ಸರ್ಚ್‌ ಕೂರ್ಗ್:‌ ದೀಪಾವಳಿ ವಿಶೇಷ ಸಂಚಿಕೆ -2021

ಸರ್ಚ್‌ ಕೂರ್ಗ್: ದೀಪಾವಳಿ ವಿಶೇಷ ಸಂಚಿಕೆ -2021

ದೀಪ ಬೆಳಗೋಣ; ಬೆಳಗುತ್ತಾ…. ಮನೆಯೊಳಗಿನ ಮನದೊಳಗಿನ ಅಂಧಕಾರವನ್ನು ಹೋಗಲಾಡಿಸೋಣ….

ಭಾರತೀಯ ಹಬ್ಬಗಳೆಲ್ಲವೂ ಹರ್ಷದಾಯಕವಾಗಿವೆ. ಹಬ್ಬಗಳ ಹೆಸರೇ ಮನುಷ್ಯನನ್ನು ಶ್ರೇಷ್ಠ ಜೀವನ ರೂಪಿಸಿಕೊಳ್ಳಲು ಪ್ರೇರಣೆ ನೀಡುತ್ತದೆ. ಹಬ್ಬಗಳ ಹಿನ್ನೆಲೆಯಲ್ಲಿ ಬಹಳ ಉನ್ನತವಾದ ಆಧ್ಯಾತ್ಮಿಕ ರಹಸ್ಯಗಳು ಅಡಗಿವೆ. ನಮ್ಮ ಹಿರಿಯರು ಪ್ರತಿ ಹಬ್ಬಕ್ಕೂ ಅದಕ್ಕೆ ಸರಿಹೊಂದುವಂತೆ ಒಂದು ಪುರಾಣ, ಪುಣ್ಯಕಥೆಯನ್ನು ಬೆಸೆದು ಹಬ್ಬಕ್ಕೆ ಮೆರಗು ಹಾಕಿದ್ದಾರೆ. ಆದರೆ ಅದು ಕ್ರಮೇಣವಾಗಿ ಆಧ್ಯಾತ್ಮಿಕತೆಯ ಅರ್ಥ ಕಳೆದುಕೊಂಡು ತನ್ನ ಸೊಬಗನ್ನು ಕಳೆದುಕೊಳ್ಳುತ್ತಿದೆ. ಏಕೆಂದರೆ ಮಾನವನು ಹಬ್ಬಗಳ ಅಲೌಕಿಕ ಅರ್ಥವನ್ನು ತೆಗೆದುಕೊಳ್ಳದೇ ಕೇವಲ ಸ್ಥೂಲ ರೂಪದಲ್ಲಿ ಆಚರಿಸುತ್ತಿರುವುದರಿಂದ ಅಲೌಕಿಕ ಸಂತೋಷದ ಅನುಭವವಾಗುತ್ತಿಲ್ಲ.

ನವರಾತ್ರಿ ಉಕ್ಕಿಸಿದ ನವೋಲ್ಲಾಸ ಮನಸ್ಸಲ್ಲಿನ್ನೂ ಹಿತವಾಗಿ ಹರಡಿಕೊಂಡಿರುವಂತೆಯೇ ಮುಸ್ಸಂಜೆಯ ಮುದ್ದಾದ ಮಳೆ, ಚೂರುಚೂರೇ ಆವರಿಸಿಕೊಳ್ಳುತ್ತಾ ಖುಷಿ ಕೊಡುವ ಚಳಿಯ ನಡುವೆ ಮತ್ತೊಂದು ಸಂಭ್ರಮ ಮೈದಳೆದಿದೆ. ಅದು ಬೆಳಕಿನ ಹಬ್ಬ, ಬದುಕಿನ ಹಬ್ಬ, ಕುಟುಂಬದ ಹಬ್ಬ, ಊರ ಹಬ್ಬವಾದ ದೀಪಾವಳಿ. ನವರಾತ್ರಿಯ ವಿಜಯದಶಮಿಗೂ ದೀಪಾವಳಿ ಆರಂಭದ ಚತುರ್ದಶಿಗೂ ನಡುವೆ ಇರುವುದು ಹದಿನೆಂಟೇ ದಿನದ ಅಂತರ. ಅದರ ನಡುವೆಯೇ ಹಾಲು ಪೈರಿನ ಮೊಳಕೆ ಬೆಳೆದು ಭತ್ತವಾಗುತ್ತದೆ, ಪ್ರಕೃತಿಯಲ್ಲಿ ಹೊಸ ಹೂವು ಅರಳುತ್ತದೆ, ಬದುಕು ಸಡಗರದ ಮತ್ತೊಂದು ಶಿಖರದೆಡೆಗೆ ಹೊರಳುತ್ತದೆ.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ದೀಪಾವಳಿಯು ಹಿಂದುಗಳ ಮತ್ತು ಜೈನರ ಜನಪ್ರಿಯ ಹಬ್ಬ. ದೀಪಾವಳಿಯು ಕತ್ತಲೆಯ ವಿರುದ್ಧ ಜಯಗಳಿಸಿದ ಬೆಳಕಿನ ಸಂಕೇತ, ಅಜ್ಞಾನದ ವಿರುದ್ಧ ಜ್ಞಾನದ ಜಯದ ಸಂಕೇತ, ದುಷ್ಟರ ವಿರುದ್ಧ ಶಿಷ್ಟರ ಜಯದ ಸಂಕೇತ. ಕೆಟ್ಟದ್ದರ ವಿರುದ್ಧ ಒಳ್ಳೆಯತನದ ಜಯದ ಸಂಕೇತ. ದೀಪಾವಳಿ ಹಬ್ಬದಲ್ಲಿ ಮನೆಗಳು, ಅಂಗಡಿಗಳು, ಕಚೇರಿಗಳು, ಮಠಗಳು ಮತ್ತು ಮಂದಿರಗಳನ್ನು ಸ್ವಚ್ಛಗೊಳಿಸಿ, ಸಿಂಗರಿಸಿ, ದೀಪಾಲಂಕಾರ ಮಾಡಿ ಲಕ್ಷ್ಮಿ, ಸರಸ್ವತಿ, ಗಣೇಶ ಮತ್ತು ಕುಬೇರ ದೇವರುಗಳನ್ನು ಪೂಜಿಸುವರು. ತಮ್ಮ ಎಲ್ಲಾ ಬಂಧುಗಳನ್ನು, ಗೆಳೆಯರನ್ನು ಕರೆದು, ಸಿಹಿ ಹಂಚಿ, ಕಾಣಿಕೆಗಳನ್ನು ಕೊಟ್ಟು ಸಂತೋಷ ಪಡುವರು. ತಾವು ಕೂಡ ಒಳ್ಳೆಯ ಮತ್ತು ಹೊಸ ಬಟ್ಟೆಗಳನ್ನು ಹಾಕಿಕೊಂಡು ಸಂಭ್ರಮಿಸುವರು. ಹಬ್ಬದ ದಿವಸ ಮನೆಯ ಮುಂದೆ ಮತ್ತು ಅಂಗಡಿಯ ಮುಂದೆ ಪಟಾಕಿ (ಮದ್ದು-ಗುಂಡುಗಳು) ಸಿಡಿಸಿ ಸಂಭ್ರಮಿಸುವರು.

ದೀಪಾವಳಿ ಕೆಲವರಿಗೆ ಪಂಚ ದಿನಗಳ ಹಬ್ಬ. ಕೆಲವರಿಗೆ ನಾಲ್ಕಾದರೆ, ಉಳಿದವರಿಗೆ ಮೂರು ದಿನದ ವೈಭವ. ಧನ ತ್ರಯೋದಶಿಯಿಂದ ಆರಂಭಿಸಿ ಅಮಾವಾಸ್ಯೆ ದಾಟಿ ಬಿದಿಗೆವರೆಗೂ ಸಡಗರ ವಿಸ್ತರಿಸುತ್ತದೆ. ಈ ಎಲ್ಲ ದಿನಗಳಲ್ಲಿ ಮೆರೆಯವುದು ಭಕ್ತಿ, ಪ್ರೀತಿ ಮತ್ತು ಪ್ರಕೃತಿ. ಇದು ಬದುಕಿಗೆ ಆಧಾರವಾದ ಜೀವ ಶಕ್ತಿಯ ವೈವಿಧ್ಯಮಯ ಸ್ವರೂಪಗಳ ಆರಾಧನೆ, ಕೃತಜ್ಞತೆ ಸಮರ್ಪಣೆಗೆ ವೇದಿಕೆ. ಸಂಬಂಧಗಳ ನಂಟನ್ನು ಮತ್ತಷ್ಟು ಗಾಢವಾಗಿಸುವ ಬೆಸುಗೆ. ದೀಪಾವಳಿ ಎಂದರೆ ಮನೆ-ಮನ ಎಲ್ಲವೂ ಒಮ್ಮೆ ಸ್ವಚ್ಛವಾಗಿ ಲಕಲಕಿಸುತ್ತದೆ. ಅಂತೆಯೇ ಹಳೆ ನೆನಪು, ನೋವುಗಳ ಕೊಳೆಯೂ ಗುಡಿಸಿ ಹೋಗುತ್ತದೆ. ಹೊಸ ಬಣ್ಣ, ಹೊಸ ಬೆಳಕು, ಹೊಸ ಬಟ್ಟೆಗಳ ಮಿರಿಮಿರಿ ಮಿಂಚು ಹಿತವಾಗುತ್ತದೆ. ದೇವರೊಂದಿಗೆ, ಕುಟುಂಬದೊಂದಿಗೆ, ಪ್ರಕೃತಿಯೊಂದಿಗಿನ ಸಂಬಂಧ ಮತ್ತೆ ನವೀಕರಣಗೊಳ್ಳುತ್ತದೆ.

ದೀಪಾವಳಿ ಬೆಳಕಿನ ಹಬ್ಬವಾಗಿದ್ದು ದೀಪಗಳಿಗೆ ಈ ಹಬ್ಬದಲ್ಲಿ ವಿಶೇಷ ಮಹತ್ವ ಇದೆ. ದೀಪದಾನವು ಈ ಹಬ್ಬದಲ್ಲಿ ಮಾಡುವ ವಾಡಿಕೆ ಇದೆ. ಸ್ಥೂಲ ದೀಪದ ಜೊತೆಗೆ ಆತ್ಮಜೋತಿಯನ್ನು ಬೆಳಗಿಸಿದರೆ ನಮ್ಮ ಜೀವನ ಪರಿಪೂರ್ಣ ವಾಗುತ್ತದೆ. ಪ್ರತಿ ಒಂದು ಹಬ್ಬಕ್ಕೆ ತನ್ನದೇ ಆದ ಹಿನ್ನಲೆ ಇದ್ದು, ಅಧ್ಯಾತ್ಮಿಕ ರಹಸ್ಯವನ್ನು ತಿಳಿಸಿಕೊಡುವುದರ ಜೊತೆಗೆ ಅದನ್ನು ತಮ್ಮ ನಿತ್ಯ ಜೀವನದಲ್ಲಿ ಸಹಜವಾಗಿ ಹೇಗೆ ಅಳವಡಿಕೊಳ್ಳುಬೇಕು ಎಂಬುವುದು, ಅಜ್ಞಾನದ ಕತ್ತಲೆಯಿಂದ ಸತ್ಯ ಜ್ಞಾನದ ಬೆಳಕನ್ನು ನಾವು ಪಡೆದರೆ ನಮ್ಮ ಈ ಮಾನವ ಜನ್ಮ ಸಾರ್ಥಕ.

ದೀಪಾವಳಿ ಬಂದ ಕೂಡಲೇ ಎಲ್ಲವೂ ದೇವರಾಗಿ ಬಿಡುತ್ತದೆ. ಎಣ್ಣೆ ಸ್ನಾನಕ್ಕೆ ಮುನ್ನ ಹಂಡೆಯೂ ಹೂವಿನಿಂದ ಅಲಂಕಾರಗೊಳ್ಳುತ್ತದೆ, ದೀಪದ ಬೆಳಕಲ್ಲಿ ದೇವರಾಗುತ್ತದೆ. ಗದ್ದೆಯ ನಡುವೆ ದೀಪವಿಟ್ಟು ಸಲ್ಲಿಸುವ ಪ್ರಾರ್ಥನೆ, ಎಲ್ಲ ಕೃಷಿ ಪರಿಕರಗಳಿಗೆ ನಡೆಯುವ ಪೂಜೆ ಪ್ರಕೃತಿಗೆ ಸಲ್ಲಿಸುವ ಕೃತಜ್ಞತೆಯ ರೂಪಕಗಳಾಗುತ್ತವೆ. ಬದುಕಿನ ಭಾಗವಾಗಿ ಜತೆಯಾಗಿ ಬಾಳುವ ಗೋವುಗಳ ಮೇಲಿನ ಪ್ರೀತಿ ಉತ್ತುಂಗಕ್ಕೇರುವ ಕಾಲ ಇದು. ಹಿತವಾದ ಸ್ನಾನ, ಬಣ್ಣ ಬಣ್ಣದ ಹೂವುಗಳ ಅಲಂಕಾರ, ರುಚಿಕರ ತಿನಿಸಿನ ಜತೆಗೆ ಬೆಳಗುವ ದೀಪಾರತಿಯಲ್ಲಿ ಒಲವಿನ ಧಾರೆಯೇ ಹರಿಯುತ್ತದೆ.

ಅಸತೋಮ ಸದ್ಗಮಯ, ತಮಸೋಮಾ ಜ್ಯೋತಿರ್ಗಮಯ,

ಮೃತ್ಯೋರ್ಮಾ ಅಮೃತಂಗಮಯ… ಓಂ ಶಾಂತಿ, ಶಾಂತಿ ಶಾಂತಿಃ

ಅಜ್ಞಾನವೆಂಬ ಕತ್ತಲನ್ನು ಕಳೆದು ಬದುಕಲ್ಲಿ ಸುಜ್ಞಾನವೆಂಬ ಜ್ಯೋತಿಯನ್ನು ಬೆಳಗಿಸುವ ಹಬ್ಬ ದೀಪಾವಳಿ. ಮಕ್ಕಳಿಗಂತೂ ದೀಪಾವಳಿ ಎಂದರೆ ಬಲು ಅಚ್ಚು ಮೆಚ್ಚು. ಪಟಾಕಿ ದೀಪಾವಳಿಯ ಪ್ರಧಾನ ಆಕರ್ಷಣೆ. ದೀಪ +ಅವಳಿ ಎಂದರೆ ಜೋಡಿ ದೀಪ ಅಥವಾ ದೀಪಗಳ ಸಾಲು ಎಂದರ್ಥ. ಸಾಲು ಸಾಲು ದೀಪ ಹಚ್ಚುವ ಈ ಹಬ್ಬಕ್ಕೆ ದೀಪಾವಳಿ ಎಂದೇ ಹೆಸರು ಬಂದಿದೆ.

ದೀಪಾವಳಿ – ಹೆಸರೇ ಹೇಳುವಂತೆ ದೀಪಗಳ ಸಮೂಹ. ಮನೆಯ ತುಂಬ ಪ್ರಣತಿಗಳನ್ನು ಹಚ್ಚಿ ಅದರ ನಗುವಿನಲ್ಲಿ ನಾವು ನಗುತ್ತಾ ಸಂಭ್ರಮಿಸುವುದು. “ದೀಪಯತಿ ಸ್ವಂ ಪರ ಚ ಇತಿ ದೀಪ:”– ತಾನು ಬೆಳಗಿ ಬೇರೆಯವರನ್ನು ಬೆಳಗಿಸುವ ಶಕ್ತಿ ದೀಪಕ್ಕಿದೆ. ತಮಸೋಮಾ ಜ್ಯೋತಿರ್ಗಮಯ” ಎಂಬ ಮಾತಿನ ಅರ್ಥದಂತೆ ಅಜ್ಞಾನದ ಕತ್ತಲೆಯಿಂದ ಜ್ಞಾನದ ದಿಕ್ಕಿಗೆ ನಮ್ಮನ್ನು ಕೊಂಡೊಯ್ಯುವುದೇ ದೀಪ. ಅಂತರಂಗದಲ್ಲಿರುವ ಕತ್ತಲೆಯನ್ನೋಡಿಸಿ, ಬೆಳಕಿನ ಪ್ರಣತಿಯ ಹಚ್ಚಿ ದೀಪ ಬೆಳಗಿಸುವ ಮೂಲಕ ಮನೆ ಮನ ಬೆಳಗುವ ದಿವ್ಯ ಜ್ಯೋತಿಯ ಹಬ್ಬ ದೀಪಾವಳಿ… ಎಲ್ಲೆಲ್ಲೂ ಜ್ಞಾನ, ನಿರ್ಮಲ ಆನಂದ, ಶುದ್ಧ ಮನಸ್ಸಿನ ಪ್ರೀತಿಯ ಬೆಳಗಿಸುವ ಸಂಕೇತವಾಗಿ ಆಚರಿಸಲ್ಪಡುವ ಹಬ್ಬ ದೀಪಾವಳಿ.

ಭಾರತೀಯರಿಗೆ ಭಾಗ್ಯ ತರುವ ಹಬ್ಬ ದೀಪಾವಳಿ. ದೀಪ ಪ್ರಕಾಶತೆ, ಜ್ಞಾನದ ಸಂಕೇತ. ಅಜ್ಞಾನವೆಂಬ ಕತ್ತಲನ್ನು ಹೊಡೆದೋಡಿಸಲು ಜ್ಞಾನವೆಂಬ ದೀಪ(ಪ್ರಕಾಶ) ಅವಶ್ಯಕ. ಆದ್ದರಿಂದಲೇ ‘ನಹಿ ಜ್ಞಾನೇನ ಸದೃಶಂ’(ಜ್ಞಾನಕ್ಕೆ ಸಮನಾದುದು ಯಾವುದೂ ಇಲ್ಲ) ‘ಜ್ಞಾನ ವಿನಃ ಪಶು:’(ಜ್ಞಾನವಿಲ್ಲದವನು ಪಶು) ಎನ್ನಲಾಗುತ್ತದೆ. ಅಜ್ಞಾನದ ಕತ್ತಲನ್ನು ದೂರ ಮಾಡಿ ಜ್ಞಾನದ ಬೆಳಕನ್ನು ಬೀರುವುದೇ ದೀಪಾವಳಿಯ ಸತ್ಯಾರ್ಥ. ಆದ್ದರಿಂದ ಪ್ರತಿ ಮನೆಯಲ್ಲೂ ಪ್ರತಿಯೊಬ್ಬನ ಮನ-ಮನದಲ್ಲೂ ಜ್ಞಾನವೆಂಬ ದೀಪವು ನಿರಂತರವಾಗಿ ಬೆಳೆಯುತ್ತಿರಲಿ ಎಂಬುದೇ ದೀಪಾವಳಿ ಹಬ್ಬದ ಮೂಲ ಸಂದೇಶವಾಗಿದೆ.

ದೀಪಾವಳಿಯ ಇತಿಹಾಸ
  1. ಯಮಧರ್ಮನೊಂದಿಗೆ ನಚಿಕೇತ ಸಂವಾದ, ಚರ್ಚೆ ಮಾಡಿದ್ದು ದೀಪಾವಳಿಯ ದಿವಸ: ಪುರಾತನ ಕಾಲದಿಂದಲೂ ಭಾರತೀಯರು ದೀಪಾವಳಿ ಹಬ್ಬವನ್ನು ಆಚರಿಸುತ್ತಾ ಬಂದಿರುತ್ತಾರೆ. ದೀಪಾವಳಿ ಹಬ್ಬದ ಮಹತ್ವವನ್ನು ಪದ್ಮ ಪುರಾಣ ಮತ್ತು ಸ್ಕಂದ ಪುರಾಣಗಳಲ್ಲಿ ಉಲ್ಲೇಖಿಸಿದ್ದಾರೆ. ನಚಿಕೇತ ಋಷಿಕುಮಾರನು ತನ್ನ ತಂದೆಗೆ ಸದ್ಗತಿ ಸಿಗಲಿ ಎಂಬ ಒಂದೇ ಕೋರಿಕೆಯೊಂದಿಗೆ ಯಮಧರ್ಮನನ್ನು ಭೇಟಿಯಾಗಲು ಯಮಲೋಕಕ್ಕೆ ತೆರಳುವನು.  “ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು, ಯಾವ ಕೆಲಸವನ್ನು ನಾವು ಮಾಡುವುದರಿಂದ ನಮಗೆ ಮುಕ್ತಿ ಸಿಗುತ್ತದೆ, ನಾವು ಸ್ವರ್ಗಕ್ಕೆ ಹೋಗುತ್ತೇವೆ, ಯಾವುದು ನಿಜವಾದ ಸಂಪತ್ತು ಮತ್ತು ಯಾವುದು ಕ್ಷಣಿಕ ಸಂಪತ್ತು, ನಾವು ಸತ್ತಮೇಲೆ ನಮ್ಮ ಭೌತಿಕ ಶರೀರಕ್ಕೆ ಏನು ಆಗುತ್ತದೆ ಮತ್ತು ನಮ್ಮ ಆತ್ಮವು ದೇಹವನ್ನು ಬಿಟ್ಟು ಎಲ್ಲಿಗೆ ಹೋಗುತ್ತದೆ. ನರಕದಲ್ಲಿ ಮತ್ತು ಸ್ವರ್ಗದಲ್ಲಿ ಅದಕ್ಕೆ ಆಗುವ ಅನುಭವಗಳು ಏನು” ಎಂಬಿತ್ಯಾದಿ ವಿಷಯಗಳನ್ನು ಯಮಧರ್ಮನೊಂದಿಗೆ ನಚಿಕೇತ ಸಂವಾದ, ಚರ್ಚೆ ಮಾಡಿದ್ದು ದೀಪಾವಳಿಯ ದಿವಸ.
  2. ಶ್ರೀ ರಾಮಚಂದ್ರನು ವನವಾಸ ಮುಗಿಸಿ, ಅಸುರ ಸೇನೆಯನ್ನು ಸೋಲಿಸಿ ಅಯೋಧ್ಯೆಗೆ ಪ್ರವೇಶಿಸಿದ್ದು ದೀಪಾವಳಿಯ ದಿವಸ: ಶ್ರೀರಾಮಚಂದ್ರನು, ಸೀತಾಮಾತಾ, ಲಕ್ಷ್ಮಣ, ಆಂಜನೇಯ ಮತ್ತು ಕಪಿ ಸೇನೆಯೊಂದಿಗೆ ರಾವಣಾಸುರನ ಅಸುರ ಸೈನಿಕರನ್ನು ಸೋಲಿಸಿ ವಿಜಯ ಪತಾಕೆಯ ಜೊತೆ ದೀಪಾವಳಿ ಹಬ್ಬದ ದಿವಸ ಅಯೋದ್ಯೆಯನ್ನು ಪ್ರವೇಶಿಸುತ್ತಾನೆ. ಶ್ರೀ ರಾಮಚಂದ್ರನು ವನವಾಸ ಮುಗಿಸಿ, ಅಸುರ ಸೇನೆಯನ್ನು ಸೋಲಿಸಿ ಅಯೋಧ್ಯೆಗೆ ಬರುವುದನ್ನು ಆಯೋಧ್ಯೆವಾಸಿಗಳು ತಮ್ಮ ಪಟ್ಟಣವನ್ನು ಸಿಂಗರಿಸಿ ಬರಮಾಡಿಕೊಳ್ಳುತ್ತಾರೆ. ಅಂದಿನಿಂದ ಇವತ್ತಿನವರೆಗೆ ದೀಪಾವಳಿಯನ್ನು ಭಾರತದಲ್ಲಿ ಆಚರಿಸುತ್ತಾರೆ ಎಂದು ಪ್ರತೀತಿ.
  3. ಶ್ರೀಲಕ್ಷ್ಮಿಯು ದೀಪಾವಳಿ ಹಬ್ಬದ ದಿವಸ, ಶ್ರೀವಿಷ್ಣುವನ್ನು ಮದುವೆಯಾಗುತ್ತಾಳೆ: ಸುರರು ಮತ್ತು ಅಸುರರು ಕ್ಷೀರ ಸಮುದ್ರವನ್ನು ಮಂದಾರ ಪರ್ವತ ಮತ್ತು ವಾಸುಕಿಯ ಸಹಾಯದಿಂದ ಸಮುದ್ರ ಮಂಥನ ಮಾಡಿದಾಗ, ಶ್ರೀಲಕ್ಷ್ಮಿಯು ಹುಟ್ಟುತ್ತಾಳೆ. ದೀಪಾವಳಿ ಹಬ್ಬದ ದಿವಸ, ಶ್ರೀವಿಷ್ಣುವನ್ನು ಮದುವೆಯಾಗುತ್ತಾಳೆ. ಆದ್ದರಿಂದ ಜಗತ್ತು ದೀಪಾವಳಿಯನ್ನು ಸಡಗರದಿಂದ ಆಚರಿಸುವುದು ಪ್ರತೀತಿ.
  4. ದುರ್ಗಾದೇವಿಯು  ಅಸುರರನ್ನು ಕೊಂದ ದಿವಸ ದೀಪಾವಳಿ: ದುರ್ಗಾದೇವಿಯು ತನ್ನ ಕಾಳಿಕ ಅವತಾರದಿಂದ ದುಷ್ಟ ಮತ್ತು ಲೋಕ ಕಂಠಕ ಅಸುರರನ್ನು ಕೊಂದ ದಿವಸ. ಆದ್ದರಿಂದ ದೀಪಾವಳಿಯನ್ನು ಒಳ್ಳೆಯ ಜನರು ಸಡಗರದಿಂದ ಆಚರಿಸುವರು ಎಂದು ಪ್ರತೀತಿ.
  5. ನರಕಾಸುರನನ್ನು ಶ್ರೀ ಕೃಷ್ಣ ಪರಮಾತ್ಮನು ಸಂಹರಿಸಿದ ದಿವಸ ದೀಪಾವಳಿ: ಶ್ರೀ ಕೃಷ್ಣ ಪರಮಾತ್ಮನು ನರಕಾಸುರನನ್ನು ಸಂಹರಿಸಿದ ದಿವಸ ದೀಪಾವಳಿ. ಅಂಧಕಾರವನ್ನು ಮೀರಿ ಪ್ರಕಾಶಮಯ ಜ್ಞಾನದ ವಿಜಯ ಸಂಕೇತ. ಆದ್ದರಿಂದ ಅಮಾವಾಸ್ಯೆಯ ಕತ್ತಲನ್ನು ಹಿಮ್ಮೆಟ್ಟಿಸಲು ದೀಪಗಳನ್ನು ಬೆಳಗಿಸುವ ಹಬ್ಬ ದೀಪಾವಳಿ.
  6. ಬಲಿಚಕ್ರವರ್ತಿಯನ್ನು ಪಾತಾಳ ಲೋಕಕ್ಕೆ ಕಳುಹಿಸಿದ ದಿವಸ ದೀಪಾವಳಿ: ಶ್ರೀ ವಿಷ್ಣುವು ತನ್ನ ಐದನೆಯ ಅವತಾರವಾದ ವಾಮನ ಅವತಾರದಿಂದ ಬಲಿಚಕ್ರವರ್ತಿಯನ್ನು ಪಾತಾಳ ಲೋಕಕ್ಕೆ ಕಳುಹಿಸುವ ದಿವಸ ದೀಪಾವಳಿಯ ಪಾಡ್ಯದ ದಿವಸ.
  7. ಭಗವಾನ್ ಮಹಾವೀರರಿಗೆ ಜ್ಞಾನೋದಯವಾದ ದಿವಸ ದೀಪಾವಳಿ: ಜೈನ ಸಮುದಾಯದ ತೀರ್ಥಂಕರ ಭಗವಾನ್ ಮಹಾವೀರರಿಗೆ ದೀಪಾವಳಿ ಹಬ್ಬದ ದಿವಸ  ಜ್ಞಾನೋದಯವಾಯಿತು.
  8. ಸಿಖ್  ಗುರು ಹರಗೋವಿಂದಜೀಯವರಿಗೆ ಮುಕ್ತಿ ದೊರೆತ ದಿವಸ ದೀಪಾವಳಿ: ದೀಪಾವಳಿಯ ದಿವಸ ಸಿಖ್ ಸಮುದಾಯದ ಗುರು ಹರಗೋವಿಂದಜೀಯವರಿಗೆ ಮುಕ್ತಿ ದೊರೆಯಿತು. ವ್ಯಾಪಾರ ಮಾಡುವ ಜನರು ದೀಪಾವಳಿಯ ದಿವಸವನ್ನು ಹೊಸ ವರ್ಷವೆಂದು ಹಳೆಯ ಎಲ್ಲ ಲೆಕ್ಕವನ್ನು ಚುಕ್ತಾಮಾಡಿ ಹೊಸವರ್ಷಕ್ಕೆ ಹೊಸ ಲೆಕ್ಕ ಪುಸ್ತಕಗಳನ್ನು ಪ್ರಾರಂಭಿಸುತ್ತಾರೆ. ಲೆಕ್ಕಗಳ ದೇವತೆ ಕುಬೇರ, ಜ್ಞಾನದ ದೇವತೆ ಗಣೇಶ, ವಿದ್ಯಾದೇವತೆ ಸರಸ್ವತಿ ಮತ್ತು ಐಶ್ವರ್ಯ ದೇವತೆ ಲಕ್ಷ್ಮಿಯ ಪೂಜೆ ಮಾಡಿ ದೀಪಾಲಂಕಾರವನ್ನು ಮಾಡಿ ಸಂಭ್ರಮಿಸುತ್ತಾರೆ.
ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.

About ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.

Comments are closed.