ನನ್ನ ಅಧಿಕಾರ ಅವಧಿಯಲ್ಲಿ ಹೊಸ ಬದಲಾವಣೆ ತರಬೇಕು ಎಂಬ ಹಂಬಲವಿದೆ –
ಮೇವಡ ಗಿರೀಶ್ ಬೋಪಣ್ಣ
ಕೊಡಗು ಜಿಲ್ಲೆಯ ಮಡಿಕೇರಿಯಿಂದ-ವೀರಾಜಪೇಟೆ ಹೋಗುವ ರಾಜ್ಯ ಹೆದ್ದಾರಿಯಲ್ಲಿ ಇರುವ ಪಂಚಾಯಿತಿ ಕಾಕೋಟುಪರಂಬು ಗ್ರಾಮ ಪಂಚಾಯಿತಿ. ಈ ಪಂಚಾಯಿತಿ ವೀರಾಜಪೇಟೆ ತಾಲ್ಲೂಕಿನಲ್ಲಿದೆ.
ಕಾಕೋಟುಪರಂಬು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಸೇವೆಸಲ್ಲಿಸುತ್ತಿರುವ ಮೇವಡ ಗಿರೀಶ್ ಬೋಪಣ್ಣನವರನ್ನು “ಸರ್ಚ್ ಕೂರ್ಗ್ ಮೀಡಿಯಾ” ದ “ನಮ್ಮ ಕೊಡಗು-ನಮ್ಮ ಗ್ರಾಮ” ಅಭಿಯಾನದಡಿಯಲ್ಲಿ ಸಂರ್ದಶಿಸಿ ಮಾಹಿತಿಯನ್ನು ಕಲೆ ಹಾಕಿತ್ತು.
“ಸರ್ಚ್ ಕೂರ್ಗ್ ಮೀಡಿಯಾ” ದೊಂದಿಗೆ ಮಾತನಾಡಿದ ಅಧ್ಯಕ್ಷರಾದ ಮೇವಡ ಗಿರೀಶ್ ಬೋಪಣ್ಣ “ನನಗೆ ನನ್ನ ಗ್ರಾಮಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂದು ಎನಿಸಿತು. ಆಗ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಲು ಬಯಸಿದಾಗ ಊರ ಜನರಿಂದ ಉತ್ತಮ ಬೆಂಬಲ ಸಿಕ್ಕಿತು. ಗೆಲುವು ಸಹ ಸಾಧಿಸಿದೆ, ಈಗ ಅಧ್ಯಕ್ಷನಾಗಿದ್ದೇನೆ” ಎಂದು ಗಿರೀಶ್ ಬೋಪಣ್ಣ ಹೇಳಿದರು. ಮೇವಡ ಗಿರೀಶ್ ಬೋಪಣ್ಣನವರು ಈ ಹಿಂದೆ 2005 ರಿಂದ 2010ರವರಗಿನ ಗ್ರಾಮ ಪಂಚಾಯಿತಿಯ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಗೊಂಡು ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಕಾಕೋಟುಪರಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ 3 ತಿಂಗಳಿನಿಂದ ಅಂತರ್ಜಲ ಕುಸಿತದಿಂದ ನೀರಿನ ಸಮಸ್ಯೆ ತಲೆದೋರಿದೆ ಎಂದ ಗಿರೀಶ್ ಬೋಪಣ್ಣ, ಬೋರ್‌ವೆಲ್‌ಗಳಲ್ಲಿ ನೀರಿನ ಕೊರತೆಯುಂಟಾಗಿದೆ ಎಂದರು. ಬೇಸಿಗೆಯ ಸಮಯದಲ್ಲಿ ಬೇತ್ರಿ ಬಳಿ ಹರಿಯುವ ಕಾವೇರಿ ನದಿಯಿಂದ ನೀರು ಸರಬರಾಜು ಮಾಡುವ ನಿಟ್ಟಿನಲ್ಲಿ ಪ್ರಯತ್ನ ಸಾಗಿದೆ ಎಂದರು. ಪಂಚಾಯಿತಿ ವ್ಯಾಪ್ತಿಯಲ್ಲಿ ಬಹುಪಾಲು ಮನೆಗಳಿಗೆ ತೆರದ ಬಾವಿಗಳಿದ್ದು, ಬೆಳ್ಳುಮಾಡು ಗ್ರಾಮದ ಸುತ್ತಮುತ್ತ ಸ್ವಲ್ಪ ಮಟ್ಟಿಗೆ ಮಾತ್ರ ಕುಡಿಯುವ ನೀರಿನ ಸಮಸ್ಯೆಯುಂಟಾಗಿದೆ ಅದಷ್ಟು ಬೇಗ ಕುಡಿಯುವ ನೀರಿನ ಸಮಸ್ಯೆಯನ್ನು ಸರಿಪಡಿಸಲಾಗುವುದು ಎಂದು ಗಿರೀಶ್ ಬೋಪಣ್ಣ ತಿಳಿಸಿದರು.
ಮಳೆಗಾಲದ ಸಮಯದಲ್ಲಿ ಬೇತ್ರಿ, ಕದನೂರು, ಮೈತಾಡಿ ಹಾಗೂ ಬೆಳ್ಳುಮಾಡು ಗ್ರಾಮಗಳ ವ್ಯಾಪ್ತಿಯಲ್ಲಿ ನದಿಗಳ ಪ್ರವಾಹದಿಂದ ಕಾಕೋಟುಪರಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯು ಸರಿ ಸುಮಾರು 15 ದಿನಗಳ ಕಾಲ ದ್ವೀಪದಂತಾಗಿರುತ್ತದೆ ಎಂದ ಗಿರೀಶ್ ಬೋಪಣ್ಣ, ಈ 15 ದಿನಗಳ ಕಾಲ ಮರಗಳು ಉರುಳಿ ವಿದ್ಯುತ್ ತಂತಿ ಹಾಗೂ ಕಂಬಗಳ ಮೇಲೆ ಬೀಳುವುದರಿಂದ ನಿರಂತರವಾಗಿ ವಿದ್ಯುತ್ ಸಮಸ್ಯೆ ತಲೆದೋರುತ್ತದೆ. ಮಳೆಗಾಲ ಹೊರತು ಪಡಿಸಿದರೆ ಅಷ್ಟಾಗಿ ವಿದ್ಯುತ್ ಸಮಸ್ಯೆ ಪಂಚಾಯಿತಿ ವ್ಯಾಪ್ತಿಯಲ್ಲಿ ಇಲ್ಲ ಎಂದು ನುಡಿದರು.
ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿ ದೀಪಗಳ ವ್ಯವಸ್ಥೆ ಸರಿಯಾಗಿದ್ದು, ಮುಂದಿನ ದಿನಮಾನಗಳಲ್ಲಿ ನೂತನ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಸೋಲಾರ್ ಎಲ್.ಇ.ಡಿ ಬೀದಿ ದೀಪಗಳನ್ನು ಅಳವಡಿಸುವ ನಿಟ್ಟಿನಲ್ಲಿ ಪ್ರಯತ್ನ ಸಾಗಿದೆ ಎಂದು ಗಿರೀಶ್ ಬೋಪಣ್ಣ ತಿಳಿಸಿದರು.
ಕಾಕೋಟುಪರಂಬು ಗ್ರಾಮ ಪಂಚಾಯಿತಿಯು ಶೇಕಡ 100% ರಷ್ಟು ಶೌಚ ಮುಕ್ತ ಗ್ರಾಮವಾಗಿದ್ದು, ಮನೆ-ಮನೆಗಳಿಗೂ ಶೌಚಾಲಯಗಳು ಇದೆ ಎಂದ ಗಿರೀಶ್ ಬೋಪಣ್ಣ, ಸ್ವಚ್ಚ ಭಾರತ್ ಅಭಿಯಾನದಡಿ ಪಂಚಾಯಿತಿಯು ಗ್ರಾಮಗಳಲ್ಲಿ ಸ್ವಚ್ಚತೆಗೆ ಮೊದಲ ಆದ್ಯತೆ ನೀಡಲಾಗಿದೆ ಎಂದರು.
ಕಾಕೋಟುಪರಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸವಿಲೇವಾರಿ ಮಾಡಲು ಕಾಕೋಟುಪರಂಬು ಫ್ರೌಡ ಶಾಲೆಯ ಪಕ್ಕದಲ್ಲಿರುವ ಜಾಗದಲ್ಲಿ ಘನತಾಜ್ಯ ವಿಲೇವಾರಿ ಮಾಡಲಾಗುತ್ತಿದ್ದು, ಹಸಿ ತಾಜ್ಯಗಳನ್ನು ಗ್ರಾಮಸ್ಥರು ತಮ್ಮ ತಮ್ಮ ಮನೆಗಳ ಆವರಣಗಳಲ್ಲಿ ಗುಂಡಿಗಳನ್ನು ತೋಡಿ ವಿಲೇವಾರಿ ಮಾಡಿ ಕಾಂಪೊಸ್ಟ್ ಗೊಬ್ಬರಗಳನ್ನು ತಯಾರು ಮಾಡಿಕೊಳ್ಳುತ್ತಿದ್ದಾರೆ ಎಂದು ಗಿರೀಶ್ ಬೋಪಣ್ಣ ತಿಳಿಸಿದರು. ಹಾಗೆ ಕಸ ವಿಲೇವಾರಿಗೆ ಪಂಚಾಯಿತಿ ವತಿಯಿಂದ ಟಾಟ ಏಸ್ ಗಾಡಿಯೊಂದಿದ್ದು, ಗ್ರಾಮಗಳ ಮನೆ ಮನೆಗಳಿಗೆ ತೆರಳಿ ಘನತ್ಯಾಜ್ಯವನ್ನು ಸಂಗ್ರಹಿಸಿ ತರಲಾಗುತ್ತಿದೆ ಎಂದ ಗಿರೀಶ್ ಬೋಪಣ್ಣ, ಕಸವಿಲೇವಾರಿಯನ್ನು ನೂತನ ತಂತ್ರಜ್ಞಾನವನ್ನು ಅಳವಡಿಸಿ ಸುಸಜ್ಜಿತ ಸ್ಥಿರವಾದ ಘಟಕ ಸ್ಥಾಪಿಸುವ ನಿಟ್ಟಿನಲ್ಲಿ ಪ್ರಯತ್ನ ಸಾಗಿದೆ ಎಂದರು.
ಶಾಸಕರಾದ ಕೆ.ಜಿ. ಬೋಪಯ್ಯನವರ ಶಾಸಕರ ನಿಧಿಯಿಂದ 31 ಲಕ್ಷ ಅನುದಾನದಲ್ಲಿ 20 ಲಕ್ಷದ ಕಾಮಗಾರಿಗಳನ್ನು ನಾಲ್ಕೇರಿ ಗ್ರಾಮದಲ್ಲಿ ಪೂರ್ಣಗೊಳಿಸಲಾಗಿದೆ ಎಂದ ಗಿರೀಶ್ ಬೋಪಣ್ಣ, ವಿಧಾನ ಪರಿಷತ್ ಸದಸ್ಯರಾದ ಸುನೀಲ್ ಸುಬ್ರಮಣಿಯವರ ಅನುದಾನದಲ್ಲಿ ಕುಂಜಲಗೇರಿ ಗ್ರಾಮದಲ್ಲಿ 10 ಲಕ್ಷದ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ ಎಂದರು. ಜಿ.ಪಂ. ಮಾಜಿ ಸದಸ್ಯರಾದ ಅಚ್ಚಪಂಡ ಮಹೇಶ್ ರವರ ಸಹಕಾರ ಹಾಗೂ ತಾ.ಪಂ. ಮಾಜಿ ಸದಸ್ಯರಾದ ಆಲತಂಡ ಸೀತಮ್ಮನವರ ಸಹಕಾರವು ಪಂಚಾಯಿತಿ ಅಭಿವೃದ್ದಿ ಕಾಮಗಾರಿ ನಿರ್ವಹಿಸುವಲ್ಲಿ ದೊರಕಿದೆ ಎಂದು ಗಿರೀಶ್ ಬೋಪಣ್ಣ ಈ ಸಂದರ್ಭದಲ್ಲಿ ತಿಳಿಸಿದರು.
ಬೆಳ್ಳುಮಾಡು ಗ್ರಾಮದ ಬೆಳ್ಳುಮಾಡು-ಅರಪಟ್ಟು ರಸ್ತೆಯ ಮಳೆಗಾಲದ ದುರಸ್ಥಿ ಕಾಮಗಾರಿಗಾಗಿ 2.40 ಲಕ್ಷಗಳು, ಬೆಳ್ಳುಮಾಡು ಕಾಲೋನಿ ರಸ್ತೆ ದುರಸ್ಥಿಗೆ 2 ಲಕ್ಷಗಳು, ಕೊಯಮಂಡ ರಸ್ತೆಗೆ 60 ಸಾವಿರ ರೂಪಾಯಿಗಳನ್ನು ಮಳೆಗಾಲ ದುರಸ್ಥಿ ಕಾಮಗಾರಿಗಳಿಗಾಗಿ ಮೀಸಲಿಡಲಾಗಿದೆ ಎಂದ ಗಿರೀಶ್ ಬೋಪಣ್ಣ, ಅನುದಾನದ ಕೊರತೆಯಿಂದ ಗ್ರಾಮೀಣ ರಸ್ತೆಗಳು ದುರಸ್ಥಿಗಾಗಿ ಕಾದಿದೆ ಎಂದರು.
ತಮ್ಮ ಅಧಿಕಾರವಧಿಯ ಮುಂದಿನ ಕ್ರಿಯಾ ಯೋಜನೆಗಳ ಬಗ್ಗೆ ವಿವರಿಸಿದ ಗಿರೀಶ್ ಬೋಪಣ್ಣ, ಜಲಜೀವನ ಮಿಷನ್ ಯೋಜನೆಯಡಿಯಲ್ಲಿ ಹೆಮ್ಮಾಡು ವೆಂಕಟರಮಣ ದೇವಾಲಯದ ಸುತ್ತಮುತ್ತ ನಿವಾಸಿಗಳಿಗೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಬಗ್ಗೆ ಕ್ರಿಯಾ ಯೋಜನೆ. ಹಾಗೆ ಕಾಕೋಟುಪರಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೇತ್ರಿಯಿಂದ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆಯ ಬಗ್ಗೆ ಕ್ರಿಯಾ ಯೋಜನೆ. ಕಿರು ನೀರಾವರಿ ಯೋಜನೆಗಳಾದ ಕಿಂಡಿ ಅಣೆಕಟ್ಟು ನಿರ್ಮಾಣ, ಮೋರಿಗಳ ನಿರ್ಮಾಣ, ತಡೆಗೋಡೆಗಳ ನಿರ್ಮಾಣ, ಹಾಳಾದ ಸೇತುವೆಗಳ ನಿರ್ಮಾಣ, ಅಂತರ್ಜಲ ತಡೆಗಟ್ಟಲು ಮಳೆ ನೀರು ಕೊಯ್ಲು ವ್ಯವಸ್ಥೆ, ಕಾಕೋಟುಪರಂಬು ಪ್ರಾಥಮಿಕ ಆರೋಗ್ಯ ಕೇಂದ್ರದ ಮೇಲ್ಬಾಗದಲ್ಲಿ ಆರೋಗ್ಯ ಶಿಬಿರ ಹಾಗೂ ಲಸಿಕೆ ನೀಡಲು ಮುಂತಾದ ಆರೋಗ್ಯ ಸಂಬಧಿಸಿದ ಕಾರ್ಯಗಳಿಗೆ ಒಂದು ಸಭಾಂಗಣವನ್ನು ನಿರ್ಮಾಣ ಮಾಡಲಾಗುವುದು ಎಂದು ಗಿರೀಶ್ ಬೋಪಣ್ಣ ತಿಳಿಸಿದ್ದರು.
ಕಾಕೋಟುಪರಂಬು ಗ್ರಾಮ ಪಂಚಾಯಿತಿಯ ಆಡಳಿತ ಕಛೇರಿ ಇಲ್ಲಿಯವರಗೆ ಹಳೆಯ ಕಂದಾಯ ಇಲಾಖೆಯ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇದೀಗ ಪಂಚಾಯಿತಿ ಕಚೇರಿಯ ಮುಂಬಾಗದದಲ್ಲಿ ಹಾದು ಹೋಗುವ ಹೆದ್ದಾರಿಯು ಅಗಲೀಕರಣಗೊಳ್ಳಲು ಸಜ್ಜಾಗಿರುವುದರಿಂದ, ಪಂಚಾಯಿತಿ ಕಛೇರಿಯ ಅರ್ಧ ಭಾಗ ರಸ್ತೆ ಅಗಲೀಕರಣದ ಭಾಗವಾಗುತ್ತಿದೆ ಎಂದ ಗಿರೀಶ್ ಬೋಪಣ್ಣ, ಸುಮಾರು 28 ಲಕ್ಷ ಅಂದಾಜು ವೆಚ್ಚದಲ್ಲಿ ಕಾಕೋಟುಪರಂಬು ಪ್ರಾಥಮಿಕ ಆರೋಗ್ಯ ಕೇಂದ್ರದ ಪಕ್ಕದಲ್ಲಿರುವ ಪಂಚಾಯಿತಿ ಜಾಗದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಯು ಪ್ರಾರಂಭಗೊಂಡಿದ್ದು, ಶಿಘ್ರದಲ್ಲೇ ಕಾಕೋಟುಪರಂಬು ಗ್ರಾಮ ಪಂಚಾಯಿತಿಯ ಆಡಳಿತ ಕಛೇರಿ ನೂತನ ಸ್ವಂತ ಕಟ್ಟಡಕ್ಕೆ ಸ್ಥಾಳಾಂತರಗೊಳ್ಳಲಿದೆ ಎಂದು ಗಿರೀಶ್ ಬೋಪಣ್ಣ ತಿಳಿಸಿದರು.
“ಸರ್ಕಾರದಿಂದ ಪಂಚಾಯಿತಿಗೆ ಬರುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಗ್ರಾಮವನ್ನು ಅಭಿವೃದ್ಧಿ ಮಾಡುವ ಗುರಿ ಇದೆ. ನನ್ನ ಅಧಿಕಾರ ಅವಧಿಯಲ್ಲಿ ಹೊಸ ಬದಲಾವಣೆ ತರಬೇಕು ಎಂಬ ಹಂಬಲವಿದೆ” ಎಂದು ಗಿರೀಶ್ ಬೋಪಣ್ಣ ಹೇಳಿದ್ದಾರೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಶಿಕ್ಷಣ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದ ಗಿರೀಶ್ ಬೋಪಣ್ಣ ಕುಡಿಯುವ ನೀರು, ರಸ್ತೆ, ಆಶ್ರಯ ಯೋಜನೆಯಡಿ ಮನೆ ನಿರ್ಮಾಣ ಸೇರಿದಂತೆ ಗ್ರಾಮದಲ್ಲಿ ಹಲವಾರು ಬದಲಾವಣೆಗಳನ್ನು ತರುವ ಯೋಜನೆಯನ್ನು ಗಿರೀಶ್ ಬೋಪಣ್ಣ ಹಾಕಿಕೊಂಡಿದ್ದಾರೆ.
ಕಾಕೋಟುಪರಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರೆಸಾರ್ಟ್, ಕೈಗಾರಿಕೆಗಳು ಮುಂತಾದ ಪಂಚಾಯಿತಿಗೆ ಆದಾಯ ತರುವ ಮೂಲಗಳ ಕೊರತೆಯಿದ್ದು, ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಆರ್ಥಿಕತೆಯ ಕೊರತೆ ಇದೆ ಹಾಗೆ ನಿರ್ವಹಣೆ ವೆಚ್ಚವು ಅಧಿಕವಾಗಿದೆ ಎಂದ ಗಿರೀಶ್ ಬೋಪಣ್ಣ, ಬರುವ ಆದಾಯ ಹಾಗೂ ವಿವಿಧ ಮೂಲಗಳಿಂದ ದೊರೆಯುತ್ತಿರುವ ಅನುದಾನಗಳನ್ನು ಬಳಸಿಕೊಂಡು ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿನ ಕಾಮಗಾರಿಗಳನ್ನು ಶೀಘ್ರದಲ್ಲಿ ಪೂರೈಸಲಾಗುವುದು, ಜೊತೆಗೆ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಅಧ್ಯಕ್ಷರಾದ ಗಿರೀಶ್ ಬೋಪಣ್ಣ ಈ ಸಂದರ್ಭದಲ್ಲಿ ಗ್ರಾಮಸ್ಥರಿಗೆ ಭರವಸೆ ನೀಡಿದ್ದಾರೆ.
ರಾಜಕೀಯವಾಗಿ ಗುರುತಿಸಿಕೊಂಡಿರುವ ಮೇವಡ ಗಿರೀಶ್ ಬೋಪಣ್ಣನವರು ಬಿ.ಜೆ.ಪಿ.ಯ ಸಕ್ರೀಯ ಕಾರ್ಯಕರ್ತರಾಗಿದ್ದಾರೆ. ಸಾಮಾಜಿಕವಾಗಿ ಕಾಕೋಟುಪರಂಬು ಕಾಲಭೈರವ ದೇವಾಲಯ ಸಮಿತಿ ಸದಸ್ಯರಾಗಿ, ಕಾಕೋಟುಪರಂಬು ಸ್ಪೋರ್ಟ್ಸ್ ಅಂಡ್ ರಿಕ್ರೀಯೇಷನ್ ಕ್ಲಬ್‌ನ ಸದಸ್ಯರಾಗಿದ್ದಾರೆ. ಕಾಕೋಟುಪರಂಬು ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿಯ ಸದಸ್ಯರಾಗಿ ಶಿಕ್ಷಣ ಕ್ಷೇತ್ರದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಡಿಪ್ಲೋಮ ಇನ್ ಮೆಕಾನಿಕಲ್ ಇಂಜಿನಿಯರಿಂಗ್ ಪದವಿಧರರಾಗಿರುವ ಮೇವಡ ಗಿರೀಶ್ ಬೋಪಣ್ಣ ಮೂಲತಃ ಕೃಷಿಕರಾಗಿದ್ದಾರೆ. ನಿವೃತ ಉಪನ್ಯಾಸಕರಾಗಿದ್ದ ದಿವಂಗತ ಮೇವಡ ಎ. ಗಣಪತಿ ಹಾಗೂ ಗಂಗಮ್ಮ ದಂಪತಿಗಳ ಮೂರನೇ ಪುತ್ರರಾಗಿದ್ದಾರೆ. ತಾಯಿ ಗಂಗಮ್ಮ, ಪತ್ನಿ ಸವಿತಾ ಹಾಗೂ ಮಗಳು ಲಿಷ್ಮಾ ಪೊನ್ನಮ್ಮ ಇವರೊಂದಿಗೆ ಕುಟುಂಬ ಸಮೇತ ಕಾಕೋಟುಪರಂಬು ಗ್ರಾಮದಲ್ಲಿ ನೆಲೆಸಿದ್ದಾರೆ . ಶ್ರೀಯುತರ ಕೌಟುಂಬಿಕ ಜೀವನವು, ರಾಜಕೀಯ ಹಾಗೂ ಸಾಮಾಜಿಕ ಸೇವೆಯು ಹೀಗೆ ನಿರಂತರವಾಗಿ ಮುಂದುವರೆಯಲಿ ಎಂದು “ಸರ್ಚ್ ಕೂರ್ಗ್ ಮೀಡಿಯಾ” ವು ಹಾರೈಸುತ್ತದೆ.
( ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊರೊನಾ ಟಾಸ್ಕ್ ಫೋರ್ಸ್ ಸಭೆಯಲ್ಲಿ ಶಾಸಕ ಕೆ.ಜಿ.ಬೋಪಯ್ಯ, ತಹಶೀಲ್ದಾರ್ ಆರ್.ಯೋಗಾನಂದ್, ಕೋವಿಡ್ ತಾಲ್ಲೂಕು ನೋಡೆಲ್ ಅಧಿಕಾರಿ ಲಕ್ಷ್ಮಿ, ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿ ಅಪ್ಪಣ್ಣ, ಸಿಪಿಐ ಶ್ರೀಧರ್ ರೊಂದಿಗೆ ಅಧ್ಯಕ್ಷ ಮೇವಡ ಗಿರೀಶ್ ಬೋಪಣ್ಣ )