ಈ ಪ್ರಚಂಡ ಮೇಧಾವಿ, ವಿದ್ಯಾಬುದ್ಧಿವರದ, ಸರ್ವವಿಘ್ನನಿವಾರಕ, ಗಜಾನನ ಶಿವಪಾರ್ವತಿಯರ ಪ್ರಿಯಪುತ್ರ, ಪ್ರಮಥಗಣಗಳ ಒಡೆಯ, ಪ್ರಥಮ ಪೂಜಿತ, ತಾಯಿ ಗೌರೀ ದೇವಿಯನ್ನು ಹಿಂಬಾಲಿಸಿ ಬರುವ ಈ ಪೋರನಿಗೇ-ಅವಳನ್ನು ಪೂಜಿಸುವವರು ಅವಳ ಪೂಜೆಗೆ ವಿಘ್ನ ಬರದಿರಲೆಂದು ಮೊದಲು ಪೂಜೆ ಸಲ್ಲಿಸಬೇಕು. ಅಷ್ಟೇಕೆ? ತ್ರಿಪುರಾಸುರ ಸಂಹಾರ ಕಾಲದಲ್ಲಿ ಶಿವ ಮೇರುಪರ್ವತವನ್ನೇ ಬಿಲ್ಲು ಮಾಡಿಕೊಂಡು, ವಾಸುಕಿಯನ್ನೇ ಸಿಂಜಿನಿಯಾಗಿಸಿಕೊಂಡು, ಬ್ರಹ್ಮ ವಿಷ್ಣುಗಳನ್ನು ಬಾಣವಾಗಿಸಿಕೊಂಡು ಲಯಕರ್ತ ಶಿವ ಪ್ರಯೊಗಮಾಡಿದರೂ ಬಾಣ ಎದೆಯಿಂದ ಚಿಮ್ಮಲ್ಲೇ ಇಲ್ಲ. ಆಗ ಶಿವನಿಗೆ ಅರಿವಾಯಿತು! ಅಡ್ಡಿ ನಿವಾರಿಸುವಂತೆ ವಿಘ್ನ ಹರನನ್ನು ಪ್ರಾರ್ಥಿಸಿಕೊಳ್ಳಬೇಕಾಯಿತು! ಇಂತಹ ಪ್ರಚಂಡ ಶಕ್ತಿ ಸ್ವಾತಂತ್ರ್ಯ ಚಳುವಳಿಯನ್ನು ಬಿರುಸುಗೊಳಿಸಿತು ಎಂದರೆ ನಂಬದಿರಲಾದೀತೆ? ಅವನ ಪೂಜೆ, ಕಡುಬು ನಿವೇದನದ ಹಬ್ಬ ಮಾತ್ರವಲ್ಲ, ಸಾಹಿತ್ಯ, ಸಂಗೀತ, ನೃತ್ಯ, ನಾಟಕ, ಚಿತ್ರ, ಗಮಕ, ಶಿಲ್ಪ ಅಲಂಕಾರ ಇತ್ಯಾದಿ ಸಕಲಕಲೆಗಳನ್ನೂ ಈ ವಿದ್ವತ್ ಪ್ರಿಯನಿಗೆ ಅರ್ಪಿಸುವ ಸಾಂಸ್ಕøತಿಕ ವಿಕಾಸಾಂದೋಲನವೂ ಆಯಿತು.
ಅಂತಹ ಗಣಪ, ಸ್ವಾತಂತ್ರ್ಯ ಸುವರ್ಣಮಹೋತ್ಸವದ ಸಂದರ್ಭದಲ್ಲಿ ಮನೆ ಮನೆಗೂ ಬರುತ್ತಿದ್ದಾನೆ. “ಸ್ವಾತಂತ್ರ್ಯ ಅಡ್ಡದಾರಿ ಹಿಡಿಯುತ್ತಿದೆ. ಎಚ್ಚರ! ನನ್ನ ಮೂಲಕ ಶಕ್ತಿ ಆರಾಧನೆ, ಧರ್ಮಪಾಲನೆ, ಸಂಸ್ಕøತಿ ರಕ್ಷಣೆ ಮಾಡಿ!! ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಿ” ಎಂದು ಎಚ್ಚರಿಸುತ್ತಾನೆ. ಆ ಮಹಾಬಲನಿಗೆ ಇಪ್ಪತ್ತೊಂದು ನಮಸ್ಕಾರಗಳು”.