• Search Coorg Media

‘ಜಗವೆಲ್ಲ ಮಲಗಿರಲು ಅವನೊಬ್ಬ ಎದ್ದ’: ಬುದ್ಧ ಪೂರ್ಣಿಮೆಯ ವಿಶೇಷ ಲೇಖನ

‘ಜಗವೆಲ್ಲ ಮಲಗಿರಲು ಅವನೊಬ್ಬ ಎದ್ದ’:

ಬುದ್ಧ ಪೂರ್ಣಿಮೆಯ ವಿಶೇಷ ಲೇಖನ

ಬುದ್ಧ ಪೂರ್ಣಿಮೆಯನ್ನು ಕೇವಲ ಬೌದ್ಧರಷ್ಟೆ ಅಲ್ಲದೆ, ದೇಶಾದ್ಯಂತ ಇರುವ ಎಲ್ಲಾ ಸಮುದಾಯದ ಜನರು ಸಂಭ್ರಮದಂದ ಆಚರಿಸುವಂತ ಹಬ್ಬ. ಬುದ್ಧನಿಗೆ ಸಂಬಂಧಿಸಿದ ಮೂರು ಮಹತ್ವಪೂರ್ಣ ತಿಥಿಗಳು ಏಕಕಾಲಕ್ಕೆ ಬರುವುದು ಸಹ ಬುದ್ಧ ಪೂರ್ಣಿಮೆಯ ವಿಶೇಷವಾಗಿದೆ. ಭಗವಾನ್ ಬುದ್ಧನ ಜನ್ಮ, ಜ್ಞಾನ ಪ್ರಾಪ್ತಿ ಮತ್ತು ಮಹಾಪರಿನಿರ್ವಾಣಗಳು ಒಂದೇ ದಿನ ಬರುತ್ತವೆ. ಅಂದರೆ, ಇವೆಲ್ಲವೂ ವೈಶಾಖ ಪೂರ್ಣಿಮಾ ದಿನವೇ ಆಗಿದ್ದವು. ಕ್ರಿ.ಪೂ.563ರ ವೈಶಾಖ ಮಾಸದ ಹುಣ್ಣಿಮೆಯದಿನ ಬುದ್ಧನ ಜನನವಾಗಿತ್ತು.

ಶುದ್ಧೋಧನ ಮತ್ತು ಮಾಯಾದೇವಿಯರ ಪುತ್ರನಾಗಿ ಹುಟ್ಟಿದ ರಾಜಕುಮಾರನೇ ಸಿದ್ದಾರ್ಥ. 16ನೇ ವಯಸ್ಸಿನಲ್ಲೇ ಯಶೋಧರೆ ಎಂಬ ಕನ್ಯೆಯೊಂದಿಗೆ ವಿವಾಹವಾಗಿ, ತಮಗೆ ಹುಟ್ಟಿದ ಮುದ್ದಿನ ಮಗನಿಗೆ ರಾಹುಲ ಎಂದು ಹೆಸರನಿಟ್ಟು ರಾಜ್ಯ, ಸಂಪತ್ತು, ಅಧಿಕಾರ, ಪತ್ನಿ, ಮಗು ಎನ್ನುತ್ತ ನೆಮ್ಮದಿಯಿಂದ ಕಾಲಕಳೆಯುತ್ತಿದ್ದ. ಒಮ್ಮೆ ನಗರ ಸಂಚಾರ ಮಾಡುತ್ತಿದ್ದ ರಾಜ ಸಿದ್ಧಾರ್ಥನಿಗೆ ಶವ, ರೋಗಿ ಮತ್ತು ವೃದ್ಧನನ್ನು ಕಂಡು, ಬದುಕಿನಲ್ಲಿ ಕಾಯಿಲೆ, ವೃದ್ಧಾಪ್ಯ, ಸಾವು ಎಲ್ಲರಿಗೂ ಅನಿವಾರ್ಯವೇ ಎಂಬ ಪ್ರಶ್ನೆ ಹುಟ್ಟುತ್ತದೆ.

ಬುದ್ಧಿಗೆ ಇರುವ ಇನ್ನೊಂದು ಹೆಸರು ‘ಬುದ್ಧ’. ಧರ್ಮದ ಹೆಸರಿನಲ್ಲಿ ಅವೈಜ್ಞಾನಿಕವಾದುದನ್ನು, ಅತಾರ್ಕಿಕವಾದುದನ್ನು ಆತ ಏನನ್ನೂ ಹೇಳಲಿಲ್ಲ. ಅತಿಮಾನುಷವಾದವನ್ನು ಮುಂದಿಡಲಿಲ್ಲ. ‘ಬುದ್ಧ ಪೂರ್ಣಿಮಾ’ ಎಂದೂ ಕರೆಯಲ್ಪಡುವ ‘ಬುದ್ಧ ಜಯಂತಿ’ ಭಗವಾನ್ ಬುದ್ಧನ ಹುಟ್ಟುಹಬ್ಬವನ್ನು ಆಚರಿಸುತ್ತದೆ. ಇದು ಅವನ ಜ್ಞಾನೋದಯ ಮತ್ತು ಮರಣದ ಸ್ಮರಣೆಯನ್ನು ಕೂಡಾ ನೆನಪಿಸುತ್ತದೆ. ಇದು ಅತ್ಯಂತ ಪವಿತ್ರ ಬೌದ್ಧ ಉತ್ಸವ.

ಬುದ್ಧ ತನ್ನನ್ನು ಪ್ರವಾದಿಯೋ ದೇವರ ಪ್ರತಿನಿಧಿಯೋ ಎಂದು ಬಿಂಬಿಸಿಕೊಳ್ಳಲಿಲ್ಲ. ತನ್ನದು ದೈವವಾಣಿಯೆಂದೋ ನನ್ನ ಮಾತೇ ಕೊನೆಯ ಮಾತು, ನನ್ನ ತರುವಾಯ ಮತ್ತೊಬ್ಬ ಬುದ್ಧನಿಲ್ಲ ಎಂದು ಹೇಳಲಿಲ್ಲ. ತನ್ನ ವಿಚಾರಗಳನ್ನು ಚರ್ಚೆಗೆ ಮುಕ್ತವಾಗಿ ತೆರೆದಿಟ್ಟ. ಉರಿಯುತ್ತಿರುವ ದೀಪವೊಂದು ಸಾವಿರ ದೀಪಗಳನ್ನು ಬೆಳಗಿಸಿ, ಪ್ರಕಾಶ ಹೆಚ್ಚಿಸುವ ಸಾಮರ್ಥ್ಯ ಹೊಂದಿರುತ್ತದೆ. ಅದೇ ರೀತಿ ಖುಷಿಯನ್ನು ಸಹ ಹಂಚುವುದರಿಂದ ಅದು ಹೆಚ್ಚಾಗುತ್ತಾ ಹೋಗುತ್ತದೆ ಎಂದು ಬುದ್ಧ ಹೇಳುತ್ತಾನೆ.

ಸತ್ಯ, ಅಹಿಂಹೆ, ಸುಳ್ಳು ಹೇಳದಿರುವುದು, ಕಳ್ಳತನಮಾಡಬಾರದು ಆತನ ಮಹತ್ವದ ಉಪದೇಶ. ಸಕಲ ಪ್ರಾಣಿಗಳಲ್ಲಿ ದಯೆಯಿರಲಿ, ಪ್ರಾಣಿಹಿಂಸೆ ಮಾಡಬೇಡಿ, ಆಸೆಯೇ ದುಃಖಕ್ಕೆ ಕಾರಣ, ಹಿಂಸೆ ದ್ವೇಷವೇ ದುಃಖದ ಮೂಲ, ಎಲ್ಲರನ್ನೂ ಪ್ರೀತಿಸಿ, ಎಂದು ಸಾರುತ್ತಾ ಬೌದ್ಧ ಧರ್ಮವನ್ನು ಪ್ರಸಾರ ಮಾಡುತ್ತಾ ಪ್ರಪಂಚದ ಉದ್ದಗಲಕ್ಕೂ ಸಂಚರಿಸಿ 80 ವರ್ಷಗಳಷ್ಟು ದೀರ್ಘ ಕಾಲ ಎಲ್ಲೆಡೆಯೂ ಧರ್ಮಪ್ರಚಾರಮಾಡಿದ ಮಹಾಪುರುಷ ” ಗೌತಮ ಬುದ್ಧ “.

ಎಲ್ಲ ಮತಗಳು ಈ ಲೋಕವನ್ನು ‘ಆಗಿರುವ ವಸ್ತು’ ಪ್ರಪಂಚವೆಂದು ಹೇಳಿದರೆ ಬೌದ್ಧಧರ್ಮ ಮಾತ್ರ ಲೋಕವನ್ನು ‘ಆಗುತ್ತಲೇ ಇರುವ’ ನಿರಂತರ ಪ್ರವಾಹವೆಂದು ವಿವರಿಸುತ್ತದೆ. ಬುದ್ಧ ಪ್ರವಾದಿ ಅಲ್ಲ. ಆತ ಮಹಾತ್ಮ. ಆತ ಹೇಳಿದ್ದು ಧರ್ಮವೇ ವಿನಾ ಮತಧರ್ಮ ಅಲ್ಲ. ಆತನದು ಆಗಿರುವ ಮತವಲ್ಲ, ಪ್ರತಿದಿನವೂ ಆಗುತ್ತಲೇ ಇರುವ– ಕಾಲದಿಂದ ಕಾಲಕ್ಕೆ ತನ್ನನ್ನು ಪುನರ್ ಕಟ್ಟಿಕೊಳ್ಳುತ್ತಿರುವ ಧರ್ಮ.

ಬುದ್ಧನ ಅನುಸಾರ, ಕೆಟ್ಟದ್ದನ್ನು ಕೆಟ್ಟದ್ದರಿಂದಲೇ ಅಂತ್ಯ ಮಾಡಲು ಸಾಧ್ಯವಿಲ್ಲ. ಹೀಗಾಗಿ ಕೆಟ್ಟದ್ದನ್ನು ಸಹ ಪ್ರೀತಿಯಿಂದಲೇ ಅಂತ್ಯಗೊಳಿಸುವುದು ಉತ್ತಮ. ಪ್ರೀತಿ-ವಿಶ್ವಾಸ ಮಾತ್ರ ಕೆಟ್ಟದ್ದಕ್ಕೆ ಇತಿಶ್ರೀ ಹಾಡಲು ಸಾಧ್ಯ. ಸಿದ್ಧಾರ್ಥನ ಮನಸ್ಸು ಬುದ್ಧನಾಗುವುದಕ್ಕೆ ಹಾತೊರೆಯುತ್ತಿದ್ದ ದಿನ ಬಂದಾಗ ಆತನ ವಯಸ್ಸು 26. ಆ ವಯಸ್ಸಿನಲ್ಲೇ ಮನೆ-ಮಠ, ಹೆಂಡತಿ-ಮಗುವನ್ನು ತೊರೆದ ಸಿದ್ಧಾರ್ಥ ಗಯಾಗೆ ತೆರಳಿ, ಅರಳಿ ಮರದಕೆಳಗೆ ಕುಳಿತು ಧ್ಯಾನಾಸಕ್ತನಾದ. ಅನವರತ ಬಿಡದೇ 47 ದಿವಸಗಳ ಕಠಿಣ ತಪಸ್ಸುಮಾಡಿದಾಗ ಇದೇ ವೈಶಾಖ ಶುದ್ಧ ಹುಣ್ಣಿಮೆಯಂದು ಸಿದ್ಧಾರ್ಥನಿಗೆ ಜ್ಞಾನೋದಯವಾಯಿತು. ಅಂದಿನಿಂದ ಸಿದ್ಧಾರ್ಥ ಬುದ್ಧನಾದ.

ಈ ಲೋಕದಲ್ಲಿ ಯಾವುದೂ ಸ್ವತಂತ್ರ ವಸ್ತುಗಳಲ್ಲ. ಎಲ್ಲವೂ ಸಹ ಬದಲಾಗುತ್ತಿರುವ ಸಂಯೋಜನೆಗಳು ಎಂದು ಹೇಳಿದ. ಬುದ್ಧ ‘ಕಾರ್ಯಕಾರಣ’ ಸಂಬಂಧದ ಜಗತ್ತಿನ ಘಟನೆಗಳನ್ನು ವಿವರಿಸುತ್ತಾನೆ. ಆದ್ದರಿಂದ ‘ಬುದ್ಧ ಧರ್ಮ’ ಎಂಬುದು ವಿಜ್ಞಾನಕ್ಕೆ ಸಮಾನಾಂತರವಾಗಿಯೇ ಬೆಳೆಯುತ್ತದೆ. ಅದು ‘ಮತಧರ್ಮ’ಗಳಂತೆ ವಿಜ್ಞಾನಕ್ಕೆ ವಿರೋಧಿಯಲ್ಲ.
ಹಲವು ವರ್ಷಗಳ ಧ್ಯಾನ, ತಪಸ್ಸು, ಅನುಭವ, ಅಧ್ಯಯನಗಳ ಮೂಲಕ ನಿಜವಾದ ಮಾನವ ಧರ್ಮದ ಆಶಯಗಳನ್ನು ಬುದ್ಧ ಜಗತ್ತಿಗೆ ತಿಳಿಸಿದ್ದಾನೆ. ವಾರಾಣಾಸಿಯ ಜಿಂಕೆಗಳ ವನದಲ್ಲಿ ಮೊದಲ ಬಾರಿಗೆ ಧಾರ್ಮಿಕ, ಅಧ್ಯಾತ್ಮ ಉಪನ್ಯಾಸಗಳನ್ನು ನೀಡುವ ಮೂಲಕ ಬೌದ್ಧ ಧರ್ಮದ ಆಶಯಗಳನ್ನು ಬಿತ್ತಿದ್ದ ಬುದ್ಧ, ಮನುಕುಲ ಅನುಭವಿಸುತ್ತಿರುವ ಕಷ್ಟಗಳಿಗೆ ಸ್ಪಂದಿಸುವುದೇ ಧರ್ಮದ ನಿಜವಾದ ಅರ್ಥ ಎನ್ನುತ್ತಾನೆ. ನಮ್ಮದು ಆ ಧರ್ಮ, ಈ ಧರ್ಮವೆಂದು ನಿರಂತರ ಕಚ್ಚಾಡುತ್ತೇವೆ. ಪ್ರತಿಯೊಬ್ಬರೂ ತಮ್ಮ ಧರ್ಮವೇ ಶ್ರೇಷ್ಠ ಎಂದು ಅನಗತ್ಯ ಚರ್ಚೆಯಲ್ಲಿ ತೊಡಗುತ್ತಾರೆ. ಆದರೆ ನಿಜ ವಾದ ಧರ್ಮವು ಒಬ್ಬರ ಕಷ್ಟಗಳಿಗೆ ಇನ್ನೊಬ್ಬರು ಸ್ಪಂದಿಸುವುದೇ ಆಗಿರುತ್ತದೆ ಎನ್ನುತ್ತಾನೆ ಬುದ್ಧ.

ಸಂದೇಹ ಅಥವಾ ಸಂಶಯ ಎನ್ನುವುದೊಂದು ಭೀಕರ ಖಾಯಿಲೆ ಎಂದು ಬುದ್ಧ ಹೇಳುತ್ತಾನೆ. ಒಬ್ಬ ವ್ಯಕ್ತಿಯ ಮನದಲ್ಲಿ ಸಂದೇಹ ಅಥವಾ ಸಂಶಯ ಎನ್ನುವುದು ಮನೆ ಮಾಡಿದರೆ, ಆತ ಅನನ್ಯ ಸಂಬಂಧಗಳನ್ನು ಶಂಕಿಸಲು ಶುರು ಮಾಡುತ್ತಾನೆ. ಇದರಿಂದ ಎಲ್ಲ ಮಧುರ ಬಂಧಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಆದಷ್ಟು, ಇಂಥ ಖಾಯಿಲೆಯಿಂದ ದೂರವಿರುವ ಮನಸ್ಥಿತಿಯನ್ನು ಬೆಳಸಿಕೊಳ್ಳಬೇಕು ಎಂದು ಬುದ್ಧ ಹೇಳುತ್ತಾನೆ.

ಪ್ರಾರ್ಥನೆಗೆ ಪರ್ಯಾಯವಾಗಿ ಆತ ಹೇಳುವ ‘ಧ್ಯಾನ ಮಾರ್ಗ’ ವಿಶಿಷ್ಟವಾದುದು. ಅದು ಮಾತಿನ ಲೋಕವಲ್ಲ, ಮೌನದ ಜಗತ್ತು. ಅದು ಪ್ರದರ್ಶನವಲ್ಲ, ಒಳಲೋಕದ ವಿಹಾರ. ಅಂತರಂಗದ ಪುಸ್ತಕ ತೆರೆಯದೇ, ಯಾವ ಪುಸ್ತಕ ಓದಿಯೂ ಏನೂ ಪ್ರಯೋಜನವಾಗದು ಎನ್ನುತ್ತಾನೆ ಬುದ್ಧ. ‘ಕೆಲವು ವ್ಯಕ್ತಿಗಳು ಮಾತ್ರ ಈ ಜಗತ್ತಿನಲ್ಲಿ ‘ಒಳನೋಟ’ವನ್ನು ಕಾಣಬಲ್ಲರು. ಉಳಿದಂತೆ ಎಲ್ಲರೂ ಕುರುಡರು’ ಎನ್ನುತ್ತಾನೆ.

ಮನುಷ್ಯ ಭೂತಕಾಲದ ಯೋಜನೆಯಲ್ಲಿಯೇ ಮುಳಗಬಾರದು ಎಂದು ಬುದ್ಧ ತನ್ನ ಉಪದೇಶದಲ್ಲಿ ತಿಳಿಸಿದ್ದಾನೆ. ಅವರ ಪ್ರಕಾರ, ಭವಿಷ್ಯದ ಕನಸನ್ನು ಈಡೇರಿಸಿಕೊಳ್ಳಲು ವರ್ತಮಾನದ ಕಡೆ ಗಮನ ನೀಡಿ ಎನ್ನುವುದಾಗಿತ್ತು. ಭೂತಕಾಲ ಹಾಗೂ ಭವಿಷ್ಯದ ಸ್ಥಿತಿಗತಿಗಳನ್ನು ಅರಿವಿನಲ್ಲಿಟ್ಟುಕೊಂಡು ವರ್ತಮಾನದ ಹಾದಿಯಲ್ಲಿ ನಡೆಯಬೇಕು. ಇದರಿಂದ ಮನುಷ್ಯನಿಗೆ ಸುಖ, ಸಂತೋಷದ ಮಾರ್ಗ ಲಭ್ಯವಾಗುತ್ತದೆ ಎನ್ನುವುದು ಉಪದೇಶದ ಅರ್ಥವಾಗಿತ್ತು.

ಜಗತ್ತಿನ ಮುಂದೆ ಭಾರತೀಯ ದರ್ಶನಗಳ ಅಂತಃಸತ್ವವನ್ನು ಸಮರ್ಥವಾಗಿ ಮಂಡಿಸಿದ ಸ್ವಾಮಿ ವಿವೇಕಾನಂದರು ಬೋಧಿವೃಕ್ಷದ ಅಡಿ ಕುಳಿತು ಧ್ಯಾನಾಸಕ್ತರಾಗಿ ಸಂಭ್ರಮಿಸುತ್ತಾರೆ. ‘ಬುದ್ಧ ವೇದಕ್ಕಾಗಲಿ, ಜಾತಿಗಾಗಲಿ, ಪುರೋಹಿತರಿಗಾಗಲಿ, ಆಚಾರಕ್ಕಾಗಲಿ ಜಗ್ಗಲಿಲ್ಲ. ಸತ್ಯಾನ್ವೇಷಣೆಯಲ್ಲಿ ಇಂತಹ ದಿಟ್ಟತನ ಮತ್ತು ಸರ್ವಜನರ ಮೇಲೆ ಪ್ರೀತಿಯುಳ್ಳ ಇನ್ನೊಬ್ಬ ವ್ಯಕ್ತಿಯನ್ನು ನಾನು ಪ್ರಪಂಚದಲ್ಲಿ ಮತ್ತೆಂದೂ ಕಂಡಿಲ್ಲ’ ಎಂದು ಸ್ವಾಮಿ ವಿವೇಕಾನಂದ ಹೇಳುತ್ತಾರೆ.

ಬೌದ್ಧ ಧರ್ಮ ಹಾಗೂ ಬುದ್ಧನ ಉಪದೇಶ ಏನಿರಬಹುದು ಎಂಬ ಉತ್ತರವನ್ನು ಹುಡುಕುತ್ತಾ ಹೊರಟರೇ, ತಿಳಿಯುವುದನೇಂದರೆ ಬುದ್ಧನ ಬಾಳೇ(ಜೀವನ) ಆತನ ಬೋಧನೆಯಾಗಿತ್ತು. ಎಂದಿಗೂ ಕೂಡ ತನ್ನ ಆದರ್ಶ, ಆಶಯಗಳನ್ನು ಧಿಕ್ಕರಿಸಿದವನಲ್ಲ. ಎಂತ ಸಾವಿನ ದವಡೆಯಲ್ಲೂ ಸಿಲುಕಿಕೊಂಡರೂ ತಾನೂ ನಂಬಿದ ಸತ್ಯಗಳನ್ನು ಬಿಟ್ಟವನಲ್ಲ. ಬುದ್ಧ ಜೀವನದುದ್ದಕ್ಕೂ ನೊಂದವರ ಬಾಳಿಗೆ ಬೆಳಕಾದವನೂ. ಸಮಾಜದಲ್ಲಿ ತುಡಿತಕ್ಕೊಳಗಾದವರ ಕಣ್ಣೀರ ಒರೆಸಿದನು. ದ್ವೇಷ, ಅಸೂಯೆಗಳನ್ನು ನಿರ್ನಾಮ ಮಾಡಿ ಸಮಾಜದಲ್ಲಿ ಪ್ರೀತಿಯ ಚಿಲುಮೆಯನ್ನು ಉಕ್ಕಿಸಿದನು. ಹುಟ್ಟು ಮತ್ತು ಸಾವು ಈ ಎರಡು ಬಂಧನಗಳಲ್ಲಿ ನಾವು ಗಳಿಸಬೇಕಾದದ್ದು ಅಪ್ರತಿಮವಾದದ್ದು ಪ್ರೀತಿಯೊಂದೇ ಎಂದು ಜಗತ್ತಿಗೆ ಸಾರಿದನು.

ಸರ್ವರಿಗೂ ಬುದ್ಧ ಪೂರ್ಣಿಮೆಯ ಶುಭಾಶಯಗಳು

ಲೇಖಕರು: ✍. ಅರುಣ್ ಕೂರ್ಗ್

ಸಾಮಾಜಿಕ ಕ್ರಾಂತಿಯ ಹರಿಕಾರ ಶ್ರೀ ನಾರಾಯಣ ಗುರು

ಸಾಮಾಜಿಕ ಕ್ರಾಂತಿಯ ಹರಿಕಾರ ಶ್ರೀ ನಾರಾಯಣ ಗುರು

ಸೆಪ್ಟಂಬರ್‌-2, ಬ್ರಹ್ಮರ್ಷಿ ನಾರಾಯಣ ಗುರುಗಳ ಜಯಂತಿ ಪ್ರಯುಕ್ತ ವಿಶೇಷ ಲೇಖನ:

  ಕೇರಳದಲ್ಲಿನ ಮನುಷ್ಯ-ಮನುಷ್ಯರ ಮಧ್ಯೆ ಜಾತಿ ತಾರತಮ್ಯಗಳನ್ನು ಕಡಿಮೆ ಮಾಡಲು ಇಡೀ ಜೀವನವನ್ನು ಮುಡಿಪಾಗಿಟ್ಟವರು ಶ್ರೀ ನಾರಾಯಣ ಗುರುಗಳು. ಕೇರಳ ಸಮಾಜದಲ್ಲಿನ ಅಸ್ಪೃಶ್ಯತೆಯ ಪಿಡುಗಿಗೆ ತಮ್ಮದೆ ಆದ ನಿಲುವಿನಲ್ಲಿ, ಸಮಾಧಾನಕರವಾದ ಉಪಾಯಗಳನ್ನು ಕಂಡುಕೊಂಡವರು ಶ್ರೀ ನಾರಾಯಣ ಗುರುಗಳು. ಜಗತ್ತಿನಲ್ಲಿರುವುದು “ಒಂದೇ ಜಾತಿ, ಒಂದೇ ಮತ ಹಾಗೂ ಒಂದೇ ದೇವರು” ಎಂಬ ತತ್ವವನ್ನು ಪ್ರತಿಪಾದಿಸಿದವರು ಶ್ರೀ ನಾರಾಯಣ ಗುರುಗಳು. ಕೇರಳದಲ್ಲಿ ಅತಿ ಹೆಚ್ಚು ಸಾಮಾಜಿಕ ಬದಲಾವಣೆಗಳನ್ನು ಮಾಡಿದ ವ್ಯಕ್ತಿ ಎಂದರೆ ಅದು ಬ್ರಹ್ಮಶ್ರೀ ನಾರಾಯಣ ಗುರುಗಳು.
ಮೇಲು ಜಾತಿಯೆಂದು ಪರಿಗಣಿಸಿಕೊಂಡವರಿಂದ 19ನೇ ಶತಮಾನದಲ್ಲಿ ಕೇರಳದ ಬಹುಸಂಖ್ಯಾತ ಜನಾಂಗದವರು ಅಸ್ಪೃಶ್ಯ ಎಂದು ಪರಿಗಣಿಸಿರುವ ವರ್ಗಕ್ಕೆ ಸೇರಿದವರಾಗಿದ್ದು, ದೇವಾಲಯದಲ್ಲಿ ಅವರಿಗೆ ಪ್ರವೇಶವಿರಲಿಲ್ಲ. ದೇವಾಲಯಗಳಿಗೆ ಮೇಲು ಜಾತಿಯವರು ನಡೆಯುವ ದಾರಿಯಲ್ಲಿ ಅವರು ನಡೆಯುವಂತಿರಲಿಲ್ಲ. ಅಸ್ಪೃಶ್ಯ ಎಂದು ಪರಿಗಣಿಸಿರುವ ಮಹಿಳೆಯರು ಆಭರಣ ಧರಿಸುವಂತಿರಲಿಲ್ಲ, ಅಂದವಾಗಿ ತಲೆ ಬಾಚುವಂತಿರಲಿಲ್ಲ, ಹೂ ಮುಡಿಯುವಂತಿರಲಿಲ್ಲ, ಕಾಲಿಗೆ ಚಪ್ಪಲಿ ಹಾಕುವಂತಿರಲಿಲ್ಲ ಮತ್ತು ಕುಪ್ಪಸ್ಸವನ್ನು ಕೂಡ ತೊಡುವಂತಿರಲಿಲ್ಲ, ಅವಿದ್ಯೆಯಿಂದಾಗಿ ಸಾಮಾಜಿಕವಾಗಿ ಕ್ರೂರ ಶೋಷಣೆಗೆ ಒಳಗಾದ ಕೆಳವರ್ಗದವರಿಗೆ ತಮ್ಮ ದುಃಸ್ಥಿತಿಯ ಅರಿವೂ ಕೂಡಾ ಇರಲಿಲ್ಲ. ಈ ಮೌಢ್ಯತೆಯನ್ನು ಕಂಡ ಸ್ವಾಮಿ ವಿವೇಕಾನಂದರೇ “ಕೇರಳವೊಂದು ಹುಚ್ಚರ ಆಸ್ಪತ್ರೆ ” ಎಂಬ ಉದ್ಘಾರ ತೆಗೆದಿದ್ದರು.

ಮಹಾಭಾರತದಲ್ಲಿ ಶ್ರೀ ಕೃಷ್ಣನು ಪ್ರಪಂಚದಲ್ಲಿ “ಅಧರ್ಮ ಯಾವಾಗ ಹೆಚ್ಚಾಗುತ್ತೋ, ಅದನ್ನು ಮಟ್ಟ ಹಾಕಿ ಧರ್ಮವನ್ನು ಪುನರ್‌ ಸ್ಥಾಪಿಸಲು ನಾನು ಮತ್ತೆ ಮತ್ತೆ ಜನ್ಮ ತಾಳುತ್ತೇನೆ” ಎಂಬುದಾಗಿ ಹೇಳುತ್ತಾರೆ. ಭಾರತದ ನೆಲದಲ್ಲಿ ಅಶಾಂತಿ, ದೌರ್ಜನ್ಯ, ಮತಾಂತರ ಹೀಗೆ ನಮ್ಮ ಆಚಾರ ಪರಂಪರೆಗೆ ಧಕ್ಕೆಯಾದ ಸಂದರ್ಭದಲ್ಲಿ ಅನೇಕ ಯುಗ ಪುರುಷರು ಜನ್ಮ ತಾಳಿದ್ದಾರೆ. ಹಾಗೆ ಜನಿಸಿದವರಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರುಗಳು ತಮ್ಮದೆ ಆದ ರೀತಿಯಲ್ಲಿ ದುಷ್ಟ ಪದ್ಧತಿಗಳನ್ನು ಹೋಗಲಾಡಿಸಿ ಜನತೆಯನ್ನು ಉದ್ಧರಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟವರು. ಸಮಾಜದಲ್ಲಿ ಸುಧಾರಣೆ ತರಲು ಯತ್ನಿಸಿ, ಹಿಂದು ಧರ್ಮ ಸಂಸ್ಕೃತಿಗಳನ್ನು ರಕ್ಷಿಸಿ ಕೆಳವರ್ಗದವರನ್ನು ಮೇಲೆತ್ತಿದ ಮಹಾನ್‌ ಸಂತ ಶ್ರೀ ನಾರಾಯಣ ಗುರುಗಳು.

  ೧೮೫5ನೇ ಯ ಇಸವಿಯ ಕೇರಳದಲ್ಲಿ ಒಣಂ ಹಬ್ಬದ ಮೂರನೆಯ ಚದಯಂ ದಿನ ಶತಭಿಷ ನಕ್ಷತ್ರದ ಹುಣ್ಣಿಮೆಯ ಶುಭ ಸಂದರ್ಭದಂದು ʻಮಾಡಾನ್ ಆಶಾನ್ʼ ಮತ್ತು ʻಕುಟ್ಟಿ ಅಮ್ಮಾಳ್ʼ ದಂಪತಿಯ ಕೊನೆಯ ಪುತ್ರನಾಗಿ ವಿಶ್ವ ಮಾನವತೆಯ ಹರಿಕಾರನೆಂದು ಎಲ್ಲೆಡೆ ಪರಿಗಣಿಸಲ್ಪಟ್ಟ, ದೀನ-ದಲಿತರಿಗೆ, ಅಸ್ಪ್ರಶ್ಯರಿಗೆ ಬದುಕಿನ ಹೊಸ ಭರವಸೆಯನ್ನು ಒದಗಿಸಿ ಕೊಟ್ಟ ಶ್ರೀ ನಾರಾಯಣ ಗುರು ಮಹಾನ್ ಸಂತನ ಜನನವಾಯಿತು . ಶ್ರೀ ಗುರುಗಳ ಬಾಲ್ಯದ ಹೆಸರು ” ನಾಣು” ಎಂದಾಗಿತ್ತು. ಅವರು ತನ್ನ ಅತಿ ಕಿರಿಯ ವಯಸ್ಸಿನಲ್ಲಿಯೇ ಅಗಾಧವಾದ ಪಾಂಡಿತ್ಯವನ್ನು ಪಡೆದಿದ್ದು, ಸದಾ ಆಧ್ಯಾತ್ಮಿಕ ಚಿಂತೆಯಲ್ಲಿಯೇ ಮಗ್ನನಾಗಿರುತ್ತಿದ್ದರು. ಮನುಕುಲದ ಸಂತಸವೆ ದೇವರಿಗೆ ಪೂಜೆ ಎಂದು ಬಾಲ್ಯದಲ್ಲಿಯೇ ದೇವರಿಗೆ ಇರಿಸಿದ್ದ ಹಣ್ಣು ಹಂಪಲುಗಳನ್ನು ತಿಂದು ತೇಗಿ ಸಂತಸಪಡುತ್ತಿದ್ದರಂತೆ “ಮನುಷ್ಯನ ಹೊಟ್ಟೆ ತುಂಬಿ ತೃಪ್ತಿಯಾದರೆ ದೇವರು ಸಿಟ್ಟಾಗುತ್ತಾನೇನು? ಅವನಿಗೆ ಅದರಿಂದ ಸಂತೋಷವಾಗುತ್ತದೆ” ಎಂದೆನ್ನುತ್ತಿದ್ದನಂತೆ. ಮೇಲು ಜಾತಿಯವರನ್ನು ಬೇಕೆಂದೆ ಮುಟ್ಟಿ “ಈಗ ನಿಮ್ಮ ಜಾತಿ ಹೋಗಿ ಬಿಡ್ತಾ ಎಲ್ಲಿ ಕಾಣಿಸೋದಿಲ್ಲ” ಎಂದು ಕೈ ತಟ್ಟಿ ನಗುತ್ತಿದ್ದ ನಾಣುವಿಗೆ ಚಿಕ್ಕಂದಿನಿಂದಲೆ ಬಡವರು ನೊಂದವರು ಅಂದರೆ ಆತ್ಮೀಯತೆ ಹಾಗೂ ಭೌತಿಕ ಸುಖಗಳ ಕಡೆಗೆ ನಿರಾಸಕ್ತಿ. ಕೇರಳದಲ್ಲಿ ಜಾತಿ, ಮತ-ಭೇದಗಳು ಅದರ ನಡುವೆ ಅಸ್ಪ್ರಶ್ಯತೆ ಹೆಚ್ಚಾಗಿದ್ದ ಕಾಲದಲ್ಲಿ, ಶ್ರೀ ನಾರಾಯಣ ಗುರು ಅವತರಿಸುತ್ತಾರೆ. ನಂತರದ ದಿನಗಳಲ್ಲಿ ಸಮಾಜದಲ್ಲಿ ಬೇರೂರಿದ್ದ ಅಸ್ಪ್ರಶ್ಯತೆಯ ವಿರುದ್ಧ ಹೋರಾಟಕ್ಕೆ ತಮ್ಮ ಜೀವನವನ್ನೇ ಮೀಸಲಿಡುತ್ತಾರೆ.

  ಬಾಲ್ಯದಲ್ಲಿ ಶಿಕ್ಷಣ ಕಲಿತು ಸಂಸ್ಕೃತ ಜ್ಞಾನ ಪಡೆದಿದ್ದ ಇವರು, ಸಂಸ್ಕೃತ ಶ್ಲೋಕವನ್ನು ಸರಾಗವಾಗಿ ಹಾಡುತ್ತಿದ್ದರು. ನಂತರ ದಿನಗಳಲ್ಲಿ ಗುರುಗಳು ಆಧ್ಯಾತ್ಮಿಕ ಜ್ಞಾನಕ್ಕಾಗಿ ಕಾಡು ಮೇಡು ಅಲೆದಾಡುವುದನ್ನು ಕಂಡ ಮನೆಯವರಿಗೆ ಇದು ವಿಚಿತ್ರವೆನಿಸಿತು. ನಾಣುವಿಗೆ ಮದುವೆ ಮಾಡಿ ಸಂಸಾರದ ಬಂಧನದಲ್ಲಿರಿಸುವ ಮನೆಯವರ ಪ್ರಯತ್ನ ವ್ಯರ್ಥವಾಯಿತು. ಮನೆಯವರು ಕರೆತಂದ ಮದುಮಗಳಿಗೆ(ಅಂದಿನ ಕಾಲದಲ್ಲಿ ಮದುಮಗಳನ್ನು ಮನೆಯವರೆ ನೋಡಿ ಇಷ್ಟಪಟ್ಟು ಕರೆತರುವ ಸಂಪ್ರದಾಯವಿತ್ತು.) ʻನಾವೆಲ್ಲ ಬೇರೆ ಬೇರೆ ಉದ್ದೇಶಕ್ಕೆ ಹುಟ್ಟಿದ್ದೇವೆ; ನಿಮ್ಮ ದಾರಿ ಬೇರೆ ನನ್ನ ದಾರಿ ಬೇರೆ ನಿಮ್ಮ ದಾರಿಯಲ್ಲಿ ಮುನ್ನಡೆಯುವುದರಿಂದ ನಿಮಗೆ ಹಿತವಾಗಬಹುದು, ನನ್ನ ದಾರಿಯಲ್ಲಿ ಹೋಗಲು ನನ್ನನ್ನು ದಯಮಾಡಿ ಬಿಟ್ಟು ಬಿಡಿʼ ಎಂದು ಮನೆಯನ್ನು ಬಿಟ್ಟು ಹೊರನಡೆದಿದ್ದ. ತದನಂತರ ಬ್ರಹ್ಮ ಸತ್ಯದ ಶೋಧಕನಾಗಿ ಸುತ್ತಾಡಿದರು. ಕಾಡಿನಲ್ಲಿ, ಗುಹೆಗಳಲ್ಲಿ ನಿರಾತಂಕವಾಗಿ ಓಡಾಡಿ ತಮಿಳುನಾಡಿನ ಮರುತ್ವ ಮಲೆಯಲ್ಲಿ ಧಾನ್ಯ ಮಗ್ನರಾಗಿರುತ್ತಿದ್ದಾಗ ಅವರ ಅಕ್ಕಪಕ್ಕದಲ್ಲಿ ಎರಡು ಚಿರತೆಗಳು ಅಂಗರಕ್ಷಕರಂತೆ ನಿಂತಿರುತ್ತಿದ್ದವಂತೆ.

  ‘ಒಂದೇ ಜಾತಿ, ಒಂದೇ ಮತ, ಒಂದೇ ದೇವರು’ ಎಂಬ ಘೋಷಣೆಯ ಮೂಲಕ ಸಾಮಾಜದಲ್ಲಿ ಕ್ರಾಂತಿಗೆ ನಾಂದಿ ಹಾಡಿದವರು ಸಮಾಜ ಸುಧಾರಕ ಶ್ರೀ ನಾರಾಯಣ ಗುರುಗಳು. ಜನರು ಶೋಷಣೆಗಳಿಂದ ಮುಕ್ತರಾಗಲು, ಜೀವನ ಸುಧಾರಿಸಲು ಸಂಘರ್ಷಕ್ಕಿಂತ ಭಿನ್ನವಾದ ಚಳವಳಿಯನ್ನು ಮುನ್ನಡೆಸಿದರು. ಕ್ರಿ.ಶ ೧೮೮೮ ರ ಶಿವರಾತ್ರಿಯ ದಿನದಂದು ಅರವಿ ಪುರಂನಲ್ಲಿ ಮೊಟ್ಟಮೊದಲು ಶಿವಾಲಯವನ್ನು ಸ್ಥಾಪಿಸುವ ಮೂಲಕ ಸ್ಥಾಪಿತ ಹಿತಾಸಕ್ತಿಗಳ ಶೋಷಣೆಯ ವ್ಯವಸ್ಥೆಯ ವಿರುದ್ಧ ಮೊದಲ ಏಟು ನೀಡಿದರು.
ಅರವಿಪುರಂನಲ್ಲಿ ದೇವಾಲಯವನ್ನು ಸ್ಥಾಪಿಸಿ ದಲಿತ ಜನಾಂಗಕ್ಕೆ ದೇವಾಲಯವನ್ನು ಪ್ರವೇಶಿಸುವ ಹಾಗೂ ಪೂಜೆಗೈಯುವ ವ್ಯವಸ್ಥೆಯನ್ನು ಕಲ್ಪಿಸಿದ ಹಾಗೆಯೇ, ಕ್ರಿ.ಶ. ೧೯೧೨ ರಂದು ಮಂಗಳೂರಿನ ಕುದ್ರೋಳಿಯಲ್ಲಿ ಶಿವಲಿಂಗವನ್ನು ಪ್ರತಿಷ್ಠೆ ಮಾಡಿ, ಶ್ರೀ ಗೋಕರ್ಣನಾಥೇಶ್ವರ ದೇವಾಲಯವನ್ನು ಸ್ಥಾಪಿಸಿದರು. ದಕ್ಷಿಣ ಭಾರತ ಮತ್ತು ಶ್ರೀಲಂಕಾದಲ್ಲಿ ಒಟ್ಟು 86 ದೇವಾಲಯಗಳ ಸ್ಥಾಪನೆಗೆ ಗುರುಗಳು ಕಾರಣೀಬೂತರಾದರು.

ಶೋಷಿತರಿಗಾಗಿಯೇ ಪ್ರತ್ಯೇಕ ಶಿವ ದೇವಾಲಯ ಸ್ಥಾಪಿಸುತ್ತಿದ್ದ ನಾರಾಯಣ ಗುರುಗಳಿಗೆ ನಂಬೂದರಿ ಬ್ರಾಹ್ಮಣರು ಆಕ್ಷೇಪ ವ್ಯಕ್ತಪಡಿಸಿ; ಕೆಳಜಾತಿಯ ಈಳವ ಗುರುವೊಬ್ಬನಿಗೆ ಶಿವ ದೇವಾಲಯ ಸ್ಥಾಪನೆಯ ಅಧಿಕಾರವಿದೆಯೇ? ಎಂದು ಪ್ರಶ್ನಿಸಿದ್ದರು. ಆಗ ಶ್ರೀ ನಾರಾಯಣ ಗುರುಗಳು “ನಮ್ಮ ಶಿವನು ಈಳವ ಶಿವನಾಗಿದ್ದು, ಬ್ರಾಹ್ಮಣಶಿವನಲ್ಲ…” ಎಂದು ಸ್ವಾರಸ್ಯಕರವಾದ ಉತ್ತರವನ್ನು ನೀಡಿದ್ದರು. ಶಿವನು ಯಾವ ಜಾತಿಗೂ ಸೇರಿದವನಲ್ಲ. ಶಿವತತ್ವ ತಿಳಿಯುವ ಹಕ್ಕು ಯಾವುದೇ ಜಾತಿಯ ಗುತ್ತಿಗೆಯಲ್ಲ ಎಂಬ ಅವರ ತಿರುಗೇಟು ತೀಕ್ಷ್ಣವಾಗಿತ್ತು.
ಅದ್ವೈತ ತತ್ವವನ್ನು ಒಪ್ಪಿ, ಬದುಕಿನಲ್ಲಿ ಅಳವಡಿಸಿಕೊಂಡಿದ್ದ ಗುರುಗಳು ಪ್ರಗತಿಪರ ಧೋರಣೆಯೊಂದಿಗೆ ದೇವಾಲಯಗಳನ್ನು ಸ್ಥಾಪಿಸಿದರು. ದೇವಸ್ಥಾನಗಳು ಮನುಷ್ಯನ ವ್ಯಕ್ತಿತ್ವದ ವಿಕಾಸ ಹಾಗೂ ಆಧ್ಯಾತ್ಮಿಕ ಸಾಧನೆಯ ಕೇಂದ್ರವಾಗಬೇಕೆಂದು ಶ್ರಮಿಸಿದರು. ತಾವು ಸ್ಥಾಪಿಸಿದ ಶಾಲೆಗಳಲ್ಲಿ ಎಲ್ಲ ವರ್ಗದ ಜನರಿಗೂ ಶಾಸ್ತ್ರಪೂಜೆ ಹಾಗು ಅರ್ಚನಾ ವಿಧಿಗಳನ್ನು ಕಲಿಯುವ ಅವಕಾಶ ಕಲ್ಪಿಸಿದರು. ಆದಿ ಶಂಕರರು ಅದ್ವೈತ ತತ್ವವನ್ನು ಪ್ರತಿಪಾದನೆ ಮಾಡಿದರು. ಆದರೆ ಶ್ರೀ ನಾರಾಯಣ ಗುರುಗಳು ಅದ್ವೈತ ತತ್ವವನ್ನು ಮನುಷ್ಯ ಜೀವನದಲ್ಲಿ ಕಾರ್ಯರೂಪಕ್ಕೆ ತಂದರು. ಇದು ಜಗತ್ತಿನ ಇತಿಹಾಸದಲ್ಲೇ ಒಂದು ಮೈಲಿಗಲ್ಲಾಗಿದೆ.

ಕೇರಳ ರಾಜ್ಯದ ಸಾಮಾಜಿಕ ದುಸ್ಥಿತಿಯನ್ನು ಕಂಡ ಸ್ವಾಮಿ ವಿವೇಕಾನಂದರು ಡಾ| ಪಲ್ಪು ಎಂಬ ಈಡಿಗ ಜನಾಂಗದ ಗಣ್ಯರಿಂದ ಅರಿತು ಡಾ| ಪಲ್ಪುರವರಿಗೆ ಒಂದು ಗಂಭೀರ ಸಲಹೆಯನ್ನು ಮುಂದಿಡುತ್ತಾರೆ; ʻನೀವು ನಿಮ್ಮ ಜನಾಂಗದವರಾದ ಚಾರಿತ್ರ್ಯವಂತನೂ, ಯೋಗ್ಯನೂ ಆದ ವ್ಯಕ್ತಿಯನ್ನು ಮಾರ್ಗದರ್ಶಕನಾಗಿ ಮಾಡಿಕೊಂಡು ಆತನನ್ನು ಅನುಸರಿಸುವುದು ಹೆಚ್ಚು ಕ್ಷೇಮ ಎಂದೆನಿಸುತ್ತದೆ. ಆಗ ನಿಮ್ಮ ಬಹಳಷ್ಟು ಸಮಸ್ಯೆಗಳು ಪರಿಹಾರ ಕಾಣುತ್ತವೆ!ʼ ಎಂಬ ಸ್ವಾಮೀಜಿಯವರ ಸಲಹೆಯನ್ನು ಜವಾಬ್ದಾರಿಯುತವಾಗಿ ಸ್ವೀಕರಿಸಿ ಕಾರ್ಯೋನ್ಮುಖರಾದ ಡಾ| ಪಲ್ಪು ಯೋಗ್ಯ ವ್ಯಕ್ತಿಗಾಗಿ ತೀವ್ರ ಹುಡುಕಾಟ ನಡೆಸಿ ಶ್ರೀ ನಾರಾಯಣ ಗುರುಗಳನ್ನು ಕಂಡುಕೊಂಡರು. ಮುಂದಿನ ದಿನಗಳಲ್ಲಿ ಶ್ರೀ ನಾರಾಯಣ ಗುರುಗಳು ಹಿಂದುಳಿದ ಜನಾಂಗದವರ ಏಳಿಗೆಗಾಗಿ ಶ್ರಮಿಸಿ ಪ್ರಸಿದ್ಧರಾದರು. ಡಾ| ಪಲ್ಪುರವರು ಮೈಸೂರು ಸಂಸ್ಥಾನದ ದಿವಾನರಾಗಿದ್ದರು.
“ಕೇರಳದ ನಾರಾಯಣ ಗುರುಗಳಿಗೆ ಸರಿಸಮಾನರಾದ ಮಹಾಪುರುಷನನ್ನು ನಾನು ಎಲ್ಲೂ ಕಂಡಿಲ್ಲ” ಎಂದು ವಿಶ್ವಕವಿ ರವಿಂದ್ರನಾಥ ಠಾಗೂರರು ಉದ್ಗರಿಸಿದ್ದರು. ಗಾಂಧೀಜಿಯವರು ತಮ್ಮ ಹರಿಜನೋದ್ಧಾರಕ್ಕಾಗಿ ಸ್ಫೂರ್ತಿ ಪಡೆದದ್ದು ಶ್ರೀ ನಾರಾಯಣ ಗುರುಗಳಿಂದ ಎಂದು ನುಡಿದ್ದಿದ್ದರು. “ಶ್ರೀ ನಾರಾಯಣ ಗುರುಗಳ ಸಾಮಾಜಿಕ ಕಾರ್ಯಕ್ರಮಗಳಿಗೂ ಗಾಂಧೀಜಿಯವರ ಸಾಮಾಜಿಕ ಚಟುವಟಿಕೆಗಳಿಗೂ ಬಹಳಷ್ಟು ಹೋಲಿಕೆ ಇರುವುದನ್ನು ನಾವು ಕಾಣಬಹುದು” ಎಂದು ರೋಮನ್ ರಾಲೆಂಡ್ ಉದ್ಗರಿಸಿದ್ದಾರೆ.

ಬ್ರಹ್ಮ ಋಷಿ ಶ್ರೀ ನಾರಾಯಣ ಗುರುಗಳು ತಮ್ಮ ಸಮಾಜ ಸುಧಾರಣೆಯಿಂದಾಗಿ ದುಷ್ಟ ಪದ್ಧತಿಗಳಿಂದ ಜನತೆಯನ್ನು ಉದ್ಧರಿಸಲು ಜೀವನದ ಕೊನೆಯವರೆಗೂ ನಿಸ್ವಾರ್ಥ ಸೇವೆಯನ್ನು ಮಾಡಿದ್ದಾರೆ. ಅನೇಕ ಸುಧಾರಣೆ ತರಲು ಯತ್ನಿಸಿ, ಧರ್ಮ ಸಂಸ್ಕೃತಿಗಳನ್ನು ರಕ್ಷಿಸಿಸುವ ಮಹದೋಪಕಾರ ಮಾಡಿದ್ದಾರೆ. ಈ ಮಹಾತ್ಮರ ಪುಣ್ಯ ಕಾರ್ಯಗಳಿಂದ ನಮ್ಮ ಸಮಾಜ ಇಂದಿಗೂ ಬಲಿಷ್ಠವಾಗಿದೆ. ಇದರಿಂದ ನಾವೆಲ್ಲರೂ ಶ್ರೀ ನಾರಾಯಣ ಗುರುಗಳ ತತ್ವ, ಸಿದ್ದಂತಾ ಮತ್ತು ಆದರ್ಶಗಳನ್ನು ಮುಂದುವರಿಸಿಕೊಂಡು ಹೋಗುವ ಕೆಲಸವಾಗಬೇಕಾಗಿದೆ. ಇಂತಹ ಮಹಾನ್ ಚೇತನವೊಂದನ್ನು ಗುರುವಾಗಿ ಪೂಜಿಸುವುದು ನಮ್ಮೆಲ್ಲರ ಭಾಗ್ಯ. ಅವರು ಕೇವಲ ಈಳವ ಅಥವಾ ಬಿಲ್ಲವ ಜನಾಂಗಕ್ಕೆ ಸೀಮಿತವಾದರೆ ಅವರ ತತ್ವಗಳಿಗೆ ಅನ್ಯಾಯವಾಗುತ್ತದೆ. ಇನ್ನೂ ಮುಖ್ಯವಾಗಿ ಗುರುವನ್ನು ಕೇವಲ ಮೂರ್ತಿ ಮಾಡಿ ಕೇವಲ ಕಲ್ಲಿಗೆ ಪೂಜೆ ಸಲ್ಲುವಂತಾಗದಿರಲಿ. ಅವರ ಸಂದೇಶಗಳನ್ನು ಮೈಗೂಡಿಸಿಕೊಂಡು ನಮ್ಮಲ್ಲಿ ಅಳವಡಿಸಿಕೊಳ್ಳೋಣ. ಸಾಧ್ಯವಾದಷ್ಟು ಅವರು ಹೇಳಿಕೊಟ್ಟ ಶಾಂತಿ ಪಥದಲ್ಲಿ ನಡೆಯೋಣ. ಆ ದಾರಿಯಲ್ಲಿ ನಡೆದು ಕೃತಾರ್ಥರಾಗಲು ಪ್ರಯತ್ನಿಸೋಣ. ಶ್ರೀ ನಾರಾಯಣ ಗುರುಗಳು ಕೇವಲ ಒಂದು ಜನಾಂಗದ ಗುರುವಲ್ಲ, ಮಾನವ ಜನಾಂಗದ ಗುರು, ವಿಶ್ವ ಮಾನವ ಗುರು, ಸಾಮಾಜಿಕ ಮತ್ತು ಧಾರ್ಮಿಕ ಕ್ರಾಂತಿಯ ಹರಿಕಾರರು.

ಈ ಮಹಾನ್ ಕ್ರಾಂತಿಕಾರಿ ಸಂತ ಮತ್ತು ಸಾಮಾಜಿಕ ಸುಧಾರಕ ಶ್ರೀ ನಾರಾಯಣ ಗುರುಗಳ ಜನ್ಮಸ್ಥಳವು ಕೇರಳದ ತಿರುವನಂತಪುರಂನಿಂದ 7 ಮೈಲಿ ದೂರದಲ್ಲಿರುವ ಚೆಂಬಳಂತಿ ಎಂಬ ಗ್ರಾಮವಾಗಿದ್ದು, ಇಂದಿಗೂ ಅಲ್ಲಿ ಅವರು ಜನಿಸಿದ ಮನೆಯನ್ನು ಹಾಗೆಯೇ ಸಂರಕ್ಷಿಸಿ ಇಡಲಾಗಿದೆ. ಶ್ರೀ ನಾರಾಯಣ ಗುರುಗಳು ಸಣ್ಣ ಗುಡಿಸಲಿನಂತಹ ಮನೆಯಲ್ಲಿ ಜನಿಸಿದರೂ, ಇಂದು ವಿಶ್ವ ವಿಖ್ಯಾತರಾದ ಬ್ರಹ್ಮ ಋಷಿಗಳಾಗಿದ್ದಾರೆ.

✍. ಕಾನತ್ತಿಲ್ ರಾಣಿ ಅರುಣ್

ಪೂರ್ಣತೆಯೇ ಗುರು: ಗುರುಪೂರ್ಣಿಮೆ ನಿಮಿತ್ತ ವಿಶೇಷ ಲೇಖನ

ಪೂರ್ಣತೆಯೇ ಗುರು:
ಗುರುಪೂರ್ಣಿಮೆ ನಿಮಿತ್ತ ವಿಶೇಷ ಲೇಖನ

ನಮ್ಮ ಪರಂಪರೆಯಲ್ಲಿ ಗುರುವಿಗೆ ಭಗವಂತನ ಸ್ಥಾನವನ್ನು ನೀಡಿದ್ದೇವೆ. ಮನುಷ್ಯನ ಬದುಕನ್ನು ಅಜ್ಞಾನದಿಂದ ಜ್ಞಾನದೆಡೆಗೆ, ಕತ್ತಲಿನಿಂದ ಬೆಳಕಿನೆಡೆಗೆ, ಪಶುತ್ವದಿಂದ ದೈವತ್ವದೆಡೆಗೆ ನಡೆಸುವವನೆ ಗುರು. ಯೋಗ್ಯ ಗುರು ಮತ್ತು ಸ್ಪಷ್ಟ ಗುರಿಯುಳ್ಳ ವ್ಯಕ್ತಿ ನಿಸ್ಸಂದೇಹವಾಗಿ ಪರಿಪೂರ್ಣತೆಯೆಡೆಗೆ ಸಾಗಬಲ್ಲ. ಹೀಗೆ ಸಕಲ ಅನುಯಾಯಿಗಳನ್ನು ಮುನ್ನಡೆಸುತ್ತಿದ್ದ ಆದರ್ಶ ಗುರುಪರಂಪರೆಯೇ ನಮ್ಮಲ್ಲಿದೆ.

ಪ್ರತಿವರ್ಷ ಗುರುಪೂರ್ಣಿಮೆ ಅಥವಾ ವ್ಯಾಸಪೂರ್ಣಿಮೆ ಬರುವುದು ಆಷಾಢ ಮಾಸದ ಶುಕ್ಲ ಪಕ್ಷದ ಹುಣ್ಣಿಮೆ ದಿನ. ಆ ದಿನ ವೇದವ್ಯಾಸರು ಅವತರಿಸಿದ ದಿನ ಎಂದು ಪ್ರತೀತಿ. ವೇದವು ಮೊದಲು ಒಂದೇ ಆಗಿತ್ತು. ಅದನ್ನು 4 ಭಾಗಗಳಾಗಿ ವಿಂಗಡಿಸಿದವರು ವೇದವ್ಯಾಸರು. ವ್ಯಾಸ ಎಂದರೆ ವಿಂಗಡಿಸುವ ಎಂಬ ಅರ್ಥವಿದೆ. ವೇದವನ್ನು ವಿಂಗಡಿಸಿದ್ದರಿಂದ ವೇದವ್ಯಾಸರಾದರು. ಸಾಮಾನ್ಯವಾಗಿ ಜುಲೈ ತಿಂಗಳಿನಲ್ಲಿ ಬರುವ ಆಷಾಢ ಮಾಸದ ಪೂರ್ಣಿಮೆಯ ದಿನವನ್ನು ಗುರು ಪೂರ್ಣಿಮಾ ಅಥವಾ ವ್ಯಾಸ ಪೂರ್ಣಿಮಾ ಎಂದು ಆಚರಿಸಲಾಗುತ್ತಿದೆ. ಇದೇ ಮಂಗಳವಾರ ಜುಲೈ16, 2019ರಂದು ಗುರು ಪೂರ್ಣಿಮಾ ದಿವಸವಾಗಿದೆ.

ಯಾವುದೇ ವಿದ್ಯೆಯನ್ನು ಕಲಿಯಬೇಕಾದರೆ ಗುರುವಿನ ಪಾತ್ರ ಹಿರಿದು. “ಗು” ಎಂದರೆ ಅಜ್ಷಾನ “ರು” ಎಂದರೆ ಹೋಗಲಾಡಿಸುವವನು. ಯಾರು ನಮ್ಮ ಅಜ್ಞಾನವನ್ನು ಹೋಗಲಾಡಿಸುವರೋ ಅವರೇ ನಮ್ಮ ಗುರು. ಮಂತ್ರ, ಪೂಜೆ, ದೇವರ ವಿಷಯವಾಗಿ ತಿಳಿಸುವವರು ಶಿಕ್ಷಾಗುರುವಾದರೆ, ಪರಮಾತ್ಮನ ಸಾಕ್ಷಾತ್ಕಾರ ಮಾಡಿಸುವವರು ಆಧ್ಯಾತ್ಮಿಕಗುರುಗಳು. ‘ಗುರುಪೂರ್ಣಿಮೆ’ ಯಂದು ಗುರುಗಳಿಗೆಲ್ಲರಿಗೂ ಗೌರವಿಸಿ ನಮಸ್ಕರಿಸುವ ಸಂಪ್ರದಾಯವಿದೆ. ಎಲ್ಲಾ ಕಾರ್ಯಗಳಿಗೆ ಮೊದಲು ಗುರುಪೂಜೆ ಮಾಡಿಯೇ ತೀರಬೇಕು. ವೇದ ಮಂತ್ರಗಳನ್ನು ಹೇಳುವಾಗ ಮೊದಲು ಶ್ರೀ ಗುರುಭ್ಯೋನಮಃ ಹರಿಃ ಓಂ ಎಂದು ಹೇಳಿಯೇ ಪ್ರಾರಂಭಿಸಬೇಕು.

ಈ ಗುರು ಪೂರ್ಣಿಮಾ ದಿವಸದಂದು ಚಾತುರ್ಮಾಸ್ಯ ವ್ರತವನ್ನು ಮಹಾಗುರು ವ್ಯಾಸರ ಪೂಜೆಯಿಂದ ಪ್ರಾರಂಭಿಸುತ್ತಾರೆ. ನಾಲ್ಕು ತಿಂಗಳು ನಡೆದು ಕಾರ್ತಿಕ ಪೂರ್ಣಿಮೆಯಂದು ವ್ರತ ಮುಕ್ತಾಯವಾಗುತ್ತದೆ. ಈ ಚಾತುರ್ಮಾಸ್ಯ ವ್ರತವನ್ನು ಶ್ರದ್ಧಾ ಭಕ್ತಿಗಳಿಂದ ಆಚರಿಸುವವರಿಗೆ ಸಮೃದ್ಧ ಆಹಾರ, ಸೌಂದರ್ಯ, ಸದ್ಬುದ್ಧಿ, ಸತ್‌ಸಂತಾನ ದೊರೆಯುವುದೆಂಬ ನಂಬಿಕೆಯಿದೆ. ಈ ದಿವಸವೇ ವೇದವ್ಯಾಸರು ಬ್ರಹ್ಮ ಸೂತ್ರ ಬರೆಯಲು ಪ್ರಾರಂಭಿಸಿದ್ದು, ಏಕಲವ್ಯನು ಗುರು ದ್ರೋಣಾಚಾರ್ಯರಿಗೆ ಗುರು ಕಾಣಿಕೆಯಾಗಿ ತನ್ನ ಬಲಗೈ ಹೆಬ್ಬೆರಳನ್ನು ಕತ್ತರಿಸಿಕೊಟ್ಟಿದ್ದು ಗುರು ಪೂರ್ಣಿಮಾ ದಿವಸ.

ಎಲ್ಲಿಯವರೆಗೆ ಕರ್ಮ ಬಂಧನದಿಂದ ಮುಕ್ತಿ ಇಲ್ಲವೋ ಅಲ್ಲಿಯ ವರೆಗೆ ಈ ಬ್ರಹ್ಮನೊಡನೆ ಒಂದಾಗಲು ಸಾಧ್ಯವಿಲ್ಲ. ಇದನ್ನು ಸದ್ಗುರು ಜ್ಞಾನವೆಂಬ ಕತ್ತರಿಯಿಂದ ತೆಗೆದು ಹಾಕಲು ಸಾಧ್ಯ. ಜ್ಞಾನವನ್ನು ಕೊಡುವವನೇ ಗುರು. ಜ್ಞಾನ ಎಂದರೆ ನಮ್ಮ ಬುದ್ಧಿ. ಮತ್ತೆ ಕೆಲವರು ಕೆಲವು ಶಾಸ್ತ್ರಗಳಲ್ಲಿರುವ ಶಬ್ದವನ್ನು ಜ್ಞಾನ ಎನ್ನುವರು. ಇವುಗಳೆಲ್ಲಾ ನಮ್ಮ ಪಂಚೇಂದ್ರಿಯಗಳ ಮೂಲಕ ಪ್ರಾಪ್ತವಾಗುವ ಜ್ಞಾನ. ಗುರು ಎಂದರೆ ಅಖಂಡ ಜ್ಞಾನ ಜ್ಯೋತಿ ಜಡತ್ವಕ್ಕೆ ಸ್ಪೂರ್ತಿ ತುಂಬಿ ಶಿಷ್ಯ ಚಿತ್ತಾಪಹಾರನಾಗಿ ತಾನು ಬೆಳಗಿ ತನ್ನಂತೆ ಇತರರನ್ನು ಬೆಳಗಿಸುವವನೇ ನಿಜವಾದ ಗುರು. ಗುರು ದೊರಕದಿದ್ದರೂ ಗುರುವಿನ ಮೂರ್ತಿಯನ್ನಿಟ್ಟು ಪೂಜಿಸಿ ಅವನಿಂದ ವಿದ್ಯೆ ಪಡೆದ ಏಕಲವ್ಯ ಬಾಲಕ ಆದರ್ಶ ಶಿಷ್ಯ ಗುರ್ವಾಜ್ಞೆಯನ್ನು ನಿಷ್ಠೆಯಿಂದ ಪಾಲಿಸಿ ಗುರೂಪದೇಶ ಪಡೆದ ಶ್ರೇಷ್ಠ ಶಿಷ್ಯ ದಾನಶೂರ ಕರ್ಣ. ನಮ್ಮ ದೇಶದ ಪ್ರಥಮ ಉಪರಾಷ್ಟ್ತ್ರಪತಿ ಡಾ.ಎಸ್. ರಾಧಾಕೃಷ್ಣರು ಗುರುವಿಗಾಗಿ ತನ್ನ ಜನ್ಮದಿನವನ್ನೇ ಸಾರಿದರು. ಇವರ ಶಿಷ್ಯರು ಇವರನ್ನು ರೇಲ್ವೆ ಸ್ಟೇಷನ್‌ಗೆ ಚಕ್ಕಡಿಯಲ್ಲಿ ಕುಳ್ಳಿರಿಸಿಕೊಂಡು ತಾವೇ ಹೆಗಲು ಹಚ್ಚಿ ಎಳೆದುಕೊಂಡು ಹೋದರು. ಇದು ಶಿಷ್ಯರು ಗುರುವಿಗೆ ತೋರಿದ ಗುರುಭಕ್ತಿ.

ಒಂದು ಸುವ್ಯವಸ್ಥಿತ, ವೈಭವಶಾಲಿ ಸಮಾಜ ನಿರ್ಮಾಣಗೊಳ್ಳುವುದು ಆ ಸಮಾಜದಲ್ಲಿನ ಪ್ರತಿಯೊಬ್ಬ ವ್ಯಕ್ತಿಯ ಚಿಂತನೆಯಿಂದ ಮತ್ತು ಆ ಚಿಂತನೆಗಳಿಗನುಗುಣವಾದ ಆತನ ಜೀವನ ಪದ್ಧತಿಯಿಂದ. ಹೀಗೆ ಸುಸಂಪನ್ನ ರಾಷ್ಟ್ರದ ನಿರ್ಮಿತಿಗಾಗಿ ಪರಂಪರಾಗತ ಮೌಲ್ಯಗಳ ಅರಿವುಳ್ಳ ಪ್ರತಿವ್ಯಕ್ತಿಯ ಕೊಡುಗೆಯೂ ಮಹತ್ವ ಪೂರ್ಣ. ಆದರೆ ಮನುಷ್ಯನು ಯಾವಾಗಲೂ ಭಿನ್ನ ಭಿನ್ನ ಪರಿಸ್ಥಿತಿಗಳಿಂದ ಸುತ್ತುವರಿಯಲಪಟ್ಟಿರುತ್ತಾನೆ. ಸುಖ-ದುಖಃಗಳ ಅನೇಕ ಪ್ರಸಂಗಗಳನ್ನು ಆತ ಎದುರಿಸಬೇಕಾಗುತ್ತಿರುತ್ತದೆ. ಇಂತಹ ವಿಷಮ ಸಂಧರ್ಭಗಳಲ್ಲಿ ಧೀರತೆಯಿಂದ ಅಪಾಯಗಳನ್ನು ನಿವಾರಿಸಿಕೊಳ್ಳುತ್ತಾ ತನ್ನ ಜೀವನವನ್ನು ಉನ್ನತ ಉದ್ದೇಶಗಳಿಗಾಗಿಯೇ ಮೀಸಲಿಸಿರಿಕೊಳ್ಳುವ ಯೋಗ್ಯತೆ ಆತನಲ್ಲಿರುವುದಿಲ್ಲ. ತನ್ನಲ್ಲಿಯೇ ಅಂತಹ ಯೋಗ್ಯತೆ ಇದೆಯೆಂದು ಯಾವನು ಭಾವಿಸುತ್ತಾನೋ ಆತನ ಅಧಃಪತನ ನಿಶ್ಚಿತವೆಂದು ತಿಳಿಯಬಹುದು. ಪ್ರತಿ ವ್ಯಕ್ತಿಯ, ತನ್ಮೂಲಕ ಇಡೀ ಸಮಾಜದ ಪತನವನ್ನು ತಡೆದು ಪರಿಪೂರ್ಣ ವಿಕಾಸದೆಡೆಗೆ ಸಾಗಲು ಬೇಕಾದ ಬಲವಾದ ಶ್ರದ್ಧಾ ಕೇಂದ್ರವೇ ’ಗುರು’.

“ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ:” “ಗುರು ಸಾಕ್ಷಾತ್ ಪರ ಬ್ರಹ್ಮ ತಸ್ಮೈ ಶ್ರೀ ಗುರವೇ ನಮ:” ಎಂದು ಗುರುವಿನೆಡೆಗೆ ನಮ್ಮ ಪೂರ್ವಿಕರು ತಮ್ಮ ಭಕ್ತಿಯನ್ನು ಮೆರೆದಿದ್ದಾರೆ. ಇದೊಂದು ಗುರು-ಶಿಷ್ಯರ ಪರಂಪರೆಯನ್ನು ಭಧ್ರಪಡಿಸಿ ಜಗತ್ತಿಗೆ ಸಾರುವ ಹಬ್ಬವೆಂತಲೂ ಹೇಳಬಹುದು. “ನಚೋರ ಹಾರ್ಯಂ ನಚರಾಜ ಹಾರ್ಯಂ. ನಭಾತ್ರಬಾಜ್ಯಂ ನಚ ಭಾರಕಾರಿ. ವ್ಯಯೇಕ್ರತೆ ವರ್ದತಿ ಏವ ನಿತ್ಯಂ. ವಿದ್ಯಾಧನಂ ಸರ್ವ ಧನಃ ಪ್ರಧಾನಂ.” ಅಂದರೆ ವಿದ್ಯೆಯನ್ನು ಯಾವ ಕಳ್ಳಕಾಕರಿಂದಲೂ ಮೋಸಮಾಡಿ ಕದ್ದೊಯ್ಯಲು ಸಾಧ್ಯವಿಲ್ಲ , ಯಾವ ರಾಜನೂ ಕೂಡ ತನ್ನ ಸಾಮರ್ಥ್ಯ ಮತ್ತು ಧರ್ಪದಿಂದ ವಶಪಡಿಸಿಕೊಳ್ಳಲು ಸಾಧ್ಯವಿಲ್ಲ. ಹೊತ್ತು ತಿರುಗಾಡಲು ಇದು ಭಾರವೂ ಅಲ್ಲ. ಹೇಗೆ ಖರ್ಚು ಮಾಡುತ್ತೇವೋ ಹಾಗೆ ವರ್ಧಿಸುವಂತಹ, ಎಲ್ಲ ಸಂಪತ್ತಿಗಿಂತಲೂ ಶ್ರೇಷ್ಟವಾದುದು ಎಂದರ್ಥ. ಇಂತಹ ಅತ್ಯಮೂಲ್ಯ ಸಂಪತ್ತನ್ನು ಧಾರೆ ಎರೆದ ಗುರುವೃಂದಕ್ಕೆ ಕೋಟಿ ನಮನಗಳನ್ನು ಸಲ್ಲಿಸುವ.

✍. ವಿವೇಕ್‌ ನರೇನ್

ಮೇ 31 ವಿಶ್ವ ತಂಬಾಕು ವಿರೋಧಿ ದಿನ

ಮೇ 31 ವಿಶ್ವ ತಂಬಾಕು ವಿರೋಧಿ ದಿನ

ತಂಬಾಕು ಸೇವನೆ ಆರೋಗ್ಯಕ್ಕೆ ಮಾರಕ

ಇಂದು (ಮೇ 31 ರಂದು) ವಿಶ್ವ ತಂಬಾಕು ರಹಿತ ದಿನ. ಈ ದಿನವು ವಿಶ್ವ ಜಾಗತಿಕ ತಂಬಾಕು ವಿರೋಧಿ ಜಾಗೃತಿ ದಿನವಾಗಿದೆ. ಪ್ರತಿವರ್ಷ ಮೇ 31 ರಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲೂಯು.ಎಚ್.ಓ.) ಹಾಗೂ ಅದರ ಸದಸ್ಯ ಸಂಸ್ಥೆಗಳ ಆಶ್ರಯದಲ್ಲಿ ವಿಶ್ವ ತಂಬಾಕು ರಹಿತ ದಿನವನ್ನು ಆಚರಿಸಲಾಗುತ್ತದೆ.

ವಿಶ್ವ ತಂಬಾಕು ನಿಷೇಧ ದಿನವು ತಂಬಾಕು ಉತ್ಪನ್ನಗಳನ್ನು ತ್ಯಜಿಸಲು ಜಾಗೃತಿ ಮೂಡಿಸುತ್ತದೆ. ತಂಬಾಕು ರಹಿತ ದೇಶ ನಿರ್ಮಿಸುವ ಕಡೆ ನಾವು ಹೆಜ್ಜೆ ಹಾಕಬೇಕಿದೆ.

ಮಾದಕ ವಸ್ತುಗಳ ತಡೆಗೆ ಜನರ ಸಹಭಾಗಿತ್ವ ಅವಶ್ಯಕತೆಯಿದೆ:
ತಂಬಾಕು ಸೇವನೆಯಿಂದ ಮನುಷ್ಯನಿಗೆ ಉಂಟಾಗುವ ರೋಗ ರುಜಿನಗಳು ಹಾಗೂ ಸಾವು ನೋವುಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಇಂದಿನ ಜಾಗತಿಕ ಪ್ರಪಂಚದಲ್ಲಿ ನಾವು ಈಗ ಪ್ರಮುಖವಾಗಿ ಶಾಲಾ ಮಕ್ಕಳಲ್ಲಿ ತಂಬಾಕಿನ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಬೇಕು. ತಂಬಾಕು ಸೇವನೆಯಿಂದ ಆರೋಗ್ಯ ಹಾಳು ಎಂಬ ಬಗ್ಗೆ ಮಕ್ಕಳಿಗೆ ಎಳೆಯ ವಯಷ್ಸಿನಲ್ಲೇ ಅರಿವು ಮೂಡಿಸಿದರೆ ಅವರು ಭವಿಷ್ಯದಲ್ಲಿ ಇದರಿಂದ ದೂರ ಇರಲು ಸಹಕಾರಿಯಾಗುತ್ತದೆ.

ತಂಬಾಕು ಸೇವನೆಯು ಮನುಷ್ಯನ ದೇಹವನ್ನು ಹಾಳುಗೆಡಹುತ್ತದೆಯೇ ವಿನಃ ಎಂದಿಗೂ ಪ್ರಯೋಜನಕಾರಿಯಲ್ಲ. ನಾವು ತಂಬಾಕು ಮತ್ತು ಇದರ ಉತ್ಪನ್ನಗಳನ್ನು ಖರೀದಿಸಿ ಸೇವಿಸಿದರೆ ನಾವೇ ಸ್ವತಃ ಸಾವನ್ನು ಆಹ್ವಾನಿಸಿದಂತೆ. ತಂಬಾಕು ಸೇವನೆಯಿಂದ ದಮ್ಮು, ಸ್ಟ್ರೋಕ್, ಕ್ಯಾನ್ಸರ್ ಸೇರಿದಂತೆ ಮುಂತಾದ ಹೃದಯ ಸಂಬಂಧಿ ಖಾಯಿಲೆಗಳು ಬಹುಬೇಗ ಆವರಿಸುತ್ತವೆ. ಇದರಿಂದ ಖಂಡಿತಾ ಸಾವು ಸಂಭವಿಸುತ್ತದೆ.. ತಂಬಾಕು ಸೇವನೆಯಿಂದ ಪ್ರತಿವರ್ಷ 60 ಲಕ್ಷದಷ್ಟು ಮಂದಿ ಸಾವನ್ನಪ್ಪುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ.
ತಂಬಾಕು ಸೇವನೆಯ ವ್ಯಸನಿಗಳಿಗೆ ಚಿಕಿತ್ಸೆ ಕೊಡಲೆಂದು ಎಷ್ಟೊಂದು ಆಸ್ಪತ್ರೆಗಳು, ಆರೋಗ್ಯ ಸೇವಾ ಕಾರ್ಯಕರ್ತರು, ಔಷಧ ಉತ್ಪಾದನೆಗಳು ಇವೆಲ್ಲ ಸೇರಿ ಪ್ರತಿ ವರ್ಷವೂ ಸಾವಿರಾರು ಕೋಟಿ ರೂಪಾಯಿಗಳಷ್ಟು ಆರ್ಥಿಕ ನಷ್ಟವೂ ತಂಬಾಕಿನಿಂದ ಉಂಟಾಗುತ್ತಿದೆ.

ತಂಬಾಕು ಸೇವನೆಯು ನಮ್ಮ ಆರೋಗ್ಯಕ್ಕೆ ತುಂಬಾ ಮಾರಕ ಎಂದು ತಿಳಿದಿದ್ದರೂ ಇಂದಿನ ಯುವ ಜನಾಂಗ ಮದ್ಯಪಾನದೊಂದಿಗೆ ತಂಬಾಕು ಸೇವನೆಗೂ ಹೆಚ್ಚು ಬಲಿಯಾಗುತ್ತಿರುವುದು ಬೇಸರದ ಸಂಗತಿಯಾಗಿದೆ.

ಧೂಮಪಾನ ಮತ್ತು ತಂಬಾಕು ಅಗಿಯುವ ಜನರ ಜಾಗತಿಕ ಪ್ರಮಾಣದಲ್ಲಿ ಚೀನಾದ ಪಾಲು ಶೇ.30 ಇದ್ದರೆ, ಎರಡನೇ ಸ್ಥಾನ ಪಡೆದ ಭಾರತ ಪಾಲು ಶೇ.10 ರಷ್ಟಿದೆ. ಇದು ಹೀಗೆ ಮುಂದುವರಿದಲ್ಲಿ 2030 ರ ಹೊತ್ತಿಗೆ ತಂಬಾಕಿನಿಂದ ಪ್ರತಿವರ್ಷ ಅಕಾಲಿಕ ವಯಸ್ಸಿಗೇ ಸಾಯುವ ಸಂಖ್ಯೆ ೮೦ ಲಕ್ಷಕ್ಕೆ ಏರಲಿದೆ.

ತಂಬಾಕು ಚಟ : ವಿಶ್ವಸಂಸ್ಥೆಯು ಪ್ರಕಟಿಸಿರುವ ಒಂದು ಪೋಷ್ಟರಿನಲ್ಲಿ ತಂಬಾಕಿನ ಯಾವ್ಯಾವ ಭೀಕರ ಕಾಯಿಲೆಗಳು ಬರುತ್ತವೆ ಎಂದು ವಿವರಿಸಲಾಗಿದೆ. ತಂಬಾಕನ್ನು ಬೀಡಿ, ಸಿಗರೇಟು, ನಶ್ಯದ ಪುಡಿ, ಹುಕ್ಕಾ, ಜರ್ದಾ, ಗುಟಕಾ, ಸಿಗಾರ್, ಭಂಗಿ, ಚುಟ್ಟಾ, ಮಿಶ್ರಿ, ಗುಲ್, ಗುಧಾಕು – ಹೀಗೆ ನಾನಾ ಹೆಸರುಗಳಿರುವ ಚಟಗಳ ಅವತಾರಗಳಲ್ಲಿ ಕಾಣಬಹುದು. ಒಣ ತಂಬಾಕು (ಹೊಗೆಸೊಪ್ಪು) ಎಲೆಗಳನ್ನು ಎಲೆ-ಅಡಿಕೆ(ಪಾನ್,ಸುಪಾರಿ) ಯೊಂದಿಗೆ ನೇರವಾಗಿಯೂ ಜಗಿಯುತ್ತಾರೆ. ಇತ್ತೀಚೆಗಂತೂ ಭಾರತದಲ್ಲಿ ಗುಟುಕಾ ರೂಪದಲ್ಲಿ ತಂಬಾಕಿನ ಸೇವನೆ ವಿಪರೀತವಾಗಿದೆ.

ತಂಬಾಕಿನಲ್ಲಿ ಇರುವ 40 ಕ್ಕೂ ಹೆಚ್ಚು ರಾಸಾಯನಿಕಗಳು ಕ್ಯಾನ್ಸರ್ ಎಂಬ ಕುಖ್ಯಾತ, ಭೀಕರ ಕಾಯಿಲೆಗೆ ಕಾರಣವಾಗಿವೆ. ಶ್ವಾಸಕೋಶದ ಕ್ಯಾನ್ಸರಿಗೆ ತಂಬಾಕು ಸೇವನೆಯು ನೂರಕ್ಕೆ 90 ರಷ್ಟು ಕಾರಣ. ತಂಬಾಕಿನಿಂದ ಬಾಯಿಯ ಕ್ಯಾನ್ಸರ್, ಜಠರದ ಕ್ಯಾನ್ಸರ್, ಮೂಗಿನ ಕ್ಯಾನ್ಸರ್, ಅನ್ನನಾಳದ ಕ್ಯಾನ್ಸರ್ – ಹೀಗೆ ಎಲ್ಲ ಭೀಕರ ರೋಗಗಳು ಬಹುಬೇಗ ಆವರಿಸುತ್ತವೆ ಎಂದು ಈ ಸಂಬಂಧ ನಡೆಸಿದ ಅಧ್ಯಯನಗಳು ಖಚಿತಪಡಿಸಿವೆ.

ಸಿಗರೇಟು ಸಂಸ್ಥೆಗಳು ಏನೆಲ್ಲ ಸುಳ್ಳು ಪ್ರಚಾರ ಮಾಡಿ ಹದಿಹರೆಯದವರನ್ನು ಸಿಗರೇಟು ಸೇವನೆಗೆ ದೂಡುತ್ತಿವೆ. ಒಮ್ಮೆ ತಂಬಾಕಿನ ಮಾದಕತೆಗೆ ದಾಸರಾದರೆ ಸಾಕು, ಜೀವನವಿಡೀ ಸಿಗರೇಟಿನ ದಾಸರಾಗುತ್ತಾರೆ. ಇದೇ ಸಿಗರೇಟು ಸಂಸ್ಥೆಗಳ ಮಾರುಕಟ್ಟೆ ಷಡ್ಯಂತ್ರವಾಗಿದೆ.

ತಂಬಾಕು ಚಟ ಹೀಗೇ ಹಬ್ಬುತ್ತಿದ್ದರೆ ಇನ್ನು ಕೆಲವೇ ವರ್ಷಗಳಲ್ಲಿ ಇತರೆಲ್ಲ ದೇಶಗಳಿಗಿಂತ ಭಾರತದಲ್ಲೇ ತಂಬಾಕಿನಿಂದ ಮರಣ ಹೊಂದುವವರ ಸಂಖ್ಯೆ ಅತಿ ಹೆಚ್ಚಾಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ನಮ್ಮನ್ನು ಎಚ್ಚರಿಸಿದೆ.
ಪರಿಸರ ನಾಶ : ತಂಬಾಕು ಬೆಳೆಯು ಅಪಾರ ಪ್ರಮಾಣದಲ್ಲಿ ಕಾಡಿನ ನಾಶಕ್ಕೆ ಕಾರಣವಾಗಿದೆ. ತಂಬಾಕಿನ (ಹೊಗೆಸೊಪ್ಪು) ಎಲೆಗಳನ್ನು ಹದಗೊಳಿಸಲು ನಿಗಿನಿಗಿ ಉರಿಯುವ ಕೆಂಡಗಳ ದೊಡ್ಡ ಒಲೆ ಬೇಕು. ಇಂಥ ಬೆಂಕಿಗೆ ನಮ್ಮ ಸುತ್ತಮುತ್ತಲಿನ ಅತ್ಯುತ್ತಮ ಮರಗಳು ಬಲಿಯಾಗುತ್ತಿವೆ. ಬ್ರೆಝಿಲ್ ದೇಶದಲ್ಲಿ ಹೀಗೆ ಹಸಿ ಮರಗಳ ಕಟಾವಿನಿಂದಾಗಿ ಕಾಡುಗಳೆಲ್ಲ ಬರಿದಾಗಿವೆ. ಹಾಗೆಯೇ, ಕಳೆದ 50 ವರ್ಷಗಳಲ್ಲಿ ಭಾರತದಲ್ಲಿ 100 ಕೋಟಿಗೂ ಹೆಚ್ಚು ಟನ್ ಸೌದೆಯನ್ನು ತಂಬಾಕು ಹದಮಾಡಲೆಂದೇ ಉರಿಸಲಾಗಿದೆ ! ತಂಬಾಕು ಬೆಳೆಯಿಂದ ಕೀಟನಾಶಕಗಳ ವಿಪರೀತ ಬಳಕೆಯಾಗಿ ನೆಲವೆಲ್ಲ ವಿಷಮಯವಾಗುತ್ತದೆ; ಅತಿ ಕೃಷಿಯಿಂದ ಮಣ್ಣಿನ ಸವಕಳಿ ಹೆಚ್ಚುತ್ತದೆ. ತಂಬಾಕು ಬೆಳೆದಷ್ಟೂ ಪರಿಸರಕ್ಕೂ ನಷ್ಟ, ಸಮಾಜಕ್ಕೂ ನಷ್ಟವೇ ಹೆಚ್ಚು. ಹೀಗಿದ್ದೂ ಭಾರತದಲ್ಲಿ ತಂಬಾಕನ್ನು ಬೆಳೆಯನ್ನು ನಿರಂತರವಾಗಿ ಬೆಳೆಯುತ್ತಿದ್ದರೂ ನಿಷೇಧಿಸಿಲ್ಲ.

ವ್ಯಸನ ಬಿಡಿಸಲು ಕ್ರಮಗಳು: ವ್ಯಸನ ಬಿಡಿಸಲು ಭಾರತ ಸರ್ಕಾರದ ಆರೋಗ್ಯ ಸಚಿವಾಲಯವು ಹಲವು ಕ್ರಮಗಳನ್ನು ಕೈಗೊಂಡಿದೆ. ಈ ಸಚಿವಾಲಯವು ಸಿಗರೇಟು ಮತ್ತು ತಂಬಾಕಿನ ಎಲ್ಲಾ ಉತ್ಪನ್ನಗಳ ಮೇಲೆ ‘ತಂಬಾಕು ಕ್ಯಾನ್ಸರಿಗೆ ಕಾರಣ’ ಎಂಬ ಸೂಚನೆ ಮತ್ತು ಚಿತ್ರಗಳನ್ನು ಪ್ರಕಟಿಸುವುದನ್ನು ಕಡ್ಡಾಯ ಮಾಡಿದೆ. ಸಿಗರೇಟಿ ಮೇಲೆ ಅತ್ಯಧಿಕ ತೆರಿಗೆಯನ್ನೂ ವಿಧಿಸುತ್ತಾ ಬಂದರೂ ತಂಬಾಕು ವ್ಯಸನಿಗಳು ತಂಬಾಕು ಸೇವನೆಯಿಂದ ದೂರವಾಗಿಲ್ಲ. ಕೋರ್ಟ್ ಆದೇಶದನ್ವಯ ಸರ್ಕಾರ ಈಗಾಗಲೇ ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನವನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.

ಪರ್ಯಾಯ ಬೆಳೆಗೆ ಪ್ರೋತ್ಸಾಹ : ತಂಬಾಕು ಬೆಳೆಯುವ ರೈತರು ತಂಬಾಕು ಬೆಳೆಯುವುನ್ನು ಬಿಟ್ಟು ಪರ್ಯಾಯ ಬೆಳೆಗಳನ್ನು ಬೆಳೆಸಬೇಕು ಎಂದು ಸರ್ಕಾರ ಕೂಡ ರೈತರಿಗೆ ಈಗಾಗಲೇ ಸೂಚನೆ ನೀಡಿದೆ. ರೈತರು ಪರ್ಯಾಯವಾಗಿ ಕಬ್ಬು, ಹತ್ತಿ, ಶೇಂಗಾ, ಆಲೂಗೆಡ್ಡೆ, ಮೆಕ್ಕೆಜೋಳ ಮುಂತಾದ ಬೆಳೆಗಳನ್ನು ಬೆಳೆದರೆ ತಂಬಾಕಿಗಿಂತ ಹೆಚ್ಚು ಆದಾಯವನ್ನು ಪಡೆಯಬಹುದು. ಆದರೆ ಈ ಬಗ್ಗೆ ರೈತರನ್ನು ಜಾಗೃತಗೊಳಿಸುವ ಕೆಲಸ ತ್ವರಿತಗತಿಯಲ್ಲಿ ಆಗಬೇಕಿದೆ.

ನಾವೇನು ಮಾಡಬಹುದು ? : ಮೇ ೩೧ ರ ‘ವಿಶ್ವ ತಂಬಾಕು ವಿರೋಧಿ ದಿನ’ದ ಸಂದರ್ಭದಲ್ಲಿ ನಾವು ತಂಬಾಕಿನ ಬಳಕೆಯನ್ನು ನಿಲ್ಲಿಸಲು ಈ ಕೆಳಗಿನ ಕೆಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಹುದಾಗಿದೆ.

* ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನ ಮಾಡುವುದು ನಿಷಿದ್ಧವಿದ್ದರೂ ಧೂಮಪಾನ ಮಾಡಲಿ, ಪಾನ್‌ಬೀಡಾ ಉಗಿಯಲಿ ಅದನ್ನು ಪ್ರತಿಭಟಿಸುವುದು ಎಲ್ಲರ ಹಕ್ಕು. ಆ ಹಕ್ಕನ್ನು ಎಲ್ಲರು ಮುಲಾಜಿಲ್ಲದೆ ಆದರೆ ವಿನಯದಿಂದ ಚಲಾಯಿಸೋಣ.

* ನಮ್ಮ ನೆರೆಹೊರೆಯಲ್ಲಿ ಧೂಮಪಾನಿಗಳಿದ್ದರೆ, ಅದು ತೀರ ನಾಚಿಕೆಗೇಡಿನ ಸಂಗತಿ ಮತ್ತು ಆರೋಗ್ಯಕ್ಕೆ ಹಾನಿ ಎಂದು ತಂಬಾಕಿನ ಅಪಾಯಗಳನ್ನು ಅವರಿಗೆ ತಿಳಿಸೋಣ.

* ತಂಬಾಕು ಸೇವನೆಯನ್ನು ಒಮ್ಮಲೇ ಬಿಡುವುದು ಕಷ್ಟಸಾಧ್ಯವಾದ ಧೂಮಪಾನಿಗಳಿಗೆ ಮತ್ತು ತಂಬಾಕು ಬಳಕೆದಾರರಿಗೆ ಕ್ರಮೇಣವಾಗಿ ತಂಬಾಕು ಬಳಕೆ ಬಿಡಲು ಸಲಹೆ ನೀಡೋಣ ಮತ್ತು ಬಿಟ್ಟವರನ್ನು ಸನ್ಮಾನಿಸೋಣ.

* ಧೂಮಪಾನ ಮಾಡುತ್ತಿರುವವರು ನಮ್ಮ ಬಳಿ ಇದ್ದರೆ ನಮಗೆ ಅಪಾಯ ಕಟ್ಟಿಟ್ಟ ಬುತ್ತಿ. ಹಾಗಾಗಿ ಅವರಿಗೆ ನಿಷ್ಠುರವಾಗಿ ಮತ್ತು ವಿನಯದಿಂದ ನಮ್ಮ ವಿರೋಧವನ್ನು ತಿಳಿಸೋಣ.

* ಶಾಲಾ-ಕಾಲೇಜುಗಳ ೨೦೦ ಅಡಿ ವ್ಯಾಪ್ತಿಯಲ್ಲಿ ಧೂಮಪಾನ ಮತ್ತು ತಂಬಾಕು ಉತ್ಪನ್ನಗಳ ಮಾರಾಟವು ನಿಷೇಧವಾಗಿದೆ. ಹಾಗಿದ್ದರೂ ಈ ಪ್ರದೇಶದಲ್ಲಿ ಈ ನಿಯಮ ಉಲ್ಲಂಘನೆಯಾಗಿದ್ದರೆ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಅಥವಾ ಸ್ಥಳೀಯ ಆಡಳಿತಕ್ಕೆ ದೂರು ನೀಡೋಣ.

* ನಾವು ಭಾಗವಹಿಸುವ ಕಾರ್ಯಕ್ರಮ/ಸಮಾರಂಭ, ಕೌಟುಂಬಿಕ ಆಚರಣೆಗಳಲ್ಲಿ ತಂಬಾಕಿನ ಅಪಾಯಗಳನ್ನು ಬಿಂಬಿಸುವ ಮಾಹಿತಿಯನ್ನು ನೀಡುವುದು ಮತ್ತು ಇದಕ್ಕೆ ಇತರರನ್ನು ಪ್ರೇರೇಪಿಸೋಣ.

* ತಂಬಾಕು ಬೆಳೆಯುತ್ತಿರುವ ಕೃಷಿಕರ ಮನಸ್ಸು ಬದಲಿಸಲು ಗೆಳೆಯರ ಗುಂಪು ರಚಿಸಿಕೊಂಡು ಅಂಥ ಜೀವವಿರೋಧಿ ಕೃಷಿಯನ್ನು ಕೈಬಿಡುವಂತೆ ಪ್ರೇರೇಪಿಸಿ ಪ್ರಚಾರ ಮಾಡೋಣ.

ಹೀಗೆ ಹತ್ತು ಹಲವು ಯೋಜನೆ/ಕಾರ್ಯಕ್ರಮಗಳ ಮೂಲಕ ತಂಬಾಕು ಸೇವನೆಯನ್ನು ಕ್ರಮೇಣವಾಗಿ ಕಡಿಮೆ ಮಾಡುತ್ತಾ ಇದನ್ನು ಸಂಪೂರ್ಣವಾಗಿ ಜಾರಿಗೊಳಿಸಿದರೆ ಭಾರತ ದೇಶವನ್ನು ತಂಬಾಕು ಮುಕ್ತ ದೇಶವನ್ನಾಗಿ ಪರಿವರ್ತಿಸಲು ಪ್ರಯತ್ನಿಸಬಹುದು.

ತಂಬಾಕು ಚಟ ಹೀಗೇ ಹಬ್ಬುತ್ತಿದ್ದರೆ ಇನ್ನು ಕೆಲವೇ ವರ್ಷಗಳಲ್ಲಿ ಇತರೆಲ್ಲ ದೇಶಗಳಿಗಿಂತ ಭಾರತದಲ್ಲೇ ತಂಬಾಕಿನಿಂದ ಸಾಯುವವರ ಸಂಖ್ಯೆ ಅತಿ ಹೆಚ್ಚಾಗಲಿದೆ. ಈ ದಿಸೆಯಲ್ಲಿ ಇಂತಹ ದಿನಗಳಂದು ತಂಬಾಕು ಬಳಕೆದಾರರನ್ನು ಜಾಗೃತಗೊಳಿಸುವ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಎಲ್ಲರೂ ಪಣತೊಡೋಣ.

ಲೇಖಕರು: ✍. ಟಿ.ಜಿ.ಪ್ರೇಮಕುಮಾರ್,

 

ಅಮ್ಮ ನೀನು ನಮಗಾಗಿ; ಸಾವಿರ ವರುಷ ಸುಖವಾಗಿ

ಅಮ್ಮ ನೀನು ನಮಗಾಗಿ; ಸಾವಿರ ವರುಷ ಸುಖವಾಗಿ

ನವೆಂಬರ್ 14 ಮಕ್ಕಳ ದಿನಾಚರಣೆ, ಜನವರಿ 1 ಗಣರಾಜ್ಯೋತ್ಸವ. ಹೀಗೆ ಒಂದೊಂದಕ್ಕೂ ದಿನಾಚರಣೆಯನ್ನು ಮಾಡುತ್ತೇವೆ. ಮಾರ್ಚ್ 8ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಅಲ್ಲಲ್ಲಿ ಮಹಿಳಾ ಸಂಘ, ಸಮಾಜ ಅಂತ ಆಚರಿಸುತ್ತಾರೆ. ಹಾಗೆ ಮೇ ತಿಂಗಳ ಎರಡನೆಯ ರವಿವಾರವನ್ನು ಅಮ್ಮಂದಿರ ದಿನವನ್ನಾಗಿ ಆಚರಿಸುತ್ತೇವೆ. ಆದರೆ ಇಲ್ಲಿ ಎಷ್ಟು ಜನ ಮಕ್ಕಳು ತಮ್ಮ ತಾಯಿಯಂದಿರ ದಿನ ಆಚರಿಸುತ್ತಾರೆಂದು ತಿಳಿಯದು. ಯಾಕೆಂದರೆ ಈಗಿನ ಹೆಚ್ಚು ಜನರಿಗೆ ತಾಯಿಯಂದಿಯರಿಗೂ ಒಂದು ದಿನ ಇದೆ ಎಂಬುದು ಗೊತ್ತಿರಲಿಕ್ಕಿಲ್ಲ. ಇದ್ದರೂ ಏಕೆ ಆ ಒಂದು ದಿನ ಮಾತ್ರ! ವರ್ಷದ ಎಲ್ಲಾ ದಿನವನ್ನು ಅವರಿಗಾಗಿ ಮೀಸಲಿಡಲಾಗುವುದಿಲ್ಲವೇ? ಎಂದು ನಮ್ಮ ಒಳ ಮನಸ್ಸು ಕೇಳುತ್ತಿರಬಹುದು.

ಜೀವನೋಪಾಯಕ್ಕಾಗಿ ಗಂಡ-ಹೆಂಡತಿ ಇಬ್ಬರೂ ದುಡಿಯಬೇಕಾದ ಇಂದಿನ ಪರಿಸ್ಥಿತಿಯಲ್ಲಿ, ತಮ್ಮ ತಂದೆ-ತಾಯಿಯನ್ನು ನೋಡಿಕೊಳ್ಳುವುದಿರಲಿ, ಸ್ವಂತ ಮಕ್ಕಳನ್ನು ಸರಿಯಾದ ರೀತಿಯಲ್ಲಿ ತಿದ್ದಿ, ತೀಡಿ ಅವರ ಇಷ್ಟ-ಕಷ್ಟಗಳನ್ನು ನೆರವೇರಿಸಲು ಸಾಧ್ಯವಿಲ್ಲ ಎಂದು ಕೊರಗುವ ಈ ಕಾಲದಲ್ಲಿ, ವಯಸ್ಸಾದ ತಂದೆ-ತಾಯಿಗೋಸ್ಕರ ಒಂದು ದಿನವನ್ನು ಮೀಸಲಿಡುವುದು ಸಾಧ್ಯವೇ ಇಲ್ಲದಂತಾಗಿದೆ ಬಹುಪಾಲು ಜನರಿಗೆ. ತಮ್ಮ ಮಕ್ಕಳಿಗಾಗಿ ಇಡೀ ಜೀವನದ ಯೌವನವನ್ನೂ, ನಡುವಯಸ್ಸಿನಲ್ಲಿ ಮೊಮ್ಮಕ್ಕಳನ್ನೂ, ತೀರಾ ವಯಸ್ಸಾದ ಸಮಯದಲ್ಲಿ ಮರಿ ಮೊಮ್ಮಕ್ಕಳನ್ನೂ ಸಾಕುತ್ತಾ, ಮುಂದಿನ ತಲೆಮಾರಿಗಾಗಿ ತನ್ನೆಲ್ಲಾ ಜೀವನವನ್ನು ಧಾರೆ ಎರೆಯುವ ತಾಯಿಗಾಗಿ ವರ್ಷದ ಒಂದು ದಿನವನ್ನು ಮೀಸಲಿಟ್ಟು ಅವರನ್ನು ಪ್ರೀತಿಯಿಂದ ಆಧರಿಸಿ, ಗೌರವಿಸಿ, ಅವರಿಗಿಷ್ಟವಾದ ತಿಂಡಿಗಳನ್ನು, ಮಾಡಿ ಕೊಡಲು ವರ್ಷದ ಒಂದು ದಿನವಿರಲಿ, ಕೇವಲ ಒಂದು ಗಂಟೆ ಸಾಕಾಗಬಹುದು ನಮಗೆ.

ನಾವು ನಮ್ಮ ತಂದೆ-ತಾಯಿಗೆ 7ಜನ ಮಕ್ಕಳು. ತೀರಾ ಬಡತನದಲ್ಲಿಯೂ ನಮ್ಮನ್ನು ಸಾಕಿ, ಸಲಹಿ, ಓದಿಸಿ ಮದುವೆ ಮಾಡಿಸಿ ಎಲ್ಲರೂ ಅವರವರ ಪಾಡಿಗೆ ತುಂಬು ಸಂಸಾರಸ್ಥರಾಗಿ ಚೆನ್ನಾಗಿಯೆ ಬದುಕುತ್ತಿದ್ದಾರೆ. ತಂದೆ 16 ವರ್ಷದ ಹಿಂದೆಯೆ ತೀರಿಕೊಂಡಿರುವುದರಿಂದ ನಮ್ಮೊಂದಿಗೆ ಇರುವ ತಾಯಿಗೋಸ್ಕರ ಒಂದು ದಿನವನ್ನು ಆಚರಿಸಲು ತೀರ್ಮಾನಿಸಿದೆವು. ಆದರೆ ಅಮ್ಮನ ಹುಟ್ಟಿದ ದಿನವಾಗಲಿ, ವರ್ಷವಾಗಲಿ ನಮಗೆ ಸರಿಯಾಗಿ ತಿಳಿದಿಲ್ಲ. 75 ವರ್ಷವಿರಬಹುದೆಂದು ಅಂದಾಜಿಸಿ ನಾವೆಲ್ಲಾ ಸೇರಿಕೊಂಡು ಅಮ್ಮನ 75ನೇ ಹುಟ್ಟುಹಬ್ಬವನ್ನು ಆಚರಿಸಲು ನಿರ್ಧರಿಸಿದ್ದೇವು. ಅವರಿಗೆ ಒಂದಿನಿತೂ ಸಂಶಯ ಬಾರದ ಹಾಗೆ ಎಲ್ಲರೂ ಅಮ್ಮನ ಮನೆಯಲ್ಲಿ ಸೇರಿ ಅವರಿಗೆ ಅಚ್ಚರಿ ಮೂಡಿಸಿದೆವು. ನಾವೆಲ್ಲಾ ಪೂರ್ವ ನಿರ್ಧಾರದಂತೆ ಒಬ್ಬರು ಕೇಕ್ ತಂದರೆ, ಒಬ್ಬರು ಶಾಲು, ಮತ್ತಿಬ್ಬರು ಸ್ಯಾರಿ, ಅದೇ ರೀತಿ ಇತ್ತೀಚೆಗೆ ಕೆಲಸಕ್ಕೆ ಸೇರಿಕೊಂಡ ಮೊಮ್ಮಗನನ್ನೂ ಒಳಗೊಂಡಂತೆ ಉಳಿದವರು ಚಿನ್ನದ ಒಡವೆಗಳನ್ನು ತಂದು ಅವರವರಿಗೆ ಸಾಧ್ಯವಾದಂತೆ ಉಡುಗೋರೆಯನ್ನು ನೀಡಿ ಗೌರವದಿಂದ ಅಮ್ಮನಿಗೆ ಅಭಿನಂದನೆ ಸಲ್ಲಿಸಿದರು.

ನಮ್ಮ ಈ ಕಾರ್ಯಕ್ರಮಕ್ಕೆ ನಮ್ಮದೇ ಆದ ಶೈಲಿಯಲ್ಲಿ “ಮಾತೃವಂದನಾ” ಎಂದು ಹೆಸರಿಟ್ಟು ಆಚರಿಸಿದ್ದೇವು. ಮೊದಲಿಗೆ ಅಮ್ಮನನ್ನು ಒಂದೆಡೆ ಕೂರಿಸಿ ಒಬ್ಬೊಬ್ಬರಾದಿಯಾಗಿ ಅವರ ಪಾದ ತೊಳೆದು ಅರಸಿನ, ಕುಂಕುಮ ಹಚ್ಚಿ, ಹೂವಿಟ್ಟು ಕಾಲಿಗೆ ನಮಸ್ಕಾರ ಮಾಡಿದಾಗ, ಅಮ್ಮ-ಅಪ್ಪನ ಸಂಗಡ ನಾವು ಕಳೆದ ನಮ್ಮ ಬಾಲ್ಯದ ನೆನಪುಗಳು ಮರುಕಳಿಸಿ ನಮ್ಮೆಲ್ಲರ ಕಣ್ಣಾಲಿಗಳು ಒದ್ದೆಯಾದವು. ಇಂತಹ ಸಡಗರ ಸಂಭ್ರಮ ನಮಗೆ ಎಂದೂ ದೊರೆತಿರಲಿಲ್ಲ. ಜೀವನವಿಡಿ ಮಕ್ಕಳಿಗಾಗಿ ತಮ್ಮ ಬದುಕನ್ನೇ ಮುಡುಪಾಗಿಡುವ ಎಲ್ಲಾ ತಂದೆ-ತಾಯಿಯರನ್ನೂ ಈಗಿನ ಒತ್ತಡದ “ಬ್ಯುಸಿಲೈಫ್”!ನಲ್ಲಿ ಮಕ್ಕಳು ವರ್ಷಕ್ಕೆ ಒಂದು ಗಂಟೆಯಾದರೂ, ಮೀಸಲಿಟ್ಟು ಅವರಿಗೆ ಸಂತೋಷವನ್ನು ನೀಡಿದರೆ ಅವರಿಗಾಗುವ ಸಂತೋಷಕ್ಕೆ ಕಾಲ ಮಿತಿಗಳೆ ಇರುವುದಿಲ್ಲ.

ನಮ್ಮ ತಂದೆ-ತಾಯಿಯಂದಿರು ಅವರ ತಂದೆ-ತಾಯಿಯರನ್ನು ಅವರ ಕೊನೆಯ ಕಾಲದವರೆಗೂ ಆರೈಕೆ ಮಾಡಿ ನೋಡಿಕೊಳ್ಳುತ್ತಿದ್ದದು, ನಮಗೆ ಆದರ್ಶ ಪ್ರಾಯವಾಯಿತು. ಈ ಬಾರಿ ನಾವು ಹಮ್ಮಿಕೊಂಡ ಕಾರ್ಯಕ್ರಮವನ್ನು ನಮ್ಮ ಕರ್ತವ್ಯವೆಂದು ತಿಳಿದು ಮುಂದಿನ ವರ್ಷವೂ ಇದೇ ರೀತಿಯ ಕಾರ್ಯಕ್ರಮವನ್ನು ಮಾಡುವುದಾಗಿ ತೀರ್ಮಾನಿಸಿದೆವು. ಎಲ್ಲಾ ಮಕ್ಕಳು, ಅಳಿಯಂದಿರು, ಸೊಸೆಯಂದಿರು ಮೊಮ್ಮಕ್ಕಳಾದಿಯಾಗಿ ಕುಟುಂಬದ ಎಲ್ಲರೂ ಹಬ್ಬದ ಅಡುಗೆ ಮಾಡಿ ಊಟಮಾಡಿ ಸಂತೋಷಪಟ್ಟೆವು. ಇಂತಹ ದಿನಗಳನ್ನು ಎಲ್ಲಾ ಮಕ್ಕಳು ಮಾಡುವಂತಿದ್ದರೆ ತಂದೆ ತಾಯಿಯರು ತಮ್ಮ ಮಕ್ಕಳನ್ನು ಬೆಳೆಸಿದ್ದಕ್ಕೆ ಸಾರ್ಥಕರಾದಂತೆ.

✍. ಕಾನತ್ತಿಲ್ ರಾಣಿ ಅರುಣ್

ಪ್ರಜಾಪ್ರಭುತ್ವದ ನಾಲ್ಕನೇ ಆಧಾರಸ್ತಂಭ ಪತ್ರಿಕೋದ್ಯಮಕ್ಕೆ ಸಾಮಾಜಿಕ ಬದ್ಧತೆ ಹಲವು

ಪ್ರಜಾಪ್ರಭುತ್ವದ ನಾಲ್ಕನೇ ಆಧಾರಸ್ತಂಭ ಪತ್ರಿಕೋದ್ಯಮಕ್ಕೆ ಸಾಮಾಜಿಕ ಬದ್ಧತೆ ಹಲವು

{ಮೇ,3 ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನದ ವಿಶೇಷ ಲೇಖನ}

ಪತ್ರಿಕಾ ಸ್ವಾತಂತ್ರದ ಮೂಲಭೂತ ತತ್ವಗಳ ಅರಿವು ಮೂಡಿಸಲು, ಮೌಲ್ಯಗಳನ್ನು ಎತ್ತಿ ಹಿಡಿಯಲು ಮತ್ತು ಪತ್ರಕರ್ತರ ರಕ್ಷಣೆಗೆಂದೇ ಹುಟ್ಟಿಕೊಂಡ ಈ ದಿನವೇ ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ. ದೇಶದ ಸಂವಿಧಾನ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಮತ್ತೊಂದು ರೂಪವೇ ಮಾಧ್ಯಮಗಳು. ಪತ್ರಿಕಾ ಸ್ವಾತಂತ್ರ್ಯದ ದಿನವವನ್ನು ಪ್ರತಿ ವರ್ಷ ಮೇ 3 ರಂದು ಆಚರಣೆ ಮಾಡಲಾಗುತ್ತದೆ.

ಪತ್ರಿಕೆಯನ್ನು ಪ್ರಜಾಪ್ರಭುತ್ವ ವ್ಯವಸ್ಥೆಯ ನಾಲ್ಕನೇ ಅಂಗ ಅಥವಾ ಆಯಾಮ ಎಂದೇ ಪರಿಗಣಿಸಲಾಗುತ್ತದೆ. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದಷ್ಟೇ ಅಥವಾ ಅದಕ್ಕಿಂತಲೂ ಪ್ರಬಲವಾದ ಶಕ್ತಿ ಪತ್ರಿಕೋದ್ಯಮಕ್ಕೆ ಇದೆ ಎನ್ನುವುದು ಹಲವಾರು ಸಾರಿ ಸಾಬೀತಾಗಿದೆ.

ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಈ ಮೂರು ಅಂಗಗಳ ಉತ್ತಮ ಸಾಧನೆಗಳನ್ನು, ಕಾರ್ಯವೈಖರಿಗಳನ್ನು ಜೊತೆಗೆ ಹುಳುಕುಗಳನ್ನು ಜನರಿಗೆ ತಿಳಿಸುವ ಕೆಲಸವನ್ನು ಪತ್ರಿಕೆಗಳು ವಸ್ತುನಿಷ್ಠವಾಗಿ ಮಾಡುತ್ತಿವೆ. ಈ ಮೂಲಕ ಜನರಿಗೆ ಸಾಕಷ್ಟು ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿವೆ. ಆದರೆ ಪತ್ರಿಕೋದ್ಯಮ ಆರಂಭವಾಗಿಂದಿನಿಂದಲೂ ಪತ್ರಿಕೆಗಳನ್ನು, ಪತ್ರಕರ್ತರನ್ನು, ಪತ್ರಿಕಾ ಸ್ವಾತಂತ್ರ್ಯವನ್ನು ಧಮನಿಸುವ ಪ್ರಯತ್ನಗಳು ನಡೆಯುತ್ತಲೇ ಇವೆ. ವಸ್ತುನಿಷ್ಠವಾದ ವರದಿಗಳಿಗೆ ಅಡ್ಡಗಾಲು ಹಾಕುವುದು, ಪತ್ರಕರ್ತರನ್ನು ಧಮನಿಸುವುದು, ಅವರ ಹತ್ಯೆಗೆ ಯತ್ನಿಸುವುದು ಮುಂತಾದ ಘಟನೆಗಳು ದಿನನಿತ್ಯ ಕೇಳಿ ಬರುತ್ತಿವೆ. ಇದನ್ನೆಲ್ಲಾ ನಿವಾರಿಸಿ ಪತ್ರಿಕಾ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಪ್ರತಿವರ್ಷ ಮೇ 3 ರಂದು ವರ್ಲ್ಡ್‌ ಫ್ರೀಡಂ ಡೇ ಅಥವಾ ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ ಎಂದು ಆಚರಿಸಲಾಗುತ್ತದೆ.

ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನದ ಹಿನ್ನೆಲೆ :
ಪತ್ರಿಕಾ ಸ್ವಾತಂತ್ರ್ಯದ ಮೇಲಿನ ಸವಾರಿ ಇಂದು, ನಿನ್ನೆ, ಮೊನ್ನೆಯದಲ್ಲ. ಜೊತೆಗೆ ಪತ್ರಕರ್ತರ ಹತ್ಯೆ ಅವ್ಯಾಹತವಾಗಿ ನಡೆಯುತ್ತಲೇ ಇದೆ. ಇದಕ್ಕೆ ದಶಕಗಳ ಇತಿಹಾಸವೇ ಇದೆ. ಇದರ ಪರಿಣಾಮವಾಗಿ 1991ರಲ್ಲಿ ನಡೆದ ಯುನೆಸ್ಕೋದ 26ನೇ ಸಮೇಳನದಲ್ಲಿ ಪತ್ರಿಕಾ ಸ್ವಾತಂತ್ರದ ಕುರಿತು ಆಫ್ರಿಕನ್ ಜರ್ನಲಿಸ್ಟ್ ಗಳ ಒತ್ತಾಸೆಯಂತೆ ಮೇ 3ರಂದು ವಿಶ್ವ ಪತ್ರಿಕಾ ದಿನಾಚರಣೆ ನಡೆಸುವ ತೀರ್ಮಾನಕ್ಕೆ ಬರಲಾಯಿತು. 1993ರಲ್ಲಿ ಇದು ಅಂಗೀಕಾರವಾಯಿತು.

ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನದ ಉದ್ದೇಶ :
ವಿಶ್ವಾದಾದ್ಯಂತ ಪತ್ರಿಕಾ ಸ್ವಾತಂತ್ರ್ಯವನ್ನು ಮೌಲ್ಯಮಾಪನ ಮಾಡುವುದು, ತಮ್ಮ ಸ್ವಾತಂತ್ರ್ಯಕ್ಕಾಗಿ ಮಾಧ್ಯಮದ ಮೇಲೆ ನಡೆಯುತ್ತಿರುವ ದಾಳಿಯಿಂದ ರಕ್ಷಿಸಿಕೊಳ್ಳುವ ಮಾರ್ಗೋಪಾಯಗಳ ಬಗೆ ಅರಿವು ಮೂಡಿಸುವುದು, ವೃತ್ತಿ ನಿರತರಾಗಿದ್ದಾಗ ಮೃತಪಟ್ಟ ಪತ್ರಕರ್ತರಿಗೆ ಶ್ರದ್ದಾಂಜಲಿ ಸಲ್ಲಿಸುವುದು, ಜತೆಗೆ ವಿಶ್ವದ ಹಲವೆಡೆಗಳಲ್ಲಿ ಇಂದಿಗೂ ಪತ್ರಿಕೆಗಳಿಗೆ ನಿರ್ಭಂದ ಹೇರುವ, ಪತ್ರಕರ್ತರು, ಸಂಪಾದಕರು ಹಾಗೂ ಪ್ರಕಾಶಕರಿಗೆ ಕಿರುಕುಳ ನೀಡುವ, ಬಂಧಿಸುವ ಹಾಗೂ ಕೊಲೆ ಮಾಡಿದ ನಿದರ್ಶನಗಳಿವೆ. ಎಲ್ಲಕ್ಕಿಂತ ಹೆಚ್ಚಾಗಿ ಪತ್ರಿಕಾ ಸ್ವಾತಂತ್ರ್ಯ ಕಾಪಾಡುವ ಸಲುವಾಗಿ ಸರಕಾರಗಳಿಗೆ ಮನವರಿಕೆ ಮಾಡಿಕೊಡುವುದು ಈ ದಿನದ ಉದ್ದೇಶವಾಗಿದೆ.

ಮೇ 3 ರಂದು ವರ್ಲ್ಡ್‌ ಪ್ರೆಸ್‌ ಫ್ರೀಡಂ ಡೇಯನ್ನಾಗಿ ಘೋಷಿಸಿರುವ ವಿಶ್ವಸಂಸ್ಥೆ ಈ ಮೂಲಕ ಜನರ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿಗೆ ಹೆಚ್ಚಿನ ಮಹತ್ವ ನೀಡಿದೆ. ಈ ದಿನದಂದು ಪತ್ರಿಕಾ ಕ್ಷೇತ್ರಕ್ಕೆ ಅದ್ಭುತ ಕೊಡುಗೆಯನ್ನು ನೀಡಿದವರಿಗೆ ಯುನೇಸ್ಕೊ ಪ್ರಶಸ್ತಿಗಳನ್ನು ಪ್ರಕಟಿಸುತ್ತದೆ. 1986, ಡಿಸೆಂಬರ್‌ 17 ರಂದು ಡ್ರಗ್‌ ಮಾಫಿಯಾ ಬಗ್ಗೆ ಪರಿಣಾಮಕಾರಿಯಾದ ಲೇಖನ ಬರೆದು ಹತ್ಯೆಗೀಡಾದ ಕೊಲಂಬಿಯಾ ಪತ್ರಕರ್ತ ಗುಲ್ಲೆರ್ಮೊ ಕ್ಯಾನೊ ಇಸಾಜ ಅವರ ಗೌರವಾರ್ಥವಾಗಿ ಈ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಇದಲ್ಲದೆ ಪ್ರತಿವರ್ಷ ಒಂದು ನಿಗದಿತ ಪ್ರದೇಶದಲ್ಲಿ ಮಾಧ್ಯಮದ ಗಣ್ಯರು, ಪತ್ರಿಕಾ ಸ್ವಾತಂತ್ರ್ಯವನ್ನು ಪ್ರತಿಪಾದಿಸುವ ಸಂಸ್ಥೆಗಳು ಮತ್ತು ವಿಶ್ವಸಂಸ್ಥೆಯ ಇತರ ಉಪಸಂಸ್ಥೆಗಳ ಅಧಿಕಾರಿಗಳ ಸಮ್ಮೇಳನವನ್ನು ಈ ದಿನ ಮಾಡಲಾಗುತ್ತದೆ. ಇದರಲ್ಲಿ ಮಾಧ್ಯಮದ ಸವಾಲುಗಳು, ಪತ್ರಕರ್ತರ ಭದ್ರತೆ, ಯುದ್ಧ ಸಮಯದ ವರದಿಗಾರಿಕೆ ಇತ್ಯಾದಿಗಳ ಕುರಿತು ಚರ್ಚಿಸಲಾಗುತ್ತದೆ.

“ಭಾರತದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟವು ಪತ್ರಿಕಾ ಸ್ವಾತಂತ್ರ್ಯದ ಹೋರಾಟವೂ ಆಗಿತ್ತು” ಪತ್ರಿಕೆಗಳು ಉದ್ಯಮದ ತೆಕ್ಕೆಗೆ ಬರುವ ಸೂಚನೆಯನ್ನು ಸ್ವಾತಂತ್ರ್ಯ ಹೋರಾಟದ ಸಮಯದ ಪತ್ರಿಕೋದ್ಯಮವೇ ತೋರಿಸಿಕೊಟ್ಟಿತ್ತು. ಅಲ್ಪ ಬಂಡವಾಳದೊಂದಿಗೆ ಕೆಲವೇ ಜನರನ್ನು ಮುಟ್ಟುತ್ತಿದ್ದ ಪತ್ರಿಕೆಗಳು ಸ್ವಾತಂತ್ರ್ಯ ಹೋರಾಟದ ಬಿರುಸು ಹೆಚ್ಚಾಗುತ್ತ ಹೋದಂತೆ ಪ್ರಸಾರದಲ್ಲಿ ನೆಗೆತ ಕಂಡವು. ಆ ಸಂದರ್ಭದಲ್ಲಿ ಬ್ರಿಟಿಷರಿಂದ ಪತ್ರಕರ್ತರ ಸ್ವಾತಂತ್ರ್ಯ ಕಸಿದುಕೊಳ್ಳಲಾಗುತ್ತಿದೆ ಎಂಬ ಕೂಗು ಕೇಳಿಬಂದಿತು. ಆ ಸಮಯದಲ್ಲಿ ಪತ್ರಕರ್ತರ ಕೊಲೆಯಂಥ ಘಟನೆಗಳೂ ದಾಖಲಾಗಿವೆ.

ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ಡಿವಿಜಿ ಅವರು ತಮ್ಮ `ವೃತ್ತಪತ್ರಿಕೆ’ ಪುಸ್ತಕದಲ್ಲಿ ಹೇಳುವ ಮಾತುಗಳು ಈಗಲೂ ಪ್ರಸ್ತುತ. “”ಪತ್ರಿಕಾಕರ್ತನ ಸ್ವಾತಂತ್ರ್ಯವು ನಿಜವಾಗಿ ಪ್ರಜಾಜನರೆಲ್ಲರಿಗೂ ಸೇರಿದ ಒಂದು ಅಧಿಕಾರವೇ ಹೊರತು ಅದು ಅವನೊಬ್ಬನಿಗೆ ಮಾತ್ರ ಸಂಬಂಧಪಟ್ಟ ಹಕ್ಕೇನೂ ಅಲ್ಲವೆಂಬುದನ್ನು ಯಾರೂ ಮರೆಯಲಾಗದು. ಅವನು ಪರಾಧೀನನಾಗದೆ ಇದ್ದರೆ ಅದರ ಪ್ರಯೋಜನವು ಎಲ್ಲ ಪ್ರಜೆಗಳಿಗೂ ಇರುವುದು. ಅವನಿಗೆ ಹಿಂಗಟ್ಟುಮುರಿ ಕಟ್ಟಿಸಿದರೆ ಅದರ ಬಾಧೆಯು ಎಲ್ಲರ ಪಾಲಿಗೂ ತಗುಲುವುದು. ಪತ್ರಕರ್ತನು ನಡೆಯಿಸುವ ಎಲ್ಲ ಕಾರ್ಯಗಳೂ ಪ್ರಜೆಯ ಪರವಾದುದಾಗಿರುತ್ತವೆ. ಅವನು ಅವರ `ಏಜೆಂಟ್’ ಅಥವಾ ಪ್ರತಿನಿಧಿ ಮಾತ್ರವಾಗಿರುತ್ತಾನೆ. ಅವನಿಗೆ ರಾಷ್ಟ್ರವು ವಹಿಸಿಕೊಡುವ ಅಧಿಕಾರ ಮರ್ಯಾದೆಗಳೆಲ್ಲವೂ ವಸ್ತುಶಃ ಪ್ರಜಾವರ್ಗಕ್ಕೆ ಸಲ್ಲತಕ್ಕವು. ಅವುಗಳಲ್ಲಿ ಯಾವುದನ್ನಾದರೂ ಅವನಿಗೆ ತಪ್ಪಿಸಿದರೆ ಆ ನಷ್ಟಕ್ಕೆ ಪ್ರಜೆಗಳೆಲ್ಲರೂ ಗುರಿಯಾಗುವರು. ಈ ತತ್ವವನ್ನು ನಮ್ಮ ಜನರು ಸದಾ ಜ್ಞಾಪಕದಲ್ಲಿರಿಸಿಕೊಳ್ಳಬೇಕು””.

ಪತ್ರಿಕಾ ಸ್ವಾತಂತ್ರ್ಯ ನಮ್ಮ ಪ್ರಜಾಪ್ರಭುತ್ವವನ್ನು ಬಲಗೊಳಿಸುತ್ತದೆ. ಪತ್ರಿಕಾ ಸ್ವಾತಂತ್ರ್ಯವನ್ನು ಬೆಂಬಲಿಸುವತ್ತ ನಮ್ಮ ಬದ್ಧತೆಯನ್ನು ಬೆಳೆಸಿ ಕೊಳ್ಳಬೇಕಾಗಿದೆ. ಇದು ಮಾನವೀಯತೆ ಮತ್ತು ಸಮಾಜದ ಸ್ವಾಸ್ಥ್ಯ ಕಾಪಾಡಲು ಅತ್ಯಗತ್ಯವಾಗಿದೆ. ಈಗಿನ ಕುಸಿಯುತ್ತಿರುವ ವೃತ್ತಪತ್ರಿಕೆಗಳ ಆರ್ಥಿಕತೆ ಹಾಗೂ ಅತಿರಂಜಿತ ಸುದ್ದಿಗಳ ಏರಿಕೆಯ ಈ ಕಾಲದಲ್ಲಿ ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳುವುದು ಸವಾಲಿನ ಕೆಲಸವಾಗಿದೆ. ತಂತ್ರಜ್ಞಾನದಿಂದಾಗಿ ಖಾಸಗಿತನ ಹಾಗೂ ಪತ್ರಿಕೋದ್ಯಮ ವ್ಯಾಖ್ಯಾನಗಳು ಬದಲಾಗಿವೆ. ಎಲ್ಲಾ ಕಾಲದಲ್ಲೂ ಪೂರ್ಣ ಪತ್ರಿಕಾ ಸ್ವಾತಂತ್ರ್ಯ ಎಂಬುದಿಲ್ಲ. ಪತ್ರಕರ್ತರು ನಿರ್ಭೀತರಾಗಿ ಕಾರ್ಯನಿರ್ವಹಿಸಲು ಅವಕಾಶವಿರುವ ರಾಷ್ಟ್ರಗಳ ಸಂಖ್ಯೆ ಇಳಿಕೆಯಾಗುತ್ತಿದೆ. ಆಡಳಿತ ಶಾಹಿ ವ್ಯವಸ್ಥೆ ಮಾಧ್ಯಮಗಳ ಮೇಲೆ ಹಿಡಿತ ಹೆಚ್ಚಿಸುತ್ತಲೇ ಇದೆ.

ಕೆಲವು ಪತ್ರಕರ್ತರು ಇಂದು ದೇಶಕ್ಕೆ ಅತೀ ದೊಡ್ಡ ಅಪಾಯವಾಗಿರುವುದು ಕಂಡು ಬರುತ್ತಿದೆ. ಉತ್ತಮ ಪತ್ರಿಕೋದ್ಯಮ ಸತ್ಯವನ್ನು ಹುಡುಕುತ್ತದೆ. ಎಲ್ಲ ಉತ್ತಮ ಪತ್ರಕರ್ತರಿಗೂ ರಕ್ಷಣೆ ಸಿಗಬೇಕಾಗಿದೆ. ಅವರ ಮೇಲೆ ದೌರ್ಜನ್ಯ ನಡೆಯಬಾರದು, ಬೆದರಿಕೆ ಒಡ್ಡಬಾರದು. ಪ್ರಜಾಪ್ರಭುತ್ವದ ನಾಲ್ಕನೇ ಆಧಾರಸ್ತಂಬ ಎಂದು ಕರೆಯಿಸಿಕೊಳ್ಳುವ ಪತ್ರಿಕೋದ್ಯಮಕ್ಕಿರುವ ಸಾಮಾಜಿಕ ಬದ್ಧತೆ ಹಲವು. ಆ ಬದ್ಧತೆಯನ್ನು ಉಳಿಸಿಕೊಳ್ಳಲು ಸ್ವತಂತ್ರ್ಯವಾಗಿ, ಪೂರ್ವಗ್ರಹ ಮುಕ್ತವಾಗಿ ಪತ್ರಕರ್ತರು ಕೆಲಸ ಮಾಡಬೇಕಾದ್ದು ಅನಿವಾರ್ಯ. ಪತ್ರಿಕಾ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವುದಕ್ಕಾಗಿ ಮತ್ತು ನಮ್ಮ ದೇಶದ ಹಿತಕ್ಕಾಗಿ ಪ್ರತಿದಿನ ಧೈರ್ಯವಾಗಿ ಹೋರಾಡುತ್ತಿರುವ ಎಲ್ಲ ಧೈರ್ಯವಂತ ಪತ್ರಕರ್ತರಿಗೂ ನಮ್ಮ ನಮನವಿರಲಿ.

✍. ವಿವೇಕ್‌ ನರೇನ್

135ನೆಯ ವರ್ಷಾಚರಣೆಯತ್ತ ಮೇ ದಿನಾಚರಣೆ/ವಿಶ್ವ ಕಾರ್ಮಿಕ ದಿನಾಚರಣೆ

{ಮೇ 1 ರಂದು ಅಂತಾರಾಷ್ಟ್ರೀಯ ಕಾರ್ಮಿಕರ ದಿನಾಚರಣೆ ವಿಶೆಷ ಲೇಖನ}

135ನೆಯ ವರ್ಷಾಚರಣೆಯತ್ತ ಮೇ ದಿನಾಚರಣೆ/ವಿಶ್ವ ಕಾರ್ಮಿಕ ದಿನಾಚರಣೆ

ಕಾರ್ಮಿಕರು ಸತತವಾಗಿ ಕಷ್ಟ ಪಟ್ಟು ದುಡಿಯುತ್ತಾರೆ, ಆದರೆ ಭಾನುವಾರ ದಿನ ಬಿಟ್ಟು ಬೇರೆ ಯಾವ ದಿನವೂ ಕಾರ್ಮಿಕರಿಗೆ ರಜೆ ಸಿಗುವುದಿಲ್ಲ. ಮೇ 1 ರಂದು ಅಂತಾರಾಷ್ಟ್ರೀಯ ಕಾರ್ಮಿಕರ ದಿನಾಚರಣೆ ಆಗಿದ್ದು, ಈ ದಿನವನ್ನು ನಾವು ಲೇಬರ್ಸ್ ಡೇ, ವರ್ಕರ್ಸ್ ಡೇ ಅಂತಾ ಬೇರೆ ಬೇರೆ ರೀತಿಯಲ್ಲಿ ಕರೆಯುತ್ತೇವೆ. ಭಾರತ ದೇಶವಲ್ಲದೆ ಬೇರೆ ದೇಶಗಳಲ್ಲೂ ಕಾರ್ಮಿಕರ ದಿನಾಚರಣೆಯನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಹತ್ತು ಹಲವಾರು ಕ್ಷೇತ್ರಗಳಲ್ಲಿ ಕಾರ್ಮಿಕರು ಶ್ರಮ ಮತ್ತು ಆಸಕ್ತಿ ಇಂದ ಕೆಲಸ ಮಾಡುತ್ತಿದ್ದಾರೆ. ಕಾರ್ಮಿಕರ ದಿನದ ಹಿಂದೆ ಇರುವ ಕಥೆ ಏನು? ಮುಂದೆ ಓದಿ.

“ವಿಶ್ವಕಾರ್ಮಿಕ ದಿನಾಚರಣೆ”ಯು ಪ್ರಾರಂಭವಾಗಿ 134 ವರುಷಗಳು ಕಳೆದು, ಇಂದು (ಮೇ 1, 2020) 135ನೆಯ ಆಚರಣೆ ವಿಶ್ವದಾದ್ಯಂತ ನಡೆಯುತ್ತಿದೆ. ಅಮೆರಿಕ ಮತ್ತು ಯುರೋಪ್ ದೇಶಗಳಲ್ಲಿ 19ನೇ ಶತಮಾನದಲ್ಲಿ ಕೈಗಾರಿಕಾ ಕ್ರಾಂತಿಯು ಉಚ್ಛ್ರಾಯ ಸ್ಥಿತಿ ತಲುಪಿತ್ತು. ವಿವಿಧ ಕೈಗಾರಿಕೆಗಳು ಜನರಿಗೆ ಉದ್ಯೋಗ ನೀಡಿದ್ದವಾದರೂ ಕಾರ್ಮಿಕರ ಬದುಕು ಅತ್ಯಂತ ಹೀನಾಯ ಸ್ಥಿತಿಯಲ್ಲಿತ್ತು. ಅವರು ದುಡಿಯುತ್ತಿದ್ದ ಕಾರ್ಖಾನೆಗಳಲ್ಲೂ ಸಹ ಮನುಷ್ಯರ ಜೀವನಕ್ಕೆ ಅಗತ್ಯವಾದ ಕನಿಷ್ಠ ಸವಲತ್ತುಗಳನ್ನೂ ಮಾಲೀಕರು ಒದಗಿಸುತ್ತಿರಲಿಲ್ಲ. ಕೆಲಸಗಾರರನ್ನು ಗಾಣದೆತ್ತುಗಳಂತೆ ಅಸುರಕ್ಷಿತ ವಾತಾವರಣದಲ್ಲಿ ದುಡಿಸಿಕೊಳ್ಳಲಾಗುತ್ತಿತ್ತು. ಮಾಲೀಕರ ಲಾಭವನ್ನು ನಿಯಂತ್ರಿಸಿ ಕಾರ್ಮಿಕರಿಗೆ ಸವಲತ್ತು ನೀಡುವ ಯಾವುದೇ ಶಾಸನವೂ ಅಸ್ತಿತ್ವದಲ್ಲಿರಲಿಲ್ಲ.

ದಿನದ ಇಪ್ಪತ್ತುನಾಲ್ಕು ಗಂಟೆಗಳೂ ಮಾಲೀಕನ ಕಾರ್ಖಾನೆಯಲ್ಲಿ ಡುಡಿಯಬೇಕಿದ್ದ ಕೆಲಸಗಾರರು ವಿಶ್ರಾಂತಿಯಿಂದ ಮತ್ತು ಕೌಟುಂಬಿಕ ಜೀವನದಿಂದ ವಂಚಿತರಾಗಿದ್ದರು. ಈ ರೀತಿ ಕಾರ್ಮಿಕರು ಹರಿಸಿದ ಬೆವರು ಮಾಲೀಕರ ಖಜಾನೆಯನ್ನು ತುಂಬಲು ಕಾರಣವಾಗಿತ್ತು ಹಾಗೇ ಮಾಲೀಕರ ವರ್ಗ ಇನ್ನಷ್ಟು ಶ್ರೀಮಂತವಾಗುತ್ತಲೇ ಇತ್ತು. ಕಾರ್ಮಿಕರು ನೊಂದು ಬೆಂದು ಮಣ್ಣಾಗುತ್ತಲಿದ್ದರು. 8 ಗಂಟೆ ದುಡಿಯುವ ಅವಧಿ ಎಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು ಕಾರ್ಮಿಕರು ಅಮೆರಿಕದ ಚಿಕಾಗೋ ನಗರದಲ್ಲಿ ಮೇ 1, 1886ರಂದು ಲಕ್ಷಾಂತರ ಸಂಖ್ಯೆಯಲ್ಲಿ ಹೋರಾಟ ಮಾಡಿದ್ದರು. ಇದರ ಫಲವಾಗಿ ಕಾರ್ಮಿಕರು ಹೋರಾಟ ಮುಂದುವರಿಸಿದ್ದರಿಂದ ಕೊನೆಗೆ ನ್ಯಾಯಯುತವಾದ ದಿನದ 8 ಗಂಟೆ ಕಾರ್ಮಿಕರ ಕೆಲಸದ ಅವಧಿಯನ್ನು ಚಾಲನೆಗೆ ತಂದರು. ಇದರ ಸವಿ ನೆನಪಿಗೆ ಮೇ 1 ರಂದು ಕಾರ್ಮಿಕರ ದಿನಾಚರಣೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಮಿಕರ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ.

ಅಮೇರಿಕದಲ್ಲಿ 1886ರ ಮೇ 1ರಂದು 13,000 ವಿವಿಧ ಕ್ಷೇತ್ರಗಳು ಮತ್ತು ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದ ಮೂರುವರೆ ಲಕ್ಷ ಜನ ಕಾರ್ಮಿಕರು ಕೆಲಸಕ್ಕೆ ಹೋಗದೆ ಮುಷ್ಕರ ಹೂಡಿದರು. ಈ ಕಾರ್ಮಿಕರ ಮುಷ್ಕರವನ್ನು ಅಲ್ಲಿನ ಎಡಪಂಥೀಯ ಕಾರ್ಮಿಕ ಸಂಘಟನೆ ಸಂಘಟಿಸಿತ್ತು. ಚಿಕಾಗೊ ನಗರವೊಂದರಲ್ಲೇ 40,000 ಶ್ರಮಿಕರು ಕೆಲಸದಿಂದ ದೂರ ಉಳಿದರು. ರಸ್ತೆಗಳು ಬಿಕೊ ಎನುತ್ತಿದ್ದವು. ರೈಲುಗಳು ಸ್ತಬ್ಧಗೊಂಡಿದ್ದವು, ಯಂತ್ರಗಳನ್ನು ನಡೆಸುವವರಿಲ್ಲದೆ ಕಾರ್ಖಾನೆಗಳಲ್ಲಿ ಮೌನ ಆವರಿಸಿತ್ತು. ನಿರ್ಮಾಣ ಕೈಗಾರಿಕೆಯಲ್ಲಿ ದುಡಿಯುತ್ತಿದ್ದವರೂ ಸೇರಿದಂತೆ ಸುಮಾರು 1,85,000 ಕಾರ್ಮಿಕರು ಆ ಕಾಲದಲ್ಲಾಗಲೇ ಎಂಟು ಗಂಟೆ ಕೆಲಸದ ಪದ್ಧತಿಯನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದರು. ಇನ್ನೂ ಹಲವಾರು ಕ್ಷೇತ್ರಗಳ ಕಾರ್ಮಿಕರು ಮೇ 1ರ ಮುಷ್ಕರದಲ್ಲಿ ಕೈಜೋಡಿಸಿ ಕಾರ್ಮಿಕ ಚಳವಳಿಯ ಪ್ರವಾಹವನ್ನು ಸೇರಿಕೊಂಡರು. ಅನೇಕ ಕಾರ್ಮಿಕ ಸಂಘಗಳು ರಚನೆಯಾಗಿ ಕಾರ್ಮಿಕರು ಸಂಘಟಿತರಾದರು. ಕಾರ್ಮಿಕರು ಮಾಲೀಕರ ಮತ್ತು ಸರ್ಕಾರದ ದಬ್ಬಾಳಿಕೆಯ ವಿರುದ್ಧ ನ್ಯಾಯಕ್ಕಾಗಿ ಹೋರಾಟವನ್ನು ಶಾಂತಿಯುತವಾಗಿಯೇ ಮುಂದುವರಿಸಿದರು.

ಮೊದಲ ಬಾರಿಗೆ ಭಾರತದಲ್ಲಿ ಕಾರ್ಮಿಕ ದಿನಾಚರಣೆಯನ್ನು ಆಚರಿಸಿದ್ದು ಲೇಬರ್ ಕಿಸಾನ್ ಪಾರ್ಟಿ ಆಫ್ ಹಿಂದುಸ್ತಾನ್. 1923ರ ಮೇ1ರಂದು ಚೆನ್ನೈನಲ್ಲಿ ‘ಲೇಬರ್ ಕಿಸಾನ್ ಪಾರ್ಟಿ ಆಫ್ ಹಿಂದುಸ್ತಾನ್’ ಅಡಿಯಲ್ಲಿ ಕಾರ್ಮಿಕ ದಿನವನ್ನು ಆಚರಿಸಲಾಯಿತು. ಆ ಸಮಯದಲ್ಲಿ ಇದನ್ನು ‘ಮದ್ರಾಸ್ ಡೆ’ ಎಂದು ಕರೆಯಲಾಗುತ್ತಿತು. ಭಾರತದಲ್ಲಿ ಕಾರ್ಮಿಕ ದಿನಾಚರಣೆಯನ್ನು “ಅಂತರಾಷ್ಟ್ರೀಯ ಶ್ರಮಿಕ್ ದಿವಸ್” ಎಂದು ಆಚರಿಸಲಾಗುತ್ತದೆ.

ಶ್ರಮ ಅನ್ನೋದು ನಮ್ಮ ದುಡಿಮೆಯಲ್ಲಿ ಅಡಗಿರುವ ಸತ್ಯ. ಶ್ರಮಕ್ಕೆ ಪರ್ಯಾಯ ಪದ ‘ಬೆವರು’ ಎಂದರೆ ತಪ್ಪಾಗದು. ಕೆಲಸ ಮಾಡದವನಿಗೆ ಶ್ರಮದ ಅರ್ಥ ಮತ್ತು ಮಹತ್ವ ತಿಳಿಯದು. ಸೋಮಾರಿಗಳು ಇದರಿಂದ ಬಲುದೂರ. ಶ್ರಮ ಒಳ್ಳೆಯದಕ್ಕೂ ಇದೆ ಕೆಟ್ಟದ್ದಕ್ಕೂ ಇದೆ. ಫಲಿತಾಂಶ ಮಾತ್ರ ಶ್ರಮವನ್ನು ಅವಲಂಭಿಸಿರುತ್ತದೆ. ಎರಡು ರೀತಿಯಲ್ಲಿ ನಾವು ಶ್ರಮವನ್ನು ನೋಡಬಹುದು. ಫಲಾಪೇಕ್ಷೆಯನ್ನು ಬಯಸಿ ಹೊಟ್ಟೆಪಾಡಿಗೆ ಅಥವ ಜೀವನಕ್ಕಾಗಿ ಮಾಡುವ ಶ್ರಮ ಒಂದಾದರೆ, ಏನನ್ನೂ ನಿರೀಕ್ಷಿಸದೆ ಸೇವಾ ಮನೋಭಾವದಿಂದ ಪರರಿಗಾಗಿ ಮಾಡುವ ಶ್ರಮಧಾನ.

ಪ್ರತಿಯೊಂದು ದೇಶದ ಆರ್ಥಿಕ ಅಭಿವೃದ್ಧಿಯು ಆ ದೇಶದ ಕಾರ್ಮಿಕರ ಮೇಲೆ ಅವಲಂಬಿತವಾಗಿರುತ್ತದೆ. ದಕ್ಷತೆಯಿಂದ ಕೂಡಿದ ಕಾರ್ಮಿಕರ ವರ್ಗದಿಂದ ಮಾತ್ರ ಆ ದೇಶ ಆರ್ಥಿಕ ಪ್ರಗತಿಯನ್ನು ಸಾಧಿಸುತ್ತಿರುತ್ತದೆ. ಕಾರ್ಮಿಕ ಎಂದರೆ ಸಾಮಾನ್ಯ ಅರ್ಥದಲ್ಲಿ ದೈಹಿಕ ಇಲ್ಲವೇ ಬೌದ್ಧಿಕ ಶ್ರಮವನ್ನು ಮಾರಟ ಮಾಡಿ ಹಣ ಗಳಸುತ್ತಿರುವ ವ್ಯಕ್ತಿಗೆ ಕಾರ್ಮಿಕ ಎನ್ನುತ್ತೇವೆ. ಮೇ 1ರಂದು ಆಚರಿಸಲಾಗುವ ಅಂತಾರಾಷ್ಟ್ರೀಯ ಕಾರ್ಮಿಕರ ದಿನವನ್ನು ಲೇಬರ್ ಡೇ, ಮೇ ಡೇ ವರ್ಕರ್ಸ್ ಡೇ ಎಂದೂ ಕರೆಯಲಾಗುತ್ತದೆ. ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳು ಕಾರ್ಮಿಕ ದಿನವನ್ನು ಆಚರಿಸಿಕೊಂಡು ಬರುತ್ತಿವೆ. ವಿವಿಧ ಕ್ಷೇತ್ರಗಳಲ್ಲಿ ಕಾರ್ಮಿಕರು ದುಡಿಯುತ್ತಿದ್ದಾರೆ.

ಒಂದಲ್ಲ ಒಂದು ರೀತಿಯಲ್ಲಿ ಕಾರ್ಮಿಕರಾಗಿರುವ ನಾವು ಇಂದು ಸಂಘಟಿತರಾಗಿದ್ದೇವೆಯೇ? ಇಲ್ಲ. ಪ್ರತಿಷ್ಠತೆ, ಕೆಲಸದ ಭದ್ರತೆ ಸೇರಿದಂತೆ ಇತರೆ ಕಾರಣಗಳಿಗಾಗಿ ನಾವು ಸಂಘಟಿತರಾಗಲಾಗುತ್ತಿಲ್ಲ. ಹಲವು ರೀತಿಯ ಕಾರ್ಮಿಕ ಸಂಘಗಳು ಇದೆಯಾದರೂ ಆಂತರಿಕ ಭಿನ್ನಾಭಿಪ್ರಾಯದಿಂದ ನಿಜವಾದ ಕಾರ್ಮಿಕರಿಗೆ ಸರ್ಕಾರದ ಸವಲತ್ತನ್ನು ತಲುಪಿಸಲಾಗುತ್ತಿಲ್ಲ. ಇನ್ನು ಅಸಂಘಟಿತ ಕಾರ್ಮಿಕರ ಪಾಡಂತೂ ಹೇಳ ತೀರದ್ದಾಗಿದೆ. ಕಟ್ಟಡ ಕಾರ್ಮಿಕರು ಪ್ರತೀ ಬಾರಿ ಸಾವನ್ನಪ್ಪಿದಾಗ ಸರ್ಕಾರದ ವತಿಯಿಂದ ಒಂದು ಲಕ್ಷ ಅಥವಾ ಎರಡು ಲಕ್ಷ ಕೊಟ್ಟು ಪ್ರಕರಣವನ್ನು ಮುಚ್ಚಲಾಗುತ್ತದೆ. ಆದರೆ ಅವರಿಗೆಂದು ಇರುವ ಯೋಜನೆಗಳು ಅನುಷ್ಠಾನದ ಕೊರತೆಯಿಂದಾಗಿ ತಲುಪುವುದೇ ಇಲ್ಲ.

ಜೀವವನ್ನು ಮುಡಿಪಾಗಿಟ್ಟು ರಾಷ್ಟ್ರದ ಗಡಿ ರಕ್ಷಣೆ ಮಾಡುವ ಯೋಧನ ಮತ್ತು ನಮ್ಮ ದೇಶದ ಬೆನ್ನೆಲುಬಾಗಿ ಅನ್ನದಾತನ ಗೌರವ ಪ್ರತಿಷ್ಠೆಗಳನ್ನು “ಜೈ ಜವಾನ, ಜೈ ಕಿಸಾನ್” ಘೋಷಣೆಯ ಮೂಲಕ ಅವರಲ್ಲಿ ಆತ್ಮ ಗೌರವವನ್ನು ಹೆಚ್ಚಿಸಿದ್ದು ಮಹಾನ್ ಚೇತನ ಲಾಲ್ ಬಹಾದ್ದೂರ್ ಶಾಸ್ತ್ರಿ. ಆದರೆ ಈಗ ನಮ್ಮ ದೇಶ ಔದ್ಯಮೀಕರಣ ಆಗಿದ್ದರಿಂದ ಕಾರ್ಮಿಕರಲ್ಲಿ ಗೌರವ ಪ್ರತಿಷ್ಠೆಗಳನ್ನು ಹಾಗೂ ಆತ್ಮ ಗೌರವವನ್ನು ಹೆಚ್ಚಿಸುವುದು ನಮ್ಮ ಆದ್ಯ ಕರ್ತವ್ಯ. ಆದ್ದರಿಂದ “ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್‌ ಎಂದರು ಅಟಲ್‌ ಬಿಹಾರಿ ವಾಜಪೇಯಿ ಅದರೊಂದಿಗೆ ಈಗ “ಜೈ ಮಜ್ದೂರ” ಎಂದು ಸೇರಿಸಿದರೆ ಸರಿಯಲ್ಲವೆ?

ಇದೀಗ ಕೋವಿಡ್ 19 ಎಂಬ ಸಾಮಾಜಿಕ ಪಿಡುಗು ಇಡೀ ವಿಶ್ವದಲ್ಲಿ ಸಾಕಷ್ಟು ಆರ್ಥಿಕ ಸಂಕಷ್ಟ ತಂದೊಡ್ಡಿದೆ. ಎಷ್ಟೋ ಕಾರ್ಮಿಕರು ಕೆಲಸ ಕಳೆದುಕೊಳ್ಳುವ ಭಯದಲ್ಲಿದ್ದಾರೆ. ಈ ಸಂದರ್ಭದಲ್ಲಿ ಕಾರ್ಮಿಕ ಸಂಘಟನೆಗಳು ಒಟ್ಟಾಗಿ ಕಾರ್ಮಿಕರಿಗೆ ಭದ್ರತೆ ಒದಗಿಸುವಂತಾಗಲಿ. ಸ್ವತಂತ್ರ ಭಾರತದಲ್ಲಿ ಸಮಾನತೆ, ಭ್ರಾತೃತ್ವ, ಐಕ್ಯತೆ ಮತ್ತು ಮಾನವತೆಯನ್ನು ಮೆರೆಸುವ ಸುಭಿಕ್ಷ ಬೆಳೆಯನ್ನು ಶ್ರಮಜೀವಿಗಳು ಬೆಳೆದಿದ್ದಾರೆ.

ಶತಮಾನಗಳ ಹೋರಾಟದ ಪರಂಪರೆ ಹಾಗೂ ಸಾಮಾಜಿಕ, ರಾಜಕೀಯ ಸಾಂಸ್ಕೃತಿಕ ಹೋರಾಟಗಳ ಅನುಭವಗಳಿರುವ ನಮ್ಮ ನಾಡಿನ ಕಾರ್ಮಿಕ ವರ್ಗ ಬಂಡವಾಳಶಾಹಿಯಿಂದ ಸಮಾಜವಾದಕ್ಕೆ ಪರಿವರ್ತನೆಯನ್ನು ಸಾಧಿಸುವ ಮಾರ್ಗದಲ್ಲಿ ಮತ್ತೊಮ್ಮೆ ಚರಿತ್ರಾರ್ಹ ಜಯ ಸಾಧಿಸುವ ಪಣವನ್ನು, ಮೇ 1ರಂದು ಆಚರಿಸಲಾಗುವ ಅಂತಾರಾಷ್ಟ್ರೀಯ ಕಾರ್ಮಿಕರ ದಿನವವಾದ, ಶ್ರಮಿಕ್ ದಿವಸ್, ಲೇಬರ್ ಡೇ, ಮೇ ಡೇ, ವರ್ಕರ್ಸ್ ಡೇ ಎಂದೂ ಹಲವು ಹೆಸರುಗಳಿಂದ ಕರೆಯಲ್ಪಡುವ ಈ ಸಂಧರ್ಭದಲ್ಲಿ ಅಂಗೀಕರಿಸಬೇಕಾಗಿದೆ.

ಲೇಖಕರು: ✍. ಅರುಣ್ ಕೂರ್ಗ್

ಏನೆಂದು ನಾ ಹೇಳಲಿ…. ಮಾನವನಾಸೆಗೆ ಕೊನೆಯೆಲ್ಲಿ….

ಏನೆಂದು ನಾ ಹೇಳಲಿ…. ಮಾನವನಾಸೆಗೆ ಕೊನೆಯೆಲ್ಲಿ….

ಡೈನೋಸಾರುಗಳ ಯುಗ ಏಕೆ ಅಂತ್ಯವಾಗಿರಬಹುದು? ಅವುಗಳ ಕ್ರೌರ್ಯ ಅತಿಯಾದುದರಿಂದಲೆ ಆಗಿರಬೇಕು! ಈಗಿರುವಾಗ ಮನುಕುಲದ ಸರ್ವನಾಶಕ್ಕೆ ಸೆಡ್ಡು ಹೊಡೆದಿರುವವರು ಯಾರು? ಪ್ರಾಣಿಯೂ ಅಲ್ಲ, ಪಕ್ಷಿಯೂ ಅಲ್ಲ, ಕ್ಷುದ್ರ ಜೀವಿ. ಮನೆಯ ಒಳಗೂ ಹೊರಗೂ ಗಾಳಿ ಇದ್ದಲ್ಲೆಲ್ಲ ಕಡೆ ಇದ್ದು, ಹಗಲೂ-ರಾತ್ರಿಯೂ ಭೇದಭಾವ ತೋರದೇ, ಬಡವ-ಶ್ರೀಮಂತರೆಂದು ಮುಖ-ಮುಸುಡಿ ನೋಡದೇ, ಯಾವುದೇ ವೇಷ-ಭಾಷೆಗಳನ್ನೂ ಮೀರಿ, ಎಲ್ಲರ ಒಳಹೊಕ್ಕು ನಮ್ಮೆಲ್ಲರ ಸೊಕ್ಕನ್ನು ಮುರಿಯಲು ಸೆಡ್ಡು ಹೊಡೆದು ನಿಂತಿದೆ ಈ ಕೊರೋನಾ ವೈರಸ್ಸು!
ಈ ಕೊರೋನಾ ಎಂಬ ವೈರಸ್ ಮನುಷ್ಯನ ಮನಸ್ಸನನ್ನು ಹೈರಾಣ ಮಾಡಿಬಿಟ್ಟಿದೆ. ನನ್ನ ವಿವೇಚನೆಯ ಮೂಲಕವೆ ಏನೆಲ್ಲವನ್ನು ನಿಯಂತ್ರಿಸಬಲ್ಲೆ ಎಂಬ ಅಹಂಕಾರದಲ್ಲಿದ್ದ ಮನುಷ್ಯನ ಅಂತಸತ್ವಕ್ಕೆ ಬಹುದೊಡ್ಡ ಸವಾಲಾಗಿ ಕೊರೋನಾ ವೈರಸ್ ಕಾಡುತ್ತಿದೆ. ಕೊರೋನಾ ಬಂದವರೆಲ್ಲ ಸತ್ತೆ ಹೋಗುತ್ತಾರೆಂದೂ ಅಲ್ಲ. ಎಲ್ಲ ಜ್ವರಗಳಾಗೆ ಈ ವೈರಸ್ ಜ್ವರವು ಬಾಧಿಸುತ್ತದೆ. ಜ್ವರ ಬಂದಾಗ ನಮ್ಮಲ್ಲಿ ರೋಗ ನಿರೋಧಕ ಶಕ್ತಿಯ ಪ್ರಭಾವದಿಂದ ಜ್ವರ ವಾಸಿಯಾಗುತ್ತದೆ. ಹೀಗೆ ಎಲ್ಲರಿಗೂ ಆಗುತ್ತದೆಂದಲ್ಲ. ಅವರವರ ದೇಹ ಪ್ರಕೃತಿಯನ್ನು ಅವಲಂಬಿಸಿರುತ್ತದೆ.
ಈ ಮಹಾಮಾರಿ ಮುಂದೆ ಯಾವ ಹಾದಿಯಲ್ಲಿ ಸಾಗುತ್ತದೆ ಎಂಬುದು ಸ್ಪಷ್ಟವಿಲ್ಲ. ಈ ಸಾಂಕ್ರಮಿಕ ಖಾಯಿಲೆಗಳೇ ಹಾಗೆ, ವಿಚಿತ್ರವಾಗಿ ನಡೆದುಕೊಳ್ಳುತ್ತವೆ. ೧೯೧೮ರಲ್ಲಿ ಬಂದಿದ್ದ ಸ್ಪಾನಿಷ್ ಜ್ವರ ಹೋಯಿತು ಅಂದುಕೊಳ್ಳುತ್ತಿದ್ದ ಹಾಗೆ, ಮತ್ತೆ ಎರಡನೇ ಬಾರಿ ತೀರಾ ತೀವ್ರವಾಗಿ ಎರಗಿತು. ಕೆಲವೇ ದಿನಗಳಲ್ಲಿ ಮತ್ತೆ ಹೊರಟು ಹೋಯಿತು. ಈಗಿನ ಕೊರೋನ ಕೂಡ ಹಾಗೆ. ಊಹಿಸುವುದಕ್ಕೆ ಸಾಧ್ಯವಿಲ್ಲ. ಸುಳ್ಳು ಸುದ್ದಿಗಳಿಂದ ಜನ ಪ್ಯಾನಿಕ್ ಆಗಿರುವುದು ಒಂದು ಕಡೆಯಾದರೇ, ನಮಗೇನು ಆಗಲ್ಲ ಎಂದು ನಿರ್ಲಕ್ಷ್ಯ, ಉದಾಸೀನಾದಿಂದ ಹುಂಬುತನ ಮೆರೆಯುವವರೂ ಇನ್ನೊಂದೆಡೆ.
ನೂರು ವರ್ಷಗಳ ಹಿಂದೆ ಜಗತ್ತನ್ನು ಆವರಿಸಿಕೊಂಡಿದ್ದ ಸ್ಪಾನಿಷ್ ಫ್ಲೂ ಬಲಿತೆಗೆದುಕೊಂಡವರ ಸಂಖ್ಯೆಗೆ ಹೋಲಿಸಿದರೆ ಈಗ ಕೊರೋನ ವೈರಾಣುವಿನಿಂದ ಸತ್ತವರ ಸಂಖ್ಯೆ ಇದುವರೆಗೆ ಬಹಳ ಕಡಿಮೆಯೇ.. ಆಗ ಅದು ಜಗತ್ತಿನಾದ್ಯಂತ ೫೦ ಕೋಟಿ ಜನರನ್ನು ಬಾಧಿಸಿತ್ತು. ಅಂದರೆ ಆಗಿನ ಜಗತ್ತಿನ ಜನಸಂಖ್ಯೆಯ ಶೇಕಡ ೨೭ರಷ್ಟು ಜನ ಅದರಿಂದ ತೊಂದರೆಗೊಳಗಾಗಿದ್ದರು. ಅವರಲ್ಲಿ ಸುಮಾರು ಶೇಕಡ ೧೦ರಷ್ಟು ಜನ ಸತ್ತಿದ್ದರು (ಈ ಸಂಖ್ಯೆಯ ಬಗ್ಗೆ ವಿಭಿನ್ನ ಅಂದಾಜುಗಳಿವೆ. ಇದು ಒಂದು ಸರಾಸರಿ). ಭಾರತದಲ್ಲೇ ಅಂದಾಜು ೧.೭ ಕೋಟಿ ಜನ ಇದರಿಂದ ಪ್ರಾಣ ಕಳೆದುಕೊಂಡಿದ್ದರು. ಅದಕ್ಕೆ ವ್ಯತಿರಿಕ್ತವಾಗಿ ಕೊರೋನ ವೈರಾಣುವಿನಿಂದ ಜಗತ್ತಿನಾದ್ಯಂತ ಪೀಡಿತರಾದವರ ಸಂಖ್ಯೆ ‌ಈ ಬರಹ ಬರಯುವ ಸಮಯದಲ್ಲಿ ಸಧ್ಯಕ್ಕೆ 14,39,516 ಲಕ್ಷ. ಸೋಂಕಿತರಲ್ಲಿ ಪ್ರಾಣ ಕಳೆದುಕೊಂಡವರ ಸಂಖ್ಯೆ ಸುಮಾರು 85,711. ಒಟ್ಟು ಜಗತ್ತಿನ 212 ದೇಶಗಳು ಈ ಕೊರೋನ ವೈರಾಣುವಿನಿಂದ ತತ್ತರಿಸಿ ಹೋಗಿದೆ.
ಪ್ರಕೃತಿ ಮಾತೆ ಯುಗಾದಿ ಆರಂಭಕ್ಕೆ ಮುನ್ನವೇ ತನ್ನ ತಾನು ರಕ್ಷಿಸಿಕೊಳ್ಳಲು ಮಾನವನು ತನ್ನ ಮೇಲೆ ಎಸಗುತ್ತಿರುವ ನಿರಂತರ ಅತ್ಯಾಚಾರವನ್ನು ಅಂತ್ಯವಾಗಿಸಲು ದುಷ್ಟರಿಗೆ ಪಾಠ ಕಲಿಸಲೋ ಎಂಬಂತೆ; ಪ್ರಕೃತಿಯು ಕೊರೋನ ವೈರಸ್ಸಿನ ಏಕಾಣುವಿನ ಅತ್ಯಂತ ಚಿಕ್ಕ ದೇಹಿಯಾಗಿ ರೌದ್ರ ನರ್ತನಗೈಯ್ಯುತ ಮಾನವ ಕುಲಕೋಟಿಯ ನುಂಗಿ ನೊಣೆಯುತ್ತಿರುವುದು ನೋಡಿದರೆ ಈ ಯುಗಾದಿಯು ಯುಗಾಂತ್ಯ ಅನ್ನಿಸದಿರದು!
ಭಾರತದಂತಹ ಅಧಿಕ ಜನಸಂಖ್ಯೆಯುಳ್ಳ ರಾಷ್ಟ್ರದಲ್ಲಿ ಮುನ್ನಚರಿಕೆ ಎಂಬುದು ಅತ್ಯಗತ್ಯವಾಗಿ ಬೇಕು. ಅಧಿಕ ಜನಸಾಂದ್ರತೆಯ ಭಾರತದಲ್ಲಿ ಸೋಂಕಿತ ವ್ಯಕ್ತಿಗಳಿಂದ ಇತರ ವ್ಯಕ್ತಿಗಳಿಗೆ ವೈರಸ್ ಹರಡುವಿಕೆ ಅತಿ ತೀವ್ರ. ಸೋಂಕಿತ ವ್ಯಕ್ತಿ ಎನ್ನುತ್ತಲೇ ಮಾರುದ್ದ ಓಡುವ ನಾವು, ಅದೇ ವ್ಯಕ್ತಿಯ ಬಳಿ ಇದ್ದು ಚಿಕಿತ್ಸೆ ನೀಡುವ ವೈದ್ಯರು ನರ್ಸುಗಳು ಹಾಗೂ ಇನ್ನಿತರ ವೈದ್ಯಕೀಯ ಸಿಬ್ಬಂದಿಗಳು ನಿಜವಾಗಿಯೂ ದೇವರ ಸ್ವರೂಪವೆ.
ಎಲ್ಲರೂ ಸಂಘಟಿತ ಪ್ರಯತ್ನದಲ್ಲಿ ಕರೋನಾ ಸೋಂಕಿನ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಧರ್ಮಾಂಧತೆ ಹಾಗೂ ಅಜ್ಞಾನವನ್ನು ದೂರ ಮಾಡಿ ಹೋರಾಟಕ್ಕೆ ಎಲ್ಲರೂ ಕೈ ಜೋಡಿಸಿದಾಗ ಮಾತ್ರ ಮಹಾಮಾರಿಯಿಂದ ದೂರವಾಗಲು ಸಾಧ್ಯ. ಇಲ್ಲವಾದಲ್ಲಿ ಮನುಕುಲದ ಬಹುಪಾಲು ನಾಶ ಖಂಡಿತ.
ಭಾರತ ಸರ್ಕಾರ ಹಲವಾರು ಕಠಿಣ ಕ್ರಮಗಳನ್ನು ತೆಗೆದುಕೊಂಡಿದ್ದು ಶ್ಲಾಘನೀಯ. ಕೆಲ ನಿರ್ಧಾರಗಳಿಂದ ಬಡ ಕಾರ್ಮಿಕರಿಗೆ, ದಿನಗೂಲಿ ನೌಕರರಿಗೆ ಹಾಗೆಯೇ ಎಲ್ಲಾ ವರ್ಗದವರ ಜೀವನ ನಿರ್ವಹಣೆಯಲ್ಲಿ ವ್ಯತ್ಯಯ ಉಂಟಾಗಬಹುದು. ಆದರೆ ಇದು ಇಂದು ಅನಿವಾರ್ಯವಾಗಿದೆ ಎಂಬುದನ್ನು ಎಲ್ಲರೂ ಮನಗಾಣಬೇಕು. ಏಕೆಂದರೆ ಮನುಷ್ಯ ಬದುಕಿ ಬಾಳ ಬೇಕಾದರೆ ಜೀವ ಮುಖ್ಯ ಅಲ್ಲವೆ?
ತಿಂಗಳ ಹಿಂದಿನವರೆಗೆ ಜಗತ್ತು ಅಭಿವೃದ್ಧಿಯ ಹೆಸರಲ್ಲಿ ಹೇಗೆಲ್ಲ ನಾಟ್ಯವಾಡುತ್ತಿತ್ತು? ಬದುಕಿನ ಬಗ್ಗೆ, ನಮ್ಮಲ್ಲಿರುವ ನೈಸರ್ಗಿಕ ಸಂಪನ್ಮೂಲಗಳ ಬಗ್ಗೆ ಪ್ರೀತಿ, ಕಾಳಜಿ ಇರುವ, ಮಹತ್ವ ಗೊತ್ತಿರುವವರ ಕಣ್ಣಲ್ಲಿ, ಅಭಿವೃದ್ಧಿ ಅನ್ನುವುದು ಹಗ್ಗ ಬಿಚ್ಚಿದ ಹುಚ್ಚು ಕುದುರೆಯಂತೆ ಓಡಾಡುತ್ತ, ನಿಸರ್ಗವನ್ನು ಹಾಳುಮಾಡುತ್ತಿರುವಂತೆ ಕಂಡಿದ್ದಿರಬೇಕು. ಅದರ ಓಟಕ್ಕೊಂದು ಲಂಗು ಲಗಾಮು ಹಾಕಲು ಸಾಧ್ಯವೇ ಇಲ್ಲ ಅನ್ನುವಷ್ಟು ಅದು ವೇಗ ಪಡೆದುಕೊಂಡಿತ್ತು.
ಬದುಕು ಎಷ್ಟು ಚಿಕ್ಕದು ಅಂತ? ಬದುಕನ್ನು ತೀರಾ ಗಂಭೀರವಾಗಿ ತೆಗೆದುಕೊಂಡೆವು ಅಂತಾ? ತಮ್ಮ ಖುಷಿಗಾಗಿ ಒಂದಷ್ಟೂ ಹಣವನ್ನೂ ವ್ಯಯಿಸದೇ, ಬ್ಯಾಂಕಿನಲ್ಲಿ ಹಣವನ್ನು ಪೇರಿಸಿಡುವವರಾದರೂ ಈಗ ಯೋಚಿಸಬಹುದ? ಯಾಕಾದರೂ ತಾನು ಬದುಕನ್ನು ಅಷ್ಟು ಸೀರಿಯಸ್ಸಾಗಿ ತೆಗೆದುಕೊಳ್ಳಬೇಕಿತ್ತು ಅಂತ. ಹಣ, ಜಾತಿ, ಧರ್ಮ ಜೀವನಾವಶ್ಯಕ ಸಂಗತಿಗಳಾ? ಇದ್ದಷ್ಟು ದಿನ ಚಂದವಾಗಿ ಬದುಕು ಕಳೆಯೋಕೆ ಏನು ಬೇಕು ಅಂತ ನಾವೇ ನಿರ್ಧರಿಸಬೇಕು.
ಅಸಮಾನತೆಯ ಸಂಘರ್ಷ, ಸ್ವಾರ್ಥದ ಯೋಚನೆ ಆಸೆ, ಹತಾಶೆ, ಇವೆಲ್ಲವೂ ನಮ್ಮ ಸ್ಥಿತಿಯನ್ನು ಇನ್ನಷ್ಟು ಅಧಃಪತನ ಮಾಡುತ್ತದೆ. ಇಲ್ಲಿ ಯಾರಿಗೂ ಯಾರು ಇಲ್ಲ ಅನ್ನುವ ಸತ್ಯ ಗೊತ್ತಿದ್ದರೂ ಸದಾ ಬಡಿದಾಡುತ್ತಲೇ ಬದುಕುತ್ತೇವೆ. ಎಲ್ಲ ಇದ್ದರೂ ಏನು ಇಲ್ಲ ಅನ್ನುವ ಕೊರಗು ನಮ್ಮ ನೆಮ್ಮದಿಯನ್ನು ಕಿತ್ತು ತಿನ್ನುತ್ತಿರುತ್ತದೆ. ಒಂದು ದಿನ ಮಣ್ಣಲ್ಲಿ ಮಣ್ಣಾಗಿ ಹೋಗುವ ಈ ಶರೀರಕ್ಕೆ ಬದುಕಿನ ಸತ್ಯ ದರ್ಶನವಾಗುವುದೇ ಇಲ್ಲ.
ಈವರೆಗೆ ಏನೆಲ್ಲ ಚಿತ್ರ-ವಿಚಿತ್ರ ಕಲಹಗಳ ಉದಾಹರಣೆಗಳನ್ನ ನೋಡಿದ್ದೀವಿ, ಕೇಳಿದ್ದೀವಿ. ತೀರಾ ಕ್ಷುಲ್ಲಕ ಕಾರಣಗಳಿಗೆ, ಆಸ್ತಿ ವಿವಾದಗಳಿಗೆ, ಅಣ್ಣ-ತಮ್ಮಂದಿರು ದೂರವಾದದ್ದನ್ನ ಕೇಳಿದ್ದೀವಿ. ಜಾತಿಯ ವಿಷಯವಾಗಿ ನಡೆದ ಕೊಲೆಗಳಿಗೆ ಕಿವಿಯಾಗಿದ್ದೀವಿ. ತಮ್ಮದಲ್ಲದ ಜಾತಿಯ ಹುಡುಗನ್ನು ಮದುವೆಯಾದ ಮಗಳನ್ನೇ ಕೊಂದುಬಿಡುವ ನಿರ್ಧಾರಕ್ಕೆ ಬರುವಷ್ಟು ಕ್ರೌರ್ಯವನ್ನು ಎದೆಯಲ್ಲಿಟ್ಟುಕೊಂಡು ನಮ್ಮ ನಡುವೆ ಓಡಾಡುವ ಜನರಿದ್ದಾರೆ ಅಂತ ಎಲ್ಲರಿಗೂ ತಿಳಿದ ವಿಷಯವೇ.
ಪರಿಸರದ ಎಚ್ಚರಿಕೆ ಮಳೆಗಾಲದಲ್ಲಿ ಪ್ರವಾಹಗಳು, ಬೆಟ್ಟಗುಡ್ಡ ಕುಸಿತಗಳ ಮೂಲಕ ನೀಡಿತ್ತು. ಆ ಸಂದರ್ಭದಲ್ಲಿ ನಾವೆಲ್ಲ ಮಾನವೀಯತೆಯ ಮಹಾ ಸಾಗರವನ್ನೆ ಹರಿಸಿದೆವು. ನೆರೆ ಸಂತ್ರಸ್ತರಿಗೆ ಆಹಾರ, ಬಟ್ಟೆ, ವಸತಿ ಕೊಡಿಸುವಲ್ಲಿ ಕೈಯಲ್ಲಾದ ಮಟ್ಟಿಗೆ ಜೊತೆಯಾದೆವು. ಹಾಗೇ ಈ ಮಹಾಮಾರಿ ಕೊರೋನಾ ಎಂಬ ವೈರಸ್ ಮನುಕುಲಕ್ಕೆ ಹೈರಾಣ ಮಾಡುತ್ತಿದೆ. ಈ ಸಂದರ್ಭದಲ್ಲಿ ನಾವೆಲ್ಲ ಮಾನವಿಯತೆಯನ್ನು ಜೊತೆಯಾಗಿಸಬೇಕಾಗಿರುವುದು ಅನಿರ್ವಾಯವಾಗಿದೆ.
ಅಂದು ಒಂದೇ ಜತೆ ಬಟ್ಟೆಯಲ್ಲಿ ಸಂತೋಷವಾಗಿ ಬದುಕುತ್ತಿದ್ದರು, ಇಂದು ಹೊಸ ಬಟ್ಟೆಗೆ ಬರವಿಲ್ಲ. ಆದರೆ ಅವುಗಳ ಧರಿಸಲು ಹಿಂದಿನಂತಹ ಕುತೂಹಲ ಆಸೆ ಇಲ್ಲ. ಧರಿಸಿದರೂ ಅಂದಿನಂತೆ ಇಂದು ಸಂತಸವಾಗುತ್ತಿಲ್ಲ. ನಮ್ಮದು ನಿರೀಕ್ಷೆಗಳ ಬದುಕು ಕಳೆದುಕೊಂಡಿದ್ದನ್ನು ಹುಡುಕುವ ನೆಪದಲ್ಲಿ ಸುಂದರವಾದ ಕ್ಷಣಗಳನ್ನು ಕಳೆದುಕೊಂಡಿರುತ್ತೇವೆ. ಈಗ ಪ್ರಕೃತಿಯು ತನ್ನಲ್ಲಿ ಹೊಸತನವನ್ನು ಸೃಷ್ಟಿಸಿ ನಮ್ಮ ಜೀವನದಲ್ಲಿ ಹೊಸತನದ ಬದುಕನ್ನು ರೂಪಿಸಲು ಪ್ರೇರೇಪಿಸುತ್ತಿರುವಂತೆ ಕಾಣುತ್ತಿದೆ. ನಿನ್ನೆಗಳ ಮರೆತವರು ನಾಳೆ ಕಟ್ಟಲಾರರು ಅಲ್ಲವೇ….?
ಈ ಸಂದರ್ಭದಲ್ಲಿ ಚಿ.ಉದಯಶಂಕರ್ ಸಾಹಿತ್ಯದ, ರಾಜನ್-ನಾಗೇಂದ್ರ ಸಂಗೀತದ, ಡಾ.ರಾಜಕುಮಾರ್ ಗಾಯನದ ಗಿರಿಕನ್ಯೆ ಚಲನಚಿತ್ರದ ಹಾಡು ನೆನಪಿಗೆ ಬರುತ್ತದೆ. ಅದೊಂದು ಅರ್ಥ ಗರ್ಭಿತವಾದ ಹಾಡು ಅದರ ಪಲ್ಲವಿ ಹೀಗಿದೆ.
“ಏನೆಂದು ನಾ ಹೇಳಲಿ…. ಮಾನವನಾಸೆಗೆ ಕೊನೆಯೆಲ್ಲಿ…. ಕಾಣೋದೆಲ್ಲ ಬೇಕು ಎಂಬ ಹಠದಲ್ಲಿ. ಒಳ್ಳೇದೆಲ್ಲ ಬೇಕು ಎಂಬ ಛಲದಲ್ಲಿ. ಯಾರನ್ನೂ ಪ್ರೀತಿಸನು ಮನದಲ್ಲಿ. ಏನೊಂದೂ ಬಾಳಿಸನು ಜಗದಲ್ಲಿ. ಏನೆಂದು ನಾ ಹೇಳಲೀ… ಮಾನವನಾಸೆಗೆ ಕೊನೆಯೆಲ್ಲಿ”….?

ಲೇಖಕರು: ✍. ಅರುಣ್ ಕೂರ್ಗ್

“ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾಃ” ಎಂಬ ಮಾತು ಕೇವಲ ಮಾತಾಗಿಯೇ ಇರಬಾರದು

“ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾಃ”
ಎಂಬ ಮಾತು ಕೇವಲ ಮಾತಾಗಿಯೇ ಇರಬಾರದು

{ಮಾರ್ಚ್‌ 8 ಅಂತರಾಷ್ಟ್ರೀಯ ಮಹಿಳೆಯರ ದಿನದ ವಿಶೆಷ ಲೇಖನ}

ಪ್ರತಿ ವರ್ಷದ ಹಾಗೆ ಈ ವರ್ಷವೂ ಮತ್ತೊಂದು ಮಹಿಳಾ ದಿನಾಚರಣೆಯ ಹೊಸ್ತಿಲಲ್ಲಿ ನಿಂತಿದ್ದೇವೆ. ಮಹಿಳೆಯರ ಕಾರ್ಯಕ್ಷೇತ್ರದ ವಿಸ್ತಾರ ಅಗಾಧವಾಗಿ ಬೆಳೆದು ನಿಂತಿದೆ. ಸಮಾಜದ ಮುಖ್ಯ ವಾಹಿನಿಯಲ್ಲಿಯೂ ಮಹಿಳೆಯ ನಾಗಾಲೋಟ ಭರದಿಂದಲೇ ಸಾಗುತ್ತಿದೆ. ಪುರುಷನ ಜೀವನದ ಪ್ರತಿ ಹಂತದಲ್ಲಿಯೂ ಹೆಣ್ಣಿನ ಪಾತ್ರ ಮಹತ್ವವಾದದ್ದು. ಜನ್ಮಕೊಟ್ಟು ಸಲಹುವ ತಾಯಿಯಾಗಿ, ಅಕ್ಕರೆಯ ಸೋದರಿಯಾಗಿ, ಸಾಂತ್ವನ ನೀಡುವ ಸ್ನೇಹಿತೆಯಾಗಿ, ಭಾವನೆಗಳ ಬೆಸುಗೆಯ ಮಡದಿಯಾಗಿ, ಪ್ರೀತಿ ಚಿಲುಮೆಯ ಮಗಳಾಗಿ. ಇಂದು ಹೆಣ್ಣು ಎಲ್ಲ ಕ್ಷೇತ್ರದಲ್ಲೂ ಮುನ್ನಡೆಯುತ್ತ ಜಗತ್ತಿನ ದೃಷ್ಟಿಯನ್ನು ತನ್ನೆಡೆಗೆ ಸೆಳೆದಿದ್ದಾಳೆ.

ಸುಸ್ಥಿರ ಅಭಿವೃದ್ಧಿ, ಶಾಂತಿ, ಸುರಕ್ಷತೆಯನ್ನು ಸಾಧಿಸಲು ಮಹಿಳೆಯರ ಭಾಗಿತ್ವವನ್ನು ಪುರುಷ ಸಮಾನವಾಗಿ ಉತ್ತೇಜಿಸಲು ಹಲವು ವರ್ಷಗಳಿಂದ ವಿಶ್ವಸಂಸ್ಥೆ ಹಾಗೂ ಅದರ ಅಂಗ ಸಂಸ್ಥೆಗಳು ಮಹಿಳಾ ದಿನಾಚರಣೆಯನ್ನು ಉತ್ತೇಜಿಸುತ್ತಿವೆ. ಅಷ್ಟೇ ಅಲ್ಲದೇ ಲಿಂಗ ಸಮಾನತೆಯ ಪ್ರಾಮುಖ್ಯತೆಯ ಕುರಿತು ಅರಿವು ಮೂಡಿಸುವುದಕ್ಕೂ ಸಹ ಮಹಿಳಾ ದಿನಾಚರಣೆ ಸಹಕಾರಿಯಾಗಿದೆ.

“ಅಂತರಾಷ್ಟ್ರೀಯ ಮಹಿಳೆಯರ ದಿನ” ಮೊದಲ ಬಾರಿಗೆ ಹೊರ ಹೊಮ್ಮಿದ್ದು ಕೂಲಿ ಚಳುವಳಿ(ಲೇಬರ್ ಮೊವ್ಮೆಂಟ್ಸ್) ಚಟುವಟಿಕೆಯು ಉತ್ತರ ಅಮೆರಿಕ ಮತ್ತು ಯೂರೋಪ್ ಪ್ರದೇಶಗಳಲ್ಲಿ ನಡೆದಾಗ. ೧೯೦೯ರಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಮೊದಲ “ಅಂತರಾಷ್ಟ್ರೀಯ ಮಹಿಳೆಯರ ದಿನ” ಫೆಬ್ರವರಿ ೨೮ ರಂದು ಕಂಡು ಬಂತು. ಅಮೇರಿಕಾದ ಸಾಮಾಜವಾದಿ ಪಕ್ಷ ಈ ದಿನವನ್ನು ಕೆಲಸದ ಪರಿಸ್ಥಿತಿಯನ್ನ ವಿರೋಧಿಸಿ ನ್ಯೂಯಾರ್ಕ್ ನಗರದಲ್ಲಿ ನಡೆದ “ಸರ್ಕಾರಿ ಕಾರ್ಮಿಕರ ಚಳುವಳಿ” ಯಲ್ಲಿ ಪ್ರತಿಭಟಿಸಿದ ಮಹಿಳೆಯರಿಗಾಗಿ ಅರ್ಪಿಸಲಾಯಿತು.

1910ರ ಆಗಸ್ಟ್‌ನಲ್ಲಿ ಡೆನ್ಮಾರ್ಕ್‌ನ ಕೋಪೆನ್‌ಹೇಗನ್‌ನಲ್ಲಿ ಎರಡನೆಯ ಅಂತರರಾಷ್ಟ್ರೀಯ ಸೋಷಿಯಲಿಸ್ಟ್ ಮಹಿಳಾ ಸಮ್ಮೇಳನ ನಡೆಯಿತು. ಅಲ್ಲಿನ ಕಾರ್ಮಿಕರ ಪ್ರತಿನಿಧಿ ಸಭೆಯ ಸಭಾಂಗಣದಲ್ಲಿ 17 ದೇಶಗಳ ಪ್ರತಿನಿಧಿಗಳು ಸೇರಿದ್ದರು. ಅಮೆರಿಕೆಯ ಹಲವಾರು ಕಾರ್ಮಿಕ ಸಂಘಟನೆಗಳ ನಾಯಕಿಯರು ಬಂದಿದ್ದರು. ಈ ಸಮ್ಮೇಳನಕ್ಕೆ ಅಂತರರಾಷ್ಟ್ರೀಯ ಮಹಿಳಾ ಸೆಕ್ರೆಟೇರಿಯೆಟ್‌ನ ಮುಖ್ಯಸ್ಥೆಯಾಗಿದ್ದ ಕ್ಲಾರಾ ಜೆಟ್‌ಕಿನ್ ಅಧ್ಯಕ್ಷೆಯಾಗಿದ್ದಳು. ಈ ಸಮ್ಮೇಳನದಲ್ಲಿ ಚರ್ಚಿತವಾದ ಎರಡು ವಿಷಯಗಳೆಂದರೆ ಸಾರ್ವತ್ರಿಕ ಮತದಾನದ ಹಕ್ಕು ಮತ್ತು ಮಹಿಳೆಯರ ಹೆರಿಗೆ ಭತ್ಯೆ ಮತ್ತು ಇತರ ಸೌಕರ್ಯಗಳು.

ಕ್ಲಾರಾ ಜೆಟ್‌ಕಿನ್ ಈ ಸಮ್ಮೇಳನದಲ್ಲಿ ಮಾರ್ಚ್ 8ನ್ನು ಮಹಿಳಾ ದಿನವನ್ನಾಗಿ ಆಚರಿಸಬೇಕೆಂದು ೧೯೧೧ರಲ್ಲಿ ನಿರ್ಣಯ ಮಂಡಿಸಿದರು. ಅಲ್ಲಿ ನೆರೆದಿದ್ದ ವಿವಿಧ ರಾಷ್ಟ್ರಗಳ ಸದಸ್ಯ ಪ್ರತಿನಿಧಿಗಳು ಸರ್ವಾನುಮತದಿಂದ ಸಮ್ಮತಿಸಿದರು. ಈ ಸಮ್ಮೇಳನದಲ್ಲಿ ಫಿನ್ಲೆಂಡ್‌ನಲ್ಲಿ ಆಗಷ್ಟೇ ಚುನಾಯಿತರಾಗಿದ್ದ ಮೂವರು ಮಹಿಳೆಯರಿದ್ದು, ಅವರು ಜೆಟ್‌ಕಿನ್‌ ಸಲಹೆಯನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದರು. ಹೀಗೆ ಅಂತರರಾಷ್ಟ್ರೀಯ ಮಹಿಳಾ ದಿನವೆನ್ನುವುದು ಪ್ರತಿಭಟನೆ ಮತ್ತು ರಾಜಕೀಯ ಕ್ರಿಯಾಶೀಲತೆಯ ದಿನವಾಗಿ ಅಸ್ತಿತ್ವಕ್ಕೆ ಬಂದಿತು.

ವಿಶ್ವದಾದ್ಯಂತ ಅನೇಕ ದೇಶಗಳಲ್ಲಿ “ಅಂತರಾಷ್ಟ್ರೀಯ ಮಹಿಳೆಯರ ದಿನ” ವನ್ನು ಆಚರಿಸುತ್ತಾರೆ. ಮಹಿಳೆಯರು ಒಂದೇ ಕ್ಷೇತ್ರಕ್ಕೆ ಮಿಸಲಿರದೇ, ಅದು ರಾಷ್ತ್ಟ್ರೀಯ, ಜನಾಂಗೀಯ, ಭಾಷಾವಾರು, ಸಾಂಸ್ಕ್ರತಿಕ, ಆರ್ಥಿಕ ಅಥವಾ ರಾಜಕೀಯ ಕ್ಷೇತ್ರವಾಗಲಿ, ಎಲ್ಲದರಲ್ಲು ತಮ್ಮದೆ ಆದ ಛಾಪನ್ನ ಮೂಡಿಸಿದ್ದಾರೆ. ಮಹಿಳೆಯರ ಈ ಪ್ರಗತಿಯನ್ನ ಗುರುತಿಸಿ ಈ ದಿನವನ್ನು ಅವರಿಗೆ ಅರ್ಪಿಸಲಾಗಿದೆ. ೧೯೭೫ರ “ಅಂತರಾಷ್ಟ್ರೀಯ ಮಹಿಳೆಯರ ದಿನ”ದ ಸಮಯದಲ್ಲಿ, ಮಾರ್ಚ್ ೮ ರಂದು ವಿಶ್ವ ಸಂಸ್ಥೆಯ ಸಂಯುಕ್ತ ರಾಷ್ಟ್ರಗಳು ಮಹಿಳಾ ದಿನವನ್ನು ಆಚರಿಸಲು ಆರಂಭಿಸಿದವು.

ವಿದ್ಯೆ, ಕ್ರೀಡೆ, ರಾಜಕೀಯ, ಕಲೆ ಹೀಗೆ ಬಹುತೇಕ ಕ್ಷೇತ್ರಗಳಲ್ಲಿ ಪುರುಷರಿಗೆ ಸರಿಸಮನಾಗಿ ನಿಂತು ಸ್ವತಂತ್ರರಾಗಿ, ಸ್ವಾವಲಂಬಿಗಳಾಗಿ ಬದುಕುತ್ತಿರುವ ಮಹಿಳೆಯರು, ಅಂಥವರು ಬೆರಳೆಣಿಕೆಯಷ್ಟು ಮಾತ್ರ. ಆದರೆ ನಿತ್ಯ ಹೆಣ್ಣಿನ ಮೇಲೆ ನಡೆಯುವ ಅತ್ಯಾಚಾರ, ದೌರ್ಜನ್ಯ, ಭ್ರೂಣ ಹತ್ಯೆ, ವೇಶ್ಯಾವಾಟಿಕೆ, ಆಸಿಡ್ ದಾಳಿ, ವರದಕ್ಷಿಣೆ ಹಿಂಸೆ, ಬಲಿ ಇವೂ ಕಣ್ಮುಂದೆ ಹಾಯ್ದು ‘ಮಹಿಳಾ ದಿನಾಚರಣೆ’ಗೆ ಅರ್ಥವಿದೆಯೇ ಎಂಬುದು ಕಟುಸತ್ಯವಾಗಿದೆ.

ಹೆಣ್ಣು ಪ್ರಕೃತಿಯ ಅದ್ಭುತ ಕೊಡುಗೆ. ಹೆಣ್ಣಿಲ್ಲದ ಮನೆ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಸಮಾಜದಲ್ಲಿ ಪ್ರತಿಯೊಬ್ಬರ ಸಹಕಾರ, ಪ್ರೀತಿ ಇದ್ದರೆ ಹೆಣ್ಣು ಎಂತಹ ಕಠಿಣ ಪರಿಸ್ಥಿತಿಯಲ್ಲೂ ಯಶಸ್ವಿಯಾಗುತ್ತಾಳೆ. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ. ಸ್ತ್ರೀತ್ವವನ್ನು, ಸ್ತ್ರೀಯರ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಸಾಧನೆಗಳನ್ನು, ಸಮಾಜಕ್ಕೆ ಅವರ ಕೊಡುಗೆಗಳನ್ನು ಸಂಭ್ರಮಿಸುವ ದಿನ.

ಮಹಿಳಾ ದಿನಾಚರಣೆ ಹಬ್ಬವೂ ಅಲ್ಲ, ಆನಂದದಿಂದ ಆಚರಣೆಗೊಂಡ ದಿನವೂ ಅಲ್ಲ. ನ್ಯೂಯಾರ್ಕ್‍ನಲ್ಲಿ ಕ್ಲಾರಾ ಜೆಟ್‍ಕಿನ್ ಎಂಬ ಮಹಿಳಾ ಕಾರ್ಮಿಕೆ ಕೆಲಸಕ್ಕಾಗಿ, ಸಮಾನ ವೇತನಕ್ಕಾಗಿ, ಹೆರಿಗೆ ಸೌಲಭ್ಯಕ್ಕಾಗಿ ತಿಂಗಳುಗಟ್ಟಲೆ ಹೋರಾಟ ನಡೆಸಿ ಗೆಲುವು ಸಾಧಿಸಿದ ದಿನ. ಹುಟ್ಟಿನಿಂದ ಸಾಯುವವರೆಗೂ ದಿನ ನಿತ್ಯ ಒಂದಿಲ್ಲೊಂದು ಸಂಘರ್ಷದಲ್ಲಿ ಬಿದ್ದು ಸಾಧಿಸಲು ಪ್ರಯತ್ನ ಪಡುತ್ತಿರುವ, ಸಂಘರ್ಷದಿಂದ ಸಾಧಿಸಿದ ದಿನದ ಒಂದು ಸ್ಮರಣೆಯ ದಿನ ಮಾತ್ರ.

ವಿಶ್ವಾಸ, ಪ್ರೀತಿ, ಮಮತೆ, ನಂಬಿಕೆ, ನೈತಿಕ ವೌಲ್ಯಗಳು ನಮ್ಮ ಸಮಾಜದ ಕಣ್ಣುಗಳಾಬೇಕು. ಮಹಿಳೆಯರನ್ನು ನೋಡುವ ದೃಷ್ಟಿಕೋನ ಬದಲಾಗಬೇಕು. ಮಹಿಳೆಯರ ಸಾಧನೆಗೆ ಪ್ರೋತ್ಸಾಹ ನೀಡಬೇಕು. ಇದಕ್ಕೆ ಪುರುಷರ ನೈತಿಕ ಬೆಂಬಲ ದೊರಕಬೇಕು. ಭಾರತೀಯ ಸಂಸ್ಕೃತಿ ಮಹಿಳೆಗೆ ಕೊಟ್ಟ ಪೂಜ್ಯಸ್ಥಾನವನ್ನು ಜಗತ್ತಿನ ಇನ್ಯಾವ ಸಂಸ್ಕೃತಿಯಲ್ಲೂ ನೀಡಿಲ್ಲ. ‘ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾಃ’ (ಎಲ್ಲಿ ಮಹಿಳೆಯರನ್ನು ಆದರದಿಂದ ಕಾಣಲಾಗುತ್ತದೆಯೋ ಅಲ್ಲಿ ದೇವಾನುದೇವತೆಗಳಿರುತ್ತಾರೆ, ಎಲ್ಲಿ ಮಹಿಳೆಯರನ್ನು ಅಪಮಾನದಿಂದ ಕಾಣಲಾಗುತ್ತದೆಯೋ ಅಲ್ಲಿ ಧರ್ಮಕರ್ಮಗಳು ನಿಷ್ಫಲವಾಗುತ್ತವೆ) ಎಂಬ ಮಾತು ಕೇವಲ ಮಾತಾಗಿಯೇ ಇರಬಾರದು, ಅದನ್ನು ಆಚರಣೆಗೆ ತರಬೇಕು. ಆಗ ಮಾತ್ರ ಈ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಒಂದು ಒಳ್ಳೆಯ ಸ್ಥಾನ ಸಿಗಲು ಸಾಧ್ಯ.

ಪುರುಷ ಹಾಗೂ ಪ್ರಕೃತಿಯಿಂದಲೇ ಜಗತ್ತು. ಅದನ್ನು ಅರ್ಥಮಾಡಿಕೊಂಡು ಬದುಕಿದರೆ ಜೀವನ ಸುಂದರವಾಗಿರುತ್ತದೆ. ಕೇವಲ ಮಹಿಳಾ ದಿನದಲ್ಲಷ್ಟೇ ಸ್ತ್ರೀಯರಿಗೆ ಗೌರವ ನೀಡಿ ಅಭಿನಂದಿಸುವುದಲ್ಲ. ಪ್ರತಿದಿನ, ಪ್ರತಿಕ್ಷಣ ಮಹಿಳೆಯರಿಗೆ ಗೌರವ ನೀಡಬೇಕಿದೆ. ಆಗಲೇ ಸಶಕ್ತ ಸಮಾಜದ ನಿರ್ಮಾಣ ಸಾಧ್ಯ.

✍. ಕಾನತ್ತಿಲ್ ರಾಣಿ ಅರುಣ್

“ಯುಗಪುರುಷನ ರಾಷ್ಟ್ರ ಧರ್ಮ” – “ರಾಷ್ಟ್ರೀಯ ಯುವ ದಿನ” ಸ್ವಾಮಿ ವಿವೇಕಾನಂದರ 157ನೇ ವರ್ಷಾಚರಣೆಯ ವಿಶೆಷ ಲೇಖನ:

“ರಾಷ್ಟ್ರೀಯ ಯುವ ದಿನ” ಸ್ವಾಮಿ ವಿವೇಕಾನಂದರ 157ನೇ ವರ್ಷಾಚರಣೆಯ ವಿಶೆಷ ಲೇಖನ:

“ಯುಗಪುರುಷನ ರಾಷ್ಟ್ರ ಧರ್ಮ”

ಸ್ವಾಮಿ ವಿವೇಕಾನಂದ ಬದುಕಿದ್ದು, ಕೇವಲ 39 ವರ್ಷಗಳಾದರೂ ಅವರ ಪ್ರಭಾವ ಮಾತ್ರ ಭರತ ಭೂಮಿ ಇರುವವರೆಗೂ…. ನರೇಂದ್ರರೇನೂ ಹುಟ್ಟು ಸನ್ಯಾಸಿಯಲ್ಲ. ಅವರು ಈ ವಿಶ್ವದ ಗಮನ ಸೆಳೆದಿದ್ದು, ಕೇವಲ 7 ವರ್ಷಗಳ ಅವಧಿಯಲ್ಲಿ. ಅವರು ಯುಗಪುರುಷರೆನಿಸಿದ್ದು 1893-1900ರ ನಡುವಿನ ಕೇವಲ ಏಳು ವರ್ಷಗಳಲ್ಲಿ. ದೇಶವನ್ನು ಮುನ್ನಡೆಸಲು ಸಶಕ್ತವಾದ ಯುವಪಡೆಯನ್ನು ನಿರ್ಮಿಸುವುದೇ ನನ್ನ ಗುರಿ ಎನ್ನುತ್ತಿದ್ದರು ವೀರ ಸನ್ಯಾಸಿ ಸ್ವಾಮಿ ವಿವೇಕಾನಂದ; ಮಾನಸಿಕ, ದೈಹಿಕ, ಅಧ್ಯಾತ್ಮಿಕ, ನೈತಿಕ, ಸಾಮಾಜಿಕವಾಗಿ ಯಾವ ಕ್ಷಣದಲ್ಲೂ ಶಕ್ತಿ ಕಳೆದುಕೊಳ್ಳಬಾರದು ಎಂದು ಯುವಕರಿಗೆ ಸ್ವಾಮಿ ವಿವೇಕಾನಂದ ಕರೆ ನೀಡಿದ್ದರು.
12-1-1863 ಇತಿಹಾಸ ಎಂದೂ ಮರೆಯಲಾರದ ದಿನ. ಅಂದು ಭಾರತೀಯ ಸನಾತನ ಸಂಸ್ಕೃತಿಯ ಪುನರುತ್ಥಾನದ ಹರಿಕಾರ, ಅಪ್ರತಿಮ ವಾಗ್ಮಿ, ಅನುಪಮ ಮಾನವತಾವಾದಿ ಸ್ವಾಮಿ ವಿವೇಕಾನಂದರು ಹುಟ್ಟಿದ ದಿನ. ನಾವೀಗ ವಿವೇಕಾನಂದರ 157ನೇ ವರ್ಷಾಚರಣೆಯಲ್ಲಿದ್ದೇವೆ. ಯುವ ಜನರಿಗೆ ಪ್ರೇರಕ ಶಕ್ತಿಯಾದ, ನವ ಚೈತನ್ಯದ ಚಿಲುಮೆಯಾದ ವಿವೇಕಾನಂದರನ್ನು ಲೇಖನವೊಂದರಲ್ಲಿ ಹಿಡಿದಿಡುವುದು ಅಸಾಧ್ಯದ ಮಾತು. ಅವರ ವ್ಯಕ್ತಿತ್ವದ ತೃಣಮಾತ್ರ ಪರಿಚಯ ಮಾಡಿಸುವ ಪ್ರಯತ್ನ ಇದು…..

ತಾರುಣ್ಯ ಎಂದರೆ ಶಕ್ತಿಯ ಅಪರಿಮಿತ ಉತ್ಸಾಹ. ಈ ಶಕ್ತಿಯನ್ನು ಧರ್ಮದ ಸ್ಥಾಪನೆಗಾಗಿ ಬಳಸಿಕೊಳ್ಳುವುದೇ ಜೀವನದ ನಿಜವಾದ ಅರ್ಥ ಎಂದು ಸನ್ಯಾಸಧರ್ಮದ ವ್ಯಾಪ್ತಿಯನ್ನು ವಿಶೇಷವಾಗಿ ವ್ಯಾಖ್ಯಾನಿಸಿದವರು ಸ್ವಾಮಿ ವಿವೇಕಾನಂದರು. ಧರ್ಮ ಎಂದರೆ ಅದೇನೂ ಎಲ್ಲೋ ಏಕಾಂತದಲ್ಲಿ ಕುಳಿತು ಮಾಡುವ ತಪಸ್ಸು ಅಲ್ಲ; ಜನರ ನಡುವೆ ಇದ್ದುಕೊಂಡು, ಜನರಿಗಾಗಿ ನಮ್ಮ ಸಮಸ್ತ ಶಕ್ತಿಯನ್ನೂ ವಿನಿಯೋಗಿಸುವುದೇ ಧರ್ಮ ಎಂದು ಧಾರ್ಮಿಕತೆಯ ವ್ಯಾಪ್ತಿಯನ್ನೂ ಹಿಗ್ಗಿಸಿದರು. ಈ ಸಮಾಜಯಜ್ಞಕ್ಕೆ ಅವರು ವಿಶೇಷ ಆಹ್ವಾನ ನೀಡಿದ್ದು ಯುವಕರಿಗೆ. ‘ಈ ಪ್ರಪಂಚ ಇರುವುದು ಹೇಡಿಗಳಿಗೆ ಅಲ್ಲ; ಜೀವನದಲ್ಲಿ ಎದುರಾಗುವ ಸೋಲು–ಗೆಲುವುಗಳಿಗೆ ಬಗ್ಗಬೇಡಿ. ಸ್ವಾರ್ಥರಹಿತ ಕಾರ್ಯದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ಕೆಲಸದಲ್ಲಿ ತೊಡಗಿ; ಫಲಿತಾಂಶದ ಬಗ್ಗೆ ನಿರೀಕ್ಷೆಯನ್ನು ಇಟ್ಟುಕೊಳ್ಳಬೇಡಿ. ಒಳ್ಳೆಯ ಕೆಲಸ ಕೂಡ ಬಂಧನವೇ ಆಗಬಹುದು. ಹೀಗಾಗಿ ಕೀರ್ತಿಯನ್ನು ಬಯಸಿ ಯಾವುದೇ ಕೆಲಸದಲ್ಲಿ ತೊಡಗಬೇಡಿ’ ಎಂದು ಅವರು ಯುವಕರಿಗೆ ಕರೆ ಕೊಟ್ಟರು.
ಸ್ವಾಮಿ ವಿವೇಕಾನಂದರ ಜೀವನ ಅದೆಷ್ಟೋ ಮಂದಿಯ ಜೀವನವನ್ನೇ ಬದಲಿಸಿದೆ. ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ವಿವೇಕಾನಂದರ ಬರಹಗಳು ಸಾಕಷ್ಟು ಪ್ರಭಾವ ಬೀರಿರುವುದು ಮಹಾತ್ಮಾ ಗಾಂಧಿ, ಸುಭಾಷ್ ಚಂದ್ರ ಬೋಸ್ ಅವರ ಮಾತುಗಳಲ್ಲಿ ಕಂಡು ಬರುತ್ತದೆ. ಸ್ವಾಮಿ ವಿವೇಕಾನಂದ ಎಂಬ ಹೆಸರೇ ಒಂದು ಪ್ರೇರಣೆ. ಸ್ವಾಮಿ ವಿವೇಕಾನಂದ ತಮ್ಮ ಭಾಷಣದ ಮೂಲಕ ಹೇಗೆ ಜಗತ್ತಿನ ಗಮನ ಸೆಳೆದರೋ ಅದೇ ರೀತಿ ಬರವಣಿಗೆ ಮೂಲಕವೂ ಕ್ರಾಂತಿ ಮಾಡಿದವರು.

1985ರ ನಂತರ ಭಾರತದಲ್ಲಿ ಸ್ವಾಮಿ ವಿವೇಕಾನಂದರ ಹುಟ್ಟುಹಬ್ಬವನ್ನು “ರಾಷ್ಟ್ರೀಯ ಯುವ ದಿನ” ಎಂದು ಘೋಷಿಸಲಾಗಿದ್ದು, ಈಗಲೂ ಆಚರಣೆಯಲ್ಲಿದೆ ಎಂಬುದಷ್ಟೇ ಸಂತೋಷ. ಇಂದು ದೇಶದಾದ್ಯಂತ ಆಚರಣೆ ಜಾರಿಯಲ್ಲಿದ್ದು, ಶಾಲಾ, ಕಾಲೇಜು ಅಲ್ಲಲ್ಲಿ ಮೆರವಣಿಗೆ, ಪ್ರಬಂಧ ಸ್ಪರ್ಧೆ, ಭಾಷಣ, ಚರ್ಚಾಕೂಟದಲ್ಲಿ ಪಾಲ್ಗೊಂಡು ವಿವೇಕಾನಂದರರ ಸಂದೇಶ ಸಾರುವಲ್ಲಿ ತೊಡಗಿದ್ದಾರೆ.
ಇಡೀ ಮನುಕುಲಕ್ಕೆ ಯುವ ಜನತೆಗೆ ಆದರ್ಶ ಪ್ರಾಯರಾದ ಸ್ವಾಮಿ ವಿವೇಕಾನಂದರ ಸಾಧನೆಯಾದರೂ ಏನು? ಅವರನ್ನೇಕೆ ವಿಶ್ವ ಸ್ಮರಿಸುತ್ತದೆ. ಇದನ್ನು ಭಾರತೀಯರಾದ ಪ್ರತಿಯೊಬ್ಬರೂ ತಿಳಿಯಲೇ ಬೇಕು. ಅದು ನಮ್ಮ ಕರ್ತವ್ಯ ಕೂಡ. ರಾಷ್ಟ್ರಪಿತ ಮಹಾತ್ಮಾ ಗಾಂಧಿ ಒಂದು ಮಾತು ಹೇಳಿದ್ದಾರೆ. ‘ಶ್ರೀಕೃಷ್ಣನನ್ನು ಅರಿಯಬೇಕೆಂದರೆ ಭಗವದ್ಗೀತೆಯನ್ನು ಓದಿ, ಭಾರತವನ್ನು ತಿಳಿಯಬೇಕೆಂದಿದ್ದರೆ ಸ್ವಾಮೀ ವಿವೇಕಾನಂದರನ್ನು ಓದಿ’ ಎಂದು. ಅಂದರೆ ಸ್ವಾಮೀಜಿ ಅವರ ಬದುಕೇ ಇಡೀ ಭಾರತದ ಚಿತ್ರಣ. ಅವರ ಜೀವನವೇ ಒಂದು ಯಶೋಗಾಥೆ.
ಜೀವನದಲ್ಲಿ ಸೋತವರು ಹತಾಶೆಯಿಂದ ಬಯಸುವ ಖಾಲಿತನವೇ ವೈರಾಗ್ಯ ಎಂಬ ಭಾವನೆಯಿದೆಯಷ್ಟೆ. ಆದರೆ ಈ ಅಭಾವ ವೈರಾಗ್ಯವನ್ನು ಟೀಕಿಸಿದ ಸ್ವಾಮೀಜಿ, ಸನ್ಯಾಸ ಎಂಬ ಪರಿಕಲ್ಪನೆಗೇ ಯೌವನವನ್ನು ತುಂಬಿದರು. ಸಮಾಜಸೇವೆ, ವ್ಯಕ್ತಿತ್ವನಿರ್ಮಾಣ, ದೈಹಿಕ–ಮಾನಸಿಕ ಸದೃಢತೆ, ರಾಷ್ಟ್ರಭಕ್ತಿ, ವೈಜ್ಞಾನಿಕ ಮನೋಧರ್ಮ ಇಂಥ ಹಲವು ಗುಣಗಳನ್ನು ಸನ್ಯಾಸದ ಪರಿಧಿಯೊಳಗೆ ತಂದವರು ಅವರೇ. ಸಾವಿರಾರು ವರ್ಷಗಳ ಭಾರತೀಯ ಭವ್ಯ ಪರಂಪರೆಯಲ್ಲಿ ಹಲವು ಕಳೆಗಳೂ ಕೊಳೆಗಳೂ ಸೇರಿಕೊಂಡಿದ್ದವು. ಇವನ್ನು ಒಂದೊಂದಾಗಿ ಕಳೆಯಲು ಜೀವನದುದ್ದಕ್ಕೂ ಶ್ರಮಿಸಿದರು. ಈ ನೆಲದ ಶುದ್ಧ ಅಧ್ಯಾತ್ಮಪರಂಪರೆಯ ಭವ್ಯರೂಪವಾದವರು ಸ್ವಾಮೀ ವಿವೇಕಾನಂದ.

ಸ್ವಾಮಿ ವಿವೇಕಾನಂದರ ಹೆಸರು ಕೇಳಿದರೆ, ಅಕ್ಷರಶಃ ರೋಮಾಂಚನವಾಗುತ್ತದೆ. ವಿವೇಕವಾಣಿಯನ್ನು ಕೇಳುತ್ತಿದ್ದರೆ, ವಿವೇಕಾನಂದರ ಸಂದೇಶಗಳನ್ನು ಓದುತ್ತಿದ್ದರೆ, ಮೈ ಪುಳಕಿತವಾಗುತ್ತದೆ. ಮನಸ್ಸು ನಿರ್ಮಲವಾಗುತ್ತದೆ. ತನುವಿನಲ್ಲಿ ಹೊಸ ಚೈತನ್ಯ ಒಡಮೂಡುತ್ತದೆ. ಇಂಥ ಮಹಾನ್ ವ್ಯಕ್ತಿಯ ಜೀವನ ಚರಿತ್ರೆ ಓದಿದರೆ ಯುವಕರಲ್ಲಿ ದೇಶಭಕ್ತಿ, ರಾಷ್ಟ್ರೀಯ ಪ್ರಜ್ಞೆ ಮೂಡುವುದರ ಜೊತೆಗೆ ಸ್ವಾವಲಂಬನೆಯ, ಆತ್ಮಾಭಿಮಾನದ ಸಾಕ್ಷಾತ್ಕಾರವಾಗುತ್ತದೆ. ನಿಮ್ಮ ಜೀವನದ ಶಿಲ್ಪಿಗಳು ನೀವಾಗಬೇಕೆಂದರೆ, ಅಖಂಡ ಭಾರತದ ಪರಿಕಲ್ಪನೆಗಾಗಿ ವಿವೇಕಾನಂದರನ್ನೊಮ್ಮೆ ಓದಿ. ಅದುವೇ ನಿಮಗೊಂದು ದಿನವನ್ನು ಕಟ್ಟಿಕೊಟ್ಟ ಮಹಾಪುರುಷನಿಗೆ ನೀವು ನೀಡುವ ಅಪೂರ್ವ ಸಮರ್ಪಣೆ.
ದೇಶಕ್ಕಾಗಿ ತಮ್ಮ ಜೀವನವನ್ನೇ ಅರ್ಪಿಸುವಂತಹ ಯುವಜನತೆಯನ್ನು ಅಪೇಕ್ಷಿಸಿದ್ದರು ಸ್ವಾಮೀಜಿ. ಒಳ್ಳೆಯ ಉದ್ದೇಶ, ಸತ್ಯಸಂಧತೆ ಮತ್ತು ಅನಂತ ಪ್ರೇಮ ಇವು ಜಗತ್ತನ್ನೇ ಗೆಲ್ಲಬಲ್ಲವು. ಈ ಸದ್ಗುಣಗಳನ್ನು ಹೊಂದಿದ ಒಬ್ಬನೇ ವ್ಯಕ್ತಿ ಕೋಟ್ಯಂತರ ದುಷ್ಟರ, ದುರುಳರ ಕಪಟ ಜಾಲವನ್ನು ನಾಶಮಾಡಬಹುದು. ಬನ್ನಿ ಯುವಕರೇ, ಹೊಸ ನಾಡನ್ನು ಕಟ್ಟೋಣ, ತ್ಯಾಗ-ಸೇವೆಗಳೇ ನಮ್ಮ ಉಸಿರಾಗಲಿ, ಸದೃಢರಾಗಿ, ಖಿನ್ನರಾಗದಿರಿ, ನಕಾರಾತ್ಮಕ ಚಿಂತನೆಗಳನ್ನು ದೂರ ಬಿಸಾಡಿ, ಇದೇ ನಮ್ಮ ನವಯುಗದ ಚಿಹ್ನೆಯಾಗಿರಲಿ, ಭವ್ಯ ಭಾರತವನ್ನು ಕಟ್ಟೋಣ.

✍. ವಿವೇಕ್‌ ನರೇನ್