Yemmemadu Makham Uroos ಎಮ್ಮೆಮಾಡು ಮಖಾಂ ಉರೂಸ್

Yemmemadu Sufi Shaheed Darga Makham Uroos
ಇತಿಹಾಸ ಪ್ರಸಿದ್ಧ ಎಮ್ಮೆಮಾಡು ಸೂಫಿ ಶಹೀದ್ (ರ) ಮತ್ತು ಹಸನ್ ಸಖಾಫ್ (ರ) ಮಖಾಂ ಉರೂಸ್

ಪ್ರಾಸ್ತಾವಿಕ

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

  ಎಮ್ಮೆಮಾಡು ಇದು ಒಂದು ಇತಿಹಾಸ ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳವಾಗಿದೆ. ಇಲ್ಲಿ ಸತ್ಯಸಂದ, ದೈವಭಕ್ತ, ಪವಾಡಪುರುಷ ಸೂಫಿ ಸಯ್ಯದ್ ವಲಿಯಲ್ಲಾರವರು ಚಿರ ವಿಶ್ರಾಂತಿ ಪಡೆಯುತ್ತಿರುವ ಸ್ಥಳವಾಗಿದೆ. ಇದು ಆಸ್ತಿಕರ ಪಾಲಿನ ನಂಬಿಕೆಯ ತಾಣವಾಗಿದೆ. ಸರ್ವಧರ್ಮ ಸಮಭಾವದ ಭಾವೈಕ್ಯದ ನೆಲೆವೀಡಾಗಿದೆ. ಇಲ್ಲಿ ವರ್ಷಂಪ್ರತಿ ಮಾರ್ಚ್, ಏಪ್ರಿಲ್ ತಿಂಗಳಲ್ಲಿ 8ದಿನಗಳ ಕಾಲ ವಾರ್ಷಿಕ ಉರೂಸ್ ಸಮಾರಂಭವು ಅತೀ ವಿಜ್ರಂಭಣೆಯಿಂದ ನಡೆಯುತ್ತದೆ. ಕೊಡಗು ಜಿಲ್ಲೆಯನ್ನೊಳಗೊಂಡು ರಾಜ್ಯ, ಹೊರರಾಜ್ಯ ಮತ್ತು ದೇಶ-ವಿದೇಶಗಳಿಂದ ಆಸ್ತಿಕರು ಇಲ್ಲಿಗೆ ಆಗಮಿಸಿ ತಮ್ಮ ತಮ್ಮ ಇಷ್ಟಾರ್ಥ ಪ್ರಾರ್ಥನೆಗಳನ್ನು ಸಲ್ಲಿಸುತ್ತಾರೆ. ಹಾಗೇ ವರ್ಷವಿಡೀ ಪ್ರವಾಸಿಗ ರಾದಿಯಾಗಿ ಭಕ್ತಾದಿಗಳು ದಿನನಿತ್ಯ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಾರೆ.
ಎಮ್ಮೆಮಾಡು ಸೂಫಿ ಸಯ್ಯದ್ ವಲಿಯಲ್ಲಾರವರ ದರ್ಗಾವು ಕೊಡಗು ಜಿಲ್ಲೆಯ ಮಡಿಕೇರಿಯಿಂದ ನಾಪೋಕ್ಲು ಮಾರ್ಗವಾಗಿ 32.ಕಿ.ಮೀ ದೂರದಲ್ಲಿದೆ.

ಇತಿಹಾಸ ಹಿನ್ನಲೆ

ಮಹ್ಮದ್‍ಪೈಗಂಬರನು ಇಸ್ಲಾಂ ಧರ್ಮವನ್ನು ಸ್ಥಾಪಿಸಿದ ನಂತರ ಧರ್ಮಪ್ರಚಾರಕ್ಕಾಗಿ ಜಗತ್ತಿನ ಹಲವು ದೇಶಗಳ ಕಡೆ ಧರ್ಮ ಪ್ರಚಾರಕರು ತಮ್ಮ ಪ್ರಯಾಣವನ್ನು ಆರಂಭಿಸುತ್ತಾರೆ. ಸಾಮಾನ್ಯ ಶಕ 7ನೇ ಶತಮಾನದ ಅಂತ್ಯ ಭಾಗ ಹಾಗೂ 8ನೇ ಶತಮಾನದ ಆದಿಯಲ್ಲಿ ಭರತಖಂಡದ ಕಡೆ ತಮ್ಮ ಪ್ರಚಾರದ ಪ್ರಯಾಣವನ್ನು ಆರಂಭಿಸುತ್ತಾರೆ. ಆ ಕಾಲಘಟದಲ್ಲಿ ಅಂದರೆ 1300ವರ್ಷಗಳ ಹಿಂದೆ ದಟ್ಟ ಅರಣ್ಯ ಮತ್ತು ಬೆಟ್ಟಗುಡ್ಡಗಳಿಂದ ಕೂಡಿದ ಪ್ರಕೃತಿ ರಮಣೀಯ ತಾಣವಾಗಿದ್ದ ಕೊಡಗಿಗೆ ಆಧ್ಯಾತ್ಮವನ್ನು ಮೈಗೂಡಿಸಿಕೊಂಡ ಸೂಫಿ ಸಂತರು ವಯುಕ್ತಿಕ ಆಧ್ಯಾತ್ಮಿಕ ಸಾಧನೆಗಳಿಗಾಗಿ ಬಂದು ಕೊಡಗಿನ ಹಲವಾರು ಭಾಗಗಳಲ್ಲಿ ನೆಲೆ ನಿಲ್ಲುತ್ತಾರೆ. ಅವರಲ್ಲಿ ಬಹುಪಾಲು ಸೂಫಿ ಸಂತರು ತಲಕಾವೇರಿ, ಭಾಗಮಂಡಲ, ಕಕ್ಕಬ್ಬೆ, ಕೊಳಕೇರಿ, ನಾಪೋಕ್ಲು, ಮುಂತಾದೆಡೆ ಧ್ಯಾನಾಶಕ್ತರಾಗಿ ತಮ್ಮ ಆಧ್ಯಾತ್ಮಿಕ ಸಾಧನೆಯಲ್ಲಿ ಮಗ್ನರಾಗುತ್ತಾರೆ. ಅಂತಹ ಆಧ್ಯಾತ್ಮಿಕ ಸಾಧಕರಲ್ಲಿ ಒಬ್ಬರಾದ ಕೊಡಗಿನ ಎಮ್ಮೆಮಾಡುವಿನಲ್ಲಿ ನೆಲೆಸಿರುವ ಸತ್ಯಸಂದ, ದೈವಭಕ್ತ, ಪವಾಡಪುರುಷ ಸೂಫಿ ಸಯ್ಯದ್ ವಲಿಯುಲ್ಲಾರವರು.

ಎಮ್ಮೆಮಾಡುವಿನಲ್ಲಿ ಅಂತಿಮ ವಿಶ್ರಾಂತಿ

ಕೇರಳದ ಕಡೆಯಿಂದ ಕೊಡಗಿನೆಡೆಗೆ ತಮ್ಮ ಪಯಣವನ್ನು ಬೆಳೆಸಿದ ಸೂಫಿ ಸಯ್ಯದ್ ವಲಿಯಲ್ಲಾರವರು ಪೊನ್ನಂಪೇಟೆ ಸಮೀಪದ ಮಾಪಿಳ್ಳೆತೋಡು ಹತ್ತಿರದ ಕುತ್ತುನಾಡು ಗ್ರಾಮದಲ್ಲಿ ಸ್ವಲ್ಪ ಸಮಯ ವಿಶ್ರಾಂತಿ ಪಡೆಯುತ್ತಾರೆ. ನಂತರ ಬಿಟ್ಟಂಗಾಲದ ಅಂಬಟ್ಟಿ ಮಾರ್ಗವಾಗಿ ಭಾಗಮಂಡಲ ಸಮೀಪದ ತಾವೂರು ಗ್ರಾಮದಲ್ಲಿ ಬಂದು ನೆಲೆಸುತ್ತಾರೆ. ನಂತರ ತಾವೂರು ಗ್ರಾಮದಿಂದ ತಮ್ಮ ಪ್ರವಾಣವನ್ನು ನಾಪೋಕ್ಲು ಸಮೀಪದ ಎಮ್ಮೆಮಾಡು ಎಂಬ ಗ್ರಾಮಕ್ಕೆ ವಿಸ್ತರಿಸಿದ ಸೂಫಿ ಸಯ್ಯದ್ ವಲಿಯುಲ್ಲಾರವರು ಆ ಗ್ರಾಮದ ಜುಮ್ಮಾ ಮಸೀದಿಯ ಸಮೀಪ ವಾಸಿಸಿದ್ದರು. ಊರಿನಲ್ಲಿ ಶಾಂತಿ ನೆಲೆಯೂರಲು ಈ ಪುಣ್ಯ ಪುರುಷರು ಕಾರಣಕರ್ತರಾದರು. ಸನ್ಮಾರ್ಗದತ್ತ ಜನರನ್ನು ಸೆಳೆದು ಜನಪ್ರೀಯತೆ ಗಳಿಸಿದರು. ಈ ಮಧ್ಯೆ ಕೆಲವರು ಸೂಫಿ ಸಯ್ಯದ್ ವಲಿಯಲ್ಲಾರವರನ್ನು ತಪ್ಪು ತಿಳಿದುಕೊಂಡು ಅವರೊಂದಿಗೆ ಶತ್ರುತ್ವ ಬೆಳೆಸಿದರು. ಶತ್ರುಗಳು ಅವರನ್ನು ಸ್ಥಳದಿಂದ ಓಡಿಸಲು ಮಾಡಿದ ಪ್ರಯತ್ನ ಫಲಿಸದಾದಾಗ ಒಂದು ಉಪಾಯ ಕಂಡುಕೊಂಡರು. ಸೂಫಿ ಸಯ್ಯದ್ ವಲಿಯುಲ್ಲಾüರವರ ಜೊತೆಯಲ್ಲಿದ್ದ ದಾಸಿಯನ್ನು ಉಪಾಯದಿಂದ ಆಸೆ ಆಮಿಶ ತೋರಿಸಿ ತಮ್ಮತ್ತ ಸೆಳೆದುಕೊಳ್ಳುವಲ್ಲಿ ಪ್ರಾರಂಭಿಕ ಯಶಸ್ಸು ಕಂಡರು. ಆ ಪುಣ್ಯ ಪುರುಷರನ್ನು ಮೋಸದಿಂದ ಕೊಲ್ಲುವ ಯೋಜನೆಗಳು ತೆರೆಯ ಮರೆಯಲ್ಲಿ ಸಿದ್ದಗೊಂಡವು. ಸೂಫಿ ಸಯ್ಯದ್ ವಲಿಯುಲ್ಲಾರವರು ಒಂದು ದಿನ ತನ್ನ ನಿವಾಸಕ್ಕೆ ಬಂದ ಸಂದರ್ಭದಲ್ಲಿ ಶತ್ರುವೊಬ್ಬ ಆ ಮಹಿಳೆಯ ಸಹಕಾರವನ್ನು ಮೊದಲೆ ಪಡೆದು ಮನೆಯ ಮಹಡಿ ಹತ್ತಿ ಬಂದೂಕು ಸಹಿತನಾಗಿ ಕುಳಿತ್ತಿದ್ದ. ಸೂಫಿ ವರ್ಯರು ಎಂದಿನಂತೆ ಮನೆ ಪ್ರವೇಶಿಸಿದ ಕೂಡಲೆ ತನ್ನ ಖಡ್ಗ ಹಾಗೂ ಅಂಗಿಯನ್ನು ಕಳಚಿ ಒಂದೆಡೆ ಇರಿಸಿದರು. ಮಹಿಳೆ ಅನ್ನ ಬಡಿಸಿದಳು. ಸೂಫಿ ವರ್ಯರು ಆ ಅನ್ನದ ತಟ್ಟೆಗೆ ಕೈ ಹಾಕುವ ಮುನ್ನವೇ ಶತ್ರುವಿನ ಗುಂಡೇಟು ಅವರ ದೇಹವನ್ನು ನುಸುಳಿತ್ತು. ಕೂಡಲೇ ತಮ್ಮ ಖಡ್ಗವನ್ನು ಕೈಗೆತ್ತಿಕೊಂಡ ಶತ್ರುವಿನ ಶಿರ ಛೇದಿಸಿದ ಸೂಫಿಸಯ್ಯದ್‍ರವರು ಮರಣ ವೇದನೆಯಿಂದ ತೊಳಲಾಡಿದರು. ಅವರು ಸಮೀಪದ ಬರಾಕೊಲ್ಲಿ ಎಂಬಲ್ಲಿಗೆ ಕಷ್ಟದಿಂದ ನಡೆದು ಅಲ್ಲಿನ ಬಂಡೆಕಲ್ಲಿನ ಮೇಲೆ ಮಲಗಿದರು. ಅವರಿಗೆ ವಿಪರೀತ ಬಾಯಾರಿಕೆಯಾಯಿತು. ತುಸುಹೊತ್ತಿನಲ್ಲೇ ಅಲ್ಲಿ ಮತ್ತೊಂದು ಪವಾಡ ನಡೆಯಿತು. ಅದೋ ಒಂದು ದಷ್ಟ ಪುಷ್ಟವಾದ ಹಸು ತನ್ನ ಕೊಟ್ಟಿಗೆಯಿಂದ ಹಗ್ಗದ ಗಂಟನ್ನು ಕಳಚಿಕೊಂಡು ತರಾತುರಿಯಿಂದ ಬರಾಕೊಲ್ಲಿ ತೋಡಿನತ್ತ ಸಾಗುತ್ತದೆ. ಜೊತೆಯಲ್ಲಿ ಅದರ ಕರು ಕೂಡಾ ತಾಯಿಯನ್ನು ಹಿಂಬಾಲಿಸುತ್ತದೆ. ತೋಡಿನಲ್ಲಿ ಹರಿಯುತ್ತಿದ್ದ ನೀರಿನಲ್ಲಿ ಇಳಿದ ಹಸು ತನ್ನ ಕೆಚ್ಚಲನ್ನು ಮುಳುಗಿಸಿ ಸ್ವಚ್ಚಗೊಳಿಸಿ ಸೂಫಿ ಸಯ್ಯದ್‍ರವರ ಬಳಿಗೆ ಹೋಯಿತು. ತನ್ನ ಮಂಡಿಯೂರಿ ಆ ಪವಾಡ ಪುರುಷರಿಗೆ ಹಾಲು ಉಣಿಸಿತು. ಹೀಗೆ 3 ದಿನಗಳ ಕಾಲ ಹಸು ಸೂಫಿ ಸಯ್ಯದ್ ರವರಿಗೆ ಹಾಳುಣಿಸಿತು. ಇಷ್ಟಾದರೂ ತನ್ನ ಯಜಮಾನ ಹಾಲು ಕರೆಯುವ ಹೊತ್ತಿನಲ್ಲಿ ಹಸು ಕೊಟ್ಟಿಗೆಗೆ ಮರಳಿ ತಲುಪುತ್ತಿತ್ತು. ಅಷ್ಟೇ ಅಲ್ಲ, ಯಜಮಾನನಿಗೆ ಎಂದಿಗಿಂತ ಅಧಿಕ ಹಾಲನ್ನು ಕೊಡುತ್ತಿತ್ತು. 2 ದಿನ ತನ್ನ ಹಸುವಿನಲ್ಲಿ ಏನೋ ಬದಲಾವಣೆ ಕಂಡ ಯಜಮಾನ 3ನೇ ದಿನ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಕೊಟ್ಟಿಗೆಗೆ ತೆರಳಿದ. ಏನಾಶ್ಚರ್ಯ..!, ಯಾರೋ ಹಗ್ಗದ ಗಂಟನ್ನು ಬಿಚ್ಚಿಬಿಟ್ಟ ರೀತಿ ಹಸು ಹಗ್ಗ ಎಳೆದುಕೊಂಡೇ ಬಹಳ ಆತುರದಿಂದ ಓಡುತ್ತಿದೆ. ಎಳೆಯ ಕರು ಕೂಡಾ ತಾಯಿಯನ್ನು ಹಿಂಬಾಲಿಸುತ್ತಿದೆ. ಹಸುವಿನ ವಾರಸುದಾರರ ಕುತೂಹಲ ಹೆಚ್ಚಿತು. ಅವನು ತನ್ನ ಹಸು-ಕರುವನ್ನು ಹಿಂಬಾಲಿಸುತ್ತಾ ಹೋದ. ಬರಾಕೊಲ್ಲಿಯ ತೋಡಿನಲ್ಲಿ ಹಸು ತನ್ನ ಕೆಚ್ಚಲನ್ನು ಅದ್ದಿ ತೊಳೆಯುತ್ತಿದ್ದದ್ದನ್ನು ಕಂಡು ದಿಗ್ಬ್ರಾಂತನಾದ. ಬಳಿಕ ಹಸು ಬಂಡೆಯ ಮೇಲೆ ಮಲಗಿದ್ದ ಪವಾಡ ಪುರುಷನಿಗೆ ಹಾಲುಣಿಸುತ್ತಿದ್ದದ್ದನ್ನು ಕಂಡು ತನ್ನ ಕಣ್ಣುಗಳನ್ನೇ ನಂಬದಾದ. ಸೂಫಿ ಸಯ್ಯದ್ ವಲಿಯುಲ್ಲಾರವರಿಗೆ ಹಾಲುಣಿಸಿದ ಹಸು ಕೊಡವ ಜನಾಂಗದÀ ಮಣವಟ್ಟಿರ ಕುಟುಂಬಕ್ಕೆ ಸೇರಿದ ಹಸು ಎಂದು ಹೇಳಲಾಗುತ್ತಿದೆ. ಸೂಫಿಸಯ್ಯದ್ ವಲಿಯುಲ್ಲಾರವರು ಅಸುನೀಗಿದ ವಿಚಾರ ಹಸುವಿನ ಮಾಲೀಕನಿಂದ ಊರಿನಲ್ಲೆಲ್ಲಾ ಕಾಡ್ಗಿಚ್ಚಿನಂತೆ ಹರಡಿತು. ಜನರು ಸುತ್ತುವರೆದರು. ಸಯ್ಯದ್‍ರವರನ್ನು ಗುರುತಿಸಿದರು. ಅವರ ಪಾರ್ಥೀವ ಶರೀರದ ಸಂಸ್ಕಾರದ ಸಿದ್ಧತೆ ನಡೆಯಿತು. ಪಾರ್ಥೀವ ಶರೀರವನ್ನು ಹತ್ತಾರು ಮಂದಿ ಎತ್ತಿದರೂ, ಕದಲಲಿಲ್ಲ…!.ನೆರೆದಿದ್ದವರಿಗೆ ಏನು ಮಾಡುವುದೆಂದು ತೋಚಲಿಲ್ಲ. ಅವರ ಪೈಕಿ ಹಿರಿಯರೊಬ್ಬರು ಅಲ್ಲಾಹುವಿನಲ್ಲಿ ಪ್ರಾರ್ಥನೆ ಮಾಡಿ ಪಾರ್ಥೀವ ಶರೀರದ ಸಂಸ್ಕಾರಕ್ಕೆ ಅನುವು ಕಲ್ಪಿಸುವಂತೆ ಬೇಡಿದರು. ಅಷ್ಟರಲ್ಲಿ ಮತ್ತೊಂದು ಪವಾಡ ನಡೆಯಿತು. ಸೂಫಿ ಸಯ್ಯದ್ ವಲಿಯುಲ್ಲಾರವರ ನೆತ್ತಿಯ ಭಾಗದಿಂದ ಚಿಮ್ಮಿದ ರಕ್ತವು ಎಮ್ಮೆಮಾಡು ಮಸೀದಿಯ ಹಿಂಬದಿಯ ಪ್ರದೇಶದಲ್ಲಿ ಬೀಳುವುದನ್ನು ಹಲವರು ಕಂಡರು. ಬಳಿಕ ಸ್ಥಳ ಪರಿಶೀಲಿಸಿ ಖಾತರಿ ಪಡಿಸಿ ಖಬರ್ (ಸಮಾದಿ) ತೋಡಲಾಯಿತು. ಆ ನಂತರ ಪಾರ್ಥೀವ ಶರೀರವನ್ನು ಮೇಲೆ ಎತ್ತಿದಾಗ ದೇಹವು ಅತ್ಯಂತ ಹಗುರವಾಗಿದ ಅನುಭವವಾಯಿತು. ನೆರೆದವರು ಚಕಿತರಾದರು. ಜುಮಾ ಮಸೀದಿಯ ಹಿಂಭಾಗದಲ್ಲಿ ಸೂಫಿವರ್ಯರ ಪವಿತ್ರ ದೇಹವನ್ನು ಸಂಸ್ಕಾರಗೊಳಿಸಲಾಯಿತು.

ಬರಾಕೊಲ್ಲಿ ದಂಡೆಯಲ್ಲಿ ಹೆಜ್ಜೆಗುರುತು:

ಸೂಫಿ ಸಯ್ಯದ್ ವಲಿಯಲ್ಲಾರವರಿಗೆ ಮರಣಶಯ್ಯೆಯಲ್ಲಿ ಹಾಲುಣಿಸಿದ ಹಸು ಹಾಗೂ ಕರುವಿನ ಹೆಜ್ಜೆಗುರುತು ಬಂಡೆಕಲ್ಲಿನ ಮೇಲೆ ಅಚ್ಚೊತ್ತಿದಂತೆ ಇದ್ದು, ಈ ದೃಶ್ಯವನ್ನು ಬರಾಕೊಲ್ಲಿ ಬಂಡೆಯ ಮೇಲೆ ಭಕ್ತಾದಿಗಳು ಇಂದಿಗೂ ಕಾಣಬಹುದಾಗಿದೆ. ಹಸು ಹಗ್ಗವನ್ನು ಏಳೆದೊಯ್ದ ಗುರುತು, ಹಸು ಮತ್ತು ಕರುವಿನ ಕಾಲುಗುರುತುಗಳು ಸ್ಪಷ್ಟವಾಗಿ ಗೋಚರಿಸುತ್ತದೆ. ಈ ಸ್ಥಳವು ಎಮ್ಮೆಮಾಡು ದರ್ಗಾಶರೀಫದಿಂದ ಅಂದಾಜು ಒಂದುವರೆ ಫರ್ಲಾಂಗ್ ದೂರದಲ್ಲಿದೆ. ದನ ಕರುಗಳಿಗೆ ತಗುಲುವ ಯಾವುದೇ ವಿಧದ ರೋಗಗಳಿಗೂ ಈ ಪುಣ್ಯ ಪುರುಷನ ಹೆಸರಿನಲ್ಲಿ ಹರಕ್ಕೆ ಹೊತ್ತದ್ದೇ ಆದಲ್ಲಿ ತಕ್ಷಣಕ್ಕೆ ಪರಿಹಾರ ದೊರಕುವುದು ಈಗಲೂ ಪವಾಡವೇ ಆಗಿದೆ. ಸೂಫಿ ಸಯ್ಯದ್ ರವರ ವಾರ್ಷಿಕ ಉರೂಸ್ ಸಂದರ್ಭ ಹೊರರಾಜ್ಯಗಳಿಂದಲೂ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ದರ್ಗಾಶರೀಫ್ ಮತ್ತು ಅನ್ನದಾನದ ಸ್ಥಳದಲ್ಲಿ ಜನಸಾಗರವೇ ನೆರೆದಿರುವುದನ್ನು ಕಾಣಬಹುದು. ಜಿಲ್ಲೆಯ ವಿವಿಧ ಸ್ಥಳಗಳ ಉರೂಸ್ ಸಮಾರಂಭಗಳನ್ನು ಹೋಲಿಸಿದಲ್ಲಿ ಅತ್ಯಂತ ಹೆಚ್ಚಿನ ಜನ ಸೇರುವ ಸ್ಥಳ ಎಮ್ಮೆಮಾಡು ದರ್ಗಾಶರೀಫಾ ಎನ್ನಬಹುದು. ಇಲ್ಲಿಗೆ ಆಗಮಿಸುವ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಅಧಿಕಗೊಳ್ಳುತ್ತಿದೆ. ಉರೂಸ್ ಸಂದರ್ಭ ಹಸುವಿನ ತುಪ್ಪ, ಹಾಲು, ಹಾಗೂ ಬೆಳ್ಳಿಯ ಹಸು-ಕರುಗಳ ರೂಪ ಹೆಚ್ಚಾಗಿ ಕಾಣಿಕೆ ರೂಪದಲ್ಲಿ ಬರುತ್ತದೆ. ಹಸು-ಕರುಗಳ ರೋಗ ನಿವಾರಣೆಗಾಗಿ ಹಿಂದೂ ಬಾಂಧವರು ಹರಕೆಯನ್ನು ಹೊತ್ತು ತೀರಿಸುತ್ತಾರೆ. ತಮ್ಮ ದನ-ಕರುಗಳು ಕಾಣೆಯಾದ ಸಂದರ್ಭದಲ್ಲಿ ಇಲ್ಲಿಗೆ ಬಂದು ತಮ್ಮ ಹವಾಲನ್ನು ಹೇಳಿಕೊಳ್ಳುವುದು ಇಂದಿಗೂ ಕಂಡುಬರುತ್ತದೆ.

ಸಂದರ್ಶನ:

ಅಸೈಯ್ಯದ್ ಹಸನ್ ಸಖಾಫಿಲ್ ಹಳ್ರಮಿ ಅರಭಿ ತಂಙಳ್:

ಸೂಫಿ ಸಯ್ಯದ್ ವಲಿಯಲ್ಲಾರವರ ಸಂದರ್ಶನ ನಡೆಸಿದ ಅಸೈಯ್ಯದ್ ಹಸನ್ ಸಖಾಫಿಲ್ ಹಳ್ರಮಿ ಅರಭಿ ತಂಙಳ್‍ರವರು ಕೇರಳದ ಸದೂರಿನವರು ಮಹ್ಮದ್ ಪೈಗಂಬರರ ವಂಶದವ (ಅಹ್ಲ್‍ಬೈತ್)ರಾದ ಸೂಫಿವರ್ಯ ಅದೂರ್ ತಂಙಳ್ ಅವರು ‘ನನಗೆ ನಿಮ್ಮೊಂದಿಗೆ ತಂಗಲು ಅವಕಾಶ ನೀಡಿ’ ಎಂದು ಕೋರಿಕೊಂಡರಂತೆ ಆಗ ಸೂಫಿ ಸಯ್ಯದ್‍ರವರು ಹಳ್ರಮಿ ತಂಙಳ್‍ರವರಿಗೆ ಉನ್ನತ ಸ್ಥಾನ ಕೊಟ್ಟು ಗೌರವಿಸಿದರು. ಸೂಫಿ ಸಯ್ಯದ್ ದರ್ಗಾಶರೀಫ್ ಗೆ ತೆರಳುವ ಬಲಭಾಗದಲ್ಲಿ ಸಿಗುವ ಒಂದು ಪುಟ್ಟ ಮನೆ ಹಳ್ರಮಿ ತಂಙಳ್ ಅಂತ್ಯವಿಶ್ರಾಂತಿ ಪಡೆಯುತ್ತಿರುವ ದರ್ಗಾ ಶರೀಫ್. ಭೂತಪ್ರೇತ ಬಾಧೆಪೀಡಿತ ವ್ಯಕ್ತಿಗಳನ್ನು ಹಳ್ರಮಿ ತಂಙಳ್ ರವರ ದರ್ಗಾ ಷರೀಫ ಕ್ಕೆ ಕರೆದೊಯ್ದರೆ ಅದ್ಬುತ ರೀತಿಯಲ್ಲಿ ನಿವಾರಣೆಗೊಳ್ಳುತ್ತದೆ ಎಂದು ನಂಬುತ್ತಾರೆ. ದಯಾಮಯನಾದ ಅಲ್ಲಾಹು ನಂಬಿದವರನ್ನೆಲ್ಲಾ ಅನುಗ್ರಹಿಸಲಿ.

ಜಾತಿಭೇದವಿಲ್ಲದ ದರ್ಗಾದ ಸಾಮಾಜಿಕ ಸೇವಾ ಕಾರ್ಯಗಳು :

ಭಕ್ತರ ಇಷ್ಟಾರ್ಥಗಳು ನೆರವೇರುತ್ತಾ ಬಂದಿರುವುದರಿಂದ ದರ್ಗಾಕ್ಕೆ ಜಾತಿಭೇದವಿಲ್ಲದೆ ಎಲ್ಲಾ ಜನಾಂಗದವರು ದರ್ಶನ ಮಾಡಿ ಹರಕೆಹೊತ್ತು ಕಷ್ಟ ಪರಿಹಾರವಾದ ಬಳಿಕ ತಮ್ಮ ಹರಕೆಯನ್ನು ಅರ್ಪಿಸಿ ಹೋಗುತ್ತಾರೆ. ಒಂದು ಕಾಲದಲ್ಲಿ ಕುಗ್ರಾಮವಾದ ಎಮ್ಮೆಮಾಡು ಇಲ್ಲಿನ ದರ್ಗಾದ ಮಹಿಮೆಯಿಂದಾಗಿ ಅಭಿವೃದ್ಧಿಯತ್ತ ಸಾಗುತ್ತಿದ್ದು ಧಾರ್ಮಿಕ, ಸಾಮಾಜಿಕ ಮತ್ತು ವಿದ್ಯಾ ಕೇಂದ್ರವಾಗಿ ದಾಪುಗಾಲಿಡುತ್ತಿದೆ. ಇಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಧಾರ್ಮಿಕ ಹಾಗೂ ಲೌಕಿಕ ಎರಡನ್ನೂ ಅಭ್ಯಾಸ ಮಾಡುವ ಅನುಕೂಲವಿದೆ. ಇದರೊಂದಿಗೆ ಸೂಫಿ ಶಹೀದ್ ಸಂತರ ಹೆಸರಿನಲ್ಲಿ ಶಹೀದಿಯಾ ಅನಾಥ ಮತ್ತು ಬಡ ಮಕ್ಕಳ ವಸತಿ ಗೃಹವನ್ನು ಕೂಡ ನಡೆಸಿಕೊಂಡು ಬರಲಾಗುತ್ತಿದೆ. ಈ ವಸತಿಗೃಹದಲ್ಲಿ ಆಶ್ರಯ ಪಡೆದಿರುವ ಅನಾಥ ಮತ್ತು ಬಡ ಮಕ್ಕಳಿಗೆ ತಾನು ಅನಾಥ, ನಿರ್ಗತಿಕನೆಂಬ ಪ್ರಜ್ಞೆ ಬಾರದಂತೆ ಉಚಿತ ಊಟ, ಪುಸ್ತಕ ಸೇರಿದಂತೆ ಸಕಲ ಸವಲತ್ತನ್ನು ನೀಡಿ ಅವರ ಉತ್ತಮ ಚಟುವಟಿಕೆಯನ್ನು ಪ್ರೋತ್ಸಾಹಿಸಿ ಬೆಳೆಸಲಾಗುತ್ತಿದೆ. ಇನ್ನು ಇಲ್ಲಿರುವ ಮಸೀದಿಯಂತು ಸುಂದರವಾಗಿದ್ದು, ಜಿಲ್ಲೆಯಲ್ಲಿರುವ ಮಸೀದಿಗಳ ಪೈಕಿ ಅತಿ ದೊಡ್ಡದಾದ ಮಸೀದಿಯಾಗಿದೆ. ಸುಮಾರು ಒಂದು ಕೋಟಿಗೂ ಹೆಚ್ಚು ಖರ್ಚು ಮಾಡಿ ನಿರ್ಮಿಸಲಾಗಿರುವ ಮಸೀದಿಯು ಸಾವಿರಾರು ಮಂದಿ ನೆರೆದು ಪ್ರಾರ್ಥನೆ ಸಲ್ಲಿಸುವಷ್ಟು ವಿಸ್ತಾರವನ್ನು ಹೊಂದಿದೆ. ಎಮ್ಮೆಮಾಡಿನಲ್ಲಿ ಸೂಫಿ ಶಹೀದ್ ಸಂತರ ಮಸೀದಿಯಲ್ಲದೆ, ಪ್ರವಾದಿ ಮಹಮ್ಮದ್ ಪೈಗಂಬರ್ರವರ ವಂಶಸ್ಥರಾದ ಸೈಯದ್ ಹಸನ್ ಸಖಾಫ್ ಎಂಬ ಮತ್ತೊಬ್ಬ ಸಂತರ ಮಸೀದಿಯನ್ನು ಕೂಡ ಕಾಣಬಹುದು. ಈ ಮಸೀದಿಯು ಸೂಫಿ ಶಹೀದ್ ದರ್ಗಾ ಶರೀಫ್ಗೆ ತೆರಳುವ ಮಾರ್ಗದ ಬಲಬದಿಯಲ್ಲಿದೆ. ಬಹಳ ವರ್ಷಗಳ ಹಿಂದಿನ ದರ್ಗಾಗಳಾದ ಇವುಗಳನ್ನು ಪುನಾರಚಿಸಲಾಗಿದೆ. ಪ್ರತಿವರ್ಷವೂ ಫೆಬ್ರವರಿ ಅಥವಾ ಮಾರ್ಚ್ನಲ್ಲಿ ಸೂಫಿ ಶಹೀದ್ ಸಂತರ ಹೆಸರಿನಲ್ಲಿ ಉರೂಸ್ ನಡೆಯುತ್ತದೆ. ಈ ಸಂದರ್ಭ ಲಕ್ಷಾಂತರ ಮುಸ್ಲಿಂ – ಹಿಂದೂ ಬಾಂಧವರು ನೆರೆಯುತ್ತಾರೆ. ಉರೂಸ್ ಸಂದರ್ಭ ಸಾರ್ವಜನಿಕ ಸಮ್ಮೇಳನ, ಸಾಮೂಹಿಕ ವಿವಾಹ, ಅನ್ನಸಂತರ್ಪಣೆ, ಮತಪ್ರವಚನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಹತ್ತು ಹಲವು ವಿಶೇಷತೆಗಳನ್ನು ತನ್ನೊಡಲಲ್ಲಿ ತುಂಬಿಕೊಂಡು, ತನ್ನಡೆಗೆ ಬರುವ ಭಕ್ತಾದಿಗಳ ಇಷ್ಟಾರ್ಥಗಳನ್ನು ನೆರವೇರಿಸುತ್ತಾ ಬಂದಿರುವ ಎಮ್ಮೆಮಾಡು ತಾಣ ಮಡಿಕೇರಿಯಿಂದ 32 ಕಿಲೋ ಮೀಟರ್ ದೂರದಲ್ಲಿದ್ದು, ನಾಪೋಕ್ಲಿಗೆ ಸಮೀಪದಲ್ಲಿದೆ. ಇಲ್ಲಿಗೆ ವಾಹನ ಸೌಕರ್ಯಗಳಿರುವುದರಿಂದ ಹಾಗೂ ಉರೂಸ್ ಸಂದರ್ಭ ವಿಶೇಷ ಬಸ್ ಸೌಲಭ್ಯವೂ ಒದಗಿಸುವುದರಿಂದ ಭೇಟಿ ನೀಡುವವರಿಗೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ.

ಸೂಫಿ ಸಂತರು:

ಸೂಫಿ ಎಂದರೆ ಪರಿಶುದ್ಧ ಎಂದರ್ಥ. ಮಧ್ಯಕಾಲಿನ ಭಾರತದಲ್ಲಿ ಇಸ್ಲಾಂ ಧರ್ಮದ ಮೇಲೆ ಹಿಂದೂ ಧರ್ಮದ ಪ್ರಭಾವದ ಪರಿಣಾಮವಾಗಿ ಸೂಫಿ ಪಂಥ ಉದಯಿಸಿತು. ಇದು ಹಿಂದೂ ಮತ್ತು ಮುಸ್ಲಿಂ ಧರ್ಮಗಳ ಅನೇಕ ಆಚರಣೆಗಳನ್ನು ಅಳವಡಿಸಿಕೊಂಡಿತು. ಹಿಂದೂ ಸಂತರಂತೆ ಸೂಫಿ ಸಂತರು ಕೂಡ ಸಾಮಾಜಿಕ ಸಮಾನತೆ, ಲಿಂಗ ಸಮಾನತೆ, ಧಾರ್ಮಿಕ ಸಾಮರಸ್ಯ, ಭಕ್ತಿ ಮುಂತಾದವುಗಳನ್ನು ಬೋಧಿಸಿದರು. ಇದರಿಂದಾಗಿಯೇ ಅನೇಕ ಹಿಂದೂ ಮತ್ತು ಮುಸಲ್ಮಾನರು ಸೂಫಿಗಳ ಶಿಷ್ಯರಾದರು.

ಹರಕೆಯ ರೂಪ:

ಸೂಫಿ ಶಹೀದ್ ಸಂತರಿಗೆ ಹಸು ಹಾಲುಣಿಸಿದ ಪವಾಡ ನಡೆದಂದಿನಿಂದ ಇಲ್ಲಿಯವರೆಗೂ ಎಮ್ಮೆಮಾಡು ದರ್ಗಾ ಹಸುಕರುಗಳಿಗೆ ಉಂಟಾಗುವ ರೋಗರುಜಿನ ಇನ್ನಿತರ ಯಾವುದೇ ತೊಂದರೆಗಳಿಗೆ ಪರಿಹಾರ ನೀಡುತ್ತಾ ಬರುತ್ತಿರುವುದು ಗಮನಾರ್ಹವಾಗಿದೆ. ಮನೆಯಲ್ಲಿ ಸಾಕಿದ ಹಸುಕರುಗಳಿಗೆ ಏನಾದರು ಕಾಯಿಲೆ, ತೊಂದರೆಗಳು ಆದಾಗ ಎಮ್ಮೆಮಾಡು ದರ್ಗಾಕ್ಕೆ ಹರಕೆ ಹೊತ್ತುಕೊಳ್ಳುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಪ್ರತಿ ವರ್ಷವೂ ಭಕ್ತರು ತಮ್ಮ ಇಷ್ಟಾರ್ಥ ನೆರವೇರಿಸಿದ್ದಕ್ಕಾಗಿ ಬೆಳ್ಳಿಯ ಹಸುಕರುವಿನ ಪ್ರತಿಕೃತಿ ಹಾಗೂ ತುಪ್ಪ, ನಗದನ್ನು ಹರಕೆಯ ರೂಪದಲ್ಲಿ ಒಪ್ಪಿಸುತ್ತಾರೆ. ಇದುವರೆಗೆ ಕೇವಲ ದನಕರುಗಳ ಸಮಸ್ಯೆಗೆ ಮಾತ್ರವಲ್ಲದೆ, ಮಾನಸಿಕ, ಶಾರೀರಿಕವಾಗಿ ಕೆಲವೊಂದು ತೊಂದರೆಗಳಿಂದ ಬಳಲುತ್ತಿದ್ದವರು ಕೂಡ ಇಲ್ಲಿಗೆ ಭೇಟಿ ನೀಡಿ ಪರಿಹಾರ ಕಂಡುಕೊಂಡ ಹಲವು ಉದಾಹರಣೆಗಳನ್ನು ನಾವು ಕಾಣಬಹುದು.

ಇತಿಹಾಸ ಪ್ರಸಿದ್ಧ ಎಮ್ಮೆಮಾಡು ಸೂಫಿ ಶಹೀದ್‍ರ ಬರಾಕೊಲ್ಲಿ ಪಾರೆಕಲ್ಲು

ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್ ಮಂಡಳಿ ಪದಾದಿಕಾರಿಗಳು ಎಮ್ಮೆಮಾಡು

1. ಬಿ.ಎಂ. ಉಸ್ಮಾನ್ ಹಾಜಿ : ಅಧ್ಯಕ್ಷರು. 9741511730
2. ಕೆ.ಈ. ಹಮೀದ್ ಹಾಜಿ : ಉಪಾಧ್ಯಕ್ಷರು. 9008998529
3. ಕೆ.ಎಂ. ಹುಸೈನ್ ಸಖಾಫಿ : ಪ್ರಧಾನಕಾರ್ಯದರ್ಶಿ. 9901219991
4. ಸಿ.ಎಂ. ಮಹ್ಮದ್ ಮುಸ್ಲಿಯಾರ್ : ಕಾರ್ಯದರ್ಶಿ.
5. ಕೆ.ಏ. ಉಸ್ಮಾನ್ ಮುಸ್ಲಿಯಾರ್: ಖಜಾಂಚಿ. 9902316390
6. ಸಯ್ಯಿದ್ ಇಲಿಯಾಸ್ ತಂಙಳ್: ಸದಸ್ಯರು. 9449472313
7. ಸಿ.ಎಂ. ಮಹೀನ್ : ಸದಸ್ಯರು. 9902613590
8. ಪಿ.ಎಂ. ಹಂಸ : ಸದಸ್ಯರು. 9740251408
9. ಸಿ.ಎಂ. ಸದಾಲಿ : ಸದಸ್ಯರು. 8277403908
10. ಕುಂಞÂಕೋಯ ತಂಙಳ್: ಸದಸ್ಯರು. 9900582514
11. ಸಿ.ಎಸ್. ಇಬ್ರಾಹಿಂ: ಸದಸ್ಯರು. 9008365691

ಉಸ್ತಾದ್: ಸಯ್ಯಿದ್ ಸಾಲಿಂ ಸಕಾಫಿ ಮದರಿಸ್ ಎಮ್ಮೆಮಾಡು
ಹಾಫಿಲ್ ಜುನೈದ್ ಸಖಾಫಿ ಖತೀಬ್(ಇಮಾಂ)

ಕಾರ್ಯಕ್ರಮಗಳು

ಕಾರ್ಯಕ್ರಮಗಳು 2018

ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.

About ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments