ಸಕ್ಕುಲೆಂಟು

ಸಕ್ಕುಲೆಂಟು

ಅಲಂಕಾರಿಕ ಗಿಡಗಳಲ್ಲಿ, ಸಕ್ಕುಲೆಂಟ್‍ಗಳು ತಮ್ಮ ವಿಭಿನ್ನ ಮತ್ತು ಆಕರ್ಷಕ ಗುಣಗಳಿಂದ ಜನರಿಂದ ಮೆಚ್ಚುಗೆ ಪಡೆದಿದೆ ಮತ್ತು ಅಲಂಕಾರಿಕ ಗಿಡಗಳ ಪರಿಣತರ ವಿಶೇಷ ಗಮನ ಸೆಳೆದಿದೆ. ಸಕ್ಕುಲೆಂಟ್‍ಗಳು ಸುಮಾರು 50 ಕುಟುಂಬಗಳಲ್ಲಿ ಹಂಚಿಹೋಗಿದೆ ಹಾಗು 11 ತಳಿಗಳು ಕ್ಯಾಕ್ಟೇಸಿ ಕುಟುಂಬದಲ್ಲಿ ಒಳಗೊಂಡಿದೆ. ಆದ್ದರಿಂದ ಎಲ್ಲಾ ಪಾಪಸುಕಳ್ಳಿ ಗಿಡಗಳು ಸಕ್ಕುಲೆಂಟ್‍ಗಳಾಗಿವೆ, ಆದರೆ ಎಲ್ಲಾ ಸಕ್ಕುಲೆಂಟ್ ಗಿಡಗಳು ಪಾಪಸುಕಳ್ಳಿಗಳಲ್ಲ. ಗಡುಸಾಗಿರುವ ಎಡೆನಿಯಮ್ಸ್ ಎಲೊಸ್, ಅಗಾವೆಸ್, ಬ್ಯೂಕಾರ್ಡಿಯಸ್, ಸೆರೋಪ್‍ಜಿಯನ್ಸ್, ಸಡಮ್ಸ್, ಕ್ರುಸುಲಾಸ್, ಕಪ್‍ಹರ್ಬಿಯಾಸ್, ಫ್ಯುರೆರಿಯಾಸ್, ಹಾವರ್ಡಿಯಾಸ್, ಕಲಾಂಚೋಸ್, ಪೇಚಿಪೋಡಿಯಮ್ಸ್, ಯಕ್ಕಾಸ್ ಮುಂತಾದವುಗಳನ್ನು ರಾಕ್‍ಗಾರ್ಡ್‍ನಲ್ಲಿ ಬಳಸುತ್ತಾರೆ. ಮರುಭೂಮಿಯ ಗಿಡಗಳಾಗಿದ್ದರೂ ಸಕ್ಕುಲೆಂಟ್‍ಗಳನ್ನು ಇತರ ಮರಭೂಮಿಗಿಡಗಳಿಂದ ಗುರುತಿಸುವುದು ಕಷ್ಟಕರ. ಸಕ್ಕುಲೆಂಟ್‍ಗಳ ಕ್ಯಾಕ್ಟೇಸಿ ಕುಟುಂಬವಲ್ಲದೆ ಅಗಾವೇಸಿ, ಕ್ರುಸುಲೇಸಿ, ಲಿಲಿಯೇಸಿ ಮತ್ತು ಇನ್ನಿತರ ಕುಟುಂಬಗಳಿಗೆ ಸೇರಿದೆ.
ಸಸಿಗಳಿಗೆ ಸಾಕಷ್ಟು ಗಾಳಿ ಮತ್ತು ಸೂರ್ಯ ಪ್ರಕಾಶ ಬೇಕು. ಕೆಲವು ನೆರಳು ಇಲ್ಲವೆ ಅರೆನೆರಳನ್ನು ಬಯಸಿದರೆ, ಕೆಲವು ನೇರ ಉರಿಬಿಸಿಲನ್ನು ತಾಳಲಾರವು. ಗಿಡಗಳ ಬೆಳವಣಿಗೆಗೆ ಮರುಭೂಮಿಯ ವಾತಾವರಣವಿರಬೇಕು. ಆದ್ದರಿಂದ ಬೆಳೆಯುವ ಪ್ರದೇಶದಲ್ಲಿ ನೆರಳು/ಮಳೆ/ಬಿರುಗಾಳಿ/ಚಂಡ ಮಾರುತದಿಂದ ರಕ್ಷಿಸಲು ಮಾರ್ಪಾಡುಗಳನ್ನು ಮಾಡಬೇಕು. ಪ್ಲಾಸ್ಟಿಕ್/ಗಾಜಿನ ಮೇಲ್ಛಾವಣಿ ಹೊಂದಿದ್ದು ಸುತ್ತಲೂ ತಂತಿಯ ಬಲೆ ಹೊಂದಿದ ಕಟ್ಟಡವನ್ನು ಉತ್ತರ ದಕ್ಷಿಣಾಭಿಮುಖವಾಗಿ ನಿರ್ಮಿಸಬೇಕು. ಎತ್ತರದ ಕಟ್ಟೆ ಅಥವಾ ಗ್ಯಾಲರಿಗಳನ್ನು ನಿರ್ಮಿಸಿ ಕುಂಡಗಳನ್ನು ಇಡಬೇಕು. ಕಟ್ಟಡ ದಕ್ಷಿಣಕ್ಕೆ ತೆರೆದಿದ್ದು ಪಶ್ಚಿಮದ ಸೂರ್ಯಪ್ರಕಾಶ ಬೀಳದಂತೆ ವ್ಯವಸ್ಥೆ ಮಾಡಬೇಕು.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಸಸ್ಯಾಭಿವೃದ್ದಿ
ಬೀಜದ ಮೂಲಕ: ಹೆಚ್ಚಿನ ಸಕ್ಕುಲೆಂಟ್‍ಗಳು ಹೂ ಮತ್ತು ಬೀಜವನ್ನು ಉತ್ಪತ್ತಿಮಾಡುತ್ತವೆ. ದಪ್ಪ ಮರಳು (70 ಭಾಗ), ಎಲೆಗೊಬ್ಬರ (20 ಭಾಗ), ಮಸಿ (5 ಭಾಗ) ಮತ್ತು ಮೂಳೆಗೊಬ್ಬರ (5 ಭಾಗ) ಮಿಶ್ರಣದಲ್ಲಿ ಬಿತ್ತನೆ ಮಾಡಬೇಕು. ನೀರು ಬಸಿದು ಹೋಗಲು ಬೀಜದ ಟ್ರೇಯ ತಳಭಾಗದಲ್ಲಿ 1-4 ರಂದ್ರಗಳು ಇರಬೇಕು. ಟ್ರೇಯ ತಳಭಾಗದ 1/3 ಭಾಗವನ್ನು ಕಲ್ಲು ಮತ್ತು ಇಟ್ಟಿಗೆ ಚೂರುಗಳಿಂದ ತುಂಬಿಸಬೇಕು. ಬಿತ್ತನೆಗಿಂತ ಮೊದಲು ಬೀಜವನ್ನು 3-12 ಗಂಟೆ ನೀರಿನಲ್ಲಿ ನೆನಸಬೇಕು. ಸ್ವಲ್ಪ ಒಣಗಿದ ನಂತರ ಬೀಜವನ್ನು ಸಮಾನವಾಗಿ ಕಾಂಪೋಸ್ಟು ಗೊಬ್ಬರದ ಮೇಲೆ ಹರಡಬೇಕು. ಅತೀ ಚಿಕ್ಕ ಬೀಜಗಳಾಗಿದ್ದರೆ ಮರಳಿನೊಡನೆ ಮಿಶ್ರಮಾಡಿ ಹರಡಬೇಕು. ಬಿತ್ತಿದ ಟ್ರೆಯನ್ನು ನೀರು ತುಂಬಿದ ಇನ್ನೊಂದು ಟ್ರೆಯೊಳಗೆ ಇಡಬೇಕು. ಇದರಿಂದ ತಳದ ರಂಧ್ರದ ಮೂಲಕ ಮಣ್ಣಿನ ಮಿಶ್ರಣವು ನೀರನ್ನು ಹೀರಿಕೊಳ್ಳುತ್ತದೆ. ಮೇಲಿನ ಮಣ್ಣಿಗೆ ತೇವಾಂಶ ಮುಟ್ಟಿದಾಗ ಬೀಜದ ಟ್ರೇಯನ್ನು ಹೊರತೆಗೆದು ಬೆಚ್ಚನೆಯ ಸ್ಥಳದಲ್ಲಿಡಬೇಕು. ಇದರಿಂದ ಹೆಚ್ಚಿನ ನೀರು ಬಸಿದು ಹೋಗುತ್ತದೆ. ಟ್ರೇಯನ್ನು ಒಂದು ಗಾಜಿನ ಹಾಳೆಯಿಂದ ಮುಚ್ಚಿಟ್ಟು ನೀರು ಹಾಕುವಾಗ ಮಾತ್ರ ತೆಗೆಯಬೇಕು. ಹೆಚ್ಚಿನ ಬೀಜಗಳು 8-10 ದಿನದಲ್ಲಿ ಮೊಳಕೆಯೊಡೆಯುತ್ತವೆ. ಕೆಲವು ಬೀಜಗಳು ಒಂದು ತಿಂಗಳು, ಇನ್ನೂ ಕೆಲವು ಮೊಳಕೆಯೊಡೆಯಲು ವರ್ಷಗಳೇ ಬೇಕು. ಬೆಳವಣಿಗೆಯ ಗತಿಯನ್ನು ಅವಲಂಬಿಸಿ ಸಸಿಗಳನ್ನು 4-6 ತಿಂಗಳು ಮುಚ್ಚಿಡಬೇಕು. ಸಸಿ ಬೆಳೆದು ಸಾಕಷ್ಟು ಗಟ್ಟಿಯಾದ ನಂತರ ಗಾಜಿನ ಹಾಳೆಯನ್ನು ತೆಗೆದು ಸಸಿಗಳನ್ನು ಉತ್ತಮ ಕಾಂಪೋಷ್ಟು ತುಂಬಿದ ಕುಂಡಗಳಿಗೆ ಸ್ಥಳಾಂತರಿಸಿ ಒಂದೆರಡು ವರ್ಷ ಅಲ್ಲೇ ಬೆಳೆಯುವಂತೆ ನೋಡಿಕೊಳ್ಳಬೆಕು.

ನಿರ್ಲೀಂಗೀಯ ಸಸ್ಯಾಭಿವೃದ್ಧಿ
ಸಾಧಾರಣವಾಗಿ ಎಲ್ಲಾ ಸಕ್ಕುಲೆಂಟ್‍ಗಳನ್ನು ಆಫ್‍ಶೂಟ್, ಕಂದು, ಕಡ್ಡಿ ಅಥವಾ ಗ್ರಾಫ್ಟಿಂಗ್ ವಿಧಾನದ ಮೂಲಕ ಸಸ್ಯಾಭಿವೃದ್ಧಿ ಮಡಬಹುದು. ಇದರಿಂದ ತಾಯಿಗಿಡದ ಎಲ್ಲಾ ಗುಣಗಳನ್ನು ಹೊಂದಿದ ಉತ್ತಮ ಗಾತ್ರದ ಸಸಿಗಳನ್ನು ಪಡೆಯಬಹುದು.
ಕಡ್ಡಿಗಳ ಮೂಲಕ
ಕಾಂಡ: ಬಲಿತ ಕೊಂಬೆಗಳನ್ನು ಅಡ್ಡಲಾಗಿ ಕತ್ತರಿಸಿ ಬೇರ್ಪಡಿಸಬೇಕು. ಕತ್ತರಿಸಿದ ಭಾಗವನ್ನು ಒಣಗಲು ಬಿಡುವುದರಿಂದ ಸ್ವಲ್ಪಾಂಶ ನೀರನ್ನು ಕಳೆದುಕೊಳ್ಳುತ್ತದೆ. ಕಟ್ಟಿಂಗ್ಸ್‍ನಿಂದ ಸಸ್ಯ ಉತ್ಪಾದಿಸಲು ಫೆಬ್ರವರಿ-ಮಾರ್ಚ್ ಸೂಕ್ತ ಸಮಯವಾಗಿದೆ.
ಎಲೆ: ಪಾಪಸುಕಳ್ಳಿ ಒಂದನ್ನು ಬಿಟ್ಟು ಇತರ ಸಕ್ಕುಲೆಂಟ್‍ಗಳನ್ನು ಎಲೆಗಳ ಮುಖಾಂತರ ಸಸ್ಯೋತ್ಪಾದನೆ ಮಾಡಬಹುದು. ಈ ವಿಧಾನ ಪಾಪಸುಕಳ್ಳಿ ಮತ್ತು ಎಲೆಗಳಿಲ್ಲದ ಸಕ್ಕುಲೆಂಟ್‍ಗಳಲ್ಲಿ ಸಾಧ್ಯವಿಲ್ಲ. ಕಲೋಂಚೊ ಸೆಡಂ, ಗೆಸ್ಸೇರಿಯದಂತ ಸಕ್ಕುಲೆಂಟ್‍ಗಳಲ್ಲಿ ಎಲೆಯ ಮೂಲಕ ಸಸ್ಯಾಭಿವೃದ್ದಿಯಾಗುತ್ತದೆ.
ಎಲೆ ಮೊಗ್ಗು: ಎಲೆಯ ಅಂಚಿನಲ್ಲಿರುವ ಕಣ್ಣುಗಳು ಸುಪ್ತಾವಸ್ಥೆಯಿಂದ ಹೊರಬರುವಂತೆ ಮಾಡಿ ಸಸ್ಯಾಭಿವೃದ್ಧಿ ಮಾಡಲಾಗುವುದು. ಸೆಡಂ, ಗೆಸ್ಸೇರಿಯ, ಹಾವರ್ಥಿಯಾ, ಕಲೋಂಚೊ, ಪೆರಿಸ್‍ರೆಯೊಪ್ಪಿಸ್, ಯುಫೋರ್ಬಿಯ, ಡೆಕಾರಿ ಮುಂತಾದ ವರ್ಗ ತಳಿಗಳನ್ನು ಎಲೆಯ ಅಂಚಿನಲ್ಲಿರುವ ಕಣ್ಣುಗಳ ಮುಖಾಂತರ ಅಭಿವೃದ್ಧಿಪಡಿಸಲಾಗುವುದು. ಕಣ್ಣುಗಳಿಗೆ ಹಾನಿಯಾಗದಂತೆ ಎಲೆಯನ್ನು ಬಿಡಿಸಿ ಕಾಂಪೋಷ್ಟು ಗೊಬ್ಬರದ ಮೇಲೆ ಇಡಬೇಕು. ಸಸ್ಯಾಭಿವೃದ್ದಿಗೆ ಹೆಚ್ಚು ಸಮಯ ತಗಲುತ್ತದೆಯಾದರೂ ಒಂದು ಎಲೆಯಿಂದ ಅನೇಕ ಗಿಡಗಳನ್ನು ಪಡೆಯಬಹುದು.
ಆಫ್‍ಶೂಟ್: ಗಿಡದ ಬುಡದಿಂದ ಆಫ್‍ಶೂಟ್‍ಗಳು ಬೆಳೆಯುತ್ತವೆ. ಸಾಕಷ್ಟು ಬೆಳೆದನಂತರ ಇವುಗಳನ್ನು ಬೆರ್ಪಡಿಸಿ ಹೊಸ ಸಸಿಯಾಗಿ ಬೆಳೆಸಬಹುದು. ಕೆಲವು ತಳಿಗಳ ಆಫ್‍ಶೂಟ್‍ಗಳು ತಾಯಿ ಗಿಡದಲ್ಲಿರುವಾಗಲೇ ಬೇರುಗಳನ್ನು ಹೊಂದಿರುತ್ತದೆ. ಹರಿತವಾದ ಚಾಕುವಿನಿಂದ ತಾಯಿಗಿಡಕ್ಕೆ ಹಾನಿಯಾಗದಂತೆ ಬೇರು ಸಮೇತ ಕತ್ತರಿಸಿ ತೆಗೆದು ಕುಂಡದಲ್ಲಿ ಬೆಳೆಸಬೇಕು.

ಬೇಸಾಯ ಕ್ರಮ
ರಂಧ್ರಗಳಿರುವ ಕುಂಡಗಳನ್ನು ಬಳಸುವುದರಿಂದ ಸಾಕಷ್ಟು ಗಾಳಿ ಮತ್ತು ನೀರಿನ ಸಂಚಾರ ಸರಾಗವಾಗಿರುತ್ತದೆ ಮತ್ತು ಕಾಂಪೋಸ್ಟು ಗೊಬ್ಬರ ಬೇಗನೆ ಒಣಗುವುದರಿಂದ ಬೇರಿನ ವಿಸ್ತಾರ ಜಾಸ್ತಿಯಾಗುತ್ತದೆ ಹಾಗು ಬೇರು ಕೊಳೆರೋಗ ಕಡಿಮೆಯಗುತ್ತದೆ. ಕುಂಡ ಗಿಡವನ್ನು ಹಿಡಿಸುವಸ್ಟಿದ್ದರೆ ಸಾಕು. ಕುಂಡ ದೊಡ್ಡದಾಗಿದ್ದರೆ ಕಾಂಪೋಷ್ಟಿನಲ್ಲಿ ನೀರಿನ ಅಂಶ ಜಾಸ್ತಿಯಾಗಿ ಬೇರಿಗೆ ಹಾನಿಯಾಗುತ್ತದೆ. ಸಕ್ಕುಲೆಂಟ್‍ಗಳನ್ನು ವಿವಿಧ ಮಾಧ್ಯಮದಲ್ಲಿ ಬೆಳೆಸುವುದು ಸೂಕ್ತ. ಶೇಕಡ 60 ಮರಳು, 20 ಜೇಡಿಮಣ್ಣು, 20 ಗೋಡು ಮಣ್ಣು, 0.5 ಸಾವಯವ ಇಂಗಾಲದ ಮಿಶ್ರಣ ಕುಂಡ ತುಂಬಿಸಲು ಬಳಸಬೇಕು. ವಿಶೇಷವಾಗಿ ಸಕ್ಕುಲೆಂಟ್‍ಗಳು ನೀರು ಬಸಿದು ಹೋಗುವ ಸಾವಯವ ವಸ್ತುಗಳಿಂದ ತುಂಬಿದ ರಂದ್ರಗಳಿರುವ ಕುಂಡಗಳನ್ನು ಬಯಸುತ್ತವೆ. ಎನ್.ಪಿ.ಕೆಯ ಅವಶ್ಯಕತೆ ಕಡಿಮೆ ಇದ್ದರೂ ಬೆಳವಣಿಗೆಗೆ 1:2:2 ಪ್ರಮಾಣದ ಎನ್.ಪಿ.ಕೆ ಬೇಕಾಗುತ್ತದೆ. ನಿಧಾನವಾಗಿ ಪೋಷಕಾಂಶ ಒದಗಿಸುವ ಸಾವಯವ ಗೊಬ್ಬರಗಳಿಂದ ಹೆಚ್ಚಿನ ಪ್ರಯೋಜನವಾಗುತ್ತದೆ.

ಸಸಿನೆಡುವುದು
ನಾಟಿಗಿಂತ ಮೊದಲೇ ಸಸಿಗಳ ಬೆರುಗಳನ್ನು ಪರೀಕ್ಷಿಸಬೇಕು. ಹಾನಿಯಾಗಿದ್ದರೆ ಅಂತ ಬೇರುಗಳನ್ನು ಕತ್ತರಿಸಿ ಉಪಚಾರ ಮಾಡಬೇಕು. ಶುಭ್ರವಾದ ಕುಂಡಗಳ ರಂಧ್ರಗಳನ್ನು ಹಂಚಿನ ಚೂರಿನಿಂದ ಮುಚ್ಚಬೇಕು. ಕುಂಡದ ಅರ್ಧ ಇಂಚಿನಷ್ಟು ಇಟ್ಟಿಗೆ ಚೂರು/ಚಿಕ್ಕ ಕಲ್ಲು/ದಪ್ಪ ಮರಳಿನಿಂದ ತುಂಬಬೇಕು ಇದರಿಂದ ನೀರು ಸುಲಭವಾಗಿ ಬಸಿದು ಹೋಗುತ್ತದೆ ಹಾಗು ಮಣ್ಣು ರಂಧ್ರಗಳ ಮೂಲಕ ಒಸರುವುದನ್ನು ತಪ್ಪಿಸುತ್ತದೆ. 2-3 ವರ್ಷಗಳ ನಂತರ ಗಿಡಗಳ ಕುಂಡ ಬದಲಾಯಿಸುವುದರಿಂದ ಬೇರು ಮತ್ತು ಗಿಡದ ಬೇಳವಣಿಗೆ ಉತ್ತವiವಾಗಿರುತ್ತದೆ. ಗಿಡ ಹುಲುಸಾಗಿ ಮತ್ತು ಆರೋಗ್ಯಭರಿತವಾಗಿದ್ದರೆ ಹಾಗೆಯೇ ಬಿಡಬಹುದು. ಕುಂಡ ಬದಲಾವಣೆಗೆ ಒಣಗಿದ ಕಾಂಪೋಷ್ಟನ್ನು ಬಳಸಬೇಕು ಮತ್ತು ಕೆಲವು ದಿನ ಕುಂಡವನ್ನು ನೆರಳಿನಲ್ಲಿಡಬೇಕು.

ನೀರಾವರಿ
ಬೇಸಿಗೆಯಲ್ಲಿ ವಾರದಲ್ಲಿ ಎರಡುಬಾರಿ, ಮಳೆಗಾಲದಲ್ಲಿ ವಾರಕ್ಕೊಮ್ಮೆ ಮತ್ತು ಚಳಿಗಾಲದಲ್ಲಿ 15 ದಿನಗಳಿಗೊಮ್ಮೆ ಗಿಡಗಳಿಗೆ ನೀರೊದಗಿಸಬೇಕು. ಸೂರ್ಯ ಉದಯಿಸುವ ಮೊದಲು ನೀರು ಹಾಕಬೇಕು. ಬಸಿಲಿನಲ್ಲಿ ನೀರು ಹಾಕುವುದರಿಂದ ಕೋಶ ಬಿರಿದು, ಸುಟ್ಟ ಕಲೆಗಳು ಗೋಚರಿಸುತ್ತವೆ.

ರೋಗ
ಸಾಮಾನ್ಯವಾಗಿ ಸಕ್ಕುಲೆಂಟ್‍ಗಳು ರೋಗ ಬಾಧೆಗೆ ಒಳಗಾಗುವುದು ಕಡಿಮೆ. ಶಿಲೀಂದ್ರ ಮತ್ತು ಬ್ಯಾಕ್ಟೀರಿಯದಿಂದ ಹರಡುವ ರೋಗಕ್ಕೆ ತುತ್ತಾಗುತ್ತದೆ. ಸಾಮಾನ್ಯವಾಗಿ ಡ್ರೈರಾಟ್, ಬ್ಲ್ಯಾಕ್ ರಾಟ್, ಆರೆಂಜ್ ರಾಟ್, ಕೊಳೆಯುವಿಕೆ ಗಿಡಗಳನ್ನು ಬಾಧಿಸುವ ರೋಗಗಳು. ಶಿಲೀಂದ್ರಗಳಾದ ಫೈಟೊಪ್ತೋರ, ಫ್ಯುಸೇರಿಯಂ, ರೈಜೋಕ್ಟೋನಿಯ ಮತ್ತು ಕೆಲವು ಬ್ಯಾಕ್ಟಿರಿಯಗಳು ಈ ರೋಗಗಳಿಗೆ ಮೂಲಕಾರಣ. ಪ್ರಾಥಮಿಕ ಹಂತದಲ್ಲಿ ಪತ್ತೆಯಾದರೆ ನಿಯಂತ್ರಣ ಕ್ರಮವನ್ನು ಕೈಗೊಳ್ಳಬಹುದು. ಬೇರು ಹಾನಿಗೀಡಾದರೆ ಗಿಡವನ್ನು ಕಿತ್ತು ತೆಗೆದು ಹಾನಿಗೀಡಾದ ಬೇರು ಮತ್ತು ಇತರ ಭಾಗವನ್ನು ಕತ್ತರಿಸಿ ಶಿಲೀಂದ್ರ ನಾಶಕದಿಂದ ಉಪಚರಿಸಬೇಕು.

ಕೀಟ
ಹಿಟ್ಟಿನ ತಿಗಣೆ: ಎಲೆ, ಕಾಂಡ ಮತ್ತು ಬೇರಿನ ಭಾಗದಲ್ಲಿ ಹಾನಿ ಮಾಡುತ್ತದೆ. ಅತ್ಯಂತ ವೇಗವಾಗಿ ವಂಶಾಭಿವೃದ್ಧಿ ಹೊಂದಿ ಬೇರು ಹಾಗು ಎಳೆಯ ಕೊಂಬೆಯ ಎಲ್ಲಾ ಕಡೆ ಹರಡುತ್ತದೆ. ಹಾನಿಗೀಡಾದ ಭಾಗ ಕ್ರಮೇಣ ಸೊರಗುತ್ತದೆ. ಯಾವುದಾದರೂ ಸಂಪರ್ಕ ಕೀಟನಾಶಕದಿಂದ ಕೀಟನಿಯಂತ್ರಣ ಸಾಧ್ಯವಿದೆ.
ಹುರುಪೆ ಕೀಟ: ಇವು ಕಪ್ಪು ಕಂದು ಅಥವಾ ಹಸಿರು ಬಣ್ಣ ಹೊಂದಿದ್ದು, ಕಾಂಡ, ಕೊಂಬೆ, ಎಲೆಗಳಿಂದ ರಸಹೀರಿ ಗಿಡಕ್ಕೆ ಹಾನಿ ಮಾಡುತ್ತವೆ. ಶೇಕಡ 15ರ ಆಲ್ಕೋಹಾಲಿನೊಂದಿಗೆ ಮಿಶ್ರಣ ಮಾಡಿದ ಹರಡುವ ಗುಣ ಹೊಂದಿದ ನಿಕೊಟೈನ್ ಸವರುವುದರಿಂದ ಕೀಟದ ಹತೋಟಿ ಸಾಧ್ಯವಿದೆ.
ಜೇಡ ನುಸಿ: ಬಿಸಿಯ ಒಣ ವಾತಾವರಣ ಈ ಕೀಟದ ಬೆಳವಣಿಗೆಗೆ ಮತ್ತು ಹರಡುವಿಕೆಗೆ ಸೂಕ್ತವಾಗಿದೆ. ಜೇಡನಾಶಕದ ಬಳಕೆಯಿಂದ ಕೀಟವನ್ನು ನಿಯಂತ್ರಿಸಬೇಕು.
ತಂತು ಕ್ರಿಮಿ: ತಂತು ಕ್ರಿಮಿಗಳ ಉಪಟಳದಿಂದ ಗಿಡವು ಪೋಷಕಾಂಶ ಅಥವಾ ನೀರಿನ ಕೊರತೆಯ ಲಕ್ಷಣ ತೋರುತ್ತದೆ. ಬೇರನ್ನು ಹಾನಿ ಮಾಡುತ್ತದೆ ಮತ್ತು ಬೇರಿನಲ್ಲಿ ಗಂಟು ಗೋಚರಿಸುತ್ತದೆ. ಈ ಗಂಟುಗಳು ಬೆಳೆದು ದೊಡ್ಡದಾಗಿ ಬೇರು ಕೊಳೆಯುತ್ತದೆ ಅಥವಾ ಒಣಗುತ್ತದೆ. ತಂತು ನಾಶಕಗಳ ಬಳಕೆಯಿಂದ ತಂತು ಹುಳವನ್ನು ನಿಯಂತ್ರಿಸಬಹುದು.

 

ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.

About ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments