• Search Coorg Media

ಪೂರ್ಣತೆಯೇ ಗುರು: ಗುರುಪೂರ್ಣಿಮೆ ನಿಮಿತ್ತ ವಿಶೇಷ ಲೇಖನ

ಪೂರ್ಣತೆಯೇ ಗುರು:
ಗುರುಪೂರ್ಣಿಮೆ ನಿಮಿತ್ತ ವಿಶೇಷ ಲೇಖನ

ನಮ್ಮ ಪರಂಪರೆಯಲ್ಲಿ ಗುರುವಿಗೆ ಭಗವಂತನ ಸ್ಥಾನವನ್ನು ನೀಡಿದ್ದೇವೆ. ಮನುಷ್ಯನ ಬದುಕನ್ನು ಅಜ್ಞಾನದಿಂದ ಜ್ಞಾನದೆಡೆಗೆ, ಕತ್ತಲಿನಿಂದ ಬೆಳಕಿನೆಡೆಗೆ, ಪಶುತ್ವದಿಂದ ದೈವತ್ವದೆಡೆಗೆ ನಡೆಸುವವನೆ ಗುರು. ಯೋಗ್ಯ ಗುರು ಮತ್ತು ಸ್ಪಷ್ಟ ಗುರಿಯುಳ್ಳ ವ್ಯಕ್ತಿ ನಿಸ್ಸಂದೇಹವಾಗಿ ಪರಿಪೂರ್ಣತೆಯೆಡೆಗೆ ಸಾಗಬಲ್ಲ. ಹೀಗೆ ಸಕಲ ಅನುಯಾಯಿಗಳನ್ನು ಮುನ್ನಡೆಸುತ್ತಿದ್ದ ಆದರ್ಶ ಗುರುಪರಂಪರೆಯೇ ನಮ್ಮಲ್ಲಿದೆ.

ಪ್ರತಿವರ್ಷ ಗುರುಪೂರ್ಣಿಮೆ ಅಥವಾ ವ್ಯಾಸಪೂರ್ಣಿಮೆ ಬರುವುದು ಆಷಾಢ ಮಾಸದ ಶುಕ್ಲ ಪಕ್ಷದ ಹುಣ್ಣಿಮೆ ದಿನ. ಆ ದಿನ ವೇದವ್ಯಾಸರು ಅವತರಿಸಿದ ದಿನ ಎಂದು ಪ್ರತೀತಿ. ವೇದವು ಮೊದಲು ಒಂದೇ ಆಗಿತ್ತು. ಅದನ್ನು 4 ಭಾಗಗಳಾಗಿ ವಿಂಗಡಿಸಿದವರು ವೇದವ್ಯಾಸರು. ವ್ಯಾಸ ಎಂದರೆ ವಿಂಗಡಿಸುವ ಎಂಬ ಅರ್ಥವಿದೆ. ವೇದವನ್ನು ವಿಂಗಡಿಸಿದ್ದರಿಂದ ವೇದವ್ಯಾಸರಾದರು. ಸಾಮಾನ್ಯವಾಗಿ ಜುಲೈ ತಿಂಗಳಿನಲ್ಲಿ ಬರುವ ಆಷಾಢ ಮಾಸದ ಪೂರ್ಣಿಮೆಯ ದಿನವನ್ನು ಗುರು ಪೂರ್ಣಿಮಾ ಅಥವಾ ವ್ಯಾಸ ಪೂರ್ಣಿಮಾ ಎಂದು ಆಚರಿಸಲಾಗುತ್ತಿದೆ. ಇದೇ ಮಂಗಳವಾರ ಜುಲೈ16, 2019ರಂದು ಗುರು ಪೂರ್ಣಿಮಾ ದಿವಸವಾಗಿದೆ.

ಯಾವುದೇ ವಿದ್ಯೆಯನ್ನು ಕಲಿಯಬೇಕಾದರೆ ಗುರುವಿನ ಪಾತ್ರ ಹಿರಿದು. “ಗು” ಎಂದರೆ ಅಜ್ಷಾನ “ರು” ಎಂದರೆ ಹೋಗಲಾಡಿಸುವವನು. ಯಾರು ನಮ್ಮ ಅಜ್ಞಾನವನ್ನು ಹೋಗಲಾಡಿಸುವರೋ ಅವರೇ ನಮ್ಮ ಗುರು. ಮಂತ್ರ, ಪೂಜೆ, ದೇವರ ವಿಷಯವಾಗಿ ತಿಳಿಸುವವರು ಶಿಕ್ಷಾಗುರುವಾದರೆ, ಪರಮಾತ್ಮನ ಸಾಕ್ಷಾತ್ಕಾರ ಮಾಡಿಸುವವರು ಆಧ್ಯಾತ್ಮಿಕಗುರುಗಳು. ‘ಗುರುಪೂರ್ಣಿಮೆ’ ಯಂದು ಗುರುಗಳಿಗೆಲ್ಲರಿಗೂ ಗೌರವಿಸಿ ನಮಸ್ಕರಿಸುವ ಸಂಪ್ರದಾಯವಿದೆ. ಎಲ್ಲಾ ಕಾರ್ಯಗಳಿಗೆ ಮೊದಲು ಗುರುಪೂಜೆ ಮಾಡಿಯೇ ತೀರಬೇಕು. ವೇದ ಮಂತ್ರಗಳನ್ನು ಹೇಳುವಾಗ ಮೊದಲು ಶ್ರೀ ಗುರುಭ್ಯೋನಮಃ ಹರಿಃ ಓಂ ಎಂದು ಹೇಳಿಯೇ ಪ್ರಾರಂಭಿಸಬೇಕು.

ಈ ಗುರು ಪೂರ್ಣಿಮಾ ದಿವಸದಂದು ಚಾತುರ್ಮಾಸ್ಯ ವ್ರತವನ್ನು ಮಹಾಗುರು ವ್ಯಾಸರ ಪೂಜೆಯಿಂದ ಪ್ರಾರಂಭಿಸುತ್ತಾರೆ. ನಾಲ್ಕು ತಿಂಗಳು ನಡೆದು ಕಾರ್ತಿಕ ಪೂರ್ಣಿಮೆಯಂದು ವ್ರತ ಮುಕ್ತಾಯವಾಗುತ್ತದೆ. ಈ ಚಾತುರ್ಮಾಸ್ಯ ವ್ರತವನ್ನು ಶ್ರದ್ಧಾ ಭಕ್ತಿಗಳಿಂದ ಆಚರಿಸುವವರಿಗೆ ಸಮೃದ್ಧ ಆಹಾರ, ಸೌಂದರ್ಯ, ಸದ್ಬುದ್ಧಿ, ಸತ್‌ಸಂತಾನ ದೊರೆಯುವುದೆಂಬ ನಂಬಿಕೆಯಿದೆ. ಈ ದಿವಸವೇ ವೇದವ್ಯಾಸರು ಬ್ರಹ್ಮ ಸೂತ್ರ ಬರೆಯಲು ಪ್ರಾರಂಭಿಸಿದ್ದು, ಏಕಲವ್ಯನು ಗುರು ದ್ರೋಣಾಚಾರ್ಯರಿಗೆ ಗುರು ಕಾಣಿಕೆಯಾಗಿ ತನ್ನ ಬಲಗೈ ಹೆಬ್ಬೆರಳನ್ನು ಕತ್ತರಿಸಿಕೊಟ್ಟಿದ್ದು ಗುರು ಪೂರ್ಣಿಮಾ ದಿವಸ.

ಎಲ್ಲಿಯವರೆಗೆ ಕರ್ಮ ಬಂಧನದಿಂದ ಮುಕ್ತಿ ಇಲ್ಲವೋ ಅಲ್ಲಿಯ ವರೆಗೆ ಈ ಬ್ರಹ್ಮನೊಡನೆ ಒಂದಾಗಲು ಸಾಧ್ಯವಿಲ್ಲ. ಇದನ್ನು ಸದ್ಗುರು ಜ್ಞಾನವೆಂಬ ಕತ್ತರಿಯಿಂದ ತೆಗೆದು ಹಾಕಲು ಸಾಧ್ಯ. ಜ್ಞಾನವನ್ನು ಕೊಡುವವನೇ ಗುರು. ಜ್ಞಾನ ಎಂದರೆ ನಮ್ಮ ಬುದ್ಧಿ. ಮತ್ತೆ ಕೆಲವರು ಕೆಲವು ಶಾಸ್ತ್ರಗಳಲ್ಲಿರುವ ಶಬ್ದವನ್ನು ಜ್ಞಾನ ಎನ್ನುವರು. ಇವುಗಳೆಲ್ಲಾ ನಮ್ಮ ಪಂಚೇಂದ್ರಿಯಗಳ ಮೂಲಕ ಪ್ರಾಪ್ತವಾಗುವ ಜ್ಞಾನ. ಗುರು ಎಂದರೆ ಅಖಂಡ ಜ್ಞಾನ ಜ್ಯೋತಿ ಜಡತ್ವಕ್ಕೆ ಸ್ಪೂರ್ತಿ ತುಂಬಿ ಶಿಷ್ಯ ಚಿತ್ತಾಪಹಾರನಾಗಿ ತಾನು ಬೆಳಗಿ ತನ್ನಂತೆ ಇತರರನ್ನು ಬೆಳಗಿಸುವವನೇ ನಿಜವಾದ ಗುರು. ಗುರು ದೊರಕದಿದ್ದರೂ ಗುರುವಿನ ಮೂರ್ತಿಯನ್ನಿಟ್ಟು ಪೂಜಿಸಿ ಅವನಿಂದ ವಿದ್ಯೆ ಪಡೆದ ಏಕಲವ್ಯ ಬಾಲಕ ಆದರ್ಶ ಶಿಷ್ಯ ಗುರ್ವಾಜ್ಞೆಯನ್ನು ನಿಷ್ಠೆಯಿಂದ ಪಾಲಿಸಿ ಗುರೂಪದೇಶ ಪಡೆದ ಶ್ರೇಷ್ಠ ಶಿಷ್ಯ ದಾನಶೂರ ಕರ್ಣ. ನಮ್ಮ ದೇಶದ ಪ್ರಥಮ ಉಪರಾಷ್ಟ್ತ್ರಪತಿ ಡಾ.ಎಸ್. ರಾಧಾಕೃಷ್ಣರು ಗುರುವಿಗಾಗಿ ತನ್ನ ಜನ್ಮದಿನವನ್ನೇ ಸಾರಿದರು. ಇವರ ಶಿಷ್ಯರು ಇವರನ್ನು ರೇಲ್ವೆ ಸ್ಟೇಷನ್‌ಗೆ ಚಕ್ಕಡಿಯಲ್ಲಿ ಕುಳ್ಳಿರಿಸಿಕೊಂಡು ತಾವೇ ಹೆಗಲು ಹಚ್ಚಿ ಎಳೆದುಕೊಂಡು ಹೋದರು. ಇದು ಶಿಷ್ಯರು ಗುರುವಿಗೆ ತೋರಿದ ಗುರುಭಕ್ತಿ.

ಒಂದು ಸುವ್ಯವಸ್ಥಿತ, ವೈಭವಶಾಲಿ ಸಮಾಜ ನಿರ್ಮಾಣಗೊಳ್ಳುವುದು ಆ ಸಮಾಜದಲ್ಲಿನ ಪ್ರತಿಯೊಬ್ಬ ವ್ಯಕ್ತಿಯ ಚಿಂತನೆಯಿಂದ ಮತ್ತು ಆ ಚಿಂತನೆಗಳಿಗನುಗುಣವಾದ ಆತನ ಜೀವನ ಪದ್ಧತಿಯಿಂದ. ಹೀಗೆ ಸುಸಂಪನ್ನ ರಾಷ್ಟ್ರದ ನಿರ್ಮಿತಿಗಾಗಿ ಪರಂಪರಾಗತ ಮೌಲ್ಯಗಳ ಅರಿವುಳ್ಳ ಪ್ರತಿವ್ಯಕ್ತಿಯ ಕೊಡುಗೆಯೂ ಮಹತ್ವ ಪೂರ್ಣ. ಆದರೆ ಮನುಷ್ಯನು ಯಾವಾಗಲೂ ಭಿನ್ನ ಭಿನ್ನ ಪರಿಸ್ಥಿತಿಗಳಿಂದ ಸುತ್ತುವರಿಯಲಪಟ್ಟಿರುತ್ತಾನೆ. ಸುಖ-ದುಖಃಗಳ ಅನೇಕ ಪ್ರಸಂಗಗಳನ್ನು ಆತ ಎದುರಿಸಬೇಕಾಗುತ್ತಿರುತ್ತದೆ. ಇಂತಹ ವಿಷಮ ಸಂಧರ್ಭಗಳಲ್ಲಿ ಧೀರತೆಯಿಂದ ಅಪಾಯಗಳನ್ನು ನಿವಾರಿಸಿಕೊಳ್ಳುತ್ತಾ ತನ್ನ ಜೀವನವನ್ನು ಉನ್ನತ ಉದ್ದೇಶಗಳಿಗಾಗಿಯೇ ಮೀಸಲಿಸಿರಿಕೊಳ್ಳುವ ಯೋಗ್ಯತೆ ಆತನಲ್ಲಿರುವುದಿಲ್ಲ. ತನ್ನಲ್ಲಿಯೇ ಅಂತಹ ಯೋಗ್ಯತೆ ಇದೆಯೆಂದು ಯಾವನು ಭಾವಿಸುತ್ತಾನೋ ಆತನ ಅಧಃಪತನ ನಿಶ್ಚಿತವೆಂದು ತಿಳಿಯಬಹುದು. ಪ್ರತಿ ವ್ಯಕ್ತಿಯ, ತನ್ಮೂಲಕ ಇಡೀ ಸಮಾಜದ ಪತನವನ್ನು ತಡೆದು ಪರಿಪೂರ್ಣ ವಿಕಾಸದೆಡೆಗೆ ಸಾಗಲು ಬೇಕಾದ ಬಲವಾದ ಶ್ರದ್ಧಾ ಕೇಂದ್ರವೇ ’ಗುರು’.

“ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ:” “ಗುರು ಸಾಕ್ಷಾತ್ ಪರ ಬ್ರಹ್ಮ ತಸ್ಮೈ ಶ್ರೀ ಗುರವೇ ನಮ:” ಎಂದು ಗುರುವಿನೆಡೆಗೆ ನಮ್ಮ ಪೂರ್ವಿಕರು ತಮ್ಮ ಭಕ್ತಿಯನ್ನು ಮೆರೆದಿದ್ದಾರೆ. ಇದೊಂದು ಗುರು-ಶಿಷ್ಯರ ಪರಂಪರೆಯನ್ನು ಭಧ್ರಪಡಿಸಿ ಜಗತ್ತಿಗೆ ಸಾರುವ ಹಬ್ಬವೆಂತಲೂ ಹೇಳಬಹುದು. “ನಚೋರ ಹಾರ್ಯಂ ನಚರಾಜ ಹಾರ್ಯಂ. ನಭಾತ್ರಬಾಜ್ಯಂ ನಚ ಭಾರಕಾರಿ. ವ್ಯಯೇಕ್ರತೆ ವರ್ದತಿ ಏವ ನಿತ್ಯಂ. ವಿದ್ಯಾಧನಂ ಸರ್ವ ಧನಃ ಪ್ರಧಾನಂ.” ಅಂದರೆ ವಿದ್ಯೆಯನ್ನು ಯಾವ ಕಳ್ಳಕಾಕರಿಂದಲೂ ಮೋಸಮಾಡಿ ಕದ್ದೊಯ್ಯಲು ಸಾಧ್ಯವಿಲ್ಲ , ಯಾವ ರಾಜನೂ ಕೂಡ ತನ್ನ ಸಾಮರ್ಥ್ಯ ಮತ್ತು ಧರ್ಪದಿಂದ ವಶಪಡಿಸಿಕೊಳ್ಳಲು ಸಾಧ್ಯವಿಲ್ಲ. ಹೊತ್ತು ತಿರುಗಾಡಲು ಇದು ಭಾರವೂ ಅಲ್ಲ. ಹೇಗೆ ಖರ್ಚು ಮಾಡುತ್ತೇವೋ ಹಾಗೆ ವರ್ಧಿಸುವಂತಹ, ಎಲ್ಲ ಸಂಪತ್ತಿಗಿಂತಲೂ ಶ್ರೇಷ್ಟವಾದುದು ಎಂದರ್ಥ. ಇಂತಹ ಅತ್ಯಮೂಲ್ಯ ಸಂಪತ್ತನ್ನು ಧಾರೆ ಎರೆದ ಗುರುವೃಂದಕ್ಕೆ ಕೋಟಿ ನಮನಗಳನ್ನು ಸಲ್ಲಿಸುವ.

✍. ವಿವೇಕ್‌ ನರೇನ್

ಕುಶಾಲನಗರದಲ್ಲಿ ವಿಶ್ವ ಪರಿಸರ ದಿನಾಚರಣೆ : ಗಿಡನೆಟ್ಟು ಬೆಳೆಸುವ ಆಂದೋಲನಕ್ಕೆ ಚಾಲನೆ

ಕುಶಾಲನಗರದಲ್ಲಿ ವಿಶ್ವ ಪರಿಸರ ದಿನಾಚರಣೆ :

ಗಿಡನೆಟ್ಟು ಬೆಳೆಸುವ ಆಂದೋಲನಕ್ಕೆ ಚಾಲನೆ

ಕುಶಾಲನಗರ: ಜಿಲ್ಲಾ ಅರಣ್ಯ ಇಲಾಖೆ, ಕುಶಾಲನಗರ ಪಟ್ಟಣ ಪಂಚಾಯ್ತಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿ, ತಾಲ್ಲೂಕು ಸಾಮಾಜಿಕ ಅರಣ್ಯ ಇಲಾಖೆ, ಕುಶಾಲನಗರ ಅರಣ್ಯ ವಲಯ ಅರಣ್ಯಾಧಿಕಾರಿಗಳ ಕಛೇರಿಯ ವತಿಯಿಂದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕೊಡಗು ಪ್ರಾದೇಶಿಕ ಕಛೇರಿ, ತಾಲ್ಲೂಕು ಜೀವಿ ವೈವಿಧ್ಯ ನಿರ್ವಹಣಾ ಮಂಡಳಿ ಹಾಗೂ ಆದಿಶಂಕರಾಚಾರ್ಯ ಬಡಾವಣೆಯ  ಹಸಿರು ಪಡೆಯ ಸಹಯೋಗದಲ್ಲಿ ಕುಶಾಲನಗರ ಪಟ್ಟಣದ ಆದಿಶಂಕರಾಚಾರ್ಯ ಮತ್ತು ಅವಧಾನಿ ಬಡಾವಣೆಯ ಮೈದಾನದ ಬಳಿ ಶುಕ್ರವಾರ ( 5 ನೇ ಜೂನ್ 2020 ) “ಮಾಲಿನ್ಯ ನಿಯಂತ್ರಿಸಿ : ಜೀವಿ ವೈವಿಧ್ಯ ಉಳಿಸಿ” ಎಂಬ ಉದ್ಘೋಷಣೆಯಡಿ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆ : 2020  ಹಾಗೂ ನಗರ ಹಸಿರೀಕರಣ  ಯೋಜನೆಯಡಿ ಪಟ್ಟಣದ ಬಡಾವಣೆಗಳಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಬಡಾವಣೆಯ ಮಕ್ಕಳು ಪರಿಸರ ಘೋಷಣಾ ಫಲಕಗಳನ್ನು ಹಿಡಿದು ಪರಿಸರ ಘೋಷಣೆಗಳ ಪ್ರಚುರಪಡಿಸಿದರು. ಈ ಸಂದರ್ಭ ಹೊಂಗೆ, ಬೇವು, ಸಂಪಿಗೆ, ಶ್ರೀಗಂಧ, ಮಹಾಗಣಿ ಗಿಡಗಳನ್ನು ನೆಡಲಾಯಿತು. ವಿಜ್ಞಾನ ಪರಿಷತ್ತಿನ ಪದಾಧಿಕಾರಿಗಳು,ಬಡಾವಣೆಯ ಹಸಿರು ಪಡೆ, ಪುಷ್ಪಾಂಜಲಿ ಮಹಿಳಾ ಸಂಘಟನೆಯ  ಕಾರ್ಯಕರ್ತರು, ಪರಿಸರಾಸ್ತಕರು , ವಿವಿಧ ಸಂಘ- ಸಂಸ್ಥೆಗಳ ಪದಾಧಿಕಾರಿಗಳು, ನಿವಾಸಿಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ  ಕೋವಿಡ್ – 19 ರ ಹಿನ್ನೆಲೆಯಲ್ಲಿ ಎಲ್ಲರೂ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಗಿಡ ನೆಡಲಾಯಿತು.

ಪರಿಸರ ದಿನ ಮಹತ್ವ ಕುರಿತು ಮಾತನಾಡಿದ ಪರಿಸರ ಜಾಗೃತಿ ಆಂದೋಲನದ ಜಿಲ್ಲಾ ಸಂಯೋಜಕರೂ ಆದ ಕಾರ್ಯಕ್ರಮ ಸಂಘಟಕ ಟಿ.ಜಿ.ಪ್ರೇಮಕುಮಾರ್, ನಾವು ನೆಲ- ಜಲ, ಅರಣ್ಯ, ಜೀವಿ ವೈವಿಧ್ಯ ಸಂರಕ್ಷಣೆಯೊಂದಿಗೆ ಪರಿಸರ ಸಂರಕ್ಷಣೆಗೆ ಸಂಕಲ್ಪ ತೊಡುವ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನೀಡಬೇಕಿದೆ ಎಂದರು.

ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿಯು ಅರಣ್ಯ ಇಲಾಖೆ ಮತ್ತು ಪಟ್ಟಣ ಪಂಚಾಯ್ತಿ ಸಹಕಾರದೊಂದಿಗೆ ಪಟ್ಟಣದಲ್ಲಿ ಕಳೆದ 6 ವರ್ಷಗಳಿಂದ ಪಟ್ಟಣದಲ್ಲಿ ಗಿಡನೆಡುವ ಕಾರ್ಯದಲ್ಲಿ ತೊಡಗಿದೆ. ಪ್ರತಿಯೊಬ್ಬರೂ ಮನೆ ಬಳಿ ಗಿಡ ನೆಟ್ಟು ಬೆಳೆಸುವ ಮೂಲಕ ಪಟ್ಟಣದಲ್ಲಿ ಸ್ವಚ್ಛ ,ಸುಂದರ ಹಸಿರು ಪರಿಸರ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಗಿಡನೆಡುವ ಕಾರ್ಯಕ್ಕೆ ಚಾಲನೆ ನೀಡಿದ  ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಎಸ್.ಎಂ.ಸುಜಯ್ ಕುಮಾರ್,  ಪ್ರತಿಯೊಬ್ಬರೂ ತಮ್ಮನ್ನು ಪರಿಸರ ಸಂರಕ್ಷಣೆಯಲ್ಲಿ ತೊಡಗಬೇಕು.  ಪಟ್ಟಣದಲ್ಲಿ ಗಿಡನೆಟ್ಟು ಬೆಳೆಸುವ ಈ ಯೋಜನೆಗೆ ಪಂಚಾಯ್ತಿ ವತಿಯಿಂದ ಪೂರ್ಣ ಸಹಕಾರ ನೀಡಲಾಗುವುದು ಎಂದರು. ಉತ್ತಮ ಪರಿಸರ ಸಂರಕ್ಷಣೆಗೆ ಎಲ್ಲರೂ ಪಣತೊಡಬೇಕು ಎಂದರು.

ಪಟ್ಟಣ ಪಂಚಾಯ್ತಿ ಸದಸ್ಯ ಕಲೀಮುಲ್ಲ ಪರಿಸರ ದಿನಾಚರಣೆಯ ಮಾಹಿತಿಯ ಕರಪತ್ರ ಬಿಡುಗಡೆಗೊಳಿಸಿದರು. ಭವಿಷ್ಯತ್ತಿನ ದೃಷ್ಠಿಯಿಂದ ನಾವು ಹೆಚ್ಚೆಚ್ಚು ಗಿಡಗಳನ್ನು ನೆಟ್ಟು ಬೆಳೆಸುವ ಮೂಲಕ ಉತ್ತಮ ಪರಿಸರ ಸಂರಕ್ಷಣೆ ಮತ್ತು ಅಂತರ್ಜಲ ವೃದ್ಧಿಗೆ ಹೆಚ್ಚಿನ ಕಾಳಜಿ ವಹಿಸಬೇಕಿದೆ ಎಂದರು. ಗಿಡ- ಮರಗಳು ಪರಿಸರ ಸಮತೋಲನ ಕಾಪಾಡಲು ಪೂರಕವಾಗಿವೆ ಎಂದರು.

ತಾಲ್ಲೂಕು ಸಾಮಾಜಿಕ ಅರಣ್ಯ ಇಲಾಖೆಯ ಆರ್.ಎಫ್.ಓ. ನಮನ ನಾರಾಯಣ ನಾಯ್ಕ್ ಮಾತನಾಡಿ, ಭವಿಷ್ಯತ್ತಿನ ದೃಷ್ಠಿಯಿಂದ ನಾವು ಹೆಚ್ಚೆಚ್ಚು ಗಿಡಗಳನ್ನು ನೆಟ್ಟು ಬೆಳೆಸುವ ಮೂಲಕ ಉತ್ತಮ ಪರಿಸರ ಸಂರಕ್ಷಣೆ ಮತ್ತು ಅಂತರ್ಜಲ ವೃದ್ಧಿಗೆ ಹೆಚ್ಚಿನ ಕಾಳಜಿ ವಹಿಸಬೇಕಿದೆ ಎಂದರು. ಗಿಡ- ಮರಗಳು ಪರಿಸರ ಸಮತೋಲನ ಕಾಪಾಡಲು ಪೂರಕವಾಗಿವೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಎಚ್.ಎಸ್.ಅಶೋಕ್, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಎಸ್.ಎಂ.ಸುಜಯ್ ಕುಮಾರ್, ಹಿರಿಯ ನಾಗರಿಕ ಎಂ.ಎಚ್.ನಜೀರ್ ಅಹ್ಮದ್ ಗಿಡ ನೆಡುವ ಮೂಲಕ ಪರಿಸರ ಆಂದೋಲನಕ್ಕೆ ಚಾಲನೆ ನೀಡಿದರು. ಸಹಾಯಕ ಕೃಷಿ ನಿರ್ದೇಶಕ ಎಚ್.ಎಸ್.ರಾಜಶೇಖರ್ , ಪರಿಸರ ಪ್ರತಿಜ್ಞಾ ವಿಧಿ ಬೋಧಿಸಿದರು. ಪಟ್ಟಣ ಪಂಚಾಯ್ತಿ ಸದಸ್ಯ ಕಲೀಮುಲ್ಲಾ , ಆರೋಗ್ಯ ನಿರೀಕ್ಷಕ ಉದಯ್ ಕುಮಾರ್, ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ ಉಪಾಧ್ಯಕ್ಷ ಎಂ.ಎನ್.ವೆಂಕಟನಾಯಕ್, ಪದಾಧಿಕಾರಿಗಳಾದ ಜಿ.ಶ್ರೀನಾಥ್,  ಜಿ.ಶ್ರೀಹರ್ಷ, , ಟಿ.ವಿ.ಶೈಲಾ,  ನಿವೃತ್ತ ಉಪನ್ಯಾಸಕ ಕೆ.ವಿ.ಉದಯ್ ,‌ವಕೀಲ ಆರ್.ಕೆ.ನಾಗೇಂದ್ರಬಾಬು, ಪಂಚಾಯ್ತಿ ನೈಮರ್ಲ್ಯೀಕರಣದ ಮೇಲ್ವಿಚಾರಕ ಎಚ್.ಎನ್.ಮೋಹನ್ ಕುಮಾರ್, ಸಂಘಟನೆಗಳ ಪ್ರಮುಖರಾದ ಟಿ.ಎಸ್.ಶಾಂಭಮೂರ್ತಿ, ಎಚ್.ಪಿ.ಉದಯ್,  ಎನ್.ಡಿ.ಯೋಗೇಶ್, ಟಿ.ಬಿ.ಮಂಜುನಾಥ್,  ಎಚ್.ಜಿ.ಕುಮಾರ್, ಕೆ.ಬಿ.ರಾಜು, ಹಿರಿಯ ನಾಗರಿಕರಾದ   ಎಂ.ಜಿ.ಪ್ರಕಾಶ್, ಮೂಡೇರ ಈರಪ್ಪ, ನಾರಾಯಣನ್, ಮಹಿಳಾ ಸಂಘಟನೆಯ ಪ್ರಮುಖರಾದ ವಿನು ಪೂವಯ್ಯ, ರೋಹಿಣಿ,ಗಾಯಿತ್ರಿ, ಸುಲೋಚನ, ಮಾಲತಿ, ಯಶೋಧ ಮಂದಣ್ಣ, ಹಸಿರು ಪಡೆ ಕಾರ್ಯಕರ್ತರು , ಬಡಾವಣೆಯ ವಿದ್ಯಾರ್ಥಿಗಳು, ಇತರರು ಇದ್ದರು.

ವರದಿ: ✍. ಟಿ.ಜಿ.ಪ್ರೇಮಕುಮಾರ್,

ಕೊರೋನಾ ಸಂಕಷ್ಟ: ಉಚಿತ ಪ್ರವೇಶಾತಿಗೆ ಮುಂದಾದ ಮಡಿಕೇರಿ ಕ್ರೆಸೆಂಟ್ ಶಾಲೆ

ಕೊರೋನಾ ಸಂಕಷ್ಟ: ಉಚಿತ ಪ್ರವೇಶಾತಿಗೆ ಮುಂದಾದ ಮಡಿಕೇರಿ ಕ್ರೆಸೆಂಟ್ ಶಾಲೆ

ಮಡಿಕೇರಿ: ಕೊರೋನಾ ಲಾಕ್‌ಡೌನ್‌ನಿಂದಾಗಿ ಜಿಲ್ಲೆಯ ಜನ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವುದರಿಂದ ನಗರದ ಕ್ರೆಸೆಂಟ್ ಶಾಲೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಎಲ್‌ಕೆಜಿ ವಿದ್ಯಾರ್ಥಿಗಳಿಗೆ ಶುಲ್ಕ ರಹಿತವಾಗಿ ಸಂಪೂರ್ಣ ಉಚಿತ ಪ್ರವೇಶಾತಿಯನ್ನು ನೀಡಲು ನಿರ್ಧರಿಸಲಾಗಿದೆ ಎಂದು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಿಜಾಮುದ್ದೀನ್ ಸಿದ್ದಿಕ್ ತಿಳಿಸಿದ್ದಾರೆ.

ಕಳೆದ ಎರಡು ವರ್ಷಗಳಿಂದ ಕೊಡಗು ಜಿಲ್ಲೆ ಪ್ರಾಕೃತಿಕ ವಿಕೋಪಗಳಿಂದ ತತ್ತರಿಸಿ ಹೋಗಿದ್ದು, ಸ್ವಲ್ಪ ಚೇತರಿಕೆ ಕಂಡುಕೊಳ್ಳುವ ಸಂದರ್ಭ ಕೊರೋನಾ ಛಾಯೆ ನಮ್ಮ ದೇಶವನ್ನು ಆವರಿಸಿ ಲಾಕ್‌ಡೌನ್‌ನಲ್ಲಿ ಇರುವಂತಹ ಪರಿಸ್ಥಿತಿ ಬಂದೊದಗಿದೆ. ಇದರಿಂದ ಜಿಲ್ಲೆಯ ಜನ ಕೂಡ ಕಠಿಣ ಆರ್ಥಿಕ ದುಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಇದನ್ನು ಮನಗಂಡು ಶಾಲಾ ಆಡಳಿತ ಮಂಡಳಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಎಲ್‌ಕೆಜಿ ವಿದ್ಯಾರ್ಥಿಗಳನ್ನು ಉಚಿತವಾಗಿ ದಾಖಲಿಸಿಕೊಳ್ಳಲು ನಿರ್ಧರಿಸಿರುವುದಾಗಿ ಅವರು ಹೇಳಿದ್ದಾರೆ.

ಅಲ್ಲದೆ ಇತರ ವಿದ್ಯಾರ್ಥಿಗಳ ಪ್ರೇವೇಶಾತಿ ಶುಲ್ಕದಲ್ಲಿ ಶೇ.೫೦ ರಷ್ಟು ಕಡಿತವನ್ನು ಮಾಡಲಾಗುವುದು ಎಂದು ಹೇಳಿದ್ದಾರೆ. ಕ್ರೆಸೆಂಟ್ ಶಾಲಾ ಅಧ್ಯಾಪಕರುಗಳು ತಮ್ಮ ವೇತನದಲ್ಲಿ ಶೇ.೨೫ ರಷ್ಟು ಕಡಿತಗೊಳಿಸಿ ಸೇವೆ ಸಲ್ಲಿಸುವುದಾಗಿ ಸ್ವಯಂ ನಿರ್ಣಯ ಕೈಗೊಂಡಿದ್ದು, ಇದು ಸ್ವಾಗತಾರ್ಹ ಕ್ರಮವಾಗಿದೆ.

ಕೇಂದ್ರೀಯ ಮಾದರಿ ಪಠ್ಯಕ್ರಮವನ್ನು ಅನುಸರಿಸಿ ಶಿಕ್ಷಣ ರಂಗದಲ್ಲಿ ಉತ್ಕೃಷ್ಟ ಸೇವೆಯನ್ನು ಸಲ್ಲಿಸುತ್ತಾ, ಅನುಭವಿ ಅಧ್ಯಾಪಕರುಗಳ ಕಠಿಣ ಪರಿಶ್ರಮ ಮತ್ತು ಶಾಲಾ ಆಡಳಿತ ಮಂಡಳಿಯ ನಿಸ್ವಾರ್ಥ ಸೇವೆಯಿಂದ ಶಾಲೆ ೨೮ ವರ್ಷಗಳನ್ನು ಪೂರೈಸಿದೆ. ಪಾಠ, ಪ್ರವಚನದ ಜೊತೆಗೆ ವಿಜ್ಞಾನ, ಕಲೆ, ಕ್ರೀಡೆ ಹಾಗೂ ಇತರ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳ ಭವ್ಯ ಭವಿಷ್ಯದ ಬಗ್ಗೆ ಕಾಳಜಿ ಹೊಂದಿದೆ. ಅಲ್ಲದೆ ಇಲ್ಲಿಯ ವಿದ್ಯಾರ್ಥಿಗಳು ಸಮಾಜದ ಮುಖ್ಯ ವಾಹಿನಿಯಲ್ಲಿ ಬೆರೆತು ಅನೇಕ ಗೌರವಯುತ ಹುದ್ದೆಗಳನ್ನು ಅಲಂಕರಿಸಿ ಸಮಾಜಕ್ಕೆ ತಮ್ಮದೇ ಆದ ರೀತಿಯ ಕಾಣಿಕೆಯನ್ನು ನೀಡುತ್ತಲಿರುವುದು ಶಾಲೆಯ ಹಿರಿಮೆ ಎಂದು ನಿಜಾಮುದ್ದೀನ್ ಸಿದ್ದಿಕ್ ತಿಳಿಸಿದ್ದಾರೆ.

ಕ್ರೆಸೆಂಟ್ ಶಾಲೆಯ ಬಗ್ಗೆ:

1992ರಲ್ಲಿ ಕೇವಲ ಬೆರಳೆಣಿಕೆ ವಿದ್ಯಾರ್ಥಿಗಳಿಂದ ಪ್ರಾರಂಭಗೊಂಡ ಕ್ರೆಸೆಂಟ್‌ ಶಾಲೆಯು ಎಲ್.ಕೆ.ಜಿ. ಯಿಂದ 10ನೇ ತರಗತಿಯವರಗಿನ ವಿದ್ಯಾರ್ಥಿಗಳಿಗೆ ವ್ಯಾಸಂಗಕ್ಕೆ ವ್ಯವಸ್ಥೆಯನ್ನು ಮಾಡಿ ಕೊಟ್ಟಿದೆ.

ಆಂಗ್ಲ ಮಾಧ್ಯಮದ ಜೊತೆಗೆ ಸಿ.ಬಿ.ಎಸ್.ಇ. ಬೋಧನಾ ವ್ಯವಸ್ಥೆಯನ್ನು ಒಳಗೊಂಡಿದ್ದು, ” ನೂರುಲ್‌ ಇಸ್ಲಾಂ ಎಜುಕೇಷನ್‌ ಸೊಸೈಟಿ ರಿ)” ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದೆ.

ಮಡಿಕೇರಿಯ ಸಮೀಪವಿರುವ ಹೆಬ್ಬೇಟ್ಟಗೇರಿ ಗ್ರಾಮದ ಅಬಿಪಾಲ್ಸ್‌ಗೆ ಹೋಗುವ ಮಾರ್ಗ ಮತ್ತು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಮೆಡಿಕಲ್‌ ಕಾಲೇಜ್)‌ ಪಕ್ಕ 25 ಏಕರೆ ಪ್ರದೇಶವನ್ನು ಖರೀದಿಸಿ ದೊಡ್ಡ ಕ್ಯಾಂಪಸ್‌ ಮಾಡುವ ಯೋಜನೆಯಲ್ಲಿ ತೊಡಗಿಸಿಕೊಂಡಿದೆ.

ಕ್ರೆಸೆಂಟ್‌ ಶಾಲೆಯು ಮಡಿಕೇರಿಯ ಮಹದೇವಪೇಟೆಯ ಚೌಡೇಶ್ವರಿ ದೇವಾಲಯ ಹಾಗೂ ಬಸವೇಶ್ವರ ದೇವಾಲಯದ ನಡುವೆ 1992 ರಿಂದ ತನ್ನ ವಿದ್ಯಾದಾನವನ್ನು ಸಮಾಜಕ್ಕೆ ನೀಡುತ್ತಾ ಬರುತ್ತಿದ್ದು, ಮಡಿಕೇರಿಯ ಕ್ರೆಸೆಂಟ್‌ ಶಾಲೆಯಲ್ಲಿ ವ್ಯಾಸಂಗ ಮಾಡಿದ ಹಲವಾರು ವಿದ್ಯಾರ್ಥಿಗಳು ಉನ್ನತ್ತ ವ್ಯಾಸಂಗ, ಉನ್ನತ್ತ ಹುದ್ದೆಗಳನ್ನು ಅಲಂಕರಿಸಿ ಶಾಲೆಗೆ ಕೀರ್ತಿ ತಂದುಕೊಟ್ಟಿದ್ದಾರೆ.

ಕ್ರೆಸೆಂಟ್‌ ಶಾಲೆಯ ಸೇವಾಕಾರ್ಯಗಳು:

2018ರಲ್ಲಿ ಮಹಾಮಳೆಯಿಂದ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದ ಸಂದರ್ಭ ಸಂಕಷ್ಟಕ್ಕೆ ಸಿಲುಕಿದವರ ನೆರವಿಗೆ ಧರ್ಮಾತೀತ ಮತ್ತು ಜಾತ್ಯತೀತವಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ ಕ್ರೆಸೆಂಟ್ ಶಾಲೆಯು, ಶಾಲಾ ಆವರಣದಲ್ಲಿ ಹ್ಯುಮ್ಯಾನಿಟೇರಿಯನ್ ರಿಲೀಫ್ ಸೊಸೈಟಿ, ಜಮಾಅತೆ ಇಸ್ಲಾಮಿ ಹಿಂದ್ ಕೊಡಗು ರಿಲೀಫ್ ಸೆಲ್, ಪ್ರಬುದ್ಧ ನೌಕರರ ಒಕ್ಕೂಟ, ಕ್ರೆಸೆಂಟ್ ಶಾಲಾ ಆಡಳಿತ ಮಂಡಳಿಯ ಸಂಯುಕ್ತಾಶ್ರಯದಲ್ಲಿ ಸುಳ್ಯದ ಕೆ.ವಿ.ಜಿ. ವೈದ್ಯಕೀಯ ಮಹಾವಿದ್ಯಾಲಯದ ಸಹಕಾರದೊಂದಿಗೆ ಜಿಲ್ಲೆಯ ಸಂತ್ರಸ್ತರು ಹಾಗೂ ನಾಗರಿಕರಿಗಾಗಿ ‘ಉಚಿತ ವೈದ್ಯಕೀಯ ಮಹಾಶಿಬಿರ’ ನಡೆಸಿತು.

2014ರಲ್ಲಿ ಮಡಿಕೇರಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಂದರ್ಭ ಕ್ರೆಸೆಂಟ್ ಶಾಲೆಯಲ್ಲಿ 400 ಮಂದಿಗೆ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬರುವ ಸಾಹಿತ್ಯಾಸಕ್ತರಿಗೆ ಉತ್ತಮ ವಸತಿ ಸೌಕರ್ಯ ಕಲ್ಪಿಸಲು ವ್ಯವಸ್ಥೆ ಮಾಡಿಕೊಟ್ಟಿತು.

ಕ್ರೆಸೆಂಟ್ ಶಾಲೆ ಹಾಗೂ ಪಿ.ಪಿ.ಫೌಂಡೇಷನ್ ವತಿಯಿಂದ 2019ರ ಫೆ.9 ರಂದು ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಎದುರಿಸುವ ಬಗ್ಗೆ ಉಚಿತ ಶೈಕ್ಷಣಿಕ ಸಲಹಾ ಶಿಬಿರ ನಡೆಸಲ್ಪಟ್ಟಿತ್ತು.

ಕ್ರೆಸೆಂಟ್‌ ಶಾಲೆಯ ವಿದ್ಯಾರ್ಥಿಗಳ ಪ್ರತಿಜ್ಞೆ ಈ ರೀತಿ ಇದೆ:

ಭಾರತ ನನ್ನ ತಾಯಿನಾಡು,
ಎಲ್ಲಾ ಭಾರತೀಯರು ನನ್ನ ಸಹೋದರರು ಮತ್ತು ಸಹೋದರಿಯರು
ನಾನು ನನ್ನ ದೇಶವನ್ನು ಪ್ರೀತಿಸುತ್ತೇನೆ ಮತ್ತು ನನ್ನ ದೇಶದ ಶ್ರೀಮಂತ ಮತ್ತು ವಿವಿಧ ಪರಂಪರೆಯ ಬಗ್ಗೆ ಹೆಮ್ಮೆ ಪಡುತ್ತೇನೆ.
ನಾನು ಯಾವಾಗಲೂ ಅದಕ್ಕೋಸ್ಕರ ಶ್ರಮಿಸುತ್ತೇನೆ.
ನನ್ನ ಪೋಷಕರಿಗೆ, ಶಿಕ್ಷಕರಿಗೆ ಮತ್ತು ಎಲ್ಲಾ ಹಿರಿಯರಿಗೆ ಗೌರವಿಸುತ್ತೇನೆ ಮತ್ತು ಎಲ್ಲರೊಂದಿಗೆ ಸೌಜನ್ಯದಿಂದ ವರ್ತಿಸುತ್ತೇನೆ.
ನನ್ನ ದೇಶ ಮತ್ತು ಜನರಿಗೆ, ನನ್ನ ಬದ್ಧತೆಯ ವಾಗ್ದಾನ ಮಾಡುತ್ತೇನೆ.
ಅವರ ಯೋಗಕ್ಷೇಮದ ಮತ್ತು ಅಭ್ಯುದಯದಲ್ಲಿ ನನ್ನ ಸಂತೋಷ ನೆಲೆಸಿದೆ.