Christmas 2022 Kodagu Madikeri

ಕ್ರಿಸ್ಮಸ್ ಹಬ್ಬ ಅಂದ್ರೆ ಕ್ರಿಶ್ಚಿಯನ್ನರಿಗೆ
ಮಾತ್ರ ಹಬ್ಬವಲ್ಲ. ಎಲ್ಲರ ಕಣ್ಣಿಗೂ ಹಬ್ಬ

ವಿಶ್ವದೆಲ್ಲೆಡೆ ಡಿಸೆಂಬರ್ ಬಂತೆಂದರೆ ಹಬ್ಬದ ಸಡಗರ ಆರಂಭವಾಗಿರುತ್ತದೆ. ಅದರಲ್ಲೂ ಕ್ರೈಸ್ತ ಬಾಂಧವರಿಗೆ ಇದು ಪರ್ವ ಕಾಲ. ಪ್ರಭು ಯೇಸು ಕ್ರಿಸ್ತ ಹುಟ್ಟಿದ ದಿನದ ಆಚರಣೆಯ ಸಂಭ್ರಮ. ಇತ್ತೀಚಿನ ದಿನಗಳಲ್ಲಿ ಕ್ರಿಸ್ಮಸ್ ಎಂಬುದು ಸೌಹಾರ್ದತೆಯ ಸಡಗರವಾಗಿ, ಜಾತಿ-ಧರ್ಮಗಳ ಭೇದವಿಲ್ಲದೆ ವಿವಿಧೆಡೆ ಸಾಂಘಿಕವಾಗಿ, ಸಾಮೂಹಿಕವಾಗಿ ಆಚರಿಸಲ್ಪಡುತ್ತಿದೆ.
ಕ್ರಿಸ್ಮಸ್ ಹಬ್ಬ ಅಂದ್ರೆ ಕ್ರಿಶ್ಚಿಯನ್ನರಿಗೆ ಮಾತ್ರ ಹಬ್ಬವಲ್ಲ. ಇತರರ ಕಣ್ಣಿಗೂ ಹಬ್ಬ. ಕ್ರಿಶ್ಚಿಯನ್ನರಿಗೆ ವರ್ಷಕ್ಕೊಂದೇ ದೊಡ್ಡ ಹಬ್ಬ. ಪ್ರಭು ಯೇಸುವಿನ ಆಗಮನದ ಚರಿತ್ರೆ ದೇವರ ಅಪಾರ ಯೋಜನೆಯ ಪ್ರತೀಕ. ಕ್ರಿಸ್‌ಮಸ್ ಹಬ್ಬಕ್ಕೆ ಮೊದಲ್ಗೊಂಡು ನಾಲ್ಕು ವಾರಗಳ ಅಧ್ಯಾತ್ಮಿಕ ಸಿದ್ಧತೆಯಲ್ಲಿ ಕ್ರೈಸ್ತರು ತೊಡಗುತ್ತಾರೆ. ಈ ಕಾಲವನ್ನು ಆದ್ವೆಂತ್ ಎಂದು ಕರೆಯುತ್ತಾರೆ. ಆದ್ವೆಂತ್ ಎಂದರೆ ಪ್ರಭು ಯೇಸು ಕ್ರಿಸ್ತರ ಆಗಮನವನ್ನು ಎದುರು ನೋಡುವುದು. ಆದ್ವೆಂತ್ ಕಾಲದ ನಾಲ್ಕು ವಾರಗಳಲ್ಲಿ ಪ್ರಾರ್ಥನೆ ಧ್ಯಾನ, ಪಾಪ ಪರಿಹಾರದ ಸಂಸ್ಕಾರದಲ್ಲಿ ಹಾಗೂ ಪೂಜ್ಯ ವಿಧಿಗಳಲ್ಲಿ ಪಾಲ್ಗೊಂಡು ಸಿದ್ಧತೆ ಮಾಡುತ್ತಾರೆ.
ಕ್ರಿಸ್‌ಮಸ್ ಹಬ್ಬದ ಆಚರಣೆಗಳು ಹತ್ತು ಹಲವು ಮನಸ್ಸಿಗೆ ಉಲ್ಲಾಸ ನೀಡುವಂತವು. ಯೇಸು ಕ್ರಿಸ್ತನ ಜನನದ ಗೋದಲಿ, ಕ್ರಿಸ್‌ಮಸ್ ಟ್ರೀ. ಕ್ರಿಸ್‌ಮಸ್ ಕ್ಯಾರಲ್ಸ್ ಬಗೆ ಬಗೆಯ ಕುಸ್ವಾರ್, ಕೇಕ್‌ಗಳ ತಯಾರಿ, ಕ್ರಿಸ್‌ಮಸ್ ಕಾರ್ಡುಗಳ ಮುಖಾಂತರ ಕ್ರಿಸ್‌ಮಸ್ ಹಬ್ಬದ ಶುಭಾಶಯ ಕೋರುವ ಸಡಗರ ಇವೆಲ್ಲವೂ ಕ್ರಿಸ್‌ಮಸ್ ಹಬ್ಬಕ್ಕೆ ಹೊಸ ಮೆರುಗು ಹಾಗೂ ಕಳೆಯನ್ನು ನೀಡುತ್ತವೆ. ಮನೆಯಲ್ಲಿ ಮಹಿಳೆಯರು ತಯಾರಿಸಿದ ಕುಸ್ವಾರನ್ನು ನೆರೆ ಹೊರೆಯವರಿಗೆ ಹಾಗೂ ಬಂಧು ಮಿತ್ರರಿಗೆ ಹಂಚುವ ಪದ್ಧತಿ ಕ್ರಿಸ್‌ಮಸ್ ಹಬ್ಬದ ಸಹೋದರತೆಯ ಸಂಕೇತ.

ವಿಶ್ವಾದ್ಯಂತ ಈ ದಿನವನ್ನು ಕ್ರೈಸ್ತ ಧರ್ಮದಲ್ಲಿ ದೇವಪುತ್ರ ಎಂದು ನಂಬಲಾಗಿರುವ ಏಸುವಿನ ಜನ್ಮದಿನವಾಗಿ ಆಚರಿಸ ಲಾಗುತ್ತಿದೆ. ಆದರೆ, ಮೂಲತಃ ಏಸುಕ್ರಿಸ್ತ ಹುಟ್ಟಿದ ನಿಖರ ದಿನಾಂಕದ ಬಗ್ಗೆ ವಿವಿಧ ವಾದಗಳಿವೆ. ಆದಾಗ್ಯೂ, ಹಳೆ ಕಾಲದ ಕ್ರಿಸ್ತನ ಅನುಯಾಯಿಗಳು ಪಾಲಿಸುತ್ತಿದ್ದ ಪ್ರಾಚೀನ ರೋಮನ್ ಕ್ಯಾಲೆಂಡರ್‌ನ ಪ್ರಕಾರ ಉತ್ತರಾಯಣ ಸಂಕ್ರ ಮಣದ ೯ ತಿಂಗಳ ಬಳಿಕ(ಅಂದರೆ, ಕ್ರಿಸ್ತನ ಪುನರುಜ್ಜೀವನ ವಾಗಿರುವುದೆಂದು ನಂಬಲಾಗಿರುವ ಮಾರ್ಚ್ ೨೫ರ ಒಂಬತ್ತು ತಿಂಗಳ ಬಳಿಕ) ಅಥವಾ ಪ್ರಾಚೀನ ಚಳಿಗಾಲದಲ್ಲಿನ ಒಂದು ಹಬ್ಬದ ಸಮಯದಲ್ಲಿ ಬೆತ್ಲಹೆಮ್ ನಲ್ಲಿನ ಹಟ್ಟಿಯೊಂದರಲ್ಲಿ ಕನ್ಯಾ ಮೇರಿಯು ಏಸುಕ್ರಿಸ್ತುವಿಗೆ ಜನ್ಮ ನೀಡಿದಳು. ಯೇಸು ಕ್ರಿಸ್ತನು ೨೫ನೇ ತಾರೀಕಿಗೆ ಹುಟ್ಟಿದ ಅಂತ ನಂಬಿಕೆಯಿದೆ. ಆದರೆ ತಿಂಗಳ ಬಗ್ಗೆ ನಿಖರ ಮಾಹಿತಿ ಇಲ್ಲವಾದರೂ, ಕೆಥೋಲಿಕ್ ಚರ್ಚು ಡಿಸೆಂಬರ್ ತಿಂಗಳನ್ನು ಸಂಭ್ರಮಾಚರಣೆಯ ಪರ್ವಕಾಲವಾಗಿ ಆರಿಸಿಕೊಂಡಂದಿನಿಂದ ಇದು ಅನೂಚಾನವಾಗಿ ನಡೆದುಕೊಂಡುಬರುತ್ತಿದೆ. ಸಾಮಾನ್ಯವಾಗಿ ಬಹುತೇಕ ಎಲ್ಲ ದೇಶಗಳಲ್ಲೂ ಕ್ರಿಸ್ಮಸ್ ಹಬ್ಬವನ್ನು ಡಿ.೨೫ರ ಆಚೀಚಿನ ಕೆಲವು ದಿನಗಳನ್ನೂ ಸೇರಿಸಿಕೊ೦ಡು ಆಚರಿಸಲಾಗುತ್ತದೆ. ಕ್ರಿಸ್ಮಸ್ ಹಬ್ಬದ ಹಿಂದಿನ ದಿನವನ್ನು ಕ್ರಿಸ್ಮಸ್ ಈವ್ ಎಂದೂ, ಕ್ರಿಸ್ಮಸ್ ನಂತರದ ಹನ್ನೆರಡನೆ ದಿನವನ್ನು “ಎಪಿಫನಿ” ಎಂದೂ ಸಡಗರದಿಂದ ಆಚರಿಸಲಾಗುತ್ತದೆ. ಮನೆ ಮನೆಗಳಲ್ಲಿ ಕ್ರಿಸ್ಮಸ್ ವೃಕ್ಷ ನೆಡಲಾಗುತ್ತದೆ, ಅದನ್ನು ವಿದ್ಯುದ್ದೀಪಗಳಿಂದ ಸಿಂಗರಿಸಲಾಗುತ್ತದೆ. ವಿವಿಧೆಡೆ ಮನೆಯ ಒಳ ಹೊರಗೆಲ್ಲಾ ದೀಪಗಳ ಅಲಂಕಾರ ನಡೆಯುತ್ತದೆ. ನಕ್ಷತ್ರಾಕಾರದ ಗೂಡು ದೀಪ ಕೂಡ ಇರಿಸಲಾಗುತ್ತದೆ

ಕ್ರಿಸ್ಮಸ್ ಹಬ್ಬದ ಸಡಗರದಲ್ಲಿ ಉದ್ದವಾದ ಬಿಳಿಗಡ್ಡ, ದೊಡ್ಡಹೊಟ್ಟೆಯ, ಮುಖ ತುಂಬಾ ನಗುವಿನ, ಉದ್ದವಾದ ಕೆಂಪು ದೋಲೆ, ಕೆಂಪು ಟೋಪಿ ಧರಿಸಿದ ಸಾಂತಾಕ್ಲಾಸ್ ನೆನಪಾಗುತ್ತಾನೆ. ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಎಲ್ಲೆಡೆ ಗೋಚರಿಸುವ ಸಾಂತಾಕ್ಲಾಸ್‌ಗೆ ಬಾರಿ ಡಿಮಾಂಡ್, ತಮ್ಮ ವೇಷಭೂಷಣ ಹಾಗೂ ಜಿಂಗಲ್ ಬೆಲ್ ಎಂಬ ಗೀತೆಗೆ ಲಯಭರಿತವಾಗಿ ಹೆಜ್ಜೆಯನ್ನು ಹಾಕುತ್ತಾ, ತನ್ನ ಸುತ್ತ ನಲಿದು ಕುಣಿಯುವ ಮಕ್ಕಳಿಗೆ ಆಟಿಕೆ, ಚಾಕಲೇಟ್ ಕೊಡುವುದೆಂದರೆ, ಸಾಂತಾಕ್ಲಾಸ್‌ಗೆ ತುಂಬಾ ಸಂತೋಷ. ನಾಲ್ಕನೇ ಶತಮಾನದಲ್ಲಿ ಜೀವಿಸಿದ ನಿಕೋಲಸ್ ಒಬ್ಬ ಮೇಧಾವಿ, ಮೀರ ಎಂಬ ಪ್ರಾಂತ್ಯದ ಕ್ರೈಸ್ತ ಧರ್ಮಾಧ್ಯಕ್ಷರು ಎಂದು ಚರಿತ್ರೆಯಲ್ಲಿ ಉಲ್ಲೇಖೀಸಲಾಗಿದೆ. ತನ್ನ ಉದಾತ್ತ ಧ್ಯೇಯಗಳಿಂದ ಬಡ ಹೆಣ್ಮಕ್ಕಳ ಮದುವೆಗಾಗಿ, ನಿರ್ಗತಿಕ ಮಕ್ಕಳಿಗೆ, ಉದಾರ ದೇಣಿಗೆಯನ್ನು ನೀಡಿ ಅವರು ಸಮಾಜದಲ್ಲಿ ಗೌರವಾನ್ವಿತ ವ್ಯಕ್ತಿಗಳಾಗಿ ಜೀವನ ನಡೆಸಲು ಅನುವು ಮಾಡಿಕೊಟ್ಟ ನಿಕೋಲಸ ಪವಿತ್ರ ಧರ್ಮಸಭೆಯಲ್ಲಿ ಸಂತರೆಂದು ಪೋಷಿಸಲ್ಪಟ್ಟಿದ್ದಾರೆ. ಕ್ರಿಸ್ಮಸ್ ಹಬ್ಬವು ವಿಶೇಷವಾಗಿ ಉಡುಗೊರೆಗಳಿಗೆ ಪ್ರಸಿದ್ಧ. ಉಡುಗೊರೆಗಳನ್ನು ಹೊತ್ತು ಬರುವ ಸಾಂತಾ ಕ್ಲಾಸ್, ಪುಟಾಣಿಗಳನ್ನೆಲ್ಲಾ ರಂಜಿಸುತ್ತಾನೆ. ಸಂತ ನಿಕೊಲಾಸ್ ಎಂಬ ಕ್ರೈಸ್ತ ಪಾದ್ರಿಯ ಪ್ರತೀಕವೇ ಸಾಂತಾ ಕ್ಲಾಸ್ ಎಂಬ ನಂಬಿಕೆಯಿದೆ.

ಕ್ರೈಸ್ತ ಕುಟುಂಬಗಳಲ್ಲಿ ವಿಶೇಷ ಭೋಜನ ಕ್ರಿಸ್‌ಮಸ್‌ಗೆ ಸಂಬಂಧಿಸಿದ ಪ್ರಮುಖ ಸಂಪ್ರದಾಯಗಳಲ್ಲೊಂದು. ಈ ಭೋಜನದಲ್ಲಿ ಒಳಗೊಳ್ಳುವ ವಿವಿಧ ಖಾದ್ಯಗಳು ದೇಶದಿಂದ ದೇಶಕ್ಕೆ ವಿಭಿನ್ನವಾದರೂ, ಸಂಪ್ರದಾಯ ಒಂದೇ. ಹಲವು ಬಗೆಯ ತಿಂಡಿಗಳು, ಕ್ರಿಸ್‌ಮಸ್‌ಗೆಂದೇ ತಯಾರಾಗುವ ಕರಿದ ತಿನಿಸುಗಳು, ಕೇಕ್‌ಗಳು ಹಾಗೂ ಚಳಿಗಾಲದ ಸಮಯದಲ್ಲಿ ಲಭ್ಯವಾಗುವ ವಿಶೇಷ ಹಣ್ಣುಹಂಪಲುಗಳು ಕ್ರಿಸ್‌ಮಸ್ ಭೋಜನದ ಭಾಗವಾಗುತ್ತದೆ.
ಡಿ.೨೪ರ ರಾತ್ರಿಯಿಂದ ಹಿಡಿದು ಬಳಿಕದ ೧೨ ದಿನಗಳ ಕಾಲವನ್ನು ‘ಕ್ರಿಸ್‌ಮಸ್‌ಟೈಡ್’ ಎನ್ನುತ್ತಾರೆ. ೧೨ನೆ ದಿನವಾದ ಜನವರಿ ೫ರಂದು ರಾತ್ರಿ ‘ಎಪಿಫನಿ’ ಅಥವಾ ದೇವ ಸಾಕ್ಷಾತ್ಕಾರದ ದಿನವನ್ನು ಆಚರಿಸುವುದರೊಂದಿಗೆ ಆ ವರ್ಷದ ಕ್ರಿಸ್‌ಮಸ್ ಆಚರಣೆಗೆ ಅಧಿಕೃತ ತೆರೆಬೀಳುತ್ತದೆ. ಕ್ರಿಸ್‌ಮಸ್ ದಿನವನ್ನು ಸಾಕ್ಷಾತ್ಕಾರದ ದಿನದೊಂದಿಗೆ ಬೆಸೆಯುವ ಈ ‘ಕ್ರಿಸ್‌ಮಸ್‌ಟೈಡ್’ ಸಂಪೂರ್ಣ ಭಕ್ತಿಪ್ರಧಾನ ಹಾಗೂ ಆಚರಣೆ, ಸಂಭ್ರಮದ ಕಾಲ.

Comments are closed.

  • Search Coorg Media

  • web-cover-1