ಜೇನು ನೊಣ ನಿರ್ವಹಣೆ Honey bee management

ಜೇನು ನೊಣ ನಿರ್ವಹಣೆ

ವಿಶ್ವಾದ್ಯಂತ ಜೇನು ಉತ್ಪಾದನೆಗಾಗಿ ಜನರು ಜೇನು ಕೃಷಿಯನ್ನು ಕೈಗೊಳ್ಳುತ್ತಾರೆ. ಜೇನು ಶಕ್ತಿವರ್ದಕವೂ ಹೌದಲ್ಲದೆ ಪೋಷಕಾಂಶವನ್ನೂ ಒದಗಿಸುತ್ತದೆ. ವಿವಿಧ ಜೇನು ತಳಿಗಳಿಂದ ಜೇನನ್ನು ಪಡೆಯಲಾಗುತ್ತಾದರೂ ಭಾರತದಲ್ಲಿ 4 ತಳಿಗಳು ಪ್ರಸಿದ್ಧವಾಗಿದೆ. ಹೆಜ್ಜೇನು ಅತೀ ಅಪಾಯಕಾರಿಯಾದ್ದರಿಂದ ಸಾಕಲಾಗುವುದಿಲ್ಲ. ಭಾರತದಲ್ಲಿ ಪ್ರಮುಖ ಸಾಕಣೆಯ ತಳಿಗಳೆಂದರೆ ತುಡುವೆ ಜೇನು (ಪೆಟ್ಟಿಗೆ ಜೇನು) ಮತ್ತು ಐರೋಪ್ಯದ ಜೇನು ತಳಿ. ಹೆಜ್ಜೇನು ಬಂಡೆಕಲ್ಲುಗಳೆಡೆಯಲ್ಲಿ, ಎತ್ತರದ ಕಟ್ಟಡಗಳಲ್ಲಿ ಮತ್ತು ಮರಗಳಲ್ಲಿ 4’-5’ ಉದ್ದಗಲದ ಒಂದೇ ಎರಿಯನ್ನು ಕಟ್ಟುತ್ತದೆ ಮತ್ತು ಸುಮಾರು 35 ಕಿಲೋದಷ್ಟು ಜೇನು ಉತ್ಪಾದಿಸುತ್ತದೆ. ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ಕ್ರಿಯಾಶೀಲವಾಗಿದ್ದು ಉತ್ತಮ ಪರಾಗ ಸ್ಪರ್ಷ ಕಾರ್ಯ ಇವುಗಳಿಂದಾಗುತ್ತದೆ. ವಿವಿಧ ಜೇನು ತಳಿಗಳು ಮತ್ತು ಅವುಗಳ ಸಾಮಥ್ರ್ಯ ಈ ಕೆಳಗಿನಂತಿದೆ.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಕೋಲು ಜೇನು 1/2’ ಅಗಲ ಮತ್ತು 1’ ಎತ್ತರದ ಒಂದು ಎರಿಯನ್ನು ಕಟ್ಟುತ್ತದೆ. ಇದರಿಂದ ವರ್ಷದಲ್ಲಿ ಸುಮಾರು 0.75 ಕೆ.ಜಿ. ಜೇನು ದೊರೆಯುತ್ತದೆ. ಉತ್ತಮ ಪರಾಗಸ್ಪರ್ಷ ಮಾಡುವ ಜೇನು ನೊಣವಾಗಿದ್ದು ಬೆಳಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಕ್ರಿಯಾಶೀಲವಾಗಿರುತ್ತದೆ.

ತುಡುವೆ ಜೇನು (ಪೆಟ್ಟಿಗೆ ಜೇನು) ಸಮನಾಂತರವಾದ 8-10 ಎರಿಗಳನ್ನು ಕಟ್ಟುತ್ತದೆ ಹಾಗು ಸುಮಾರು 4-8 ಕಿಲೋ ಜೇನನ್ನು ಒಂದು ವರ್ಷದಲ್ಲಿ ಉತ್ಪಾದಿಸುತ್ತದೆ. ಪರಾಗಸ್ಪರ್ಷ ಕ್ರಿಯೆ ಉತ್ತಮವಾಗಿದ್ದು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಕೆಲಸದಲ್ಲಿ ತೊಡಗಿರುತ್ತದೆ.

ಮುಜೆಂಟಿ ಜೇನು ನೊಣಗಳು ಜೇನಿನ ಶೇಖರಣೆ ಮತ್ತು ಮರಿಹುಳುಗಳಿಗೆ ಇರುವ ಎರಡು ಎರಿಗಳನ್ನು ಹುಟ್ಟಿನ ಬದಿಯಲ್ಲಿ ನಿರ್ಮಿಸುತ್ತದೆ. ಔಷಧೀಯ ಗುಣಗಳನ್ನು ಹೊಂದಿದ ಸುಮಾರು 0.250 ಕಿಲೋ ಜೇನು ಒಂದು ಹುಟ್ಟಿನಲ್ಲಿ ವರ್ಷಕ್ಕೆ ಉತ್ಪಾದನೆಯಾಗುತ್ತದೆ.

ಐರೋಪ್ಯ ತಳಿಯನ್ನು ಆರಂಭದಲ್ಲಿ ಹಿಮಾಚಲ ಪ್ರದೇಶ ಮತ್ತು ಪಂಜಾಬಿನಲ್ಲಿ ಬೆಳೆಸಲಾಯಿತು, ನಂತರದ ವರ್ಷಗಳಲ್ಲಿ ಇತರ ರಾಜ್ಯಗಳಿಗೆ ಪಸರಿಸಿತು. ಪರಾಗಸ್ಪರ್ಷ ಕ್ರಿಯೆ ಉತ್ತಮವಾಗಿದ್ದು ವರ್ಷದಲ್ಲಿ 20 ಕಿಲೋ ಜೇನು ಉತ್ಪಾದನೆಯಾಗುತ್ತದೆ. ಭಾರತದ ತುಡುವೆ ಜೇನಿನ ಗುಣಗಳನ್ನು ಹೊಂದಿದ್ದು ಗೂಡಿನಲ್ಲಿ ಸಮನಾಂತರವಾಗಿ 10 ಎರಿಗಳನ್ನು ನಿರ್ಮಿಸುತ್ತದೆ. ಥಾಯಿ ಸ್ಯಾಕ್ ಬ್ರೂಡ್ ರೋಗಕ್ಕೆ ನಿರೋಧಕ ಶಕ್ತಿ ಹೊಂದಿದೆಯಾದರೂ ಫೌಲ್ ಬ್ರೂಡ್ ರೋಗ ಮತ್ತು ಕಣಜದ ಹುಳಕ್ಕೆ ತುತ್ತಾಗುತ್ತದೆ.

ಜೇನು ನೊಣಗಳ ವರ್ಗೀಕರಣ
ರಾಣಿ ನೊಣ: ರಾಣಿ ನೊಣವನ್ನು ಜೇನು ಗೂಡಿನ ತಾಯಿಯೆಂದು ಕರೆಯಲ್ಪಡುತ್ತದೆ ಹಾಗು ಮೊಟ್ಟೆ ಇಡುವ ಯಂತ್ರವೆನ್ನುತ್ತಾರೆ. ಕೆಲಸಗಾರ ನೊಣಗಳು ಕಟ್ಟಿದ ಎರಿಯಲ್ಲಿ ಅವಶ್ಯಕತೆಗೆ ಅನುಗುಣವಾಗಿ ದಿನವೊಂದಕ್ಕೆ 1000-1500 ಫಲಿತ ಮತ್ತು ಅಫಲಿತ ಮೊಟ್ಟೆಗಳನ್ನಿಡುತ್ತದೆ. ಫಲಿತ ಮೊಟ್ಟೆಗಳಿಂದ ರಾಣಿ ಅಥವಾ ಬಂಜೆ ಕೆಲಸಗಾರ ಹೆಣ್ಣು ನೊಣಗಳು ಉತ್ಪತ್ತಿಯಾಗುತ್ತದೆ. ಅಫಲಿತ ಮೊಟ್ಟೆಗಳಿಂದ ಗಂಡು ನೊಣಗಳು ಹೊರಬರುತ್ತದೆ.

ಗಂಡು ನೊಣ: ಹೊಸ ರಾಣಿ ನೊಣದೊಂದಿಗೆ ಸಮಾಗಮ ಹೊಂದುವುದೇ ಇದರ ಪ್ರಮುಖ ಕೆಲಸ. ಅಂತರಿಕ್ಷದಲ್ಲಿ ರಾಣಿಯೊಂದಿಗೆ ಸಮಾಗಮ ಹೊಂದಿದ ಗಂಡು ನೊಣ ಸಾಯುತ್ತದೆ.

ಕೆಲಸಗಾರ ಜೇನು ನೊಣ: ತನ್ನ ಜೀವಿತಾವಧಿಯ ಪ್ರಥಮ 15 ದಿನದಲ್ಲಿ ಗೂಡಿನ ಆರೈಕೆಯಲ್ಲಿ ತೊಡಗಿಸಿಕೊಳ್ಳುತ್ತದೆ. ರಾಣಿ ನೊಣಕ್ಕೆ ರಾಜಶಾಹಿ ರಸವನ್ನು ಉಣಬಡಿಸಿ, ರಾಣಿ ಮತ್ತು ಇತರ ಕೆಲಸಗಾರ ನೊಣಗಳ ಆರೈಕೆಯಲ್ಲಿ ತೊಡಗಿಕೊಂಡಿರುತ್ತದೆ. ಮೇಣದ ಗ್ರಂಥಿಯ ಮೂಲಕ ಮೇಣವನ್ನು ಸ್ರವಿಸಿ ಎರಿಗಳನ್ನು ಕಟ್ಟಲು ನೆರವಾಗುತ್ತದೆ. ಇದಲ್ಲದೆ ಹುಟ್ಟನ್ನು ಸ್ವಚ್ಛವಾಗಿ, ತಂಪಾಗಿ ಇಡುವುದು ಮತ್ತು ಕಾವಲು ಕಾಯುವುದು ಮುಂತಾದ ಕೆಲಸಗಳನ್ನು ಮಾಡುತ್ತದೆ. 15 ದಿವಸದ ನಂತರದ ದಿನಗಳಲ್ಲಿ ಮಕರಂದ ಮತ್ತು ಪರಾಗ ಸಂಗ್ರಹಿಸಿ ಹುಟ್ಟಿಗೆ ತರುತ್ತದೆ. ಮಕರಂದವನ್ನು ಜೇನಾಗಿ ಪರಿವರ್ತಿಸಿ ಎರಿಯಲ್ಲಿ ಸಂಗ್ರಹಿಸುತ್ತದೆ.

ಮಕರಂದ ಮತ್ತು ಪರಾಗ ಜೇನು ನೊಣಗಳ ಆಹಾರವಾಗಿದೆ. ಪರಾಗ ಪ್ರೋಟೀನ್, ಖನಿಜಾಂಶ, ವಿಟಮಿನ್ ಮತ್ತು ಕಿಣ್ವಗಳನ್ನೊಳಗೊಂಡಿದೆ. ಲಾರ್ವದಿಂದ ಚಿಕ್ಕ ಜೇನುಹಳುವಾಗಿ ಮಾರ್ಪಾಡು ಹೊಂದಲು ಮತ್ತು ದೇಹದ ಬೆಳವಣಿಗೆ ಹಾಗು ಜೇನು ನೊಣದ ಮೇಣದ ಗ್ರಂಥಿಯ ಬೆಳವಣಿಗೆಗೂ ಸಹ ಪರಾಗ ಅತ್ಯವಶ್ಯವಾಗಿದೆ. ಪ್ರೋಟಿನ್‍ನಿಂದ ಕೆಲಸಗಾರ ನೊಣಗಳು ರಾಜಶಾಹಿ ರಸವನ್ನು ಉತ್ಪಾದಿಸಿ ರಾಣಿನೊಣಕ್ಕೆ ಉಣಬಡಿಸುತ್ತದೆ. ಮಕರಂದದಲ್ಲಿರುವ ಶರ್ಕರಪಿಷ್ಟ ಜೇನು ನೊಣಗಳ ದಿನನಿತ್ಯದ ಕೆಲಸ ಕಾರ್ಯಗಳಿಗೆ ಚೈತನ್ಯ ಕೊಡುತ್ತದೆ.

ಪ್ರಕೃತಿಯಲ್ಲಿ ದೊರೆಯುವ ಮಕರಂದ ಮತ್ತು ಪರಾಗವನ್ನು ಅವಲಂಬಿಸಿ ಹುಟ್ಟಿನ ಬೆಳವಣಿಗೆ ಮತ್ತು ಅಭಿವೃದ್ಧಿಯಾಗುತ್ತದೆ. ಋುತುಮಾನ ಬದಲಾವಣೆಯಕ್ಕನುಗುಣವಾಗಿ ಆಹಾರ ಕೊರತೆಯ ಕಾಲ, ಬೆಳವಣಿಗೆಯ ಕಾಲ ಮತ್ತು ಜೇನು ಸಂಗ್ರಹಣೆಯ ಕಾಲವೆಂದು ವಿಂಗಡಿಸಲಾಗಿದೆ.

ವಿವಿಧ ಕಾಲಗಳಲ್ಲಿ ಜೇನು ಗೂಡಿನ ನಿರ್ವಹಣೆ
1 ಕೊರತೆಯ ಕಾಲ
ಎ) ಈ ಸಮಯದಲ್ಲಿ ಆಹಾರದ ಕೊರತೆಯಿರುತ್ತದೆ.
ಏ) ಕೃತಕ ಆಹಾರವಾಗಿ ಸಕ್ಕರೆ ದ್ರಾವಣವನ್ನು ಕೊಡಬೇಕು.
ಬ) ಪೆಟ್ಟಿಗೆಯ ತಳಮಣೆಯನ್ನು ಶುಚಿಯಾಗಿಡುವುದರ ಮೂಲಕ ಮೇಣದ ಪತಂಗದ
ಉಪಟಳವನ್ನು ನಿವಾರಿಸಬಹುದು.
ಭ) ಶುಧ್ದ ನೀರು ಮತ್ತು ನೆರಳನ್ನು ಒದಗಿಸಬೇಕು.

2 ಗೂಡಿನ ಅಭಿವೃದ್ಧಿ ಕಾಲ
ಎ) ಯಥೇಚ್ಛವಾಗಿ ದೊರಕುವ ಆಹಾರದಿಂದ ಹುಟ್ಟಿನ ಬೆಳವಣಿಗೆಯಾಗುತ್ತದೆ.
ಏ) ಕೃತಕ ಎರಿಗಳನ್ನು ಕಟ್ಟಿದ ಅಗಲವಾದ ಚೌಕಟ್ಟುಗಳನ್ನು ಸಂಸಾರ ಕೋಣೆಗೆ ನೀಡಿ ಗೂಡಿನ ಅಭಿವೃದ್ಧಿಗೆ ಅನುಕೂಲ ಮಾಡಬೇಕು.
ಬ) ಅಶಕ್ತ ಕುಡಿಗಳನ್ನು ಒಂದುಗೂಡಿಸಿ ಬಲಿಷ್ಟ ಕುಡಿಯಾಗಿಸಬೇಕು.
ಭ) ಕುಡಿ ಹಾರಿಸುವುದನ್ನು (ಸಮುದಾಯಗೊಳ್ಳುವುದು) ನಿಯಂತ್ರಿಸಬೇಕು.

3 ಜೇನು ಹರಿಯುವ ಕಾಲ
ಎ) ಕೃತಕ ಎರಿಗಳನ್ನು ಅಳವಡಿಸಿದ ಚೌಕಟ್ಟನ್ನು ಜೇನು ಕೋಣೆಗೆ ಒದಗಿಸಬೇಕು
ಏ) ಜೇನು ಕೋಣೆಯ ಚೌಕಟ್ಟಿನಲ್ಲಿ ಜೇನು ಸಂಗ್ರಹಿಸಿ ಮೊಹರು ಮಾಡಿದ ಎರಿಗಳಿಂದ ಜೇನು
ತೆಗೆಯಬೇಕು.

4 ಜೇನು ಕೊಯ್ಲಿನ ನಂತರ ಅನುಸರಿಸಬೇಕಾದ ಕ್ರಮಗಳು
ಎ) ಜೇನು ತೆಗೆದ ನಂತರ ಜೇನು ಕೋಣೆಯಲ್ಲಿರುವ ಚೌಕಟ್ಟುಗಳನ್ನು ತೆಗೆದಿಡುವುದರಿಂದ
ಮೇಣದ ಪತಂಗ ಉಪಟಳ ಕಡಿಮೆಯಾಗುವುದು.
ಏ) ಸಂಸಾರ ಕೋಣೆಯಲ್ಲಿರುವ ಖಾಲಿ ಚೌಕಟ್ಟುಗಳನ್ನು ತೆಗೆಯಬೇಕು.
ಬ) ಅವಶ್ಯಕತೆಯಿದ್ದಲ್ಲಿ ಕೃತಕ ಹಲಗೆಯನ್ನು ಉಪಯೋಗಿಬೇಕು

5 ಹಳೆಯ ಎರಿಗಳನ್ನು ಬದಲಾಯಿಸುವುದು
ಹಳೆಯ ಎರಿಗಳು ಕಪ್ಪಾಗಿ ಮೇಣದ ಪತಂಗಗಳು ಸೇರಿಕೊಳ್ಳುತ್ತದೆ. ಆಗಿಂದಾಗೆ ಕಪ್ಪಾದ ಎರಿಗಳನ್ನು ಬದಲಾಯಿಸುತ್ತಿರಬೇಕು.

ಕೀಟ ಮತ್ತು ರೋಗಬಾದೆಗಳು
ಕೀಟ ಪರಿಹಾರ
ಇರುವೆ ಆಧಾರ ಸ್ತಂಭದ ಕಾಲುಗಳನ್ನು ನೀರು ತುಂಬಿದ ಬಟ್ಟಲಿನಲ್ಲಿಡಬೇಕು. ಆಧಾರಸ್ತಂಭಕ್ಕೆ ನೆಲಮಟ್ಟದಿಂದ 6 ಅಂಗುಲ ಎತ್ತರದಲ್ಲಿ ಗ್ರೀಸನ್ನು ಸವರಬೇಕು
ಕಣಜ ಕಣಜ ನಿರೋಧಕ ಬಲೆಯನ್ನು ಉಪಯೋಗಿಸಬೇಕು ಮತ್ತು ಕಣಜದ ಗೂಡನ್ನು ಕಂಡು ಹಿಡಿದು ಸುಟ್ಟುಹಾಕಬೇಕು. ಡೈಕ್ಲೋರೊವಾಸ್‍ನಿಂದ ಕಣಜದ ಗೂಡಿಗೆ ಹೊಗೆಯಾಡಿಸಬೇಕು
ಮೇಣದ ಪತಂಗ ತಳಮಣೆಯನ್ನು ಹತ್ತು ದಿನಗಳಿಗೊಮ್ಮೆ ಶುಚಿಗೊಳಿಸಿ ನಿಂಬೆ ಮತ್ತು ಗಂಧಕದ ಪುಡಿಯ ಅಂಟನ್ನು ಸವರುವುದು ಅಥವಾ 2 ಮಿಲಿ/ಲೀ ಬಿ.ಟಿ. ದ್ರಾವಣದಿಂದ ಶುದ್ಧೀಕರಿಸಬೇಕು.
ನುಸಿ 8-10 ದಿನಗಳಿಗೊಮ್ಮೆ ತಳಕೋಣೆಯನ್ನು ಶುಚಿಗೊಳಿಸಿ ವೈದ್ಯಕೀಯ ಗಂಧಕ ಅಥವಾ ಫಾರ್ಮಲ್ಡಿಹೈಡ್ ದ್ರಾವಣದಲ್ಲಿ ಅದ್ದಿದ ಕಾಗದದ ಪಟ್ಟಿಗಳನ್ನಿಡಬೇಕು ಅಥವಾ ವಾಣಿಜ್ಯವಾಗಿ ದೊರಕುವ ನುಸಿ ನಿವಾರಕ ಪಟ್ಟಿಯನ್ನು ತಳಮಣೆಯಲ್ಲಿಡಬೇಕು.
ಪಕ್ಷಿಗಳು ಜೇನು ನೊಣ ಭಕ್ಷಕ ಕಿಂಗ್‍ಕ್ರೋ ಮತ್ತು ಇತರ ನೊಣ ಭಕ್ಷಕ ಪಕ್ಷಿಗಳನ್ನು ಬೆದರು ಗುಂಡು ಹಾರಿಸಿ ಓಡಿಸಬೆಕು.
ರೋಗ ಪರಿಹಾರ
ಅಮೇರಿಕದ ಫೌಲ್‍ಬ್ರೂಡ್ ಶೇಕಡ 1ರ ಟೆಟ್ರಾಸೈಕ್ಲೀನನ್ನು ಸಕ್ಕರೆ ದ್ರಾವಣದಲ್ಲಿ ಬೆರೆಸಿ 10 ದಿನಗಳ ಅಂತರದಲ್ಲಿ 2 ಬಾರಿ ಜೇನು ನೊಣಗಳಿಗೆ ಒದಗಿಸಬೇಕು.
ಐರೋಪ್ಯದ ಫೌಲ್‍ಬ್ರೂಡ್ ಶೇಕಡ 1 ಟೆಟ್ರಾಸೈಕ್ಲೀನನ್ನು ಸಕ್ಕರೆ ದ್ರಾವಣದಲ್ಲಿ ಬೆರೆಸಿ 7 ದಿನ ಅಂತರದಲ್ಲಿ ಎರಡು ಬಾರಿ ಜೇನು ನೊಣಗಳಿಗೆ ಒದಗಿಸಬೇಕು.
ಥೈಸ್ಯಾಕ್ ಬ್ರೂಡ್ ಜೇನು ಗೂಡಿನ ಶುಚಿತ್ವವನ್ನು ಕಾಪಾಡಬೇಕು. ತುಳಸಿ ರಸವನ್ನು ಬೆರೆಸಿದ ಸಕ್ಕರೆ ದ್ರಾವಣವನ್ನು ಗೂಡಿನಲ್ಲಿಡಬೇಕು. ಈ ರೋಗಕ್ಕೆ ಯಾವುದೇ ಪರಿಹಾರವಿಲ್ಲದ್ದರಿಂದ ರಾಣಿ ನೊಣವನ್ನು ಬದಲಾಯಿಸುವುದು ಉತ್ತಮ.

ಕೃಷಿ ಉತ್ಪಾದನೆಯಲ್ಲಿ ಜೇನು ನೊಣದ ಪಾತ್ರ
ಪ್ರಾಣಿಗಳು, ಅದರಲ್ಲೂ ಜೇನುನೊಣಗಳು ಪ್ರಪಂಚಾದ್ಯಂತ 1500 ಬೆಳೆಗಳ ಪರಾಗಸ್ಪರ್ಷ ಕ್ರಿಯೆಯಲ್ಲಿ ತೊಡಗಿರುತ್ತವೆ. ಇದರಿಂದ ಶೇಕಡ 15-30 ರಷ್ಟು ಜಾಸ್ತಿ ಇಳುವರಿ ದೊರಕಿದೆ. ಕ್ಯಾಲಿಫೋರ್ನಿಯಾದಲ್ಲಿ ಬಾದಾಮಿ ಫಲದ ಪರಾಗಸ್ಪರ್ಷ ಶೇ 100 ರಷ್ಟು ಜೇನು ನೊಣಗಳಿಂದಾಗುತ್ತದೆ ಮತ್ತು ಶೇಕಡ 90 ರಷ್ಟು ಪರಾಗಸ್ಪರ್ಷ ಕ್ರಿಯೆ ಸೇಬು, ಬಾಳೆ, ಬ್ಲೂಬೆರಿ, ಚೆರಿ ಹಾಗು ಸೂರ್ಯಕಾಂತಿಯಲ್ಲಿ ಕಂಡುಬಂದಿದೆ. ಹಗುರ ಪರಾಗ ಹೊಂದಿದ ಹುಲ್ಲಿನಂತ ಸಸ್ಯಗಳಲ್ಲಿ ಗಾಳಿಯಿಂದ ಪರಕೀಯ ಪರಾಗಸ್ಪರ್ಷವಾದರೆ ಅನೇಕ ಬೆಳೆಗಳು ಪರಾಗಸ್ಪರ್ಷಕ್ರಿಯೆಗಾಗಿ ಕೀಟ, ಪಕ್ಷಿ ಅಥವಾ ಬಾವಲಿಯನ್ನು ಅವಲಂಬಿಸಿವೆ.

ಪರಾಗ ಸ್ಪರ್ಷಕ್ರಿಯೆಗಾಗಿ ಜೇನು ನೊಣನಿರ್ವಹಣೆ
ಬೆಳೆಯ ಶೇ 10 ರಷ್ಟು ಹೂಗಳು ಬಿರಿದಾಗ ಜೇನು ಪೆಟ್ಟಿಗೆಗಳನ್ನು ಆ ಸ್ಥಳಕ್ಕೆ ಸ್ಥಳಾಂತರಿಸಬೇಕು. ಜೇನು ಗೂಡಿನ ಸ್ಥಳಾಂತರದ ಮುಖ್ಯ ಉದ್ಧೀಶ ಜೇನು ಸಂಗ್ರಹ ಮತ್ತು ಬೆಳೆಯ ಪರಾಗಸ್ಪರ್ಷ. ಬೆಳೆ ಅನುಸರಿಸಿ ಅಗತ್ಯವಿದ್ದಷ್ಟು ಜೇನುಪೆಟ್ಟಿಗೆಗಳನ್ನು ಇಡಬೆಕು.

ಪರಾಗಸ್ಪರ್ಷ ಕ್ರಿಯೆಯಲ್ಲಿ ಜೇನುನೊಣಗಳು
ಸಾಕಲ್ಪಡುವ ತಳಿಗಳು: ಐರೋಪಿಯ ಜೇನು ನೊಣ
ತುಡುವೆ ಜೇನು (ಪೆಟ್ಟಿಗೆ ಜೇನು)
ಕಾಡಿನ ಜೇನು ನೊಣಗಳು: ಹೆಜ್ಜೇನು ಕೋಲುಜೇನು
ಎಪಿಸ್ ಕುಟುಂಬಕ್ಕೆ ಸೇರದ ಕೀಟಗಳು; 1. ಎಲೆಕತ್ತರಿಸುವ ನೊಣಗಳು-ಮೆಗಾಚಿಲ್ಲಿಡೆ
2. ಕ್ಷೈಲೋಲ್‍ಕೊಪ-ಏಂಥೋಫೊರಿಡೆ
3. ದುಂಬಿ ನೊಣ, ನೆಲಿಪೋನ ಸ್ಪೀಸಿಸ್,ಮುಜೆಂಟಿ ತಳಿ-
ಎಪಿಡೆ.
4. ಹೇಲಿಕಕ್ಷಿಸ್, ನೊಮಿಯ ಹೇಲಿಕ್ಟಿಡೆ
5. ಪನುರ್‍ಜಿನಸ್, ಪೆರ್‍ಡಿಟ-ಎಂಡ್ರೆನಿಡೆ
6. ಹೆಸಾರಪಿಸ್, ಮೆಲಿಟ್ಟಾ-ನೆಲಿಟ್ಟಿಡೆ
7. ಕಲೆಕ್ಟಸ್, ಹೇಲಿಯಸ್-ಕಲೆಕ್ಟಿಡೆ.

1 ದೇಹದ ಆಕಾರ: ಪರಾಗ ಸಂಗ್ರಹಿಸುವ ಕೀಟಗಳ ದೇಹ ರೋಮಭರಿತವಾಗಿದ್ದು ಪರಾಗಸ್ಪರ್ಷ ನಡೆಸಲು ಶಲಕಾಗ್ರವನ್ನು ಮುಟ್ಟುವಂತಿರಬೇಕು.

2 ಸ್ಥಿರತೆ: ಮಕರಂದ ಮತ್ತು ಪರಾಗಕ್ಕೆ ಒಂದು ಹೂವಿಗೆ ಭೇಟಿಕೊಟ್ಟ ಕೀಟಗಳು ಅದೇ ಹೂವಿಗೆ ಪದೆ ಪದೇ ಭೇಟಿಕೊಟ್ಟು ಎಲ್ಲಾ ಮಕರಂದ ಮತ್ತು ಪರಾಗವನ್ನು ಸಂಗ್ರಹಿಸುವಂತಿರಬೇಕು.

3 ಹೂವಿನ ಭೇಟಿಸಮಯ: ಕೀಟಗಳು ಬೆಳಿಗ್ಗೆ 8 ಗಂಟೆಯಿಂದ ಸಾಯಂಕಾಲ 8 ರವರೆಗೆ ಹೂವಿಗೆ ಭೇಟಿ ನೀಡುವಂತಿರಬೇಕು.

4 ಜೇನು ನೊಣಗಳ ಸಾಂದ್ರತೆ: ಜೇನು ಗೂಡಿನಲ್ಲಿರುವ ನೊಣಗಳ ಸಂಖ್ಯೆ 10,000 – 20,000 ಇದ್ದರೆ ಹೆಚ್ಚಿನ ಸಂಖ್ಯೆಯಲ್ಲಿ ಹೂಗಳಿಗೆ ಬೇಟಿ ನೀಡಿ ಪರಾಗ ಸ್ಪರ್ಷ ಕ್ರಿಯೆ ಜರುಗುತ್ತದೆ.

ಪರಾಗಸ್ಪರ್ಷ ಕ್ರಿಯೆ, ಶೇಕಡವಾರು ಇಳುವರಿ ಮತ್ತು ಹೆಕ್ಟೇರಿಗೆ ಬೇಕಾದ ಜೇನುಗೂಡು.

ಕ್ರಮ ಸಂಖ್ಯೆ ಬೆಳೆ ಶೇ. ಅಧಿಕ ಇಳುವರಿ ಜೇನು ಗೂಡಿನ ಸಂಖ್ಯೆ/ಹೆ
1 ಎಲೆಕೋಸು 135 3
2 ಕ್ಯಾರೆಟ್ 345 4
3 ಈರುಳ್ಳಿ 110 4
4 ಮೂಲಂಗಿ 100 -125 4
5 ಬದನೆ 60 3
6 ಕುಂಬಳ ಜಾತಿಯ ಬೆಳೆಗಳು 360 3
7 ಸೇಬು 275 8
8 ದ್ರಾಕ್ಷಿ 23-54 3
9 ಸೀಬೆ 12-70 3
10 ಮೂಸಂಬಿ 150 3
11 ಕಾಫಿ 17-39 3
12 ಸಾಸಿವೆ 150 3
13 ಸೂರ್ಯಕಾಂತಿ 45-50 3
14 ಟರ್ನಿಪ್ 100-125 3
15 ಕರ್ಬೂಜ 560 3
16 ಸ್ಕ್ಯಾಶ್ 771 3
17 ಮರಸೇಬು 240 3
18 ಪ್ಲಮ್ 250 3
19 ಲಿಚ್ಚಿ 455 3
20 ಕಿತ್ತಳೆ 7-11 3
21 ನಿಂಬೆ 500 3
22 ಕುಸುಬೆ 114 3
23 ಏಲಕ್ಕಿ 25 5

ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.

About ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments