History of Karaga Madikeri Dasara ಕರಗ ಶಕ್ತಿ ದೇವತೆಗಳ ಹಿತಿಹಾಸ

ಕರಗ ಶಕ್ತಿ ದೇವತೆಗಳ ಹಿತಿಹಾಸ

ಕರಗ ಎಂದರೇನು? ಇದರಲ್ಲಿ ಏನಿದೆ? ಹೆಚ್ಚಿನ ಜನತೆಗೆ ಇದರ ಮಾಹಿತಿ ಇರಲಿಕ್ಕಿಲ್ಲ, ಒಂದು ತಾಮ್ರ ಬಿಂದಿಗೆಯಲ್ಲಿ ಮರಳನ್ನು ತುಂಬಿಸಲಾಗುತ್ತದೆ. ಜೊತೆಗೆ ದೇವಿಗೆ ಅಗತ್ಯವಾಗಿ ಬೇಕಾದ ಕಪ್ಪು ಬಳೆ, ಕರಿಮಣಿ, ಅರಶಿಣ-ಕುಂಕುಮ, ಎಲೆ ಅಡಿಕೆ, ಕಾಡೋಲೆ ಮತ್ತು ಒಂದಿಕಾಲು ರೂಪಾಯಿಯ ಕಾಣಿಕೆ ಸಹ ಇರುತ್ತದೆ. ಅದರ ಮೇಲೆ ತೆಂಗಿನಕಾಯಿ, ವೀಳ್ಯದೆಲೆ, ಮಾವಿನೆಲೆಗಳಿಂದ ಕೂಡಿದ ಕಳಸ, ಮೇಲ್ಭಾಗದಲ್ಲಿ ದೇವಿಯ ಮುಖವಾಡ-ಪ್ರಭಾವಳಿ, ಇದ್ದರೆ ತುದಿಯಲ್ಲಿ ಪುಟ್ಟ ಬೆಳ್ಳಿಯ ಕೊಡೆ ಇರುತ್ತದೆ. ಕರಗವನ್ನು ಮಲ್ಲಿಗೆ, ಸೆವಂತಿಗೆ ಕನಕಾಂಬರ ಮತ್ತು ಗುಲಾಬಿ ಹೂಗಳಿಂದ ಅಲಂಕರಿಸಲಾಗುತ್ತದೆ. ಅರ್ಚಕರ ಕೈಯಲ್ಲಿ ಬೆತ್ತ ಮತ್ತು ಕಠಾರಿ ಇರುತ್ತದೆ. ಬೆತ್ತದಲ್ಲಿ ವಿಶಿಷ್ಟ ಶಕ್ತಿ ಯಿದ್ದು, ಇದರ ಸ್ಪರ್ಶದಿಂದ ಸಂಕಷ್ಟಗಳು ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ.
ಕೊಡಗನ್ನು ಆಳಿದ ರಾಜರಿಂದ ಪ್ರತಿಷ್ಠಾಪಿಸಲ್ಪಟ್ಟ ನಗರದ ನಾಲ್ಕು ಶಕ್ತಿ ದೇವತೆಗಳು ಹಾಗೂ ಆ ನಾಲ್ಕು ಶಕ್ತಿ ದೇವತೆಗಳ ಕರಗಗಳು ನೂರಾರು ವರ್ಷಗಳಿಂದ ನಗರದ ಜನತೆಯ ಎಲ್ಲಾ ಸಂಕಷ್ಟಗಳನ್ನು ನಿವಾರಿಸುವುದರ ಮೂಲಕ ನಾಡಿನ ನೆಚ್ಚಿನ ಆರಾಧ್ಯ ದೈವರಾಗಿ ಮೆರೆಯುತ್ತಿದ್ದಾರೆ. ಈ ಶಕ್ತಿ ದೇವತೆಗಳಿರುವುದರಿಂದ ನಾಡಿಗೆ ಯಾವ ಆಪತ್ತುಗಳಾಗಲಿ ಮಾರಕ ಸಾಂಕ್ರಾಮಿಕ ರೋಗಗಳಾಗಲಿ ಬರುವುದಿಲ್ಲವೆಂದು ಭಕ್ತರ ಬಲವಾದ ನಂಬಿಕೆ.

ಕರಗ: ಕರಗ ಎಂದರೇನು? ಇದರಲ್ಲಿ ಏನಿದೆ?

ಕರಗ ಮತ್ತು ಶಕ್ತಿ ದೇವತೆಗಳ ಸ್ಪಷ್ಟಮಾಹಿತಿಗಳು ಇಲ್ಲದಿದ್ದರೂ, ಲಭ್ಯವಿರುವ ಮಾಹಿತಿಯ ಪ್ರಕಾರ ಕೊಡಗನ್ನು ಆಳುತ್ತಿದ್ದಂತಹ ರಾಜ ಮನೆತನದವರು ತಮ್ಮ ಆಡಳಿತವುಸುಸೂತ್ರವಾಗಿ ನಡೆಯಲು ತಮಿಳುನಾಡಿನ ಮಧುರೈಯಿಂದ ಶಕ್ತಿ ದೇವತೆಗಳನ್ನೂ, ಕರೆತಂದು ನಗರದಲ್ಲಿ ಪ್ರತಿಷ್ಠಾಪಿಸಿದರು. ಅದರ ಪೂಜೆಗಾಗಿ ಯಾದವ ಜನಾಂಗದ ಅರ್ಚಕರನ್ನು ಕರೆಸಿಕೊಂಡರು ಈ ಜನಾಂಗದವರೆ ಇಂದಿಗೂ ನಾಲ್ಕು ಶಕ್ತಿ ದೇವತೆಗಳ ಪೂಜೆಗಳನ್ನು ವಂಶಪಾರಂಪರ್ಯವಾಗಿ ನೆರವೇರಿಸುತ್ತಿದ್ದಾರೆ. ಪಾರ್ವತಿ ದೇವಿಯ ಅಂಶವೆನ್ನಲಾಗುವ ನಾಲ್ಕು ಶಕ್ತಿ ದೇವತೆಗಳ ಹಿರಿಯಕ್ಕನಾಗಿ ಪ್ರಜೆಗಳ ಮತ್ತು ನಗರದ ರಕ್ಷಣೆ ಮಾಡುವ ಕುಂದುರುಮೊಟ್ಟೆ ಶ್ರೀ ಚೌಟಿಮಾರಿಯಮ್ಮ, ಸೋದರಿಯಾದ ದಂಡಿನ ಮಾರಿಯಮ್ಮ ಸೈನಿಕರ ರಕ್ಷಣೆಗೆಂದು, ಕೋಟೆ ಮಾರಿಯಮ್ಮ ಕೋಟೆಯ ರಕ್ಷಣೆ ಹಾಗೂ ಕಂಚಿಕಾಮಾಕ್ಷಿಯಮ್ಮ ಐಶ್ವರ್ಯ ಮತ್ತು ಆರೋಗ್ಯ ನೀಡುತ್ತಾರೆ ಎಂಬ ಪ್ರತೀತಿ ಇದೆ.
ನೂರಾರು ವರ್ಷಗಳ ಹಿಂದೆ ನಗರದಲ್ಲಿ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಂಡ ಹಿನ್ನಲೆಯಲ್ಲಿ ಶಕ್ತಿ ದೇವತೆಗಳ ಕರಗಗಳನ್ನು ಲಂಕರಿಸಿ ಜಗರ ಪ್ರದರ್ಶಣೆ ಮಾಡಿಸಿದರು. ಪವಾಡವೆಂಬಂತೆ ಸಾಂಕ್ರಾಮಿಕ ರೋಗಗಳಿಂದ ನಗರ ಮುಕ್ತವಾಯಿತು. ಈ ಸಂಪ್ರದಾಯವನ್ನು ನೂರಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ಮಹಾಯುದ್ಧಗಳ ಸಮಯದಲ್ಲಿಯೂ ಮಡಿಕೇರಿ ದಸರಾ ಕರಗ ಹೊರಡಿಸುವುದನ್ನು ಮಾತ್ರ ನಿಲ್ಲಿಸಲಿಲ್ಲ. ಮಹಾಲಯ ಅಮವಾಸೆಯ ಮರುದಿನ ಸಾಂಪ್ರದಾಯಿಕ ಕರಗ ಪೂಜೆಯೊಂದಿಗೆ ಮಡಿಕೇರಿ ದಸರಾಕ್ಕೆ ವಿದ್ಯುಕ್ತ ಚಾಲನೆ ದೊರೆಯುತ್ತದೆ. ಅಂದು ನಾಲ್ಕು ಕರಗಗಳು ಪೇಟೆ ಶ್ರೀ ರಾಮ ಮಂದಿರ ದೇಗುಲಕ್ಕೆ ಬಂದು ಪೂಜೆ ಸಲ್ಲಿಸುತ್ತದೆ. ಇದಕ್ಕೂ ಒಂದು ಪೌರಾಣಿಕ ಹಿನ್ನಲೆ ಇದೆ. ಶಕ್ತಿ ಮಾತೆ ಎಂದರೆ (ಪಾರ್ವತಿ) ದುಷ್ಟ ಸಂಹಾರಕ್ಕೆ ಹೊರಡುವ ಮೊದಲು ದೇವಾನುದೇವತೆಗಳಿಂದ ವಿವಿಧ ಆಯುಧಗಳನ್ನು ಪಡೆದುಕೊಳ್ಳುತ್ತಾಳೆ. ಆ ಸಮಯದಲ್ಲಿ ದೇವಿ ಮೊದಲು ಹೋಗುವುದು ತನ್ನ ಅಣ್ಣನಾದ ವಿಷ್ಣುವಿನಲ್ಲಿಗೆ, ಈ ಹಿನ್ನಲೆಯಲ್ಲಿ ದೇವತೆಗಳು ನವರಾತ್ರಿ ಸಂದರ್ಭ ಕರಗಗಳು ಐದು ದಿನಗಳ ಕಾಲ ನಗರ ಸಂಚಾರ ಮಾಡುತ್ತವೆ. ಕೊನೆಗೆ ವಿಜಯದಶಮಿಯಂದು ದಶಮಂಟಪಗಳ ಜೊತೆಗೂಡಿ ಬನ್ನಿ ಮಂಟಪಕ್ಕೆ ತೆರಳಿ ಬನ್ನಿ ಕಡೆಯುವ ಮೂಲಕ ದಸರಾ ಉತ್ಸವಕ್ಕೆ ಮಂಗಳ ಹಾಡಲಾಗುವುದು. ಕರಗಗಳು ಮತ್ತು ವಿಜಯದಶಮಿ ಮಡಿಕೇರಿ ದಸರಾ ವಿಶ್ವವಿಖ್ಯಾತಿಯಾಗಿರುವುದೇನೋ ನಿಜ ಆದರೆ ಈ ಉತ್ಸವದಲ್ಲಿ ಪ್ರಮುಖ ಸ್ಥಾನ ಹೊಂದಿರುವ ಕರಗಗಳ ಬಗ್ಗೆ ಬಹಳಷ್ಟು ಮಂದಿಗೆ ಸರಿಯಾದ ಮಾಹಿತಿ ಇಲ್ಲ. ಹಾಗಾಗಿ ಇಲ್ಲಿ ಕರಗಗಳ ಕುರಿತು ಮಾಹಿತಿಯನ್ನು ನೀಡಲಾಗಿದೆ.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಕರಗವನ್ನು ಹೊರುವಂತಹ ಅರ್ಚಕರ ವ್ರತ ಮತ್ತು ನಿಯಮಗಳು:

ಮಹಾಲಯ ಅಮಾವಾಸ್ಯೆಯ ಮರುದಿನ ಶರನ್ನವರಾತ್ರಿಯ ಪಾಡ್ಯದಿಂದ ಕರಗಗಳು ಹೊರಡುವುದು ಆದರೆ ಕರಗವನ್ನು ಹೊರುವಂತಹ ಅರ್ಚಕರು ಹದಿನೈದು ದಿನಗಳ ಮೊದಲೇ ಮದ್ಯ ಮಾಂಸಗಳನ್ನು ತ್ಯಜಿಸಿ ಪರಿಶುದ್ದರಾಗಿ ವ್ರತಾಚರಿಸಬೇಕು. ನವರಾತ್ರಿಯ ಮೊದಲ ದಿನ ಇವರಿಗೆ ಕಂಕಣ ಕಟ್ಟಲಾಗುವುದು, ನವರಾತ್ರಿ ದಿನಗಳಲ್ಲಿ ಇವರಿಗೆ ಪ್ರತ್ಯೇಕ ಆಹಾರ ಮತ್ತು ವಾಸ್ತವ್ಯವವನ್ನು ಏರ್ಪಡಿಸಲಾಗುವುದು. ಕರಗವನ್ನು ಹೊರುವ ದಿನ ಬೆಳ್ಳಿಗಿನ ಉಪಹಾರವಾಗಿ ಮೊಸರನ್ನವನ್ನು ಮಾತ್ರ ಸ್ವೀಕರಿಸುತ್ತಾರೆ. ನವರಾತ್ರಿ ದಿನಗಳಲ್ಲಿ ನಾಲ್ಕು ಶಕ್ತಿ ದೇವತೆಗಳಿಗೆ ಮೊಸರನ್ನ (ಸಿಹಿಅನ್ನ ಅಥವಾ ತಳಿಗೆ) ನೈವೇಧ್ಯವಾಗಿ ಅರ್ಪಿಸುತ್ತಾರೆ.

ಕರಗಗಳ ಮೊದಲ ದಿನದ ಪೂಜೆ:

ಶರವನ್ನವರಾತ್ರಿಯ ಪಾಡ್ಯದಂದು ಅರ್ಚಕರ ಮನೆಯಲ್ಲಿ ಮತ್ತು ದೇವಾಲಯಗಳಲ್ಲಿ ಹೋಮ ನಡೆಸಲಾಗುವುದು. ನಂತರ ಸಂಜೆ ನಾಲ್ಕು ದೇವಾಲಯದವರು ಕುಕ್ಕೆಯಲ್ಲಿ ಮಡಿಕೆ, ದೇವರ ಪ್ರಭಾವಳಿ, ಹೂವು, ಪೂಜಾ ಸಾಮಾಗ್ರಿಗಳು, ಬಿಂದಿಗೆ, ಕಠಾರಿ, ಬೆತ್ತ, ಇನ್ನಿತರ ದೇವರ ಅಲಂಕಾರಿಕ ವಸ್ತುಗಳನ್ನು ಹೊತ್ತು ನಗರದ ಪಂಪಿನ ಕೆರೆಗೆ ಬರುತ್ತಾರೆ ಇದಕ್ಕೆ ದೇವರು ಜಳಕಕ್ಕೆ ಹೋಗುವುದು ಎನ್ನುತಾರೆ.
ಅಲ್ಲಿ ನಾಲ್ಕು ಶಕ್ತಿದೇವತೆಗಳ ಅರ್ಚಕರುಗಳು ಸ್ನಾನ ಮಾಡಿ, ಶುಭ್ರವಸ್ತ್ರಗಳನ್ನು ಧರಿಸಿ, ದೇವತೆಗಳಿಗೆ ಪೂಜೆ ಸಲ್ಲಿಸಲಾಗುವುದು. ನಂತರ ಸಂಕಲ್ಪವನ್ನು ಕೈಗೊಂಡು ಕಂಕಣ ಕಟ್ಟಿ, ಬಿಂದಿಗೆ, ಕಠಾರಿ, ಬೆತ್ತ, ಭಂಡಾರ ಮುಂತಾದವುಗಳಿಗೂ ಕಂಕಣ ಕಟ್ಟಲಾಗುವುದು. ಅಲ್ಲಿಂದ ಅರ್ಚಕರು ಕರಗವನ್ನು ಶ್ರದ್ಧಾ ಭಕ್ತಿಯಿಂದ ಹೊತ್ತುಕೊಂಡು ಮಹಾದೇವಪೇಟೆಯ ಮೂಲಕ ಬಂದು ಶ್ರೀ ಚೌಡೇಶ್ವರಿ ದೇಗುಲದಲ್ಲಿ ಪೂಜೆ ಸ್ವೀಕರಿಸುತ್ತಾರೆ. ಅಂದು ನಗರದ ನಿವಾಸಿಗಳು ತಳಿರು ತೋರಣಗಳಿಂದ ತಮ್ಮ ಮನೆಗಳನ್ನೂ, ಮುಖ್ಯ ಬೀದಿಗಳನ್ನೂ ಅಲಂಕರಿಸುತ್ತಾರೆ. ದಾರಿಯುದ್ದಕ್ಕೂ ಕರಗ ದೇವತೆಗಳಿಗೆ, ಪೂಜೆಯನ್ನು ನೀಡುತ್ತಾರೆ. ಹಾಗೇ ಬರುವ ಕರಗವು ಪೇಟೆ ಶ್ರೀರಾಮ ಮಂದಿರಕ್ಕೆ ಆಗಮಿಸಿ ಪೂಜೆ ಸ್ವೀಕರಿಸದ ನಂತರ ಆಯಾ ದೇಗುಲಗಳಿಗೆ ಹಿಂತಿರುಗುತ್ತಾರೆ.

ಕರಗಗಳ ನಗರ ಸಂಚಾರ:

ಶರನ್ನವರಾತ್ರಿ ಬಿದಿಗೆಯಿಂದ ಆರಂಭಿಸಿ ಕರಗಗಳು 4-5 ದಿನಗಳ ಕಾಲ ನಗರ ಸಂಚಾರ ಮಡುತ್ತದೆ. ದೇವರಿಗೆ ಅರ್ಪಿಸಿದ ನೈವೇದ್ಯವನ್ನು ಸ್ವೀಕರಿಸಿ ಪ್ರತಿದಿನ ಮಧ್ಯಾಹ್ನ 12ಗಂಟೆ ನಂತರ ಕರಗಗಳನ್ನು ಹೊರಡಿಸಲಾಗುವುದು. ಮೊದಲು ಮೂರು ಕರಗಗಳು ಕುಂದುರುಮೊಟ್ಟೆ ದೇಗುಲಕ್ಕೆ ಆಗಮಿಸಿ ಪೂಜೆ ಸಲ್ಲಿಸಿ ನಂತರ ನಗರ ಸಂಚಾರಕ್ಕೆ ಹೊರಡುತ್ತಾರೆ. ಭಕ್ತರು ಕರಗಗಳನ್ನು ಭಕ್ತಿ-ಭಾವದಿಂದ ಸ್ವಾಗತಿಸಿ, ಪೂಜೆ ನೀಡಿ ಆಶೀರ್ವಾದ ಪಡೆಯುತ್ತಾರೆ. ನಗರ ಸಂಚಾರವಿಲ್ಲದ ದಿನಗಳಲ್ಲಿ ಕರಗಗಳಿಗೆ ದೇಗುಲಗಳಲ್ಲಿಯೇ ಪೂಜೆ ಸಲ್ಲಿಸಲಾಗುತ್ತದೆ.

ವಿಜಯದಶಮಿ ದಿನ ಕರಗೋತ್ಸವ ಹಾಗೂ ಮಡಿಕೇರಿ ದಸರಾ ಜನೋತ್ಸವ:

ವಿಜಯದಶಮಿಯಂದು ಕರಗಗಳಿಗೆ ವಿಶೇಷ ಅಲಂಕಾರ ಮಾಡಲಾಗುತ್ತದೆ. ರಾತ್ರಿ ದಸರೆಯ ರಂಗೇರುತ್ತಿದ್ದಂತೆ ವಿವಿಧ ದೇವಾಲಯಗಳ ವೈವಿಧ್ಯಮಯ ಮಂಟಪಗಳನ್ನು ನಿರ್ಮಾಣ ಮಾಡಿ ವಿದ್ಯುತ್ ದೀಪಾಲಂಕಾರ ಮಾಡಿದ ನಂತರ ಪೂಜಾ ವಿದಿ ವಿಧಾನಗಳನ್ನು ಮುಗಿಸಿ ಜನಸಾಗರದೊಂದಿಗೆ ದಶ ಮಂಟಪಗಳು ಮಡಿಕೇರಿಯ ಮುಖ್ಯ ಬೀದಿಗಳಲ್ಲಿ ರಾತ್ರಿಯಿಂದಲೇ ಮೆರವಣಿಗೆ ಪ್ರಾರಂಭವಾಗುತ್ತದೆ. ಪೇಟೆ ರಾಮಮಂದಿರ ಮಂಟಪ ಮೊದಲು ಹೊರಟು ನೇರವಾಗಿ ಕುಂರುರುಮೊಟ್ಟೆ ದೇಗುಲಕ್ಕೆ ಬರುತ್ತದೆ. ಅಲ್ಲಿ ಪೂಜೆ ಸಲ್ಲಿಸಲಾಗುತ್ತದೆ. ಪೇಟೆ ಶ್ರೀರಾಮಮಂದಿರದ ಮಂಟಪ ಬಂದು ಕರಗ ಹೊರುವ ಅರ್ಚಕರಿಗೆ ಹೂವಿನ ಹಾರ ಹಾಕಿದ ನಂತರವೇ ಎಲ್ಲಾ ಕರಗಗಳು ಹೊರಡುವುದು. ನಂತರ ಕುಂದುರುಮೊಟ್ಟೆ ಶ್ರೀ ಚೌಟಿಮಾರಿಯಮ್ಮ ಕರಗ ಹೊರಟು ದಂಡಿನ ಮಾರಿಯಮ್ಮ ದೇಗುಲಕ್ಕೆ ಬರುತ್ತದೆ. ಆ ವೇಳೆಗೆ ಅಲ್ಲಿಗೆ ಕಂಚಿಕಾಮಾಕ್ಷಿಯಮ್ಮ ಮತ್ತು ಕೋಟೆಮಾರಿಯಮ್ಮ ಕರಗಗಳು ಸಹ ಬಂದು ಸೇರುತ್ತದೆ. ದಂಡಿನಮಾರಿಯಮ್ಮ ಯುದ್ಧದ ದೇವತೆಯಾಗಿರುವುದರಿಂದ ಸೋದರಿಯರು ಮೊದಲು ಅಲ್ಲಿಗೆ ಆಗಮಿಸುವುದು. ಅಲ್ಲಿ ಪೂಜಾ ವಿಧಾನಗಳ ನಂತರ 4ಕ್ಕೂ ಕರಗಗಳು ಹೊರಟು ದಶಮಂಟಪಗಳಿಗೆ ಪೂಜೆ ಸಲ್ಲಿಸಿ ಮುಖ್ಯ ಬೀದಿಯಲ್ಲಿ ಸಾಗಿ ಬನ್ನಿ ಮಂಟಪಕ್ಕೆÉ ಬಂದು ಸೇರುತ್ತಾರೆ. ಅಷ್ಟರಾಗಲೇ ಮುಂಜಾನೆಯಾಗುತ್ತದೆ. ನಂತರ ಸೂರ್ಯೋದಯಕ್ಕೂ ಮುನ್ನವೇ 4 ಕರಗಗಳು ‘ಬನ್ನಿ’ ಕಡಿಯುವುದು ಅಂದರೆ ರಾಕ್ಷಸರನ್ನು ಕೊಲ್ಲುವ ದ್ಯೋತ್ಯಕವಾಗಿ (ಬಾಳೆಗಿಡ ನೆಟ್ಟು ಅದನ್ನು ಚೂರು ಚೂರಾಗುವಂತೆ ಕತ್ತರಿಸುವುದು) ಮೂಲಕ ದಸರಾ ಉತ್ಸವಕ್ಕೆ ಸಾಂಪ್ರದಾಯಕ ಮಂಗಳವನ್ನು ಹಾಡಲಾಗುತ್ತದೆ.
ವಿಜಯ ದಶಮಿಯ ದಿನ ರಾತ್ರಿಯಿಂದ ಬೆಳಗಿನವರೆಗೆ ರಸಮಂಜರಿ, ನೃತ್ಯ, ಸಂಗೀತ ಕಾರ್ಯಕ್ರಮಗಳು ನಡೆದು ಬೆಳಗಿನ ಜಾವದಲ್ಲಿ ದಸರಾ ಮಂಟಪಗಳಿಗೆ ಮೂರು ಬಹುಮಾನಗಳನ್ನು ನೀಡುತ್ತಾರೆ. ಬಹುಮಾನ ಪಡೆಯಲು ಮಂಟಪಗಳ ಪೂರ್ವ ತಯಾರಿ ಯೋಜನೆಗಳು ಹಲವಾರು ತಿಂಗಳಿನಿಂದ ನಡೆಯುತ್ತದೆ. ದಶ ಮಂಟಪಗಳು ಜನಸಾಗರದೊಂದಿಗೆ ತಮ್ಮ ತಮ್ಮ ಕಲಾ ಕೌಶಲ್ಯಗಳನ್ನು ಪ್ರದರ್ಶಿಸುತ್ತಾ ನಗರ ಬೀದಿಗಳಲ್ಲಿ ಸಾಗಿ ಎಲ್ಲಾ ಮನೆಗಳಿಂದ ಪೂಜೆಯನ್ನು ಸ್ವೀಕರಿಸಿ ಬೆಳಗಿನ ನಂತರ ರಾಜರ ಗದ್ದುಗೆಯ ಬಳಿ ಇರುವ ಬನ್ನಿ ಮಂಟಪದಲ್ಲಿ ಬನ್ನಿ ಕಡಿದು ಪೂಜೆ ಸಲ್ಲಿಸಿ ತಮ್ಮ ತಮ್ಮ ದೇವಾಲಯಗಳಿಗೆ ಹಿಂದಿರುಗುತ್ತದೆ. ಜಾತಿ ಮತ ಭೇದ ವಿಲ್ಲದೆ ದಸರಾ ನಾಡ ಹಬ್ಬವು ಶಾಂತಿಪ್ರಿಯ ಮಡಿಕೇರಿಯಲ್ಲಿ ಶತಮಾನದಿಂದ ಮತಿಯ ಸೌಹಾರ್ದತೆಯನ್ನು ಎತ್ತಿ ಹಿಡಿದು ವೈಭಯುತವಾಗಿ ನಡೆದುಕೊಂಡು ಬರುತ್ತಿದೆ.

ಕರಗಗಳ ಕುಂಭ ಪೂಜೆ:

ವಿಜಯದಶಮಿ ಕಳೆದು 3 ದಿನಗಳ ನಂತರ ಕುಂಭ ಪೂಜೆಯನ್ನು ನಡೆಸಲಾಗುವುದು. ಇದು ಕರಗ ವಿಸರ್ಜಿಸುವ ದಿನ, ಅಂದರೆ ಕರಗ ಪೂಜೆಯ ಕೊನೆಯ ಹಂತ ಅಂದು ಅರ್ಚಕರು ಕರಗ, ಕಠಾರಿ, ಬೆತ್ತಗಳಿಗೆ ಕಟ್ಟಿರುವ ಕಂಕಣವನ್ನು ಬಿಚ್ಚಲಾಗುತ್ತದೆ. ಮೊದಲು ಆಯಾ ದೇಗುಲಗಳಿಗೆ ಮೊಸರನ್ನ ಮತ್ತು ಎಳೆನೀರಿನ ಅಭಿಷೇಕವನ್ನು ಅರ್ಪಿಸಲಾಗುತ್ತದೆ. ಇದಾದ ಕೂಡಲೇ ದೇಗುಲದ ಬಾಗಿಲನ್ನು ಮುಚ್ಚುತ್ತಾರೆ. ನಂತರ ಹೊರಭಾಗದಲ್ಲಿ ಮಾಂಸಹಾರದ ಭೊಜನವನ್ನು (ಎಡೆಯನ್ನು) ಬಡಿಸಲಾಗುವುದು. ಕುಸಲಕ್ಕಿಯ ಅನ್ನ ಮತ್ತು ಒಣಗಿದ ಮೀನುಮತ್ತು ಬದನೆಕಾಯಿಯ ವಿಶಿಷ್ಟಸಾರು ಕೂಡ ಸೇರಿರುತ್ತದೆ. ಆದರೆ ಕಂಚಿಕಾಮಾಕ್ಷಿಯಮ್ಮ ದೇಗುಲಕ್ಕೆ ನೈವೇದ್ಯವನ್ನು ಮಾತ್ರ ಅರ್ಪಿಸುತ್ತಾರೆ. ಏಕೆಂದರೆ ಕಂಚಿಕಾಮಾಕ್ಷಿಯಮ್ಮ ದೇವಿಯು ಶಾಂತ ಸ್ವರೂಪಿಣಿಯಾಗಿದ್ದು, ಇಲ್ಲಿ ಪ್ರಾಣಿ ಬಲಿಗೆ ಅವಕಾಶವಿಲ್ಲ. ಈ ರೀತಿಯಲ್ಲಿ ಕರಗ ಉತ್ಸವಕ್ಕೆ ತೆರೆ ಎಳೆಯಲಾಗುತ್ತದೆ.

*ಹಕ್ಕುಗಳನ್ನು ಕಾಯ್ದಿರಿಸಲಾಗಿದೆ*

ಇಲ್ಲಿ ಪ್ರಕಟಣೆಗೊಂಡಿರುವ ಮಾಹಿತಿಗಳ ಹಕ್ಕುಗಳನ್ನು, ‘ರಾಷ್ಟ್ರ ಜಾಗೃತಿ’ ಪತ್ರಿಕೆ ಹಾಗೂ SEARCH COORG MEDIA ಕಾಯ್ದಿರಿಸಲಾಗಿದೆ. ಇಲ್ಲಿ ಪ್ರಕಟಣೆಗೊಂಡಿರುವ ಮಾಹಿತಿಯನ್ನು ಯಾವುದೇ ರೀತಿಯ ಮಾಧ್ಯಮದಲ್ಲಿ ಪ್ರಕಟ ಪಡಿಸಲು ಅಥವಾ ಪ್ರಸಾರ ಪಡಿಸಲು ‘ರಾಷ್ಟ್ರ ಜಾಗೃತಿ’ ಪತ್ರಿಕೆ ಹಾಗೂ SEARCH COORG MEDIA ಸಂಸ್ಥೆಯ ಅಪ್ಪಣೆಯನ್ನು ಪಡೆಯ ಬೇಕಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ EMAIL : searchcoorg@gmail.com , MOb: 9483047519

admin

0 0 votes
Article Rating
Subscribe
Notify of
guest
0 Comments
Inline Feedbacks
View all comments