• Search Coorg Media

‘ಜಗವೆಲ್ಲ ಮಲಗಿರಲು ಅವನೊಬ್ಬ ಎದ್ದ’: ಬುದ್ಧ ಪೂರ್ಣಿಮೆಯ ವಿಶೇಷ ಲೇಖನ

‘ಜಗವೆಲ್ಲ ಮಲಗಿರಲು ಅವನೊಬ್ಬ ಎದ್ದ’:

ಬುದ್ಧ ಪೂರ್ಣಿಮೆಯ ವಿಶೇಷ ಲೇಖನ

ಬುದ್ಧ ಪೂರ್ಣಿಮೆಯನ್ನು ಕೇವಲ ಬೌದ್ಧರಷ್ಟೆ ಅಲ್ಲದೆ, ದೇಶಾದ್ಯಂತ ಇರುವ ಎಲ್ಲಾ ಸಮುದಾಯದ ಜನರು ಸಂಭ್ರಮದಂದ ಆಚರಿಸುವಂತ ಹಬ್ಬ. ಬುದ್ಧನಿಗೆ ಸಂಬಂಧಿಸಿದ ಮೂರು ಮಹತ್ವಪೂರ್ಣ ತಿಥಿಗಳು ಏಕಕಾಲಕ್ಕೆ ಬರುವುದು ಸಹ ಬುದ್ಧ ಪೂರ್ಣಿಮೆಯ ವಿಶೇಷವಾಗಿದೆ. ಭಗವಾನ್ ಬುದ್ಧನ ಜನ್ಮ, ಜ್ಞಾನ ಪ್ರಾಪ್ತಿ ಮತ್ತು ಮಹಾಪರಿನಿರ್ವಾಣಗಳು ಒಂದೇ ದಿನ ಬರುತ್ತವೆ. ಅಂದರೆ, ಇವೆಲ್ಲವೂ ವೈಶಾಖ ಪೂರ್ಣಿಮಾ ದಿನವೇ ಆಗಿದ್ದವು. ಕ್ರಿ.ಪೂ.563ರ ವೈಶಾಖ ಮಾಸದ ಹುಣ್ಣಿಮೆಯದಿನ ಬುದ್ಧನ ಜನನವಾಗಿತ್ತು.

ಶುದ್ಧೋಧನ ಮತ್ತು ಮಾಯಾದೇವಿಯರ ಪುತ್ರನಾಗಿ ಹುಟ್ಟಿದ ರಾಜಕುಮಾರನೇ ಸಿದ್ದಾರ್ಥ. 16ನೇ ವಯಸ್ಸಿನಲ್ಲೇ ಯಶೋಧರೆ ಎಂಬ ಕನ್ಯೆಯೊಂದಿಗೆ ವಿವಾಹವಾಗಿ, ತಮಗೆ ಹುಟ್ಟಿದ ಮುದ್ದಿನ ಮಗನಿಗೆ ರಾಹುಲ ಎಂದು ಹೆಸರನಿಟ್ಟು ರಾಜ್ಯ, ಸಂಪತ್ತು, ಅಧಿಕಾರ, ಪತ್ನಿ, ಮಗು ಎನ್ನುತ್ತ ನೆಮ್ಮದಿಯಿಂದ ಕಾಲಕಳೆಯುತ್ತಿದ್ದ. ಒಮ್ಮೆ ನಗರ ಸಂಚಾರ ಮಾಡುತ್ತಿದ್ದ ರಾಜ ಸಿದ್ಧಾರ್ಥನಿಗೆ ಶವ, ರೋಗಿ ಮತ್ತು ವೃದ್ಧನನ್ನು ಕಂಡು, ಬದುಕಿನಲ್ಲಿ ಕಾಯಿಲೆ, ವೃದ್ಧಾಪ್ಯ, ಸಾವು ಎಲ್ಲರಿಗೂ ಅನಿವಾರ್ಯವೇ ಎಂಬ ಪ್ರಶ್ನೆ ಹುಟ್ಟುತ್ತದೆ.

ಬುದ್ಧಿಗೆ ಇರುವ ಇನ್ನೊಂದು ಹೆಸರು ‘ಬುದ್ಧ’. ಧರ್ಮದ ಹೆಸರಿನಲ್ಲಿ ಅವೈಜ್ಞಾನಿಕವಾದುದನ್ನು, ಅತಾರ್ಕಿಕವಾದುದನ್ನು ಆತ ಏನನ್ನೂ ಹೇಳಲಿಲ್ಲ. ಅತಿಮಾನುಷವಾದವನ್ನು ಮುಂದಿಡಲಿಲ್ಲ. ‘ಬುದ್ಧ ಪೂರ್ಣಿಮಾ’ ಎಂದೂ ಕರೆಯಲ್ಪಡುವ ‘ಬುದ್ಧ ಜಯಂತಿ’ ಭಗವಾನ್ ಬುದ್ಧನ ಹುಟ್ಟುಹಬ್ಬವನ್ನು ಆಚರಿಸುತ್ತದೆ. ಇದು ಅವನ ಜ್ಞಾನೋದಯ ಮತ್ತು ಮರಣದ ಸ್ಮರಣೆಯನ್ನು ಕೂಡಾ ನೆನಪಿಸುತ್ತದೆ. ಇದು ಅತ್ಯಂತ ಪವಿತ್ರ ಬೌದ್ಧ ಉತ್ಸವ.

ಬುದ್ಧ ತನ್ನನ್ನು ಪ್ರವಾದಿಯೋ ದೇವರ ಪ್ರತಿನಿಧಿಯೋ ಎಂದು ಬಿಂಬಿಸಿಕೊಳ್ಳಲಿಲ್ಲ. ತನ್ನದು ದೈವವಾಣಿಯೆಂದೋ ನನ್ನ ಮಾತೇ ಕೊನೆಯ ಮಾತು, ನನ್ನ ತರುವಾಯ ಮತ್ತೊಬ್ಬ ಬುದ್ಧನಿಲ್ಲ ಎಂದು ಹೇಳಲಿಲ್ಲ. ತನ್ನ ವಿಚಾರಗಳನ್ನು ಚರ್ಚೆಗೆ ಮುಕ್ತವಾಗಿ ತೆರೆದಿಟ್ಟ. ಉರಿಯುತ್ತಿರುವ ದೀಪವೊಂದು ಸಾವಿರ ದೀಪಗಳನ್ನು ಬೆಳಗಿಸಿ, ಪ್ರಕಾಶ ಹೆಚ್ಚಿಸುವ ಸಾಮರ್ಥ್ಯ ಹೊಂದಿರುತ್ತದೆ. ಅದೇ ರೀತಿ ಖುಷಿಯನ್ನು ಸಹ ಹಂಚುವುದರಿಂದ ಅದು ಹೆಚ್ಚಾಗುತ್ತಾ ಹೋಗುತ್ತದೆ ಎಂದು ಬುದ್ಧ ಹೇಳುತ್ತಾನೆ.

ಸತ್ಯ, ಅಹಿಂಹೆ, ಸುಳ್ಳು ಹೇಳದಿರುವುದು, ಕಳ್ಳತನಮಾಡಬಾರದು ಆತನ ಮಹತ್ವದ ಉಪದೇಶ. ಸಕಲ ಪ್ರಾಣಿಗಳಲ್ಲಿ ದಯೆಯಿರಲಿ, ಪ್ರಾಣಿಹಿಂಸೆ ಮಾಡಬೇಡಿ, ಆಸೆಯೇ ದುಃಖಕ್ಕೆ ಕಾರಣ, ಹಿಂಸೆ ದ್ವೇಷವೇ ದುಃಖದ ಮೂಲ, ಎಲ್ಲರನ್ನೂ ಪ್ರೀತಿಸಿ, ಎಂದು ಸಾರುತ್ತಾ ಬೌದ್ಧ ಧರ್ಮವನ್ನು ಪ್ರಸಾರ ಮಾಡುತ್ತಾ ಪ್ರಪಂಚದ ಉದ್ದಗಲಕ್ಕೂ ಸಂಚರಿಸಿ 80 ವರ್ಷಗಳಷ್ಟು ದೀರ್ಘ ಕಾಲ ಎಲ್ಲೆಡೆಯೂ ಧರ್ಮಪ್ರಚಾರಮಾಡಿದ ಮಹಾಪುರುಷ ” ಗೌತಮ ಬುದ್ಧ “.

ಎಲ್ಲ ಮತಗಳು ಈ ಲೋಕವನ್ನು ‘ಆಗಿರುವ ವಸ್ತು’ ಪ್ರಪಂಚವೆಂದು ಹೇಳಿದರೆ ಬೌದ್ಧಧರ್ಮ ಮಾತ್ರ ಲೋಕವನ್ನು ‘ಆಗುತ್ತಲೇ ಇರುವ’ ನಿರಂತರ ಪ್ರವಾಹವೆಂದು ವಿವರಿಸುತ್ತದೆ. ಬುದ್ಧ ಪ್ರವಾದಿ ಅಲ್ಲ. ಆತ ಮಹಾತ್ಮ. ಆತ ಹೇಳಿದ್ದು ಧರ್ಮವೇ ವಿನಾ ಮತಧರ್ಮ ಅಲ್ಲ. ಆತನದು ಆಗಿರುವ ಮತವಲ್ಲ, ಪ್ರತಿದಿನವೂ ಆಗುತ್ತಲೇ ಇರುವ– ಕಾಲದಿಂದ ಕಾಲಕ್ಕೆ ತನ್ನನ್ನು ಪುನರ್ ಕಟ್ಟಿಕೊಳ್ಳುತ್ತಿರುವ ಧರ್ಮ.

ಬುದ್ಧನ ಅನುಸಾರ, ಕೆಟ್ಟದ್ದನ್ನು ಕೆಟ್ಟದ್ದರಿಂದಲೇ ಅಂತ್ಯ ಮಾಡಲು ಸಾಧ್ಯವಿಲ್ಲ. ಹೀಗಾಗಿ ಕೆಟ್ಟದ್ದನ್ನು ಸಹ ಪ್ರೀತಿಯಿಂದಲೇ ಅಂತ್ಯಗೊಳಿಸುವುದು ಉತ್ತಮ. ಪ್ರೀತಿ-ವಿಶ್ವಾಸ ಮಾತ್ರ ಕೆಟ್ಟದ್ದಕ್ಕೆ ಇತಿಶ್ರೀ ಹಾಡಲು ಸಾಧ್ಯ. ಸಿದ್ಧಾರ್ಥನ ಮನಸ್ಸು ಬುದ್ಧನಾಗುವುದಕ್ಕೆ ಹಾತೊರೆಯುತ್ತಿದ್ದ ದಿನ ಬಂದಾಗ ಆತನ ವಯಸ್ಸು 26. ಆ ವಯಸ್ಸಿನಲ್ಲೇ ಮನೆ-ಮಠ, ಹೆಂಡತಿ-ಮಗುವನ್ನು ತೊರೆದ ಸಿದ್ಧಾರ್ಥ ಗಯಾಗೆ ತೆರಳಿ, ಅರಳಿ ಮರದಕೆಳಗೆ ಕುಳಿತು ಧ್ಯಾನಾಸಕ್ತನಾದ. ಅನವರತ ಬಿಡದೇ 47 ದಿವಸಗಳ ಕಠಿಣ ತಪಸ್ಸುಮಾಡಿದಾಗ ಇದೇ ವೈಶಾಖ ಶುದ್ಧ ಹುಣ್ಣಿಮೆಯಂದು ಸಿದ್ಧಾರ್ಥನಿಗೆ ಜ್ಞಾನೋದಯವಾಯಿತು. ಅಂದಿನಿಂದ ಸಿದ್ಧಾರ್ಥ ಬುದ್ಧನಾದ.

ಈ ಲೋಕದಲ್ಲಿ ಯಾವುದೂ ಸ್ವತಂತ್ರ ವಸ್ತುಗಳಲ್ಲ. ಎಲ್ಲವೂ ಸಹ ಬದಲಾಗುತ್ತಿರುವ ಸಂಯೋಜನೆಗಳು ಎಂದು ಹೇಳಿದ. ಬುದ್ಧ ‘ಕಾರ್ಯಕಾರಣ’ ಸಂಬಂಧದ ಜಗತ್ತಿನ ಘಟನೆಗಳನ್ನು ವಿವರಿಸುತ್ತಾನೆ. ಆದ್ದರಿಂದ ‘ಬುದ್ಧ ಧರ್ಮ’ ಎಂಬುದು ವಿಜ್ಞಾನಕ್ಕೆ ಸಮಾನಾಂತರವಾಗಿಯೇ ಬೆಳೆಯುತ್ತದೆ. ಅದು ‘ಮತಧರ್ಮ’ಗಳಂತೆ ವಿಜ್ಞಾನಕ್ಕೆ ವಿರೋಧಿಯಲ್ಲ.
ಹಲವು ವರ್ಷಗಳ ಧ್ಯಾನ, ತಪಸ್ಸು, ಅನುಭವ, ಅಧ್ಯಯನಗಳ ಮೂಲಕ ನಿಜವಾದ ಮಾನವ ಧರ್ಮದ ಆಶಯಗಳನ್ನು ಬುದ್ಧ ಜಗತ್ತಿಗೆ ತಿಳಿಸಿದ್ದಾನೆ. ವಾರಾಣಾಸಿಯ ಜಿಂಕೆಗಳ ವನದಲ್ಲಿ ಮೊದಲ ಬಾರಿಗೆ ಧಾರ್ಮಿಕ, ಅಧ್ಯಾತ್ಮ ಉಪನ್ಯಾಸಗಳನ್ನು ನೀಡುವ ಮೂಲಕ ಬೌದ್ಧ ಧರ್ಮದ ಆಶಯಗಳನ್ನು ಬಿತ್ತಿದ್ದ ಬುದ್ಧ, ಮನುಕುಲ ಅನುಭವಿಸುತ್ತಿರುವ ಕಷ್ಟಗಳಿಗೆ ಸ್ಪಂದಿಸುವುದೇ ಧರ್ಮದ ನಿಜವಾದ ಅರ್ಥ ಎನ್ನುತ್ತಾನೆ. ನಮ್ಮದು ಆ ಧರ್ಮ, ಈ ಧರ್ಮವೆಂದು ನಿರಂತರ ಕಚ್ಚಾಡುತ್ತೇವೆ. ಪ್ರತಿಯೊಬ್ಬರೂ ತಮ್ಮ ಧರ್ಮವೇ ಶ್ರೇಷ್ಠ ಎಂದು ಅನಗತ್ಯ ಚರ್ಚೆಯಲ್ಲಿ ತೊಡಗುತ್ತಾರೆ. ಆದರೆ ನಿಜ ವಾದ ಧರ್ಮವು ಒಬ್ಬರ ಕಷ್ಟಗಳಿಗೆ ಇನ್ನೊಬ್ಬರು ಸ್ಪಂದಿಸುವುದೇ ಆಗಿರುತ್ತದೆ ಎನ್ನುತ್ತಾನೆ ಬುದ್ಧ.

ಸಂದೇಹ ಅಥವಾ ಸಂಶಯ ಎನ್ನುವುದೊಂದು ಭೀಕರ ಖಾಯಿಲೆ ಎಂದು ಬುದ್ಧ ಹೇಳುತ್ತಾನೆ. ಒಬ್ಬ ವ್ಯಕ್ತಿಯ ಮನದಲ್ಲಿ ಸಂದೇಹ ಅಥವಾ ಸಂಶಯ ಎನ್ನುವುದು ಮನೆ ಮಾಡಿದರೆ, ಆತ ಅನನ್ಯ ಸಂಬಂಧಗಳನ್ನು ಶಂಕಿಸಲು ಶುರು ಮಾಡುತ್ತಾನೆ. ಇದರಿಂದ ಎಲ್ಲ ಮಧುರ ಬಂಧಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಆದಷ್ಟು, ಇಂಥ ಖಾಯಿಲೆಯಿಂದ ದೂರವಿರುವ ಮನಸ್ಥಿತಿಯನ್ನು ಬೆಳಸಿಕೊಳ್ಳಬೇಕು ಎಂದು ಬುದ್ಧ ಹೇಳುತ್ತಾನೆ.

ಪ್ರಾರ್ಥನೆಗೆ ಪರ್ಯಾಯವಾಗಿ ಆತ ಹೇಳುವ ‘ಧ್ಯಾನ ಮಾರ್ಗ’ ವಿಶಿಷ್ಟವಾದುದು. ಅದು ಮಾತಿನ ಲೋಕವಲ್ಲ, ಮೌನದ ಜಗತ್ತು. ಅದು ಪ್ರದರ್ಶನವಲ್ಲ, ಒಳಲೋಕದ ವಿಹಾರ. ಅಂತರಂಗದ ಪುಸ್ತಕ ತೆರೆಯದೇ, ಯಾವ ಪುಸ್ತಕ ಓದಿಯೂ ಏನೂ ಪ್ರಯೋಜನವಾಗದು ಎನ್ನುತ್ತಾನೆ ಬುದ್ಧ. ‘ಕೆಲವು ವ್ಯಕ್ತಿಗಳು ಮಾತ್ರ ಈ ಜಗತ್ತಿನಲ್ಲಿ ‘ಒಳನೋಟ’ವನ್ನು ಕಾಣಬಲ್ಲರು. ಉಳಿದಂತೆ ಎಲ್ಲರೂ ಕುರುಡರು’ ಎನ್ನುತ್ತಾನೆ.

ಮನುಷ್ಯ ಭೂತಕಾಲದ ಯೋಜನೆಯಲ್ಲಿಯೇ ಮುಳಗಬಾರದು ಎಂದು ಬುದ್ಧ ತನ್ನ ಉಪದೇಶದಲ್ಲಿ ತಿಳಿಸಿದ್ದಾನೆ. ಅವರ ಪ್ರಕಾರ, ಭವಿಷ್ಯದ ಕನಸನ್ನು ಈಡೇರಿಸಿಕೊಳ್ಳಲು ವರ್ತಮಾನದ ಕಡೆ ಗಮನ ನೀಡಿ ಎನ್ನುವುದಾಗಿತ್ತು. ಭೂತಕಾಲ ಹಾಗೂ ಭವಿಷ್ಯದ ಸ್ಥಿತಿಗತಿಗಳನ್ನು ಅರಿವಿನಲ್ಲಿಟ್ಟುಕೊಂಡು ವರ್ತಮಾನದ ಹಾದಿಯಲ್ಲಿ ನಡೆಯಬೇಕು. ಇದರಿಂದ ಮನುಷ್ಯನಿಗೆ ಸುಖ, ಸಂತೋಷದ ಮಾರ್ಗ ಲಭ್ಯವಾಗುತ್ತದೆ ಎನ್ನುವುದು ಉಪದೇಶದ ಅರ್ಥವಾಗಿತ್ತು.

ಜಗತ್ತಿನ ಮುಂದೆ ಭಾರತೀಯ ದರ್ಶನಗಳ ಅಂತಃಸತ್ವವನ್ನು ಸಮರ್ಥವಾಗಿ ಮಂಡಿಸಿದ ಸ್ವಾಮಿ ವಿವೇಕಾನಂದರು ಬೋಧಿವೃಕ್ಷದ ಅಡಿ ಕುಳಿತು ಧ್ಯಾನಾಸಕ್ತರಾಗಿ ಸಂಭ್ರಮಿಸುತ್ತಾರೆ. ‘ಬುದ್ಧ ವೇದಕ್ಕಾಗಲಿ, ಜಾತಿಗಾಗಲಿ, ಪುರೋಹಿತರಿಗಾಗಲಿ, ಆಚಾರಕ್ಕಾಗಲಿ ಜಗ್ಗಲಿಲ್ಲ. ಸತ್ಯಾನ್ವೇಷಣೆಯಲ್ಲಿ ಇಂತಹ ದಿಟ್ಟತನ ಮತ್ತು ಸರ್ವಜನರ ಮೇಲೆ ಪ್ರೀತಿಯುಳ್ಳ ಇನ್ನೊಬ್ಬ ವ್ಯಕ್ತಿಯನ್ನು ನಾನು ಪ್ರಪಂಚದಲ್ಲಿ ಮತ್ತೆಂದೂ ಕಂಡಿಲ್ಲ’ ಎಂದು ಸ್ವಾಮಿ ವಿವೇಕಾನಂದ ಹೇಳುತ್ತಾರೆ.

ಬೌದ್ಧ ಧರ್ಮ ಹಾಗೂ ಬುದ್ಧನ ಉಪದೇಶ ಏನಿರಬಹುದು ಎಂಬ ಉತ್ತರವನ್ನು ಹುಡುಕುತ್ತಾ ಹೊರಟರೇ, ತಿಳಿಯುವುದನೇಂದರೆ ಬುದ್ಧನ ಬಾಳೇ(ಜೀವನ) ಆತನ ಬೋಧನೆಯಾಗಿತ್ತು. ಎಂದಿಗೂ ಕೂಡ ತನ್ನ ಆದರ್ಶ, ಆಶಯಗಳನ್ನು ಧಿಕ್ಕರಿಸಿದವನಲ್ಲ. ಎಂತ ಸಾವಿನ ದವಡೆಯಲ್ಲೂ ಸಿಲುಕಿಕೊಂಡರೂ ತಾನೂ ನಂಬಿದ ಸತ್ಯಗಳನ್ನು ಬಿಟ್ಟವನಲ್ಲ. ಬುದ್ಧ ಜೀವನದುದ್ದಕ್ಕೂ ನೊಂದವರ ಬಾಳಿಗೆ ಬೆಳಕಾದವನೂ. ಸಮಾಜದಲ್ಲಿ ತುಡಿತಕ್ಕೊಳಗಾದವರ ಕಣ್ಣೀರ ಒರೆಸಿದನು. ದ್ವೇಷ, ಅಸೂಯೆಗಳನ್ನು ನಿರ್ನಾಮ ಮಾಡಿ ಸಮಾಜದಲ್ಲಿ ಪ್ರೀತಿಯ ಚಿಲುಮೆಯನ್ನು ಉಕ್ಕಿಸಿದನು. ಹುಟ್ಟು ಮತ್ತು ಸಾವು ಈ ಎರಡು ಬಂಧನಗಳಲ್ಲಿ ನಾವು ಗಳಿಸಬೇಕಾದದ್ದು ಅಪ್ರತಿಮವಾದದ್ದು ಪ್ರೀತಿಯೊಂದೇ ಎಂದು ಜಗತ್ತಿಗೆ ಸಾರಿದನು.

ಸರ್ವರಿಗೂ ಬುದ್ಧ ಪೂರ್ಣಿಮೆಯ ಶುಭಾಶಯಗಳು

ಲೇಖಕರು: ✍. ಅರುಣ್ ಕೂರ್ಗ್

ದೀಪಧಾರಿಣಿ ದಾದಿಯ 201ನೇ ಜನ್ಮದಿನ; ಅಂತರರಾಷ್ಟ್ರೀಯ ನರ್ಸಸ್‌ ಡೇ

ದೀಪಧಾರಿಣಿ ದಾದಿಯ 201ನೇ ಜನ್ಮದಿನ; ಅಂತರರಾಷ್ಟ್ರೀಯ ನರ್ಸಸ್‌ ಡೇ

ಮೇ 12ರಂದು ಜಗತ್ತಿನಾದ್ಯಂತ ಅಂತಾರಾಷ್ಟ್ರೀಯ ದಾದಿಯರ ದಿನ; ವಿಶೇಷ ಲೇಖನ

“ಶುಶ್ರೂಷೆ ಒಂದು ಕಲೆ. ಅದನ್ನು ಕಲೆಯಾಗಿ ಮಾಡಬೇಕೆಂದರೆ ಓರ್ವ ಕಲಾವಿದ ಅಥವಾ ಶಿಲ್ಪಿಯಂತಹ ಸಮರ್ಪಣಾ ಮನೋಭಾವ, ಪರಿಶ್ರಮದಾಯಕ ಸಿದ್ಧತೆ ಬೇಕು. ಇದು ಉನ್ನತ ಕಲೆಗಳಲ್ಲಿ ಒಂದು. ಉನ್ನತ ಕಲೆಗಳಲ್ಲಿ ಉನ್ನತವಾದದ್ದು”
– ಫ್ಲಾರೆನ್ಸ್ ನೈಟಿಂಗೇಲ್

ನಿಫಾ ರೋಗಿಗೆ ಚಿಕಿತ್ಸೆ ನೀಡುವಾಗ 2018ರಲ್ಲಿ ಕೇರಳದಲ್ಲಿ ನಿಪಾ ವೈರಸ್‌ನಿಂದ ಏಕಾಏಕಿ ಸಾವನ್ನಪ್ಪಿದ ಕೇರಳದ ದಾದಿ ಲಿನಿ ಪಿ.ಎನ್‌. ಗೆ ಮರಣೋತ್ತರ ರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ -2017 ನೀಡಿ ಗೌರವಿಸಲಾಗಿತು.

ಪ್ರತಿವರ್ಷ ಮೇ 12ರಂದು ಜಗತ್ತಿನಾದ್ಯಂತ ಅಂತಾರಾಷ್ಟ್ರೀಯ ದಾದಿಯರ ದಿನವನ್ನು ಆಚರಿಸಲಾಗುತ್ತದೆ. ಈ ದಿನ ಆಧುನಿಕ ನರ್ಸಿಂಗ್‌ನ ಸ್ಥಾಪಕಿ ಎಂದೇ ಖ್ಯಾತಿವೆತ್ತಿರುವ ಫ್ಲಾರೆನ್ಸ್‌ ನೈಟಿಂಗೇಲ್‌ ಅವರ ಜನ್ಮದಿನ. ಆಕೆ ಹುಟ್ಟಿದ್ದು ಮೇ 12, 1820. ಆಗಿನ್ನೂ ವೈದ್ಯಕೀಯ ಲೋಕ ಇಷ್ಟೊಂದು ಪ್ರಗತಿ ಕಂಡಿರಲಿಲ್ಲ. ಅದರಲ್ಲೂ ಹೆಣ್ಣುಮಕ್ಕಳು ದಾದಿ ಅಥವಾ ನರ್ಸ್‌ ಎಂದೆಲ್ಲ ಕರೆಯಲ್ಪಡುವ ಉಪಚಾರಿಕೆ ವೃತ್ತಿಗಿಳಿಯುವುದು ಸವಾಲಿನ ಮಾತೇ ಆಗಿತ್ತು. ಅಂತಹ ಕಾಲಘಟ್ಟದಲ್ಲಿ ಕಣ್ಣು ಬಿಟ್ಟವರು ‘ಫ್ಲಾರೆನ್ಸ್ ನೈಟಿಂಗೇಲ್.’

ಫ್ಲಾರೆನ್ಸ್ ನೈಟಿಂಗೇಲ್ – “ಲೇಡಿ ವಿತ್ ದಿ ಲ್ಯಾಂಪ್” ಎಂದೇ ಪ್ರಖ್ಯಾತರಾಗಿದ್ದ ಮಹಿಳೆ. ಫ್ಲಾರೆನ್ಸ್ ನೈಟಿಂಗೇಲ್ ಇಟಲಿಯಲ್ಲಿ 1820ರ ಮೇ 12ರಂದು. ಶ್ರೀಮಂತ ಕುಟುಂಬದಲ್ಲಿ ಜನಿಸಿದ್ದರೂ, ತಮ್ಮ 17ನೇ ವಯಸ್ಸಿನಲ್ಲೇ ನರ್ಸಿಂಗ್ ವೃತ್ತಿಯನ್ನು ಆಯ್ಕೆ ಮಾಡಿಕೊಂಡರು. ಸಮಾಜದಲ್ಲಿ ಹಿಂದುಳಿದ ಹಾಗೂ ಬಡಜನರಿಗೆ ವೈದ್ಯಕೀಯ ನೆರವು ದೊರೆಯಬೇಕೆಂಬುದೇ ಇವರ ಧ್ಯೇಯವಾಗಿತ್ತು. 1854ರ ಅಕ್ಟೋಬರ್ 21ರಂದು ತಮ್ಮ 38 ನರ್ಸ್ ತಂಡದೊಂದಿಗೆ ಕ್ರಿಮಿಯನ್ ಯುದ್ಧದಲ್ಲಿ ಗಾಯಗೊಂಡ ಸೈನಿಕರನ್ನು ಶುಶ್ರೂಷೆ ಮಾಡಿದರು. ಮಿಲಿಟರಿ ಆಸ್ಪತ್ರೆಗಳ ಹಾಗೂ ಇತರ ಆಸ್ಪತ್ರೆಗಳ ಸುಧಾರಣೆಗೆ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿ ಅವುಗಳನ್ನು ಜಾರಿಗೆ ತರಲು ಪ್ರಯತ್ನಿಸಿದಳು. ಇದಕ್ಕಾಗಿ ತನ್ನ ಜೀವಮಾನವನ್ನೇ ಮುಡಿಪಾಗಿಟ್ಟಳು.

ಅದೊಂದು ಬೃಹದಾಕಾರದ ಮಿಲಿಟರಿ ಆಸ್ಪತ್ರೆ. ಕಟ್ಟಡವು ದೊಡ್ಡದಾಗಿತ್ತು. ಆದರೆ ಕನಿಷ್ಠ ಸೌಕರ್ಯವೂ ಇಲ್ಲದ ಆಸ್ಪತ್ರೆ. ಆಸ್ಪತ್ರೆಯ ಉದ್ದ ಸುಮಾರು 6.5 ಕಿಲೋಮೀಟರು. ಆಸ್ಪತ್ರೆಯಲ್ಲಿ ಸಾವಿರಾರು ಹಾಸಿಗೆಗಳು, ಆದರೆ ಒಬ್ಬ ರೋಗಿಯ ಹಾಸಿಗೆಗೂ, ಇನ್ನೊಬ್ಬ ರೋಗಿಯ ಹಾಸಿಗೆಗೂ ಇದ್ದ ಅಂತರ ಕೇವಲ 45 ಸೆಂಟಿಮೀಟರುಗಳು. ಇಂಥಹ ಆಸ್ಪತ್ರೆಯಲ್ಲಿ ಪ್ರತಿನಿತ್ಯ ರಾತ್ರಿಯ ಹೊತ್ತು ಆಕೆ ಕೈಯಲ್ಲಿ ದೀಪ ಹಿಡಿದು ಪ್ರತಿಯೊಂದು ಹಾಸಿಗೆಯ ಬಳಿ ಹೋಗುತ್ತಾಳೆ. ಪ್ರತಿಯೊಬ್ಬ ರೋಗಿಯನ್ನೂ ವಿಚಾರಿಸುತ್ತಾಳೆ. ಅವರಿಗೆ ಅಗತ್ಯವಾದ ಔಷದ ಮತ್ತು ಇತರ ವಸ್ತುಗಳನ್ನು ನೀಡುತ್ತಾಳೆ. ಮೆಲುದನಿಯಲ್ಲಿ ಅವರನ್ನು ಉಪಚರಿಸುತ್ತಾಳೆ, ಅವರಿಗೆ ಧೈರ್ಯ ತುಂಬುತ್ತಾಳೆ. ಸಾವಿನ ಹೊಸ್ತಿಲಲ್ಲಿರುವ ವ್ಯಕ್ತಿಗೆ, ಆಗತಾನೇ ಚೇತರಿಸಿಕೊಳ್ಳುತ್ತಿರುವ ರೋಗಿಗೆ ಅವಳು ಮಾಡುತ್ತಿದ್ದ ಸೇವೆಯಿಂದ ‘ಅವಳೊಬ್ಬ ದೇವತೆ’ ಎನಿಸಿದ್ದರೆ ಆಶ್ಚರ್ಯವಿಲ್ಲ. ಪ್ರತಿದಿನ ಕತ್ತಲಾದೊಡನೆ ದೀಪವನ್ನು ಹಿಡಿದು ರೋಗಿಗಳನ್ನು ವಿಚಾರಿಸಲು ಬರುತ್ತಿದ್ದ ಈಕೆಯನ್ನು ‘ದೀಪಧಾರಿಣಿ’ ಎಂದೇ ಕರೆಯುತ್ತಿದ್ದರು.

ಇಂಗ್ಲೆಂಡ್‍ನಲ್ಲಿ ಆಸ್ಪತ್ರೆಗಳೆಂದರೆ ರೋಗ ಹರಡುವ ತಾಣಗಳಂತಿದ್ದ ಕಾಲದಲ್ಲಿ ಫ್ಲಾರೆನ್ಸ್ ನೈಟಿಂಗೇಲ್ ಬಿರುಗಾಳಿಯಾಗಿ ಬಂದು ವೈದ್ಯಕೀಯ ಕೊಳೆಯನ್ನೆಲ್ಲಾ ತೆಗೆದಳು. ಪಾಲಕರ ವಿರೋಧದ ನಡುವೆಯೂ ಜರ್ಮನಿಗೆ ತೆರಳಿ ನರ್ಸಿಂಗ್‍ನಲ್ಲಿ ಹೆಚ್ಚಿನ ತರರಬೇತಿ ಪಡೆದಳು. ಕ್ರಿಮಿಯನ್ ವಾರ್ ನಡೆದ ಸಂಧರ್ಭದಲ್ಲಿ ಸೈನಿಕ ಆಸ್ಪತ್ರೆಯ ಮೇಲ್ವಿಚಾರಕಿಯಾಗಿದ್ದಳು. ಪರಿಪೂರ್ಣವಾಗಿ ನರ್ಸ್ ತರಬೇತಿ ಪಡೆದ ನಂತರವೇ ಆಸ್ಪತ್ರೆಗಳನ್ನು ಶೂಚಿಗೊಳಿಸುವ ಕಾರ್ಯ ಕೈಗೊಂಡಳು. ಆಸ್ಪತ್ರೆಗಳನ್ನು ಸ್ವಚ್ಚ ಮಂದಿರಗಳನ್ನಾಗಿಸಲು ಶ್ರಮಿಸಿದಳು. ಸೈನಿಕರಿಗೆ ವಿಶೇಷ ಗಮನ ನೀಡಿ ಉಪಚರಿಸುತ್ತಿದ್ದಳು. ಜರ್ಮನಿಯಿಂದ ಹಿಂದಿರುಗಿ ಬಂದ ಮೇಲೆ ನರ್ಸಿಂಗ್ ಶಾಲೆ ತೆರೆದಳು. ಇಂಗ್ಲೆಂಡ್ ಅಲ್ಲದೇ ಭಾರತೀಯ ಆಸ್ಪತ್ರೆಗಳ ಪರಿಸ್ಥಿತಿಗಳನ್ನು ಬದಲಾಯಿಸಲು ಶ್ರಮಿಸಿದಳು. ಭಾರತದಲ್ಲಿ ಸಿಪಾಯಿ ದಂಗೆಯ ಸಮಯದಲ್ಲೂ ಆಕೆ ಮಾಡಿದ ಸೇವೆ ಅಭೂತಪೂರ್ವವಾದದ್ದು. ಉತ್ತಮ ನರ್ಸಿಂಗ್ ಸೇವೆ ಮತ್ತು ಕೌಶಲ್ಯಾಭಿವೃದ್ದಿ ಕುರಿತು ಅನೇಕ ಪುಸ್ತಕಗಳನ್ನು ಬರೆದ ಫ್ಲಾರೆನ್ಸ್‌ ನೈಟಿಂಗೇಲ್‌, ಸಂಘಟನೆ, ಪರಿವೀಕ್ಷಣೆ, ಸ್ವಚ್ಚತೆ, ಹಾಗೂ ರೋಗಿಗಳೊಂದಿಗಿನ ಒಡನಾಟ ಕುರಿತ ಪುಸ್ತಕಗಳನ್ನೂ ಬರೆದಳು. ಫ್ಲಾರೆನ್ಸ್‌ ನೈಟಿಂಗೇಲ್‌ ದಾದಿಯಾಗಷ್ಟೇ ಅಲ್ಲ 200ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದು ಒಬ್ಬ ಲೇಖಕಿಯಾಗಿ ಹೆಸರುಗಳಿಸಿದಳು.

ಪ್ರತೀ ವರ್ಷ ಈ ಸುಸಂದರ್ಭವನ್ನು ಲಂಡನಿನ ವೆಸ್ಟ್‌ ಮಿನ್‌ಸ್ಟರ್‌ ಆ್ಯಬಿಯಲ್ಲಿ ಮೋಂಬತ್ತಿ ಪ್ರಾರ್ಥನೆಯ ಮೂಲಕ ಆಚರಿಸಲಾಗುತ್ತದೆ. ದಾದಿಯರು ಒಬ್ಬರಿಂದ ಇನ್ನೊಬ್ಬರಿಗೆ ಜ್ಞಾನವನ್ನು ಹಂಚುವುದರ ಸಂಕೇತವಾಗಿ ಉರಿಯುವ ಮೋಂಬತ್ತಿಯನ್ನು ಒಬ್ಬರಿಂದ ಇನ್ನೊಬ್ಬರಿಗೆ ಹಸ್ತಾಂತರಿಸುತ್ತಾ ಕೊನೆಗೆ ಅದನ್ನೊಂದು ಎತ್ತರದ ಪೀಠದ ಮೇಲೆ ಇರಿಸಲಾಗುತ್ತದೆ. ಫ್ಲಾರೆನ್ಸ್‌ ನೈಟಿಂಗೇಲ್‌ ಅವರ ಸಮಾಧಿಯಿರುವ ಸಂತ ಮಾರ್ಗರೆಟ್‌ ಚರ್ಚ್‌ನಲ್ಲಿ ಆಕೆಯ ಜನ್ಮದಿನದ ಬಳಿಕ ಬರುವ ರವಿವಾರದಂದು ಬೃಹತ್‌ ಸಮಾರಂಭವನ್ನು ಕೂಡ ಆಯೋಜಿಸಲಾಗುತ್ತದೆ.

1899ರಲ್ಲಿ ಸ್ಥಾಪನೆಗೊಂಡಿರುವ ಐ.ಸಿ.ಎನ್‌. ಆರೋಗ್ಯ ಸೇವಾ ವೃತ್ತಿನಿರತರ ಪ್ರಪ್ರಥಮ ಅಂತಾರಾಷ್ಟ್ರೀಯ ಸಂಸ್ಥೆಯಾಗಿದೆ. ಅಮೆರಿಕದ ಆರೋಗ್ಯ, ಶಿಕ್ಷಣ ಮತ್ತು ಕಲ್ಯಾಣ ಸಚಿವಾಲಯದ ಅಧಿಕಾರಿ ಡೊರೊಥಿ ಸೂತರ್‌ಲ್ಯಾಂಡ್‌ ಎಂಬವರು 1953ರಲ್ಲಿ ಅಂತಾರಾಷ್ಟ್ರೀಯ ದಾದಿಯರ ದಿನಾಚರಣೆ ನಡೆಸುವ ಪ್ರಸ್ತಾವವನ್ನು ಮಂಡಿಸಿದರು; ಅಮೆರಿಕದ ಆಗಿನ ಅಧ್ಯಕ್ಷ ಡ್ವೆ„ಟ್‌ ಡಿ. ಐಸೆನ್‌ ಹೋವರ್‌ ಪ್ರಪ್ರಥಮವಾಗಿ ಇದನ್ನು ಘೋಷಿಸಿದರು. 1965ರಲ್ಲಿ ಅಂತಾರಾಷ್ಟ್ರೀಯ ದಾದಿಯರ ಮಂಡಳಿ (ಐ.ಸಿ.ಎನ್‌) ಇದನ್ನು ಮೊತ್ತಮೊದಲ ಬಾರಿಗೆ ಆಚರಿಸಿತು. ಫ್ಲಾರೆನ್ಸ್‌ ನೈಟಿಂಗೇಲ್‌ ಅವರ ಜನ್ಮದಿನವಾಗಿರುವ ಮೇ 12ನ್ನು ಅಂತಾರಾಷ್ಟ್ರೀಯ ದಾದಿಯರ ದಿನವನ್ನಾಗಿ ಆಚರಿಸುವ ಘೋಷಣೆಯನ್ನು 1974ರ ಜನವರಿಯಲ್ಲಿ ಹೊರಡಿಸಲಾಯಿತು. ದಾದಿಯರ ದಿನಾಚರಣೆಯನ್ನು ಆರಂಭಿಸಿದ್ದಕ್ಕಾಗಿ ವಿಶ್ವದ 16 ಮಿಲಿಯ ದಾದಿಯರನ್ನು ಪ್ರತಿನಿಧಿಸುವ 130 ರಾಷ್ಟ್ರಗಳ ನರ್ಸಿಂಗ್‌ ಸಂಘಟನೆ (ಎನ್‌.ಎನ್‌.ಎ)ಗಳ ಒಕ್ಕೂಟವಾಗಿರುವ ದಿ ಇಂಟರ್‌ನ್ಯಾಶನಲ್‌ ಕೌನ್ಸಿಲ್‌ ಆಫ್ ನರ್ಸಸ್‌ (ಐ.ಸಿಎ.ನ್‌) ಶ್ಲಾಘನಾರ್ಹವಾಗಿದೆ.

ಫ್ಲಾರೆನ್ಸ್‌ ನೈಟಿಂಗೇಲ್‌ ಅವರಿಗೆ ಮೊದಲಿನಿಂದಲೂ ಶ್ರೀಮಂತ ಮಹಿಳೆಯರ ಬದುಕು ನೀರಸವೆನಿಸಿತ್ತು. ದುಬಾರಿ ಪೋಷಾಕುಗಳನ್ನು ಧರಿಸುವುದು, ಪಾರ್ಟಿಗಳಲ್ಲಿ ಭಾಗಿಯಾಗುವುದು, ಅತ್ತಿತ್ತ ಅಡ್ಡಾಡುವುದು, ನರ್ತನ, ಸಂಭ್ರಮ ವೈಭವ ಜೀವನ ಬೇಕಿರಲಿಲ್ಲ. ಜನ ಸೇವೆಯೇ ಮುಖ್ಯ ಧ್ಯೇಯವಾಗಿತ್ತು.

ಯಾವುದೇ ವ್ಯವಸ್ಥೆಗಳಿಲ್ಲದ, ಬೇಜವಾಬ್ದಾರಿಗಳ ಸರ್ಕಾರಿ ವ್ಯವಸ್ಥೆ, ಅಪಹಾಸ್ಯಗಳನ್ನು ಎದುರಿಸಿ ಕೂಡಾ, ಮಾನವೀಯ ಅನುಕಂಪ, ಸೇವಾ ಮನೋಭಾವನೆಗಳ ಹಾದಿಯಲ್ಲಿ ಬಂದ ಅಡೆತಡೆಗಳನ್ನೆಲ್ಲಾ ನಿವಾರಿಸಿ ಮಾನವ ಕುಲಕ್ಕೆ ಫ್ಲಾರೆನ್ಸ್‌ ನೈಟಿಂಗೇಲ್‌ ಸಲ್ಲಿಸಿದ ಸೇವೆ ಇಡೀ ವಿಶ್ವವೇ ಬೆರಗಾಗುವಂತೆ ಮಾಡಿತು. ತನ್ನ ಸೇವೆಯಲ್ಲಿ ದೇವರನ್ನು ಕಂಡ ಈ ಮಹಾತಾಯಿ ಮುಂದೆ ಮಾನವ ಕುಲವನ್ನು ಸಲಹುತ್ತಿರುವ ಅನೇಕ ಮಾನವೀಯ ದಾದಿಯರ ಪ್ರತಿನಿಧಿಯಾಗಿ ಎಂದೆಂದೂ ನೆನಪಿನಲ್ಲಿ ಉಳಿಯುತ್ತಾಳೆ.

ನಮ್ಮ ಸಮಾಜ ದಾದಿಯರನ್ನು ಗೌರವಾದರಗಳಿಂದ ಕಾಣುತ್ತಿಲ್ಲ. ಈ ಕೋರಾನಾ ಕಾಲದಲ್ಲಿ ದಾದಿಯರ ಸೇವೆ ಮರೆಯಲಾಗದಂತದು. ದಾದಿಯರ ಸೇವೆ ಮತ್ತು ಸದಾ ಅವರ ಮುಖದಲ್ಲಿರುವ ಮಂದಹಾಸದಿಂದ ರೋಗಿಗಳಲ್ಲಿ ಆತ್ಮಸ್ಥೈರ‍್ಯ ಹೆಚ್ಚಾಗುತ್ತದೆ. ವೈಯಕ್ತಿಕ ಸಮಸ್ಯೆ ಬದಿಗಿರಿಸಿ ರೋಗಿಗಳ ಬಗ್ಗೆ ಕಾಳಜಿ ತೋರಿಸುವ ಶುಶ್ರೂಷಕರ ಬಗ್ಗೆ ಸಮಾಜದಲ್ಲಿ ಗೌರವಾದರ ಹೆಚ್ಚಾಗಬೇಕು. ಗುಣಮಟ್ಟದ ಮತ್ತು ಪರಿಣಾಮಕಾರಿ ಆರೋಗ್ಯ ತಲುಪಿಸುವಲ್ಲಿ ಮತ್ತು ವ್ಯಕ್ತಿಗಳು, ಕುಟುಂಬಗಳು ಮತ್ತು ಸಮುದಾಯಗಳ ಆರೋಗ್ಯ ಅಗತ್ಯಗಳಿಗೆ ಸ್ಪಂದಿಸುವಲ್ಲಿ ದಾದಿಯರು ಪ್ರಮುಖ ಪಾತ್ರ ವಹಿಸುತ್ತಾರೆ. ದಾದಿಯರು ನಿಜಕ್ಕೂ ‘ಸೇವೆ, ಶುಶ್ರೂಷೆ, ಕರುಣೆಯ ಸಂಕೇತವಾಗಿದ್ದಾರೆ. ನರ್ಸಿಂಗ್ ಕೆಲಸವೆಂದರೆ ಅದು ಶೃದ್ದೆಯ ಸೇವೆ ಎಂದೆ ಹೇಳಬಹುದು. ಎಲ್ಲ ಸೇವೆಗಿಂತ ಆರೋಗ್ಯ ಸೇವೆ ಮಾನವೀಯ ಸಂಬಂಧವನ್ನು ಗಟ್ಟಿಗೊಳಿಸುತ್ತದೆ. ನರ್ಸ್ ಹುದ್ದೆ ಅತ್ಯಂತ ಪವಿತ್ರವಾದದ್ದು.

ವೈದ್ಯಕೀಯ ಕ್ಷೇತ್ರದಲ್ಲಿ ನರ್ಸ್‌ಗಳ ಸೇವೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಒಳ್ಳೆಯ ನರ್ಸ್‌ಗಳು ಇರುವರೆಡೆ ಒಳ್ಳೆಯ ವೈದ್ಯಕೀಯ ಸೇವೆ ಸಿಗುತ್ತದೆ. ರೋಗದಿಂದ ಬೇಸತ್ತು ಜೀವನದಲ್ಲಿ ಉತ್ಸಾಹವನ್ನೇ ಕಳೆದುಕೊಂಡವರಿಗೆ ಆತ್ಮಸ್ಥೈರ್ಯ ತುಂಬಿ ಆರೈಕೆ ಮಾಡುವ ನರ್ಸ್‌ಗಳ ಕೆಲಸ ವಿಶ್ವದಲ್ಲೇ ಪ್ರಶಂಸೆಗೆ ಪಾತ್ರವಾಗಿದೆ. ವೈದ್ಯರ ಸೇವೆ ಪರಿಪೂರ್ಣವಾಗುವಲ್ಲಿ ದಾದಿಯರ ನಿಸ್ವಾರ್ಥ ಸೇವೆ ಅತೀ ಅವಶ್ಯಕ.

ಸಾವಿರಾರು ಜನರ ಬದುಕನ್ನು ಉಳಿಸಿದ, ಸಾವಿರಾರು ಜನರ ಜೀವನವನ್ನು ಉತ್ತಮಗೊಳಿಸಿದ, ಶುಶ್ರೂಷಕಿ ವೃತ್ತಿಗೆ ಗೌರವ ಹಾಗೂ ಘನತೆಯನ್ನು ತಂದುಕೊಟ್ಟ, ಇಡಿ ವಿಶ್ವದಲ್ಲಿ ಆರೋಗ್ಯ ಆರೈಕೆ, ನೈರ್ಮಲ್ಯ ಹಾಗೂ ಆಸ್ಪತ್ರೆ ರಚನೆ ಹಾಗೂ ಆಡಳಿತದಲ್ಲಿ ಅಭೂತಪೂರ್ವ ಬದಲಾವಣೆಯನ್ನು ತಂದ ಫ್ಲಾರೆನ್ಸ್ ನೈಟಿಂಗೇಲ್ ಎಲ್ಲಾ ಕಾಲಕ್ಕೂ, ಎಲ್ಲಾ ದೇಶಕ್ಕೂ ಆದರ್ಶಪ್ರಾಯರು. ಶುಶ್ರೂಷಕಿಯರಿಗಂತು ಫ್ಲಾರೆನ್ಸ್‌ ನೈಟಿಂಗೇಲ್ ಸದಾ ಆದರ್ಶ.

ಜೀವನದಲ್ಲಿ ಎರಡು ಶ್ರೇಷ್ಠ ದಿನಗಳಿವೆ. ಒಂದು ನಾವು ಹುಟ್ಟಿದ ದಿನ. ಇನ್ನೊಂದು ಹುಟ್ಟಿದ್ದು ಏಕೆಂದು ಗೊತ್ತಾದ ದಿನ. ಜೀವನ ಇರುವುದು ಪಡೆದುಕೊಳ್ಳುವುದಕ್ಕಲ್ಲ. ಅದು ಇರುವುದು ಕೊಡುವುದಕ್ಕೆ. ಪ್ರೀತಿಯಿಂದ ಸ್ಫೂರ್ತಿ ಹೊಂದಿದ ಮತ್ತು ಜ್ಞಾನದ ಮಾರ್ಗದರ್ಶನ ಹೊಂದಿದ ಜೀವನವೇ ಸಾರ್ಥಕ ಜೀವನ. ದೀಪಧಾರಿಣಿ ದಾದಿ ಎಂದು ಜಗದ್ವೀಖ್ಯಾತಳಾದ ಫ್ಲಾರೆನ್ಸ್‌ ನೈಟಿಂಗೇಲ್ ಶುಶ್ರೂಷಕಿಯರಿಗೆ ಸದಾ ಆದರ್ಶವಾಗಿರಲಿ ಎಂದು ಕರೋನಾ ಸಂದರ್ಭದ ಈ ಕಷ್ಟ ಕಾಲದಲ್ಲಿ ನಾವೆಲ್ಲರೂ ಆಶಿಸೋಣ.

✍. ಕಾನತ್ತಿಲ್ ರಾಣಿ ಅರುಣ್

ಸಂಭ್ರಮ ಸಡಗರದ ಕೊಡಗಿನ “ಹುತ್ತರಿ”

ಸಂಭ್ರಮ ಸಡಗರದ ಕೊಡಗಿನ “ಹುತ್ತರಿ”

ಹುತ್ತರಿ ಹಬ್ಬವು ಕೊಡಗಿನ ಕೃಷಿ ಕುಟುಂಬಗಳಿಗೆ ಸಂಭ್ರಮವನ್ನು, ಸಂತಸವನ್ನು ನೀಡುವ ಹಬ್ಬವಾಗಿದೆ. ಕೊಡಗಿನಲ್ಲಿ ನೆಲೆಸಿರುವ ವಿವಿಧ ಸಮುದಾಯಗಳು ಪ್ರಕೃತಿಯೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿವೆ. ಕೃಷಿಯನ್ನೇ ಪ್ರಧಾನವಾಗಿರಿಸಿಕೊಂಡಿರುವ ಕುಟುಂಬಗಳು ಹುತ್ತರಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾ ಬಂದಿವೆ.
                                   ಪ್ರತೀ ವರ್ಷದ ನವೆಂಬರ್ ಅಥವಾ ಡಿಸೆಂಬರ್ ತಿಂಗಳ ರೋಹಿಣಿ ನಕ್ಷತ್ರದಲ್ಲಿ ವೃಶ್ಚಿಕ ಮಾಸದ 11ನೇ ದಿನ ಹುಣ್ಣಿಮೆಯ ರಾತ್ರಿಯಂದು ಕೊಡಗಿನಲ್ಲಿ ಹುತ್ತರಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬವನ್ನು “ಸುಗ್ಗಿ ಹಬ್ಬ” ಎಂದು ಇತರೆಡೆ ಆಚರಿಸಿದರೆ, ಕೊಡಗಿನಲ್ಲಿ ‘ಹುತ್ತರಿ ಹಬ್ಬ’ ಎಂದು ಆಚರಿಸುತ್ತಾರೆ. ಹುತ್ತರಿ ಎಂದರೆ ಪುದಿಯ(ಹೊಸ), ಅರಿ(ಅಕ್ಕಿ), ಪುತ್ತರಿ(ಹೊಸ ಅಕ್ಕಿ), ಹೊಸ ಭತ್ತದ ಬೆಳೆಯನ್ನು ನೀಡಿದ ಭೂಮಿ ತಾಯಿಗೆ ಹಾಗೂ ಧಾನ್ಯಲಕ್ಷ್ಮೀಗೆ ಭಕ್ತಿ ಭಾವದಿಂದ ಕೃತಜ್ಞತೆಯನ್ನು ಸಲ್ಲಿಸುವ ಹಬ್ಬವೇ ಹುತ್ತರಿ ಹಬ್ಬ. ರಾತ್ರಿ ಕುಟುಂಬದ ಮುಖ್ಯಸ್ಥ ಕದಿರು ಕೊಯ್ದು ಪೊಲಿ.. ಪೊಲಿ.. ದೇವಾ ಎನ್ನುತ್ತಾ ಕೊಂಡೊಯ್ಯುವ ಮೂಲಕ ಧಾನ್ಯ ಲಕ್ಷ್ಮಿಯನ್ನು ಮನೆಗೆ ತುಂಬಿಸಿಕೊಳ್ಳುವುದರೊಂದಿಗೆ ಸದಾ ಕಾಲ ಮನೆಯಲ್ಲಿ ಧವಸ ಧಾನ್ಯ ತುಂಬಿರುವಂತೆ ತಾಯಿ ಕಾವೇರಮ್ಮ ಹಾಗೂ ಪಾಡಿ ಇಗ್ಗುತ್ತಪ್ಪನಲ್ಲಿ ಪ್ರಾರ್ಥಿಸಿಕೊಳ್ಳಲಾಗುತ್ತದೆ.

ಹುತ್ತರಿ ಹಬ್ಬದ ಆಚರಣಾ ರೀತಿ–ರಿವಾಜುಗಳು:
ಹುತ್ತರಿ ಹಬ್ಬದ ದಿನ ಐನ್ ಮನೆಯ ನೆಲ್ಲಕ್ಕಿ ನಡುಬಾಡೆಯಲ್ಲಿರುವ ‘ತೂಕ್ಬೊಳಕ್’ (ತೂಗುವ ದೀಪ) ಕೆಳಗೆ ಹೊಸ ಚಾಪೆ ಹಾಸಿ ಹುತ್ತರಿ ಕುಕ್ಕೆಯಲ್ಲಿ ಮಾವಿನ ಎಲೆ, ಅರಳಿ ಎಲೆ, ಕುಂಬಳಿ ಎಲೆ, ಕಾಡುಗೇರು ಎಲೆ, ಹಲಸಿನ ಎಲೆ ಈ ಐದು ಎಲೆಗಳನ್ನು ಹಾಗೂ ಅಚ್ಚನಾರನ್ನು ಇರಿಸಿರುತ್ತಾರೆ. ಈ ಐದು ಎಲೆಗಳನ್ನು ಒಂದರ ಮೇಲೆ ಒಂದು ಇಟ್ಟು ನಾರಿನಿಂದ ಕಟ್ಟಲಾಗಿರುತ್ತದೆ. ಇದನ್ನು ‘ನೆರೆಕಟ್ಟುವುದು’ ಎನ್ನುತ್ತಾರೆ. ಹೊಸ ಕುಕ್ಕೆಯಲ್ಲಿ ಭತ್ತ ತುಂಬಿ ಅದರ ಮೇಲೆ ಅರ್ಧ ಸೇರು ಅಕ್ಕಿಯನ್ನು ಸೇರಿಸಿ ತುಂಬುತ್ತಾರೆ. ಹುತ್ತರಿ ಕುಡಿಕೆಯಲ್ಲಿ ತಂಬಿಟ್ಟು ಹಾಕಿ ಅದರ ಜೊತೆ ಹಾಲು, ತುಪ್ಪ, ಜೇನು, ಎಳ್ಳು, ಶುಂಠಿ, ತೆಂಗಿನಕಾಯಿ, ಹಾಗಲಕಾಯಿ, ಮುಳ್ಳು ಇಡುತ್ತಾರೆ. ಜೊತೆಗೆ ಕುಡುಗೋಲು ‘ತಳಿಯಕ್ಕಿ ಬೊಳ್ಚ’ ಮೂರು ವೀಳ್ಯದೆಲೆ ಮೂರು ಅಡಿಕೆಯನ್ನು ಇಡಲಾಗುತ್ತದೆ. ಆ ಎಲ್ಲಾ ವಸ್ತುಗಳನ್ನು ತೂಕ್ ಬೊಳಕ್ನ ಕೆಳಗಡೆ ದೇವರ ಮುಂದೆ ಇಟ್ಟಿರುತ್ತಾರೆ. ಅದರ ಮುಂದೆ ರಂಗೋಲಿಯನ್ನು ಹಾಕಿರುತ್ತಾರೆ. ನಂತರ ಬೇಯಿಸಿದ ಹುತ್ತರಿ ಗೆಣಸನ್ನು ಜೇನುತುಪ್ಪ, ಬೆಲ್ಲ ಹಾಗೂ ತುಪ್ಪದೊಂದಿಗೆ ಫಲಾಹಾರ ಸೇವಿಸಿ ಕದಿರು (“ಕದಿರು” ಎಂದರೆ ಭತ್ತದ ಕಟ್ಟು) ತೆಗೆಯಲು ಗದ್ದೆಗೆ ಹೋಗುತ್ತಾರೆ. ಮೊದಲೇ ಸಿದ್ಧಪಡಿಸಿದ “ಕುತ್ತಿ”ಯನ್ನು ಕುಟುಂಬದ ಹಿರಿಯರು ತಲೆ ಮೇಲೆ ಹೊತ್ತಿರುತ್ತಾರೆ ಮತ್ತು ಮನೆಯ ಹಿರಿಯ ವ್ಯಕ್ತಿ ಕದಿರು ತೆಗೆಯುವ ಕುಡುಗೋಲನ್ನು ಕದಿರು ತೆಗೆಯುವ ವ್ಯಕ್ತಿಯ ಕೈಗೆ ನೀಡುತ್ತಾರೆ. ನಂತರ ಮನೆಯ ಹಿರಿಯರು, ಹೆಂಗಸರು, ಗಂಡಸರು ಮತ್ತು ಮಕ್ಕಳು ಎಲ್ಲರೂ ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟು ದುಡಿ ಬಾರಿಸುತ್ತಾ, ಹಾಡುತ್ತಾ ಗದ್ದೆಗೆ ತೆರಳುತ್ತಾರೆ. ಕದಿರು ತೆಗೆಯುವ ಗದ್ದೆಯನ್ನು ಮೊದಲೇ ಸಿಂಗರಿಸಿರುತ್ತಾರೆ. ಅಲ್ಲಿ ತಲುಪಿದ ನಂತರ ಹಾಲು, ಜೇನು ಮೊದಲಾದವುಗಳನ್ನು ಕದಿರಿನ ಬುಡಕ್ಕೆ ಸುರಿಯುತ್ತಾರೆ. ಐದು ಎಲೆಗಳ ಕಟ್ಟನ್ನು ಕದಿರಿನ ಬುಡಕ್ಕೆ ಕಟ್ಟುತ್ತಾರೆ. ನಂತರ ಸಾಂಪ್ರದಾಯಿಕವಾಗಿ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸುತ್ತಾರೆ. ದೇವರನ್ನು ಪ್ರಾರ್ಥಿಸಿ ಬೆಸ ಸಂಖ್ಯೆಯಲ್ಲಿ ಕದಿರನ್ನು ಕುಯ್ದು ಕುಕ್ಕೆಯಲ್ಲಿ ಇಡಲಾಗುತ್ತದೆ. ಕದಿರನ ಒಂದೊಂದು ಕಟ್ಟನ್ನು ಆಲುಮರದ ಎಲೆಯಿಂದ ಸುತ್ತಿ ಕದಿರನ್ನು ಕಟ್ಟಿ ಕುಕ್ಕೆಯಲ್ಲಿಡುತ್ತಾರೆ. ಈ ಸಮಯದಲ್ಲಿ ಪಟಾಕಿಯನ್ನು ಸಿಡಿಸಿ ಪೊಲಿ ಪೊಲಿ ದೈವ ಎಂದು ಎಲ್ಲರೂ ಕೂಗುತ್ತಾರೆ. ನಂತರ ಕುಕ್ಕೆಯನ್ನು ತಲೆ ಮೇಲೆ ಹೊತ್ತು ಪೊಲಿ ಪೊಲಿ ದೈವ ಎಂದು ಕೂಗುತ್ತಾ ಮನೆಗೆ ಬರುತ್ತಾರೆ. ಮನೆಗೆ ಬಂದ ನಂತರ ಕದಿರು ಕುಯ್ದವನ ಕಾಲು ತೊಳೆದು ಹಾಲು ನೀಡಿ, ಧಾನ್ಯಲಕ್ಷ್ಮೀಯನ್ನು ಮನೆ ತುಂಬಿಸಿಕೊಳ್ಳುತ್ತಾರೆ, ಬರುವಾಗ ಕೈಮಡಕ್ಕೆ ಕಟ್ಟುತ್ತಾ ಬರುತ್ತಾರೆ. ನೆಲ್ಲಕ್ಕಿ ನಡುಬಾಡೆಗೆ ಬಂದು ಚಾಪೆ ಮೇಲೆ ಇಟ್ಟು ಮನೆಯ ಎಲ್ಲಾ ಬಾಗಿಲು ಮುಖ್ಯ ವಸ್ತುಗಳಿಗೆ ಇದನ್ನು ಕಟ್ಟುತ್ತಾರೆ. ನಂತರ ಹೊಸ ಅಕ್ಕಿ ಪಾಯಸ ಮಾಡಿ ಮನೆಯ ಸದಸ್ಯರೆಲ್ಲ ಊಟ ಮಾಡುತ್ತಾರೆ. ಮರುದಿನ ಊರಿನ ನಾಡ್ಮಂದ್ (ಮೈದಾನ) ನಲ್ಲಿ ಊರಿನವರೆಲ್ಲಾ ಸೇರಿ ಸಾಂಪ್ರದಾಯಿಕ ಕೋಲಾಟ, ‘ಪರೆಯಕಳಿ’ಗಳನ್ನು ಆಡಿ ಸಂಭ್ರಮಿಸುತ್ತಾರೆ.

ಕೊಡಗಿನಲ್ಲಿ ಹುತ್ತರಿ ಹಬ್ಬದ ಆಚರಣೆಯ ಇತಿಹಾಸ-ಹಿನ್ನಲೆ:
ಕೊಡಗಿನಲ್ಲಿ ಪ್ರಮುಖವಾಗಿ ಆರಾಧನೆಗೆ ಒಳಪಡುತ್ತಿರುವ “ಇಗ್ಗುತಪ್ಪ, ಪಾಲುರಪ್ಪ, ಬೇಂದ್ರುಕೋಲಪ್ಪ, ಪೆಮ್ಮಯ್ಯ, ಕಾಂಚರಾಟಪ್ಪ, ತಿರಚಂಬರಪ್ಪ” ಈ ಸಹೋದರರ ಕೊನೆಯ ತಂಗಿ “ಪನ್ನಂಗಾಲ ತಮ್ಮೆ” ಇವರು ಕೇರಳದಿಂದ ಬಂದು ಕೊಡಗಿನಲ್ಲಿ ಪೂಜಿಸಲ್ಪಡುತ್ತಿರುವವರು. ಇವರಲ್ಲಿ ಇಗ್ಗುತಪ್ಪ, ಪಾಲೂರಪ್ಪ, ತಿರುನೆಲ್ಲಿ ಪೆಮ್ಮಯ್ಯ ಇವರು ಕೇರಳದಿಂದ ಕೊಡಗಿಗೆ ಬಂದು ತಾವು ಬಿಟ್ಟ ಬಾಣ ಎಲ್ಲಿ ಹೋಗಿ ನಾಟುತ್ತದೆಯೋ, ಅಲ್ಲಿ ಹೋಗಿ ನೆಲೆ ನಿಲ್ಲೋಣಾ ಎಂದು ನಿಶ್ಚಯಿಸಿ, ಅದರಂತೆ ಇಗ್ಗುತಪ್ಪ್ಪ ಕೊಡಗಿನಲ್ಲಿ ನೆಲೆಸಿ ಕೊಡಗಿನವರ ಆರಾಧ್ಯ ದೈವವಾಗಿ ಪೂಜಿಸಲ್ಪಡುತ್ತಿದ್ದಾರೆ. ಒಮ್ಮೆ ಇಗ್ಗುತಪ್ಪನು ಕೊಡಗಿನಲ್ಲಿ ಸುಗ್ಗಿಯ ಸಂಭ್ರಮವನ್ನು ಆಚರಿಸಲು ಯಾವುದೇ ಆಚರಣೆಗಳು ಇಲ್ಲದಿದ್ದಾಗ ಕೇರಳದಲ್ಲಿ ನೆಲೆಸಿರುವ ತನ್ನ ಸಹೋದರನಾದ ಬೇಂದ್ರುಕೋಲಪ್ಪನ ಬಳಿ ತೆರಳಿ ಕೇರಳದಲ್ಲಿ ಸುಗ್ಗಿಯನ್ನು ಆಚರಿಸಲು ಓಣಂ ಇರುವಂತೆ ಕೊಡಗಿನಲ್ಲೂ ಸುಗ್ಗಿ ಆಚರಣೆಗೆ ಒಂದು ಮುಹೂರ್ತ ವಿಧಿ ವಿಧಾನಗಳು ಆಗಬೇಕೆಂದು ಕೇಳಿಕೊಂಡಾಗ ಬೇಂದ್ರುಕೋಲಪ್ಪನು “ಓಣತಮ್ಮೆ” ಎಂಬ ಓಣಂ ಹಬ್ಬದ ದೇವತೆಯನ್ನು ಕರೆದು ಪ್ರತೀ ವರ್ಷ ಕೇರಳದಲ್ಲಿ ಓಣಂ ಹಬ್ಬವನ್ನು ಆಚರಿಸಿದ ತೊಂಬತ್ತು ದಿನಗಳ ನಂತರದ ಮೊದಲ ರೋಹಿಣಿ ನಕ್ಷತ್ರದ ಹುಣ್ಣಿಮೆಯಂದು ಸುಗ್ಗಿ ಹಬ್ಬವನ್ನು ನಿಶ್ಚಯಿಸುತ್ತಾನೆ. ಅದರಂತೆ ಅದಕ್ಕೆ ಬೇಕಾದ ಸಾಮಾನುಗಳನ್ನು ತೆಗೆದುಕೊಂಡು ಹೋಗಿ ಕೊಡಗಿನ ಪಾಡಿ ಇಗ್ಗುತಪ್ಪನ ಸನ್ನಿಧಾನಕ್ಕೆ ತೆರಳಿ ಎಲ್ಲರಿಗೂ ವಿಷಯ ತಿಳಿಸಿ ಬಾ ಎಂದು ಕಳುಹಿಸುತ್ತಾನೆ. ಅಂತೆಯೇ ಒಬ್ಬ ಮಹಿಳೆಯ ರೂಪದಲ್ಲಿ ಬಂದ ‘ಓಣತಮ್ಮೆ’ ಇಗ್ಗುತಪ್ಪನ ಸನ್ನಿಧಿಗೆ ಬಂದು ಅಲ್ಲಿನ ಮುಖ್ಯಸ್ಥರಿಗೂ, ಕಣಿಯರಿಗೂ ಈ ವಿಷಯ ತಿಳಿಸುತ್ತಾಳೆ. ಅದರ ಪ್ರಕಾರ ಕೊಡಗಿನಲ್ಲಿ ಇಗ್ಗುತಪ್ಪನಿಂದಲೇ ಈ ಹಬ್ಬ ಪ್ರಾರಂಭವಾಯಿತೆಂದು ಎಲ್ಲರೂ ನಂಬುತ್ತಾರೆ.

. ಅರುಣ್ ಕೂರ್ಗ್

ಭಾರತೀಯರು ಮರೆಯದ ಧೀಮಂತ ಕನ್ನಡಿಗ…. ಸರ್ ಎಂ. ವಿಶ್ವೇಶ್ವರಯ್ಯ

ಭಾರತೀಯರು ಮರೆಯದ ಧೀಮಂತ ಕನ್ನಡಿಗ…. ಸರ್ ಎಂ. ವಿಶ್ವೇಶ್ವರಯ್ಯ 

ಭಾರತ ದೇಶದ ಪವಿತ್ರ ಭೂಮಿಯಲ್ಲಿ ಜನಿಸಿದ ಪುಣ್ಯ ಪುರುಷರಲ್ಲಿ ಕನ್ನಡ ನಾಡಿನ ಕೀರ್ತಿ ಪತಾಕೆಯನ್ನು ವಿಶ್ವದ ಮಟ್ಟದಲ್ಲಿ ಎತ್ತಿ ಹಿಡಿದ ಮಹಾನ್ ಮೇಧಾವಿ, ತಂತ್ರಜ್ಞ, ಅಮರ ವಾಸ್ತು ಶಿಲ್ಪಿ, ಭಾರತದ ಭಾಗ್ಯ ವಿಧಾತ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ ನವರ ಜನ್ಮ ದಿನ ಸೆಪ್ಟೆಂಬರ್ 15. 1860. ಮೈಸೂರು ಪ್ರಾಂತ್ಯ (ಈಗಿನ ಕರ್ನಾಟಕ ರಾಜ್ಯ) ಚಿಕ್ಕಬಳ್ಳಾಪುರದ ಮುದ್ದೇನ ಹಳ್ಳಿಯಲ್ಲಿ ಸಂಸ್ಕೃತ ಪಂಡಿತರು, ಆಯುರ್ವೇದಿಕ್ ಪಂಡಿತರೂ ಆಗಿದ್ದ ಶ್ರೀನಿವಾಸ ಶಾಸ್ತ್ರಿ ಮತ್ತು ಶ್ರೀಮತಿ ವೆಂಕಚಮ್ಮ ದಂಪತಿಗಳ ಮಗನಾಗಿ ಜನಿಸಿದರು. ಇವರ ಜನ್ಮದಿನ ಸೆಪ್ಟೆಂಬರ್ 15ನೇ ತಾರೀಕು ಭಾರತ ದೇಶ “ಇಂಜಿನಿಯರುಗಳ ದಿನ” ವನ್ನಾಗಿ ಆಚರಿಸುತ್ತಿದೆ. 155 ನೇ ಜನ್ಮದಿನದ ವರ್ಷದಲ್ಲಿ ಇತಿಹಾಸದ ಪುಟಗಳಲ್ಲಿ ದಾಖಲೆಯಾಗಿರುವ ಸಾಧನೆಗಳನ್ನು ಒಮ್ಮೆ ನೋಡಿ ಭಾರತ ಮಾತೆಯ ವರಪುತ್ರ, ಅಪ್ಪಟ ದೇಶಪ್ರೇಮಿಗೆ ಗೌರವ ಸಲ್ಲಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ.

ಚಿಕ್ಕಬಳ್ಳಾಪುರದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಪ್ರಾರಂಭಿಸಿ ನಂತರದ ಪ್ರೌಢ ಶಾಲಾ ಹಂತವನ್ನು ಬೆಂಗಳೂರಿನಲ್ಲಿ, 1881ರಲ್ಲಿ ಬಿ. ಎ. ಪದವಿಯನ್ನು ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಪಡೆದರು. ಉನ್ನತ ವ್ಯಾಸಂಗ ಪುಣೆಯ ಕಾಲೇಜ್ ಆಫ್ ಇಂಜಿನಿಯರಿಂಗ್ ನಲ್ಲಿ ಸಿವಿಲ್ ಇಂಜಿನಿಯರ್ ಪದವಿಯನ್ನು 1883 ರಲ್ಲಿ ರ್ಯ್ಯಾಂಕ್ ಪಡೆಯುವುದರ ಮೂಲಕ ಸಾಧನೆಯ ಹೆಜ್ಜೆಗಳನ್ನು ಇಡಲು ಪ್ರಾರಂಭಿಸಿದರು. ಬಾಂಬೆ ಸರ್ಕಾರದ ಲೋಕೊಪಯೋಗಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಆಗಿ ವೃತ್ತಿ ಜೀವನ ಪ್ರಾರಂಭವಾಯಿತು.

ಬಾಂಬೆಯ ಆಡಳಿತದಲ್ಲಿದ ಸಿಂಧ್ ಪ್ರಾಂತ್ಯದ ಜಲವಿತರಣೆ ಕಾಮಗಾರಿಕೆಯಲ್ಲಿ ಸಿಂಧೂ ನದಿಯಿಂದ ಸುಕ್ಕೂರಿಗೆ ನೀರು ಹರಿಸುವ ಯೋಜನೆಯ ಜವಾಬ್ದಾರಿ ಸರ್ ಎಂ. ವಿ. ಯವರಿಗೆ ದೊರೆತು ತಮ್ಮ ತಂತ್ರಜ್ಞಾನ, ಚಮತ್ಕಾರಿಕೆಯ ಕಾರ್ಯವೈಖರಿ ಆಡಳಿತ ಸರ್ಕಾರದ ಗಮನ ಸೆಳೆಯಿತು. ನಂತರ ಗುಜರಾತಿನ ಸೂರತ್ ನಲ್ಲಿಯೂ ನೀರು ಸರಬರಾಜು ವ್ಯವಸ್ಥೆಯನ್ನು ಸಹ ಅತ್ಯುತ್ತಮ ರೀತಿಯಲ್ಲಿ ಯೋಜನೆ ತಯಾರಿಸಿ ಪೂರ್ಣ ಗೊಳಿಸಿದರು. ನೂರು ವರ್ಷಗಳ ನಂತರ ಆ ಭಾಗಗಳಲ್ಲಿ ಭಾರೀ ಭೂಕಂಪವಾದರೂ ಯಾವುದೇ ಹಾನಿಯಾಗದೆ ಸರ್ ಎಂ. ವಿ. ಯವರ ಕಾಮಗಾರಿ ಭದ್ರವಾಗಿದೆ.

1903 ರಲ್ಲಿ ಪುಣೆಯ ಬಳಿ ಖಡಕ್ ವಾಸ್ಲಾ ಜಲಾಶಯದಲ್ಲಿ ತಮ್ಮ ವಿಶಿಷ್ಟ ತಂತ್ರಜ್ಞಾನವನ್ನು ಬಳಸಿ ಸ್ವಯಂ ಚಾಲಿತ ಗೇಟ್ ಗಳನ್ನು ಅಳವಡಿಸಿ, ಜಲಾಶಯದ ಈ ತಂತ್ರಜ್ಞಾನ ವಿಶ್ವದಲ್ಲೇ ಪ್ರಥಮ ಬಾರಿಗೆ ತೋರಿಸಿಕೊಟ್ಟ ಏಕೈಕ ತಂತ್ರ ಜ್ಞಾನಿಯಾಗಿ ಐತಿಹಾಸಿಕ ಸಾಕ್ಷಿಯಾಗಿದ್ದಾರೆ. 1909 ರಲ್ಲಿ ಹೈದರಾಬಾದ್, ವಿಶಾಖ ಪಟ್ಟಣದಲ್ಲಿ ಪ್ರವಾಹದಿಂದ ರಕ್ಷಿಸಲು ಯೋಜನೆ ರೂಪಿಸಿ ಪೂರ್ಣ ಗೊಳಿಸಿದರು.

ಜನಕೋಟಿಯನ್ನು ಆಕರ್ಷಿಸುತ್ತಿರುವ ವಿಶ್ವ ವಿಖ್ಯಾತ ಕೃಷ್ಣರಾಜ ಸಾಗರ ಆಣೆಕಟ್ಟು
1911 ಜಗತ್ತೇ ಆಶ್ಚರ್ಯದಿಂದ ನೋಡುವಂತಾಗಿದ್ದು, ಅಂದಿನ ಕಾಲಘಟ್ಟದಲ್ಲಿ ಭಾರತದಲ್ಲೇ ಅತ್ಯಂತ ದೊಡ್ದದು ಎಂದು ಹೆಗ್ಗಳಿಕೆಗೆ ಪಾತ್ರವಾದ ಕೃಷ್ಣರಾಜ ಸಾಗರ (ಕನ್ನಂಬಾಡಿ) ಜೀವನದಿ ಕಾವೇರಿ ನದಿಗೆ ಕಟ್ಟಲಾದ ಆಣೆಕಟ್ಟನ್ನು ಪ್ರಾರಂಭಿಸಿ ನಾಲ್ಕು ವರ್ಷಗಳಲ್ಲಿ ಮುಗಿಸಿ ಸ್ವಯಂ ಚಾಲಿತ ಗೇಟುಗಳನ್ನು ಅಳವಡಿಸಿ ಜಗತ್ತಿನಲ್ಲಿ ಯಾರೊಬ್ಬರೂ ಮಾಡಿರದಂತಹ ಸಾಧನೆ ಮಾಡಿದರು. ಬೇರೆ ಆಣೆಕಟ್ಟುಗಳು ಸಿಮೆಂಟ್, ಕಾಂಕ್ರಿಟ್ ನಿಂದ ನಿರ್ಮಾಣವಾಗಿದ್ದರೆ, ಕೆ. ಆರ್. ಎಸ್. ಆಣೆಕಟ್ಟು ಸರ್ ಎಂ. ವಿ. ಯವರ ಜಾಣ್ಮೆಯ ತಂತ್ರಜ್ಞಾನದಿಂದ ಸುಣ್ಣ ಮತ್ತು ಬೆಲ್ಲದ ಮಿಶ್ರಣದಿಂದ ಕಟ್ಟಿದ ಗಟ್ಟಿ ಮಾನವ ನಿರ್ಮಿತವಾಗಿದ್ದು, ದಾಖಲೆಯೊಂದಿಗೆ ಶತಮಾನದಿಂದ ಮೈಸೂರು ಮಂಡ್ಯ, ಬೆಂಗಳೂರು, ತಮಿಳುನಾಡಿಗೆ ಜೀವಜಲವನ್ನು ನೀಡುತ್ತಿರುವ ವಾಸ್ತುಶಿಲ್ಪವಾಗಿದೆ. ಎಲ್ಲಿಯಾದರೂ ದುರಂತ ಸಂಭವಿಸಿದರೆ ಸ್ವಯಂ ಚಾಲಿತ ಗೇಟುಗಳು ತನ್ನಷ್ಟಕ್ಕೆ ತಾನೆ ತೆರೆದುಕೊಂಡು ಮುನ್ನುಗುವ ಅಪಾರ ಪ್ರಮಾಣದ ನೀರು ಯಾರಿಗೂ ತೊಂದರೆಯಾಗದಂತೆ ಹರಿದು ಮುಂದೆ ಸಾಗಲು ಮುಂದಾಲೋಚನೆಯಿಂದ ಅಣೆಕಟ್ಟು ನಿರ್ಮಿಸುವಾಗಲೇ ಆಳವಾದ ನಾಲೆಯ ವ್ಯವಸ್ಥೆ ಮಾಡಲಾಗಿದೆ. ಜಗತ್ತಿನ ಅದ್ಭುತಗಳ ಸಾಲಲ್ಲಿ ಬರುವ ಕೃಷ್ಣ ರಾಜ ಸಾಗರ ಆಣೆಕಟ್ಟು ಒಂದು ಲಕ್ಷ ಇಪ್ಪತ್ತು ಸಾವಿರ ಏಕರೆ ಕೃಷಿ ಭೂಮಿಗೆ ನೀರುಣಿಸಿ, ದಕ್ಷಿಣ ಭಾರತದ ಕೋಟ್ಯಾಂತರ ಜೀವಿಗಳಿಗೆ ಜೀವ ಜಲವನ್ನು ನೀಡಿದ ಭಾರತದ ಭಾಗ್ಯವಿಧಾತ ಸರ್ ಎಂ. ವಿಶ್ವೇಶ್ವರಯ್ಯನವರನ್ನು ದಕ್ಷಿಣ ಭಾರತದ ಜನತೆ ಮರೆಯುವಂತಿಲ್ಲ. ಬೃಂದಾವನ ಉಧ್ಯಾನವನದಲ್ಲಿ ವೈವಿಧ್ಯಮಯ ನರ್ತಿಸುವ ಕುಣಿದು ಕುಪ್ಪಳಿಸುವ ನೀರಿನ ಕಾರಂಜಿಗಳು, ಪುಷ್ಪಕಾಶಿಯೊಂದಿಗೆ ಜಗತ್ತಿನ ನಾನಾ ದೇಶದ ಪ್ರವಾಸಿಗರನ್ನು ತನ್ನೆಡೆಗೆ ಕೈ ಬೀಸಿ ಕರೆಯುತ್ತಿದೆ.

ಕರ್ನಾಟಕದಲ್ಲಿ ಕಾರು ತಯಾರಿಕಾ ಕಾರ್ಖಾನೆಗೆ ಬ್ರಿಟಿಷರ ಅಡ್ಡಗಾಲು….
ಸರ್ ಎಂ. ವಿ. ಯವರಿಗೆ ಕರ್ನಾಟಕದಲ್ಲಿ ಕಾರು ತಯಾರಿಕಾ ಕಾರ್ಖಾನೆ ಸ್ಥಾಪಿಸಬೇಕೆಂದು ಮಹದಾಸೆ ಇತ್ತು. ಅದಕ್ಕಾಗಿ ಅವರು ತಿಂಗಳುಗಟ್ಟಲೆ ಯುರೋಪು, ಅಮೇರಿಕಾ ಸುತ್ತಿಬಂದರು. ಸರ್ ಎಂ. ವಿ. ಯವರ ಮನದಾಕಾಂಕ್ಷೆಯ ಯೋಜನೆಗೆ ಮೈಸೂರು ಮಹಾರಾಜರು ಸೂಕ್ತವಾದ ಸ್ಥಳವನ್ನು ನೀಡಿದರು. ಆದರೆ ಆಗಿನ ಆಡಳಿತದಲ್ಲಿದ್ದ ಬ್ರಿಟೀಷ್ ಅಧಿಕಾರಿಗಳು ಇವರ ಯೋಜನೆಗೆ ಅಡ್ಡಕಾಲಿಟ್ಟರು. ಆದರೆ ಎದೆಗುಂದದ ಸರ್. ಎಂ.ವಿ. ಯವರು ಹಿಂದುಸ್ಥಾನ್ ಏರ್ ಕ್ರಾಫ್ಟ್ ಫ್ಯಾಕ್ಟರಿ ಸ್ಥಾಪಿಸಿದರು. ಸರ್. ಎಂ. ವಿ. ಯವರು ಟಾಟಾ ಇನ್ಸ್ಟಿಟ್ಯೂಟ್ ಮುಖ್ಯಸ್ಥರಿಗೆ ಏರೋನಾಟಿಕ್ಸ್ ಪ್ರಾರಂಭಿಸುವಂತೆ ಮಾಡಿದರು ನಂತರ ಇದರ ಫಲವಾಗಿ ಬೆಂಗಳೂರಿನಲ್ಲಿಯೂ ಬಾಹ್ಯಕಾಶ ಸಂಶೋಧನಾ ಕೇಂದ್ರ, ವಾಯುಪಡೆ ನೆಲೆಯೂ ಪ್ರಾರಂಭವಾಯಿತು. ಇಂದು ಬೆಂಗಳೂರು ಹಂತ ಹಂತವಾಗಿ ಏರೊನಾಟಿಕ್ಸ್ ಸಂಶೋಧನಾ ಕೇಂದ್ರ, ಉಪಗ್ರಹ ಸಂಪರ್ಕ ಜಾಲ, ಮಾಹಿತಿ ತಂತ್ರ ಜ್ಞಾನ, ಮೆಟ್ರೋ ರೈಲಿನವರೆಗೆ ತಲುಪಿದೆ.

ಸರ್ ಎಂ. ವಿ. ಅಂದಿನ ಅವರ ಕನಸಿನ ತಂತ್ರಜ್ಞಾನ ಭದ್ರ ಭುನಾದಿಯೇ ಇಂದಿನ ವಿಶ್ವ ನಿಬ್ಬೆರಗಾಗಿ ನೋಡುವ ಬೆಂಗಳೂರಿನ ಮಾಹಿತಿ ತಂತ್ರಜ್ಞಾನ ವಿಶ್ವದರ್ಜೆಯ ಮಟ್ಟದಲ್ಲಿ ಬೆಳೆದು ನಿಂತಿದೆ. ಜೋಗದ ಜಲ ವಿದ್ಯುತ್ ಯೋಜನೆ, ಮೈಸೂರು ಸಕ್ಕರೆ ಕಾರ್ಖಾನೆ, ಪ್ರಿಂಟಿಂಗ್ ಪ್ರೆಸ್, ಬೆಂಗಳೂರಿನ ಸಾರ್ವಜನಿಕ ಗ್ರಂಥಾಲಯಗಳು ಇವರ ಕೊಡುಗೆ. ಭದ್ರಾವತಿ ಕಾರ್ಖಾನೆಯ ಚೇರ್ ಮೆನ್ ಆಗಿ ಸೇವೆ ಸಲ್ಲಿಸುತ್ತಿರುವಾಗ ಸರ್ಕಾರ ವೇತನ ನಿಗಧಿ ಪಡಿಸಿರಲಿಲ್ಲ. ಕೆಲವು ವರ್ಷಗಳ ನಂತರ ಲಕ್ಷಕಿಂತಲೂ ಹೆಚ್ಚು ಹಣವನ್ನು ಪಾವತಿಸಲು ಬಂದಾಗ ಅವರು ಒಂದು ರೂಪಾಯಿ ಸಹ ಮುಟ್ಟಲಿಲ್ಲ, ಆ ಹಣದಿಂದ ಹುಡುಗರ ಪಾಲಿಟೆಕ್ನಿಕ್ ಪ್ರಾರಂಭಿಸಲು ಸಲಹೆ ನೀಡಿದರು. ಅವರ ಇಚ್ಚೆಯಂತೆ ನೂತನ ಪಾಲಿಟೆಕ್ನಿಕ್ ಪ್ರಾರಂಭಿಸಿ ಸರ್ ಎಂ. ವಿ. ಯವರ ಹೆಸರನ್ನು ಇಡಲು ಕೇಳಿಕೊಂಡಾಗ ಅವರು ಮೈಸೂರಿನ ಮಹಾರಾಜರ ಹೆಸರನನ್ನು ಇಡುವಂತೆ ಸೂಚಿಸಿದ ನಂತರ, ಶ್ರೀ ಜಯ ಚಾಮರಾಜೇಂದ್ರ ವೃತ್ತಿ ಶಿಕ್ಷಣ ತರಬೇತಿ ಸಂಸ್ಥೆ ಬೆಂಗಳೂರು ಸ್ಥಾಪನೆಯಾಯಿತು. ಭಾರತದ ಬೆನ್ನೆಲುಬು ಅನ್ನ ದಾತ ರೈತರ ಅಭಿವೃದ್ದಿಗಾಗಿ ಬೆಂಗಳೂರು ಹೆಬ್ಬಾಳದ ಕೃಷಿ ಸಂಶೋಧನಾ ಕೇಂದ್ರ ಸ್ಥಾಪಿಸಿದರು.

ಕರ್ನಾಟಕದ ಕನ್ನಡಿಗರ ಭಾಗ್ಯೋದಯ….
1912 ರಲ್ಲಿ ಮೈಸೂರು ಪ್ರಾಂತ್ಯದ ದಿವಾನರಾಗಿ ಅಧಿಕಾರ ಸ್ವೀಕರಿಸಿದರು. ಅಂದಿನಿಂದ ಕರ್ನಾಟಕದ ಭಾಗ್ಯದ ಬಾಗಿಲು ತೆರೆಯಿತು. ’ಕರ್ನಾಟಕದ ಭಗಿರಥ’ ಎಂದೇ ಕರೆಯಲ್ಪಡುವ ಸರ್ ಎಂ. ವಿ. ಯವರಿಂದ 1913 ರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸ್ಥಾಪನೆಯಾದರೆ, 1915 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆಯಾಗಿ ಕನ್ನಡ ಭಾಷೆಗೆ ಶತಮಾನದ ಪ್ರಾರಂಭದಲ್ಲೆ ಭದ್ರ ಬುನಾದಿ ದೊರೆಯಿತು. ಮೈಸೂರು ಪ್ರಾಂತ್ಯದಲ್ಲಿ ಪ್ರಥಮ ದರ್ಜೆ ಕಾಲೇಜು ಇರಲಿಲ್ಲ. 1916 ರಲ್ಲಿ ಮೈಸೂರು ವಿಶ್ವ ವಿದ್ಯಾಲಯ ಸ್ಥಾಪಿಸಿ, ನಂತರ ಹುಡುಗಿಯರಿಗಾಗಿ ಮೈಸೂರಿನಲ್ಲಿ ಮಹಾರಾಣಿ ಕಾಲೇಜು ಸ್ಥಾಪಿಸಿ ಜ್ಞಾನದ ದೀಪ ಬೆಳಗಿದರು. 1912 ರಲ್ಲಿ ಮೈಸೂರು ಪ್ರಾಂತ್ಯದಲ್ಲಿ ಒಟ್ಟು 4,500 ಶಾಲೆಗಳಿದ್ದು, ಆರು ವರ್ಷದ ಅವಧಿಯಲ್ಲಿ ಒಟ್ಟು 6,500 ಶಾಲೆಗಳಾಗುವಂತೆ ಮಾಡಿ 1,40,000 ವಿದ್ಯಾರ್ಥಿಗಳಿದ್ದದು 1918 ರಲ್ಲಿ ನಿವೃತಿ ಪಡೆಯುವಾಗ 3,66,000 ವಿದ್ಯಾರ್ಥಿಗಳು ವಿದ್ಯಾಭಾಸ ಪಡೆಯುವಂತಾಯಿತು ಭಾರತದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಕಡ್ಡಾಯವಾಗಿ ಜಾರಿಗೆ ತರುವಲ್ಲಿ ಮತ್ತು ಹೆಣ್ಣು ಮಕ್ಕಳು ಶಾಲೆಗೆ ತೆರಳಿ ವಿದ್ಯಾಭ್ಯಾಸ ಪಡೆಯುವಂತೆ ಪ್ರೋತ್ಸಾಹಿಸಿ ಸಾಕ್ಷರತೆಗೆ ಅಡಿಪಾಯ ಹಾಕಿದವರು. ದೇಶದಲ್ಲೆ ಮೊಟ್ಟ ಮೊದಲ ಬಾರಿಗೆ ಕಡ್ಡಾಯ ಪ್ರಾಥಮಿಕ ಶಿಕ್ಷಣ ಜಾರಿ ಮಾಡಿದ ಪ್ರಥಮ ಕನ್ನಡಿಗನಾಗಿದ್ದಾರೆ. 1917ರಲ್ಲಿ ಬೆಂಗಳೂರು ವಿ. ವಿ. ಇಂಜಿನಿಯರಿಂಗ್ ಕಾಲೇಜು ಸ್ಥಾಪನೆ. ಭಾರತದಲ್ಲೇ ಪ್ರಾರಂಭವಾದ ಪ್ರಥಮ ಇಂಜಿನಿಯರಿಂಗ್ ಕಾಲೇಜು ಕನ್ನಡಿಗನ ಕೊಡುಗೆಯಾಗಿದೆ. ಭದ್ರಾವತಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ, ಮೈಸೂರು ಸ್ಯಾಂಡಲ್ ಸೋಪ್, ಶ್ರೀಗಂಧ ಎಣ್ಣೆ ತಯಾರಿಕಾ ಕಾರ್ಖಾನೆ ಸ್ಥಾಪಿಸಿದ ಮಹಾನುಭಾವ ಸರ್ ಎಂ. ವಿ. ಯವರು ಸ್ಥಾಪಿಸಿದ ಹಲವಾರು ಸಂಸ್ಥೆಗಳಲ್ಲಿ ಕೋಟ್ಯಾಂತರ ಮಂದಿಗೆ ಉದ್ಯೋಗ ಅವಕಾಶ ದೊರೆತು, ಅನ್ನದಾತರಾಗಿರುವುದನ್ನು ಇಂದಿಗೂ ಸ್ಮರಿಸಿಕೊಳ್ಳುವಂತಾಗಿದೆ.

ಜನಕೋಟಿಯನ್ನು ಉದ್ದರಿಸಲು ಅವತರಿಸಿದ ಪುಣ್ಯ ಪುರುಷ…
ಸರ್ ಎಂ. ವಿಶ್ವೇಶ್ವರಯ್ಯ ಜನಕೋಟಿಯನ್ನು ಉದ್ದರಿಸಲು ಅವತರಿಸಿದ ಅವತಾರ ಪುರುಷನಂತೆ ನಮ್ಮ ಕಣ್ಣಿನ ಮುಂದೆ ಬರುತ್ತಾರೆ. ಅಪ್ಪಟ ಕನ್ನಡಿಗ ಭಾರತದ ಭಾಗ್ಯ ಶಿಲ್ಪಿ, ಕಟ್ಟಾ ಶಿಸ್ತಿನ ಸಿಪಾಯಿ, ದೇಶಭಕ್ತ ಈ ಮಾಹಾ ತಪಸ್ವಿಯನ್ನು ಕಂಡಾಗ ಭಕ್ತಿ ಭಾವ, ಗೌರವ ತುಂಬಿ ಬರುತ್ತದೆ.

ಸರ್ಕಾರಿ ಕೆಲಸ ದೇವರ ಕೆಲಸ…
ಮೈಸೂರು ಪೇಟಾ ಧರಿಸಿ ಶುಭ್ರ ಉಡುಪನ್ನುಟ್ಟು, ಬೆಳಿಗೆ 7.00 ಗಂಟೆಯಿಂದ ಸೇವಾ ದಿನಚರಿಯನ್ನು ಸರ್ಕಾರಿ ಕೆಲಸ ದೇವರ ಕೆಲಸ ಎಂದು ಭಾವಿಸಿ ಪ್ರಾರಂಭಿಸುತ್ತಿದ್ದರು. ಸರ್ ಎಂ. ವಿ. ಯವರು ತಮ್ಮ ಬಂಧುಬಳಗದವರಿಗೆ ತಮ್ಮ ಬಳಿಗೆ ಶಿಪಾರಸು ಉಪಯೋಗಿಸಿ ತಮ್ಮ ತಮ್ಮ ಕೆಲಸವನ್ನು ಮಾಡಿಕೊಡಲು ಬರದಂತೆ ಸೂಚನೆ ನೀಡಿ, ಅದರಂತೆ ಅಧಿಕಾರ ದುರುಪಯೋಗ ಪಡಿಸದೆ ಪಾಲಿಸಿ ತೋರಿಸಿದ್ದಾರೆ. ಮನೆಯಲ್ಲಿ ರಾತ್ರಿಯ ವೇಳೆ ಕಛೇರಿಯ ಕೆಲಸವನ್ನು ಮಾಡುವಾಗ ಸರ್ಕಾರ ನೀಡಿದ ದೀಪವನ್ನು ಉರಿಸಿಕೊಂಡು, ಪೆನ್ ಬಳಸುತಿದ್ದರು. ನಂತರ ಸ್ವಂತ ಕೆಲಸಕ್ಕೆ ಸ್ವಂತ ದೀಪ ಪೆನ್ನನ್ನು ಬಳಸುತಿದ್ದರು. ಅದೇ ರೀತಿ ಸರ್ಕಾರದ ಕೆಲಸಕ್ಕೆ ಸರ್ಕಾರದ ಕಾರು, ಸ್ವಂತ ಕೆಲಸಕ್ಕೆ ಸ್ವಂತ ಕಾರು ಬಳಸುತ್ತಿದ್ದ ಅಪ್ಪಟ ದೇಶಪ್ರೇಮಿ. ಭಾರತದ ರಾಜದಾನಿ ದೆಹಲಿ ಮತ್ತು ದೇಶದ ಪ್ರಮುಖ ನಗರಗಳ ಸೌಂದರ್ಯದ ರೂವಾರಿಯಾಗಿರುವ ಸರ್ ಎಂ. ವಿ. ಯವರು ಒರಿಸ್ಸಾ ರಾಜ್ಯದ ಹಿರಾಕುಡ್ ಆಣೆಕಟ್ಟು, ಯಮನ್ ರಾಷ್ಟ್ರದ ನಿರಾವರಿ ವ್ಯವಸ್ಥೆ, ಈಡನ್ ನಗರದ ನೀರಿನ ವ್ಯವಸ್ಥೆ, ವಿದೇಶದಲ್ಲಿ ಬೃಹತ್ ವಾಸ್ತುಶಿಲ್ಪ ರಚನೆ ಮಾಡಿದ ನಂತರ ಮುಖ್ಯವಾದ ಒಂದು ಕಲ್ಲಿನಲ್ಲಿ ” ಮೇಡ್ ಇನ್ ಇಂಡಿಯಾ” ಕೆತ್ತಿಸಿ ಇಟ್ಟಿದ್ದಾರೆ. ಯಾರದಾರೂ ಭಾರತ ದೇಶದ ಬಗ್ಗೆ ಸಣ್ಣತನ ತೋರಿಸಿ ಆ ಕಲ್ಲನ್ನು ಕಿತ್ತು ತೆಗೆದರೆ ಪೂರ್ತಿ ವಾಸು ಶಿಲ್ಪ ಕುಸಿದು ಬೀಳುವ ರೀತಿಯಲ್ಲಿ ಭಾರತೀಯ ತಂತ್ರ ಜ್ಞಾನದ ಹಸ್ತಕೌಶಲ್ಯವನ್ನು ವಿದೇಶಿಯರಿಗೆ ತೋರಿಸಿಕೊಟ್ಟಿದಾರೆ.

ಸರ್ ಎಂ .ವಿ. ಯವರ ಹೆಸರಿನ ಮೂಲಕ ಗೌರವ ನೀಡಿ ಸೇವೆ ಸಲ್ಲಿಸುತ್ತಿರುವ ಸಂಸ್ಥೆಗಳು
ವಿಶ್ವೇಶ್ವರಯ್ಯ ಟೆಕ್ನಾಲಜಿ ಯೂನಿವರ್ಸಿಟಿ ಬೆಳಗಾಂ.
ವಿಶ್ವೇಶ್ವರಯ್ಯ ಇನ್ಸ್ಟ್ಯೂಟ್ ಅಫ್ ಅಡ್ವಾನ್ಸ್ಡ್ ಟೆಕ್ನಾಲಜಿ – ಮುದ್ದೇನ ಹಳ್ಳಿ ಕಣಿವೆನಾರಾಯಣಪುರ
ಇಂಡಿಯನ್ ಇನ್ಸ್ಟ್ಯೂಟ್ ಅಫ್ ಟೆಕ್ನಾಲಜಿ ಮುದ್ದೇನ ಹಳ್ಳಿ – ಸರ್ ಎಂ. ವಿ. ಯವರ ಜನ್ಮಸ್ಥಳ
ಯೂನಿವರ್ಸಿಟಿ ವಿಶ್ವೇಶ್ವರಯ್ಯ ಕಾಲೇಜ್ ಅಫ್ ಇಂಜಿನಿಯರಿಂಗ್ – ಬೆಂಗಳೂರು.
ವಿಶ್ವೇಶ್ವರಯ್ಯ ಪಾಲಿಟೆಕ್ನಿಕ್ ಕಾಲೇಜ್
ಸರ್ ಎಂ. ವಿಶ್ವೇಶ್ವರಯ್ಯ ಇನ್ಸ್ಟಿಟ್ಯೂಟ್ ಅಫ್ ಟೆಕ್ನಾಲಜಿ – ಬೆಂಗಳೂರು.
ವಿಶ್ವೇಶ್ವರಯ್ಯ ನ್ಯಾಶನಲ್ ಇನ್ಸ್ಟಿಟ್ಯೂಟ್ ಅಫ್ ಟೆಕ್ನಾಲಜಿ – ನಾಗಪುರ
ವಿಶ್ವೇಶ್ವರಯ್ಯ ಇಂಡಸ್ಟ್ರೀಯಲ್ ಅಂಡ್ ಟೆಕ್ನಾಲಜಿ ಮ್ಯೂಸಿಯಂ – ಬೆಂಗಳೂರು.
ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ – ಭದ್ರಾವತಿ.
ವಿಶ್ವೇಶ್ವರಯ್ಯ ಪ್ರತಿಮೆ ಸ್ಥಾಪನೆ – ಕಾಲೇಜ್ ಅಫ್ ಇಂಜಿನಿಯರಿಂಗ್ – ಪುಣೆ
ಸರ್ ಎಂ. ವಿಶ್ವೇಶ್ವರಯ್ಯ ಹಾಸ್ಟೆಲ್ – ಇನ್ಸ್ಟಿಟ್ಯೂಟ್ ಅಫ್ ಟೆಕ್ನಾಲಜಿ – ಬನಾರಸ್ ಹಿಂದೂ ಯೂನಿವರ್ಸಿಟಿ (ಏಶ್ಯಾದಲ್ಲೇ ಅತಿ ದೊಡ್ದ ರೆಶಿಡೆನ್ಸಿಯಲ್ ಯೂನಿವರ್ಸಿಟಿ)
ಕರ್ನಾಟಕ ಇಂಡಸ್ಟ್ರಿಯಲ್ ಕೋಪರೇಟಿವ್ ಬ್ಯಾಂಕ್ ಲಿಮಿಟೆಡ್.
ಎನ್. ಐ. ಟಿ. ರೂರ್ಕೆಲಾ – ವಿಶ್ವೇಶ್ವರಯ್ಯ ಸಭಾಂಗಣ
ಚೆನೈನಲ್ಲಿ ಅಣ್ಣಾ ನಗರದ ಬೃಹತ್ ಜಾಗತಿಕ ಮಟ್ಟದ ಉದ್ಯಾನವನಕ್ಕೆ ಅಚ್ಚ ಕನ್ನಡಿಗ ಸರ್ ಎಂ ವಿಶ್ವೇಶ್ವರಯ್ಯ ಅವರ ಹೆಸರಿಡಲಾಗಿದೆ.
ದೆಹಲಿ ಮೋತಿಬಾಗ್ ಮೆಟ್ರೊ ಸ್ಟೇಷನ್ ಗೆ ಸರ್ ಎಂ. ವಿಶ್ವೇಶ್ವರಯ್ಯ ಹೆಸರು 2014ರಲ್ಲಿ ಪುನರ್ ನಾಮಕರಣ ಮಾಡಲಾಗಿದೆ.
ಸರ್ ಎಂ. ವಿ.ಯವರ ಪುಸ್ತಕಗಳು : ’ರಿ ಕನ್ಸ್ಟ್ರಕ್ಷನ್ ಇಂಡಿಯಾ – (1934)
’ಪ್ಲಾನ್ಡ್ ಎಕಾನಮಿ ಫಾರ್ ಇಂಡಿಯಾ.
ತಮ್ಮ 94 ರ ಇಳಿ ವಯಸ್ಸಿನಲ್ಲಿಯೂ ’ಪ್ಲಾನಿಂಗ್ ನ ಬಗ್ಗೆ ಪುಸ್ತಕ ಬರೆಯುತಿದ್ದರು.

ಸರ್ ಎಂ. ವಿ. ಯವರಿಗೆ ದೊರೆತ ಗೌರವ, ಪ್ರಶಸ್ತಿಗಳು
1904 – ಗೌರವ ಸದಸ್ಯತ್ವ, ಲಂಡನ್ ಇನ್ಸ್ಟಿಟ್ಯೂಶನ್ ಅಫ್ ಸಿವಿಲ್ ಇಂಜಿನಿಯರ್ಸ್ – 50 ವರ್ಷಗಳ ವರೆಗೆ
1906 – ಕೈಸರ್ – ಇ – ಹಿಂದ್
1911 – ಸಿ. ಐ. ಇ. (ಕಾಂಪನಿಯನ್ ಅಫ್ ದಿ ಇಂಡಿಯನ್ ಏಂಪೈರ್) ದೆಹಲಿ ದರ್ಬಾರ್ ನಲ್ಲಿ
1915 – ಕೆ.ಸಿ. ಐ. ಇ. (ನೈಟ್ ಕಮಾಂಡರ್ ಅಫ್ ದಿ ಆರ್ಡರ್ ಅಫ್ ದಿ ಇಂಡಿಯನ್ ಏಂಪೈರ್)
1921 – ಡಿ. ಎಸ್ ಸಿ – ಕಲ್ಕತಾ ಯೂನಿವರ್ಸಿಟಿ
1931 – ಎಲ್ ಎಲ್ ಡಿ – ಬಾಂಬೆ ಯೂನಿವರ್ಸಿಟಿ
1937 – ಡಿ. ಲಿಟ್. – ಬನಾರಸ್ ಯೂನಿವರ್ಸಿಟಿ
1943 – ಅಜೀವ ಸದಸ್ಯತ್ವ – ಇನಿಸ್ಟಿಟ್ಯೂಶನ್ ಅಫ್ ಇಂಜಿನೀಯರ್ಸ್ – ಭಾರತ
1944 – ಡಿ. ಎಸ್ ಸಿ. – ಅಲಹಾಬಾದ್ ಯೂನಿವರ್ಸಿಟಿ
1948 – ಡಾಕ್ಟರೇಟ್ – ಎಲ್ ಎಲ್ ಡಿ., ಮೈಸೂರು ಯೂನಿವರ್ಸಿಟಿ
1953 – ಡಿ. ಲಿಟ್. – ಆಂದ್ರ ಯೂನಿವರ್ಸಿಟಿ
1955 – ಭಾರತ ರತ್ನ (ಭಾರತದ ಅತ್ಯುನ್ನತ ಗೌರವದ ಪ್ರಶಸ್ತಿ)
1958 – ದುರ್ಗಾ ಪ್ರಸಾದ್ ಕೈತಾನ್ ಮೆಮೊರಿಯಲ್ ಗೋಲ್ಡ್ ಮೆಡಲ್ – ರಾಯಲ್ ಏಶಿಯಾಟಿಕ್ ಸೊಸೈಟಿ ಕೌನ್ಸಿಲ್, ಬಂಗಾಳ
1959 – ಫೆಲೋಶಿಫ್ – ಇಂಡಿಯನ್ ಇನ್ಸ್ಟಿಟ್ಯೂಟ್ ಅಫ್ ಸೈನ್ಸ್ – ಬೆಂಗಳೂರು

ಸರ್ ಎಂ. ವಿ ಯವರ ಶತವರ್ಷ ಜನ್ಮದಿನಾಚರಣೆ – 1960
ಭಾರತ ಭಾಗ್ಯವಿಧಾತ ಸರ್ ಎಂ. ವಿಶ್ವೇಶ್ವರಯ್ಯ ನವರ ಶತ ಜನ್ಮ ದಿನಾಚರಣೆ ಸಮಾರಂಭ ಬೆಂಗಳೂರಿನ ಲಾಲ್ ಬಾಗ್ ನಲ್ಲಿ ಆಚರಿಸಲಾಯಿತು. ಆಗಿನ ಭಾರತದ ಪ್ರಧಾನ ಮಂತ್ರಿಯಾಗಿದ್ದ ಪಂಡಿತ್ ಜವಾಹರ್ ಲಾಲ್ ನೆಹರೂ ರವರು ವಿಶೇಷ ವಿಮಾನದಲ್ಲಿ ಅಗಮಿಸಿದ್ದು ಸಮಾರಂಭದ ಅಧ್ಯಕ್ಷತೆಯನ್ನು ಮೈಸೂರು ಮಹಾರಾಜರಾಗಿದ್ದ ಶ್ರೀ ಜಯಚಾಮರಾಜೇಂದ್ರ ಓಡೆಯರ್ ವಹಿಸಿದ್ದರು. ಅಂದಿನ ಸಮಾರಂಭದ ಸವಿನೆನಪಿಗಾಗಿ ಭಾರತ ಸರ್ಕಾರ ಸರ್ ಎಮ್. ವಿ. ಯವರ ಭಾವ ಚಿತ್ರದ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದ್ದರು.

ಸರ್ ಎಂ. ವಿ ಯವರು ದಿವಂಗತರಾಗಿದ್ದು ಏಪ್ರಿಲ್ 12, 1962
ದೇಶ ಕಂಡ ಮಾಹಾನ್ ಚೇತನ 102 ವರ್ಷ 6 ತಿಂಗಳು 8 ದಿನ ಬದುಕಿ ದೇಶ ಸೇವೆಯನ್ನು ಮಾಡಿ ಶಿಸ್ತಿನ ಜೀವನ ನಡೆಸಿ ತಮ್ಮ ಕೊನೆಯುಸಿರು ಎಳೆದರು. ಅವರ ಜನ್ಮ ಸ್ಥಳವಾದ ಮುದ್ದೆನ ಹಳ್ಳಿಯಲ್ಲಿ ಅವರ ಅಂತ್ಯಸಂಸ್ಕಾರ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿಸಲಾಯಿತು, ಆ ಸ್ಥಳದಲ್ಲಿ ಸರ್ ಎಂ. ವಿ. ಯವರ ಸುಂದರವಾದ ಸ್ಮಾರಕ ನಿರ್ಮಿಸಲಾಗಿದೆ. ಬೆಂಗಳೂರಿನ ವಿಮಾನಯಾನಕ್ಕೆ ಕಾರಣಕರ್ತರಾದ ಸರ್ ಎಂ. ವಿ. ಯವರ ಹೆಸರನ್ನು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೆಸರಿಡಲು ಅಸಮ್ಮತಿ ಸೂಚಿಸಿದ ಜನ ನಾಯಕರು ಮತ್ತು ಬೆಂಗಳೂರಿನ ಜನತೆಗೆ ಜೀವ ಜಲ ಕಾವೇರಿಯನ್ನು ನೀಡಿದ ಪುಣ್ಯಾತ್ಮನನ್ನು ಮರೆತಿರುವುದು ದುರ್ದೈವಾಗಿದೆ.
ಭಾರತದ ಇತಿಹಾಸದ ಪುಟಗಳಲ್ಲಿ ಹಲವಾರು ಮಹಾತ್ಮರ ಹೆಜ್ಜೆ ಗುರುತುಗಳು ಮುಚ್ಚಿಹೋಗಿವೆ. ಸರ್ ಎಂ. ವಿ. ಯವರ ಜನ್ಮ ದಿನದ ಈ ಸುಸಂದರ್ಭದಲ್ಲಿ ಅವರನ್ನು ನೆನಪು ಮಾಡಿಕೊಂಡು ಅವರಿಗೆ ಗೌರವ ಸಲ್ಲಿಸಿ, ಅವರ ಅದರ್ಶಗಳಲ್ಲಿ ಕೆಲವನ್ನಾದರೂ ಪಾಲಿಸಿದರೆ ಭಾರತದಲ್ಲಿ ಜನ್ಮ ಪಡೆದುದಕ್ಕೆ ಸಾರ್ಥಕವಾದೀತು.

About Author

ಬಿ. ಕೆ. ಗಣೇಶ್ ರೈ
ಅರಬ್ ಸಂಯುಕ್ತ ಸಂಸ್ಥಾನ

More posts by: B.K. Ganesh Rai>

Follow On

ಮಲೆಯಾಳಂ ಭಾಷಿಕರ ಹೊನ್ನಿನ ಹಬ್ಬ ಓಣಂ

ಮಲೆಯಾಳಂ ಭಾಷಿಕರ ಹೊನ್ನಿನ ಹಬ್ಬ ಓಣಂ

ಓಣಂ ಮಲೆಯಾಳಿ ಭಾಷಿಕರ ಅತ್ಯಂತ ಮಹತ್ವದ ಹಬ್ಬ. ಈ ಹಬ್ಬವು ಕೇರಳದಲ್ಲಿ ಮಾತ್ರವಲ್ಲದೇ ಕೇರಳಿಯರು ಎಲ್ಲೆಲ್ಲ ವಾಸಿಸುತ್ತಾರೋ, ಅಲ್ಲೆಲ್ಲ ಓಣಂ ಹಬ್ಬದ ಸಂಭ್ರಮ ಮನೆಮಾಡಿರುತ್ತದೆ.

ಕೃಷಿಯ ಹಿನ್ನಲೆಯಲ್ಲಿ ಆಚರಿಸ್ಪಡುವ ಈ ಹಬ್ಬವು ಮಳೆ ಗಾಳಿಗೆ ದುಡಿದು ಬೆಂಡಾದ ಜೀವಗಳಿಗೆ ಸಂತಸ ಸಂಭ್ರಮವನ್ನೀಯುವ ಹಬ್ಬ. ಮಳೆಯ ಆರ್ಭಟದ ನಡುವೆ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರು ಕೆಲಸಗಳನ್ನೆಲ್ಲಾ ಮುಗಿಸಿ ನೆಮ್ಮದಿಯ ನಿಟ್ಟುಸಿರು ಬಿಟ್ಟು ಕೂರುವ ಕಾಲ. ಮಳೆಯಲ್ಲಿ ಮಿಂದೆದ್ದ ಪ್ರಕೃತಿಯಲ್ಲಿ ಹೊಸ ಪುಳಕ ಓಣಂ ಹಬ್ಬ ಶುಭ ಸೂಚಕವೂ ಹೌದು. ಮನೆಯನ್ನು ಸುಣ್ಣ ಬಣ್ಣಗಳನ್ನು ಬಳಿದು, ಮನೆಯ ಮುಂದಿನ ಅಂಗಳದಲ್ಲಿ ಹೂವಿನ ರಂಗೋಲಿಯನ್ನು ಹಾಕಿ, ಮದ್ಯದಲ್ಲಿ ದೀಪವನ್ನು ಬೆಳಗಿಸಿ, ಮನೆಯ ಸುತ್ತ-ಮುತ್ತ ಹೊಸ ಬಟ್ಟೆಗಳನ್ನು ಹಾಕಿಕೊಂಡು ಕೇಕೆ ಹಾಕಿಕೊಂಡು ಓಡಾಡುವ ಮಕ್ಕಳು… ತಮ್ಮ ಸಾಂಪ್ರದಾಯಕ ಉಡುಗೆಯಾಗ ಕ್ರೀಂ ಬಣ್ಣದ ಸೆಟ್ ಸ್ಯಾರಿ ಅಥವಾ ಸೆಟ್‌ಮುಂಡ್‌ಳನ್ನು ಧರಿಸಿ ವಿವಿಧ ಭಕ್ಷö್ಯ ಭೋಜನಗಳ ತಯಾರಿಕೆಯಲ್ಲಿ ನಿರತರಾಗಿರುವ ಹೆಂಗೆಳೆಯರು… ಇದು ಓಣಂ ಆಚರಿಸುವ ಮನೆಗಳಲ್ಲಿ ಸಾಧಾರಣವಾಗಿ ಕಂಡುಬರುವ ದೃಶ್ಯಗಳು.

ಹಾಗೆ ನೋಡಿದರೆ ಓಣಂ ಹಬ್ಬ ಸಿಂಹ ಮಾಸದಲ್ಲಿ ಬರುತ್ತದೆ. ಈ ಸಿಂಹ ಮಾಸವು ಮಲೆಯಾಳಿಗಳ ಪಾಲಿಗೆ ಚಿನ್ನದ ಮಾಸ. ಸಿಂಹ ಮಾಸವು ಹಸ್ತ ನಕ್ಷತ್ರದಿಂದ ಹತ್ತು ದಿನಗಳ ಕಾಲ ಆಚರಣೆಯಲ್ಲಿರುತ್ತದೆ. ಕೊನೆಯ ಶ್ರಾವಣ ನಕ್ಷತ್ರದ ದಿನ ಬಹು ಮುಖ್ಯವಾಗಿದ್ದು, ಇದೇ ತಿರುವೋಣಂ.

ಓಣಂ ಆಚರಣೆಯ ಪೌರಾಣಿಕ ಹಿನ್ನೆಲೆಯನ್ನು ನೋಡುವುದಾದರೆ ಬಲಿ ಚಕ್ರವರ್ತಿ ರಾಕ್ಷಸನಾದರೂ, ಪ್ರಜೆಗಳ ಬಗ್ಗೆ ಕಾಳಜಿಯುಳ್ಳವನೂ, ವಾತ್ಸಲ್ಯವುಳ್ಳವನೂ, ಧರ್ಮಿಷ್ಟನೂ, ಮಹಾದಾಯೂ, ಮಹಾ ಪರಾಕ್ರಮಿಯೂ ಆಗಿದ್ದನು. ತನ್ನ ಪರಾಕ್ರಮದಿಂದ ವಿಶ್ವವನ್ನೆ ಸುತ್ತುವ ದೇವ ವಾಹನವನ್ನು ಪಡೆದಿದ್ದನು. ಆದರೆ ರಾಕ್ಷಸ ಕುಲದಲ್ಲಿ ಹುಟ್ಟಿದ ಬಲಿ ಚಕ್ರವರ್ತಿಗೆ ದೇವತೆಗಳ ಮೇಲೆ ಯುದ್ಧ ಸಾರಿ ಅವರನ್ನು ಬಗ್ಗು ಬಡಿದು ಇಂದ್ರ ಪದವಿಯನ್ನು ಪಡೆಯಬೇಕೆಂಬ ದುರಾಸೆ ಉಂಟಾಯಿತು. ಇದಕ್ಕಾಗಿ ಇಂದ್ರ ಪದವಿಯನ್ನು ಪಡೆಯುವುದಕ್ಕಾಗಿ ಮಹಾಯಾಗ ಮಾಡಲು ಮುಂದಾದನು. ಉಆವಾಗ ಬಲಿ ಚಕ್ರವರ್ತಿ ಮಹಾಯಾಗ ಮಾಡಲು ಹೊರಟಿರುವ ವಿಷಯ ದೇವತೆಗಳ ಕಿವಿಗೆ ಬಿತ್ತೋ ದೇವತೆಗಳು ನಡುಗಿ ಹೋದರು. ಇನ್ನು ನಮಗೆ ಉಳಿಗಾಲವಿಲ್ಲ, ಹೇಗಾದರೂ ಮಾಡಿ ನಮ್ಮನ್ನು ಕಾಪಾಡಿ ಎಂದು ವಿಷ್ಣುವಿನ ಮೊರೆ ಹೋದರು. ಇದನ್ನರಿತ ವಿಷ್ಣು ಬಿಯೊಂದಿಗೆ ನೇರವಾಗಿ ಯುದ್ಧ ಮಾಡುವ ಬದಲು ಉಪಾಯದಿಂದ ಸಂಹರಿಸುವ ತಂತ್ರ ರೂಪಿಸಿದ. ವಾಮನ ರೂಪದಲ್ಲಿ ಬಲಿ ಚಕ್ರವರ್ತಿಯ ಬಳಿಗೆ ಬರುತ್ತಾರೆ, ತನಗೆ ತಪಸ್ಸು ಮಾಡಲು ಮೂರು ಅಡಿ ಜಾಗವನ್ನು ನೀಡಬೇಕೆಂದು ಕೇಳುತ್ತಾರೆ. ಮಹಾದಾನಿಯಾದ ಬಲಿಚಕ್ರವರ್ತಿಗೆ ವಾಮನನನ್ನು ಕಂಡು ಕನಿಕರ ಉಂಟಾಗಿ ಜಾಗ ನೀಡಲು ಮುಂದಾಗುತ್ತಾರೆ. ಆಗ ರಾಕ್ಷಸ ಗುರು ಶುಕ್ರಾಚಾರ್ಯರಿಗೆ ವಾಮನ ರೂಪದಲ್ಲಿರುವ ವಿಷ್ಣುವಿನ ಅವತಾರ ತಿಳಿದು, ನೀನು ವಾಮನನಿಗೆ ಜಾಗ ನೀಡಲು ಹೋದುದೇ ಆದರೆ ನಿನ್ನ ಸರ್ವಸ್ವವನ್ನು ಕಳೆದುಕೊಳ್ಳುತ್ತೀಯಾ ಆದರಿಂದ ದಯವಿಟ್ಟು ಇದಕ್ಕೆ ಒಪ್ಪಬೇಡ ಎಂದು ಪರಿಪರಿಯಾಗಿ ಕೇಳಿಕೊಳ್ಳುತ್ತಾನೆ. ಅದಕ್ಕೆ ಬಲಿಚಕ್ರವರ್ತಿ ನಾನು ಕೊಟ್ಟಾö್ಮತಿಗೆ ತಪ್ಪಲಾರೆನೆಂದು, ನನ್ನ ಬಳಿಗೆ ದಾನಕ್ಕಾಗಿ ಬಂದವರನ್ನು ಬರಿ ಕೈಯಲ್ಲಿ ಕಳುಹಿಸಲಾರೆನೆಂದು, ಶುಕ್ರಚಾರ್ಯರ ಮಾತನ್ನು ಲೆಕ್ಕಿಸದೆ ತಪ್ಪಸ್ಸಿಗೆ ಸ್ಥಳ ನೀಡುತ್ತಾನೆ.

ಇದೇ ತಕ್ಕ ಸಮಯವೆಂದು ಕಾಯುತ್ತಿದ್ದ ಮಹಾವಿಷ್ಣು ತ್ರಿವಿಕ್ರಮನನಾಗಿ ಆಕಾಶದೆತ್ತರಕೆ ಬೆಳೆಯುತ್ತಾನೆ. ಅಲ್ಲದೆ ತನ್ನ ಒಂದು ಪಾದದಿಂದ ಭೂಮಿಯನ್ನು, ಇನ್ನೊಂದು ಪಾದದಿಂದ ಆಕಾಶವನ್ನು ಅಳೆದು ಇನ್ನೊಂದು ಪಾದವನ್ನು ಎಲ್ಲಿ ಇಡಲಿ ಎಂದು ಕೇಳಲು ಮಹಾದಾನಿಯಾದ ಬಲಿಚಕ್ರವರ್ತಿ ಮಾತಿಗೆ ತಪ್ಪದೆ ಯನ್ನ ಶಿರವನ್ನು ತೋರಿಸುತ್ತಾನೆ. ಅದರಂತೆ ವಾಮನ ಅವತಾರದಲ್ಲಿದ್ದ ವಿಷ್ಣು ಆತನ ತಲೆ ಮೇಲೆ ಪಾದವನ್ನಿಡುತ್ತಿದ್ದಂತೆ ಬಿಚಕ್ರವರ್ತಿ ಪಾತಾಳ ಸೇರುತ್ತಾನೆ.ಆದರೆ ಅದಕ್ಕಿಂತ ಮೊದಲು ವರ್ಷಕ್ಕೊಮ್ಮೆ ಪ್ರಜೆಗಳನ್ನು ನೋಡಲು ಅನುಮತಿಯನ್ನು ಕೋರುತ್ತಾನೆ. ಅದರಂತೆ ಇಂದಿಗೂ ತಿವೋಣಂ ದಿನ ಬಲಿಚಕ್ರವರ್ತಿ ಪ್ರಜೆಗಳನ್ನು ನೋಡಲು ಬರುತ್ತಾನೆ ಎಂಬ ನಂಬಿಕೆಯಿAದ ಮನೆಯಲ್ಲಿರುವವರು ಹೊಸ ಬಟ್ಟೆಗಳನ್ನು ಧರಿಸಿ, ಮನೆಮುಂದಿರುವ ಅಂಗಳದಲ್ಲಿ ಹೂವಿನ ರಂಗೋಲಿಯನ್ನು ಹಾಕಿ, ಮಧ್ಯೆ ದೀಪವನ್ನಿಟ್ಟು, ವಿವಿಧ ಭಕ್ಯಭೋಜನಗಳನ್ನು ಮಾಡಿ ಕುಟುಂಬದವರೊಡನೆ, ನೆಂಟರು ಇಷ್ಟರನ್ನು ಗೆಳೆಯ ಗೆಳತಿಯರನ್ನು ಕರೆದು ಒಟ್ಟಿಗೆ ಕುಳಿತು ಸಂತೋಷದಿAದ ಊಟಮಾಡುತ್ತಾರೆ. ನಂತರ ಹೆಚ್ಚಿನವರು ಊರ ಮೈದಾನದಲ್ಲಿ ಸೇರಿ ಮನರಂಜನೆಯಲ್ಲಿ ತೊಡಗುತ್ತಾರೆ. ಗಂಡಸರು ಚೆಂಬಾಟ, ಕರಡಿಯಾಟ, ಗಿಳಿಯಾಟ ದಂತಹ ಆಟವಾಡಿದರೆ ಮಕ್ಕಳು ಕುಮ್ಮಿಯಾಟ, ಉಯ್ಯಾಲೆ, ತುಂಬಿತುಳ್ಳಲ್ಲ್, ತಿರುವಾದಿರಕಳಿ ಇತ್ತಯಾದಿಯಾಗಿ ಆಡಿದರೆ ಮಹಿಳೆಯರು ಉಯ್ಯಾಲೆ, ತಿರಿವಾದಿರಕಳಿಯಂತಹ ಆಟವನ್ನು ಆಡುತ್ತಾರೆ. ಇದೇ ಸಂದರ್ಭದಲ್ಲಿ ಜಲೋತ್ಸವ(ವಳ್ಳಂಕಳಿ)ಯೂ ನಡೆಯುತ್ತದೆ. ಪ್ರತಿ ಊರಿನಲ್ಲಿರುವ ಬಡವ, ಬಲ್ಲದರೆನ್ನದೆ ಇಲ್ಲರೂ ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು ಹತ್ತು ದಿನಗಳನ್ನು ಸಂತೋಷದಿಂದ ಕಳೆಯುತ್ತಾರೆ.

✍. ಕಾನತ್ತಿಲ್ ರಾಣಿ ಅರುಣ್

ಸಾಮಾಜಿಕ ಕ್ರಾಂತಿಯ ಹರಿಕಾರ ಶ್ರೀ ನಾರಾಯಣ ಗುರು

ಸಾಮಾಜಿಕ ಕ್ರಾಂತಿಯ ಹರಿಕಾರ ಶ್ರೀ ನಾರಾಯಣ ಗುರು

ಸೆಪ್ಟಂಬರ್‌-2, ಬ್ರಹ್ಮರ್ಷಿ ನಾರಾಯಣ ಗುರುಗಳ ಜಯಂತಿ ಪ್ರಯುಕ್ತ ವಿಶೇಷ ಲೇಖನ:

  ಕೇರಳದಲ್ಲಿನ ಮನುಷ್ಯ-ಮನುಷ್ಯರ ಮಧ್ಯೆ ಜಾತಿ ತಾರತಮ್ಯಗಳನ್ನು ಕಡಿಮೆ ಮಾಡಲು ಇಡೀ ಜೀವನವನ್ನು ಮುಡಿಪಾಗಿಟ್ಟವರು ಶ್ರೀ ನಾರಾಯಣ ಗುರುಗಳು. ಕೇರಳ ಸಮಾಜದಲ್ಲಿನ ಅಸ್ಪೃಶ್ಯತೆಯ ಪಿಡುಗಿಗೆ ತಮ್ಮದೆ ಆದ ನಿಲುವಿನಲ್ಲಿ, ಸಮಾಧಾನಕರವಾದ ಉಪಾಯಗಳನ್ನು ಕಂಡುಕೊಂಡವರು ಶ್ರೀ ನಾರಾಯಣ ಗುರುಗಳು. ಜಗತ್ತಿನಲ್ಲಿರುವುದು “ಒಂದೇ ಜಾತಿ, ಒಂದೇ ಮತ ಹಾಗೂ ಒಂದೇ ದೇವರು” ಎಂಬ ತತ್ವವನ್ನು ಪ್ರತಿಪಾದಿಸಿದವರು ಶ್ರೀ ನಾರಾಯಣ ಗುರುಗಳು. ಕೇರಳದಲ್ಲಿ ಅತಿ ಹೆಚ್ಚು ಸಾಮಾಜಿಕ ಬದಲಾವಣೆಗಳನ್ನು ಮಾಡಿದ ವ್ಯಕ್ತಿ ಎಂದರೆ ಅದು ಬ್ರಹ್ಮಶ್ರೀ ನಾರಾಯಣ ಗುರುಗಳು.
ಮೇಲು ಜಾತಿಯೆಂದು ಪರಿಗಣಿಸಿಕೊಂಡವರಿಂದ 19ನೇ ಶತಮಾನದಲ್ಲಿ ಕೇರಳದ ಬಹುಸಂಖ್ಯಾತ ಜನಾಂಗದವರು ಅಸ್ಪೃಶ್ಯ ಎಂದು ಪರಿಗಣಿಸಿರುವ ವರ್ಗಕ್ಕೆ ಸೇರಿದವರಾಗಿದ್ದು, ದೇವಾಲಯದಲ್ಲಿ ಅವರಿಗೆ ಪ್ರವೇಶವಿರಲಿಲ್ಲ. ದೇವಾಲಯಗಳಿಗೆ ಮೇಲು ಜಾತಿಯವರು ನಡೆಯುವ ದಾರಿಯಲ್ಲಿ ಅವರು ನಡೆಯುವಂತಿರಲಿಲ್ಲ. ಅಸ್ಪೃಶ್ಯ ಎಂದು ಪರಿಗಣಿಸಿರುವ ಮಹಿಳೆಯರು ಆಭರಣ ಧರಿಸುವಂತಿರಲಿಲ್ಲ, ಅಂದವಾಗಿ ತಲೆ ಬಾಚುವಂತಿರಲಿಲ್ಲ, ಹೂ ಮುಡಿಯುವಂತಿರಲಿಲ್ಲ, ಕಾಲಿಗೆ ಚಪ್ಪಲಿ ಹಾಕುವಂತಿರಲಿಲ್ಲ ಮತ್ತು ಕುಪ್ಪಸ್ಸವನ್ನು ಕೂಡ ತೊಡುವಂತಿರಲಿಲ್ಲ, ಅವಿದ್ಯೆಯಿಂದಾಗಿ ಸಾಮಾಜಿಕವಾಗಿ ಕ್ರೂರ ಶೋಷಣೆಗೆ ಒಳಗಾದ ಕೆಳವರ್ಗದವರಿಗೆ ತಮ್ಮ ದುಃಸ್ಥಿತಿಯ ಅರಿವೂ ಕೂಡಾ ಇರಲಿಲ್ಲ. ಈ ಮೌಢ್ಯತೆಯನ್ನು ಕಂಡ ಸ್ವಾಮಿ ವಿವೇಕಾನಂದರೇ “ಕೇರಳವೊಂದು ಹುಚ್ಚರ ಆಸ್ಪತ್ರೆ ” ಎಂಬ ಉದ್ಘಾರ ತೆಗೆದಿದ್ದರು.

ಮಹಾಭಾರತದಲ್ಲಿ ಶ್ರೀ ಕೃಷ್ಣನು ಪ್ರಪಂಚದಲ್ಲಿ “ಅಧರ್ಮ ಯಾವಾಗ ಹೆಚ್ಚಾಗುತ್ತೋ, ಅದನ್ನು ಮಟ್ಟ ಹಾಕಿ ಧರ್ಮವನ್ನು ಪುನರ್‌ ಸ್ಥಾಪಿಸಲು ನಾನು ಮತ್ತೆ ಮತ್ತೆ ಜನ್ಮ ತಾಳುತ್ತೇನೆ” ಎಂಬುದಾಗಿ ಹೇಳುತ್ತಾರೆ. ಭಾರತದ ನೆಲದಲ್ಲಿ ಅಶಾಂತಿ, ದೌರ್ಜನ್ಯ, ಮತಾಂತರ ಹೀಗೆ ನಮ್ಮ ಆಚಾರ ಪರಂಪರೆಗೆ ಧಕ್ಕೆಯಾದ ಸಂದರ್ಭದಲ್ಲಿ ಅನೇಕ ಯುಗ ಪುರುಷರು ಜನ್ಮ ತಾಳಿದ್ದಾರೆ. ಹಾಗೆ ಜನಿಸಿದವರಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರುಗಳು ತಮ್ಮದೆ ಆದ ರೀತಿಯಲ್ಲಿ ದುಷ್ಟ ಪದ್ಧತಿಗಳನ್ನು ಹೋಗಲಾಡಿಸಿ ಜನತೆಯನ್ನು ಉದ್ಧರಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟವರು. ಸಮಾಜದಲ್ಲಿ ಸುಧಾರಣೆ ತರಲು ಯತ್ನಿಸಿ, ಹಿಂದು ಧರ್ಮ ಸಂಸ್ಕೃತಿಗಳನ್ನು ರಕ್ಷಿಸಿ ಕೆಳವರ್ಗದವರನ್ನು ಮೇಲೆತ್ತಿದ ಮಹಾನ್‌ ಸಂತ ಶ್ರೀ ನಾರಾಯಣ ಗುರುಗಳು.

  ೧೮೫5ನೇ ಯ ಇಸವಿಯ ಕೇರಳದಲ್ಲಿ ಒಣಂ ಹಬ್ಬದ ಮೂರನೆಯ ಚದಯಂ ದಿನ ಶತಭಿಷ ನಕ್ಷತ್ರದ ಹುಣ್ಣಿಮೆಯ ಶುಭ ಸಂದರ್ಭದಂದು ʻಮಾಡಾನ್ ಆಶಾನ್ʼ ಮತ್ತು ʻಕುಟ್ಟಿ ಅಮ್ಮಾಳ್ʼ ದಂಪತಿಯ ಕೊನೆಯ ಪುತ್ರನಾಗಿ ವಿಶ್ವ ಮಾನವತೆಯ ಹರಿಕಾರನೆಂದು ಎಲ್ಲೆಡೆ ಪರಿಗಣಿಸಲ್ಪಟ್ಟ, ದೀನ-ದಲಿತರಿಗೆ, ಅಸ್ಪ್ರಶ್ಯರಿಗೆ ಬದುಕಿನ ಹೊಸ ಭರವಸೆಯನ್ನು ಒದಗಿಸಿ ಕೊಟ್ಟ ಶ್ರೀ ನಾರಾಯಣ ಗುರು ಮಹಾನ್ ಸಂತನ ಜನನವಾಯಿತು . ಶ್ರೀ ಗುರುಗಳ ಬಾಲ್ಯದ ಹೆಸರು ” ನಾಣು” ಎಂದಾಗಿತ್ತು. ಅವರು ತನ್ನ ಅತಿ ಕಿರಿಯ ವಯಸ್ಸಿನಲ್ಲಿಯೇ ಅಗಾಧವಾದ ಪಾಂಡಿತ್ಯವನ್ನು ಪಡೆದಿದ್ದು, ಸದಾ ಆಧ್ಯಾತ್ಮಿಕ ಚಿಂತೆಯಲ್ಲಿಯೇ ಮಗ್ನನಾಗಿರುತ್ತಿದ್ದರು. ಮನುಕುಲದ ಸಂತಸವೆ ದೇವರಿಗೆ ಪೂಜೆ ಎಂದು ಬಾಲ್ಯದಲ್ಲಿಯೇ ದೇವರಿಗೆ ಇರಿಸಿದ್ದ ಹಣ್ಣು ಹಂಪಲುಗಳನ್ನು ತಿಂದು ತೇಗಿ ಸಂತಸಪಡುತ್ತಿದ್ದರಂತೆ “ಮನುಷ್ಯನ ಹೊಟ್ಟೆ ತುಂಬಿ ತೃಪ್ತಿಯಾದರೆ ದೇವರು ಸಿಟ್ಟಾಗುತ್ತಾನೇನು? ಅವನಿಗೆ ಅದರಿಂದ ಸಂತೋಷವಾಗುತ್ತದೆ” ಎಂದೆನ್ನುತ್ತಿದ್ದನಂತೆ. ಮೇಲು ಜಾತಿಯವರನ್ನು ಬೇಕೆಂದೆ ಮುಟ್ಟಿ “ಈಗ ನಿಮ್ಮ ಜಾತಿ ಹೋಗಿ ಬಿಡ್ತಾ ಎಲ್ಲಿ ಕಾಣಿಸೋದಿಲ್ಲ” ಎಂದು ಕೈ ತಟ್ಟಿ ನಗುತ್ತಿದ್ದ ನಾಣುವಿಗೆ ಚಿಕ್ಕಂದಿನಿಂದಲೆ ಬಡವರು ನೊಂದವರು ಅಂದರೆ ಆತ್ಮೀಯತೆ ಹಾಗೂ ಭೌತಿಕ ಸುಖಗಳ ಕಡೆಗೆ ನಿರಾಸಕ್ತಿ. ಕೇರಳದಲ್ಲಿ ಜಾತಿ, ಮತ-ಭೇದಗಳು ಅದರ ನಡುವೆ ಅಸ್ಪ್ರಶ್ಯತೆ ಹೆಚ್ಚಾಗಿದ್ದ ಕಾಲದಲ್ಲಿ, ಶ್ರೀ ನಾರಾಯಣ ಗುರು ಅವತರಿಸುತ್ತಾರೆ. ನಂತರದ ದಿನಗಳಲ್ಲಿ ಸಮಾಜದಲ್ಲಿ ಬೇರೂರಿದ್ದ ಅಸ್ಪ್ರಶ್ಯತೆಯ ವಿರುದ್ಧ ಹೋರಾಟಕ್ಕೆ ತಮ್ಮ ಜೀವನವನ್ನೇ ಮೀಸಲಿಡುತ್ತಾರೆ.

  ಬಾಲ್ಯದಲ್ಲಿ ಶಿಕ್ಷಣ ಕಲಿತು ಸಂಸ್ಕೃತ ಜ್ಞಾನ ಪಡೆದಿದ್ದ ಇವರು, ಸಂಸ್ಕೃತ ಶ್ಲೋಕವನ್ನು ಸರಾಗವಾಗಿ ಹಾಡುತ್ತಿದ್ದರು. ನಂತರ ದಿನಗಳಲ್ಲಿ ಗುರುಗಳು ಆಧ್ಯಾತ್ಮಿಕ ಜ್ಞಾನಕ್ಕಾಗಿ ಕಾಡು ಮೇಡು ಅಲೆದಾಡುವುದನ್ನು ಕಂಡ ಮನೆಯವರಿಗೆ ಇದು ವಿಚಿತ್ರವೆನಿಸಿತು. ನಾಣುವಿಗೆ ಮದುವೆ ಮಾಡಿ ಸಂಸಾರದ ಬಂಧನದಲ್ಲಿರಿಸುವ ಮನೆಯವರ ಪ್ರಯತ್ನ ವ್ಯರ್ಥವಾಯಿತು. ಮನೆಯವರು ಕರೆತಂದ ಮದುಮಗಳಿಗೆ(ಅಂದಿನ ಕಾಲದಲ್ಲಿ ಮದುಮಗಳನ್ನು ಮನೆಯವರೆ ನೋಡಿ ಇಷ್ಟಪಟ್ಟು ಕರೆತರುವ ಸಂಪ್ರದಾಯವಿತ್ತು.) ʻನಾವೆಲ್ಲ ಬೇರೆ ಬೇರೆ ಉದ್ದೇಶಕ್ಕೆ ಹುಟ್ಟಿದ್ದೇವೆ; ನಿಮ್ಮ ದಾರಿ ಬೇರೆ ನನ್ನ ದಾರಿ ಬೇರೆ ನಿಮ್ಮ ದಾರಿಯಲ್ಲಿ ಮುನ್ನಡೆಯುವುದರಿಂದ ನಿಮಗೆ ಹಿತವಾಗಬಹುದು, ನನ್ನ ದಾರಿಯಲ್ಲಿ ಹೋಗಲು ನನ್ನನ್ನು ದಯಮಾಡಿ ಬಿಟ್ಟು ಬಿಡಿʼ ಎಂದು ಮನೆಯನ್ನು ಬಿಟ್ಟು ಹೊರನಡೆದಿದ್ದ. ತದನಂತರ ಬ್ರಹ್ಮ ಸತ್ಯದ ಶೋಧಕನಾಗಿ ಸುತ್ತಾಡಿದರು. ಕಾಡಿನಲ್ಲಿ, ಗುಹೆಗಳಲ್ಲಿ ನಿರಾತಂಕವಾಗಿ ಓಡಾಡಿ ತಮಿಳುನಾಡಿನ ಮರುತ್ವ ಮಲೆಯಲ್ಲಿ ಧಾನ್ಯ ಮಗ್ನರಾಗಿರುತ್ತಿದ್ದಾಗ ಅವರ ಅಕ್ಕಪಕ್ಕದಲ್ಲಿ ಎರಡು ಚಿರತೆಗಳು ಅಂಗರಕ್ಷಕರಂತೆ ನಿಂತಿರುತ್ತಿದ್ದವಂತೆ.

  ‘ಒಂದೇ ಜಾತಿ, ಒಂದೇ ಮತ, ಒಂದೇ ದೇವರು’ ಎಂಬ ಘೋಷಣೆಯ ಮೂಲಕ ಸಾಮಾಜದಲ್ಲಿ ಕ್ರಾಂತಿಗೆ ನಾಂದಿ ಹಾಡಿದವರು ಸಮಾಜ ಸುಧಾರಕ ಶ್ರೀ ನಾರಾಯಣ ಗುರುಗಳು. ಜನರು ಶೋಷಣೆಗಳಿಂದ ಮುಕ್ತರಾಗಲು, ಜೀವನ ಸುಧಾರಿಸಲು ಸಂಘರ್ಷಕ್ಕಿಂತ ಭಿನ್ನವಾದ ಚಳವಳಿಯನ್ನು ಮುನ್ನಡೆಸಿದರು. ಕ್ರಿ.ಶ ೧೮೮೮ ರ ಶಿವರಾತ್ರಿಯ ದಿನದಂದು ಅರವಿ ಪುರಂನಲ್ಲಿ ಮೊಟ್ಟಮೊದಲು ಶಿವಾಲಯವನ್ನು ಸ್ಥಾಪಿಸುವ ಮೂಲಕ ಸ್ಥಾಪಿತ ಹಿತಾಸಕ್ತಿಗಳ ಶೋಷಣೆಯ ವ್ಯವಸ್ಥೆಯ ವಿರುದ್ಧ ಮೊದಲ ಏಟು ನೀಡಿದರು.
ಅರವಿಪುರಂನಲ್ಲಿ ದೇವಾಲಯವನ್ನು ಸ್ಥಾಪಿಸಿ ದಲಿತ ಜನಾಂಗಕ್ಕೆ ದೇವಾಲಯವನ್ನು ಪ್ರವೇಶಿಸುವ ಹಾಗೂ ಪೂಜೆಗೈಯುವ ವ್ಯವಸ್ಥೆಯನ್ನು ಕಲ್ಪಿಸಿದ ಹಾಗೆಯೇ, ಕ್ರಿ.ಶ. ೧೯೧೨ ರಂದು ಮಂಗಳೂರಿನ ಕುದ್ರೋಳಿಯಲ್ಲಿ ಶಿವಲಿಂಗವನ್ನು ಪ್ರತಿಷ್ಠೆ ಮಾಡಿ, ಶ್ರೀ ಗೋಕರ್ಣನಾಥೇಶ್ವರ ದೇವಾಲಯವನ್ನು ಸ್ಥಾಪಿಸಿದರು. ದಕ್ಷಿಣ ಭಾರತ ಮತ್ತು ಶ್ರೀಲಂಕಾದಲ್ಲಿ ಒಟ್ಟು 86 ದೇವಾಲಯಗಳ ಸ್ಥಾಪನೆಗೆ ಗುರುಗಳು ಕಾರಣೀಬೂತರಾದರು.

ಶೋಷಿತರಿಗಾಗಿಯೇ ಪ್ರತ್ಯೇಕ ಶಿವ ದೇವಾಲಯ ಸ್ಥಾಪಿಸುತ್ತಿದ್ದ ನಾರಾಯಣ ಗುರುಗಳಿಗೆ ನಂಬೂದರಿ ಬ್ರಾಹ್ಮಣರು ಆಕ್ಷೇಪ ವ್ಯಕ್ತಪಡಿಸಿ; ಕೆಳಜಾತಿಯ ಈಳವ ಗುರುವೊಬ್ಬನಿಗೆ ಶಿವ ದೇವಾಲಯ ಸ್ಥಾಪನೆಯ ಅಧಿಕಾರವಿದೆಯೇ? ಎಂದು ಪ್ರಶ್ನಿಸಿದ್ದರು. ಆಗ ಶ್ರೀ ನಾರಾಯಣ ಗುರುಗಳು “ನಮ್ಮ ಶಿವನು ಈಳವ ಶಿವನಾಗಿದ್ದು, ಬ್ರಾಹ್ಮಣಶಿವನಲ್ಲ…” ಎಂದು ಸ್ವಾರಸ್ಯಕರವಾದ ಉತ್ತರವನ್ನು ನೀಡಿದ್ದರು. ಶಿವನು ಯಾವ ಜಾತಿಗೂ ಸೇರಿದವನಲ್ಲ. ಶಿವತತ್ವ ತಿಳಿಯುವ ಹಕ್ಕು ಯಾವುದೇ ಜಾತಿಯ ಗುತ್ತಿಗೆಯಲ್ಲ ಎಂಬ ಅವರ ತಿರುಗೇಟು ತೀಕ್ಷ್ಣವಾಗಿತ್ತು.
ಅದ್ವೈತ ತತ್ವವನ್ನು ಒಪ್ಪಿ, ಬದುಕಿನಲ್ಲಿ ಅಳವಡಿಸಿಕೊಂಡಿದ್ದ ಗುರುಗಳು ಪ್ರಗತಿಪರ ಧೋರಣೆಯೊಂದಿಗೆ ದೇವಾಲಯಗಳನ್ನು ಸ್ಥಾಪಿಸಿದರು. ದೇವಸ್ಥಾನಗಳು ಮನುಷ್ಯನ ವ್ಯಕ್ತಿತ್ವದ ವಿಕಾಸ ಹಾಗೂ ಆಧ್ಯಾತ್ಮಿಕ ಸಾಧನೆಯ ಕೇಂದ್ರವಾಗಬೇಕೆಂದು ಶ್ರಮಿಸಿದರು. ತಾವು ಸ್ಥಾಪಿಸಿದ ಶಾಲೆಗಳಲ್ಲಿ ಎಲ್ಲ ವರ್ಗದ ಜನರಿಗೂ ಶಾಸ್ತ್ರಪೂಜೆ ಹಾಗು ಅರ್ಚನಾ ವಿಧಿಗಳನ್ನು ಕಲಿಯುವ ಅವಕಾಶ ಕಲ್ಪಿಸಿದರು. ಆದಿ ಶಂಕರರು ಅದ್ವೈತ ತತ್ವವನ್ನು ಪ್ರತಿಪಾದನೆ ಮಾಡಿದರು. ಆದರೆ ಶ್ರೀ ನಾರಾಯಣ ಗುರುಗಳು ಅದ್ವೈತ ತತ್ವವನ್ನು ಮನುಷ್ಯ ಜೀವನದಲ್ಲಿ ಕಾರ್ಯರೂಪಕ್ಕೆ ತಂದರು. ಇದು ಜಗತ್ತಿನ ಇತಿಹಾಸದಲ್ಲೇ ಒಂದು ಮೈಲಿಗಲ್ಲಾಗಿದೆ.

ಕೇರಳ ರಾಜ್ಯದ ಸಾಮಾಜಿಕ ದುಸ್ಥಿತಿಯನ್ನು ಕಂಡ ಸ್ವಾಮಿ ವಿವೇಕಾನಂದರು ಡಾ| ಪಲ್ಪು ಎಂಬ ಈಡಿಗ ಜನಾಂಗದ ಗಣ್ಯರಿಂದ ಅರಿತು ಡಾ| ಪಲ್ಪುರವರಿಗೆ ಒಂದು ಗಂಭೀರ ಸಲಹೆಯನ್ನು ಮುಂದಿಡುತ್ತಾರೆ; ʻನೀವು ನಿಮ್ಮ ಜನಾಂಗದವರಾದ ಚಾರಿತ್ರ್ಯವಂತನೂ, ಯೋಗ್ಯನೂ ಆದ ವ್ಯಕ್ತಿಯನ್ನು ಮಾರ್ಗದರ್ಶಕನಾಗಿ ಮಾಡಿಕೊಂಡು ಆತನನ್ನು ಅನುಸರಿಸುವುದು ಹೆಚ್ಚು ಕ್ಷೇಮ ಎಂದೆನಿಸುತ್ತದೆ. ಆಗ ನಿಮ್ಮ ಬಹಳಷ್ಟು ಸಮಸ್ಯೆಗಳು ಪರಿಹಾರ ಕಾಣುತ್ತವೆ!ʼ ಎಂಬ ಸ್ವಾಮೀಜಿಯವರ ಸಲಹೆಯನ್ನು ಜವಾಬ್ದಾರಿಯುತವಾಗಿ ಸ್ವೀಕರಿಸಿ ಕಾರ್ಯೋನ್ಮುಖರಾದ ಡಾ| ಪಲ್ಪು ಯೋಗ್ಯ ವ್ಯಕ್ತಿಗಾಗಿ ತೀವ್ರ ಹುಡುಕಾಟ ನಡೆಸಿ ಶ್ರೀ ನಾರಾಯಣ ಗುರುಗಳನ್ನು ಕಂಡುಕೊಂಡರು. ಮುಂದಿನ ದಿನಗಳಲ್ಲಿ ಶ್ರೀ ನಾರಾಯಣ ಗುರುಗಳು ಹಿಂದುಳಿದ ಜನಾಂಗದವರ ಏಳಿಗೆಗಾಗಿ ಶ್ರಮಿಸಿ ಪ್ರಸಿದ್ಧರಾದರು. ಡಾ| ಪಲ್ಪುರವರು ಮೈಸೂರು ಸಂಸ್ಥಾನದ ದಿವಾನರಾಗಿದ್ದರು.
“ಕೇರಳದ ನಾರಾಯಣ ಗುರುಗಳಿಗೆ ಸರಿಸಮಾನರಾದ ಮಹಾಪುರುಷನನ್ನು ನಾನು ಎಲ್ಲೂ ಕಂಡಿಲ್ಲ” ಎಂದು ವಿಶ್ವಕವಿ ರವಿಂದ್ರನಾಥ ಠಾಗೂರರು ಉದ್ಗರಿಸಿದ್ದರು. ಗಾಂಧೀಜಿಯವರು ತಮ್ಮ ಹರಿಜನೋದ್ಧಾರಕ್ಕಾಗಿ ಸ್ಫೂರ್ತಿ ಪಡೆದದ್ದು ಶ್ರೀ ನಾರಾಯಣ ಗುರುಗಳಿಂದ ಎಂದು ನುಡಿದ್ದಿದ್ದರು. “ಶ್ರೀ ನಾರಾಯಣ ಗುರುಗಳ ಸಾಮಾಜಿಕ ಕಾರ್ಯಕ್ರಮಗಳಿಗೂ ಗಾಂಧೀಜಿಯವರ ಸಾಮಾಜಿಕ ಚಟುವಟಿಕೆಗಳಿಗೂ ಬಹಳಷ್ಟು ಹೋಲಿಕೆ ಇರುವುದನ್ನು ನಾವು ಕಾಣಬಹುದು” ಎಂದು ರೋಮನ್ ರಾಲೆಂಡ್ ಉದ್ಗರಿಸಿದ್ದಾರೆ.

ಬ್ರಹ್ಮ ಋಷಿ ಶ್ರೀ ನಾರಾಯಣ ಗುರುಗಳು ತಮ್ಮ ಸಮಾಜ ಸುಧಾರಣೆಯಿಂದಾಗಿ ದುಷ್ಟ ಪದ್ಧತಿಗಳಿಂದ ಜನತೆಯನ್ನು ಉದ್ಧರಿಸಲು ಜೀವನದ ಕೊನೆಯವರೆಗೂ ನಿಸ್ವಾರ್ಥ ಸೇವೆಯನ್ನು ಮಾಡಿದ್ದಾರೆ. ಅನೇಕ ಸುಧಾರಣೆ ತರಲು ಯತ್ನಿಸಿ, ಧರ್ಮ ಸಂಸ್ಕೃತಿಗಳನ್ನು ರಕ್ಷಿಸಿಸುವ ಮಹದೋಪಕಾರ ಮಾಡಿದ್ದಾರೆ. ಈ ಮಹಾತ್ಮರ ಪುಣ್ಯ ಕಾರ್ಯಗಳಿಂದ ನಮ್ಮ ಸಮಾಜ ಇಂದಿಗೂ ಬಲಿಷ್ಠವಾಗಿದೆ. ಇದರಿಂದ ನಾವೆಲ್ಲರೂ ಶ್ರೀ ನಾರಾಯಣ ಗುರುಗಳ ತತ್ವ, ಸಿದ್ದಂತಾ ಮತ್ತು ಆದರ್ಶಗಳನ್ನು ಮುಂದುವರಿಸಿಕೊಂಡು ಹೋಗುವ ಕೆಲಸವಾಗಬೇಕಾಗಿದೆ. ಇಂತಹ ಮಹಾನ್ ಚೇತನವೊಂದನ್ನು ಗುರುವಾಗಿ ಪೂಜಿಸುವುದು ನಮ್ಮೆಲ್ಲರ ಭಾಗ್ಯ. ಅವರು ಕೇವಲ ಈಳವ ಅಥವಾ ಬಿಲ್ಲವ ಜನಾಂಗಕ್ಕೆ ಸೀಮಿತವಾದರೆ ಅವರ ತತ್ವಗಳಿಗೆ ಅನ್ಯಾಯವಾಗುತ್ತದೆ. ಇನ್ನೂ ಮುಖ್ಯವಾಗಿ ಗುರುವನ್ನು ಕೇವಲ ಮೂರ್ತಿ ಮಾಡಿ ಕೇವಲ ಕಲ್ಲಿಗೆ ಪೂಜೆ ಸಲ್ಲುವಂತಾಗದಿರಲಿ. ಅವರ ಸಂದೇಶಗಳನ್ನು ಮೈಗೂಡಿಸಿಕೊಂಡು ನಮ್ಮಲ್ಲಿ ಅಳವಡಿಸಿಕೊಳ್ಳೋಣ. ಸಾಧ್ಯವಾದಷ್ಟು ಅವರು ಹೇಳಿಕೊಟ್ಟ ಶಾಂತಿ ಪಥದಲ್ಲಿ ನಡೆಯೋಣ. ಆ ದಾರಿಯಲ್ಲಿ ನಡೆದು ಕೃತಾರ್ಥರಾಗಲು ಪ್ರಯತ್ನಿಸೋಣ. ಶ್ರೀ ನಾರಾಯಣ ಗುರುಗಳು ಕೇವಲ ಒಂದು ಜನಾಂಗದ ಗುರುವಲ್ಲ, ಮಾನವ ಜನಾಂಗದ ಗುರು, ವಿಶ್ವ ಮಾನವ ಗುರು, ಸಾಮಾಜಿಕ ಮತ್ತು ಧಾರ್ಮಿಕ ಕ್ರಾಂತಿಯ ಹರಿಕಾರರು.

ಈ ಮಹಾನ್ ಕ್ರಾಂತಿಕಾರಿ ಸಂತ ಮತ್ತು ಸಾಮಾಜಿಕ ಸುಧಾರಕ ಶ್ರೀ ನಾರಾಯಣ ಗುರುಗಳ ಜನ್ಮಸ್ಥಳವು ಕೇರಳದ ತಿರುವನಂತಪುರಂನಿಂದ 7 ಮೈಲಿ ದೂರದಲ್ಲಿರುವ ಚೆಂಬಳಂತಿ ಎಂಬ ಗ್ರಾಮವಾಗಿದ್ದು, ಇಂದಿಗೂ ಅಲ್ಲಿ ಅವರು ಜನಿಸಿದ ಮನೆಯನ್ನು ಹಾಗೆಯೇ ಸಂರಕ್ಷಿಸಿ ಇಡಲಾಗಿದೆ. ಶ್ರೀ ನಾರಾಯಣ ಗುರುಗಳು ಸಣ್ಣ ಗುಡಿಸಲಿನಂತಹ ಮನೆಯಲ್ಲಿ ಜನಿಸಿದರೂ, ಇಂದು ವಿಶ್ವ ವಿಖ್ಯಾತರಾದ ಬ್ರಹ್ಮ ಋಷಿಗಳಾಗಿದ್ದಾರೆ.

✍. ಕಾನತ್ತಿಲ್ ರಾಣಿ ಅರುಣ್

ಸಹೋದರ-ಸಹೋದರಿಯರ ಭಾಂದವ್ಯದ ಸಂಕೇತ ರಕ್ಷಾ ಬಂಧನ

ಸಹೋದರ-ಸಹೋದರಿಯರ ಭಾಂದವ್ಯದ ಸಂಕೇತ ರಕ್ಷಾ ಬಂಧನ

ರಕ್ಷಾ ಬಂಧನ ಹಬ್ಬವು ಭಾರತೀಯರು ಶ್ರಾವಣ ಮಾಸದಲ್ಲಿ ಆಚರಿಸುವ ಒಂದು ಹಬ್ಬ. ಆ ದಿನ ಸಹೋದರಿಯರು ತಮ್ಮ ಸಹೋದರನ ಮುಂಗೈಗೆ ರಾಖಿಯನ್ನು ಕಟ್ಟಿ ಆರತಿ ಮಾಡಿ, ಸೋದರನ ಆಶೀರ್ವಾದವನ್ನು ಬೇಡುತ್ತಾರೆ. ತಂಗಿಯ ರಕ್ಷಣೆ ಅಣ್ಣನಿಂದ, ಅಣ್ಣನ ರಕ್ಷಣೆ ತಂಗಿಯಿಂದ ಎಂಬ ಪರಸ್ಪರ ಭ್ರಾತೃತ್ವದ ಭಾವನೆಯನ್ನು ದಟ್ಟಗೊಳಿಸುವ ಹಬ್ಬ ಇದಾಗಿದೆ. ರಕ್ಷಾ ಬಂಧನ ಹಬ್ಬವು ಸಹೋದರ-ಸಹೋದರಿಯರ ನಡುವಿನ ಪವಿತ್ರ ಪ್ರೀತಿಯ ಸಂಕೇತವಾಗಿದೆ. ಈ ಪ್ರೀತಿಯಲ್ಲಿ ಆತ್ಮೀಯತೆ, ಮಧುರತೆ, ತ್ಯಾಗ, ಸಂರಕ್ಷಣೆ ಮತ್ತು ಸಮರ್ಪಣೆ ಸಮಾವೇಶಗೊಂಡಿದೆ.

ಪುರಾಣದಲ್ಲಿ ದ್ರೌಪದಿಯು ತನ್ನ ಸೀರೆಯ ನೂಲನ್ನು ಹರಿದು ಯುದ್ಧದಲ್ಲಿ ಗಾಯಗೊಂಡ ಶ್ರೀಕೃಷ್ಣ ಪರಮಾತ್ಮನ ಕೈಗೆ ಕಟ್ಟಿದ್ದಳಂತೆ. ಆಗ ಏನೂ ಉಡುಗೊರೆ ಕೊಡದಿದ್ದರೂ, ದ್ರೌಪದಿಯ ವಸ್ತ್ರಾಪಹರಣವಾದಾಗ ಹೆಣ್ಣಿನ ಅತಿದೊಡ್ಡ ಆಸ್ತಿಯಾದ ಅವಳ ಮಾನ ಕಾಪಾಡಿದವನು ಅವಳ ಅಣ್ಣನಾದ ಶ್ರೀಕೃಷ್ಣ ಪರಮಾತ್ಮನೇ. ಇಷ್ಟೆಲ್ಲಾ ಕತೆಯಿದ್ದರೂ ರಕ್ಷಾ ಬಂಧನಕ್ಕೆ ಹೆಚ್ಚು ಮೆರಗು ಬಂದಿರುವುದು ರಾಣಿ ಕರ್ಣಾವತಿ – ಹುಮಾಯುನ್ ರಕ್ಷಾ ಪ್ರಕರಣದಿಂದ. ಬಹಾದುರ್ ಷಾ ನಿಂದ ತೊಂದರೆ ಅನುಭವಿಸುತ್ತಿದ್ದ ರಾಣಿ ಕರ್ಣಾವತಿ ಮೊಘಲ್ ದೊರೆ ಹುಮಾಯುನ್ ಗೆ ರಕ್ಷೆ ಕಳುಹಿಸಿ, ರಕ್ಷಣೆ ಯಾಚಿಸಿದಳಂತೆ. ಹುಮಾಯುನ್. ಬಹಾದುರ್ ಷಾ ನನ್ನು ಯುದ್ಧದಲ್ಲಿ ಮಣಿಸಿ, ಕರ್ಣಾವತಿ ಕಳೆದುಕೊಂಡ ರಾಜ್ಯವನ್ನು ಅವಳ ಮಗನಿಗೆ ದೊರಕುವಂತೆ ಮಾಡಿದನಂತೆ. ಹಾಗೆಯೇ ಯಮರಾಜನ ತಂಗಿ ಯಮುನಾ ಅಮರಳಾಗಿ ಉಳಿಯಲು ಬಹುತೇಕ ಈ ರಕ್ಷೆಯೇ ಕಾರಣ. ಯಮರಾಜನೂ ಇದನ್ನೇ ಹೇಳಿದ್ದಾನೆ. ಭೂಲೋಕದಲ್ಲಿ ಯಾರು ತಮ್ಮ ತಂಗಿಗೆ ರಕ್ಷೆ ನೀಡುತ್ತಾರೋ ಅವರು ಅಮರರಾಗಿ ಉಳಿಯುತ್ತಾರೆಂದು, ಹಾಗಾದರೆ ಸೋದರಿ ಕಟ್ಟುವ ರಾಖಿ ನಿಮ್ಮ ಶ್ರೇಯಸ್ಸಿಗಾಗಿಯೂ ಹೌದು. ನಿಮ್ಮಿಂದ ಅವಳಿಗೆ ಸಿಗುವ ಶ್ರೀರಕ್ಷೆಗಾಗಿಯೂ ಹೌದು.

ರಕ್ಷಾ ಬಂಧನ ಆಚರಣೆಗೆ ಭಾರತೀಯ ಸಂಸ್ಕೃತಿಯಲ್ಲಿ ತನ್ನದೇ ಆದ ಮಹತ್ವವಿದೆ. ಪ್ರತಿಯೊಬ್ಬ ಸಹೋದರಿಯು ಸಮಾಜದ ದುಷ್ಟಶಕ್ತಿಗಳಿಂದ ರಕ್ಷಿಸೆಂದು ತನ್ನ ಸಹೋದರನ ಮುಂಗೈಗೆ ರಾಖಿಯನ್ನು ಕಟ್ಟುತ್ತಾಳೆ. ಪ್ರತಿಯೊಬ್ಬ ಸಹೋದರನೂ ಈ ಸಮಯದಲ್ಲಿ ಸಹೋದರಿಯೆಡೆಗೆ ತನ್ನ ಭ್ರಾತತ್ವ ಪ್ರೇಮವನ್ನು ಉಜ್ವಲಗೊಳಿಸಬೇಕೆಂಬುದು ರಕ್ಷಾಬಂಧನ ಹಬ್ಬದ ನೀತಿಯಾಗಿದೆ. ಸೋದರ ಸಂಬಂಧವನ್ನು ಎತ್ತಿಹಿಡಿಯುವುದು ಈ ಹಬ್ಬದ ವೈಶಿಷ್ಟ್ಯ. ಎಲ್ಲಕಿಂತಲೂ ಮಿಗಿಲಾದ ಈ ಸಂಬಂಧವನ್ನು ಸೋದರಿಯರು ಒಡಹುಟ್ಟಿದ ಅಣ್ಣಂದರಿಗೆ, ತಮ್ಮಂದರಿಗೆ ಕಡ್ಡಾಯವಾಗಿ ಕಟ್ಟಲೇಬೇಕು ಎಂದು ಎಲ್ಲೂ ಶಾಸ್ತ್ರವಿಲ್ಲದಿದ್ದರೂ, ತಮ್ಮ ಪ್ರೀತಿ ವಿಶ್ವಾಸವನ್ನು ತನ್ಮೂಲಕ ವ್ಯಕ್ತಪಡಿಸುತ್ತಾರೆ. ಅದಕ್ಕೆ ಪ್ರತಿಯಾಗಿ ಸೋದರಿಯರಿಗೆ ಸೋದರನು ಒಂದು ಪುಟ್ಟ ಕಾಣಿಕೆಯನ್ನು ಕೊಡುತ್ತಾನೆ. ರಕ್ಷಾಬಂಧನವು ಸಹೋದರ ಮತ್ತು ಸಹೋದರಿಯರ ನಡುವಿನ ಅನುಬಂಧವನ್ನು ಹೆಚ್ಚಿಸಲು ನೆರವಾಗುತ್ತದೆ. ಇದು ದೂರದಲ್ಲಿರುವ ಕುಟುಂಬ ಸದಸ್ಯರನ್ನು ಹತ್ತಿರಕ್ಕೆ ತರುತ್ತದೆ.

ರಾಖಿಯನ್ನು ಕಟ್ಟುವ ವಿಧಿ ಮತ್ತು ಆಧ್ಯಾತ್ಮಿಕ ರಹಸ್ಯ:

ಸಹೋದರಿ ತನ್ನ ಸಹೋದರನ ಬಲಗೈಗೆ ರಾಖಿಯನ್ನು ಕಟ್ಟಿ, ಹಣೆಗೆ ತಿಲಕವನ್ನಿಟ್ಟು ಸಿಹಿ ತಿನಿಸಿ ಶುಭ ಹಾರೈಸಿ ಪ್ರೀತಿಯ ಉಡುಗೊರೆ ಪಡೆದುಕೊಳ್ಳುವಳು. ಇಲ್ಲಿ ರಾಖಿ ಪವಿತ್ರತೆಯ ಕಂಕಣ ಕಟ್ಟಿಕೊಳ್ಳುವ ಸಂಕೇತವಾಗಿದೆ. ತಿಲಕ ನಮ್ಮ ಹಣೆಯ ಮಧ್ಯದಲ್ಲಿ ಅಜರ-ಅಮರ ಆತ್ಮನಿರುವ ಸಂಕೇತವಾಗಿದೆ. ಸಿಹಿ ನಮ್ಮ ಭಾವನೆ, ವಿಚಾರ, ದೃಷ್ಟಿ, ಮಾತು, ಕರ್ಮ, ಸಂಬಂಧ, ವ್ಯವಹಾರಗಳು ಮಧುರ ಮತ್ತು ಪವಿತ್ರ ಪಾವನವಾಗಿರಲೆಂಬುದನ್ನು ತಿಳಿಸುತ್ತದೆ. ರಾಖಿ ಕಟ್ಟಿಸಿಕೊಂಡ ಸಹೋದರ ಸಾಮಾನ್ಯವಾಗಿ ಏನಾದರೂ ಉಡುಗೊರೆ ಕೊಡುವುದು ರೂಢಿ. ಹಣ ಅಥವಾ ವಸ್ತುವಿನ ಉಡುಗೊರೆ ಕೊಡುವುದು ಸುಲಭ. ಆದರೆ, ನಿಜವಾದ ಉಡುಗೊರೆ ನಮ್ಮಲ್ಲಿನ ವಿಷಯ ವಿಕಾರಗಳನ್ನು ಪರಮಾತ್ಮನಿಗೆ ಈ ಪವಿತ್ರ ಪಾವನ ಪರ್ವದಲ್ಲಿ ದಾನವಾಗಿ ಕೊಡುವುದು.

ಈ ಹಬ್ಬವನ್ನು ಆಧ್ಯಾತ್ಮಿಕವಾಗಿ ನೋಡಿದರೆ, ಈ ಹಬ್ಬವು ನಡೆ, ನುಡಿ ಮತ್ತು ಕ್ರಿಯೆಗಳಲ್ಲಿ ಪರಿಶುದ್ಧತೆಯನ್ನು ಹೊಂದುವಂತೆ ಸೂಚಿಸುತ್ತದೆ. ಬಲಗೈಗೆ ಕಟ್ಟಿಕೊಳ್ಳುವ ಈ ಪವಿತ್ರ ದಾರವಾದ ರಾಖಿಯು ಪ್ರತಿಯೊಬ್ಬರಿಗೂ ಪ್ರಪಂಚದ ಐಹಿಕ ಸುಖ-ಭೋಗಗಳಿಗೆ ಮರುಳಾಗದಿರುವಂತೆ ನೆನಪಿಸುತ್ತ ಇರುತ್ತದೆ. ಇನ್ನು ರಾಖಿಯನ್ನು ಕಟ್ಟುವ ಸೋದರಿಯು ತನ್ನ ಸೋದರನಲ್ಲಿ ತನ್ನ ಧಾರ್ಮಿಕ ನಂಬಿಕೆ ಮತ್ತು ಹಂಬಲಗಳನ್ನು ಕಾಣುತ್ತಾಳೆ. ಸದಾ ಆತನ ಶ್ರೇಯಸ್ಸನ್ನು ಕೋರಿ ಕಟ್ಟುವ ಈ ರಾಖಿಯು ಒಂದು ನಿಷ್ಕಲ್ಮಶವಾದ ಪ್ರೀತಿಯ ಧ್ಯೋತಕವಾಗಿ ನಿಲ್ಲುತ್ತದೆ. ಈ ಬಂಧನ ಆಕೆಯ ಭರವಸೆ, ನಂಬಿಕೆ ಹಾಗು ಶಕ್ತಿಯನ್ನು ಸಹೋದರನಿಗೆ ನೆನಪು ಮಾಡಿಕೊಡುತ್ತದೆ.

ನಾವೆಲ್ಲರೂ ರಕ್ಷಾ ಬಂಧನದ ಸತ್ಯಾರ್ಥವನ್ನು, ಆಧ್ಯಾತ್ಮಿಕ ಹಿನ್ನೆಲೆಯನ್ನು ತಿಳಿದು ಯತಾರ್ಥ ರೀತಿಯಲ್ಲಿ ಆಚರಿಸುತ್ತ ಸಂಪೂರ್ಣ ಸ್ವಾತಂತ್ರ್ಯದ, ಸತ್ಯವಾದ ಬದುಕನ್ನು ನಡೆಸುತ್ತ ಸುಖ-ಶಾಂತಿಯ ಜಗತ್ತನ್ನು ಪುನರ್ ಸ್ಥಾಪಿಸುವ ಭಗವಂತನ ಮಹಾಕಾರ್ಯದಲ್ಲಿ ತೊಡಗೋಣ. ಸರ್ವರಿಗೂ ರಕ್ಷಾ ಬಂಧನದ ಶುಭಾಶಯಗಳು.

✍. ಕಾನತ್ತಿಲ್ ರಾಣಿ ಅರುಣ್

ನಾನೊಬ್ಬ ಅಪರಿಚಿತನಿಗಾಗಿ ನನ್ನ ಪ್ರಾಣವನ್ನು ಅರ್ಪಿಸಿದ್ದೇನೆ. ಆ ಅಪರಿಚಿತ ಬೇರಾರೂ ಅಲ್ಲ, ನೀನೇ!

“ನಾನೊಬ್ಬ ಅಪರಿಚಿತನಿಗಾಗಿ ನನ್ನ ಪ್ರಾಣವನ್ನು ಅರ್ಪಿಸಿದ್ದೇನೆ. ಆ ಅಪರಿಚಿತ ಬೇರಾರೂ ಅಲ್ಲ, ನೀನೇ!”

{ಜುಲೈ 26, 21ನೇ ವರ್ಷದ ಕಾರ್ಗಿಲ್ ವಿಜಯ ದಿವಸ ವಿಶೇಷ ಲೇಖನ}

ಕಾರ್ಗಿಲ್‌ ವಿಜಯೋತ್ಸವಕ್ಕೆ 21 ವರ್ಷಗಳು. ಕಾರ್ಗಿಲ್ ಯುದ್ಧ 1999ರ ಮೇನಲ್ಲಿ ಆರಂಭವಾಗಿ ಎರಡು ತಿಂಗಳ ಕಾಲ ನಡೆಯಿತು. ಲೇಹ್‌ ಹೆದ್ದಾರಿವರೆಗೆ ಆಕ್ರಮಿಸಿಕೊಂಡಿದ್ದ ಪಾಕ್ ಸೇನೆಯನ್ನು ಹಿಮ್ಮೆಟ್ಟಿಸುವಲ್ಲಿ ಭಾರತೀಯ ಸೇನೆ ಯಶಸ್ವಿಯಾಯಿತು. ಈ ಹೋರಾಟವು ಪಾಕಿಸ್ತಾನದ ವಿರುದ್ಧ ನಾಲ್ಕನೇ ನೇರ, ಸಶಸ್ತ್ರ ಸಂಘರ್ಷವಾಗಿತ್ತು. ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್‌ನೊಳಗೆ ನುಸುಳಿದವರು ನಮ್ಮ ಸೈನಿಕರಲ್ಲ ಎನ್ನುತ್ತಲೇ ಇದ್ದ ಪಾಕಿಸ್ತಾನವು, ಸದ್ದಿಲ್ಲದೆ ಭಾರತದ ಗಡಿಯೊಳಕ್ಕೆ ಉಗ್ರಗಾಮಿಗಳ ಸೋಗಿನಲ್ಲಿ ಒಳಗೆ ನುಗ್ಗಿತ್ತು. ಸೇನೆಯ ಅಧಿಕಾರಿಗಳು ಸೇರಿದಂತೆ 527 ಮಂದಿ ಭಾರತೀಯ ಯೋಧರು ಹುತಾತ್ಮರಾದರು. ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ ನೀಡಿದ ಭಾರತೀಯ ಸೇನೆ ಜುಲೈ 26ರಂದು ’ಆಪರೇಷನ್‌ ವಿಜಯ್‌’ ಯಶಸ್ವಿ ಎಂದು ಘೋಷಿಸಿತು. ಅಂದಿನಿಂದ “ಕಾರ್ಗಿಲ್‌ ವಿಜಯೋತ್ಸವ” ದಿನ ಆಚರಿಸಲಾಗುತ್ತಿದೆ.

ಇಪ್ಪತ್ತು ವರ್ಷಗಳ ಹಿಂದೆ, ಭಯೋತ್ಪಾದಕರ ನೆರವು ಪಡೆದು ಭಾರತವನ್ನೇ ಕಬಳಿಸಲು ಹೊರಟಿದ್ದ ಪಾಕಿಸ್ತಾನದ ಸಂಚನ್ನು ಪುಡಿಗಟ್ಟಿದ ನಮ್ಮ ಭಾರತದ ಹೆಮ್ಮೆಯ ವೀರಪುತ್ರರು, ತ್ಯಾಗ ಬಲಿದಾನ ಮಾಡಿ, ವೀರಾವೇಶದಿಂದ ಹೋರಾಡಿ, ನಮ್ಮನ್ನೆಲ್ಲ ರಕ್ಷಿಸಿದ್ದಾರೆ. ಅಂಥ ವೀರ ಯೋಧರಿಗೆ ನಮನ ಸಲ್ಲಿಸಲು ಪ್ರತಿ ವರ್ಷ ಜುಲೈ 26ನ್ನು ಕಾರ್ಗಿಲ್‌ ದಿವಸವನ್ನಾಗಿ ಆಚರಿಸಲಾಗುತ್ತದೆ. ಕಾರ್ಗಿಲ್‌ ವಿಜಯ ದಿವಸದ ದಿನ ಪ್ರತಿಯೊಬ್ಬ ಭಾರತೀಯರು ಸೇನಾ ಪಡೆಯ ಧೈರ್ಯ ಮತ್ತು ಸಾಹಸಗಳನ್ನು ಸ್ಮರಿಸುತ್ತಾರೆ. ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ನಮ್ಮ ನಮನಗಳು ಮತ್ತು ಅವರ ಕುಟುಂಬದವರಿಗೆ ಋಣ ನಮ್ಮೆಲ್ಲರ ಮೇಲಿದೆ. ಕಾರ್ಗಿಲ್ ಯುದ್ಧದಲ್ಲಿ ವೀರಾವೇಶದಿಂದ ಹೋರಾಡಿದ ಮತ್ತು ಭಾರತೀಯರ ರಕ್ಷಣೆಗೆ ಕಟಿಬದ್ಧರಾದ ನಮ್ಮ ಸೈನಿಕರು ನಮ್ಮ ದೇಶದ ಹೆಮ್ಮೆ.

“ನಾನೊಬ್ಬ ಅಪರಿಚಿತನಿಗಾಗಿ ನನ್ನ ಪ್ರಾಣವನ್ನು ಅರ್ಪಿಸಿದ್ದೇನೆ. ಆ ಅಪರಿಚಿತ ಬೇರಾರೂ ಅಲ್ಲ, ನೀನೇ!” ಕಾರ್ಗಿಲ್ ಯುದ್ಧದಲ್ಲಿ ಮಡಿದ ಯೋಧನೊಬ್ಬನ ಸಮಾಧಿಯ ಮೇಲೆ ಬರೆದಿದ್ದ ಸಾಲುಗಳಿವು! ಕಾರ್ಗಿಲ್ ವಿಜಯ ದಿವಸ ಎಂಬುದು ಭಾರತೀಯ ಸೇನಾ ಇತಿಹಾಸದ ಪರ್ವಕಾಲ. ನಮಗಾಗಿ, ನಮ್ಮ ಪರಿಚಯವೇ ಇಲ್ಲದ ವ್ಯಕ್ತಿಯೊಬ್ಬ ರಾತ್ರಿ-ಹಗಲೆನ್ನದೆ ಶತ್ರು ರಾಷ್ಟ್ರದ ವೈರಿಗಳೊಂದಿಗೆ ಸೆಣೆಸಾಡುತ್ತಾನೆ, ಮಳೆ-ಚಳಿ ಎನ್ನದೆ ಗಡಿ ಕಾಯುತ್ತಾನೆ, ಹೊಟ್ಟೆಗೆ ಸರಿಯಾಗಿ ಆಹಾರವೇ ಸಿಕ್ಕದಿದ್ದರೂ ದೇಶಕ್ಕಾಗಿ ಹಪಹಪಿಸುತ್ತಾನೆ! ಕೊನೆಗೊಂದು ದಿನ ಮಡಿಯುತ್ತಾನೆ! ಎಂಥ ವಿಚಿತ್ರ? ಇಂಥವರ ಋಣ ತೀರಿಸುವುದಕ್ಕೆ ಯಾರಿಂದ ಸಾಧ್ಯ? ಎಂಥ ಸಂಕಷ್ಟದ ಪರಿಸ್ಥಿತಿಯಲ್ಲೂ ಯುದ್ಧ ಗೆದ್ದ ನಮ್ಮವರ ಶೌರ್ಯಕ್ಕೆ ಒಂದು ಸಲಾಂ

ಕಾರ್ಗಿಲ್‌ ಯುದ್ಧದ ಬಗ್ಗೆ ಒಂದಿಷ್ಟು ಮಾಹಿತಿ:
1999 – ಮೇ 3: ಕಾರ್ಗಿಲ್‌ನೊಳಗೆ ಪಾಕಿಸ್ತಾನ ಸೇನೆ ನುಗ್ಗಿದ್ದನ್ನು ಪತ್ತೆ ಹಚ್ಚಿದ ಕುರಿಗಾಹಿಗಳು
ಮೇ 5: ಭಾರತೀಯ ಸೇನೆ ರವಾನೆ- ಭಾರತದ ಐವರು ಯೋಧರನ್ನು ಸೆರೆ ಹಿಡಿದ ಪಾಕ್‌ ಚಿತ್ರಹಿಂಸೆ ನೀಡಿ ಕೊಂದು ಹಾಕಿತು.
ಮೇ 9: ಪಾಕಿಸ್ತಾನದಿಂದ ಶೆಲ್‌ ದಾಳಿ, ಕಾರ್ಗಿಲ್‌ನಲ್ಲಿದ್ದ ಸೇನಾ ಶಸ್ತ್ರಾಗಾರಕ್ಕೆ ಹಾನಿ
ಮೇ10: ಡ್ರಾಸ್‌, ಕಾಕ್ಸಾರ್‌ ಮತ್ತು ಮುಷ್ಕೊಹ್‌ನಲ್ಲಿ ಪಾಕಿಗಳು ಒಳನುಗ್ಗಿದ್ದನ್ನು ಮೊದಲಿಗೆ ಪತ್ತೆ ಹಚ್ಚಲಾಯಿತು.
ಮೇ 26: ಒಳನುಗ್ಗಿದವರ ಮೇಲೆ ವಾಯುಪಡೆಯಿಂದ ದಾಳಿ ಆರಂಭ
ಮೇ 27: ಮಿಗ್‌ 21 ಮತ್ತು ಮಿಗ್‌ 27 ಯುದ್ಧ ವಿಮಾನಗಳನ್ನು ಕಳೆದುಕೊಂಡ ಭಾರತೀಯ ಸೇನೆ
ಮೇ 28: ಐಎಎಫ್‌ ಎಂಐ-17 ಲಘುಯುದ್ಧ ವಿಮಾನ ಹೊಡೆದುರುಳಿಸಿದ ಪಾಕಿಸ್ತಾನ ಸೇನೆ, ನಾಲ್ವರು ಸಿಬ್ಬಂದಿ ಸಾವು
ಜೂನ್‌ 1:ರಾಷ್ಟ್ರೀಯ ಹೆದ್ದಾರಿ ಎನ್‌ಎಚ್‌1ಎ ಮೇಲೆ ಬಾಂಬ್‌ ದಾಳಿ ನಡೆಸಿದ ಪಾಕಿಸ್ತಾನ
ಜೂನ್‌ 5: ಸೆರೆಯಾದ ಮೂವರು ಪಾಕ್‌ ಯೋಧರಿಂದ ಮಾಹಿತಿ ಪಡೆದು, ವರದಿ ಬಿಡುಗಡೆ ಮಾಡಿದ ಭಾರತ.
ಜೂನ್‌6: ಕಾರ್ಗಿಲ್‌ನಲ್ಲಿ ಬೃಹತ್‌ ಮಟ್ಟದಲ್ಲಿ ದಾಳಿ ಆರಂಭಿಸಿದ ಭಾರತೀಯ ಸೇನೆ
ಜೂನ್‌ 9: ಬಟಾಲಿಕ್‌ ಸೆಕ್ಟರ್‌ನ ಎರಡು ಪ್ರಮುಖ ಸ್ಥಳಗಳನ್ನು ಮರುವಶಪಡಿಸಿಕೊಂಡ ಭಾರತ
ಜೂನ್‌ 11: ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್‌ ಪರ್ವೇಜ್‌ ಮುಷರಫ್‌ ಮತ್ತು ಲೆಫ್ಟಿನೆಂಇಟ್‌ ಜನರಲ್‌ ಆಜಿಜ್‌ ಖಾನ್‌ ನಡುವಿನ ಸಂದೇಶವಾಹಕ ಸಂಭಾಷಣೆಯನ್ನು ಬಿಡುಗಡೆ ಮಾಡಿ, ಇದರಲ್ಲಿ ಪಾಕಿಸ್ತಾನ ಸೇನೆಯ ಕೈವಾಡ ಇರುವುದನ್ನು ಹೊರ ಜಗತ್ತಿಗೆ ತೋರಿಸಿಕೊಟ್ಟ ಭಾರತ
ಜೂನ್‌ 13: ಡ್ರಾಸ್‌ನಲ್ಲಿನ ಟೊಲೊಂಲಿಂಗ್‌ನ ಮೇಲೆ ನಿಯಂತ್ರಣ ಸಾಧಿಸಿದ ಭಾರತೀಯ ಸೇನೆ
ಜೂನ್‌ 15: ಪಾಕ್‌ನ ಅಂದಿನ ಪ್ರಧಾನಿ ಷರೀಫ್‌ಗೆ ದೂರವಾಣಿ ಕರೆ ಮಾಡಿದ ಅಮೆರಿಕದ ಅಧ್ಯಕ್ಷ ಬಿಲ್‌ ಕ್ಲಿಂಟನ್‌, ಕಾರ್ಗಿಲ್‌ನಿಂದ ಸೇನೆಯನ್ನು ವಾಪಸ್‌ ಕರೆಯಿಸುವಂತೆ ಸೂಚಿಸಿದರು.
ಜೂನ್‌ 29: ಟೈಗರ್‌ಹಿಲ್‌ ಹತ್ತಿರದ ಪ್ರಮುಖ ಪೋಸ್ಟ್‌ಗಳಾದ ಪಾಯಿಂಟ್‌ 5060 ಮತ್ತು ಪಾಯಿಂಟ್‌ 5100ಗಳನ್ನು ವಾಪಸ್‌ ಪಡೆದ ಸೇನೆ
ಜುಲೈ 2: ಕಾರ್ಗಿಲ್‌ನಲ್ಲಿ ಮೂರು ದಿಕ್ಕುಗಳಿಂದ ನಿರ್ಣಾಯಕ ದಾಳಿ ಆರಂಭಿಸಿದ ಭಾರತ
ಜುಲೈ 4: ಹನ್ನೊಂದು ಗಂಟೆಗಳ ಘನಘೋರ ಕಾಳಗದ ಬಳಿಕ ಟೈಗರ್‌ ಹಿಲ್‌ ವಾಪಸ್‌ ಪಡೆದ ಭಾರತೀಯ ಸೇನೆ
ಜುಲೈ 5: ಡ್ರಾಸ್‌ ಮೇಲೆ ಸಂಪೂರ್ಣ ನಿಯಂತ್ರಣ. ಕ್ಲಿಂಟನ್‌ ಜತೆಗಿನ ಭೇಟಿ ಬಳಿಕ ಕಾರ್ಗಿಲ್‌ನಿಂದ ಸೇನೆಯನ್ನು ವಾಪಸ್‌ ಕರೆಯಿಸಿಕೊಳ್ಳುವುದಾಗಿ ಷರೀಫ್‌ ಅವರಿಂದ ಘೋಷಣೆ
ಜುಲೈ 7: ಬಟಾಲಿಕ್‌ನಲ್ಲಿ ಜುಬಾರ್‌ ಹೈಟ್ಸ್‌ ಅನ್ನು ವಾಪಸ್‌ ಪಡೆದ ಭಾರತ
ಜುಲೈ 11: ಬಟಾಲಿಕ್‌ನಿಂದ ಹೊರ ಬರಲು ಆರಂಭಿಸಿದ ಪಾಕಿಸ್ತಾನದ ಸೇನೆ
ಜುಲೈ 14: ಆಪರೇಷನ್‌ ವಿಜಯ್‌ ಯಶಸ್ವಿಯಾಯಿತು ಎಂದು ಘೋಷಿಸಿದ ಅಂದಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ. ಪಾಕಿಸ್ತಾನ ಜತೆಗಿನ ಮಾತುಕತೆಗೆ ಷರತ್ತು ವಿಧಿಸಿದ ಭಾರತ.
ಜುಲೈ 26: ಅಧಿಕೃತವಾಗಿ ಕಾರ್ಗಿಲ್‌ ಸಂಘರ್ಷ ಮುಕ್ತಾಯಿತು. ಪಾಕಿಸ್ತಾನ ದಾಳಿಕೊರರಿಂದ ಸಂಪೂರ್ಣವಾಗಿ ಕಾರ್ಗಿಲ್‌ ಮುಕ್ತಾಯವಾಯಿತು.

✍. ವಿವೇಕ್‌ ನರೇನ್

ಕಿರುತೆರೆ ಧಾರಾವಾಹಿಗಳಲ್ಲಿ ಹಿನ್ನೆಲೆ ಧ್ವನಿ ನೀಡುತ್ತಿರುವ ಕೊಡಗಿನ ಕಲಾವಿದ ನಿಶ್ಚಿತ್ ತಾಕೇರಿ

ಕಿರುತೆರೆ ಧಾರಾವಾಹಿಗಳಲ್ಲಿ ಹಿನ್ನೆಲೆ ಧ್ವನಿ ನೀಡುತ್ತಿರುವ ಕೊಡಗಿನ ಕಲಾವಿದ “ನಿಶ್ಚಿತ್ ತಾಕೇರಿ”

‌ ಸೋಮವಾರಪೇಟೆ:-ಸಮೀಪದ ತಾಕೇರಿ ಗ್ರಾಮದ ಯುವಪ್ರತಿಭೆಯೊಬ್ಬರು ಪೌರಾಣಿಕದಂತಹ ಕಿರುತೆರೆ ಧಾರಾವಾಹಿಗಳಲ್ಲಿ ಹಿಂದಿ ಪಾತ್ರಧಾರಿಗಳ ಪಾತ್ರಕ್ಕೆ ಕನ್ನಡಲ್ಲಿ ಹಿನ್ನೆಲೆ ಧ್ವನಿ ನೀಡುತ್ತಿರುವುದು ಈ ನಡುವೆ ಮನೆ ಮಾತಾಗಿದೆ.

ತಾಲ್ಲೂಕಿನ ತಾಕೇರಿ ಗ್ರಾಮದ ನಿಶ್ಚಿತ್ ತಾಕೇರಿ ಎಂಬುವವರೆ ಹಿನ್ನೆಲೆ ದ್ವನಿ ನೀಡುತ್ತಿರುವ ಹೊಸ ಪ್ರತಿಭೆ. ಇವರು ಜೀ ಕನ್ನಡಲ್ಲಿ ರಾತ್ರಿ 7 ಗಂಟೆಗೆ ಪ್ರಸಾರ ವಾಗುತ್ತಿರುವ “ಶ್ರೀ ಕೃಷ್ಣ” ಧಾರಾವಾಹಿಯಲ್ಲಿ “ಭದ್ರಾಕ್ಷಾ” ಎಂಬ ನಟನೆಯ ಪಾತ್ರದಾರಿಯ ವ್ಯಕ್ತಿಗೆ ಇವರು ಹಿನ್ನೆಲೆ ಧ್ವನಿ ನೀಡುತ್ತಿದ್ದು, ಕಲರ್ಸ್ ಕನ್ನಡದ “ಚಕ್ರವರ್ತಿ ಅಶೋಕ” ಧಾರಾವಾಹಿಯಲ್ಲೂ ಕೂಡ “ರಾಧಾಗುಪ್ತ” ಪಾತ್ರಕ್ಕೆ ಹಿನ್ನೆಲೆ ಧ್ವನಿ ಹಾಗೂ ಹಾಲಿವುಡ್ ಫಿಲಂ “ಟರ್ಮಿನೆಟರ್ ಡಾರ್ಕ್ ಪೆಟ್” ಎಂಬ ಸಿನಿಮಾದ ನಟರೊಬ್ಬರಿಗೆ ಡಬ್ಬಿಂಗ್ ಮಾಡಿದ್ದಾರೆ.

ತಾಕೇರಿ ಗ್ರಾಮದ ಹೊಸೂರುಕಳ್ಳಿಯ ಲಕ್ಶ್ಮಯ್ಯ ಹಾಗೂ ಚಿನ್ನಮ್ಮ ದಂಪತಿಯ ಪುತ್ರರಾಗಿರುವ ನಿಶ್ಚಿತ್ ತಾಕೇರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವ್ಯಾಸಾಂಗ ಮಾಡಿ ಪಿ.ಯು.ಸಿ. ಯನ್ನು ಸೋಮವಾರಪೇಟೆಯ ಸಂತ ಜೋಷೆಪ್‌ರ ಕಾಲೇಜಿನಲ್ಲಿ ಮುಗಿಸಿ, ಜೆ.ಎಸ್.ಎಸ್ ಲ್ಲಿ ತಮ್ಮ ಪದವಿಯನ್ನು ಪೂರ್ಣಗೊಳಿಸಿದರು. ನಂತರ ಮೈಸೂರಿನಲ್ಲಿ ಮಂಡ್ಯ ರಮೇಶ್ ಅವರ ಗರಡಿಯಲ್ಲಿ ರಂಗಭೂಮಿ ಕಲಾವಿದರಾಗಿ ಹೊರ ಹೊಮ್ಮಿದರು.

ಇವರು ಕಿರುತೆರೆಯ “ಮಂಗಳೂರು ಹುಡುಗಿ ಹುಬ್ಬಳ್ಳಿ ಹುಡುಗ”, “ಸಾರ್ವಜನಿಕರಿಗೆ ಸುವರ್ಣ ಚಲನಚಿತ್ರ” ಸೇರಿದಂತೆ ಹಲವು ಸಿನಿಮಾಗಳಲ್ಲಿ ಸಹ ನಟರಾಗಿ ಪಾತ್ರವಹಿಸಿದ್ದಾರೆ. ಇವರು ಚಿಕ್ಕ ವಯಸ್ಸಿನಿಂದಲು ನಟನಾಗುವ ಆಸೆ ಹೊಂದಿದ್ದು, ಅದು ಈ ನಡುವೆ ಅವರ ಕನಸು ನನಸಾಗುತ್ತಿದ್ದೆ. “ನಾನು 3 ವರ್ಷದಿಂದ ಸಿನಿಮಾ, ಕಿರುತೆರೆಯಲ್ಲಿ ಸಹ ನಟನಾಗಿ ನಟಿಸುತ್ತಿದ್ದು, ಈ ನಡುವೆ ಡಬ್ಬಿಂಗ್‌ನಲ್ಲಿ ನನ್ನ ಧ್ವನಿಯನ್ನು ನೀಡುತ್ತಿದ್ದೇನೆ” ಎಂದು ನಿಶ್ಚಿತ್ ಪತ್ರಿಕೆಯೊಂದಿಗೆ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

ಲೇಖಕರು: ✍. ಲಕ್ಷ್ಮೀಕಾಂತ್ ಕೋಮರಪ್ಪ

“ಲಾಕ್‌ಡೌನ್‌ ಡೈರಿ” ಮತ್ತು ಲಾಕ್‌ಔಟಾದ ಪ್ರಶ್ನೆಗಳು…!?

“ಲಾಕ್‌ಡೌನ್‌ ಡೈರಿ” ಮತ್ತು ಲಾಕ್‌ಔಟಾದ ಪ್ರಶ್ನೆಗಳು…!?

ಹೇಗಾಯಿತು ಏನಾಯಿತು ಯಾರಿಂದ ಆಯಿತು, ಇತ್ಯಾದಿ ಇತ್ಯಾದಿ ಪ್ರಶ್ನೆಗಳು ಅಪ್ರಸ್ತುತ ಮತ್ತು ಭವಿಷ್ಯದಲ್ಲಿ, ಭೂತಕಾಲದ ನಡೆಗಳು ಇಂದಿನ ವರ್ತಮಾನಕ್ಕೆ ಮಾರ್ಗದರ್ಶನವಾಗಬಲ್ಲದು ಎಂಬುದಂತೂ ಸತ್ಯ.

ಬಹುಶಃ ಡಾರ್ವಿನ್‌ ವಾದವೇ ಇರಬೇಕು, ಪ್ರಕೃತಿ ತನ್ನ ಸಮತೋಲನವನ್ನು ಕಾಪಾಡಿಕೊಳ್ಳಲು ಅದು ಕೂಡ ಕ್ರಿಯಾತ್ಮಕವಾಗಿ ತನ್ನದೇ ಆದ ಮಾರ್ಗಗಳನ್ನು ಕಂಡುಕೊಳ್ಳುತ್ತದೆ ಎನ್ನುವುದು. ಈ ಒಂದು ವಾದ ವಿಶೇಷವಾಗಿ ಆಕಾಲದಲ್ಲಿ ಜನಸಂಖ್ಯೆ ನಿಯಂತ್ರಣದ ಬಗ್ಗೆ ಹೇಳಿದ ಮಾತು ಯಾ ವಾದವಿರಬೇಕು.

ಒಂದು ಕಾಲದಲ್ಲಿ ಭಾರತ ಕೂಡ ಸಿಡುಬು, ಪ್ಲೇಗ್‌ನಂತಹ ರೋಗಗಳನ್ನು ಅನುಭವಿಸಿ ಕೂಡ ಮುನ್ನಡೆದು ಬಂದಿರುವುದು ವಾಸ್ತವ.

ಇದೀಗ, ಪ್ರಪಂಚ “ಕೊರೋನ” ಎಂಬ ಶತ್ರುವನ್ನು ನಾಶಪಡಿಸಲು ಹರಸಾಹಸ ಪಡುತ್ತಿದೆ.

ಆಯಾಯ ದೇಶ ಪ್ರಾಂತ್ಯಗಳಲ್ಲಿ ಅಲ್ಲಲ್ಲಿಯ ನಾಯಕರುಗಳು ಪರಿಣಿತರೊಂದಿಗೆ ಚರ್ಚಿಸಿ, ಹರಸಾಹಸ ಪಡುತ್ತಿದ್ದಾರೆ.

ಈ ಸಂದರ್ಭದಲ್ಲಿ ಕೊಡಗಿನ ಶಕ್ತಿ” ದಿನಪತ್ರಿಕೆಯಲ್ಲಿ “ಕೊರೋನ” ಸಾಗುತ್ತಿದ್ದ ದಾರಿಯ ಹತ್ತು ಹಲವಾರು ವಿಚಾರಗಳು ಮತ್ತದರ ಒಳನೋಟಗಳನ್ನು ಅಕ್ಷರಗಳಲ್ಲಿ ಹಂಚಿಕೊಳ್ಳುತ್ತಿದ್ದರು.

ಆ ಧೀರ್ಘ ಅಕ್ಷರ ಪಯಣದ ದಾಖಲಾ ಸಾಹಿತ್ಯ, ಇದೀಗ “ಲಾಕ್‌ಡೌನ್‌ ಡೈರಿ” ತಲೆಬರಹದ ಪುಸ್ತಕವಾಗಿ ಲೋಕಾರ್ಪಣೆಗೊಂಡಿದೆ.

ಅತ್ಯಂತ ಅಲ್ಪಾವಧಿಯಲ್ಲಿ ಪ್ರಕಟಗೊಂಡ ಪುಸ್ತಕದಲ್ಲಿ, ವರ್ತಮಾನ, ಭೂತಕಾಲದ ನೆನಪುಗಳನ್ನು ಕೂಡ ಮಿಳಿತಗೊಳಿಸಿಕೊಂಡಿದೆ ಎಂಬುದು ದಾಖಲಾ ಸಾಹಿತ್ಯದ ಶಕ್ತಿ ಕೂಡ.

ಭೂತಕಾಲವನ್ನು ಅವಲೋಕಿಸಿಕೊಳ್ಳದಿದ್ದ ಕಾರಣಕ್ಕಾಗಿ, ಚೀನಾ ದೇಶ ಪ್ರಪಂಚವನ್ನೇ ಸಂಕಷ್ಟಕ್ಕೆ ಸಿಲುಕಿಸಿರುವುದು ವರ್ತಮಾನದ ದುರಂತ ಎಂಬುದನ್ನು ಲೇಖಕ, ಲಾಕ್‌ಡೌನ್‌ ಡೈರಿಯಲ್ಲಿ ದಾಖಲಿಸಿದ್ದಾರೆ.

ಪರೋಕ್ಷವಾಗಿ ಚೀನಾದ ಗತಕಾಲದ ದಡ್ಡತನವನ್ನು ತೋರು ಬೆರಳಿನಿಂದ ಗುರುತಿಸಿದ್ದಾರೆ. ಭವಿಷ್ಯಕ್ಕೂ ಎಚ್ಚರಿಕೆ ನೀಡಿದ್ದಾರೆ ಎಂಬುದು ಅವರ “ಡೈರಿ”ಯ ಅಕ್ಷರಗಳು ಮಾರ್ಮಿಕವಾಗಿ ಹೇಳಿದೆ ಮತ್ತು ಬರಹ “ಬದ್ಧತೆಗೆ” ಕೂಡ ಸಾಕ್ಷಿಯಾಗಿದೆ.

ಡೈರಿಯ ಮೊದಲ ಬರಹ, “ಕಣ್ಣಿನ ವೈದ್ಯನ ಎಚ್ಚರಿಕೆಗೆ ಕಣ್ತೆರೆದಿದ್ದರೆ ಹೀಗಾಗುತ್ತಿರಲಿಲ್ಲ”ವನ್ನು ಓದಿದೊಡನೆ ಪ್ರಸ್ತಕ ಪರಿಸ್ಥಿತಿಯಲ್ಲಿ ಪ್ರಪಂಚದ ದೊಡ್ಡಣ್ಣನಾಗಲು ಹೊರಟಿರುವ, ಭಾರತದ ನಿದ್ದೆಗೆಡಿಸಲು ಪ್ರಯತ್ನಿಸುತ್ತಿರುವ ʼಚೀನಾʼ ವಿರುದ್ಧ ಅದೆಂತ ಕಠೋರವಾಗಿ ಪ್ರತಿಕ್ರಿಯಿಸುತ್ತೀರೋ ನಿಮಗೆ ಬಿಟ್ಟದ್ದು.

“ಹಲೋ ಫ್ರೆಂಡ್ಸ್‌…
ನನ್ನಲ್ಲಿರುವ ರೋಗಿಯೋರ್ವನಲ್ಲಿ
ವಿಚಿತ್ರ ಸೋಂಕು ಕಾಣಿಸಿಕೊಂಡಿದೆ…
ಸಾರ್ಸ್‌ ರೋಗ ಬಂದಿತ್ತಲ್ಲಾ
ಅದೇ ರೀತಿಯ ವೈರಸ್ ಎಂಬ ಸಂಶಯವಾಗುತ್ತಿದೆ.
ಎಲ್ಲರೂ ಎಚ್ಚರವಹಿಸಿಕೊಳ್ಳಿ…”

ಹೀಗೊಂದು ಸಂದೇಶವನ್ನು 2019ರ ಡಿಸೆಂಬರ್‌ ಎರಡನೇ ವಾರದಲ್ಲಿ ಚೀನಾದಲ್ಲಿನ ವೈದ್ಯರ ವಾಟ್ಸಾಪ್‌ ಗ್ರೂಪ್‌ನಲ್ಲಿ ಡಾ|| ಲಿ ವೆನ್‌ ಲಿಯಾಂಗ್‌ ಎಚ್ಚರಿಕೆ ಸಂದೇಶವನ್ನು ಪ್ರಕಟಿಸುತ್ತಾರೆ.

ಗತಕಾಲವನ್ನು ನೆನಪಿಸಿಕೊಳ್ಳದ ಚೀನಾ ಅಥವಾ ಪ್ರಪಂಚವೇ ಸಂಶಯಪಡುತ್ತಿರುವಂತೆ ಉದ್ದೇಶಪೂರ್ವಕವಾಗಿ ತನ್ನಲ್ಲಿಯೇ ಸೃಷ್ಠಿಸಿಕೊಂಡು, ತನ್ನ ಒಂದಷ್ಟು ಪ್ರಜೆಗಳನ್ನು ಬಲಿಕೊಟ್ಟು, ಪ್ರಪಂಚಕ್ಕೂ ಹಬ್ಬಿಸಿ, ಇದೀಗ ತಾನು ಭದ್ರತೆಯತ್ತ ಸಾಗಿ ಮತ್ತೆ ಪ್ರಪಂಚಕ್ಕೆ ನಿಮಗೇನು ಬೇಕು ಎಂಬುದಾಗಿ ಕೇಳುವ ಮಟ್ಟಕ್ಕೆ ತಲುಪಿರುವುದನ್ನು ಬರಹ ಚಿಂತನೆಗೆ ಹಚ್ಚುವಂತಿದೆ.

ಈ ಒಂದು ಪ್ರಶ್ನೆ ಹುಟ್ಟುವುದಕ್ಕೆ ಕಾರಣವೂ ಇದೆ. ವಿಜ್ಞಾನಿ ಗೆಲಿಲಿಯೋ, ಭೂಮಿ ದುಂಡಗೆ ಇದೆ ಎಂದು ವಾದಿಸಿದಾಗ, ಆತನ ಜನರು ಭೂಮಿ ಚಪ್ಪಟೆ ಎಂದು ಪೂರ್ವಾಗ್ರಹ ಪೀಡಿತ ತನದಿಂದ ಆತನನ್ನು ಕೊಂದು, ಚಪ್ಪಟೆ ಶವಪೆಟ್ಟಿಗೆಯೊಳಗಿರಿಸಿ, ಅವರ ಚಪ್ಪಟೆ ಭೂಮಿಯೊಳಗೆ ಮಣ್ಣಾಗಿಸಿದರೂ, ಗೆಲಿಲಿಯೋ ಮಾತ್ರ ಜೀವಂತವಾಗಿದ್ದಾನೆ ಎನ್ನುವುದನ್ನು ತಿಳಿಸುವ ಒಳನೋಟಗಳು ಡೈರಿಯಲ್ಲಿದೆ.

ಡಾ|| ವೆನ್‌ ಲಿಯಾಂಗ್‌ ತನ್ನ ಸಂಶಯವನ್ನು ವ್ಯಕ್ತಪಡಿಸುತ್ತಿದ್ದಂತೆ ಬಹು ಬುದ್ಧಿವಂತ ʼಚೀನಾʼ ಆತನನ್ನು ಕರೆಸಿ ಮಾತುಕತೆ ನಡೆಸುವ ಬದಲು, ಆತನ ಮನೆ ಬಾಗಿಲು ತಟ್ಟಲು ಕಳುಹಿಸಿದ್ದು ಪೊಲೀಸರನ್ನ.

“ಏಯ್‌ ವೆನ್‌ ಲಿಯಾಂಗ್‌,
ಸುಖಾಸುಮ್ಮನೆ ಹೊಸ ವೈರಸ್‌ ಇದೆ ಎಂದು ವದಂತಿ ಹಬ್ಬಿಸುತ್ತಿದ್ದೀಯಾ?
ಚೀನಾ ಸರಕಾರ ನಿನ್ನ ಸುಳ್ಳುಗಳ ಬಗ್ಗೆ ಕ್ರಮ ತೆಗೆದುಕೊಳ್ಳುತ್ತಿದೆ.”

ನಮ್ಮ ಆಡು ಭಾಷೆಯಲ್ಲಿ ಹೇಳುವುದಾದರೆ…

“ಏಯ್‌ ಲಿಯಾಂಗ್‌, ಮುಚ್ಚಿಕೊಂಡು ಕೂತರೆ ಸರಿ,
ಇಲ್ಲ ನಿನ್ನ ಜೈಲಿನಲ್ಲಿ ಕೊಳೆಯುವ ಹಾಗೆ ಮಾಡುತ್ತೇವೆ.
ಬಾ ಇಲ್ಲಿ ಮುಚ್ಚಳಿಕೆಗೆ ಸಹಿ ಹಾಕು
ಮತ್ತೆ ಬಾಲ ಬಿಚ್ಚಿದರೆ ನೀನು ಹುಟ್ಟಿಲ್ಲ ಎಂದು ತಿಳಿದುಕೋ”

ಎಂದು ಬೆದರಿಸಿ ಲಿಯಾಂಗನ ಬಾಯಿಗೆ ಬೀಗ ಹಾಕಿಡುತ್ತದೆ ಚೀನ.

ಪ್ರಪಂಚಕ್ಕೆ ಒಳಿತು ಮಾಡಲು ಹಾತೊರೆದಿದ್ದ ಡಾ|| ವೆನ್‌ ಲಿಯಾಂಗ್‌ ಕೆಲವೇ ಕೆಲವು ದಿನಗಳಲ್ಲಿ ಕೊರೋನಾದ ಕೈಸೆರೆಯಾಗಿ ತನ್ನ ಕೊನೇ ಉಸಿರನ್ನು ಕೊರೋನಾಗೆ ಒಪ್ಪಿಸಿದ ದುರಂತ ಕಥೆಯನ್ನು ಅನಿಲ್‌ ಮನಮುಟ್ಟುವಂತೆ ಅವರದೇ ಶೈಲಿಯಲ್ಲಿ ಓದುಗನಿಗೆ ವಿಚಾರ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಒಟ್ಟು, 196 ಪುಟಗಳ ಮನಕಲುಕುವ ಮಾತುಗಳ ಡೈರಿಯಲ್ಲಿ “ಮಾನವ ಸೇವೆಯಲ್ಲಿ ಮಾಧವನನ್ನು ಕಂಡ ರಾಮಕೃಷ್ಣ ಶಾರದಾಶ್ರಮ”, “ಅಲ್ಲಿದೆ ನಮ್ಮನೆ…ಆಶ್ರಯ ಕೊಟ್ಟಿತು ನಿಮ್ಮ ಮನೆ”, “ಕೊರೋನಾ ಕಂಡು ಸಣ್ಣಪುಟ್ಟ ಕಾಯಿಲೆಗಳೆಲ್ಲಾ ಕಾಣದಂತೆ ಓಡಿಹೋದವೇ?”, ಪ್ರವಾಸೋದ್ಯಮದ ವಿವಿಧ ಮಜಲುಗಳು ಹೋಟೆಲ್‌, ಹೋಂ ಸ್ಟೇ ಇತ್ಯಾದಿಗಳ ಚಿತ್ರಣ, ಕೊಡಗಿನ ಖಾಸಗಿ ಬಸ್ಸುಗಳು ಮತ್ತು ಅವುಗಳು ಜನರ ನಾಡಿಗಳಲ್ಲಿ ಬೆಸೆದು ಹೋಗಿದ್ದ ಗತಕಾಲದ ನೆನಪುಗಳು ಮತ್ತು ಇಂದಿನ ಚಿತ್ರಣ, ಆಟೋ ಚಾಲಕರು, ಅರ್ಚಕರು, ವಿಶೇಷವಾಗಿ ದೇಶ ಕಟ್ಟುವ ಕಾರ್ಮಿಕರ ಬಗೆಗಿನ ಚಿತ್ರಣಗಳ ತೆರೆದ ಪುಸ್ತಕ “ಲಾಕ್‌ಡೌನ್‌ ಡೈರಿ”.

ಕನಸು ಕಟ್ಟಿಕೊಂಡು ವಿವಿಧ ಬೆಳೆಗಳನ್ನು ಬೆಳೆದ ರೈತನ ಅತಂತ್ರ ಸ್ಥಿತಿಗಳು ಸೇರಿದಂತೆ, ಕೊರೋನ ಅನುಭವಿಸಿದ, ಅನುಭವಿಸುತ್ತಿರುವ ಎಲ್ಲಾ ಮಗ್ಗಲುಗಳನ್ನು “ಡೈರಿ” ಮಡಿಲಲ್ಲಿ ತುಂಬಿಕೊಂಡಿದೆ.

ಅನಿಲ್‌ ಬರೆದಿರುವ ೩೦ ಲೇಖನಗಳೊಂದಿಗೆ ಇತರೆ ೧೮ ಬರಹಗಾರರ, ಚಿಂತಕರ ಅಕ್ಷರಗಳೂ ಡೈರಿಯಲ್ಲಿ ದಾಖಲಾಗಿದೆ.

ಗೆಲಿಲಿಯೋವನ್ನು ನೆನಪಿಸಿಕೊಳ್ಳುವ ಡಾ|| ವೆನ್‌ ಪಿಯಾಂಗ್‌ ದುರಂತ ಕಥೆಯೊಂದಿಗೆ ಪ್ರಾರಂಭವಾಗುವ ಡೈರಿಯ ಪುಟಗಳು, ದೇಶ ನೆನಪಿಸಿಕೊಳ್ಳುವ ಶ್ರಮಿಕರಿಗೆ

“ನೀವು ನಮ್ಮ ಮನೆಯನ್ನು ಕಟ್ಟಿದಿರಿ,
ರಸ್ತೆ-ಸೇತುವೆ ನಿರ್ಮಿಸಿದಿರಿ,
ಮರಗಳನ್ನು ಏರಿದಿರಿ…ಮಣ್ಣು ಹೊತ್ತಿರಿ…ಬಾವಿ ತೋಡಿದಿರಿ,
ಆದರೆ ನೀವು ನಿಮ್ಮೂರಿಗೆ ಹೊರಟು ನಿಂತಾಗ…
ನಾವೆಲ್ಲಾ ನಮ್ಮ ಜೀವ ರಕ್ಷಣೆಗೆ
ಮೆನೆಯೊಳಗೇ ಕುಳಿತುಬಿಟ್ಟಿದ್ದೆವು.
ನಮ್ಮ ಮನೆಯ ಮಂದಿಯ ಸಾಂಗತ್ಯದಲ್ಲಿ
ಮೈ ಮರೆತಿದ್ದ ನಾವೆಲ್ಲಾ
ನಮಗಾಗಿ, ನಮ್ಮೂರಿಗೆ ವರ್ಷಾನುಗಟ್ಟಲೆ ದುಡಿದ
ಶ್ರಮ ಜೀವಿಗಳಾದ ನಿಮ್ಮನ್ನು ಯೋಚಿಸಲೇ ಇಲ್ಲ…
ಕ್ಷಮಿಸಿಬಿಡಿ ನಮ್ಮನ್ನು…
ಮರೆಯದೇ ಬನ್ನಿ ನಮ್ಮೂರಿಗೆ. ನಮಗಾಗಿ…!

ಎಂಬುದನ್ನು ದೇಶಕಟ್ಟುವ ಶ್ರಮಿಕರಿಗೆ ಅನಿಲ್‌ ಅಕ್ಷರಗಳು ಕಂಬನಿ ಸುರಿಸುವುದರೊಂದಿಗೆ ಡೈರಿಯ ಕೊನೆಯ ಪುಟ ಓದುಗರ ಕಣ್ಣಂಚಿನಲ್ಲಿ ಹನಿಯೊಂದು ಜಾರುವಂತೆ ಮಾಡಿ, ಪ್ರಶ್ನೆಗಳನ್ನು, ಆತ್ಮಾವಲೋಕನವನ್ನು, ಚಿಂತನೆಗಳನ್ನು ಹುಟ್ಟಿಸಿ, ನಿಮಗಳನ್ನು ಗಂಟೆಗಟ್ಟಲೆ ಮೌನಿಯಾಗಿಸುತ್ತಾನೆ, ಅಕ್ಷರ ಮಾಂತ್ರಿಕ ಅನಿಲ್.‌

ಬಹುಶಃ ಆಂತರ್ಯದಲ್ಲಿ ಅನುಭವಿಸಿ, ಅಭಿವ್ಯಕ್ತಗೊಳಿಸಿಕೊಳ್ಳಲಾರದ ಮಾತುಗಳನ್ನು ಮನದ ಮಾತುಗಳಿಗೆ ಪ್ರಶ್ನಿಸಲು ಬಿಟ್ಟಿದ್ದಾನೆ ಎಂದನಿಸುತ್ತೆ ಎಂದರೆ ಅತಿಶಯೋಕ್ತಿಯೇನಲ್ಲ.

ಕೊರೋನ ಕಂಪನ ಅನುಭವವಾಗುತ್ತಿದ್ದಂತೆ ನಮ್ಮ ಉಕ್ಕಿನ ಹಕ್ಕಿಗಳಲ್ಲಿ ವಿದೇಶ ಕಟ್ಟಲು ಹೋದವರನ್ನು ಅವರವರ ಗೂಡಿಗೆ ಕರೆತಂದು ಸರಿಯಾದ ಬಂದೋಬಸ್ತ್‌ ಮಾಡದೆ ದಿಡ್ಡಿ ಬಾಗಿಲನ್ನು ಹಾಕಿದ್ದು…

ಗಂಟೆ, ಜಾಗಟೆ, ದೀಪ ಆರಿಸಿ, ಕ್ಯಾಂಡಲ್‌ ಬೆಳಗಿಸಿ, ಕೊರೋನಾಕ್ಕೆ ಚೂ…ಚೂ…ಕರೋನ ಅಂದದ್ದು…

ಮಧ್ಯಪ್ರದೇಶ, ಗುಜರಾತ್‌, ಗೋವಾಗಳಲ್ಲಿ ನಡೆದ ಕುದುರೆ ವ್ಯಾಪಾರ, ಸಿಖ್ಖರ ಧರ್ಮ ಸಭೆ, ಅಯೋಧ್ಯೆ ರಾಮಮಂದಿರ ಕಟ್ಟುವ ಮಾತುಕತೆಗಳು, ಇವೆಲ್ಲ ಪ್ರಶ್ನೆಗಳು ಏಳುತ್ತಿದ್ದಂತೆ, ತಬ್ಲಿಘಿಗಳ ಹೆಸರಿನಲ್ಲಿ ನಡೆದ ಕರಡಿ ಕುಣಿತ ಅವೆಲ್ಲವನ್ನೂ ನೇಪಥ್ಯಕ್ಕೆ ಸರಿಸಿದ್ದು…

ನಮ್ಮ ದೇಶ ಕಟ್ಟುವ ಯೋಗಿಗಳು, ತಾವೇ ಕಟ್ಟಿದ ರಸ್ತೆಯಲ್ಲಿ ಬಾಣಂತಿಯರು, ಹಸುಗೂಸುಗಳಿಂದ ಹಿಡಿದು ಹಿರಿಯ ಜೀವಗಳನ್ನು ಹಸಿವನ್ನು ಧಿಕ್ಕರಿಸಿ ಮರಳಿ ಮನೆಗೆ ಹೊರಟಾಗ ಮಸಣ ಸೇರಿದವರು…
ಹೀಗೆ, ಹತ್ತು ಹಲವಾರು ಪ್ರಶ್ನೆಗಳ ಹುತ್ತವನ್ನು ಮೌನದಲ್ಲೇ ಕಟ್ಟಿಕೊಳ್ಳುವಂತೆ ಲಾಕ್‌ಡೌನ್‌ ಡೈರಿ ಮಾಂತ್ರಿಕ ಮಾಡಿಬಿಡುತ್ತಾನೆ.

ಪತ್ರಿಕೆಯಲ್ಲಿ ಪ್ರಕಟವಾದ ಬರಹಗಳನ್ನು ಬಿಡಿ ಬಿಡಿಯಾಗಿ ಬಹಳಷ್ಟು ಜನ ಓದಿದ್ದರೂ, ನಂತರದಲ್ಲಿ ಪರಿಷ್ಕೃತಗೊಂಡು ಮತ್ತಷ್ಟು ಲೇಖಕರ ಅಭಿಪ್ರಾಯಗಳನ್ನು ಮುದ್ರಣಾಲಯದಿಂದ ಹೊತ್ತು ತಂದಿರುವ ಡೈರಿಯನ್ನು ಓದಿಯೇ ಅನುಭವಿಸಬೇಕು.

ಪುಸ್ತಕಕ್ಕಾಗಿ:
anilmadikeri@gmail.com
ಕರೆ : 9844060174

ಲೇಖಕರು: ✍. ಅಲ್ಲಾರಂಡ ವಿಠಲ್ ನಂಜಪ್ಪ