Old is Gold: A Tile Story ಓಲ್ಡ್ ಇಸ್ ಗೋಲ್ಡ್; ಒಂದು ಹೆoಚುವಿನ ಕಥೆ

Reading Time: 6 minutes

ಓಲ್ಡ್ ಇಸ್ ಗೋಲ್ಡ್; ಒಂದು ಹೆಂಚುವಿನ ಕಥೆ

  ಅಚಾನಕ್ಕಾಗಿ ನಮ್ಮೆದುರಿಗೆ ಹಳೆ ಕಾಲದ ಗಳೆಯರು ಅಥವಾ ನೆಂಟರಿಷ್ಟರು ಸಿಕ್ಕಿದರೆ ನಮಗೆ ಆಗುವ ಸಂತೋಷ ಹೇಳತಿರದು. ಅವರನ್ನು ಕೈಹಿಡಿದು, ಮಾತನಾಡಿಸುತ್ತೇವೆ, ಬಾಚಿ ತಬ್ಬಿಕೊಳ್ಳುತ್ತೇವೆ. ಹಳೆಯ ನೆನಪುಗಳನ್ನು ಮೆಲಕುಹಾಕುತ್ತೇವೆ. ಅಬ್ಬಾ ಎಷ್ಟು ವರ್ಷದ ನಂತರ ಸಿಕ್ಕಿದ್ದೇವಲ್ಲಾ, ಸದ್ಯ ಈ ಜನ್ಮ್ನದಲ್ಲಿ ನಿಮ್ಮನ್ನ ನೋಡುತ್ತೇನೆ ಎಂದು ಕೊಂಡಿರಲಿಲ್ಲ ಎನ್ನುತ್ತಾ ಗದ್ಗದಿತರಾಗುತ್ತೇವೆ. ಹಾಗೆಯೆ ಹಳೆಯ ಕಾಲದ ಅಂದರೆ 100-150 ವರ್ಷದ ಹಿಂದಿನ ವಸ್ತುಗಳೇನಾದರೂ ನಮ್ಮ ಕಣ್ಣಿಗೆ ಬಿದ್ದರೆ, ಅದನ್ನು ತೆಗೆದು ಚೆನ್ನಾಗಿ ಒರಸಿ, ತೊಳೆದು ತಿರುಗಿಸಿ, ಮರುಗಿಸಿ ನೋಡಿ ಇಷ್ಟು ವರ್ಷಗಳಾದರೂ ತನ್ನತನವನ್ನು ಹೇಗೆ ಉಳಿಸಿಕೊಂಡಿದೆಯಲ್ಲಾ ಎನ್ನುತ್ತಾ ಸಂತೋಷ ಪಡುತ್ತೇವೆ. ಅಂತಹದೊಂದು ಘಟನೆ ನಮಗೂ ಆಯಿತು. ನಮ್ಮ ಹಳೆಯ ಮನೆಯನ್ನು ಕೆಡವಿ ಹೊಸದಾಗಿ ಮನೆ ನಿರ್ಮಿಸುವ ಸಂದರ್ಭ ಮಣ್ಣಿನಡಿಯಿಂದ ಹಳೆ ಕಾಲದ (1865) ಹೆಂಚೊಂದು ಸಿಕ್ಕ್ಕಿತು. ಅದರಲ್ಲಿರುವ ಅಕ್ಷರಗಳು ಒಂದಿಷ್ಟು ಮಾಸಿಹೋಗದೆ (ಓಲ್ಡ್ ಇಸ್ ಗೋಲ್ಡ್) ಎನ್ನುವಂತೆ 153 ವರ್ಷಗಳ ಹಿಂದೆ ಮಂಗಳೂರಿನಲ್ಲಿ ತಯಾರಾದ ಕೆಂಪು ಬಣ್ಣದ ಮಣ್ಣಿನ ಹೆಂಚು ಅದಾಗಿತ್ತು.

ಕೇವಲ ಮಣ್ಣಿನಿಂದ ಮಾಡಿದ ಹೆಂಚು ಇಷ್ಟು ವರ್ಷದ ನಂತರವೂ ಮಳೆ, ಚಳಿ, ಗಾಳಿ, ಬಿಸಿಲುಗಳಿಂದಲೂ ಹಾಳಾಗದೆ ಒಂದುವರೆ ಶತಮಾನ ಕಳೆದರೂ ಹಾಳಾಗದೆ ಹಾಗೆಯೇ ಮುಂದೆಯೂ ಉಪಯೋಗಿಸಬಹುದಾದ ರೀತಿಯಲ್ಲಿಯೇ ಇತ್ತು. ಕೋಟಿ ಬೆಲೆಬಾಳುವ ಮನುಷ್ಯ ಶರೀರ ಕೆಲವೊಮ್ಮೆ ಅರ್ಧ ಶತಮಾನವನ್ನೂ ಕಾಣಲಾರವು.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಕೊಡಗಿನ ಮಡಿಕೇರಿಯಲ್ಲಿಯೂ ಇತ್ತು ಹೆಂಚುವಿನ ಕಾರ್ಖಾನೆ:

ಮಡಿಕೇರಿಯ ಎಲ್.ಐ.ಸಿಯ ಬಳಿ ಇರುವ ವೆಬ್ಸ್ ಹಾಗೂ ಈಗಿನ ಟಾಟಾ ಮೋಟಾರ್ಸ್ ಇರುವ ಸ್ಥಳಗಳಲ್ಲಿ 1883ರಲ್ಲಿ ‘ಮರ್ಕಾರಾ ಪೋಟರಿ’ ಎಂಬ ಹೆಂಚುವಿನ  ಕಾರ್ಖಾನೆ ಕಾರ್ಯಾಚರಿಸುತ್ತಿತು. ಕಾಲಕ್ರಮೇಣ ನುರಿತ ಕಾರ್ಮಿಕರು ಮತ್ತು ಜೇಡಿ ಮಣ್ಣಿನ ಕೊರತೆ ಹಾಗೂ ಉತ್ಪಾದಕರ ನಿರುತ್ಸಾಹದಿಂದ ಅದನ್ನು ಸ್ಥಗಿತಗೊಳಿಸಲಾಯಿತು.

ಕೊಡಗಿನ ಮತ್ತೊಂದು ಹೆಂಚುವಿನ  ಕಾರ್ಖಾನೆ, ಮಡಿಕೆಬೀಡು ಹೆಂಚುವಿನ ಕಾರ್ಖಾನೆ:

ಕೊಡಗಿನ ವಿರಾಜಪೇಟೆ ತಾಲೂಕಿನ ಮಾಯಮುಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಧನುಗಾಲ ಗ್ರಾಮದ ಮಡಿಕೆಬೀಡು ಎಂಬಲ್ಲಿ ಹೆಂಚುವಿನ ಕಾರ್ಖಾನೆ ಕಾರ್ಯಾಚರಿಸುತ್ತಿತು. ಪ್ರಸ್ತುತ ದಿನಮಾನಗಳಲ್ಲಿ ಈ ಕಾರ್ಖಾನೆಯು ತನ್ನ ಕಾರ್ಯವನ್ನು ಸ್ಥಗಿತಗೊಳಿಸಿದೆ.

ನಮಗೆ ದೊರೆತ ಹೆಂಚುವಿನ ಬಗ್ಗೆ ಮಾತ್ರ ಇಲ್ಲಿ ಹೇಳುವ ಬದಲು ಭಾರತದಲ್ಲಿ ಹೆಂಚುಚನ್ನು ತಯಾರಿಸುವ ಕಾರ್ಖಾನೆಯ ಇತಿಹಾಸದ ಬಗ್ಗೆ ಬರೆಯುವುದು ಉಚಿತವೆನಿಸಿತು.

ಭಾರತದಲ್ಲಿ ಹೆಂಚುವಿನ ಉಗಮ:
1860ರಲ್ಲಿ ಜರ್‍ಮನ್ ಮಿಷನರಿಯಾದ ಪ್ಲೆಬೊಟ್(ನಿಜ ನಾಮಧೇಯ ಜಾರ್ಜ್ ಪ್ಲೆಬೆಸ್ಟ್) ಮಂಗಳೂರಿನಲ್ಲಿ ದೇಶದ ಮೊದಲ ಹೆಂಚುವಿನ ಕಾರ್ಖಾನೆಯನ್ನು ಸ್ಥಾಪಿಸಿದನು.

ಅದುವರೆಗೂ ಭಾರತಕ್ಕೆ ಬೇಕಾದ ಹೆಂಚುಗಳನ್ನು ಶ್ರೀಲಂಕಾ, ದಕ್ಷಿಣ ಆಫ್ರೀಕಾ, ಮದ್ಯ ಯೂರೋಪ್, ಆಸ್ಟ್ರೇಲಿಯಾ, ಮಾಯನ್‍ಮಾರ್ ಮುಂತಾದ ದೇಶಗಳಿಂದ ತರಿಸಲಾಗುತ್ತಿತು. ಪ್ಲೆಬೊಟ್ ಈ ಹೆಂಚುವಿನ ಕಾರ್ಖಾನೆಯನ್ನು ಮಂಗಳೂರಿನ ಗುರುಪುರ(ಪಾಲ್ಘುಣಿ) ಮತ್ತು ಬಂಟವಾಳದ ನೇತ್ರಾವತಿ ನದಿ ದಂಡೆಯಲ್ಲಿ ಸ್ಥಾಪಿಸಿ, ಇದನ್ನು ‘ಬ್ಯಾಸೆಲ್ ಮಿಷನ್ ಟೈಲಿಂಗ್ ವಕ್ರ್ಸ್’ ಎಂದು ನಾಮಕರಣ ಮಾಡಿದ. ಇದು ನೇತ್ರಾವತಿ ದಂಡೆಯ ಉಳ್ಳಾಲ ಸೇತುವೆಯಿಂದ 100 ಮೀಟರ್ ಅಂತರದಲ್ಲಿರುವ ಮೋರ್ಗನ್ಸ್ ಗೇಟ್ ಬಳಿ ಇದ್ದು, ಭಾರತದ ಮೊದಲ ಹೆಂಚುವಿನ ಕಾರ್ಖಾನೆಯಾಗಿದೆ.

1865ರಲ್ಲಿ ಲೋಬೋ ಅಂಡ್ ಸನ್ಸ್ ಹೆಂಚುವಿನ ಕಾರ್ಖಾನೆ ಜೆ.ಹೆಚ್. ಮೋರ್ಗ್‍ನ್ ಅಂಡ್ ಸನ್ಸ್ ರವರ “ಮಂಗಳೂರು ಟೈಲ್ಸ್” ಎಂಬ ಹೆಸರಿನಲ್ಲಿ ಹೆಂಚುವಿನ ಕಾರ್ಖಾನೆ ಪ್ರಾರಂಭವಾಯಿತು.

   ತದ ನಂತರ 1868ರಲ್ಲಿ ಪಾಣೆ ಮಂಗಳುರಿನಲ್ಲಿ ಅಲೆಕ್ಸ್ ಅಲ್ಬುಕರ್ಕ್ ಪೈಯವರು “ಅಲ್ಬುಕರ್ಕ್ ಟೈಲ್ಸ್ ಪ್ಯಾಕ್ಟರಿ”ಯನ್ನು ಪ್ರಾರಂಭಿಸಿದರು. ಅಲ್ಬುಕರ್ಕ್ ಟೈಲ್ಸ್‍ರವರ “ಸನ್ ಬ್ರಾಂಡ್” ಹೆಸರಿನ ಹೆಂಚುಗಳು ಬ್ರೀಟೀಷ್ ಆಳ್ವ್ವಿಕೆಯ ಭಾರತದಲ್ಲಿನ ಸರಕಾರಿ ಕಟ್ಟಡಗಳಿಗೆ ಶಿಫಾರಸು ಮಾಡಬೇಕಾದ ಏಕೈಕ ಹೆಂಚುಗಳಾಯಿತು. ವಿಶ್ವ ಪಾರಂಪರಿಕ ತಾಣವಾದ “ಛತ್ರಪತಿ ಶಿವಾಜಿ ಟರ್ಮಿನಲ್ಸ್” ಈ ಅತ್ಯುತ್ತಮ ಹೆಂಚುಗಳನ್ನು ಹೊಂದಿದೆ.

    1878ರಲ್ಲಿ ಬಾಂಬೆಯ ಶ್ರೀ ಸಿಪೋನ್ “ಅಲ್ಪಾರೆನ್ ಟೈಲ್ಸ್” ಫ್ಯಾಕ್ಟರಿ ಹೆಸರಿನಲ್ಲಿ ಮಂಗಳೂರಿನಲ್ಲಿ ಕಾರ್ಖಾನೆಯನ್ನು ಪ್ರಾರಂಭಿಸಿದನು. ಈ ಹೆಂಚುವಿನ ಕಾರ್ಖಾನೆಯಲ್ಲಿ ತಯಾರಾದ ಹೆಂಚುಗಳು ಭಾರತೀಯ ಉಪಖಂಡ  ಮತ್ತು ಪೂರ್ವ ಆಫ್ರಿಕಾದಲ್ಲಿ ಬಹಳ ಬೇಡಿಕೆ ಪಡೆಯಿತು.

    ಜೇಡಿಮಣ್ಣಿನ ಅಗಾದವಾದ ನಿಕ್ಷೇಪಗಳು ಪಶ್ಚಿಮ ಘಟ್ಟದಿಂದ ಸಾಕಷ್ಟು ಉರುವಲು ಮತ್ತು ಅಗ್ಗದ ನುರಿತ ಕಾರ್ಮಿಕರಿಂದ ಈ ಉದ್ಯಮವು ದೊಡ್ಡ ಮಟ್ಟದಲ್ಲಿ ಅಭಿವೃದ್ಧಿಯಾಗತೊಡಗಿದವು. 1900ರ ಹೊತ್ತಿಗೆ ಮಂಗಳೂರಿನಲ್ಲಿ 25 ಹೆಂಚುವಿನ ಕಾರ್ಖಾನೆಗಳು ಇದ್ದವು. 1994ರ ಹೊತ್ತಿಗೆ 75 ಕಾರ್ಖಾನೆಗಳು ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿದ್ದವು. ಈ ಹೆಂಚುಗಳ ಜೋತೆಗೆ ಸಹ ವಸ್ತುಗಳಾದ ಸುಣ್ಣದಕಲ್ಲು, ಮತ್ತು ಇಟ್ಟಿಗೆಗಳನ್ನು ತಯಾರಿಸಲಾಗುತಿದೆ.

    1878ರಲ್ಲಿ ಪ್ರಾರಂಭವಾದ “ಕ್ಯಾಲಿಕಟ್ ಟೈಲ್ಸ್ ಕಂ (ಸಿ.ಟಿ.ಸಿ)” ಭಾರತದ ಮೊದಲ ಸಂಪೂರ್ಣ ಯಾಂತ್ರೀಕೃತ ಹೆಂಚುವಿನ ಉತ್ಪಾದಕರಾಗಿದ್ದರು. ಇವರು ಛಾವಣಿಗೆ ಹೆಂಚುಗಳನ್ನು ಹೊರತುಪಡಿಸಿ ಸೀಲಿಂಗ್ ಟೈಲ್ಸ್, ಟೊಳ್ಳು ಬ್ಲಾಕ್‍ಗಳು, ಪೇವರ್ ಹೆಂಚುಗಳು, ಅಲಂಕಾರಿಕ ಉದ್ಯಾನ ಹೆಂಚುಗಳು, ಮತ್ತು ಟೆರಾಕೋಟ್ ಉತ್ಪನ್ನಗಳನ್ನು ತಯಾರಿಸುತ್ತಿದೆ. ಈ ಕಂಪನಿಯು ಪ್ರಸ್ತುತ ಕಾರ್ಯಾಚರಿಸುತ್ತಿದೆ. 2007ರಲ್ಲಿ ಮಣ್ಣಿನಂಥ ಕಚ್ಛಾ ಸಾಮಾಗ್ರಿಗಳ ಕೊರತೆ ಮತ್ತು ನುರಿತ ಹಾಗೂ ಸಹಕಾರಿ ಕೆಲಸಗಾರರ ಅಭಾವದಿಂದ 10 ಕಾರ್ಖಾನೆಗಳು ಸ್ಥಗಿತಗೊಂಡವು.

ಅಂದು ಜನಸಾಮಾನ್ಯರು ಬಳಸುತ್ತಿದ್ದ ಹೆಂಚು ಇಂದು ವಾಸಿಸಲು ಮನೆಗಳನ್ನು ನಿರ್ಮಿಸಿಕೊಳ್ಳಲು ಯೋಗ್ಯವಾಗಿದೆ. ಇಂದಿನ ಕಾಲದಲ್ಲಾದರೆ ಆರ್.ಸಿ.ಸಿ. ಟೆರೆಸು ಮನೆಗಳು, ಶೀಟ್‍ಗಳ ಮೇಲ್ಚಾವಣಿಗಳ ಮನೆಗಳು ಅಧಿಕವಾಗಿದೆ. ಆಗಿನ ಕಾಲದಲ್ಲಿ ನಿರ್ಮಾಣಗೊಂಡ ಹೆಂಚುವಿನ ಮೇಲ್ಛಾವಣಿ ಯನ್ನು ಹೊಂದಿರುವ ಮನೆಗಳು ಈಗಲೂ ಬಳಸಲು ಯೋಗ್ಯವಾಗಿದೆ. ಇತ್ತೀಚೆಗೆ ಹಳೆಯ ಕಾಲದಂತೆ ಹೆಂಚುವಿನಲ್ಲಿ ಮನೆಯ ಮೇಲ್ಛಾವಣಿ ನಿರ್ಮಿಸುವುದು ಒಂದು ಹೊಸ ಶೈಲಿಯಾಗಿ ಪರಿಣಮಿಸಿದೆ. ಹಾಗಾಗಿ ಗತಕಾಲದ ಹೆಂಚುವಿನ ಉದ್ಯಮಕ್ಕೆ ಇದೀಗ ಬೇಡಿಕೆ ಹೆಚ್ಚಾಗತೊಡಗಿದೆ.

—ಕಾನತ್ತಿಲ್ ರಾಣಿ ಅರುಣ್

✍. ಕಾನತ್ತಿಲ್ ರಾಣಿ ಅರುಣ್

0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments