• Search Coorg Media

ದೀಪಧಾರಿಣಿ ದಾದಿಯ 201ನೇ ಜನ್ಮದಿನ; ಅಂತರರಾಷ್ಟ್ರೀಯ ನರ್ಸಸ್‌ ಡೇ

ದೀಪಧಾರಿಣಿ ದಾದಿಯ 201ನೇ ಜನ್ಮದಿನ; ಅಂತರರಾಷ್ಟ್ರೀಯ ನರ್ಸಸ್‌ ಡೇ

ಮೇ 12ರಂದು ಜಗತ್ತಿನಾದ್ಯಂತ ಅಂತಾರಾಷ್ಟ್ರೀಯ ದಾದಿಯರ ದಿನ; ವಿಶೇಷ ಲೇಖನ

“ಶುಶ್ರೂಷೆ ಒಂದು ಕಲೆ. ಅದನ್ನು ಕಲೆಯಾಗಿ ಮಾಡಬೇಕೆಂದರೆ ಓರ್ವ ಕಲಾವಿದ ಅಥವಾ ಶಿಲ್ಪಿಯಂತಹ ಸಮರ್ಪಣಾ ಮನೋಭಾವ, ಪರಿಶ್ರಮದಾಯಕ ಸಿದ್ಧತೆ ಬೇಕು. ಇದು ಉನ್ನತ ಕಲೆಗಳಲ್ಲಿ ಒಂದು. ಉನ್ನತ ಕಲೆಗಳಲ್ಲಿ ಉನ್ನತವಾದದ್ದು”
– ಫ್ಲಾರೆನ್ಸ್ ನೈಟಿಂಗೇಲ್

ನಿಫಾ ರೋಗಿಗೆ ಚಿಕಿತ್ಸೆ ನೀಡುವಾಗ 2018ರಲ್ಲಿ ಕೇರಳದಲ್ಲಿ ನಿಪಾ ವೈರಸ್‌ನಿಂದ ಏಕಾಏಕಿ ಸಾವನ್ನಪ್ಪಿದ ಕೇರಳದ ದಾದಿ ಲಿನಿ ಪಿ.ಎನ್‌. ಗೆ ಮರಣೋತ್ತರ ರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ -2017 ನೀಡಿ ಗೌರವಿಸಲಾಗಿತು.

ಪ್ರತಿವರ್ಷ ಮೇ 12ರಂದು ಜಗತ್ತಿನಾದ್ಯಂತ ಅಂತಾರಾಷ್ಟ್ರೀಯ ದಾದಿಯರ ದಿನವನ್ನು ಆಚರಿಸಲಾಗುತ್ತದೆ. ಈ ದಿನ ಆಧುನಿಕ ನರ್ಸಿಂಗ್‌ನ ಸ್ಥಾಪಕಿ ಎಂದೇ ಖ್ಯಾತಿವೆತ್ತಿರುವ ಫ್ಲಾರೆನ್ಸ್‌ ನೈಟಿಂಗೇಲ್‌ ಅವರ ಜನ್ಮದಿನ. ಆಕೆ ಹುಟ್ಟಿದ್ದು ಮೇ 12, 1820. ಆಗಿನ್ನೂ ವೈದ್ಯಕೀಯ ಲೋಕ ಇಷ್ಟೊಂದು ಪ್ರಗತಿ ಕಂಡಿರಲಿಲ್ಲ. ಅದರಲ್ಲೂ ಹೆಣ್ಣುಮಕ್ಕಳು ದಾದಿ ಅಥವಾ ನರ್ಸ್‌ ಎಂದೆಲ್ಲ ಕರೆಯಲ್ಪಡುವ ಉಪಚಾರಿಕೆ ವೃತ್ತಿಗಿಳಿಯುವುದು ಸವಾಲಿನ ಮಾತೇ ಆಗಿತ್ತು. ಅಂತಹ ಕಾಲಘಟ್ಟದಲ್ಲಿ ಕಣ್ಣು ಬಿಟ್ಟವರು ‘ಫ್ಲಾರೆನ್ಸ್ ನೈಟಿಂಗೇಲ್.’

ಫ್ಲಾರೆನ್ಸ್ ನೈಟಿಂಗೇಲ್ – “ಲೇಡಿ ವಿತ್ ದಿ ಲ್ಯಾಂಪ್” ಎಂದೇ ಪ್ರಖ್ಯಾತರಾಗಿದ್ದ ಮಹಿಳೆ. ಫ್ಲಾರೆನ್ಸ್ ನೈಟಿಂಗೇಲ್ ಇಟಲಿಯಲ್ಲಿ 1820ರ ಮೇ 12ರಂದು. ಶ್ರೀಮಂತ ಕುಟುಂಬದಲ್ಲಿ ಜನಿಸಿದ್ದರೂ, ತಮ್ಮ 17ನೇ ವಯಸ್ಸಿನಲ್ಲೇ ನರ್ಸಿಂಗ್ ವೃತ್ತಿಯನ್ನು ಆಯ್ಕೆ ಮಾಡಿಕೊಂಡರು. ಸಮಾಜದಲ್ಲಿ ಹಿಂದುಳಿದ ಹಾಗೂ ಬಡಜನರಿಗೆ ವೈದ್ಯಕೀಯ ನೆರವು ದೊರೆಯಬೇಕೆಂಬುದೇ ಇವರ ಧ್ಯೇಯವಾಗಿತ್ತು. 1854ರ ಅಕ್ಟೋಬರ್ 21ರಂದು ತಮ್ಮ 38 ನರ್ಸ್ ತಂಡದೊಂದಿಗೆ ಕ್ರಿಮಿಯನ್ ಯುದ್ಧದಲ್ಲಿ ಗಾಯಗೊಂಡ ಸೈನಿಕರನ್ನು ಶುಶ್ರೂಷೆ ಮಾಡಿದರು. ಮಿಲಿಟರಿ ಆಸ್ಪತ್ರೆಗಳ ಹಾಗೂ ಇತರ ಆಸ್ಪತ್ರೆಗಳ ಸುಧಾರಣೆಗೆ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿ ಅವುಗಳನ್ನು ಜಾರಿಗೆ ತರಲು ಪ್ರಯತ್ನಿಸಿದಳು. ಇದಕ್ಕಾಗಿ ತನ್ನ ಜೀವಮಾನವನ್ನೇ ಮುಡಿಪಾಗಿಟ್ಟಳು.

ಅದೊಂದು ಬೃಹದಾಕಾರದ ಮಿಲಿಟರಿ ಆಸ್ಪತ್ರೆ. ಕಟ್ಟಡವು ದೊಡ್ಡದಾಗಿತ್ತು. ಆದರೆ ಕನಿಷ್ಠ ಸೌಕರ್ಯವೂ ಇಲ್ಲದ ಆಸ್ಪತ್ರೆ. ಆಸ್ಪತ್ರೆಯ ಉದ್ದ ಸುಮಾರು 6.5 ಕಿಲೋಮೀಟರು. ಆಸ್ಪತ್ರೆಯಲ್ಲಿ ಸಾವಿರಾರು ಹಾಸಿಗೆಗಳು, ಆದರೆ ಒಬ್ಬ ರೋಗಿಯ ಹಾಸಿಗೆಗೂ, ಇನ್ನೊಬ್ಬ ರೋಗಿಯ ಹಾಸಿಗೆಗೂ ಇದ್ದ ಅಂತರ ಕೇವಲ 45 ಸೆಂಟಿಮೀಟರುಗಳು. ಇಂಥಹ ಆಸ್ಪತ್ರೆಯಲ್ಲಿ ಪ್ರತಿನಿತ್ಯ ರಾತ್ರಿಯ ಹೊತ್ತು ಆಕೆ ಕೈಯಲ್ಲಿ ದೀಪ ಹಿಡಿದು ಪ್ರತಿಯೊಂದು ಹಾಸಿಗೆಯ ಬಳಿ ಹೋಗುತ್ತಾಳೆ. ಪ್ರತಿಯೊಬ್ಬ ರೋಗಿಯನ್ನೂ ವಿಚಾರಿಸುತ್ತಾಳೆ. ಅವರಿಗೆ ಅಗತ್ಯವಾದ ಔಷದ ಮತ್ತು ಇತರ ವಸ್ತುಗಳನ್ನು ನೀಡುತ್ತಾಳೆ. ಮೆಲುದನಿಯಲ್ಲಿ ಅವರನ್ನು ಉಪಚರಿಸುತ್ತಾಳೆ, ಅವರಿಗೆ ಧೈರ್ಯ ತುಂಬುತ್ತಾಳೆ. ಸಾವಿನ ಹೊಸ್ತಿಲಲ್ಲಿರುವ ವ್ಯಕ್ತಿಗೆ, ಆಗತಾನೇ ಚೇತರಿಸಿಕೊಳ್ಳುತ್ತಿರುವ ರೋಗಿಗೆ ಅವಳು ಮಾಡುತ್ತಿದ್ದ ಸೇವೆಯಿಂದ ‘ಅವಳೊಬ್ಬ ದೇವತೆ’ ಎನಿಸಿದ್ದರೆ ಆಶ್ಚರ್ಯವಿಲ್ಲ. ಪ್ರತಿದಿನ ಕತ್ತಲಾದೊಡನೆ ದೀಪವನ್ನು ಹಿಡಿದು ರೋಗಿಗಳನ್ನು ವಿಚಾರಿಸಲು ಬರುತ್ತಿದ್ದ ಈಕೆಯನ್ನು ‘ದೀಪಧಾರಿಣಿ’ ಎಂದೇ ಕರೆಯುತ್ತಿದ್ದರು.

ಇಂಗ್ಲೆಂಡ್‍ನಲ್ಲಿ ಆಸ್ಪತ್ರೆಗಳೆಂದರೆ ರೋಗ ಹರಡುವ ತಾಣಗಳಂತಿದ್ದ ಕಾಲದಲ್ಲಿ ಫ್ಲಾರೆನ್ಸ್ ನೈಟಿಂಗೇಲ್ ಬಿರುಗಾಳಿಯಾಗಿ ಬಂದು ವೈದ್ಯಕೀಯ ಕೊಳೆಯನ್ನೆಲ್ಲಾ ತೆಗೆದಳು. ಪಾಲಕರ ವಿರೋಧದ ನಡುವೆಯೂ ಜರ್ಮನಿಗೆ ತೆರಳಿ ನರ್ಸಿಂಗ್‍ನಲ್ಲಿ ಹೆಚ್ಚಿನ ತರರಬೇತಿ ಪಡೆದಳು. ಕ್ರಿಮಿಯನ್ ವಾರ್ ನಡೆದ ಸಂಧರ್ಭದಲ್ಲಿ ಸೈನಿಕ ಆಸ್ಪತ್ರೆಯ ಮೇಲ್ವಿಚಾರಕಿಯಾಗಿದ್ದಳು. ಪರಿಪೂರ್ಣವಾಗಿ ನರ್ಸ್ ತರಬೇತಿ ಪಡೆದ ನಂತರವೇ ಆಸ್ಪತ್ರೆಗಳನ್ನು ಶೂಚಿಗೊಳಿಸುವ ಕಾರ್ಯ ಕೈಗೊಂಡಳು. ಆಸ್ಪತ್ರೆಗಳನ್ನು ಸ್ವಚ್ಚ ಮಂದಿರಗಳನ್ನಾಗಿಸಲು ಶ್ರಮಿಸಿದಳು. ಸೈನಿಕರಿಗೆ ವಿಶೇಷ ಗಮನ ನೀಡಿ ಉಪಚರಿಸುತ್ತಿದ್ದಳು. ಜರ್ಮನಿಯಿಂದ ಹಿಂದಿರುಗಿ ಬಂದ ಮೇಲೆ ನರ್ಸಿಂಗ್ ಶಾಲೆ ತೆರೆದಳು. ಇಂಗ್ಲೆಂಡ್ ಅಲ್ಲದೇ ಭಾರತೀಯ ಆಸ್ಪತ್ರೆಗಳ ಪರಿಸ್ಥಿತಿಗಳನ್ನು ಬದಲಾಯಿಸಲು ಶ್ರಮಿಸಿದಳು. ಭಾರತದಲ್ಲಿ ಸಿಪಾಯಿ ದಂಗೆಯ ಸಮಯದಲ್ಲೂ ಆಕೆ ಮಾಡಿದ ಸೇವೆ ಅಭೂತಪೂರ್ವವಾದದ್ದು. ಉತ್ತಮ ನರ್ಸಿಂಗ್ ಸೇವೆ ಮತ್ತು ಕೌಶಲ್ಯಾಭಿವೃದ್ದಿ ಕುರಿತು ಅನೇಕ ಪುಸ್ತಕಗಳನ್ನು ಬರೆದ ಫ್ಲಾರೆನ್ಸ್‌ ನೈಟಿಂಗೇಲ್‌, ಸಂಘಟನೆ, ಪರಿವೀಕ್ಷಣೆ, ಸ್ವಚ್ಚತೆ, ಹಾಗೂ ರೋಗಿಗಳೊಂದಿಗಿನ ಒಡನಾಟ ಕುರಿತ ಪುಸ್ತಕಗಳನ್ನೂ ಬರೆದಳು. ಫ್ಲಾರೆನ್ಸ್‌ ನೈಟಿಂಗೇಲ್‌ ದಾದಿಯಾಗಷ್ಟೇ ಅಲ್ಲ 200ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದು ಒಬ್ಬ ಲೇಖಕಿಯಾಗಿ ಹೆಸರುಗಳಿಸಿದಳು.

ಪ್ರತೀ ವರ್ಷ ಈ ಸುಸಂದರ್ಭವನ್ನು ಲಂಡನಿನ ವೆಸ್ಟ್‌ ಮಿನ್‌ಸ್ಟರ್‌ ಆ್ಯಬಿಯಲ್ಲಿ ಮೋಂಬತ್ತಿ ಪ್ರಾರ್ಥನೆಯ ಮೂಲಕ ಆಚರಿಸಲಾಗುತ್ತದೆ. ದಾದಿಯರು ಒಬ್ಬರಿಂದ ಇನ್ನೊಬ್ಬರಿಗೆ ಜ್ಞಾನವನ್ನು ಹಂಚುವುದರ ಸಂಕೇತವಾಗಿ ಉರಿಯುವ ಮೋಂಬತ್ತಿಯನ್ನು ಒಬ್ಬರಿಂದ ಇನ್ನೊಬ್ಬರಿಗೆ ಹಸ್ತಾಂತರಿಸುತ್ತಾ ಕೊನೆಗೆ ಅದನ್ನೊಂದು ಎತ್ತರದ ಪೀಠದ ಮೇಲೆ ಇರಿಸಲಾಗುತ್ತದೆ. ಫ್ಲಾರೆನ್ಸ್‌ ನೈಟಿಂಗೇಲ್‌ ಅವರ ಸಮಾಧಿಯಿರುವ ಸಂತ ಮಾರ್ಗರೆಟ್‌ ಚರ್ಚ್‌ನಲ್ಲಿ ಆಕೆಯ ಜನ್ಮದಿನದ ಬಳಿಕ ಬರುವ ರವಿವಾರದಂದು ಬೃಹತ್‌ ಸಮಾರಂಭವನ್ನು ಕೂಡ ಆಯೋಜಿಸಲಾಗುತ್ತದೆ.

1899ರಲ್ಲಿ ಸ್ಥಾಪನೆಗೊಂಡಿರುವ ಐ.ಸಿ.ಎನ್‌. ಆರೋಗ್ಯ ಸೇವಾ ವೃತ್ತಿನಿರತರ ಪ್ರಪ್ರಥಮ ಅಂತಾರಾಷ್ಟ್ರೀಯ ಸಂಸ್ಥೆಯಾಗಿದೆ. ಅಮೆರಿಕದ ಆರೋಗ್ಯ, ಶಿಕ್ಷಣ ಮತ್ತು ಕಲ್ಯಾಣ ಸಚಿವಾಲಯದ ಅಧಿಕಾರಿ ಡೊರೊಥಿ ಸೂತರ್‌ಲ್ಯಾಂಡ್‌ ಎಂಬವರು 1953ರಲ್ಲಿ ಅಂತಾರಾಷ್ಟ್ರೀಯ ದಾದಿಯರ ದಿನಾಚರಣೆ ನಡೆಸುವ ಪ್ರಸ್ತಾವವನ್ನು ಮಂಡಿಸಿದರು; ಅಮೆರಿಕದ ಆಗಿನ ಅಧ್ಯಕ್ಷ ಡ್ವೆ„ಟ್‌ ಡಿ. ಐಸೆನ್‌ ಹೋವರ್‌ ಪ್ರಪ್ರಥಮವಾಗಿ ಇದನ್ನು ಘೋಷಿಸಿದರು. 1965ರಲ್ಲಿ ಅಂತಾರಾಷ್ಟ್ರೀಯ ದಾದಿಯರ ಮಂಡಳಿ (ಐ.ಸಿ.ಎನ್‌) ಇದನ್ನು ಮೊತ್ತಮೊದಲ ಬಾರಿಗೆ ಆಚರಿಸಿತು. ಫ್ಲಾರೆನ್ಸ್‌ ನೈಟಿಂಗೇಲ್‌ ಅವರ ಜನ್ಮದಿನವಾಗಿರುವ ಮೇ 12ನ್ನು ಅಂತಾರಾಷ್ಟ್ರೀಯ ದಾದಿಯರ ದಿನವನ್ನಾಗಿ ಆಚರಿಸುವ ಘೋಷಣೆಯನ್ನು 1974ರ ಜನವರಿಯಲ್ಲಿ ಹೊರಡಿಸಲಾಯಿತು. ದಾದಿಯರ ದಿನಾಚರಣೆಯನ್ನು ಆರಂಭಿಸಿದ್ದಕ್ಕಾಗಿ ವಿಶ್ವದ 16 ಮಿಲಿಯ ದಾದಿಯರನ್ನು ಪ್ರತಿನಿಧಿಸುವ 130 ರಾಷ್ಟ್ರಗಳ ನರ್ಸಿಂಗ್‌ ಸಂಘಟನೆ (ಎನ್‌.ಎನ್‌.ಎ)ಗಳ ಒಕ್ಕೂಟವಾಗಿರುವ ದಿ ಇಂಟರ್‌ನ್ಯಾಶನಲ್‌ ಕೌನ್ಸಿಲ್‌ ಆಫ್ ನರ್ಸಸ್‌ (ಐ.ಸಿಎ.ನ್‌) ಶ್ಲಾಘನಾರ್ಹವಾಗಿದೆ.

ಫ್ಲಾರೆನ್ಸ್‌ ನೈಟಿಂಗೇಲ್‌ ಅವರಿಗೆ ಮೊದಲಿನಿಂದಲೂ ಶ್ರೀಮಂತ ಮಹಿಳೆಯರ ಬದುಕು ನೀರಸವೆನಿಸಿತ್ತು. ದುಬಾರಿ ಪೋಷಾಕುಗಳನ್ನು ಧರಿಸುವುದು, ಪಾರ್ಟಿಗಳಲ್ಲಿ ಭಾಗಿಯಾಗುವುದು, ಅತ್ತಿತ್ತ ಅಡ್ಡಾಡುವುದು, ನರ್ತನ, ಸಂಭ್ರಮ ವೈಭವ ಜೀವನ ಬೇಕಿರಲಿಲ್ಲ. ಜನ ಸೇವೆಯೇ ಮುಖ್ಯ ಧ್ಯೇಯವಾಗಿತ್ತು.

ಯಾವುದೇ ವ್ಯವಸ್ಥೆಗಳಿಲ್ಲದ, ಬೇಜವಾಬ್ದಾರಿಗಳ ಸರ್ಕಾರಿ ವ್ಯವಸ್ಥೆ, ಅಪಹಾಸ್ಯಗಳನ್ನು ಎದುರಿಸಿ ಕೂಡಾ, ಮಾನವೀಯ ಅನುಕಂಪ, ಸೇವಾ ಮನೋಭಾವನೆಗಳ ಹಾದಿಯಲ್ಲಿ ಬಂದ ಅಡೆತಡೆಗಳನ್ನೆಲ್ಲಾ ನಿವಾರಿಸಿ ಮಾನವ ಕುಲಕ್ಕೆ ಫ್ಲಾರೆನ್ಸ್‌ ನೈಟಿಂಗೇಲ್‌ ಸಲ್ಲಿಸಿದ ಸೇವೆ ಇಡೀ ವಿಶ್ವವೇ ಬೆರಗಾಗುವಂತೆ ಮಾಡಿತು. ತನ್ನ ಸೇವೆಯಲ್ಲಿ ದೇವರನ್ನು ಕಂಡ ಈ ಮಹಾತಾಯಿ ಮುಂದೆ ಮಾನವ ಕುಲವನ್ನು ಸಲಹುತ್ತಿರುವ ಅನೇಕ ಮಾನವೀಯ ದಾದಿಯರ ಪ್ರತಿನಿಧಿಯಾಗಿ ಎಂದೆಂದೂ ನೆನಪಿನಲ್ಲಿ ಉಳಿಯುತ್ತಾಳೆ.

ನಮ್ಮ ಸಮಾಜ ದಾದಿಯರನ್ನು ಗೌರವಾದರಗಳಿಂದ ಕಾಣುತ್ತಿಲ್ಲ. ಈ ಕೋರಾನಾ ಕಾಲದಲ್ಲಿ ದಾದಿಯರ ಸೇವೆ ಮರೆಯಲಾಗದಂತದು. ದಾದಿಯರ ಸೇವೆ ಮತ್ತು ಸದಾ ಅವರ ಮುಖದಲ್ಲಿರುವ ಮಂದಹಾಸದಿಂದ ರೋಗಿಗಳಲ್ಲಿ ಆತ್ಮಸ್ಥೈರ‍್ಯ ಹೆಚ್ಚಾಗುತ್ತದೆ. ವೈಯಕ್ತಿಕ ಸಮಸ್ಯೆ ಬದಿಗಿರಿಸಿ ರೋಗಿಗಳ ಬಗ್ಗೆ ಕಾಳಜಿ ತೋರಿಸುವ ಶುಶ್ರೂಷಕರ ಬಗ್ಗೆ ಸಮಾಜದಲ್ಲಿ ಗೌರವಾದರ ಹೆಚ್ಚಾಗಬೇಕು. ಗುಣಮಟ್ಟದ ಮತ್ತು ಪರಿಣಾಮಕಾರಿ ಆರೋಗ್ಯ ತಲುಪಿಸುವಲ್ಲಿ ಮತ್ತು ವ್ಯಕ್ತಿಗಳು, ಕುಟುಂಬಗಳು ಮತ್ತು ಸಮುದಾಯಗಳ ಆರೋಗ್ಯ ಅಗತ್ಯಗಳಿಗೆ ಸ್ಪಂದಿಸುವಲ್ಲಿ ದಾದಿಯರು ಪ್ರಮುಖ ಪಾತ್ರ ವಹಿಸುತ್ತಾರೆ. ದಾದಿಯರು ನಿಜಕ್ಕೂ ‘ಸೇವೆ, ಶುಶ್ರೂಷೆ, ಕರುಣೆಯ ಸಂಕೇತವಾಗಿದ್ದಾರೆ. ನರ್ಸಿಂಗ್ ಕೆಲಸವೆಂದರೆ ಅದು ಶೃದ್ದೆಯ ಸೇವೆ ಎಂದೆ ಹೇಳಬಹುದು. ಎಲ್ಲ ಸೇವೆಗಿಂತ ಆರೋಗ್ಯ ಸೇವೆ ಮಾನವೀಯ ಸಂಬಂಧವನ್ನು ಗಟ್ಟಿಗೊಳಿಸುತ್ತದೆ. ನರ್ಸ್ ಹುದ್ದೆ ಅತ್ಯಂತ ಪವಿತ್ರವಾದದ್ದು.

ವೈದ್ಯಕೀಯ ಕ್ಷೇತ್ರದಲ್ಲಿ ನರ್ಸ್‌ಗಳ ಸೇವೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಒಳ್ಳೆಯ ನರ್ಸ್‌ಗಳು ಇರುವರೆಡೆ ಒಳ್ಳೆಯ ವೈದ್ಯಕೀಯ ಸೇವೆ ಸಿಗುತ್ತದೆ. ರೋಗದಿಂದ ಬೇಸತ್ತು ಜೀವನದಲ್ಲಿ ಉತ್ಸಾಹವನ್ನೇ ಕಳೆದುಕೊಂಡವರಿಗೆ ಆತ್ಮಸ್ಥೈರ್ಯ ತುಂಬಿ ಆರೈಕೆ ಮಾಡುವ ನರ್ಸ್‌ಗಳ ಕೆಲಸ ವಿಶ್ವದಲ್ಲೇ ಪ್ರಶಂಸೆಗೆ ಪಾತ್ರವಾಗಿದೆ. ವೈದ್ಯರ ಸೇವೆ ಪರಿಪೂರ್ಣವಾಗುವಲ್ಲಿ ದಾದಿಯರ ನಿಸ್ವಾರ್ಥ ಸೇವೆ ಅತೀ ಅವಶ್ಯಕ.

ಸಾವಿರಾರು ಜನರ ಬದುಕನ್ನು ಉಳಿಸಿದ, ಸಾವಿರಾರು ಜನರ ಜೀವನವನ್ನು ಉತ್ತಮಗೊಳಿಸಿದ, ಶುಶ್ರೂಷಕಿ ವೃತ್ತಿಗೆ ಗೌರವ ಹಾಗೂ ಘನತೆಯನ್ನು ತಂದುಕೊಟ್ಟ, ಇಡಿ ವಿಶ್ವದಲ್ಲಿ ಆರೋಗ್ಯ ಆರೈಕೆ, ನೈರ್ಮಲ್ಯ ಹಾಗೂ ಆಸ್ಪತ್ರೆ ರಚನೆ ಹಾಗೂ ಆಡಳಿತದಲ್ಲಿ ಅಭೂತಪೂರ್ವ ಬದಲಾವಣೆಯನ್ನು ತಂದ ಫ್ಲಾರೆನ್ಸ್ ನೈಟಿಂಗೇಲ್ ಎಲ್ಲಾ ಕಾಲಕ್ಕೂ, ಎಲ್ಲಾ ದೇಶಕ್ಕೂ ಆದರ್ಶಪ್ರಾಯರು. ಶುಶ್ರೂಷಕಿಯರಿಗಂತು ಫ್ಲಾರೆನ್ಸ್‌ ನೈಟಿಂಗೇಲ್ ಸದಾ ಆದರ್ಶ.

ಜೀವನದಲ್ಲಿ ಎರಡು ಶ್ರೇಷ್ಠ ದಿನಗಳಿವೆ. ಒಂದು ನಾವು ಹುಟ್ಟಿದ ದಿನ. ಇನ್ನೊಂದು ಹುಟ್ಟಿದ್ದು ಏಕೆಂದು ಗೊತ್ತಾದ ದಿನ. ಜೀವನ ಇರುವುದು ಪಡೆದುಕೊಳ್ಳುವುದಕ್ಕಲ್ಲ. ಅದು ಇರುವುದು ಕೊಡುವುದಕ್ಕೆ. ಪ್ರೀತಿಯಿಂದ ಸ್ಫೂರ್ತಿ ಹೊಂದಿದ ಮತ್ತು ಜ್ಞಾನದ ಮಾರ್ಗದರ್ಶನ ಹೊಂದಿದ ಜೀವನವೇ ಸಾರ್ಥಕ ಜೀವನ. ದೀಪಧಾರಿಣಿ ದಾದಿ ಎಂದು ಜಗದ್ವೀಖ್ಯಾತಳಾದ ಫ್ಲಾರೆನ್ಸ್‌ ನೈಟಿಂಗೇಲ್ ಶುಶ್ರೂಷಕಿಯರಿಗೆ ಸದಾ ಆದರ್ಶವಾಗಿರಲಿ ಎಂದು ಕರೋನಾ ಸಂದರ್ಭದ ಈ ಕಷ್ಟ ಕಾಲದಲ್ಲಿ ನಾವೆಲ್ಲರೂ ಆಶಿಸೋಣ.

✍. ಕಾನತ್ತಿಲ್ ರಾಣಿ ಅರುಣ್

“ವೈದ್ಯೊ ನಾರಾಯಣೋ ಹರಿ” ಜುಲೈ-1, ರಾಷ್ಟ್ರೀಯ ವೈದ್ಯರ ದಿನ ವಿಶೇಷ ಲೇಖನ

“ವೈದ್ಯೊ ನಾರಾಯಣೋ ಹರಿ” ರಾಷ್ಟ್ರೀಯ ವೈದ್ಯರ ದಿನ ವಿಶೇಷ:

ಜುಲೈ 1ರಂದು ರಾಷ್ಟ್ರೀಯ ವೈದ್ಯರ ದಿನವಾಗಿ ಭಾರತದಾದ್ಯಂತ ಆಚರಿಸಲಾಗುತ್ತದೆ. 1991ರಲ್ಲಿ ಭಾರತ ಸರಕಾರವು ಪ್ರಸಿದ್ಧ ವೈದ್ಯ ‘ಭಾರತರತ್ನ’ ಡಾ. ಬಿಧಾನ್ ಚಂದ್ರ ರಾಯ್ (ಡಾ. ಬಿ.ಸಿ.ರಾಯ್) ರವರ ಜನ್ಮ ದಿನ ಮತ್ತು ಸ್ಮ್ರತಿದಿನದ (ಜನನ: ಜುಲೈ 01-1882 ಮರಣ ಜುಲೈ 01-1962) ಗೌರವ ಮತ್ತು ಗೌರವಾರ್ಪಣೆ ಮಾಡಲು ರಾಷ್ಟ್ರೀಯ ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತದೆ.
ವೈದ್ಯರ ಪಾತ್ರಗಳು, ಪ್ರಾಮುಖ್ಯತೆಗಳು, ಜವಾಬ್ದಾರಿಗಳನ್ನು ಅರಿತುಕೊಳ್ಳಲು ವೈದ್ಯಕೀಯ ವೃತ್ತಿಯನ್ನು ಗೌರವಿಸುವ ಸಲುವಾಗಿ ವೈದ್ಯರ ದಿನವನ್ನು ಆಚರಿಸಿ ಅವರ ವೃತ್ತಿ ಧರ್ಮವನ್ನು ಗೌರವಿಸಲ್ಪಡುವುದು ವಿಶೇಷವಾಗಿದೆ.
ಪ್ರತಿಯೊಬ್ಬರ ಜೀವನದಲ್ಲಿ ವೈದ್ಯರ ಪಾತ್ರ, ಮಹತ್ವ ಮತ್ತು ಅತ್ಯವಶ್ಯಕತೆಯ ಅರಿವು ಮೂಡಿಸುವುದು ಈ ಜಾಗೃತಿ ಪ್ರಚಾರದ ವಾರ್ಷಿಕ ಆಚರಣೆಯು ಮುಖ್ಯ ಉದ್ದೇಶವಾಗಿದೆ.. ವೈದ್ಯರ ದಿನಾಚರಣೆಯಿಂದ ಅವರ ವೃತಿ ಜೀವನದ ಬದ್ಧತೆಯನ್ನು ಗಟ್ಟಿಗೊಳಿಸಲು ಸಹಾಯ ಮಾಡುತ್ತದೆ. ಭಾರತದಲ್ಲಿ ಅತೀ ಹೆಚ್ಚಿನ ಜನತೆಯು ವೈದ್ಯರ ಮತ್ತು ಅವರ ಗುಣಮಟ್ಟದ ಚಿಕಿತ್ಸೆಯ ಮೇಲೆ ಅವಲಂಬಿತರಾಗಿದ್ದು, ಇಂತಹ ಆಚರಣೆಯಿಂದ ರೋಗಿಗಳಿಗೆ ಗುಣ ಮಟ್ಟದ ಚಿಕಿತ್ಸೆಗಳು, ಮತ್ತದರ ಲಭ್ಯತೆಗಳ ಬಗ್ಗೆ ಸಂಪೂರ್ಣ ಮಾಹಿತಿ ದೊರೆದಂತಾಗುತ್ತದೆ.

ರಾಷ್ಟ್ರೀಯ ವೈದ್ಯರ ದಿನದ ಸಮಾರಂಭದ ವಿಶೇಷತೆ:
* ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನು ಸರಕಾರಗಳು ಮತ್ತು ಸರಕಾರೇತರ ಆರೋಗ್ಯ ಸಂಸ್ಥೆಗಳಿಂದ ಆಚರಿಸಲಾಗುತ್ತದೆ.
* ವಿವಿಧ ರೀತಿಯ ಆರೋಗ್ಯ ಶಿಭಿರಗಳು ರಕ್ತದಾನ ಮತ್ತು ಆರೋಗ್ಯ ಚಟುವಟಿಕೆಗಳನ್ನು ನಡೆಸಲಾಗುತ್ತದೆ.
* ಆರೋಗ್ಯದ ಪರಿಶೀಲನೆ, ಚಿಕಿತ್ಸೆ, ರೋಗಗಳ ತಡೆಗಟುವಿಕೆ, ರೋಗ ನಿರ್ಣಯ, ಮುಂತಾದದವುಗಳ ಕುರಿತು ಚರ್ಚೆಗಳನ್ನು ಆಯೋಜಿಸಲಾಗುತ್ತದೆ.
* ಉತ್ತಮ ಮತ್ತು ಆರೋಗ್ಯಕರ ಸಾಮಾಜಿಕ ಅಭಿವೃದ್ಧಿಗಾಗಿ ವೈದ್ಯರ ಮೂಲಕ ರೋಗಿಗಳಿಗೆ ವೈದ್ಯಕೀಯ ಸೇವೆಗಳನ್ನು ಉತ್ತೇಜಿಸಲು ಕಾರ್ಯಕ್ರಮ ರೂಪಿಸಲಾಗುತ್ತದೆ.
* ಸಾಮಾನ್ಯ ವೈದ್ಯಕೀಯ ವೆಚ್ಚಗಳು ಇಲ್ಲದೆ ಆರೋಗ್ಯ ಸೇವೆಗಳನ್ನು ತಿಳಿಸಲು ಸಾರ್ವಜನಿಕ ಸ್ಥಳಗಳಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರಗಳನ್ನು ಆಯೋಜಿಸಲಾಗುತ್ತದೆ.
* ಆರೋಗ್ಯ ಸ್ಥಿತಿ, ಆರೋಗ್ಯ ಸಲಹೆ, ಮಹಿಳೆಯರ ಮತ್ತು ಮಕ್ಕಳಿಗೆ ಪೋಶಕಾಂಶಯುಕ್ತ ಆಹಾರದ ಬಗ್ಗೆ ಮಾಹಿತಿಗಳ ಜೊತೆಗೆ ಶುಚಿತ್ವದ ಬಗ್ಗೆ ಮಾಹಿತಿ ನೀಡಲಾಗುತ್ತದೆ.
* ವೈದ್ಯಕೀಯ ವೃತಿಯ ಬಗ್ಗೆ ವಿದ್ಯಾರ್ಥಿಗಳಿಗೆ ಆಶಕ್ತಿ ಮೂಡಿಸಲು ಶಾಲಾ-ಕಾಲೇಜುಗಳಲ್ಲಿ ಸೇವೆಗಳ ಬಗ್ಗೆ ಮಾಹಿತಿಗಳನ್ನು ನೀಡುವುದು, ಮತ್ತು ಇದಕ್ಕೆ ಸಂಭಂದಿಸಿದ ರಸಪ್ರಶ್ನೆ, ಕ್ರೀಯಾ ಚಟುವಟಿಕೆಗಳು, ಸೃಜನಾತ್ಮಕ ಜ್ಞಾನಕ್ಕಾಗಿ ವೈಜ್ಞಾನಿಕ ಸಾಧನ ಸಲಕರಣೆಗಳನ್ನು ಒದಗಿಸಿಕೊಡುವುದು ಇತ್ಯಾದಿಯಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
* ಜುಲೈ 1ರಂದು ಸಮಾಜದ ನಾಗರಿಕರು, ಕುಟುಂಬಸ್ಥರು, ಸ್ನೇಹಿತರನ್ನೊಳಗೊಂಡಂತೆ ಎಲ್ಲರು ಶುಭಾಶಯ ಪತ್ರಗಳು, ಈ ಕಾರ್ಡ್‍ಗಳು, ಮೆಚ್ಚುಗೆ ಕಾರ್ಡ್, ಸಾಮಾಜಿಕ ಜಾಲತಾಣಗಳಲ್ಲಿಯೂ ಅವರಿಗೊಂದು ಶುಭಾಶಯಗಳನ್ನು ಕಳುಹಿಸಿ ಕರ್ತವ್ಯನಿರತ ಜವಾಬ್ದಾರಿಯುತ ವೈದ್ಯರುಗಳಿಗೆ ಶುಭ ಹಾರೈಸೋಣ. ಮತ್ತವರ ಜವಾಬ್ದಾರಿಯುತ ಕರ್ತವ್ಯಕ್ಕೆ ಹಾಗೂ ಕುಟುಂಬಕ್ಕೆ ಬೆಂಬಲವಾಗಿ ನಿಂತು ಸಹಕರಿಸೋಣ.

. ಕಾನತ್ತಿಲ್ ರಾಣಿ ಅರುಣ್

✍. ಕಾನತ್ತಿಲ್ ರಾಣಿ ಅರುಣ್

ಕುಶಾಲನಗರದಲ್ಲಿ ವಿಶ್ವ ಪರಿಸರ ದಿನಾಚರಣೆ : ಗಿಡನೆಟ್ಟು ಬೆಳೆಸುವ ಆಂದೋಲನಕ್ಕೆ ಚಾಲನೆ

ಕುಶಾಲನಗರದಲ್ಲಿ ವಿಶ್ವ ಪರಿಸರ ದಿನಾಚರಣೆ :

ಗಿಡನೆಟ್ಟು ಬೆಳೆಸುವ ಆಂದೋಲನಕ್ಕೆ ಚಾಲನೆ

ಕುಶಾಲನಗರ: ಜಿಲ್ಲಾ ಅರಣ್ಯ ಇಲಾಖೆ, ಕುಶಾಲನಗರ ಪಟ್ಟಣ ಪಂಚಾಯ್ತಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿ, ತಾಲ್ಲೂಕು ಸಾಮಾಜಿಕ ಅರಣ್ಯ ಇಲಾಖೆ, ಕುಶಾಲನಗರ ಅರಣ್ಯ ವಲಯ ಅರಣ್ಯಾಧಿಕಾರಿಗಳ ಕಛೇರಿಯ ವತಿಯಿಂದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕೊಡಗು ಪ್ರಾದೇಶಿಕ ಕಛೇರಿ, ತಾಲ್ಲೂಕು ಜೀವಿ ವೈವಿಧ್ಯ ನಿರ್ವಹಣಾ ಮಂಡಳಿ ಹಾಗೂ ಆದಿಶಂಕರಾಚಾರ್ಯ ಬಡಾವಣೆಯ  ಹಸಿರು ಪಡೆಯ ಸಹಯೋಗದಲ್ಲಿ ಕುಶಾಲನಗರ ಪಟ್ಟಣದ ಆದಿಶಂಕರಾಚಾರ್ಯ ಮತ್ತು ಅವಧಾನಿ ಬಡಾವಣೆಯ ಮೈದಾನದ ಬಳಿ ಶುಕ್ರವಾರ ( 5 ನೇ ಜೂನ್ 2020 ) “ಮಾಲಿನ್ಯ ನಿಯಂತ್ರಿಸಿ : ಜೀವಿ ವೈವಿಧ್ಯ ಉಳಿಸಿ” ಎಂಬ ಉದ್ಘೋಷಣೆಯಡಿ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆ : 2020  ಹಾಗೂ ನಗರ ಹಸಿರೀಕರಣ  ಯೋಜನೆಯಡಿ ಪಟ್ಟಣದ ಬಡಾವಣೆಗಳಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಬಡಾವಣೆಯ ಮಕ್ಕಳು ಪರಿಸರ ಘೋಷಣಾ ಫಲಕಗಳನ್ನು ಹಿಡಿದು ಪರಿಸರ ಘೋಷಣೆಗಳ ಪ್ರಚುರಪಡಿಸಿದರು. ಈ ಸಂದರ್ಭ ಹೊಂಗೆ, ಬೇವು, ಸಂಪಿಗೆ, ಶ್ರೀಗಂಧ, ಮಹಾಗಣಿ ಗಿಡಗಳನ್ನು ನೆಡಲಾಯಿತು. ವಿಜ್ಞಾನ ಪರಿಷತ್ತಿನ ಪದಾಧಿಕಾರಿಗಳು,ಬಡಾವಣೆಯ ಹಸಿರು ಪಡೆ, ಪುಷ್ಪಾಂಜಲಿ ಮಹಿಳಾ ಸಂಘಟನೆಯ  ಕಾರ್ಯಕರ್ತರು, ಪರಿಸರಾಸ್ತಕರು , ವಿವಿಧ ಸಂಘ- ಸಂಸ್ಥೆಗಳ ಪದಾಧಿಕಾರಿಗಳು, ನಿವಾಸಿಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ  ಕೋವಿಡ್ – 19 ರ ಹಿನ್ನೆಲೆಯಲ್ಲಿ ಎಲ್ಲರೂ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಗಿಡ ನೆಡಲಾಯಿತು.

ಪರಿಸರ ದಿನ ಮಹತ್ವ ಕುರಿತು ಮಾತನಾಡಿದ ಪರಿಸರ ಜಾಗೃತಿ ಆಂದೋಲನದ ಜಿಲ್ಲಾ ಸಂಯೋಜಕರೂ ಆದ ಕಾರ್ಯಕ್ರಮ ಸಂಘಟಕ ಟಿ.ಜಿ.ಪ್ರೇಮಕುಮಾರ್, ನಾವು ನೆಲ- ಜಲ, ಅರಣ್ಯ, ಜೀವಿ ವೈವಿಧ್ಯ ಸಂರಕ್ಷಣೆಯೊಂದಿಗೆ ಪರಿಸರ ಸಂರಕ್ಷಣೆಗೆ ಸಂಕಲ್ಪ ತೊಡುವ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನೀಡಬೇಕಿದೆ ಎಂದರು.

ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿಯು ಅರಣ್ಯ ಇಲಾಖೆ ಮತ್ತು ಪಟ್ಟಣ ಪಂಚಾಯ್ತಿ ಸಹಕಾರದೊಂದಿಗೆ ಪಟ್ಟಣದಲ್ಲಿ ಕಳೆದ 6 ವರ್ಷಗಳಿಂದ ಪಟ್ಟಣದಲ್ಲಿ ಗಿಡನೆಡುವ ಕಾರ್ಯದಲ್ಲಿ ತೊಡಗಿದೆ. ಪ್ರತಿಯೊಬ್ಬರೂ ಮನೆ ಬಳಿ ಗಿಡ ನೆಟ್ಟು ಬೆಳೆಸುವ ಮೂಲಕ ಪಟ್ಟಣದಲ್ಲಿ ಸ್ವಚ್ಛ ,ಸುಂದರ ಹಸಿರು ಪರಿಸರ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಗಿಡನೆಡುವ ಕಾರ್ಯಕ್ಕೆ ಚಾಲನೆ ನೀಡಿದ  ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಎಸ್.ಎಂ.ಸುಜಯ್ ಕುಮಾರ್,  ಪ್ರತಿಯೊಬ್ಬರೂ ತಮ್ಮನ್ನು ಪರಿಸರ ಸಂರಕ್ಷಣೆಯಲ್ಲಿ ತೊಡಗಬೇಕು.  ಪಟ್ಟಣದಲ್ಲಿ ಗಿಡನೆಟ್ಟು ಬೆಳೆಸುವ ಈ ಯೋಜನೆಗೆ ಪಂಚಾಯ್ತಿ ವತಿಯಿಂದ ಪೂರ್ಣ ಸಹಕಾರ ನೀಡಲಾಗುವುದು ಎಂದರು. ಉತ್ತಮ ಪರಿಸರ ಸಂರಕ್ಷಣೆಗೆ ಎಲ್ಲರೂ ಪಣತೊಡಬೇಕು ಎಂದರು.

ಪಟ್ಟಣ ಪಂಚಾಯ್ತಿ ಸದಸ್ಯ ಕಲೀಮುಲ್ಲ ಪರಿಸರ ದಿನಾಚರಣೆಯ ಮಾಹಿತಿಯ ಕರಪತ್ರ ಬಿಡುಗಡೆಗೊಳಿಸಿದರು. ಭವಿಷ್ಯತ್ತಿನ ದೃಷ್ಠಿಯಿಂದ ನಾವು ಹೆಚ್ಚೆಚ್ಚು ಗಿಡಗಳನ್ನು ನೆಟ್ಟು ಬೆಳೆಸುವ ಮೂಲಕ ಉತ್ತಮ ಪರಿಸರ ಸಂರಕ್ಷಣೆ ಮತ್ತು ಅಂತರ್ಜಲ ವೃದ್ಧಿಗೆ ಹೆಚ್ಚಿನ ಕಾಳಜಿ ವಹಿಸಬೇಕಿದೆ ಎಂದರು. ಗಿಡ- ಮರಗಳು ಪರಿಸರ ಸಮತೋಲನ ಕಾಪಾಡಲು ಪೂರಕವಾಗಿವೆ ಎಂದರು.

ತಾಲ್ಲೂಕು ಸಾಮಾಜಿಕ ಅರಣ್ಯ ಇಲಾಖೆಯ ಆರ್.ಎಫ್.ಓ. ನಮನ ನಾರಾಯಣ ನಾಯ್ಕ್ ಮಾತನಾಡಿ, ಭವಿಷ್ಯತ್ತಿನ ದೃಷ್ಠಿಯಿಂದ ನಾವು ಹೆಚ್ಚೆಚ್ಚು ಗಿಡಗಳನ್ನು ನೆಟ್ಟು ಬೆಳೆಸುವ ಮೂಲಕ ಉತ್ತಮ ಪರಿಸರ ಸಂರಕ್ಷಣೆ ಮತ್ತು ಅಂತರ್ಜಲ ವೃದ್ಧಿಗೆ ಹೆಚ್ಚಿನ ಕಾಳಜಿ ವಹಿಸಬೇಕಿದೆ ಎಂದರು. ಗಿಡ- ಮರಗಳು ಪರಿಸರ ಸಮತೋಲನ ಕಾಪಾಡಲು ಪೂರಕವಾಗಿವೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಎಚ್.ಎಸ್.ಅಶೋಕ್, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಎಸ್.ಎಂ.ಸುಜಯ್ ಕುಮಾರ್, ಹಿರಿಯ ನಾಗರಿಕ ಎಂ.ಎಚ್.ನಜೀರ್ ಅಹ್ಮದ್ ಗಿಡ ನೆಡುವ ಮೂಲಕ ಪರಿಸರ ಆಂದೋಲನಕ್ಕೆ ಚಾಲನೆ ನೀಡಿದರು. ಸಹಾಯಕ ಕೃಷಿ ನಿರ್ದೇಶಕ ಎಚ್.ಎಸ್.ರಾಜಶೇಖರ್ , ಪರಿಸರ ಪ್ರತಿಜ್ಞಾ ವಿಧಿ ಬೋಧಿಸಿದರು. ಪಟ್ಟಣ ಪಂಚಾಯ್ತಿ ಸದಸ್ಯ ಕಲೀಮುಲ್ಲಾ , ಆರೋಗ್ಯ ನಿರೀಕ್ಷಕ ಉದಯ್ ಕುಮಾರ್, ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ ಉಪಾಧ್ಯಕ್ಷ ಎಂ.ಎನ್.ವೆಂಕಟನಾಯಕ್, ಪದಾಧಿಕಾರಿಗಳಾದ ಜಿ.ಶ್ರೀನಾಥ್,  ಜಿ.ಶ್ರೀಹರ್ಷ, , ಟಿ.ವಿ.ಶೈಲಾ,  ನಿವೃತ್ತ ಉಪನ್ಯಾಸಕ ಕೆ.ವಿ.ಉದಯ್ ,‌ವಕೀಲ ಆರ್.ಕೆ.ನಾಗೇಂದ್ರಬಾಬು, ಪಂಚಾಯ್ತಿ ನೈಮರ್ಲ್ಯೀಕರಣದ ಮೇಲ್ವಿಚಾರಕ ಎಚ್.ಎನ್.ಮೋಹನ್ ಕುಮಾರ್, ಸಂಘಟನೆಗಳ ಪ್ರಮುಖರಾದ ಟಿ.ಎಸ್.ಶಾಂಭಮೂರ್ತಿ, ಎಚ್.ಪಿ.ಉದಯ್,  ಎನ್.ಡಿ.ಯೋಗೇಶ್, ಟಿ.ಬಿ.ಮಂಜುನಾಥ್,  ಎಚ್.ಜಿ.ಕುಮಾರ್, ಕೆ.ಬಿ.ರಾಜು, ಹಿರಿಯ ನಾಗರಿಕರಾದ   ಎಂ.ಜಿ.ಪ್ರಕಾಶ್, ಮೂಡೇರ ಈರಪ್ಪ, ನಾರಾಯಣನ್, ಮಹಿಳಾ ಸಂಘಟನೆಯ ಪ್ರಮುಖರಾದ ವಿನು ಪೂವಯ್ಯ, ರೋಹಿಣಿ,ಗಾಯಿತ್ರಿ, ಸುಲೋಚನ, ಮಾಲತಿ, ಯಶೋಧ ಮಂದಣ್ಣ, ಹಸಿರು ಪಡೆ ಕಾರ್ಯಕರ್ತರು , ಬಡಾವಣೆಯ ವಿದ್ಯಾರ್ಥಿಗಳು, ಇತರರು ಇದ್ದರು.

ವರದಿ: ✍. ಟಿ.ಜಿ.ಪ್ರೇಮಕುಮಾರ್,

ವರ್ಷದ ಪ್ರತಿ ದಿನವೂ ನಮಗೆ ಪರಿಸರ ದಿನವಾಗಬೇಕು

ವರ್ಷದ ಪ್ರತಿ ದಿನವೂ ನಮಗೆ ಪರಿಸರ ದಿನವಾಗಬೇಕು

ಜೂನ್‌ 5 ವಿಶ್ವ ಪರಿಸರ ದಿನ ವಿಶೇಷ ಲೇಖನ:

ಪರಿಸರ ಮಾಲಿನ್ಯವನ್ನು ಸಂಪೂರ್ಣವಾಗಿ ನಿವಾರಿಸಿ, ಸುಂದರವಾದ ಭೂಮಿಯನ್ನು ಸಮಗ್ರ ಹಿತಾಸಕ್ತಿಯ ರಕ್ಷಣೆಗಾಗಿ ರೂಪಿಸಲು ಈ ವಿಶ್ವ ಪರಿಸರ ದಿನ ಆಚರಣೆಯು ಪ್ರೇರೇಪಿಸುತ್ತದೆ.

ವಿಶ್ವ ಪರಿಸರ ದಿನಾಚರಣೆ ಯನ್ನು 1972 ರಲ್ಲಿ ಯು.ಎನ್. ಜನರಲ್ ಅಸೆಂಬ್ಲಿಯಿಂದ ಮಾನವ ಪರಿಸರಕ್ಕೆ ಸಂಬಂಧಿಸಿದ ಸ್ಟಾಕ್ಹೋಮ್ ಸಮ್ಮೇಳನದ ಮೊದಲ ದಿನದಂದು ಸ್ಥಾಪಿಸಲಾಯಿತು, ಇದರ ಪರಿಣಾಮವಾಗಿ ಮಾನವ ಸಂವಹನ ಮತ್ತು ವಾತಾವರಣದ ಏಕೀಕರಣದ ಬಗ್ಗೆ ಚರ್ಚೆಗಳು ನಡೆದವು. ಎರಡು ವರ್ಷಗಳ ನಂತರ, 1974 ರಲ್ಲಿ “ವೆನ್ ಒನ್ ಅರ್ಥ್” ಎಂಬ ಥೀಮ್‌ನೋಂದಿಗೆ ಮೊದಲ ನಡೆಯಿತು. 1974 ರಿಂದ ಆಚರಣೆಯನ್ನು ವಾರ್ಷಿಕವಾಗಿ ನಡೆಸಲಾಗಿದ್ದರೂ, 1987 ರಲ್ಲಿ ವಿವಿಧ ಆತಿಥೇಯ ರಾಷ್ಟ್ರಗಳು ಆಯ್ಕೆ ಮಾಡುವ ಮೂಲಕ ಈ ಚಟುವಟಿಕೆಯ ಕೇಂದ್ರವನ್ನು ತಿರುಗಿಸುವ ಉದ್ದೇಶವು ಪ್ರಾರಂಭವಾಯಿತು.

ವಿಶ್ವದಲ್ಲಿ ಮನುಷ್ಯ ಜೀವಿ ಏಕಾಂಗಿಯಲ್ಲ, ಈ ಸೃಷ್ಟಿ ಮನುಷ್ಯನ ಸ್ವತ್ತು ಅಲ್ಲವೇ ಅಲ್ಲಾ, ನಮ್ಮ ಸುತ್ತ-ಮುತ್ತ ಪ್ರಾಣಿ-ಪಕ್ಷಿ, ಕಾಡು ಮರ, ಬೆಟ್ಟ-ಗುಡ್ಡಗಳು, ಕ್ರೀಮಿ ಕೀಟ ನದಿ, ಹಳ್ಳ-ಕೊಳ್ಳ ಸರೋವರ, ಸಮುದ್ರ ಸಾಗರ, ಗಾಳಿ, ಮಳೆ, ನೀರು, ಮಣ್ಣು ಕಲ್ಲು, ಆಕಾಶ ಬೆಳಕು ಇವೆಲ್ಲವುಗಳು ಇವೆ. ಇವುಗಳೆಲ್ಲವನ್ನು ಒಳಗೊಂಡ ಸಮೂಹವೇ ಪರಿಸರ ಎನ್ನಬಹುದು.

ನಾವು ವಾಸಿಸುತ್ತಿರುವ ಸುತ್ತ ಮುತ್ತಲಿನ ವಾತಾವರಣವೇ ನಮ್ಮ ಪರಿಸರ. ಇದು ಮಾನವನ ಸಾಮಾಜಿಕ, ಮಾನಸಿಕ, ದೈಹಿಕ ಬೆಳವಣಿಗೆಗಳ ಮೇಲೆ ಪರಿಣಾಮ ಬೀರುತ್ತದೆ. ಇದನ್ನು ಸ್ವಚ್ಛವಾಗಿರಿಸಿಕೊಳ್ಳುವುದು ನಮ್ಮೆಲ್ಲರ ಹೊಣೆ. ಆದರೆ ಅದು ನಮ್ಮಿಂದ ಸಾಧ್ಯವಾಗದೆ ಹೋಗುತ್ತಿರುವುದು ಒಂದು ಶೋಚನೀಯ ಸಂಗತಿ. ಇಂದಿನ ದಿನಗಳಲ್ಲಿ ನಾವು ಎದುರಿಸುತ್ತಿರುವ ಮೂರು ಮುಖ್ಯವಾದ ಪರಿಸರ ಮಾಲಿನ್ಯಗಳೆಂದರೆ ವಾಯು ಮಾಲಿನ್ಯ, ಜಲ ಮಾಲಿನ್ಯ ಮತ್ತು ಶಬ್ದ ಮಾಲಿನ್ಯ.

ಪ್ರಸ್ತುತ ಜಗತ್ತಿನಲ್ಲಿ ಆಧುನಿಕತೆ, ನಗರೀಕರಣ, ಕೈಗಾರೀಕರಣ, ವಿಜ್ಞಾನ, ತಂತ್ರಜ್ಞಾನದ‌ ಅಭಿವೃದ್ಧಿ ಎಂಬ ಹತ್ತು ಹಲವು ಕಾರಣಗಳಿಂದ ಇಂದು ಪರಿಸರಕ್ಕೆ ತೀವ್ರ ಧಕ್ಕೆಯುಂಟಾಗಿದ್ದು, ಪರಿಸರವನ್ನು ರಕ್ಷಿಸುವ, ಸಂರಕ್ಷಿಸುವ ಕರ್ತವ್ಯ ಪ್ರತಿಯೊಬ್ಬರದೂ ಆಗಿದ್ದು, ಈ ಕರ್ತವ್ಯವನ್ನು ನಮಗೆಲ್ಲರಿಗೂ ನೆನಪಿಸುವ ಮಹತ್ವದ ಉದ್ದೇಶ ಕೂಡಾ ಈ ಪರಿಸರ ದಿನಾಚರಣೆಯಲ್ಲಿ ಅಡಗಿದೆ. ಪರಿಸರ ದಿನಾಚರಣೆಯ ಈ ಸಂದರ್ಭದಲ್ಲಿ ನಮ್ಮ ಮೇಲೆ ಪರಿಸರ ಸಂರಕ್ಷಣೆಯ ಜವಾಬ್ದಾರಿ ತುಸು ಹೆಚ್ಚಾಗಿಯೇ ಇದೆ. ಇಂದಿನ ಪರಿಸರ ಮಾಲಿನ್ಯದ ಗೂಡಾಗಿದ್ದು, ನಮ್ಮ ಇರುವಿಕೆಗೆ ಅರ್ಥ ನೀಡಿದ ಪರಿಸರ ಮಾತೆಯನ್ನು ನಾವು, ನಮ್ಮ ಕಾರ್ಯಗಳಿಂದ ಕಲುಷಿತಗೊಳಿಸಿ, ಅದರ ದುಷ್ಪರಿಣಾಮಗಳನ್ನು ಈಗಾಗಲೇ ಎದುರಿಸುತ್ತಿದ್ದೇವೆ.

ನಿಸರ್ಗದ ಜೊತೆ ಸಮಾನ್ಯ ಜೀವಿಯಂತೆ ಬೆರೆತು ಬಾಳಬೇಕಾದ ಮಾನವ ಅಭಿವೃದ್ದಿ ಎನ್ನುವ ಮಾನದಂಡದಿಂದ ಸಂಪೂರ್ಣ ಕುರುಡಾಗಿದ್ದಾನೆ. ತನ್ನ ಸ್ವಾರ್ಥ ಬದುಕಿಗಾಗಿ ಇಂದು ಪರಿಸರ ನಾಶಮಾಡುತ್ತಿರುವುದರಿಂದ ವನ್ಯ ಜೀವಸಂಕುಲಗಳ ನಾಶ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮನುಷ್ಯ ತಾನು ಸಕಲ ಜೀವ ಸಂಕುಲಗಳಂತೆ ಒಂದು ಜೀವಿ ಎನ್ನುವುದನ್ನು ಮರೆತು ಇಡೀ ಜೀವ ಸಂಕುಲ, ಅರಣ್ಯ ಸಂಪತ್ತನ್ನು ನಾಶ ಮಾಡಲು ಹೊರಟಿದ್ದಾನೆ. ನೈಸರ್ಗಿಕ ಪ್ರದೇಶಗಳನ್ನು ಹಾಗೂ ಅಳಿವಿನಂಚಿನಲ್ಲಿರುವ ಜೀವ ಸಂಕುಲವನ್ನು ರಕ್ಷಿಸಿ ಉಳಿಸಬೇಕಾದ ಮನುಷ್ಯನೇ ಇಂದು ಅಧಿಕಾರ ಮತ್ತು ಸಂಪತ್ತಿನ ಆಸೆ ಆಮಿಷಗಳಿಗೆ ಬಲಿಯಾಗಿ ಪರಿಸರ ನಾಶಕ್ಕೆ ಮುಂದಾಗಿರುವುದು ದುರಾದೃಷ್ಟಕರ ಸಂಗತಿ.

ಜೂನ್ ತಿಂಗಳಿಗೆ ಒಂದು ವಿಶೇಷತೆ ಇದೆ. ಇದು ವಿಶ್ವ ಪರಿಸರ ದಿನಾಚರಣೆಯ ತಿಂಗಳು. ಇದು ನಾವು ನಮ್ಮ‌ ಪರಿಸರದ ಬಗ್ಗೆ ತಿಳಿಯುವ, ಮಹತ್ವವನ್ನು ಅರಿಯುವ ಹಾಗೂ ಈ ದಿನಗಳಲ್ಲಿ ನಮ್ಮ ಪರಿಸರಕ್ಕೆ ಆಗುತ್ತಿರುವ ಹಾನಿಯನ್ನು ಅರಿತು, ಅದರ ಸಂರಕ್ಷಣೆಯ ಬಗ್ಗೆಯೂ ಆಲೋಚಿಸಬೇಕಾದದ್ದನ್ನು ನೆನಪಿಸುವ ಮಹತ್ತರವಾದ ದಿನ. ಪರಿಸರವಿಲ್ಲದೆ ನಮ್ಮ ಅಸ್ತಿತ್ವಕ್ಕೆ ಯಾವುದೇ ರೀತಿಯ ಬೆಲೆಯಿರುವುದಿಲ್ಲ. ಪುರಾಣ ಕಾಲದಿಂದಲೂ ರಾಜಕುಮಾರರೂ ಋಷಿಗಳ ಆಶ್ರಮದಲ್ಲಿಯೇ ಇದ್ದುಕೊಂಡೇ ಈ ಸಹಜ ಪ್ರಕೃತಿಯ ಮಡಿಲಲ್ಲಿಯೇ ವಿದ್ಯೆ ಕಲಿತರು. ಪರಿಸರವನ್ನು ಕಾಪಾಡಿಕೊಳ್ಳುವುದರ ಮಹತ್ವವನ್ನು ಅರಿತರು. ಇಂದೂ ಕೂಡ ಪ್ರತಿಯೊಬ್ಬರೂ ಪರಿಸರದ ಬಗ್ಗೆ ಅರಿಯಬೇಕಾದ ಅವಶ್ಯಕತೆ, ಅನಿವಾರ್ಯತೆ ಎರಡೂ ಇದೆ.

ಜಾಗತಿಕ ಮಟ್ಟದಲ್ಲಿ ಸುಮಾರು ನೂರಕ್ಕಿಂತ ಹೆಚ್ಚಿನ ರಾಷ್ಟ್ರಗಳು ಜೂನ್ ಐದನ್ನು ಪರಿಸರ ದಿನವನ್ನಾಗಿ ಆಚರಿಸುವುದರಿಂದಲೇ ಇದು ವಿಶ್ವ ಪರಿಸರ ದಿನಾಚರಣೆ ಎನಿಸಿಕೊಂಡಿದೆ. ಪ್ರತಿಯೊಬ್ಬರಲ್ಲೂ ಪರಿಸರದ ಬಗ್ಗೆ ಜಾಗೃತಿ ಮೂಡಬೇಕು. ಕೇವಲ‌ ವರ್ಷಕ್ಕೆ ಒಂದು ದಿನ ಪರಿಸರ ರಕ್ಷಣೆಯೆಂಬುದು ಸೀಮಿತವಾಗಬಾರದು. ವರ್ಷದ ಪ್ರತಿ ದಿನವೂ ನಮಗೆ ಪರಿಸರ ದಿನವಾಗಬೇಕು. ಏಕೆಂದರೆ ಪರಿಸರ ನಮ್ಮ‌ ಜೀವನದ ಅವಿಭಾಜ್ಯ ಅಂಗ.

ನಮ್ಮ ಸುತ್ತಲಿನ ಪರಿಸರ ನಮ್ಮ ಸಂಪಾದನೆಯಲ್ಲ, ಅದು ನಮಗೆ ಹಿರಿಯರು ನೀಡಿದ ಉಡುಗೊರೆ. ಅದನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ದಾಟಿಸುವುದು ನಮ್ಮ ಕರ್ತವ್ಯ. ಇದರಲ್ಲಿ ವಿಫಲವಾದರೆ ಮುಂದಿನ ತಲೆಮಾರು ನಮ್ಮನ್ನು ಕ್ಷಮಿಸುವುದಿಲ್ಲ. ಪರಿಸರದ ರಕ್ಷಣೆಯಲ್ಲಿಯೇ ನಮ್ಮ ರಕ್ಷಣೆ ಇದೆ. ಪ್ರತಿ ವ್ಯಕ್ತಿಯೂ ಸಸಿಗಳನ್ನು ನೆಟ್ಟು ಬೆಳೆಸುವ ಬಗ್ಗೆ ಪ್ರತಿಜ್ಞೆ ಮಾಡಬೇಕು. ಏಕೆಂದರೆ ಪರಿಸರ ಉಳಿದರೆ ಮಾನವ ಇರಲು ಸಾಧ್ಯ. ಇಲ್ಲದಿದ್ದರೆ, ಜೀವಸಂಕುಲವೇ ನಾಶವಾಗಲಿದೆ ಎಂಬುದನ್ನು ಅರಿಯಬೇಕು ಆದ್ದರಿಂದ ಪರಿಸರ ಮಹತ್ವ ಅರಿತು ಪರಿಸರ ಸಂರಕ್ಷಣೆ ಕಾರ್ಯದಲ್ಲಿ ಭಾಗಿಯಾಗುವ ಮೂಲಕ, ಪರಿಸರವು ಪ್ರತಿದಿನದ ಪ್ರತಿಯೊಬ್ಬರ ಅವಿಭಾಜ್ಯ ಅಂಗವಾಗಬೇಕಾಗಿದೆ.

 

✍. ಕಾನತ್ತಿಲ್ ರಾಣಿ ಅರುಣ್

ಮೇ 31 ವಿಶ್ವ ತಂಬಾಕು ವಿರೋಧಿ ದಿನ

ಮೇ 31 ವಿಶ್ವ ತಂಬಾಕು ವಿರೋಧಿ ದಿನ

ತಂಬಾಕು ಸೇವನೆ ಆರೋಗ್ಯಕ್ಕೆ ಮಾರಕ

ಇಂದು (ಮೇ 31 ರಂದು) ವಿಶ್ವ ತಂಬಾಕು ರಹಿತ ದಿನ. ಈ ದಿನವು ವಿಶ್ವ ಜಾಗತಿಕ ತಂಬಾಕು ವಿರೋಧಿ ಜಾಗೃತಿ ದಿನವಾಗಿದೆ. ಪ್ರತಿವರ್ಷ ಮೇ 31 ರಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲೂಯು.ಎಚ್.ಓ.) ಹಾಗೂ ಅದರ ಸದಸ್ಯ ಸಂಸ್ಥೆಗಳ ಆಶ್ರಯದಲ್ಲಿ ವಿಶ್ವ ತಂಬಾಕು ರಹಿತ ದಿನವನ್ನು ಆಚರಿಸಲಾಗುತ್ತದೆ.

ವಿಶ್ವ ತಂಬಾಕು ನಿಷೇಧ ದಿನವು ತಂಬಾಕು ಉತ್ಪನ್ನಗಳನ್ನು ತ್ಯಜಿಸಲು ಜಾಗೃತಿ ಮೂಡಿಸುತ್ತದೆ. ತಂಬಾಕು ರಹಿತ ದೇಶ ನಿರ್ಮಿಸುವ ಕಡೆ ನಾವು ಹೆಜ್ಜೆ ಹಾಕಬೇಕಿದೆ.

ಮಾದಕ ವಸ್ತುಗಳ ತಡೆಗೆ ಜನರ ಸಹಭಾಗಿತ್ವ ಅವಶ್ಯಕತೆಯಿದೆ:
ತಂಬಾಕು ಸೇವನೆಯಿಂದ ಮನುಷ್ಯನಿಗೆ ಉಂಟಾಗುವ ರೋಗ ರುಜಿನಗಳು ಹಾಗೂ ಸಾವು ನೋವುಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಇಂದಿನ ಜಾಗತಿಕ ಪ್ರಪಂಚದಲ್ಲಿ ನಾವು ಈಗ ಪ್ರಮುಖವಾಗಿ ಶಾಲಾ ಮಕ್ಕಳಲ್ಲಿ ತಂಬಾಕಿನ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಬೇಕು. ತಂಬಾಕು ಸೇವನೆಯಿಂದ ಆರೋಗ್ಯ ಹಾಳು ಎಂಬ ಬಗ್ಗೆ ಮಕ್ಕಳಿಗೆ ಎಳೆಯ ವಯಷ್ಸಿನಲ್ಲೇ ಅರಿವು ಮೂಡಿಸಿದರೆ ಅವರು ಭವಿಷ್ಯದಲ್ಲಿ ಇದರಿಂದ ದೂರ ಇರಲು ಸಹಕಾರಿಯಾಗುತ್ತದೆ.

ತಂಬಾಕು ಸೇವನೆಯು ಮನುಷ್ಯನ ದೇಹವನ್ನು ಹಾಳುಗೆಡಹುತ್ತದೆಯೇ ವಿನಃ ಎಂದಿಗೂ ಪ್ರಯೋಜನಕಾರಿಯಲ್ಲ. ನಾವು ತಂಬಾಕು ಮತ್ತು ಇದರ ಉತ್ಪನ್ನಗಳನ್ನು ಖರೀದಿಸಿ ಸೇವಿಸಿದರೆ ನಾವೇ ಸ್ವತಃ ಸಾವನ್ನು ಆಹ್ವಾನಿಸಿದಂತೆ. ತಂಬಾಕು ಸೇವನೆಯಿಂದ ದಮ್ಮು, ಸ್ಟ್ರೋಕ್, ಕ್ಯಾನ್ಸರ್ ಸೇರಿದಂತೆ ಮುಂತಾದ ಹೃದಯ ಸಂಬಂಧಿ ಖಾಯಿಲೆಗಳು ಬಹುಬೇಗ ಆವರಿಸುತ್ತವೆ. ಇದರಿಂದ ಖಂಡಿತಾ ಸಾವು ಸಂಭವಿಸುತ್ತದೆ.. ತಂಬಾಕು ಸೇವನೆಯಿಂದ ಪ್ರತಿವರ್ಷ 60 ಲಕ್ಷದಷ್ಟು ಮಂದಿ ಸಾವನ್ನಪ್ಪುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ.
ತಂಬಾಕು ಸೇವನೆಯ ವ್ಯಸನಿಗಳಿಗೆ ಚಿಕಿತ್ಸೆ ಕೊಡಲೆಂದು ಎಷ್ಟೊಂದು ಆಸ್ಪತ್ರೆಗಳು, ಆರೋಗ್ಯ ಸೇವಾ ಕಾರ್ಯಕರ್ತರು, ಔಷಧ ಉತ್ಪಾದನೆಗಳು ಇವೆಲ್ಲ ಸೇರಿ ಪ್ರತಿ ವರ್ಷವೂ ಸಾವಿರಾರು ಕೋಟಿ ರೂಪಾಯಿಗಳಷ್ಟು ಆರ್ಥಿಕ ನಷ್ಟವೂ ತಂಬಾಕಿನಿಂದ ಉಂಟಾಗುತ್ತಿದೆ.

ತಂಬಾಕು ಸೇವನೆಯು ನಮ್ಮ ಆರೋಗ್ಯಕ್ಕೆ ತುಂಬಾ ಮಾರಕ ಎಂದು ತಿಳಿದಿದ್ದರೂ ಇಂದಿನ ಯುವ ಜನಾಂಗ ಮದ್ಯಪಾನದೊಂದಿಗೆ ತಂಬಾಕು ಸೇವನೆಗೂ ಹೆಚ್ಚು ಬಲಿಯಾಗುತ್ತಿರುವುದು ಬೇಸರದ ಸಂಗತಿಯಾಗಿದೆ.

ಧೂಮಪಾನ ಮತ್ತು ತಂಬಾಕು ಅಗಿಯುವ ಜನರ ಜಾಗತಿಕ ಪ್ರಮಾಣದಲ್ಲಿ ಚೀನಾದ ಪಾಲು ಶೇ.30 ಇದ್ದರೆ, ಎರಡನೇ ಸ್ಥಾನ ಪಡೆದ ಭಾರತ ಪಾಲು ಶೇ.10 ರಷ್ಟಿದೆ. ಇದು ಹೀಗೆ ಮುಂದುವರಿದಲ್ಲಿ 2030 ರ ಹೊತ್ತಿಗೆ ತಂಬಾಕಿನಿಂದ ಪ್ರತಿವರ್ಷ ಅಕಾಲಿಕ ವಯಸ್ಸಿಗೇ ಸಾಯುವ ಸಂಖ್ಯೆ ೮೦ ಲಕ್ಷಕ್ಕೆ ಏರಲಿದೆ.

ತಂಬಾಕು ಚಟ : ವಿಶ್ವಸಂಸ್ಥೆಯು ಪ್ರಕಟಿಸಿರುವ ಒಂದು ಪೋಷ್ಟರಿನಲ್ಲಿ ತಂಬಾಕಿನ ಯಾವ್ಯಾವ ಭೀಕರ ಕಾಯಿಲೆಗಳು ಬರುತ್ತವೆ ಎಂದು ವಿವರಿಸಲಾಗಿದೆ. ತಂಬಾಕನ್ನು ಬೀಡಿ, ಸಿಗರೇಟು, ನಶ್ಯದ ಪುಡಿ, ಹುಕ್ಕಾ, ಜರ್ದಾ, ಗುಟಕಾ, ಸಿಗಾರ್, ಭಂಗಿ, ಚುಟ್ಟಾ, ಮಿಶ್ರಿ, ಗುಲ್, ಗುಧಾಕು – ಹೀಗೆ ನಾನಾ ಹೆಸರುಗಳಿರುವ ಚಟಗಳ ಅವತಾರಗಳಲ್ಲಿ ಕಾಣಬಹುದು. ಒಣ ತಂಬಾಕು (ಹೊಗೆಸೊಪ್ಪು) ಎಲೆಗಳನ್ನು ಎಲೆ-ಅಡಿಕೆ(ಪಾನ್,ಸುಪಾರಿ) ಯೊಂದಿಗೆ ನೇರವಾಗಿಯೂ ಜಗಿಯುತ್ತಾರೆ. ಇತ್ತೀಚೆಗಂತೂ ಭಾರತದಲ್ಲಿ ಗುಟುಕಾ ರೂಪದಲ್ಲಿ ತಂಬಾಕಿನ ಸೇವನೆ ವಿಪರೀತವಾಗಿದೆ.

ತಂಬಾಕಿನಲ್ಲಿ ಇರುವ 40 ಕ್ಕೂ ಹೆಚ್ಚು ರಾಸಾಯನಿಕಗಳು ಕ್ಯಾನ್ಸರ್ ಎಂಬ ಕುಖ್ಯಾತ, ಭೀಕರ ಕಾಯಿಲೆಗೆ ಕಾರಣವಾಗಿವೆ. ಶ್ವಾಸಕೋಶದ ಕ್ಯಾನ್ಸರಿಗೆ ತಂಬಾಕು ಸೇವನೆಯು ನೂರಕ್ಕೆ 90 ರಷ್ಟು ಕಾರಣ. ತಂಬಾಕಿನಿಂದ ಬಾಯಿಯ ಕ್ಯಾನ್ಸರ್, ಜಠರದ ಕ್ಯಾನ್ಸರ್, ಮೂಗಿನ ಕ್ಯಾನ್ಸರ್, ಅನ್ನನಾಳದ ಕ್ಯಾನ್ಸರ್ – ಹೀಗೆ ಎಲ್ಲ ಭೀಕರ ರೋಗಗಳು ಬಹುಬೇಗ ಆವರಿಸುತ್ತವೆ ಎಂದು ಈ ಸಂಬಂಧ ನಡೆಸಿದ ಅಧ್ಯಯನಗಳು ಖಚಿತಪಡಿಸಿವೆ.

ಸಿಗರೇಟು ಸಂಸ್ಥೆಗಳು ಏನೆಲ್ಲ ಸುಳ್ಳು ಪ್ರಚಾರ ಮಾಡಿ ಹದಿಹರೆಯದವರನ್ನು ಸಿಗರೇಟು ಸೇವನೆಗೆ ದೂಡುತ್ತಿವೆ. ಒಮ್ಮೆ ತಂಬಾಕಿನ ಮಾದಕತೆಗೆ ದಾಸರಾದರೆ ಸಾಕು, ಜೀವನವಿಡೀ ಸಿಗರೇಟಿನ ದಾಸರಾಗುತ್ತಾರೆ. ಇದೇ ಸಿಗರೇಟು ಸಂಸ್ಥೆಗಳ ಮಾರುಕಟ್ಟೆ ಷಡ್ಯಂತ್ರವಾಗಿದೆ.

ತಂಬಾಕು ಚಟ ಹೀಗೇ ಹಬ್ಬುತ್ತಿದ್ದರೆ ಇನ್ನು ಕೆಲವೇ ವರ್ಷಗಳಲ್ಲಿ ಇತರೆಲ್ಲ ದೇಶಗಳಿಗಿಂತ ಭಾರತದಲ್ಲೇ ತಂಬಾಕಿನಿಂದ ಮರಣ ಹೊಂದುವವರ ಸಂಖ್ಯೆ ಅತಿ ಹೆಚ್ಚಾಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ನಮ್ಮನ್ನು ಎಚ್ಚರಿಸಿದೆ.
ಪರಿಸರ ನಾಶ : ತಂಬಾಕು ಬೆಳೆಯು ಅಪಾರ ಪ್ರಮಾಣದಲ್ಲಿ ಕಾಡಿನ ನಾಶಕ್ಕೆ ಕಾರಣವಾಗಿದೆ. ತಂಬಾಕಿನ (ಹೊಗೆಸೊಪ್ಪು) ಎಲೆಗಳನ್ನು ಹದಗೊಳಿಸಲು ನಿಗಿನಿಗಿ ಉರಿಯುವ ಕೆಂಡಗಳ ದೊಡ್ಡ ಒಲೆ ಬೇಕು. ಇಂಥ ಬೆಂಕಿಗೆ ನಮ್ಮ ಸುತ್ತಮುತ್ತಲಿನ ಅತ್ಯುತ್ತಮ ಮರಗಳು ಬಲಿಯಾಗುತ್ತಿವೆ. ಬ್ರೆಝಿಲ್ ದೇಶದಲ್ಲಿ ಹೀಗೆ ಹಸಿ ಮರಗಳ ಕಟಾವಿನಿಂದಾಗಿ ಕಾಡುಗಳೆಲ್ಲ ಬರಿದಾಗಿವೆ. ಹಾಗೆಯೇ, ಕಳೆದ 50 ವರ್ಷಗಳಲ್ಲಿ ಭಾರತದಲ್ಲಿ 100 ಕೋಟಿಗೂ ಹೆಚ್ಚು ಟನ್ ಸೌದೆಯನ್ನು ತಂಬಾಕು ಹದಮಾಡಲೆಂದೇ ಉರಿಸಲಾಗಿದೆ ! ತಂಬಾಕು ಬೆಳೆಯಿಂದ ಕೀಟನಾಶಕಗಳ ವಿಪರೀತ ಬಳಕೆಯಾಗಿ ನೆಲವೆಲ್ಲ ವಿಷಮಯವಾಗುತ್ತದೆ; ಅತಿ ಕೃಷಿಯಿಂದ ಮಣ್ಣಿನ ಸವಕಳಿ ಹೆಚ್ಚುತ್ತದೆ. ತಂಬಾಕು ಬೆಳೆದಷ್ಟೂ ಪರಿಸರಕ್ಕೂ ನಷ್ಟ, ಸಮಾಜಕ್ಕೂ ನಷ್ಟವೇ ಹೆಚ್ಚು. ಹೀಗಿದ್ದೂ ಭಾರತದಲ್ಲಿ ತಂಬಾಕನ್ನು ಬೆಳೆಯನ್ನು ನಿರಂತರವಾಗಿ ಬೆಳೆಯುತ್ತಿದ್ದರೂ ನಿಷೇಧಿಸಿಲ್ಲ.

ವ್ಯಸನ ಬಿಡಿಸಲು ಕ್ರಮಗಳು: ವ್ಯಸನ ಬಿಡಿಸಲು ಭಾರತ ಸರ್ಕಾರದ ಆರೋಗ್ಯ ಸಚಿವಾಲಯವು ಹಲವು ಕ್ರಮಗಳನ್ನು ಕೈಗೊಂಡಿದೆ. ಈ ಸಚಿವಾಲಯವು ಸಿಗರೇಟು ಮತ್ತು ತಂಬಾಕಿನ ಎಲ್ಲಾ ಉತ್ಪನ್ನಗಳ ಮೇಲೆ ‘ತಂಬಾಕು ಕ್ಯಾನ್ಸರಿಗೆ ಕಾರಣ’ ಎಂಬ ಸೂಚನೆ ಮತ್ತು ಚಿತ್ರಗಳನ್ನು ಪ್ರಕಟಿಸುವುದನ್ನು ಕಡ್ಡಾಯ ಮಾಡಿದೆ. ಸಿಗರೇಟಿ ಮೇಲೆ ಅತ್ಯಧಿಕ ತೆರಿಗೆಯನ್ನೂ ವಿಧಿಸುತ್ತಾ ಬಂದರೂ ತಂಬಾಕು ವ್ಯಸನಿಗಳು ತಂಬಾಕು ಸೇವನೆಯಿಂದ ದೂರವಾಗಿಲ್ಲ. ಕೋರ್ಟ್ ಆದೇಶದನ್ವಯ ಸರ್ಕಾರ ಈಗಾಗಲೇ ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನವನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.

ಪರ್ಯಾಯ ಬೆಳೆಗೆ ಪ್ರೋತ್ಸಾಹ : ತಂಬಾಕು ಬೆಳೆಯುವ ರೈತರು ತಂಬಾಕು ಬೆಳೆಯುವುನ್ನು ಬಿಟ್ಟು ಪರ್ಯಾಯ ಬೆಳೆಗಳನ್ನು ಬೆಳೆಸಬೇಕು ಎಂದು ಸರ್ಕಾರ ಕೂಡ ರೈತರಿಗೆ ಈಗಾಗಲೇ ಸೂಚನೆ ನೀಡಿದೆ. ರೈತರು ಪರ್ಯಾಯವಾಗಿ ಕಬ್ಬು, ಹತ್ತಿ, ಶೇಂಗಾ, ಆಲೂಗೆಡ್ಡೆ, ಮೆಕ್ಕೆಜೋಳ ಮುಂತಾದ ಬೆಳೆಗಳನ್ನು ಬೆಳೆದರೆ ತಂಬಾಕಿಗಿಂತ ಹೆಚ್ಚು ಆದಾಯವನ್ನು ಪಡೆಯಬಹುದು. ಆದರೆ ಈ ಬಗ್ಗೆ ರೈತರನ್ನು ಜಾಗೃತಗೊಳಿಸುವ ಕೆಲಸ ತ್ವರಿತಗತಿಯಲ್ಲಿ ಆಗಬೇಕಿದೆ.

ನಾವೇನು ಮಾಡಬಹುದು ? : ಮೇ ೩೧ ರ ‘ವಿಶ್ವ ತಂಬಾಕು ವಿರೋಧಿ ದಿನ’ದ ಸಂದರ್ಭದಲ್ಲಿ ನಾವು ತಂಬಾಕಿನ ಬಳಕೆಯನ್ನು ನಿಲ್ಲಿಸಲು ಈ ಕೆಳಗಿನ ಕೆಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಹುದಾಗಿದೆ.

* ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನ ಮಾಡುವುದು ನಿಷಿದ್ಧವಿದ್ದರೂ ಧೂಮಪಾನ ಮಾಡಲಿ, ಪಾನ್‌ಬೀಡಾ ಉಗಿಯಲಿ ಅದನ್ನು ಪ್ರತಿಭಟಿಸುವುದು ಎಲ್ಲರ ಹಕ್ಕು. ಆ ಹಕ್ಕನ್ನು ಎಲ್ಲರು ಮುಲಾಜಿಲ್ಲದೆ ಆದರೆ ವಿನಯದಿಂದ ಚಲಾಯಿಸೋಣ.

* ನಮ್ಮ ನೆರೆಹೊರೆಯಲ್ಲಿ ಧೂಮಪಾನಿಗಳಿದ್ದರೆ, ಅದು ತೀರ ನಾಚಿಕೆಗೇಡಿನ ಸಂಗತಿ ಮತ್ತು ಆರೋಗ್ಯಕ್ಕೆ ಹಾನಿ ಎಂದು ತಂಬಾಕಿನ ಅಪಾಯಗಳನ್ನು ಅವರಿಗೆ ತಿಳಿಸೋಣ.

* ತಂಬಾಕು ಸೇವನೆಯನ್ನು ಒಮ್ಮಲೇ ಬಿಡುವುದು ಕಷ್ಟಸಾಧ್ಯವಾದ ಧೂಮಪಾನಿಗಳಿಗೆ ಮತ್ತು ತಂಬಾಕು ಬಳಕೆದಾರರಿಗೆ ಕ್ರಮೇಣವಾಗಿ ತಂಬಾಕು ಬಳಕೆ ಬಿಡಲು ಸಲಹೆ ನೀಡೋಣ ಮತ್ತು ಬಿಟ್ಟವರನ್ನು ಸನ್ಮಾನಿಸೋಣ.

* ಧೂಮಪಾನ ಮಾಡುತ್ತಿರುವವರು ನಮ್ಮ ಬಳಿ ಇದ್ದರೆ ನಮಗೆ ಅಪಾಯ ಕಟ್ಟಿಟ್ಟ ಬುತ್ತಿ. ಹಾಗಾಗಿ ಅವರಿಗೆ ನಿಷ್ಠುರವಾಗಿ ಮತ್ತು ವಿನಯದಿಂದ ನಮ್ಮ ವಿರೋಧವನ್ನು ತಿಳಿಸೋಣ.

* ಶಾಲಾ-ಕಾಲೇಜುಗಳ ೨೦೦ ಅಡಿ ವ್ಯಾಪ್ತಿಯಲ್ಲಿ ಧೂಮಪಾನ ಮತ್ತು ತಂಬಾಕು ಉತ್ಪನ್ನಗಳ ಮಾರಾಟವು ನಿಷೇಧವಾಗಿದೆ. ಹಾಗಿದ್ದರೂ ಈ ಪ್ರದೇಶದಲ್ಲಿ ಈ ನಿಯಮ ಉಲ್ಲಂಘನೆಯಾಗಿದ್ದರೆ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಅಥವಾ ಸ್ಥಳೀಯ ಆಡಳಿತಕ್ಕೆ ದೂರು ನೀಡೋಣ.

* ನಾವು ಭಾಗವಹಿಸುವ ಕಾರ್ಯಕ್ರಮ/ಸಮಾರಂಭ, ಕೌಟುಂಬಿಕ ಆಚರಣೆಗಳಲ್ಲಿ ತಂಬಾಕಿನ ಅಪಾಯಗಳನ್ನು ಬಿಂಬಿಸುವ ಮಾಹಿತಿಯನ್ನು ನೀಡುವುದು ಮತ್ತು ಇದಕ್ಕೆ ಇತರರನ್ನು ಪ್ರೇರೇಪಿಸೋಣ.

* ತಂಬಾಕು ಬೆಳೆಯುತ್ತಿರುವ ಕೃಷಿಕರ ಮನಸ್ಸು ಬದಲಿಸಲು ಗೆಳೆಯರ ಗುಂಪು ರಚಿಸಿಕೊಂಡು ಅಂಥ ಜೀವವಿರೋಧಿ ಕೃಷಿಯನ್ನು ಕೈಬಿಡುವಂತೆ ಪ್ರೇರೇಪಿಸಿ ಪ್ರಚಾರ ಮಾಡೋಣ.

ಹೀಗೆ ಹತ್ತು ಹಲವು ಯೋಜನೆ/ಕಾರ್ಯಕ್ರಮಗಳ ಮೂಲಕ ತಂಬಾಕು ಸೇವನೆಯನ್ನು ಕ್ರಮೇಣವಾಗಿ ಕಡಿಮೆ ಮಾಡುತ್ತಾ ಇದನ್ನು ಸಂಪೂರ್ಣವಾಗಿ ಜಾರಿಗೊಳಿಸಿದರೆ ಭಾರತ ದೇಶವನ್ನು ತಂಬಾಕು ಮುಕ್ತ ದೇಶವನ್ನಾಗಿ ಪರಿವರ್ತಿಸಲು ಪ್ರಯತ್ನಿಸಬಹುದು.

ತಂಬಾಕು ಚಟ ಹೀಗೇ ಹಬ್ಬುತ್ತಿದ್ದರೆ ಇನ್ನು ಕೆಲವೇ ವರ್ಷಗಳಲ್ಲಿ ಇತರೆಲ್ಲ ದೇಶಗಳಿಗಿಂತ ಭಾರತದಲ್ಲೇ ತಂಬಾಕಿನಿಂದ ಸಾಯುವವರ ಸಂಖ್ಯೆ ಅತಿ ಹೆಚ್ಚಾಗಲಿದೆ. ಈ ದಿಸೆಯಲ್ಲಿ ಇಂತಹ ದಿನಗಳಂದು ತಂಬಾಕು ಬಳಕೆದಾರರನ್ನು ಜಾಗೃತಗೊಳಿಸುವ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಎಲ್ಲರೂ ಪಣತೊಡೋಣ.

ಲೇಖಕರು: ✍. ಟಿ.ಜಿ.ಪ್ರೇಮಕುಮಾರ್,

 

ಕೋವಿಡ್-19 ವಿರುದ್ಧ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಆಯುಷ್ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ

ಕೋವಿಡ್-19 ವಿರುದ್ಧ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಆಯುಷ್ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ

ಕೋವಿಡ್-19 ಮಹಾಮಾರಿ ವಿರುದ್ಧ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಆಯೂಷ್ ಇಲಾಖೆಯ ತಜ್ಞ ವೈದ್ಯರು ಅಭಿಪ್ರಾಯ ಒಳಗೊಂಡ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದ್ದು, ಮಾಹಿತಿ ಇಂತಿದೆ.

ದೇಶದ ಪ್ರಾಚೀನ ವೈದ್ಯಕೀಯ ಪದ್ಧತಿಯಾದ ಆಯುರ್ವೇದದ ಚರಕ ಮತ್ತು ಸುಶುೃತ ಸಂಹಿತೆಗಳು ಸಾಂಕ್ರಾಮಿಕ ಪಿಡುಗಿನ ಬಗ್ಗೆ ಸುಮಾರು 2500 ಸಾವಿರ ವರ್ಷಗಳ ಹಿಂದೆಯೇ ವಿವರಿಸಿರುವುದು ವಿಶೇಷವಾಗಿದೆ. “ಜನಪದೋಧ್ವಂಸ” ಎಂಬ ಅಧ್ಯಾಯದಲ್ಲಿ ಸಾಂಕ್ರಾಮಿಕ ರೋಗಗಳಿಗೆ ಕಾರಣಗಳನ್ನು ಹೇಳುತ್ತಾ ಪರಿಸರ ಮಾಲಿನ್ಯ ಅಧರ್ಮವನ್ನಾಚರಿಸುವುದು ಮತ್ತು ಸಾಮಾಜಿಕ ನಿಯಮಗಳನ್ನು ಪಾಲಿಸದೇ ಇರುವುದು, ಶೀನುವಾಗ, ಆಕಳಿಸುವಾಗ, ನಗುವಾಗ, ಮುಖವನ್ನು ಮುಚ್ಚಿಕೊಳ್ಳುವುದು ಖಾಯಿಲೆಯಿಂದ ಪೀಡಿತವಾಗಿರುವ ಪ್ರದೇಶವನ್ನು ತೊರೆಯುವುದು, ಸಾಮಾಜಿಕ ಅಂತರವನ್ನು ಕಾಪಾಡುವುದು ಹೀಗೆ ಅನೇಕ ಉಲ್ಲೇಖಗಳು ಸಾಂಕ್ರಾಮಿಕ ರೋಗಗಳನ್ನು ದೂರ ಮಾಡಲು ವಿವರಿಸಲಾಗಿದೆ.

ದಿನಚರ್ಯೆ, ಋತುಚರ್ಯೆ, ಸಾಮಾಜಿಕ ನಿಯಮಗಳನ್ನು ಪಾಲಿಸುವುದು, ರಸಾಯನಗಳನ್ನು ಸೇವಿಸುವುದು, ರೋಗ ತಡೆಗಟ್ಟಲು ಹೆಚ್ಚು ಒತ್ತು ನೀಡಿ ಹೇಳಿರುತ್ತಾರೆ. ಕೊರೊನಾ ವೈರಸ್ 65-125 ಎನ್‍ಎಂ ನಷ್ಟು ಸೂಕ್ಷ್ಮವಾಗಿದ್ದು, ಮನುಷ್ಯನ ದೇಹದೊಳಗೆ ಸೇರಿ ಅನೇಕ ಪಟ್ಟಾಗಿ ಅಪವರ್ತಿಸಿ ಉಸಿರಾಟದ ವ್ಯವಸ್ಥೆ ಹಾಳು ಮಾಡುತ್ತದೆ. ಈ ಭೂತಾಭಿಷಂಗವು ವಿಷಮ ಸನ್ನಿಪಾತ ಜ್ವರವನ್ನು ಮನುಷ್ಯರಲ್ಲಿ ಉಂಟು ಮಾಡುತ್ತದೆ. ವಿಷಮ ಸನ್ನೀಪಾತ ಜ್ವರದಲ್ಲಿ ಮೂರೂ ದೋಷಗಳು ಕುಪಿತಾವಸ್ಥೆಯಲ್ಲಿದ್ದು ಕಫಹೀನ, ಪಿತ್ತಮಧ್ಯ, ವಾತ ಅಧಿಕವಾಗಿ ಕುಪಿತಗೊಂಡಿರುತ್ತದೆ. ಜ್ವರ, ಕೆಮ್ಮು, ದಮ್ಮು, ಮೂಗು ಸೋರುವುದು, ಬಾಯಿ ಒಣಗಿಸುವುದು, ಪಾಶ್ರ್ವಶೂಲ(ನ್ಯುಮೋನಿಯಾ) ವಿಷಮ ಸನ್ನೀಪಾತ ಜ್ವರದ ಲಕ್ಷಣಗಳಾಗಿದೆ.

ಆಯುಷ್ ಪದ್ಧತಿಯಲ್ಲಿ ಅನುಸರಿಸಬೇಕಾದ ಕ್ರಮಗಳು: ಪ್ರತಿಯೊಬ್ಬರೂ ಆರೋಗ್ಯವಂತರಾಗಿರಲು ಜಠರಾಗ್ನಿ ಶಕ್ತಿಯೇ ಪ್ರಾಮುಖ್ಯವಾಗಿದ್ದು, ಅದನ್ನು ಸಮಸ್ಥಿತಿಯಲ್ಲಿಟ್ಟುಕೊಳ್ಳಲು ಸುಲಭವಾಗಿ ಜೀರ್ಣವಾಗುವ, ಜೀರ್ಣವಾದ ನಂತರ ಹಸಿವಾದಗ ಆಹಾರವನ್ನು ಸೇವಿಸುವುದು, ಪೌಷ್ಠಿಕಾಂಶಗಳುಳ್ಳ ಋತುಗಳಿಗನುಸಾರವಾಗಿ ಪ್ರಾಕೃತಿಕ ಆಹಾರವನ್ನು ಉಪಯೋಗಿಸುವುದು. ರೋಗ ತಡೆಗಟ್ಟುವಿಕೆ ಮತ್ತು ಉತ್ತಮ ಆರೋಗ್ಯವನ್ನು ಉತ್ತೇಜಿಸುವುದು.

ಕರ್ತವ್ಯಗಳು: ರೋಗ ನಿರೋಧಕ ಕಾರ್ಯತಂತ್ರ- ಮೊದಲನೆಯ ಹಂತ: ಮನೆಯನ್ನು ಕ್ರಿಮಿ ಮುಕ್ತಗೊಳಿಸಲು ಧೂಪ ಹಾಕಬಹುದಾಗಿದೆ. ರೋಗಿಯ ಬಲವನ್ನು ಹೆಚ್ಚಿಸಲು ಜಠರಾಗ್ನಿಯನ್ನು, ಧಾತ್ವಗ್ನಿಯನ್ನು, ಭೂತಾಗ್ನಿಯನ್ನು ಉತ್ತಮವಾಗಿಡಬೇಕಾಗಿರುತ್ತದೆ ಸರಿಯಾದ ಸಮಯಕ್ಕೆ ಮಲಗಿ ಏಳುವುದು, ಪೌಷ್ಟಿಕ ಆಹಾರ ಸೇವಿಸುವುದನ್ನು ರೂಢಿಸಿಕೊಳ್ಳಬೇಕಿದೆ.

ಯೋಗಶಾಸ್ತ್ರದಲ್ಲಿ ಹೇಳಿದ ಯಮ, ನಿಯಮ, ನಿತ್ಯ ಆಸನಗಳನ್ನು, ಪ್ರಾಣಾಯಾಮ ಮತ್ತು ಧ್ಯಾನವನ್ನು ಮಾಡುವುದರಿಂದ ಮನಸ್ಸು ಶಾಂತವಾಗುವುದಲ್ಲದೇ, ಉಸಿರಾಟದ ವ್ಯವಸ್ಥೆಯನ್ನು ಬಲಗೊಳಿಸುತ್ತದೆ. ಗಿಡಮೂಲಿಕೆಗಳಿಂದ ಮಾಡಿದ ಚಹಾ ಸೇವಿಸುವುದು. ಅಮೃತಷಡಂಗಮ್ ಅಥವಾ ಷಡಂಗ ಪಾನೀಯ ಕಷಾಯವನ್ನು, ಲಾವಂಚ ಹುಲ್ಲಿನಿಂದ ಕುದಿಸಿದ ನೀರನ್ನು ಕುಡಿಯುವುದು. ಅಶ್ವಗಂಧಾ ಬೆರೆಸಿದ ಹಾಲಿನೊಂದಿಗೆ ಹರಿಶಿನವನ್ನು ಸೇರಿಸಿ ಕುದಿಸಿ ಸೇವಿಸುವುದನ್ನು ನಿತ್ಯ ರೂಢಿಸಿಕೊಳ್ಳಬೇಕಿದೆ.
ಯುನಾನಿ ಔಷಧದಲ್ಲಿ ಆರೋಗ್ಯವನ್ನು ಕಾಪಡಿಕೊಳ್ಳಲು ಉಸಿರಾಟದ ವ್ಯವಸ್ಥೆಯನ್ನು ಸರಿಪಡಿಸಿಕೊಳ್ಳಲು ಆರ್ಕ್-ಎ-ಅಜೀಬ್ ಎಂಬುದು ಉತ್ತಮವಾಗಿದ್ದು ಇದನ್ನು ಇನ್ಹಲೇಷನ್ ಮತ್ತು ಗಾಗ್ರ್ಲಿಂಗ್‍ಗೆ ಬಳಸಬಹುದು. ನಿಂಬೆಹಣ್ಣಿನ ರಸವನ್ನು ಬಿಸಿನೀರಿನಲ್ಲಿ ಹಾಕಿ ದಿನಕ್ಕೊಂದು ಎರಡು ಬಾರಿ ಸೇವಿಸುವುದು. ಹೋಮಿಯೋಪತಿಯಲ್ಲಿ ಆರ್ಸೆನಿಕಮ್ ಆಲ್ಬಂ-30 ಎಂಬುದು ಕರೋನ ವೈರಸ್‍ನ ರೋಗವನ್ನು ಕಡಿಮೆ ಮಾಡಲು ಹಾಗೂ ಇಮ್ಯೂನ್ ಬೂಸ್ಟರ್ ಆಗಿ ಅಲರ್ಜಿಗಳಲ್ಲಿ ಬಳಸಬಹುದಾಗಿದೆ. ವೈದ್ಯರ ಸಲಹೆ ಪಡೆಯಬೇಕು.

ಸರ್ಕಾರದ ಸೂಚನೆಯಂತೆ 60 ವರ್ಷ ಮೇಲ್ಪಟ್ಟವರು ಹಾಗೂ 10 ವರ್ಷದೊಳಗಿನ ಮಕ್ಕಳು ರೋಗ ಬಾರದಂತೆ ಸಂಪರ್ಕ ಸಾಧಿಸದಂತೆ ಮನೆಯಲ್ಲೇ ಇರುವುದು ಒಳ್ಳೆಯದು. ಆಯುರ್ವೇದದಲ್ಲಿ ಸೂಚಿಸಿದಂತೆ ತುಪ್ಪ, ಎಳ್ಳೆಣ್ಣೆ ಅಥವಾ ತೆಂಗಿನ ಎಣ್ಣೆಯನ್ನು ಮೂಗಿನ ಎರಡು ಹೊಳ್ಳೆಗಳಿಗೆ ಎರಡೆರಡು ಹನಿಯಂತೆ ಹಾಕಿಕೊಳ್ಳುವುದು. ಒಂದು ಟೇಬಲ್ ಚಮಚ ತೆಂಗಿನ ಎಣ್ಣೆ ಅಥವಾ ಎಳ್ಳೆಣ್ಣೆಯಿಂದ ಬಾಯಿ ಮುಕ್ಕಳಿಸಿ ಹೊರಗಡೆ ಉಗಿಯುವುದು(ಗಾಗ್ರ್ಲಿಂಗ್) ಹಾಗೂ ಬಿಸಿನೀರಿನಲ್ಲಿ ಬಾಯಿಯನ್ನು ತೊಳೆದುಕೊಳ್ಳುವುದು. ನಂತರ 50 ಮಿಲೀ ಬೆಚ್ಚಗಿನ ನೀರಿನಲ್ಲಿ ಒಂದು ಚಿಟಿಕಿ ಉಪ್ಪಿನೊಂದಿಗೆ 3-5 ನಿಮಿಷಗಳ ಕಾಲ ಬಾಯಿಯಲ್ಲಿ ಹಿಡಿದಿಟ್ಟುಕೊಳ್ಳುವುದು.

30 ನಿಮಿಷಗಳ ಕಾಲ ದೇಹ ಸಡಿಲಗೊಳಿಸುವ ವ್ಯಾಯಾಮ, ಸೂರ್ಯ ನಮಸ್ಕಾರ (6 ಸುತ್ತು), ಯಾವುದಾದರೂ ನಾಲ್ಕು ಆಸನಗಳು, ಪ್ರಾಣಾಯಾಮ ಮತ್ತು ಧ್ಯಾನ ಮಾಡುವುದು. 4 ತುಳಸಿ ಎಲೆ, ನಿಂಬೆರಸ, ಒಣದ್ರಾಕ್ಷಿಯೊಂದಿಗೆ ಯಾವುದಾದರೊಂದು ಮೂಲಿಕೆಯನ್ನು ಅರ್ಧ ಗ್ರಾಂ.ನಂತೆ ಸೇರಿಸಿ (ಪ್ರತಿದಿನ ಒಂದು ಮೂಲಿಕೆ) ಗಿಡಮೂಲಿಕೆ ಚಹಾವನ್ನು ತಯಾರಿಸಿ ದಿನಕ್ಕೆ ಒಂದರಿಂದ ಎರಡು ಬಾರಿ ಸೇವಿಸುವುದು. ದಾಲ್ಚಿನ್ನಿ, ಕರಿಮೆಣಸು, ಶುಂಠಿ, ಅರಿಶಿನ, ಜೀರಿಗೆ, ಕೊತ್ತಂಬರಿ ಹಾಗೂ ಬೆಳ್ಳುಳ್ಳಿಯನ್ನು ದಿನನಿತ್ಯದ ಅಡುಗೆಯಲ್ಲಿ ಉಪಯೋಗಿಸುವುದು. ಒಂದು ಲೋಟ ಕುದಿಯುವ ಹಾಲಿಗೆ ಅರ್ಧ ಟೀ ಚಮಚ ಅರಿಶಿನ ಪುಡಿಯನ್ನು ಸೇರಿಸಿ ನಂತರ ಹಾಲನ್ನು ಎರಡು ನಿಮಿಷ ಕುದಿಸಿ ಸೋಸಿ ತಯಾರಿಸಿದ ಗೋಲ್ಡನ್ ಮಿಲ್ಕ್‍ನ್ನು ಪ್ರತಿದಿನ ರಾತ್ರಿ ಮಲಗುವ ಮುನ್ನ ಸೇವಿಸುವುದು.

ರೋಗ ನಿರೋಧಕ ಕಾರ್ಯತಂತ್ರ- ಎರಡನೆಯ ಹಂತ: ಗುರಿ: ಉತ್ತಮ ಹಸಿವು, ಉತ್ತಮ ನಿದ್ರೆ, ಮಾನಸಿಕ ಶಾಂತಿಯನ್ನು ಕಾಪಾಡಲು ಮತ್ತು ಪೋಷಕಾಂಶವುಳ್ಳ ಆಹಾರವನ್ನು ಒದಗಿಸುವುದರ ಜೊತೆಗೆ ಅಲ್ಪ ಪ್ರಮಾಣದ ಔಷಧಿಯೊಂದಿಗೆ ರೋಗ ನಿರೋಧಕ ಶಕ್ತಿಯನ್ನು ವರ್ಧಿಸುವುದು ಅಗತ್ಯ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ರಾಮಚಂದ್ರ ಅವರು ತಿಳಿಸಿದ್ದಾರೆ.

ಅನುಸರಿಸಬೇಕಾದ ಸೂಚನೆ: ಬಿಸಿನೀರನ್ನು ಆಗಾಗ್ಗೆ ಸೇವಿಸಿ. ತಣ್ಣೀರು ಕುಡಿಯಬೇಡಿ ಮತ್ತು ತಣ್ಣನೆಯ ಆಹಾರವನ್ನು ಸೇವಿಸಬೇಡಿ. ಸಾಮಾಜಿಕ ದೂರವನ್ನು ಕಾಪಡಿಕೊಳ್ಳಿ. ಫೇಸ್ ಮಾಸ್ಕ್ ಬಳಕೆ ಕಡ್ಡಾಯವಾಗಿದೆ. ಆಗಾಗ ಕೈಗಳನ್ನು ತೊಳೆಯಬೇಕು. ಸೀನುವಾಗ ಬಾಯಿ ಮತ್ತು ಮೂಗನ್ನು ಬಟ್ಟೆಯಿಂದ ಮುಚ್ಚಿ. ಯೋಗ ಮತ್ತು ದೈಹಿಕ ವ್ಯಾಯಾಮವನ್ನು ಅಭ್ಯಾಸ ಮಾಡಿ. ಶೀತ, ಕೆಮ್ಮು ಮತ್ತು ಜ್ವರ ಇರುವ ಜನರಿಂದ ದೂರವಿರಿ. ಕೋವಿಡ್-19 ರೋಗ ಲಕ್ಷಣಗಳು ಕಂಡು ಬಂದಲ್ಲಿ ವೈದ್ಯರನ್ನು ಸಂಪರ್ಕಿಸಿ. ಹೋಮಿಯೋಪತಿ ಔಷಧಿಗಳನ್ನು ತೆಗೆದುಕೊಳ್ಳುವ ಮೊದಲು ಹೋಮಿಯೋಪತಿ ವೈದ್ಯರನ್ನು ಸಂಪರ್ಕಿಸಬೇಕಿದೆ. ಹೋಮಿಯೋಪತಿ ಔಷಧಿ ಬಳಸಿರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ. ಸಲಹೆ ಪಾಲಿಸೋಣ ಕೊರೋನಾ ಮುಕ್ತ ದೇಶವನ್ನಾಗಿಸೋಣ ಎಂದು ಆಯುಷ್ ವೈದ್ಯಾಧಿಕಾರಿ ಅವರನ್ನು ಸಂಪರ್ಕಿಸಿ ಸೂಕ್ತ ಸಲಹೆ ಪಡೆಯಬಹುದಾಗಿದೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ಬಿಎಚ್.ರಾಮಚಂದ್ರ ಅವರು ತಿಳಿಸಿದ್ದಾರೆ.