಿಲ್ಲದೆ ಬಣಗುಡುತ್ತಿವೆ. ಅಷ್ಟೇ ಅಲ್ಲ ಮಂಜಿನ ನಗರಿ ಮಡಿಕೇರಿಯಲ್ಲೇ ವಾರದ ಕೊನೆ ದಿನಗಳಲ್ಲೂ ಜನರು, ವಾಹನಗಳ ಓಡಾಟವಿಲ್ಲದೆ ರಸ್ತೆಗಳು ಖಾಲಿ ಹೊಡೆಯುತ್ತಿವೆ.

ಜನಗಣತಿಯ ಪ್ರಕಾರ ಕೊಡಗು ಜಿಲ್ಲೆಯ ಜನ ಸಂಖ್ಯಾ ಪ್ರಮಾಣ 5 ಲಕ್ಷವಾಗಿದ್ದರೆ, ಈ ಪೈಕಿ ಪ್ರವಾಸೋದ್ಯಮ ಕ್ಷೇತ್ರದಲ್ಲಿಯೇ 1 ಲಕ್ಷಕ್ಕೂ ಅಧಿಕ ಮಂದಿ ಪರೋಕ್ಷವಾಗಿ ತೊಡಗಿಸಿಕೊಂಡಿದ್ದಾರೆ. ಕೊರೊನಾ ಎಫೆಕ್ಟ್‍ನಿಂದಾಗಿ ಇವರೆಲ್ಲಾ ಇದೀಗ ಆರ್ಥಿಕ ವಿಕೋಪಕ್ಕೆ ಸಿಲುಕಿದ್ದು ಆತಂಕಕ್ಕೀಡಾಗಿದ್ದಾರೆ. ಕೊರೊನಾ ಮಹಾ ಮಾರಿಗೆ ಕೊಡಗು ಜಿಲ್ಲೆಯ ಆರ್ಥಿಕ ಪರಿ ಸ್ಥಿತಿಯೇ ತಳಮುಟ್ಟಿದ್ದು, ಮುಂದೇನಾದೀತು ಎಂಬ ಚಿಂತೆ ಜಿಲ್ಲೆಯ ಜನರನ್ನು ಕಾಡುತ್ತಿದೆ.

ಕರೋನಾ ತಡೆಯ ಲಾಕ್ ಡೌನ್ ಪರಿಣಾಮ ನಗರಕ್ಕಿಂತಲೂ ಭೀಕರವಾಗಿ ಹಳ್ಳಿಯ ಬದುಕಿನ ಮೇಲೆ ಬರೆ ಎಳೆದಿದೆ. ಗ್ರಾಮೀಣ ಭಾಗದಲ್ಲಿ ರೈತರು, ಕೃಷಿ ಕೂಲಿಗಳು, ಚಿಕ್ಕಪುಟ್ಟ ಹಣ್ಣು-ತರಕಾರಿ ವ್ಯಾಪಾರಿಗಳು, ಸರಕೆ ಸಾಗಣೆ ವಾಹನಗಳ ಮಾಲೀಕರು ಮತ್ತು ಚಾಲಕರ ಬದುಕು ದಿಕ್ಕೆಟ್ಟಿದೆ. ನಾವೆಲ್ಲರೂ ಎಂದಿನಂತೆ ವ್ಯಾಪಾರ ವಹಿವಾಟು ನಡೆಸಬಹುದು ಎಂದುಕೊಂಡಿದ್ದ ಕೊಡಗಿನ ವ್ಯಾಪಾರಸ್ಥರಿಗೆ ತೀವ್ರ ನಿರಾಸೆ ಮೂಡಿಸಿದೆ.

ಕಾಫಿ, ಕಾಳು ಮೆಣಸು, ಶುಂಠಿ ಬೆಳೆಗಾರರ ಸ್ಥಿತಿ, ಬಾಳೆ ಬೆಳೆಗಾರರ ಸ್ಥಿತಿ, ಹೈನುಗಾರರು, ಕುಕ್ಕಟ ಉದ್ಯಮ ಮುಂತಾದ ವ್ಯಾಪಾರ ವಹಿವಾಟಿನ ಆರ್ಥಿಕ ಬಿಕ್ಕಟ್ಟು ಹಾಗೂ ಭೀಕರ ಹಣಕಾಸು ಮುಗ್ಗಟ್ಟು ಮಹಾಮಾರಿಯ ಆರಂಭಿಕ ಲಕ್ಷಣಗಳು ಮಾತ್ರ. ಮುಂದೆ ಇದರ ಪರಿಣಾಮಗಳು ರೋಗ ಉಲ್ಬಣವಾದಂತೆ ಇನ್ನಷ್ಟು ಭೀಕರ ಸ್ವರೂಪದಲ್ಲಿ ಕಾಣಿಸಿಕೊಳ್ಳಲಿವೆ. ಹಳ್ಳಿಯ ಸೂಕ್ಷ್ಮ ಆರ್ಥಿಕ ಜಾಲಕ್ಕೆ ಈ ಲಾಕ್ ಡೌನ್ ಕೊಟ್ಟಿರುವ ಪೆಟ್ಟಿನ ನಿಜ ಸ್ವರೂಪ ಗೊತ್ತಾಗಲೂ ಇನ್ನೂ ಒಂದೆರಡು ತಿಂಗಳು ಹಿಡಿಯಬಹುದು.

ಬಾಳೆ ಬೆಳೆಗಾರರ ಸ್ಥಿತಿ ಇನ್ನಷ್ಟು ಶೋಚನೀಯ. ಗೊನೆಗಳು ಬಲಿತು ಕೊಯ್ಲಿಗೆ ಬಂದು ಗಿಡದಲ್ಲಿ ಹಣ್ಣಾಗಿ ಉದುರುತ್ತಿದ್ದರೂ ಕಟಾವು ಮಾಡಿ ಮಾರಾಟ ಮಾಡಲಾಗದ ದುರಂತ ಬೆಳೆಗಾರರದ್ದು. ಸಾವಿರಾರು ಟನ್ ಬಾಳೆ ಹೊಲದಲ್ಲಿಯೇ ಮಣ್ಣುಪಾಲಾಗುತ್ತಿದ್ದು, ಮಾರುಕಟ್ಟೆಯ ಭಾಗ್ಯವಿಲ್ಲದೆ ಸಾಲ ಮಾಡಿ ಬಾಳೆ ಬೆಳೆ ಬೆಳೆದ ರೈತ ದಿಕ್ಕೆಟ್ಟು ಆಕಾಶ ನೋಡತೊಡಗಿದ್ದಾನೆ.

ಕೊರೊನಾ ವಿಶ್ವದೆಲ್ಲೆಡೆ ಸೃಷ್ಟಿಸುತ್ತಿರುವ ಅವಾಂತರ ಒಂದೆರಡಲ್ಲ. ದೊಡ್ಡ ದೊಡ್ಡ ರಾಷ್ಟ್ರಗಳೇ ಕೊರೊನಾದ ಹೊಡೆತಕ್ಕೆ ಸಿಲುಕಿ ಪರದಾಡುತ್ತಿವೆ. ಆರ್ಥಿಕತೆಗೆ ಕೊರೊನಾ ಇನ್ನಿಲ್ಲದ ಕಾಟ ಕೊಟ್ಟಿದೆ. ಲಾಕ್‌ಡೌನ್‌ ಪರಿಣಾಮವಾಗಿ ವ್ಯಾಪಾರ ವಹಿವಾಟು ಬಂದ್‌ ಆಗಿದೆ. ಉದ್ದಿಮೆಗಳು ಬಾಗಿಲು ಮುಚ್ಚಿವೆ. ಕೊರೊನಾದಿಂದ ಕೃಷಿ ಉತ್ಪಾದನೆ ಆರ್ಥಿಕತೆಯ ಮೇಲೆ ತೀವ್ರ ಪರಿಣಾಮ ಬೀರುತ್ತಿದ್ದು, ಮನುಷ್ಯನ ಉಳಿವಿಗಾಗಿ ಭೂಮಿ, ರೈತ ಸಮುದಾಯ ಮತ್ತು ಕೃಷಿ ಕ್ಷೇತ್ರವನ್ನು ರಕ್ಷಿಸುವ ಪ್ರಯತ್ನಗಳು ನಡೆಯುವುದು ಅತ್ಯಂತ ತುರ್ತು ಅಗತ್ಯವಿದೆ.

ನ್ಯಾಯಬೆಲೆ ಅಂಗಡಿಗಳನ್ನು ಬಳಸಿಕೊಂಡು ಪಡಿತರದೊಂದಿಗೆ ಸ್ವಯಂಸೇವಕರು ಅಥವಾ ಇತರೆ ಸರ್ಕಾರಿ ಸಿಬ್ಬಂದಿ ಬಳಸಿಕೊಂಡು ಹಣ್ಣು-ತರಕಾರಿ ಮಾರಾಟ ವ್ಯವಸ್ಥೆಯನ್ನು ಮಾಡುವುದು. ಸಾಮಾಜಿಕ ಅಂತರವನ್ನು ಕಾಯ್ದುಕೊಂಡೇ ಗ್ರಾಮಮಟ್ಟದಲ್ಲಿ ಬೆಳೆದ ಹಣ್ಣು ತರಕಾರಿಗಳಿಗೆ ಸ್ಥಳೀಯವಾಗಿಯೇ ಮಾರುಕಟ್ಟೆ ಒದಗಿಸುವುದು ಮತ್ತು ಹಳ್ಳಿಯ ಜನ ತರಕಾರಿ-ಹಣ್ಣು ಖರೀದಿಗಾಗಿ ನಗರ-ಪಟ್ಟಣಗಳಿಗೆ ಹೋಗುವುದನ್ನು ತಡೆಯುವುದು ಕೂಡ ಸಾಧ್ಯ. ಆದರೆ, ಈ ವ್ಯವಸ್ಥೆ ಜಾರಿಗೆ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಇಚ್ಛಾಶಕ್ತಿ ಮತ್ತು ಜನಪರ ಕಾಳಜಿಯ ಅಗತ್ಯ ಹೆಚ್ಚಿದೆ. ಇಂತಹ ಪರ್ಯಾಯ ಕ್ರಮಗಳು ಮಾತ್ರ ಒಂದು ಕಡೆ ಕೃಷಿಕರನ್ನು ಮತ್ತೊಂದು ಕಡೆ ಗ್ರಾಹಕರನ್ನು ಈ ಲಾಕ್ ಡೌನ್ ಪತನದಿಂದ ಪಾರುಮಾಡಬಲ್ಲವು.

ಲಾಕ್ ಡೌನ್ ತಗೆದ ತಕ್ಷಣವೇ ಆರ್ಥಿಕ ಸ್ಥಿತಿ ಯಥಾಸ್ಥಿತಿಗೆ ಮರಳಲಾರದು. ಜಿಡಿಪಿ ಬೆಳವಣಿಗೆ ಈ ಹಿಂದೆ ಇದ್ದ ಸ್ಥಿತಿಗೆ ಮರಳಲು ವರ್ಷಗಳೇ ಬೇಕಾಗಬಹುದು. ಆರ್ಥಿಕತೆ ಎಂದರೆ ಹಣ ಅಲ್ಲ, ಪ್ರಯೋಜನಕ್ಕೆ ಬರುವ ಉತ್ಪತ್ತಿ. ಇದರ ಸ್ಪಷ್ಟ ಅರಿವು ಇರಬೇಕು. ಹಣದಿಂದ ಹೊಟ್ಟೆ ತುಂಬುವುದಿಲ್ಲ. ಹೊಟ್ಟೆ ತುಂಬಲು ಹಣದಿಂದ ಖರೀದಿಸಬಹುದು. ಇದಕ್ಕೆ ವ್ಯವಸಾಯದ ಉತ್ಪನ್ನಬೇಕು. ಇಷ್ಟು ಸತ್ಯದ ಅರಿವು ಇದ್ದರೆ ಸಾಕು.

ಕಡಿಮೆ ಮತ್ತು ಮಾಧ್ಯಮ ಪ್ರಮಾಣದ ಆದಾಯ ಹೊಂದಿರುವ ಅಸಂಘಟಿತ ವಲಯದ ಕಾರ್ಮಿಕರಿಗೆ ಮುಂದಿನ ದಿನಗಳಲ್ಲಿ ಆರೋಗ್ಯ ಸೇವೆ ಮತ್ತು ಸಾಮಾಜಿಕ ಭದ್ರತೆ ನೀಡುವುದು ಕಷ್ಟವಾಗಬಹುದು. ಜನರು ಮತಷ್ಟು ಬಡತನಕ್ಕೆ ಜಾರುವುದರಿಂದ ಮುಂದಿನ ಜೀವನ ನಡೆಸಲು ಸವಾಲುಗಳು ಎದುರಾಗಬಹುದು.

ನಾವುಗಳು ಬದಲಿ ಉತ್ಪನ್ನಗಳ ಬಗ್ಗೆ ಗಮನ ಹರಿಸೋ ಶಿಸ್ತು, ಚೈತನ್ಯ ಬೆಳೆಸಿಕೊಳ್ಳಬೇಕು. ಸರಕಾರದ ಸಹಾಯ ಯಾವತ್ತೂ ಹಕ್ಕಲ್ಲ, ಅದು ಸಹಾಯವೇ.! ಇಲ್ಲದವರಿಗೆ ಸಹಾಯ, ಇದ್ದವರು ತೆಗೆದುಕೊಂಡರೆ ಅದು ಭಿಕ್ಷೆ ಆಗುತ್ತದೆ. ಅವಶ್ಯಕತೆ ಇಲ್ಲದನ್ನು ಬೇಡಬಾರದು ಅನ್ನುವ ಆತ್ಮಗೌರವವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು. ಲಾಭದಲ್ಲಿ ಆಸ್ತಿ ಮಾಡಿದವರು, ನಷ್ಟವಾದಾಗ ಆಸ್ತಿಯ ಸ್ವಲ್ಪ ಭಾಗವನ್ನ ಮತ್ತೆ ಬಂಡವಾಳವಾಗಿ ಹೂಡುವಷ್ಟು ಸೌಜನ್ಯ ಬೆಳೆಸಿಕೊಳ್ಳಬೇಕು.

ಲೇಖಕರು: ✍. ಅರುಣ್ ಕೂರ್ಗ್

ಗಲ್ವಾನ್​ ನದಿ ಸೇತುವೆ ನಿರ್ಮಾಣ ಕಾರ್ಯ ಯಶಸ್ವಿ; ಚೀನಾ ವಿರೋಧಕ್ಕೆ ಡೋಂಟ್​ ಕೇರ್

ಗಲ್ವಾನ್​ ನದಿ ಸೇತುವೆ ನಿರ್ಮಾಣ ಕಾರ್ಯ ಯಶಸ್ವಿ; ಚೀನಾ ವಿರೋಧಕ್ಕೆ ಡೋಂಟ್​ ಕೇರ್

ಗಡಿ ವಿವಾದದ ನಡುವೆಯೂ ಗಲ್ವಾನ್​ ನದಿಯ ಮೇಲೆ ಭಾರತ ನಿರ್ಮಿಸಲು ಮುಂದಾಗಿದ್ದ ಸೇತುವೆ ಕಾಮಗಾರಿ ಸಂಪೂರ್ಣಗೊಂಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಇಡೀ ಗಲ್ವಾನ್​ ನದಿ ಕಣಿವೆ ತನ್ನದೆಂದು ಚೀನಾ ಹೇಳಿಕೊಳ್ಳಲು ಮುಖ್ಯವಾದ ಕಾರಣವಿದೆ. ಈ ಪ್ರದೇಶವನ್ನು ತನ್ನದಾಗಿಸಿಕೊಂಡಲ್ಲಿ ಶಯಾಕ್​ ನದಿವರೆಗಿನ ಭಾರತದ ಪ್ರದೇಶಕ್ಕೆ ಪ್ರವೇಶಿಸಲು ಭಾರತೀಯ ಸೇನಾಪಡೆಗೆ ಸುಲಭವಾಗಿ ಅಡ್ಡಿಪಡಿಸಬಹುದಾಗಿದೆ. ಇದು ಸಾಧ್ಯವಾದಲ್ಲಿ ಯುದ್ಧದ ಸಂದರ್ಭದಲ್ಲಿ ಡಿಎಸ್​ಡಿಬಿಒ ರಸ್ತೆಯನ್ನು ಸಂಪೂರ್ಣವಾಗಿ ಮುಚ್ಚಿ, ದೌಲತ್​ ಬೇಗ್​ ಓಲ್ಡೀಗೆ ಭಾರತೀಯ ಸಂಪರ್ಕವನ್ನೇ ಕಡಿಯಬಹುದಾಗಿದೆ. ಜತೆಗೆ ಡಿಬಿಒಗಿಂತ ಮೊದಲು ಬರುವ ಭಾರತದ ಕೊನೆಯ ಗ್ರಾಮ ಮರ್ಗೋ ಬಳಿ ಮತ್ತೊಂದು ರಸ್ತೆಯನ್ನು ತೆರೆದು, ಪಾಕಿಸ್ತಾನದ ಸೇನಾಪಡೆಗೆ ಸುಲಭವಾಗಿ ಪ್ರವೇಶ ದೊರಕಿಸಿಕೊಡಬಹುದಾಗಿದೆ. ಇದರಿಂದಾಗಿ ಭಾರತೀಯ ಸೇನಾಪಡೆ ಮೇಲೆ ಏಕಕಾಲಕ್ಕೆ ಎರಡು ಕಡೆಯಿಂದ ದಾಳಿ ಮಾಡಿ, ಹಣಿಯಲು ಅನುಕೂಲವಾಗುತ್ತದೆ ಎಂಬುದು ಚೀನಾದ ಸಂಚಾಗಿದೆ.

ಈ ಯೋಜನೆಯನ್ನು ಕೈಬಿಡುವಂತೆ ಚೀನಾ ದೇಶದ ಸೈನಿಕರು ಪದೇ ಪದೇ ಅಡ್ಡಗಾಲು ಹಾಕುತ್ತಿತ್ತು. ಅದರ ನಡುವೆಯೂ ಭಾರತದ ಎಂಜಿನಿಯರ್​ಗಳು ಸೇತುವೆ ನಿರ್ಮಾಣದ ಕಾರ್ಯವನ್ನು ಯಶಸ್ವಿಯಾಗಿ ಸಂಪೂರ್ಣಗೊಳಿಸಿದ್ದಾರೆ.

ಜೂ.15ರಂದು ಇದೇ ಪಾಯಿಂಟ್​ 14ರಲ್ಲಿ ಭಾರತ ಮತ್ತು ಚೀನಾ ಯೋಧರ ನಡುವಿನ ಘರ್ಷಣೆ ನಡೆದಿತ್ತು. ಮುಖ್ಯ ನದಿಯೊಂದಿಗೆ ಗಲ್ವಾನ್​ ನದಿ ಸೇರ್ಪಡೆಗೊಳ್ಳುವ ‘ವೈ’ ಪ್ರದೇಶಕ್ಕೆ ಈ ಸೇತುವೆ ತುಂಬಾ ಹತ್ತಿರದಲ್ಲಿದೆ. ಎರಡು ನದಿಗಳು ಸಂಗಮಿಸುವ ಸ್ಥಳದಲ್ಲೇ ಭಾರತದ 120 ಕಿ.ಮೀ. ಕ್ಯಾಂಪ್​ ಇದ್ದು, ಡಿಎಸ್​ಡಿಬಿಒ ರಸ್ತೆಗೆ ಹತ್ತಿರದಲ್ಲಿದೆ.

ಭಾರತದ ಈ ಸೇತುವೆ ನಿರ್ಮಾಣ ಕಾರ್ಯದಿಂದಾಗಿಯೇ ಸಿಟ್ಟಾಗಿದ್ದ ಚೀನಾ ಲಡಾಖ್​ ಬಿಕ್ಕಟ್ಟನ್ನು ಸೃಷ್ಟಿಸಿತ್ತು. ಈ ಪ್ರದೇಶ ತನಗೆ ಸೇರಿದ್ದು ಎಂದು ಉತ್ಪ್ರೇಕ್ಷಿತ ಕಥೆಗಳನ್ನು ಕಟ್ಟಿದ್ದ ತನ್ನ ಯೋಧರ ಮೂಲಕ ಭಾರತದ ವ್ಯಾಪ್ತಿಯ ಪ್ರದೇಶಗಳನ್ನು ಅತಿಕ್ರಮಿಸಿತ್ತು.

ಗುರುವಾರದ ವೇಳೆಗೆ ಈ ಸೇತುವೆಯ ನಿರ್ಮಾಣ ಕಾರ್ಯ ಪೂರ್ಣಗೊಂಡಿತು. ಚೀನಾದ ಅಡ್ಡಿಯ ಹೊರತಾಗಿಯೂ ಬಾರ್ಡರ್​ ರೋರ್ಡ್ಸ್​ ಆರ್ಗನೈಜೇಷನ್​ (ಬಿಆರ್​ಒ) ಯೋಧರು ಕಾಮಗಾರಿಯನ್ನು ಮುಂದುವರಿಸಿ, ನಿಗದಿತ ಸಮಯದಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಳಿಸಿದರು ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಸಲಿಗೆ ಗಲ್ವಾನ್ ಬಳಿ ಚೀನಾ ಸೈನಿಕರು ಕ್ಯಾತೆ ತೆಗೆಯಲು ಕಾರಣವಾಗಿದ್ದೇ ಈ ಸೇತುವೆಯ ಕಾಮಗಾರಿ ವಿಚಾರ. ಸುಮಾರು 60 ಮೀಟರ್​ ಉದ್ದದ ಈ ಸೇತುವೆ ಭಾರತೀಯ ಸೈನಿಕರು ಅತ್ಯಂತ ಚಳಿಯ ನದಿಯ ಅಡ್ಡಲಾಗಿ ಸಂಚರಿಸಲು ಸಹಾಯಕಾರಿಯಾಗಿದೆ. ಅಲ್ಲದೇ ಕರಕೋರಂನ ಸೂಕ್ಷ್ಮ ವಲಯವನ್ನು ಸುರಕ್ಷಿತವಾಗಿರುವಂತೆ ನೋಡಿಕೊಳ್ಳಲು ಈ ಸೇತುವೆ ಸಹಾಯಕಾರಿಯಾಗಲಿದೆಯಂತೆ.

ಈ ಕುರಿತು ಮಾಹಿತಿ ನೀಡಿರುವ ಸರ್ಕಾರದ ಹಿರಿಯ ಅಧಿಕಾರಿಗಳು.. ಗುರುವಾರ ಸೇತುವೆ ನಿರ್ಮಾಣ ಕಾರ್ಯ ಮುಗಿದಿದೆ. ಈ ಸೇತುವೆಯಿಂದ ಗಡಿಯಲ್ಲಿ ಮೂಲ ಸೌಕರ್ಯಗಳು ಸಿಗುತ್ತವೆ, ನವೀಕರಣ ಯೋಜನೆಗಳು ಪ್ರಾರಂಭಗೊಳ್ಳುತ್ತವೆ ಎನ್ನುವ ಕಾರಣಕ್ಕೆ ಸ್ಥಗಿತಗೊಳಿಸುವ ಪ್ರಯತ್ನಗಳು ನಡೆದವು. ಅದರ ಮಧ್ಯೆಯೂ ಯಶಸ್ವಿಯಾಗಿ ಸೇತುವೆಯನ್ನು ನಿರ್ಮಿಸಲಾಗಿದೆ ಎಂದಿದ್ದಾರೆ.

ನಾಲ್ಕು ಕಮಾನುಗಳನ್ನು ಹೊಂದಿರುವ ಈ ಸೇತುವೆಯು ಶಯಾಕ್​ ಮತ್ತು ಗಲ್ವಾನ್​ ನದಿಗಳ ಸಂಗಮದಿಂದ ಮೂರು ಕಿ.ಮೀ. ಪೂರ್ವದಲ್ಲಿ ಸ್ಥಿತವಾಗಿದೆ. ವಿವಾದಕ್ಕೆ ಕಾರಣವಾಗಿರುವ ಪೆಟ್ರೋಲಿಂಗ್​ ಪಾಯಿಂಟ್​ 14ರಿಂದ 2 ಕಿ.ಮೀ. ಪೂರ್ವದಲ್ಲಿರುವ ಬೈಲಿ ಸೇತುವೆಗೆ ಸಮೀಪದಲ್ಲಿದೆ.

ಭಾರತ-ಚೀನಾ ಗಡಿಯಲ್ಲಿ ನಡೆದ ಘರ್ಷಣೆಯಲ್ಲಿ 20 ಭಾರತೀಯ ಯೋಧರು ಪ್ರಾಣ ಬಿಟ್ಟಿದ್ದು, ಇದಕ್ಕೆ ಪ್ರತಿಯಾಗಿ ನಡೆಸಿದ ದಾಳಿಯಲ್ಲಿ 35 ರಿಂದ 40 ಮಂದಿ ಚೀನಾ ಯೋಧರನ್ನು ಹೊಡೆದುರುಳಿಸಲಾಗಿದೆ ಎಂದು ಅಮೆರಿಕಾ ಗುಪ್ತಚರ ಇಲಾಖೆಯು ಮಾಹಿತಿ ನೀಡಿದೆ. ಆದರೆ ಚೀನಾ ಸರ್ಕಾರವು ತಮ್ಮ ಸೈನಿಕರ ಸಾವು ಹಾಗೂ ಹಾನಿಗೆ ಸಂಬಂಧಿಸಿದಂತೆ ಯಾವುದೇ ರೀತಿ ಮಾಹಿತಿಯನ್ನು ನೀಡಿಲ್ಲ.

ಪ್ರಕ್ಷುಬ್ದು ವಾತಾವರಣ ನಡುವೆ ಚೀನಾ ವಿರೋಧಕ್ಕೆ ಡೋಂಟ್​ ಕೇರ್ ಎಂದ ಭಾರತ ಗಲ್ವಾನ್​ ನದಿಗೆ ಸೇತುವೆ ನಿರ್ಮಾಣ ಕಾರ್ಯವನ್ನು ಯಶಸ್ವಿಯಾಗಿ ಪೂರೈಸಿ ಚೀನಾಕ್ಕೆ ಸೆಡ್ಡು ಹೊಡೆದಿದೆ.

✍. ವಿವೇಕ್‌ ನರೇನ್

ಗಲ್ವಾನ್ ಕಣಿವೆ ಹಾಗೂ ಗಲ್ವಾನ್ ನದಿಯ ಹಿಂದಿನ ರೋಚಕ ಕಥನ

ಗಲ್ವಾನ್ ಕಣಿವೆ ಹಾಗೂ ಗಲ್ವಾನ್ ನದಿಯ ಹಿಂದಿನ ರೋಚಕ ಕಥನ

ಭಾರತದ ಬಹುತೇಕ ನದಿಗಳಿಗೆ ದೇವತೆಗಳ ಹೆಸರುಗಳಿವೆ. ಇದಕ್ಕೆ ಕೆಲವು ನದಿಗಳ ಹೆಸರು ಅಪವಾದ ಆಗಿರಬಹುದು. ಆದರೆ, ‘ಗಲ್ವಾನ್‌’ ನದಿಯ ಹೆಸರಿನ ಹಿಂದೆ ಪೌರಾಣಿಕ ಹಿನ್ನೆಲೆ ಇಲ್ಲ. ಸಿಂಧು ನದಿಯ ಪ್ರಮುಖ ಉಪನದಿಯಾಗಿರುವ ಗಲ್ವಾನ್‌ ನದಿ ಹೆಸರಿನ ಹಿಂದೆ ರೋಚಕ ಇತಿಹಾಸವಿದೆ.

‘ಗುಲಾಮ್ ರಸೂಲ್ ಗಲ್ವಾನ್’ ಎಂಬ ಅಪ್ರತಿಮ ಲಡಾಕಿ ಸಾಹಸಿ ಮತ್ತು ಸಂಶೋಧಕನ ಹೆಸರು ಇಲ್ಲಿಯ ನದಿಗೆ ಮತ್ತು ಕಣಿವೆಗೆ ಇಟ್ಟಿದ್ದಾರೆ. ಇಲ್ಲಿ ಹರಿಯುತ್ತಿರುವ ಈ ಗಲ್ವಾನ್ ನದಿ ಸಿಂಧೂ ನದಿಯ ಉಪನದಿ. ೧೯ನೇ ಶತಮಾನ (ಜನನ: ೧೮೭೮)ದಲ್ಲಿ ಬದುಕಿದ್ದ ಈ ರಸೂಲ್ ಗಲ್ವಾನ್ ಟಿಬೇಟ್ ಮತ್ತಿತರ ಹಲವಾರು ಪ್ರದೇಶಗಳಲ್ಲಿ ನಡೆದ ಶೋಧನೆಗಳ ಹಿಂದಿನ ಶಕ್ತಿ. ಯೂರೋಪ್ ದೇಶಗಳಾದ ಬ್ರಿಟನ್, ಇಟಲಿ, ಫ್ರಾನ್ಸ್ ನಿಂದ ಬರುತ್ತಿದ್ದ ಹಲವಾರು ಮಂದಿ ಪ್ರವಾಸಿ ಸಂಶೋಧಕರಿಗೆ ಮಾರ್ಗದರ್ಶಕನಾಗಿದ್ದ. ರಸೂಲ್ ಗಲ್ವಾನ್ ರ ಮರಿ ಮೊಮ್ಮಗ ಬರೆದಿರುವಂತೆ ಗಲ್ವಾನ್ ಸಾಹಸವನ್ನು ಎಲ್ಲರೂ ಪ್ರಶಂಸಿಸುತ್ತಿದ್ದರು. ದುರ್ಗಮ ಬೆಟ್ಟಗಳ ಹಾಗೂ ಹರಿಯುತ್ತಿರುವ ನದಿಯ ಬಗ್ಗೆ ಗಲ್ವಾನ್ ಜ್ಞಾನ ಅಪರಿಮಿತವಾಗಿತ್ತು. ಭಾರತ ಮತ್ತು ಚೀನಾದ ಗಡಿ ಭಾಗದಲ್ಲಿ ಸುಮಾರು ೮೦ ಕಿ.,ಮೀ ಹರಿಯುವ ಈ ನದಿಗೆ ಗಲ್ವಾನ್ ಎಂದೂ ಅಲ್ಲಿರುವ ಕಣಿವೆ ಗಲ್ವಾನ್ ಕಣಿವೆ ಎಂದೂ ಹೆಸರಿಡಲಾಗಿದೆ. ಈ ನದಿ ಮುಂದಕ್ಕೆ ಹರಿದು ಸಿಂಧೂ ನದಿಯನ್ನು ಸೇರುತ್ತದೆ. ಈ ಅಪ್ರತಿಮ ಸಾಹಸಿಯು ೪೭ನೇ ವಯಸ್ಸಿನಲ್ಲೇ ಅಕಾಲ ಮರಣಕ್ಕೀಡಾಗುತ್ತಾರೆ. ಆದರೆ ಅವರ ಅಂದಿನ ಮಾರ್ಗದರ್ಶನ ಮತ್ತು ಸಾಹಸದಿಂದಾಗಿ ಈಗಲೂ ಗಲ್ವಾನ್ ಹೆಸರು ಅಜರಾಮರವಾಗಿದೆ.

ಲಡಾಖ್ ನ ಈ ಪ್ರಸಿದ್ಧ ಕಣಿವೆಗೆ ಗುಲಾಮ್ ರಸೂಲ್ ಗಲ್ವಾನ್ ರ ಹೆಸರನ್ನು ಅವರ ಸ್ಮರಣಾರ್ಥ ಇಡಲಾಗಿದೆ. ಹಾಗಾಗಿ ಗಲ್ವಾನ್ ಕಣಿವೆ ಯಾವತ್ತಿಗೂ ಭಾರತದ ಭಾಗ ಎಂದು ಲಡಾಖಿ ಅನ್ವೇಷಕ ಗುಲಾಮ್ ರಸೂಲ್ ಗಲ್ವಾನ್ ಅವರ ಮೊಮ್ಮಗ ಮುಹಮ್ಮದ್ ಅಮೀನ್ ಗಲ್ವಾನ್ ಹೇಳಿದ್ದಾರೆ. ತಲೆಮಾರುಗಳಿಂದ ಲಡಾಖ್ ನ ಲೇಹ್ ನಲ್ಲಿ ನೆಲೆಸಿರುವ ಅಮೀನ್ ಗಲ್ವಾನ್ ತಮ್ಮ ನೆಲದ ಕಥೆಗಳನ್ನು ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿದ್ದಾರೆ.

15-06-2020ರ ಸೋಮವಾರ ಚೀನಾ ಮತ್ತು ಭಾರತದ ಸೈನಿಕರ ನಡುವೆ ನಡೆದ ಘರ್ಷಣೆಯ ಬಗ್ಗೆ ಮಾತನಾಡಿದ ಅವರು, “1962ರಲ್ಲೂ ಚೀನಾ ಇದು ತನ್ನ ನೆಲ ಎಂದು ಪ್ರತಿಪಾದಿಸಿತ್ತು. ಇದು ಭಾರತದ ಭೂಭಾಗವಾಗಿದ್ದು, ಭಾರತದ ಭೂಭಾಗವಾಗಿಯೇ ಉಳಿಯಲಿದೆ. ಆಗ ಈ ನೆಲಕ್ಕಾಗಿ ನಮ್ಮ ಸೈನಿಕರು ಹೋರಾಡಿದ್ದರು. ಈಗ ಮತ್ತೊಮ್ಮೆ ಹೋರಾಡಿದ್ದಾರೆ. ನಾವು ನಮ್ಮ ಸೈನಿಕರನ್ನು ಗೌರವಿಸುತ್ತೇವೆ ಮತ್ತು ಅವರ ತ್ಯಾಗಕ್ಕೆ ಸೆಲ್ಯೂಟ್ ಹೊಡೆಯುತ್ತೇವೆ” ಎಂದವರು ಹೇಳಿದರು.

ಆಗಿನ ಬ್ರಿಟಿಷ್ ಅಧಿಕಾರಿ ಲಾರ್ಡ್ ಡನ್ ಮೋರ್ ಸುತ್ತಾಟದಲ್ಲಿದ್ದಾಗ ಪ್ರತಿಕೂಲ ಹವಾಮಾನದಿಂದ ಅಲ್ಲಿದ್ದವರು ದಿಕ್ಕಾಪಾಲಾಗಿದ್ದರು. “ನನ್ನ ತಾತ ದಾರಿಯೊಂದನ್ನು ಹುಡುಕಿ ಎಲ್ಲರನ್ನೂ ನದಿಯೊಂದರ ಬದಿಗೆ ಕರೆದೊಯ್ದಿದ್ದರು. ನನ್ನ ತಾತ ಕಂಡುಹಿಡಿದ ದಾರಿಯಿಂದ ಅವರೆಲ್ಲರೂ ಸಾವಿನಿಂದ ಪಾರಾಗಿದ್ದರು. ಇದರಿಂದಾಗಿ ಕಣಿವೆ ಮತ್ತು ನದಿಗೆ ತಾತನ ಹೆಸರಿಡಲಾಯಿತು” ಎಂದವರು ಹೇಳಿದರು.

19ನೇ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್ ಆಡಳಿತದ ಭಾರತಕ್ಕೆ ಟಿಬೆಟ್ ವರೆಗೆ ರಷ್ಯನ್ನರು ಭೂಪ್ರದೇಶವನ್ನು ಆಕ್ರಮಿಸಿಕೊಳ್ಳುತ್ತಾರೆ ಎನ್ನುವ ಆತಂಕವಿತ್ತು. ಆಗ ಈ ಪ್ರದೇಶದಲ್ಲಿ ಭಾರತದ ಬ್ರಿಟಿಷ್ ಸರಕಾರಕ್ಕೆ ಸಣ್ಣ ವಯಸ್ಸಿನವರಾಗಿದ್ದ ಗುಲಾಮ್ ರಸೂಲ್ ಗಲ್ವಾನ್ ಸಹಾಯ ಮಾಡಿದ್ದರು. ರಷ್ಯಾದ ಆಕ್ರಮಣದ ಬಗ್ಗೆ ಮಾಹಿತಿ ನೀಡುವಲ್ಲಿಯೂ ಅವರು ನೆರವಾಗಿದ್ದರು ಎಂದು ಲಡಾಖಿ ಅನ್ವೇಷಕ ಗುಲಾಮ್ ರಸೂಲ್ ಗಲ್ವಾನ್ ಅವರ ಮೊಮ್ಮಗ ಮುಹಮ್ಮದ್ ಅಮೀನ್ ಗಲ್ವಾನ್ ಹೇಳಿದ್ದಾರೆ.

ಗಾಲ್ವಾನ್ ಕಣಿವೆ ಅಲ್ಲದೆ ಸ್ಪಾಂಗುರ್, ಪ್ಯಾಂಗಾಂಗ್ ಸರೋವರಗಳಲ್ಲಿ ರಸೂಲ್ ಅಥವಾ ಬ್ರಿಟಿಷ್ ಅನ್ವೇಷಕರು ಸಂಚರಿಸಿದ್ದು ಬಿಟ್ಟರೆ, ಗಸ್ತು ತಿರುಗುವ ಗಡಿ ಯೋಧರು ಕಾಣಿಸುತ್ತಿರಲಿಲ್ಲ. ಸಮುದ್ರಮಟ್ಟದಿಂದ 14 ಸಾವಿರ ಅಡಿಗೂ ಮೇಲ್ಪಟ್ಟ ಈ ಪ್ರದೇಶದಲ್ಲಿ ಉಸಿರಾಡುವುದೇ ಕಷ್ಟ. ಆದರೆ, ಚೀನಾದ ಕೃತ್ಯದಿಂದ 1962ರಲ್ಲಿ ಯುದ್ಧ ಶುರುವಾಯಿತು. ಸ್ಯಾಮ್ ಜುಂಗ್ ಗ್ಲಿಂಗ್ ಪೋಸ್ಟ್ ನ ಸಂವಹನ ಸಂಪರ್ಕ ಕಡಿತಗೊಳಿಸಿದ ಗೋರ್ಖಾ ಪಡೆ ಮೆಲೆ ಚೀನಿಯರು ಮುಗಿಬಿದ್ದರು. ರಸೂಲ್ ಅನ್ವೇಷಿಸಿದ ಕಣಿವೆ ಸೇರಿದಂತೆ ನಿರ್ಜನ ಪ್ರದೇಶವಾಗಿದ್ದ ಕಣಿವೆಯಲ್ಲಿ ರಕ್ತಪಾತ ಮೊದಲುಗೊಂಡಿತು.

ಚೀನಾ ಸರಕಾರ ಇದೇ ಅವಧಿಯಲ್ಲಿ ತೈವಾನ್‌ ಜೊತೆಗೂ ಕಿರಿಕ್‌ ಮಾಡಿಕೊಂಡಿದೆ. ಹಾಗೆಯೇ, ಕೊರೊನಾ ವೈರಸ್‌ ಹರಡಲು ಚೀನಾವೇ ಕಾರಣ ಎಂದ ಆಸ್ಪ್ರೇಲಿಯಾದ ಜೊತೆಗೆ ವಾಗ್ವಾದಕ್ಕಿಳಿದಿದೆ ಚೀನಾ. ಹಾಗಾಗಿ, ಚೀನಾದ ನೆರೆಯ ರಾಷ್ಟ್ರಗಳೊಂದಿಗಿನ ಕಿರಿಕಿರಿಯ ಭಾಗವಾಗಿಯೇ ಗಲ್ವಾನ್‌ ಕಣಿವೆಯ ಮೇಲಿನ ಕದನ ಎಂದು ಹೇಳಬಹುದು.

ಭಾರತೀಯ ಯೋಧರ ಸಾವಿಗೆ ಕಾರಣವಾದ ಚೀನಾ-ಭಾರತ ಯೋಧರ ಸಂಘರ್ಷದ ಬೆನ್ನಲ್ಲೇ, ಈಶಾನ್ಯ ಲಡಾಖ್‌ನ ಗಲ್ವಾನ್‌ ನದಿಯ ಹರಿವನ್ನು ತಿರುಗಿಸಲು ಚೀನಾ ಅಣೆಕಟ್ಟು ನಿರ್ಮಾಣಕ್ಕೆ ಮುಂದಾಗಿತ್ತು ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ಪೂರಕವಾಗಿ ಕೆಲವು ಉಪಗ್ರಹ ಚಿತ್ರಗಳು ಮಾಧ್ಯಮಗಳಿಗೆ ಲಭ್ಯವಾಗಿದ್ದು, ಹರಿವನ್ನು ತಡೆಯಲು ಬಳಕೆಯಾಗುತ್ತಿತ್ತು ಎನ್ನಲಾದ ಬುಲ್ಡೋಜರ್‌ ಕಾಣಿಸಿದೆ.

ತನ್ನ ಪೂರ್ವಜರು ಕಾಶ್ಮೀರದವರು. ಶ್ರೀಮಂತರಿಂದ ಸೊತ್ತು ಕೊಳ್ಳೆ ಹೊಡೆದು ಬಡವರಿಗೆ ಕೊಡುವ ಅಭ್ಯಾಸವಿದ್ದ ತನ್ನ ತಾಯಿಯ ಅಜ್ಜನನ್ನು ದೊಗ್ರ ಅರಸರು ಬಂಧಿಸಿ ಗಡೀಪಾರು ಮಾಡಿದಾಗ ಬಲತ್ತಿಸ್ತಾನಕ್ಕೆ ಹೋಗಬೇಕಾಯಿತು ಎಂದು ಗುಲಾಂ ರಸೂಲ್ ಗಲ್ವಾನ್ ತಮ್ಮ ಆತ್ಮಕಥೆಯಲ್ಲಿ ಬರೆದಿದ್ದಾರೆ. ಅಲ್ಲಿಂದ ಇವರು ಲೇಹ್‌ಗೆ ಬಂದರು. ಲೇಹ್‌ನಿಂದ ಗುಲಾಂ ರಸೂಲ್ ತಮ್ಮ ಸಾಹಸಿಕ ಸಂಚಾರ ಆರಂಭಿಸಿದರು.

ಈಶಾನ್ಯ ಲಡಾಕ್ ಮೂಲಕ ಹರಿಯುವ ಹೊಳೆಯ ದಡಕ್ಕೆ ಗುಲಾಂ ರಸೂಲ್ ತನ್ನ 21ನೇ ವರ್ಷದಲ್ಲಿ ಬಂದು ತಲುಪಿದ್ದರು. ಈ ಪ್ರದೇಶದಲ್ಲಿ ಶೋಧ ನಡೆಸಿದ ಬ್ರಿಟಿಷ್ ತಂಡದಲ್ಲಿ ಗುಲಾಂ ರಸೂಲ್ ಇದ್ದರು. ಈಗ ಗಡಿಯಲ್ಲಿ ಭಾರತ ಚೀನ ಘರ್ಷಣೆ ನಡೆಯುವುದು ಚರ್ಚೆಯಾಗುವಾಗ ಗಲ್ವಾನ್ ನದಿ ವಿಷಯವೂ ಬರುತ್ತದೆ. ಸರ್ವೆಂಟ್ಸ್ ಆಫ್ ಸಾಹಿಬ್ಸ್ (ಉನ್ನತರ ಸಹಾಯಕ) ಎಂಬ ಹೆಸರಿನ ಆತ್ಮಕಥೆಯನ್ನೂ ಗುಲಾಂ ರಸೂಲ್ ಗಲ್ವಾನ್ ಬರೆದಿದ್ದಾರೆ.

✍. ಕಾನತ್ತಿಲ್ ರಾಣಿ ಅರುಣ್

ಡ್ರ್ಯಾಗನ್‌ ಸಂಹರಿಸಲು ಗುರಿಯಿಟ್ಟ ರಾಮ

ಡ್ರ್ಯಾಗನ್‌ ಸಂಹರಿಸಲು ಗುರಿಯಿಟ್ಟ ರಾಮ

ಭಾರತದ ಅವಿಭಾಜ್ಯ ಅಂಗವಾದ ಲಡಾಖ್ ನ ಗಲ್ವಾನ್ ಕಣಿವೆಯಲ್ಲಿ ಪಾಪಿ ಚೀನಾದ ಕಮ್ಯುನಿಸ್ಟ್ ಸೈನಿಕರು LAC (Line of Actual Control) ವಾಸ್ತವಿಕ ನಿಯಂತ್ರಣದ ರೇಖೆ ದಾಟಿ ಬಂದು ಭಾರತದ ವೀರ ಸೈನಿಕರೊಂದಿಗೆ ಸಂಘರ್ಷ ನಡೆಸಿದ್ದಾರೆ.

ಪೂರ್ವ ಲಡಾಕ್ ನ ಗಲ್ವಾನ್ ಕಣಿವೆ ಪ್ರದೇಶದಲ್ಲಿ ಭಾರತ-ಚೀನಾ ಸೈನಿಕರ ಮಧ್ಯೆ ನಡೆದ ಘರ್ಷಣೆ, ಅದರಲ್ಲಿ ಅನೇಕ ಯೋಧರ ಬಲಿದಾನವಾಯಿತು. ಗಲ್ವಾನ್‌ ಕಣಿವೆಯಲ್ಲಿ ನಡೆದ ಚೀನಾ ಮತ್ತು ಭಾರತೀಯ ನಡುವಿನ ಸಂಘರ್ಷವನ್ನು ಭಾರತೀಯ ಮಾಧ್ಯಮಗಳು ತುಂಬ ಮಹತ್ವ ನೀಡಿದ ಪ್ರಸಾರ ಮಾಡಿತು.

ಆದರೆ ಚೀನಾದ ಮಾಧ್ಯಮಗಳು ಏನೂ ಆಗಿಲ್ಲ ಎಂಬಂತೆಯೇ ವರ್ತಿಸಿವೆ. ಚೀನಾದ ಬಹುತೇಕ ಪತ್ರಿಕೆಗಳು, ಟಿವಿಗಳು ಈ ವಿಷಯವನ್ನು ನಗಣ್ಯವಾಗಿ ಪರಿಗಣಿಸಿವೆ. ಚೀನಾದ ಸರಕಾರಿ ಮಾಧ್ಯಮವಾಗಿರುವ ಗ್ಲೋಬಲ್‌ ಟೈಮ್ಸ್‌ ಐವರು ಚೀನಿ ಯೋಧರು ಮೃತಪಟ್ಟಿದ್ದಾರೆಂಬುದನ್ನು ಹೇಳಿದ್ದು ಬಿಟ್ಟರೆ ಮತ್ತೇನೂ ವಿವರಗಳನ್ನು ಒದಗಿಸಿಲ್ಲ. ಚೀನಾದ ಬಹುತೇಕ ಮಾಧ್ಯಮಗಳು ಇದೇ ರೀತಿಯಾಗಿ ವರ್ತಿಸಿವೆ.

ಇನ್ನು ಭಾರತದ ಮಾಧ್ಯಮಗಳಂತೂ 20 ಯೋಧರ ಹುತಾತ್ಮ ಸುದ್ದಿಗೆ ಹೆಚ್ಚಿನ ಮಹತ್ವ ನೀಡಿ, ಚೀನಾದ ವಿರುದ್ಧ ಪ್ರತಿಕಾರ ತೆಗೆದುಕೊಳ್ಳುವ ಒತ್ತಡವನ್ನು ಹಾಕುತ್ತಿವೆ. ತೈವಾನ್‌ನ ‘ತೈವಾನ್‌ ನ್ಯೂಸ್‌’ ಪತ್ರಿಕೆಯಂತೂ ತನ್ನ ಟ್ವಿಟರ್‌ ಹ್ಯಾಂಡಲ್‌ನಲ್ಲಿ ಡ್ರ್ಯಾಗನ್‌ಗೆ ರಾಮ ಗುರಿಯಿಟ್ಟು ಬಾಣ ಬಿಡುವ ಚಿತ್ರವನ್ನು ಹಾಕಿ, ಭಾರತದ ರಾಮ ಚೀನಾ ಡ್ರ್ಯಾಗನ್‌ ಅನ್ನು ಎದುರಿಸಲಿದ್ದಾನೆಂಬ ಕ್ಯಾಪ್ಷನ್‌ ನೀಡಿದೆ.

ಗಲ್ವಾನ್‌ ಕಣಿವೆಯಲ್ಲಿ ನಡೆದ ಚಕಮಕಿ ಹಾಗೂ ಯೋಧರ ಸಾವಿನ ಹಿನ್ನೆಲೆಯಲ್ಲಿ ಎರಡೂ ದೇಶಗಳು ಗಡಿ ಪ್ರದೇಶದಲ್ಲಿ ಹೆಚ್ಚಿನ ಸೇನೆ ಜಮಾವಣೆ ನಡೆಸಿವೆ. ಭಾರತೀಯ ವಾಯುಸೇನೆಯ ವಿಮಾನಗಳನ್ನು ಗಡಿಗೆ ಇನ್ನಷ್ಟು ಹತ್ತಿರದ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ. ಚೀನಾ ಸೇನೆ ಸುಮಾರು 6000ದಷ್ಟು ಸೈನಿಕರನ್ನು, ಟ್ಯಾಂಕ್‌ ಹಾಗೂ ಮದ್ದುಗುಂಡುಗಳನ್ನು ಗಲ್ವಾನ್‌ ಪ್ರದೇಶಕ್ಕೆ ಕಳಿಸಿದೆ. ಭಾರತ ಕೂಡ ಸಾಕಷ್ಟು ಸಂಖ್ಯೆಯ ಸೈನಿಕರನ್ನು ಗಡಿಯುದ್ದಕ್ಕೂ ಜಮಾವಣೆ ಮಾಡಿದೆ. ಈ ಪ್ರಕ್ರಿಯೆಯ ಒಟ್ಟಾರೆ ಜವಾಬ್ದಾರಿಯನ್ನು ಸೇನಾ ಮುಖ್ಯಸ್ಥ ಬಿಪಿನ್‌ ರಾವತ್‌ ವಹಿಸಿಕೊಂಡಿದ್ದಾರೆ. ಗಲ್ವಾನ್‌ ಮಾತ್ರವಲ್ಲದೆ, ಚೀನಾದೊಂದಿಗೆ ಗಡಿ ಹಂಚಿಕೊಂಡಿರುವಲ್ಲೆಲ್ಲ ಸೈನಿಕರನ್ನು ಅಲರ್ಟ್‌ ಮಾಡಲಾಗಿದೆ.

ಸುಮಾರು ೪ ದಶಕಗಳ ಬಳಿಕ ಭಾರತ-ಚೀನಾ ಗಡಿ ಪ್ರದೇಶ ಪ್ರಕ್ಷುಬ್ಧವಾಗಿದೆ. ಭಾರತದ ೨೦ ವೀರ ಯೋಧರು ಹುತಾತ್ಮರಾಗಿದ್ದಾರೆ. ೧೯೬೨ರಲ್ಲೇ ಭಾರತ-ಚೀನಾ ಯುದ್ಧವಾಗಿತ್ತು. ನಂತರದ ದಿನಗಳಲ್ಲಿ ಬಹುತೇಕ ಶಾಂತಿ ನೆಲೆಸಿದಂತಿದ್ದರೂ ಅಲ್ಲಿನ ಪರಿಸ್ಥಿತಿ ಯಾವಾಗಲೂ ಬೂದಿ ಮುಚ್ಚಿದ ಕೆಂಡದಂತೇ ಇತ್ತು. ಚೀನಾ ಒಳಗೊಳಗೇ ಕುದಿಯುತ್ತಲೇ ಇತ್ತು. ಕೆಲವೊಮ್ಮೆ ಅರುಣಾಚಲ ಪ್ರದೇಶದ ಭೂ ಭಾಗ ತನ್ನದೆನ್ನುತ್ತಿತ್ತು. ಕೆಲವು ಸಲ ಸಿಕ್ಕಿಂ ಬಳಿಯ ಗಡಿಯ ಕ್ಯಾತೆ ತೆಗೆಯುತ್ತಲೇ ಇತ್ತು. ಈಗ ಲಡಾಕ್ ಪ್ರದೇಶದ ಗಲ್ವಾನ್ (Galwan) ಕಣಿವೆಯ ಪ್ರದೇಶಲ್ಲಿರುವ ಭೂಪ್ರದೇಶಗಳು ತನ್ನದೆನ್ನುವ ಮೂರ್ಖವಾದ ಮಾಡುತ್ತಿದೆ. ಭಾರತವು ಚೀನಾ ಜೊತೆಗೆ ಸುಮಾರು ೩೦೦೦ ಕಿ.ಮೀ.ಗೂ ಅಧಿಕ ಗಡಿಯನ್ನು ಹಂಚಿಕೊಂಡಿದೆ.

ಉಭಯ ದೇಶಗಳ ಸೈನಿಕರ ತಿಕ್ಕಾಟಕ್ಕೆ ಕಾರಣವಾಗಿರುವುದು ರಸ್ತೆ ನಿರ್ಮಾಣ. ಗಡಿಯ ಸಮೀಪ, ನಮ್ಮದೇ ನೆಲದಲ್ಲಿ ರಸ್ತೆ ನಿರ್ಮಿಸುವುದಕ್ಕೂ ಚೀನಾ ಸದಾ ಆಕ್ಷೇಪ ತೆಗೆಯುತ್ತದೆ. ಈಗ ಚೀನಾದ ಆಕ್ಷೇಪಕ್ಕೆ ಕಾರಣವಾಗಿರುವುದು ದರ್ಬುಕ್‌- ಶಾಯಕ್‌- ದೌಲತ್‌ ಬೇಗ್‌ ಓಲ್ಡೀ ರಸ್ತೆ (ಡಿಎಸ್‌ಡಿಬಿಒ). ಇದು ಸುಮಾರು 255 ಕಿಲೋಮೀಟರ್‌ ಉದ್ದವಾಗಿದೆ. ಇದು ಎಷ್ಟು ಪ್ರಮುಖ ಎಂದರೆ, ಇದು ದೌಲತ್‌ ಬೇಗ್‌ ಓಲ್ಡೀ ವಿಮಾನ ನಿಲ್ದಾಣದಿಂದ ಲೇಹ್‌ ನಡುವಿನ ಪ್ರಯಾಣ ಸಮಯವನ್ನು 2 ದಿನಗಳಿಂದ 6 ಗಂಟೆಗಳಿಗೆ ಇಳಿಸುತ್ತದೆ. ಇದು ಗಲ್ವಾನ್‌ ನದಿಯ ಹಾಗೂ ವಾಸ್ತವಿಕ ಗಡಿರೇಖೆಯ ಪಕ್ಕದಲ್ಲೇ ಹಾದುಹೋಗುತ್ತದೆ. ಕ್ಸಿನ್‌ಜಿಯಾಂಗ್‌ ಮತ್ತು ಟಿಬೆಟ್‌ ನಡುವಿನ ಕಾರಕೋರಂ ಹೆದ್ದಾರಿ ಹಾದುಹೋಗಿರುವ ಆಕ್ಸಾಯ್‌ ಚಿನ್‌ ಪ್ರದೇಶವೂ ಈ ಭಾರತ ನಿರ್ಮಿತ ರಸ್ತೆಯ ಪಕ್ಕದಲ್ಲೇ ಇರಲಿದೆ. ಯುದ್ಧ ಸಂಭವಿಸಿದರೆ ಭಾರತಕ್ಕೆ ತನ್ನ ಸೇನೆಯನ್ನು ಕ್ಷಿಪ್ರ ಅವಧಿಯಲ್ಲಿ ಇಲ್ಲಿಗೆ ಕಳುಹಿಸಲು ಸಾಧ್ಯವಾಗುತ್ತದೆ. ಇದರಿಂದ ಚೀನಾಕ್ಕೆ ಆತಂಕ ಉಂಟಾಗಿದ್ದು, ರಸ್ತೆ ನಿರ್ಮಾಣಕ್ಕೆ ಕ್ಯಾತೆ ತೆಗೆಯುತ್ತಿದೆ.

ಲಡಾಕ್ ನ್ನು ಕೇಂದ್ರಾಡಳಿತ ಪ್ರದೇಶ ಎಂದು ಭಾರತವು ಘೋಷಿಸಿದ ಬಳಿಕ ಅಲ್ಲಿ ತೀವ್ರಗತಿಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಕಣಿವೆ ಪ್ರದೇಶಗಳಲ್ಲಿ ರಸ್ತೆಗಳು ನಿರ್ಮಾಣವಾಗುತ್ತಿವೆ. ಇದನ್ನು ನೋಡಲಾರದ ಚೀನಾವು ಈಗ ಈ ಭೂಭಾಗವು ತನ್ನದೆಂದು ಹೇಳಿ ಕೋಳಿ ಜಗಳ ಮಾಡುತ್ತಿದೆ. ಮೊನ್ನೆ ನಡೆದ ಹಲ್ಲೆಗಳು ಬಂದೂಕಿನಿಂದ ಮಾಡಿದವುಗಳಲ್ಲ. ೧೯೯೬ರ ಒಂದು ಒಪ್ಪಂದದಂತೆ ಭಾರತ-ಚೀನಾ ದೇಶಗಳ ಸೈನಿಕರು ಗಡಿಯನ್ನು ಕಾಯುವಾಗ ಬಂದೂಕು ಹಿಡಿಯುವಂತಿಲ್ಲ. ಯಾವುದೇ ದೇಶ ಮೊದಲ ಗುಂಡು ಹಾರಿಸುವಂತಿಲ್ಲ ಎಂದು ಒಪ್ಪಂದವಾಗಿದೆ. ಅದಕ್ಕಾಗಿಯೇ ಚೀನಾ ಸೈನಿಕರು ಬೆಟ್ಟದ ಮೇಲಿನ ಆಯಕಟ್ಟಿನ ಸ್ಥಳಗಳಲ್ಲಿ ಕುಳಿತು ದೊಡ್ಡ ದೊಡ್ಡ ಕಲ್ಲು ಹಾಗೂ ಸಿಮೆಂಟ್ ನಿಂದ ಮಾಡಿದ ಸಲಾಖೆಗಳಿಂದ ನಮ್ಮ ಯೋಧರನ್ನು ಅನ್ಯಾಯವಾಗಿ ಕೊಂದರು. ಅಲ್ಲಿಯೇ ಹರಿಯುತ್ತಿದ್ದ ನದಿಗೆ ದೂಡಿ ಹಾಕಿದರು. ಕೊರೆಯುವ ಚಳಿಯಲ್ಲಿ ನಮ್ಮ ಸೈನಿಕರು ತಮ್ಮ ಜೀವವನ್ನು ದೇಶಕ್ಕಾಗಿ ಬಲಿದಾನ ಮಾಡಿದರು. ಇದು ಪೂರ್ವ ನಿಯೋಜಿತ ಕೃತ್ಯವೇ ಆಗಿತ್ತು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.

ಕಳೆದ ಕೆಲವು ತಿಂಗಳಿಂದ ಅನೇಕ ಆಕ್ರಮಣಕಾರಿ ನಡೆಗಳನ್ನು ಚೀನಾ ಪ್ರದರ್ಶಿಸಿದೆ. ಹಾಂಕಾಂಗ್‌ನಲ್ಲಿ ಅಸ್ತಿತ್ವದಲ್ಲಿದ್ದ ಒಂದು ದೇಶ ಎರಡು ವ್ಯವಸ್ಥೆಯಾದ ಕಾನೂನಿಗೆ ಚೀನಾದ ರಬ್ಬರ್‌ಸ್ಟಾಂಪ್‌ ಸಂಸತ್ತು ಒಪ್ಪಿಗೆ ನೀಡಿದೆ. ಅದರರ್ಥ ಹಾಂಕಾಂಗ್‌ನ ಸ್ವಾಯತ್ತ ಸ್ಥಾನಮಾನವನ್ನು ಚೀನಾ ಅಮಾನ್ಯ ಮಾಡಿದೆ. ದಕ್ಷಿಣ ಚೀನಾ ಸಮುದ್ರದಲ್ಲೂ ತನ್ನ ಆಕ್ರಮಣಶೀಲತೆಯನ್ನು ಪ್ರದರ್ಶಿಸಿದೆ. ಇಲ್ಲಿರುವ ಬಹುತೇಕ ದ್ವೀಪಗಳ ಮೇಲೆ ಹಕ್ಕು ಸಾಧಿಸಿರುವ ಚೀನಾ ಅವುಗಳಿಗೆ ತನ್ನದೇ ಹೆಸರುಗಳನ್ನು ಇಟ್ಟಿದೆ. ಇಡೀ ದಕ್ಷಿಣ ಚೀನಾ ಸಮುದ್ರ ತನ್ನದೇ ಎನ್ನುವ ರೀತಿಯಲ್ಲಿ ವರ್ತಿಸಲಾರಂಭಿಸಿದೆ. ಇದು ಆಗ್ನೇಯ ಏಷ್ಯಾದ ಬಹುತೇಕ ರಾಷ್ಟ್ರಗಳಿಗೆ ಎಚ್ಚರಿಕೆ ಗಂಟೆಯಾಗಿದೆ.

ಭಾರತ ಮತ್ತು ಚೀನಾದ ಪ್ರಕ್ಷುಬ್ಧ ಪರಿಸ್ಥಿತಿಯ ನಡುವೆ ಭಾರತದ ಗಡಿಯಲ್ಲಿನ ಮೂರು ಪ್ರದೇಶಗಳನ್ನು ತನ್ನ ಪ್ರದೇಶ ಎಂದು ತೋರಿಸುವ ಹೊಸ ವಿವಾದಾತ್ಮಕ ನಕ್ಷೆಯನ್ನು ನೆರೆಯ ನೇಪಾಳ ಸಂಸತ್ ಸರ್ವಾನುಮತದಿಂದ ಅನುಮೋದಿಸಿದೆ. ಹೊಸ ನಕ್ಷೆಯ ಪ್ರಕಾರ ಲಿಂಪಿಯಾಧುರಾ, ಲಿಪುಲೆಖ್ ಮತ್ತು ಕಾಲಾಪಾನಿ ನೇಪಾಳಕ್ಕೆ ಸೇರಿದ್ದು ಎಂದು ತೋರಿಸಲಾಗಿದೆ. ಈ ಹೊಸ ತಿದ್ದುಪಡಿ ನಕ್ಷೆಗೆ ಸದನದ 57 ಸದಸ್ಯರೂ ಮಸೂದೆ ಪರವಾಗಿಯೇ ಮತ ಚಲಾಯಿಸಿದ್ದಾರೆ. ಹೀಗಾಗಿ ನೇಪಾಳ ಪರೋಕ್ಷವಾಗಿ ಚೀನಾಕ್ಕೆ ಬೆಂಬಲ ನೀಡಿದೆ. ನೇಪಾಳದ ಈ ನಡೆ ಭಾರತಕ್ಕೆ ದ್ರೋಹ ಎಸಗುವಂತಾಗಿದೆ.

ಇಡೀ ವಿಶ್ವವೇ ಮಾರಕ ಕೊರೊನಾ ವೈರಸ್ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಹೋರಾಟ ನಡೆಸುತ್ತಿದೆ. ಆದ್ರೆ ಕೊರೊನಾ ವೈರಸ್ ಉಗಮ ಸ್ಥಾನವಾಗಿರುವ ಚೀನಾ ಭಾರತದೊಂದಿಗೆ ಗಡಿಯಲ್ಲಿ ಕ್ಯಾತೆ ತೆಗೆದಿದೆ.

ಭಾರತದಲ್ಲಿ ಈಗಾಗಲೇ ಬಾಯ್ಕಟ್ ಚೀನಾ ಅಭಿಯಾನ ನಡೆಯುತ್ತಿದೆ. ಗಾಲ್ವನ್ ಗಡಿಯಲ್ಲಿ ಜೂನ್.15 ಮತ್ತು 16ರಂದು ಉಭಯ ರಾಷ್ಟ್ರಗಳ ಸೇನೆಗಳು ಮುಖಾಮುಖಿಯಾಗಿ ಘರ್ಷಣೆ ನಡೆದಿದ್ದು, ಈ ಹಿನ್ನಲೆಯಲ್ಲಿ ದೇಶದಲ್ಲಿ ಬಾಯ್ಕಟ್ ಚೀನಾ ಅಭಿಯಾನ ಮತ್ತಷ್ಟು ಚುರುಕು ಪಡೆದುಕೊಂಡಿದೆ.

ಚೀನಾದ ಗಡಿ ಉಪಟಳ ಹೆಚ್ಚುತ್ತಿದೆ. ಜತೆಗೆ ನೆರೆಯ ನೇಪಾಳವನ್ನೂ ಚೀನಾ ಭಾರತದ ಮೇಲೆ ಛೂ ಬಿಟ್ಟು ಗಡಿ ತಂಟೆ ಎಬ್ಬಿಸಿದೆ. ಜತೆಗೆ ಬಾಯಿ ಮಾತಿನಲ್ಲಿಶಾಂತಿಯ ಮಂತ್ರ ಪಠಿಸುತ್ತಲೇ ಚೀನಾ ಮಗ್ಗುಲಮುಳ್ಳಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ‘ಡ್ರ್ಯಾಗನ್‌ ದರ್ಪ’ಕ್ಕೆ ಕಡಿವಾಣ ಹಾಕುವುದು ಭಾರತಕ್ಕೆ ಅನಿವಾರ್ಯವಾಗಿದೆ.

ಲೇಖಕರು: ✍. ಅರುಣ್ ಕೂರ್ಗ್

ಎಲ್ಲವನ್ನು ಜಯಿಸಬಲ್ಲೆ…. ಎನ್ನುವ ಭ್ರಮೆಯಿಂದ ಹಿರಿಯರಿಂದ ಬಂದ ಕೃಷಿಗೆ ತಿಲಾಂಜಲಿ ಇಟ್ಟು….!!!!

ಎಲ್ಲವನ್ನು ಜಯಿಸಬಲ್ಲೆ…. ಎನ್ನುವ ಭ್ರಮೆಯಿಂದ ಹಿರಿಯರಿಂದ ಬಂದ ಕೃಷಿಗೆ ತಿಲಾಂಜಲಿ ಇಟ್ಟು….!!!!

ಕೃಷಿ ಮರೆತವರು, ಕೃಷಿ ಭೂಮಿ ಪಾಳು ಬಿಟ್ಟವರು, ಕೃಷಿಯನ್ನು ಕಾಲ ಕಸದಂತೆ ಕಂಡವರು ಕೃಷಿಭೂಮಿಯನ್ನು ಕೇವಲ ಹಣಕ್ಕಾಗಿ ಮಾರಿಕೊಂಡವರು ಮತ್ತೆ ಯೋಚಿಸಬೇಕಾಗಿದೆ.. !

ಒಂದು ಕಾಲದಲ್ಲಿ ನಮಗೆ ಬದುಕಲು ಕೃಷಿಯೇ ಆಧಾರ ಎಂದು ಭೂಮಿ ಪಡೆದುಕೊಂಡ ಜನ, ಇಂದು ಅದು ಪೂರೈಸುವುದಿಲ್ಲ ಎಂದು ಕೃಷಿ ಮಾಡದೆ ಭೂಮಿಯನ್ನು ಪಾಳು ಬಿಟ್ಟು, ಬೇರೆ ವೃತ್ತಿ ಮಾಡುತ್ತಿದ್ದಾರೆ.

೫೦ ಲಕ್ಷ ಎಕರೆ ಕೃಷಿ ಭೂಮಿ ರಾಜ್ಯದಲ್ಲಿ ಪಾಳು ಬಿದ್ದಿರುವ ಬಗ್ಗೆ ವರದಿಗಳಿವೆ. ರಾಜ್ಯದಲ್ಲಿ ಹಲವು ಕಾರಣಗಳಿಗಾಗಿ ಕೃಷಿ ಭೂಮಿ ಪಾಳು ಬಿದ್ದಿದೆ. ಈ ಭೂಮಿ ಸದ್ಬಳಕೆ ಕುರಿತು ನೀತಿ ರೂಪಿಸುವ ಜವಾಬ್ದಾರಿ ಕೃಷಿ ಬೆಲೆ ಆಯೋಗದ ಮೇಲಿದೆ. ಕೃಷಿ ಕ್ಷೇತ್ರದಲ್ಲಿ ಹೊಸ ತಲೆಮಾರು ಆಸಕ್ತಿ ತೋರುತ್ತಿಲ್ಲ. ಇತರ ಉದ್ಯೋಗಗಳಿಗೆ ಹೋಲಿಸಿದಾಗ ಕೃಷಿ ಉತ್ಪತ್ತಿ ತುಂಬಾ ಕಡಿಮೆ ಇದೆ.

ನಮ್ಮ ಭಾರತ ಕೃಷಿ ಪ್ರಧಾನ ದೇಶ. ನಮಗೆ ಕೃಷಿಯೇ ಜೀವಾಳ, ಹಾಗಾಗಿಯೇ ರೈತ ನಮ್ಮ ದೇಶದ ಬೆನ್ನೆಲುಬು ಎಂದು ಕರೆಯುತ್ತೇವೆ. ಆದರೆ ಇತ್ತೀಚಿನ ದಿನಗಳಲ್ಲಿ ಹವಾಮಾನ ವೈಪರಿತ್ಯ, ಬರಗಾಲ, ಅಪಾರ ಮಳೆ ಸೇರಿದಂತೆ ಹತ್ತಾರು ಸಮಸ್ಯೆಗಳಿಂದ ಕೃಷಿಕರು ತತ್ತರಿಸಿ ಹೋಗಿದ್ದಾರೆ. ಭೂಮಿ ಎಂದರೆ ಏನೆಂದು ನಾವು ಅರ್ಥ ಮಾಡಿಕೊಳ್ಳಬೇಕು. ಹಾಗೆ ಆಗುವವರೆಗೆ ನಾವು ಯಾವುದರ ಜೊತೆಗೂ ಅರ್ಥಮೂರ್ಣ ಸಂಬಂಧವನ್ನು ಸ್ಥಾಪಿಸಿಕೊಳ್ಳಲಾರೆವು.

ಇವತ್ತು ಕೃಷಿಗೆ ವ್ಯಾಪಕ ಪ್ರಚಾರ, ಒತ್ತು ಸಿಗುತ್ತಿದೆ. ಕೃಷಿಕನಿಗೆ ಸಮ್ಮಾನ, ಪ್ರಶಸ್ತಿಗಳೂ ಲಭಿಸುತ್ತವೆ. ಆದರೆ “ನಾನು ಕೃಷಿಕ ನನ್ನ ಮಗ ಕೃಷಿಕನಾಗುವುದು ಬೇಡ” ಎಂಬ ಮನೋಭಾವ ಬೆಳೆಯುತ್ತಿದೆ. ಸಾಮಾಜಿಕ ಸ್ಥಾನಮಾನಗಳು, ಕೌಟುಂಬಿಕ ಭಾಗ್ಯಗಳು ಗತಕಾಲದ ವೈಭವಗಳಾಗುತ್ತಿವೆ.

ಇಂದಿನ ಆಧುನಿಕ ಯುಗದಲ್ಲಿ, ಕೃಷಿಕನೆಂದರೆ ಉದ್ಯಮಿಯೆಂದೇ ಅರ್ಥ. ಒಂದು ಕಾಲದಲ್ಲಿ ಇಲ್ಲಿ ಚೆನ್ನಾಗಿ ಉತ್ತಿ-ಬಿತ್ತಿ ಬೆಳೆದ ನಿಜ ಅರ್ಥದ ರೈತರೆಲ್ಲ ಈಗ ಇಲ್ಲ. ಅವರ ಮಕ್ಕಳೂ ಇಲ್ಲ.

ದೇಶದ ಪ್ರತೀ ಗ್ರಾಮ ಗ್ರಾಮಗಳಲ್ಲಿ ಒಂದಿನಿತು ಕೃಷಿ ಭೂಮಿಯೂ ಬಂಜರು ಬೀಳದಂತೆ, ಒಂದಿಂಚ್ಚು ಭೂಮಿಯೂ ಅನ್ಯ ಉದ್ದೇಶಗಳಿಗೆ ಪರಭಾರೆಯಾಗದಂತೆ ಸಾಧ್ಯವಾದಷ್ಟು ತಡೆಯೋಣ. ಭೂಮಿಯನ್ನು ಮತ್ತೆ ಹಸಿರು ಹಸುಗಳಿಂದ ಸಮೃದ್ಧಗೊಳಿಸುವ ಸಂಕಲ್ಪವಾಗಲಿ.

ಕೃಷಿ-ನಿಸರ್ಗ ಮನುಷ್ಯನ ಮೂಲಭೂತ ಅಂಶಗಳಲ್ಲೊಂದು. ಮಾನವ ಇತಿಹಾಸದ ಪುಟಗಳನ್ನು ತೆರೆಯುತ್ತ ಹೋದಾಗ ನಮ್ಮ ವೈಜ್ಞಾನಿಕವೆಂದು ಹೇಳಿಕೊಳ್ಳುವ ಸಂಶೋಧನೆಗಳು, ಅಭಿವೃದ್ಧಿ ನಮಗೇ ಅರಿವಿಲ್ಲದಂತೆ ಬದುಕನ್ನು ಹಳಿ ತಪ್ಪಿಸಿವೆ. ಅದೇ ಸಂರ್ಭದಲ್ಲಿ ಹಳ್ಳಿಯ ಬಡ ರೈತ, ಬಡಗಿ, ಕಮ್ಮಾರ, ಚಮ್ಮಾರರು ಕೈಗೊಳ್ಳುವ ಪುಟ್ಟ ಪುಟ್ಟ ಶೋಧಗಳು ಬದುಕಿನ ಮಾರ್ಗದಲ್ಲಿ ಮಹತ್ತರ ಬದಲಾವಣೆಗೆ ಕಾರಣವಾಗುತ್ತವೆ. ಇಂಥವೆಲ್ಲ ಬದಲಾವಣೆಗಳು ಸುತ್ತಲಿನ ಪರಿಸರದಿಂದ ಹೊರತಾಗಿ ನಡೆಯುವುದಿಲ್ಲ. ಇಂಥ ಸಾಧನೆಯ ಹಿಂದೆ ನಿಂತು ಇಡೀ ಜೀವನವನ್ನು ಸವೆಸುವ, ಮನುಕುಲಕ್ಕಾಗಿ ಮನೆ-ಮನದ ಸುಖವನ್ನೇ ತ್ಯಾಗಮಾಡುತ್ತಿರುವ ‘ದೇಸಿ ವಿಜ್ಞಾನಿ’ಗಳ ಸಮುದಾಯ ಸಂಖ್ಯಾ ದೃಷ್ಟಿಯಿಂದ ಬಹಳಷ್ಟು ದೊಡ್ಡದಿದೆ.

ಯಾರೂ ಕೃಷಿ ಭೂಮಿಯನ್ನು ಮಾರಾಟ ಮಾಡಬಾರದು. ತಮಗೆ ಸಾಗುವಳಿ ಕೃಷಿ ಮಾಡುವುದು ಸಾಧ್ಯವಿಲ್ಲವಾದರೆ ಅದನ್ನು ಮಾಡುವ ಆಸಕ್ತರಿಗೆ ಬಿಟ್ಟು ಕೊಡಬೇಕು. ಈ ಹಿಂದಿನ ಭೂ ಸುಧಾರಣಾ ಕಾಯಿದೆಯಂತೆ ಪಡೆದ ಭೂಮಿ ಪಾಳು ಬಿದ್ದಿದ್ದರೆ ಅದನ್ನು ತಕ್ಷಣ ಸರಕಾರ ಸ್ವಾದೀನ ಪಡಿಸಿ ಬೇಸಾಯ ಮಾಡುವವರಿಗೆ ಕೊಡಬೇಕು.

ಈ ಕೊರೊನಾ ನಮಗೆ ಮತ್ತೆ ಧಾವಂತದ ಬದುಕಿನಿಂದ ಹಿಂದೆ ಸರಿಯುವ ಪಾಠ ಹೇಳುತ್ತಿದೆ.ದುಡ್ಡೇ ಬದುಕು, ದುಡ್ಡಿನಿಂದಲೇ ಸರ್ವಸ್ವ ದುಡ್ಡೊಂದಿದ್ದರೆ ಎಲ್ಲವನ್ನು ಜಯಿಸಬಲ್ಲೆ…. ಎನ್ನುವ ಭ್ರಮೆಯಿಂದ, ಹಿರಿಯರಿಂದ ಬಂದ ಕೃಷಿಗೆ ತಿಲಾಂಜಲಿ ಇಟ್ಟು…. ಮನೆಯ ಮಕ್ಕಳನ್ನೆಲ್ಲಾ ಐ.ಟಿ- ಬಿ.ಟಿಯ ವರ್ತುಲದೊಳಗೆ ತಳ್ಳಿ, ಭೂಮಿಯನ್ನು ಹಡ್ಲು ಬಿಟ್ಟು ದ್ರೋಹ ಮಾಡಿದ ಜನ ಈಗ ಯೋಚಿಸಲೇಬೇಕಾದ ಪರಿಸ್ಥಿತಿ ಬಂದಿದೆ.

ಅನ್ನಂ ಹಿ ಧಾನ್ಯಸಂಜಾತಂ ಧಾನ್ಯಂ ಕೃಷ್ಯಾ ವಿನಾ ನ ಚ |
ತಸ್ಮಾತ್ ಸರ್ವಂ ಪರಿತ್ಯಜ್ಯ ಕೃಷಿಂ ಯತ್ನೇನ ಸಾಧಯೇತ್ ||

ಅನ್ನವು ಧಾನ್ಯಗಳಿಂದ ಲಭ್ಯವಾಗುತ್ತದೆ. ಕೃಷಿಯನ್ನು ಮಾಡದಿದ್ದಲ್ಲಿ ಧಾನ್ಯಗಳಿಲ್ಲ. ಆದುದರಿಂದ ಎಲ್ಲವನ್ನು ತೊರೆದು ಪ್ರಯತ್ನ ಪೂರ್ವಕವಾಗಿ ಕೃಷಿಯನ್ನು ಮಾಡಬೇಕು-ಮಾಡಿಸಬೇಕು. ಹೀಗೆ ಕೃಷಿಯ ಮಹತ್ವವನ್ನು ಪೂರ್ವಜರು ಹೇಳಿದ್ದಾರೆ.

ನಮ್ಮ ಉಳಿವಿಗೆ, ಜೀವನಕ್ಕೆ ಅಗತ್ಯವಾಗಿರುವ ಅನ್ನಕ್ಕಾಗಿ ಕೃಷಿ ಮಾಡುವುದು ಅನಿವಾರ್ಯ. ಇಂತಹ ಮಹತ್ವದ ಕೃಷಿಯ ಉಗಮ ಹಾಗೂ ಬೆಳವಣಿಗೆಯ ಕಡೆ ಒಮ್ಮೆ ಕಣ್ಣು ಹಾಯಿಸುವುದು ಭಾರತೀಯ ಕೃಷಿ ಪರಂಪರೆಯನ್ನು ನಾವು ಅರಿಯುವಲ್ಲಿ ಸಹಕಾರಿಯಾಗುತ್ತದೆ.

ಪರಿಸರಕ್ಕೇ ಪರಕೀಯನಾಗಿ ನಿಲ್ಲುವ ಯಾವನೇ ವ್ಯಕ್ತಿಯ ಅಸ್ತಿತ್ವ ಶೂನ್ಯವೇ. ಬದುಕಿನ ಜೀವಸೆಲೆ ಬತ್ತಿಹೋದ ಮೇಲೆ ಉಳಿಯುವುದೇನು? ಇದಕ್ಕಿರುವ ಏಕೈಕ ಪರಿಹಾರ ನಿಸರ್ಗಾರಾಧನೆ. ಕೃಷಿ ಎಂಬುದು ತಮಸ್ಸಲ್ಲ, ಅದು ತಪಸ್ಸು. ಹೊಲಗಳು ಅಧ್ಯಾತ್ಮಿಕ ತಪೋವನ. ಅದು ವ್ಯಸನಗಳಿಂದ ಬರಡಾಗಬಾರದು. ನಿರ್ಜೀವ ಯಂತ್ರಗಳು ನಮ್ಮ ಹಸಿವನ್ನು ನೀಗಿಸಲಾರವು. ನಿಸರ್ಗದೊಂದಿಗಿನ ಮಧುರ ಭಾಂಧ್ಯವ್ಯದ ಬೆಸುಗೆಯೊಂದೇ ನಮ್ಮನ್ನು ತೃಪ್ತ ಸ್ಥಿತಿಗೆ ಒಯ್ಯುವುದು.

ಲೇಖಕರು: ✍. ಅರುಣ್ ಕೂರ್ಗ್

ಕೋವಿಡ್-19 ವಿರುದ್ಧ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಆಯುಷ್ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ

ಕೋವಿಡ್-19 ವಿರುದ್ಧ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಆಯುಷ್ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ

ಕೋವಿಡ್-19 ಮಹಾಮಾರಿ ವಿರುದ್ಧ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಆಯೂಷ್ ಇಲಾಖೆಯ ತಜ್ಞ ವೈದ್ಯರು ಅಭಿಪ್ರಾಯ ಒಳಗೊಂಡ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದ್ದು, ಮಾಹಿತಿ ಇಂತಿದೆ.

ದೇಶದ ಪ್ರಾಚೀನ ವೈದ್ಯಕೀಯ ಪದ್ಧತಿಯಾದ ಆಯುರ್ವೇದದ ಚರಕ ಮತ್ತು ಸುಶುೃತ ಸಂಹಿತೆಗಳು ಸಾಂಕ್ರಾಮಿಕ ಪಿಡುಗಿನ ಬಗ್ಗೆ ಸುಮಾರು 2500 ಸಾವಿರ ವರ್ಷಗಳ ಹಿಂದೆಯೇ ವಿವರಿಸಿರುವುದು ವಿಶೇಷವಾಗಿದೆ. “ಜನಪದೋಧ್ವಂಸ” ಎಂಬ ಅಧ್ಯಾಯದಲ್ಲಿ ಸಾಂಕ್ರಾಮಿಕ ರೋಗಗಳಿಗೆ ಕಾರಣಗಳನ್ನು ಹೇಳುತ್ತಾ ಪರಿಸರ ಮಾಲಿನ್ಯ ಅಧರ್ಮವನ್ನಾಚರಿಸುವುದು ಮತ್ತು ಸಾಮಾಜಿಕ ನಿಯಮಗಳನ್ನು ಪಾಲಿಸದೇ ಇರುವುದು, ಶೀನುವಾಗ, ಆಕಳಿಸುವಾಗ, ನಗುವಾಗ, ಮುಖವನ್ನು ಮುಚ್ಚಿಕೊಳ್ಳುವುದು ಖಾಯಿಲೆಯಿಂದ ಪೀಡಿತವಾಗಿರುವ ಪ್ರದೇಶವನ್ನು ತೊರೆಯುವುದು, ಸಾಮಾಜಿಕ ಅಂತರವನ್ನು ಕಾಪಾಡುವುದು ಹೀಗೆ ಅನೇಕ ಉಲ್ಲೇಖಗಳು ಸಾಂಕ್ರಾಮಿಕ ರೋಗಗಳನ್ನು ದೂರ ಮಾಡಲು ವಿವರಿಸಲಾಗಿದೆ.

ದಿನಚರ್ಯೆ, ಋತುಚರ್ಯೆ, ಸಾಮಾಜಿಕ ನಿಯಮಗಳನ್ನು ಪಾಲಿಸುವುದು, ರಸಾಯನಗಳನ್ನು ಸೇವಿಸುವುದು, ರೋಗ ತಡೆಗಟ್ಟಲು ಹೆಚ್ಚು ಒತ್ತು ನೀಡಿ ಹೇಳಿರುತ್ತಾರೆ. ಕೊರೊನಾ ವೈರಸ್ 65-125 ಎನ್‍ಎಂ ನಷ್ಟು ಸೂಕ್ಷ್ಮವಾಗಿದ್ದು, ಮನುಷ್ಯನ ದೇಹದೊಳಗೆ ಸೇರಿ ಅನೇಕ ಪಟ್ಟಾಗಿ ಅಪವರ್ತಿಸಿ ಉಸಿರಾಟದ ವ್ಯವಸ್ಥೆ ಹಾಳು ಮಾಡುತ್ತದೆ. ಈ ಭೂತಾಭಿಷಂಗವು ವಿಷಮ ಸನ್ನಿಪಾತ ಜ್ವರವನ್ನು ಮನುಷ್ಯರಲ್ಲಿ ಉಂಟು ಮಾಡುತ್ತದೆ. ವಿಷಮ ಸನ್ನೀಪಾತ ಜ್ವರದಲ್ಲಿ ಮೂರೂ ದೋಷಗಳು ಕುಪಿತಾವಸ್ಥೆಯಲ್ಲಿದ್ದು ಕಫಹೀನ, ಪಿತ್ತಮಧ್ಯ, ವಾತ ಅಧಿಕವಾಗಿ ಕುಪಿತಗೊಂಡಿರುತ್ತದೆ. ಜ್ವರ, ಕೆಮ್ಮು, ದಮ್ಮು, ಮೂಗು ಸೋರುವುದು, ಬಾಯಿ ಒಣಗಿಸುವುದು, ಪಾಶ್ರ್ವಶೂಲ(ನ್ಯುಮೋನಿಯಾ) ವಿಷಮ ಸನ್ನೀಪಾತ ಜ್ವರದ ಲಕ್ಷಣಗಳಾಗಿದೆ.

ಆಯುಷ್ ಪದ್ಧತಿಯಲ್ಲಿ ಅನುಸರಿಸಬೇಕಾದ ಕ್ರಮಗಳು: ಪ್ರತಿಯೊಬ್ಬರೂ ಆರೋಗ್ಯವಂತರಾಗಿರಲು ಜಠರಾಗ್ನಿ ಶಕ್ತಿಯೇ ಪ್ರಾಮುಖ್ಯವಾಗಿದ್ದು, ಅದನ್ನು ಸಮಸ್ಥಿತಿಯಲ್ಲಿಟ್ಟುಕೊಳ್ಳಲು ಸುಲಭವಾಗಿ ಜೀರ್ಣವಾಗುವ, ಜೀರ್ಣವಾದ ನಂತರ ಹಸಿವಾದಗ ಆಹಾರವನ್ನು ಸೇವಿಸುವುದು, ಪೌಷ್ಠಿಕಾಂಶಗಳುಳ್ಳ ಋತುಗಳಿಗನುಸಾರವಾಗಿ ಪ್ರಾಕೃತಿಕ ಆಹಾರವನ್ನು ಉಪಯೋಗಿಸುವುದು. ರೋಗ ತಡೆಗಟ್ಟುವಿಕೆ ಮತ್ತು ಉತ್ತಮ ಆರೋಗ್ಯವನ್ನು ಉತ್ತೇಜಿಸುವುದು.

ಕರ್ತವ್ಯಗಳು: ರೋಗ ನಿರೋಧಕ ಕಾರ್ಯತಂತ್ರ- ಮೊದಲನೆಯ ಹಂತ: ಮನೆಯನ್ನು ಕ್ರಿಮಿ ಮುಕ್ತಗೊಳಿಸಲು ಧೂಪ ಹಾಕಬಹುದಾಗಿದೆ. ರೋಗಿಯ ಬಲವನ್ನು ಹೆಚ್ಚಿಸಲು ಜಠರಾಗ್ನಿಯನ್ನು, ಧಾತ್ವಗ್ನಿಯನ್ನು, ಭೂತಾಗ್ನಿಯನ್ನು ಉತ್ತಮವಾಗಿಡಬೇಕಾಗಿರುತ್ತದೆ ಸರಿಯಾದ ಸಮಯಕ್ಕೆ ಮಲಗಿ ಏಳುವುದು, ಪೌಷ್ಟಿಕ ಆಹಾರ ಸೇವಿಸುವುದನ್ನು ರೂಢಿಸಿಕೊಳ್ಳಬೇಕಿದೆ.

ಯೋಗಶಾಸ್ತ್ರದಲ್ಲಿ ಹೇಳಿದ ಯಮ, ನಿಯಮ, ನಿತ್ಯ ಆಸನಗಳನ್ನು, ಪ್ರಾಣಾಯಾಮ ಮತ್ತು ಧ್ಯಾನವನ್ನು ಮಾಡುವುದರಿಂದ ಮನಸ್ಸು ಶಾಂತವಾಗುವುದಲ್ಲದೇ, ಉಸಿರಾಟದ ವ್ಯವಸ್ಥೆಯನ್ನು ಬಲಗೊಳಿಸುತ್ತದೆ. ಗಿಡಮೂಲಿಕೆಗಳಿಂದ ಮಾಡಿದ ಚಹಾ ಸೇವಿಸುವುದು. ಅಮೃತಷಡಂಗಮ್ ಅಥವಾ ಷಡಂಗ ಪಾನೀಯ ಕಷಾಯವನ್ನು, ಲಾವಂಚ ಹುಲ್ಲಿನಿಂದ ಕುದಿಸಿದ ನೀರನ್ನು ಕುಡಿಯುವುದು. ಅಶ್ವಗಂಧಾ ಬೆರೆಸಿದ ಹಾಲಿನೊಂದಿಗೆ ಹರಿಶಿನವನ್ನು ಸೇರಿಸಿ ಕುದಿಸಿ ಸೇವಿಸುವುದನ್ನು ನಿತ್ಯ ರೂಢಿಸಿಕೊಳ್ಳಬೇಕಿದೆ.
ಯುನಾನಿ ಔಷಧದಲ್ಲಿ ಆರೋಗ್ಯವನ್ನು ಕಾಪಡಿಕೊಳ್ಳಲು ಉಸಿರಾಟದ ವ್ಯವಸ್ಥೆಯನ್ನು ಸರಿಪಡಿಸಿಕೊಳ್ಳಲು ಆರ್ಕ್-ಎ-ಅಜೀಬ್ ಎಂಬುದು ಉತ್ತಮವಾಗಿದ್ದು ಇದನ್ನು ಇನ್ಹಲೇಷನ್ ಮತ್ತು ಗಾಗ್ರ್ಲಿಂಗ್‍ಗೆ ಬಳಸಬಹುದು. ನಿಂಬೆಹಣ್ಣಿನ ರಸವನ್ನು ಬಿಸಿನೀರಿನಲ್ಲಿ ಹಾಕಿ ದಿನಕ್ಕೊಂದು ಎರಡು ಬಾರಿ ಸೇವಿಸುವುದು. ಹೋಮಿಯೋಪತಿಯಲ್ಲಿ ಆರ್ಸೆನಿಕಮ್ ಆಲ್ಬಂ-30 ಎಂಬುದು ಕರೋನ ವೈರಸ್‍ನ ರೋಗವನ್ನು ಕಡಿಮೆ ಮಾಡಲು ಹಾಗೂ ಇಮ್ಯೂನ್ ಬೂಸ್ಟರ್ ಆಗಿ ಅಲರ್ಜಿಗಳಲ್ಲಿ ಬಳಸಬಹುದಾಗಿದೆ. ವೈದ್ಯರ ಸಲಹೆ ಪಡೆಯಬೇಕು.

ಸರ್ಕಾರದ ಸೂಚನೆಯಂತೆ 60 ವರ್ಷ ಮೇಲ್ಪಟ್ಟವರು ಹಾಗೂ 10 ವರ್ಷದೊಳಗಿನ ಮಕ್ಕಳು ರೋಗ ಬಾರದಂತೆ ಸಂಪರ್ಕ ಸಾಧಿಸದಂತೆ ಮನೆಯಲ್ಲೇ ಇರುವುದು ಒಳ್ಳೆಯದು. ಆಯುರ್ವೇದದಲ್ಲಿ ಸೂಚಿಸಿದಂತೆ ತುಪ್ಪ, ಎಳ್ಳೆಣ್ಣೆ ಅಥವಾ ತೆಂಗಿನ ಎಣ್ಣೆಯನ್ನು ಮೂಗಿನ ಎರಡು ಹೊಳ್ಳೆಗಳಿಗೆ ಎರಡೆರಡು ಹನಿಯಂತೆ ಹಾಕಿಕೊಳ್ಳುವುದು. ಒಂದು ಟೇಬಲ್ ಚಮಚ ತೆಂಗಿನ ಎಣ್ಣೆ ಅಥವಾ ಎಳ್ಳೆಣ್ಣೆಯಿಂದ ಬಾಯಿ ಮುಕ್ಕಳಿಸಿ ಹೊರಗಡೆ ಉಗಿಯುವುದು(ಗಾಗ್ರ್ಲಿಂಗ್) ಹಾಗೂ ಬಿಸಿನೀರಿನಲ್ಲಿ ಬಾಯಿಯನ್ನು ತೊಳೆದುಕೊಳ್ಳುವುದು. ನಂತರ 50 ಮಿಲೀ ಬೆಚ್ಚಗಿನ ನೀರಿನಲ್ಲಿ ಒಂದು ಚಿಟಿಕಿ ಉಪ್ಪಿನೊಂದಿಗೆ 3-5 ನಿಮಿಷಗಳ ಕಾಲ ಬಾಯಿಯಲ್ಲಿ ಹಿಡಿದಿಟ್ಟುಕೊಳ್ಳುವುದು.

30 ನಿಮಿಷಗಳ ಕಾಲ ದೇಹ ಸಡಿಲಗೊಳಿಸುವ ವ್ಯಾಯಾಮ, ಸೂರ್ಯ ನಮಸ್ಕಾರ (6 ಸುತ್ತು), ಯಾವುದಾದರೂ ನಾಲ್ಕು ಆಸನಗಳು, ಪ್ರಾಣಾಯಾಮ ಮತ್ತು ಧ್ಯಾನ ಮಾಡುವುದು. 4 ತುಳಸಿ ಎಲೆ, ನಿಂಬೆರಸ, ಒಣದ್ರಾಕ್ಷಿಯೊಂದಿಗೆ ಯಾವುದಾದರೊಂದು ಮೂಲಿಕೆಯನ್ನು ಅರ್ಧ ಗ್ರಾಂ.ನಂತೆ ಸೇರಿಸಿ (ಪ್ರತಿದಿನ ಒಂದು ಮೂಲಿಕೆ) ಗಿಡಮೂಲಿಕೆ ಚಹಾವನ್ನು ತಯಾರಿಸಿ ದಿನಕ್ಕೆ ಒಂದರಿಂದ ಎರಡು ಬಾರಿ ಸೇವಿಸುವುದು. ದಾಲ್ಚಿನ್ನಿ, ಕರಿಮೆಣಸು, ಶುಂಠಿ, ಅರಿಶಿನ, ಜೀರಿಗೆ, ಕೊತ್ತಂಬರಿ ಹಾಗೂ ಬೆಳ್ಳುಳ್ಳಿಯನ್ನು ದಿನನಿತ್ಯದ ಅಡುಗೆಯಲ್ಲಿ ಉಪಯೋಗಿಸುವುದು. ಒಂದು ಲೋಟ ಕುದಿಯುವ ಹಾಲಿಗೆ ಅರ್ಧ ಟೀ ಚಮಚ ಅರಿಶಿನ ಪುಡಿಯನ್ನು ಸೇರಿಸಿ ನಂತರ ಹಾಲನ್ನು ಎರಡು ನಿಮಿಷ ಕುದಿಸಿ ಸೋಸಿ ತಯಾರಿಸಿದ ಗೋಲ್ಡನ್ ಮಿಲ್ಕ್‍ನ್ನು ಪ್ರತಿದಿನ ರಾತ್ರಿ ಮಲಗುವ ಮುನ್ನ ಸೇವಿಸುವುದು.

ರೋಗ ನಿರೋಧಕ ಕಾರ್ಯತಂತ್ರ- ಎರಡನೆಯ ಹಂತ: ಗುರಿ: ಉತ್ತಮ ಹಸಿವು, ಉತ್ತಮ ನಿದ್ರೆ, ಮಾನಸಿಕ ಶಾಂತಿಯನ್ನು ಕಾಪಾಡಲು ಮತ್ತು ಪೋಷಕಾಂಶವುಳ್ಳ ಆಹಾರವನ್ನು ಒದಗಿಸುವುದರ ಜೊತೆಗೆ ಅಲ್ಪ ಪ್ರಮಾಣದ ಔಷಧಿಯೊಂದಿಗೆ ರೋಗ ನಿರೋಧಕ ಶಕ್ತಿಯನ್ನು ವರ್ಧಿಸುವುದು ಅಗತ್ಯ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ರಾಮಚಂದ್ರ ಅವರು ತಿಳಿಸಿದ್ದಾರೆ.

ಅನುಸರಿಸಬೇಕಾದ ಸೂಚನೆ: ಬಿಸಿನೀರನ್ನು ಆಗಾಗ್ಗೆ ಸೇವಿಸಿ. ತಣ್ಣೀರು ಕುಡಿಯಬೇಡಿ ಮತ್ತು ತಣ್ಣನೆಯ ಆಹಾರವನ್ನು ಸೇವಿಸಬೇಡಿ. ಸಾಮಾಜಿಕ ದೂರವನ್ನು ಕಾಪಡಿಕೊಳ್ಳಿ. ಫೇಸ್ ಮಾಸ್ಕ್ ಬಳಕೆ ಕಡ್ಡಾಯವಾಗಿದೆ. ಆಗಾಗ ಕೈಗಳನ್ನು ತೊಳೆಯಬೇಕು. ಸೀನುವಾಗ ಬಾಯಿ ಮತ್ತು ಮೂಗನ್ನು ಬಟ್ಟೆಯಿಂದ ಮುಚ್ಚಿ. ಯೋಗ ಮತ್ತು ದೈಹಿಕ ವ್ಯಾಯಾಮವನ್ನು ಅಭ್ಯಾಸ ಮಾಡಿ. ಶೀತ, ಕೆಮ್ಮು ಮತ್ತು ಜ್ವರ ಇರುವ ಜನರಿಂದ ದೂರವಿರಿ. ಕೋವಿಡ್-19 ರೋಗ ಲಕ್ಷಣಗಳು ಕಂಡು ಬಂದಲ್ಲಿ ವೈದ್ಯರನ್ನು ಸಂಪರ್ಕಿಸಿ. ಹೋಮಿಯೋಪತಿ ಔಷಧಿಗಳನ್ನು ತೆಗೆದುಕೊಳ್ಳುವ ಮೊದಲು ಹೋಮಿಯೋಪತಿ ವೈದ್ಯರನ್ನು ಸಂಪರ್ಕಿಸಬೇಕಿದೆ. ಹೋಮಿಯೋಪತಿ ಔಷಧಿ ಬಳಸಿರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ. ಸಲಹೆ ಪಾಲಿಸೋಣ ಕೊರೋನಾ ಮುಕ್ತ ದೇಶವನ್ನಾಗಿಸೋಣ ಎಂದು ಆಯುಷ್ ವೈದ್ಯಾಧಿಕಾರಿ ಅವರನ್ನು ಸಂಪರ್ಕಿಸಿ ಸೂಕ್ತ ಸಲಹೆ ಪಡೆಯಬಹುದಾಗಿದೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ಬಿಎಚ್.ರಾಮಚಂದ್ರ ಅವರು ತಿಳಿಸಿದ್ದಾರೆ.

ಏನೆಂದು ನಾ ಹೇಳಲಿ…. ಮಾನವನಾಸೆಗೆ ಕೊನೆಯೆಲ್ಲಿ….

ಏನೆಂದು ನಾ ಹೇಳಲಿ…. ಮಾನವನಾಸೆಗೆ ಕೊನೆಯೆಲ್ಲಿ….

ಡೈನೋಸಾರುಗಳ ಯುಗ ಏಕೆ ಅಂತ್ಯವಾಗಿರಬಹುದು? ಅವುಗಳ ಕ್ರೌರ್ಯ ಅತಿಯಾದುದರಿಂದಲೆ ಆಗಿರಬೇಕು! ಈಗಿರುವಾಗ ಮನುಕುಲದ ಸರ್ವನಾಶಕ್ಕೆ ಸೆಡ್ಡು ಹೊಡೆದಿರುವವರು ಯಾರು? ಪ್ರಾಣಿಯೂ ಅಲ್ಲ, ಪಕ್ಷಿಯೂ ಅಲ್ಲ, ಕ್ಷುದ್ರ ಜೀವಿ. ಮನೆಯ ಒಳಗೂ ಹೊರಗೂ ಗಾಳಿ ಇದ್ದಲ್ಲೆಲ್ಲ ಕಡೆ ಇದ್ದು, ಹಗಲೂ-ರಾತ್ರಿಯೂ ಭೇದಭಾವ ತೋರದೇ, ಬಡವ-ಶ್ರೀಮಂತರೆಂದು ಮುಖ-ಮುಸುಡಿ ನೋಡದೇ, ಯಾವುದೇ ವೇಷ-ಭಾಷೆಗಳನ್ನೂ ಮೀರಿ, ಎಲ್ಲರ ಒಳಹೊಕ್ಕು ನಮ್ಮೆಲ್ಲರ ಸೊಕ್ಕನ್ನು ಮುರಿಯಲು ಸೆಡ್ಡು ಹೊಡೆದು ನಿಂತಿದೆ ಈ ಕೊರೋನಾ ವೈರಸ್ಸು!
ಈ ಕೊರೋನಾ ಎಂಬ ವೈರಸ್ ಮನುಷ್ಯನ ಮನಸ್ಸನನ್ನು ಹೈರಾಣ ಮಾಡಿಬಿಟ್ಟಿದೆ. ನನ್ನ ವಿವೇಚನೆಯ ಮೂಲಕವೆ ಏನೆಲ್ಲವನ್ನು ನಿಯಂತ್ರಿಸಬಲ್ಲೆ ಎಂಬ ಅಹಂಕಾರದಲ್ಲಿದ್ದ ಮನುಷ್ಯನ ಅಂತಸತ್ವಕ್ಕೆ ಬಹುದೊಡ್ಡ ಸವಾಲಾಗಿ ಕೊರೋನಾ ವೈರಸ್ ಕಾಡುತ್ತಿದೆ. ಕೊರೋನಾ ಬಂದವರೆಲ್ಲ ಸತ್ತೆ ಹೋಗುತ್ತಾರೆಂದೂ ಅಲ್ಲ. ಎಲ್ಲ ಜ್ವರಗಳಾಗೆ ಈ ವೈರಸ್ ಜ್ವರವು ಬಾಧಿಸುತ್ತದೆ. ಜ್ವರ ಬಂದಾಗ ನಮ್ಮಲ್ಲಿ ರೋಗ ನಿರೋಧಕ ಶಕ್ತಿಯ ಪ್ರಭಾವದಿಂದ ಜ್ವರ ವಾಸಿಯಾಗುತ್ತದೆ. ಹೀಗೆ ಎಲ್ಲರಿಗೂ ಆಗುತ್ತದೆಂದಲ್ಲ. ಅವರವರ ದೇಹ ಪ್ರಕೃತಿಯನ್ನು ಅವಲಂಬಿಸಿರುತ್ತದೆ.
ಈ ಮಹಾಮಾರಿ ಮುಂದೆ ಯಾವ ಹಾದಿಯಲ್ಲಿ ಸಾಗುತ್ತದೆ ಎಂಬುದು ಸ್ಪಷ್ಟವಿಲ್ಲ. ಈ ಸಾಂಕ್ರಮಿಕ ಖಾಯಿಲೆಗಳೇ ಹಾಗೆ, ವಿಚಿತ್ರವಾಗಿ ನಡೆದುಕೊಳ್ಳುತ್ತವೆ. ೧೯೧೮ರಲ್ಲಿ ಬಂದಿದ್ದ ಸ್ಪಾನಿಷ್ ಜ್ವರ ಹೋಯಿತು ಅಂದುಕೊಳ್ಳುತ್ತಿದ್ದ ಹಾಗೆ, ಮತ್ತೆ ಎರಡನೇ ಬಾರಿ ತೀರಾ ತೀವ್ರವಾಗಿ ಎರಗಿತು. ಕೆಲವೇ ದಿನಗಳಲ್ಲಿ ಮತ್ತೆ ಹೊರಟು ಹೋಯಿತು. ಈಗಿನ ಕೊರೋನ ಕೂಡ ಹಾಗೆ. ಊಹಿಸುವುದಕ್ಕೆ ಸಾಧ್ಯವಿಲ್ಲ. ಸುಳ್ಳು ಸುದ್ದಿಗಳಿಂದ ಜನ ಪ್ಯಾನಿಕ್ ಆಗಿರುವುದು ಒಂದು ಕಡೆಯಾದರೇ, ನಮಗೇನು ಆಗಲ್ಲ ಎಂದು ನಿರ್ಲಕ್ಷ್ಯ, ಉದಾಸೀನಾದಿಂದ ಹುಂಬುತನ ಮೆರೆಯುವವರೂ ಇನ್ನೊಂದೆಡೆ.
ನೂರು ವರ್ಷಗಳ ಹಿಂದೆ ಜಗತ್ತನ್ನು ಆವರಿಸಿಕೊಂಡಿದ್ದ ಸ್ಪಾನಿಷ್ ಫ್ಲೂ ಬಲಿತೆಗೆದುಕೊಂಡವರ ಸಂಖ್ಯೆಗೆ ಹೋಲಿಸಿದರೆ ಈಗ ಕೊರೋನ ವೈರಾಣುವಿನಿಂದ ಸತ್ತವರ ಸಂಖ್ಯೆ ಇದುವರೆಗೆ ಬಹಳ ಕಡಿಮೆಯೇ.. ಆಗ ಅದು ಜಗತ್ತಿನಾದ್ಯಂತ ೫೦ ಕೋಟಿ ಜನರನ್ನು ಬಾಧಿಸಿತ್ತು. ಅಂದರೆ ಆಗಿನ ಜಗತ್ತಿನ ಜನಸಂಖ್ಯೆಯ ಶೇಕಡ ೨೭ರಷ್ಟು ಜನ ಅದರಿಂದ ತೊಂದರೆಗೊಳಗಾಗಿದ್ದರು. ಅವರಲ್ಲಿ ಸುಮಾರು ಶೇಕಡ ೧೦ರಷ್ಟು ಜನ ಸತ್ತಿದ್ದರು (ಈ ಸಂಖ್ಯೆಯ ಬಗ್ಗೆ ವಿಭಿನ್ನ ಅಂದಾಜುಗಳಿವೆ. ಇದು ಒಂದು ಸರಾಸರಿ). ಭಾರತದಲ್ಲೇ ಅಂದಾಜು ೧.೭ ಕೋಟಿ ಜನ ಇದರಿಂದ ಪ್ರಾಣ ಕಳೆದುಕೊಂಡಿದ್ದರು. ಅದಕ್ಕೆ ವ್ಯತಿರಿಕ್ತವಾಗಿ ಕೊರೋನ ವೈರಾಣುವಿನಿಂದ ಜಗತ್ತಿನಾದ್ಯಂತ ಪೀಡಿತರಾದವರ ಸಂಖ್ಯೆ ‌ಈ ಬರಹ ಬರಯುವ ಸಮಯದಲ್ಲಿ ಸಧ್ಯಕ್ಕೆ 14,39,516 ಲಕ್ಷ. ಸೋಂಕಿತರಲ್ಲಿ ಪ್ರಾಣ ಕಳೆದುಕೊಂಡವರ ಸಂಖ್ಯೆ ಸುಮಾರು 85,711. ಒಟ್ಟು ಜಗತ್ತಿನ 212 ದೇಶಗಳು ಈ ಕೊರೋನ ವೈರಾಣುವಿನಿಂದ ತತ್ತರಿಸಿ ಹೋಗಿದೆ.
ಪ್ರಕೃತಿ ಮಾತೆ ಯುಗಾದಿ ಆರಂಭಕ್ಕೆ ಮುನ್ನವೇ ತನ್ನ ತಾನು ರಕ್ಷಿಸಿಕೊಳ್ಳಲು ಮಾನವನು ತನ್ನ ಮೇಲೆ ಎಸಗುತ್ತಿರುವ ನಿರಂತರ ಅತ್ಯಾಚಾರವನ್ನು ಅಂತ್ಯವಾಗಿಸಲು ದುಷ್ಟರಿಗೆ ಪಾಠ ಕಲಿಸಲೋ ಎಂಬಂತೆ; ಪ್ರಕೃತಿಯು ಕೊರೋನ ವೈರಸ್ಸಿನ ಏಕಾಣುವಿನ ಅತ್ಯಂತ ಚಿಕ್ಕ ದೇಹಿಯಾಗಿ ರೌದ್ರ ನರ್ತನಗೈಯ್ಯುತ ಮಾನವ ಕುಲಕೋಟಿಯ ನುಂಗಿ ನೊಣೆಯುತ್ತಿರುವುದು ನೋಡಿದರೆ ಈ ಯುಗಾದಿಯು ಯುಗಾಂತ್ಯ ಅನ್ನಿಸದಿರದು!
ಭಾರತದಂತಹ ಅಧಿಕ ಜನಸಂಖ್ಯೆಯುಳ್ಳ ರಾಷ್ಟ್ರದಲ್ಲಿ ಮುನ್ನಚರಿಕೆ ಎಂಬುದು ಅತ್ಯಗತ್ಯವಾಗಿ ಬೇಕು. ಅಧಿಕ ಜನಸಾಂದ್ರತೆಯ ಭಾರತದಲ್ಲಿ ಸೋಂಕಿತ ವ್ಯಕ್ತಿಗಳಿಂದ ಇತರ ವ್ಯಕ್ತಿಗಳಿಗೆ ವೈರಸ್ ಹರಡುವಿಕೆ ಅತಿ ತೀವ್ರ. ಸೋಂಕಿತ ವ್ಯಕ್ತಿ ಎನ್ನುತ್ತಲೇ ಮಾರುದ್ದ ಓಡುವ ನಾವು, ಅದೇ ವ್ಯಕ್ತಿಯ ಬಳಿ ಇದ್ದು ಚಿಕಿತ್ಸೆ ನೀಡುವ ವೈದ್ಯರು ನರ್ಸುಗಳು ಹಾಗೂ ಇನ್ನಿತರ ವೈದ್ಯಕೀಯ ಸಿಬ್ಬಂದಿಗಳು ನಿಜವಾಗಿಯೂ ದೇವರ ಸ್ವರೂಪವೆ.
ಎಲ್ಲರೂ ಸಂಘಟಿತ ಪ್ರಯತ್ನದಲ್ಲಿ ಕರೋನಾ ಸೋಂಕಿನ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಧರ್ಮಾಂಧತೆ ಹಾಗೂ ಅಜ್ಞಾನವನ್ನು ದೂರ ಮಾಡಿ ಹೋರಾಟಕ್ಕೆ ಎಲ್ಲರೂ ಕೈ ಜೋಡಿಸಿದಾಗ ಮಾತ್ರ ಮಹಾಮಾರಿಯಿಂದ ದೂರವಾಗಲು ಸಾಧ್ಯ. ಇಲ್ಲವಾದಲ್ಲಿ ಮನುಕುಲದ ಬಹುಪಾಲು ನಾಶ ಖಂಡಿತ.
ಭಾರತ ಸರ್ಕಾರ ಹಲವಾರು ಕಠಿಣ ಕ್ರಮಗಳನ್ನು ತೆಗೆದುಕೊಂಡಿದ್ದು ಶ್ಲಾಘನೀಯ. ಕೆಲ ನಿರ್ಧಾರಗಳಿಂದ ಬಡ ಕಾರ್ಮಿಕರಿಗೆ, ದಿನಗೂಲಿ ನೌಕರರಿಗೆ ಹಾಗೆಯೇ ಎಲ್ಲಾ ವರ್ಗದವರ ಜೀವನ ನಿರ್ವಹಣೆಯಲ್ಲಿ ವ್ಯತ್ಯಯ ಉಂಟಾಗಬಹುದು. ಆದರೆ ಇದು ಇಂದು ಅನಿವಾರ್ಯವಾಗಿದೆ ಎಂಬುದನ್ನು ಎಲ್ಲರೂ ಮನಗಾಣಬೇಕು. ಏಕೆಂದರೆ ಮನುಷ್ಯ ಬದುಕಿ ಬಾಳ ಬೇಕಾದರೆ ಜೀವ ಮುಖ್ಯ ಅಲ್ಲವೆ?
ತಿಂಗಳ ಹಿಂದಿನವರೆಗೆ ಜಗತ್ತು ಅಭಿವೃದ್ಧಿಯ ಹೆಸರಲ್ಲಿ ಹೇಗೆಲ್ಲ ನಾಟ್ಯವಾಡುತ್ತಿತ್ತು? ಬದುಕಿನ ಬಗ್ಗೆ, ನಮ್ಮಲ್ಲಿರುವ ನೈಸರ್ಗಿಕ ಸಂಪನ್ಮೂಲಗಳ ಬಗ್ಗೆ ಪ್ರೀತಿ, ಕಾಳಜಿ ಇರುವ, ಮಹತ್ವ ಗೊತ್ತಿರುವವರ ಕಣ್ಣಲ್ಲಿ, ಅಭಿವೃದ್ಧಿ ಅನ್ನುವುದು ಹಗ್ಗ ಬಿಚ್ಚಿದ ಹುಚ್ಚು ಕುದುರೆಯಂತೆ ಓಡಾಡುತ್ತ, ನಿಸರ್ಗವನ್ನು ಹಾಳುಮಾಡುತ್ತಿರುವಂತೆ ಕಂಡಿದ್ದಿರಬೇಕು. ಅದರ ಓಟಕ್ಕೊಂದು ಲಂಗು ಲಗಾಮು ಹಾಕಲು ಸಾಧ್ಯವೇ ಇಲ್ಲ ಅನ್ನುವಷ್ಟು ಅದು ವೇಗ ಪಡೆದುಕೊಂಡಿತ್ತು.
ಬದುಕು ಎಷ್ಟು ಚಿಕ್ಕದು ಅಂತ? ಬದುಕನ್ನು ತೀರಾ ಗಂಭೀರವಾಗಿ ತೆಗೆದುಕೊಂಡೆವು ಅಂತಾ? ತಮ್ಮ ಖುಷಿಗಾಗಿ ಒಂದಷ್ಟೂ ಹಣವನ್ನೂ ವ್ಯಯಿಸದೇ, ಬ್ಯಾಂಕಿನಲ್ಲಿ ಹಣವನ್ನು ಪೇರಿಸಿಡುವವರಾದರೂ ಈಗ ಯೋಚಿಸಬಹುದ? ಯಾಕಾದರೂ ತಾನು ಬದುಕನ್ನು ಅಷ್ಟು ಸೀರಿಯಸ್ಸಾಗಿ ತೆಗೆದುಕೊಳ್ಳಬೇಕಿತ್ತು ಅಂತ. ಹಣ, ಜಾತಿ, ಧರ್ಮ ಜೀವನಾವಶ್ಯಕ ಸಂಗತಿಗಳಾ? ಇದ್ದಷ್ಟು ದಿನ ಚಂದವಾಗಿ ಬದುಕು ಕಳೆಯೋಕೆ ಏನು ಬೇಕು ಅಂತ ನಾವೇ ನಿರ್ಧರಿಸಬೇಕು.
ಅಸಮಾನತೆಯ ಸಂಘರ್ಷ, ಸ್ವಾರ್ಥದ ಯೋಚನೆ ಆಸೆ, ಹತಾಶೆ, ಇವೆಲ್ಲವೂ ನಮ್ಮ ಸ್ಥಿತಿಯನ್ನು ಇನ್ನಷ್ಟು ಅಧಃಪತನ ಮಾಡುತ್ತದೆ. ಇಲ್ಲಿ ಯಾರಿಗೂ ಯಾರು ಇಲ್ಲ ಅನ್ನುವ ಸತ್ಯ ಗೊತ್ತಿದ್ದರೂ ಸದಾ ಬಡಿದಾಡುತ್ತಲೇ ಬದುಕುತ್ತೇವೆ. ಎಲ್ಲ ಇದ್ದರೂ ಏನು ಇಲ್ಲ ಅನ್ನುವ ಕೊರಗು ನಮ್ಮ ನೆಮ್ಮದಿಯನ್ನು ಕಿತ್ತು ತಿನ್ನುತ್ತಿರುತ್ತದೆ. ಒಂದು ದಿನ ಮಣ್ಣಲ್ಲಿ ಮಣ್ಣಾಗಿ ಹೋಗುವ ಈ ಶರೀರಕ್ಕೆ ಬದುಕಿನ ಸತ್ಯ ದರ್ಶನವಾಗುವುದೇ ಇಲ್ಲ.
ಈವರೆಗೆ ಏನೆಲ್ಲ ಚಿತ್ರ-ವಿಚಿತ್ರ ಕಲಹಗಳ ಉದಾಹರಣೆಗಳನ್ನ ನೋಡಿದ್ದೀವಿ, ಕೇಳಿದ್ದೀವಿ. ತೀರಾ ಕ್ಷುಲ್ಲಕ ಕಾರಣಗಳಿಗೆ, ಆಸ್ತಿ ವಿವಾದಗಳಿಗೆ, ಅಣ್ಣ-ತಮ್ಮಂದಿರು ದೂರವಾದದ್ದನ್ನ ಕೇಳಿದ್ದೀವಿ. ಜಾತಿಯ ವಿಷಯವಾಗಿ ನಡೆದ ಕೊಲೆಗಳಿಗೆ ಕಿವಿಯಾಗಿದ್ದೀವಿ. ತಮ್ಮದಲ್ಲದ ಜಾತಿಯ ಹುಡುಗನ್ನು ಮದುವೆಯಾದ ಮಗಳನ್ನೇ ಕೊಂದುಬಿಡುವ ನಿರ್ಧಾರಕ್ಕೆ ಬರುವಷ್ಟು ಕ್ರೌರ್ಯವನ್ನು ಎದೆಯಲ್ಲಿಟ್ಟುಕೊಂಡು ನಮ್ಮ ನಡುವೆ ಓಡಾಡುವ ಜನರಿದ್ದಾರೆ ಅಂತ ಎಲ್ಲರಿಗೂ ತಿಳಿದ ವಿಷಯವೇ.
ಪರಿಸರದ ಎಚ್ಚರಿಕೆ ಮಳೆಗಾಲದಲ್ಲಿ ಪ್ರವಾಹಗಳು, ಬೆಟ್ಟಗುಡ್ಡ ಕುಸಿತಗಳ ಮೂಲಕ ನೀಡಿತ್ತು. ಆ ಸಂದರ್ಭದಲ್ಲಿ ನಾವೆಲ್ಲ ಮಾನವೀಯತೆಯ ಮಹಾ ಸಾಗರವನ್ನೆ ಹರಿಸಿದೆವು. ನೆರೆ ಸಂತ್ರಸ್ತರಿಗೆ ಆಹಾರ, ಬಟ್ಟೆ, ವಸತಿ ಕೊಡಿಸುವಲ್ಲಿ ಕೈಯಲ್ಲಾದ ಮಟ್ಟಿಗೆ ಜೊತೆಯಾದೆವು. ಹಾಗೇ ಈ ಮಹಾಮಾರಿ ಕೊರೋನಾ ಎಂಬ ವೈರಸ್ ಮನುಕುಲಕ್ಕೆ ಹೈರಾಣ ಮಾಡುತ್ತಿದೆ. ಈ ಸಂದರ್ಭದಲ್ಲಿ ನಾವೆಲ್ಲ ಮಾನವಿಯತೆಯನ್ನು ಜೊತೆಯಾಗಿಸಬೇಕಾಗಿರುವುದು ಅನಿರ್ವಾಯವಾಗಿದೆ.
ಅಂದು ಒಂದೇ ಜತೆ ಬಟ್ಟೆಯಲ್ಲಿ ಸಂತೋಷವಾಗಿ ಬದುಕುತ್ತಿದ್ದರು, ಇಂದು ಹೊಸ ಬಟ್ಟೆಗೆ ಬರವಿಲ್ಲ. ಆದರೆ ಅವುಗಳ ಧರಿಸಲು ಹಿಂದಿನಂತಹ ಕುತೂಹಲ ಆಸೆ ಇಲ್ಲ. ಧರಿಸಿದರೂ ಅಂದಿನಂತೆ ಇಂದು ಸಂತಸವಾಗುತ್ತಿಲ್ಲ. ನಮ್ಮದು ನಿರೀಕ್ಷೆಗಳ ಬದುಕು ಕಳೆದುಕೊಂಡಿದ್ದನ್ನು ಹುಡುಕುವ ನೆಪದಲ್ಲಿ ಸುಂದರವಾದ ಕ್ಷಣಗಳನ್ನು ಕಳೆದುಕೊಂಡಿರುತ್ತೇವೆ. ಈಗ ಪ್ರಕೃತಿಯು ತನ್ನಲ್ಲಿ ಹೊಸತನವನ್ನು ಸೃಷ್ಟಿಸಿ ನಮ್ಮ ಜೀವನದಲ್ಲಿ ಹೊಸತನದ ಬದುಕನ್ನು ರೂಪಿಸಲು ಪ್ರೇರೇಪಿಸುತ್ತಿರುವಂತೆ ಕಾಣುತ್ತಿದೆ. ನಿನ್ನೆಗಳ ಮರೆತವರು ನಾಳೆ ಕಟ್ಟಲಾರರು ಅಲ್ಲವೇ….?
ಈ ಸಂದರ್ಭದಲ್ಲಿ ಚಿ.ಉದಯಶಂಕರ್ ಸಾಹಿತ್ಯದ, ರಾಜನ್-ನಾಗೇಂದ್ರ ಸಂಗೀತದ, ಡಾ.ರಾಜಕುಮಾರ್ ಗಾಯನದ ಗಿರಿಕನ್ಯೆ ಚಲನಚಿತ್ರದ ಹಾಡು ನೆನಪಿಗೆ ಬರುತ್ತದೆ. ಅದೊಂದು ಅರ್ಥ ಗರ್ಭಿತವಾದ ಹಾಡು ಅದರ ಪಲ್ಲವಿ ಹೀಗಿದೆ.
“ಏನೆಂದು ನಾ ಹೇಳಲಿ…. ಮಾನವನಾಸೆಗೆ ಕೊನೆಯೆಲ್ಲಿ…. ಕಾಣೋದೆಲ್ಲ ಬೇಕು ಎಂಬ ಹಠದಲ್ಲಿ. ಒಳ್ಳೇದೆಲ್ಲ ಬೇಕು ಎಂಬ ಛಲದಲ್ಲಿ. ಯಾರನ್ನೂ ಪ್ರೀತಿಸನು ಮನದಲ್ಲಿ. ಏನೊಂದೂ ಬಾಳಿಸನು ಜಗದಲ್ಲಿ. ಏನೆಂದು ನಾ ಹೇಳಲೀ… ಮಾನವನಾಸೆಗೆ ಕೊನೆಯೆಲ್ಲಿ”….?

ಲೇಖಕರು: ✍. ಅರುಣ್ ಕೂರ್ಗ್

ನಿರ್ಲಕ್ಷ್ಯಕ್ಕೆ ಒಳಗಾದ ಸೂಳಿಮಳ್ತೆಯ ಶಿಲಾಗೋರಿಗಳು

ನಿರ್ಲಕ್ಷ್ಯಕ್ಕೆ ಒಳಗಾದ ಸೂಳಿಮಳ್ತೆಯ ಶಿಲಾಗೋರಿಗಳು

ಪಶ್ಚಿಮ ಘಟ್ಟಗಳ ಸುಂದರ ಹಸಿರಿನ ಕಾನನದಲ್ಲಿ ನೆಲೆಸಿರುವ ಶಿಲಾಯುಗದ ಮಾನವನ ನೆಲೆಯನ್ನು ಪ್ರಚುರಪಡಿಸುವ ಶಿಲಾಗೋರಿಗಳ ತಾಣವೊಂದು ಕೊಡಗಿನ ಸೋಮವಾರಪೇಟೆಯಿಂದ ಅನತಿ ದೂರದಲ್ಲಿರುವ ದೊಡ್ಡಮಳ್ತೆ ಸಮೀಪದ ಸೂಳಿಮಳ್ತೆಯಲ್ಲಿದೆ.
ಈ ಶಿಲಾಗೋರಿಗಳು ಸೋಮವಾರಪೇಟೆಯಿಂದ ದೊಡ್ಡಮಳ್ತೆ ಗ್ರಾಮದ ಮೂಲಕ ಶನಿವಾರಸಂತೆಗೆ ಹಾದು ಹೋಗುವ ಮುಖ್ಯರಸ್ತೆಯಿಂದ ಸರಿ ಸುಮಾರು ಒಂದೂವರೆ ಕೀಲೋ ಮೀಟರ್ ದೂರದ ಗುಡ್ಡದ ಮೇಲಿದೆ. ಈ ಶಿಲಾಗೋರಿಗಳಿರುವ ಜಾಗಕ್ಕೆ ಹೋಗಲು ಕಚ್ಚಾರಸ್ತೆ ಮಾತ್ರವಿದ್ದು, ಜೀಪ್ ಮಾತ್ರ ಈ ರಸ್ತೆಯಲ್ಲಿ ಸಂಚರಿಸಬಹುದಾಗಿದೆ. ಅಲ್ಲಿಗೆ ಹೇಗೆ ಹೋಗಬೇಕೆನ್ನುವ ಬಗ್ಗೆ ಒಂದು ಕಲ್ಲಿನ ಸೂಚನಾ ಫಲಕ ಮಾತ್ರ ಮುಖ್ಯ ರಸ್ತೆಯ ಬಳಿಯಿದೆ. ಈ ತಾಣಕ್ಕೆ ಮುಖ್ಯ ರಸ್ತೆಯಿಂದ ನಡೆದು ಕೊಂಡು ಹೋಗಬೇಕಾಗುತ್ತದೆ. ವಾಹನವಾದರೆ 4‌ ವೀಲ್ ಜೀಪ್‌ನ ಮುಖಾಂತರ ಮಾತ್ರ‌ ಹೋಗಲು ಸಾಧ್ಯವಾಗುತ್ತದೆ.
ಹೊನ್ನಮ್ಮನ ಕೆರೆಯ ಪಕ್ಕದಲ್ಲಿರುವುದರಿಂದ ಇದೂ ಕೂಡಾ ಉತ್ತಮ ಪ್ರವಾಸಿ ತಾಣವಾಗಿ ರೂಪು ಗೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ. ಸುಮಾರು 3000 ವರ್ಷಗಳ ಹಿಂದೆ ಶಿಲಾಯುಗದ ಮಾನವರು ಇಲ್ಲಿ ನೆಲೆ ನಿಂತಿರುವುದಾಗಿ ಇತಿಹಾಸಕಾರರು ಹೇಳುತ್ತಾರೆ. ಪಕ್ಕದಲ್ಲಿಯೇ ಹೊನ್ನಮ್ಮನ ಕೆರೆ ಇದ್ದಿದ್ದರಿಂದ ಕೃಷಿ ಕಾರ್ಯದಲ್ಲಿ ಶಿಲಾಯುಗದ ಮಾನವರು ತೊಡಗಿಕೊಂಡಿದ್ದು, ಶವಗಳನ್ನು ಈ ಗುಡ್ಡದಲ್ಲಿ ಹೂಳುತ್ತಿದ್ದರು ಎನ್ನಲಾಗುತ್ತದೆ. ಇನ್ನೊಂದು ಮಾಹಿತಿ ಪ್ರಕಾರ ಆಧ್ಯಾತ್ಮಿಕ ಸಾಧನೆ ಮಾಡಲು ಬಂದ ಸಾಧು ಸಂತರು ಇಲ್ಲಿ ನೆಲಸಿ ಕಾಲಾನಂತರ ಇಲ್ಲಿರುವ ಕಲ್ಲಿನ ಗೋರಿಗಳಲ್ಲಿ ಸಮಾಧಿಯಾದರೆಂದು ತಿಳಿದು ಬರುತ್ತದೆ.
ಇದೊಂದು ಆದಿಮಾನವರ ಅತ್ಯಂತ ಮುಂದುವರೆದ ಸಂಸ್ಕೃತಿಯ ಸಂದರ್ಭದ ಸಾಕ್ಷಿ ಎಂಬುದಕ್ಕೆ ಈ ಸ್ಮಾರಕದಲ್ಲಿ ಹಲವು ಪುರಾವೆಗಳಿವೆ. ಈ ಪ್ರದೇಶದಲ್ಲಿ ಬಾಳಿದ ಹಿಂದಿನ ಜನ ತುಂಬಾ ಕುಳ್ಳರು, ಅವರನ್ನು ಮೋರೇರು ಎನ್ನುತ್ತಿದ್ದರು. ಈ ಮನೆಗಳಲ್ಲಿ ಅವರು ವಾಸಿಸುತ್ತಿದ್ದರು ಎನ್ನಲಾಗುತ್ತದೆ. ಅಂದಿನ ಜನ ಈ ಕಿಂಡಿಯ ಮುಖಾಂತರ ಒಳಗೆ ಹೊರಗೆ ಸಾಗುತ್ತಿದ್ದರು ಎಂದು ಹೇಳಲಾಗುತ್ತಾದರೂ, ಅವುಗಳು ಅಂದಿನ ಜನರು ಸತ್ತ ಮೇಲೆ ಹೂಳುತ್ತಿದ್ದ ಸಮಾಧಿಗಳಾಗಿದ್ದವು ಎಂಬುದು ಪುರಾತತ್ವಶಾಸ್ತ್ರಜ್ಞರ ವಿವರಣೆಯಾಗಿದೆ.
17.5 ಏಕರೆ ವಿಸ್ತೀರ್ಣದ ಅರಣ್ಯವನ್ನು ಆವರಿಸಿರುವ ಈ ಗುಡ್ಡದಲ್ಲಿ 3.5 ಏಕರೆ ವಿಸ್ತೀರ್ಣದಲ್ಲಿ ಈ ಶಿಲಾಗೋರಿಗಳು ನೆಲೆನಿಂತಿವೆ. ಇಲ್ಲಿ ಬೆಳಕಿಗೆ ಬಂದಿರುವುದು 40ರಿಂದ 45 ಗೋರಿಗಳು ಮಾತ್ರ ಇದರಲ್ಲಿ 20 ಗೋರಿಗಳು ಮಾತ್ರ ಯಾವುದೇ ಹಾನಿಗೊಳಗಾಗದೆ ಯಥಾಸ್ಥಿಯಲ್ಲಿದೆ. ಉಳಿದವು ನಿಧಿ ಚೋರರ ದಾಳಿಯಿಂದ ಮತ್ತು ಸ್ಥಳೀಯರ ನಿರ್ಲಕ್ಷ್ಯದಿಂದ ಸಾಕಷ್ಟು ಗೋರಿಗಳು ಹಾಳಾಗಿವೆ. ಶಿಲಾಯುಗದ ಕಾಲದಲ್ಲಿ ಚಿನ್ನ-ಬೆಳ್ಳಿಗಳಿರಲಿಲ್ಲ ಎಂಬ ಅರಿವಿಲ್ಲದ ಕೆಲವು ಕಳ್ಳರು, ಇಲ್ಲಿ ನಿಧಿ ಸಿಗಬಹುದೆಂಬ ಆಸೆಯಲ್ಲಿ ಹಲವು ಶಿಲಾಗೋರಿಗಳನ್ನು ಹಾಳುಗೆಡವಿದ್ದಾರೆ.
ಒಂಬತ್ತು ವರ್ಷಗಳ ಹಿಂದೆ ಅಂದರೆ 2011ರಲ್ಲಿ ಪ್ರಾಚ್ಯವಸ್ತು ಇಲಾಖೆ ಇದರ ಬಗ್ಗೆ ಗಮನ ಹರಿಸಿ ಈ ಜಾಗವನ್ನು ಸಂರಕ್ಷಿತ ಪ್ರದೇಶವೆಂದು ಘೋಷಣೆ ಮಾಡಿ ಯೋಜನೆಯೊಂದನ್ನು ರೂಪಿಸಿತು. ಬಿರುಸಿನಿಂದ ಕಾರ್ಯಾಚರಣೆ ಆರಂಭಿಸಿ ಸುತ್ತಲೂ ಬೇಲಿ ನಿರ್ಮಿಸಲು ಕಬ್ಬಿಣದ ಕಂಬ ನೆಟ್ಟವರು ಮತ್ತೆ ಈ ಕಡೆ ತಲೆ ಹಾಕಿಲ್ಲ. ಕಬ್ಬಿಣದ ಕಂಬಗಳು ತುಕ್ಕು ಹಿಡಿಯುತ್ತಿವೆ. ಇದರಿಂದಾಗಿ ಈ ಸ್ಥಳದಲ್ಲಿ ಮತ್ತೆ ಕಾಡು ಬೆಳೆದು ಮರಗಳ್ಳರ ಆವಾಸ ಸ್ಥಾನವಾಗಿದೆ. ಈ ಜಾಗದಲ್ಲಿರುವ ಹೇರಳವಾದ ಶ್ರೀಗಂಧದ ಮರಗಳು ಕಳ್ಳರ ಪಾಲಾಗುತಿವೆ.
ಈ ಗುಡ್ಡದಲ್ಲಿರುವ ಶಿಲಾಗೋರಿಗಳು ಹಲವು ಬೇರೆ ಬೇರೆ ಅಳತೆಗಳಲ್ಲಿ ಕಾಣಸಿಗುತ್ತವೆ. ಕೆಲವು ಬರೀ 50 ಸೆಂಟಿಮೀಟರಿನಷ್ಟು ಉದ್ದವಿದ್ದರೆ ಇನ್ನೂ ಕೆಲವು ಸುಮಾರು ಹತ್ತು ಅಡಿಗಳಷ್ಟು ಎತ್ತರವಿದೆ. ಈ ಗೋರಿಗಳಿಗೆ ಮೂರುಗೋಡೆಗಳಿದ್ದು ಮೇಲೆ ದೊಡ್ಡ ಚಪ್ಪಡಿ ಕಲ್ಲುಗಳ ಸೂರು ಇದೆ. ಕೆಲವು ಕಟ್ಟಡಗಳಲ್ಲಿ ಕಿಂಡಿಗಳೂ ಇದ್ದು, ನೆಲೆಸುವ ಮನೆಗಳಂತೆ ಕಂಡರೂ ಈ ಕಲ್ಲು ಕೋಣೆಗಳು ಗೋರಿಗಳೇ ಆಗಿವೆ ಎಂದು ತಿಳಿದು ಬರುತ್ತದೆ. ಇಲ್ಲಿ ಒಂದು ಗೋರಿ ಇದ್ದು, ಅದರ ಸುತ್ತ ಹುತ್ತವೊಂದು ಆವೃತ್ತವಾಗಿದ್ದು, ಅದರಲ್ಲಿ ಸುಮಾರು 9ಅಡಿ ಉದ್ದದ ಮೈಮೆಲೆ ಕೂದಲು ಆವರಿಸಿರುವ ನಾಗರ ಹಾವೊಂದು ಹಲವು ವರ್ಷಗಳಿಂದ ನೆಲೆಸಿದೆ ಎಂದು ಈ ಸ್ಮಾರಕದ ಪ್ರಾಚ್ಯವಸ್ತು ಇಲಾಖೆ ಸಹಾಯಕರು ಮಾಹಿತಿ ನೀಡಿದರು.
ಕೊಡಗು ಜಿಲ್ಲೆ ಬೃಹತ್‌ ಶಿಲಾಯುಗದ ಕಲ್ಮನೆಗಳ ತವರೂರಾಗಿದ್ದು, 1856ರಲ್ಲಿ ಮೊಗ್ಲಿಂಗ್‌ ಎಂಬ ಬ್ರಿಟೀಷ್‌ ಅಧಿಕಾರಿ ವಿರಾಜಪೇಟೆ ತಾಲೂಕಿನ ಅರಮೇರಿ ಹಳ್ಳಿಯ ಅಲಮಂಡ ಮನೆಯ ಸಮೀಪ ಕಲ್ಮನೆಗಳನ್ನು ಶೋಧಿಸಿ ಉತ್ಖನನ ಮಾಡಿದ್ದರು. 1869ರಲ್ಲಿ ಕ್ಯಾ.ಕೋಲ್‌ ಎಂಬಾತ ಸೋಮವಾರಪೇಟೆ ತಾಲೂಕಿನ ಮೋರಿಬೆಟ್ಟದಲ್ಲಿ 50 ಕಲ್ಮನೆಗಳನ್ನು ಸಂಶೋಧಿಸಿ ಪ್ರಕಟಿಸಿದ. ನಂತರ ಆತನೇ ರಾಮಸ್ವಾಮಿ ಕಣಿವೆಯಲ್ಲಿ ನಾಲ್ಕು ಕಲ್ಮನೆಗಳನ್ನು ಉತ್ಖನನ ಮಾಡಿದ. 1978ರಲ್ಲಿ ಡಾ. ಕೆ.ಕೆ. ಸುಬ್ಬಯ್ಯನವರು ಸೋಮವಾರಪೇಟೆಯ ಹೆಗ್ಗಡೆಹಳ್ಳಿಯ ಮೋರಿಕಲ್ಲು ಬೆಟ್ಟದಲ್ಲಿ ಪಾಂಡವ ಬಂಡೆ ಎಂದು ಕರೆಯಲ್ಪಡುವ 1,000 ಕಲ್ಮನೆಗಳನ್ನು ಸಂಶೋಧಿಸಿ, 10 ಕಲ್ಮನೆಗಳ ಉತ್ಖನನ ಮಾಡಿದರು. 1995ರಲ್ಲಿ ರಾಜ್ಯ ಪುರಾತತ್ವ ಇಲಾಖೆಯವರು ಹೆಗ್ಗಡೆಹಳ್ಳಿಯಲ್ಲಿ 11 ಕಲ್ಮನೆಗಳ ಉತ್ಖನನವನ್ನು ಮಾಡಿ, ವರದಿಯನ್ನು ಪ್ರಕಟಿಸಿದ್ದಾರೆ.
ಈ ಶಿಲಾಸಮಾಧಿಗಳು‌ ಅಂದರೆ ಇದನ್ನು ಡಾಲ್ಮೆನ್‌ ಸರ್ಕಲ್ ಎಂದು ಇತಿಹಾಸದ ಅಧ್ಯಯನದಲ್ಲಿ ಕರೆಯುತ್ತಾರೆ. ಡಾಲ್ಮೆನ್‌ ಸರ್ಕಲ್(ಕಲ್ಮನೆ)ಗಳೆಂದರೆ ಭಾರಿ ಗಾತ್ರದ ಕಲ್ಲು ಚಪ್ಪಡಿಗಳನ್ನು ಚೌಕಾಕಾರದಲ್ಲಿ ಒಂದಕ್ಕೊಂದು ತಾಗಿಸಿ ನಿಲ್ಲಿಸಿ ಅದರ ಮೇಲೆ ಮತ್ತೊಂದು ಅಗಲವಾದ ಕಲ್ಲು ಚಪ್ಪಡಿಯನ್ನು ಮುಚ್ಚುಗೆಯಂತೆ ಮುಚ್ಚಿ ನಿರ್ಮಿಸಿದ ಕಲ್ಲಿನ ಮನೆ. ನಾಲ್ಕು ದಿಕ್ಕಿಗೆ ನಿಲ್ಲಿಸಿದ ನಾಲ್ಕು ಕಲ್ಲು ಚಪ್ಪಡಿಗಳಲ್ಲಿ ಯಾವುದಾದರೊಂದು ಚಪ್ಪಡಿಯಲ್ಲಿ ಸುಮಾರು 2 ಅಡಿ ಸುತ್ತಳತೆಯ ಒಂದು ರಂಧ್ರ ಅಥವಾ ತೂತನ್ನು ರಚಿಸಲಾಗಿರುತ್ತದೆ. ಇದು ಡಾಲ್ಮೆನ್‌ ಸರ್ಕಲ್ ಅಥವಾ ಕಲ್ಮನೆಯ ಏಕೈಕ ಪ್ರವೇಶ ದ್ವಾರ. ಇಂತಹ ರಚನೆಗಳನ್ನು ದಕ್ಷಿಣ ಭಾರತದಲ್ಲಿ ಪಾಂಡವರ ಮನೆ, ಪಾಂಡವರ ಕಲ್ಲು, ಮೋರಿಯರ ಮನೆ, ಕಲ್ಮನೆ, ತೂತುಕಲ್ಲು, ಪಾಣಾರ ಅರೆಕಲ್ಲು ಹೀಗೆ ಅನೇಕ ಹೆಸರುಗಳಿಂದ ಕರೆಯಲಾಗುತ್ತದೆ.
ಸೋಮವಾರಪೇಟೆ ಸಮೀಪದ ದೊಡ್ಡಮಳ್ತೆ ಗ್ರಾಮದಲ್ಲಿರುವ ಸೂಳಿಮಳ್ತೆಯ 3000 ವರ್ಷಗಳ ಹಿಂದಿನ ಶಿಲಾಗೋರಿಗಳು ಅವಸಾನ ಸ್ಥಿತಿಗೆ ತಲುಪಿದೆ. ಇದೊಂದು ರಮ್ಯ ಪರಿಸರದಲ್ಲಿರುವ ಚಾರಿತ್ರಿಕ ತಾಣ. ಹೆಬ್ಬಂಡೆಗಳ ನಡುವಿನ ನಿರ್ಜನ ಪ್ರದೇಶ. ಸಂಬಂಧಪಟ್ಟ ಇಲಾಖೆಯವರು ಕೂಡಲೆ ಇದರ ಪುನರುಜ್ಜೀವನಗೊಳಿಸಲು ಕ್ರಮ ಕೈಗೊಳ್ಳಬೇಕಿದೆ. ಕೊಡಗಿನ ವಿವಿಧ ಕಡೆಗಳಲ್ಲಿ ಪುರಾತನ ಕಾಲದ ಶಿಲಾಗೋರಿಗಳು ಪತ್ತೆಯಾಗಿದ್ದರೂ, ದೊಡ್ಡಮಳ್ತೆ ಗ್ರಾಮದ ಸೂಳಿಮಳ್ತೆಯಲ್ಲಿರುವಷ್ಟು ಸುಸ್ಥಿತಿಯಲ್ಲಿ ಇಲ್ಲ. ಆದರೆ ಈ ಗೋರಿಗಳನ್ನು ಸರಿಯಾಗಿ ಸಂರಕ್ಷಿಸದೆ ಅವುಗಳೂ ನಾಶವಾಗತೊಡಗಿವೆ.
ಸೋಮವಾರಪೇಟೆಯಿಂದ ಕೇವಲ 6 ಕಿ.ಮೀ ದೂರದಲ್ಲಿ ಹೊನ್ನಮ್ಮನ ಕೆರೆಯಿದೆ. ಇದರ ಎಡಭಾಗದ ಗುಡ್ಡದಲ್ಲಿ ಸೂಳಿಮಳ್ತೆಯ ಶಿಲಾ ಗೋರಿಗಳ ಪ್ರದೇಶವಿದೆ. ಈಚೆಗೆ ಹೊನ್ನಮ್ಮನ ಕೆರೆಯ ಸುತ್ತಲಿನ ಜಾಗವನ್ನು ಅಭಿವೃದ್ಧಿಪಡಿಸಲಾಗಿದರೂ ಶಿಲಾಗೋರಿ ಗಳಿರುವ ಸ್ಥಳ ಮಾತ್ರ ಎಲ್ಲರ ಕಣ್ಣಿಂದ ಮರೆಯಾಗಿ ಅನಾಥವಾಗಿದೆ. ಕೊಡಗಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಬೇಕೆಂಬುದು ಕೇವಲ ಅರಣ್ಯರೋದನವಾಗಿಯೇ ಉಳಿದಿದೆ. ಇಂತಹ ಐತಿಹಾಸಿಕ ತಾಣವನ್ನು ಗುರುತಿಸಿ ಸಂರಕ್ಷಿಸುವ ಕೆಲಸ ತುರ್ತಾಗಿ ನಡೆಯಬೇಕಾಗಿದೆ. ಆದ್ದರಿಂದ ಈ ರೀತಿಯ ಪ್ರಾಗೈತಿಹಾಸಿಕ ನೆಲೆಗಳನ್ನು ಯಾವ ಕಾರಣಕ್ಕೂ ನಾಶ ಪಡಿಸಬಾರದು. ಈ ಬಗ್ಗೆ ಸಂಬಂಧಿಸಿದವರು ನಿಗಾವಹಿಸಬೇಕಾಗಿದೆ.
ಪ್ರಾಚೀನ ಸ್ಮಾರಕಗಳ ಮತ್ತು ಪುರಾತತ್ವ ಅಧಿನಿಯಮ 1958ರ ಪ್ರಕಾರ ರಾಷ್ಟ್ರೀಯ ಮಹತ್ವದ ಸ್ಮಾರಕವೆಂದು ಡಿಸೆಂಬರ್ 2011ರಲ್ಲಿ ಈ ಪ್ರದೇಶವನ್ನು ಘೋಷಿಸಲಾಗಿದೆ. ನಾಲ್ಕು ದಿಕ್ಕುಗಳಲ್ಲೂ 150 ಮೀಟರ್‌ವರೆಗಿನ ಕ್ಷೇತ್ರವನ್ನು ಸಂರಕ್ಷಿಸಲ್ಪಟ್ಟ ಪ್ರದೇಶವೆಂದು ಘೋಷಿಸಲಾಗಿದೆ. ಭಾರತ ಸರ್ಕಾರ ಪುರಾತತ್ವ ಇಲಾಖೆಯ ಅನುಮತಿ ಇಲ್ಲದೇ ಇಲ್ಲಿ ಯಾವುದೇ ರೀತಿಯ ಗಣಿಗಾರಿಕೆ, ಕಟ್ಟಡಗಳ ನಿರ್ಮಾಣ ಅಥವಾ ಸ್ಥಳಾಂತರ ಮಾಡುವುದು ಅಪರಾಧವಾಗಿದೆ. ಇಲ್ಲಿಗೆ ಬರುವ ಕೆಲವರು ತಮ್ಮ ಹೆಸರನ್ನು ಶಿಲೆಗಳ ಮೇಲೆ ಬರೆದು ಶಿಲಾಗೋರಿಗಳಿಗೂ ಮತ್ತು ಇಲ್ಲಿರುವ ಬೃಹತ್‌ ಬಂಡೆಗಳಗೂ ಹಾನಿ ಮಾಡಿದ್ದಾರೆ. ಇವುಗಳನ್ನು ತಡೆಯುವ ಕೆಲಸ ಈವರೆಗೂ ಆಗಿಲ್ಲ. ಈ ಕೂಡಲೇ ಇದನ್ನು ಕಾಪಾಡಿಕೊಳ್ಳದಿದ್ದರೆ ಈಗಿರುವ ಉಳಿಕೆಗಳೂ ಅಳಿದು ಹೋಗುಬಹುದು. ಒಟ್ಟಿನಲ್ಲಿ ಕೊಡಗಿನಲ್ಲಿರುವ ಮಹಾಶಿಲಾಯುಗದ ಅಪರೂಪದ ಪಳೆಯುಳಿಕೆಯೊಂದು ಪೂರ್ತಿ ನಶಿಸುವ ಮುನ್ನ ಅದರ ಸಂರಕ್ಷಣೆಯಾಗಬೇಕಿದೆ.

ಲೇಖಕರು: ✍. ಅರುಣ್ ಕೂರ್ಗ್

ಪಶ್ಚಿಮಘಟ್ಟದ ದೃಶ್ಯ ವೈಭೋಗಕ್ಕೆ ಸಾಕ್ಷಿಯಾಗಿದೆ ಮಡಿಕೇರಿಯ “ನೆಹರು ಮಂಟಪ”

ಪಶ್ಚಿಮಘಟ್ಟದ ದೃಶ್ಯ ವೈಭೋಗಕ್ಕೆ ಸಾಕ್ಷಿಯಾಗಿದೆ ಮಡಿಕೇರಿಯ “ನೆಹರು ಮಂಟಪ”

ಮಡಿಕೇರಿ ನಗರದ ರಾಜಾಸೀಟ್ ಉದ್ಯಾನದ ಸಮೀಪವೇ ಇರುವ ’ನೆಹರೂ ಮಂಟಪ’ ಸುಮಾರು ₹ 18 ಲಕ್ಷ ವೆಚ್ಚದಲ್ಲಿ ಹೊಸ ಸ್ಪರ್ಶ ಪಡೆದ್ದು, ಪ್ರಕೃತಿಯ ಸೊಬಗನ್ನು ಪ್ರವಾಸಿಗರಿಗೆ ಉಣಬಡಿಸಲು ತಯಾರಾಗಿದೆ. ನಿರ್ವಹಣೆಯ ಕೊರತೆಯಿಂದ ಈ ಹಿಂದೆ ಕುಡುಕರ ತಾಣವಾಗಿ ಮಾರ್ಪಟ್ಟಿದ್ದ ನೆಹರು ಮಂಟಪ ಹೊಸ ರೂಪದೊಂದಿಗೆ ಪ್ರವಾಸಿಗರ ಸೆಳೆಯಲು ಸಜ್ಜುಗೊಂಡಿದೆ.
ಹಾಳು ಕೊಂಪೆಯಾಗಿ ನೆಹರು ಮಂಟಪ ಯಾರಿಗೂ ಬೇಡವಾಗಿತ್ತು. ಮಂಟಪದ ಸುತ್ತ ಕಾಡು ಬೆಳೆದುಕೊಂಡಿದ್ದರ ಪರಿಣಾಮ ಸಾರ್ವಜನಿಕರು ಅಲ್ಲಿಗೆ ಹೋಗಲು ಭಯ ಪಡುವ ಸ್ಥಿತಿಯಿತ್ತು. ಕೊನೆಗೂ ಎಚ್ಚೆತ್ತುಕೊಂಡ ಜಿಲ್ಲಾಡಳಿತವು ಪ್ರವಾಸೋದ್ಯಮ ಇಲಾಖೆಯಿಂದ ಮಂಟಪಕ್ಕೆ ಹೊಸ ರೂಪ ನೀಡಿದೆ.
ಕೊಡಗು ಎಂದರೆ ಅದು ಕರ್ನಾಟಕದ ಕಾಶ್ಮೀರ ಎಂದೇ ಪ್ರಸಿದ್ಧಿ ಪಡೆದಿದೆ. ಕನ್ನಡ ನಾಡಿನ ಜೀವನದಿ ಕಾವೇರಿಯ ಉಗಮ ಸ್ಥಳವಾದ ತಲಕಾವೇರಿಯೂ ಸಹ ಇದೇ ಪುಣ್ಯ ಭೂಮಿಯಲ್ಲಿದೆ. ಇದರೊಂದಿಗೆ ಹಲವಾರು ಪ್ರವಾಸಿ ತಾಣಗಳೂ ಸಹ ಜಿಲ್ಲೆಯಲ್ಲಿ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿವೆ.
ತನ್ನ ಹಸಿರ ಮೈಸಿರಿಯಿಂದಲೇ ಕೊಡಗು ರಾಜ್ಯದಲ್ಲೇ ವಿಶೇಷವಾದ ಸ್ಥಾನ ಹೊಂದಿದೆ. ಅಷ್ಟೇ ಅಲ್ಲದೆ ಐತಿಹಾಸಿಕ ಕಟ್ಟಡಗಳು ಮತ್ತು ಭಾರತೀಯ ಸೈನ್ಯಕ್ಕೆ ಕೊಡುಗೆ ಕೊಟ್ಟಂತಹ ಪ್ರಮುಖ ಸೇನಾ ನಾಯಕರ ನೆಲೆಬೀಡು ಎಂಬ ವಿಶ್ವಖ್ಯಾತಿಯನ್ನೂ ಸಹ ನಮ್ಮ ಜಿಲ್ಲೆ ಹೊಂದಿದೆ.
ಸುಂದರ, ಹಚ್ಚ ಹಸಿರಿನ ಜಿಲ್ಲೆಗೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ದಿನನಿತ್ಯ ಕೊಡಗಿಗೆ ಭೇಟಿ ನೀಡುತ್ತಾರೆ. ಮಡಿಕೇರಿಯ ಹೃದಯ ಭಾಗದಲ್ಲೇ ಇರುವ ರಾಜಾಸೀಟು ಪ್ರವಾಸಿಗರ ಪಾಲಿನ ಸ್ವರ್ಗವಾಗಿದೆ. ಅನೇಕ ಸಂಖ್ಯೆಯ ಪ್ರವಾಸಿಗರು ಈ ರಾಜಾಸೀಟಿನ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಾರೆ. ಆದರೆ ರಾಜಾಸೀಟಿನಂತೆ ಪಶ್ಚಿಮಘಟ್ಟಗಳ ದೃಶ್ಯ ವೈಭವವನ್ನು ನಮ್ಮ ಕಣ್‌ಮನಕ್ಕೆ ಉಣಬಡಿಸುವ ಮತ್ತೊಂದು ಸುಂದರ ಸ್ಥಳ ರಾಜಾಸೀಟಿನಿಂದ ಕೂದಲಳತೆಯ ದೂರದಲ್ಲಿದೆ. ಅದುವೇ ‘ನೆಹರು ಮಂಟಪ’.
ಸೂರ್ಯಾಸ್ತಮಾನದ ಸಮಯದಲ್ಲಿ ಹಾಗೆ ಒಮ್ಮೆ ನೆಹರೂ ಮಂಟಪದ ಬಳಿ ನಿಂತು ಪಶ್ಚಿಮಘಟ್ಟಗಳ ಶ್ರೇಣಿ ನೋಡಿದರೆ, ಸೂರ್ಯ ತಣ್ಣಗೆ ನಮ್ಮ ಕಣ್ಣಿನಿಂದ ಮರೆಯಾಗುವ ದೃಶ್ಯ ಅತ್ಯದ್ಭುತವಾಗಿರುತ್ತದೆ. ಜಿಲ್ಲೆಯ ಪ್ರವಾಸಿ ತಾಣಗಳ ಪಟ್ಟಿಯಲ್ಲಿದ್ದರೂ ಪ್ರವಾಸಿಗರಿಂದ ಕೊಂಚ ದೂರವಿರುವಂತೆ ಭಾಸವಾಗುತ್ತದೆ. ವಾಹನದ ಕಿರಿಕಿರಿಯಿಲ್ಲದೆ ತಣ್ಣಗೆ ಬೀಸುವ ಗಾಳಿ ಮನಸ್ಸಿಗೆ ಒಂದು ರೀತಿ ವಿಶೇಷ ಆನಂದ ಮತ್ತು ನೂತನ ಚೈತನ್ಯವನ್ನು ತರುತ್ತದೆ. ನೋಡಿದಷ್ಟು ದೂರ ಬೆಟ್ಟಗಳು, ಮಂಜು ಮುಸುಕಿದ ಆ ಗುಡ್ಡಗಳ ಸೌಂದರ್ಯ ನಿಜಕ್ಕೂ ವರ್ಣನಾತೀತ.
ಈ ಸುಂದರ ನೆಹರೂ ಮಂಟಪ ಬರಿಯ ಪ್ರಕೃತಿ ಸೌಂದರ್ಯದಿಂದ ಮಾತ್ರವಲ್ಲದೆ, ತನ್ನದೇ ಆದ ಐತಿಹಾಸಿಕ ಘಟನೆಯೊಂದರ ಕುರುಹನ್ನು ತನ್ನೊಡಲಲ್ಲಿ ಬೆಚ್ಚಗೆ ಇಟ್ಟು ಹಲವಾರು ವರ್ಷಗಳಿಂದ ಇತಿಹಾಸದ ವಿಚಾರಗಳನ್ನು ಜನರಿಗೆ ಹಂಚುವ ಕಾರ್ಯವನ್ನು ಮಾಡಿದೆ.
ಅತ್ಯಂತ ಪ್ರಶಾಂತವಾದ ವಾತಾವರಣವನ್ನು ಹೊಂದಿರುವ ಈ ಸ್ಥಳವು ಐತಿಹಾಸಿಕ ಹಿನ್ನೆಲೆಯ ಸಂಕೇತವಾಗಿದೆ. ೧೯೫೭ ರಲ್ಲಿ ಮಡಿಕೇರಿಗೆ ಭೇಟಿ ನೀಡಿದ್ದ ಅಂದಿನ ಪ್ರಧಾನ ಮಂತ್ರಿಗಳಾದ ಜವಾಹರ್ ಲಾಲ್ ನೆಹರು ರವರು ಕೊಡಗಿನ ದೃಶ್ಯವೈಭೋಗಕ್ಕೆ ನಿಜಕ್ಕೂ ಮನಸೋತಿದ್ದರು. ಅಂದು ನೆಹರುರವರು ಈ ಸ್ಥಳಕ್ಕೆ ಭೇಟಿ ನೀಡಿದ್ದರಿಂದ ಈ ಸ್ಥಳಕ್ಕೆ ನೆಹರೂ ಮಂಟಪ ಎಂದು ಹೆಸರು ಬಂತು. ಬಳಿಕ ಈ ಸ್ಥಳವನ್ನು ಜಿಲ್ಲಾಡಳಿತ ಅತ್ಯಂತ ಸುರಕ್ಷಿತವಾಗಿ ಕಾಪಾಡಿಕೊಂಡು ಬರುವ ಕಾರ್ಯ ಮಾಡಿದೆ.
ರಾಜಾಸೀಟು ಉದ್ಯಾನವನದಿಂದ ಕೂದಲಳತೆಯ ದೂರದಲ್ಲಿರುವ ನೆಹರೂ ಮಂಟಪವು ಮಡಿಕೇರಿ ಆಕಾಶವಾಣಿ ಪಕ್ಕದಲ್ಲಿದ್ದು, ಉತ್ತಮ ವಾತಾವರಣದಿಂದ ಕೂಡಿದೆ, ಇಲ್ಲಿ ಪ್ರಮುಖವಾದ ಆಕರ್ಷಣೆಯೆಂದರೆ ಅದ್ಭುತ ಸೂರ್ಯಾಸ್ತಮಾನ. ಮುಂಜಾನೆಯ ಸೂರ್ಯೋದಯ ಮತ್ತು ಮುಸ್ಸಂಜೆಯ ಸಮಯ ಇಲ್ಲಿಗೆ ಭೇಟಿ ನೀಡಲು ಸೂಕ್ತವಾದ ಸಮಯವಾಗಿದೆ. ನೆಹರೂ ಮಂಟಪವು ಸ್ಥಳೀಯರಿಗೆ ಚಿರಪರಿಚಿತವಾಗಿದ್ದು, ಇಲ್ಲಿಗೆ ಯಾವುದೇ ರೀತಿಯ ನಿಗದಿತ ಶುಲ್ಕವಿರುವುದಿಲ್ಲ ಮತ್ತು ಉಚಿತ ಪ್ರವೇಶವಾಗಿದೆ.
ಅಲ್ಲದೆ ಪುಟಾಣಿ ಸುಂದರ ಪುಷ್ಪೋದ್ಯಾನವನ್ನೂ ಸಹ ನೆಹರೂ ಮಂಟಪ ಒಳಗೊಂಡಿದೆ. ಗಿರಿಶಿಖರಗಳ ನಡುವೆ ಮರೆಯಾಗುವ ಸೂರ್ಯ, ತಣ್ಣಗೆ ಮೈಮನವೆಲ್ಲಾ ಆವರಿಸುವ ತಂಪಾದ ಗಾಳಿ, ಇವೆಲ್ಲಕ್ಕೂ ಮತ್ತಷ್ಟು ಮೆರುಗನ್ನು ನೀಡುವ ಹೂಗಳ ಸುಗಂಧ ಪರಿಮಳದ ಮಧ್ಯೆ ನೀವು ಕೆಲಹೊತ್ತು ಸಮಯ ಕಳೆಯಬೇಕೆಂದಿದ್ದರೆ ತಪ್ಪದೆ ನೆಹರೂ ಮಂಟಪಕ್ಕೊಮ್ಮೆ ಭೇಟಿ ನೀಡಿ.
ಸಂಜೆಯ ಸಮಯವನ್ನು ಕಳೆಯಲು ಹಾಗೂ ವಿಶ್ರಾಂತಿಯನ್ನು ಪಡೆಯಲು ಒಂದು ಪ್ರಶಾಂತವಾದ ಸ್ಥಳವಾಗಿದೆ. ಮಡಿಕೇರಿಯ ಸೌಂದರ್ಯ ಹಾಗೂ ಪ್ರಕೃತಿಯ ಸೋಬಗನ್ನು ಸವಿಯಲು ಒಂದು ಉತ್ತಮ ಜಾಗವಾಗಿದೆ ಮತ್ತು ಪ್ರವಾಸಿಗರಿಗೆ ವಿಶ್ರಾಂತಿಯನ್ನು ಪಡೆಯಲು ಸಹಕಾರಿಯಾಗಿದೆ.