ರಜನಿಗಂಧ
ರಜನಿಗಂಧ
ರಜನಿಗಂಧ (Polianthes tuberosa Fam:Agavaceae) ಉಷ್ಣವಲಯದ ಜನರಲ್ಲಿ ಮತ್ತು ಬೆಳಗಾರರಲ್ಲಿ ಇತ್ತೀಚೆಗೆ ಆಸಕ್ತಿ ಹುಟ್ಟಿಸಿದ ಹೂವಿನ ಬೆಳೆ. ವಾಣಿಜ್ಯವಾಗಿ ಇದನ್ನು ಹೆಚ್ಚಾಗಿ ಕರ್ನಾಟಕ, ಪ.ಬಂಗಾಳ, ತಮಿಳುನಾಡು, ಮಹಾರಾಷ್ಟ್ರದಲ್ಲಿ ಬೆಳೆಯುತ್ತಾರೆ. ಉತ್ತರ ಈಶಾನ್ಯದ ತ್ರಿಪುರದಲ್ಲೂ ಈ ಬೆಳೆಯು ಜನಪ್ರಿಯವಾಗುತ್ತಿದೆ. ತನ್ನ ಆಕರ್ಷಣೀಯ ಸೌಂದರ್ಯ ಮತ್ತು ಸುವಾಸನೆಯಿಂದ ಪುಷ್ಪಪ್ರಿಯರನ್ನು ಆಕರ್ಷಿಸುತ್ತದೆ. ಹೂಗುಚ್ಛ, ಹೂವಿನಹಾರ ತಯಾರಿಕೆ ಮತ್ತು ಸುಗಂಧ ಭರಿತ ಎಣ್ಣೆ ತಯಾರಿಕೆಯಲ್ಲಿ ಉತ್ತಮ ಭವಿಷ್ಯ ಹೊಂದಿದ ಹೂವಿನ ಬೆಳೆ.
ಸುಗಂಧರಾಜ ಹೂವಿನ ಕೊಯ್ಲು ಮಾಡಿದನಂತರ ಹೆಚ್ಚು ಸಮಯ ಕೆಡದಂತೆ ಉಳಿಯುವ ಗುಣಹೊಂದಿದೆ. ಇದರ ಈ ಗುಣದಿಂದಾಗಿಯೇ ದೂರದ ಊರುಗಳಿಗೆ ಯಾವುದೇ ತೊಂದರೆಯಿಲ್ಲದೆ ಸುಲಭವಾಗಿಯೇ ಸಾಗಿಸಬಹುದು. ಇದರಿಂದ ದೊರಕುವ ಕಚ್ಛಾ ಎಣ್ಣೆಯನ್ನು ಸುಗಂಧ ದ್ರವ್ಯ ತಯಾರಿಕೆಯಲ್ಲಿ ಬಳಸುತ್ತಾರೆ ಮತ್ತು ಅತ್ಯಂತ ದುಬಾರಿಯಾದ ನೈಸರ್ಗಿಕ ಹೂವಿನ ಎಣ್ಣೆಯಾಗಿದೆ. ಇದು ಜಿರಾಯಿಲ್, ಮಿಥಾಯಿಲ್ ಬೆನ್ಜಾಯೇಟ್, ಮಿಥಾಯಿಲ್ ಸ್ಯಾಲಿಸಿಲೇಟ್, ಯುಜಿನಾಲ್, ಮಿಥಾಯಿಲ್ ಏನ್ಥ್ರಾನಿಲೇಟ್ ಮುಂತಾದ ರಸಾಯನಿಕಗಳನ್ನು ಒಳಗೊಂಡಿದೆ.
ಮಣ್ಣು
ರಜನಿಗಂಧವನ್ನು ಕ್ಷಾರ ಮತ್ತು ಆಮ್ಲೀಯ ಗುಣ ಹೊಂದಿದ ವಿವಿಧರೀತಿಯ ಮಣ್ಣಿನಲ್ಲಿ ಬೆಳೆಯಬಹುದಾದರೂ, ಹೆಚ್ಚು ಸಾವಯವ ವಸ್ತುಗಳುಳ್ಳ 6,5 ರಿಂದ 7.5 ರಸಸಾರವುಳ್ಳ ಜೇಡಿ ಮಣ್ಣು ಮತ್ತು ಮರಳು ಮಿಶ್ರಿತ ಜೇಡಿ ಮಣ್ಣು ಉಪಯುಕ್ತವಾಗಿದೆ. ಮುಂಗಾರಿಗಿಂತ ಮೊದಲು ಗೆಡ್ಡೆಗಳನ್ನು ನೆಟ್ಟನಂತರ ಮಣ್ಣು ತೇವವಾಗಿರುವಂತೆ ನೋಡಿಕೊಳ್ಳಬೇಕು.
ಹವಾಗುಣ
ಉಷ್ಣವಲಯದ ಬೆಳೆಯಾದ ರಜನಿಗಂಧವನ್ನು ವರ್ಷದ ಎಲ್ಲಾ ಕಾಲದಲ್ಲಿ ಬೆಳೆಸಿ ಉತ್ತಮ ಇಳುವರಿಯನ್ನು ಪಡೆಯಬಹುದು. ಆದ್ರ್ರತೆಯ ಬೆಚ್ಚನೆಯ 18-320 ಸೆ. ಉಷ್ಣಾಂಶದಲ್ಲಿ ಉತ್ತಮ ಫಸಲು ದೊರೆಯುತ್ತದೆ. 26-300 ಸೆ.ನಲ್ಲಿ ಗಿಡದ ಬೆಳವಣಿಗೆ ಅನುಕೂಲವಾಗಿದ್ದು ಅಧಿಕ ಇಳುವರಿ ದೊರೆಯುತ್ತದೆಯೆಂದು ಸಂಶೋಧನೆಯಿಂದ ತಿಳಿದು ಬಂದಿದೆ. ನೆರಳಿನಲ್ಲಿ ಮತ್ತು ಚಳಿಗಾಲದಲ್ಲಿ ಹೂವಿನ ಇಳುವರಿ ಕಡಿಮೆಯಾಗುತ್ತದೆ.
ಸ್ಥಳ ಆಯ್ಕೆ
ಗುಣಮಟ್ಟದ ಅಧಿಕ ಇಳುವರಿಯನ್ನು ಪಡೆಯಲು ಯಾವಾಗಲೂ ಸೂರ್ಯ ರಶ್ಮಿ ಚೆನ್ನಾಗಿ ಬೀಳುವ ಸ್ಥಳವನ್ನು ಆಯ್ಕೆ ಮಾಡಬೇಕು. ನೆರಳಿದ್ದರೆ ಸಸಿ ಉದ್ದನೆ ಬೆಳೆದು ಇಳುವರಿ ಕಡಿಮೆಯಾಗುತ್ತದೆ. ಅಧಿಕ ತೇವಾಂಶದಿಂದ ಬೇರುಗಳಿಗೆ ಹಾನಿಯಾಗಿ ಗಿಡದ ಬೆಳವಣಿಗೆ ಕುಂಠಿತವಾಗುತ್ತದೆ.
ತಳಿಗಳು
ವಾಣಿಜ್ಯವಾಗಿ ಬೆಳೆಯುವ ಸುವಾಸನಾ ಭರಿತ ಒಂದು ಸುತ್ತಿನ ಪುಷ್ಪದಳ ಹೊಂದಿದ “ಮೆಕ್ಸಿಕನ್ ಸಿಂಗಲ್”, “ಕಲ್ಕತ್ತ ಸಿಂಗಲ್” ಶೃಂಗಾರ್, ಪ್ರಜ್ವಲ್ ಮುಂತಾದವು. ಎರಡು ಅಥವಾ ಮೂರು ಸುತ್ತಿನ ಪಷ್ಪ ದಳ ಹೊಂದಿದ ಸುವಾಸಿನಿ, ವೈಭವ್ ಮುಂತಾದವು. ಈ ತಳಿಯ ಹೂಗಳು ಪೂರ್ಣವಾಗಿ ಬಿರಿಯುವುದಿಲ್ಲ.
ಸಸ್ಯಾಭಿವೃದ್ಧಿ
ರಜನಿಗಂಧ ಸಸ್ಯಾಭಿವೃದ್ಧಿಯನ್ನು ಸಾಮಾನ್ಯವಾಗಿ ನಿರ್ಲಿಂಗೀಯವಾಗಿ ಗೆಡ್ಡೆಗಳ ಮುಖಾಂತರ ಮಾಡಲಾಗುತ್ತದೆ. ನಾಟಿ ಮಾಡಲು 1.5-2.5 ಸೆ.ಮೀ. ಗಾತ್ರದ ಗೆಡ್ಡೆಗಳನ್ನು ಆಯ್ಕೆ ಮಾಡಲಾಗುತ್ತದೆ. ಹೆಚ್ಚು ಗಾತ್ರದ ಗೆಡ್ಡೆಗಳನ್ನು ಉದ್ದನೆಯಾಗಿ ಎರಡು ಮೂರು ಮೊಗ್ಗುಗಳಾಗಿ ಬರುವಂತೆ ಕತ್ತರಿಸಿ ನೆಡಲು ಉಪಯೋಗಿಸಬಹುದು.
ಜಮೀನು ತಯಾರಿ ಮಾಡುವುದು
ರಜನಿಗಂಧ ಗೆಡ್ಡೆಗಳನ್ನು ನಾಟಿ ಮಾಡಲು ಜಮೀನನ್ನು ಉತ್ತಮವಾಗಿ ತಯಾರು ಮಾಡಬೇಕಾಗುತ್ತದೆ. ಆಳವಾದ ಉಳುಮೆ ಮುಖಾಂತರ ಮಣ್ಣನ್ನು ಪುಡಿಮಾಡಲಾಗುತ್ತದೆ ಮತ್ತು ಕಳೆಯನ್ನು ನಿಯಂತ್ರಿಸಲಾಗುತ್ತದೆ. 15-20 ಟನ್ನಿನಷ್ಟು ಕೊಟ್ಟಿಗೆ ಗೊಬ್ಬರವನ್ನು ನಾಟಿಗಿಂತ 2-3 ವಾರ ಮೊದಲೆ ಭೂಮಿಗೆ ಸುರಿಯಬೇಕು. ಗೆಡ್ಡೆಗಳನ್ನು ನೆಡುವ ಮೊದಲು ಜಮೀನನ್ನು ಮತ್ತೊಮ್ಮೆ ಕಳೆ ಮುಕ್ತವಾಗಿಸಬೇಕು.
ಹೊಸ ಗೆಡ್ಡೆಗಳನ್ನು ನಾಟಿಮಾಡುವುದರಿಂದ ಕಡಿಮೆ ಹೂಗಳು ದೊರೆಯುತ್ತವೆ. ಆದ್ದರಿಂದ ಒಂದು ಋತು ಹಳೆಯದಾದ ಸಂಸ್ಕರಿಸಿದ ಗೆಡ್ಡೆಗಳನ್ನು ಬಳಸಬೇಕು. ಉತ್ತಮ ಗಾತ್ರದ ಗೆಡ್ಡೆಗಳು ಬೇಗನೆ ಹೂ ಬಿಡುತ್ತವೆ ಮತ್ತು ಉತ್ತಮ ಗುಣಮಟ್ಟದ್ದಾಗಿರುತ್ತದೆ. ನಾಟಿ ಮಾಡುವುದಕ್ಕಿಂತ ಮೊದಲು ಗೆಡ್ಡೆಗಳನ್ನು 0.2% ಕಾರ್ಬೆಂಡಜಿûಮ್ ದ್ರಾವಣದಲ್ಲಿ 30 ನಿಮಿಷ ಅದ್ದಿ ತೆಗೆಯಬೇಕು.
ಗಡ್ಡೆಯ ಗಾತ್ರ ಮತ್ತು ನಾಟಿ ಸಮಯ
ನಾಟಿ ಮಾಡಲು 1.5-2.5 ಸೆ.ಮೀ. ಗಾತ್ರದ ಗೆಡ್ಡೆಗಳನ್ನು ಬಳಸಲಾಗುತ್ತದೆ. ಗೆಡ್ಡೆಯ ಗಾತ್ರ 2 ಸೆ,ಮೀ.ಗಿಂತ ಜಾಸ್ತಿ ಇದ್ದರೆ ಅಂತಹ ಗೆಡ್ಡೆಗಳನ್ನು 2-3 ಮೊಗ್ಗುಗಳು ಬರುವಂತೆ ಉದ್ದನೆ ಕತ್ತರಿಸಲಾಗುತ್ತದೆ. ಮುಂಗಾರಿಗಿಂತ ಮೊದಲೆ ನಾಟಿ ಮಾಡುವುದು ಉತ್ತಮ. 4-5 ಸೆ.ಮೀ. ಆಳದಲ್ಲಿ ನಾಟಿ ಮಾಡುವುದರಿಂದ ಮೊಳಕೆಯ ಪ್ರಮಾಣ ಜಾಸ್ತಿಯಿರುತ್ತದೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ. ಹೆಚ್ಚು ಆಳದ ನಾಟಿಯಿಂದ ಮೊಳಕೆಯ ಪ್ರಮಾಣ ಕಡಿಮೆಯಿದ್ದು ಇಳುವರಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
ಗಿಡಗಳ ಅಂತರ
ಗಿಡಗಳ ಸಾಂದ್ರತೆ ಜಾಸ್ತಿಯಿದ್ದಷ್ಟು ಹೂಗೊಂಚಲು, ಹೂ ಮತ್ತು ಗೆಡ್ಡೆಗಳ ಇಳುವರಿ ಜಾಸ್ತಿಯಿರುತ್ತದೆ. 15*20 ಸೆ.ಮೀ. ಅಂತರದಲ್ಲಿ ಸುಮಾರು 3,33,000 ಗೆಡ್ಡೆಗಳನ್ನು ಒಂದು ಹೆಕ್ಟೇರು ಪ್ರದೇಶದಲ್ಲಿ ನೆಟ್ಟಾಗ ಎರಡು ವರ್ಷದ ಅವಧಿಯಲ್ಲಿ ಅತ್ಯಧಿಕ ಹೂಗೊಂಚಲು, ಹೂ ಮತ್ತು ಗೆಡ್ಡೆಗಳು ದೊರೆಯುತ್ತದೆಯೆಂದು ಸಂಶೋಧನೆಯಿಂದ ತಿಳಿದು ಬಂದಿದೆ. ಮೂರು ವರ್ಷ ಕಳೆದ ಬೆಳೆಯನ್ನು ಉಳಿಸಿ ಕೊಳ್ಳುವುದು ವಾಣಿಜ್ಯದೃಷ್ಟಿಯಿಂದ ಒಳ್ಳೆಯದಲ್ಲ. ಪುನಃ ಹೊಸದಾಗಿ ನಾಟಿ ಮಾಡುವುದು ಉತ್ತಮ.
ಪೋಷಕಾಂಶಗಳ ನಿರ್ವಹಣೆ
ರಜನಿಗಂಧ ಹೆಚ್ಚು ಪೋಷಕಾಂಶವನ್ನು ಬಯಸುವ ಸಸಿ. ಜಮೀನು ತಯಾರಿ ಮಾಡುವಾಗ ಹೆಕ್ಟೇರಿಗೆ 10-15 ಟನ್ ಕೊಟ್ಟಿಗೆ ಗೊಬ್ಬರವನ್ನು ಸುರಿಯಬೇಕು. ತದನಂತರ ಪ್ರಧಾನ ಮತ್ತು ಲಘು ಪೋಷಕಾಂಶಗಳನ್ನು ಗಿಡಗಳಿಗೆ ಒದಗಿಸಬೇಕಾಗುತ್ತದೆ. ಪ್ರತೀ ಹೆಕ್ಟೇರಿಗೆ 200 ಕಿಲೋ ಸಾರಜನಕ, 200 ಕಿಲೋ ರಂಜಕ ಮತ್ತು 150 ಕಿಲೋ ಪೊಟ್ಯಾಷ್ ಬಳಕೆಯಿಂದ ಉತ್ತಮ ಇಳುವರಿ ದೊರೆತಿದೆ. 1/3 ಸಾರಜನಕ, 1/2 ಪೊಟ್ಯಾಷ್ ಮತ್ತು ಎಲ್ಲಾ ರಂಜಕವನ್ನು ಗೆಡ್ಡೆ ನೆಡುವ ಸಮಯದಲ್ಲಿ ನೀಡಿ ಉಳಿದ ಪೋಷಕಾಂಶವನ್ನು ನಾಟಿ ಮಾಡಿದ 45 ದಿನದ ನಂತರ 25 ದಿನಗಳ ಅಂತರದಲ್ಲಿ 4 ಬಾರಿ ವಿಂಗಡಿಸಿ ಕೊಡಬೇಕಾಗುತ್ತದೆ. ಸಾರಜನಕ ಮತ್ತು ಪೊಟ್ಯಾಷನ್ನು ದ್ರವರೂಪದಲ್ಲಿ ಗಿಡಗಳಿಗೆ ಸಿಂಪಡಿಸುವುದರಿಂದ ಉತ್ತಮ ಇಳುವರಿ ದೊರೆಯುತ್ತದೆ. ಹೆಕ್ಟೇರಿಗೆ 8 ಕಿಲೋ ಜಿóಂಕ್ ಸಲ್ಫೇಟ್, 2 ಕಿಲೋ ಬೋರಾನ್ ಮತ್ತು 1 ಕಿಲೋ ಸೋಡಿಯಂ ಮೋಲಿಬ್ಡೇಟ್ ಬಳಕೆಯಿಂದ ಗುಣಮಟ್ಟದ ಅಧಿಕ ಇಳುವರಿ ದೊರೆಯುತ್ತದೆಯೆಂದು ಸಂಶೋಧನೆಯಿಂದ ತಿಳಿದು ಬಂದಿದೆ.
ಕಳೆ ನಿರ್ವಹಣೆ
ಗೆಡ್ಡೆಗಳು ಮೊಳೆಯುವ ಸಮಯದಲ್ಲಿ ಪ್ರತಿ ಹದಿನೈದು ದಿನಗಳಿಗೊಮ್ಮೆ ಕಳೆ ನಿರ್ಮೂಲನೆ ಮಾಡಬೇಕು. ಕೈಯಿಂದ ಕಳೆ ಕಿತ್ತು ತೆಗೆಯುವುದು ಉತ್ತಮವಾದರೂ ದುಬಾರಿಯಾದುದು. ಕಳೆನಾಶಕವನ್ನು ಎಚ್ಚರಿಕೆಯಿಂದ ಬಳಸುವುದರಿಂದ ಕಳೆನಿಯಂತ್ರಣ ಸುಲಭವಾಗುವುದು. 15*20 ಸೆ.ಮೀ. ಅಂತರದಲ್ಲಿ ನಾಟಿಮಾಡುವುದರಿಂದ ಕಳೆಯ ನಿಬಿಡತೆ ಕಡಿಮೆಯಿರುತ್ತದೆ.
ಗಿಡಗಳಿಗೆ ಹೊದಿಕೆ ನೀಡುವುದು
ಕಪ್ಪು ಪ್ಲಾಸ್ಟಿಕ್ ಹಾಳೆಯ ಹೊದಿಕೆ ಮತ್ತು ಗ್ಲಿರಿಸೀಡಿಯ ಎಲೆಯ ಹೊದಿಕೆ ಸೂಕ್ತವಾದುದೆಂದು ಸಂಶೋಧನೆಯಿಂದ ತಿಳಿದು ಬಂದಿದೆ. 5 ಕಿಲೋ ಗ್ಲಿರಿಸೀಡಿಯ ಎಲೆ 1*1 ಮೀ. ಅಳತೆಪಾತಿಗೆ ಹೊದಿಸಲು ಸಾಕಾಗುತ್ತದೆ ಮತ್ತು ಇದರಿಂದ ಗುಣಮಟ್ಟದ ಹೂಗಳು ದೊರೆಯುತ್ತದೆ. ಗೊಂಚಲಿನ ಗಾತ್ರ ಮತ್ತು ಸುವಾಸನೆ ಕಪ್ಪು ಪ್ಲಾಸ್ಟಿಕ್ ಹೊದಿಕೆ ನೀಡಿದ ಬೆಳೆಗಿಂತ ಉತ್ತಮವಾಗಿದೆ. ಲಿಚ್ಚಿ ಎಲೆ, ಭತ್ತದ ಹುಲ್ಲು ಮುಂತಾದವುಗಳನ್ನು ಸಹ ಹೊದಿಕೆಯಾಗಿ ಬಳಸಬಹುದು.
ನೀರಿನ ನಿರ್ವಹಣೆ
ನೀರಿನ ನಿರ್ವಹಣೆ ಅತೀ ಪ್ರಾಮುಖ್ಯವಾದುದು ಏಕೆಂದರೆ ಅದು ಗಿಡದ ಬೆಳವಣಿಗೆ, ಇಳುವರಿ ಮತ್ತು ಗೆಡ್ಡೆಗಳ ಇಳುವರಿ ಮೇಲೆ ಪರಿಣಾಮ ಬೀರುತ್ತದೆ. ಗೆಡ್ಡೆಗಳನ್ನು ನಾಟಿ ಮಾಡುವ ಮೊದಲು ಜಮೀನಿಗೆ ಚೆನ್ನಾಗಿ ನೀರುಣಿಸಬೇಕು. ತದನಂತರ ಮೊಳಕೆಯೊಡೆಯುವವರೆಗೆ ನೀರಿನ ಅವಶ್ಯಕತೆಯಿರುವುದಿಲ್ಲ. ಬೇಸಿಗೆಯಲ್ಲಿ ವಾರಕ್ಕೊಮ್ಮೆ ಗಿಡಗಳಿಗೆ ನೀರುಣಿಸಬೇಕು. ಗೆಡ್ಡೆಗಳು ಬಲಿಯುವ ಸಮಯದಲ್ಲಿ ನೀರು ಹಾಯಿಸುವುದನ್ನು ನಿಲ್ಲಿಸಬೇಕು.
ಸಸ್ಯ ಸಂರಕ್ಷಣೆ ಇತರ ಬೆಳೆಗಳಲ್ಲಿ ಕಂಡುಬರುವಷ್ಟು ಗುರುತರವಾದ ಕೀಟ ಮತ್ತು ರೋಗ ಬಾಧೆಗಳು ರಜನಿಗಂಧ ಗಿಡಗಳನ್ನು ಬಾಧಿಸುವುದಿಲ್ಲ.
ರೋಗ ಬಾಧೆ
ಕಾಂಡ ಕೊಳೆ ರೋಗ: ಸ್ಕ್ಲೆರೋಟಿಯಂ ರೊಲ್ಫಸಿ ಎಂಬ ಮಣ್ಣಿನಲ್ಲಿರುವ ಶಿಲೀಂದ್ರದಿಂದ ಹರಡುವ ಈ ರೋಗದಿಂದ ಎಲೆಯು ಹಸಿರು ಬಣ್ಣ ಕಳೆದುಕೊಂಡು ಕೊಳೆತು ತೊಟ್ಟಿನಿಂದ ಕಳಚಿಕೊಳ್ಳುತ್ತದೆ. ರೋಗ ಒಂದು ಎಲೆಯಿಂದ ಪ್ರಾರಂಭವಾಗಿ ಎಲ್ಲಾ ಎಲೆಗಳಿಗೆ ಪಸರಿಸಿ ಗಿಡ ಸಾಯುತ್ತದೆ.
ರೋಗ ಕಾಣಿಸಿಕೊಂಡೊಡನೆ ಮೆಟಲಾಕ್ಷಿಲ್ ಅಥವಾ ಕಾರ್ಬೆಂಡಜಿóಮ್ 2 ಗ್ರಾಂ/ಲೀಟರು ನೀರಿನಲ್ಲಿ ಬೆರೆಸಿ ಸಿಂಪಡಿಸಿವುದರಿಂದ ರೋಗ ಹತೋಟಿಗೆ ಬರುತ್ತದೆ. ರೋಗಯುಕ್ತ ಗಿಡಗಳನ್ನು ಕಿತ್ತು ಸುಟ್ಟು ನಾಶಪಡಿಸಬೇಕು.
ಮೊಗ್ಗು ಕೊಳೆ ರೋಗ: ಇರ್‍ವಿನಿಯ ಸ್ಪೀಸಿಸ್ ಎಂಬ ಬೇಕ್ಟೀರಿಯದಿಂದ ಕಾಣಿಸಿಕೊಳ್ಳುವ ಎಳೆ ಮೊಗ್ಗು ಕೊಳೆಯುವ ರೋಗ. ರೋಗ ಹೆಚ್ಚಾದಾಗ ಮೊಗ್ಗುಗಳ ತೊಟ್ಟು ಕಂದು ಬಣ್ಣಕ್ಕೆ ತಿರುಗಿ ಮೊಗ್ಗು ಒಣಗಿ ಕರಕಲಾಗುತ್ತದೆ. ಈ ರೋಗ ಥ್ರಿಪ್ಸ್ ಎಂಬ ಕೀಟಗಳಿಂದ ಹರಡುತ್ತದೆ.
ರೋಗ ಪೀಡಿತ ಸಸಿಗಳನ್ನು ಇತರ ಸಸ್ಯಗಳಿಂದ ಬೇರ್ಪಡಿಸಿ 0.1% ರೋಗರ್ ದ್ರಾವಣವನ್ನು ವಾರಕ್ಕೆರಡು ಬಾರಿ ಸಿಂಪಡಿಸಬೇಕು. ರೋಗದಿಂದ ಸೊರಗಿದ ಗಿಡಗಳನ್ನು ಕಿತ್ತು ನಾಶಪಡಿಸಬೇಕು.
ಕೀಟ ಬಾಧೆ
ಥ್ರಿಪ್ಸ್: ಈ ಕೀಟಗಳು ಎಲೆ, ಹೂವಿನ ತೊಟ್ಟು ಮತ್ತು ಹೂಗಳಿಂದ ರಸಹೀರಿ ಇಡೀ ಗಿಡಕ್ಕೆ ಹಾನಿ ಮಾಡುತ್ತದೆ. ಅಲ್ಲದೆ ಕೆಲವೊಂದು ರೋಗಗಳ ವಾಹಕಗಳಾಗಿವೆ ಎಂದು ಕಂಡು ಬಂದಿದೆ. ಥ್ರಿಪ್ಸ್ ಕೀಟಗಳನ್ನು ಥೈಯಾಮೆಥೋಕ್ಸಾಮ್ 0.2% ಅಥವಾ 0.2% ಡೈಮೆಥೊಯೇಟ್ ಕೀಟನಾಶಕವನ್ನು 10 ದಿನಗಳಿಗೊಮ್ಮೆ ಸಿಂಪಡಣೆ ಮಾಡುವುದರ ಮೂಲಕ ನಿಯಂತ್ರಿಸಬಹುದು.
ಕೊಯ್ಲು
ಹೂದಾನಿಯಲ್ಲಿಡಲು ಅಥವಾ ಅಲಂಕಾರಿಕವಾಗಿ ಬಳಸಲು ಹೂಗೊಂಚಲನ್ನು ತೊಟ್ಟಿನ ಬುಡದಿಂದಲೆ ಕತ್ತರಿಸಲಾಗುತ್ತದೆ. ಹಾರವಾಗಿ ಬಳಸಲು ಹೂಗಳನ್ನು ಬಿಡಿಯಾಗಿ ಕೊಯ್ಲುಮಾಡಲಾಗುತ್ತದೆ. ಹೂಗೊಂಚಲು 85-110 ಸೆ.ಮೀ. ಉದ್ದವಿದ್ದು, ಪ್ರಥಮ ಹೂ ಬಿರಿಯುವಾಗ ಬೆಳಗ್ಗಿನ ಸಮಯದಲ್ಲಿ ಕೊಯ್ಲು ಮಾಡುವುದು ಉತ್ತಮ. ಉಷ್ಣಾಂಶ ಹೆಚ್ಚಿರುವಾಗ ಕೊಯ್ಲು ಮಾಡಿದರೆ ಹೂಗಳು ಬೇಗನೆ ಬಾಡುತ್ತವೆ. ಹರಿತವಾದ ಅಥವಾ ಸಿಕೇಚರ್‍ನಿಂದ ಹೂಗೊಂಚಲನ್ನು ಕತ್ತರಿಸದೊಡನೆ ನೀರಿನಲ್ಲಿಡಬೇಕು. ಸುಮಾರು 15,000 ಕಿಲೋದಿಂದ 18,000 ಕಿಲೋದಷ್ಟು ಹೂಗಳನ್ನು ಒಂದು ಹೆಕ್ಟೇರು ಪ್ರದೇಶದಿಂದ ಪಡೆಯಲು ಸಾಧ್ಯವಿದೆ.